Tag: Anti BJP

  • ಮುಸ್ಲಿಮರು ಬಿಜೆಪಿ ವಿರೋಧಿಸುವುದನ್ನು ನಿಲ್ಲಿಸಬೇಕು: ಮುಸ್ಲಿಂ ಧರ್ಮಗುರು ಸಲಹೆ

    ಮುಸ್ಲಿಮರು ಬಿಜೆಪಿ ವಿರೋಧಿಸುವುದನ್ನು ನಿಲ್ಲಿಸಬೇಕು: ಮುಸ್ಲಿಂ ಧರ್ಮಗುರು ಸಲಹೆ

    ಲಕ್ನೋ: ಬಿಜೆಪಿ ವಿರೋಧಿಸುವುದನ್ನು ಮುಸ್ಲಿಮರು ನಿಲ್ಲಿಸಬೇಕು ಅಖಿಲ ಭಾರತ ತಂಝೀಮ್ ಉಲೇಮಾ-ಎ-ಇಸ್ಲಾಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಹಾಬುದ್ದೀನ್ ರಿಜ್ವಿ ಅವರು ಕರೆ ನೀಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಇತರ ಪರ್ಯಾಯಗಳನ್ನು ಅನ್ವೇಷಿಸಿ ಮತ್ತು ಬಿಜೆಪಿ ವಿರೋಧಿ ಟ್ಯಾಗ್ ಅನ್ನು ಕೈಬಿಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪಂಜಾಬ್‍ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿಗೆ ಇಡಿ ಸಂಕಷ್ಟ

    ರಾಜ್ಯದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಇತ್ತೀಚೆಗಷ್ಟೇ ಮುಗಿದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ನೀಡದೆ ಮುಸ್ಲಿಂ ಸಮುದಾಯದ ಹಿರಿಯ ನಾಯಕರನ್ನು ನಿರ್ಲಕ್ಷಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಮುಂಚೂಣಿಗೆ ಬಂದಿರುವ ಹೊಸ ಸನ್ನಿವೇಶಗಳ ಆಧಾರದ ಮೇಲೆ, ಮುಸ್ಲಿಂ ಸಮುದಾಯವು ಸಮಾಜವಾದಿ ಪಕ್ಷವನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು. ಅಖಿಲೇಶ್ ಯಾದವ್, ಮುಸ್ಲಿಮರನ್ನು ನಿರ್ಲಕ್ಷಿಸುತ್ತಿರುವುದರಿಂದ ಪರ್ಯಾಯಗಳ ಬಗ್ಗೆ ಯೋಚಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈ ಬಾರಿ ಮಾನ್ಸೂನ್‍ನಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ – IMD

    ಸಮಾಜವಾದಿ ಪಕ್ಷವು ಹಿರಿಯ ಮುಸ್ಲಿಂ ನಾಯಕರಿಗೆ ಪಕ್ಷದ ಟಿಕೆಟ್ ನೀಡಲಿಲ್ಲ. ಮುಲಾಯಂ ಸಿಂಗ್ ಯಾದವ್ ಅವರು ಮುಸ್ಲಿಮರ ಹಿತೈಷಿಯಾಗಿದ್ದರು. ಆದರೆ ಈಗ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಎಸ್‌ಪಿ ನಮ್ಮ ಹಿತೈಷಿ ಅಲ್ಲ ಎಂದು ರಿಜ್ವಿ ಹೇಳಿದ್ದಾರೆ.

    ಈಗ ಮುಸ್ಲಿಮರು ಮುಸ್ಲಿಮರ ವಿರುದ್ಧವೇ ತಿರುಗಿದ್ದಾರೆ. ಹಿಂದೂಗಳು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಮಾತನಾಡುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ನಂತರ ಮುಸ್ಲಿಮರ ವಿರುದ್ಧ ಮುಸ್ಲಿಮರು ತಿರುಗಿ ಬಿದ್ದಿರುವುದು ಕಂಡು ಬರುತ್ತಿದೆ. ಒಬ್ಬ ಮುಸ್ಲಿಂ ಬಿಜೆಪಿ ಧ್ವಜ ಇಟ್ಟುಕೊಂಡರೆ, ಮತ್ತೊಬ್ಬ ಮುಸ್ಲಿಂ ವಿರೋಧಿಸುತ್ತಾನೆ. ಇದು ಒಂದೆರಡು ಕೊಲೆಗಳಿಗೂ ಕಾರಣವಾಗಿದೆ. ಮತ್ತೊಂದೆಡೆ ಹಿಂದೂಗಳು ಮುಸ್ಲಿಮರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಧಾನಮಂತ್ರಿಗಳ ಮ್ಯೂಸಿಯಂ ಉದ್ಘಾಟನೆ: ವಿಶೇಷತೆ ಏನು? ಟಿಕೆಟ್‌ ದರ ಎಷ್ಟು?

    ಎರಡು ಸಮುದಾಯಗಳ ನಡುವೆ ದ್ವೇಷ ಹೆಚ್ಚುತ್ತಿದೆ. ನಾನು ಈ ದ್ವೇಷವನ್ನು ಕೊನೆಗೊಳಿಸಬೇಕು ಎಂದು ಬಯಸುತ್ತೇನೆ. ಪರಸ್ಪರರ ವಿರುದ್ಧ ಹೋರಾಡುತ್ತಿರುವ ಮುಸ್ಲಿಮರು ಇದನ್ನು ನಿಲ್ಲಿಸಬೇಕು. ಅದಕ್ಕೆ ಪರಿಣಾಮಕಾರಿ ಮಾರ್ಗವೆಂದರೆ ಮುಸ್ಲಿಮರು ಬಿಜೆಪಿಯನ್ನು ವಿರೋಧಿಸುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

  • ಬಿಜೆಪಿ ಸೋಲಿಸಲು ಪ್ರಾದೇಶಿಕ ಪಕ್ಷಗಳ ಒಕ್ಕೂಟ ರಚನೆಗೆ ಮುಂದಾದ ಕೆಸಿಆರ್

    ಬಿಜೆಪಿ ಸೋಲಿಸಲು ಪ್ರಾದೇಶಿಕ ಪಕ್ಷಗಳ ಒಕ್ಕೂಟ ರಚನೆಗೆ ಮುಂದಾದ ಕೆಸಿಆರ್

    – ಡಿಸೆಂಬರ್‌ನಲ್ಲಿ ನಾಯಕರ ಜೊತೆ ಸಭೆ
    – ಹೈದರಾಬಾದ್ ಮಹಾನಗರ ಪಾಲಿಕೆಯ ಮೇಲೆ ಬಿಜೆಪಿ ಕಣ್ಣು

    ಹೈದರಾಬಾದ್: ತೆಲಂಗಾಣದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಬಿಜೆಪಿಯನ್ನು ಸೋಲಿಸಲು ಪ್ರಾದೇಶಿಕ ಪಕ್ಷಗಳನ್ನು ಸೇರಿಸಿ ಒಕ್ಕೂಟ ರಚಿಸಲು ಮುಂದಾಗಿದ್ದಾರೆ.

    ಈಗಾಗಲೇ ಕೆಸಿಆರ್ ದೇಶದ ವಿವಿಧ ರಾಜ್ಯಗಳಲ್ಲಿ ಇರುವ ಪ್ರಾದೇಶಿಕ ಪಕ್ಷಗಳ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಡಿಸೆಂಬರ್‌ನಲ್ಲಿ ತೆಲಂಗಾಣದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎಲ್ಲ ನಾಯಕರು ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿದೆ.

    ಯಾರಿಗೆಲ್ಲ ಆಹ್ವಾನ?
    ಎನ್‍ಸಿಪಿ ನಾಯಕ ಶರದ್ ಪವಾರ್, ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಿಡಿಎಸ್ ಮುಖ್ಯಸ್ಥ ಎಚ್‍ಡಿ ಕುಮಾರಸ್ವಾಮಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಬಿಎಸ್‍ಪಿ ನಾಯಕಿ ಮಾಯಾವತಿ, ಶಿರೋಮಣಿ ಅಕಾಲಿ ದಳದ ಪ್ರಕಾಶ್ ಸಿಂಗ್ ಬಾದಲ್, ಬಿಜೆಡಿಯ ನವೀನ್ ಪಟ್ನಾಯಕ್, ಡಿಎಂಕೆ ಸ್ಟಾಲೀನ್ ಅವರಿಗೆ ಆಹ್ವಾನ ನೀಡಲಾಗಿದೆ.

    ಈ ಪಕ್ಷಗಳ ನಾಯಕರು ಮಾತ್ರವಲ್ಲದೇ ಇನ್ನೂ ಅನೇಕ ರಾಜಕೀಯ ಪಕ್ಷಗಳು ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಮೈತ್ರಿಕೂಟದ ಸಭೆಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಲಾಗಿದ್ಯಾ ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.

     

    ಮೈತ್ರಿಕೂಟ ಯಾಕೆ?
    ಬಿಹಾರದಲ್ಲಿ ಬಿಜೆಪಿ ಜೊತೆಗೂಡಿ ಜೆಡಿಯು ಮತ್ತೆ ಅಧಿಕಾರಕ್ಕೆ ಏರಿದ ಜೊತೆಗೆ ದೇಶದ 59 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 41ರಲ್ಲಿ ಗೆಲುವು ಸಾಧಿಸಿದೆ. ಇಷ್ಟೇ ಅಲ್ಲದೇ ತೆಲಂಗಾಣ ಉಪ ಚುನಾವಣೆಯಲ್ಲೂ ಬಿಜೆಪಿ ಜಯಗಳಿಸಿದ ಬಳಿಕ ಮೈತ್ರಿಕೂಟ ರಚಿಸಲು ಕೆಸಿಆರ್ ಆಸಕ್ತಿ ವಹಿಸಿದ್ದಾರೆ.

    ತೆಲಂಗಾಣದ ದುಬ್ಬಕ್ಕ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ ರಘುನಂದನ್ ರಾವ್ ಟಿಆರ್‌ಎಸ್ ಅಭ್ಯರ್ಥಿ ವಿರುದ್ಧ 1,079 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಟಿಆರ್‌ಎಸ್ ಮಧ್ಯೆ ಸ್ಪರ್ಧೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಫಲಿತಾಂಶದ ದಿನ ಬಿಜೆಪಿ ಅಭ್ಯರ್ಥಿಗೆ ಕೊನೆಯಲ್ಲಿ ಮುನ್ನಡೆ ಸಿಕ್ಕಿದ ಪರಿಣಾಮ ಜಯಗಳಿಸಿದ್ದರು.

    ಹೈದರಾಬಾದ್ ಮೇಲೆ ಕಣ್ಣು:
    ಬಿಜೆಪಿ ಈಗಾಗಲೇ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆ ಗೆಲ್ಲಲು ಸಮಾವೇಶಗಳನ್ನು ಆಯೋಜಿಸುವ ಮೂಲಕ ಪಕ್ಷ ಸಂಘಟನೆ ಮಾಡುತ್ತಿದೆ. ಇದರ ಜೊತೆ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ(ಜಿಎಚ್‍ಎಂಸಿ) ಚುನಾವಣೆಯ ಮೇಲೆ ಕಣ್ಣು ಹಾಕಿದೆ.

    ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭುಪೇಂದ್ರ ಯಾದವ್ ನೇತೃತ್ವದಲ್ಲಿ ಜಿಎಚ್‍ಎಂಸಿ ಚುನಾವಣೆಗೆ ತಂಡ ರಚನೆಯಾಗಿದೆ. ಈ ತಂಡದಲ್ಲಿ ಕರ್ನಾಟಕದ ಆರೋಗ್ಯ ಸಚಿವ ಸುಧಾಕರ್, ಬೆಂಗಳೂರಿನ ಬೊಮ್ಮನಹಳ್ಳಿಯ ಶಾಸಕ ಸತೀಶ್ ರೆಡ್ಡಿ, ಮಹಾರಾಷ್ಟ್ರದ ಬಿಜೆಪಿ ನಾಯಕ ಅಶಿಶ್ ಶೇಲಾರ್ ಗುಜರಾತಿನ ಪ್ರದೀಪ್ ಸಿಂಗ್ ವಾಘೇಲಾ ಇದ್ದಾರೆ.

    ದಿನೇ ದಿನೇ ಬಿಜೆಪಿಯ ದೇಶವ್ಯಾಪಿ ಸಂಘಟನೆ ನಡೆಸಿ ಚುನಾವಣೆಯಲ್ಲಿ ಜಯಗಳಿಸುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ತಡೆ ಹಾಕಲು ಕೆಸಿಆರ್‌ ಈಗ ಪ್ರಾದೇಶಿಕ ಪಕ್ಷಗಳ ನಾಯಕರ ಜೊತೆ ಮಾತುಕತೆ ನಡೆಸಿ ಕಮಲದ ಓಟಕ್ಕೆ ಬ್ರೇಕ್‌ ಹಾಕಲು ಮುಂದಾಗುತ್ತಿದ್ದಾರೆ.