Tag: anushka

  • ಮದುವೆ ವದಂತಿ ಬಗ್ಗೆ ಪ್ರಭಾಸ್ ಮೌನ ವಹಿಸಿರೋದ್ಯಾಕೆ?- ಅಂಕಲ್ ಹೀಗಂದ್ರು!

    ಮದುವೆ ವದಂತಿ ಬಗ್ಗೆ ಪ್ರಭಾಸ್ ಮೌನ ವಹಿಸಿರೋದ್ಯಾಕೆ?- ಅಂಕಲ್ ಹೀಗಂದ್ರು!

    ಮುಂಬೈ: ದೇಶಾದ್ಯಂತ ಹವಾ ಸೃಷ್ಟಿಸಿದ್ದ `ಬಾಹುಬಲಿ’ ಚಿತ್ರದ ಬಳಿಕ ನಾಯಕ ನಟ ಪ್ರಭಾಸ್ ಮದುವೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಈ ಮಧ್ಯೆ ಪ್ರಭಾಸ್ ಮನೆಯವರು ಸಾಕಷ್ಟು ಪ್ರಪೋಸಲ್‍ಗಳನ್ನ ಮುಂದಿಟ್ಟಿದ್ದು, ಪ್ರಭಾಸ್ ಯಾವುದಕ್ಕೂ ಇನ್ನೂ ಸಮ್ಮತಿ ನೀಡಿಲ್ಲ ಅಂತ ಅಂಕಲ್ ಕೃಷ್ಣಮ್ ರಾಜು ತಿಳಿಸಿದ್ದಾರೆ. ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿ ಅಳಿಯನಾಗ್ತಾರ ಪ್ರಭಾಸ್?

    ಬಾಹುಬಲಿ ಚಿತ್ರ ಬಿಡುಗಡೆಗೊಂಡ ಬಳಿಕ ಪ್ರಭಾಸ್ ಮತ್ತು ಅನುಷ್ಕಾ ಮದುವೆಯಾಗುತ್ತಾರೆ ಎಂದು ಇತ್ತೀಚಿನವೆರೆಗೆ ಸುದ್ದಿಗಳು ಹರಿದಾಡುತ್ತಿದ್ದವು. ಆದ್ರೆ ಇದೀಗ ಕೆಲ ದಿನಗಳ ಹಿಂದೆಯಷ್ಟೇ ಪ್ರಭಾಸ್ ಅವರು ಮೆಗಾಸ್ಟಾರ್ ಜಿರಂಜೀವಿ ಅಳಿಯನಾಗುತ್ತಾರೆ. ಚಿರಂಜೀವಿ ಅವರ ಸಹೋದರ ನಾಗೇಂದ್ರ ಬಾಬು ಸುಪುತ್ರಿ ನಿಹಾರಿಕಾ ಅವರನ್ನು ಪ್ರಭಾಸ್ ವರಿಸಲಿದ್ದಾರೆ ಅನ್ನೋ ಗಾಸಿಪ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಆದ್ರೆ ಇಷ್ಟೊಂದು ಗಾಸಿಪ್ ಗಳು ಹರಿದಾಡುತ್ತಿದ್ದರೂ ಪ್ರಭಾಸ್ ಮಾತ್ರ ಮೌನ ವಹಿಸಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಈ ಬಾಲಿವುಡ್ ನಟಿ ಮೇಲೆ ಪ್ರಭಾಸ್‍ಗೆ ಕ್ರಷ್ ಅಂತೆ!

    ಈ ಮೊದಲು ಅಂದ್ರೆ ಬಾಹುಬಲಿ ಚಿತ್ರ ಬಿಡುಗಡೆಗೊಂಡಾಗ ಪ್ರಭಾಸ್- ಅನುಷ್ಕಾ ಮಧ್ಯೆ ಲವ್ ಇದೆ. ಹೀಗಾಗಿ ಮದುವೆಯಾಗುತ್ತಾರೆ ಅನ್ನೋ ಸುದ್ದಿ ಹರಿದಾಡಿದಾಗ ನಾವಿಬ್ಬರೂ ಒಳ್ಳೇ ಸ್ನೇಹಿತರು ಎಂದು ಹೇಳೋ ಮೂಲಕ ಪ್ರಭಾಸ್- ಅನುಷ್ಕಾ ಈ ಸುದ್ದಿಯನ್ನ ತಳ್ಳಿ ಹಾಕಿದ್ದರು. ಇದನ್ನೂ ಓದಿ: ಶ್ರದ್ಧಾ ಕಪೂರ್ ಮೊದಲು ಈ ನಟಿಯನ್ನು ಸಾಹೋ ಚಿತ್ರಕ್ಕೆ ಆಫರ್ ಮಾಡಿದ್ರು!

    ಇತ್ತೀಚೆಗೆ ಪ್ರಭಾಸ್ ಅವರ ಅಂಕಲ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಮದುವೆಯ ಬಗ್ಗೆ ಪ್ರಭಾಸ್ ಇನ್ನೂ ಯಾರೊಂದಿಗೆ ತುಟಿ ಬಿಚ್ಚಿಲ್ಲ. ಈಗಾಗಲೇ ಕೆಲವು ಹುಡುಗಿಯರ ಫೋಟೋ ತೋರಿಸಿ ಅವನ ಆಯ್ಕೆಗೆ ಬಿಟ್ಟಿದ್ದೇವೆ. ಆದ್ರೂ ಕೂಡ ಈ ಬಗ್ಗೆ ಆತ ಯಾವುದೇ ಚಕಾರ ಎತ್ತಿಲ್ಲ ಎಂದು ಹೇಳಿದ್ದಾರೆ.

    ಇತ್ತ ಕುಟುಂಬದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೆ ಪ್ರಭಾಸ್ ದುಬೈನಲ್ಲಿ ಸಾಹೋ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಬೇಕಂತಲೇ ಈ ರೀತಿ ಮೌನ ವಹಿಸಿದ್ದಾರಾ? ಅಥವಾ ಅವರ ಮನಸ್ಸಿನಲ್ಲಿ ಬೇರೆ ಯಾರೋ ಇದ್ದು, ಅದನ್ನ ಬಹಿರಂಗಪಡಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರಾ ಎಂಬ ಅನುಮಾನ ಕೂಡ ಮೂಡಿಸಿದೆ.

    https://www.youtube.com/watch?v=s1eobFGHssU

  • 2018 ಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡ್ತಾರಾ ಪ್ರಭಾಸ್-ಅನುಷ್ಕಾ ಜೋಡಿ?

    2018 ಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡ್ತಾರಾ ಪ್ರಭಾಸ್-ಅನುಷ್ಕಾ ಜೋಡಿ?

    ಹೈದರಾಬಾದ್: ಸೌಥ್ ಸಿನಿ ಇಂಡಸ್ಟ್ರಿಯ ಪ್ರಸಿದ್ಧ ಜೋಡಿ, ಕ್ಯೂಟ್ ಹೀರೋ-ಹೀರೋಯಿನ್ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಯಾವಾಗಲು ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿ ಆಗುತ್ತಿರುತ್ತಾರೆ. ಅದರಲ್ಲೂ `ಬಾಹುಬಲಿ 2′ ಚಿತ್ರ ತೆರೆಕಂಡ ನಂತರ ಇವರಿಬ್ಬರ ಆಫ್‍ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಗಾಸಿಪ್‍ಗಳು ಹೆಚ್ಚಾಗುತ್ತಲೇ ಇವೆ.

    ಬಾಹುಬಲಿಯ ನಂತರ ಈ ಜೋಡಿಯ ಮೇಲೆ ಅಭಿಮಾನಿಗಳು ಒಂದು ಕಣ್ಣನ್ನು ಇಡುವಷ್ಟು ಮೋಡಿ ಮಾಡಿದೆ ಈ ಜೋಡಿ. ಸದ್ಯಕ್ಕೆ ಇಬ್ಬರ ನಡುವಿನ ಹೊಸ ಸಮಾಚಾರವೊಂದು ಟಾಲಿವುಡ್ ನಲ್ಲಿ ಹರಿದಾಡುತ್ತಿದೆ.

    ಪ್ರಭಾಸ್ ಅನುಷ್ಕಾ ಅಭಿಮಾನಿಗಳಿಗೆ ಮುಂದಿನ ವರ್ಷ ಸರ್ಪ್ರೈಸ್ ಸಿಗಲಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಸೆನ್ಸಾರ್ ಬೋರ್ಡ್‍ನ ಉಮೈರ್ ಸಂಧು ಟ್ವೀಟ್ ಮಾಡಿ ಹೇಳಿದ್ದಾರೆ. ಸದ್ಯಕ್ಕೆ ಅವರು ಮಾಡಿರುವ ಟ್ವೀಟ್ ನಿಂದ ಎಲ್ಲರಲ್ಲೂ ಕುತೂಹಲ ಕೆರಳಿದೆ.

    ನಂಬಿ ಅಥವಾ ಬಿಡಿ ಆದರೆ ಇದು 100% ಸತ್ಯ. ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದಾರೆ. ಅವರು ರಿಲೇಷನ್‍ಶಿಪ್‍ನಲ್ಲಿದ್ದಾರೆ. ಮುಂದಿನ ವರ್ಷ ಅಂದರೆ 2018 ಇವರ ಅಭಿಮಾನಿಗಳಿಗೆ ಸರ್ಪ್ರೈಸ್ ಸಿಗಲಿದೆ ಎಂದು ಬರೆದು ಅನುಷ್ಕಾ ಮತ್ತು ಪ್ರಭಾಸ್ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಉಮೈರ್ ಸಂಧು ಈ ರೀತಿಯಲ್ಲಿ ಬರೆದು ಟ್ವೀಟ್ ಮಾಡಿದ ಸ್ವಲ್ಪ ಸಮಯದ ನಂತರ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಆದರೆ ಇದು ಸತ್ಯನಾ ಅಥವಾ ಬರಿ ವದಂತಿನಾ ಅಂತಾ ಖಚಿತವಾಗಿ ತಿಳಿದುಬಂದಿಲ್ಲ. ಆದರೆ ಈ ಮಾಹಿತಿಯಿಂದ ಟಾಲಿವುಡ್‍ನಲ್ಲಿ ಈ ಜೋಡಿಯ ಬಗ್ಗೆ ಗಾಸಿಪ್ ಹೆಚ್ಚಾಗಿದೆ.

    ಸದ್ಯಕ್ಕೆ ಅನುಷ್ಕಾ `ಭಾಗಮತಿ’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದು, ಮುಂದಿನ ವರ್ಷ ಜನವರಿ 26 ರಂದು ಚಿತ್ರ ತೆರೆಕಾಣಲಿದೆ. ಪ್ರಭಾಸ್ `ಸಾಹೋ’ ಸಿನಿಮಾದ ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದಾರೆ.

  • ಅನುಷ್ಕಾರನ್ನ ಈ ಅಡ್ಡ ಹೆಸರಿನಿಂದ ಕರೀತಾರಂತೆ ಕೊಹ್ಲಿ

    ಅನುಷ್ಕಾರನ್ನ ಈ ಅಡ್ಡ ಹೆಸರಿನಿಂದ ಕರೀತಾರಂತೆ ಕೊಹ್ಲಿ

    ನವದೆಹಲಿ: ದೀಪಾಳಿಯ ಪ್ರಯುಕ್ತ ಖಾಸಗಿ ವಾಹಿನಿಯೊಂದು ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ತಮ್ಮ ಗೆಳತಿ ಅನುಶ್ಕಾ ಶರ್ಮಾ ಅವರ ಅಡ್ಡ ಹೆಸರನ್ನ ರಿವೀಲ್ ಮಾಡಿದ್ದಾರೆ.

    ಕೊಹ್ಲಿ ಅನುಷ್ಕಾ ಅವರನ್ನ `ನುಷ್ಕಿ’ ಎಂದು ಕರೆಯುತ್ತಾರಂತೆ. ವಾಹಿನಿಯು ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಮಾಡಿದ್ದು, ಇದರಲ್ಲಿ ಅಮೀರ್ ಖಾನ್ ಜೊತೆ ಭಾಗವಹಿಸಿದ್ದ ಕೊಹ್ಲಿ ಮಾತುಕತೆಯ ವೇಳೆ ನುಷ್ಕಿ ಬಹಳ ಪ್ರಮಾಣಿಕಳು ಎಂದು ಹೇಳಿದ್ದಾರೆ.

    ಅಲ್ಲದೆ ನಾನು ಪ್ರೀತಿಯಲ್ಲಿ ಒಮ್ಮೆ ಮಾತ್ರ ಬಿದ್ದಿದ್ದೇನೆ ಎಂದು ಅಮೀರ್ ಖಾನ್‍ರ ಮಾತಿಗೆ ಉತ್ತರಿಸಿದ್ದಾರೆ. ಕೊಹ್ಲಿ ಹಾಗೂ ಅನುಷ್ಕ 2013ರಿಂದಲೂ ರಿಲೇಷನ್‍ಶಿಪ್‍ನಲ್ಲಿದ್ದಾರೆ ಎಂದು ಸುದ್ದಿಯಾಗುತ್ತಲೇ ಬಂದಿದೆ. ಆದ್ರೆ ಈ ಜೋಡಿ ಮಾತ್ರ ಈ ಬಗ್ಗೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿಲ್ಲ. ಕ್ರಿಕೆಟ್ ಮತ್ತು ಬಾಲಿವುಡ್ ನಂಟಿನ ಜನಪ್ರಿಯ ಜೋಡಿ ಎಂದೇ ಕರೆಸಿಕೊಂಡಿದೆ.

    ಈ ಶೋ ನಲ್ಲಿ ಭಾಗವಹಿಸಿದ್ದ ಪತ್ರಕರ್ತ ಸಮೀರ್ ಅಲ್ಲಾ ಎಂಬ ವ್ಯಕ್ತಿ ಟ್ವಿಟ್ಟರ್‍ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಕಾರ್ಯಕ್ರಮದ ವೇಳೆ ಅಮೀರ್ ಅನುಷ್ಕಾರಲ್ಲಿ ಇಷ್ಟವಾದ ಗುಣ ಮತ್ತು ಇಷ್ಟವಿಲ್ಲದ ಗುಣ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, `ನುಷ್ಕಿ ಬಹಳ ಪ್ರಮಾಣಿಕಳು’ ಈ ಗುಣ ನನಗೆ ಇಷ್ಟ ಎಂದಿದ್ದಾರೆ. ಹಾಗೂ ಇಷ್ಟವಿಲ್ಲದ ಗುಣ ಯಾವುದು ಎಂಬ ಪ್ರಶ್ನೆಗೆ ಅನುಷ್ಕಾ ಯಾವಾಗ್ಲೂ 5-7 ನಿಮಿಷ ತಡವಾಗಿ ಆಗಮಿಸುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ.

    ಇತ್ತೀಚೆಗೆ ಅನುಷ್ಕಾ ಕ್ಲೋತಿಂಗ್ ಬ್ರ್ಯಾಂಡ್‍ವೊಂದನ್ನ ಆರಂಭಿಸಿದ್ದು ‘ನುಶ್’ ಎಂದು ಹೆಸರಿಟ್ಟಿದ್ದಾರೆ.

     

     

     

    https://www.instagram.com/p/BZ-ocyPAByx/?hl=en&taken-by=anushkasharma

     

    https://www.instagram.com/p/BWc8u2pAosX/?hl=en&taken-by=virat.kohli

     

    https://www.instagram.com/p/BNpWnmUgNc4/

     

    https://www.instagram.com/p/BO_1QIEAYCF/

  • ಪ್ರಭಾಸ್, ರಾಣಾ, ಅನುಷ್ಕಾ, ತಮನ್ನಾ, ರಮ್ಯಕೃಷ್ಣಗೆ ಎಷ್ಟು ಸಂಭಾವನೆ ಸಿಕ್ಕಿದೆ?

    ಪ್ರಭಾಸ್, ರಾಣಾ, ಅನುಷ್ಕಾ, ತಮನ್ನಾ, ರಮ್ಯಕೃಷ್ಣಗೆ ಎಷ್ಟು ಸಂಭಾವನೆ ಸಿಕ್ಕಿದೆ?

    ಹೈದರಾಬಾದ್: ಬಾಹುಬಲಿ 2 ಬಾಕ್ಸ್ ಆಫೀಸ್‍ನ ಎಲ್ಲ ದಾಖಲೆಗಳನ್ನು ಮುರಿಯುತ್ತಿದ್ದು, ಈಗ ಈ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರಿಗೆ ಎಷ್ಟು ಸಂಭಾವನೆ ನೀಡಲಾಗಿದೆ ಎನ್ನುವ ವಿಚಾರ ಪ್ರಕಟವಾಗಿದೆ.

    ಟೈಮ್ಸ್ ನೌ ವರದಿಯ ಪ್ರಕಾರ, ಕಟ್ಟಪ್ಪ ಪಾತ್ರ ನಿರ್ವಹಿಸಿದ ಸತ್ಯರಾಜ್ ಮತ್ತು ಶಿವಗಾಮಿ ಪಾತ್ರವನ್ನು ನಿರ್ವಹಿಸಿದ ರಮ್ಯಕೃಷ್ಣ ಅವರು  2.25 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

    ಅವಂತಿಕಾ ಪಾತ್ರ ಮಾಡಿದ ತಮನ್ನಾ ಮತ್ತು ದೇವಸೇನಾ ಪಾತ್ರ ನಿರ್ವಹಿಸಿದ ಅನುಷ್ಕಾ ಶೆಟ್ಟಿ ಅವರು 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

    ಬಲ್ಲಾಳದೇವನ ಪಾತ್ರದಲ್ಲಿ ಮಿಂಚಿದ ರಾಣಾ ದಗ್ಗುಬಾಟಿ 15 ಕೋಟಿ ರೂ. ಸಂಭಾವನೆ ಸಿಕ್ಕಿದರೆ, 5 ವರ್ಷಗಳ ಕಾಲ ಬಾಹುಬಲಿಗಾಗಿ ಸಮಯವನ್ನು ಮೀಸಲಿಟ್ಟ ಪ್ರಭಾಸ್ ಗೆ 25 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

    ನಿರ್ದೇಶಕ ರಾಜಮೌಳಿ ಅವರಿಗೆ 28 ಕೋಟಿ ರೂ. ಸಂಬಳ ಸಿಕ್ಕಿದೆ. ಅಷ್ಟೇ ಅಲ್ಲದೇ ಬಾಹುಬಲಿ 1 ಮತ್ತು 2ರ ಬಂದಿರುವ ಲಾಭದಲ್ಲಿ ಮೂರನೇ ಒಂದು ಭಾಗದಷ್ಟು ಹಣ ರಾಜಮೌಳಿಗೆ  ಸಿಗಲಿದೆ ಎನ್ನಲಾಗಿದೆ.

    ಏಪ್ರಿಲ್ 28ಕ್ಕೆ ಬಿಡುಗಡೆಯಾದ ಬಾಹುಬಲಿ ಒಂದೇ ವಾರದಲ್ಲಿ 925 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ 900 ಕೋಟಿ ರೂ. ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಅಮೀರ್ ಖಾನ್ ಅಭಿನಯದ ಪಿಕೆ 792 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

    ಬಾಹುಬಲಿ ಬಿಗ್‍ನಿಂಗ್ 180 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು ಬಾಕ್ಸ್ ಆಫೀಸ್ ನಲ್ಲಿ 650 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

  • ಬಾಹುಬಲಿಗಾಗಿ 5 ವರ್ಷ ಮುಡಿಪಿಟ್ಟ ನಿರ್ದೇಶಕ ರಾಜಮೌಳಿಗೆ ಎಷ್ಟು ಹಣ ಸಿಗುತ್ತೆ ಗೊತ್ತಾ?

    ಬಾಹುಬಲಿಗಾಗಿ 5 ವರ್ಷ ಮುಡಿಪಿಟ್ಟ ನಿರ್ದೇಶಕ ರಾಜಮೌಳಿಗೆ ಎಷ್ಟು ಹಣ ಸಿಗುತ್ತೆ ಗೊತ್ತಾ?

    ಹೈದರಾಬಾದ್: ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದ್ದು, ಹಲವಾರು ದಾಖಲೆಗಳನ್ನ ಬರೆದಿದೆ. ಚಿತ್ರದಲ್ಲಿ ನಟಿಸಿರೋ ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ ಮುಂತಾದ ನಟ ನಟಿಯರನ್ನ ಸಿನಿರಸಿಕರು ಕೊಂಡಾಡಿದ್ದಾರೆ. ಇವರ ಮಧ್ಯೆ ನಿರ್ದೇಶಕ ರಾಜಮೌಳಿ ಕೂಡ ಹಿಂದೆ ಉಳಿದಿಲ್ಲ. ಭಾರತೀಯ ಚಿತ್ರರಂಗದಲ್ಲೇ ಎಸ್‍ಎಸ್ ರಾಜಮೌಳಿ ಯಶಸ್ವಿ ನಿರ್ದೇಶಕರೆನಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಮೊದಲ ದಿನವೇ ನೂರು ಕೋಟಿ ಬಾಚಿದ ಬಾಹುಬಲಿ: ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್? ಉಳಿದ ಕಡೆ ಎಷ್ಟು?

    ಬಾಹುಬಲಿ ಚಿತ್ರದ ಬಜೆಟ್ ಎಷ್ಟು, ಬಿಡುಗಡೆಯಾದ್ಮೇಲೆ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಎಂಬುದರ ಬಗ್ಗೆ ಈಗಾಗಲೇ ಸುದ್ದಿಯಾಗಿದೆ. ಆದರೆ ಬಾಹುಬಲಿ ಭಾಗ-1 ಹಾಗೂ 2ಕ್ಕೆ ನಿರ್ದೇಶಕ ರಾಜಮೌಳಿ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಅನ್ನೋದು ಗೊತ್ತಾ? 5 ವರ್ಷಗಳ ಕಾಲ ತಮ್ಮ ಬದುಕು ಮತ್ತು ಸಮಯವನ್ನ ಬಾಹುಬಲಿ ಮತ್ತು ಬಾಹುಬಲಿ ದಿ ಕನ್‍ಕ್ಲೂಷನ್ ಚಿತ್ರಕ್ಕಾಗಿ ಮುಡಿಪಿಟ್ಟ ರಾಜಮೌಳಿ ಅವರಿಗೆ ಎರಡೂ ಚಿತ್ರಗಳ ಲಾಭದಲ್ಲಿ 3ನೇ ಒಂದು ಭಾಗಷ್ಟು ಹಣ ಸಿಗಲಿದೆ. ಅಲ್ಲದೆ ಅವರು ಈ 5 ವರ್ಷಗಳಲ್ಲಿ ಚಿತ್ರದ ಮೇಕಿಂಗ್‍ನಲ್ಲಿ ಭಾಗಿಯಾಗಿದ್ದರಿಂದ ಅವರ ಸ್ವಂತ ಖರ್ಚುಗಳನ್ನೂ ನಿರ್ಮಾಪಕರು ಭರಿಸಿದ್ದಾರೆ ಎಂದು ವರದಿಯಾಗಿದೆ.

    ಎರಡೂ ಚಿತ್ರಗಳಿಗಾಗಿ ಬರೋಬ್ಬರಿ 450 ಕೋಟಿ ರೂ. ಖರ್ಚು ಮಾಡಲಾಗಿದ್ದು, ಈಗಾಗಲೇ ಭಾರೀ ಲಾಭ ಗಳಿಸಿದೆ. ಒಪ್ಪಂದದ ಪ್ರಕಾರ ರಾಜಮೌಳಿ ಲಾಭದ ಮೂರನೇ ಒಂದು ಭಾಗದಷ್ಟು ಹಣವನ್ನ ತೆಗೆದುಕೊಳ್ಳಲಿದ್ದಾರೆ. ಎಲ್ಲಾ ನಾಲ್ಕು ಭಾಷೆಗಳಲ್ಲಿ ಬಾಹುಬಲಿ-2 ಚಿತ್ರದ ಸ್ಯಾಟಿಲೈಟ್ ಮತ್ತು ಇತರೆ ರೈಟ್ಸ್ ಗಳು 438 ಕೋಟಿ ರೂ. ಗೆ ಮಾರಾಟವಾಗಿದೆ.

    ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ


  • ಕಲ್ಪನಾ ಲೋಕಕ್ಕೆ ಹೊಸ ಭಾಷ್ಯ ಬರೆದ ಬಾಹುಬಲಿ-2 ಚಿತ್ರದ ಫಸ್ಟ್ ರಿಪೋರ್ಟ್

    ಕಲ್ಪನಾ ಲೋಕಕ್ಕೆ ಹೊಸ ಭಾಷ್ಯ ಬರೆದ ಬಾಹುಬಲಿ-2 ಚಿತ್ರದ ಫಸ್ಟ್ ರಿಪೋರ್ಟ್

    – ಮಹೇಶ್ ದೇವಶೆಟ್ಟಿ
    ಬೆಂಗಳೂರು: ಎಲ್ಲರೂ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದ ಸಮಯ ದಿ ಎಂಡ್‍ಗೆ ಬಂದಿದೆ. ಎರಡು ವರ್ಷಗಳನ್ನು ಎಣಿಸಿ ಎಣಿಸಿ ಕಳೆದ ಬಾಹುಬಲಿ ಅಭಿಮಾನಿಗಳಿಗೆ ಕೊನೆಗೂ ತಥಾಸ್ತು ಎಂದಿದ್ದಾರೆ ನಿರ್ದೇಶಕ ರಾಜಮೌಳಿ. ಮೊದಲ ದಿನ ಮೊದಲ ಶೋ ನೋಡಲು ಜನರು ತುದಿಗಾಲಲ್ಲಿ ನಿಂತಿದ್ದರು. ಅದರ ಫಲಿತಾಂಶ ಏನಾಗಿದೆ? ಬಾಹುಬಲಿ ಪಾರ್ಟ್ 2 ಜನರ ಮನಸನ್ನು ಗೆದ್ದನಾ? ಅಥವಾ ತಲೆ ತಗ್ಗಿಸುವಂತೆ ಮಾಡಿದನಾ? ಬಾಹುಬಲಿ 2 ಸಿನಿಮಾದ ಫಸ್ಟ್ ರಿಪೋರ್ಟ್ ನಿಮ್ಮ ಮುಂದೆ.

    ಮೈಯನ್ನು ಆಚೆ ಈಚೆ ತಿರುಗಿಸಬಹುದು. ಕಾಲನ್ನು ಎತ್ತಿ ಇನ್ನೊಂದು ಕಾಲಿನ ಮೇಲೆ ಹಾಕಬಹುದು. ಆದರೆ ಒಂದನ್ನು ಮಾತ್ರ ಯಾರೂ ಅಲುಗಾಡಿಸುವುದಿಲ್ಲ, ಕ್ಷಣಕ್ಕೂ ಪಕ್ಕಕ್ಕೆ ತಿರುಗಿಸುವುದಿಲ್ಲ. ಅದನ್ನು ಕಣ್ಣು ಎಂದು ಕರೆಯುತ್ತಾರೆ. ಹಾಗೆ ಮಾಡುತ್ತಿದ್ದರೆ ಅವರು ಬಾಹುಬಲಿ 2 ನೋಡುತ್ತಿದ್ದಾರೆನ್ನುವುದು ಸತ್ಯಸ್ಯ ಸತ್ಯ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೀಗೊಂದು ಸಿನಿಮಾ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ ಎಸ್‍ಎಸ್ ರಾಜಮೌಳಿ. ಇದು ಬಾಹುಬಲಿಯನ್ನು ನೋಡಿದವರ ಒನ್ ಲೈನ್ ವಿಮರ್ಶೆ.

    ಎಲ್ಲಿಂದ ಆರಂಭಿಸಬೇಕು? ಈ ಚಿತ್ರವನ್ನು ವಿಮರ್ಶೆ ಮಾಡುವವರಿಗೆ ಕಾಡುವ ಮೊದಲ ಪ್ರಶ್ನೆಯೂ ಇದೆ, ಕೊನೇ ಪ್ರಶ್ನೆಯೂ ಇದೆ. ಯಾಕೆಂದರೆ ಉಳಿದ ಯಾವುದೇ ಪ್ರಶ್ನೆಯನ್ನು ಕೇಳದಂಥ ಐತಿಹಾಸಿಕ ಕಮ್ ಜನಪದ ಕಥನವನ್ನು ಕಣ್ಣ ಮುಂದೆ ಹರವಿಟ್ಟಿದ್ದಾರೆ ರಾಜಮೌಳಿ. ಇದನ್ನು ನೋಡುತ್ತಾ ನೋಡುತ್ತಾ ಮೊದಲ ಭಾಗ ಮರೆತರೂ ಅಚ್ಚರಿ ಇಲ್ಲ. ಯಾಕೆಂದರೆ ಅದರಲ್ಲಿ ನೀವು ನೋಡಿದ್ದು ಕೇವಲ ಹತ್ತು ಪರ್ಸೆಂಟ್ ಹಂಗಾಮಾ. ಅದರೆ ಭಾಗ ಎರಡರಲ್ಲಿ ಪ್ರತಿ ಫ್ರೇಮೂ ಹಬ್ಬದಡುಗೆ ಸಂಭ್ರಮ. ಈ ಸೀನ್ ಸೂಪರ್ ಎನ್ನುವಷ್ಟರಲ್ಲಿ ಸೂಪರ್ ಡೂಪರ್ ಸೀನ್ ಎದ್ದು ನಿಂತಿರುತ್ತದೆ.

    ಔಟ್ ಆಫ್ ದಿ ಬಾಕ್ಸ್: ಪ್ರೀತಿ, ಪ್ರಣಯ, ಕಾಮಿಡಿ, ಸೆಂಟಿಮೆಂಟು, ಸೇಡು, ದ್ವೇಷ, ಪ್ರತಿಕಾರ, ಹಠ, ಶಕ್ತಿ, ಯುಕ್ತಿ….. ಇವೆಲ್ಲವೂ ಸೇರಿದರೆ ಅಲ್ಲೊಂದು ಬಾಹುಬಲಿ ಜಗಮಗಿಸುತ್ತಾನೆ. ಹಾಗೆ ನೋಡಿದರೆ ಈ ರೀತಿಯ ಕತೆಗಳನ್ನು ಎಂಟು ಹತ್ತು ಸಾಲಿನಲ್ಲಿ ಹೇಳಬಹುದು. ಅದರೆ ಅದನ್ನು ನಿರೂಪಿಸುವ ಕಲ್ಪನಾತೀತ ದೃಶ್ಯಗಳಿವೆಯಲ್ಲ. ಅದನ್ನು ಊಹಿಸಲೂ ಸಾಧ್ಯ ಇಲ್ಲ. ಅಕಸ್ಮಾತ್ ಊಹಿಸಿಕೊಂಡರೂ ಅದನ್ನು ತೆರೆ ಮೇಲೆ ತರುವುದು ಸಾಧ್ಯವೇ? ಈ ಪ್ರಶ್ನೆ ರಾಜಮೌಳಿ ಕತೆ ಹೇಳಿದಾಗ ಸಂಬಂಧಪಟ್ಟವರಿಗೆ ತಲೆ ತಿಂದಿರುತ್ತದೆ. ಯಾಕೆಂದರೆ ಮೌಳಿಯ ಲೋಕವೇ ಔಟ್ ಆಫ್ ದಿ ಬಾಕ್ಸ್.

    ಇದನ್ನೂ ಓದಿ:ಬೆಂಗ್ಳೂರಿನಲ್ಲಿ ಬಾಹುಬಲಿ ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ!

    ಅದೆಂಥಾ ದೃಶ್ಯಗಳನ್ನು ಹೆಣೆದಿದ್ದಾರೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಒಂದು ಸ್ಯಾಂಪಲ್. ಶಿವಗಾಮಿ ದುಷ್ಟ ಸಂಹಾರ ಮಾಡಲು ವಿಗ್ರಹಕ್ಕೆ ಬೆಂಕಿ ಇಡಲು ಹೋಗುತ್ತಿರುತ್ತಾಳೆ. ಯಾರು ಅಡ್ಡ ಬಂದರೂ ಆಕೆ ನಿಲ್ಲಬಾರದು. ನಿಂತರೆ ರಾಜ್ಯದ ಸರ್ವನಾಶ ಗ್ಯಾರಂಟಿ ಎನ್ನುವುದು ಅವರ ನಂಬಿಕೆ. ಆಕೆ ತಲೆ ಮೇಲೆ ಬೆಂಕಿ ಕೆಂಡದ ಮಡಕೆ ಇಟ್ಟುಕೊಂಡು ನಡೆಯುತ್ತಿರುತ್ತಾಳೆ. ಆಗ ಹದಿನೈದು ಇಪ್ಪತ್ತು ಅಡಿಯ ದೈತ್ಯ ಆನೆ ಆಕೆಯನ್ನು ತುಳಿಯಲು ಬರುತ್ತದೆ. ಆಕೆ ಕದಲುವುದಿಲ್ಲ, ಅಂಜುವುದೂ ಇಲ್ಲ. ಆನೆಯನ್ನು ಯಾರು ತಡೆಯುತ್ತಾರೆಂದು ಎಲ್ಲರಿಗೂ ಗೊತ್ತು. ಅದರೆ ಹೇಗೆ ಅನ್ನೋದೇ ಕುತೂಹಲದ ತುತ್ತ ತುದಿ ಪ್ರಶ್ನೆ. ಆಗ ತೆರೆ ಮೇಲೆಲ್ಲಾ ಧೂಳು, ಏನಾಗುತ್ತಿದೆ ಎನ್ನುವಷ್ಟರಲ್ಲಿ ಪ್ರಭಾಸ್ ಒಂದು ತೇರನ್ನು ಎಳೆದುಕೊಂಡು ಫಸ್ಟ್ ಎಂಟ್ರಿ ಕೊಡುತ್ತಾರೆ. ಆನೆಗಿಂತ ಎತ್ತರವಾದ ಆ ತೇರನ್ನು ಅಡ್ಡ ನಿಲ್ಲಿಸುತ್ತಾರೆ. ಅದಕ್ಕೆ ಗುದ್ದಿದ ಆನೆ ನೆಲಕ್ಕೆ ಒರಗುತ್ತದೆ. ತೇರಿನ ಮೇಲೆರಿದರೆ ಅಲ್ಲಿರುತ್ತದೆ ಗಣೇಶನ ದೈತ್ಯ ವಿಗ್ರಹ, ಆನೆ ಮಂಡಿ ಊರುತ್ತದೆ. ಬಾಹುಬಲಿ ಅದರ ಸೊಂಡಿಲಿಂದ ಮೇಲೇರಿ ಬೆನ್ನ ಮೇಲೆ ನಿಲ್ಲುತ್ತಾನೆ. ಆನೆ ಸೊಂಡಿಲಿನಿಂದ ಬಿಲ್ಲನ್ನು ಹಿಡಿದುಕೊಂಡಿದ್ದರೆ, ಬಾಹುಬಲಿ ಅದರಿಂದಲೇ ಬಾಣವನ್ನು ಬಿಟ್ಟು ಆ ದುಷ್ಟ ಸಂಹಾರ ವಿಗ್ರಹಕ್ಕೆ ಬೆಂಕಿ ಇಡುತ್ತಾನೆ.

    ಇದು ಕೇವಲ ಒಂದು ದೃಶ್ಯ. ಇಂಥ ಹಲವಾರು ಮೈನವಿರೇಳಿಸುವ ದೃಶ್ಯಗಳು ನಿಮ್ಮನ್ನು ಇಲ್ಲಿವರೆಗೆ ಕಾಣದ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಈ ಶತ್ರುಗಳನ್ನು ಹೇಗೆ ಸದೆ ಬಡಿಯುತ್ತಾನೊ, ಈ ಅಪಾಯದಿಂದ ಹೇಗೆ ಪಾರಾಗುತ್ತಾರೊ, ಇನ್ನೇನು ಕತೆ ಮುಗಿಯಿತು…ಈ ಅನಿಸಿಕೆಗಳು ಕೆಲವು ದೃಶ್ಯಗಳನ್ನು ನೋಡುವಾಗ ಮೂಡಿರುತ್ತವೆ. ಆದರೆ ಬಾಹುಬಲಿ ಎಲ್ಲವನ್ನೂ ಎಡಗೈಯಿಂದ ನಿಭಾಯಿಸುತ್ತಾನೆ. ಶಕ್ತಿಗಿಂತ ಯುಕ್ತಿಯೂ ನಾಯಕನಿಗೆ ಬೇಕು ಎಂದು ಸಾಬೀತುಪಡಿಸುತ್ತಾನೆ.

    `ಬಾಹುಬಲಿ 2 ಸಿನಿಮಾ ಬಂದ ಮೇಲೆ ಭಾರತದ ಎಲ್ಲಾ ನಿರ್ದೇಶಕರನ್ನು ಜನರು ಟಿವಿ ಸೀರಿಯಲ್ ಡೈರೆಕ್ಟರ್ ಥರ ನೋಡ್ತಾರೆ…’ ಹೀಗಂತ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದರು. ಇದನ್ನು ನೋಡಿ ಹೊರ ಬಂದ ಮೇಲೆ ಆ ವ್ಯಕ್ತಿ ಹೇಳಿದ್ದರಲ್ಲಿ ಅತಿಶಯೋಕ್ತಿ ಇಲ್ಲ ಅನ್ನಿಸೋದು ಖಂಡಿತ. ರಾಜಮೌಳಿ ಸತತ ಐದು ವರ್ಷ ಇದಕ್ಕಾಗಿ ಬೆವರು ಹರಿಸಿಲ್ಲ, ರಕ್ತವನ್ನು ಬಸಿದು ಮೊಗೆ ಮೊಗೆದು ಸುರಿದಿದ್ದಾರೆ. ಅದು ಪ್ರತಿ ಫ್ರೇಮ್‍ನಲ್ಲಿ ಕಣ್ಣಿಗೆ ಕುಕ್ಕುತ್ತದೆ. ನಿಜಕ್ಕೂ ನಾವು ಸಿನಿಮಾ ನೋಡುತ್ತಿದ್ದೇವಾ ಅಥವಾ ಇನ್ಯಾವುದೊ ಕಾಲದಲ್ಲಿ ಬದುಕುತ್ತಿದ್ದೇವಾ ಎನ್ನುವ ಅನುಮಾನ ಹುಟ್ಟುವುದು ಇದರ ಗೆಲುವಿಗೆ ಮೊದಲ ಮತ್ತು ಅಂತಿಮ ಕಾರಣ.

    ಬಾಹುಬಲಿಯ ಕತೆಯನ್ನು ಒಂದೇ ಸಾಲಿನಲ್ಲಿ ಹೇಳಿ ಮುಗಿಸಬಹುದು. ಇಬ್ಬರು ದಾಯಾದಿಗಳಲ್ಲಿ ಸಿಂಹಾಸನ ಯಾರ ಪಾಲಾಗುತ್ತದೆ? ಸಿಂಹಾಸನಕ್ಕಿಂತ ಕೊಟ್ಟ ಮಾತು ಮುಖ್ಯ ಎನ್ನುವ ಬಾಹುಬಲಿ, ಯಾರನ್ನು ಕೊಂದಾದರೂ ಸರಿ ಪಟ್ಟವನ್ನು ಪಡೆಯಬೇಕೆನ್ನುವ ಬಲ್ಲಾಳ ದೇವ. ಇದಕ್ಕಾಗಿ ನಡೆಯುವ ಸಂಚು, ಕುಯುಕ್ತಿ, ಸುಳ್ಳು…ಇದರ ಸುತ್ತ ಕತೆ ಸಾಗುತ್ತದೆ. ಅದು ಮುಖ್ಯ ಅಲ್ಲ. ಇಂಥ ಸರಳ ಕತೆಯನ್ನು ಎಷ್ಟು ಅದ್ಭುತವಾಗಿ ತೆರೆ ಮೇಲೆ ತೋರಿಸಿದ್ದಾರೆ ಅನ್ನೋದು ಮುಖ್ಯಾತಿ ಮುಖ್ಯ. ಒನ್ಸ್ ಅಗೇನ್ ರಾಜಮೌಳಿಯ ಕಲ್ಪನಾ ಲೋಕ ಎಲ್ಲರಲ್ಲಿ ಮಹಾ ಅಚ್ಚರಿ ಮೂಡಿಸುತ್ತದೆ.

    ಇದನ್ನೂ ಓದಿ: ಟಿಕೆಟ್ ಬುಕ್ಕಿಂಗ್‍ನಲ್ಲೂ ಹೊಸ ದಾಖಲೆ: 24 ಗಂಟೆಯಲ್ಲಿ ಎಷ್ಟು ಬಾಹುಬಲಿ ಟಿಕೆಟ್ ಮಾರಾಟವಾಗಿದೆ ಗೊತ್ತಾ?

    ಅಣ್ಣಾವ್ರನ್ನ ನೆನಪಿಸ್ತಾರೆ ಪ್ರಭಾಸ್: ಬಾಹುಬಲಿಯಾಗಿ ಪ್ರಭಾಸ್ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಆ ದೈತ್ಯ ದೇಹಿ ಬರುತ್ತಿದ್ದರೆ ಅದ್ಯಾವುದೊ ಗ್ರೀಕ್ ಮ್ಯಾಚೋ ಮ್ಯಾನ್ ಖದರ್ ಕಾಣುತ್ತದೆ. ಬಾಡಿ ಲ್ವಾಂಗ್ವೆಜ್, ಡೈಲಾಗ್ ಡೆಲಿವರಿ, ಫೈಟಿಂಗ್ ಸೀಕ್ವೆನ್ಸ್, ಸೆಂಟಿಮೆಂಟ್ ಸೀನ್ಸ್, ರೊಮ್ಯಾಂಟಿಕ್ ಸಾಂಗ್ಸ್…ಉಹುಂ…ಯಾವುದಕ್ಕೂ ಮೋಸ ಮಾಡಿಲ್ಲ. ಆ ಪಾತ್ರಕ್ಕಾಗಿ ಪ್ರಭಾಸ್ ಪಟ್ಟ ಶ್ರಮ, ಮಾಡಿದ ಕಸರತ್ತು, ಹರಿಸಿದ ಬೆವರು ಪ್ರತಿ ದೃಶ್ಯದಲ್ಲಿ ಕಣ್ಣಿಗೆ ಹೊಡೆಯುತ್ತದೆ. ಈ ಪಾತ್ರದಲ್ಲಿ ಪ್ರಭಾಸ್ ಬಿಟ್ಟು ಇನ್ನೊಬ್ಬರನ್ನು ಊಹಿಸಲೂ ಸಾಧ್ಯ ಇಲ್ಲ. ಅಂದ ಹಾಗೆ ಕೆಲವು ದೃಶ್ಯಗಳಲ್ಲಿ ಪ್ರಭಾಸ್ ಅಣ್ಣಾವ್ರನ್ನ ನೆನಪಿಸುತ್ತಾರೆ. ಕತೆಗಾರ ವಿಜಯೇಂದ್ರ ಪ್ರಸಾದ್ ಕನ್ನಡದ ಮಯೂರ ನೋಡಿದ್ದು ಅದಕ್ಕೆ ಪ್ರೇರಣೇಯಾ? ಗೊತ್ತಿಲ್ಲ.

    ಅನುಷ್ಕಾ ಫುಲ್ ರೋರಿಂಗ್: ಬಲ್ಲಾಳ ದೇವನಾಗಿ ರಾಣಾ ದಗ್ಗುಬಾಟಿ ಈಸ್ ಅಮೇಜಿಂಗ್. ಹೆಚ್ಚು ಮಾತಿಲ್ಲ. ಕಣ್ಣಿನಲ್ಲೇ ಎಲ್ಲವನ್ನೂ ಕಾರುವ ನಂಜಿನ ವಿಲನ್. ಅಧಿಕಾರಕ್ಕಾಗಿ ಹೆತ್ತ ಅಮ್ಮನನ್ನೇ ಕೊಲ್ಲಲು ತಯಾರಾಗುವ ಸಿಂಹಾಸನ ದಾಹಿಯಾಗಿ ಲೈಫ್ ಟೈಮ್ ಕೆಪಾಸಿಟಿ ತೋರಿಸಿದ್ದಾರೆ. ದೇವಸೇನಾ ಪಾತ್ರದ ಅನುಷ್ಕಾ ಶೆಟ್ಟಿ ಬಗ್ಗೆ ಕೆಮ್ಮಂಗಿಲ್ಲ. ಆಕ್ಷನ್, ರೊಮ್ಯಾನ್ಸ್, ಸೆಂಟಿಮೆಂಟ್ ಎಲ್ಲವನ್ನೂ ನುಂಗಿ ನೀರು ಕುಡಿದಿದ್ದಾರೆ. ಹರೆಯದ ಹುಡುಗಿಯಾಗಿ, ಮಹೇಂದ್ರ ಬಾಹುಬಲಿಯ ವೃದ್ಧೆ ತಾಯಿಯಾಗಿ ಅನುಷ್ಕಾ ಸೂಪರ್. ನಾಸರ್, ಕಟ್ಟಪ್ಪ ಅಗೇನ್ ಸ್ಕೋರ್ ಮಾಡಿದ್ದಾರೆ.

    ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದೇಕೆ?: ಕಳೆದ ಎರಡು ವರ್ಷಗಳಿಂದ ಎಲ್ಲರ ಕಿವಿಗಳನ್ನು ಇಷ್ಟಗಲ ಬಿಟ್ಟುಕೊಂಡು ಓಡಾಡುವಂತೆ ಮಾಡಿದ್ದು ಒಂದೇ ಪ್ರಶ್ನೆ. ಅದೇ ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ? ಹೊಟ್ಟೆಯಲ್ಲಿ ಹುಟ್ಟಿದ ಮಗನಂತೆ ಬೆಳಸಿದ ಕಟ್ಟಪ್ಪನಿಗೆ ಅಂಥ ಮನಸು ಬಂತಾದರೂ ಹೇಗೆ? ಅದಕ್ಕೆ ಯಾರು ಕಾರಣ? ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತಿನ ತುಂಬಾ ಇದೊಂದು ಉತ್ತರ ಇಲ್ಲದ ಪ್ರಶ್ನೆ ವೈರಲ್ ಆಗಿತ್ತು. ಅದಕ್ಕೆ ಎರಡನೇ ಭಾಗದಲ್ಲಿ ಉತ್ತರ ಸಿಗುತ್ತದೆ. ಉತ್ತರ ಏನೆಂದು ನಮಗೂ ಗೊತ್ತು. ಆದರೆ ಇಲ್ಲಿಯೇ ಅದನ್ನು ಹೇಳಿದರೆ ಸಿನಿಮಾ ನೋಡದವರು ಏನು ಮಾಡಬೇಕು? ಥೇಟರ್‍ಗೆ ಹೋಗಿ ಉತ್ತರ ಪಡೆದು ಸಮಾಧಾನ ಪಡಿ. ಆದರೆ ಒಂದು ಮಾತು. ಎಲ್ಲವೂ ಗೊತ್ತಾದ ಮೇಲೆ ಕೊಂಚ ನಿರಾಸೆ ಆಗೋದು ಖಂಡಿತ. ಯಾಕೆಂದರೆ ಇಷ್ಟೇನಾ ಕಾರಣ ಅನಿಸುವ ಆ ದೃಶ್ಯ. ರಾಜಮೌಳಿ ಅದೊಂದರಲ್ಲಿ ಸ್ವಲ್ಪ ಎಡವಿದ್ದಾರೆ.

    ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಏಕೆ? – ಮಿಲಿಯನ್ ಡಾಲರ್ ಪ್ರಶ್ನೆಗೆ ಇಲ್ಲಿದೆ ಉತ್ತರ

    ಕೀರವಾಣಿ ಸಂಗೀತಕ್ಕೆ ಉಸಿರೆತ್ತುವ ಹಾಗಿಲ್ಲ: ಹಾಗಂತ ಕತೆಯ ಓಟಕ್ಕೆ ಧಕ್ಕೆಯಾಗುವುದಿಲ್ಲ. ಯಾಕೆಂದರೆ ಆ ಉತ್ತರ ಸಿಗುವ ಹೊತ್ತಿಗೆ ನಿಮಗೆ ಮೊದಲ ಭಾಗದ ಆ ಪ್ರಶ್ನೆಯ ನೆನಪು ಒಂದಿಷ್ಟು ಮಾತ್ರ ಉಳಿದಿರುತ್ತದೆ. ಕಾರಣ ಅದಾಗಲೇ ಅಮರೇಂದ್ರ ಬಾಹುಬಲಿಯ ಆರ್ಭಟ, ಆ ಅಮೋಘ ಯುದ್ಧದ ಸನ್ನಿವೇಶಗಳು, ಸಮ್ಮೋಹನಗೊಳಿಸುವ ಲೋಕಗಳು ಇವೆಲ್ಲಾ ನಿಮ್ಮನ್ನು ಆವರಿಸಿಕೊಂಡಿರುತ್ತವೆ. ವಾಟ್ ನೆಕ್ಸ್ಟ್ ಎಂದು ಮನಸು ಕೇಳುತ್ತಿರುತ್ತದೆ. ಹೀಗಾಗಿ ಕಟ್ಟಪ್ಪ ಸೈಡಿಗೆ ಸರಿದಿರುತ್ತಾನೆ. ಇನ್ನು ಎಂಎಂ ಕೀರವಾಣಿ ಸಂಗೀತಕ್ಕೆ ನೂರಕ್ಕೆ ನೂರು ಅಂಕ ಕೊಟ್ಟು ಕೇಕೆ ಹಾಕಬಹುದು. ಕೆಲವು ದೃಶ್ಯಗಳನ್ನು ಆಕಾಶಕ್ಕೇರಿಸುತ್ತಾರೆ ಕೀರವಾಣಿ. ಸೆಂದಿಲ್ ಕುಮಾರ್ ಕ್ಯಾಮೆರಾ ಕೆಲಸದ ಬಗ್ಗೆ ಉಸಿರೆತ್ತುವ ಹಾಗಿಲ್ಲ.

    ಆಕ್ಷನ್ ದೃಶ್ಯಗಳನ್ನು ಕಂಪೋಸ್ ಮಾಡಿದವರು ಅದೆಷ್ಟು ಹೈರಾಣಾಗಿದ್ದಾರೊ, ಸಾವಿರಾರು ಜನರನ್ನು ಸೇರಿಸಲು ಮೌಳಿ ಅದ್ಯಾವ ಪರಿ ಸುಸ್ತಾಗಿದ್ದಾರೊ, ಗ್ರಾಫಿಕ್ಸ್, ವಿಎಫ್‍ಎಕ್ಸ್, ಸ್ಪೆಶಲ್ ಎಫೆಕ್ಟ್, ಕಾಸ್ಟ್ಯೂಮ್ ಡಿಸೈನರ್, ಮೇಕಪ್ ಮೆನ್, ಎಡಿಟರ್, ಆರ್ಟ್ ಡೈರೆಕ್ಟರ್ ಒಬ್ಬೊಬ್ಬರೂ ಜೀವವನ್ನೇ ತೇದಿದ್ದಾರೆ. ರಾಜಮೌಳಿ ಕತೆಗೆ ಜೀವ ತುಂಬಿದ್ದಾರೆ. ಯಾರ್ಯಾರೊ ಯಾವ್ಯಾವುದೊ ಉದ್ದೇಶದಿಂದ ಸಿನಿಮಾ ಮಾಡುತ್ತಾರೆ. ಆದರೆ ರಾಜಮೌಳಿಯಂಥವರು ಸಿನಿಮಾಕ್ಕಾಗಿ ಸಿನಿಮಾ ಮಾಡುತ್ತಾರೆ. ಅದು ಅವರ ಉಸಿರಲ್ಲ, ರಕ್ತದಲ್ಲೇ ಬೆರೆತು ಬಿಟ್ಟಿದೆ. ಕನಸುಗಳಿಗೆ ಬಣ್ಣ ಬಳಿದು, ಕ್ಯಾಮೆರಾ ಹಿಂದಿಟ್ಟು ನಮ್ಮನ್ನೆಲ್ಲಾ ಮೂರು ಗಂಟೆ ಮೂಕರಾಗಿಸುತ್ತಾರಲ್ಲ. ಆ ಸಿನಿಮಾ ತಪಸ್ವಿಗೊಂದು ಸಲಾಂ ಹೇಳಿ. ಅದು ನಾವು ಅವರಿಗೆ ಕೊಡುವ ದೊಡ್ಡ ಗೌರವ.

  • ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಏಕೆ? – ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಕ್ತು ಉತ್ತರ

    ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಏಕೆ? – ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಕ್ತು ಉತ್ತರ

    ಬೆಂಗಳೂರು: ಬಾಹುಬಲಿ 1 ಸಿನಿಮಾ ನೋಡಿದಾಗಿನಿಂದ ಜನ ಕೇಳುತ್ತಿದ್ದದ್ದು ಒಂದೇ ಪ್ರಶ್ನೆ. ಬಾಹುಬಲಿಯನ್ನ ಕಟ್ಟಪ್ಪ ಕೊಂದಿದ್ಯಾಕೆ ಅಂತ. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

    ಇದನ್ನೂ ಓದಿ:ಬೆಂಗ್ಳೂರಿನಲ್ಲಿ ಬಾಹುಬಲಿ ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ!

    ಕುಂತಲಾ ಸಾಮ್ರಾಜ್ಯದ ಯುವರಾಣಿ ದೇವಸೇನಳ ಪ್ರೀತಿಯ ಪಾಶದಲ್ಲಿ ಬಾಹುಬಲಿ ಸಿಕ್ಕಿಬಿದ್ದರೆ ಬಲ್ಲಾಳ ವ್ಯಾಮೋಹಿಯಾಗುತ್ತಾನೆ. ಈ ವಿಚಾರ ಅರಿತ ಶಿವಗಾಮಿ ತನ್ನ ಮಗ ಬಾಹುಬಲಿ ತನ್ನ ಮಾತು ಮೀರಲ್ಲ ಅಂತ ತಿಳಿದು ದೇವಸೇನಳ ಪ್ರೀತಿಯಿಂದ ಹೊರಬರುವಂತೆ ಹೇಳುತ್ತಾಳೆ. ಇದಕ್ಕೆ ತನಗೆ ಪಟ್ಟಾಭಿಷೇಕ ಇಲ್ಲದಿದ್ದರೂ ಸರಿಯೇ ದೇವಸೇನಳನ್ನ ಬಿಡೋದಿಲ್ಲ ಎಂಬ ಬಾಹುಬಲಿ ಮಾತಿನಿಂದ ಶಿವಗಾಮಿ ವ್ಯಾಘ್ರಳಾಗುತ್ತಾಳೆ. ಇದ್ರಿಂದ ಕುಪಿತವಾಗಿ ಬಾಹುಬಲಿಗೆ ಬದಲಾಗಿ ಬಲ್ಲಾಳನನ್ನು ಮಾಹಿಷ್ಮತಿಯ ಚಕ್ರಾಧಿಪತಿಯನ್ನಾಗಿ ಮಾಡುತ್ತಾಳೆ.

    ಆದ್ರೆ, ತಾನು ಅಪಾರ ನಂಬಿಕೆಯಿಟ್ಟಿದ್ದ ಮಗ ಬಾಹುಬಲಿ ನನ್ನ ಮಾತು ಮೀರಿದನಲ್ಲ ಎಂದು ಸೇಡಿಗೆ ಬೀಳುತ್ತಾಳೆ. ಕೊನೆಗೆ ಬಾಹುಬಲಿ-ಬಲ್ಲಾಳನ ಮಧ್ಯೆ ಆಂತರಿಕ ಯುದ್ಧ ಶುರುವಾದಾಗ ಕಟ್ಟಪ್ಪನ ಮೂಲಕ ಬಾಹುಬಲಿಯನ್ನ ಕೊಲ್ಲಿಸುತ್ತಾಳೆ. ಬಾಹುಬಲಿಯನ್ನ ಬೆನ್ನಿನಿಂದ ಕೊಂದ ಕಟ್ಟಪ್ಪ ಕೊನೆಗೆ ತಾನು ರಾಜಾಜ್ಞೆಯನ್ನ ಶಿರಸಾ ಪಾಲಿಸಿದ್ದಾಗಿ ಕಣ್ಣೀರಿಡುತ್ತಾನೆ.

    ಇದನ್ನೂ ಓದಿ: ಟಿಕೆಟ್ ಬುಕ್ಕಿಂಗ್‍ನಲ್ಲೂ ಹೊಸ ದಾಖಲೆ: 24 ಗಂಟೆಯಲ್ಲಿ ಎಷ್ಟು ಬಾಹುಬಲಿ ಟಿಕೆಟ್ ಮಾರಾಟವಾಗಿದೆ ಗೊತ್ತಾ?

  • ಬಿಡುಗಡೆಗೆ ಮುನ್ನವೇ ಲಾಭ ತಂದುಕೊಟ್ಟ ಬಾಹುಬಲಿ: ದಾಖಲೆ ಮೊತ್ತಕ್ಕೆ ಸಿನಿಮಾದ ರೈಟ್ಸ್ ಮಾರಾಟ

    ಬಿಡುಗಡೆಗೆ ಮುನ್ನವೇ ಲಾಭ ತಂದುಕೊಟ್ಟ ಬಾಹುಬಲಿ: ದಾಖಲೆ ಮೊತ್ತಕ್ಕೆ ಸಿನಿಮಾದ ರೈಟ್ಸ್ ಮಾರಾಟ

    ಹೈದರಾಬಾದ್: ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ -2 ಚಿತ್ರ ಟ್ರೇಲರ್ ಮೂಲಕವೇ ಈಗಾಗಲೇ ದಾಖಲೆ ನಿರ್ಮಿಸಿದೆ. ಇದೀಗ ಈ ಚಿತ್ರ ಮತ್ತೊಂದು ದಾಖಲೆ ಮುರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

    250 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣವಾದ ಬಾಹುಬಲಿ- 1 ಚಿತ್ರ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಂಡು 600 ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ವಿಶೇಷ ಅಂದ್ರೆ ಇದರಲ್ಲಿ ಚಿತ್ರದ ನಿರ್ಮಾಪಕರಿಗಿಂತ ವಿತರಕರೇ ಹೆಚ್ಚಿನ ದುಡ್ಡು ಮಾಡಿದ್ರು. ನಾರ್ತ್ ಅಮೆರಿಕದಲ್ಲಿ ಬಾಹುಬಲಿ-1 ಚಿತ್ರದ ವಿತರಕರು 4 ಮಿಲಿಯನ್ ಡಾಲರ್( ಅಂದಾಜು 26 ಕೋಟಿ ರೂ.)ಗೆ ಚಿತ್ರದ ರೈಟ್ಸ್ ಖರೀದಿಸಿದ್ದರು. ಆದ್ರೆ ಇದರಿಂದ ಅವರು ಗಳಿಸಿದ್ದು ಬರೋಬ್ಬರಿ 9 ಮಿಲಿಯನ್ ಡಾಲರ್(ಅಂದಾಜು 58 ಕೋಟಿ ರೂ.)

    ಇದೀಗ ಬಾಹುಬಲಿ-2 ಚಿತ್ರದ ನಾರ್ತ್ ಅಮೆರಿಕದ ರೈಟ್ಸ್ ಬೇರೊಬ್ಬ ವಿತರಕರ ಪಾಲಾಗಿದೆ. ಗ್ರೇಟ್ ಇಂಡಿಯನ್ ಫಿಲ್ಮ್ಸ್‍ನವರು 7 ಮಿಲಿಯನ್ ಡಾಲರ್(45 ಕೋಟಿ ರೂ.) ಕೊಟ್ಟು ಬಾಹುಬಲಿ-2 ಸಿನಿಮಾದ ರೈಟ್ಸ್ ಖರೀದಿಸಿದ್ದಾರೆ. ಇದರಿಂದ ಬರೋಬ್ಬರಿ 15 ಮಿಲಿಯನ್‍ಡಾಲರ್ (98 ಕೋಟಿ ರೂ.) ಗಳಿಸೋ ನಿರೀಕ್ಷೆಯಲ್ಲಿದ್ದು, ಹಿಂದಿನ ದಾಖಲೆಗಳನ್ನ ಮುರಿಯುವ ಎಲ್ಲಾ ಲಕ್ಷಣಗಳಿವೆ.

    ಈ ಹಿಂದೆ ಅಮೆರಿಕದಲ್ಲಿ ದಾಖಲೆಯ ಹಣ ಗಳಿಸಿದ ಭಾರತೀಯ ಚಿತ್ರವೆಂದರೆ ಆಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾ. ದಂದಲ್ ಚಿತ್ರ ಬರೋಬ್ಬರಿ 80.4 ಕೋಟಿ ರೂ. (12.3 ಮಿಲಿಯನ್ ಡಾಲರ್) ಗಳಿಸಿತ್ತು.

    ಅರ್ಕಾ ಮೀಡಿಯಾ ವಕ್ರ್ಸ್‍ನ ಶೋಭು ಯರ್ಲಗಡ್ಡ ಹಾಗೂ ಪ್ರಸಾದ್ ದೇವಿನೇನಿ ಬೇರೆ ಬೇರೆ ಪ್ರದೇಶಗಳಿಗೆ ಹೊಸ ವಿತರಕರ ವ್ಯವಸ್ಥೆ ಮಾಡಿದ್ದಾರೆ. ಬಾಹುಬಲಿ-2ರ ಹಿಂದಿ ಆವೃತ್ತಿಯನ್ನ ಕರಣ್ ಜೋಹಾರ್ ಅವರ ಧರ್ಮ ಪ್ರೊಡಕ್ಷನ್ಸ್ ಹಾಗೂ ಅನಿಲ್ ಥಡಾನಿ ಅವರ ಎಎ ಫಿಲ್ಮ್ಸ್ ವಿರತಣೆ ಮಾಡಲಿದೆ. ರಾಜಮೌಳಿ ಹಾಗೂ ಬಾಹುಬಲಿ ಚಿತ್ರತಂಡ ಕಟ್ಟಪ್ಪನ ಖಡ್ಗವನ್ನ ಕರಣ್ ಜೋಹಾರ್‍ಗೆ ಗಿಫ್ಟ್ ಕೂಡ ಮಾಡಿದ್ದಾರೆ.

    ಇನ್ನು ಭಾರತದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಹೊಸ ವಿತರಕರು ಈಗಾಗಲೇ ದಾಖಲೆ ಮೊತ್ತದ ಹಣ ನೀಡಿ ರೈಟ್ಸ್ ಪಡೆದಿದ್ದಾರೆ. ಕೇರಳ ವಿತರಕರಾದ ಗ್ಲೋಬಲ್ ಯುನೈಟೆಡ್ ಮೀಡಿಯಾ ಬಾಹುಬಲಿ- 1 ಚಿತ್ರಕ್ಕೆ ನೀಡಿದ ಹಣಕ್ಕಿಂತ ಡಬಲ್ ಹಣ ಪಾವತಿಸಿದ್ದಾರೆ ಎನ್ನಲಾಗಿದೆ. ಬಾಹುಬಲಿ -2 ಚಿತ್ರದ ಮೇಲೆ ನಮಗೆ ಬಹಳ ನಂಬಿಕೆಯಿದೆ. ಚಿತ್ರತಂಡದೊಂದಿಗೂ ನಮಗೆ ಒಳ್ಳೇ ಬಾಂಧವ್ಯವಿದೆ. ಹೌದು, ನಾವು ದಾಖಲೆ ಮೊತ್ತದ ಹಣ ಕೊಟ್ಟಿದ್ದೇವೆ. ಆದ್ರೆ ಭಾಗ-1 ರಂತೆ ಬಾಹುಬಲಿ-2 ಚಿತ್ರ ಕೂಡ ಬಾಕ್ಸ್ ಆಫೀಸ್ ಧೂಳೆಬ್ಬಿಸಲಿದೆ ಅನ್ನೋ ನಂಬಿಕೆಯಿದೆ ಅಂತ ಗ್ಲೋಬಲ್ ಯುನೈಟೆಡ್ ಮೀಡಿಯಾದ ಪ್ರೇಮ್ ಮೆನನ್ ಹೇಳಿದ್ದಾರೆ.

    ಇನ್ನು ಬಾಹುಬಲಿ-2 ಚಿತ್ರದ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 78 ಕೋಟಿ ರೂ.ಗೆ ಮಾರಾಟವಾಗಿದೆ. ಹಿಂದಿ ಆವೃತ್ತಿ ಸೋನಿ ವಾಹಿನಿಗೆ(50 ಕೋಟಿ ರೂ.) ಹಾಗೂ ತೆಲುಗು, ತಮಿಳು, ಮಲಯಾಳಂ ಆವೃತ್ತಿ ಸನ್ ನೆಟವರ್ಕ್ ವಾಹಿನಿಗೆ (28 ಕೋಟಿ ರೂ.) ಮಾರಾಟವಾಗಿದೆ. ಇನ್ನು ಚಿತ್ರದ ಡಿಜಿಟಲ್ ರೈಟ್ಸ್ ನಿರ್ಮಾಪಕರ ಬಳಿ ಇದ್ದು ಅಮೇಜಾನ್ ಹಾಗೂ ನೆಟ್‍ಫ್ಲಿಕ್ಸ್ ಜೊತೆಗೆ ಮಾತುಕತೆ ನಡೆಯುತ್ತಿದೆ.

    ಬಾಹುಬಲಿ 1 ಹಾಗೂ ಭಾಗ-2 ಚಿತ್ರಗಳಿಗೂ 450 ಕೋಟಿ ರೂ. ಬಜೆಟ್. ಬಾಹುಬಲಿ-2 ಚಿತ್ರಕ್ಕೆ ನಿರ್ಮಾಪಕರಿಗೆ 400 ರಿಂದ 500 ಕೋಟಿ ರೂ. ಬರೋ ನಿರೀಕ್ಷೆಯಿದೆ. ಬಾಹುಬಲಿ-2 ಚಿತ್ರದ ಬಿಡುಗಡೆಗೂ ಮೊದಲೇ ನಾವು ಲಾಭ ಗಳಿಸಿದ್ದೇವೆ. ಈ ಚಿತ್ರ ಮತ್ತೊಂದು ಬ್ಲಾಕ್‍ಬಸ್ಟರ್ ಆಗುತ್ತದೆ ಹಾಗೂ ರೈಟ್ಸ್ ಪಡೆದವರೂ ಕೂಡ ಲಾಭ ಮಾಡಲಿದ್ದಾರೆ ಅನ್ನೋ ಎಲ್ಲಾ ನಂಬಿಕೆಯಿದೆ ಅಂತಾರೆ ಚಿತ್ರದ ನಿರ್ಮಾಪಕ ಯರ್ಲಗಡ್ಡ.

    ಬಾಹುಬಲಿ-2 ಚಿತ್ರ ಏಪ್ರಿಲ್ 28ರಂದು ಭಾರತದಲ್ಲಿ 6500 ಸ್ಕ್ರೀನ್‍ಗಳಲ್ಲಿ ಹಾಗೂ ನಾರ್ತ್ ಅಮೆರಿಕದಲ್ಲಿ 750 ಸ್ಕ್ರೀನ್‍ಗಳಲ್ಲಿ, ಜೊತೆಗೆ ಇನ್ನುಳಿದ 1000 ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಲಿದೆ.

    ತೆಲುಗು ಟ್ರೇಲರ್

    ಹಿಂದಿ ಟ್ರೇಲರ್

    ಮಲೆಯಾಳಂ ಟ್ರೇಲರ್

    ತಮಿಳು ಟ್ರೇಲರ್

    ಪ್ರೋಮೋ ಟ್ರೇಲರ್ ವಿಡಿಯೋ

     

     

  • ಪ್ರಭಾಸ್-ಅನುಷ್ಕಾ ಶೆಟ್ಟಿ ಮದುವೆಯಾಗ್ತಿದ್ದಾರಾ?

    ಪ್ರಭಾಸ್-ಅನುಷ್ಕಾ ಶೆಟ್ಟಿ ಮದುವೆಯಾಗ್ತಿದ್ದಾರಾ?

    ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ಟ್ರೇಲರ್ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ನಿರ್ಮಿಸಿದೆ. ಬಾಹುಬಲಿ-2 ಚಿತ್ರದ ಟ್ರೇಲರನ್ನ ಈಗಾಗಲೇ ಕೋಟ್ಯಾಂತರ ಮಂದಿ ವೀಕ್ಷಿಸಿದ್ದು ವಿಶ್ವದಾದ್ಯಂತ ಟ್ರೆಂಡಿಂಗ್ ಆಗಿದೆ.

    ಇದನ್ನೂ ಓದಿ: ಪ್ರಭಾಸ್, ರಾಣಾ ಫೈಟಿಂಗ್, ಅನುಷ್ಕಾ ರೋಮ್ಯಾಂಟಿಕ್ ಸೀನ್: ಬಾಹುಬಲಿ ಟ್ರೇಲರ್ ರಿಲೀಸ್

    ಟ್ರೇಲರ್‍ನಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ನಡುವಿನ ರೊಮ್ಯಾಂಟಿಕ್ ದೃಶ್ಯವನ್ನೂ ನೋಡಬಹುದು. ಬಾಹುಬಲಿ ಭಾಗ-1ರಲ್ಲಿ ಅನುಷ್ಕಾ ಮಧ್ಯವಯಸ್ಕ ಮಹಿಳೆಯಾಗಿ ಕಾಣಿಸಿಕೊಂಡಿದ್ದರು. ಭಾಗ-1ರಲ್ಲಿ ಪ್ರಭಾಸ್ ಮತ್ತು ತಮನ್ನಾ ನಡುವಿನ ರೊಮ್ಯಾನ್ಸ್ ದೃಶ್ಯಗಳಿದ್ದವು. ಆದ್ರೆ ಭಾಗ -2ರಲ್ಲಿ ಅನುಷ್ಕಾ ಮತ್ತು ಪ್ರಭಾಸ್ ನಡುವೆ ರೊಮ್ಯಾನ್ಸ್ ಇರಲಿದೆ ಅನ್ನೋ ಸ್ಪಷ್ಟ ಸೂಚನೆ ಟ್ರೇಲರ್‍ನಲ್ಲಿ ಸಿಕ್ಕಿದೆ.

    ಬಾಹುಬಲಿ-2 ಚಿತ್ರ ಬಿಡುಗಡೆಯಾಗುತ್ತಿದ್ದಂತೆಯೇ ಪ್ರಭಾಸ್ ವಿಶಾಖಪಟ್ಟಣಂನಲ್ಲಿ ವಾಸವಿರೋ 22 ವರ್ಷದ ಎಂಜಿನಿಯರಿಂಗ್ ಪದವೀಧರೆಯಾಗಿರೋ ಸಂಬಂಧಿಯೋರ್ವರನ್ನು ಮದುವೆಯಾಗ್ತಾರೆ ಅಂತ ಸುದ್ದಿಯಾಗಿತ್ತು. ಆದ್ರೆ ಈ ಸುದ್ದಿಯ ನಡುವೆ ಪ್ರಭಾಸ್ ಅನುಷ್ಕಾ ಮದುವೆಯಾಗ್ತಾರೆ ಅನ್ನೋ ಗುಲ್ಲೆದ್ದಿತ್ತು. ಇದಕ್ಕೆ ಕಾರಣ ಬಾಹುಬಲಿ ಚಿತ್ರದಲ್ಲಿ ಅವರಿಬ್ಬರ ನಡುವೆ ಇರೋ ಕೆಮಿಸ್ಟ್ರಿ. ಚಿತ್ರದ ಪ್ರಮುಖ ಪಾತ್ರಗಳಾದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿಯ ನಿಶ್ಚಿತಾರ್ಥ ಸಮಾರಂಭವನ್ನ ತೋರಿಸಲು ನಿರ್ದೇಶಕ ಎಸ್‍ಎಸ್ ರಾಜಮೌಳಿ ಅದ್ಧೂರಿ ಸೆಟ್ ವಿನ್ಯಾಸಗೊಳಿಸಿದ್ರು. ಈ ಸೆಟ್ ಎಷ್ಟು ನೈಜವಾಗಿತ್ತೆಂದರೆ ಇದನ್ನು ನೋಡಿದ ಜನ ಇದು ರಿಯಲ್ ನಿಶ್ಚಿತಾರ್ಥ ಸಮಾರಂಭ ಎಂದುಕೊಂಡಿದ್ದು ಈ ವದಂತಿಗೆ ಪುಷ್ಟಿ ನೀಡಿತ್ತು.

    ಇದನ್ನೂ ಓದಿ: ಭಾರತದ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಬಾಹುಬಲಿ ಟ್ರೇಲರ್

    ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಸೃಷ್ಟಿಸಿರೋ ಬಾಹುಬಲಿ-2 ಚಿತ್ರದ ಟ್ರೇಲರ್ ಬಿಡುಗಡೆಯಾದ 24 ಗಂಟೆಯಲ್ಲೇ 5 ಕೋಟಿಗೂ ಅಧಿಕ ವ್ಯೂ ಗಳಿಸಿದೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದ ಕಥೆಯಾಧರಿತ ಬಾಹುಬಲಿ 2 ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ಸತ್ಯರಾಜ್, ತಮನ್ನಾ, ರಮ್ಯಾಕೃಷ್ಣ ಅಭಿನಯಿಸಿದ್ದು ವಿಶ್ವದಾದ್ಯಂತ ಏಪ್ರಿಲ್ 28 ರಂದು ತೆರೆಕಾಣಲಿದೆ.

    ಇದನ್ನೂ ಓದಿ: ಬಾಹುಬಲಿಯನ್ನು ಕೊಂದಿದ್ದು ಯಾಕೆ: ಕೊನೆಗೂ ಉತ್ತರ ಹೇಳಿದ ಕಟ್ಟಪ್ಪ!