Tag: Anuradha Bhat

  • ಐ ಲವ್ ಯೂ: ಭಾವಲೋಕಕ್ಕೆ ಲಗ್ಗೆಯಿಡೋ ಲಿರಿಕಲ್ ವೀಡಿಯೋ ಸಾಂಗ್!

    ಐ ಲವ್ ಯೂ: ಭಾವಲೋಕಕ್ಕೆ ಲಗ್ಗೆಯಿಡೋ ಲಿರಿಕಲ್ ವೀಡಿಯೋ ಸಾಂಗ್!

    ಬೆಂಗಳೂರು: ತಾಜ್ ಮಹಲ್, ಚಾರ್‍ಮಿನಾರ್ ಮುಂತಾದ ಪ್ರೇಮಕಾವ್ಯದಂಥಾ ಸಿನಿಮಾಗಳ ಮೂಲಕವೇ ಯಶಸ್ವಿ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು ಆರ್ ಚಂದ್ರು. ಅವರು ಎರಡನೇ ಬಾರಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಐ ಲವ್ ಯೂ ಚಿತ್ರದ ಮೂಲಕ ಜೊತೆಯಾಗಿದ್ದಾರೆ. ಚಂದ್ರು ಅವರು ನಿರ್ದೇಶನ ಮಾಡಿರೋ ಐ ಲವ್ ಯೂ ಚಿತ್ರದ ಮತ್ತೊಂದು ಭಾವಪೂರ್ಣ ಲಿರಿಕಲ್ ವೀಡಿಯೋ ಇದೀಗ ಬಿಡುಗಡೆಯಾಗಿದೆ.

    ನಿನ್ನ ಹೃದಯ ಇರೋ ಜಾಗದಲ್ಲಿ ಒಂದು ಕಲ್ಲು ಇದೆ, ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ… ಲಹರಿ ಆಡಿಯೋ ಸಂಸ್ಥೆಯ ಮೂಲಕ ಹೊರ ಬಂದಿರೋ ಈ ಹಾಡಿಗೆ ಇಂದ್ರಾ ಕೆ ಎಂ ಅವರ ಸಾಹಿತ್ಯವಿದೆ. ಪ್ಯಾಥೋ ಮೂಡಿಗೆ ಜಾರಿಸುವಂಥಾ ಈ ಹಾಡಿಗೆ ಡಾ ಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಒಂದೇ ಸಲಕ್ಕೆ ಭಾವಲೋಕದಲ್ಲೊಂದು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿ ಬಿಡುವಷ್ಟು ಶಕ್ತವಾಗಿರೋ ಈ ಹಾಡಿಗೆ ಬಿಡುಗಡೆಯಾದ ಅತ್ಯಂತ ಕಡಿಮೆ ಅವಧಿಯಲ್ಲಿಯೇ ವ್ಯಾಪಕ ಮೆಚ್ಚುಗೆಗಳೂ ಕೇಳಿ ಬರುತ್ತಿವೆ. ಈ ಹಾಡು ಅನುರಾಧಾ ಭಟ್ ಅವರ ಮಧುರ ಕಂಠದಲ್ಲಿ ಮೂಡಿ ಬಂದಿದೆ.

    ಆರ್ ಚಂದ್ರು ನವಿರು ಪ್ರೇಮ ಕಾವ್ಯಗಳಿಗೆ ದೃಶ್ಯ ರೂಪ ಕೊಡೋದರಲ್ಲಿ ನಿಸ್ಸೀಮರು. ಪ್ರೀತಿ ಎಂಬುದು ಸಿನಿಮಾ ನಿರ್ದೇಶಕರ ಪಾಲಿಗೆ ಎಂದೂ ಮುಗಿಯದ ಅಕ್ಷಯ ಪಾತ್ರೆಯಂಥಾದ್ದು. ಆದರೆ ಅದನ್ನು ಹೊಸಾ ಫೀಲ್‍ನೊಂದಿಗೆ ಕಟ್ಟಿಕೊಡುವ ಕಸುಬುದಾರಿಕೆ ಕೆಲವರಿಗಷ್ಟೇ ಸಿದ್ಧಿಸಿರುತ್ತದೆ. ಆ ಸಾಲಿನಲ್ಲಿ ಆರ್ ಚಂದ್ರು ಅವರೂ ಸೇರಿಕೊಳ್ಳುತ್ತಾರೆ.

    ಚಂದ್ರು ನಿರ್ದೇಶನದ ಚಿತ್ರಗಳೆಂದ ಮೇಲೆ ಹಾಡುಗಳ ಬಗ್ಗೆ ಭಾರೀ ನಿರೀಕ್ಷೆಗಳು ಮೂಡಿಕೊಳ್ಳುತ್ತವೆ. ಅದನ್ನು ಗಮನದಲ್ಲಿಟ್ಟುಕೊಂಡೇ ಅವರು ಐ ಲವ್ ಯೂ ಚಿತ್ರದ ಹಾಡುಗಳನ್ನೂ ರೂಪಿಸಿದ್ದಾರೆ. ಇದೀಗ ಹೊರ ಬಂದಿರೋ ಈ ಲಿರಿಕಲ್ ವೀಡಿಯೋ ಕೂಡಾ ಟ್ರೆಂಡ್ ಸೆಟ್ ಮಾಡೋದು ಗ್ಯಾರೆಂಟಿ. ಈ ಸಿನಿಮಾದಲ್ಲಿ ಚಂದ್ರು ಅವರು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಈ ಮೂಲಕ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್ನಿನ ಎರಡನೇ ಚಿತ್ರವಾದ ಐ ಲವ್ ಯೂಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

  • 3 ದಿನ ನಡೆದ ಪ್ರವಾಸಿ ಉತ್ಸವಕ್ಕೆ ತೆರೆ- ಅರ್ಜುನ್ ಜನ್ಯ, ಅನುರಾಧ ಭಟ್ ಕಾರ್ಯಕ್ರಮಕ್ಕೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು

    3 ದಿನ ನಡೆದ ಪ್ರವಾಸಿ ಉತ್ಸವಕ್ಕೆ ತೆರೆ- ಅರ್ಜುನ್ ಜನ್ಯ, ಅನುರಾಧ ಭಟ್ ಕಾರ್ಯಕ್ರಮಕ್ಕೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು

    ಮಡಿಕೇರಿ: ಭಾನುವಾರ ನಗರದ ಗಾಂಧಿ ಮೈದಾನದಲ್ಲಿ ಕೊಡಗು ಪ್ರವಾಸಿ ಉತ್ಸವ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕಿ ಅನುರಾಧ ಭಟ್ ಮತ್ತು ತಂಡ ನಡೆಸಿಕೊಟ್ಟ ರಸಸಂಜೆ ಕಾರ್ಯಕ್ರಮ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

    ಇದೇ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆ ಕೊಡಗು ಜಿಲ್ಲಾಡಳಿತ ವತಿಯಿಂದ ನಡೆಸಿದ ಪ್ರವಾಸಿ ಉತ್ಸವಕ್ಕೆ ನೀರಿಕ್ಷೆಗೂ ಮೀರಿ ಕೊಡಗಿನ ಜನತೆ ಸೇರಿದಂತೆ ದೇಶ ವಿದೇಶದ ಜನರು ಭಾಗವಹಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ: ಇಂದಿನಿಂದ 3 ದಿನ ಮಂಜಿನ ನಗರಿಯಲ್ಲಿ ಪ್ರವಾಸಿ ಉತ್ಸವ- ಕಿರುತೆರೆ ಕಲಾವಿದರು ಭಾಗಿ

    ವೇದಿಕೆ ಮೇಲೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಗಮಿಸುತ್ತಿದ್ದಂತೆ ಪ್ರೇಕ್ಷಕರ ಮೊಗದಲ್ಲಿ ಮಂದಹಾಸ ಮೂಡಿತ್ತು. ಅರ್ಜುನ್ ಜನ್ಯ ಅವರ ತಂಡ ಕಾರ್ಯಕ್ರಮ ನೀಡಿ ಮಡಿಕೇರಿ ಜನತೆಯ ಮೆಚ್ಚುಗೆಗೆ ಪಾತ್ರರಾದರು. ಇದನ್ನೂ ಓದಿ: ಕೊಡಗು ಉತ್ಸವ- ರಾಜಾಸೀಟ್‍ನಲ್ಲಿ ಫಲಪುಷ್ಪಗಳ ಕಲರವ

    ಮೂರು ದಿನಗಳ ಕಾಲ ನಡೆದ ಈ ಕೊಡಗು ಉತ್ಸವಕ್ಕೆ ರಾಜಾಸೀಟ್‍ನಲ್ಲಿ ಬಗೆ ಬಗೆಯ ಹೂಗಳಿಂದ ಹೂಗಳಿಂದ ಕಲಾಕೃತಿಗಳನ್ನು ಮಾಡಲಾಗಿತ್ತು. ಬಗೆ ಬಗೆಯ ಹೂಗಳಿಂದ ರಾಜಾಸೀಟ್ ಭೂ ಲೋಕದ ಸ್ವರ್ಗದಂತೆ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿತ್ತು.

    ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆ ಆಶ್ರಯದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿ ಉತ್ಸವ ನಡೆಸಿತ್ತು. ಆಗಸ್ಟ್ ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಕಹಿ ನೆನಪಿನಿಂದ ಜಿಲ್ಲೆಯ ಜನತೆಯನ್ನು ಹೊರತರಲು ಹಾಗೂ ಕುಸಿದು ಬಿದ್ದಿರುವ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸಲು ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರವಾಸಿ ಉತ್ಸವವನ್ನು ಆಯೋಜಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv