Tag: Anjanadri Hill

  • ಆಂಜನೇಯನ ಜನ್ಮಭೂಮಿ ಹೈಜಾಕ್ – ಬಿಜೆಪಿ ಯಾಕೆ ಸುಮ್ಮನಿದೆ ಉಗ್ರಪ್ಪ ಪ್ರಶ್ನೆ

    ಆಂಜನೇಯನ ಜನ್ಮಭೂಮಿ ಹೈಜಾಕ್ – ಬಿಜೆಪಿ ಯಾಕೆ ಸುಮ್ಮನಿದೆ ಉಗ್ರಪ್ಪ ಪ್ರಶ್ನೆ

    ದಾವಣಗೆರೆ: ಆಂಜನೇಯನ ಜನ್ಮಭೂಮಿ ಹೈಜಾಕ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಕಿಡಿಕಾರಿದರು.

    ಶ್ರೀ ಆಂಜನೇಯ ಜನ್ಮಭೂಮಿ ವಿವಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಂಗಾವತಿಯ ಕಿಷ್ಕಿಂದೆ ಆಂಜನಾದ್ರಿ ಬೆಟ್ಟವೇ ಹನುಮನ ನಿಜವಾದ ಜನ್ಮಭೂಮಿ. ತಿರುಪತಿಯಲ್ಲಿ ವಿನಾಕರಣ ವಿವಾದ ಸೃಷ್ಠಿ ಮಾಡಲಾಗುತ್ತಿದೆ. ಆಂಜನೇಯನ ಜನ್ಮಭೂಮಿಯನ್ನೆ ಹೈಜಾಕ್ ಮಾಡಲಾಗುತ್ತಿದೆ. ಕೋಟ್ಯಂತರ ಭಕ್ತರ ಭಾವನೆಯ ಪ್ರಶ್ನೆ ಇದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ:  ಟ್ರ್ಯಾಕ್ಟರ್ ಬಳಸಿ ರಷ್ಯಾದ ಮಿಲಿಟರಿ ಟ್ಯಾಂಕ್ ಹೊತ್ತೊಯ್ದ ರೈತ

    ಪ್ರಧಾನಿ ಮೋದಿ ಅವರ ಶ್ರೀಮತಿಯವರು ಸಹ ಇಲ್ಲಿಗೆ ಭೇಟಿ ನೀಡಿದ್ದಾರೆ. ರಾಮ ಜನ್ಮಭೂಮಿ ಬಗ್ಗೆ ತಲೆಕೆಡಿಸಿಕೊಂಡಿದ್ದ ಬಿಜೆಪಿ ಇಲ್ಲಿ ಯಾಕೆ ಮೌನ ವಹಿಸಿದೆ. ಯಾಕೆ RSS ಕೇಂದ್ರ, ರಾಜ್ಯ ಸರ್ಕಾರ ಖಂಡಿಸುತ್ತಿಲ್ಲ? ಸುಮ್ಮನಿದ್ದರೆ ಒಪ್ಪಿಕೊಂಡಂತೆ ಅಲ್ವಾ ಎಂದು ವ್ಯಂಗ್ಯವಾಡಿದರು.

    ನಾವು ಬಿಜೆಪಿ ಅವರ ತರ ವೋಟ್ ಬ್ಯಾಂಕ್ ರಾಜಕಾರಣ ಮಾಡಲ್ಲ. ಭಕ್ತಿ ಮತ್ತು ಶ್ರದ್ಧೆಯ ಪ್ರತೀಕ ಆಂಜನೇಯ. ಆಂಜನೇಯನ ನೈಜ ಜನ್ಮಭೂಮಿ ಅಭಿವೃದ್ಧಿ ಮಾಡುವ ಕೆಲಸ ಎಲ್ಲರಿಂದ ಆಗಲಿ. ತಿರುಪತಿಗೆ ಆಂಜನೇಯ ಬಂದು ಹೋಗಿರಬಹುದು. ಆದರೆ ನಿಜವಾದ ಹುಟ್ಟು ಕರ್ನಾಟಕದ ಕಿಷ್ಕಿಂದೆಯಲ್ಲಿದೆ. ಈ ಹಿನ್ನೆಲೆ ಗಂಗಾವತಿಯ ಆಂಜನಾದ್ರಿಬೆಟ್ಟ ಅಭಿವೃದ್ಧಿಪಡಿಸಲಿ ಎಂದು ಆಗ್ರಹಿಸಿದರು.

    ರಾಷ್ಟ್ರದಲ್ಲಿ ರಾಮ ಜನ್ಮಭೂಮಿ ಬಗ್ಗೆ ವಾದ ನಡೀತಾ ಇದೆ. ಸಂಘರ್ಷದ ಬಳಿಕ ರಾಮಮಂದಿರ ಕಟ್ಟಲಾಗ್ತಿದೆ. ಇಡೀ ವಿಶ್ವಕ್ಕೆ ರಾಮನ ಪರಿಚಯ ಮಾಡಿದ್ದು ಮಹರ್ಷಿ ವಾಲ್ಮೀಕಿ. ಆದರೆ ವಾಲ್ಮೀಕಿಯನ್ನು ಆಧುನಿಕ ರಾಮಭಕ್ತರು ಮರೆತಿದ್ದಾರೆ. ತಲಕಾವೇರಿಯಿಂದ ಹಿಡಿದು ಪಶ್ಚಿಮ ಘಟ್ಟಗಳಲ್ಲಿ 4 ಸಾವಿರ ಟಿಎಂಸಿ ನೀರು ಪ್ರಕೃತಿದತ್ತವಾಗಿ ಶೇಖರಣೆಯಾಗುತ್ತದೆ. ಇಲ್ಲಿಯವರೆಗೂ ಬಳಕೆಯಾಗುವ ನೀರು 2 ಸಾವಿರ ಟಿಎಂಸಿ ನೀರು ಮಾತ್ರ. ಉಳಿದ 2 ಸಾವಿರ ಟಿಎಂಸಿ ನೀರು ಸಮುದ್ರದ ಪಾಲಾಗುತ್ತದೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಅನೌನ್ಸ್ ಮಾಡುತ್ತಾರೆ. ನದಿಗಳ ಜೋಡಣೆ ಮಾಡುತ್ತೇವೆ. ದಕ್ಷಿಣ ಭಾರತದ ನದಿಜೋಡಣೆ ಮಾಡಲು ಹೋಗಿದ್ದಾರೆ. ಇಲ್ಲಿ ಯಾರು ಕೂಡ ಕೇಳಿಲ್ಲ, ಎಷ್ಟು ನೀರು ಇದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಎಲ್ಲ ನೀರನ್ನು ಪೆನ್ನಾರ್‍ನಲ್ಲಿ ತಂದು ಬಿಡುತ್ತಾರಂತೆ. ಕರ್ನಾಟಕವನ್ನು ನೀರಿನ ವಿಚಾರವಾಗಿ ಏನು ಬೇಕಾದರೂ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿದಿದೆ. ಯಾರ ಅಭಿಪ್ರಾಯ ಸಂಗ್ರಹಿಸದೆ ನದಿ ಜೋಡಣೆಗೆ ಕೈ ಹಾಕಿದ್ದಾರೆ ಎಂದರು. ಇದನ್ನೂ ಓದಿ: ನಾಯಕರಿಗಿಲ್ಲದ ವಯಸ್ಸು ನಾಯಕಿಗೇಕೆ? ಲಾರಾ ದತ್ತ ಪ್ರಶ್ನೆ

    ಇದು ಏನಾದ್ರು ಜಾರಿಯಾದರೆ ಕರ್ನಾಟಕಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ. ಲಾಭ ಆಗುವುದು ತಮಿಳುನಾಡು ಹಾಗೂ ಆಂಧ್ರಕ್ಕೆ ಮಾತ್ರ. ಕರ್ನಾಟಕದಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ಇವೆ ಅದನ್ನು ಬಿಟ್ಟಿದ್ದಾರೆ. ಈಗ ಇರುವ ಯೋಜನೆಗಳ ಬಗ್ಗೆ ಜನಾಭಿಪ್ರಾಯ ಪಡೆಯದೆ ಅಂತರಾಜ್ಯ ಯೋಜನೆಗಳ ಜಾರಿಗೆ ತಂದಿದ್ದಾರೆ. ಇದರಲ್ಲಿ ಪೊಲಿಟಿಕಲ್ ವಿಲ್ ಎಷ್ಟು ಇದೆ ಎಂದು ಕೇಳುತ್ತಿದ್ದೇವೆ ಎಂದು ಸಂಶಯ ವ್ಯಕ್ತಪಡಿಸಿದರು.

  • ನನ್ನ ಪತ್ನಿಗೆ ಹೆಣ್ಣುಮಗುವಾಗಲಿ – ಹುಂಡಿ ಹಣ ಎಣಿಸುವಾಗ ಸಿಕ್ತು ಭಕ್ತನ ಹರಕೆ ಪತ್ರ!

    ನನ್ನ ಪತ್ನಿಗೆ ಹೆಣ್ಣುಮಗುವಾಗಲಿ – ಹುಂಡಿ ಹಣ ಎಣಿಸುವಾಗ ಸಿಕ್ತು ಭಕ್ತನ ಹರಕೆ ಪತ್ರ!

    ಕೊಪ್ಪಳ: ಓಮಿಕ್ರಾನ್ ಸೋಂಕು ಹೆಚ್ಚಳದಿಂದಾಗಿ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರ ದರ್ಶನಕ್ಕೆ ಬರುವವರ ಸಂಖ್ಯೆ ಕ್ಷೀಣಿಸಿದೆ. ಆದರೂ, ಇಂದು ನಡೆದ ಹುಂಡಿ ಹಣ ಎಣಿಕೆಯಲ್ಲಿ 10.45 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. 3 ವಿದೇಶಿ ನಾಣ್ಯಗಳು ಕೂಡ ಕಾಣಿಕೆಯಾಗಿ ಬಂದಿವೆ.

    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿರುವ ಅಂಜನಾದ್ರಿ ಬೆಟ್ಟದಲ್ಲಿ ಇಂದು ಗ್ರೇಡ್-2 ತಹಶೀಲ್ದಾರ್ ವಿ.ಹೆಚ್.ಹೊರಪೇಟೆ ಅವರ ನೇತೃತ್ವದಲ್ಲಿ ಬೆಳಗ್ಗೆ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಹುಂಡಿ ಕಾಣಿಕೆ ಎಣಿಕೆ ನಡೆಸಲಾಯಿತು.

    31 ದಿನದ ಅವಧಿಯಲ್ಲಿ ಇಷ್ಟೊಂದು ಹಣ ಸಂಗ್ರಹವಾಗಿರುವುದು ಕಂದಾಯ ಮತ್ತು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಅಮೆರಿಕಾ ಮತ್ತು ಫಿಲಿಫೈನ್ ದೇಶದ ಮೂರು ನಾಣ್ಯಗಳು ಕಾಣಿಕೆ ರೂಪವಾಗಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟೋಯಿಂಗ್ ವಾಹನ ಸಿಬ್ಬಂದಿ ಅಮಾನುಷವಾಗಿ ವರ್ತಿಸಿಲ್ಲ, ಅದೆಲ್ಲಾ ಸುಳ್ಳು: ಆರಗ ಜ್ಞಾನೇಂದ್ರ

    ಹುಂಡಿಯಲ್ಲಿ ಹರಕೆ ಪತ್ರ
    ನನ್ನ ಪತ್ನಿಗೆ ಹೆಣ್ಣು ಮಗುವಾಗಲಿ, ಹೆರಿಗೆ ಸೂಸುತ್ರವಾಗಿ ಆಗಲಿ. ನನ್ನ ಮೇಲೆ ಯಾವುದೇ ಪ್ರಕರಣ ಇಲ್ಲದಂತೆ ಮಾಡು ಭಗವಂತ ಎಂಬ ಹಲವು ಹರಕೆಯಿರುವ ಭಕ್ತನೊಬ್ಬನ ಪತ್ರ ಹುಂಡಿಯಲ್ಲಿ ಸಿಕ್ಕಿದೆ. ಹುಂಡಿ ಎಣಿಕೆಯಲ್ಲಿ ಭಕ್ತನೊಬ್ಬನ ಹರಕೆ ಪತ್ರ ಓದಿದ ಕಂದಾಯ ಇಲಾಖೆ ಸಿಬ್ಬಂದಿ, ದೇವರೇ ಆ ಭಕ್ತನ ಬೇಡಿಕೆ ಈಡೇರಿಸಪ್ಪಾ ಎಂದು ನಗು ಬೀರಿದ್ದಾರೆ.

  • ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು 6.5 ನಿಮಿಷದಲ್ಲಿ ಏರಿದ್ದ ಅಪ್ಪು

    ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು 6.5 ನಿಮಿಷದಲ್ಲಿ ಏರಿದ್ದ ಅಪ್ಪು

    ಕೊಪ್ಪಳ: ಪೌರಾಣಿಕ ಪ್ರಸಿದ್ಧಿಯಾದ ಅಂಜನಾದ್ರಿ ಬೆಟ್ಟದ ಬರೋಬ್ಬರಿ 575 ಮೆಟ್ಟಿಲುಗಳನ್ನು ನಟ ಪುನೀತ್ ರಾಜ್‍ಕುಮಾರ್ ಕೇವಲ 6.5 ನಿಮಿಷದಲ್ಲಿ ಏರಿದ್ದರು.

    ಪಿಎಸ್‍ಐ ದೊಡ್ಡಪ್ಪ, ಆ ಸಂದರ್ಭವನ್ನು ನೆನೆದು ಭಾವುಕರಾಗಿದ್ದು, ಪುನೀತ್ ಅವರ ಕ್ರಿಯಾಶೀಲತೆ ಕಂಡು ಭದ್ರತೆ ನೀಡಿದ್ದ ಅವರು ಅಚ್ಚರಿ ವ್ಯಕ್ತಪಡಿಸಿದ್ದರಂತೆ. ಇನ್ನು ಈ ವೇಳೆ ಪುನೀತ್ ಅವರು ಪೊಲೀಸರೊಂದಿಗೆ ಸಾಕಷ್ಟು ವಿಷಯ ಮಾತನಾಡುತ್ತಲೇ ಅಂಜನಾದ್ರಿ ಪರ್ವತ ಇಳಿದಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಜಾಗೃತಿ ಅಭಿಯಾನಕ್ಕೆ ಕೇಳಿದ ತಕ್ಷಣ ಹಿಂದೆ ಮುಂದೆ ನೋಡದೆ ಬಂದಿದ್ದ ಅಪ್ಪು

    ಕಳೆದ 2020ರ ಅಕ್ಟೋಬರ್ ನಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ‘ಜೇಮ್ಸ್’ ಚಿತ್ರತಂಡ ಚಿತ್ರೀಕರಣ ನಡೆದಿತ್ತು. ಈ ವೇಳೆ ಪುನೀತ್ ಅವರು ಬೆಟ್ಟ ಹತ್ತಿದ್ದು, ಪೊಲೀಸರ ಜೊತೆ ತಿರುಪತಿ ಬೆಟ್ಟ ಏರಲು ಟೈಮ್ ಎಷ್ಟು ಬೇಕು? ಚಾಮುಂಡಿ ಬೆಟ್ಟ ಏರೋದಕ್ಕೆ ತಾವು ಎಷ್ಟು ಟೈಮ್ ತಗೋತಿನಿ ಎನ್ನುವ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆರ್ಯನ್ ಖಾನ್ ಕಿಡ್ನಾಪ್ ಮಾಡಲಾಗಿತ್ತು: ನವಾಬ್ ಮಲಿಕ್

    ಚಿತ್ರೀಕರಣದ ಕೊನೆ ದಿನ 46 ವರ್ಷದ ಪುನೀತ್ ಬೆಟ್ಟ ಏರಿದ್ದು, ಒಂದು ಕ್ಷಣವೂ ವಿಶ್ರಮಿಸದೆ ಬೆಟ್ಟ ಏರಿದ್ದನ್ನು ಕಂಡು ಭದ್ರತೆಗೆ ನಿಯೋಜನೆಗೊಂಡಿದ್ದ ದೊಡ್ಡಪ್ಪ ಬೆರಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ಪುನೀತ್ ಅಂಜನಾದ್ರಿ ಬೆಟ್ಟದಲ್ಲಿ ಹೆಚ್ಚು ಚಿತ್ರೀಕರಣ ಮಾಡುವ ಇಂಗಿತ ವ್ಯಕ್ತಪಡಿಸಿ, ಬೆಟ್ಟದಲ್ಲಿನ ಕೋತಿಗಳಿಗೆ ಬಾಳೆಹಣ್ಣು ಕೊಟ್ಟು, ಜನ ಸಾಮಾನ್ಯರ ಜೊತೆ ಆತ್ಮೀಯವಾಗಿ ಬೆರೆತ ಅಪ್ಪು ಸರಳತೆಯನ್ನು ದೊಡ್ಡಪ್ಪ ನೆನಪು ಮಾಡಿಕೊಂಡಿದ್ದಾರೆ.

  • ಬೈಕ್‍ಗಳು ಮುಖಾಮುಖಿ ಡಿಕ್ಕಿ – ಮೂವರು ಸಾವು, ಅನುಮಾನ ಹುಟ್ಟಿಸಿದ ಅಪಘಾತ

    ಬೈಕ್‍ಗಳು ಮುಖಾಮುಖಿ ಡಿಕ್ಕಿ – ಮೂವರು ಸಾವು, ಅನುಮಾನ ಹುಟ್ಟಿಸಿದ ಅಪಘಾತ

    – ಮೈ ಮೇಲೆ ಒಂಚೂರು ಗಾಯಗಳಿಲ್ಲ
    – ಡಿಕ್ಕಿಯ ರಭಸಕ್ಕೆ ಹೊತ್ತಿ ಉರಿದ ಬೈಕ್‍ಗಳು

    ವಿಜಯಪುರ: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸವಾರರು ಸಾವನ್ನಪ್ಪಿದ್ದರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೂವಿನಹಿಪ್ಪರಗಿ ಗ್ರಾಮದ ಬಳಿ ನಡೆದಿದೆ.

    ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಬಳಿಯ ದಿಂಡವಾರ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಕುಮಾರ್ (22) ಮೃತ ಬೈಕ್ ಸವಾರನಾಗಿದ್ದು, ಇನ್ನಿಬ್ಬರ ಹೆಸರು ಪತ್ತೆಯಾಗಿಲ್ಲ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಯುವಕರು ಕಲಬುರ್ಗಿ ಜಿಲ್ಲೆಯ ಅಪ್ಜಲಪುರದಿಂದ ಅಂಜನಾದ್ರಿ ಬೆಟ್ಟಕ್ಕೆ ಬೈಕ್ ಸವಾರಿ ಹೊರಟಿದ್ದರು ಎನ್ನಲಾಗಿದೆ. ಆದರೆ ವೇಗವಾಗಿ ಬಂದು ಬೈಕ್‍ಗಳು ಡಿಕ್ಕಿ ಹೊಡೆದಿದ್ದರೂ ಮೃತಪಟ್ಟವರಿಗೆ ಕೇವಲ ತಲೆಗೆ ಮಾತ್ರ ಗಾಯಗಾಗಿದೆ. ಆದರೆ ಮೈ ಮೇಲೆ ಒಂಚೂರು ಗಾಯಗಳಿಲ್ಲ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೂ ಕೇವಲ ತಲೆ ಮೇಲೆ ಗಾಯವಾಗಿದೆ. ಇದರಿಂದ ಅಪಘಾತದ ಬಗ್ಗೆ ಅನುಮಾನ ಹುಟ್ಟಿಸುವಂತಾಗಿದೆ.

    ಡಿಕ್ಕಿಯ ರಭಸಕ್ಕೆ ಎರಡು ಬೈಕ್‍ಗಳು ಹೊತ್ತಿ ಉರಿದಿವೆ. ಈ ಕುರಿತು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಮಮಂದಿರವಾಗುತ್ತಿರುವುದಕ್ಕೆ ಕರ್ನಾಟಕದ ಜನ ಹೆಚ್ಚು ಖುಷಿಪಡಬೇಕು: ಚಕ್ರವರ್ತಿ ಸೂಲಿಬೆಲೆ

    ರಾಮಮಂದಿರವಾಗುತ್ತಿರುವುದಕ್ಕೆ ಕರ್ನಾಟಕದ ಜನ ಹೆಚ್ಚು ಖುಷಿಪಡಬೇಕು: ಚಕ್ರವರ್ತಿ ಸೂಲಿಬೆಲೆ

    – ರಾಮ ಬಂಟ ಹನುಮನ ಗಾಳಿಪಟ ಹಾರಾಟ

    ಕೊಪ್ಪಳ: ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿರುವ ಹಿನ್ನೆಲೆಯಲ್ಲಿ ರಾಮ ಬಂಟ ಹನುಮನ ಜನ್ಮಸ್ಥಳದಲ್ಲಿ ಹನುಮನಿಗೆ ವಿಶೇಷ ಅಲಂಕಾರ ಮತ್ತು ಪೂಜೆ ನೆರೆವೇರಿಸಲಾಯಿತು.

    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮ ಜನ್ಮಸ್ಥಳ ಎಂದೇ ಪ್ರಖ್ಯಾತಿ ಪಡೆದ ಅಂಜನಾದ್ರಿ ಬೆಟ್ಟದಲ್ಲಿ ರಾಮ ಭಕ್ತರು ಮತ್ತು ಹಿಂದೂ ಪರ ಸಂಘಟನೆ ಮುಖಂಡರಿಂದ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಕೇಸರಿ ಧ್ವಜ ಹೂಗಳಿಂದ ಅಲಂಕರಿಸಿ ರಾಮಜಪ ಮಾಡುವ ಮೂಲಕ ರಾಮ ಮತ್ತು ಹನುಮನ ಆರಾಧನೆ ಮಾಡಲಾಯಿತು.

    ಕೆಲದಿನಗಳ ಹಿಂದೆಯಷ್ಟೇ ಶ್ರೀರಾಮ ಸೇನೆಯಿಂದ ಹನುಮನ ಜನ್ಮಸ್ಥಳದಿಂದ ಮೃತಿಕೆ, ಶಿಲೆ, ಜಲವನ್ನು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕಳಿಸಿಕೊಡಲಾಗಿತ್ತು. ಅದರಂತೆ ಇಂದು ಶಿಲಾನ್ಯಾಸ ಪ್ರಯುಕ್ತವಾಗಿ ಅಂಜನಾದ್ರಿ ಬೆಟ್ಟದಲ್ಲಿರುವ ಹನುಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಕಾರ್ಯಕ್ರಮಕ್ಕೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಗಮಿಸಿ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ರಾಮಜಪದಲ್ಲಿ ಪಾಲ್ಗೊಂಡು ರಾಮನ ಆರಾಧನೆ ಮಾಡಿದರು.

    ರಾಮಮಂದಿರ ನಿರ್ಮಾಣದ ಒಳಿತಿಗಾಗಿ ಹನುಮನ ಸ್ಥಳದಲ್ಲಿ ಪೂರ್ಣಾಹುತಿ ಹೋಮ ಹವನ ಕೂಡ ನಡೆಸಲಾಯ್ತು. ಮಂಗಳೂರಿನಿಂದ ಆಗಮಿಸಿದ ತಂಡ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನ ಗಾಳಿಪಟ ಹಾರಿಸಿ ಎಲ್ಲರನ್ನು ಗಮನಸೆಳೆಯುವಂತೆ ಮಾಡಿತು. ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಹಾರಿಸಿದ ಗಾಳಿಪಟದಲ್ಲಿ ಹನುಮನ ನಾಡಿನಿಂದ ರಾಮನ ಸೇವೆ ಎನ್ನುವ ಸಂದೇಶ ರವಾನಿಸಿದ ಮಂಗಳೂರಿನ ಟೀಂ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

    ಸೂಲಿಬೆಲೆ ಮಾತನಾಡಿ, ರಾಮನಿಗಾಗಿ ಶಬರಿ ಕಾಯುವ ಹಾಗೇ ರಾಮಮಂದಿರ ನಿರ್ಮಾಣಕ್ಕಾಗಿ ಇಡೀ ದೇಶ ಕಾದು ಕುಳಿತಿತ್ತು. ಇಂದು ರಾಮಮಂದಿರ ನಿರ್ಮಾಣದ ಮಹತ್ವದ ದಿನ ಒದಗಿಬಂದಂತಾಗಿದೆ. ಇಡೀ ದೇಶವೇ ಸಂತೋಷ ಪಡುವಂತ ದಿನವಾಗಿದೆ. ಅದರಲ್ಲೂ ಕರ್ನಾಟಕದ ಜನತೆಯಂತು ಹೆಚ್ಚು ಖುಷಿ ಪಡುವ ದಿನ, ಯಾಕೆಂದರೆ ರಾಮಾಯಣ ಅಂತ್ಯವಾಗುವುದೇ ಕರ್ನಾಟಕದ ಭೂಮಿಯಿಂದ. ಇಲ್ಲಿನ ಹನುಮ ಸ್ಥಳಕ್ಕೆ ಬಂದ ರಾಮ ರಾಜ್ಯದ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದನ್ನು ನಾವು ಈಗ ಸ್ಮರಿಸಬಹುದು ಎಂದು ಹೇಳಿದರು.

  • ಆಹಾರಕ್ಕಾಗಿ ಮೂಕ ರೋಧನೆ – ಅಂಜನಾದ್ರಿ ಬೆಟ್ಟದಲ್ಲಿ ಆಹಾರ, ನೀರಿಗಾಗಿ ಮಂಗಗಳ ನರಳಾಟ

    ಆಹಾರಕ್ಕಾಗಿ ಮೂಕ ರೋಧನೆ – ಅಂಜನಾದ್ರಿ ಬೆಟ್ಟದಲ್ಲಿ ಆಹಾರ, ನೀರಿಗಾಗಿ ಮಂಗಗಳ ನರಳಾಟ

    ಕೊಪ್ಪಳ: ಮಹಾಮಾರಿ ಕೊರೊನಾ ವೈರಸ್ ವಿಶ್ವದ ಮನುಕುಲವನ್ನೇ ಬೆಚ್ಚಿ ಬೀಳಿಸಿದ್ದಲ್ಲದೇ ಮೂಕ ಪ್ರಾಣಿಗಳನ್ನು ಕಂಗಾಲಾಗಿಸಿದೆ. ಕೊರೊನಾ ಭೀತಿಯಿಂದ ದೇಶವನ್ನು ಲಾಕ್‍ಡೌನ್ ಮಾಡಿ ಜನರಿಗೆ ಅಗತ್ಯ ವಸ್ತು, ಆಹಾರ ಒದಗಿಸುವ ಪ್ರಯತ್ನವೆನೋ ನಡೆಯುತ್ತಿದೆ. ಆದರೆ ಲಾಕ್‍ಡೌನಿಂದ ಆಹಾರ ಸಿಗದೇ ಮೂಕ ಪ್ರಾಣಿಗಳು ನರಳುತ್ತಿವೆ.

    ಕೊಪ್ಪಳ ಜಿಲ್ಲೆಯಲ್ಲಿರುವ ಆಂಜನೇಯ ಹುಟ್ಟಿದ ಸ್ಥಳ ಎಂದೇ ಪ್ರಖ್ಯಾತಿ ಪಡೆದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಸಾವಿರಾರು ಮಂಗಗಳು ನಿತ್ಯ ಆಹಾರಕ್ಕಾಗಿ ಪರದಾಡುವಂತಾಗಿದೆ. ಲಾಕ್‍ಡೌನ್‍ನಿಂದಾಗಿ ಕಳೆದ ಒಂದು ತಿಂಗಳನಿಂದ ದೇವಸ್ಥಾನದ ಬಾಗಿಲು ಮುಚ್ಚಿದ್ದು, ದೇವಸ್ಥಾನದಲ್ಲಿ ಭಕ್ತರು ನೀಡುತ್ತಿದ್ದ ಹಣ್ಣು, ಆಹಾರವನ್ನೇ ತಿಂದು ಬದುಕುತ್ತಿದ್ದ ಮಂಗಗಳು ಆಹಾರ ಸಿಗದೇ ಪರಿತಪಿಸುವಂತಾಗಿದೆ.

    ಸಾವಿರಾರು ಭಕ್ತರು ದೇವಸ್ಥನಕ್ಕೆ ಭೇಟಿ ನೀಡಿ ಮಂಗಗಳಿಗೂ ಆಹಾರ ನೀಡುತ್ತಿದ್ದರು. ಈಗ ದೇಗುಲಕ್ಕೆ ಭಕ್ತರು ಭೇಟಿ ನೀಡುತ್ತಿಲ್ಲ. ಹೀಗಾಗಿ ಮಂಗಗಳ ಸ್ಥಿತಿ ಮನಗಂಡ ದೇವಸ್ಥಾನದ ಆಡಳಿತ ಮಂಡಳಿ ಮಂಗಗಳಿಗೆ ನಿತ್ಯ ಆಹಾರ ಪೂರೈಕೆ ಮಾಡುತ್ತಿದೆ. ಈಗ ಪ್ರತಿನಿತ್ಯ ದೇವಸ್ಥಾನದಿಂದ ಮಂಗಗಳಿಗೆ ಮೂರು ಹೊತ್ತು ಶೇಂಗಾ, ಕಡಲೆ ಕಾಳು ಹಾಗೂ ಬಾಳೆಹಣ್ಣು ನೀಡಲಾಗುತ್ತಿದೆ.

    ಆದರೆ ನಿತ್ಯ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರಿಂದಲು ಆಹಾರ ಸಿಗುತ್ತಿದ್ದ ಮಂಗಗಳಿಗೆ ಈಗ ಆಹಾರಕ್ಕೆ ಅಲೆದಾಡುವಂತ ಸ್ಥಿತಿ ಕೊರೊನಾದಿಂದ ನಿರ್ಮಾಣವಾಗಿದೆ. ದೇವಸ್ಥಾನದ ಕೆಳಗೆ ಇರುವ ಮಂಗಗಳು ಅಲ್ಲಿನ ಸಿಬ್ಬಂದಿ ನೀಡುತ್ತಿರುವ ಆಹಾರ ತಿಂದು ಜೀವ ಉಳಿಸಿಕೊಂಡಿವೆ. ಆದ್ರೆ ಬೆಟ್ಟದ ಮೇಲಿರುವ ಸಾವಿರಾರು ಮಂಗಗಳು ಆಹಾರ, ನೀರು ಸಿಗದೇ ನರಳಾಡುತ್ತಿವೆ.

  • ರಾಮನ ಸ್ಮರಣೆ ಎಲ್ಲಿರುವುದೋ ಅಲ್ಲಿ ಹನುಮನಿರುವನು..ಹನುಮನ ಸ್ಮರಣೆ ಎಲ್ಲಿರುವುದೋ ಅಲ್ಲಿ ರಾಮನಿರುವನು

    ರಾಮನ ಸ್ಮರಣೆ ಎಲ್ಲಿರುವುದೋ ಅಲ್ಲಿ ಹನುಮನಿರುವನು..ಹನುಮನ ಸ್ಮರಣೆ ಎಲ್ಲಿರುವುದೋ ಅಲ್ಲಿ ರಾಮನಿರುವನು

    ರಾಮನ ಸ್ಮರಣೆ ಎಲ್ಲಿರುವುದೋ ಅಲ್ಲಿ ಹನುಮನಿರುವನು..ಹನುಮನ ಸ್ಮರಣೆ ಎಲ್ಲಿರುವುದೋ ಅಲ್ಲಿ ರಾಮನಿರುವನು..ಹೀಗೆ ರಾಮ ಮತ್ತು ಹನುಮ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಹ ಆಪ್ತಮಿತ್ರರು, ಗುರು ಶಿಷ್ಯರು. ರಾಮನನ್ನ ಪೂಜಿಸುವುವರು ಹನುಮಂತನನ್ನ ಪೂಜಿಸುತ್ತಾರೆ. ಹನುಮಂತನನ್ನ ಪೂಜಿಸುವವರು ರಾಮನನ್ನ ಪೂಜಿಸೇ ಪೂಜಿಸುತ್ತಾರೆ. ಆದ್ರೆ, ರಾಮ ಹುಟ್ಟಿದ್ದು ಅಯೋಧ್ಯೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ, ಹನುಮಂತ ಹುಟ್ಟಿದ್ದು ಎಲ್ಲಿ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಕೆಲವರಿಗೆ ಗೊಂದಲಗಳು ಇವೆ.

    ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿ. ಅಂಜನಾದ್ರಿ ಪರ್ವತದಲ್ಲಿ ಅಂಜನಾದೇವಿ ಹನುಮಂತನಿಗೆ ಜನ್ಮ ನೀಡುತ್ತಾಳೆ. ರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಇದರ ಉಲ್ಲೇಖವಿದೆ. ‘ಕಿಷ್ಕಿಂಧೆ’ ಎಂದರೆ ನಮ್ಮ ರಾಜ್ಯದ ಹಂಪೆಯ ಪ್ರದೇಶ. ಅಪ್ಸರೆಯಾಗಿದ್ದ ಅಂಜನಾ ಋಷಿಮುನಿಗಳ ಶಾಪದಿಂದ ಭೂಮಿಯ ಮೇಲೆ ವಾನರ ಕುಲದಲ್ಲಿ ಜನ್ಮತಾಳಬೇಕಾಯ್ತು. ಆದ್ರೆ, ಗಂಡು ಮಗುವಿಗೆ ಜನ್ಮ ಕೊಟ್ಟರೇ ಮಾತ್ರ ಅವಳ ಶಾಪ ವಿಮೋಚನೆಯಾಗುವಂತಿತ್ತು. ಈ ಸಂದರ್ಭದಲ್ಲಿ ಕೇಸರಿಯೊಂದಿಗೆ ಅಂಜನಾದೇವಿಯ ಮದುವೆಯಾಗುತ್ತೆ. ಆದ್ರೆ, ಅವಳ ಶಾಪ ವಿಮೋಚನೆ ಆಗುವುದಕ್ಕೆ ಗಂಡು ಮಗ ಜನಿಸಬೇಕಿತ್ತು. ಹಾಗಾಗಿ ಶಿವನ ಆರಾಧನೆ ಮಾಡಿ ವರ ಪಡೆದುಕೊಳ್ಳುತ್ತಾಳೆ. ಅದಾದ ಬಳಿಕ ಅತ್ಯಂತ ಬಲಶಾಲಿ ಆಂಜನೇಯನಿಗೆ ಅಂಜನಾದೇವಿ ಜನ್ಮ ನೀಡುತ್ತಾಳೆ. ಹನುಮನ ಜನ್ಮ ಬಗ್ಗೆ ಹಲವು ರೀತಿಯ ಕಥೆಗಳನ್ನ ಹೇಳಲಾಗುತ್ತೆ. ಒಂದು ಕಥೆಯ ಪ್ರಕಾರ ವಾಯುದೇವನೊಂದಿ ಮೋಹಿಸಿ ಅಂಜನಾದೇವಿ ವಾಯುಪುತ್ರನಿಗೆ ಜನ್ಮ ನೀಡಿದಳೆಂದು. ಇನ್ನೊಂದು ಕಥೆಯ ಪ್ರಕಾರ, ಪುತ್ರ ಕಾಮೇಷ್ಠಿಯಾಗ ಮಾಡಿ ಅದರ ಪ್ರಸಾದವನ್ನ ದಾಶ್ರತನು ತನ್ನ ಪತ್ನಿಯರಿಗೆ ನೀಡುವಾಗ ಕಾಗೆಯೊಂದು ಸ್ವಲ್ಪ ಭಾಗ ಕಿತ್ತುಕೊಂಡು ಹೋಗುತ್ತೆ. ಅದನ್ನ ತಪಸ್ಸು ಮಾಡುತ್ತಿದ್ದ ಅಂಜನಾದೇವಿಯ ಕೈಯಲ್ಲಿ ಬೀಳುವಂತೆ ವಾಯುದೇವ ಮಾಡುತ್ತಾನೆ. ಆಗ ಅಂಜನಾದೇವಿ ಗರ್ಭವತಿಯಾಗಿ ಆಂಜನೇಯನಿಗೆ ಅಂಜನಾದ್ರಿ ಬೆಟ್ಟದ ಮೇಲೆ ಜನ್ಮ ನೀಡುತ್ತಾಳೆ.

    ಸೂರ್ಯನನ್ನೆ ನುಂಗಲು ಹೋಗಿದ್ದು:
    ಆಂಜನೇಯನು ಬಾಲ್ಯದಲ್ಲಿ ಸೂರ್ಯನನ್ನ ಕೆಂಪು ಹಣ್ಣು ಎಂದು ತಿನ್ನಲು ಹಾರಿ ಹೋಗಿದ್ದು ಇದೆ ಅಂಜನಾದ್ರಿ ಪರ್ವತದಿಂದ. ರಾವಣ ಸೀತೆಯನ್ನ ಅಪಹರಿಸಿದಾಗ, ಸೀತೆಯ ಸುಳಿವುಗಳನ್ನು ಹುಡುಕುತ್ತ ರಾಮ ಲಕ್ಷ್ಮಣರು ಆಗಮಿಸುವ ಸ್ಥಳ ಕಿಷ್ಕಿಂಧೆ. ಈ ಒಂದು ಸ್ಥಳದಲ್ಲಿಯೇ ರಾಮನಿಗೆ ಅವನ ಪರಮ ಭಕ್ತನಾದ ಆಂಜನೇಯನ ಭೇಟಿಯಾಗುತ್ತದೆ.

    ಈಗಲೂ ಆಂಜನೇಯನ ದರ್ಶನವಾಗುತ್ತೆ:
    ಕೆಲವು ಭಕ್ತರು ಹೇಳುವ ಪ್ರಕಾರ, ಈಗಲೂ ಅಂಜನಾದ್ರಿ ಬೆಟ್ಟದ ಮೇಲೆ ದೊಡ್ಡ ಕೋತಿಯೊಂದಿದೆ. ಅದು ಬೆಳಿಗ್ಗೆ ಮತ್ತು ಸಂಜೆ ದರ್ಶನ ನೀಡುತ್ತೆ. ಅಪರೂಪಕ್ಕೆ ಬಂದು ದರ್ಶನ ಕೊಡುತ್ತೆ. ಅದು ಸಾಕ್ಷಾತ್ ಆಂಜನೇಯನೇ ಅನ್ನೋದು ಭಕ್ತರ ನಂಬಿಕೆ.

    ಎಷ್ಟು ದೂರವಿದೆ?
    ಬೆಂಗಳೂರಿನಿಂದ 345 ಕಿ.ಮೀ ದೂರವಿದ್ದರೆ ಹಂಪಿಯಿಂದ 18 ಕಿ.ಮೀ., ಗಂಗಾವತಿಯಿಂದ 6 ಕಿಮೀ. ದೂರದಲ್ಲಿ ಅಂಜನಾದ್ರಿ ಪರ್ವತವಿದೆ. ಹಂಪಿಯಿಂದ ಅಂಜನಾದ್ರಿ ಬೆಟ್ಟ ಹತ್ತಿರದಲ್ಲೆ ಇರೋದ್ರಿಂದ 580 ಮೆಟ್ಟಿಲುಗಳನ್ನ ಏರಿ ಅಂಜನಾದ್ರಿ ಬೆಟ್ಟದ ಮೇಲೆ ತಲುಪಿದ ನಂತರ, ಮೆಟ್ಟಿಲು ಏರಿದ ಆಯಾಸವೆಲ್ಲ ಮಾಯವಾಗುತ್ತೆ. ಕಾರಣ, ಅಲ್ಲಿಂದ ಕಾಣುವ ತುಂಗಭದ್ರಾ ನದಿ ಹಾಗೂ ಹಂಪಿಯ ಕೆಲವು ದೇವಾಲಯಗಳು, ಪ್ರಕೃತಿಯ ಸೊಬಗು ಎಲ್ಲವನ್ನೂ ಮರೆಸುತ್ತೆ.

    ಅಷ್ಟೇ ಅಲ್ಲದೇ ಇಲ್ಲಿ ಹಲವು ಗುಹೆಗಳು ಇವೆ. ಬೆಟ್ಟದ ಮೇಲೆ ಮಾರುತಿಯ ದೊಡ್ಡ ಸೈನ್ಯ ಕೂಡ ಇದೆ. ಆದ್ರೆ, ಯಾರಿಗೂ ಏನೂ ಮಾಡಲ್ಲ. ಇನ್ನು ಬೆಟ್ಟದ ಮೇಲೆ ಒಂದೇ ಒಂದು ಮರವಿದೆ. ಬೆಟ್ಟದ ಮೇಲೆ ಸೂರ್ಯಾಸ್ತ ನೋಡಿದ್ರೆ ಮನಸ್ಸಿಗೆ ಏನೋ ಆನಂದ ಸಿಗುತ್ತೆ. ನೀವು ಆಂಜನೇಯನ ಭಕ್ತರಾಗಿದ್ದರೇ ಮೊದಲು ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಅಂಜನಾದೇವಿ, ಹಾಗೂ ಆಂಜನೇಯನ ದರ್ಶನ ಪಡೆಯಿರಿ. 

    – ಅರುಣ್ ಬಡಿಗೇರ್

  • ಅಂಜನಾದ್ರಿ ಬೆಟ್ಟಕ್ಕೆ ಶ್ರೀರಾಮ ಸರ್ಕ್ಯೂಟ್ ಅಧ್ಯಕ್ಷ ಭೇಟಿ

    ಅಂಜನಾದ್ರಿ ಬೆಟ್ಟಕ್ಕೆ ಶ್ರೀರಾಮ ಸರ್ಕ್ಯೂಟ್ ಅಧ್ಯಕ್ಷ ಭೇಟಿ

    ಕೊಪ್ಪಳ: ಐತಿಹಾಸಿಕ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಅಯೋದ್ಯೆಯ ಶ್ರೀರಾಮ ಸರ್ಕ್ಯೂಟ್ ಅಧ್ಯಕ್ಷರಾದ ಡಾ. ರಾಮ್ ಅತ್ತುರ್ ಅವರು ಭೇಟಿ ನೀಡಿದ್ದರು.

    ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದುಕೊಂಡು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ನಂತರ ಮಾತನಾಡಿ, ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಕಾಯಕಕ್ಕೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಶ್ರೀರಾಮನ ಭಕ್ತನಾಗಿರುವ ಹನುಮ ಹುಟ್ಟಿದ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದೆವು. ಅಂಜನಾದೇವಿಗೆ ಹಾಗೂ ಆಂಜನೇಯ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.

    ವಿಶ್ವಹಿಂದು ಪರಿಷತ್‍ನ ಅಂತರಾಷ್ಟ್ರೀಯ ಕಾರ್ಯದರ್ಶಿ ಅಲೋಕ್‍ಕುಮಾರ ಜೀ ಮಾತನಾಡಿ, ರಾಮ ಮಂದಿರ ನಿರ್ಮಾಣದಲ್ಲಿ ಯಾವುದೇ ರೀತಿಯ ವಿಳಂಭವಾಗುತ್ತಿಲ್ಲ. ಕೋರ್ಟ್ ಆದೇಶದಂತೆ ಟ್ರಸ್ಟ್ ರಚನೆಯನ್ನು ಮಾಡಿಕೊಂಡು ಮಂದಿರ ನಿರ್ಮಾಣ ಕಾರ್ಯ ಚುರುಕುಗೊಳಿಸಲಾಗುವುದು. ರಾಮ ದೇವರ ನಡೆದಾದಡಿದ ಎಲ್ಲಾ ಪ್ರದೇಶವನ್ನು ಅಭಿವೃದ್ಧಿ ಪಡೆಸಲಾಗುವುದು ಎಂದರು.

    ಪೌರತ್ವ ಕಾಯ್ದೆಯ ತಿದ್ದುಪಡಿಯ ಕುರಿತು ದೇಶದ ಜನರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸಿ, ದೇಶದಲ್ಲಿ ಗಲಭೆಗಳು ಮಾಡಿಸಲಾಗುತ್ತಿದೆ. ಭಾರತೀಯ ಪೌರತ್ವಕ್ಕೆ ಯಾವುದೇ ದಕ್ಕೆಯಾಗುತ್ತಿಲ್ಲ. ಬೇರೆ ರಾಷ್ಟ್ರಗಳಿಂದ ಭಾರತಕ್ಕೆ ಬಂದು ನೆಲೆಸಿರುವವರಿಗೆ ಈ ಕಾನೂನು ಅನ್ವಯವಾಗುತ್ತದೆ. ಭಾರತೀಯ ಮುಸ್ಲಿಂರು ಭಾರತೀಯ ಪೌರರು, ಅವರ ಪೌರತ್ವಕ್ಕೆ ಯಾವುದೇ ರೀತಿಯ ದಕ್ಕೆಯಾಗುವುದಿಲ್ಲ. ತಪ್ಪು ಮಾಹಿತಿಗಳಿಗೆ ಭಾರತೀಯ ಪ್ರಜೆಗಳು ಕಿವಿಕೊಡಬಾರದು ಎಂದು ಹೇಳಿದ್ದಾರೆ. ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡರಾದ ಸಂತೋಷ ಕೆಲೋಜಿ ಹಾಗೂ ಇತರರಿದ್ದರು.

  • ಹನುಮ ಮಾಲೆ ವಿಜೃಂಭಣೆಯಿಂದ ವಿಸರ್ಜನೆ

    ಹನುಮ ಮಾಲೆ ವಿಜೃಂಭಣೆಯಿಂದ ವಿಸರ್ಜನೆ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ನಡೆದ ಹನುಮ ಮಾಲಾಧಾರಿ ವಿಸರ್ಜನೆ ಹೊಸ ಆರಂಭಕ್ಕೆ ಮುನ್ನುಡಿ ಬರೆದಿದೆ.

    ಹನುಮ ಜಯಂತಿ ಹಿನ್ನೆಲೆಯಲ್ಲಿ ವ್ರತ ಮುಗಿಸಿದ ಸಾವಿರಾರು ಮಾಲಾಧಾರಿಗಳು ಆಂಜನಾದ್ರಿ ಪರ್ವತಕ್ಕೆ ಆಗಮಿಸಿ ಹನುಮ ಮಾಲೆ ವಿಸರ್ಜನೆ ಮಾಡಿದರು. ಇದಕ್ಕೂ ಮೊದಲು ಗಂಗಾವತಿ ನಗರದಲ್ಲಿ ಹನುಮ ಮಾಲಾಧಾರಿಗಳಿಂದ ಸಂಕೀರ್ಥ ಯಾತ್ರೆ ನಡೆಯಿತು. ಸಂಕೀರ್ಥ ಯಾತ್ರೆಗೆ ಮೆರಗು ಎನ್ನುವಂತೆ ಗಂಗಾವತಿ ನಗರದ ಸಿಬಿಎಸ್ ವೃತ್ತದಲ್ಲಿ ಮುಸ್ಲಿಂ ಸಮುದಯದವರು ಮಸೀದಿಯ ಮುಂದೆಯೇ ಹಣ್ಣು ವಿತರಿಸುವ ಮೂಲಕ ಭಕ್ತರನ್ನು ಸ್ವಾಗತಿಸಿಕೊಂಡರು. ಈ ಮೂಲಕ ಗಂಗಾವತಿ ಸೌಹರ್ದತೆಗೆ ಹೆಸರುವಾಸಿ ಎನ್ನುವುದನ್ನು ಸಾಬೀತು ಮಾಡಿದರು.

    ವಿಶ್ವ ಹಿಂದೂ ಪರಿಷತ್, ಭಜರಂಗದಳ ನೇತೃತ್ವದಲ್ಲಿ 7 ವರ್ಷಗಳಿಂದ ಇಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಎರಡು ವರ್ಷದ ಹಿಂದೆ ಗಂಗಾವತಿಯಲ್ಲಿ ಹನುಮಮಾಲಾಧಾರಿಗಳ ಶೋಭಾಯಾತ್ರೆ ವೇಳೆ ಗಲಭೆಯಾಗಿತ್ತು. ಇದರಿಂಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಕೀರ್ಥ ಯಾತ್ರೆಗೆ ಹಾಗೂ ಮೆರವಣಿಗೆಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿತ್ತು. ಆಂಜನಾದ್ರಿ ಬೆಟ್ಟದಲ್ಲಿ ಪವಮಾನ ಹೋಮ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

    ಇದೇ ವೆಳೆ 575 ಮೆಟ್ಟಿಲುಗಳನ್ನು ಹತ್ತಿ ಬಂದ ಭಕ್ತರು ಹನುಮನ ದರ್ಶನ ಪಡೆದು ಪುನೀತರಾದರು. ಸುಮಾರು 7 ವರ್ಷಗಳಿಂದ ಹನುಮಮಾಲಾಧಾರಿಗಳು ವ್ರತವನ್ನು ಆಚರಿಸುತ್ತಾ ಬಂದಿದ್ದು, ರಾಜ್ಯದ ರಾಯಚೂರು, ಬಳ್ಳಾರಿ, ಗದಗ, ಬೆಳಗಾವಿ, ಧಾರವಾಡ, ಕಾರವಾರ, ಕಲಬುರ್ಗಿ, ಯಾದಗಿರಿ ಸೇರಿದಂತೆ 16 ಜಿಲ್ಲೆಗಳಿಂದ 20 ಸಾವಿರ ಮಾಲಾಧಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

    ಹನುಮನ ಜನ್ಮ ಸ್ಥಳದಲ್ಲಿ ಹನುಮ ಮಾಲಾಧಾರಿಗಳು ಮಾಲೆಯನ್ನು ಶ್ರದ್ಧಾ -ಭಕ್ತಿಯಿಂದ ವಿಸರ್ಜನೆ ಮಾಡಿದರು. ಅಲ್ಲದೆ ಇನ್ಮುಂದೆ ಗಂಗಾವತಿಯಲ್ಲಿ ಗಲಭೆ ಆಗಲ್ಲ ಎನ್ನುವಂತೆ ಮುಸ್ಲಿಂ-ಹಿಂದೂ ಭಾಂದವರು ಈ ಬಾಂಧವ್ಯದ ಹಬ್ಬವನ್ನಾಗಿ ಆಚರಣೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

    https://www.facebook.com/publictv/videos/668581300336125/

  • ಹನುಮ ಜಯಂತಿಗೆ ಕ್ಷಣಗಣನೆ – ಸ್ವಾಗತಕ್ಕೆ ಸಿದ್ಧರಾದ ಮುಸ್ಲಿಂ ಬಾಂಧವರು

    ಹನುಮ ಜಯಂತಿಗೆ ಕ್ಷಣಗಣನೆ – ಸ್ವಾಗತಕ್ಕೆ ಸಿದ್ಧರಾದ ಮುಸ್ಲಿಂ ಬಾಂಧವರು

    ಕೊಪ್ಪಳ: ಹನುಮ ಜನಿಸಿದ ನಾಡಿನಲ್ಲಿ ಹನುಮ ಜಯಂತಿಗೆ ಕ್ಷಣಗಣನೆ ಆರಂಭವಾಗಿದೆ. ವಿವಾದಕ್ಕೆ ಕಾರಣವಾಗಿದ್ದ ಹನುಮ ಜಯಂತಿ ಕಳೆದ ವರ್ಷ ಹಿಂದೂ-ಮುಸ್ಲಿಂ ಒಂದುಗೂಡಿ ಆಚರಿಸುವ ಮೂಲಕ ಭಾವೈಕೈತೆ ಮೆರೆದಿದ್ದರು. ಇದೀಗ ಆ ಕ್ಷಣ ಮತ್ತೆ ಹತ್ತಿರ ಬಂದಿದೆ. ಈ ಬಾರಿ ಜಿಲ್ಲಾಡಳಿತ ಒಂದು ವಿಶೇಷ ಕಾಳಜಿಯನ್ನು ತೋರುತ್ತಿದೆ.

    ಹನುಮ ಜನಿಸಿದ ನಾಡು ಅಂದರೆ ಎಲ್ಲರಿಗೂ ನೆನಪಾಗುವುದೇ ಅಂಜನಾದ್ರಿಯ ಬೆಟ್ಟ. ಇದಕ್ಕೆ ಕಿಷ್ಕಿಂದ ಅಂತಾನೂ ಕರೆಯಲಾಗುತ್ತದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿಗೆ ಪ್ರತಿ ವರ್ಷ ಹನುಮ ಜಯಂತಿಯಂದು ಹನುಮ ಮಾಲಾಧಾರಿಗಳು ಇಲ್ಲಿಗೆ ಬರುತ್ತಾರೆ. ಬಂದು ಹನುಮ ಮಾಲೆ ವಿಸರ್ಜನೆ ಮಾಡುತ್ತಾರೆ. ಆದರೆ 2016ರಲ್ಲಿ ಕೆಲ ಕಿಡಿಗೇಡಿಗಳು ಹನುಮ ಜಯಂತಿ ವೇಳೆ ಕ್ಷುಲ್ಲಕ ಕಾರಣಕ್ಕೆ ಹಿಂದೂ-ಮುಸ್ಲಿಂ ನಡುವೆ ವಿವಾದ ಸೃಷ್ಟಿಸಿ ರಾದ್ದಾಂತ ಮಾಡಿದ್ದರು. ಆದಾದ ನಂತರ ಪೊಲಿಸ್ ಸರ್ಪಗಾವಲಿನಲ್ಲೇ ಹನುಮ ಜಯಂತಿ ನಡೆಯುತ್ತಿದೆ.

    ಕಳೆದ ವರ್ಷ ಇವೆಲ್ಲವನ್ನೂ ಮೀರಿ ಹಿಂದೂ-ಮುಸ್ಲಿಂ ಜನರು ಒಂದೂಗೂಡಿ ಹನುಮ ಮಾಲಾಧಾರಿಗಳಿಗೆ ಹೂ, ಹಣ್ಣು ನೀಡಿ ಸ್ವಾಗತ ಕೋರಿದ್ದರು. ಅಷ್ಟೇ ಅಲ್ಲದೆ ದಾರಿಯುದ್ದಕ್ಕೂ ಮಾಲೆ ಹಾಕಿದ ಪಾದಯಾತ್ರಿಗಳಿಗೆ ಮಜ್ಜಿಗೆಯನ್ನು ನೀಡಿ ಭಾವೈಕೈತೆ ಮೆರದಿದ್ದರು. ಅದರಂತೆಯೇ ಈ ಬಾರಿಯೂ ಡಿಸೆಂಬರ್ 9ರಂದು ನಡೆಯುವ ಹನುಮ ಜಯಂತಿಗೆ ಬರುವ ಮಾಲಾಧಾರಿಗಳಿಗೆ ಮುಸ್ಲಿಂ ಭಾಂಧವರು ಹೂ, ಹಣ್ಣು ನೀಡಿ ಸ್ವಾಗತ ಕೊರಲು ಸನ್ನದ್ದರಾಗಿದ್ದಾರೆ.

    ಈ ಬಾರಿ ಕೊಪ್ಪಳ ಜಿಲ್ಲಾಡಳಿತವೂ ಹನುಮ ಜಯಂತಿಗೆ ಒಂದು ವಿಶೇಷ ಕಾಳಜಿ ವಹಿಸಿದೆ. ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ಅಲ್ಲಿಯ ವ್ಯಾಪಾರಿಗಳಿಗೆ ಬಟ್ಟೆಯಿಂದ ತಯಾರಿಸಿದ ಬ್ಯಾಗ್ ಗಳನ್ನು ಮಾರಾಟ ಮಾಡಲು ಹೇಳಿದೆ. ಕಳೆದ ಬಾರಿ ಟ್ರಾಫಿಕ್ ನಿಂದ ಕೊಂಚ ತೊಂದರೆಯಾಗಿತ್ತು. ಈ ಬಾರಿ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಹನುಮ ಜಯಂತಿಗೆ ಪಕ್ಕದ ಗದಗ, ಬೆಳಗಾವಿ, ಬಳ್ಳಾರಿ, ರಾಯಚೂರು, ಬಿಜಾಪುರ, ಬಾಗಲಕೋಟೆ, ಕಲಬುರಗಿ, ಬೀದರ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಕೊಪ್ಪಳ ಜಿಲ್ಲಾಡಳಿತವೂ ಸಕಲ ಸನ್ನದ್ಧವಾಗಿದೆ. ಯಾವುದೇ ಅಹಿತಕರ ಘಟನೆ ನೆಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

    ಒಟ್ಟಾರೆ ಬಾರೀ ವಿವಾದಕ್ಕೀಡಾಗಿದ್ದ ಜಿಲ್ಲೆಯ ಹನುಮ ಜಯಂತಿ ಇದೀಗ ಭಾವೈಕೈತೆಗೆ ಸಾಕ್ಷಿಯಾಗ್ತಿರೋದು ಖುಷಿಯ ವಿಚಾರ. ಕೇವಲ ಹನುಮ ಜಯಂತಿ ಅಷ್ಟೇ ಅಲ್ಲದೆ ಗಂಗಾವತಿಯಲ್ಲಿ ಜರಗುವ ಎಲ್ಲಾ ಹಬ್ಬಗಳನ್ನು ಹಿಂದೂ-ಮುಸ್ಲಿಂ ಸಮುದಾಯದವರು ಒಗ್ಗೂಡಿ ಮಾಡ್ತಿರೋದು ಜಿಲ್ಲೆಯ ಜನರ ಸಂತೋಷಕ್ಕೆ ಕಾರಣವಾಗಿದೆ.