Tag: anushree

  • ಯಾವ ನಗುವಿನ ಹಿಂದೆ ಯಾವ ನೋವಿರತ್ತೋ? ಯಾರು ಬಲ್ಲರು- ಸುಶಾಂತ್ ಸಾವಿಗೆ ಅನುಶ್ರೀ ಭಾವನಾತ್ಮಕ ಸಾಲು

    ಯಾವ ನಗುವಿನ ಹಿಂದೆ ಯಾವ ನೋವಿರತ್ತೋ? ಯಾರು ಬಲ್ಲರು- ಸುಶಾಂತ್ ಸಾವಿಗೆ ಅನುಶ್ರೀ ಭಾವನಾತ್ಮಕ ಸಾಲು

    ಬೆಂಗಳೂರು: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ದುರಂತ ಸಾವಿಗೆ ಇಡೀ ಬಾಲಿವುಡ್ ಸೇರಿದಂತೆ ಇಡೀ ದೇಶದ ಚಿತ್ರರಂಗವೇ ಕಂಬನಿ ಮಿಡಿದಿದೆ. ಸ್ಯಾಂಡಲ್‍ವುಡ್‍ನ ಹಲವು ನಟ ನಟಿಯರು ಸಹ ಧೋನಿ ಸಿನಿಮಾ ಖ್ಯಾತಿಯ ನಟನಿಗೆ ಕಂಬನಿ ಮಿಡಿದಿದ್ದಾರೆ. ಇಂತಹ ನಿರ್ಧಾರ ಮಾಡಬಾರದಿತ್ತು ಎಂದು ಮರುಕ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಇದೀಗ ನಿರೂಪಕಿ ಅನುಶ್ರೀ ಸಹ ಭಾವನಾತ್ಮ ಸಾಲುಗಳ ಮೂಲಕ ನಟನಿಗೆ ವಿದಾಯ ಹೇಳಿದ್ದಾರೆ.

    ನಟಿ ಅನುಶ್ರೀ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ತಮ್ಮ ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ವಿಚಾರಗಳನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ವಿಭಿನ್ನ ಶೈಲಿಯ ನಿರೂಪಣೆ ಮೂಲಕ ತಮ್ಮದೇಯಾದ ಫ್ಯಾನ್ ಫಾಲೋವರ್ಸ್ ಸಹ ಹೊಂದಿದ್ದಾರೆ. ಸ್ಯಾಂಡಲ್‍ವುಡ್‍ನ ನೋವು ನಲಿವಿನ ವಿಚಾರಗಳ ಕುರಿತು ಸಹ ಅನುಶ್ರೀ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇದೀಗ ಸುಶಾಂತ್ ಆತ್ಮಹತ್ಯೆ ಕುರಿತು ಸುಧೀರ್ಘ ಸಾಲುಗಳನ್ನು ಬರೆದಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಫೋಟೋ ಹಾಕಿ ಮನಮುಟ್ಟುವ ಸಾಲುಗಳನ್ನು ಬರೆದಿರುವ ಅನುಶ್ರೀ, ಯಾವ ನಗುವಿನ ಹಿಂದೆ ಯಾವ ನೋವಿರತ್ತೋ?? ಯಾರು ಬಲ್ಲರು. 2020 ಮರೆಯಾಲಾರದ, ಮರೆಸಲಾರದ, ಕ್ಷಮಿಸಲಾಗದ ವರ್ಷ. ಒಂಟಿತನ ಹಾಗೂ ಮಾನಸಿಕ ಖಿನ್ನತೆ ಕೊರೊನಾ ವೈರಸ್‍ಗಿಂತ ಅಪಾಯಕಾರಿ. ಎಷ್ಟು ಮಾನಸಿಕ ನೋವು ಈ ಅದ್ಭುತ ನಟನನ್ನು ಕಾಡಿತ್ತೋ ಏನೋ, ನುಂಗಲಾರದೆ, ಹೇಳಲಾರದೆ ಅದೆಷ್ಟು ನೋವು ಈ ಜೀವ ಅನುಭವಿಸಿತ್ತೋ ಏನೋ ಬರೆದುಕೊಂಡಿದ್ದಾರೆ.

    ಈ ಮೂಲಕ ಒಂದು ಸಣ್ಣ ವಿನಂತಿ ಹೀಯಾಳಿಸೋದು, ಕೆಟ್ಟದಾಗಿ ಹೇಳೋದು, ಕಮೆಂಟ್ ಮಾಡೋದು, ಅಯ್ಯೋ ಇವನು, ಇವಳು ಹಾಗೆ ಹೀಗೆ ಎಂದು ನಿಂದಿಸುವುದು, ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಹೇಳುವ ಅಶ್ಲೀಲ ಹೇಳಿಕೆಗಳನ್ನು ಹೇಳುವಾಗ, ಅವರ ಹಿಂದೆ ಮಾತಾಡುವಾಗ ಮತ್ತು ಕಮೆಂಟ್ ಮಾಡುವಾಗ ಒಮ್ಮೆ ಯೋಚಿಸಿ. ವಾಟ್ ದೆ ಗೋ ಥ್ರೂ… ಕೆಲವರನ್ನು ಇಲ್ಲವಾಗಿಬಿಡಿಸುತ್ತೆ ನಿಮ್ಮ ಮಾತುಗಳು ಎಂದು ಸಲಹೆ ನೀಡಿದ್ದಾರೆ.

     

    View this post on Instagram

     

    ಯಾವ ನಗುವಿನ ಹಿಂದೆ ಯಾವ ನೋವಿರತ್ತೋ ?? ಯಾರು ಬಲ್ಲರು …. 2020 ಮರೆಯಾಲಾರದ………ಮರೆಸಲಾರದ…….ಕ್ಷಮಿಸಲಾಗದ ವರ್ಷ…… ಒಂಟಿತನ ಹಾಗು ಮಾನಸಿಕ ಖಿನ್ನತೆ ಕರೋನ ವೈರಸ್ ಗಿಂತ ಅಪಾಯಕಾರಿ… ಎಷ್ಟು ಮಾನಸಿಕ ನೋವು ಈ ಅದ್ಭುತ ನಟನನ್ನು ಕಾಡಿತ್ತೋ ಏನೋ … ನುಂಗಲಾರದೆ …ಹೇಳಲಾರದೆ ಅದೆಷ್ಟು ನೋವು ಈ ಜೀವ ಅನುಭವಿಸಿತ್ತೋ ಏನೋ … ಒಂದು ಸಣ್ಣ ವಿನಂತಿ ಈ ಮೂಲಕ ಹೀಯಾಳಿಸೋದು , ಕೆಟ್ಟದಾಗಿ ಹೇಳೋದು,ಕಾಮೆಂಟ್ ಮಾಡೋದು …. ಅಯ್ಯೋ ಇವನ /ಇವಳ ಹಾಗೆ ಹೀಗೆ ಎಂದು ನಿಂದಿಸುವುದು … ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಹೇಳುವ ಅಶ್ಲೀಲ ಹೇಳಿಕೆಗಳು… ಹೇಳುವಾಗ ಅವರ ಹಿಂದೆ ಮಾತಾಡುವಾಗ ಮತ್ತು ಕಾಮೆಂಟ್ ಮಾಡುವಾಗ ಒಮ್ಮೆ ಯೋಚಿಸಿ… What they go through..”ಕೆಲವರನ್ನು ಇಲ್ಲವಾಗಿಬಿಡಿಸುತ್ತೆ ನಿಮ್ಮ ಮಾತುಗಳು ” ಒಬ್ಬರ ಕಲೆ ಮತ್ತು ಪ್ರತಿಭೆಯಿಂದ ಅವನ ಬೆಲೆ ಅಥವಾ ಗೌರವ ಇರುತ್ತೇ ಹೊರತು ಅವನ success ಅಥವ failure ನಿಂದಲ್ಲ …. ಕೊನೆಯದಾಗಿ ಎಲ್ಲಾ ಮನಸ್ತಾಪಗಳನ್ನ ದೂರ ಇಡಿ…ಇವತ್ತು ನಿಮ್ಮ ಸ್ನೇಹಿತರಿಗೋ ಅಥವಾ ಸಂಭಂಧಿಕರಿಗೋ..ಮನೆಯವರಿಗೋ ಕರೆ ಮಾಡಿ ಮಾತಾಡಬೇಕೆಂದೆನಿಸಿದರೆ ಮಾಡಿ.. ಇನ್ನೊಬ್ಬರ ಮಾತಿಗೆ ಕಿವಿಯಾಗಿ… ಯಾಕಂದ್ರೆ ನಾಳೆ ಅವರಿಲ್ಲವಾಗಬಹುದು … #ripsushantsinghrajput

    A post shared by ಅನುಶ್ರೀ Anchor Anushree (@anchor_anushreeofficial) on

    ಒಬ್ಬರ ಕಲೆ ಮತ್ತು ಪ್ರತಿಭೆಯಿಂದ ಅವನ ಬೆಲೆ ಅಥವಾ ಗೌರವ ಇರುತ್ತೇ ಹೊರತು ಅವನ ಸಕ್ಸಸ್ ಅಥವಾ ಫೇಲ್ಯೂರ್‍ನಿಂದಲ್ಲ. ಕೊನೆಯದಾಗಿ ಎಲ್ಲ ಮನಸ್ತಾಪಗಳನ್ನು ದೂರ ಇಡಿ. ಇವತ್ತು ನಿಮ್ಮ ಸ್ನೇಹಿತರಿಗೋ ಅಥವಾ ಸಂಬಂಧಿಕರಿಗೋ, ಮನೆಯವರಿಗೋ ಕರೆ ಮಾಡಿ ಮಾತಾಡಬೇಕೆಂದೆನಿಸಿದರೆ ಮಾಡಿ. ಇನ್ನೊಬ್ಬರ ಮಾತಿಗೆ ಕಿವಿಯಾಗಿ. ಯಾಕಂದ್ರೆ ನಾಳೆ ಅವರಿಲ್ಲವಾಗಬಹುದು ಎಂಬ ಭಾವನಾತ್ಮ ಸಾಲುಗಳನ್ನು ಬರೆದಿದ್ದಾರೆ.

    ಜೂನ್ 14ರಂದು ಸುಶಾಂತ್ ನಿಧನರಾಗಿದ್ದು, ಸುಶಾಂತ್ ಸಾವಿಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ ಮತ್ತು ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಹ ಲಭ್ಯವಾಗಿಲ್ಲ. ಪೊಲೀಸರು ಮನೆಯಲ್ಲಿದ್ದ ಮೂವರು ಮತ್ತು ನೆರೆಹೊರೆಯವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುಶಾಂತ್ ಸಿಂಗ್ ಬಳಸುತ್ತಿದ್ದ ಮೊಬೈಲ್ ಸಹ ಪರಿಶೀಲನೆ ನಡೆಸಿದ್ದಾರೆ. ಸುಶಾಂತ್ ಸ್ನೇಹಿತರು ಈ ಕುರಿತು ಮಾಹಿತಿ ನೀಡಿದ್ದು, ಸುಶಾಂತ್‍ಗೆ ವಿವಾಹವಾಗುವುದು ಇಷ್ಟವಿರಲಿಲ್ಲ. ತಂದೆಯ ಒತ್ತಾಯದ ಮೇರೆಗೆ ವಿವಾಹವಾಗಲು ಒಪ್ಪಿಕೊಂಡಿದ್ದರು. ಲಾಕ್‍ಡೌನ್ ವೇಳೆ ಭಾವಿ ಪತ್ನಿಯ ಮನೆಯಲ್ಲೇ ಇದ್ದ ಸುಶಾಂತ್ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು ಎಂದು ತಿಳಿಸಿದ್ದಾರೆ.

  • 2 ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ: ಅನುಶ್ರೀ

    2 ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ: ಅನುಶ್ರೀ

    ಬೆಂಗಳೂರು: ಈ ಎರಡು ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ. ನ್ಯೂಸ್ ನೋಡಲು ಅಂಜಿದೆ ಎಂದು ಕನ್ನಡದ ನಟಿ ಮತ್ತು ನಿರೂಪಕಿ ಅನುಶ್ರೀ ಅವರು ಹೇಳಿದ್ದಾರೆ.

    ಹೃದಯಾಘಾತದಿಂದ ಭಾನುವಾರ ಸಾವನ್ನಪ್ಪಿದ ನಟ ಚಿರಂಜೀವಿ ಸರ್ಜಾ ಅವರ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅನುಶ್ರೀ, ಚಿರು ಸಾವಿನ ನಂತರ ನನಗೆ ಸೋಶಿಯಲ್ ಮೀಡಿಯಾ ನೋಡಲು ಆಗುತ್ತಿರಲಿಲ್ಲ. ನ್ಯೂಸ್ ಕೂಡ ನೋಡಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಚಿರು ಸ್ವಭಾವದ ಬಗ್ಗೆ ಮಾತನಾಡಿದ್ದಾರೆ.

    https://www.instagram.com/p/CBMsVaLHTYL/

    ಚಿರು ವಿಚಾರವಾಗಿ ತಮ್ಮ ಇನ್‍ಸ್ಟಾದಲ್ಲಿ ಬರೆದುಕೊಂಡಿರುವ ಅನುಶ್ರೀ, ಈ ಎರಡು ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ. ನ್ಯೂಸ್ ನೋಡಲು ಅಂಜಿದೆ. ಕಾರಣ ಚಿರ ನಿದ್ರೆಗೆ ಜಾರಿದ ಚಿರು ನೋಡಲು ಆಗದೆ. ದೇವರ ಆಟ ಬಲ್ಲವರಾರು. ಹೌದು ಆದರೆ ಈ ಆಟಗಾರ ಬಹಳ ಬೇಗ ಅಗಲಿದ. ಸದಾ ನಗುವ ನಗಿಸುವ, ಕಿಂಚಿತ್ತೂ ಬೇರೆಯವರ ಬಗ್ಗೆ ಅಸೂಯೆ ಪಡದ ಚಿರುವನ್ನು ಆ ಬಾಕ್ಸ್ ನಲ್ಲಿ ನೋಡಿದಾಗ ವಿವರಿಸಲಾಗದ ಸಂಕಟ ಎಂದು ಬರೆದುಕೊಂಡಿದ್ದಾರೆ.

    ಜೊತೆಗೆ ಈಗ ಎಲ್ಲೆಡೆ ಹಾಗೆ ಮಾಡಿದ್ದರೆ ಹೀಗೆ ಆಗುತಿತ್ತು ಹೀಗೆ ಮಾಡಬೇಕಿತ್ತು ಅನ್ನೋ ನೂರಾರು ಊಹಾಪೋಹಗಳು. ಆದರೆ ಅವನನ್ನು ಅರಿತವರು ಈ ಭಾವಚಿತ್ರದಲ್ಲಿರೋ ಗೆಳೆಯರೆಲ್ಲರಿಗೂ ಗೊತ್ತು ಆತ ಎಷ್ಟು ಕೂಲ್ ಹುಡುಗ ಅಂತ. ಯಾವ ಕಾರಣಗಳು ಅವನನ್ನು ಮತ್ತೆ ತರಲು ಸಾಧ್ಯವೇ? ಅವನ ಆತ್ಮಕ್ಕೆ ಶಾಂತಿ ಸಿಗಲಿ. ಮೇಘನಾ ಹಾಗೂ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಆ ದೇವರು ಧೈರ್ಯ ಕೊಡಲಿ. ದೇವರೇ ಇನ್ನೆಂದು ಇಂತ ಸ್ನೇಹ ಜೀವಿಯನ್ನ ಇಷ್ಟು ಬೇಗ ಕರೆಯಬೇಡ ಎಂದು ನೋವಿನಲ್ಲಿ ಹೇಳಿದ್ದಾರೆ.

    ಭಾನುವಾರ ಮಧ್ಯಾಹ್ನದ ವೇಳೆಯಲ್ಲೂ ಚೆನ್ನಾಗಿದ್ದ ಚಿರು 2 ಗಂಟೆಯ ಸಮಯಕ್ಕೆ ಉಸಿರಾಟದ ತೊಂದರೆ ಮತ್ತು ಎದೆನೋವು ಎಂದು ಮನೆಯಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣ ಅಪೊಲೋ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ವೈದ್ಯರು ಎಷ್ಟೇ ಪ್ರಯತ್ನಿಸಿದ್ದರು ಚಿರು ಚಿಕಿತ್ಸೆಗೆ ಸ್ಪಂದಿಸಿರಲ್ಲಿ. ಹೀಗಾಗಿ 3.48ರ ಸುಮಾರಿಗೆ ಚಿರು ಇಹಲೋಕ ತ್ಯಜಿಸಿದ್ದರು. ರಾಮನಗರದ ಧ್ರುವ ಸರ್ಜಾ ತೋಟದ ಮನೆಯಲ್ಲಿ ಸೋಮವಾರ ಮಣ್ಣಲ್ಲಿ ಮಣ್ಣಾಗಿ ಹೋದರು.

    ತನ್ನ 39ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ ಚಿರಂಜೀವಿ ಸರ್ಜಾ ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿತ್ತು. ಚಂದವನದ ಹಿರಿಯ-ಕಿರಿಯ ಕಲಾವಿದರೆಲ್ಲ ಯುವ ಸಾಮ್ರಾಟನ ಸಾವಿಗೆ ಸಂತಾಪ ಸೂಚಿಸಿದ್ದರು. ಜೊತೆಗೆ ಬೇರೆ ಭಾಷೆಯ ಕಲಾವಿದರೂ ಕೂಡ ಚಿರು ಸಾವಿಗೆ ಮರುಗಿದ್ದರು. ಸ್ಯಾಂಡಲ್‍ವುಡ್‍ನಲ್ಲಿ 22ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿದ್ದ ಚಿರು ವಿಧಿಯಾಟಕ್ಕೆ ಸೋತು ಬಾರದ ಲೋಕಕ್ಕೆ ತೆರಳಿದ್ದಾರೆ.

  • ನಮ್ಮ ಇಂಡಿಯಾ ಇನ್ನೊಂದು ಇಟಲಿಯಾಗೋದು ಬೇಡ – ಇಟಲಿಯಿಂದ ಕನ್ನಡತಿ ಮನವಿ

    ನಮ್ಮ ಇಂಡಿಯಾ ಇನ್ನೊಂದು ಇಟಲಿಯಾಗೋದು ಬೇಡ – ಇಟಲಿಯಿಂದ ಕನ್ನಡತಿ ಮನವಿ

    – ನಮ್ಮಿಂದ ನಮ್ಮ ದೇಶದ ಜನರಿಗೆ ಎಫೆಕ್ಟ್ ಆಗೋದು ಬೇಡ
    – ನಾನು ಭಾರತಕ್ಕೆ ಬರಲ್ಲ, ಬಂದ್ರೆ ಸೋಂಕು ಆಗಬಹುದು

    ರೋಮ್: ಲಾಕ್‍ಡೌನ್ ಪಾಲನೆ ಮಾಡಿ, ಇಲ್ಲದಿದ್ದರೆ ಅನಾಹುತ ಆಗಬಹುದು. ಇಟಲಿಯಲ್ಲೂ ಕೊರೊನಾ ಸೋಂಕು ಪತ್ತೆ ಆದ ಕೂಡಲೇ ಲಾಕ್‍ಡೌನ್ ಹೇರಿದರು. ಆದರೂ ಲಾಕ್‍ಡೌನ್ ಮೀರಿ ಜನ ಊರೆಲ್ಲ ಸುತ್ತಾಡಿದರು. ಈಗ ಲಾಕ್‍ಡೌನ್ ಮೀರಿದ್ದಕ್ಕೆ ಇಟಲಿಯಲ್ಲಿ ಸಾವು ಹೆಚ್ಚಾಯಿತು ಎಂದು ಇಟಲಿಯಿಂದ ಕನ್ನಡತಿ ಭಾರತೀಯರಿಗೆ ಸಂದೇಶ ರವಾನಿಸಿದ್ದಾರೆ.

    ಮೈಸೂರು ಮೂಲದ ಅನುಶ್ರೀ ಇಟಲಿಯಲ್ಲಿ ನೆಲೆಸಿದ್ದು, ಅಲ್ಲಿಂದಲೇ ವಿಡಿಯೋ ಮಾಡಿ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಈಗ ಇಟಲಿಯಿಂದ ಮಾತನಾಡುತ್ತಿದ್ದೇನೆ. ಕೊರೊನಾ ವೈರಸ್ ಜಗತ್ತಿನಾದ್ಯಂತ ವ್ಯಾಪಿಸಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಸಾವಿರಾರು ಜನರು ಜೀವ ಕಳೆದುಕೊಂಡಿದ್ದಾರೆ. ಇನ್ನೂ ಸಾವಿರಾರು ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅದರಲ್ಲಿ ಇಟಲಿ ಕೂಡ ಟಾಪ್ ಲಿಸ್ಟಲಿದೆ. ಇಟಲಿಯಲ್ಲೂ 6 ಸಾವಿರಕ್ಕೂ ಅಧಿಕ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

    ಮೊದಲಿಗೆ ಇಟಲಿಯ ಮಿಲನ್‍ನಲ್ಲಿ ಕೊರೊನಾ ವೈರಸ್ ಕಂಡು ಬಂದಿತ್ತು. ಕೊರೊನಾ ವೈರಸ್ ಪತ್ತೆಯಾದ ಒಂದೇ ವಾರಕ್ಕೆ ಇಟಲಿ ಸರ್ಕಾರ ಲಾಕ್‍ಡೌನ್ ಮಾಡಿತ್ತು. ಆದರೆ ಜನರು ಸರ್ಕಾರ ಮಾಡಿದ ನಿಯಮವನ್ನು ಪಾಲಿಸದೇ ಮನೆಯಿಂದ ಹೊರಗಡೆ ಓಡಾಡಲು ಶುರು ಮಾಡಿದರು. ಬೇರೆ ಬೇರೆ ಊರಿಗಳಿಗೆ ಓಡಾಡಲು ಶುರು ಮಾಡಿದರು. ಇದರಿಂದ ಇಡೀ ಇಟಲಿ ದೇಶಾದ್ಯಂತ ವೈರಸ್ ವ್ಯಾಪಿಸಿದ್ದು, ಈಗ ಇಟಲಿ ಸಂಪೂರ್ಣ ಲಾಕ್‍ಡೌನ್ ಆಗಿದೆ.

    ನಾನು ಫೆ.23ರಂದು ಕೊನೆಯ ಬಾರಿಗೆ ಆಫಿಸ್‍ಗೆ ಹೋಗಿದ್ದೆ. ಸುಮಾರು ಒಂದು ತಿಂಗಳಾಯಿತು. ನಾನು ಮನೆಯಲ್ಲಿಯೇ ಇದ್ದೇನೆ, ಹೊರಗಡೆ ಹೋಗಿಲ್ಲ. ಆದರೆ ನಮ್ಮ ಜೀವನ ಕಷ್ಟವಾಗಿಲ್ಲ. ಎರಡು ವಾರಕ್ಕೊಮ್ಮೆ ಮನೆಯಿಂದ ಒಬ್ಬರು ಮಾತ್ರ ಹೊರಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನಮಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದರು.

    ಇಟಲಿಯಲ್ಲಿ ಎರಡನೇ ವಾರ ಕೊರೊನಾ ವೈರಸ್ ಇದ್ದಾಗ 245 ಪ್ರಕರಣ ಇತ್ತು. ಈಗ ಇದೇ ಪರಿಸ್ಥಿತಿಯಲ್ಲಿ ನಮ್ಮ ಭಾರತ ಕೂಡ ಇದೆ. ಭಾರತಕ್ಕೆ ಕೊರೊನಾ ವೈರಸ್ ಬಂದು 2 ವಾರ ಆಗಿದೆ. ಇಲ್ಲಿಯವರೆಗೂ 511 ಪಾಸಿಟಿವ್ ಪ್ರಕರಣ ಆಗಿದೆ. ಹೀಗಾಗಿ ದಯವಿಟ್ಟು ಎಲ್ಲರೂ ಮನೆಯಲ್ಲಿರಿ. ಹೊರಗೆ ಬರಬೇಡಿ, ಎಲ್ಲೂ ಹೋಗಬೇಡಿ. ನಮ್ಮ ಭಾರತ ಇನ್ನೊಂದು ಇಟಲಿ ಆಗುವುದು ಬೇಡ. ಇಟಲಿ ಸಣ್ಣ ದೇಶ ಸುಮಾರು 6.5 ಕೋಟಿ ಜನಸಂಖ್ಯೆ ಇದೆ. ನಮ್ಮ ಕರ್ನಾಟಕದಷ್ಟೂ ಇಲ್ಲ. ನಮ್ಮ ಇಂಡಿಯಾದಲ್ಲಿ 1.3 ಬಿಲಿಯನ್ ಜನಸಂಖ್ಯೆ ಇದೆ. ದಯವಿಟ್ಟು ಯೋಚನೆ ಮಾಡಿ ನಮ್ಮಿಂದ ನಮ್ಮ ದೇಶದ ಜನರಿಗೆ ಎಫೆಕ್ಟ್ ಆಗುವುದು ಬೇಡ. ಸುಮ್ಮನೆ ಬೇರೆ ಕಡೆಗೆ ಪ್ರಯಾಣ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

    ನಾನು ಭಾರತಕ್ಕೆ ಬರಬಹುದು. ಯಾರೂ ಕೂಡ ಬರಬೇಡ ಎಂದು ಹೇಳಿಲ್ಲ. ನಾನು ಒಂದು ತಿಂಗಳಿಂದ ಮನೆಯಲ್ಲಿದ್ದೀನಿ. ಯಾವುದೇ ಕೊರೊನಾ ಲಕ್ಷಣ ನನಗಿಲ್ಲ. ನಾನು ಆರಾಮಾಗಿ ಪ್ರಯಾಣ ಮಾಡಬಹುದು. ಆದರೆ ಪ್ರಯಾಣ ಮಾಡುವಾಗ ಕೊರೊನಾ ವೈರಸ್ ಸೋಂಕು ಆಗಬಹುದು. ನಾನು ಬಂದು 14 ದಿನ ಕ್ವಾರಂಟೈನ್‌ನಲ್ಲಿ ಇರುವಾಗ ಇನ್ನೂ ನಾಲ್ವರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಆದ್ದರಿಂದ ನಾನು ಭಾರತಕ್ಕೆ ಬರುತ್ತಿಲ್ಲ. ಭಾರತದಲ್ಲಿ ಇನ್ನೂ ಹೆಚ್ಚಾಗಿ ಕೊರೊನಾ ವೈರಸ್ ಆಗುವುದು ಬೇಡ. ಯಾರೂ ಪ್ರಯಾಣ ಮಾಡಬೇಡಿ. ಮನೆಯಲ್ಲಿರಿ ಎಂದು ಅನುಶ್ರೀ ಮನವಿ ಮಾಡಿಕೊಂಡಿದ್ದಾರೆ.

  • ಬೆಂಗ್ಳೂರಿಗೆ ಬಂದಾಗ ಅನುಭವಿಸಿದ್ದ ಕಷ್ಟ ಹೇಳಿ ಅನುಶ್ರೀ ಕಣ್ಣೀರು

    ಬೆಂಗ್ಳೂರಿಗೆ ಬಂದಾಗ ಅನುಭವಿಸಿದ್ದ ಕಷ್ಟ ಹೇಳಿ ಅನುಶ್ರೀ ಕಣ್ಣೀರು

    ಬೆಂಗಳೂರು: ನಿರೂಪಕಿ ಅನುಶ್ರೀ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ತಮ್ಮ ವೃತ್ತಿ ಜೀವನದ ಆರಂಭದ ದಿನಗಳನ್ನು ಮೆಲುಕು ಹಾಕಿಕೊಂಡು ಕಣ್ಣೀರು ಹಾಕಿದ್ದಾರೆ.

    ಮೊದಲಿಗೆ ಬೆಂಗಳೂರಿಗೆ ಬಂದಾಗ ಇಲ್ಲಿ ಸಂಬಳ ಏನೂ ಸಾಕಾಗಲ್ಲ. ನಾನು ವಾಪಸ್ ಬರ್ತೀನಿ ಎಂದು ಅಮ್ಮನಿಗೆ ಎಸ್‍ಟಿಡಿ ಮಾಡಿದೆ. ಆದ್ರೆ ಅಮ್ಮ ನೀನು ಸೋತು ಮನೆಗೆ ಬರಬೇಡ. ಗೆದ್ದು ಬಾ ಅಥವಾ ಪ್ರಯತ್ನ ಮಾಡಿಯಾದ್ರೂ ಬಾ ಅಂತ ಹೇಳಿರುವುದಾಗಿ ತಿಳಿಸಿದರು.

    ರಿಯಾಲಿಟಿ ಶೋನಲ್ಲಿ ಕೂಡು ಕುಟುಂಬ ನೋಡಿದಾಗ ಭಾವುಕರಾದ ಅನುಶ್ರೀ, ನಾನು 10 ವರ್ಷ ಪಿಜಿಯಲ್ಲಿದ್ದೆ. ಶೂಟಿಂಗ್ ಮುಗಿಸಿಕೊಂಡು ಬಂದಾಗ ನಮಗೆ ಬಾಗಿಲು ತೆಗೆಯುವವರು ಯಾರೂ ಇರಲ್ಲ. ಊಟ ಮಾಡಿದ್ರಾ, ಹುಷಾರ್ ಇದ್ದೀರಾ ಕೇಳುವವರೂ ಇರಲಿಲ್ಲ. ಎಷ್ಟೋ ಬಾರಿ ಇದನ್ನೇ ನೆನಪು ಮಾಡಿಕೊಂಡು ರಾತ್ರಿ ಊಟ ಸಹ ಮಾಡದೇ ಮಲಗಿಕೊಂಡಿದ್ದೇನೆ. ಆ ಒಂಟಿತನ ಬೆಂಗಳೂರಿಗೆ ಬಂದಾಗ ನನ್ನನ್ನು ಕಾಡಿತ್ತು. ಏನೇ ಜಗಳ ಇರಲಿ, ಮನೆಯಲ್ಲಿರಬೇಕು ಎಂಬುದು ನನ್ನ ಅಭಿಪ್ರಾಯ. ಇದನ್ನೂ ಓದಿ: ಸುಷ್ಮಾ ನೀಡಿದ 250 ರೂ. ನೋಡಿ ಕಣ್ಣೀರಿಟ್ಟ ಅನುಶ್ರೀ

    ಒಂದು ಬಾರಿ ನನಗೆ ಹುಷಾರ್ ಇರಲಿಲ್ಲ. ಒಬ್ಬಳೇ ಆಸ್ಪತ್ರೆಗೆ ಹೋಗಿದ್ದೆ. ದೇಹದಲ್ಲಿ ಸಣ್ಣ ಇನ್ಪೆಕ್ಷನ್ ಅಂತ ಅನ್ಕೊಂಡು ಹೋದೆ. ಚಿಕಿತ್ಸೆ ಮಾಡುವಾಗ ನೋವು ಆಗುತ್ತೆ ಅನ್ನೋದು ಗೊತ್ತಿರಲಿಲ್ಲ. ವೈದ್ಯರು ಟ್ರೀಟ್ ಮಾಡುವಾಗ ನನ್ನ ಕೈ ಹಿಡಿದುಕೊಳ್ಳಲು ಯಾರೂ ಇಲ್ಲ ಅನ್ನೋ ನೋವು ನನ್ನನ್ನು ತುಂಬಾ ಕುಂದಿಸ್ತು. ಅದೇ ನೋವಿನಲ್ಲಿ ಮಲ್ಲೇಶ್ವರಂನಲ್ಲಿದ್ದ ಆಸ್ಪತ್ರೆಯಿಂದ ಹೊರ ಬಂದು ಆಟೋ ಹತ್ತಿ ಹಲ್ಲನ್ನು ಬಿಗಿ ಹಿಡಿದು ಹಾಸ್ಟೆಲ್ ವರೆಗೂ ಹೋದೆ. ಆವತ್ತೇ ಫಸ್ಟ್ ಟೈಂ ಜೋರಾಗಿ ಅತ್ತಿದ್ದು. ಬೆಂಗಳೂರಿನಲ್ಲಿ ನನಗೆ ಅಂತ ಯಾರೂ ಇಲ್ಲವಲ್ಲ ಎಂಬ ನೋವು ಕಾಡಿತ್ತು. ಅವತ್ತು ಸಹ ಅಮ್ಮನಿಗೆ ಫೋನ್ ಮಾಡಿ ಕಣ್ಣೀರು ಹಾಕಿದ್ದೆ.

    ಗುಂಡ್ಲುಪೇಟೆಯ ಈ ಕುಟುಂಬದವರು ಅದೃಷ್ಟವಂತರು. ಒಂದೇ ಮನೆಯಲ್ಲಿ 47 ಜನರು ವಾಸವಾಗಿರುವ ವಿಷಯ ಕೇಳಿ ಮತ್ತು ಈ ತುಂಬು ಕುಟುಂಬ ನೋಡಿ ಖುಷಿಯಾಯ್ತು. ಜೊತೆಯಲ್ಲಿ ಕುಳಿತು ಮಾತಾಡ್ತಾ ಊಟ ಮಾಡ್ತೀರಿ. ಒಂದು ಮಾತು ಬರುತ್ತೆ ಹೋಗುತ್ತೆ. ರಾತ್ರಿ ಮಲಗಿದ ವ್ಯಕ್ತಿ ಬೆಳಗ್ಗೆ ಏಳುತ್ತಾನೆ ಎಂಬುವುದು ಯಾರಿಗೂ ಗೊತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.

  • ಸುಷ್ಮಾ ನೀಡಿದ 250 ರೂ. ನೋಡಿ ಕಣ್ಣೀರಿಟ್ಟ ಅನುಶ್ರೀ

    ಸುಷ್ಮಾ ನೀಡಿದ 250 ರೂ. ನೋಡಿ ಕಣ್ಣೀರಿಟ್ಟ ಅನುಶ್ರೀ

    ಬೆಂಗಳೂರು: ನಿರೂಪಕಿ ಅನುಶ್ರೀ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಚಿನಕುರಳಿ ಮಾತುಗಳಿಂದ ಮನೆ ಮಾತಾಗಿರುವ ಎಳ್ಳು ಹುರಿದಂತೆ ಮಾತನಾಡುವ ಅನುಶ್ರೀ ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಶೋನಲ್ಲಿ ಭಾಗವಹಿಸಿದ್ದಾಗ ಕಾರ್ಯಕ್ರಮದ ನಿರೂಪಕಿ ಸುಷ್ಮಾ, ಅತಿಥಿಯಾಗಿ ಆಗಮಿಸಿದ್ದ ಅನುಶ್ರೀ ಅವರಿಗೆ 250 ರೂ. ಹಣವಿರುವ ಲಕೋಟೆ ನೀಡುತ್ತಾರೆ. ಹಣ ನೋಡಿದ ಕೂಡಲೇ ಅನುಶ್ರೀ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    ಯಾವುದೇ ಇವೆಂಟ್ ಇರಲಿ, ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮಗಳಿಗೆ ಅನುಶ್ರೀಯವರ ನಿರೂಪಣೆ ಇರಬೇಕು. ಹಾಗೆಯೇ ಖಾಸಗಿ ವಾಹಿನಿಯಲ್ಲಿ ಮೂಡಿ ಬರುವ ಸಂಗೀತ ಕಾರ್ಯಕ್ರಮಕ್ಕೂ ಅನುಶ್ರೀ ಆ್ಯಂಕರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.

    ಅದೇ ವಾಹಿನಿಯ ಮತ್ತೊಂದು ರಿಯಾಲಿಟಿ ಶೋನಲ್ಲಿ ತಮ್ಮ ಪ್ರೀತಿಯ ತಮ್ಮ ಸಿಂಗರ್ ಹನುಮಂತನ ಜೊತೆಯಲ್ಲಿ ಅನುಶ್ರೀ ಭಾಗವಾಹಿಸಿದ್ದರು. ಈ ಸ್ಪರ್ಧೆಯಲ್ಲಿ ಗೆದ್ದರೆ 10 ಲಕ್ಷ ರೂ. ಹಣ ಗಳಿಸಬಹುದು. ಈ ವೇಳೆ ಕಾರ್ಯಕ್ರಮದ ನಿರೂಪಕಿ ಸುಷ್ಮಾ 250 ರೂ. ಹಣದ ಲಕೋಟೆ ನೀಡುತ್ತಿದ್ದಂತೆ ಅನುಶ್ರೀ ತಮ್ಮ ಮೊದಲ ಸಂಬಳ ಇದಾಗಿತ್ತು ಎಂದು ಹೇಳುತ್ತಾ ಕಣ್ಣೀರು ಹಾಕಿದರು.

    ಮಂಗಳೂರಿನ ಸ್ಥಳೀಯ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾಗ ತಿಂಗಳಿಗೆ 800 ರೂ. ಸಂಬಳ ಸಿಗುತ್ತಿತ್ತು. ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡಿದ್ರೆ ಹೆಚ್ಚು ಹಣ ಸಿಗುತ್ತೆ ಅಂತ ಬಂದೆ. ಮೊದಲಿಗೆ ಬಂದ ಕೂಡಲೇ ಕಾರ್ಯಕ್ರಮದ ಆಯೋಜಕರು ಪ್ರತಿ ಸಂಚಿಕೆಗೆ 250 ರೂ. ಎಂದು ನಿಗದಿ ಮಾಡಿದರು. ನಾನು ಪ್ರತಿದಿನ ಸಂಚಿಕೆ ಸಿಗಬಹುದು ಅಂತ ತಿಳಿದಿದ್ದೆ. ಆದ್ರೆ ನನ್ನ ರೀತಿಯಲ್ಲಿ ಎಂಟು ಜನ ನಿರೂಪಕಿಯರಿದ್ದರು. ತಿಂಗಳಿಗೆ ನಾಲ್ಕು ಸಂಚಿಕೆ ಸಿಗೋದು. ಮೊದಲ ಸಂಚಿಕೆ ಮಾಡಿದಾಗ ನನಗೆ ಸಿಕ್ಕ ಸಂಭಾವನೆ ಇದೇ 250 ರೂಪಾಯಿ ಎಂದರು.

    ಈಗ ಎಷ್ಟೇ ಕಾರ್ಯಕ್ರಮ ಮಾಡಬಹುದು, ಎಷ್ಟೇ ಹಣದ ಚೆಕ್ ಪಡೆದ್ರೂ ಆವಾಗ 250 ರೂ. ಸಿಕ್ಕಾಗ ಆಗುತ್ತಿದ್ದ ಖುಷಿ ಇವತ್ತು ಸಿಗಲ್ಲ. ಅಂದಿನ 250 ರೂ. ಕೊಡುತ್ತಿದ್ದ ನೆಮ್ಮದಿ, ಇವತ್ತಿನ ಬದುಕು ಕೊಡಲ್ಲ. ಇವತ್ತು ಗೆಲ್ಲುವ ಹಣಕ್ಕಿಂತ 250 ರೂ. ಮೌಲ್ಯ ನನಗೆ ಹೆಚ್ಚು ಎಂದು ಹಣಕ್ಕೆ ನಮಸ್ಕರಿಸಿದರು.

  • ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್ – ತಳ್ಳಾಟದಲ್ಲಿ ಪರದಾಡಿದ ಅನುಶ್ರೀ

    ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್ – ತಳ್ಳಾಟದಲ್ಲಿ ಪರದಾಡಿದ ಅನುಶ್ರೀ

    ವಿಜಯಪುರ: ಕಾರ್ಯಕ್ರಮವೊಂದಕ್ಕೆ ವಿಜಯಪುರಕ್ಕೆ ಆಗಮಿಸಿದ್ದ ವೇಳೆ ಖ್ಯಾತ ನಿರೂಪಕಿ, ನಟಿ ಅನುಶ್ರೀ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ಅಭಿಮಾನಿಗಳಿಂದ ಬಚಾವ್ ಆಗಲು ನಟಿ ಅನುಶ್ರೀ ಪರದಾಡಿದ್ದಾರೆ.

    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಕಳೆದ ರಾತ್ರಿ ನಡೆದ ಕಲಾಜಾತ್ರೆ ಕಾರ್ಯಕ್ರಮಕ್ಕೆ ಅನುಶ್ರೀ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಫಾನ್ಸ್ ಗಳ ತಳ್ಳಾಟದಿಂದ ಗಬರಿಗೊಂಡಿದ್ದ ಅನುಶ್ರೀ ಅವರು ಖಾಸಗಿ ಭದ್ರತಾ ಗಾರ್ಡ್‍ಗಳ ನೆರವಿನಿಂದ ಕಾರ್ಯಕ್ರಮದಿಂದ ಹೊರಬಂದರು.

    ನಿರ್ದೇಶಕ ಕಲಂದರ ದೊಡಮನಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಲಾಜಾತ್ರೆ ಕಾರ್ಯಕ್ರಮದಲ್ಲಿ ನಟ ವಿಜಯ ರಾಘವೇಂದ್ರ ಮಾತನಾಡಿ, ಮಾಲ್ಗುಡಿ ಡೇಸ್ ಚಿತ್ರದ ಪ್ರಚಾರ ನಡೆಸಿದರು. ಚಿತ್ರದ ಪ್ರಚಾರಾರ್ಥವಾಗಿ ಆಗಮಿಸಿದ್ದ ಚಿನ್ನಾರಿ ಮುತ್ತ ಉತ್ತರ ಕರ್ನಾಟಕದವರಿಂದಲೇ ಇಂದು ಕನ್ನಡ ಭಾಷೆ ಜೀವಂತವಾಗಿ ಉಳಿದಿದೆ ಎಂದರು.

  • ಮದುವೆ ಬಗ್ಗೆ ಮೌನ ಮುರಿದ ನಿರೂಪಕಿ ಅನುಶ್ರೀ

    ಮದುವೆ ಬಗ್ಗೆ ಮೌನ ಮುರಿದ ನಿರೂಪಕಿ ಅನುಶ್ರೀ

    ಬೆಂಗಳೂರು: ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಶೀಫ್ರದಲ್ಲೇ ಮದುವೆಯಾಗಲಿದ್ದಾರೆ. ಅವರ ಮನೆಯಲ್ಲಿ ಈಗಾಗಲೇ ಹುಡುಗನನ್ನು ಹುಡುಕಲು ಶುರು ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೀಗ ಸ್ವತಃ ಅನುಶ್ರೀ ಈ ಬಗ್ಗೆ ಮೌನ ಮುರಿದಿದ್ದಾರೆ.

    ಇತ್ತೀಚೆಗೆ ಅನುಶ್ರೀ ಪ್ರತಿಕೆಯೊಂದಕ್ಕೆ ಮದುವೆ ಬಗ್ಗೆ ಸಂದರ್ಶನ ನೀಡಿದ್ದರು. ಈ ವೇಳೆ ನೀವು ಶೀಘ್ರದಲ್ಲೇ ಮದುವೆ ಆಗುತ್ತಿದ್ದಿರಾ ಎಂಬ ಸುದ್ದಿ ಹರಿದಾಡುತ್ತಿದೆ ಎಂದು ಪ್ರಶ್ನಿಸಿದಾಗ ಅವರು ಈ ವಿಷಯವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ ಈ ಸುದ್ದಿಯಿಂದ ನನಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಅನು, ಈಗಾಗಲೇ ಅನೇಕರು ನನಗೆ ಹಲವು ಬಾರಿ ಮದುವೆ ಮಾಡಿಸಿದ್ದಾರೆ. ಹುಡುಗಿ ಎಂದಾಕ್ಷಣ ಮದುವೆ ಮಾಡುವ ಕಾತುರ ಈ ಜನಕ್ಕೆ ಏಕೆ ಬರುತ್ತೆ ಎಂದು ನನಗೆ ಗೊತ್ತಿಲ್ಲ. ಮದುವೆ ಎನ್ನುವುದು ನನ್ನ ಸ್ವಂತ ನಿರ್ಧಾರ. ನನ್ನ ವಿವಾಹವನ್ನು ಗುಟ್ಟಾಗಿಡುವ ಅವಶ್ಯಕತೆ ಇಲ್ಲ. ನಾನೇದಾರೂ ಮದುವೆಯಾದರೆ ಎಲ್ಲರಿಗೂ ತಿಳಿಸಿಯೇ ಆಗುತ್ತೇನೆ. ನನ್ನ ಮದುವೆ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದು ತಿಳಿಸಿದ್ದಾರೆ.

    ಎಲ್ಲರೂ ಒಂದಲ್ಲಾ ಒಂದು ದಿನ ಮದುವೆಯಾಗಿಯೇ ಆಗುತ್ತಾರೆ. ಆದರೆ ನನ್ನ ಮದುವೆ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ ಇದೆ. ಸದ್ಯಕ್ಕೆ ನಾನು ಮದುವೆ ಬಗ್ಗೆ ಯೋಚಿಸಿಲ್ಲ. ಅಲ್ಲದೆ ನನ್ನ ಮನೆಯವರು ಕೂಡ ಮದುವೆಯಾಗು ಎಂದು ಒತ್ತಾಯಿಸುತ್ತಿಲ್ಲ. ನನಗೆ ಇಲ್ಲದ ಮದುವೆ ಅವಸರ ಬೇರೆಯವರಿಗೆ ಏಕೆ ಇದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದರು.

    ಈಗ ನಾನು ನನ್ನ ವೃತ್ತಿಜೀವನದ ಬಗ್ಗೆ ಯೋಚಿಸುತ್ತಿದ್ದೇನೆ. ನನ್ನ ಮದುವೆ ಬಗ್ಗೆ ಯಾರಿಗೂ ಗೊಂದಲ ಬೇಡ. ನಾನು ಈಗಲೇ ಮದುವೆಯಾಗುತ್ತಿಲ್ಲ. ನನಗೆ ಇಷ್ಟವಾಗುವ ಹುಡುಗ ಕೂಡ ಸಿಕ್ಕಿಲ್ಲ. ಹುಡುಗನ ಆಯ್ಕೆಯಿಂದ ಮದುವೆತನಕ ಎಲ್ಲಾ ವಿಚಾರವನ್ನು ಬಹಿರಂಗಪಡಿಸುತ್ತೇನೆ. ಯಾವುದನ್ನು ಗುಟ್ಟಾಗಿ ಮಾಡುವುದಿಲ್ಲ. ಹೀಗಾಗಿ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ತಮ್ಮ ಮದುವೆ ವಂದತಿ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

  • ಅನುಶ್ರೀಗೆ ಸಿಕ್ತು ಹೊಸ ಬಿರುದು

    ಅನುಶ್ರೀಗೆ ಸಿಕ್ತು ಹೊಸ ಬಿರುದು

    ಬೆಂಗಳೂರು: ಕಿರುತೆರೆಯಲ್ಲಿ ತಮ್ಮ ನಿರರ್ಗಳ ಮಾತಿನ ಮೂಲಕ ಚಾಪು ಮೂಡಿಸಿರುವ ಕರಾವಳಿ ತೀರದ ಬೆಡಗಿ ಅನುಶ್ರೀ ಅವರಿಗೆ ಹೊಸ ಬಿರುದನ್ನು ನಾದಬ್ರಹ್ಮ, ಸ್ವರದಿಗ್ಗಜ ಹಂಸಲೇಖ ನೀಡಿದ್ದಾರೆ.

    ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದ ನಿರೂಪಕಿಯಾಗಿರುವ ಅನುಶ್ರೀ ಎಲ್ಲರ ಅಚ್ಚುಮೆಚ್ಚಿನ ತಾರೆ. ಕಾರ್ಯಕ್ರಮದ ಮಹಾತೀರ್ಪುಗಾರರ ಸ್ಥಾನದಲ್ಲಿರುವ ಹಂಸಲೇಖ ಹೊಸ ಬಿರುದು ನೀಡಿ ಅನುಶ್ರೀ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಮಾತಿನ ಮಲ್ಲಿ, ಚಿನಕುರುಳಿ, ಪಟ್ ಪಟಾಕಿ ಹೀಗೆ ಅನುಶ್ರೀಯವರನ್ನ ಕರೆಯುವುದುಂಟು. ಇದೀಗ ‘ಪ್ರಸಂಗಗೀತ’ ಎಂಬ ಹೊಸ ಕನ್ನಡ ಬಿರುದನ್ನು ಹಂಸಲೇಖ ನೀಡಿದ್ದಾರೆ. ಪ್ರಸಂಗಗೀತ ಬಿರುದು ಪಡೆದ ಅನುಶ್ರೀ ಸಂತೋಷವನ್ನು ವ್ಯಕ್ತಪಡಿಸಿದರು.

    ಈ ಶನಿವಾರ ಪ್ರಸಾರವಾದ ಸಂಗೀತ ಕಾರ್ಯಕ್ರಮದ ಆರಂಭದಲ್ಲಿಯೇ ಹಂಸಲೇಖ ಇನ್ನ್ಮುಂದೆ ಪ್ರಸಂಗಗೀತ ಅನುಶ್ರೀ ಎಂದು ಹೇಳಿದರು. ಪರಸಂಗದ ತಿಮ್ಮದ ಅಂದ್ರೆ ಪರರ ಕತೆಗಳನ್ನು ವರ್ಣರಂಜಿತವಾಗಿ ಹೇಳುವ ವ್ಯಕ್ತಿ. ಸಂಗೀತ ಕಾರ್ಯಕ್ರಮದಲ್ಲಿಯೇ ಎಲ್ಲರ ಕತೆಯನ್ನು ಗೀತೆಯ ಮೂಲಕ ಹೇಳುವ ನಿರೂಪಕಿಯನ್ನು ಕನ್ನಡದಲ್ಲಿ ಪ್ರಸಂಗಗೀತ ಎಂದು ಕರೆತಯುತ್ತಾರೆ ಅಂತಾ ಹಂಸಲೇಖ ತಿಳಿಸಿದರು.

    ಹೊಸ ಬಿರುದು ಪಡೆದ ಆನುಶ್ರೀ ಚಪ್ಪಾಳೆಯ ಮೂಲಕ ಹಂಸಲೇಖರಿಗೆ ಧನ್ಯವಾದ ಅರ್ಪಿಸಿದರು. ಖುದ್ದು ಮಹಾ ಗುರುಗಳಾದ ಹಂಸಲೇಖ ಅವರು ನನಗೆ ಬಿರುದು ನೀಡಿದ್ದು, ಮುಂದಿನ ಸಂಚಿಕೆಯಿಂದ ನನ್ನ ಸಂಭಾವನೆಯಲ್ಲಿ ಹೆಚ್ಚಳ ಮಾಡಿ ಎಂದು ಹೇಳುವ ಮೂಲಕ ಎಲ್ಲರನ್ನು ನಗೆಯಲ್ಲಿ ತೇಲುವಂತೆ ಮಾಡಿದರು.

  • ಲಂಬಾಣಿ ಮಹಿಳೆಯರ ಉಡುಪಿನಲ್ಲಿ ಕನ್ನಡಿಗಳು ಯಾಕಿರುತ್ತೆ? ಹಂಸಲೇಖ ನೀಡಿದ್ರು ಉತ್ತರ

    ಲಂಬಾಣಿ ಮಹಿಳೆಯರ ಉಡುಪಿನಲ್ಲಿ ಕನ್ನಡಿಗಳು ಯಾಕಿರುತ್ತೆ? ಹಂಸಲೇಖ ನೀಡಿದ್ರು ಉತ್ತರ

    ಬೆಂಗಳೂರು: ಲಂಬಾಣಿ ಸಮುದಾಯದ ಮಹಿಳೆಯರು ಧರಿಸಿರುವ ಸಾಂಪ್ರದಾಯಿಕ ಉಡುಪಿನಲ್ಲಿ ಹೆಚ್ಚಾಗಿ ಕನ್ನಡಿಗಳನ್ನು ಯಾಕೆ ಬಳಸಲಾಗುತ್ತದೆ ಎಂಬ ಹಲವರ ಪ್ರಶ್ನೆಗೆ ನಾದಬ್ರಹ್ಮ, ಸಂಗೀತ ನಿರ್ದೇಶಕ ಹಂಸಲೇಖ ಉತ್ತರ ನೀಡಿದ್ದಾರೆ.

    ನಮ್ಮ ಸುತ್ತಮುತ್ತ ವಾಸವಾಗಿರುವ ಲಂಬಾಣಿ ಸಮುದಾಯದ ಮಹಿಳೆಯರ ಉಡುಪು ತುಂಬಾ ವಿಭಿನ್ನವಾಗಿರುತ್ತೆ. ಈ ಉಡುಪಿನಲ್ಲಿ ಮಣಿಗಳು, ನಾಣ್ಯಗಳು, ಬೆಳ್ಳಿ ಆಭರಣಗಳು ಸೇರಿದಂತೆ ಹೆಚ್ಚು ಕನ್ನಡಿಗಳನ್ನು ಬಳಕೆ ಮಾಡಲಾಗಿರುತ್ತದೆ. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ನಿರೂಪಕಿ ಅನುಶ್ರೀ ಲಂಬಾಣಿ ಸಮುದಾಯದ ಮಹಿಳೆಯರ ಕಲರ್ ಫುಲ್ ಡ್ರೆಸ್ ಧರಿಸಿದ್ದರು. ಈ ವೇಳೆ ಸಮುದಾಯದ ಬಗ್ಗೆ ಮಾತನಾಡುತ್ತಿದ್ದ ಕಾರ್ಯಕ್ರಮದ ತೀರ್ಪುಗಾರರಾದ ಹಂಸಲೇಖ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ಹಂಸಲೇಖ ಮಾತು:
    ಇದೊಂದು ಸಮಾಜದಿಂದ ಅಲಕ್ಷಿಸಲ್ಪಟ್ಟ ಸಮುದಾಯವಾಗಿದ್ದು, ಇಂದು ಕನ್ನಡದ ಮನೆ ಮಗಳಾಗಿರುವ ಅನುಶ್ರೀ ಲಂಬಾಣಿ ವೇಷಭೂಷಣಗಳನ್ನು ಧರಿಸುವ ಮೂಲಕ ಆ ಸಮುದಾಯಕ್ಕೆ ಗೌರವ ಸಲ್ಲಿಸಿದ್ದಾಳೆ. ಈ ಸಮುದಾಯದವರು ಪತ್ತೆದಾರಿ, ಗೂಢಚರ್ಯೆ ಮತ್ತು ಸುದ್ದಿಗಳನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ರವಾನಿಸುವ ಕೆಲಸ ಮಾಡುತ್ತಿದ್ದರು. ಈ ಸಮುದಾಯದ ಮಹಿಳೆಯರು ಸ್ಫುರದ್ರೂಪಿಗಳು. ಬೇರೆ ಹುಡುಗರು ಹತ್ತಿರಕ್ಕೆ ಬಂದು ಅವರ ಮುಖವನ್ನು ಉಡುಪಿನಲ್ಲಿರುವ ಕನ್ನಡಿಯಲ್ಲಿ ನೋಡಿ ನಾನು ಈಕೆಗೆ ಸರಿಸಾಟಿ ಇಲ್ಲ ಅಂತ ವಾಪಾಸ್ ಹೋಗು ಅಂತಾ ಕನ್ನಡಿಗಳು ಹೇಳುತ್ತವೆ. ಹಾಗಾಗಿ ಮಹಿಳೆಯರ ವೇಷ-ಭೂಷಣಗಳಲ್ಲಿ ಕನ್ನಡಿಯನ್ನು ಬಳಸಲಾಗುತ್ತದೆ. ಈ ಸಮುದಾಯದಲ್ಲಿ ಮಹಿಳೆಯರು ಹೆಚ್ಚು ಬಲಶಾಲಿಗಳು. ಎಂತಹ ಹೋರಾಟಕ್ಕೂ ಸಿದ್ಧವಾಗಿರುತ್ತಾರೆ ಎಂದು ಹಂಸಲೇಖ ಸಮುದಾಯದ ಇತಿಹಾಸವನ್ನು ಪರಿಚಯಿಸಿದರು.

    ಈ ಕಾರ್ಯಕ್ರಮದಲ್ಲಿ ಸ್ಪರ್ಧಿ ಹನುಮಂತನ ತಾಯಿ ಶೀಲವ್ವ ಅವರು ಲಂಬಾಣಿ ಸಮುದಾಯದ ಹಾಡು ಹಾಡಿದ್ದರು. ಲಂಬಾಣಿ ಹಾಡುಗಳಲ್ಲಿ ಕ್ವಾಟರ್ ನೋಟ್ಸ್ ಬಳಕೆ ಮಾಡಲಾಗುತ್ತದೆ. ಅರೇಬಿಕ್ ಹಾಡುಗಳಲ್ಲಿ ಇದೇ ರೀತಿಯ ನೋಟ್ ಗಳಿರುತ್ತವೆ ಎಂದು ಹಂಸಲೇಖ ತಿಳಿಸಿದರು. ಶೀಲವ್ವರ ಹಾಡು ಕೇಳುತ್ತಿದ್ದಂತೆ ಇನ್ನೋರ್ವ ತೀರ್ಪುಗಾರ, ಗಾಯಕ ವಿಜಯ್ ಪ್ರಕಾಶ್ ಎದ್ದು ನಿಂತು ಚಪ್ಪಾಳೆ ಹೊಡೆಯುವ ಮೂಲಕ ಮೆಚ್ಚುಗೆ ಸೂಚಿಸಿದರು.

    ಮಾತು ಉಳಿಸಿಕೊಂಡ ಶೀಲವ್ವ:
    ಈ ಹಿಂದೆ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶೀಲವ್ವರನ್ನು ನೋಡಿದ್ದ ಅನುಶ್ರೀ ನನಗೂ ಇದೇ ರೀತಿ ಬಟ್ಟೆ ಮತ್ತು ಆಭರಣಗಳು ಬೇಕೆಂದು ಕೇಳಿಕೊಂಡಿದ್ದರು. ರಿಯಾಲಿಟಿ ಶೋದಲ್ಲಿಯೂ ಹನುಮಂತನಿಗೆ ನಿಮ್ಮ ತಾಯಿ ಬಟ್ಟೆ ಬೇಕು ಅಂತ ಹೇಳಿದ್ದರು. ಹೀಗಾಗಿ ರಿಯಾಲಿಟಿ ಶೋಗೆ ಆಗಮಿಸಿದ್ದ ಶೀಲವ್ವ ಅವರು ಕೊಟ್ಟ ಮಾತಿನಂತೆ ತಾವೇ ಕೈಯಿಂದ ಕಸೂತಿ ಮಾಡಿದ ಬಣ್ಣ ಬಣ್ಣದ ಉಡುಪನ್ನು ಅನುಶ್ರೀ ಅವರಿಗೆ ನೀಡಿದ್ದರು.

    ಶೀಲವ್ವರು ನೀಡಿದ ಉಡುಗೆಯನ್ನು ಧರಿಸಿದ ಅನುಶ್ರೀ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಮೂವರೊಂದಿಗೆ ಕ್ಲಿಕ್ಕಿಸಿಕೊಂಡ ಸೆಲ್ಫಿ ಫೋಟೋ ಹಾಕಿ ಸಂತೋಷ ವ್ಯಕ್ತಪಡಿಸಿದ್ದಾರೆ.

    https://www.instagram.com/p/BsQCrpuhQN4/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv