Tag: App Ban

  • ಮಹಿಳೆಯರ ಫೋಟೋ ಹರಾಜು ಹಾಕುತ್ತಿದ್ದ ಆನ್‌ಲೈನ್ ಆ್ಯಪ್ ನಿಷೇಧ

    ಮಹಿಳೆಯರ ಫೋಟೋ ಹರಾಜು ಹಾಕುತ್ತಿದ್ದ ಆನ್‌ಲೈನ್ ಆ್ಯಪ್ ನಿಷೇಧ

    ನವದೆಹಲಿ: ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅಶ್ಲೀಲವಾಗಿ ಚಿತ್ರಿಸಿ ಅವರನ್ನು ಹರಾಜು ಹಾಕುತ್ತಿದ್ದ ಬುಲ್ಲಿ ಬೈ ಆ್ಯಪ್‌ನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

    ಸಮುದಾಯದ ಪ್ರಮುಖರು ಶನಿವಾರ ಸ್ಕ್ರೀನ್ ಶಾಟ್ ಸಹಿತ ಈ ಆಘಾತಕಾರಿ ಬೆಳವಣಿಗೆ ಬಗ್ಗೆ ಟ್ವೀಟ್ ಮಾಡಿದ್ದರು. ಶಿವಸೇನೆ ರಾಜ್ಯಸಭಾ ಸದಸ್ಯೆ ಪ್ರಿಯಾಂಕ ಚತುರ್ವೇದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸದ ಶಶಿ ತರೂರ್ ಸೇರಿದಂತೆ ಪ್ರಮುಖರು ಈ ಬಗ್ಗೆ ಕಟುವಾಗಿ ಟೀಕಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಕೂಡಲೇ ಸ್ಪಂದಿಸಿದ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಆ್ಯಪ್‌ನ್ನು ನಿಷೇಧಿಸುವ ಕುರಿತು ಕ್ರಮ ಕೈಗೊಂಡಿದ್ದಾರೆ.

    ಸಾವಿರಾರು ಮಹಿಳೆಯರ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ ಬುಲ್ಲಿಬೈ ಎಂಬ ಆ್ಯಪ್‌ನ್ನು ನಿಷೇಧಿಸಲಾಗಿದೆ. ಬುಲ್ಲಿ ಆ್ಯಪ್ ಪೋರ್ಟಲ್‌ನ್ನು ಗಿಟ್‌ಹಬ್ ತನ್ನ ವೇದಿಕೆಯಿಂದ ಬ್ಲಾಕ್ ಮಾಡಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ದೇವಾಲಯಗಳು ಸ್ವತಂತ್ರವಾದ್ರೆ ಒಂದಿಷ್ಟು ಅಭಿವೃದ್ಧಿಗೊಳ್ಳುತ್ತದೆ: ಕೋಟ ಶ್ರೀನಿವಾಸ ಪೂಜಾರಿ

    ಈ ಬಗ್ಗೆ ಮುಂಬೈ ಹಾಗೂ ದೆಹಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ದೆಹಲಿ ಪೊಲೀಸರು ಆ್ಯಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ಕಾಂಗ್ರೆಸ್ಸಿನ ಅತ್ಯಂತ ಹೀನಾಯ ರಾಜಕಾರಣ: ಕಟೀಲ್

    ಗಿಟ್ ಹಬ್ ಆ್ಯಪ್ ಮೂಲಕ ಮುಸ್ಲಿಂ ಹೆಣ್ಣುಮಕ್ಕಳ ಫೋಟೋವನ್ನು ಹರಾಜಿಗೆ ಮಾರಾಟ ನಡೆಯುತ್ತಿತ್ತು. ಕಳೆದ ವರ್ಷ ಸುಲ್ಲಿ ಡೀಲ್ಸ್ ಹೆಸರಿನಲ್ಲಿ ಇದೇ ರೀತಿ ಮುಸ್ಲಿಂ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿ ಅವರನ್ನು ಹರಾಜಿಗೆ ಇಡುವ ರೀತಿ ಬಿಂಬಿಸುವ ವೆಬ್ ಪೋರ್ಟಲ್ ಕಾಣಿಸಿಕೊಂಡಿತ್ತು. ಮಹಿಳೆಯರ ಸಾಮಾಜಿಕ ಜಾಲತಾಣದಲ್ಲಿರುವ ಫೋಟೋವನ್ನು ತೆಗೆದುಕೊಂಡು ಈ ಕೃತ್ಯ ಮಾಡಲಾಗಿದೆ.

  • ಫೇಸ್ಬುಕ್, ಇನ್‍ಸ್ಟಾಗ್ರಾಮ್ ಸೇರಿ 89 ಆ್ಯಪ್ ಡಿಲೀಟ್ ಮಾಡುವಂತೆ ಸೈನಿಕರಿಗೆ ಸೂಚನೆ

    ಫೇಸ್ಬುಕ್, ಇನ್‍ಸ್ಟಾಗ್ರಾಮ್ ಸೇರಿ 89 ಆ್ಯಪ್ ಡಿಲೀಟ್ ಮಾಡುವಂತೆ ಸೈನಿಕರಿಗೆ ಸೂಚನೆ

    ನವದೆಹಲಿ: ವಿದೇಶಿ ಆ್ಯಪ್ ಬ್ಯಾನ್ ಮಾಡುವ ಕುರಿತು ಕೇಂದ್ರ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, 59 ಚೀನಿ ಆ್ಯಪ್‍ಗಳನ್ನು ದೇಶಾದ್ಯಂತ ಬ್ಯಾನ್ ಮಾಡಿದ ಬಳಿಕ ಇದೀಗ ಸೇನೆಗೆ ವಿಶೇಷ ಸೂಚನೆಯೊಂದನ್ನು ನೀಡಲಾಗಿದೆ.

    ಕೇಂದ್ರ ಸರ್ಕಾರ ಆ್ಯಪ್ ನಿಷೇಧ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಈಗಾಗಲೇ ಚೀನಾ ಆ್ಯಪ್‍ಗಳನ್ನು ಬ್ಯಾನ್ ಮಾಡಲಾಗಿದೆ. ಇದೀಗ ಸೇನೆಗೆ 89 ಆ್ಯಪ್‍ಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ. ಭಾರತೀಯ ಸೇನೆ ಈ ಕುರಿತು ಯೋಧರಿಗೆ ಸೂಚನೆ ನೀಡಿದ್ದು, ಫೇಸ್ಬುಕ್, ಇನ್‍ಸ್ಟಾಗ್ರಾಮ್ ಸೇರಿದಂತೆ ಒಟ್ಟು 89 ಆ್ಯಪ್‍ಗಳನ್ನು ಡಿಲೀಟ್ ಮಾಡುವಂತೆ ಸೂಚನೆ ನೀಡಲಾಗಿದೆ.

    ಈ ಪಟ್ಟಿಯಲ್ಲಿ ಚೀನಾದ ಟಿಕ್ ಟಾಕ್, ಬಿಗೋ ಲೈವ್, ವಿಯ್ ಚಾಟ್, ಟ್ರ್ಯೂ ಕಾಲರ್, ಝೂಮ್, ವಿಗೋ ವಿಡಿಯೋ ಸೇರಿದಂತೆ ಒಟ್ಟು 89 ವಿದೇಶಿ ಆ್ಯಪ್‍ಗಳನ್ನು ಡಿಲೀಟ್ ಮಾಡುವಂತೆ ಸೂಚಿಸಿದೆ. ಮಾಹಿತಿ ಸೋರಿಕೆ ಹಿನ್ನೆಲೆ ಆ್ಯಪ್‍ಗಳನ್ನು ಅನ್‍ಇನ್‍ಸ್ಟಾಲ್ ಮಾಡುವಂತೆ ಸೂಚಿಸಿದೆ.

    ಈ ಪಟ್ಟಿಯಲ್ಲಿ ಡೇಟಿಂಗ್ ಆ್ಯಪ್‍ಗಳಾದ ಟಿಂಡರ್, ಹ್ಯಾಪನ್, ಟ್ರ್ಯೂಲಿ ಮ್ಯಾಡ್ಲಿ, ಐಸ್ಲೆ, ಕಾಫಿ ಮೀಟ್ಸ್ ಬಗೆಲ್, ಕೌಚ್ ಸರ್ಫಿಂಗ್ ಹಾಗೂ ನ್ಯೂಸ್ ಆ್ಯಪ್ ಡೇಲಿ ಹಂಟ್ ಸಹ ಸೇರಿಕೊಂಡಿವೆ. ಒಟ್ಟು 13 ಲಕ್ಷ ಭಾರತೀಯ ಸೇನೆಯ ಸಿಬ್ಬಂದಿಗೆ ಜುಲೈ 15ರೊಳಗೆ ಈ ಆ್ಯಪ್‍ಗಳನ್ನು ಡಿಲೀಟ್ ಮಾಡುವಂತೆ ಆದೇಶಿಸಲಾಗಿದೆ.

    ಇತ್ತೀಚೆ ಚೀನಾ-ಭಾರತ ನಡುವೆ ಗಾಲ್ವಾನಾ ವ್ಯಾಲಿಯ ಎಲ್‍ಎಸಿಯಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದು, ಇದರ ಬೆನ್ನಲ್ಲೇ ಚೀನಾ ವಿರುದ್ಧ ಭಾರತ ಆ್ಯಪ್ ಸಮರ ಸಾರಿದೆ. 10 ದಿನಗಳ ಹಿಂದಷ್ಟೇ ಭಾರತ ಚೀನಿ ಮೂಲದ 59 ಆ್ಯಪ್‍ಗಳನ್ನು ಬ್ಯಾನ್ ಮಾಡಿದೆ. ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆಗೆ ಧಕ್ಕೆ ಉಂಟಾಗುವ ಹಿನ್ನೆಲೆ ಆ್ಯಪ್ ಬ್ಯಾನ್ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

  • ಡಿಜಿಟಲ್ ಸ್ಟ್ರೈಕ್ ಸಹ ಮಾಡಬಹುದು ಎಂಬುದನ್ನು ತೋರಿಸಿದ್ದೇವೆ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

    ಡಿಜಿಟಲ್ ಸ್ಟ್ರೈಕ್ ಸಹ ಮಾಡಬಹುದು ಎಂಬುದನ್ನು ತೋರಿಸಿದ್ದೇವೆ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

    ನವದೆಹಲಿ: ಚೀನಾದ 59 ಆ್ಯಪ್‍ಗಳನ್ನು ನಿಷೇಧಿಸುವ ಮೂಲಕ ಭಾರತ ಡಿಜಿಟಲ್ ಸ್ಟ್ರೈಕ್ ಕೂಡ ಮಾಡಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಭಾರತೀಯ ಪ್ರಜೆಗಳ ವೈಯಕ್ತಿಕ ಡಾಟಾ ರಕ್ಷಿಸುವ ಉದ್ದೇಶದಿಂದ ಆ್ಯಪ್‍ಗಳನ್ನು ಬ್ಯಾನ್ ಮಾಡಿದ್ದೇವೆ. ಭಾರತದ ಸಾರ್ವಭೌಮತ್ವ, ಭದ್ರತೆ ಕಾಪಾಡುವುದು ಹಾಗೂ ದೇಶದ ಜನತೆಯ ಡಿಜಿಟಲ್ ಸೆಕ್ಯೂರಿಟಿ, ಪ್ರೈವೆಸಿ ಉದ್ದೇಶದಿಂದ ಟಿಕ್ ಟಾಕ್ ಸೇರಿ 59 ಆ್ಯಪ್‍ಗಳನ್ನು ನಿಷೇಧಿಸಿದ್ದೇವೆ ಎಂದು ತಿಳಿಸಿದ್ದಾರೆ.

    ನಮ್ಮ ಸೈನಿಕರು ಹಾಗೂ ದೇಶದ ಜನತೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ಭಾರತಕ್ಕೆ ತಿಳಿದಿದೆ. ಹೀಗಾಗಿ ಡಿಜಿಟಲ್ ಸ್ಟ್ರೈಕ್ ಕೂಡ ಮಾಡಬಹುದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ. ಭಾರತ ಶಾಂತಿ ಬಯಸುತ್ತದೆ. ಆದರೆ ಯಾರಾದರೂ ಕೆಟ್ಟ ಕಣ್ಣು ಹಾಕಿದರೆ, ಕೆಣಕಿದರೆ ತಕ್ಕ ಉತ್ತರ ಕೊಡದೆ ಬಿಡುವುದಿಲ್ಲ ಎಂದು ರವಿಶಂಕರ್ ಪ್ರಸಾದ್ ಎಚ್ಚರಿಸಿದ್ದಾರೆ.

    ಕೇಂದ್ರ ಸರ್ಕಾರ ಟಿಕ್ ಟಾಕ್, ಯುಸಿ ಬ್ರೌಸರ್ ಸೇರಿದಂತೆ ಚೀನಾ ಮೂಲದ 59 ಆ್ಯಪ್‍ಗಳನ್ನು ಇತ್ತೀಚೆಗೆ ನಿಷೇಧಿಸಿದೆ. ಭಾರತದ ಸಾರ್ವಭೌಮತ್ವ, ಸಮಗ್ರತೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಆ್ಯಪ್‍ಗಳನ್ನು ನಿಷೇಧಿಸಿರುವುದಾಗಿ ತಿಳಿಸಿದೆ. 59 ಆ್ಯಪ್‍ಗಳ ಪಟ್ಟಿಯಲ್ಲಿ ಹೆಲೋ, ಲೈಕೀ, ಕ್ಯಾಮ್ ಸ್ಕ್ಯಾನರ್, ವಿಗೋ ವಿಡಿಯೋ, ಎಂಐ ವಿಡಿಯೋ ಕಾಲ್ ಕ್ಸಿಯೋಮಿ, ಕ್ಲ್ಯಾಶ್ ಆಫ್ ಕಿಂಗ್ಸ್, ಕ್ಲಬ್ ಫ್ಯಾಕ್ಟರಿ ಸೇರಿದಂತೆ ಒಟ್ಟು 59 ಆ್ಯಪ್‍ಗಳನ್ನು ಬ್ಯಾನ್ ಮಾಡಿದೆ.

    ಗಾಲ್ವಾನ್ ವ್ಯಾಲಿಯಲ್ಲಿ ಕುದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಚೀನಾ ಹಾಗೂ ಭಾರತದ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಭಾರತ ಚೀನಿ ಆ್ಯಪ್‍ಗಳನ್ನು ಬ್ಯಾನ್ ಮಾಡಿದೆ.