Tag: appeal

  • ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನೇಮಕಕ್ಕೆ ತೀವ್ರ ವಿರೋಧ

    ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನೇಮಕಕ್ಕೆ ತೀವ್ರ ವಿರೋಧ

    ಚಿಕ್ಕಮಗಳೂರು: ಜನವರಿ 10 ಮತ್ತು 11ರಂದು ಜಿಲ್ಲೆಯ ಶೃಂಗೇರಿಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಲ್ಕುಳಿ ವಿಠಲ್ ಹೆಗ್ಡೆ ವಿರುದ್ಧ ತೀವ್ರ ಅಸಾಮಾಧಾನ ವ್ಯಕ್ತವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಕಲ್ಕುಳಿ ವಿಠಲ್ ಹೆಗ್ಡೆ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದೆ.

    ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗುವವರು ವಿವಾದಗಳಿಂದ ದೂರವಿದ್ದು, ರಾಜಕೀಯಕ್ಕೂ ಅಂಟಿಕೊಂಡಿರದೆ ಸಾಹಿತ್ಯ ಕೃಷಿ ಮಾಡಿದ ಸರ್ವಮಾನ್ಯ ವ್ಯಕ್ತಿಗಳಾಗಿ ಕ್ರಿಮಿನಲ್ ಆರೋಪಗಳಿಂದ ಮುಕ್ತರಾಗಿರಬೇಕು. ಆದರೆ ಕಲ್ಕುಳಿ ವಿಠಲ್ ಹೆಗ್ಡೆ ವಿವಾದಿತ ವ್ಯಕ್ತಿಯಾಗಿದ್ದು, ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಯ ಎಲ್ಲಾ ಅಂಶಗಳನ್ನ ಗಾಳಿಗೆ ತೂರಿ ಏಕಪಕ್ಷೀಯವಾಗಿ ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ ಎಂದು ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಆರೋಪಿಸಿದೆ.

    ಕನ್ನಡ ರಾಜ್ಯೋತ್ಸವದಂದು ತಾಲೂಕು ಸಾಹಿತ್ಯ ಪರಿಷತ್ ಸನ್ಮಾನಕ್ಕಾಗಿ ಕಲ್ಕುಳಿ ವಿಠಲ್ ಹೆಗ್ಡೆ ಹೆಸರನ್ನು ಸೂಚಿಸಿತ್ತು. ಆದರೆ ಇವರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಇವರ ಹೆಸರನ್ನ ಕೈಬಿಡಲಾಗಿತ್ತು. ಈಗ ಮತ್ತೆ ಅವರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸಿ ಮತ್ತೊಂದು ವಿವಾದ ಸೃಷ್ಟಿಸುತ್ತಿರುವುದು ವಿಪರ್ಯಾಸ ಎಂದು ವೇದಿಕೆ ಹೇಳಿದೆ. ಇವರದ್ದು ನಕ್ಸಲ್ ಚಟುವಟಿಕೆಗಳನ್ನು ಬೆಂಬಲಿಸುವ ಪ್ರವೃತ್ತಿ ಎಂದು ಪೊಲೀಸ್ ವರದಿಗಳು ಸ್ಪಷ್ಟಪಡಿಸಿವೆ. ಇವರೊಂದಿಗೆ ಪ್ರಮುಖ ಹೋರಾಟಗಳಲ್ಲಿ ಭಾಗಿಯಾದವರು ಭೂಗತರಾಗಿ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಪ್ರಮುಖ ನಕ್ಸಲೈಟ್‍ಗಳೆಂದು ಪೊಲೀಸ್ ಇಲಾಖೆ ಘೋಷಿಸಿರುವ ವ್ಯಕ್ತಿಗಳೊಂದಿಗೆ ಇವರ ಸಂಬಂಧ ಹೊಂದಿದ್ದರು ಎಂದು ರಾಜ್ಯಕ್ಕೆ ಗೊತ್ತಿದೆ ಅಂತಿದೆ ವೇದಿಕೆ.

    2006-07ನೇ ಇಸವಿಯಲ್ಲಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಕ್ಸಲ್ ನಿಗ್ರಹ ದಳ ಹೊರತಂದ ‘ಮಲೆನಾಡಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ನಕ್ಸಲೀಯರ ವಿವರಗಳು’ ಎಂಬ ಕೈಪಿಡಿಯಲ್ಲಿ ಮಲೆನಾಡಿನಲ್ಲಿ ನಕ್ಸಲರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿರುವ ವ್ಯಕ್ತಿಗಳ ವಿವರಗಳು ಎಂಬ ತಲೆಬರಹದಲ್ಲಿ ಇವರ ಹೆಸರೇ ಮೊದಲಿನಲ್ಲಿದೆ. ಅಷ್ಟೇ ಅಲ್ಲದೆ, ದಲಿತ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಆಸ್ತಿಯನ್ನ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಬಗ್ಗೆ ಮೊಕದ್ದಮೆಗಳು ದಾಖಲಾಗಿದ್ದು, ನ್ಯಾಯಾಲಯದ ಕಟಕಟ್ಟೆ ಕೂಡ ಏರಿದೆ. ಆದ್ದರಿಂದ ಕೂಡಲೇ ಇವರನ್ನು ಬದಲಾವಣೆ ಮಾಡಬೇಕು ಹಾಗೂ ಸಾಹಿತ್ಯ ಸಮ್ಮೇಳನವನ್ನು ಮುಂದಕ್ಕೆ ಹಾಕಬೇಕೆಂದು ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಸದಸ್ಯರಾದ ಸಂತೋಷ್ ಕೋಟ್ಯಾನ್, ಸುಮಂತ್, ರಂಜಿತ್ ಶೆಟ್ಟಿ, ನೂತನ್, ಕಿಶೋರ್, ಜ್ಞಾನೇಂದ್ರ ಹಾಗೂ ಕಾರ್ತಿಕ್ ಎಂಬುವರು ಎಸ್‍ಪಿ ಹರೀಶ್ ಪಾಂಡೆಗೆ ಮನವಿ ಸಲ್ಲಿದ್ದಾರೆ.

  • ಅಯೋಧ್ಯೆ ಮೇಲ್ಮನವಿ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ

    ಅಯೋಧ್ಯೆ ಮೇಲ್ಮನವಿ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ

    ನವದೆಹಲಿ: ಅಯೋಧ್ಯೆ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 18 ಮೇಲ್ಮನವಿ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

    ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಸೇರಿದಂತೆ ಐವರು ನ್ಯಾಯಮೂರ್ತಿಗಳ ಪೀಠ ಇಂದು ಈ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸಿತು.

    ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ನಿರ್ಮೋಹಿ ಅಖರಾ ಸೇರಿದಂತೆ 40 ಮಂದಿ ನಾಗರಿಕ ಹಕ್ಕುಗಳ ಕಾರ್ಯಕರ್ತರಿಗೆ ಪ್ರಕರಣದ ಮೂಲ ಕಕ್ಷಿದಾರರು ಅಲ್ಲ ಎಂದು ಕೋರ್ಟ್ ಮೇಲ್ಮನವಿ ಸಲ್ಲಿಸಲು ಅವಕಾಶವನ್ನು ನಿರಾಕರಿಸಿತು. ಪ್ರಕರಣದ ಮೂಲ ಕಕ್ಷಿದಾರರು ಮಾತ್ರ ಮೇಲ್ಮನವಿ ಸಲ್ಲಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

    ನ.9 ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ಪ್ರಶ್ನೆ ಮಾಡಿ ಒಟ್ಟು 18 ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿತ್ತು. ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಿಸುವಂತೆ ಹಾಗೂ ಮುಸ್ಲಿಮರಿಗೆ ಪ್ರತ್ಯೇಕವಾಗಿ 5 ಎಕರೆ ಜಾಗವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

    ಕೋರ್ಟ್ ಆದೇಶವನ್ನು ಸಲ್ಲಿಕೆಯಾಗಿದ್ದ ಆ ಅರ್ಜಿಗಳಲ್ಲಿ ಕೆಲವರು ರಾಮಮಂದಿತ ವಿವಾದಿತ ಸ್ಥಳದಲ್ಲೇ 5 ಎಕರೆ ಜಾಗವನ್ನು ಮುಸ್ಲಿಮರಿಗೆ ನೀಡಲು ಅರ್ಜಿ ಸಲ್ಲಿಕೆ ಮಾಡಿದ್ದರೆ, ಕೆಲ ಹಿಂದೂ ಪರ ಸಂಘಟನೆಗಳು ಮುಸ್ಲಿಮರಿಗೆ 5 ಎಕರೆ ಜಾಗ ನೀಡಿರುವುದನ್ನು ವಿರೋಧಿಸಿ ಅರ್ಜಿ ಸಲ್ಲಿಕೆ ಮಾಡಿತ್ತು. ಸದ್ಯ ಅರ್ಜಿಗಳು ವಜಾಗೊಂಡಿದ್ದು ರಾಮಮಂದಿರ ನಿರ್ಮಾಣಕ್ಕೆ ಇದ್ದ ಎಲ್ಲ ಅಡೆ ತಡೆಗಳು ನಿವಾರಣೆಯಾಗಿದೆ.

  • ಸ್ನೇಹಿತನಿಗಾಗಿ ಟ್ವೀಟ್ ಮೂಲಕ ಮೋದಿಗೆ ಮನವಿ ಮಾಡಿದ ಸಾಗರದ ಯುವಕ

    ಸ್ನೇಹಿತನಿಗಾಗಿ ಟ್ವೀಟ್ ಮೂಲಕ ಮೋದಿಗೆ ಮನವಿ ಮಾಡಿದ ಸಾಗರದ ಯುವಕ

    ಶಿವಮೊಗ್ಗ: ವಿದೇಶದಲ್ಲಿ ಅಪಘಾತಕ್ಕೀಡಾಗಿರುವ ಸ್ನೇಹಿತನಿಗಾಗಿ ಸಾಗರದ ಯುವಕನೋರ್ವ ಮೋದಿ ಅವರಿಗೆ ಟ್ವೀಟ್ ಮಾಡುವ ಮೂಲಕ ಸಹಾಯ ಕೇಳಿದ್ದಾನೆ.

    ಸೌದಿ ಅರೇಬಿಯಾದಲ್ಲಿ ಕಳೆದ 6 ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಯುವಕ ಅಖ್ತರ್ ಅಹಮ್ಮದ್ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಈ ಯುವಕನಿಗೆ ಸಹಾಯ ಮಾಡುವಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ಯುವಕ ಶಕೀಲ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾನೆ.

    ಉತ್ತರ ಪ್ರದೇಶ ಲಕ್ನೋ ಮೂಲದ ಅಖ್ತರ್ ಅಹಮ್ಮದ್ ಹಾಗೂ ಸಾಗರದ ಶಕೀಲ್ ಅಹಮ್ಮದ್ ಎಂಬುವರು ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ ಹೋಟೆಲ್‍ವೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಇಬ್ಬರು ಸ್ವದೇಶಕ್ಕೆ ಬಂದು ಮತ್ತೆ ವಾಪಸ್ಸಾಗಿದ್ದರು. ಆದರೆ ಕಳೆದ 6 ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಲಕ್ನೋದ ಅಖ್ತರ್ ಅಹಮ್ಮದ್ ತೀವ್ರ ಗಾಯದಿಂದ ನರಳುತ್ತಿದ್ದಾರೆ. ಹೀಗಾಗಿ ಅವರನ್ನು ಸ್ವದೇಶಕ್ಕೆ ಕರೆಯಿಸಿಕೊಳ್ಳಲು ಪ್ರಧಾನಿಯವರು ನೆರವು ನೀಡಲಿ ಎಂದು ಶಕೀಲ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

  • ನನ್ನ ಮೇಲೆ ಅಭಿಮಾನ ಇದ್ದರೆ ನಿಂಬೆ ಹಣ್ಣು ಕೊಡಿ ಸಾಕು: ಡಿಕೆಶಿ ಮನವಿ

    ನನ್ನ ಮೇಲೆ ಅಭಿಮಾನ ಇದ್ದರೆ ನಿಂಬೆ ಹಣ್ಣು ಕೊಡಿ ಸಾಕು: ಡಿಕೆಶಿ ಮನವಿ

    ಬೆಂಗಳೂರು: ನನ್ನ ಮೇಲೆ ಅಭಿಮಾನ ಇದ್ದರೆ ನೀವು ನನಗೆ ಒಂದು ನಿಂಬೆ ಹಣ್ಣು ಕೊಡಿ ಸಾಕು ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.

    ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹೂವಿನ ಹಾರ ಹಾಕದಿದ್ದರೂ ಬೇಜಾರಿಲ್ಲ. ಆದರೆ ಸುಗಂಧರಾಜ ಹೂವಿನ ಹಾರವನ್ನು ಮಾತ್ರ ಹಾಕಬೇಡಿ. ಅದರ ಬದಲಿಗೆ ಒಂದು ನಿಂಬೆ ಹಣ್ಣು ಕೊಟ್ಟರೂ ನನಗೆ ಸಂತೋಷ ಎಂದು ಅಭಿಮಾನಿಗಳು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಸುಗಂಧರಾಜದ ಹೂವಿನ ಹಾರ ಹಾಕಿದರೆ ನನಗೆ ಅಲರ್ಜಿಯಾಗುತ್ತದೆ. ಸುಗಂಧರಾಜ ಹೂ ನನ್ನ ಚರ್ಮಕ್ಕೆ ಟಚ್ ಆದರೆ ನನ್ನ ಮುಖ ಮೈಯಲ್ಲ ಊದುತ್ತದೆ. ಆದ್ದರಿಂದ ಅಭಿಮಾನಿಗಳು ಮತ್ತು ಕಾರ್ಯಕರ್ತರು ನನಗೆ ಹಾರ ಹಾಕದೆ ಇದ್ದರೂ ಪರವಾಗಿಲ್ಲ. ಆದರೆ ಸುಗಂಧರಾಜ ಹೂವಿನ ಹಾರ ಹಾಕಬೇಡಿ. ಅದರ ಬದಲು ಒಂದು ನಿಂಬೆ ಹಣ್ಣು ಕೊಡಿ ಸಾಕು ಎಂದು ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಓದಿ: ಬೇಕಾದ್ರೆ ನನಗೊಂದು ಕಲ್ಲಿನ ಹಾರ ಹಾಕಿ, ಸುಗಂಧರಾಜ ಹಾರ ಬೇಡ : ಡಿಕೆಶಿ

    ಇದೇ ವೇಳೆ ಗೌರಿ ಹಬ್ಬಕ್ಕೆ ನನ್ನ ಹಿರಿಯರಿಗೆ ಪೂಜೆ ಮಾಡೋಕೆ ಆಗಿಲ್ಲ. ಆದರೆ ದೀಪಾವಳೀಗೆ ಊರಿಗೆ ಹೋಗಿ ನನ್ನ ತಂದೆ ಸಮಾಧಿಗೆ ಪೂಜೆ ಮಾಡುತ್ತೇನೆ. ಕುಟುಂಬದವರು ಎಲ್ಲರೂ ಹೋಗಿ ಪೂಜೆ ಮಾಡಿ ಬರುತ್ತೇವೆ ಎಂದು ತಿಳಿಸಿದರು.

  • ಪೂರ್ಣ ಬಹುಮತ ಬಂದಿದ್ದರೆ ಶ್ರೀರಾಮುಲು ಅವತ್ತೆ ಡಿಸಿಎಂ ಆಗ್ತಿದ್ರು: ದಡೇಸಗೂರ್

    ಪೂರ್ಣ ಬಹುಮತ ಬಂದಿದ್ದರೆ ಶ್ರೀರಾಮುಲು ಅವತ್ತೆ ಡಿಸಿಎಂ ಆಗ್ತಿದ್ರು: ದಡೇಸಗೂರ್

    – ಶ್ರೀರಾಮುಲು ರಾಜ್ಯಕ್ಕೆ ಮಾಸ್ ಲೀಡರ್

    ಕೊಪ್ಪಳ: ಪೂರ್ಣ ಬಹುಮತ ಬಂದಿದ್ದರೆ ಸಚಿವ ಶ್ರೀರಾಮುಲು ಅವತ್ತೆ ಉಪಮುಖ್ಯಮಂತ್ರಿ ಆಗುತ್ತಿದ್ದರು ಎಂದು ಬಿಜೆಪಿ ಶಾಸಕ ಬಸವರಾಜು ದಡೇಸಗೂರ್ ಹೇಳಿದ್ದಾರೆ.

    ಜಿಲ್ಲೆ ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೂರ್ಣ ಬಹುಮತ ಬರದ ಹಿನ್ನೆಲೆ ರಾಮುಲು ಡಿಸಿಎಂ ಆಗಿಲ್ಲ. ನಾವು ಬೇರೆ ಪಕ್ಷದ ಶಾಸಕರನ್ನು ಕರೆದುಕೊಂಡು ಸರ್ಕಾರ ಮಾಡಿದ ಕಾರಣ ರಾಮುಲು ಡಿಸಿಎಂ ಆಗಿಲ್ಲ ಎಂದು ತಿಳಿಸಿದರು.

    ಬೇರೆ ಪಕ್ಷದ ಶಾಸಕರು ಬಂದ ಕಾರಣ ಸ್ವಲ್ಪ ಸಮಸ್ಯೆ ಆಗಿದೆ. ಮುಂಬರುವ ಉಪ ಚುನಾವಣೆ ಬಳಿಕ ವಾಲ್ಮೀಕಿ ಸಮುದಾಯಕ್ಕೆ ಒಳ್ಳೆಯದಾಗುತ್ತೆ. ಚುನಾವಣೆಯಾದ ಮೇಲೆ ನಾವು ನೀವು ಹೋಗಿ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಲು ಮನವಿ ಕೊಡೋಣ ಎಂದು ದಡೇಸಗೂರ್ ಜನರಿಗೆ ಕರೆಕೊಟ್ಟರು.

    ಶ್ರೀರಾಮುಲು ರಾಜ್ಯಕ್ಕೆ ಮಾಸ್ ಲೀಡರ್, ಅವರು ಉಪಮುಖ್ಯಮಂತ್ರಿಯಾಗಬೇಕು. ಈ ವಿಚಾರದ ಬಗ್ಗೆ ಯಡಿಯೂರಪ್ಪ ಅವರು ಮಾತು ನೀಡಿದ್ದಾರೆ. ಯಡಿಯೂರಪ್ಪ ಕೊಟ್ಟ ಮಾತು ತಪ್ಪೋದಿಲ್ಲ. ಹಾಗಾಗಿ ನಾವು ನೀವು ಹೋಗಿ ಮನವಿ ಮಾಡೋಣ ಎಂದು ಹೇಳಿದರು.

  • ಶ್ರೀರಾಮುಲು ಟೀಮ್‍ಗೆ ಸಚಿವ ಸ್ಥಾನ ನೀಡ್ಬೇಡಿ – ಸಿಎಂಗೆ ಟಪಾಲ್ ಗಣೇಶ್ ಮನವಿ

    ಶ್ರೀರಾಮುಲು ಟೀಮ್‍ಗೆ ಸಚಿವ ಸ್ಥಾನ ನೀಡ್ಬೇಡಿ – ಸಿಎಂಗೆ ಟಪಾಲ್ ಗಣೇಶ್ ಮನವಿ

    ಬಳ್ಳಾರಿ: ಜಿಲ್ಲೆಯ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ತಂಡಕ್ಕೆ ಸಚಿವ ಸ್ಥಾನ ನೀಡಬಾರದೆಂದು ಬಳ್ಳಾರಿಯಲ್ಲಿ ಗಣಿ ಉದ್ಯಮಿ ಟಪಾಲ್ ಗಣೇಶ್ ಸಿಎಂ ಯಡಿಯೂರಪ್ಪನವರಲ್ಲಿ ಮನವಿ ಮಾಡಿದ್ದಾರೆ.

    ಇಂದು ಬಿಜೆಪಿ ಬಹುಮತ ಸಾಬೀತು ಮಾಡಿದ್ದು ಸಿಎಂ ಆಗಿ ಬಿ.ಎಸ್ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಮುಂದೆ ಸಚಿವ ಸ್ಥಾನ ಹಂಚಿಕೆಯಲ್ಲಿ ಬಳ್ಳಾರಿಯ ರೆಡ್ಡಿ ಟೀಮ್ ಹಾಗೂ ಶ್ರೀರಾಮುಲುಗೆ ಸಚಿವ ಸ್ಥಾನ ನೀಡಬಾರದೆಂದು ಮನವಿ ಮಾಡಿಕೊಂಡಿದ್ದಾರೆ.

    ಅಕ್ರಮ ಗಣಿಗಾರಿಕೆ, ಗಡಿನಾಶ ಮತ್ತು ರಿಪಬ್ಲಿಕ್ ಆಫ್ ಬಳ್ಳಾರಿ ಅಪಕೀರ್ತಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ತಂಡಕ್ಕೆ ಇದೆ. 2008 ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ ರೆಡ್ಡಿ, ಶ್ರೀರಾಮುಲು ಏನೇನು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಅಕ್ರಮ ಗಣಿಗಾರಿಕೆಯಲ್ಲಿ ಶ್ರೀ ರಾಮುಲು ಹೆಸರಿಲ್ಲ ಆದರೆ ಜನಾರ್ದನ ರೆಡ್ಡಿ ಮತ್ತು ಶ್ರೀ ರಾಮುಲು ಒಂದೇ ಜೀವ ಇದ್ದಂತೆ. ಶ್ರೀರಾಮುಲುಗೆ ಸಚಿವ ಸ್ಥಾನ ಕೊಟ್ಟರೆ ರೆಡ್ಡಿ ಸಚಿವನಾದಂತೆ. ಅದ್ದರಿಂದ ಶ್ರೀರಾಮುಲು ಅಷ್ಟೇ ಅಲ್ಲದೇ ಆ ತಂಡದಲ್ಲಿ ಇರುವ ಸೋಮಶೇಖರ ರೆಡ್ಡಿ ಹಾಗೂ ಕರುಣಾಕರ ರೆಡ್ಡಿಗೂ ಕೂಡ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

    ಇವರಿಗೆ ಮಂತ್ರಿ ಸ್ಥಾನ ನೀಡುವ ಬದಲು ಪಕ್ಷಕ್ಕಾಗಿ ದುಡಿದ ಪ್ರಾಮಾಣಿಕರಿಗೆ ಸಚಿವ ಸ್ಥಾನ ನೀಡಿದರೆ ಪಕ್ಷಕ್ಕೆ ಉಳಿವಿದೆ ಎಂದು ಬಳ್ಳಾರಿಯ ಗಣಿ ಉದ್ಯಮಿ ಟಪಾಲ್ ಗಣೇಶ್ ಸಿಎಂ ಯಡಿಯೂರಪ್ಪನವರಿಗೆ ವಿಡಿಯೋ ರೆಕಾರ್ಡ್ ಮಾಡಿ ಮನವಿ ಮಾಡಿದ್ದಾರೆ.

  • ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮಾನವ ಹಕ್ಕು ರಕ್ಷಣೆಗೆ ಅರ್ಜಿ – ವಿಚಾರಣೆಗೆ ಒಪ್ಪಿದ ಸುಪ್ರೀಂ

    ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮಾನವ ಹಕ್ಕು ರಕ್ಷಣೆಗೆ ಅರ್ಜಿ – ವಿಚಾರಣೆಗೆ ಒಪ್ಪಿದ ಸುಪ್ರೀಂ

    ನವದೆಹಲಿ: ಕರ್ತವ್ಯದ ವೇಳೆ ರಕ್ಷಣಾ ಪಡೆಗಳ ಸಿಬ್ಬಂದಿಯ ಮಾನವ ಹಕ್ಕುಗಳ ರಕ್ಷಣೆ ಕುರಿತು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಲಯ ಸೋಮವಾರ ಸಮ್ಮತಿ ಸೂಚಿಸಿದೆ.

    ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ವಿರುದ್ಧ ನಡೆಯುತ್ತಿರುವ ಕಲ್ಲು ತೂರಾಟ ಹಾಗೂ ವಿಧ್ವಂಸಕ ಕೃತ್ಯ ನಡೆಸಲು ಮುಂದಾಗುವ ಗುಂಪುಗಳಿಂದ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ವಿವರಿಸಿ ಇಬ್ಬರು ಯುವತಿಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಭದ್ರತಾ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಪ್ರಸ್ತಾಪಿಸಿ ಅರ್ಜಿ ಸಲ್ಲಿಸಿದ್ದಾರೆ.

    19 ವರ್ಷದ ಪ್ರೀತಿ ಕೇದಾರ್ ಗೋಖಲೆ ಹಾಗೂ 20 ವರ್ಷದ ಕಾಜಲ್ ಮಿಶ್ರಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಭದ್ರತಾ ಪಡೆಗಳ ಮೇಲೆ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಹತ್ತಿಕ್ಕಲು ಸರಿಯಾದ ನೀತಿ ರೂಪಿಸಿ ಎಂದು ಅರ್ಜಿಯಲ್ಲಿ ಮನವಿ ಸಲ್ಲಿಸಿದ್ದಾರೆ.

    ಕರ್ತವ್ಯದಲ್ಲಿದ್ದಾಗ ಕಲ್ಲುತೂರಾಟ ನಡೆದಾಗ ಭದ್ರತಾ ಪಡೆಗಳು ತಮ್ಮ ಆತ್ಮ ರಕ್ಷಣೆಗಾಗಿ ಬಲ ಪ್ರಯೋಗ ಮಾಡುತ್ತಾರೆ. ಆದರೆ ಯೋಧರ ವಿರುದ್ಧವೇ ಕೇಸ್ ದಾಖಲಾಗುತ್ತದೆ. ಆದರೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗುವುದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದರ ಜೊತೆಯಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಮೊದಲ ಬಾರಿಗೆ ಕಲ್ಲು ತುರಾಟ ನಡೆಸಿದವರ ವಿರುದ್ಧ ದಾಖಲಾದ 9,760 ಎಫ್‍ಐಆರ್ ರದ್ದುಗೊಳಿಸಲಾಗುವುದು ಎಂದು ವಿಧಾನಸಭೆಯಲ್ಲಿ ಘೋಷಿಸುತ್ತಿದ್ದಾರೆ. ನಿಜವಾಗಿಯೂ ಇದು ಶಾಕಿಂಗ್ ಅಂಶ ಎಂದು ಅರ್ಜಿಯಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

    ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾ. ಸಂಜೀವ್ ಖನ್ನಾ ಅವರ ಪೀಠ ಅರ್ಜಿ ವಿಚಾರಣೆಗೆ ಸಮ್ಮತಿ ನೀಡಿದೆ. ಈ ಕುರಿತು ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆ, ಜಮ್ಮು ಕಾಶ್ಮೀರ ಸರ್ಕಾರ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

    ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಯುವತಿಯರು ಭಾರತ ಸೇನಾಧಿಕಾರಿಗಳ ಪುತ್ರಿಯಾರಾಗಿದ್ದು, ಅವರ ಪೈಕಿ ಒಬ್ಬರು ನಿವೃತ್ತರಾಗಿದ್ದರೆ ಮತ್ತೊಬ್ಬರು ಸೇವೆಯಲ್ಲಿದ್ದಾರೆ. ಭದ್ರತಾ ಪಡೆಯ ಯೋಧರ ಮೇಲೆ ನಡೆಯುತ್ತಿರುವ ದಾಳಿಗಳು ತಮಗೆ ಅಘಾತ ತಂದಿದೆ ಎಂದು ಯುವತಿಯರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    ಇಬ್ಬರೂ ಈ ಹಿಂದೆ 2018ರ ಫೆಬ್ರವರಿಯಲ್ಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ರಾಜ್ಯದಲ್ಲಿರುವ ಮಾನವ ಹಕ್ಕುಗಳ ಆಯೋಗಕ್ಕೆ ವರ್ಗಾಯಿಸಿತ್ತು.

    https://www.youtube.com/watch?v=HBx6e6LMK9k

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಡಗಿಗೆ ನೀರಿನ ಬಾಟಲ್, ಔಷಧ ಬೇಡ, ಸಂತ್ರಸ್ತರ ಖಾತೆಗೆ ಹಣ ಹಾಕಿ: ಸಾ.ರಾ. ಮಹೇಶ್

    ಕೊಡಗಿಗೆ ನೀರಿನ ಬಾಟಲ್, ಔಷಧ ಬೇಡ, ಸಂತ್ರಸ್ತರ ಖಾತೆಗೆ ಹಣ ಹಾಕಿ: ಸಾ.ರಾ. ಮಹೇಶ್

    ಮಡಿಕೇರಿ: ಕೊಡಗಿನ ಜನರಿಗೆ ಸದ್ಯಕ್ಕೆ ಕುಡಿಯುವ ನೀರಿನ ಬಾಟಲ್, ಊಟ, ಹೊದಿಕೆ, ಔಷಧ ಯಾವುದರ ಅಗತ್ಯವಿಲ್ಲ. ಅವರಿಗೆ ಬೇಕಾದ ಕುಡಿಯುವ ನೀರು, ಊಟ, ಹೊದಿಕೆ, ಔಷಧ ಎಲ್ಲವನ್ನೂ ಜಿಲ್ಲಾಡಳಿತ ಒದಗಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಹೇಳಿದ್ದಾರೆ.

    ಕೊಡಗಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಭವಿಷ್ಯದಲ್ಲಿ ಮನೆ ಕಟ್ಟಿಕೊಳ್ಳಲು ಹಣದ ಅವಶ್ಯತೆ ಇದೆ. ಹೀಗಾಗಿ ನಿಮ್ಮ ಸಹಾಯ ಹಸ್ತವನ್ನು ಹಣದ ರೂಪದಲ್ಲಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಅಥವಾ ಡಿಸಿ ಕಚೇರಿಯಲ್ಲಿ ಯಾರೆಲ್ಲ ಮನೆ ಕಳೆದುಕೊಂಡಿದ್ದಾರೆ ಅವರ ವಿವರ ಸಿಗುತ್ತದೆ. ಆ ವಿವರ ನೋಡಿ ನೀವೇ ಖುದ್ದಾಗಿ ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಿಸಿ ಕೊಳ್ಳುವುದಕ್ಕೆ ಸಹಾಯ ಮಾಡಿ ಎಂದು ಸಾ ರಾ ಮಹೇಶ್ ಮನವಿ ಮಾಡಿದ್ದಾರೆ.

    ನಿನ್ನೆಯಿಂದ ಕಾರ್ಯಾಚರಣೆ ಬಿಗಿಯಾಗಿದ್ದು, ಈಗಾಗಲೇ 3,150 ನಿರಾಶ್ರಿತರನ್ನು ಸರ್ಕಾರ ರಕ್ಷಣೆ ಮಾಡಿದೆ. 450 ರಿಂದ 500 ಜನರು ಇನ್ನೂ ಸಂಕಷ್ಟದಲ್ಲಿದ್ದು ಅವರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ. ನಿನ್ನೆ ರಾತ್ರಿ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಜೀರೋ ಟ್ರಾಫಿಕ್ ನಲ್ಲಿ ಸೇನಾ ಪಡೆಯನ್ನು ಕಲ್ಪಿಸಲಾಗಿದೆ. ಈಗಾಗಲೇ 4 ಸೇನಾ ಪಡೆ ತಂಡಗಳು ಕಾರ್ಯಾಚರಣೆ ಕೈಗೊಂಡಿದ್ದು ಅದರೊಂದಿಗೆ ವಾಯುಪಡೆ, ನೌಕಾಪಡೆ, ಪೊಲೀಸ್ ಇಲಾಖೆ ಕೂಡ ಸ್ಥಳದಲ್ಲಿ ಬೀಡುಬಿಟ್ಟಿವೆ. 31 ಆಹಾರ ಕೇಂದ್ರಗಳಿವೆ ಇದರಿಂದಾಗಿ ಸ್ವಲ್ಪ ಮಟ್ಟಿಗೆ ಜನರ ಆತಂಕ ದೂರವಾಗಿದೆ.

    ಮುಖ್ಯಮಂತ್ರಿಗಳು ಬೆಳಗ್ಗೆ 6.45 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಡಗಿನ ಪರಿಸ್ಥಿತಿಗಳೆಲ್ಲವನ್ನೂ ತಿಳಿದುಕೊಂಡಿದ್ದಾರೆ. ಸಿಎಂ ಇಂದು ಮಧ್ಯಾಹ್ನ ಕೊಡಗಿಗೆ ಭೇಟಿ ನೀಡಿ ಅನಾಹುತ ನಡೆದಂತಹ ಕೆಲವು ಸ್ಥಳಗಳಿಗೆ ತೆರಳಲಿದ್ದಾರೆ. ಪರಿಹಾರದ ಕ್ರಮಗಳು ಏನಾಗಬೇಕು ಎಂಬುದರ ಕುರಿತು ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಿದ್ದಾರೆ.

    ಹೆಲಿಕಾಪ್ಟರ್ ಕಾರ್ಯಾಚರಣೆ ಬಗ್ಗೆ ಕುರಿತು ಮಾತನಾಡಿದ ಸಾ ರಾ ಮಹೇಶ್ ಅವರು ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಅವರೊಂದಿಗೆ ಮಾತನಾಡಿ ಅಲ್ಲಿಂದ ಆಹಾರದ ವ್ಯವಸ್ಥೆ ಮಾಡಲಾಗಿದೆ. ಹವಮಾನ ಬದಲಾವಣೆ ಸರಿಯಾದರೆ ನಿರಾಶ್ರಿತರನ್ನು ಹೆಲಿಕಾಪ್ಟರ್ ಮೂಲಕವೇ ರಕ್ಷಿಸಲು ಪ್ರಯತ್ನಿಸುತ್ತೇವೆ. ಸದ್ಯಕ್ಕೆ ಸೇನಾ ಪಡೆಯಿಂದ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv