Tag: anoop seelin

  • ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್

    ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್

    ಜಿ9  ಕಮ್ಯೂನಿಕೇಷನ್ ಮೀಡಿಯ ಅಂಡ್  ಎಂಟರ್ ಟೈನ್ಮೆಂಟ್  ಮುಂದಿನ ಚಿತ್ರದ ಕುರಿತು ಮಾಹಿತಿ ನೀಡಿದ್ದು, ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ (Crazystar) ರವಿಚಂದ್ರನ್ (Ravichandran) ಅವರು ನಾಯಕರಾಗಿ ನಟಿಸುತ್ತಿದಾರೆ. ಈಗಾಗಲೇ ಆಕ್ಸಿಡೆಂಟ್, ಲಾಸ್ಟ್ ಬಸ್, ಅಮೃತ್ ಅಪಾರ್ಟ್ ಮೆಂಟ್ಸ್ ಅಂತಹ ಅಪಾರ ಮೆಚ್ಚುಗೆ ಪಡೆದ ಚಿತ್ರಗಳನ್ನು ನಿರ್ಮಿಸಿರುವ ಸಂಸ್ಥೆಯು ಲೀಗಲ್-ಥ್ರಿಲ್ಲರ್ ಶೈಲಿಯ ಗುರುರಾಜ ಕುಲಕರ್ಣಿ (Gururaj) (ನಾಡಗೌಡ) ಅವರ ನಿರ್ದೇಶನದ ಈ ಚಿತ್ರವನ್ನು ನಿರ್ಮಿಸಲು ಸಜ್ಜಾಗಿದೆ.

    ತಮ್ಮ ಚೊಚ್ಚಲ ನಿರ್ದೇಶನದ, ಕೌಟುಂಬಿಕ-ಥ್ರಿಲ್ಲರ್ ಶೈಲಿಯ ‘ಅಮೃತ್ ಅಪಾರ್ಟ್ ಮೆಂಟ್ಸ್’ ಚಿತ್ರಕ್ಕೆ ಸ್ವತಃ ತಾವೇ ಕಥೆ-ಚಿತ್ರಕಥೆಯನ್ನು ಬರೆದು ಪ್ರಶಂಸೆ ಗಳಿಸಿದ ಗುರುರಾಜ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಚಿತ್ರ ಮಾಡಲು ಉತ್ಸುಕರಾಗಿದ್ದಾರೆ. ಅವರು ನೀಡಿದ ಕಥಾಹಂದರವನ್ನು ರವಿಚಂದ್ರನ್ ಮೆಚ್ಚಿ ಒಪ್ಪಿಗೆ ನೀಡಿದ ಹಿನ್ನಲೆಯಲ್ಲಿಯೇ ಈ ಚಿತ್ರದ ತಯಾರಿಕೆ ನಡೆದಿದೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

    ತಮಗಿರುವ ಕೌಟುಂಬಿಕ ಪ್ರೇಕ್ಷಕ ವರ್ಗದ ಜೊತೆಗೆ, ಜಾಗತಿಕ ಮಟ್ಟದಲ್ಲಿನ ಹಲವಾರು ಭಾಷೆಗಳ, ವಿವಿಧ ಬಗೆಯ ಕಥೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿರುವ ಇಂದಿನ ಯುವ ಪೀಳಿಗೆಯೊಂದಿಗೂ, ಈ ಚಿತ್ರದ ಮೂಲಕ ತಾವು ಹತ್ತಿರವಾಗುವ ಅವಕಾಶವಿದೆ ಎಂಬುದು ರವಿಚಂದ್ರನ್ ಅಭಿಪ್ರಾಯ. ರವಿಚಂದ್ರನ್ ಈ ಚಿತ್ರದ ಪ್ರಮುಖ ಪಾತ್ರವನ್ನು ವಿಶಿಷ್ಟವಾಗಿ, ಒಂದು ಹೊಸ ಆಯಾಮದಲ್ಲಿ ನಟಿಸುವ ಸದಾವಕಾಶವನ್ನು ತಾವು  ಗುರುತಿಸಿರುವುದಾಗಿ ಭರವಸೆ ನೀಡಿದ್ದಾರೆ. ಕನ್ನಡ ಚಿತ್ರಗಳ ಬಗ್ಗೆ ಎಲ್ಲೆಡೆ ಬೇಡಿಕೆ ಹಾಗೂ ಆಸಕ್ತಿ ಇರುವ ಈ ಸಮಯದಲ್ಲಿ, ತಮ್ಮ ಈ ಹೊಸ ಚಿತ್ರವು ನಮ್ಮ ಚಿತ್ರರಂಗಕ್ಕೆ ಇನ್ನಷ್ಟು ಮೆರುಗನ್ನು ತರಲಿದೆ ಎಂಬ ವಿಶ್ವಾಸವನ್ನು ಕನ್ನಡದ ಶೋ ಮ್ಯಾನ್ ಎಂದೇ ಖ್ಯಾತಿ ಪಡೆದ ಕ್ರೇಜಿ ಸ್ಟಾರ್ ವ್ಯಕ್ತಪಡಿಸಿದ್ದಾರೆ.

    ಸ್ವತಃ ಗುರುರಾಜ್ ಅವರದೇ ಕಥೆ ಈ ಚಿತ್ರಕ್ಕೂ ಇದ್ದು, ಚಿತ್ರದ ತಾರಾಗಣ ಹಾಗೂ ದೊಡ್ಡ ಕ್ಯಾನ್ವಾಸನ್ನು ನಿಭಾಯಿಸಲು ಒಗ್ಗೂಡಿಸಿದ ಸಶಕ್ತ ತಾಂತ್ರಿಕ ತಂಡದಲ್ಲಿ ಸಂಗೀತ ನಿರ್ದೇಶಕರಾಗಿ ಅನೂಪ್ ಸೀಳಿನ್, ಛಾಯಾಗ್ರಾಹಕರಾಗಿ ಶಿವ ಬಿಕೆ ಕುಮಾರ್, ಸಂಕಲನಕಾರರಾಗಿ ಬಿ.ಎಸ್.ಕೆಂಪರಾಜು, ಭಾಷಣೆಕಾರರಾಗಿ ಎಂ.ಎಸ್.ರಮೇಶ್ ಸೇರ್ಪಡೆಗೊಂಡಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರದ ಶೀರ್ಷಿಕೆ  ಮತ್ತಿತರ ವಿವರಗಳು ಶೀಘ್ರದಲ್ಲೇ ಪ್ರಕಟಿಸುವುದಾಗಿ ಚಿತ್ರ ಸಂಸ್ಥೆಯು ತಿಳಿಸಿದೆ.

  • ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

    ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

    ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು, ಈ ಹಾಡಿನಲ್ಲಿ ಶಿವರಾಜ್ ಕುಮಾರ್ ಹುಲಿವೇಷ ಹಾಕಿದ್ದಾರೆ. ಇದು ರಿಲೀಸ್ ಆಗುತ್ತಿರುವ ಈ ಸಿನಿಮಾದ ಮೊದಲ ಹಾಡಾಗಿದ್ದು, ದುನಿಯಾ ವಿಜಯ್ ಈ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮಾದಲ್ಲಿ ಈ ಹಾಡು ಶಿವಣ್ಣನ ಎಂಟ್ರಿ ಸಾಂಗ್ ಆಗಿದ್ದು ಸಖತ್ ಮಾಸ್ ಆಗಿ ಮೂಡಿಬಂದಿದೆ. ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅನೂಪ್ ಸೀಳಿನ್ ಬ್ಯಾಂಡು ಬಜಾಯಿಸಿರುವ ಈ ಹಾಡಿಗೆ ಆ್ಯಂಥೋನಿ ದಾಸನ್ ದನಿಗೂಡಿಸಿರುವುದು ವಿಶೇಷ. ಇದನ್ನೂ ಓದಿ : ಗೋವಾ ಸಿಎಂ ಭೇಟಿಯಾದ ಯಶ್, ರಾಧಿಕಾ ಪಂಡಿತ್

    ‘ಟಕರಟಕ ಟಕರಟಕ ಎಗರಿಬಂತೋ ಕಾಡಹುಲಿ…’ ಎಂಬ ಸಾಹಿತ್ಯದಿಂದ ಶುರುವಾಗುವ ಈ ಸಾಂಗ್ ಕುರಿತು ಮಾತನಾಡಿರುವ ದುನಿಯಾ ವಿಜಯ್,  ‘ಮಾಸ್ ಬೀಟ್, ಕೇಳಿದಾಕ್ಷಣ ಕುಣಿಸುವ ಸಂಗೀತ ಈ ಹಾಡಿನಲ್ಲಿದೆ. ಆ್ಯಂಥೋನಿ ದಾಸ್ ವಾಯ್ಸ್ ಕೇಳಿದಾಕ್ಷಣ ಥ್ರಿಲ್ ಆಗಿಹೋದೆ. ಶಿವಣ್ಣನ ಎನರ್ಜಿಗೆ ಸರಿದೂಗುವಂಥ ಹಾಡಿದು. ನಾನಂತೂ ಸಖತ್ ಎಂಜಾಯ್ ಮಾಡಿದೆ. ಈ ಹಾಡನ್ನು ಕೇಳಿದವರೂ ಇಷ್ಟಪಡುತ್ತಾರೆ ಎಂಬ ಭರವಸೆಯಿದೆ’ ಎಂದಿದ್ದಾರೆ. ಇದನ್ನೂ ಓದಿ : ‘ಟಕ್ಕರ್’ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ರೆಡಿಯಾದ ಮನೋಜ್ ಕುಮಾರ್

    ‘ನೂರಾರು ಡಾನ್ಸರ್ಸ್, ಬೃಹತ್ ಸೆಟ್, ಕಲರ್’ಫುಲ್ ಕಾಸ್ಟ್ಯೂಮ್’ನಲ್ಲಿ ಶಿವಣ್ಣಈ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಬನೇರುಘಟ್ಟ ಸಮೀಪದ ದೇವಸ್ಥಾನವೊಂದರ ಬಳಿ ಜಾತ್ರೆ ಸೆಟ್ ಹಾಕಲಾಗಿತ್ತು. ದೊಡ್ಡ ಮಟ್ಟದಲ್ಲಿ ಈ ಹಾಡು ಮೂಡಿಬಂದಿದೆ’ ಎನ್ನುತ್ತಾರೆ ನಿರ್ಮಾಪಕ ಕೃಷ್ಣ ಸಾರ್ಥಕ್.  ವಿಜಯ್ ಮಿಲ್ಟನ್‌ ನಿರ್ದೇಶನ ಹಾಗೂ ಛಾಯಾಗ್ರಹಣವಿರುವ ಈ ಸಿನಿಮಾಕ್ಕೆ ಅವರೇ ಕಥೆ, ಚಿತ್ರಕಥೆ ಒದಗಿಸಿದ್ದಾರೆ. ಗುರು ಕಶ್ಯಪ್ ಸಂಭಾಷಣೆ ಈ ಚಿತ್ರಕ್ಕಿದೆ.

  • ಸೆಪ್ಟೆಂಬರ್ 20ಕ್ಕೆ ಸತೀಶ್ ನೀನಾಸಂ, ಹರಿಪ್ರಿಯ ಜೋಡಿಯ ‘ಪೆಟ್ರೋಮ್ಯಾಕ್ಸ್’ ಟ್ರೇಲರ್ ಬಿಡುಗಡೆ

    ಸೆಪ್ಟೆಂಬರ್ 20ಕ್ಕೆ ಸತೀಶ್ ನೀನಾಸಂ, ಹರಿಪ್ರಿಯ ಜೋಡಿಯ ‘ಪೆಟ್ರೋಮ್ಯಾಕ್ಸ್’ ಟ್ರೇಲರ್ ಬಿಡುಗಡೆ

    ಬೆಂಗಳೂರು: ಸೆಪ್ಟೆಂಬರ್ 20ಕ್ಕೆ ಸತೀಶ್ ನೀನಾಸಂ, ಹರಿಪ್ರಿಯ ಜೋಡಿಯ ‘ಪೆಟ್ರೋಮ್ಯಾಕ್ಸ್’ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

    ಸತೀಶ್ ನೀನಾಸಂ, ಹರಿಪ್ರಿಯ ಜೋಡಿ ಅಭಿನಯದ ‘ಪೆಟ್ರೋಮ್ಯಾಕ್ಸ್’ ಚಿತ್ರ ಬಹಳ ನಿರೀಕ್ಷೆ ಮೂಡಿಸಿದೆ. ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರ ಸದ್ಯದಲ್ಲೇ ಟ್ರೇಲರ್ ಮೂಲಕ ಗಮನ ಸೆಳೆಯಲು ಸಜ್ಜಾಗಿದೆ.

    ಸೆಪ್ಟೆಂಬರ್ 20ರಂದು ‘ಪೆಟ್ರೋಮ್ಯಾಕ್ಸ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. 36 ದಿನದಲ್ಲಿ ಚಿತ್ರೀಕರಣ ಮುಗಿಸಿರುವ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಹತ್ತು ಹಲವು ವಿಶೇಷತೆಗಳಿವೆ. ಇದೇ ಮೊದಲ ಬಾರಿಗೆ ಸತೀಶ್ ನೀನಾಸಂ, ಹರಿಪ್ರಿಯ ತೆರೆ ಹಂಚಿಕೊಳ್ಳುತ್ತಿದ್ದು, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಹಾಸ್ಯದ ಜೊತೆಗೆ ಇಂಟ್ರಸ್ಟಿಂಗ್ ಕಥೆಯೂ ಚಿತ್ರದಲ್ಲಿದ್ದೂ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ ಎನ್ನುತ್ತದೆ ಚಿತ್ರತಂಡ. ಇದೀಗ ಟ್ರೇಲರ್ ಮೂಲಕ ಚಿತ್ರದ ಝಲಕ್ ತೋರಿಸಲು ಚಿತ್ರತಂಡ ಮುಂದಾಗಿದೆ.

    ನಿರ್ದೇಶನದ ಜೊತೆಗೆ ಚಿತ್ರಕ್ಕೆ ಕಥೆ ಚಿತ್ರಕಥೆ ಕೂಡ ವಿಜಯ ಪ್ರಸಾದ್ ಅವರದ್ದೇ. ವಿಜಯಲಕ್ಷೀ ಸಿಂಗ್, ಕಾರುಣ್ಯ ರಾಮ್ ಸೇರಿದಂತೆ ಚಿತ್ರದಲ್ಲಿ ಹಲವು ಕಲಾವಿದರು ಬಣ್ಣಹಚ್ಚಿದ್ದಾರೆ.

    ಸತೀಶ್ ನೀನಾಸಂ, ರಾಕೆಟ್ ಸಿನಿಮಾ ನಂತರ ಮತ್ತೊಮ್ಮೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಈ ಚಿತ್ರದ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಸತೀಶ್ ಪಿಕ್ಚರ್ ಹೌಸ್, ಸ್ಟುಡಿಯೋ 18, ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಸಹಭಾಗಿತ್ವದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಅನೂಪ್ ಸಿಳೀನ್ ಸಂಗೀತ ನಿರ್ದೇಶನ, ನಿರಂಜನ್ ಬಾಬು ಕ್ಯಾಮೆರಾ ವರ್ಕ್ ‘ಪೆಟ್ರೋಮ್ಯಾಕ್ಸ್’ ಚಿತ್ರಕ್ಕಿದೆ.

  • 2016ರಲ್ಲಿ ವಿಜಯ ಪ್ರಸಾದ್, ಸತ್ಯಪ್ರಕಾಶ್ ಇಬ್ಬರೇ ಅಚ್ಚ ಕನ್ನಡದಲ್ಲಿ ಸ್ವಚ್ಛ ಸಿನಿಮಾ ಮಾಡಿದ್ದಾರೆ: ಅನುಪ್ ಸಿಳೀನ್

    2016ರಲ್ಲಿ ವಿಜಯ ಪ್ರಸಾದ್, ಸತ್ಯಪ್ರಕಾಶ್ ಇಬ್ಬರೇ ಅಚ್ಚ ಕನ್ನಡದಲ್ಲಿ ಸ್ವಚ್ಛ ಸಿನಿಮಾ ಮಾಡಿದ್ದಾರೆ: ಅನುಪ್ ಸಿಳೀನ್

    ಬೆಂಗಳೂರು: 2016ರಲ್ಲಿ ನನ್ನ ಪ್ರಕಾರ ಇಬ್ಬರೇ ನಿರ್ದೇಶಕರು ಅಚ್ಚ ಕನ್ನಡದ ಸ್ವಚ್ಛ ಸಿನಿಮಾ ಮಾಡಿರುವರು. ಇವರದೇ ಹೊಸತನ ಮತ್ತು ಎಲ್ಲೂ ನಕಲು ಮಾಡಿಲ್ಲ ಎಂದು ಖ್ಯಾತ ಸಂಗೀತ ನಿರ್ದೇಶಕ ಅನುಪ್ ಸಿಳೀನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿರುವ ಅವರು, ನಿರ್‍ದೋಸೆಯ ವಿಜಯ ಪ್ರಸಾದ್ ಮತ್ತು ರಾಮಾ ರಾಮಾ ರೇಯ ಡಾ ಸತ್ಯಪ್ರಕಾಶ್ ಅಚ್ಚ ಕನ್ನಡದಲ್ಲಿ ಸ್ವಚ್ಛ ಸಿನಿಮಾವನ್ನು ಮಾಡಿದ್ದಾರೆ. ಒಂದೊಂದು ದೃಶ್ಯದಲ್ಲೂ ಸ್ವಂತಿಕೆಯಿದೆ. ಎಲ್ಲಾ ತಂತ್ರಜ್ಞರಿಂದಲೂ ಅದೇ ರೀತಿ ಕೆಲಸ ಮಾಡಿಸಿದ್ದಾರೆ. ಇವರು ಮಾತ್ರ ನನಗೆ ಪರಿಪೂರ್ಣ ಫಿಲ್ಮ್ ಮೇಕರ್ಸ್ ಅನ್ನಿಸೋದು. ಯಾಕೆಂದರೆ ಸಿನಿಮಾದ ಎಲ್ಲಾ ವಿಭಾಗದಲ್ಲೂ ಹಿಡಿತ ಇಟ್ಟುಕೊಂಡು ಎಲ್ಲೂ ಅವರತನ ಬಿಟ್ಟುಕೊಡದೆ ಕಳ್ಳತನ ಮಾಡದೆ ಒಂದು ಅದ್ಭುತವಾದ ಸಿನಿಮಾ ಮಾಡಿಹರು ಎಂದು ಅನುಪ್ ಸಿಳೀನ್ ಬರೆದಿದ್ದಾರೆ.

    ಇವರ ಈ ಅಭಿಪ್ರಾಯಕ್ಕೆ ಬಹಳಷ್ಟು ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನೇರವಾಗಿ ಹೇಳಿದ್ದೀರಿ ಎಂದು ಜನರು ಅಭಿನಂದಿಸಿದ್ದಾರೆ.

    ನಾವು ವಿದ್ಯಾರ್ಥಿಗಳು: ಈ ಪೋಸ್ಟ್ ಗೆ ನಿರ್‍ದೋಸೆಯ ಚಿತ್ರದ ನಿರ್ದೇಶಕ ವಿಜಯ ಪ್ರಸಾದ್ ಅವರು ಪ್ರತಿಕ್ರಿಯಿಸಿದ್ದಾರೆ. “ಅನೂಪನ ಪ್ರೀತಿ ಅಭಿಮಾನ ಮತ್ತು ನೇರ ನುಡಿಗಳನ್ನ ನಾನು ನೆನ್ನೆ ಮೊನ್ನೆಯಿಂದ ನೋಡಿದ್ದಲ್ಲ. ಬಹು ಕಾಲದ ಒಡನಾಟದ ಪ್ರಯಾಣ ನಮ್ಮಿಬ್ಬರದು. ಆತನ ಅಭಿಪ್ರಾಯಕ್ಕೆ ಈಗ ನಾನು ಏನೇ ಪ್ರತಿಕ್ರಿಯೆಸಿದರೂ ನಮ್ಮ ಚಿತ್ರದ ಬಗ್ಗೆ ನಾವೇ ಮತ್ತು ನಮ್ಮನ್ನು ನಾವೇ ಬೆಂಬಲಿಸಿಕೊಂಡಿದ್ದಾರೆ ಎಂದಾದರೂ ಸರಿಯೇ ಇಲ್ಲಿ ನನ್ನ ಅಭಿಪ್ರಾಯವನ್ನ ದಾಖಲು ಮಾಡಲೇಬೇಕಾಗಿದೆ” ಎಂದು ಬರೆದಿದ್ದಾರೆ.

    “ಅನೂಪ ಭ್ರಮೆಯಿಂದ ಕೂಡಿದವನಲ್ಲ. ಹಾಗೆ ಮತ್ತೊಬ್ಬರ ಚಿತ್ರ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲವೆಂಬೂದು ಅಲ್ಲ. ಇಲ್ಲಿ ಮೂಲ ಪ್ರಸ್ತಾವನೆ ಸ್ವಂತಿಕೆಯ ಬಗ್ಗೆ. ನಿಜಕ್ಕೂ ರಾಮ ರಾಮಾ ರೇ ನನಗೆ ಬಹಳವೇ ಇಷ್ಟವಾಯಿತು. ಮೂರು ಬಾರಿ ನೋಡಿದ್ದೇನೆ. ಇಡೀ ಚಿತ್ರವೇ ಸ್ವಂತಿಕೆಯ ಅಡಿಪಾಯದಲ್ಲಿ ಕಟ್ಟಲ್ಪಟ್ಟಿದೆ. ನಿಜವಾಗಿಯೂ ಆ ಚಿತ್ರಕ್ಕೆ ಮತ್ತು ಇಡೀ ಚಿತ್ರತಂಡದವರಿಗೆ ಮಾರು ಹೋಗಿದ್ದೇನೆ” ಎಂದು ಹೇಳಿದ್ದಾರೆ.

    “ಇದರ ಜೊತೆಗೆ ಆತ ಹೇಳಿರುವುದು 2016ರ ಸಿನಿಮಾಗಳು. ತಿಥಿ ಬಹುಶಃ 2015 ಕ್ಕೆ ಸೇರಬಹುದೆಂದುಕೊಂಡಿದ್ದೇನೆ. ತಿಥಿ ಚಿತ್ರವೂ ನನಗೆ ತುಂಬಾ ಆಪ್ತವೆನಿಸಿತು. ಇದನ್ನೂ ಮೂರ್ನಾಲ್ಕು ಬಾರಿ ನೋಡಿದ್ದೇನೆ. ನಿಜಕ್ಕೂ ತಿಥಿ ವಾಸ್ತವತೆಯ ದೃಶ್ಯಕಾವ್ಯ. ಇನ್ನು ನೀರ್ ದೋಸೆ ಬಗ್ಗೆ ಪ್ರಸ್ತಾವಿಸುವುದು ಬೇಡ. ನಿಜಕ್ಕೂ ಸ್ವಂತಿಕೆ ಇದೆಯೋ ಇಲ್ಲವೋ ಎಂಬುದನ್ನ ಪ್ರಾಮಾಣಿಕವಾಗಿ ಅವರವರಲ್ಲೇ ಕೇಳಿಕೊಳ್ಳಲಿ. ಸ್ವಂತಿಕೆಯ ಯಾವ ಸಿನಿಮಾವೇ ಆಗಲಿ ಹಾಗೆ ಯಾರೇ ಆಗಲಿ, ನಾವು ಅವರ ವಿದ್ಯಾರ್ಥಿಗಳು…! ಇದಕ್ಕಿಂತ ಬೇಕೇ? ಚರ್ಚೆಗಳು ಮುಕ್ತವಾಗಿ ಮತ್ತು ಆರೋಗ್ಯಕರವಾಗಿ ನಡೆಯಲಿ. ಕ್ಷಮೆಯೊಂದಿಗೆ ಎಲ್ಲರಿಗೂ ನಮಸ್ಕಾರಗಳು” ಎಂದಿದ್ದಾರೆ.

    ಅನುಪ್ ಸೀಳಿನ್ ಅವರು ತನ್ನ ಪಟ್ಟಿಯಲ್ಲಿ ನೀರ್‍ದೋಸೆಯನ್ನು ಸೇರಿಸಿದ್ದಕ್ಕೆ ಒಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ, “ನಾವೇ ಹೇಳಿದ್ದೇವೆ ನಮ್ಮ ಸಿನಿಮಾ ಅದ್ಭುತ ಸಿನಿಮಾವೂ ಅಲ್ಲ ಯಾವುದೇ ಟಾಪ್ ಲಿಸ್ಟಿಗೂ ಸೇರದ ಸಿನಿಮಾಂತ. ಇಲ್ಲಿ ವಿಚಾರ ಸ್ವಂತಿಕೆಯದು. ಅದು ಅರಿವಾದರೇ ಸಾಕು ಅಷ್ಟೇ ….ಸ್ವಂತಿಕೆ ಬಂದರೇ ಆಯಾಮಗಳೇ ಬೇರೆ, ವಿಚಾರವೇ ಬೇರೆ” ಎಂದು ವಿಜಯ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

    ವಿಜಯ ಪ್ರಸಾದ್ ನಿರ್ದೇಶನದ ನೀರ್‍ದೋಸೆ ಸೆಪ್ಟೆಂಬರ್ 2ರಂದು ಬಿಡುಗಡೆಯಾಗಿತ್ತು. ಅನುಪ್ ಸೀಳಿನ್ ಸಂಗೀತವಿರುವ ಈ ಚಿತ್ರದಲ್ಲಿ ಜಗ್ಗೇಶ್, ದತ್ತಣ್ಣ, ಹರಿಪ್ರಿಯಾ, ಸುಮನ್ ರಂಗನಾಥ್ ಇತರರು ನಟಿಸಿದ್ದರು.

    ಸತ್ಯ ಪ್ರಕಾಶ್ ನಿರ್ದೇಶನದ ‘ರಾಮಾ ರಾಮಾ ರೇ’ ಚಿತ್ರ ಅಕ್ಟೋಬರ್ 21ರಂದು ಬಿಡುಗಡೆಯಾಗಿತ್ತು. ವಾಸುಕಿ ವೈಭವ್ ಸಂಗೀತವಿರುವ ಚಿತ್ರದಲ್ಲಿ ಕೆ.ಜಯರಾಮ್, ನಟರಾಜ್ ಎಸ್.ಭಟ್, ಧರ್ಮಣ್ಣ ಕಡೂರು ಇತರರು ಅಭಿನಯಿಸಿದ್ದರು.