Tag: apollo hospital

  • ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಎಚ್‍ಡಿಕೆ

    ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಎಚ್‍ಡಿಕೆ

    ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕರ ನಡುವೆ ನಡೆದ ಮಾರಾಮಾರಿ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್‍ರನ್ನು ಇಂದು ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದರು. ನಗರದ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದ ಸಿಎಂ ಆನಂದ್ ಸಿಂಗ್ ಆರೋಗ್ಯ ವಿಚಾರಿಸಿ ತೆರಳಿದರು.

    ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ವಿಚಾರದಲ್ಲಿ ತುಮಕೂರಿನಲ್ಲಿ 2 ದಿನಗಳ ಕಾಲ ಇದ್ದ ಸಿಎಂ ಕುಮಾರಸ್ವಾಮಿ ಅವರು ಬೆಂಗಳೂರಿಗೆ ಆಗಮಿಸಿದ ಬಳಿಕ ಆನಂದ್ ಸಿಂಗ್‍ರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಆದರೆ ಸತತ 3 ದಿನಗಳ ಕಾಲ ಆನಂದ್ ಸಿಂಗ್ ಭೇಟಿಗೆ ಸಮಯ ನಿಗದಿ ಮಾಡಿದ್ದ ಸಿಎಂ ಅಂತಿಮ ಕ್ಷಣದಲ್ಲಿ ರದ್ದು ಮಾಡುತ್ತಿದ್ದರು. ಸಿಎಂ ಭೇಟಿ ನಿಗದಿ ಮಾಡಿ ಪೊಲೀಸರು ರಕ್ಷಣಾ ವ್ಯವಸ್ಥೆಗಳನ್ನು ಕೈಗೊಂಡ ಬಳಿಕ ಅಂತಿಮ ಕ್ಷಣದಲ್ಲಿ ಭೇಟಿ ರದ್ದು ಮಾಡಿದ ಮಾಹಿತಿ ನೀಡಲಾಗುತ್ತಿತ್ತು. ಸಿಎಂ ಅವರ ಈ ನಡೆಯಿಂದ ಕರ್ತವ್ಯದಲ್ಲಿದ್ದ ಶೇಷಾದ್ರಿಪುರಂ ಪೊಲೀಸರು ಪರದಾಟ ನಡೆಸಬೇಕಾಯಿತು.

    ಈ ಕುರಿತು ಪಬ್ಲಿಕ್ ಟಿವಿ ವರದಿಯನ್ನು ಪ್ರಸಾರ ಮಾಡಿತ್ತು. ಇದರ ಬೆನಲ್ಲೇ ನಿಗದಿತ ಕಾರ್ಯಕ್ರಮದಂತೆ ಸಿಎಂ ಇಂದು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಸುಮಾರು 30 ನಿಮಿಷಗಳ ಕಾಲ ಆನಂದ್ ಸಿಂಗ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಸಿಎಂ ಕುಮಾರಸ್ವಾಮಿ ಅವರಿಗೆ ಶಾಸಕ ಮುನಿರತ್ನ ಅವರು ಸಾಥ್ ನೀಡಿದ್ದರು.

    ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಸಿಎಂ ಕುಮಾರಸ್ವಾಮಿ ತೆರಳಿದರು. ಇದಕ್ಕೂ ಮುನ್ನ ಇಂದು ಆನಂದ್ ಸಿಂಗ್‍ರನ್ನು ಭೇಟಿ ಮಾಡಿದ್ದ ಸಚಿವ ಪರಮೇಶ್ವರ್ ನಾಯ್ಕ್, ಆನಂದ್ ಸಿಂಗ್ ಅವರ ಆರೋಗ್ಯ ಉತ್ತಮವಾಗಿದೆ. ಅವರು ಕಣ್ಣು ಬಿಟ್ಟು ನನ್ನೊಂದಿಗೆ ಮಾತನಾಡಿದ್ದಾರೆ. ಯಾವುದೋ ಒಂದು ಆಚಾತುರ್ಯದಿಂದ ಘಟನೆ ನಡೆದಿದ್ದು, ಅಂದು ನಾನು ಸ್ಥಳದಲ್ಲಿ ಇದ್ದಿರಲಿಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್ ಕ್ರಮಕೈಗೊಳ್ಳುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

     

  • ರಾತ್ರಿ ಆಸ್ಪತ್ರೆಗೆ ಕೈ ನಾಯಕರ ಭೇಟಿ- ಒಂದೂವರೆ ಗಂಟೆ ಆನಂದ್ ಸಿಂಗ್ ಜೊತೆ ಚರ್ಚೆ

    ರಾತ್ರಿ ಆಸ್ಪತ್ರೆಗೆ ಕೈ ನಾಯಕರ ಭೇಟಿ- ಒಂದೂವರೆ ಗಂಟೆ ಆನಂದ್ ಸಿಂಗ್ ಜೊತೆ ಚರ್ಚೆ

    ಬೆಂಗಳೂರು: ತಡರಾತ್ರಿ ಅಪೋಲೋ ಆಸ್ಪತ್ರೆ ಅಕ್ಷರಶಃ ಕಾಂಗ್ರೆಸ್ ನಾಯಕರಿಂದ ತುಂಬಿಹೋಗಿತ್ತು. ಈಗಲ್ಟನ್ ರೆಸಾರ್ಟ್ ನಲ್ಲಿ ನಡೆದ ಗಲಾಟೆಯಲ್ಲಿ ಹಲ್ಲೆಗೊಳಗಾದ ಶಾಸಕ ಆನಂದ್ ಸಿಂಗ್ ಆರೋಗ್ಯ ವಿಚಾರಿಸಲು ತಡರಾತ್ರಿ ಕಾಂಗ್ರೆಸ್ ನಾಯಕರ ದಂಡೇ ಆಸ್ಪತ್ರೆಗೆ ಹರಿದು ಬಂದಿತ್ತು.

    ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಗೃಹಸಚಿವ ಎಂ.ಬಿ ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ ಶಿವಕುಮಾರ್, ಸಚಿವ ದೇಶಪಾಂಡೆ, ಸಚಿವ ಜಮೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಂಸದರಾದ ಡಿ.ಕೆ ಸುರೇಶ್, ಉಗ್ರಪ್ಪ ತಡರಾತ್ರಿ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ.

    ಮಧ್ಯರಾತ್ರಿ 12 ಗಂಟೆಗೆ ಆಸ್ಪತ್ರೆಗೆ ಬಂದ ಕಾಂಗ್ರೆಸ್ ಘಟಾನುಘಟಿ ನಾಯಕರು ಸರಿಸುಮಾರು ಒಂದೂವರೆ ಗಂಟೆಗಳ ಕಾಲ ಆನಂದ್ ಸಿಂಗ್ ಜೊತೆ ಮಾತುಕತೆ ನಡೆಸಿದ್ದಾರೆ. ಹಾಗೆಯೇ ಅವರ ಆರೋಗ್ಯ ವಿಚಾರಿಸಿ ಹೊರಬಂದ ರಾಜ್ಯ ನಾಯಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ. ಕೊನೆಗೆ ಮಾತನಾಡಿದ ಸಂಸದ ಡಿಕೆ ಸುರೇಶ್, ಆನಂದ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಎದೆನೋವು ಕಡಿಮೆ ಆಗಿದೆ. ನಮ್ಮ ನಾಯಕರೆಲ್ಲ ಬಂದು ಆರೋಗ್ಯ ವಿಚಾರಿಸಿದ್ದಾರೆ. ನಾವೆಲ್ಲಾ ಅವರ ಜೊತೆ ಇದ್ದೇವೆ. ಅವರ ಕುಟುಂಬದವರ ಜೊತೆಗೂ ಮಾತನಾಡಿದ್ದೇವೆ. ಪೊಲೀಸರಿಗೆ ದೂರು ನೀಡುವುದು ಅವರ ಕುಟುಂಬಕ್ಕೆ ಬಿಟ್ಟ ವಿಚಾರವಾಗಿದ್ದು ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

    ನಂತರ ಜಮೀರ್ ಅಹಮದ್ ಏನು ಹೇಳಿದ್ದಾರೆ ಅಂತ ಗೊತ್ತಿಲ್ಲ. ಆನಂದ್ ಸಿಂಗ್ ಅವರೇ ಈಗ ಮಾತನಾಡುತ್ತಿದ್ದಾರೆ. ಪೊಲೀಸರು ಕೂಡ ಬಂದಿದ್ದರು. ಆದ್ರೆ ವೈದ್ಯರು ಸದ್ಯಕ್ಕೆ ಮಾಹಿತಿ ನೀಡುವ ಪರಿಸ್ಥಿತಿ ಇಲ್ಲ ಅಂತ ಹೇಳಿದ್ದರಿಂದ ವಾಪಸ್ ಹೋಗಿದ್ದಾರೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆನಂದ್ ಸಿಂಗ್-ಗಣೇಶ್ ನಡುವಿನ ‘ಬಾಟಲ್’ ಬ್ಯಾಟಲ್ – ರಾತ್ರಿ ನಿಜವಾಗಿ ಏನಾಯ್ತು? ಇಲ್ಲಿದೆ ಇನ್‍ಸೈಡ್ ಸ್ಟೋರಿ

    ಆನಂದ್ ಸಿಂಗ್-ಗಣೇಶ್ ನಡುವಿನ ‘ಬಾಟಲ್’ ಬ್ಯಾಟಲ್ – ರಾತ್ರಿ ನಿಜವಾಗಿ ಏನಾಯ್ತು? ಇಲ್ಲಿದೆ ಇನ್‍ಸೈಡ್ ಸ್ಟೋರಿ

    ಬೆಂಗಳೂರು: ಕಾಂಗ್ರೆಸ್ ಶಾಸಕರು ತಂಗಿದ್ದ ರೆಸಾರ್ಟಿನಲ್ಲಿ ಆನಂದ್ ಸಿಂಗ್ ಹಾಗೂ ಗಣೇಶ್ ನಡುವೆ ನಡೆದಿರುವ ಬಾಟಲ್ ಗಲಾಟೆಗೆ ಕಾಂಗ್ರೆಸ್ ಶಾಸಕರು ಬೆಚ್ಚಿಬಿದ್ದಿದ್ದಾರೆ. ರಾತ್ರಿ ಪಾರ್ಟಿ ಆರಂಭಗೊಂಡಾಗ ಎಲ್ಲರೊಂದಿಗೆ ಸರಿಯಾಗಿದ್ದ ಶಾಸಕರು ಮದ್ಯದ ಅಮಲು ಏರುತ್ತಿದಂತೆ ಪರಸ್ಪರ ಕಿತ್ತಾಟ ನಡೆಸಿದ್ದಾರೆ.

    ಗಲಾಟೆಯಲ್ಲಿ ಶಾಸಕ ಆನಂದ್‍ಸಿಂಗ್ ಕಣ್ಣು, ಎದೆ, ತಲೆಗೆ ಪೆಟ್ಟು ಬಿದ್ದಿದ್ದು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಇತ್ತ ಆನಂದ್ ಅಣ್ಣನಿಗೆ ಏನಾದ್ರೂ ಆದರೆ ಸುಮ್ಮನೆ ಇರುವುದಿಲ್ಲ, ಬಳ್ಳಾರಿಯಲ್ಲಿ ರೌದ್ರಾವಾತರ ನೋಡುತ್ತೀರಿ ಎಂದು ಶಾಸಕ ಆನಂದ್ ಸಿಂಗ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದಾರೆ.

    ಮದ್ಯದ ಅಮಲಿನಲ್ಲಿದ್ದಾಗ ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಹೊಡೆದಾಟ ಆರಂಭವಾಗಿ ಬಳಿಕ ಏನಾಯ್ತು ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದ್ದು ಅದನ್ನು ಇಲ್ಲಿ ನೀಡಲಾಗಿದೆ.

    ರಾತ್ರಿ ನಡೆದಿದ್ದೇನು?
    ಪಕ್ಷದ ಸಭೆಯ ಬಳಿಕ ರೆಸಾರ್ಟಿನಲ್ಲಿಯೇ ತಂಗಿದ್ದ ಶಾಸಕರು ಮಧ್ಯರಾತ್ರಿ 2 ಗಂಟೆಯವರೆಗೂ ಗಾರ್ಡನ್ ನಲ್ಲಿ ಪಾರ್ಟಿ ಮಾಡುತ್ತ ಕುಳಿತಿದ್ದರು. ಈ ವೇಳೆ ಶಾಸಕ ಆನಂದ್‍ಸಿಂಗ್ ಹಾಗೂ ಗಣೇಶ ಒಟ್ಟಿಗೆ ಕುಳಿತ್ತಿದ್ದರು. ಇತ್ತ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಕೂಡ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾರೆ. ಭೀಮಾನಾಯ್ಕ್ ಬರುತ್ತಿದಂತೆ ಆನಂದ್ ಸಿಂಗ್, “ಈ ಬಾರಿ ನಿನ್ನನ್ನು ಸೋಲಿಸುತ್ತೇನೆ” ಎಂದಾಗ “ಆಯ್ತು ಬಿಡು ಅಣ್ಣ” ಎಂದು ಭೀಮಾ ನಾಯ್ಕ್ ಉತ್ತರಿಸಿದ್ದಾರೆ.

    ಈ ವೇಳೆ ಮಧ್ಯಪ್ರವೇಶಿಸಿದ ಗಣೇಶ್,”ಆನಂದ್ ಅಣ್ಣಾ, ನೀವೂ ಭೀಮಾನಾಯ್ಕ್ ಅವರನ್ನು ಸೋಲಿಸುತ್ತೇನೆ ಎಂದು ಹೇಳ್ತೀರಿ, ಸಂದೀಪ್ ಸಿಂಗ್ ಕಂಪ್ಲಿಯಲ್ಲಿ ನನ್ನ ಸೋಲಿಸುತ್ತೇನೆ ಎನ್ನುತ್ತಾನೆ” ಎಂದು ಹೇಳಿದ್ದಾರೆ. ಇದಕ್ಕೆ,”ಹೌದು, ನಾನು ನಿಮ್ಮ ಇಬ್ಬರನ್ನು ಸೋಲಿಸುತ್ತೇನೆ” ಎಂದು ಆನಂದ್ ಸಿಂಗ್ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನು ಕೇಳುತ್ತಿದಂತೆ ಶಾಸಕ ಗಣೇಶ್,”ಅಣ್ಣಾ ನೀನು ನನ್ನನ್ನು ಸೋಲಿಸು ನಾನು ಬೇಡ ಎನ್ನುವುದಿಲ್ಲ. ಆದರೆ ಸಂದೀಪ್ ಸಿಂಗ್ ನನ್ನ ಕ್ಷೇತ್ರಕ್ಕೆ ಬಂದರೆ ನಾನು ನಿಮ್ಮನ್ನ ಹೊಸಪೇಟೆಯಲ್ಲಿ ಸೋಲಿಸುತ್ತೇನೆ” ಎಂದು ಕೌಂಟರ್ ಕೊಟ್ಟಿದ್ದಾರೆ. ಈ ಕೌಂಟರ್ ಗೆ ಕೋಪಗೊಂಡ ಆನಂದ್ ಸಿಂಗ್,”ನನ್ನನ್ನೇ ಸೋಲಿಸುತ್ತೇನೆ ಎನ್ನುತ್ತಿಯಾ” ಎಂದು ಹೇಳಿ ಗಣೇಶ್ ಮೇಲೆ ಮುಗಿಬಿದ್ದಾಗ ಇಬ್ಬರೂ ಪರಸ್ಪರ ಕಿತ್ತಾಡಿದ್ದಾರೆ. ಇಬ್ಬರ ಗುದ್ದಾಟ ಕಂಡ ಉಳಿದ ಶಾಸಕರು ಏನು ಮಾಡಲಾಗದೇ ನೋಡುತ್ತಾ ನಿಂತಿದ್ದರು ಎಂದು ಮೂಲಗಳು ತಿಳಿಸಿವೆ.

    ಇಬ್ಬರ ಗುದ್ದಾಟದ ಮಧ್ಯೆ ಬಾಟಲ್ ಕೈಗೆ ತೆಗೆದುಕೊಂಡ ಗಣೇಶ್ ಎಣ್ಣೆ ಮತ್ತಿನಲ್ಲಿ ಅಕ್ಷರಶಃ ಮೃಗದಂತೆ ವರ್ತಿಸುತ್ತಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಆನಂದ್ ಸಿಂಗ್ ಗ್ಯಾಲರಿಯಿಂದ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆಗೆ ಆನಂದ್ ಸಿಂಗ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಆನಂದ್ ಸಿಂಗ್ ಕುಸಿದು ಬೀಳುತ್ತಿದ್ದಂತೆ ಎಡಭಾಗದ ಎದೆಯ ಮೇಲೆ ಹತ್ತಿ ನಿಂತು ಗಣೇಶ್ ತುಳಿದಿದ್ದಾರೆ. ಪರಿಸ್ಥಿತಿ ಮಿತಿಮಿರುತ್ತಿದಂತೆ ಮಧ್ಯಪ್ರವೇಶಿಸಿದ ಭೀಮಾನಾಯ್ಕ್, ಗಣೇಶ್ ಅವರನ್ನು ಕೊಠಡಿಗೆ ಕಳುಹಿಸಿದರೆ, ಹೋಟೆಲ್ ಸಿಬ್ಬಂದಿ ಆನಂದ್ ಸಿಂಗ್ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಇತ್ತ ಕೊಠಡಿಗೆ ತೆರಳಿದರೂ ಸುಮ್ಮನಾಗದ ಗಣೇಶ್ ಮತ್ತೆ ಚೀರಾಟ ನಡೆಸಿ ಗದ್ದಲ ಮುಂದುವರಿಸಿದ್ದರು ಎನ್ನಲಾಗಿದೆ.

    ಇಬ್ಬರ ನಡುವಿನ ಗಲಾಟೆಯಲ್ಲಿ ಆನಂದ್ ಸಿಂಗ್ ಅವರ ಬಲಬಾಗದ ಹಣೆ, ಕಣ್ಣಿನ ಭಾಗಕ್ಕೆ ಹೊಡೆತ ಬಿದ್ದಿದೆ. ಬಲವಾದ ಏಟಿಗೆ ಪ್ರಜ್ಞೆ ತಪ್ಪಿ ಬಿದ್ದ ಆನಂದ್ ಸಿಂಗ್ ಕುಸಿದು ಬೀಳುತ್ತಿದ್ದಂತೆ ಎಡಭಾಗದ ಎದೆಯ ಮೇಲೆ ಹತ್ತಿ ನಿಂತು ಗಣೇಶ್ ತುಳಿದ ಪರಿಣಾಮ ಎಡ ಭಾಗದ ಪಕ್ಕೆಲುಬಿಗೆ ಏಟಾಗಿದೆ. ಆನಂದ್ ಸಿಂಗ್ ಬಲ ಕಣ್ಣು ಊದಿ ಕೊಂಡಿದ್ದು ಕಣ್ಣಿನ ಭಾಗಕ್ಕೆ ಗಂಭೀರ ಗಾಯವಾಗಿದೆ ಎನ್ನುವ ವಿಚಾರವನ್ನು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    https://www.youtube.com/watch?v=9xgPiNXdmxU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೆಸಾರ್ಟಿನಲ್ಲಿ ಗಲಾಟೆ ಆಗಿದ್ದು ನಿಜ : ಸಿದ್ದರಾಮಯ್ಯ

    ರೆಸಾರ್ಟಿನಲ್ಲಿ ಗಲಾಟೆ ಆಗಿದ್ದು ನಿಜ : ಸಿದ್ದರಾಮಯ್ಯ

    ಕೊಪ್ಪಳ: ಪಕ್ಷದ ಕಾರ್ಯಕರ್ತರು ರೆಸಾರ್ಟಿನಲ್ಲಿ ತಂಗಿದ್ದ ವೇಳೆ ರಾತ್ರಿ ಸ್ವಲ್ಪ ಜಗಳ ನಡೆದಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ರೆಸಾರ್ಟಿನಲ್ಲಿ ರಾತ್ರಿ ಇರಲಿಲ್ಲ. ಆದ್ದರಿಂದ ನನಗೆ ಗೊತ್ತಿಲ್ಲ. ಆದರೆ ರಾತ್ರಿ ಗಲಾಟೆ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಮಾಧ್ಯಮಗಳ ಮೂಲಕವೂ ಮಾಹಿತಿ ಬಂದಿದೆ. ಈಗ ಅಲ್ಲಿಗೆ ತೆರಳುತ್ತಿದ್ದು, ಯಾವ ಸಂದರ್ಭದಲ್ಲಿ ಏನಾಗಿದೆ ಎನ್ನುವುದು ಅಲ್ಲಿಗೆ ಹೋದ ನಂತರವೇ ಗೊತ್ತಾಗಲಿದೆ ಎಂದರು.

    ಯಾವುದೇ ಖಚಿತ ಮಾಹಿತಿ ಇಲ್ಲದೇ ನಾನು ಈ ಬಗ್ಗೆ ಮಾತನಾಡುವುದು ಸರಿಯಲ್ಲ. ನೇರ ಅಲ್ಲಿಗೆ ತೆರಳುತ್ತಿದ್ದು, ಆನಂದ್ ಸಿಂಗ್, ಗಣೇಶ್, ಭೀಮಾನಾಯ್ಕ್ ನಡುವೆ ಗಲಾಟೆ ನಡೆದಿದೆ ಎಂದು ಮಾಧ್ಯಮಗಳಿಂದ ತಿಳಿದಿದೆ. ಗಲಾಟೆ ಆಗಿದ್ದರೆ ಯಾವ ಸಂದರ್ಭದಲ್ಲಿ ಆಗಿದೆ? ಯಾವ ಕಾರಣಕ್ಕೆ ಆಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ. ಈ ಬಗ್ಗೆ ಶಾಸಕರನ್ನು ಸಂಪರ್ಕ ಮಾಡಲು ಸಾಧ್ಯವಾಗಲಿಲ್ಲ. ಅಲ್ಲಿಗೆ ತೆರಳಿ ನಿಮಗೆ ಹೆಚ್ಚಿನ ಮಾಹಿತಿ ತಿಳಿಸುತ್ತೇನೆ ಎಂದರು. ಇದನ್ನು ಓದಿ: ಡಿಕೆಶಿಗೆ ಭಾರೀ ಮುಖಭಂಗ – ಶಾಸಕರನ್ನು ರಕ್ಷಿಸಲು ಸುಳ್ಳು ಹೇಳಿ ಭಾರೀ ಟೀಕೆಗೆ ಗುರಿಯಾದ್ರು ಡಿಕೆ ಬ್ರದರ್ಸ್!

    ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂದು 20 ಶಾಸಕರು ಬೇಡಿಕೆ ಇಟ್ಟಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾರೆ. ಈಗ ಯಾವುದೇ ಶಾಸಕರು ಸಿಎಂ ಆಗುವ ಬಗ್ಗೆ ಹೇಳಿಲ್ಲ. ಸಮ್ಮಿಶ್ರ ಸರ್ಕಾರ ಸುಗಮವಾಗಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದರು.

    ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಹೇಗಾದ್ರೂ ಮಾಡಿ, ಸಿಎಂ ಆಗಬೇಕು ಅಂದುಕೊಂಡಿದ್ದಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಪದೇ ಪದೇ ಯಡಿಯೂರಪ್ಪ, ಈಶ್ವರಪ್ಪ ಕೆಟ್ಟ ಪದ ಬಳಕೆ ಮಾಡುತ್ತಾರೆ. ಈಶ್ವರಪ್ಪನಿಗೆ ಒಳ್ಳೆಯ ಭಾಷೆಯೇ ಗೊತ್ತಿಲ್ಲ, ಅನಂತ್ ಕುಮಾರ್ ಹೆಗ್ಡೆ ಕೂಡ ಹಾಗೆಯೇ. ಅವರೇ ಮಕ್ಕಳ ಕಳ್ಳರು ಎಂದು ಹೇಳುತ್ತಾರೆ. ಆದರೆ ಮಾಧ್ಯಮಗಳು ಅವರನ್ನು ಪ್ರಶ್ನೆ ಮಾಡಲ್ಲ ಎಂದರು.

    https://www.youtube.com/watch?v=9xgPiNXdmxU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಣ್ಣ ಜಗಳ ನಡೆದಿದೆ: ಬಿರಿಯಾನಿ ತಿಂದ ಕಥೆ ಹೇಳಿದ ಜಮೀರ್

    ಸಣ್ಣ ಜಗಳ ನಡೆದಿದೆ: ಬಿರಿಯಾನಿ ತಿಂದ ಕಥೆ ಹೇಳಿದ ಜಮೀರ್

    ಬೆಂಗಳೂರು: ಸ್ನೇಹಿತರ ಜೊತೆ ಜಗಳ ನಡೆಯುದಿಲ್ಲವೇ? ಹಾಗೇ ಸಣ್ಣ ಜಗಳ ನಡೆದಿದೆ ಅಷ್ಟೇ. ಆದರೆ ಈ ಗಲಾಟೆ ವಿಚಾರವನ್ನು ನೀವೇ ದೊಡ್ಡದು ಮಾಡಿದ್ದೀರಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

    ಆನಂದ್ ಸಿಂಗ್ ಅವರ ಆರೋಗ್ಯವನ್ನು ವಿಚಾರಿಸಿದ ಬಳಿಕ ಅಪೋಲೋ ಆಸ್ಪತ್ರೆಯ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆನಂದ್ ಸಿಂಗ್, ಗಣೇಶ್, ಭೀಮಾನಾಯಕ್ ಜೊತೆಗಿದ್ದ ವೇಳೆ ಈ ಘಟನೆ ನಡೆದಿದೆ. ಮಾತು ಮಾತಿಗೆ ಜಗಳ ಆಗಿ ಸಣ್ಣದಾಗಿ ಹೊಡೆದಾಡಿಕೊಂಡಿದ್ದಾರೆ. ಕಣ್ಣಿಗೆ ಸಣ್ಣ ಪೆಟ್ಟು ಬಿದ್ದಿದೆ ಎಂದು ತಿಳಿಸಿದರು.

    ಮಾಧ್ಯಮಗಳು 15 ಸ್ಟಿಚ್ ಹಾಕಲಾಗಿದೆ ಎಂದು ವರದಿ ಮಾಡುತ್ತಿವೆ. ಆ ರೀತಿ ಏನು ಆಗಿಲ್ಲ. ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ. ಆನಂದ್ ಸಿಂಗ್ ಹುಷಾರಿದ್ದು ಇವತ್ತು ಬಿರಿಯಾನಿ ತರಿಸಿ ಊಟ ತಿಂದಿದ್ದಾರೆ ಎಂದು ತಿಳಿಸಿದರು.

    ಸ್ನೇಹತರ ಅಂದ್ರೆ ಗಲಾಟೆ ಕಾಮನ್, ನಾನು ಮತ್ತು ಅಖಂಡ ಶ್ರೀನಿವಾಸ ಮೂರ್ತಿ ಸ್ನೇಹಿತರು. ಆದರೆ ನಿನ್ನೆ ನಮ್ಮಿಬ್ಬರ ಮಧ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣ ಜಗಳ ನಡೆಯಿತು. ಮಾಧ್ಯಮಗಳಲ್ಲಿ ಬರುತ್ತಿರುವ ಹಾಗೇ ದೊಡ್ಡಮಟ್ಟದ ಗಾಯವೇನು ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಈ ವೇಳೆ ಬೆಳಗ್ಗೆ ಡಿಕೆ ಶಿವಕುಮಾರ್ ಜಗಳ ನಡೆದಿಲ್ಲ ಎಂದು ಹೇಳಿದರೆ ಬಳಿಕ ಡಿಕೆ ಸುರೇಶ್ ಎದೆನೋವು ಅಂತ ಹೇಳಿದ್ದಾರೆ. ಈಗ ನೀವು ಸಣ್ಣ ಜಗಳವಾಗಿದೆ ಎಂದು ಹೇಳಿದ್ದೀರಿ. ಈ ವಿಚಾರದಲ್ಲಿ ನಾಯಕರ ಮಧ್ಯೆ ಇಷ್ಟೊಂದು ಗೊಂದಲ ಯಾಕೆ ಎಂದು ಕೇಳಿದ್ದಕ್ಕೆ, ಗೊಂದಲ ಇಲ್ಲಿ ಯಾವುದು ಇಲ್ಲ. ಗೊಂದಲ ಮಾಧ್ಯಮಗಳಿಂದ ಸೃಷ್ಟಿಯಾಗುತ್ತಿದೆ ಎಂದು ಹೇಳಿ ಅಲ್ಲಿಂದ ಜಮೀರ್ ಅಹಮದ್ ಸ್ಥಳದಿಂದ ತೆರಳಿದರು.

    https://www.youtube.com/watch?v=9xgPiNXdmxU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • Blunt Injury, ಪ್ರತ್ಯೇಕ ವಾರ್ಡಿಗೆ ಆನಂದ್ ಸಿಂಗ್ ಶಿಫ್ಟ್

    Blunt Injury, ಪ್ರತ್ಯೇಕ ವಾರ್ಡಿಗೆ ಆನಂದ್ ಸಿಂಗ್ ಶಿಫ್ಟ್

    ಬೆಂಗಳೂರು: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಕಣ್ಣು, ಎದೆ ಮತ್ತು ತಲೆಯ ಭಾಗಕ್ಕೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಪೋಲೋ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಯತೀಶ್ ಸ್ಪಷ್ಟನೆ ನೀಡಿದ್ದಾರೆ.

    ಬ್ಲಂಟ್ ಇಂಜೂರಿ ಆಗಿದ್ದು ಸದ್ಯಕ್ಕೆ ಸಿಟಿ ಸ್ಕ್ಯಾನಿಂಗ್, ಎಕ್ಸ್ ರೇ ಮಾಡಲಾಗಿದೆ. ಎಲ್ಲವೂ ನಾರ್ಮಲ್ ಆಗಿದ್ದು ಅಬ್ಸರ್ವೇಷನ್ ನಲ್ಲಿ ಇರಿಸುವ ಉದ್ದೇಶದಿಂದ ಪ್ರತ್ಯೇಕ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಡಿಕೆಶಿಗೆ ಭಾರೀ ಮುಖಭಂಗ – ಶಾಸಕರನ್ನು ರಕ್ಷಿಸಲು ಸುಳ್ಳು ಹೇಳಿ ಭಾರೀ ಟೀಕೆಗೆ ಗುರಿಯಾದ್ರು ಡಿಕೆ ಬ್ರದರ್ಸ್!

    ಹರಿತವಾದ ಚಾಕು ಅಥವಾ ಗ್ಲಾಸ್ ದೇಹಕ್ಕೆ ಚುಚ್ಚಿದಾಗ ರಕ್ತ ಹೆಪ್ಪುಗಟ್ಟಿ ಆ ಭಾಗ ಕಪ್ಪು, ಕೆಂಪು ವರ್ಣಕ್ಕೆ ತಿರುಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ `ಬ್ಲಂಟ್ ಇಂಜೂರಿ’ ಎಂದು ಕರೆಯಲಾಗುತ್ತದೆ. ಇದನ್ನು ಓದಿ: ಮೊದ್ಲು ಮದುವೆ ಬಳಿಕ ಎದೆನೋವು ಈಗ ಆಕ್ಸಿಡೆಂಟ್ – ಕಡೆಗೂ ಆನಂದ್ ಸಿಂಗ್ ತಲೆಗೆ 12 ಹೊಲಿಗೆ!

    ಶಾಸಕರ ಎದೆ, ಕಣ್ಣು ಹಾಗೂ ತಲೆಯ ಭಾಗಕ್ಕೆ ಬಲವಾಗಿ ಬಾಟಲಿಯಿಂದ ಹೊಡೆದ ಪರಿಣಾಮ ರಕ್ತ ಹೆಪ್ಪುಗಟ್ಟಿದೆ. ಹೀಗಾಗಿ ತಲೆಗೆ ಗಾಯವಾಗಿದ್ದರಿಂದ 24 ಗಂಟೆ ಕಾಲ ಅಬ್ಸರ್ವೇಷನ್ ನಲ್ಲಿ ಇರಿಸಲಾಗಿದೆ ಎನ್ನವ ವಿಚಾರ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊದ್ಲು ಮದುವೆ ಬಳಿಕ ಎದೆನೋವು ಈಗ ಆಕ್ಸಿಡೆಂಟ್ – ಕಡೆಗೂ ಆನಂದ್ ಸಿಂಗ್ ತಲೆಗೆ 12 ಹೊಲಿಗೆ!

    ಮೊದ್ಲು ಮದುವೆ ಬಳಿಕ ಎದೆನೋವು ಈಗ ಆಕ್ಸಿಡೆಂಟ್ – ಕಡೆಗೂ ಆನಂದ್ ಸಿಂಗ್ ತಲೆಗೆ 12 ಹೊಲಿಗೆ!

    ಬೆಂಗಳೂರು: ಶಾಸಕ ಆನಂದ್ ಸಿಂಗ್ ಅವರ ತಲೆಗೆ ಪೆಟ್ಟಾಗಿದ್ದು, ವೈದ್ಯರು 12 ಹೊಲಿಗೆ ಹಾಕಿದ್ದಾರೆ ಎಂಬ ಮಾಹಿತಿ ಅಪೋಲೋ ಆಸ್ಪತ್ರೆಯ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಆನಂದ್ ಸಿಂಗ್ ಅವರಿಗೆ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮೊದಲಿನಿಂದಲೂ ಭಿನ್ನ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಶಾಸಕರು ಸತ್ಯವನ್ನು ಮುಚ್ಚಿಡಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ವಿಚಾರ ಮತ್ತಷ್ಟು ಬಲಗೊಂಡಿದೆ. ಇದನ್ನು ಓದಿ: ಆನಂದ್ ಸಿಂಗ್ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲು: ಸಂಸದ ಡಿಕೆ ಸುರೇಶ್

    ಮೊದಲು ಸಚಿವ ಡಿಕೆ ಶಿವಕುಮಾರ್ ಅವರು ಮಾತನಾಡಿ ಆನಂದ್ ಸಿಂಗ್ ರಾತ್ರಿ ಮದುವೆಗೆ ತೆರಳಿದ್ದು, ಆ ಬಳಿಕ ಎಲ್ಲರೂ ಮಾತನಾಡಿ ತೆರಳಿದ್ದಾರೆ. ಯಾವುದೇ ಗಲಾಟೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆ ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಸಂಸದ ಡಿಕೆ ಸುರೇಶ್ ಅವರು ಆನಂದ್ ಸಿಂಗ್ ಎದೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ತಲೆಗೆ ಯಾವುದೇ ಗಾಯ ಆಗಿಲ್ಲ ಎಂದು ಎಂದಿದ್ದರು. ಆದರೆ ಈಗ ಆಸ್ಪತ್ರೆಯ ದಾಖಲೆಯಲ್ಲಿ ಬೇರೆಯೇ ಮಾಹಿತಿ ದಾಖಲಿಸಿದ್ದಾರೆ. ಇದನ್ನು ಓದಿ: ಬಾಟ್ಲಿ ಪೆಟ್ಟು ತಿಂದು ಅಪೋಲೋ ಆಸ್ಪತ್ರೆ ಸೇರಿದ ಆನಂದ್ ಸಿಂಗ್?

    ಆಸ್ಪತ್ರೆ ದಾಖಲೆ ಮಾಹಿತಿ ಪ್ರಕಾರ ಆನಂದ್ ಸಿಂಗ್ ಅವರು ಕಾರಿಗೆ ಹತ್ತುವ ವೇಳೆ ಜಾರಿ ಬಿದ್ದು ತಲೆಗೆ ಗಾಯವಾಗಿದೆ. ಆದ್ದರಿಂದ ಅವರ ತಲೆಗೆ 12 ಹೊಲಿಗೆ ಹಾಕಲಾಗಿದೆ. ಅಲ್ಲದೇ ಗಾಯದ ಬಗ್ಗೆ ತಲೆಗೆ ಸಿಟಿ ಸ್ಕ್ಯಾನ್ ತಪಾಸಣೆ ನಡೆದಿದ್ದು, ವರದಿಗಳು ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಇದನ್ನು ಓದಿ: ಗುರು ಆನಂದ್ ಸಿಂಗ್ ಮೇಲೆ ಶಿಷ್ಯ ಗಣೇಶ್ ಅಟ್ಯಾಕ್?-ಇದು ಇನ್‍ಸೈಡ್ ಸ್ಟೋರಿ

    ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಅಪೋಲೋ ಆಸ್ಪತ್ರೆ ವೈದ್ಯ ಯತೀಶ್ ಅವರು, ಶಾಸಕರೊಬ್ಬರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ನನಗೆ ಮಾಹಿತಿ ಲಭಿಸಿದೆ. ಅವರ ಆರೋಗ್ಯದಿಂದ ಇದ್ದಾರೆ ಎಂಬ ಮಾಹಿತಿ ಲಭಿಸಿದೆ. ಆದರೆ ಅವರು ಆಸ್ಪತ್ರೆಗೆ ದಾಖಲಾದ ವೇಳೆ ಯಾವ ಸ್ಥಿತಿಯಲ್ಲಿ ಇದ್ದರು ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ. ಮಾಹಿತಿಯನ್ನು ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.

    https://www.youtube.com/watch?v=9xgPiNXdmxU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆನಂದ್ ಸಿಂಗ್ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲು: ಸಂಸದ ಡಿಕೆ ಸುರೇಶ್

    ಆನಂದ್ ಸಿಂಗ್ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲು: ಸಂಸದ ಡಿಕೆ ಸುರೇಶ್

    ಬೆಂಗಳೂರು: ಶಾಸಕ ಆನಂದ್ ಸಿಂಗ್ ಅವರಿಗೆ ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ವೈದ್ಯರು ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ ಎಂದು ಸಂಸದ ಡಿಕೆ ಸುರೇಶ್ ಅವರು ಹೇಳಿದ್ದಾರೆ.

    ಶೇಷಾದ್ರಿಪುರಂ ಬಳಿಯ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಸುರೇಶ್ ಅವರು, ನನಗೆ ಇಂದು ಬೆಳಗ್ಗೆ ಅನಂದ್ ಸಿಂಗ್ ಅವರು ಆಸ್ಪತ್ರೆಗೆ ದಾಖಲಾದ ಮಾಹಿತಿ ಲಭಿಸಿತ್ತು. ಆದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿ ಅವರನ್ನು ಮಾತನಾಡಿದ್ದೇನೆ. ಅವರ ಆರೋಗ್ಯ ಸ್ಥಿತಿ ಸದ್ಯ ಸುಧಾರಣೆ ಆಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಬಳಿ ಮಾತನಾಡಿರುವ ವೇಳೆ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದ ಬಗ್ಗೆ ಹೇಳಿದರು. ಆ ಬಳಿಕ ಆನಂದ್ ಸಿಂಗ್ ಅವರು ವಿಶ್ರಾಂತಿ ಅಗತ್ಯವಿದ್ದರಿಂದ ನಿದ್ದೆ ಮಾಡಲು ಡಾಕ್ಟರ್ ಸೂಚಿಸಿದ್ದಾರೆ. ಸಂಜೆ ವೇಳೆಗೆ ವೈದ್ಯಕೀಯ ಪರೀಕ್ಷೆಗಳ ಮಾಹಿತಿ ಲಭ್ಯವಾಗಲಿದ್ದು, ತದನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ತೀರ್ಮಾನ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: ಬಾಟ್ಲಿ ಪೆಟ್ಟು ತಿಂದು ಅಪೋಲೋ ಆಸ್ಪತ್ರೆ ಸೇರಿದ ಆನಂದ್ ಸಿಂಗ್?

    ಇದೇ ವೇಳೆ ಮಾಧ್ಯಮಗಳ ವರದಿ ಅಲ್ಲಗಳೆದ ಡಿಕೆ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು. ರೆಸಾರ್ಟಿನಲ್ಲಿ ಯಾವುದೇ ಜಗಳ ಆಗಿಲ್ಲ. ಆನಂದ್ ಸಿಂಗ್ ಅವರ ತಲೆಗೆ ಗಾಯ ಆಗಿರುವುದು ಭೇಟಿ ವೇಳೆ ನನಗೆ ಕಾಣಿಸಲಿಲ್ಲ. ಅಲ್ಲದೇ ರೆಸಾರ್ಟಿನಲ್ಲಿ ಯಾವುದೇ ಪಾರ್ಟಿಯನ್ನು ಆಯೋಜಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆನಂದ್ ಸಿಂಗ್ ಕುಟುಂಬಸ್ಥರು ಮದುವೆಯ ಸಮಾರಂಭದಲ್ಲಿ ಭಾಗಿಯಾಗಿದ್ದು, ಅವರಿಗೂ ಕೂಡ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನು ಓದಿ: ಗುರು ಆನಂದ್ ಸಿಂಗ್ ಮೇಲೆ ಶಿಷ್ಯ ಗಣೇಶ್ ಅಟ್ಯಾಕ್?-ಇದು ಇನ್‍ಸೈಡ್ ಸ್ಟೋರಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುರು ಆನಂದ್ ಸಿಂಗ್ ಮೇಲೆ ಶಿಷ್ಯ ಗಣೇಶ್ ಅಟ್ಯಾಕ್?-ಇದು ಇನ್‍ಸೈಡ್ ಸ್ಟೋರಿ

    ಗುರು ಆನಂದ್ ಸಿಂಗ್ ಮೇಲೆ ಶಿಷ್ಯ ಗಣೇಶ್ ಅಟ್ಯಾಕ್?-ಇದು ಇನ್‍ಸೈಡ್ ಸ್ಟೋರಿ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಯುವ ಶಾಸಕ ಕಂಪ್ಲಿ ಕ್ಷೇತ್ರದ ಗಣೇಶ್ ಅವರು ಆನಂದ್ ಸಿಂಗ್ ಬಗ್ಗೆ ಅಭಿಮಾನ ಹೊಂದಿದ್ದರು. ಆದರೆ ಇತ್ತೀಚೆಗೆ ಕ್ಷೇತ್ರದಲ್ಲಿ ನಡೆಯುತ್ತಿದ್ದ ಹಸ್ತಕ್ಷೇಪದ ಬಗ್ಗೆ ಗಣೇಶ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

    ಶಾಸಕ ಗಣೇಶ್ ಅವರು ಸಕ್ರಿಯ ರಾಜಕಾರಣಕ್ಕೆ ಬಂದ ವೇಳೆ ಶಾಸಕ ಆನಂದ್ ಸಿಂಗ್ ಅವರ ಬೆಂಬಲವಾಗಿ ಅಭಿಮಾನ ಹೊಂದಿದ್ದರು. ಆದರೆ ಕಂಪ್ಲಿ ಕ್ಷೇತ್ರದಲ್ಲಿ ಶಾಸಕರಾಗಿ ಗಣೇಶ್ ಆಯ್ಕೆ ಆಗಿದ್ದರೂ ಆನಂದ್ ಸಿಂಗ್ ಅವರ ಅಳಿಯ ಸಂದೀಪ್ ಸಿಂಗ್ ಕ್ಷೇತ್ರದ ಕಾರ್ಯಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದರು. ಇದರಿಂದ ಗಣೇಶ್ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗೊಂಡಿದ್ದ ಗಣೇಶ್ ಅವರು ಬಿಜೆಪಿ ನಾಯಕರ ಸಂಪರ್ಕದಲ್ಲಿ ಇದ್ದರು ಎಂಬ ಮಾಹಿತಿಯೂ ಲಭಿಸಿದ್ದು, ಈ ಕುರಿತು ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ ಮುಖಂಡರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

    ಬಿಜೆಪಿ ಆಪರೇಷನ್ ಕಮಲ ಬಗ್ಗೆ ಮಾಹಿತಿ ಪಡೆದ ಕಾಂಗ್ರೆಸ್ ಮುಖಂಡರು ವಿಧಾನಸೌಧದಲ್ಲಿ ನಡೆದ ಸಿಎಲ್‍ಪಿ ಸಭೆಯ ಬಳಿಕ ಶಾಸಕರನ್ನು ನೇರ ರೆಸಾರ್ಟಿಗೆ ಶಿಫ್ಟ್ ಮಾಡಿದ್ದರು. ಆದರೆ ಶಾಸಕಾಂಗ ಸಭೆಗೆ ಹಾಜರಾಗಿ ಬಳಿಕ ಗಣೇಶ್ ಅವರು ಸೀದಾ ಅತೃಪ್ತ ಶಾಸಕರ ಕೂಟ ಸೇರಲು ಮುಂದಾಗಿದ್ದರು ಎನ್ನಲಾಗಿತ್ತು. ಇದರಿಂದ ಗಣೇಶ್ ಅಸಮಾಧಾನಗೊಂಡಿದ್ದರು ಎಂಬ ಮಾಹಿತಿ ಪಕ್ಷದ ವಲಯದಿಂದಲೇ ಕೇಳಿ ಬಂದಿದೆ.

    ಸದ್ಯ ಆನಂದ್ ಸಿಂಗ್ ಅವರು ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಶಾಸಕ ಗಣೇಶ್ ಅವರು ರೆಸಾರ್ಟಿನಲ್ಲೇ ತಂಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಆನಂದ್ ಸಿಂಗ್ ಅಥವಾ ಗಣೇಶ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಶಾಸಕ ಮಾರಾಮಾರಿ ವರದಿಯನ್ನು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಅಲ್ಲಗೆಳೆದಿದ್ದು, ಶಾಸಕರು ಒಗ್ಗಟ್ಟಿನಿಂದ ಇದ್ದಾರೆ. ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಟ್ಲಿ ಪೆಟ್ಟು ತಿಂದು ಅಪೋಲೋ ಆಸ್ಪತ್ರೆ ಸೇರಿದ ಆನಂದ್ ಸಿಂಗ್?

    ಬಾಟ್ಲಿ ಪೆಟ್ಟು ತಿಂದು ಅಪೋಲೋ ಆಸ್ಪತ್ರೆ ಸೇರಿದ ಆನಂದ್ ಸಿಂಗ್?

    ಬೆಂಗಳೂರು: ಆಪರೇಷನ್ ಕಮಲದಿಂದ ಪಕ್ಷದ ಶಾಸಕರನ್ನು ರಕ್ಷಿಸಲು ಮುಂದಾಗಿ ರೆಸಾರ್ಟ್ ಸೇರಿದ್ದ ಕಾಂಗ್ರೆಸ್ ಶಾಸಕರ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದ್ದು, ಪೆಟ್ಟು ತಿಂದ ಶಾಸಕ ಆನಂದ್ ಸಿಂಗ್ ಅವರನ್ನು ನಗರದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆನಂದ್ ಸಿಂಗ್ ಬೆಂಬಲಿಗ ರಘುನಾಥ್, ಸಾಹೇಬ್ರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ನನಗೆ ಲಭ್ಯವಾಯಿತು. ಆದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆದರೆ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ. ಆನಂದ್ ಸಿಂಗ್ ಅವರು ಯಾರನ್ನು ಭೇಟಿ ಮಾಡಲ್ಲ ಎಂದು ಹೇಳಿದ್ದಾರೆ. ಸದ್ಯ ಅವರೊಂದಿಗೆ ಕೆಲ ಸ್ನೇಹಿತರು ಮಾತ್ರ ಅವರೊಂದಿಗೆ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಅಪೋಲೋ ಆಸ್ಪತ್ರೆಯ 6ನೇ ಮಹಡಿಯ 6002 ಕೊಠಡಿಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಬೆಳಗ್ಗೆ 7.05 ಗಂಟೆ ಸಮಯದಲ್ಲಿ ಆಸ್ಪತ್ರೆಗೆ ಆಗಮಿಸಿ ಒಳರೋಗಿಯಾಗಿ ದಾಖಲಾಗಿರುವುದು ಆಸ್ಪತ್ರೆಯ ದಾಖಲಾತಿಯಲ್ಲಿ ಇದೆ ಎಂಬ ಮಾಹಿತಿ ಲಭಿಸಿದೆ. ಡಾ. ಚಂದ್ರ ಅವರು ಶಾಸಕ ಆನಂದ್ ಸಿಂಗ್ ಅವರಿಗೆ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ. ದಾಖಲಾತಿಯಲ್ಲಿ ಆನಂದ್ ಸಿಂಗ್ ಅವರ ತಲೆಗೆ ಗಾಯವಾಗಿರುವುದನ್ನು ಚಿಕಿತ್ಸೆ ನೀಡಿ ನಮೂದಿಸಿದ್ದಾರೆ. ಈಗಾಗಲೇ ಅಪೋಲೋ ಆಸ್ಪತ್ರೆಗೆ ಶೇಷಾದ್ರಿಪುರಂ ಪೊಲೀಸರು ಕೂಡ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ ಎಂಬುವುದು ಖಚಿತವಾಗಿದೆ.

    ಇತ್ತ ಸಚಿವ ಡಿಕೆ ಶಿವಕುಮಾರ್ ಅವರು ಶಾಸಕರ ನಡುವೆ ಬಾಟ್ಲಿ ಜಗಳ ನಡೆದಿದೆ ಎಂಬುವುದನ್ನು ನಿರಾಕರಿಸಿದ್ದಾರೆ. ಅವೆಲ್ಲವೂ ಸುಳ್ಳು. ಮಾರಾಮಾರಿನೂ ಇಲ್ಲ, ಬಾಟ್ಲಿಯೂ ಇಲ್ಲ. ಯಾವ ಹೊಡೆದಾಟನೂ ಇಲ್ಲ. ಸ್ವಲ್ಪ ಹೊತ್ತಲ್ಲೇ ಅವರಿಬ್ಬರು ಬಂದು ಮಾತಾಡ್ತಾರೆ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಸಚಿವ ಡಿಕೆಶಿ ಅವರ ಸಹೋದರ ಸಂಸದ ಡಿಕೆ ಸುರೇಶ್ ಸೇರಿದಂತೆ ಹಲವು ಬೆಂಬಲಿಗರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಏನಿದು ಘಟನೆ: ಕಾಂಗ್ರೆಸ್ ರಾಜ್ಯ ಉಸ್ತುವಾರಿಯಾದ ವೇಣುಗೋಪಾಲ್ ಅವರೊಂದಿಗೆ ಇಂದು ಸಭೆ ನಿಗದಿ ಆದ ಕಾರಣ ಶಾಸಕರು ರೆಸಾರ್ಟ್ ನಲ್ಲಿಯೇ ಉಳಿದ್ದಿದ್ದರು. ಕಾಂಗ್ರೆಸ್ ಶಾಸಕರ ಸಭೆ ನಡೆಸಿ ಗೈರಾದ ಶಾಸಕರಿಗೆ ನೋಟಿಸ್ ಕೂಡ ನೀಡಿದ್ದರು. ಬಳಿಕ ಶನಿವಾರ ರಾತ್ರಿ ಎಲ್ಲಾ ಶಾಸಕರಿಗೆ ಪಾರ್ಟಿ ಏರ್ಪಡಿಸಲಾಗಿತ್ತು. ಈ ವೇಳೆ ಬೆಳಗಿನ ಜಾವ 3 ಗಂಟೆಗೆ ಶಾಸಕರ ಪಾರ್ಟಿ ವೇಳೆ ನಡೆದ ಮಾತಿಗೆ ಮಾತು ಬೆಳೆದು ಕಂಪ್ಲಿ ಶಾಸಕ ಗಣೇಶ್ ಅವರು ಆನಂದ್ ಸಿಂಗ್ ತಲೆಗೆ ಬಾಟಲಿನಿಂದ ಏಟು ನೀಡಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv