Tag: anna bhagya

  • ಟನ್ ಗಟ್ಟಲೆ ಕೊಳೆಯುತ್ತಿವೆ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು!

    ಟನ್ ಗಟ್ಟಲೆ ಕೊಳೆಯುತ್ತಿವೆ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು!

    ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋದಾಮುಗಳಲ್ಲೇ ಕೊಳೆಯುತ್ತಿದ್ದು, ಸರ್ಕಾರ ನೂರಾರು ಕೋಟಿ ರೂ. ನೀಡಿ ಖರೀದಿಸಿದ್ದ ಪಡಿತರ ವ್ಯರ್ಥವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಆನೇಕಲ್, ಜಿಗಣಿ ಹಾಗೂ ಸರ್ಜಾಪುರದಲ್ಲಿರುವ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಗೋದಾಮುಗಳಲ್ಲಿ ಟನ್‍ಗಟ್ಟಲೇ ಗೋಧಿ ಕೊಳೆಯುತ್ತಿದೆ.

    ಆನೇಕಲ್ ತಾಲೂಕಿನ ಕೇಂದ್ರ ಭಾಗವಾಗಿರುವ ಆನೇಕಲ್ ಪಟ್ಟಣದ ಗೋದಾಮಿನಲ್ಲಿ 331 ಕ್ವಿಂಟಾಲ್, ಜಿಗಣಿಯಲ್ಲಿ 125 ಕ್ವಿಂಟಲ್ ಹಾಗೂ ಸರ್ಜಾಪುರದಲ್ಲಿ 100 ಕ್ವಿಂಟಾಲ್ ಗೋಧಿ ಪತ್ತೆಯಾಗಿದ್ದು ಸಂಪೂರ್ಣವಾಗಿ ಹಾಳಾಗಿದ್ದು ಮನುಷ್ಯ ತಿನ್ನಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ.

    ರಾಜ್ಯ ಸರ್ಕಾರ ಒಂದು ವರ್ಷದ ಹಿಂದೆಯೇ ಈ ಗೋಧಿಯನ್ನು ಖರಿದೀ ಮಾಡಿದ್ದು, ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಇಲಿಗಳ ಪಾಲಾಗಿದೆ. ರಾಜ್ಯ ಸರ್ಕಾರ ಗೋಧಿ ವಿತರಣೆಯನ್ನು ಅವೈಜ್ಞಾನಿಕವಾಗಿ ನಿಲ್ಲಿಸಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇಲಾಖೆಯ ಮೂಲಗಳ ಪ್ರಕಾರ ರಾಜ್ಯಾದ್ಯಂತ 1,25 ಲಕ್ಷ ಕ್ವಿಂಟಾಲ್ ಗೋಧಿ ಹೀಗೆ ಕೊಳೆಯುತ್ತಿದೆ ಎಂದು ತಿಳಿದುಬಂದಿದೆ.

    ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಇತರೇ ಆಹಾರ ಪದಾರ್ಥಗಳಾದ ರಾಗಿಯೂ ಇದೇ ರೀತಿ ಕೊಳೆಯುತ್ತಿದೆ. ಬಡ ಜನರ ಹಸಿವನ್ನು ನೀಗಿಸುವ ಪ್ರಮುಖ ಯೋಜನೆಯಾಗಿ ರಾಜ್ಯ ಸರ್ಕಾರ ಹೆಮ್ಮೆಯಿಂದ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು, ಬಡವರ ಹಸಿವನ್ನು ನೀಗಿಸ ಬೇಕಾದ ಆಹಾರ ಕೊಳೆಯುತ್ತಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಆಹಾರ ಪದಾರ್ಥಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ನಾವು ಈಗಾಗಲೇ ಆಹಾರ ಪದಾರ್ಥದ ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಲು ಲ್ಯಾಬ್‍ಗೆ ಕಳುಹಿಸಿಕೊಟ್ಟಿದ್ದೇವೆ. ವರದಿ ಬಂದ ನಂತರ ಆಹಾರ ಜನರು ತಿನ್ನಲು ಯೋಗ್ಯವಾಗಿದ್ದಲ್ಲಿ ಅದನ್ನು ವಿತರಣೆ ಮಾಡುತ್ತೇವೆ. ಮುಂದಿನ ಕ್ರಮವನ್ನು ಉನ್ನತ ಅಧಿಕಾರಿಗಳು ಕೈಗೊಳ್ಳುತ್ತಾರೆ ಎಂಬ ಉತ್ತರವನ್ನು ನೀಡಿದ್ದಾರೆ.

  • ಅನ್ನಭಾಗ್ಯ ಅಕ್ಕಿಯ ತೂಕದಲ್ಲಿ ಗೋಲ್‍ಮಾಲ್: ಜನರಿಂದ ಪ್ರತಿಭಟನೆ

    ಅನ್ನಭಾಗ್ಯ ಅಕ್ಕಿಯ ತೂಕದಲ್ಲಿ ಗೋಲ್‍ಮಾಲ್: ಜನರಿಂದ ಪ್ರತಿಭಟನೆ

    ಬೆಂಗಳೂರು: ಸರ್ಕಾರ ರಾಜ್ಯದ ಪ್ರತಿ ಬಡ ಜನರಿಗೆ ಅನ್ನ ಸಿಗಲಿ ಅನ್ನೂ ಉದ್ದೇಶದಿಂದ ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆಯನ್ನ ಜಾರಿಗೆ ತಂದಿದೆ. ಆದ್ರೆ ಅದೇ ಅನ್ನ ಭಾಗ್ಯವನ್ನ ಬಂಡವಾಳ ಮಾಡಿಕೊಂಡಿರೋ ಕೆಲವರು ಬಡ ಜನರಿಗೆ ಸೇರಬೇಕಾದ ಅಕ್ಕಿಗೆ ಕನ್ನ ಹಾಕಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಳ್ಳಿ ಜನರಿಗೆ ತಲುಪಬೇಕಾದ ಅಕ್ಕಿಯ ತೂಕದಲ್ಲಿ ಗೋಲ್ ಮಾಲ್ ಮಾಡಿದ್ದಾರೆ ಎಂದು ಆರೋಪಿಸಿ ಜನರು ನ್ಯಾಯಬೆಲೆ ಅಂಗಡಿ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದಾರೆ.

    ಸರ್ಕಾರ ಪ್ರತಿ ತಿಂಗಳು ಗ್ರಾಮೀಣ ಭಾಗದ ಜನರಿಗೆ ಪಡಿತರ ತಲುಪಲಿ ಅನ್ನೂ ಉದ್ದೇಶದಿಂದ ನಾಲ್ಕೈದು ಹಳ್ಳಿಗಳಿಗೆ ಒಂದೂಂದು ನ್ಯಾಯಬೆಲೆ ಅಂಗಡಿಗಳನ್ನ ತೆರೆದಿದ್ದು, ಈ ಮುಖಾಂತರ ರೈತರಿಗೆ ಪಡಿತರ ಧಾನ್ಯವನ್ನ ತಲುಪಿಸುತ್ತಿದೆ. ಆದ್ರೆ ಕೆಲವರು ಸರ್ಕಾರದ ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕಿದ್ದು, ಹಳೆ ತಕಡಿಗಳಲ್ಲಿ ತೂಕ ಹಾಕುವ ಮುಖಾಂತರ ಒಂದು ಕೂಪನ್ ಮೇಲೆ, ಒಮ್ಮೆಲೆ ಎರಡರಿಂದ ಮೂರು ಕೆಜಿ ಅಕ್ಕಿಯನ್ನ ಗೋಲ್ ಮಾಲ್ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಹೀಗಾಗಿ ಹಲವು ತಿಂಗಳುಗಳಿಂದ ತೂಕದ ಮೇಲೆ ಅನುಮಾನಗೊಂಡಿದ್ದ ಸಾರ್ವಜನಿಕರು ಶನಿವಾರ ಸೊಸೈಟಿ ಬಳಿ ಎಲೆಕ್ಟ್ರಾನಿಕ್ ಸ್ಕೇಲ್ ತಂದು ರಿಯಾಲಿಟಿ ಚೆಕ್ ನಡೆಸಿದ್ದಾರೆ. ಈ ಮುಖಾಂತರ ಅನ್ನಭಾಗ್ಯ ಅಕ್ಕಿಯಲ್ಲಿ ಸೊಸೈಟಿ ಸಿಬ್ಬಂದಿ ನಡೆಸುತ್ತಿದ್ದ ಗೋಲ್ ಮಾಲ್ ಬೆಳಕಿಗೆ ತಂದಿದ್ದಾರೆ.

  • ಅನ್ನಭಾಗ್ಯ ಅಕ್ರಮ: 34 ಲಕ್ಷ ಕೆಜಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟ – ಅನುರಾಗ್ ತಿವಾರಿ ಬಲಿ ಪಡೀತಾ ಹಗರಣ?

    ಅನ್ನಭಾಗ್ಯ ಅಕ್ರಮ: 34 ಲಕ್ಷ ಕೆಜಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟ – ಅನುರಾಗ್ ತಿವಾರಿ ಬಲಿ ಪಡೀತಾ ಹಗರಣ?

    – ಆಹಾರ ಇಲಾಖೆಯೇ ನೀಡಿದೆ ಅಕ್ರಮ ಅಕ್ಕಿಯ ರಿಪೋರ್ಟ್

    ಬೆಂಗಳೂರು: ಅನ್ನಭಾಗ್ಯ ಯೋಜನೆಯ ಅಕ್ರಮ ಪ್ರಾಮಾಣಿಕ ಐಎಎಸ್ ಅಧಿಕಾರಿಯ ಸಾವಿಗೆ ಕಾರಣವಾಯ್ತ? ಅನ್ನಭಾಗ್ಯದಲ್ಲಿ ನಿಜಕ್ಕೂ ಅಂತಹ ದೊಡ್ಡ ಹಗರಣ ನಡೆದಿರೋ ಸಾಧ್ಯತೆ ಇದೆಯಾ? ಹೌದು ಅಂತಿದೆ ಆಹಾರ ಇಲಾಖೆಗೆ ರಿಪೋರ್ಟ್. ಅನ್ಯಭಾಗ್ಯದ ಅಕ್ಕಿ ಅಕ್ರಮವೆಸಗುವವರ ಸ್ವತ್ತಾಗಿರೊ ಅಂಶವನ್ನ ಸ್ವತಃ ಇಲಾಖೆಯೇ ಹೊರಹಾಕಿದ್ದು, ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ ಅಕ್ಕಿ ನುಂಗಣ್ಣರ ಪಾಲಾಗಿದೆ.

    2013ರಲ್ಲಿ ಅಧಿಕಾರ ಸ್ವೀಕಾರ ಮಾಡಿದ ನಂತರ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ರು. ಯೋಜನೆ ಪ್ರಾರಂಭ ಮಾಡಿ ನಾಲ್ಕು ವರ್ಷ ಆದ್ರೂ ಅಕ್ರಮ ತಡೆಯಲು ಮಾತ್ರ ಸಾಧ್ಯವಾಗಿಲ್ಲ. ಸರ್ಕಾರದ ಅಂಕಿ ಅಂಶದ ಪ್ರಕಾರವೇ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ. ಕಳೆದ ಮೂರುವರೆ ವರ್ಷದಲ್ಲಿ ಆಹಾರ ಇಲಾಖೆ 414 ಪ್ರಕರಣ ದಾಖಲಿಸಿಕೊಂಡು ಬರೋಬ್ಬರಿ 34 ಸಾವಿರ ಕ್ವಿಂಟಾಲ್ ಅಕ್ರಮ ಅಕ್ಕಿ ವಶಪಡಿಸಿಕೊಂಡಿದೆ. ಅಂದ್ರೆ ಬರೋಬ್ಬರಿ 34 ಲಕ್ಷ ಕೆಜಿ ಅಕ್ಕಿ ವಶವಾಗಿದೆ. ಇದರ ಮೊತ್ತ ಸುಮಾರು 11 ಕೋಟಿ ರೂ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಗುರುಪಾಟೀಲ ಶಿರವಾಳ ಕೇಳಿದ ಪ್ರಶ್ನೆಗೆ ಸ್ವತಃ ಆಹಾರ ಸಚಿವ ಖಾದರ್ ಈ ಉತ್ತರ ನೀಡಿದ್ದಾರೆ.

    2013-14 ರಲ್ಲಿ ದಾಖಲಾದ ಒಟ್ಟು ಪ್ರಕರಣಗಳು 70, ವಶಪಡಿಸಿಕೊಂಡ ಅಕ್ಕಿ 8832 ಕ್ವಿಂಟಾಲ್, ಅಕ್ಕಿಯ ಮೌಲ್ಯ 2.88 ಕೋಟಿ ರೂ. 2014-15ರಲ್ಲಿ ದಾಖಲಾದ ಒಟ್ಟು ಪ್ರಕರಣಗಳು 193, ವಶಪಡಿಸಿಕೊಂಡ ಅಕ್ಕಿ 16211 ಕ್ವಿಂಟಾಲ್ ಹಾಗೂ ಅಕ್ಕಿಯ ಮೌಲ್ಯ 4.91 ಕೋಟಿ ರೂ. 2015-16ರಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 118, ವಶಪಡಿಸಿಕೊಂಡ ಅಕ್ಕಿ 4384 ಕ್ವಿಂಟಾಲ್, ಇದರ ಮೌಲ್ಯ 1.62 ಕೋಟಿ ರೂ. 2016-17 ಅಂದ್ರೆ ಅಕ್ಟೋಬರ್ 2016 ವರೆಗೆ ದಾಖಲಾದ ಪ್ರಕರಣಗಳು 33, ವಶಪಡಿಸಿಕೊಂಡ ಅಕ್ಕಿ 4566 ಕ್ವಿಂಟಾಲ್ ಹಾಗೂ ಅಕ್ಕಿಯ ಮೌಲ್ಯ 1.69 ಕೋಟಿ ರೂಪಾಯಿಯದ್ದಾಗಿದೆ.

    ಅನ್ನಭಾಗ್ಯ ಹಗರಣದ ರಿಪೋರ್ಟ್ ತಯಾರಿಸಿದ್ರಾ ತಿವಾರಿ?: ಕೇವಲ ಕಣ್ಣಿಗೆ ಬಿದ್ದ ಅಕ್ರಮ 11 ಕೋಟಿ ರೂ. ಆದ್ರೆ ಕಣ್ಣಿಗೆ ಕಾಣದ ಅದೆಷ್ಟೋ ಕೋಟಿ ಮೌಲ್ಯದ ಅಕ್ಕಿ ದಂಧೆಕೋರರ ಪಾಲಾಗಿದೆ. ಇದನ್ನ ಪತ್ತೆ ಹಚ್ಚಿದ್ದೇ ಆಹಾರ ಇಲಾಖೆ ಆಯುಕ್ತ ಅನುರಾಗ್ ತಿವಾರಿ ಅವರ ಸಾವಿಗೆ ಕಾರಣ ಅನ್ನೋ ಆರೋಪ ಬಲವಾಗ್ತಿದೆ.

     

  • ಯಾದಗಿರಿಯಲ್ಲಿ ಹಣ ಕೊಟ್ರೆ ಮಾತ್ರ ‘ಅನ್ನಭಾಗ್ಯ’!

    ಯಾದಗಿರಿಯಲ್ಲಿ ಹಣ ಕೊಟ್ರೆ ಮಾತ್ರ ‘ಅನ್ನಭಾಗ್ಯ’!

    ಯಾದಗಿರಿ: ಸಿಎಂ ಸಿದ್ದರಾಮಯ್ಯ ಸರ್ಕಾರ ಬಡ ಜನರ ಹೊಟ್ಟೆ ತುಂಬಿಸಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆಯಿಂದ ಬಡಜನರಿಗೆ ಅನುಕೂಲವಾಗಿದೆ. ಆದ್ರೆ ನ್ಯಾಯಬೆಲೆ ಅಂಗಡಿ ಮಾಲೀಕರು ಉಚಿತ ಅಕ್ಕಿ ನೀಡುವ ಬದಲು ಬಡ ಜನರಿಂದ ಹಣ ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ.

    ಸರ್ಕಾರ 2013 ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು ಮೊದಲು 1 ರೂ. ಕೊಟ್ಟು ಅಕ್ಕಿ ಪಡೆಯಬೇಕಾಗಿತ್ತು. ನಂತರ ಸರ್ಕಾರ ಕಳೆದ ವರ್ಷ ಮೇ ತಿಂಗಳಲ್ಲಿ ಪ್ರತಿ ಯುನಿಟ್ ಕಾರ್ಡ್‍ಗೆ 5 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆ ಜಾರಿಗೆ ತಂದಿದೆ. ನಂತರ ಇದೇ ಏಪ್ರಿಲ್ 1 ರಿಂದ ಪ್ರತಿ ಯುನಿಟ್ ಕಾರ್ಡ್‍ನ ಒಬ್ಬ ಸದಸ್ಯನಿಗೆ 7 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಆದೇಶ ಹೊರಡಿಸಿದೆ. ಆದ್ರೆ ಯಾದಗಿರಿ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅನ್ನಭಾಗ್ಯ ಯೋಜನೆಯಲ್ಲಿ ಬಡಜನರಿಂದ ಹಣ ದೋಚುವ ಹಗಲು ದರೋಡೆ ಕೆಲಸ ಮಾಡುತ್ತಿವೆ.

    ಉಚಿತವಾಗಿ 7 ಕೆಜಿ ಅಕ್ಕಿ ನೀಡುವ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ಕೂಡುತ್ತಿಲ್ಲ. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಹಾಲಗೇರಾದಲ್ಲಿ ಮಾತ್ರವಲ್ಲ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶದ ನ್ಯಾಯ ಬೆಲೆ ಅಂಗಡಿ ಮಾಲೀಕರು ಜನರಿಗೆ ಅಕ್ಕಿ ಕೊಟ್ಟು ಹಣ ಪಡೆಯುತ್ತಿದ್ದಾರೆ. ಕೆಲವು ಕಡೆ ಅಂಗಡಿ ಮಾಲೀಕರು 10 ರಿಂದ 50 ವರಗೆ ಹಣ ಪಡೆದು ಅನ್ನಭಾಗ್ಯ ಪಡಿತರ ಅಕ್ಕಿ ವಿತರಣೆ ಮಾಡುತ್ತಿದ್ದಾರೆ.

    ಈ ಬಗ್ಗೆ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಕೇಳಿದ್ರೆ, ಕೆಲವೊಮ್ಮೆ ಅಕ್ಕಿ ತೂಕದಲ್ಲಿ ಕಡಿಮೆ ಬರುತ್ತವೆ. ಹೀಗಾಗಿ ಹಣ ಪಡೆಯುತ್ತಿದ್ದೇವೆ ಎನ್ನುತ್ತಾರೆ.