ಬೆಳಗಾವಿ: ವಿಧಾನ ಪರಿಷತ್‌ನಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಇಂದು ಮಂಡಿಸುವ ನಿರ್ಧಾರದಿಂದ ಬಿಜೆಪಿ ಹಿಂದೆ ಸರಿದಿದೆ. ಪ್ರತಿಪಕ್ಷಗಳ ವಿರೋಧದಿಂದಾಗಿ ಕಾದು ನೋಡುವ ತಂತ್ರ ಅನುಸರಿಸಿದ್ದ ಬಿಜೆಪಿ ಸರ್ಕಾರ ಮಸೂದೆ ಮಂಡನೆ ದಿನವನ್ನು ಮುಂದೂಡಿದೆ.
ವಿಧಾನಸಭೆಯಲ್ಲಿ ಬಹುಮತದ ಆಧಾರದಲ್ಲಿ ಅಂಗೀಕಾರ ಆಗಿದೆ. ಆದರೆ ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತ ಇಲ್ಲದ ಕಾರಣ ಮತಾಂತರ ನಿಷೇಧ ಮಸೂದೆ ಮಂಡನೆಗೆ ಮೀನಾಮೇಷ ಎಣಿಸುತ್ತಿದೆ. ಇಂದು ಮಸೂದೆಯನ್ನು ಮಂಡಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ನಿಲುವು ಬದಲಿಸಲಾಗಿದೆ. ಮಸೂದೆಯನ್ನು ಜನವರಿಯಲ್ಲಿ ಮಂಡಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮತಾಂತರ ಕಾಯ್ದೆ ವಿಧಾನಸಭೆಯಲ್ಲಿ ಪಾಸ್: ಕಟೀಲ್ ಸ್ವಾಗತ
ಇಂದು ಕಲಾಪದಲ್ಲಿ ಬಿಜೆಪಿಯ 30 ಸದಸ್ಯರು ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ 26 ಸದಸ್ಯರು ಉಪಸ್ಥಿತರಿದ್ದರು. ಮತಾಂತರ ನಿಷೇಧ ಮಸೂದೆ ಮಂಡನೆ ವಿಚಾರವಾಗಿ ಇಂದು ಪರಿಷತ್‌ನಲ್ಲಿ ಹೈಡ್ರಾಮಾ ನಡೆಯಿತು. ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ ಏರ್ಪಟ್ಟಿತು.
ಈ ವೇಳೆ ಮಾತನಾಡಿದ ಮರಿತಿಬ್ಬೇಗೌಡ, ನಾಳೆ ಬಿಲ್ ಮಂಡಿಸಿ. ಇವತ್ತೇ ಮಂಡಿಸಿ ಮಾಡಬೇಕಾದದ್ದೇನೂ ಇಲ್ಲ. ನಮ್ಮ ಕೆಲ ಸದಸ್ಯರು ಬರುವವರಿದ್ದಾರೆ. ನಾಳೆಯೇ ಅವಧಿ ಮುಗಿದವರ ವಿದಾಯ ಭಾಷಣಕ್ಕೆ ಅವಕಾಶ ಕೊಡಿ. ಕಲಾಪ ನಾಳೆಗೆ ಮುಂದೂಡುವಂತೆ ಮನವಿ ಮಾಡಿದರು. ಆದರೂ ಮಸೂದೆ ಮಂಡನೆ ವಿಚಾರವಾಗಿ ಗೊಂದಲ ಇದ್ದಿದ್ದರಿಂದ ಮುಂದೂಡಲಾಯಿತು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ
ಬೆಳಗಾವಿ: ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿರುವ ಮತಾಂತರ ನಿಷೇಧ ಮಸೂದೆ ವಿಧಾನ ಪರಿಷತ್ ಇಂದು ಮಂಡನೆಯಾಗುವ ಸಾಧ್ಯತೆ ಇದೆ.
ವಿಧಾನ ಪರಿಷತ್‌ನಲ್ಲಿ ದೊಡ್ಡ ಹೈಡ್ರಾಮಕ್ಕೆ ವೇದಿಕೆ ಸಿದ್ಧವಾಗಿದೆ. ಪ್ರತಿಪಕ್ಷಗಳ ಪ್ರಬಲ ವಿರೋಧವಿದ್ದರೂ ಬಹುಮತದ ಆಧಾರದ ಮೇಲೆ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಆದರೆ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಇಲ್ಲ. ಮಸೂದೆ ವಿರುದ್ಧ ಧ್ವನಿಯೆತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು, ಮಸೂದೆ ಮತಕ್ಕೆ ಹಾಕಿದಾಗ ಸೋಲಿಸಲು ಯೋಜನೆ ರೂಪಿಸಿವೆ. ಪ್ರತಿಪಕ್ಷಗಳ ಅಸ್ತ್ರಕ್ಕೆ ಬಿಜೆಪಿಯಿಂದಲೂ ಪ್ರತಿ ಅಸ್ತ್ರ ಪ್ರಯೋಗಿಸಲು ತಂತ್ರ ರೂಪಿಸಲಾಗಿದೆ. ಇದನ್ನೂ ಓದಿ: ಮತಾಂತರ ಕಾಯ್ದೆ ವಿಧಾನಸಭೆಯಲ್ಲಿ ಪಾಸ್: ಕಟೀಲ್ ಸ್ವಾಗತ
ಬೆಂಗಳೂರು: ಮತಾಂತರ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳೀನ್ ಕುಮಾರ್ ಕಟೀಲ್ ಅವರು ಸ್ವಾಗತಿಸಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಸಚಿವ ಸಂಪುಟವನ್ನು ಅಭಿನಂದಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ನಿಗದಿತ ಧರ್ಮವನ್ನು ಗುರಿಯಾಗಿಸಿ ಮಾಡಿದ ಕಾಯ್ದೆ ಇದಲ್ಲ. ಆದರೆ ಆಮಿಷ, ಉಡುಗೊರೆ, ಒತ್ತಾಯಪೂರ್ವಕವಾಗಿ ಮತಾಂತರ ಮಾಡುವುದನ್ನು ಇದು ತಡೆಯಲಿದೆ. ಈ ಕಾಯ್ದೆಯಲ್ಲಿ ಯಾವುದೇ ನಿರ್ದಿಷ್ಟ ಸಮುದಾಯದ ಬಗ್ಗೆ ಉಲ್ಲೇಖ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೋವು ನಮಗೆ ತಾಯಿ, ಪವಿತ್ರ: ನರೇಂದ್ರ ಮೋದಿ
ಧಾರ್ಮಿಕ ಸ್ವಾತಂತ್ರ್ಯ, ನಂಬಿಕೆ ಹಾಗೂ ಭಾವನೆಗೆ ಗೌರವ ಕೊಡುವ ಕಾಯ್ದೆ ಇದಾಗಿದೆ. ಈ ಕಾಯ್ದೆಯಡಿ ಧರ್ಮ ಪ್ರಚಾರಕ್ಕೆ ಅಡ್ಡಿ ಇಲ್ಲ. ಕಾಂಗ್ರೆಸ್ ಪಕ್ಷವು ಇದ್ಯಾವುದನ್ನೂ ಗಮನಿಸದೆ ವಿರೋಧಕ್ಕಾಗಿ ವಿರೋಧಿಸುವ ಪ್ರವೃತ್ತಿಯನ್ನು ತೋರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರ
ಬಿಜೆಪಿ ಈ ಹಿಂದೆ ಮತಾಂತರ ನಿಯಂತ್ರಣ ಕಾಯ್ದೆ ಜಾರಿ ಬಗ್ಗೆ ಭರವಸೆ ನೀಡಿತ್ತು. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಈಗ ಕಾಯ್ದೆ ಅನುಷ್ಠಾನಕ್ಕೆ ತರುತ್ತಿದ್ದು, ನುಡಿದಂತೆ ನಡೆವ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಚಿಕ್ಕಮಗಳೂರು: ಎಲ್ಲಾ ಜಾತಿ, ಧರ್ಮಗಳನ್ನು ಪ್ರೀತಿಸುವವನೇ ನಿಜವಾದ ಹಿಂದೂ. ಆದರೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜಾತಿ-ಧರ್ಮ, ಒಳಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲಾ ಜಾತಿ, ಧರ್ಮಗಳನ್ನ ಪ್ರೀತಿಸುವವನೇ ನಿಜವಾದ ಹಿಂದೂ. ಜಾತಿ-ಧರ್ಮಗಳನ್ನು ಕಟ್ಟುವಾಗ ಮತ್ತೊಂದು ಜಾತಿ-ಧರ್ಮದ ವಿರುದ್ಧ ಕಟ್ಟುವುದಿಲ್ಲ ಎಲ್ಲರನ್ನು ಪ್ರೀತಿ ಮಾಡಬೇಕು ಎಂಬ ನಿಟ್ಟಿನಲ್ಲಿ ಕಟ್ಟಲಾಗುತ್ತದೆ. ಯಾವುದೇ ಜಾತಿ, ಧರ್ಮ ಅಂದರೆ ಅದು ತಾಯಿ ಇದ್ದಂತೆ ಆಯಾಯ ಧರ್ಮದವರಿಗೆ ಅವರ ಧರ್ಮ, ಜಾತಿಯೇ ತಾಯಿ. ಇದು ಬಿಜೆಪಿಯವರಿಗೆ ಅರ್ಥವಾಗಬೇಕು ಎಂದು ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ವಿಗ್ ಒಳಗಡೆ ಡಿವೈಸ್ – ಪೊಲೀಸ್ ಪರೀಕ್ಷೆಯ ವೇಳೇ ಸಿಕ್ಕಿ ಬಿದ್ದ ಭೂಪ
ಮತಾಂತರ ಕಾಯ್ದೆಯ ಕಡತಕ್ಕೆ ಸಿದ್ದರಾಮಯ್ಯ ಸಹಿ ಹಾಕಿದ್ದರು ಎಂಬ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಸಹಿ ಹಾಕಿದ್ದರೆ ಅದರಲ್ಲಿ ಜನರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಯೋಚಿಸಿರುವುದಿಲ್ಲ. ಬಿಜೆಪಿಯವರು ವಿಧಾನಸೌಧದಲ್ಲಿ ಬಾಯಿ ಬಡಿದುಕೊಳ್ಳಬೇಕು ಅಷ್ಟೇ. ಆದರೆ ವಿಷಯ ಏನು ಎಂಬುದನ್ನು ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ನೆಪವಾಗಿ ಇಟ್ಟುಕೊಂಡಿದ್ದಾರೆ. ಬಿಜೆಪಿಯವರು ಇರುವ ಕಾನೂನನ್ನು ಬಿಗಿ ಮಾಡುವ ಅಗತ್ಯ ಇದೆ. ಆದರೆ ಮೂರೂವರೆ ವರ್ಷಗಳ ಕಾಲ ಸುಮ್ಮನಿದ್ದು ಈಗ ಮತಾಂತರ ಕಾಯ್ದೆ ತರಲು ಹೊರಟಿರುವ ಹಿಂದೆ ದುರುದ್ದೇಶ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ನಗರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಹಾಗಾಗಿ, ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ ಎಂಬ ವಿಶ್ವಾಸ ಕಂಡು ಬರುತ್ತಿದೆ. ಕಾಂಗ್ರೆಸ್ ತಮ್ಮ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಮೂಲಕ ಚುನಾವಣೆ ಎದುರಿಸುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಕೆಎಫ್‍ಸಿ ಚಿಕನ್‍ನಲ್ಲಿ ಮಹಿಳೆಗೆ ಸಿಕ್ತು ಕೋಳಿ ತಲೆ
ದೇಶ ಹಾಗೂ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆ ಹಾಗೂ ಹಾನಗಲ್-ಸಿಂಧಗಿಯ ಉಪಚುನಾವಣೆ ಫಲಿತಾಂಶವನ್ನು ಗಮನಿಸಿದರೆ ಇಡೀ ರಾಜ್ಯದ ಜನರ ಭಾವನೆ ಬದಲಾವಣೆಯತ್ತ ಸಾಗಿದೆ ಎಂಬುದು ಕಂಡು ಬರುತ್ತಿದೆ. ಕಾಂಗ್ರೆಸ್ ಪಕ್ಷ ದೇಶ ಹಾಗೂ ರಾಜ್ಯದಲ್ಲಿ ಕಾರ್ಯಕ್ರಮಗಳನ್ನು ನೀಡಿ ಅದನ್ನು ಅನುಷ್ಟಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಭೂದಾನ, ರೈತರಿಗೆ ಉಚಿತ ವಿದ್ಯುತ್, ಅನ್ನಭಾಗ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ಕಾಂಗ್ರೆಸ್‍ಗೆ ಸೇರುತ್ತದೆ. ಆದರೆ ಅನ್ನ ಭಾಗ್ಯಕ್ಕೂ ಕತ್ತರಿ ಹಾಕಿದ ಅಪಕೀರ್ತಿ ಬಿಜೆಪಿಯದ್ದು ಎಂದು ವ್ಯಂಗ್ಯವಾಡಿದರು.
ಬೆಳಗಾವಿ: 2016ರಲ್ಲಿ ಕಾಂಗ್ರೆಸ್ ಸರ್ಕಾರ ಮತಾಂತರ ಬಿಲ್ ತರಲು ತಯಾರಿ ನಡೆಸಿತ್ತು. ಬಿಲ್ ತರೋದನ್ನು ತಡೆದಿದ್ದು ಸೋನಿಯಾ ಗಾಂಧಿ. ಕುರ್ಚಿಗೆ ಕಂಟಕ ಬರುತ್ತೆ ಎಂಬ ಭಯದಲ್ಲಿ ಸಿದ್ದರಾಮಯ್ಯ ಈ ಮಸೂದೆ ತರಲಿಲ್ಲ ಎಂದು ಬಿಜೆಪಿ ಆರೋಪದ ಬೆನ್ನಲ್ಲೇ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಬಲವಂತವಾಗಿ, ಆಸೆ ಆಮಿಷ ಒಡ್ಡಿ ಅಥವಾ ಮೋಸದಿಂದ ಮತಾಂತರ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ನಮ್ಮ ಸಂವಿಧಾನದಲ್ಲೇ ಸ್ಪಷ್ಟವಾಗಿ ಇರುವುದರಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಹೊಸ ಮತಾಂತರ ನಿಷೇಧ ಕಾಯ್ದೆಯ ಅಗತ್ಯವೇನಿದೆ? ಇದೇ ಕಾರಣಕ್ಕೆ ನಾವು ಕಾಯ್ದೆಯನ್ನು ವಿರೋಧ ಮಾಡುತ್ತಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ ಮತಾಂತರ ನಿಷೇಧ ಕಾಯ್ದೆಯ ಕರಡು ಸಂಪುಟದಲ್ಲಿ ಚರ್ಚೆಯೂ ಆಗಿಲ್ಲ, ಅನುಮೋದನೆಯೂ ಆಗಿಲ್ಲ. ಕೇವಲ ಸಂಪುಟದ ಚರ್ಚೆಗೆ ತನ್ನಿ ಎಂದು ಸಹಿ ಹಾಕಿದ ಕಡತಗಳೆಲ್ಲವೂ ಸರ್ಕಾರದ ನಿಲುವು ಆಗುವುದಿಲ್ಲ. ಇದನ್ನೂ ಓದಿ: 2016ರಲ್ಲೇ ಮತಾಂತರ ಬಿಲ್ – ಕಾಂಗ್ರೆಸ್ ಡಬಲ್ ಸ್ಟ್ಯಾಂಡರ್ಡ್
ಸಂಸದೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಎಂದರೆ ಸಮಾನರಲ್ಲಿ ಮೊದಲಿಗ ಎಂಬ ವ್ಯಾಖ್ಯಾನವಿದೆ. ಮುಖ್ಯಮಂತ್ರಿಯಾಗಿ ನಾನೊಬ್ಬನೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಬರಲ್ಲ, ಕರಡು ಪ್ರತಿ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿ ಎಂಬ ಕಾರಣಕ್ಕೆ ಸಹಿ ಮಾಡಿದ್ದೆ. ಸಹಿ ಮಾಡಿದ ಮಾತ್ರಕ್ಕೆ ಒಪ್ಪಿದ್ದೆ ಎಂದಲ್ಲ. ನಾನು ಮತಾಂತರ ನಿಷೇಧ ಕಾಯಿದೆಯ ಕಡತವನ್ನು ಸಂಪುಟದ ಮುಂದೆ ತರುವಂತೆ ಸಹಿ ಹಾಕಿದ್ದು 2015 ರ ನವೆಂಬರ್ ತಿಂಗಳಿನಲ್ಲಿ. ಇದಾಗಿ ಎರಡೂವರೆ ವರ್ಷ ನಾವು ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ಅದನ್ನು ಸಂಪುಟದ ಮುಂದೆ ತರುವ ಪ್ರಯತ್ನ ಮಾಡಲಿಲ್ಲ. ಕಾರಣ ನಮ್ಮ ಸರ್ಕಾರಕ್ಕೆ ಇಂಥಾ ಮಸೂದೆಯ ಬಗ್ಗೆ ಆಸಕ್ತಿ ಇರಲಿಲ್ಲ. ಮತಾಂತರ ನಿಷೇಧ ಕುರಿತ ಈ ಹಿಂದಿನ ಕರಡು ಪ್ರತಿಗೂ, ಈಗಿನ ಮಸೂದೆಗೂ ಇರುವ ಪ್ರಮುಖ ವ್ಯತ್ಯಾಸಗಳೆಂದರೆ. ಮೊದಲನೆಯದು ಹಿಂದಿನ ಕರಡು ಪ್ರತಿಯ ನಿಯಮ 3ರಲ್ಲಿ ವಿವಾಹ ಎಂಬ ಪದ ಬಳಕೆ ಇರಲಿಲ್ಲ. ಬಿಜೆಪಿಯವರು ತಮ್ಮ ಕಾಯ್ದೆಯಲ್ಲಿ ವಿವಾಹವನ್ನು ಹೊಸದಾಗಿ ಸೇರಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರ
ಭಾರತೀಯ ದಂಡ ಸಂಹಿತೆಯ ಪ್ರಕಾರ ಸಾಕ್ಷಾಧಾರಗಳ ಕೊರತೆ ಕಂಡುಬಂದರೆ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಈ ಹೊಸ ಮಸೂದೆಯ ನಿಯಮ 12 ರ ಪ್ರಕಾರ ಸಾಕ್ಷಾಧಾರ ಕೊರತೆ ಇದ್ದರೂ ಅದು ದೂರುದಾರನಿಗೆ ಅನುಕೂಲ ಮಾಡಿಕೊಡಲಿದೆ. ಹೀಗಾಗಿ ಇದು ಕಾನೂನಿನ ನಿಯಮಗಳಿಗೆ ವಿರುದ್ಧವಾಗಿದೆ. ಸಂವಿಧಾನದ 21 ಮತ್ತು 25ನೇ ವಿಧಿಯನ್ವಯ ಒಬ್ಬ ವ್ಯಕ್ತಿ ತನಗಿಷ್ಟವಾದ (ಯಾವುದೇ ಧರ್ಮಕ್ಕೆ ಸೇರಿದವರಾದರೂ ಸರಿ) ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಲು ಸಂಪೂರ್ಣ ಸ್ವಾತಂತ್ರ್ಯ ನೀಡಿರುವಾಗ, ಅದನ್ನು ಬೇಡ ಎನ್ನಲು ಸರ್ಕಾರಕ್ಕೇನು ಹಕ್ಕಿದೆ? ಇದೇ ಕಾರಣಕ್ಕೆ ಗುಜರಾತ್ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಮತಾಂತರ ನಿಷೇಧ ಕಾಯ್ದೆಗೆ ತಡೆಯಾಜ್ಞೆ ನೀಡಿರುವ ಗುಜರಾತ್ ಹೈಕೋರ್ಟ್, ಅಲ್ಲಿನ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇದನ್ನೂ ಓದಿ: ಮತಾಂತರ ತಡೆ ಮಸೂದೆಯಲ್ಲಿರುವ ಪ್ರಮುಖ ಅಂಶಗಳು ಏನು?
ಗುಜರಾತ್, ಉತ್ತರ ಪ್ರದೇಶ ಸರ್ಕಾರಗಳ ಮತಾಂತರ ನಿಷೇಧ ಕಾಯ್ದೆಯಲ್ಲಿ ಬಳಕೆ ಮಾಡಿರುವ ಪದಗಳು, ವಾಕ್ಯಗಳೇ ಇಲ್ಲಿಯೂ ಯಥಾವತ್ತಾಗಿವೆ. ಈ ಎಲ್ಲಾ ಸರ್ಕಾರಗಳ ಕರಡು ತಯಾರಿಕೆಯ ಹಿಂದೆ ಯಾವುದೋ ಒಂದು ಕಾಣದ ಕೈ ಇದೆ ಎಂಬ ಅನುಮಾನ ನನಗಿದೆ. ಅದು ಯಾವುದು ಎಂದು ಬಿಜೆಪಿ ಸರ್ಕಾರ ಬಹಿರಂಗಪಡಿಸಬೇಕು. ದೇಶದಲ್ಲಿ ಶತಮಾನಗಳ ಹಿಂದಿನಿಂದಲೂ ಮತಾಂತರ ನಡೆದುಕೊಂಡು ಬಂದಿದೆ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಪಂಪ, ರನ್ನರು ಜೈನ ಧರ್ಮಕ್ಕೆ ಮತಾಂತರ ಗೊಂಡರು. ಸಾಮ್ರಾಟ್ ಆಶೋಕ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಹೋಗಿಲ್ಲವೇ? ಇದಕ್ಕೆ ಕಾರಣವೇನು ಎಂಬುದು ಯಾರಿಗೂ ತಿಳಿಯದ ವಿಷಯವಲ್ಲ. ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ ಬ್ರಾಹ್ಮಣರಾಗಿ ಹುಟ್ಟಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲವೇ? ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಲಕ್ಷಾಂತರ ಜನರ ಜೊತೆಗೆ ಬೌದ್ಧ ಧರ್ಮಕ್ಕೆ ಮತಾಂತರ ಆಗಿಲ್ಲವೇ? ಇವರ್ಯಾರು ಅಧಿಕಾರವೋ ಅಥವಾ ಇನ್ಯಾವುದೋ ಕಾರಣಕ್ಕೆ ಮತಾಂತರಗೊಂಡವರಲ್ಲ. ರಾಜ್ಯದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಕ್ರಿಶ್ಚಿಯನ್ ಮತ್ತು ಮುಸ್ಲಿಂಮರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ.
2001 ಮತ್ತು 2011 ರ ಜನಗಣತಿಯನ್ನು ನೋಡಿದರೆ ಸತ್ಯ ಏನೆಂದು ಅರಿವಾಗುತ್ತದೆ. 2001 ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ 83.86% ಹಿಂದೂಗಳ ಪ್ರಮಾಣ ಇತ್ತು, ಅದು 2011 ಕ್ಕೆ ಶೇ. 84 ಕ್ಕೆ ಏರಿಕೆಯಾಗಿದೆ. ಮುಸ್ಲಿಮರ ಪ್ರಮಾಣ 12.23% ಇಂದ 12.92 ಕ್ಕೆ ಹೆಚ್ಚಾಗಿದೆ. ಕ್ರೈಸ್ತರ ಪ್ರಮಾಣ 1.91% ಇಂದ 1.87% ಗೆ ಇಳಿಕೆಯಾಗಿದೆ. ಇದು ನಮ್ಮ ರಾಜ್ಯದ ವಾಸ್ತವ ಸ್ಥಿತಿ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಸಂವಿಧಾನದ ಮೂಲ ನಿಯಮ. ಆದರೆ ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯಲ್ಲಿ ಮಹಿಳೆಯರು, ಅಪ್ರಾಪ್ತರು, ಬುದ್ಧಿಭ್ರಮಣೆಯಾದವರು, ಪರಿಶಿಷ್ಟ ಜಾತಿ ಮತ್ತು ವರ್ಗದವರನ್ನು ಕಾನೂನು ಬಾಹಿರವಾಗಿ ಮತಾಂತರ ಮಾಡಿದರೆ ಮಾತ್ರ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. ಈ ಅಸಮಾನತೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಹಿಂದೂ ಧರ್ಮದ ಜಾತಿಯತೆ, ಅಸ್ಪೃಶ್ಯತೆ, ಅಸಮಾನತೆಗಳನ್ನು ಕಿತ್ತುಹಾಕಲು ಪ್ರಯತ್ನ ಮಾಡಿದ ಬಾಬಾ ಸಾಹೇಬರು, ಅದು ಸಾಧ್ಯವಾಗದಿದ್ದಾಗ “ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ” ಎಂದು ಬೌದ್ಧ ಧರ್ಮಕ್ಕೆ ಮತಾಂತರ ಗೊಂಡರು. ಜೊತೆಗೆ ಲಕ್ಷಾಂತರ ಜನರಿಗೆ ಸ್ವ ಇಚ್ಛೆಯಿಂದ ಮತಾಂತರಗೊಳ್ಳಲು ಕರೆನೀಡಿದ್ದು ನಿಜವಲ್ಲವೇ? ಬಲವಂತದಿಂದ, ಆಸೆ ಆಮಿಷ ಒಡ್ಡಿ, ಹೆದರಿಸಿ ಬೆದರಿಸಿ, ಮೋಸದ ಮೂಲಕ ಮತಾಂತರ ಮಾಡುವುದನ್ನು ನಾನು ವಿರೋಧಿಸುತ್ತೇನೆ. ಇದರ ಜೊತೆಗೆ ಜಾತೀಯತೆ, ಅಸ್ಪೃಶ್ಯತೆ ಅನುಸರಿಸುತ್ತಿರುವವರಿಗೂ ಕಠಿಣ ಶಿಕ್ಷೆಯಾಗಬೇಕು ಎಂಬುದು ನನ್ನ ಒತ್ತಾಯ.
ಮತಾಂತರವನ್ನು ದೂಷಿಸುವ ಬದಲು, ಮತಾಂತರವಾಗಲು ನಮ್ಮಲ್ಲಿರುವ ದೋಷಗಳೇನು ಎಂಬುದನ್ನು ಗುರುತಿಸಿ ಸರಿಪಡಿಸುವ ಕೆಲಸವನ್ನು ಮಾಡಬೇಕು ಎಂದು ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಇದು ನಾವು ಮಾಡಲೇಬೇಕಾದ ಕೆಲಸ. ರಾಜ್ಯ ಬಿಜೆಪಿ ಸರ್ಕಾರದ ಮತಾಂತರ ನಿಷೇಧ ಕಾಯ್ದೆ ಅಮಾನವೀಯ, ಸಂವಿಧಾನ ಬಾಹಿರ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದು, ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯ ಮಾಡುತ್ತೇನೆ.
ಬೆಳಗಾವಿ: ವಿಪಕ್ಷಗಳ ತೀವ್ರ ವಿರೋಧ, ಗದ್ದಲ ಕೋಲಾಹಲದ ನಡುವೆಯೂ ನಿರೀಕ್ಷೆಯಂತೆ ವಿಧಾನಸಭೆಯಲ್ಲಿ ಬಲವಂತದ ಮತಾಂತರ ನಿಗ್ರಹ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ.
ಇಂದು ಬೆಳಗ್ಗೆಯಿಂದ ಚರ್ಚೆ ಆರಂಭಿಸಲಾಯಿತು. ಸಂಜೆ ಕಾಂಗ್ರೆಸ್ ವಿರೋಧದ ಮಧ್ಯೆ ಮಸೂದೆಯನ್ನು ಅಂಗೀಕರಿಸಲಾಗಿದೆ. ಇದು ಆರ್‌ಎಸ್‌ಎಸ್‌ನ ಹಿಡನ್ ಅಜೆಂಡಾ ಎಂದು ಸಿದ್ದರಾಮಯ್ಯ ಆರೋಪಿಸಿದ್ರೆ, ಸಚಿವ ಈಶ್ವರಪ್ಪ, ಹೌದು, ನಾವೆಲ್ಲ ಬಿಜೆಪಿ ಅವರು ಆರ್‌ಎಸ್‌ಎಸ್, ಆರ್‌ಎಸ್‌ಎಸ್‌ನಿಂದಲೇ ನಾವು ಬಿಲ್ ತಂದಿದ್ದೇವೆ ಎಂದು ಘೋಷಿಸಿದ್ರು. ಅಷ್ಟೇ ಅಲ್ಲ ಹಿಂದೂ ಧರ್ಮದ ಸಂರಕ್ಷಣೆಗೆ ಇನ್ನೂ ಮೂರು ಬಿಲ್ ತರುತ್ತೇವೆ ಎಂದರು. ನಾವು ಯಾರ ತಂಟೆಗೂ ಹೋಗಲ್ಲ. ಆದರೆ ನಮ್ಮ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ. ಚಿಂದಿ ಚಿಂದಿ ಮಾಡ್ತೀವಿ ಎಂದ ಸದನದಲ್ಲೇ ನೇರಾ ನೇರ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರ
2016ರಲ್ಲಿ ಬಿಲ್ ತರೋದನ್ನು ತಡೆದಿದ್ದು ಸೋನಿಯಾ ಗಾಂಧಿ. ಕುರ್ಚಿಗೆ ಕಂಟಕ ಬರುತ್ತೆ ಎಂಬ ಭಯದಲ್ಲಿ ಸಿದ್ದರಾಮಯ್ಯ ಈ ಮಸೂದೆ ತರಲಿಲ್ಲ ಎಂದು ಛೇಡಿಸಿದ್ರು. ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ಹೊರಹಾಕಿದರು. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ರು. ಇದನ್ನೂ ಓದಿ: ಮತಾಂತರ ತಡೆ ಮಸೂದೆಯಲ್ಲಿರುವ ಪ್ರಮುಖ ಅಂಶಗಳು ಏನು?
ಬಿಜೆಪಿ ಸದಸ್ಯರು ಕಮ್ಮಿ ಇಲ್ಲ ಎಂಬಂತೆ ಭಾರತ್ ಮಾತಾಕೀ. ಜೈ ಶ್ರೀರಾಮ್ ಎಂಬ ಘೋಷಣೆ ಮೊಳಗಿಸಿದ್ರು. ಬಿಲ್ ಪಾಸ್ ಮಾಡಿಕೊಳ್ಳಲಿ ಅಂತಾ ಅವರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ, ಬಿಲ್ ಪಾಸ್ ಮಾಡಿ. ಬೇರೆ ಕಲಾಪದ ನಡಾವಳಿ ನಡೆಸಿ ಎಂದು ಸ್ಪೀಕರ್‌ಗೆ ಯಡಿಯೂರಪ್ಪ ಸಲಹೆ ನೀಡಿದ್ರು. ಕೊನೆಗೆ ಸಿಎಂ ಬೊಮ್ಮಾಯಿ ಮಾತನಾಡಿ 2014ರಿಂದ 2016ರ ತನಕ ಏಕೆ ಒಪ್ಪಿಕೊಂಡ್ರು ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನೆ ಮಾಡಿದ್ರು. ಆರ್‌ಎಸ್‌ಎಸ್ ಕಾನೂನು ಪರ ಇದೆ. ಇದು ಓಪನ್ ಸೀಕ್ರೆಟ್. ಸಂಘದ ನೀತಿಯನ್ನು ಏಕೆ ಒಪ್ಪಿ ನೀವು ಬಿಲ್ ಪರಿಶೀಲನೆ ಮಾಡಿದ್ರಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ
ಗದ್ದಲ ಕೋಲಾಹಲದ ನಡುವೆ ಸ್ಪೀಕರ್ ಧ್ವನಿಮತದ ಮೂಲಕ ಮಸೂದೆ ಅಂಗೀಕರಿಸಿದ್ರು. 10 ನಿಮಿಷ ಸದನ ಮುಂದೂಡಿದ್ರು. ಕೂಡಲೇ ಸ್ಪೀಕರ್ ಕೊಠಡಿಯಲ್ಲಿ ಸಿಎಂ, ಸಚಿವರು ಸಭೆ ನಡೆಸಿದ್ರು. ಅಧಿವೇಶನ ನಾಳೆ ಮುಗಿಯಲಿದ್ದು, ಪರಿಷತ್‍ನಲ್ಲಿ ನಾಳೆಯೇ ಈ ಮಸೂದೆ ಮಂಡಿಸಿ, ಅನುಮೋದನೆ ಪಡೆಯಲು ಬಿಜೆಪಿ ಪ್ಲಾನ್ ಮಾಡಿದೆ.
ಬೆಳಗಾವಿ: ವಿಪಕ್ಷಗಳ ತೀವ್ರ ವಿರೋಧದ ನಡುವೆ ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರಗೊಂಡಿದೆ.
ಬಿಜೆಪಿ ಮತಾಂತರ ತಡೆ ವಿಧೇಯಕ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಬಳಿಕ ಧ್ವನಿ ಮತದ ಮೂಲಕ ಬಿಲ್ ಅಂಗೀಕಾರ ಪಡಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧೇಯಕ ಪಾಸ್ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಆದರೆ ಕಾಂಗ್ರೆಸ್ ಸದನದಲ್ಲಿ ಗದ್ದಲ ನಡೆಸಿತು. ಈ ನಡುವೆಯೇ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021 ಅಂಗೀಕಾರಗೊಂಡಿತು. ಇದನ್ನೂ ಓದಿ: ಮತಾಂತರ ತಡೆ ಮಸೂದೆಯಲ್ಲಿರುವ ಪ್ರಮುಖ ಅಂಶಗಳು ಏನು?
ಸದನದಲ್ಲಿ ಗದ್ದಲ, ಮಾತಿನ ಚಕಮಕಿ
ಕಾಂಗ್ರೆಸ್‍ನವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದು ಸಮಾಜದ ಪರ ಇರುವ ಮಸೂದೆ ಎಂದ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ದ್ವಿಮುಖ ನೀತಿ ಕಾಂಗ್ರೆಸ್‍ನದ್ದು, ಈ ಹಿಂದೆ 2014ರಿಂದ 2016ರ ಅವಧಿಯಲ್ಲಿ ಕಾಂಗ್ರೆಸ್ ಮತಾಂತರ ಬಿಲ್ ಮಂಡಿಸಲು ಮುಂದಾಗಿತ್ತು. ನಿಮ್ಮ ಕಾನೂನು ಸಚಿವರು ಪರಿಶೀಲನೆಗೆ ಒಪ್ಪಿ ಸಹಿ ಹಾಕಿದ್ದಾರೆ. ಆರ್‌ಎಸ್‌ಎಸ್ ಕಾನೂನು ಪರ ಇದೆ, ಇದು ಓಪನ್ ಸೀಕ್ರೆಟ್. ಆರ್‌ಎಸ್‌ಎಸ್ ನೀತಿಯನ್ನು ಏಕೆ ಒಪ್ಪಿ ನೀವು ಬಿಲ್ ಪರಿಶೀಲನೆ ಮಾಡಿದ್ರಿ ಎಂದು ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು ನೀಡಿದರು. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ
ಬೆಳಗಾವಿ: 2023 ರ ಚುನಾವಣೆ ಬೊಮ್ಮಾಯಿ ನಾಯಕತ್ವದಲ್ಲೇ ನಡೆಯುತ್ತದೆ. ಸರ್ಕಾರ ತೆಗೆಯಬೇಕೆಂಬ ಹುಚ್ಚರಿದ್ದಾರೆ. ಆದರೆ ಈ ಬಗ್ಗೆ ಕ್ರಮವಹಿಸಲಾಗುತ್ತದೆ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆ ಕನಸುಕಾಣುತ್ತಿದ್ದ ನಾಯಕರಿಗೆ ವಸತಿ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಎಲ್ಲವೂ ಸಿಎಂ ಪರಮಾಧಿಕಾರ. 2023 ರ ಚುನಾವಣೆ ಬೊಮ್ಮಾಯಿ ನಾಯಕತ್ವದಲ್ಲಿ ನಡೆಯುತ್ತದೆ. ಗೊಂದಲ ಇದ್ದರೆ ಅದು ಮಾಧ್ಯಮದಲ್ಲಿ, ನಮ್ಮಲ್ಲಿ ಅಲ್ಲ. ನಮ್ಮ ಪಕ್ಷ ಅದಕ್ಕೆ ಮನ್ನಣೆ ಕೊಡಲ್ಲ. ತಿರುಕನ ಕನಸು ಕಾಣುವ ಜನರಿದ್ದಾರೆ. ಬಸವರಾಜ್ ಬೊಮ್ಮಾಯಿ 4 ತಿಂಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸರ್ಕಾರ ತೆಗೆಯಬೇಕೆಂಬ ಹುಚ್ಚರಿದ್ದಾರೆ. ಅಂಥವರ ವಿರುದ್ಧ ಪಕ್ಷ ಕ್ರಮವಹಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ 21 ವಯಸ್ಸಿನವರೂ ʻಎಣ್ಣೆʼ ಹೊಡಿಯಬಹುದು – ಹರಿಯಾಣ
ಇದೇ ವೇಳೆ ಮತಾಂತರ ನಿಷೇಧ ಮಸೂದೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪರಿಸ್ಥಿತಿ ಏನು ಎನ್ನುವುದಕ್ಕಿಂತ ಏನಿದೆ ಎನ್ನುವ ಬಗ್ಗೆ ಯೋಚಿಸಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂಪುಟದಲ್ಲಿ ಮತಾಂತರ ಮಸೂದೆ ಜಾರಿಗೆ ತರಲು ಅನುಮತಿ ನೀಡಿದ್ದಾರೆ. ನಾವು ಕೆಲವೊಂದು ಮಾರ್ಪಾಡು ಮಾಡಿದ್ದೇವೆ ಅಷ್ಟೇ. ಇಂತಹ ಅವ್ಯವಸ್ಥೆಗಳು ಸರಿಯಾಗಬೇಕು ಎಂದು ಈ ಕಾಯ್ದೆಯಲ್ಲಿ ತರಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೋಣಿಚೀಲದಲ್ಲಿ ನವಜಾತ ಶಿಶುವಿನ ಶವ ಪತ್ತೆ – ತಾಯಿ, ಪ್ರಿಯಕರನ ಬಂಧನ
ಕಾನೂನು ಸಚಿವ ಮಾಧುಸ್ವಾಮಿ ಈ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದಾರೆ. ನಮಗೆ ಎಲ್ಲಕ್ಕಿಂತ ದೊಡ್ಡದು ರಾಜ್ಯ. ರಾಜ್ಯಕ್ಕಿಂತ ದೊಡ್ಡದು ದೇಶ. ದೇಶಕ್ಕಿಂತ ದೊಡ್ಡದು ಸಮಾಜ. ಸಮಾಜದಲ್ಲಿ ಮತಾಂತರ ಕಾಯ್ದೆ ತಂದಿರುವುದು ಒಳ್ಳೆಯದಕ್ಕಾಗಿ. ಅವರು ತಂದಿರುವುದನ್ನು ನಾವು ಒಪ್ಪಿಕೊಂಡಿದ್ದೇವೆ. ನೀವು ಮಾಡಿರುವುದು ಸಮಂಜಸವಾಗಿದೆ. ಚರ್ಚೆ ಇಲ್ಲದೆ ಕಾಯ್ದೆ ಒಪ್ಪಿಕೊಂಡರೆ ಸ್ವಲ್ಪ ಬೆಲೆ ಇರುತ್ತದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ರಾಜ್ಯ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ ಕಾಯಿದೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನ ವಿರೋಧಿ ಕಾನೂನು. ಇದು ಆರ್‌ಎಸ್‌ಎಸ್‌ನವರ ಅಜೆಂಡಾ. ಈ ಸರ್ಕಾರ ಸಾಧನೆ ಎಂದು ಹೇಳಿಕೊಳ್ಳಲು ಯಾವ ಕೆಲಸಗಳನ್ನು ಮಾಡಿಯೇ ಇಲ್ಲ, ಹಾಗಾಗಿ ಇಂಥದ್ದೊಂದು ವಿವಾದಾತ್ಮಕ ಕಾನೂನು ಜಾರಿ ಮಾಡಿ ಎಂದು ಆರ್‌ಎಸ್‌ಎಸ್‌ನವರೇ ಸರ್ಕಾರಕ್ಕೆ ಹೇಳಿರುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.
ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಸದನದಲ್ಲಿ ಮಂಡಿಸಿದ ಬಳಿಕ ಸಭಾತ್ಯಾಗ ಮಾಡಿ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಪರಿಷತ್ ಚುನಾವಣೆಯ ಫಲಿತಾಂಶ ಇಂಥದ್ದೊಂದು ವಿವಾದಾತ್ಮಕ ಕಾನೂನು ಜಾರಿ ಮಾಡಲು ಕಾರಣ. ನಮಗೆ 45% ಮತ ಬಿದ್ದಿದೆ, ಬಿಜೆಪಿಗೆ 41% ಮತ ಬಿದ್ದಿದೆ. ಹೋದ ಮಾನ ಉಳಿಸಿಕೊಳ್ಳಲು ಸರ್ಕಾರ ಸಂವಿಧಾನ ಬಾಹಿರ ಕಾನೂನು ಜಾರಿ ಮಾಡಲು ಹೊರಟಿದೆ. ಭಾರತದ ಸಂವಿಧಾನದ ಆಧಾರದ ಮೇಲೆ ಸರ್ಕಾರ ನಡೆಸಬೇಕು, ಪಾಕಿಸ್ತಾನದ ಸಂವಿಧಾನ ನೋಡಿಕೊಂಡಲ್ಲ. ಈಶ್ವರಪ್ಪ ಅವರಿಗೆ ನಮ್ಮ ಸಂವಿಧಾನದ ಬಗ್ಗೆ ಗೊತ್ತಿಲ್ಲ ಎಂದು ಕಾಣುತ್ತದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆಯನ್ನು ಹರಿದು ಹಾಕಿದ್ದೇನೆ, ಇದು ನನ್ನ ಹಕ್ಕು: ಡಿಕೆಶಿ
ಕದ್ದು ಮುಚ್ಚಿ ಮಸೂದೆ ಮಂಡನೆ: ಕಲಾಪದ ಇಂದಿನ ಅಜೆಂಡಾದಲ್ಲಿ ಮತಾಂತರ ನಿಷೇಧ ಕಾಯ್ದೆಯ ಪ್ರಸ್ತಾಪ ಇರಲಿಲ್ಲ. ಇಂದು ಮಧ್ಯಾಹ್ನ ಊಟದ ವಿರಾಮಕ್ಕೆ ತೆರಳುವ ಮೊದಲು ಆರ್.ಅಶೋಕ್ ಅವರು ನೆರೆ, ಅತಿವೃಷ್ಟಿ ಪರಿಹಾರ ಕಾರ್ಯದ ಉತ್ತರ ನೀಡಲು ಆರಂಭ ಮಾಡಿದ್ದರು. ಉತ್ತರ ಮುಗಿದ ಮೇಲೆ ಬೇರೆ ವಿಷಯ ಕೈಗೆತ್ತಿಕೊಳ್ಳುವುದು ನಿಯಮ. ಆದರೆ ಸರ್ಕಾರ ಹೆಚ್ಚುವರಿ ಅಜೆಂಡಾವನ್ನು ಸೇರಿಸಿ ಇದ್ದಕ್ಕಿದ್ದಂತೆ ಮತಾಂತರ ನಿಷೇಧ ಕಾಯಿದೆಯನ್ನು ಪ್ರಸ್ತಾಪ ಮಾಡಿ, ಸದನದ ಮತಕ್ಕೆ ಹಾಕಿತು. ಸರ್ಕಾರ ಸಭಾಧ್ಯಕ್ಷರ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಕದ್ದು ಮುಚ್ಚಿ ಮಸೂದೆಯನ್ನು ಮಂಡಿಸಿದೆ. ಈ ಮಸೂದೆ ಮಂಡನೆಗೆ ಅಂತಹಾ ತುರ್ತು ಏನಿತ್ತು? ನಾಳೆ ಅಥವಾ ನಾಡಿದ್ದು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲು ಸರ್ಕಾರದ ಬಳಿ ಸಮಯವಿತ್ತು. ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಈ ಕಾನೂನು ಜಾರಿ ಮಾಡಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಗುಜರಾತ್ ನ್ಯಾಯಾಲಯ ಮತಾಂತರ ನಿಷೇಧ ಕಾನೂನಿಗೆ ತಡೆಯಾಜ್ಞೆ ನೀಡಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಕಾಯ್ದೆ ಜಾರಿಯನ್ನು ತಡೆಹಿಡಿಯಲಾಗಿದೆ ಎಂದರು. ಇದನ್ನೂ ಓದಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಮಂಡನೆ
ಅವರವರ ಹಕ್ಕು: ಸಂವಿಧಾನದ 25ನೇ ಆರ್ಟಿಕಲ್ ವ್ಯಕ್ತಿಗೆ ಯಾವುದೇ ಧರ್ಮವನ್ನು ಅನುಸರಿಸುವ, ಸ್ವೀಕರಿಸುವ, ಪ್ರಚಾರ ಮಾಡುವ ಹಕ್ಕು ನೀಡಿದೆ. ಮಹಿಳೆ ಅಥವಾ ಪುರುಷನ ಸಂಗಾತಿ ಆಯ್ಕೆಯ ಹಕ್ಕನ್ನು ಈ ಕಾಯ್ದೆ ಕಸಿಯಲು ಹೊರಟಿದೆ. ಯಾರು ಯಾರನ್ನು ಮದುವೆಯಾಗಬೇಕು ಎಂದು ಸರ್ಕಾರ ನಿರ್ಧಾರ ಮಾಡಲು ಬರುತ್ತಾ? ಈ ಕಾನೂನು ಸಂವಿಧಾನ ಬಾಹಿರವಾಗಿದೆ ಎಂದು ಹೇಳಲು ನಮಗೆ ಅವಕಾಶವನ್ನೇ ನೀಡಿಲ್ಲ. ಕದ್ದು ಮುಚ್ಚಿ ಕಾಯಿದೆ ಜಾರಿ ಮಾಡುವ ಅಗತ್ಯವೇನಿದೆ? ಆರ್.ಅಶೋಕ್ ಅವರು ಅತಿವೃಷ್ಟಿ, ಪ್ರವಾಹ ಪರಿಹಾರ ಕಾರ್ಯದ ಬಗ್ಗೆ ಉತ್ತರ ನೀಡುತ್ತಿದ್ದಾರೆ. ಸಂವಿಧಾನ ಬಾಹಿರವಾಗಿರುವ ಸರ್ಕಾರ ನೀಡುವ ಉತ್ತರ ನಾವು ಕೇಳಲು ಸಿದ್ಧರಿಲ್ಲ. ಹೀಗಾಗಿ ಸಭಾತ್ಯಾಗ ಮಾಡಿದ್ದೇವೆ. ನಾಳೆ ನಡೆಯುವ ಕಲಾಪದ ಚರ್ಚೆಯಲ್ಲಿ ಭಾಗವಹಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ
ಸರ್ಕಾರದ ಬಣ್ಣ ಬಯಲು ಮಾಡುತ್ತೇವೆ!: ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಕೊರೊನಾದಿಂದ ಸತ್ತವರಿಗೆ ಪರಿಹಾರ ನೀಡಿಲ್ಲ, ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕೊಟ್ಟಿಲ್ಲ, ಬೆಳೆ ಪರಿಹಾರ ನೀಡಿಲ್ಲ, ಅಂಗನವಾಡಿ, ಶಾಲೆ, ರಸ್ತೆ, ಸೇತುವೆಗಳು ಬಿದ್ದು ಹೋಗಿವೆ. ಅದನ್ನು ಸರಿ ಮಾಡಿಲ್ಲ. ಅವೆಲ್ಲಾ ಬಿಟ್ಟು ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸಲು ಮತಾಂತರ ನಿಷೇಧ ಕಾಯಿದೆಗೆ ಕದ್ದುಮುಚ್ಚಿ ಅನುಮೋದನೆ ಪಡೆಯಲು ಹೊರಟಿದ್ದಾರೆ. ಒಟ್ಟಿನಲ್ಲಿ ಜನರ ಗಮನ ಬೇರೆ ಕಡೆ ಸೆಳೆಯುವುದೇ ಕಾಯಿದೆಯ ಉದ್ದೇಶ. ನಾಳೆ ನಡೆಯುವ ಚರ್ಚೆಯಲ್ಲಿ ಭಾಗವಹಿಸಿ, ತೀವ್ರವಾಗಿ ವಿರೋಧ ಮಾಡುತ್ತೇವೆ. ಸದನದಲ್ಲಿ ಸರ್ಕಾರದ ಬಣ್ಣ ಬಯಲು ಮಾಡುತ್ತೇವೆ. ಸದನವನ್ನು ಶುಕ್ರವಾರವೇ ಮುಗಿಸಬೇಕು ಎಂಬ ನಿಯಮವಿದೆಯೇ? ಇನ್ನೂ ಒಂದು ವಾರ ವಿಸ್ತರಿಸಲು ಅವಕಾಶ ಇಲ್ಲವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬೆಳಗಾವಿ: ಮತಾಂತರ ನಿಷೇಧ ಮಸೂದೆಯನ್ನು ನಾನು ಹರಿದು ಹಾಕಿದ್ದೇನೆ, ಇದು ನನ್ನ ಹಕ್ಕು. ಅವರು ಏನು ಮಾಡುತ್ತಾರೋ ಮಾಡಲಿ. ಈ ಮಸೂದೆ ಸಂವಿಧಾನಕ್ಕೆ ವಿರುದ್ಧವಾದುದ್ದು. ಸರ್ಕಾರ ಕಳ್ಳರಂತೆ ವರ್ತಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸದನದಲ್ಲಿ ಸಮಯಾವಕಾಶ ಇದ್ದರೂ ಕಾಯಲಿಲ್ಲ. ಕಂದಾಯ ಸಚಿವರು ಉತ್ತರ ನೀಡುವ ಸಂದರ್ಭದಲ್ಲಿ ಅವರ ಮಾತು ಮುಗಿಸಿ, ನಂತರ ನಮ್ಮ ಸಮ್ಮುಖದಲ್ಲೇ ಮಂಡನೆ ಮಾಡಬಹುದಿತ್ತು. ನಾವು ಕೂಡ ಪ್ರಸ್ತಾವನೆ ಸಂದರ್ಭದಲ್ಲೇ ಇದನ್ನು ಆಕ್ಷೇಪಿಸಲು ಸಿದ್ಧರಿದ್ದೆವು. ಸರ್ಕಾರ ಮಸೂದೆ ಮಂಡಿಸಿ ನಂತರ ಮತಕ್ಕೆ ಹಾಕಲು ಅವಕಾಶ ಮಾಡಿ ಕೊಡಬೇಕಿತ್ತು. ಬಹುಮತದ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಬಹುದಿತ್ತು. ಆದರೆ ಸ್ಪೀಕರ್ ಅವರು ರಾಜಕೀಯ ಪಕ್ಷದ ಸದಸ್ಯರಂತೆ ನಡೆದುಕೊಂಡಿದ್ದಾರೆ. ಅವರು ಕಾನೂನಿನ ಪ್ರಕಾರವಾಗಿ ನಡೆದುಕೊಂಡಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಮಂಡನೆ
ನಾವು ಯಾರನ್ನೂ ನಂಬಲ್ಲ: ಜೆಡಿಎಸ್ ಬೆಂಬಲ ಪಡೆಯುವ ಬಗ್ಗೆ ಯಡಿಯೂರಪ್ಪ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಜೆಡಿಎಸ್‌ಗೆ ಬಿಟ್ಟ ವಿಚಾರ. ಗೋಹತ್ಯೆ ನಿಷೇಧ ಮಸೂದೆ ಮಂಡನೆ ಸಮಯದಲ್ಲಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಈಗಲೂ ಅವರು ವಿರೋಧಿಸುತ್ತೇವೆ ಎಂದು ಹೇಳಿ, ನಂತರ ಹಿಂದೆ ಸರಿಯುತ್ತಾರೆ. ನಾವು ಇಲ್ಲಿ ಯಾರನ್ನೂ ನಂಬಲು ಸಾಧ್ಯವಿಲ್ಲ. ಇದು ನಮ್ಮ ಅನುಭವ. ನಮಗೆ ಬಹುಮತ ಇದೆಯೋ, ಇಲ್ಲವೋ ಬೇರೆ ವಿಚಾರ. ಆದರೆ ಈ ಮಸೂದೆ ಸಂವಿಧಾನ ವಿರುದ್ಧವಾಗಿದೆ. ಈ ಮಸೂದೆಯಲ್ಲಿ ಶಿಕ್ಷಣ ಸಂಸ್ಥೆಗಳು ಉಚಿತ ಶಿಕ್ಷಣ ನೀಡುವ ಆಮಿಷ ನೀಡಲಾಗುತ್ತಿದೆ ಎಂಬ ಅಸಂಬದ್ಧ ಅಂಶಗಳಿವೆ ಎಂದರು.
ಒಂದು ವರ್ಗ ಗುರಿಯಾಗಿಸಲು ಮಸೂದೆ: ಮತಾಂತರ ನಿಷೇಧ ಹಾಗೂ ಲವ್ ಜಿಹಾದ್ ಅನ್ನು ಒಂದೇ ಮಸೂದೆಯಲ್ಲಿ ತರಲಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಮದುವೆಯು ನಂಬಿಕೆ, ಪರಸ್ಪರ ಒಪ್ಪಿಗೆ ಹಾಗೂ ಪ್ರೀತಿಯ ಸಂಬಂಧದ ಆಧಾರದ ಮೇಲೆ ನಡೆಯುತ್ತದೆ. ಮದುವೆಯನ್ನು ಬಲವಂತವಾಗಿ ಮಾಡಲು ಸಾಧ್ಯವಿಲ್ಲ. ಇಂತಹ ಮದುವೆಯನ್ನು ಅವರು ಅಸಿಂಧು ಮಾಡಲು ಹೇಗೆ ಸಾಧ್ಯ? ಸಂವಿಧಾನದ 21 ನೇ ಪರಿಚ್ಛೇದ ಏನು ಹೇಳುತ್ತದೆ? ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪು ಏನು? ಮತಾಂತರ ವಿಚಾರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದೇನು? ಇದು ಕೇವಲ ಕ್ರೈಸ್ತರಿಗೆ ಮಾತ್ರ ಸೀಮಿತವಾದುದಲ್ಲ. ಎಲ್ಲ ಧರ್ಮಕ್ಕೆ ಸಂಬಂಧಿಸಿದ್ದು, ಒಂದು ವರ್ಗವನ್ನು ಗುರಿಯಾಗಿಸಲು ಹಾಗೂ ಶೋಷಣೆ ಮಾಡಲು ಈ ಮಸೂದೆ ತರಲಾಗಿದೆ ಎಂದರು. ಇದನ್ನೂ ಓದಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮತಾಂತರಗೊಂಡಾಗ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಮತಾಂತರ ನಡೆಯಿತು. ಇದು ಭಾರತದ ಇತಿಹಾಸ. ರಾಜ್ಯದಲ್ಲಿ ಅನೇಕ ವೈದ್ಯಕೀಯ, ಇಂಜಿನಿಯರಿಂಗ್, ಪದವಿ ಕಾಲೇಜು ಹಾಗೂ ಶಾಲೆಗಳು ಇವೆ. ಆಸ್ಪತ್ರೆಗಳು, ಧಾರ್ಮಿಕ ಸಂಸ್ಥೆಗಳಿವೆ. ಆದರೂ ಸಚಿವರ ಮಕ್ಕಳು ಕ್ರೈಸ್ತ ಸಮುದಾಯದ ಶಿಕ್ಷಣ ಸಂಸ್ಥೆಗಳಲ್ಲೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗುತ್ತಾರೆ. ಈಗಲೂ ಕೇಂದ್ರದ ಹಲವು ಸಚಿವರ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಈ ಮಸೂದೆ ರಾಜ್ಯದಲ್ಲಿ ಮುಂದೆ ಬರಬಹುದಾದ ಬಂಡವಾಳ ಹೂಡಿಕೆ ಮೇಲೂ ಕೆಟ್ಟ ಪರಿಣಾಮ ಬೀರಲಿದೆ. ವಿದೇಶಿ ಬಂಡವಾಳ ಹೂಡಿಕೆದಾರರು ರಾಜ್ಯಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಹೋರಾಡುತ್ತದೆ. ನಾವು ಜನರ ಮುಂದೆ ಹೋಗುತ್ತೇವೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಈ ಮಸೂದೆಯನ್ನು ಹಿಂಪಡೆಯಲಿದೆ ಎಂದರು.
ತಹಶೀಲ್ದಾರ್ ವರ್ಗಾವಣೆ ಏಕೆ?: ಚಿತ್ರದುರ್ಗದಲ್ಲಿ ಒಂದೇ ಒಂದು ಬಲವಂತದ ಮತಾಂತರ ಆಗಿಲ್ಲ ಎಂದು ವರದಿ ನೀಡಿರುವ ತಹಶೀಲ್ದಾರರನ್ನು ವರ್ಗಾವಣೆ ಮಾಡಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಶಾಸಕರೊಬ್ಬರು ಹುಚ್ಚರಂತೆ ಮಾತನಾಡುತ್ತಿದ್ದಾರೆ. ಅವರ ತಾಯಿ ವಿಚಾರದಲ್ಲಿ ಏನಾಗಿದೆಯೋ ಅದು ಅವರ ವೈಯಕ್ತಿಕ ವಿಚಾರ. ಆದರೆ ಚಿತ್ರದುರ್ಗ ತಹಶೀಲ್ದಾರ್ ಅವರು ವರದಿ ನೀಡಿದಾಗ ವರ್ಗಾವಣೆ ಮಾಡಿರುವುದೇಕೆ? ಕೇವಲ ಇದೊಂದೇ ಅಲ್ಲ, ಶಿಕ್ಷೆ, ಸಾಕ್ಷ್ಯಾಧಾರ ಸೇರಿದಂತೆ ಅನೇಕ ವಿಚಾರಗಳು ಇದರಲ್ಲಿ ಅಡಗಿವೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ
ಮತಾಂತರ ಆಗುವ ಮುನ್ನ ಅಥವಾ ನಂತರ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹೋಗಬೇಕು ಎಂಬ ಅಂಶವಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮತಾಂತರ ಆಗಲು ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಹಾಕಬೇಕಂತೆ. ಇದು ಈ ದೇಶದಲ್ಲಿ ಸಾಧ್ಯವೇ? ಈ ದೇಶದ ಅನೇಕ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ವಿದೇಶದಿಂದ ಬಂದ ಅನೇಕರು ಭಜನೆ ಮಾಡುತ್ತಾರೆ. ಇದನ್ನು ತಡೆಯಲು ಸಾಧ್ಯವೇ? ಇದು ಬಲವಂತದಿಂದ ಮಾಡಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.