Tag: apology

  • ಬಾಯಿಗೆ ಬಂದಂತೆ ಬೈದು ಕಿರಿಕ್‌ – ಸಂಯುಕ್ತ ಬಳಿ ಕ್ಷಮೆ ಕೇಳಿದ ಕವಿತಾ ರೆಡ್ಡಿ

    ಬಾಯಿಗೆ ಬಂದಂತೆ ಬೈದು ಕಿರಿಕ್‌ – ಸಂಯುಕ್ತ ಬಳಿ ಕ್ಷಮೆ ಕೇಳಿದ ಕವಿತಾ ರೆಡ್ಡಿ

    ಬೆಂಗಳೂರು: ಪಾರ್ಕ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ನಟಿ ಸಂಯುಕ್ತ ಹೆಗ್ಡೆ ಮತ್ತು ಗೆಳತಿಯರಿಗೆ ಬಾಯಿಗೆ ಬಂದಂತೆ ಬೈದಿದ್ದ ಕಾಂಗ್ರೆಸ್‌ ನಾಯಕಿ ಕವಿತಾ ರೆಡ್ಡಿ ಈಗ ಬಹಿರಂಗ ಕ್ಷಮೆಯಾಚಿಸಿದ್ದಾರೆ.

    ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿದ ಅವರು, ನನಗೆ ನನ್ನ ತಪ್ಪು ಗೊತ್ತಾಗಿದೆ. ನೈತಿಕ ಪೊಲೀಸ್‌ಗಿರಿಯನ್ನು ನಾನು ಯಾವಾಗಲೂ ವಿರೋಧಿಸುತ್ತೇನೆ. ಪ್ರಗತಿಪರ ಮಹಿಳೆಯಾಗಿ ಈ ವಿಷಯದಲ್ಲಿ ಸಂಯುಕ್ತಾ ಹೆಗಡೆ ಮತ್ತು ಇಬ್ಬರು ಸ್ನೇಹಿತರ ಜೊತೆ ನಾನು ಹಾಗೂ ಸಾರ್ವಜನಿಕರು ನಡೆದುಕೊಂಡ ಬಗೆಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

    ಕವಿತಾ ರೆಡ್ಡಿ ಅವರ ಕ್ಷಮೆಯನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಸಂಯುಕ್ತ ಹೆಗ್ಡೆ ಟ್ವೀಟ್‌ ಮಾಡಿದ್ದು ಕಿರಿಕ್‌ ಪ್ರಕರಣ ಅಂತ್ಯ ಕಂಡಿದೆ.

    ನಡೆದಿದ್ದೇನು?
    ಬೆಂಗಳೂರಿನ ಅಗರ ಉದ್ಯಾನವನದಲ್ಲಿ ಸಂಯುಕ್ತಾ ಹೆಗಡೆ ಸ್ನೇಹಿತರೊಂದಿಗೆ ಹುಲಾ ಹೂಪ್ ಅಭ್ಯಾಸ ಮಾಡುತ್ತಿದ್ದರು. ಸಾಮಾಜಿಕ ಅಂತರ ಕಾಪಾಡಿಕೊಂಡು ಸಂಯುಕ್ತಾ ಮತ್ತು ಅವರ ಸ್ನೇಹಿತರು ವರ್ಕೌಟ್ ಮಾಡುತ್ತಿದ್ದರೂ ಕೂಡ ಕವಿತಾ ರೆಡ್ಡಿ ಸಂಯುಕ್ತಾಗೆ ಬೈಯ್ಯುತ್ತಿದ್ದರು. ಈ ವಿಚಾರ ನಟಿ ಸಂಯುಕ್ತ ಹೆಗ್ಡೆ ಪ್ರತಿಕ್ರಿಯಿಸಿದ್ದಾಗ ನಿಮ್ಮ ಮೇಲೆ ಡ್ರಗ್‌ ಕೇಸ್‌ ಫಿಟ್‌ ಮಾಡುತ್ತೇನೆ ಎಂದು ಗದರಿದ್ದರು. ಅಷ್ಟೇ ಅಲ್ಲದೇ ತುಂಡು ಬಟ್ಟೆ ತೊಟ್ಟು ಡ್ಯಾನ್ಸ್ ಮಾಡಿದ್ದಾರೆ ಎಂದು ಕವಿತಾ ರೆಡ್ಡಿ ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಅಲ್ಲಿದ್ದ ಸ್ಥಳೀಯರು ನಟಿಯ ವಿರುದ್ಧ ಧಿಕ್ಕಾರ ಕೂಗಿ, ನಂತರ ಪಾರ್ಕ್ ಗೇಟ್ ಲಾಕ್ ಮಾಡಿ ಪೊಲೀಸರಿಗೆ ಕರೆ ಮಾಡಿದ್ದರು.

    https://twitter.com/ShobhaBJP/status/1302112068565266432

    ನಂತರ ಏನಾಯ್ತು?
    ಸಂಯುಕ್ತ ಹೆಗ್ಡೆ ಲೈವ್‌ ವಿಡಿಯೋ ಮಾಡಿ ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಕವಿತಾ ರೆಡ್ಡಿ ತನ್ನ ಗೆಳತಿಗೆ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್‌ ಮಾಡಿದ್ದರು. ಈ ಕುರಿತು ಟ್ವಿಟ್ಟರ್ ನಲ್ಲಿ ವಿಡಿಯೋ ಹಾಕಿ ಕಿಡಿ ಕಾರಿದ್ದ ಅವರು ನಮ್ಮ ದೇಶದ ಭವಿಷ್ಯವು ಇಂದು ನಾವು ಏನು ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅಗರ ಕೆರೆ ಬಳಿಯ ಉದ್ಯಾನವನದಲ್ಲಿ ಕವಿತಾ ರೆಡ್ಡಿ ನಮ್ಮನ್ನು ನಿಂದಿಸಿ, ಅಸಹ್ಯಕರವಾಗಿ ವರ್ತಿಸಿದರು. ಇದಕ್ಕೆ ಹೆಚ್ಚಿನ ವಿಡಿಯೋ ಪುರಾವೆಗಳು ಸಹ ಇವೆ. ಈ ಕುರಿತು ಗಮನಹರಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಬೆಂಗಳೂರು ಪೊಲೀಸರಿಗೆ ಹಾಗೂ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದರು. ದೂರಿನ ಬಳಿಕ ಎಫ್‌ಐಆರ್‌ ಸಹ ದಾಖಲಾಗಿತ್ತು.

    ನೆಟ್ಟಿಗರಿಂದ ವ್ಯಾಪಕ ಬೆಂಬಲ:
    ಕವಿತಾ ರೆಡ್ಡಿ ಹೊಡೆಯುತ್ತಿರುವ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ನೆಟ್ಟಿಗರು ಸಂಯುಕ್ತ ಹೆಗ್ಡೆ ಪರ ಅಭಿಪ್ರಾಯ ಹಂಚಿಕೊಳ್ಳಲು ಆರಂಭಿಸಿದರು. ಶೋಭಾ ಕರಂದ್ಲಾಜೆ, ನಟಿ ರಮ್ಯಾ, ಕಾಜಲ್‌ ಅಗರ್‌ವಾಲ್‌, ಜಗ್ಗೇಶ್, ಹಿತಾ ಚಂದ್ರಶೇಖರ್, ಮೇಘನಾ, ಸಂತೋಷ್ ಆನಂದರಾಮ್, ಸಿಂಪಲ್ ಸುನಿ ಸೇರಿದಂತೆ ಅನೇಕರು ಕವಿತಾ ರೆಡ್ಡಿ ನಡೆ ವಿರೋಧಿಸಿ ಟ್ವೀಟ್‌ ಮಾಡಿದ್ದರು.

  • ಚಿರು ಕುಟುಂಬದ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ ಇಂದ್ರಜಿತ್‌

    ಚಿರು ಕುಟುಂಬದ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ ಇಂದ್ರಜಿತ್‌

    ಬೆಂಗಳೂರು: ಡ್ರಗ್ ಮಾಫಿಯಾಗೂ ಚಿರಂಜೀವಿ ಸರ್ಜಾ ಸಾವಿಗೆ ಸಂಬಂಧ ಕಲ್ಪಿಸಿದ್ದಕ್ಕೆ ನಿರ್ಮಾಪಕ, ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಬಹಿರಂಗವಾಗಿ ಚಿರು ಕುಟುಂಬದವರಲ್ಲಿ ಕ್ಷಮೆ ಕೇಳಿದ್ದಾರೆ.

    ಫಿಲ್ಮ್‌ ಚೇಂಬರ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಿರಂಜೀವಿ ಸರ್ಜಾ ಒಬ್ಬ ಯುವ ಪ್ರತಿಭಾವಂತ ಕಲಾವಿದ. ನನ್ನ ಹೇಳಿಕೆಯಿಂದ ಕುಟುಂಬದವರಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

    ಸಾರಾ ಗೋವಿಂದ್, ಉಮೇಶ್ ಬಣಕಾರ್ ಕಾಲ್‌ ಮಾಡಿದ್ದರು. ಇವರಿಗೆ ಗೌರವ ನೀಡುವುದು ನನ್ನ ಕರ್ತವ್ಯ. ಮೇಘನಾರಾಜ್ ಅವರು ಪತ್ರ ಬರೆದು ತುಂಬಾ ನೋವಾಗಿದೆ ಅಂತಾ ಹೇಳಿದ್ದಾರೆ. ಸುಂದರ್ ರಾಜ್ ಮತ್ತೆ ಅವರ ಪತ್ನಿ ನಾನು ಚಿಕ್ಕಮಗು ಇದ್ದಾಗ ಆಟ ಆಡಿಸಿದ್ದಾರೆ. ಅವರ ಮೇಲೆ ನನಗೆ ಗೌರವವಿದೆ. ಚಿರಂಜೀವಿ ಸರ್ಜಾ ಯುವ ನಟನಾಗಿದ್ದು ಉತ್ತಮ ಭವಿಷ್ಯ ಇತ್ತು. ಸಾವಿನ ಬಗ್ಗೆ ಸಂಶಯ ಬಂದ ಕಾರಣಕ್ಕೆ ನಾನು ಹೀಗೆ ಹೇಳಿದೆ. ಆದರೆ ಈಗ ಈ ಹೇಳಿಕೆಯನ್ನು ವಾಪಸ್‌ ಪಡೆಯುತ್ತೇನೆ ಎಂದು ತಿಳಿಸಿದರು.

    ಕೆಲವರು ಬಂದು ಚಿತ್ರರಂಗವನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ಚಿತ್ರರಂಗದ ಒಬ್ಬರು ಅರೆಸ್ಟ್ ಆಗಿರುವುದು ನನಗೆ ನೋವಿದೆ. ಡ್ರಗ್ಸ್‌ ಮಾಫಿಯಾ ವಿರುದ್ಧ ಕೆಲಸ ಮಾಡುತ್ತಿರುವ ಪೊಲೀಸರಿಗೆ ಸೆಲ್ಯೂಟ್ ಹೊಡೆಯಬೇಕು. ನನ್ನ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಇಂದ್ರಜಿತ್‌ ಲಂಕೇಶ್‌ ಹೇಳಿದರು.

    ಸಾ.ರಾ ಗೋವಿಂದ್ ಮಾತನಾಡಿ, ಚಿತ್ರರಂಗದ ಕೊಳೆಯನ್ನು ತೊಳೆಯುವಂತಹ ಕೆಲಸ ಮಾಡಿದ್ದಕ್ಕೆ ಇಂದ್ರಜಿತ್ ಲಂಕೇಶ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

    ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ನನಗೆ ನೋವಾಗಿದ್ದು, ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ನಟಿ ಮೇಘನಾರಾಜ್ ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಇಂದು ಫಿಲ್ಮ್‌ ಚೇಂಬರ್ ನಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆ ಎನ್.ಎಮ್ ಸುರೇಶ್ ಅವರು ಈ ಬಗ್ಗೆ ಪ್ರಸ್ತಾಪ ಮಾಡಿದ್ದರು.

    ಪತ್ರದಲ್ಲಿ ಇಂದ್ರಜಿತ್ ಮಾತುಗಳ ನನಗೆ ಮಾನಸಿಕ ತೊಳಲಾಟಕ್ಕೆ ತಳ್ಳಿವೆ. ಗರ್ಭಿಣಿ ಆಗಿರುವ ನಾನು ಮಾನಸಿಕ ತೊಳಲಾಟದಲ್ಲಿದ್ದೇನೆ. ನನ್ನ ದಿವಂಗತ ಪತಿ ಮೇಲೆ ಇಂದ್ರಜಿತ್ ಆರೋಪ ಮಾಡಿದ್ದಾರೆ. ಇಂದ್ರಜಿತ್ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಲಿ ಎಂದು ಪತ್ರದ ಮೂಲಕ ಒತ್ತಾಯಿಸಿದ್ದರು.

  • ಭಾರತದ ಜೊತೆ ಕ್ಷಮೆ ಕೇಳಿದ ಅಮೆರಿಕ

    ಭಾರತದ ಜೊತೆ ಕ್ಷಮೆ ಕೇಳಿದ ಅಮೆರಿಕ

    ವಾಷಿಂಗ್ಟನ್: ಪ್ರತಿಭಟನೆಯ ವೇಳೆ ಮಹಾತ್ಮ ಗಾಂಧೀಜಿ ಪ್ರತಿಮೆಯ ಭಗ್ನವಾಗಿದ್ದಕ್ಕೆ ಅಮೆರಿಕ ಕ್ಷಮೆ ಕೇಳಿದೆ.

    ಜಾರ್ಜ್ ಫ್ಲಾಯ್ಡ್ ಸಾವು ಖಂಡಿಸಿ ಕಪ್ಪು ವರ್ಣಿಯರು ಅಮೆರಿಕದಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕಿಡಿಗೇಡಿಗಳು ವಾಷಿಂಗ್ಟನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಆವರಣದಲ್ಲಿದ್ದ ಗಾಂಧೀಜಿ ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ.

    ಪ್ರತಿಮೆ ಭಗ್ನಗೊಂಡ ವಿಚಾರ ತಿಳಿಯುತ್ತಿದ್ದಂತೆ ಅಮೆರಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಅಮೆರಿಕದ ರಾಯಭಾರಿ ಕೆನ್ ಜಸ್ಟರ್, ಬಹಳ ಬೇಸರವಾಗುತ್ತಿದೆ. ವಾಷಿಂಗ್ಟನ್ ನಗರದಲ್ಲಿ ಗಾಂಧಿ ಪ್ರತಿಮೆ ಭಗ್ನವಾಗಿದ್ದಕ್ಕೆ ನಾವು ಕ್ಷಮೆ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.

    ಪ್ರತಿಭಟನೆ ಯಾಕೆ?
    ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬ ನಕಲಿ ನೋಟು ಚಲಾವಣೆಯ ಆರೋಪಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದ. ಕುತ್ತಿಗೆ ಮೇಲೆ ಮೊಣಕಾಲನ್ನು ಇರಿಸಿ ಹತ್ಯೆ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ. ಕ್ರೂರತ್ವಕ್ಕೆ ಆಫ್ರಿಕನ್ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಬಲಿಯಾಗಿದ್ದನ್ನು ಖಂಡಿಸಿ ಅಲ್ಲಿನ ಜನ ದಂಗೆ ಎದ್ದಿದ್ದಾರೆ. ಕಳೆದ ವಾರದಿಂದ ಅಮೆರಿಕದ ವಿವಿಧ ನಗರಗಳಲ್ಲಿ ಜಸ್ಟೀಸ್ ಫಾರ್ ಫ್ಲಾಯ್ಡ್, ಐ ಕಾಂಟ್ ಬ್ರೀತ್ ಹೆಸರಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಹಿಂಸಾಚಾರಕ್ಕೆ ತಿರುಗಿದೆ.

    ಅನೇಕ ಕಡೆ ಪೊಲೀಸ್ ವಾಹನಗಳು, ರೆಸ್ಟೋರೆಂಟ್‍ಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಆಶ್ರುವಾಯು, ರಬ್ಬರ್ ಬುಲೆಟ್ ಪ್ರಯೋಗಿಸಿದ್ದಾರೆ. ಆದರೆ ಇದನ್ನು ಜನ ಲೆಕ್ಕಿಸುತ್ತಿಲ್ಲ. ಫ್ಲಾಯ್ಡ್ ಹತ್ಯೆ ಮಾಡಿದ್ದ ಪೊಲೀಸ್ ಅಧಿಕಾರಿಯನ್ನು ಬಂಧಿಸಿದೆ. ಪೊಲೀಸರು ಸಾರ್ವಜನಿಕರಲ್ಲಿ ಕ್ಷಮೆ ಕೇಳಿದರೂ ಆಕ್ರೋಶ ಮಾತ್ರ ನಿಂತಿಲ್ಲ.

    ಮುಂಜಾಗ್ರತಾ ಕ್ರಮವಾಗಿ ಹಲವು ನಗರಗಳಲ್ಲಿ ಕರ್ಫ್ಯೂ  ವಿಧಿಸಲಾಗಿದೆ. ಪ್ರತಿಭಟನೆ ಹತ್ತಿಕ್ಕಲು ನ್ಯಾಷನಲ್ ಗಾರ್ಡ್ಸ್ ಗಳನ್ನು ಬಳಸಲಾಗುತ್ತಿದೆ.

  • ಗೋಡ್ಸೆ ದೇಶಭಕ್ತ ಎಂದಿದ್ದಕ್ಕೆ ಕ್ಷಮೆ ಕೇಳಿದ ಸಾಧ್ವಿ ಪ್ರಜ್ಞಾ

    ಗೋಡ್ಸೆ ದೇಶಭಕ್ತ ಎಂದಿದ್ದಕ್ಕೆ ಕ್ಷಮೆ ಕೇಳಿದ ಸಾಧ್ವಿ ಪ್ರಜ್ಞಾ

    – ರಾಹುಲ್ ಕ್ಷಮೆಯಾಚಿಸುವಂತೆ ಬಿಜೆಪಿ ಪಟ್ಟು

    ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಒಬ್ಬ ದೇಶ ಭಕ್ತ ಎಂದು ಹೇಳಿ ವಿವಾದ ಸೃಷ್ಟಿ ಮಾಡಿದ್ದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಕ್ಷಮೆಯಾಚಿಸಿದ್ದಾರೆ.

    ಬುಧವಾರ ಲೋಕಸಭೆಯಲ್ಲಿ ಮಾತನಾಡಿದ್ದ ಸಾಧ್ವಿ ಪ್ರಜ್ಞಾ ನಾಥುರಾಮ್ ಗೋಡ್ಸೆ ಓರ್ವ ದೇಶಭಕ್ತ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ಮಾಡಿ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೇ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಸಾಧ್ವಿ ಪ್ರಜ್ಞಾ ಟೆರರಿಸ್ಟ್ ಪ್ರಜ್ಞಾ ಅವರು ಟೆರರಿಸ್ಟ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ ಎಂದು ಕಿಡಿಕಾರಿದ್ದರು.

    ಈ ಹೇಳಿಕೆ ವಿಚಾರವಾಗಿ ಸ್ವಪಕ್ಷ ಬಿಜೆಪಿ ಕೂಡ ಸಾಧ್ವಿ ಪ್ರಜ್ಞಾಗೆ ತಪರಾಕಿ ಹಾಕಿ ಕ್ಷಮೆ ಕೋರುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಸತ್ತಿನಲ್ಲಿ ಮಾತನಾಡಿದ ಸಾಧ್ವಿ ಪ್ರಜ್ಞಾ, ನನ್ನ ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಆದರೆ ನಾನು ಸಂಸತ್ತಿನಲ್ಲಿ ಹೇಳಿದ ಹೇಳಿಕೆಯನ್ನು ತಿರುಚಿ ಅದಕ್ಕೆ ಬೇರೆ ರೂಪ ನೀಡಿದ್ದಾರೆ. ನಾನು ಗಾಂಧೀಜಿ ಅವರು ದೇಶಕ್ಕಾಗಿ ಮಾಡಿರುವ ತ್ಯಾಗವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

    ಈ ಸಂಸತ್ತಿನ ಒಬ್ಬ ಸದಸ್ಯರು ನನ್ನನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಅದು ನನ್ನ ಘನತೆಗೆ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ. ನನ್ನ ವಿರುದ್ಧ ನ್ಯಾಯಾಲಯದಲ್ಲಿ ಯಾವುದೇ ಆರೋಪಗಳು ಸಾಬೀತಾಗದೆ ಇದ್ದರೂ ಅವರು ಹೀಗೆ ಹೇಳಿರುವುದು ಒಬ್ಬ ಮಹಿಳಾ ಸಂಸದೆ ಮತ್ತು ಸನ್ಯಾಸಿಗೆ ಮಾಡಿರುವ ಅವಮಾನ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ಮಾಡಿದರು.

    ಇದರ ಜೊತೆಗೆ ಸಾಧ್ವಿ ಪ್ರಜ್ಞಾ ಅವರು ಈ ರಾಷ್ಟ್ರಕ್ಕಾಗಿ ಗಾಂಧೀಜಿ ಅವರ ಕೊಡುಗೆಯನ್ನು ನಾನು ಶ್ಲಾಘಿಸುತ್ತೇನೆ. ಒಂದು ಪಕ್ಷ ನನ್ನನ್ನು ಗುರಿಯಾಗಿಸಿಕೊಂಡು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮೇಲೆ ಗಂಭೀರ ಆರೋಪ ಮಾಡಿದರು.

    ಈ ಆರೋಪದ ನಂತರ ಲೋಕಸಭೆಯಲ್ಲಿ ಕೆಲಕಾಲ ಕಾಂಗ್ರೆಸ್ ಸಂಸದರು ಸಾಧ್ವಿ ಪ್ರಜ್ಞಾ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಬಿಜೆಪಿ ಸಂಸದ ನಿಷ್ಕಾಂತ್ ದುಬೆ, ಈಗ ಸಾಧ್ವಿ ಪ್ರಜ್ಞಾ ಅವರು ಕ್ಷಮೆ ಕೇಳಿದ್ದಾರೆ. ಆದರೆ ಒಬ್ಬ ಸಂಸದೆಯನ್ನು ಟೆರರಿಸ್ಟ್ ಎಂದು ಹೇಳಿದ ರಾಹುಲ್ ಗಾಂಧಿ ಅವರು ಕ್ಷಮೆ ಕೇಳಬೇಕು. ಇಲ್ಲವಾದರೆ ಸ್ಪೀಕರ್ ಅವರ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿದರು.

    ಏನಿದು ವಿವಾದ?
    ಬುಧವಾರ ಸಂಸತಿನಲ್ಲಿ ಡಿಎಂಕೆ ಸಂಸದ ಎ.ರಾಜಾ ಅವರು ವಿಶೇಷ ಭದ್ರತಾ ಪಡೆ (ಎಸ್‍ಪಿಜಿ) ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಏಕೆ ಕೊಲೆ ಮಾಡಿದರು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯೆ ಪ್ರವೇಶಿಸಿ, ದೇಶಭಕ್ತನ ಉದಾಹರಣೆಯನ್ನು ನೀವು ಈ ಸಂದರ್ಭದಲ್ಲಿ ಕೊಡಬೇಡಿ ಎಂದು ಕಿಡಿಕಾರಿದ್ದರು.

    ಇದನ್ನು ಸ್ವತಃ ಗೋಡ್ಸೆ ಒಪ್ಪಿಕೊಂಡಿದ್ದಾರೆ. 32 ವರ್ಷಗಳಿಂದ ಗಾಂಧಿ ಮೇಲೆ ದ್ವೇಷ ಇತ್ತು ಹೀಗಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಮಹಾತ್ಮಾ ಗಾಂಧಿಯವರ ವಿಚಾರಧಾರೆಗಳು ಪ್ರತ್ಯೇಕವಾಗಿದ್ದರಿಂದ ಗೋಡ್ಸೆ ಅವರನ್ನು ಹತ್ಯೆ ಮಾಡಿದ ಎಂದು ರಾಜಾ ಅವರು ಲೋಕಸಭೆಯ ಕಲಾಪದಲ್ಲಿ ತಿಳಿಸಿದ್ದರು. ರಾಜಾ ಅವರು ಮಾತನಾಡುತ್ತಿದ್ದ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯ ಪ್ರವೇಶಿಸಿದ್ದಕ್ಕೆ ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು. ಆಗ ಬಿಜೆಪಿ ಸಂಸದರು ಸಾಧ್ವಿಯವರಿಗೆ ಕುಳಿತುಕೊಳ್ಳುವಂತೆ ಸೂಚಿಸಿದ್ದರು.

  • ಕ್ಷಮೆ ಕೇಳಿದ ಅಜಂ ಖಾನ್ – ಅಖಿಲೇಶ್ ವಿರುದ್ಧ ಏಕವಚನದಲ್ಲೇ ರಮಾದೇವಿ ಕ್ಲಾಸ್

    ಕ್ಷಮೆ ಕೇಳಿದ ಅಜಂ ಖಾನ್ – ಅಖಿಲೇಶ್ ವಿರುದ್ಧ ಏಕವಚನದಲ್ಲೇ ರಮಾದೇವಿ ಕ್ಲಾಸ್

    – ನಿಮ್ಮ ಕ್ಷಮೆಯನ್ನ ಸ್ವೀಕರಿಸಲ್ಲ
    – ಸ್ಪೀಕರ್ ಸ್ಥಾನದ ಗೌರವ ಗೊತ್ತಿಲ್ಲ

    ನವದೆಹಲಿ: ಸದನದಲ್ಲಿ ಸೆಕ್ಸಿ ಹೇಳಿಕೆ ನೀಡಿ, ವಿವಾದಕ್ಕೆ ಗುರಿಯಾಗಿದ್ದ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಕ್ಷಮೆ ಕೇಳಿದ್ದಾರೆ.

    ಸ್ಪೀಕರ್ ಸ್ಥಾನದ ಬಗ್ಗೆ ನನಗೆ ಗೌರವವಿದೆ. ಆ ಸ್ಥಾನಕ್ಕೆ ಅಗೌರವ ತೋರುವ ಉದ್ದೇಶದಿಂದ ಹಾಗೆ ಮಾತನಾಡಿಲ್ಲ. ನನ್ನ ನಡವಳಿಕೆ ಹಾಗೂ ಮಾತುಗಳ ಬಗ್ಗೆ ಎಲ್ಲಾ ಸಂಸದರಿಗೂ ಗೊತ್ತು. ಅದರ ಹೊರತಾಗಿಯೂ ನಾನು ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿದ್ದೇನೆ ಎನ್ನುವುದಾದರೆ ಕ್ಷಮೆ ಕೇಳುತ್ತೇನೆ ಎಂದು, ಕ್ಷಮೆಯಾಚಿಸಿ ಕುಳಿತರು.

    ಬಳಿಕ ಮಾತು ಆರಂಭಿಸಿದ ಬಿಜೆಪಿ ಸಂಸದೆ, ಡೆಪ್ಯುಟಿ ಸ್ಪೀಕರ್ ರಮಾದೇವಿ ಅವರು, ನಿಮ್ಮ ಕ್ಷಮೆಯನ್ನು ಸ್ವೀಕರಿಸುವುದಿಲ್ಲ. ನಾನು ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದೆ. ಆಗ ಅಜಂ ಖಾನ್ ಹಾಗೇ ಮಾತನಾಡಿದ್ದಾರೆ. ಸ್ಪೀಕರ್ ಸ್ಥಾನದ ಗೌರವ ಇವರಿಗೆ ಗೊತ್ತಿಲ್ಲ. ಆ ಸನ್ನಿವೇಶವನ್ನು ದೇಶದ ಜನರು ನೋಡಿದ್ದಾರೆ. ಸದನದಲ್ಲಿ ಅಷ್ಟೇ ಅಲ್ಲ ಹೊರಗಡೆಯೂ ಹೀಗೆ ಬಾಯಿ ಹರಿಬಿಡುತ್ತಾರೆ. ಅವರಿಗೆ ನಾಲಿಗೆ ಮೇಲೆ ಹಿಡಿತವೇ ಇಲ್ಲ ಎಂದು ಗುಡುಗಿದರು.

    ಈ ವೇಳೆ ಅಜಂ ಖಾನ್ ಪರ ಎಸ್‍ಪಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಧ್ವನಿ ಏರಿಸುತ್ತಿದ್ದಂತೆ ಗರಂ ಆದ ರಮಾದೇವಿ ಅವರು, ಅಜಂ ಖಾನ್ ಬೆಂಬಲಕ್ಕೆ ಯಾಕೆ ನಿಲ್ಲುತ್ತಿಯಾ? ನಾನು ಮಾತುನಾಡುತ್ತೇನೆ ಅದನ್ನು ಮೊದಲು ಕೇಳು. ಅವರಿಂದ ನಾವೇಕೆ ಕ್ಷಮೆ ನಿರೀಕ್ಷೆ ಮಾಡಬೇಕು. ಜನರ ಸೇವೆಗಾಗಿ ಸಂಘರ್ಷ ಮಾಡುತ್ತಾ ಸಂಸತ್ ಬಂದಿದ್ದೇನೆಯೇ ಹೊರತು ನಿಮ್ಮ ಮಾತುಗಳನ್ನು ಕೇಳಲು ಇಲ್ಲಿಗೆ ಬಂದಿಲ್ಲ ಎಂದು ಏಕ ವಚನದಲ್ಲೇ ಕಿಡಿಕಾರಿದರು.

    ಈ ಹಿಂದೆ ಆಗಿದ್ದೇನು?:
    ತ್ರಿವಳಿ ತಲಾಖ್ ಕುರಿತು ಲೋಕಸಭೆಯಲ್ಲಿ ಗುರುವಾರ ಗಂಭೀರ ಚರ್ಚೆ ನಡೆದಿತ್ತು. ಈ ವೇಳೆ ಸ್ಪೀಕರ್ ಸ್ಥಾನದಲ್ಲಿದ್ದ ಬಿಜೆಪಿಯ ಸಂಸದೆ ರಮಾದೇವಿ ಅವರ ಕಡೆಗೆ ನೋಡಿದ ಅಜಂ ಖಾನ್, ನೀವು ಎಂದರೆ ನನಗೆ ತುಂಬಾ ಇಷ್ಟ. ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಬೇಕು ಎನಿಸುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

    ಅಜಂ ಖಾನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ರಮಾದೇವಿ ಅವರು, ಸಂಸದರಾಗಿ ಹೀಗೆ ಮಾತನಾಡುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ ಎಂದು ಗುಡುಗಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಅಜಂ ಖಾನ್ ಅವರು, ನೀವು ನನ್ನ ಸಹೋದರಿ ಸಮಾನ. ಆ ದೃಷ್ಟಿಯಿಂದ ಮಾತನಾಡಿದೆ ಅಷ್ಟೇ ಎಂದು ಹೇಳಿ ಜಾರಿಕೊಂಡಿದ್ದರು.

    ಆಡಳಿತ ಪಕ್ಷದ ಸದಸ್ಯರು, ಅಜಂ ಖಾನ್ ಸದನಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಆದರೆ ಕ್ಷಮೆ ಯಾಚಿಸಲು ನಿರಾಕರಿಸಿದ ಅಜಾಂ ಖಾನ್, ಅಸಂಸದೀಯ ಪದವನ್ನು ನಾನು ಬಳಸಿಲ್ಲ. ಬೇಕಾದರೆ ರಾಜೀನಾಮೆ ನೀಡುತ್ತೇನೆ. ಕ್ಷಮೆ ಕೇಳುವುದಿಲ್ಲ ಎಂದು ಕಲಾಪದಿಂದ ಹೊರನಡೆದಿದ್ದರು. ಈ ವೇಳೆ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಅವರು, ಅಜಂ ಖಾನ್ ಮಾತು ಕವಿತೆಯಂತಿತ್ತು. ಅದರಲ್ಲೇನು ತಪ್ಪಿದೆ ಅಂತ ಸಮರ್ಥಿಸಿಕೊಂಡು ಸದನದಿಂದ ನಿರ್ಗಮಿಸಿದ್ದರು.

    ಅಜಂ ಖಾನ್ ರಾಜೀನಾಮೆಗೆ ಬಿಜೆಪಿ ಸಂಸದರು ಪಟ್ಟು ಹಿಡಿದು ಕುಳಿತಿದ್ದಾರೆ. ಜೊತೆಗೆ ಪಕ್ಷಾತೀತವಾಗಿ ಮಹಿಳಾ ಸಂಸದರು ಅಜಂ ಖಾನ್ ವಿರುದ್ಧ ಗುಡುಗಿದ್ದಾರೆ. ಹೀಗಾಗಿ ಅವರ ವಿರುದ್ಧ ಶೀಘ್ರವೇ ಕ್ರಮಕೈಗೊಳ್ಳಲಾಗುತ್ತದೆ ಎಂದು ಸ್ಪೀಕರ್ ಓಂ ಬಿರ್ಲಾ ಭರವಸೆ ನೀಡಿದ್ದಾರೆ.

    ಈ ಸಂಬಂಧ ಮಾಯಾವತಿ ಅವರು ಕೂಡ ಟ್ವೀಟ್ ಮಾಡಿದ್ದು, ಎಸ್‍ಪಿ ಸಂಸದರ ಹೇಳಿಕೆ ಹೇಳಿಕೆ ಮಹಿಳೆಯ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದು, ನೋವು ತಂದಿದೆ. ಅಜಂ ಖಾನ್ ಅವರ ಹೇಳಿಕೆ ಅತ್ಯಂತ ಖಂಡನೀಯ. ಅವರು ಲೋಕಸಭೆಯಲ್ಲಿ ಅಷ್ಟೇ ಅಲ್ಲದೆ ಎಲ್ಲಾ ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಬಿಯರ್ ಬಾಟಲಿ ಮೇಲೆ ಗಾಂಧೀಜಿ- ತಪ್ಪಿಗೆ ಕ್ಷಮೆಯಾಚಿಸಿದ ಇಸ್ರೇಲ್ ಕಂಪನಿ

    ಬಿಯರ್ ಬಾಟಲಿ ಮೇಲೆ ಗಾಂಧೀಜಿ- ತಪ್ಪಿಗೆ ಕ್ಷಮೆಯಾಚಿಸಿದ ಇಸ್ರೇಲ್ ಕಂಪನಿ

    ನವದೆಹಲಿ: ಇಸ್ರೇಲ್ ಮೂಲದ ಬಿಯರ್ ತಯಾರಿಕೆ ಕಂಪನಿಯೊಂದು ತನ್ನ ಬಾಟಲಿಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಹಾಕಿ ವಿವಾದಕ್ಕೆ ಸಿಲುಕಿತ್ತು. ಆದರೆ ಈಗ ತನ್ನ ತಪ್ಪಿಗೆ ಭಾರತೀಯರಲ್ಲಿ ಕಂಪನಿ ಕ್ಷಮೆಯಾಚಿಸಿದೆ.

    ಇಸ್ರೇಲ್‍ನ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೇ 8 ಹಾಗೂ 9ರಂದು ಆಚರಿಸಲಾಗಿತ್ತು. ಈ ಸಂಭ್ರಮಾಚರಣೆಗಾಗಿ ವಿಶೇಷ ಚಿತ್ರಗಳಿರುವ ಸ್ಟಿಕ್ಕರ್ ತಯಾರಿಸಿ ಬಿಯರ್ ಬಾಟಲಿ ಮೇಲೆ ಅಂಟಿಸಲಾಗಿತ್ತು. ಇಸ್ರೇಲ್‍ನ ಮಾಲ್ಕಾ ಬಿಯರ್ ಕಂಪನಿ ತಮ್ಮಲ್ಲಿ ತಯಾರಾದ ಬಿಯರ್ ಬಾಟಲಿಗಳ ಮೇಲೆ ವಿಧವಿಧವಾದ ಸ್ಟಿಕ್ಕರ್ ಅಂಟಿಸಿತ್ತು. ಅದರಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಹೋಲುವ ಕಾರ್ಟೂನ್ ಚಿತ್ರ ಕೂಡ ಇತ್ತು.

    ಗಾಂಧೀಜಿ ಚಿತ್ರವಿರುವ ಬಿಯರ್ ಬಾಟಲಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪಿತ ಗಾಂಧೀಜಿಗೆ ಇಸ್ರೇಲ್ ಅವಮಾನ ಮಾಡಿದೆ ಎಂದು ರೊಚ್ಚಿಗೆದ್ದ ಭಾರತೀಯರು ಮಾಲ್ಕಾ ಬಿಯರ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಬಗ್ಗೆ ರಾಜ್ಯ ಸಭೆಯಲ್ಲೂ ಕೂಡ ಮಂಗಳವಾರ ಚರ್ಚೆ ನಡೆದಿತ್ತು. ಈ ವೇಳೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕೂಡ ವಿರೋಧ ವ್ಯಕ್ತಪಡಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.

    ಭಾರತದಲ್ಲಿ ಅಸಮಾಧಾನ ಭುಗಿಲೆದ್ದ ಹಿನ್ನೆಲೆ ಎಚ್ಚೆತ್ತುಕೊಂಡ ಕಂಪನಿ ಬ್ರಾಂಡ್ ಮ್ಯಾನೇಜರ್ ಭಾರತೀಯರಲ್ಲಿ ಹಾಗೂ ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಿದ್ದಾರೆ. ಗಾಂಧೀಜಿ ಅವರ ಚಿತ್ರವನ್ನು ಬಿಯರ್ ಬಾಟಲಿ ಮೇಲೆ ಹಾಕಿದ್ದು ತಪ್ಪಾಯಿತು. ಇದರಿಂದ ಭಾರತೀಯರ ಭಾವನೆಗಳಿಗೆ ದಕ್ಕೆ ಉಂಟಾಗಿದೆ. ಮಹಾತ್ಮ ಗಾಂಧೀಜಿ ಅವರಿಗೆ ಜಾಗತಿಕ ಮಟ್ಟದಲ್ಲಿ ಗೌರವಿಸಲಾಗುತ್ತದೆ. ನಾವು ನಮ್ಮ ಕಂಪನಿ ಬಿಯರ್ ಬಾಟಲಿಗಳ ಮೇಲೆ ಇರುವ ಗಾಂಧೀಜಿ ಅವರ ಚಿತ್ರವನ್ನು ತೆಗೆಯುತ್ತೇವೆ ಕ್ಷಮಿಸಿ ಎಂದಿದ್ದಾರೆ.

    ಅಚಾತುರ್ಯದಿಂದ ಬಾಟಲಿಗಳ ಮೇಲೆ ಅವರ ಚಿತ್ರ ಮುದ್ರಿತಗೊಂಡಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಹಿನ್ನೆಲೆ ಗಾಂಧೀಜಿ ಅವರಿಗೆ ಗೌರವ ಸಲ್ಲಿಸಲು ಬಿಯರ್ ಬಾಟಲಿ ಮೇಲೆ ಅವರ ಚಿತ್ರ ಬಳಸಲಾಯಿತು. ಗಾಂಧೀಜಿ ಮಾತ್ರವಲ್ಲ ಬಾಟಲಿಯ ಮೇಲೆ ಇಸ್ರೇಲ್‍ನ ಮೂವರು ಮಾಜಿ ಪ್ರಧಾನಿಗಳ ಜತೆ ಚಿತ್ರವನ್ನೂ ಗೌರವ ಸಲ್ಲಿಸಲು ಬಳಸಲಾಗಿತ್ತು ಎಂದು ತಿಳಿಸಿದ್ದಾರೆ.

    ಇಸ್ರೇಲ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ವಿರೋಧ ವ್ಯಕ್ತವಾದ ಬಳಿಕ ನಾವು ಗಾಂಧೀಜಿ ಚಿತ್ರ ಮುದ್ರಿತ ಬಿಯರ್ ಬಾಟಲಿಗಳ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ. ಅಲ್ಲದೆ ಇದು ಲಿಮಿಟೆಡ್ ಎಡಿಷನ್ ಆಗಿದೆ. ಜೊತೆಗೆ ನಾವು ಮಾರುಕಟ್ಟೆಯಲ್ಲಿ ಈಗಾಗಲೇ ಹಂಚಿಕೆಯಾಗಿರುವ ಬಾಟಲಿಗಳ ಮಾರಟಕ್ಕೆ ತಡೆಯೊಡ್ಡಲು ಪ್ರಯತ್ನಿಸುತ್ತಿದ್ದೇವೆ ಎಂದು ಕಂಪನಿ ಹೇಳಿದೆ.

  • ಚೌಕಿದಾರ್ ಚೋರ್ ಹೈ – ಕೊನೆಗೂ ಸುಪ್ರೀಂನಲ್ಲಿ ರಾಹುಲ್ ಬೇಷರತ್ ಕ್ಷಮೆಯಾಚನೆ

    ಚೌಕಿದಾರ್ ಚೋರ್ ಹೈ – ಕೊನೆಗೂ ಸುಪ್ರೀಂನಲ್ಲಿ ರಾಹುಲ್ ಬೇಷರತ್ ಕ್ಷಮೆಯಾಚನೆ

    ನವದೆಹಲಿ: ರಫೇಲ್ ಡೀಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಳ್ಳತನ ಎಸಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದಿದ್ದ ರಾಹುಲ್ ಗಾಂಧಿ ಇಂದು ಬೇಷರತ್ ಕ್ಷಮೆ ಕೇಳಿದ್ದಾರೆ.

    ಈ ಸಂಬಂಧ ಅಫಿಡವಿಟ್ ಸಲ್ಲಿಸಿರುವ ರಾಹುಲ್ ಗಾಂಧಿ, ಚೌಕಿದಾರ್ ಚೋರ್ ಹೈ ಎಂದು ಸುಪ್ರೀಂ ಹೇಳಿದೆ ಎನ್ನಲಾದ ಹೇಳಿಕೆ ಉದ್ದೇಶಪೂರ್ವಕವಲ್ಲದ ಅಜಾಗರೂಕತೆಯಿಂದ ಕೂಡಿದ ಹೇಳಿಕೆಯಾಗಿದೆ. ಈ ಹೇಳಿಕೆ ನೀಡಿದ್ದಕ್ಕೆ ನಾನು ಸುಪ್ರೀಂ ಕೋರ್ಟ್ ನಲ್ಲಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.

    ಈ ಹಿಂದಿನ ವಿಚಾರಣೆ ವೇಳೆ ರಾಹುಲ್ ಪರ ಹಾಜರಿದ್ದ ವಕೀಲ ಅಭಿಷೇಕ್ ಸಿಂಘ್ವಿ, ಅಫಿಡವಿಟ್‍ಗಳಲ್ಲಿ `ಕ್ಷಮೆ’ (ಅಪಾಲಜಿ) ಎನ್ನುವ ಪದ ಇಲ್ಲದೇ ಇರುವುದು ದೋಷ. ಡಿಕ್ಷನರಿಯನ್ನು ಚೆಕ್ ಮಾಡಿದ್ದೇನೆ. ವಿಷಾದ (ರಿಗ್ರೆಟ್) ಅಂದರೆ ಕ್ಷಮಾಪಣೆ (ಸಿವಿಲ್ ಅಪಾಲಜಿ) ಎಂದೇ ಅರ್ಥ ಬರುತ್ತದೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು ನಿಮ್ಮ ಕಕ್ಷಿದಾರರು ಏನು ಹೇಳಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಪಟ್ಟಿದ್ದೇವೆ ಎಂದಾಗ ರಾಜಕೀಯ ಸನ್ನಿವೇಶದಲ್ಲಿ ಚೌಕಿದಾರ್ ಚೋರ್ ಅನ್ನೋ ಪದ ಬಳಸಿದ್ದಾರೆ ಎಂದು ಉತ್ತರ ನೀಡಿದ್ದರು.

    ಈ ಉತ್ತರಕ್ಕೆ ಗರಂ ಆಗಿದ್ದ ಸಿಜೆಐ, ನಿಮ್ಮ ರಾಜಕೀಯ ನಿಲುವುಗಳ ನಮಗೆ ಬೇಕಿಲ್ಲ. ನಿಮ್ಮ ರಾಜಕೀಯವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂದು ಹೇಳಿ ಚಾಟಿ ಬೀಸಿದ್ದರು. ಈ ವೇಳೆ ಮುಕುಲ್ ರೊಹ್ಟಗಿ ಕೋರ್ಟ್ ಮೋದಿ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಹೇಳಿದ್ದಾರೆ. ಬ್ರಾಕೆಟ್‍ನಲ್ಲಿ ವಿಷಾದ ಅಂದ್ರೇನು ಅರ್ಥ? ಸುಪ್ರೀಂಕೋರ್ಟ್ ಪ್ರಧಾನಿಯನ್ನು ಕಳ್ಳ ಅಂತ ಹೇಳಿದೆ ಎಂದು ದೇಶದ ಹಾದಿ ತಪ್ಪಿಸೋ ಯತ್ನವಲ್ಲದೆ ಬೇರೇನೂ ಅಲ್ಲ ಎಂದು ಹೇಳಿ ಸಿಂಘ್ವಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

    ಈ ಆಕ್ಷೇಪಕ್ಕೆ ಸಿಜೆಐ, ನಿಮ್ಮ ಕಕ್ಷಿದಾರ ಸ್ಪಷ್ಟವಾಗಿ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ನಿಂದನೆ ಎದುರಿಸಬೇಕಾಗುತ್ತದೆ ಎಂದಾಗ ಸಿಂಘ್ವಿ, ತಪ್ಪನ್ನು ತಿದ್ದಿಕೊಂಡು `ಕ್ಷಮೆ ಕೋರಿ’ ಹೊಸ ಅಫಿಡವಿಟ್ ಸಲ್ಲಿಸುತ್ತೇವೆ ಎಂದು ತಿಳಿಸಿದ್ದರು. ಅದರಂತೆ ಇಂದು ರಾಹುಲ್ ಗಾಂಧಿ ಬೇಷರತ್ ಕ್ಷಮೆ ಕೇಳಿದ್ದಾರೆ.

    ಏನಿದು ಪ್ರಕರಣ?
    ರಫೇಲ್ ತೀರ್ಪಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಕೇಂದ್ರದ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈ ಆದೇಶ ಬಂದ ನಂತರ ಚೌಕಿದಾರ್ (ಪ್ರಧಾನಿ ಮೋದಿ) ಕಳ್ಳತನ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರ ಭಾಷಣದಲ್ಲಿ ಹೇಳಿದ್ದರು.

    ರಾಹುಲ್ ಗಾಂಧಿ ಅವರು, ರಫೇಲ್ ಡೀಲ್ ಪ್ರಕರಣದ ಆದೇಶದಲ್ಲಿ ಇಲ್ಲದೆ ಇರುವ ಅಂಶಗಳನ್ನು ಉಲ್ಲೇಖಿಸಿ ಮೋದಿ ಅವರನ್ನು ಟೀಕೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಸುಪ್ರೀಂ ಕೋರ್ಟಿನಲ್ಲಿ ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ದೂರು ನೀಡಿದ್ದರು. ಮೀನಾಕ್ಷಿ ಲೇಖಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ನೀಡಬೇಕೆಂದು ಸೂಚಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯೂ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ನೀಡಿತ್ತು.

  • ಆನಂದ್ ಸಿಂಗ್ ತಂದೆ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಕಂಪ್ಲಿ ಗಣೇಶ್

    ಆನಂದ್ ಸಿಂಗ್ ತಂದೆ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಕಂಪ್ಲಿ ಗಣೇಶ್

    ಬಳ್ಳಾರಿ: ಹೊಸಪೇಟೆಯ ಶಾಸಕ ಆನಂದ್ ಸಿಂಗ್ ತಂದೆ ಪೃಥ್ವಿರಾಜ್ ಸಿಂಗ್ ಅವರ ಕಾಲು ಮುಗಿದು ತಪ್ಪಾಯಿತು ಕ್ಷಮಿಸಿ ಎಂದು ಕಂಪ್ಲಿ ಶಾಸಕ ಗಣೇಶ ಕೇಳಿಕೊಂಡಿದ್ದಾರೆ.

    ಹೊಸಪೇಟೆಯ ವೇಣುಗೋಪಾಲ ದೇವಸ್ಥಾನಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಶಾಸಕರು, ಪೃಥ್ವಿರಾಜ್ ಸಿಂಗ್ ಅವರ ಕಾಲು ಮುಗಿದು ತಪ್ಪು ನಡೆದು ಹೋಗಿದೆ. ದಯವಿಟ್ಟು ಕ್ಷಮಿಸಿ ಎಂದು ಅಂಗಲಾಚಿದ್ದಾರೆ. ಇದೇ ವೇಳೆ ಆನಂದ್ ಸಿಂಗ್ ಅವರ ಕೈಹಿಡಿದು ತಪ್ಪಾಯ್ತು ಅಣ್ಣಾ, ಕ್ಷಮಿಸು ಎಂದು ಕೇಳಿಕೊಂಡಿದ್ದಾರೆ.

    ರಾಮನಗರ ರೆಸಾರ್ಟ್ ನಲ್ಲಿ ಆನಂದ್ ಸಿಂಗ್ ಅವರ ಮೇಲೆ ಮಾರಣಂತಿಕ ಹಲ್ಲೆ ಮಾಡಿದ್ದ ಕಂಪ್ಲಿ ಶಾಸಕ ಗಣೇಶ್ ಜೈಲು ಸೇರಿದ್ದರು. ಜಾಮೀನು ಪಡೆದ ಶಾಸಕರು ಹೊರ ಬಂದಿದ್ದಾರೆ. ಹೊಸಪೇಟೆಯಲ್ಲಿ ಶುಕ್ರವಾರ ಕಾರ್ಯಕರ್ತರ ಸಭೆ ನಡೆಸಿದ್ದ ಗಣೇಶ್ ಅವರು, ನಾನು ಆನಂದ್ ಸಿಂಗ್ ಅಣ್ಣ ತಮ್ಮಂದಿರು ಎಂದಿದ್ದರು. ಅಷ್ಟೇ ಅಲ್ಲದೆ ತಮ್ಮ ಗೆಲುವಿಗೆ ಕಾರಣರಾದ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರನ್ನು ಭೇಟಿ ಮಾಡಿದರು.

  • ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಯೂಟರ್ನ್

    ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಯೂಟರ್ನ್

    ಬಾಗಲಕೋಟೆ: ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್ ಪಾಟೀಲ್, ಸಚಿವ ಆರ್.ಬಿ ತಿಮ್ಮಾಪುರ್ ಹಾಗೂ ಎಐಸಿಸಿ ಪ್ರಚಾರ ಸಮಿತಿ ಉಪಧ್ಯಾಕ್ಷರಾದ ಎಸ್.ಜಿ ನಂಜಯನಮಠ ಅವರೇ ಕಾರಣ ಎಂದು ಆರೋಪಿಸಿದ್ದ ಹುನಗುಂದ ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಸದ್ಯ ಯೂಟರ್ನ್ ಹೊಡೆದಿದ್ದಾರೆ.

    ತಮ್ಮ ಧರ್ಮಪತ್ನಿ ಕಾಂಗ್ರೆಸ್ ಪಕ್ಷದ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ, ಈ ಹಿಂದೆ ನಾನು ವಿಧಾನಸಭಾ ಚುನಾವಣೆಯಲ್ಲಿ ಸೋತ ನೋವಿನಿಂದ ಆಕ್ರೋಶ ಭರಿತನಾಗಿ ತಪ್ಪು ತಿಳುವಳಿಕೆಯಿಂದ ನಾನು ಪಕ್ಷದ ಕೆಲವು ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದೆ. ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚರ್ಚಿಸಿ ಇದಕ್ಕೆ ವಿಷಾಧ ವ್ಯಕ್ತಪಡಿಸಿದ್ದೇನೆ. ನನ್ನ ತಪ್ಪು ಮಾತುಗಳಿಂದ ಹಿರಿಯ ನಾಯಕರುಗಳಿಗೆ ನೋವಾಗಿದರೆ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ ಎಂದು ಸಮಜಾಯಿಸಿ ನೀಡಿದ್ದಾರೆ.

    ಎಲ್ಲ ಹಿರಿಯರ ಜೊತೆ ಸೇರಿ ಪಕ್ಷದ ಲೋಕಸಭಾ ಅಭ್ಯರ್ಥಿ ವೀಣಾ ಕಾಶಪ್ಪನವರ್ ಅವರನ್ನು ಗೆಲ್ಲಿಸಲು ಶ್ರಮಿಸೋಣ. ಈ ಜಿಲ್ಲೆಯನ್ನು ಮತ್ತೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿ ಕಟ್ಟೋಣ ಎಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೂ ಮುಂಚೆ ಸಹ ಪರಿವಾರದೊಂದಿಗೆ ಜಿಲ್ಲಾಡಳಿತ ಭವನಕ್ಕೆ ತೆರಳಿದ ವೀಣಾ ಕಾಶಪ್ಪನವರ್, ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆ ವೇಳೆ ವೀಣಾ ಕಾಶಪ್ಪನವರ್ ಗೆ ಮಾಜಿ ಸಚಿವರಾದ ಎಚ್.ವೈ ಮೇಟಿ, ಬಿ.ಆರ್ ಯಾವಗಲ್ ಸಾಥ್ ನೀಡಿದ್ದರು.

  • ಬೆಳಗ್ಗೆ ಮಾನ ಮರ್ಯಾದೆ, ಕಾಮನ್‍ಸೆನ್ಸ್ ಇಲ್ವಾ ಎಂದ ಕೆಪಿಸಿಸಿ ಅಧ್ಯಕ್ಷರು ಸಂಜೆ ಕ್ಷಮೆ ಕೇಳಿದ್ರು!

    ಬೆಳಗ್ಗೆ ಮಾನ ಮರ್ಯಾದೆ, ಕಾಮನ್‍ಸೆನ್ಸ್ ಇಲ್ವಾ ಎಂದ ಕೆಪಿಸಿಸಿ ಅಧ್ಯಕ್ಷರು ಸಂಜೆ ಕ್ಷಮೆ ಕೇಳಿದ್ರು!

    ಬೆಂಗಳೂರು: ಮಾಧ್ಯಮದವರಿಗೆ ಮಾನ ಮರ್ಯಾದೆ ಇಲ್ವಾ..? ಕಾಮನ್‍ಸೆನ್ಸ್ ಇಲ್ವಾ ಎಂದು ಕೇಳಿದ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೊನೆಗೂ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ್ದಾರೆ.

    ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿದ್ದ ಕಂಪ್ಲಿ ಶಾಸಕ ಗಣೇಶ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಶಾಸಕ ಗಣೇಶ್ ಬೆಂಬಲಿಗರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲು ಆಗಮಿಸಿದ್ದರು. ಇದನ್ನು ವರದಿ ಮಾಡಲು ಆಗಮಿಸಿದ್ದ ಮಾಧ್ಯಮಗಳಿಗೆ ದಿನೇಶ್ ಗುಂಡೂರಾವ್ ಅವರು, ನಿಮಗೆ ಮಾನ ಮರ್ಯಾದೆ ಇದ್ಯಾ? ಇದು ನಮ್ಮ ಕಚೇರಿ, ಇವರು ಪಕ್ಷದ ಒಳಗಿನ ವಿಚಾರ ಮಾತನಾಡಲು ಬಂದಿದ್ದಾರೆ. ಇದನ್ನೆಲ್ಲಾ ಶೂಟ್ ಮಾಡಲು ನಿಮಗೆ ಕಾಮನ್ ಸೆನ್ಸ್ ಇಲ್ವಾ ಎಂದೆಲ್ಲಾ ಕೇಳುತ್ತಾ ಮಾಧ್ಯಮ ಪ್ರತಿನಿಧಿಗಳ ಮೇಲೆ ತಮ್ಮ ವಾಕ್ಚತುರ್ಯ ಪ್ರದರ್ಶನ ಮಾಡಿದ್ದರು.

    ಯಾವಾಗ ತಮ್ಮ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಲು ಆರಂಭವಾಯಿತೋ ದಿನೇಶ್ ಗುಂಡೂರಾವ್ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಹೀಗಾಗಿ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳಲ್ಲಿ ಕ್ಷಮೆ ಯಾಚಿಸಿದರು. ನಮ್ಮ ಚೇಂಬರ್ ನಲ್ಲಿ ಆಂತರಿಕ ಸಭೆ ನಡೆಯುತ್ತಿತ್ತು. ಈ ವೇಳೆ ಕಂಪ್ಲಿ ಕಾರ್ಯಕರ್ತರು ಬಂದಾಗ ಮನವಿ ಸ್ವೀಕಾರ ಮಾಡುತ್ತಿದ್ದೆ. ಆದರೆ ಮಾಧ್ಯಮದವರು ಇರೋದು ಗೊತ್ತಿರಲಿಲ್ಲ. ಆಗ ತಕ್ಷಣ ಮಾಧ್ಯಮದವ್ರು ಬಂದಿರೋದು ನೋಡಿ ಹೊರಗೆ ಹೋಗಿ ಎಂದು ತಮ್ಮಿಂದಾದ ತಪ್ಪಿಗೆ ತೇಪೆ ಹಚ್ಚುವ ಪ್ರಯತ್ನ ಮಾಡಿದರು. ಮಾಧ್ಯಮದವರು ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಉತ್ತಮ ಸಂಬಂಧ ಇದೆ. ಆ ಸಂದರ್ಭದಲ್ಲಿ ಬಾಯಿ ತಪ್ಪಿ ಕೆಲವು ಮಾತುಗಳು ನನ್ನಿಂದ ಬಂದವು. ಅದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದರು. ಆದರೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮದವರ ವಿರುದ್ಧ ನೀಡಿದ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದರು.

    ನಾನೇ ಸಭೆಯಿಂದ ಹೊರಗಿದ್ದೆ!: ಬೆಳಗ್ಗೆ ನಡೆದ ಸಭೆಯಲ್ಲಿ ನನ್ನನ್ನು ಹೊರಗಿಟ್ಟು ಸಭೆ ನಡೆಸಿಲ್ಲ. ಅನೇಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಜೊತೆ ಮುಕ್ತವಾಗಿ ಮಾತಾಡುವುದಿತ್ತು. ಹಾಗಾಗಿ ನಾನೇ ಸಭೆಯಲ್ಲಿ ಇರಲ್ಲ ಎಂದು ಹೇಳಿದ್ದೆ. ಎಲ್ಲರೂ ಅಭಿಪ್ರಾಯ ನೀಡುವಾಗ ಅವರಿಗೆ ಮುಜುಗರ ಆಗಬಾರದು. ಅದಕ್ಕಾಗಿ ನಾನು ಹೊರಗೆ ಇದ್ದೆ. ಅಧ್ಯಕ್ಷರನ್ನು ಹೊರಗಿಟ್ಟು ಸಭೆ ಮಾಡುವ ಸನ್ನಿವೇಶ ಇಲ್ಲ ಎಂದು ಸ್ಪಷ್ಟನೆ ನೀಡಿದರು.

    ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಶಾಸಕ ಜೆ.ಎನ್.ಗಣೇಶ್ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಕಾನೂನು ಪ್ರಕಾರವೇ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಯಾರೂ ಈ ಥರಾ ತಲೆ ತಪ್ಪಿಸಿಕೊಳ್ಳಬಾರದು. ಕಾನೂನಿಗೆ ಎಲ್ಲರೂ ಬೆಲೆ ಕೊಡಬೇಕಾಗುತ್ತದೆ. ಕಾಂಗ್ರೆಸ್ ಈ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದು ಹೇಳಿದರು.

    ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರನ್ನ ರೆಸಾರ್ಟಿಗೆ ಕರೆದೊಯ್ದಿದ್ದ ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರು ಪರಸ್ಪರ ಬಡಿದಾಡಿಕೊಂಡ ಪ್ರಕರಣದಿಂದ ತೀವ್ರ ಮುಜುಗರ ಅನುಭವಿಸಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಆರಂಭದಿಂದಲೂ ಭಿನ್ನ ಹೇಳಿಕೆಗಳನ್ನ ನೀಡುವ ಮೂಲಕ ಮುಜುಗರಕ್ಕೆ ಒಳಗಾಗಿದ್ದರು. ಆ ಬಳಿಕ ಶಾಸಕ ಆನಂದ್ ಸಿಂಗ್, ಶಾಸಕ ಗಣೇಶ್ ವಿರುದ್ಧ ದೂರು ನೀಡುತ್ತಿದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗಣೇಶ್ ರನ್ನು ಅಮಾನತು ಮಾಡಿದ್ದರು. ಸದ್ಯ ಗಣೇಶ್ ಬಂಧನದ ಭಯದಿಂದ ನಾಪತ್ತೆಯಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಶಾಸಕ ಆನಂದ್ ಸಿಂಗ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv