Tag: AnjaniPuthra

  • ‘ಅಂಜನಿಪುತ್ರ’ನಿಗೆ ಸಿಕ್ತು ಬಿಗ್ ರಿಲೀಫ್

    ‘ಅಂಜನಿಪುತ್ರ’ನಿಗೆ ಸಿಕ್ತು ಬಿಗ್ ರಿಲೀಫ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ಅಂಜನಿಪುತ್ರ’ ಸಿನಿಮಾಗೆ ಒಂದಿಲ್ಲೊಂದು ಅಡೆತಡೆಗಳು ಎದುರಾಗಿದ್ದವು. ಇಂದು ವಕೀಲರು ಮತ್ತು ಅಂಜನಿಪುತ್ರ ಸಿನಿಮಾ ತಂಡದ ನಡುವೆ ರಾಜಿ ಸಂಧಾನ ಯಶಸ್ವಿಯಾಗಿದೆ.

    ಒಂದು ವಾರದ ಬಳಿಕ ನ್ಯಾಯಾಲಯಕ್ಕೆ ಹಾಜರಾದ ಚಿತ್ರತಂಡ ಕೇಸ್ ಮರು ವಿಚಾರಣೆಗೆ ಅರ್ಜಿ ಸಲ್ಲಿಸಿತ್ತು. ನಾವು ನ್ಯಾಯಾಲಯದ ಆದೇಶವನ್ನು ಪಾಲಿಸಿದ್ದು, ವಕೀಲರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ತೆಗೆಸಲಾಗಿದ್ದು, ಸೆನ್ಸಾರ್ ಮಂಡಳಿ ವಿವಾದಾತ್ಮಕ ಹೇಳಿಕೆಗೆ ಕತ್ತರಿ ಹಾಕಲಾಗಿದೆ ಎಂದು ಪ್ರಮಾಣ ಪತ್ರವನ್ನು ನೀಡಿದೆ. ಆ ಡೈಲಾಗ್ ಮೂಲಕ ನ್ಯಾಯಾಲಯಕ್ಕೆ ಅಗೌರವ ತೋರುವುದು ನಮ್ಮ ಉದ್ದೇಶವಾಗಿರಲಿಲ್ಲ. ಸಿನಿಮಾದಲ್ಲಿ ಆ ಡೈಲಾಗ್ ಅಗತ್ಯವಾಗಿದ್ದರಿಂದ ಚಿತ್ರೀಕರಿಸಲಾಗಿತ್ತೆ, ವಿನಃ ಬೇರ್ಯಾವುದೇ ಕಾರಣಗಳಿಲ್ಲ. ಸಿನಿಮಾದಿಂದ ವಕೀಲರಿಗೆ ಅವಮಾನ, ಅಥವಾ ಮನಸಿಗೆ ಘಾಸಿಯಾಗಿದ್ರೆ ದಯವಿಟ್ಟು ಕ್ಷಮಿಸಿ ಅಂತಾ ಅಂಜನಿಪುತ್ರದ ಸಿನಿಮಾದ ಚಿತ್ರತಂಡ ಕ್ಷಮೆ ಕೇಳಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅರ್ಜಿದಾರರ ಪರ ವಕೀಲರಾದ ನಾರಾಯಣಸ್ವಾಮಿ, ನಾವು ಕನ್ನಡದ ಅಭಿಮಾನಿಗಳಾಗಿದ್ದು,, ಅದರಲ್ಲೂ ಡಾ.ರಾಜ್‍ಕುಮಾರ್ ಕುಟುಂಬದ ಫ್ಯಾನ್ಸ್. ಈ ಹಿಂದಿನಿಂದಲೂ ಕನ್ನಡ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದೇವೆ. ಆದರೆ ಸಿನಿಮಾದಲ್ಲಿ ವಕೀಲರಿಗೆ ಮತ್ತು ನ್ಯಾಯಾಲಯಕ್ಕೆ ಅಪಮಾನ ಮಾಡಿದ್ದು ಸರಿಯಲ್ಲ. ಉದ್ದೇಶ ಇದ್ದೋ ಅಥವಾ ಇಲ್ಲದೆಯೇ ಘಟನೆ ನಡೆದು ಹೋಗಿದೆ. ಚಿತ್ರತಂಡ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಅಂತಾ ಹೇಳಿದರು.

    ಏನಿದು ಪ್ರಕರಣ?
    “ನೀನು ಗಂಟೆ ಅಲ್ಲಾಡಿಸೋ ಹಾಗಿದ್ರೆ, ಕೋರ್ಟ್ ನಲ್ಲಿ ಅಲ್ಲಾಡ್ಸು. ಇಲ್ಲಿ ಅಲ್ಲಾಡಿಸಿದ್ರೆ ಕಟ್ ಮಾಡಿ ಬಿಡ್ತೀನಿ” ಎಂದು ರವಿ ಶಂಕರ್ ಇನ್ಸ್ ಪೆಕ್ಟರ್ ಆಗಿ ವಕೀಲರಿಗೆ ಹೇಳುವ ದೃಶ್ಯ ಸಿನಿಮಾದಲ್ಲಿದೆ. ಈ ಸಂಭಾಷಣೆಯಿಂದ ವಕೀಲರಿಗೆ ಅವಮಾನವಾಗಿದೆ. ಹೀಗಾಗಿ ಒಂದೋ ಅಂಜನಿಪುತ್ರ ಸಿನಿಮಾ ಪ್ರದರ್ಶನ ರದ್ದು ಮಾಡಿ, ಇಲ್ಲವೇ ವಕೀಲರ ಬಗೆಗಿನ ಅವಹೇಳನಕಾರಿ ಮಾತನ್ನು ತೆಗೆಯುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು. ವಿಚಾರಣೆ ವೇಳೆ ಕೋರ್ಟ್ ಜ. 2ರವರೆಗೆ ಚಿತ್ರಪ್ರದರ್ಶನ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಕೋರ್ಟ್ ಆದೇಶವಿದ್ದರೂ ಅಂಜನಿಪುತ್ರ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ವಕೀಲ ಜಿ. ನಾರಾಯಣ ಸ್ವಾಮಿ ಸೇರಿದಂತೆ ಐವರು ವಕೀಲರು ನಿರ್ಮಾಪಕ, ನಿರ್ದೇಶಕರ ವಿರುದ್ಧ ನ್ಯಾಯಾಂಗ ನಿಂದನೆ ದೂರನ್ನು ನೀಡಿದ್ದರು. ಬುಧವಾರ ಈ ಅರ್ಜಿಯನ್ನು ನ್ಯಾ.ಐ.ಎಫ್. ಬಿದರಿ ಅವರಿದ್ದ ಪೀಠ ಮಾನ್ಯ ಮಾಡಿತ್ತು.

    https://www.youtube.com/watch?v=WtNJnl1b5Vo

  • ಪವರ್ ಸ್ಟಾರ್ ಅಪ್ಪು ಅಭಿಮಾನಿಗಳಿಗೆ ಡಬಲ್ ಧಮಾಕಾ

    ಪವರ್ ಸ್ಟಾರ್ ಅಪ್ಪು ಅಭಿಮಾನಿಗಳಿಗೆ ಡಬಲ್ ಧಮಾಕಾ

    -ಅಂಜನಿಪುತ್ರ ಆಡಿಯೋ ಟೀಸರ್ ಬಿಡುಗಡೆ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ ಅಂಜನಿಪುತ್ರ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ.

    ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಚಿತ್ರದ ಆಡಿಯೋ ಹಾಗೂ ಟೀಸರ್ ಅನ್ನು ಬಿಡುಗಡೆ ಮಾಡಿದರು. ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತ ನೀಡಿದ್ದು, ಎ ಹರ್ಷ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ.

    ಪುನೀತ್ ರಾಜ್ ಕುಮಾರ್ ಅವರ ಒಡೆತನದ ಪಿಆರ್ ಕೆ ಆಡಿಯೋ ಸಂಸ್ಥೆ ಮೊದಲ ಬಾರಿಗೆ ಹಾಡುಗಳ ಹಕ್ಕುಗಳನ್ನು ಪಡೆದಿದೆ. ಈ ವೇಳೆ ಮಾತನಾಡಿದ ಪುನೀತ್ ರಾಜಕುಮಾರ್ ನಾನು ಯಾರಿಗೂ ಕಾಂಪಿಟೇಷನ್ ಕೊಡುವುದಕ್ಕೆ ಈ ಆಡಿಯೋ ಸಂಸ್ಥೆ ಶುರು ಮಾಡಿಲ್ಲ. ನನಗೆ ಚಿಕ್ಕಂದಿನಿಂದಲೂ ಹಾಡು ಅಂದರೆ ಇಷ್ಟ. ‘ಪಿಆರ್ ಕೆ’ ಅಂದರೆ ಪಾರ್ವತಮ್ಮ ರಾಜ್ ಕುಮಾರ್ ವಿಥ್ ರಾಜ್ ಕುಮಾರ್. ಇದು ನನ್ನ ಬಹುದಿನಗಳ ಕನಸು. ಪ್ರಸ್ತುತ ಅಂಜನಿಪುತ್ರ ಹಾಡುಗಳ ಹಕ್ಕುಗಳನ್ನು ಪಡೆದುಕೊಂಡಿದೆ, ಮುಂದೆ ಟಗರು, ಕವಲುದಾರಿ ಚಿತ್ರಗಳ ಹಕ್ಕು ಪಡೆಯುವ ಮೂಲಕ ನಮ್ಮ ಪ್ರಯಾಣ ಸಾಗುತ್ತೆ ಎಂದರು.

    ಕಾರ್ಯಕ್ರಮದ ವೇಳೆ ಪುನೀತ್ ರಾಜ್ ಕುಮಾರ್ ಅವರು ವರನಟ ಡಾ. ರಾಜ್ ಕುಮಾರ್ ಚಿತ್ರಗಳ ಹಾಡನ್ನು ಹಾಡಿ ಎಲ್ಲರನ್ನೂ ರಂಜಿಸಿದರು. ಇನ್ನು ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಹಲವು ಸ್ಯಾಂಡಲ್‍ವುಡ್ ಗಣ್ಯರು ಭಾಗವಹಿಸಿದ್ದರು.

    ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.