Tag: Apache

  • ಬೋಯಿಂಗ್ ನಿರ್ಮಿತ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ಗಳು ವಾಯುಸೇನೆಗೆ ಸೇರ್ಪಡೆ – ವಿಶೇಷತೆ ಏನು?

    ಬೋಯಿಂಗ್ ನಿರ್ಮಿತ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ಗಳು ವಾಯುಸೇನೆಗೆ ಸೇರ್ಪಡೆ – ವಿಶೇಷತೆ ಏನು?

    ಪಠಾಣ್‍ಕೋಟ್: ಅಮೆರಿಕದ ಬೋಯಿಂಗ್ ಕಂಪನಿ ನಿರ್ಮಿಸಿದ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಯಾಗಿವೆ.

    ಪಂಜಾಬಿನ ಪಠಾಣ್‍ಕೋಟ್ ವಾಯುನೆಲೆಯಲ್ಲಿ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಉಪಸ್ಥಿತಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ 8 ಅಪಾಚೆ ಎಚ್-64ಇ ಹೆಲಿಕಾಪ್ಟರ್‌ಗಳು ವಾಯುಸೇನೆಗೆ ಸೇರ್ಪಡೆಗೊಂಡಿತು.

    ವಾಯು ಸೇನೆ ಮುಖ್ಯಸ್ಥ ಧನೋವಾ ಮಾತನಾಡಿ, ಭಾರತದ ಬೇಡಿಕೆಗೆ ಅನುಗುಣವಾಗಿ ಅಪಾಚೆ ಹೆಲಿಕಾಪ್ಟರ್ ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ನಿಗದಿತ ಸಮಯದ ಒಳಗಡೆಯೇ ಅಪಾಚೆ ಹೆಲಿಕಾಪ್ಟರ್‌ಗಳು ಸೇರ್ಪಡೆಯಾಗಿರುವುದು ನಮಗೆ ಸಂತೋಷ ತಂದಿದೆ ಎಂದು ತಿಳಿಸಿದರು.

    2015ರಲ್ಲಿ ಭಾರತ ಸರ್ಕಾರ 13,952 ಕೋಟಿ ರೂ. ವೆಚ್ಚದಲ್ಲಿ ಅಪಾಚೆ ಹೆಲಿಕಾಪ್ಟರ್‌ಗಳ ಖರೀದಿಗೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 2017ರಲ್ಲಿ ರಕ್ಷಣಾ ಇಲಾಖೆ 6 ಅಪಾಚೆ ಹೆಲಿಕಾಪ್ಟರ್‌ಗಳನ್ನು ಶಸ್ತ್ರಾಸ್ತ್ರ ಸಮೇತ ಖರೀದಿ ಮಾಡಲು 4,168 ಕೋಟಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. 2020ರ ಮಾರ್ಚ್ ವೇಳೆಗೆ ವಾಯುಪಡೆಗೆ 22 ಅಪಾಚೆ ಹೆಲಿಕಾಪ್ಟರ್‌ಗಳು  ಸೇರ್ಪಡೆ ಆಗಲಿದೆ.

    22ರ ಪೈಕಿ ಮೊದಲ 4 ಹೆಲಿಕಾಪ್ಟರ್‌ಗಳು ಜುಲೈನಲ್ಲಿ ಉತ್ತರ ಪ್ರದೇಶದಲ್ಲಿರುವ ಹಿಂಡನ್ ವಾಯುನೆಲೆಗೆ ಸೇರ್ಪಡೆಯಾಗಿತ್ತು. ಈ ಮೂಲಕ ಅಪಾಚೆ ಹೆಲಿಕಾಪ್ಟರ್  ಖರೀದಿಸಿದ 14ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.

    ಭಾರತದ ವಾಯುಸೇನೆಯಲ್ಲಿ ದಾಳಿ ನಡೆಸಬಲ್ಲ ಹೆಲಿಕಾಪ್ಟರ್‌ಗಳಿವೆ. ಆದರೆ ಅವುಗಳು ಯಾವುದು ಎಚ್- 64ರಷ್ಟು ಬಲಶಾಲಿಯಾಗಿಲ್ಲ. ರಾತ್ರಿ ಸೇರಿದಂತೆ ಪ್ರತಿಕೂಲ ಹವಾಮಾನದಲ್ಲಿಯೂ ಕೂಡ ಅಪಾಚೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಹೆಲಿಕಾಪ್ಟರ್‌ಗಳು ಸೇನೆಯಲ್ಲಿ ಭೂ ದಾಳಿಗಳನ್ನು ಎದುರಿಸುವ, ಭೂ ಸೇನೆಯ ಜೊತೆ ಹೊಂದಿಕೊಂಡು ಕೆಲಸ ಮಾಡಲು ಸಮರ್ಥವಾಗಿದೆ.

    ಆಧುನಿಕ ಕ್ಯಾಮೆರಾ, ಡಾಟಾ ಉಪಕರಣಗಳು ವೈರಿಗಳ ಶಸ್ತ್ರಾಸ್ತ್ರಗಳ ಗುರುತು ಪತ್ತೆ, ವೈರಿಗಳ ಚಲನವಲನಗಳನ್ನು ಪತ್ತೆ ಹಚ್ಚೆ ಶೀಘ್ರವಾಗಿ ರವಾನಿಸುತ್ತವೆ. ಅಲ್ಲದೇ ಯುದ್ಧರಂಗದ ಚಿತ್ರಣವನ್ನು ಪ್ರಸಾರ ಮಾಡುವ ಮತ್ತು ಸ್ವೀಕರಿಸುವ ತಾಂತ್ರಿಕತೆ ಹೊಂದಿವೆ. ಅಲ್ಲದೇ ಸ್ಟಿಂಗರ್ ಏರ್ ಟು ಏರ್ ಕ್ಷಿಪಣಿಗಳು, ಗನ್‍ಗಳು ಮತ್ತು ರಾಕೆಟ್‍ಗಳನ್ನು ಹೊಂದಿವೆ. ವಿಶೇಷವಾಗಿ ಪರ್ವತ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಿವೆ.

    ಅಮೆರಿಕ ಈಗಾಗಲೇ ಈ ಹೆಲಿಕಾಪ್ಟರ್‌ಗಳನ್ನು ತನ್ನ ಸೇನೆಗೆ ಸೇರ್ಪಡೆ ಮಾಡಿಕೊಂಡಿದ್ದು, ಭಾರತ ಪೈಲಟ್‍ಗಳಿಗೂ ಅಮೆರಿಕದ ಸೇನಾ ನೆಲೆಯಲ್ಲಿ ತರಬೇತಿ ಸಿಕ್ಕಿದೆ. ವಿಶ್ವದ ಅತ್ಯಂತ ಸುಧಾರಿತ ಬಹುಕಾರ್ಯದ ಯುದ್ಧ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಯನ್ನ ಇದು ಪಡೆದಿರುವುದು ವಿಶೇಷ.

    ಎಎಚ್-64ಇ ಅಪಾಚೆ ಹೆಲಿಕಾಪ್ಟರ್ ಗಳು ವಿಶ್ವದ ಅತ್ಯಾಧುನಿಕ ಬಹು ಪಾತ್ರದಲ್ಲಿ ಕಾರ್ಯನಿರ್ವಹಿಸುವ ಹೆಲಿಕಾಪ್ಟರ್ ಗಳಲ್ಲಿ ಒಂದಾಗಿದ್ದು, ಭಾರತೀಯ ವಾಯು ಸೇನೆ ಈ ಬಹು ಶತಕೋಟಿ ಡಾಲರ್ ಗುತ್ತಿಗೆಗೆ ಅಮೆರಿಕ ಸರ್ಕಾರ ಹಾಗೂ ಬೋಯಿಂಗ್ ಲಿ. ಜೊತೆಗೆ ಸೆಪ್ಟೆಂಬರ್ 2015ರಲ್ಲಿ 22 ಹೆಲಿಕಾಪ್ಟರ್ ಗಳಿಗೆ ಸಹಿ ಹಾಕಲಾಗಿತ್ತು.

    ಬೋಯಿಂಗ್ ಸಂಸ್ಥೆಯು ಈವರೆಗೆ 2,200 ಅಪಾಚೆ ಹೆಲಿಕಾಪ್ಟರ್ ಗಳನ್ನು ವಿವಿಧ ದೇಶಗಳಿಗೆ ಹಸ್ತಾಂತರಿಸಿದೆ. ಜುಲೈ 2018ರಂದು ಭಾರತೀಯ ವಾಯು ಸೇನೆಗಾಗಿ ಮೊದಲ ಅಪಾಚೆ ಹೆಲಿಕಾಪ್ಟರ್ ನ್ನು ಪೂರ್ಣಗೊಳಿಸಿತ್ತು. 2018ರಲ್ಲಿ ಅಮೆರಿಕದಲ್ಲಿ ಅಪಾಚೆ ಹಾರಾಟ ಸಂಬಂಧ ಭಾರತೀಯ ವಾಯುಪಡೆಯ ಮೊದಲ ಬ್ಯಾಚಿನ ತರಬೇತಿ ಆರಂಭಗೊಂಡಿತ್ತು.

  • ಭಾರತೀಯ ವಾಯುಸೇನೆಗೆ ಅಪಾಚೆ ಹೆಲಿಕಾಪ್ಟರ್ ಸೇರ್ಪಡೆ

    ಭಾರತೀಯ ವಾಯುಸೇನೆಗೆ ಅಪಾಚೆ ಹೆಲಿಕಾಪ್ಟರ್ ಸೇರ್ಪಡೆ

    ನವದೆಹಲಿ: ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ಮಹತ್ವದ ಅಪಾಚೆ ಹೆಲಿಕಾಪ್ಟರ್ ಗಳನ್ನು ಭಾರತಕ್ಕೆ ಹಸ್ತಾಂತರಿಸಿದ್ದು, ಈ ಮೂಲಕ ಭಾರತೀಯ ವಾಯು ಸೇನೆಯ ಶಕ್ತಿ ಇನ್ನೂ ನೂರ್ಮಡಿಯಾದಂತಾಗಿದೆ.

    ಎದುರಾಳಿ ಮೇಲೆ ದಾಳಿ ಮಾಡಲು ಸಿದ್ಧಪಡಿಸಿದ ಹೆಲಿಕಾಪ್ಟರ್ ಇದಾಗಿದ್ದು, ವಿಶ್ವದಲ್ಲೇ ಅತ್ಯತ್ತಮ ದಾಳಿ ಮಾಡುವ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಭಾರತೀಯ ವಾಯು ಪಡೆಗೆ ಸೇರಿರುವುದು ಭಾರತಕ್ಕೆ ಆನೆ ಬಲವನ್ನು ತಂದಂತಾಗಿದೆ.

    ಭಾರತ ಒಟ್ಟು 22 ಅಪಾಚೆ ಹೆಲಿಕಾಪ್ಟರ್‍ಗಳ ಖರೀದಿಗೆ ಅಮೆರಿಕದ ಬೋಯಿಂಗ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಪೈಕಿ ಮೊದಲ ಹಂತದಲ್ಲಿ ನಾಲ್ಕು ಹೆಲಿಕಾಪ್ಟರ್‍ಗಳನ್ನು ಬೋಯಿಂಗ್ ಭಾರತಕ್ಕೆ ಹಸ್ತಾಂತರಿಸಿದೆ. ಇನ್ನೂ ನಾಲ್ಕು ಹೆಲಿಕಾಪ್ಟರ್ ಗಳನ್ನು ಮುಂದಿನ ವಾರ ಹಸ್ತಾಂತರಿಸಲಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‍ನ ಹಿಂಡನ್ ವಾಯುನೆಲೆಯಲ್ಲಿ ಮೊದಲ ಹಂತದ ಎಎಚ್-64ಇ ಅಪಾಚೆ ಹೆಲಿಕಾಪ್ಟರ್ ಗಳನ್ನು ಭಾರತೀಯ ವಾಯು ಸೇನೆಗೆ ಹಸ್ತಾಂತರಿಸಲಿದೆ. ಈ ಮೂಲಕ ಸುಮಾರು ನಾಲ್ಕು ವರ್ಷಗಳ ಚಾಪರ್‍ಗಳ ಶತಕೋಟಿ ಡಾಲರ್ ಒಪ್ಪಂದಕ್ಕೆ ಮುದ್ರೆಯೊತ್ತಿದಂತಾಗಿದೆ.

    ಸೆಪ್ಟೆಂಬರ್ ವೇಳೆಗೆ ಎಂಟು ಕಾಪರ್ ಗಳು ಪಠಾಣ್‍ಕೋಟ್‍ಗೆ ಸ್ಥಳಾಂತರವಾಗಲಿದ್ದು, ಈ ಮೂಲಕ ಔಪಚಾರಿಕವಾಗಿ ಐಎಎಫ್‍ನ ಸುಪರ್ದಿಗೆ ವಹಿಸಲಾಗುವುದು ಎಂದು ಬೋಯಿಂಗ್ ಕಂಪನಿ ತಿಳಿಸಿದೆ.

    ಎಎಚ್-64ಇ ಅಪಾಚೆ ಹೆಲಿಕಾಪ್ಟರ್ ಗಳು ವಿಶ್ವದ ಅತ್ಯಾಧುನಿಕ ಬಹು ಪಾತ್ರದಲ್ಲಿ ಕಾರ್ಯನಿರ್ವಹಿಸುವ ಹೆಲಿಕಾಪ್ಟರ್ ಗಳಲ್ಲಿ ಒಂದಾಗಿದ್ದು, ಅಮೆರಿಕ ಸೈನ್ಯವೂ ಈ ಹೆಲಿಕಾಪ್ಟರ್ ಗಳನ್ನು ಬಳಸುತ್ತಿದೆ. ಭಾರತೀಯ ವಾಯು ಸೇನೆ ಈ ಬಹು ಶತಕೋಟಿ ಡಾಲರ್ ಗುತ್ತಿಗೆಗೆ ಅಮೆರಿಕ ಸರ್ಕಾರ ಹಾಗೂ ಬೋಯಿಂಗ್ ಲಿ. ಜೊತೆಗೆ ಸೆಪ್ಟೆಂಬರ್ 2015ರಲ್ಲಿ 22 ಹೆಲಿಕಾಪ್ಟರ್ ಗಳಿಗೆ ಸಹಿ ಹಾಕಲಾಗಿತ್ತು.

    ಹೆಚ್ಚುವರಿಯಾಗಿ ರಕ್ಷಣಾ ಸಚಿವಾಲಯ 2017ರಲ್ಲಿ ಸುಮಾರು 4,168 ಕೋಟಿ ರೂ. ವೆಚ್ಚದಲ್ಲಿ ಶಸ್ತ್ರಾಸ್ತ್ರ ವ್ಯವಸ್ಥೆ ಸೇರಿದಂತೆ 6 ಹೆಲಿಕಾಪ್ಟರ್ ಗಳ ಸಂಗ್ರಹಣೆಗೆ ಒಪ್ಪಿಗೆ ಸೂಚಿಸಿತ್ತು.

    ಅಪಾಚೆ ದಾಳಿ ಮಾಡುವ ದೇಶದ ಮೊದಲ ಕಾಪರ್ ಆಗಿದ್ದು, ಭಾರತೀಯ ವಾಯುಸೇನೆಯ ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಕಾಪರ್ ಖರೀದಿಸಲಾಗುತ್ತಿದೆ. ಅಪಾಚೆ ಸೇರ್ಪಡೆಯಿಂದ ನಮ್ಮ ಯುದ್ಧದ ಸಾಮಥ್ರ್ಯ ಗಮನಾರ್ಹವಾಗಿ ಹೆಚ್ಚಲಿದೆ ಎಂದು ಐಎಎಫ್‍ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಬೋಯಿಂಗ್ ಸಂಸ್ಥೆಯು ಈವರೆಗೆ 2,200 ಅಪಾಚೆ ಹೆಲಿಕಾಪ್ಟರ್ ಗಳನ್ನು ವಿವಿಧ ದೇಶಗಳಿಗೆ ಹಸ್ತಾಂತರಿಸಿದೆ. ಅಪಾಚೆ ಉತ್ಪಾದಿಸಲು ಪ್ರಾರಂಭಿಸಿದಾಗಿನಿಂದ ಈವರೆಗೆ ವಿಶ್ವದಾದ್ಯಂತ ಗ್ರಾಹಕರಿದ್ದಾರೆ. ಈ ಪೈಕಿ ಭಾರತ ಅಪಾಚೆ ಖರೀದಿಸುತ್ತಿರುವ 14ನೇ ರಾಷ್ಟ್ರವಾಗಿದೆ. 2020ರ ವೇಳೆ ಭಾರತೀಯ ವಾಯು ಸೇನೆ ಎಲ್ಲ 22 ಅಪಾಚೆ ಹೆಲಿಕಾಪ್ಟರ್ ಗಳ ಮೂಲಕ ಕಾರ್ಯನಿರ್ವಹಿಸಲಿದೆ ಎಂದು ಬೋಯಿಂಗ್ ಸಂಸ್ಥೆ ತಿಳಿಸಿದೆ.

    ಏರ್ ಸ್ಪೇಸ್ ಮೇಜರ್ ಈ ಕುರಿತು ಮಾತನಾಡಿ, ಎಎಚ್-64ಇ ಅಪಾಚೆ ಸುಧಾರಿತ ತಂತ್ರಜ್ಞಾನ ಹೊಂದಿದ್ದು, ಇದು ವಿಶ್ವದಲ್ಲೇ ಅತ್ಯುತ್ತಮ ದಾಳಿ ಮಾಡುವ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದ್ದಾರೆ.

    ಜುಲೈ 2018ರಂದು ಭಾರತೀಯ ವಾಯು ಸೇನೆಗಾಗಿ ಮೊದಲ ಅಪಾಚೆ ಹೆಲಿಕಾಪ್ಟರ್ ನ್ನು ಪೂರ್ಣಗೊಳಿಸಿತ್ತು. ಭಾರತೀಯ ವಾಯುಪಡೆಯ ಮೊದಲ ಬ್ಯಾಚ್ 2018ರಲ್ಲಿ ಅಮೇರಿಕಾದಲ್ಲಿ ಅಪಾಚೆ ಹಾರಾಟದ ಕುರಿತು ತರಬೇತಿ ಪ್ರಾರಂಭಿಸಲಾಗಿತ್ತು.