Tag: anti-national statement

  • ಪಾಕ್ ಪರ ಘೋಷಣೆ ಪ್ರಕರಣ – ಜಾಮೀನು ಅರ್ಜಿ ಸಲ್ಲಿಸಲು ಆಗಮಿಸಿದ ನ್ಯಾಯವಾದಿಗಳ ತಂಡ

    ಪಾಕ್ ಪರ ಘೋಷಣೆ ಪ್ರಕರಣ – ಜಾಮೀನು ಅರ್ಜಿ ಸಲ್ಲಿಸಲು ಆಗಮಿಸಿದ ನ್ಯಾಯವಾದಿಗಳ ತಂಡ

    ಹುಬ್ಬಳ್ಳಿ: ಜಿಲ್ಲೆಯ ಪ್ರತಿಷ್ಠಿತ ಕೆಎಲ್‍ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಪರ ಜಾಮೀನು ಅರ್ಜಿ ಸಲ್ಲಿಸಲು ಇಂದು ಬೆಂಗಳೂರಿನ ವಕೀಲರ ತಂಡ ಹುಬ್ಬಳ್ಳಿಗೆ ಆಗಮಿಸಿದೆ.

    ಜಾಮೀನು ಅರ್ಜಿ ಸಲ್ಲಿಸಲು 7 ಜನ ವಕೀಲರ ತಂಡ ಆಗಮಿಸಿದ್ದು, ಹುಬ್ಬಳ್ಳಿಯ 2ನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಬೆಂಗಳೂರಿನ ವಕೀಲರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಮಾರ್ಚ್ 5ರೊಳಗೆ ಜಾಮೀನು ಅರ್ಜಿ ಸಲ್ಲಿಕೆ ಕುರಿತು ತಕರಾರು ಅರ್ಜಿ ಸಲ್ಲಿಸಲು ಸಹಾಯಕ ಸರ್ಕಾರಿ ಅಭಿಯೋಜಕರಿಗೆ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೂಚಿಸಿತ್ತು. ಈ ಹಿನ್ನೆಲೆ ಇಂದು ಜಾಮೀನು ಅರ್ಜಿ ಸಲ್ಲಿಸಲು ನ್ಯಾಯಾವಾದಿಗಳು ಆಗಮಿಸಿದ್ದಾರೆ. ಇಂದು ಜಾಮೀನು ಅರ್ಜಿ ಸಲ್ಲಿಕೆಯಾದರೆ ಇಂದೇ ವಿಚಾರಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

    ಬೆಂಗಳೂರಿನಿಂದ ಆಗಮಿಸಿದ ವಕೀಲರು ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಖಾಸಗಿ ಹೊಟೇಲ್‍ನಲ್ಲಿ ಉಳಿದುಕೊಂಡಿದ್ದು, ಇಂದು ಕೋರ್ಟಿಗೆ ಭೇಟಿ ನೀಡಿ ಜಾಮೀನು ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಆರೋಪಿಗಳ ನ್ಯಾಯಾಂಗ ಬಂಧನ ಮಾರ್ಚ್ 7ರಂದು ಮುಕ್ತಾಯಗೊಳ್ಳಲಿದ್ದು, ಇಂದು ಜಾಮೀನು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ.

    ಬೆಂಗಳೂರಿನ ವಕೀಲರ ತಂಡ ಇಂದು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡುತ್ತಿರುವುದರಿಂದ ಬುಧವಾರದಿಂದಲೇ ಹುಬ್ಬಳ್ಳಿ ನ್ಯಾಯಾಲಯದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್‍ನ ಶ್ವಾನದಳದಿಂದ ಬುಧವಾರ ಸಂಜೆಯಿಂದಲೇ ಪರಿಶೀಲನೆ ನಡೆಸಲಾಗುತ್ತಿದೆ.

  • ಪಾಕ್ ಪರ ಘೋಷಣೆ ಕೂಗಿದ ರಾಘವೇಂದ್ರ ಗಾಣಿಗ ಮೇಲೆ ದೇಶದ್ರೋಹದ ಕೇಸ್

    ಪಾಕ್ ಪರ ಘೋಷಣೆ ಕೂಗಿದ ರಾಘವೇಂದ್ರ ಗಾಣಿಗ ಮೇಲೆ ದೇಶದ್ರೋಹದ ಕೇಸ್

    ಉಡುಪಿ: ಜಿಲ್ಲೆಯ ಕುಂದಾಪುರದಲ್ಲಿ ಪಾಕ್ ಪರ ಘೋಷಣೆ ಕೂಗಿದ ರಾಘವೇಂದ್ರ ಗಾಣಿಗನ ಮೇಲೆ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.

    ಕುಂದಾಪುರ ಮಿನಿ ವಿಧಾನಸೌಧದೊಳಗೆ ಇಂದು ಬೆಳಗ್ಗೆ ರಾಘವೇಂದ್ರ ಪಾಕ್ ಪರ ಘೋಷಣೆ ಕೂಗಿದ್ದನು. ಈ ಸಂಬಂಧ ರಾಘವೇಂದ್ರನ ಮೇಲೆ ಕುಂದಾಪುರ ತಹಶಿಲ್ದಾರರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ರಾಘವೇಂದ್ರ ಗಾಣಿಗನನ್ನು ದಸ್ತಗಿರಿ ಮಾಡಿದ್ದರು.

    ಈ ಕುರಿತು ಉಡುಪಿ ಪೊಲೀಸ್ ಉಪಾಧ್ಯಕ್ಷ ಕುಮಾರಚಂದ್ರ ಮಾತನಾಡಿ, ಆತ ಕುಂದಾಪುರದ ಕೋಡಿ ನಿವಾಸಿ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ರಾಘವೇಂದ್ರ ಮೇಲೆ ದೇಶದ್ರೋಹದ ಪ್ರಕರಣ ಹಾಕಲಾಗಿದೆ. ಘಟನೆ ಬಗ್ಗೆ ಇನ್ನೂ ತನಿಖೆ ಮಾಡಬೇಕು. ರಾಘವೇಂದ್ರನ ಮಾತಿನಲ್ಲಿ ಸ್ಥಿರತೆ ಇಲ್ಲ. ಆತನ ಹಿನ್ನೆಲೆ ಬಗ್ಗೆ ಪರಾಮರ್ಶೆ ನಡೆಸುತ್ತೇವೆ. ಆತನ ಮಾನಸಿಕ ಸ್ಥಿತಿ ಬಗ್ಗೆ ನಾವೇನು ಹೇಳಲ್ಲ. ವೈದ್ಯಕೀಯ ವರದಿ ಬಂದ ಮೇಲೆ ಮಾಹಿತಿ ನೀಡುತ್ತೇವೆ ಎಂದರು.

    ಇಂದು ರಾಘವೇಂದ್ರ ಪಾಕ್ ಪರ ಘೋಷಣೆ ಕೂಗಿದ ಕೂಡಲೇ ಪೊಲೀಸ್ ಠಾಣೆಗೆ ಸ್ಥಳೀಯರು ಫೋನ್ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಕುಂದಾಪುರ ಎಸ್‍ಐ ಹರೀಶ್ ವ್ಯಕ್ತಿಯನ್ನು ವಶಕ್ಕೆ ಪಡಕೊಂಡಿದ್ದಾರೆ. ಪೊಲೀಸರು ದಸ್ತಗಿರಿ ಮಾಡುವಾಗಲೂ ವ್ಯಕ್ತಿ ಪಾಕ್ ಪರ ಘೋಷಣೆಗಳನ್ನು ಕೂಗಿದ್ದಾನೆ. ರಾಘವೇಂದ್ರ ಗಾಣಿಗ ಕುಂದಾಪುರದ ಖಾಸಗಿ ಶ್ರೀಮಾತಾ ಆಸ್ಪತ್ರೆಗೆ ತನ್ನ ತಾಯಿಯ ಜೊತೆ ಬಂದಿದ್ದ.

    ಕಳೆದ ಹತ್ತು ವರ್ಷದಿಂದ ಮಾನಸಿಕ ತೊಂದರೆಯಿಂದ ಬಳಲುತ್ತಿರುವ ರಾಘವೇಂದ್ರ ನಿರಂತರ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಂದಾಪುರದ ಖಾಸಗಿ ಸಂಸ್ಥೆಯಲ್ಲಿ ಶಿಕ್ಷಕನಾಗಿದ್ದ ರಾಘವೇಂದ್ರ ಎಂಟು ವರ್ಷಗಳ ಹಿಂದೆ ಮಾನಸಿಕ ಸಮಸ್ಯೆಯಿಂದ ಕೆಲಸದಿಂದ ವಜಾಗೊಂಡಿದ್ದ. ಪೊಲೀಸರು ರಾಘವೇಂದ್ರನನ್ನು ದಸ್ತಗಿರಿ ಮಾಡುತ್ತಿದ್ದಂತೆ ಆಸ್ಪತ್ರೆಯಿಂದ ತಾಯಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ತಾನು ತನ್ನ ಮಗನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದೆ. ಆತನಿಗೆ ಮಾನಸಿಕ ಸಮಸ್ಯೆ ಇದೆ. ಸಾಲಿನಲ್ಲಿ ನಿಂತಿದ್ದಾಗ ತಪ್ಪಿಸಿಕೊಂಡು ಓಡಿದ್ದಾನೆ ಎಂದು ಪೊಲೀಸರಿಗೆ ಹೇಳಿದ್ದಾರೆ.

    ರಾಘವೇಂದ್ರನನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು ಆತನ ಮಾನಸಿಕ ಸ್ಥಿತಿಯ ಬಗ್ಗೆ ಅವಲೋಕನ ಮಾಡುತ್ತಿದ್ದಾರೆ. ಮಾನಸಿಕ ತಜ್ಞರನ್ನು ಪೊಲೀಸರು ಸಂಪರ್ಕ ಮಾಡಿದ್ದು ರಾಘವೇಂದ್ರನನ್ನು ಚಿಕಿತ್ಸೆಗೆ ಒಳಪಡಿಸುವ ಸಾಧ್ಯತೆ ಇದೆ. ಪೊಲೀಸ್ ವಶದಲ್ಲಿರುವ ರಾಘವೇಂದ್ರ ನಿರಂತರವಾಗಿ ಮನೆಯಲ್ಲಿ ಸುದ್ದಿವಾಹಿನಿಗಳನ್ನು ನೋಡುತ್ತಿದ್ದ ಎಂದು ತಾಯಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಸುದ್ದಿ ವಾಹಿನಿಗಳಲ್ಲಿ ಸಿಎಎ ಹೋರಾಟ, ಅಮೂಲ್ಯಾ ರಂಪಾಟ, ಆರ್ದ್ರಾ ಚೀರಾಟವನ್ನು ಕಂಡ ರಾಘವೇಂದ್ರ ಅದೇ ಮನೋಸ್ಥಿತಿಗೆ ಹೊರಳಿದ್ದ ಎನ್ನಲಾಗಿದೆ.