‘ಅಪಾಯವಿದೆ ಎಚ್ಚರಿಕೆ’ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ನೀಡುತ್ತಿದೆ. ಹಾರರ್ ಥ್ರಿಲ್ಲರ್ ಜಾನರಿಗೆ ಸೇರಿದ್ದಾದರೂ, ಸಿದ್ಧ ಸೂತ್ರಗಳನ್ನು ಮೀರಿಕೊಂಡಂತಿರುವ ಈ ಚಿತ್ರದ ಮೂಲಕ ಅಭಿಜಿತ್ ತೀರ್ಥಹಳ್ಳಿ ನಿರ್ದೇಶಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಅಭಿಜಿತ್ ಅವರ ಹತ್ತಾರು ವರ್ಷಗಳ ಕನಸು ನನಸಾದಂತಾಗಿದೆ. ಹೀಗೆ ಸಿನಿಮಾ ಕನಸು ಹೊಂದಿರುವ ಯುವ ಪಡೆ ಬದುಕಿನ ಅನಿವಾರ್ಯತೆಗಳಿಗೆ ಸಿಕ್ಕು ಬೇರೊಲ್ಲೋ ಕಳೆದು ಹೋಗದಂತಾಗಲು ನಿರ್ಮಾಪಕರ ಸಾಥ್ ಬೇಕಾಗುತ್ತೆ. ವ್ಯವಹಾರದಾಚೆಗೆ ಸಿನಿಮಾ ಪ್ರೇಮ ಹೊಂದಿರುವ, ಹೊಸಬರಿಗೆ ಬೆನ್ನಟ್ಟಿ ಪ್ರೋತ್ಸಾಹಿಸುವ ಗುಣ ಹೊಂದಿರುವ ನಿರ್ಮಾಪಕರಿಂದ ಮಾತ್ರವೇ ಅದು ಸಾಧ್ಯವಾಗಬಹುದಷ್ಟೆ. ಕನ್ನಡ ಚಿತ್ರರಂಗ ಕೂಡ ಇದುವರೆಗೆ ಅಂಥಾ ಒಂದಷ್ಟು ಮಂದಿ ನಿರ್ಮಾಪಕರನ್ನು ಕಂಡಿದೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಲಕ್ಷಣಗಳನ್ನು ಹೊಂದಿರುವವರು ವಿ.ಜಿ ಮಂಜುನಾಥ್!

ಶಿಕ್ಷಕ ವೃತ್ತಿಯಿಂದ ಉದ್ಯಮ ವಲಯದತ್ತ ಹೊರಳಿಕೊಂಡು ಯಶಸ್ವೀ ಉದ್ಯಮಿಯೆನ್ನಿಸಿಕೊಂಡಿರುವವರು ವಿ.ಜಿ ಮಂಜುನಾಥ್. ರೈತಾಪಿ ಕುಟುಂಬದಿಂದ ಬಂದು, ಈವತ್ತಿಗೂ ನೆಲದೊಂದಿಗೆ ನಿಕಟ ನಂಟು ಹೊಂದಿರುವ ಅವರ ಪಾಲಿಗೆ ಸಿನಿಮಾ ಎಂಬುದು ಎಳವೆಯಿಂದಲೇ ಆವರಿಸಿಕೊಂಡಿದ್ದ ಕನಸು. ಉದ್ಯಮ ಕಟ್ಟಿ ಬದುಕು ಒಂದು ಹಂತಕ್ಕೆ ಬಂದಾಗ ವಿ.ಜಿ ಮಂಜುನಾಥ್ ಅವರು ಸಿನಿಮಾ ನಿರ್ಮಾಣದ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದರು. ಅದರ ಫಲವಾಗಿಯೇ ಅವರು ಕದ್ದುಮುಚ್ಚಿ ಅಂತೊಂದು ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಆದರೆ, ಆ ಮೊದಲ ಹೆಜ್ಜೆಯಲ್ಲಿ ಅವರಿಗೆದುರಾಗಿದ್ದು ಸವಾಲುಗಳು ಮತ್ತು ಕಹಿ ಅನುಭವಗಳು ಮಾತ್ರ.
ಒಂದ್ಯಾವುದೋ ನಿರಾಸೆ, ಮತ್ಯಾವುದೋ ಸಾಧ್ಯತೆಯೊಂದರ ಮುನ್ಸೂಚನೆ ಅನ್ನೋ ಪಾಸಿಟಿವ್ ವಿಚಾರವೊಂದಿದೆ. ಅದು ವಿ.ಜಿ ಮಂಜುನಾಥ್ ಅವರ ವಿಚಾರದಲ್ಲಿಯೂ ನಿಜವೆನ್ನಿಸುತ್ತೆ. ಯಾಕೆಂದರೆ, ‘ಕದ್ದುಮುಚ್ಚಿ’ ಚಿತ್ರದ ಮೂಲಕ ನಿರಾಸೆಗೊಂಡಿದ್ದ ಅವರ ಮುಂದೆ, ಆ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಅಭಿಜಿತ್ ತೀರ್ಥಹಳ್ಳಿ ಮೂಲಕ ಮತ್ತೊಂದು ಕಿಂಡಿ ತೆರೆದುಕೊಂಡಿತ್ತು. ಅದರ ಮೂಲಕವೇ ಹೊಸಾ ಸಾಧ್ಯತೆಯ ಕಿರಣ ತೇಲಿ ಬಂದಂತಾಗಿತ್ತು. ಕಡೆಗೂ ಅಭಿಜಿತ್ ಸಿದ್ಧಪಡಿಸಿದ್ದ ಕಥೆ ಇಷ್ಟವಾಗಿ ‘ಅಪಾಯವಿದೆ ಎಚ್ಚರಿಕೆ’ ಚಿತ್ರವನ್ನು ನಿರ್ಮಾಣ ಮಾಡಲು ವಿ.ಜಿ ಮಂಜುನಾಥ್ ನಿರ್ಧರಿಸಿದ್ದರು.
ಅದಾಗಲೇ ಒಂದು ಕಹಿ ಅನುಭವ ಪಡೆದುಕೊಂಡಿದ್ದ ವಿ.ಜಿ ಮಂಜುನಾಥ್ ಆರಂಭದಲ್ಲಿ ಸಣ್ಣ ಬಜೆಟ್ಟಿನಲ್ಲಿ ಈ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ, ಆ ನಂತರ ಕಥೆಯ ಬೇಡಿಕೆಗೆ ತಕ್ಕಂತೆ ಬಜೆಟ್ಟಿನ ಗಾತ್ರವೂ ದೊಡ್ಡದಾಗಿತ್ತು. ಇದೀಗ ಬಿಡುಗಡೆಗೆ ತಯಾರಾಗಿ ನಿಂತಿರುವ ಈ ಸಿನಿಮಾ ಮೂಡಿ ಬಂದಿರುವ ರೀತಿ ನಿರ್ಮಾಪಕರೊಳಗೆ ಗಾಢ ಭರವಸೆ ಮೂಡಿಕೊಂಡಿತ್ತು. ಇದೀಗ ಬಿಡುಗಡೆಗೊಂಡಿರೋ ಈ ಸಿನಿಮಾವನ್ನು ಪ್ರೇಕ್ಷಕರು ಸಂಭ್ರಮಿಸುತ್ತಿರುವ ರೀತಿ ಅವರನ್ನು ಮತ್ತಷ್ಟು ಖುಷಿಗೊಂಡಿದ್ದಾರೆ. ಒಂದೊಳ್ಳೆ ಸಿನಿಮಾ ನಿರ್ಮಾಣ ಮಾಡಿದ ತೃಪ್ತಿಯೂ ಅವರಲ್ಲಿದೆ. ಸುನಾದ್ ಗೌತಮ್ ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶನ, ಗುರುಪ್ರಸಾದ್ ಸಹ ನಿರ್ದೇಶನ, ಹರ್ಶಿತ್ ಪ್ರಭು ಸಂಕಲನ, ವಿಕಾಸ್ ಉತ್ತಯ್ಯ, ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ ಶ್ರೀಕಾಂತ್ ಮುಂತಾದವರ ತಾರಾಗಣದೊಂದಿಗೆ ಈ ಸಿನಿಮಾ ಮೂಡಿ ಬಂದಿದೆ.


ಅನೇಕ ಸೀರಿಯಲ್‌ಗಳು ಮತ್ತು ಸಿನಿಮಾಗಳಲ್ಲಿ ಥರ ಥರದ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರ ಮನ ಸೆಳೆದಿರುವವರು ಹರಿಣಿ ಶ್ರೀಕಾಂತ್. ಇತ್ತೀಚಿನ ದಿನಗಳಲ್ಲಿಯಂತೂ ಮತ್ತಷ್ಟು ಮಜಲಿನ ಪಾತ್ರಗಳಿಗೂ ಹರಿಣಿ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿದ್ದಾರೆ. ಅವರೀಗ ‘ಅಪಾಯವಿದೆ ಎಚ್ಚರಿಕೆ’ ಚಿತ್ರದಲ್ಲಿಯೂ ಮಹತ್ವದ್ದೊಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಅದರ ಸಣ್ಣದೊಂದು ಝಲಕ್ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಹರಿಣಿ ಶ್ರೀಕಾಂತ್ ಅವರು ನಿರ್ವಹಿಸಿರೋದು ಒಂದು ವಿಶೇಷ ಪಾತ್ರ ಎಂಬ ಮಾಹಿತಿಯಷ್ಟೇ ಲಭಿಸಿತ್ತು. ಅದು ಫ್ಲಾಶ್ ಬ್ಯಾಕಲ್ಲಿ ಬರುವ, ಅತ್ಯಂತ ಮಹತ್ವದ ಕ್ಯಾರೆಕ್ಟರ್ ಅಂತಷ್ಟೇ ಮಾಹಿತಿ ಅಂತಷ್ಟೇ ಮಾಹಿತಿ ಸಿಕ್ಕಿತ್ತು. ಕಡೆಗೂ ಆ ಪಾತ್ರದ ಅಸಲೀಯತ್ತು ಬಯಲಾಗಿದೆ. ಅದನ್ನು ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ: