Tag: Apartments

  • ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಶವ – ಪತ್ನಿ, ಮಕ್ಕಳಿಗೆ ವಿಷ ನೀಡಿ ನೇಣಿಗೆ ವ್ಯಕ್ತಿ ಶರಣು!

    ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಶವ – ಪತ್ನಿ, ಮಕ್ಕಳಿಗೆ ವಿಷ ನೀಡಿ ನೇಣಿಗೆ ವ್ಯಕ್ತಿ ಶರಣು!

    ಮೈಸೂರು: ನಗರದ (Mysuru) ಅಪಾರ್ಟ್‍ಮೆಂಟ್ (Apartment) ಒಂದರಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆಯಾಗಿದೆ. ಪತ್ನಿ ಹಾಗೂ ಮಕ್ಕಳಿಗೆ ವಿಷ ನೀಡಿ ವ್ಯಕ್ತಿ ನೇಣಿಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

    ವಿಶ್ವೇಶ್ವರಯ್ಯ ನಗರದ ಅಪಾರ್ಟ್‍ಮೆಂಟ್‍ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಚೇತನ್ (45), ರೂಪಾಲಿ (43), ಪ್ರಿಯಂವದ ಮತ್ತು ಕುಶಾಲ್ (15) ಎಂದು ಗುರುತಿಸಲಾಗಿದೆ. ಚೇತನ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಳಿದವರ ಮೃತದೇಹಗಳು ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾಗಿವೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಭೂಕಂಪ – ಬೆಚ್ಚಿಬಿದ್ದು ಮನೆಗಳಿಂದ ಹೊರಗೆ ಓಡಿದ ಜನ

    ಚೇತನ್ ವಿಷ ನೀಡಿ ಮನೆಯವರನ್ನು ಸಾಯಿಸಿ, ಬಳಿಕ ತಾನು ನೇಣು ಬಿಗಿದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಸ್ಥಳಕ್ಕೆ ಕಮಿಷನರ್ ಸೀಮಾ ಲಾಟ್ಕರ್ ಹಾಗೂ ಡಿಸಿಪಿ ಜಾನ್ಹವಿ, ವಿದ್ಯಾರಣ್ಯಪುರಂ ಇನ್ಸ್‌ಪೆಕ್ಟರ್ ಮೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಟವಾಡುತ್ತಿದ್ದಾಗ 13ರ ಬಾಲಕನಿಂದ ಫೈರಿಂಗ್ – 3ರ ಮಗು ಸಾವು

  • ಬಾಲಿವುಡ್ ಬಾದ್‍ಶಾ ಶಾರುಖ್ ಮನೆಯ ಬಳಿ ಅಗ್ನಿ ಅವಘಡ

    ಬಾಲಿವುಡ್ ಬಾದ್‍ಶಾ ಶಾರುಖ್ ಮನೆಯ ಬಳಿ ಅಗ್ನಿ ಅವಘಡ

    ಮುಂಬೈನಲ್ಲಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್ ಅವರ ಬಂಗಲೆ ಮನ್ನತ್ ಬಳಿಯ ಕಟ್ಟಡದ ಮಹಡಿಯೊಂದರಲ್ಲಿ ಸೋಮವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ.

    ಐಷಾರಾಮಿ ಬಾಂದ್ರಾ ಬ್ಯಾಂಡ್‍ಸ್ಟ್ಯಾಂಡ್ ಪ್ರದೇಶದಲ್ಲಿ 21 ಅಂತಸ್ತಿನ ಅಪಾರ್ಟ್‍ಮೆಂಟ್‍ನ ಜೀವೇಶ್ ಬಿಲ್ಡಿಂಗ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು 8 ಅಗ್ನಿಶಾಮಕ ವಾಹನಗಳು ಮತ್ತು ನೀರಿನ ಟ್ಯಾಂಕರ್‌ಗಳು ಧಾವಿಸಿವೆ. 14 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಬೈ ಅಗ್ನಿಶಾಮಕ ದಳ ಮತ್ತು ಪೊಲೀಸರು ಖಚಿತಪಡಿಸಿದ್ದಾರೆ. ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

    ಮುಂಬೈ ಉಪನಗರ ಅಭಿವೃದ್ಧಿ ಸಚಿವ ಆದಿತ್ಯ ಠಾಕ್ರೆ ಮಾತನಾಡಿ, ಬಾಂದ್ರಾ ಪಶ್ಚಿಮದಲ್ಲಿ 21 ಅಂತಸ್ತಿನ ಕಟ್ಟಡದ 14ನೇ ಮಹಡಿಯಲ್ಲಿ ಅಗ್ನಿ ಅವಘಡ ನಡೆದಿರುವುದು ವರದಿಯಾಗಿದೆ. ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಬಗ್ಗೆ ನಾನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಆವರಣದಲ್ಲಿರುವ ಎಲ್ಲಾ ನಿವಾಸಿಗಳ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

  • ಹಗಲು ಸೆಕ್ಯುರಿಟಿ ಗಾರ್ಡ್, ಕತ್ತಲಾಗ್ತಿದ್ದಂತೆ ಕಳ್ಳತನ

    ಹಗಲು ಸೆಕ್ಯುರಿಟಿ ಗಾರ್ಡ್, ಕತ್ತಲಾಗ್ತಿದ್ದಂತೆ ಕಳ್ಳತನ

    ಬೆಂಗಳೂರು: ಲಾಕ್‍ಡೌನ್ ಅಂದ್ರೆ ಇಡೀ ಊರಿಗೆ ಊರೇ ಕಂಪ್ಲೀಟ್ ಸ್ತಬ್ಧವಾಗಿರುತ್ತದೆ. ಅದೇ ಕೆಲವರ ಬಂಡವಾಳ ಆಗಿದೆ. ಅಪಾರ್ಟ್ ಮೆಂಟ್ ಗಳಲ್ಲಿ ಸೆಕ್ಯೂರಿಟಿ ಕೆಲಸ ಮಾಡುವ ಜೊತೆಗೆ ಮನೆ ಲಾಕ್ ಆಗಿರೋದನ್ನ ಮ್ಯಾಪಿಂಗ್ ಮಾಡಿ ಕಳ್ಳತನಕ್ಕೆ ಇಳಿಯುತ್ತಿದ್ದ ತಂಡ ಪೊಲೀಸರ ಬಲೆಗೆ ಬಿದ್ದಿದೆ.

    ರಾಮೂರ್ತಿನಗರ ಪೊಲೀಸರು ಆರು ಜನರ ನೇಪಾಳಿ ಗ್ಯಾಂಗ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜೇಶ್ ಖಡ್ಕ, ಸಚಿನ್ ಕುಮಾರ್, ಬೋರಾ ಸೇರಿದಂತೆ ಆರು ಮಂದಿ ಬಂಧನಕ್ಕೆ ಒಳಗಾದ ಆರೋಪಿಗಳು. ಬಂಧಿತರಿಂದ ಹದಿನೇಳು ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

    ಆರೋಪಿಗಳು ಅಪಾರ್ಟ್ ಮೆಂಟ್ ನಲ್ಲಿ ಲಾಕ್ ಆಗಿರುವ ಫ್ಲ್ಯಾಟ್ ಗುರುತಿಸಿ ಕಳ್ಳತನಕ್ಕಿಳಿಯುತ್ತಿದ್ದರು. ರಾಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಐದು ಮನೆ ಕಳ್ಳತನ, ಆರ್.ಆರ್.ನಗರ ಠಾಣಾವ್ಯಾಪ್ತಿಯಲ್ಲಿ ಕೈಚಳಕ ತೋರಿಸಿದ್ದ ಆಸಾಮಿಗಳು ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ.

  • ಕಿತ್ತು ಹೋಗ್ತಿದೆ ಹುಳಿಮಾವು ಕೆರೆಯ ಒಡ್ಡು – ನಿದ್ದೆಯಿಲ್ಲದೇ ರಾತ್ರಿ ಕಳೆದ ಸಾವಿರಾರು ಮಂದಿ

    ಕಿತ್ತು ಹೋಗ್ತಿದೆ ಹುಳಿಮಾವು ಕೆರೆಯ ಒಡ್ಡು – ನಿದ್ದೆಯಿಲ್ಲದೇ ರಾತ್ರಿ ಕಳೆದ ಸಾವಿರಾರು ಮಂದಿ

    ಬೆಂಗಳೂರು: ಸಿಲಿಕಾನ್ ಸಿಟಿ ಹೊರ ವಲಯದ ಹುಳಿಮಾವು ಕೆರೆ ಒಡೆದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಹುಳಿಮಾವು ಕೆರೆಗೆ ಕಟ್ಟಿದ್ದ ಒಡ್ಡಿನಲ್ಲಿ ಮತ್ತೆ ನೀರು ಸೋರಿಕೆಯಾಗಿ ಹರಿಯುತ್ತಿದೆ. ಸ್ಥಳಿಯರು ಆತಂಕದಲ್ಲಿದ್ದರೆ, ರಾತ್ರಿ ಒಡ್ಡು ಹಾಕಿ ಹೋಗಿದ್ದ ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಇನ್ನೂ ಇತ್ತ ಬಂದಿಲ್ಲ.

    ಜೆಸಿಬಿ ಮೂಲಕ ಬಿಡಿಎ ಕಂಟ್ರಾಕ್ಟರ್ ಕಾರ್ತಿಕ್ ಕೈಗೊಂಡ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಕೆರೆ ಒಡೆದಿದ್ದು, ಸತತ ಐದಾರು ಗಂಟೆಗಳ ಕಾರ್ಯಾಚರಣೆ ಮಾಡಿ ಕೆರೆ ಒಡೆದ ಸ್ಥಳದಲ್ಲಿ ಮಣ್ಣು ಹಾಕಿ ರಾತ್ರಿ 8 ಗಂಟೆ ವೇಳೆಗೆ ನೀರಿಗೆ ತಡೆ ಒಡ್ಡಲಾಯ್ತು. ಇದರಿಂದ ಮುಂದಾಗಬಹುದಾಗಿದ್ದ ಇನ್ನಷ್ಟು ಅನಾಹುತ ತಪ್ಪಿತು. ಆದರೆ ಈಗ ಕೆರೆಗೆ ಕಟ್ಟಿದ್ದ ಒಡ್ಡಿನಲ್ಲಿ ಮತ್ತೆ ನೀರು ಸೋರಿಕೆಯಾಗಿ ಹರಿಯುತ್ತಿದ್ದು ಜನರು ಆತಂಕದಲ್ಲಿದ್ದಾರೆ. ಇದನ್ನೂ ಓದಿ:ಕೆರೆಯ ಕಟ್ಟೆ ಒಡೆದು ನೂರಾರು ಮನೆಗಳಿಗೆ ನುಗ್ಗಿದ ನೀರು

    ಹುಳಿಮಾವು ಕೆರೆ ಸುತ್ತಮುತ್ತಲ ಶಾಂತಿನಿಕೇತನ, ಕೃಷ್ಣನಗರ ಸೇರಿ ಆರಕ್ಕೂ ಹೆಚ್ಚು ಬಡಾವಣೆಗಳು ನಮ್ಮನಾಳುವ ಮಂದಿ ಸೃಷ್ಟಿಸಿದ ಕೃತಕ ಪ್ರವಾಹದಲ್ಲಿ ಸಿಲುಕಿವೆ. ಈ ಮಧ್ಯೆ ನೀರಿನಲ್ಲಿ ಬಂದ ಹಾವುಗಳ ಕಾಟವೂ ಹೆಚ್ಚಾಗಿದ್ದು, ಜನರು ಆತಂಕದಲ್ಲಿದ್ದಾರೆ. ಸರಿಸುಮಾರು 3 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಸೊಂಟ ಮಟ್ಟಕ್ಕೆ ನೀರು ಆವರಿಸಿದೆ. ಅಪಾರ್ಟ್ ಮೆಂಟ್‍ಗಳು, ಅಂಗಡಿಗಳು ಸಂಪೂರ್ಣ ಜಲಾವೃತವಾಗಿವೆ. ಕಾರು, ಬೈಕ್ ಹೀಗೆ ಎಲ್ಲಾ ವಾಹನಗಳು ನೀರಲ್ಲಿ ಮುಳುಗಿವೆ. ಓಡಾಡಲು ಜಾಗವೇ ಇಲ್ಲದಂತೆ ರಸ್ತೆಗಳಲ್ಲಿ ನದಿಯೋಪಾದಿಯಲ್ಲಿ ನೀರು ಹರಿಯುತ್ತಿದೆ. ಮನೆಯಲ್ಲಿದ್ದ ಪಾತ್ರೆ ಪಗಡಿ, ಫ್ರಿಡ್ಜ್, ದವಸ ಧಾನ್ಯ ಸೇರಿ ನಿತ್ಯದ ವಸ್ತುಗಳು ಬೀದಿಪಾಲಾಗಿವೆ. ಆರು ಬಡಾವಣೆಗಳ ಸಾವಿರಾರು ಜನ ರಾತ್ರಿ ನಿದ್ದೆಯಿಲ್ಲದೇ ಕಾಲ ಕಳೆದಿದ್ದಾರೆ. ಮಲಗಲು, ಕುಳಿತುಕೊಳ್ಳಲು ಜಾಗವಿಲ್ಲದೇ ರಾತ್ರಿಯಿಡೀ ಒದ್ದಾಡಿದ್ದಾರೆ.

    ಬೀಳೆಕಳ್ಳಿಯ ನ್ಯಾನೋ ಆಸ್ಪತ್ರೆಗೂ ನೀರು ನುಗ್ಗಿ ರೋಗಿಗಳು ಪರದಾಡಿದ್ದಾರೆ. ಹರಿವ ನೀರಿನ ಮಧ್ಯೆಯೇ ರಬ್ಬರ್ ಬೋಟ್‍ಗಳ ಮೂಲಕ ರೋಗಿಗಳನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ನೀರಲ್ಲಿ ಕೊಚ್ಚಿ ಹೋಗ್ತಿದ್ದ ಮೂರು ನಾಯಿಗಳನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಕೃಷ್ಣಲೇಔಟ್‍ನಲ್ಲಿ ನಡೆದಿದೆ. ಮೂರು ನಾಯಿಗಳು ರಭಸದಿಂದ ಹರಿಯುತ್ತಿದ್ದ ನೀರಲ್ಲಿ ಕೊಚ್ಚಿ ಹೋಗುತ್ತಿದ್ದವು. ಕೂಡಲೇ ಇದನ್ನು ಗಮನಿಸಿದ ಸ್ಥಳೀಯರು, ನಾಯಿಗಳನ್ನು ಹಿಡಿದು ತಳ್ಳು ಗಾಡಿಯಲ್ಲಿರಿಸಿ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ:ಬಿಡಿಎ ನಿರ್ಲಕ್ಷ್ಯ, ಒಡೆದ ಹುಳಿಮಾವು ಕೆರೆ-ಸಾವಿರಾರು ಮನೆಗಳಿಗೆ ನುಗ್ಗಿದ ನೀರು

    ಸುಮಾರು 140 ಎಕರೆ ವಿಸ್ತೀರ್ಣದ ಕೆರೆ ಇತ್ತೀಚೆಗೆ ಸುರಿದ ಮಳೆಯ ಕಾರಣ ತುಂಬಿತ್ತು. ಇದೀಗ ಹುಳಿಮಾವು ಕೆರೆಯ ಅರ್ಧದಷ್ಟು ನೀರು ಖಾಲಿ ಆಗಿದೆ. ಕೃತಕ ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ಸಾಯಿ ಬಾಬಾ ಟೆಂಪಲ್, ಟೆನಿಸ್ ಕೋರ್ಟ್ ಹಾಗೂ ಮ್ಯಾರೇಜ್ ಹಾಲ್‍ಗಳಲ್ಲಿ ಸಂತ್ರಸ್ತರ ಶಿಬಿರ ತೆರೆದು ಇರಿಸಲಾಗಿದೆ.

    ಆರ್.ಆರ್ ಲೇಔಟ್‍ನ ರಸ್ತೆಯ ಕೆಳಮಹಡಿಯಲ್ಲಿ ನಿಂತಿರೊ ಕೆರೆ ನೀರು ತೆರವು ಕಾರ್ಯಚರಣೆ ಮುಂದುವರಿದಿದೆ. ಕೆರೆ ನೀರು ನುಗ್ಗಿರೊ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣ ಕೆಸರು ಮಾಯವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ಮುಂದುವರಿಸಿದ್ದಾರೆ. ಸ್ವಚ್ಚತಾ ಕಾರ್ಯಕ್ಕಾಗಿ 102 ಪೌರಕಾರ್ಮಿಕರ ನೇಮಕ ಮಾಡಲಾಗಿದೆ. ಪ್ರತಿ ಲೇಔಟ್‍ಗೂ 12 ಜನ ಪೌರಕಾರ್ಮಿಕರನ್ನು ನೇಮಿಸಲಾಗಿದೆ. ಹಾಗೆಯೇ ಮಾರ್ಷಲ್‍ಗಳಿಗೆ ಸ್ವಚ್ಚತಾ ಕಾರ್ಯದ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.

    ಕೆರೆ ನೀರು ನಿಂತಿರೊ ಹಿನ್ನೆಲೆಯಲ್ಲಿ ಕರೆಂಟ್ ಜಲಾವೃತ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಪವರ್ ಕಟ್ ಮಾಡಲಾಗಿದೆ. ವಿದ್ಯುತ್ ಅವಘಡ ಸಂಭವಿಸದಿರಲಿ ಎಂದು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.

    ಈ ಅನಾಹುತಕ್ಕೆ ಹೊಣೆ ಹೋರಲು ಯಾರು ಸಿದ್ಧರಿಲ್ಲ. ನಮಗೆ ಕಾಮಗಾರಿಯ ಬಗ್ಗೆ ಮಾಹಿತಿಯೇ ಗೊತ್ತಿರಲಿಲ್ಲ ಎಂದು ಕಾರ್ಪೋರೇಟರ್ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಮೇಯರ್ ಅಂತೂ ಯಾಕೆ ಈ ಅನಾಹುತ ಆಯ್ತು ಅನ್ನೋದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದೇ, ಇದು ಕಿಡಿಗೇಡಿಯ ಕೃತ್ಯ ಎಂದು ಹೇಳುತ್ತಿದ್ದಾರೆ. ಜೊತೆಗೆ ಹಾನಿಯಾದ ಮನೆಗಳಿಗೆ 3800 ರೂಪಾಯಿಗಳ ಪುಡಿಗಾಸಿನ ನೆರವು ಘೋಷಿಸಿದ್ದಾರೆ. ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್ ಅವರು ಕಾಂಟ್ರಾಕ್ಟರ್ ವಿರುದ್ಧ ಕ್ರಮದ ಮಾತನಾಡಿ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾರೆ.

  • ಬೆಂಗ್ಳೂರಿನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ ಹಾಕಲು ಸರ್ಕಾರ ಚಿಂತನೆ

    ಬೆಂಗ್ಳೂರಿನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ ಹಾಕಲು ಸರ್ಕಾರ ಚಿಂತನೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 5 ವರ್ಷ ನಗರದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ ಹೇರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಡಿಸಿಎಂ ಜಿ. ಪರಮೇಶ್ವರ್ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತಮನಾಡಿದ ಅವರು, ಅಪಾರ್ಟ್‌ಮೆಂಟ್‌ ಸಂಸ್ಕೃತಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿರುವ ಬಗ್ಗೆ ತಿಳಿಸಿದರು. ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ಗಳ ನಿರ್ಮಾಣಕ್ಕೆ ತಡೆ ಹಾಕಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಅಪಾರ್ಟ್‌ಮೆಂಟ್‌ ಗಳಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಪೂರೈಕೆಯಲ್ಲಿ ಕೊರತೆಯಾಗುತ್ತಿದ್ದು, ಅಪಾರ್ಟ್‍ಮೆಂಟ್‍ ಗಳಿಗೆ ಕುಡಿಯುವ ನೀರು ಪೂರೈಸಲು ಕಷ್ಟವಾಗುತ್ತಿದೆ. ನಗರದಲ್ಲಿ ಇರುವ ನೀರಿನ ಕೊರತೆಯಿಂದ ಅಪಾರ್ಟ್‌ಮೆಂಟ್‌ ಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಿದರು.

    ಇಂದು ಬೆಂಗಳೂರಿನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುವ ಮುನ್ನ ಸಾರಿಗೆ ನೌಕರರ ಮುಖಂಡರು ಸರ್ಕಾರಕ್ಕೆ ಬೇಡಿಕೆಗಳ ಈಡೇರಿಕೆಗೆ ಡಿಸಿಎಂಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಸದಾಶಿವನಗರದ ಡಿಸಿಎಂ ಗೃಹಕಚೇರಿಗೆ ಆಗಮಿಸಿದ ಸಿಐಟಿಯು ಉಪಾಧ್ಯಕ್ಷ ಅನಂತ ಸುಬ್ಬರಾವ್, ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದ ನಿಯೋಗದಿಂದ ಡಿಸಿಎಂಗೆ ಮನವಿ ಸಲ್ಲಿಸಲಾಗಿದೆ.

    ಸಾರಿಗೆ ನೌಕರರ ಮನವಿ ಸ್ವೀಕಾರ ಬಳಿಕ ಡಿಸಿಎಂ ಅವರು ಮಾತನಾಡಿ,  ಕೆಎಸ್ಆರ್‌ಟಿಸಿ  ವರ್ಕರ್ಸ್ ಫೆಡರೇಷನ್ ಅವರು ಅನೇಕ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅವರ ಮನವಿಯನ್ನು ಸಿಎಂ ಮತ್ತು ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ. ಸಾರಿಗೆ ಸಚಿವರ ವಿರುದ್ಧವೂ ಮುಖಂಡರು ಆರೋಪ ಮಾಡಿದ್ದಾರೆ. ಅದನ್ನೂ ಕೂಡ ಸಿಎಂ ಗಮನಕ್ಕೆ ತರುತ್ತೇನೆ. ಕೆಎಸ್‍ಆರ್‍ಟಿಸಿಗೆ ನಷ್ಟ ಆಗದಂತೆ ಸಾರಿಗೆ ಅನುಕೂಲ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಸ್ಟೀಲ್ ಫ್ಲೈಓವರ್ ಮಾಡಲ್ಲ ಎಂದು ಸರ್ಕಾರದಿಂದ ಹೈಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, 2016 ರಲ್ಲೇ ಸರ್ಕಾರ ಈ ಯೋಜನೆ ನಿಲ್ಲಿಸುವ ತೀರ್ಮಾನ ಮಾಡಿತ್ತು. ಅದಾದ ಮೇಲೆ ನಾನು ಮತ್ತೆ ಪ್ರಸ್ತಾಪ ಮಾಡಿದ್ದೆ. ಸ್ಟೀಲ್ ಫ್ಲೈಓವರ್ ಬೇಡವಾದರೆ ಬೇರೆ ಪರ್ಯಾಯ ಮಾರ್ಗ ಬೇಕಲ್ಲ? ಸ್ಟೀಲ್ ಫ್ಲೈಓವರ್ ಬದಲು ಎಲಿವೇಟೆಡ್ ರಸ್ತೆ ಮಾಡುವ ಪ್ರಸ್ತಾಪವೂ ಇದೆ. ಈ ಕುರಿತು ಪರಿಶೀಲನೆ ನಡಿಯುತ್ತಿದೆ. ಪರಿಶೀಲಿಸಿ ಸಮಗ್ರ ಯೋಜನಾ ವರದಿ(ಡಿಪಿಆರ್) ಮಾಡುವ ಬಗ್ಗೆ ತೀರ್ಮಾನ ತೆಗೆಕೊಳ್ಳುತ್ತೇವೆ. ಎಲಿವೇಟೆಡ್ ರಸ್ತೆಗೂ ವಿರೋಧ ಇದೆ. ಆದರೆ ಸರ್ಕಾರ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಬೇಕಲ್ಲ? ಜನರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

    ಸೋಲಿಗೆ ಮೈತ್ರಿ ಕಾರಣವೆಂದು ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್‍ಗೆ ಪರಾಜಿತ ಅಭ್ಯರ್ಥಿಗಳ ದೂರು ನೀಡಿರುವ ವಿಚಾರವಾಗಿ ಮಾತನಾಡಿ, ಸೋತ ಅಭ್ಯರ್ಥಿಗಳು ವೇಣುಗೋಪಾಲ್ ಅವರ ಮುಂದೆ ಹಲವು ಕಾರಣಗಳನ್ನು ಹೇಳಿದ್ದಾರೆ. ಸೋಲಿಗೆ ಮೈತ್ರಿಯೂ ಕಾರಣ ಎಂದು ಕೆಲವರು ಅಂದಿದ್ದಾರೆ. ವೇಣುಗೋಪಾಲ್ ಅವರು ಸೋತವರ ಅಭಿಪ್ರಾಯಗಳನ್ನು ಸಂಗ್ರಹ ಮಾಡಿದ್ದಾರೆ. ಈ ವಿಚಾರ ವರಿಷ್ಠರ ಮಟ್ಟದಲ್ಲಿ ತೀರ್ಮಾನ ಆಗುತ್ತದೆ ಎಂದು ಹೇಳಿದರು.

    ನಂತರ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಮಧ್ಯಂತರ ಚುನಾವಣೆ ಬರಲು ಸಾಧ್ಯವಿಲ್ಲ. ಕೆಲವರು ಅಂತಹ ಹೇಳಿಕೆಗಳನ್ನು ಕೊಡುತ್ತಾರೆ, ಅದೆಲ್ಲ ಸ್ವಾಭಾವಿಕ. ಆದರೆ ಎರಡೂ ಪಕ್ಷಗಳೂ ಸರ್ಕಾರವನ್ನು ಉತ್ತಮವಾಗಿ ನಡೆಸಲು ತೀರ್ಮಾನಿಸಿದ್ದೇವೆ. ಮಧ್ಯಂತರ ಚುನಾವಣೆ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚೆ ನಡಿಯುತ್ತಿಲ್ಲ. ವೈಯಕ್ತಿಕ ಹೇಳಿಕೆಗಳನ್ನು ಕೆಲವರು ಕೊಡುತ್ತಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯಗಳು ಎಂದು ಸ್ಪಷ್ಟಪಡಿಸಿದರು.

    ಕೊನೆಗೆ ಅಗತ್ಯ ಇದ್ದರೆ ನಾನು ಸಹ ಗ್ರಾಮವಾಸ್ತವ್ಯ ಮಾಡುತ್ತೇನೆ. ನಗರದಲ್ಲೂ ಕೊಳಚೆ ಪ್ರದೇಶಗಳಲ್ಲಿ ವಾಸ್ತವ್ಯ ಮಾಡೋಣ ಅದಕ್ಕೇನು? ಜನರ ಸಮಸ್ಯೆ ಎಲ್ಲಿದೆ ಅಲ್ಲಿ ಹೋಗಿ ಬಗೆಹರಿಸುವ ಕೆಲಸ ಮಾಡುತ್ತೇವೆ. ನಾನು ಈಗಾಗಲೇ ಜನಸ್ಪಂದನ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ ಎಂದರು.