Tag: Anjali Murder Case

  • ಗಿರೀಶ್‌ನಿಂದ ದೂರವಾಗಿದ್ದಕ್ಕೆ ಹುಬ್ಬಳ್ಳಿ ಅಂಜಲಿ ಕೊಲೆ – ಚಾರ್ಜ್‌ಶೀಟ್‌ ಸಲ್ಲಿಸಿದ ಸಿಐಡಿ

    ಗಿರೀಶ್‌ನಿಂದ ದೂರವಾಗಿದ್ದಕ್ಕೆ ಹುಬ್ಬಳ್ಳಿ ಅಂಜಲಿ ಕೊಲೆ – ಚಾರ್ಜ್‌ಶೀಟ್‌ ಸಲ್ಲಿಸಿದ ಸಿಐಡಿ

    – ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕೊಲೆ ಪ್ರಕರಣ; 494 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

    ಹುಬ್ಬಳ್ಳಿ: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿ (CID) ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ.

    ಹುಬ್ಬಳ್ಳಿಯ (Hubballi) ಮೂರನೇ ಅಧಿಕ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ಕೋರ್ಟ್‌ಗೆ 494 ಪುಟಗಳ ದೋಷಾರೋಪ ಪಟ್ಟಿಯನ್ನು ಸಿಐಡಿ ಅಧಿಕಾರಿಗಳು ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ, ಗಿರೀಶ್‌ನಿಂದ ದೂರವಾಗಿದ್ದಕ್ಕೆ ಅಂಜಲಿ ಕೊಲೆ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ನಾಯಿಯಿಂದ ಕಚ್ಚಿಸಿಕೊಂಡು ಚಿಕಿತ್ಸೆ ಫಲಕಾರಿಯಾಗದೇ ಓರ್ವ ಮಹಿಳೆ ಸಾವು

    ಮೇ 15 ರಂದು ಅಂಜಲಿ ಅಂಬಿಗೇರ ಹತ್ಯೆಯಾಗಿತ್ತು. ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿರುವ ಅಂಜಲಿ ಮನೆಗೆ ನುಗ್ಗಿ ಗಿರೀಶ್ ಅಲಿಯಾಸ್ ವಿಶ್ವ ಕೊಲೆ ಮಾಡಿದ್ದ. ಸಿಸಿಟಿವಿ, ಪ್ರತ್ಯಕ್ಷ ಸಾಕ್ಷಿ, ಹಂತಕನ ತಾಯಿ, ಗಿರೀಶ್ ಕೆಲಸ ಮಾಡ್ತಿದ್ದ ಹೋಟೆಲ್‌ ಸಿಬ್ಬಂದಿ ಸೇರಿ 85 ಸಾಕ್ಷಿಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

    ಗಿರೀಶ್‌ನಿಂದ ಅಂಜಲಿ ದೂರವಾಗಿದ್ದಕ್ಕೆ ಕೊಲೆಯಾಗಿದೆ. ಆರೋಪಿ ಗಿರೀಶ್ ಮೈಸೂರಿನ ಮಹಾರಾಜ ಹೋಟೆಲ್‌ ಆವರಣದ ಎಂಎಸ್ಸಿ ಪಬ್‌ ಆ್ಯಂಡ್ ಬಾರ್‌ನಲ್ಲಿ ಕೆಲಸ ಮಾಡ್ತಿದ್ದ. ಕೆಲಸ ಮಾಡುವ ಸಮಯದಲ್ಲಿ 3-4 ಬಾರಿ ಗಿರೀಶ್ ಭೇಟಿಗೆ ಅಂಜಲಿ ತೆರಳಿದ್ದಳು. 2024 ರ ಎಪ್ರಿಲ್‌ನಲ್ಲಿ ಇಬ್ಬರ ನಡುವೆ ಮನಸ್ತಾಪವಾಗಿತ್ತು. ಅಂಜಲಿ ಈ ವೇಳೆ ಗಿರೀಶ್ ಕರೆ ಸ್ವೀಕರಿಸಿಲ್ಲ. ಇದಲ್ಲದೆ ಅಂಜಲಿ, ಗಿರೀಶ್ ನಂಬರ್ ಬ್ಲಾಕ್ ಮಾಡಿದ್ದಳು. ಹೀಗಾಗಿ ಅಂಜಲಿ ಮನೆಗೆ ಬಂದು ಕೊಲೆ ಮಾಡಿದ್ದಾನೆಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಕೃತ್ಯ, ಇದೊಂದು ಪೂರ್ವಯೋಜಿತ ಪ್ಲ್ಯಾನ್- ಸುನೀಲ್ ಕುಮಾರ್

    ಮೈಸೂರಿನಿಂದಲೇ ಚಾಕು ತಂದಿದ್ದ ಗಿರೀಶ್. ಮೈಸೂರಿನ ಬಸ್ ನಿಲ್ದಾಣದ ಪಕ್ಕ ಗುರುತು ಸಿಗಬಾರದು ಅನ್ನೋ ಕಾರಣಕ್ಕೆ ಮಾಸ್ಕ್ ಖರೀದಿ ಮಾಡಿದ್ದ. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಕೊನೆಗೆ ಮೇ 17 ರಂದು ರೈಲ್ವೆ ಪೊಲೀಸರ ಕೈಗೆ ಸಿಕ್ಕಿ ಬಿದ್ದದ್ದ.

    ಮೈಸೂರಿನಿಂದ ಬೆಳಗಾವಿಗೆ ವಿಶ್ವಮಾನವ ರೈಲಿನಲ್ಲಿ ಪ್ರಯಾಣ ಮಾಡುವಾಗ ಸಿಕ್ಕಿಬಿದ್ದದ್ದ. ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಜೊತೆ ಕಿರಿಕ್ ಮಾಡಿಕೊಂಡಿದ್ದ. ದಾವಣಗೆರೆ ಬಳಿ ರೈಲಿನಿಂದ ಬಿದ್ದು ಗಾಯ ಮಾಡಿಕೊಂಡಿದ್ದ. ಅಂಜಲಿ ಕೊಲೆ ಪ್ರಕರಣದ ಹಿನ್ನೆಲೆ ನಾಲ್ಕು ಜನ ಪೊಲೀಸ್ ಅಧಿಕಾರಿಗಳ ತಲೆದಂಡವೂ ಆಗಿತ್ತು. ಇದೀಗ ಕೊಲೆ ನಡೆದ 98 ದಿನಗಳ ಬಳಿಕ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ.

  • ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ – ಮನನೊಂದು ಸಹೋದರಿ ಆತ್ಮಹತ್ಯೆಗೆ ಯತ್ನ

    ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ – ಮನನೊಂದು ಸಹೋದರಿ ಆತ್ಮಹತ್ಯೆಗೆ ಯತ್ನ

    ಹುಬ್ಬಳ್ಳಿ: ನಗರದ ವೀರಾಪುರ ಓಣಿಯಲ್ಲಿ ಇತ್ತೀಚೆಗೆ ನಡೆದಿದ್ದ ಅಂಜಲಿ ಅಂಬಿಗೇರ ಹತ್ಯೆಯಿಂದ (Anjali Murder Case) ಬೇಸತ್ತ ಆಕೆಯ ಸಹೋದರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಶನಿವಾರ (ಮೇ 18) ಅಂಜಲಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಂಜಲಿ ಸಹೋದರಿ ಯಶೋಧಾ ಅವರು, ಮನೆಗೆ ಮರಳಿದ ಬಳಿಕ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಪ್ರತಿಭಟನೆ ವೇಳೆ ಸಹ ಯುವತಿ ತೀವ್ರ ಅಸ್ವಸ್ಥಗೊಂಡಿದ್ದು, ಪ್ರಜ್ಞೆ ತಪ್ಪಿದ್ದರು ಎಂದು ತಿಳಿದುಬಂದಿದೆ.

    ಏನಿದು ಪ್ರಕರಣ:
    ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ (21) ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಗಿರೀಶ್ ಅಲಿಯಾಸ್ ವಿಶ್ವ (Vishwa) ಏಕಾಏಕಿ ಮನೆಗೆ ನುಗ್ಗಿದ್ದ. ಬಳಿಕ ಆಕೆಯ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆಗೈದಿದ್ದ. ಇದನ್ನೂ ಓದಿ: ಅಂಜಲಿ ಬಳಿಕ ರೈಲಿನಲ್ಲಿ ಮಹಿಳೆಗೆ ಚಾಕು ಹಾಕಲು ಯತ್ನಿಸಿ ಸಿಕ್ಕಿಬಿದ್ದ ಕಿರಾತಕ ವಿಶ್ವ

    ಮೊದಲಿಗೆ ಮನೆಯ ಪಡಸಾಲೆಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕುವಿನಿಂದ ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಆರೋಪಿ ಹೊರ ನಡೆದಿದ್ದ.

    ಅಂಜಲಿ ಹತ್ಯೆ ಮಾಡಿದ ಬಳಿಕ ವಿಶ್ವ ಪರಾರಿಯಾಗಿ ದಾವಣಗೆರೆ  (Davanagere) ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ. ಈ ವೇಳೆ ರೈಲಿನಲ್ಲಿ ಮಹಿಳೆ ಜೊತೆ ಗಲಾಟೆ ಮಾಡಿ ಸಿಟ್ಟಾಗಿ ಚಾಕು ಹಾಕಲು ಮುಂದಾಗಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಪ್ರಯಾಣಿಕರು ಆತನಿಗೆ ರೈಲಿನಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದರು. ಜನರಿಂದ ತಪ್ಪಿಸಿಕೊಳ್ಳಲು ವಿಶ್ವ ರೈಲಿನಿಂದ ಜಿಗಿದಿದ್ದ. ಹಳಿಯಲ್ಲಿ ಬಿದ್ದು ಗಾಯಗೊಂಡಿದ್ದ ಈತನನ್ನು ದಾವಣಗೆರೆ ರೈಲ್ವೇ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ವೇಳೆ ವಿಶ್ವನ ವಿಳಾಸ ಇತ್ಯಾದಿ ಮಾಹಿತಿಗಳನ್ನು ಪರಿಶೀಲಿಸಿದಾಗ ಈತನೇ ಅಂಜಲಿಯನ್ನು ಕೊಲೆ ಮಾಡಿದ ಆರೋಪಿ ಎನ್ನುವುದು ಪೊಲೀಸರಿಗೆ ದೃಢಪಟ್ಟಿತ್ತು. ಇದನ್ನೂ ಓದಿ: ಅಂಜಲಿ ಹತ್ಯೆಗೈದಿದ್ದ ಆರೋಪಿ ಅರೆಸ್ಟ್ – ಬಗೆದಷ್ಟು ಬಯಲಾಗ್ತಿದೆ ವಿಶ್ವನ ದುಷ್ಕೃತ್ಯ

  • ಮಗನ ತಪ್ಪಿನಿಂದಾಗಿ ಬಾಡಿಗೆ ಮನೆಯಿಂದ ನಮ್ಮನ್ನು ಹೊರಹಾಕಿದ್ರು: ಅಂಜಲಿ ಕೊಲೆ ಆರೋಪಿ ತಾಯಿ ಕಣ್ಣೀರು

    ಮಗನ ತಪ್ಪಿನಿಂದಾಗಿ ಬಾಡಿಗೆ ಮನೆಯಿಂದ ನಮ್ಮನ್ನು ಹೊರಹಾಕಿದ್ರು: ಅಂಜಲಿ ಕೊಲೆ ಆರೋಪಿ ತಾಯಿ ಕಣ್ಣೀರು

    – ವಿಶ್ವ ತಪ್ಪು ಮಾಡಿದ್ದಾನೆ, ಅವರಿಗೆ ಶಿಕ್ಷೆ ಆಗಬೇಕು
    – ಅವನನ್ನು ನೋಡಲು ಆಸ್ಪತ್ರೆಗೂ ನಾನು ಹೋಗಲ್ಲ

    ಹುಬ್ಬಳ್ಳಿ: ವಿಶ್ವ ತಪ್ಪು ಮಾಡಿದ್ದಾನೆ. ಅವನಿಗೆ ಶಿಕ್ಷೆ ಆಗಲೇಬೇಕು. ಅವನಿಂದ ನಮ್ಮ ಮಾನ-ಮರ್ಯಾದೆ ಎಲ್ಲಾ ಹೋಗಿದೆ ಎಂದು ಅಂಜಲಿ ಹತ್ಯೆ (Anjali Murder Case) ಪ್ರಕರಣದ ಆರೋಪಿ ವಿಶ್ವನ ತಾಯಿ ಶ್ವೇತ ಕಣ್ಣೀರು ಹಾಕಿದರು.

    ಹುಬ್ಬಳ್ಳಿಯಲ್ಲಿ (Hubballi) ವೀರಾಪುರ ಓಣಿಯ ಅಂಜಲಿ ಅಂಬಿಗೇರ ಎಂಬಾಕೆ ಹತ್ಯೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ವಿಶ್ವ ಅಲಿಯಾಸ್ ಗಿರೀಶ್‌ಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಪುತ್ರನ ಕೃತ್ಯಕ್ಕೆ ಆರೋಪಿ ತಾಯಿ ಬೇಸರಗೊಂಡು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ

    ಪ್ರಕರಣ ಕುರಿತು ಮಾತನಾಡಿದ ಆರೋಪಿ ತಾಯಿ ಶ್ವೇತಾ, ನನ್ನ ಮಗ ಮೊದಲು ಕೆಲಸ ಮಾಡುತ್ತಿದ್ದ. ಈ ನಡುವೆ ಕೆಲಸ ಬಿಟ್ಟ. ಆ ನಂತರ ಮನೆಯಲ್ಲಿದ್ದು, ಮದ್ಯವ್ಯಸನ ಚಟಕ್ಕೆ ಬಲಿಯಾದ. ಆ ನಂತರ 6 ತಿಂಗಳು ಮನೆ ಬಿಟ್ಟು ಹೋಗಿದ್ದ ಎಂದು ಮಗನ ನಡವಳಿಕೆ ಬಗ್ಗೆ ಮಾತನಾಡಿದರು.

    ಅವನು ಆರಾಮಾಗಿ ಇದ್ದಾನೆಂದು ತಿಳಿದುಕೊಂಡಿದ್ದೆವು. ಅದರೆ ಇದೀಗ ಕೊಲೆ ಮಾಡಿರುವುದು ಗೊತ್ತಾಗಿದೆ. ಅವನು ತಪ್ಪು ಮಾಡಿದ್ದಾನೆ. ಅವನಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿ. ಅದರೆ ಮಗ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ನೀಡಲಾಗುತ್ತಿದೆ ಎಂದು ಬೇಸರಿಸಿದರು. ಇದನ್ನೂ ಓದಿ: ವಿಶ್ವನಿಗೂ ನಮ್ಮ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ: ಅಂಜಲಿ ಸಹೋದರಿ ಸ್ಪಷ್ಟನೆ

    ಅವನಿಂದಾಗಿ ಬಾಡಿಗೆ ಮನೆಯಿಂದ ಹೊರಗೆ ಹಾಕಿದ್ದಾರೆ. ನಾನು ಹೋಟೆಲಿನ ಅಡುಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಅವನಿಂದ ನಮ್ಮ ಮಾನ-ಮರ್ಯಾದೆ ಎಲ್ಲಾ ಹೋಗಿದೆ. ಅವನನ್ನು ನೋಡಲು ಕಿಮ್ಸ್ ಆಸ್ಪತ್ರೆಗೂ ನಾನು ಹೋಗುವುದಿಲ್ಲ ಎಂದು ನೊಂದು ನುಡಿದರು.

  • ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ

    ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ

    – ಮೊಬೈಲ್ ಬಳಸುತ್ತಿರಲಿಲ್ಲ, ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ
    – ಅಂಜಲಿ-ವಿಶ್ವ ಪ್ರೀತಿಸುತ್ತಿದ್ದರಂತೆ – ಪೊಲೀಸ್ ಆಯುಕ್ತರ ಸ್ಫೋಟಕ ಹೇಳಿಕೆ

    ಹುಬ್ಬಳ್ಳಿ: ನೇಹಾ ಹತ್ಯೆ ಮಾದರಿಯಲ್ಲಿ ನಡೆದಿದ್ದ ಅಂಜಲಿ ಕೊಲೆ ಪ್ರಕರಣದ (Anjali Murder Case) ಆರೋಪಿ ವಿಶ್ವನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಆರೋಪಿ ವಿಶ್ವ ಗಂಭೀರ ಗಾಯಗೊಂಡಿರುವ ಹಿನ್ನೆಲೆ ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಪ್ರಕರಣದ ಕುರಿತು ಮಾತನಾಡಿರುವ ಹು-ಧಾ ಪೋಲಿಸ್ ಆಯುಕ್ತರಾದ ರೇಣುಕಾ ಸುಕುಮಾರ (Renuka Sukumar), ಆರೋಪಿ ವಿಶ್ವನನ್ನ ಪತ್ತೆಹಚ್ಚುವುದಕ್ಕಾಗಿ 8 ತಂಡಗಳನ್ನು ರಚನೆ ಮಾಡಿದ್ದೆವು. ಗುರುವಾರ ರೈಲ್ವೆ ಪೊಲೀಸರ ಸಹಾಯದಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆರೋಪಿ ಸೆರೆ ಹಿಡಿಯುವ ವೇಳೆ ಟ್ರೈನ್‌ನಿಂದ ಬಿದ್ದು ಮುಖ ಮತ್ತು ತಲೆಯ ಭಾಗಕ್ಕೆ ಭಾರೀ ಪೆಟ್ಟಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದಾರೆ.

    ಹೇಗಿತ್ತು ಪೊಲೀಸರ ತನಿಖೆ?
    ವಿಶ್ವ ಕೊಲೆ ಮಾಡಿದ ಬಳಿಕ ಹುಬ್ಬಳ್ಳಿಯಿಂದ ದಾವಣೆಗೆರೆ ಬಸ್ ಹತ್ತಿದ್ದಾನೆ. ಮಾರ್ಗಮಧ್ಯೆ ಬಸ್ ಇಳಿದು, ಹಾವೇರಿಗೆ ಹೋಗಿದ್ದಾನೆ. ಅಲ್ಲಿಂದ ಪುನಃ ಮೈಸೂರು ಬಸ್ ಹತ್ತಿದ್ದ, ಅಲ್ಲಿಂದಲೂ ಇಳಿದು, ವಿಶ್ವಮಾನವ ಟ್ರೈನ್‌ನಲ್ಲಿ (VishwaManava Train) ಮೈಸೂರಿನ ಕಡೆಗೆ ಹೊರಟಿದ್ದ. ಅಲ್ಲಿಂದ ಗೋವಾ, ಮಹಾರಾಷ್ಟ್ರಕ್ಕೆ ಹೋಗಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ ಅನ್ನೋ ಮಾಹಿತಿಯಿದೆ. ಆರೋಪಿ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣ ಬಳಸುತ್ತಿರಲಿಲ್ಲ. ತಂದೆ-ತಾಯಿ ಸ್ನೇಹಿತರೊಟ್ಟಿಗೂ ಸಂಪರ್ಕದಲ್ಲಿ ಇರಲಿಲ್ಲ. ಎಲ್ಲಿ ಕೆಲಸಕ್ಕೆ ಹೋಗುತ್ತಿದ್ದನೋ ಅಲ್ಲಿಯೇ ಉಳಿದುಕೊಳ್ಳುತ್ತಿದ್ದ. ಆದ್ದರಿಂದ ಹುಡುಕಾಟ ಸವಾಲಾಗಿತ್ತು. 8 ತಂಡಗಳನ್ನು ರಚಿಸಿ, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿತ್ತು. ಬಳಿಕ ರೈಲ್ವೆ ಪೊಲೀಸರ ಸಹಾಯದಿಂದ ಸೆರೆ ಹಿಡಿಯಲಾಯಿತು. ಬೆಳಗ್ಗೆ 4:30ರ ವೇಳೆಗೆ ಆರೋಪಿಯನ್ನು ನಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

    ಸದ್ಯ ಆರೋಪಿಗೆ ತಲೆ ಮತ್ತು ಮುಖದ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ವೈದ್ಯರು ಉನ್ನತ ಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಸಂಪೂರ್ಣ ಚಿಕಿತ್ಸೆ ಮುಗಿಸಿದ ನಂತರ ವಿಚಾರಣೆಗೆ ಪಡೆಯುತ್ತೇವೆ. ವಿಶ್ವನ ಮೇಲೆ ಬೈಕ್ ಕಳ್ಳತನದ ವಿಚಾರದಲ್ಲಿ 4 ಪ್ರಕರಣಗಳು ದಾಖಲಾಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ, ಅವರಿಬ್ಬರು ಪ್ರೀತಿಸುತ್ತಿದ್ದರಂತೆ. ಇತ್ತೀಚೆಗೆ ಹುಡಗನ ಫೋನ್ ಕರೆಗಳನ್ನು ಅಂಜಲಿ ಬ್ಲಾಕ್ ಮಾಡಿದ್ದಳು ಅಂತಾ ಹೇಳಿದ್ದಾನೆ. ಅವನಿಗೆ ಪ್ರಜ್ಞೆ ಬಂದ ನಂತರ ಮುಂದಿನ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಯಾವುದೇ ಸಮಸ್ಯೆಯಿದ್ದರೂ ತಿಳಿಸಿ:
    ಇದೇ ವೇಳೆ ಪೊಲೀಸ್ ಆಯುಕ್ತರು, ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳಿದ್ದರೂ ಸಹಾಯವಾಣಿ ದೂ.ಸಂ. 112ಗೆ ಕರೆ ಮಾಡಿ. ಕರೆ ಮಾಡಿದ 20 ನಿಮಿಷಗಳಲ್ಲೇ ನಮ್ಮ ಪೊಲೀಸರು ಅಲ್ಲಿಗೆ ಬರಲಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದು ಅಭಯ ನೀಡಿದ್ದಾರೆ.

  • ಅಂಜಲಿ ಹತ್ಯೆಗೈದಿದ್ದ ಆರೋಪಿ ಅರೆಸ್ಟ್ – ಬಗೆದಷ್ಟು ಬಯಲಾಗ್ತಿದೆ ವಿಶ್ವನ ದುಷ್ಕೃತ್ಯ

    ಅಂಜಲಿ ಹತ್ಯೆಗೈದಿದ್ದ ಆರೋಪಿ ಅರೆಸ್ಟ್ – ಬಗೆದಷ್ಟು ಬಯಲಾಗ್ತಿದೆ ವಿಶ್ವನ ದುಷ್ಕೃತ್ಯ

    ಹುಬ್ಬಳ್ಳಿ: ನೇಹಾ ಹತ್ಯೆ ಮಾದರಿಯಲ್ಲಿ ನಡೆದಿದ್ದ ಅಂಜಲಿ ಕೊಲೆ ಪ್ರಕರಣದ (Anjali Murder Case) ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿ ವಿಶ್ವನ ಬಗ್ಗೆ ಬಗೆದಷ್ಟು ಆತನ ಕೃತ್ಯಗಳು ಬಯಲಾಗುತ್ತಿವೆ. ಈತನ ವೃತ್ತಿಯೇ ಕಳ್ಳತನ, ಪವೃತ್ತಿಯಲ್ಲಿ ಅಮಾಯಕ ಹೆಣ್ಣುಮಕ್ಕಳನ್ನು ಮೋಸ ಮಾಡುತ್ತಿದ್ದ. ಇಷ್ಟೇ ಅಲ್ಲದೇ ಮದ್ಯ ವ್ಯಸನಕ್ಕೆ ಬಲಿಯಾಗಿದ್ದ ಈತ ಹಲವು ಬಾರಿ ಕಳ್ಳತನ ಮಾಡಿ ಸಿಕ್ಕಿಕೊಂಡಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಆಟೋದಲ್ಲಿ ಬಂದು ಅಂಜಲಿ ಕೊಲೆಗೈದು ಹಂತಕ ಎಸ್ಕೇಪ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಗಂಡನನ್ನು ಕಳೆದು ಕೊಂಡಿರುವ ಆರೋಪಿಯ ತಾಯಿ ಸವಿತಾ, ಆತನ ಅಪರಾಧಗಳನ್ನು ನೋಡಲಾಗದೇ ದೂರದಲ್ಲಿದ್ದು ಹೊಟ್ಟೆಪಾಡಿಗೆ ಹೋಟೆಲ್‍ನಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಇದೀಗ ಮಗನ ದುಷ್ಕೃತ್ಯಕ್ಕೆ ವಿಶ್ವನ ಮನೆಗೆ ಬೀಗ ಹಾಕಲಾಗಿದೆ. ಮತ್ತೊಂದು ಕಡೆ ಅವರನ್ನು ಮನೆ ಖಾಲಿ ಮಾಡುವಂತೆ ಮನೆಯ ಮಾಲೀಕರು ಒತ್ತಡ ಹಾಕುತ್ತಿದ್ದಾರೆ.

    ಆರೋಪಿ ವಿಶ್ವ ಯಾವಾಗಲಾದರೂ ಒಮ್ಮೆ ತಾಯಿಯನ್ನು ನೋಡಲು ಮನೆಗೆ ಬರುತ್ತಿದ್ದ. ಆಗೆಲ್ಲ ಆತನ ಬಗ್ಗೆ ವಿವಿಧ ಆರೋಪಗಳನ್ನು ಮಾಡುತ್ತಿದ್ದ ಜನ, ಆತನ ತಾಯಿಯ ಮುಖ ನೋಡಿ ಸುಮ್ಮನಾಗುತ್ತಿದ್ದರು. ಇದೀಗ ಆರೋಪಿಯ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿದ್ದು, ನೇಹಾ ಪ್ರಕರಣದಲ್ಲಿ ಆರೋಪಿಯನ್ನು ಎನ್‍ಕೌಂಟರ್ ಮಾಡಿದ್ರೆ, ಅಂಜಲಿ ಹತ್ಯೆ ನಡೆಯುತ್ತಿರಲಿಲ್ಲ. ಈಗ ವಿಶ್ವನನ್ನು ಎನ್‍ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಸಹೋದರಿಯರ ಮುಂದೆಯೇ ಯುವತಿಯ ಭೀಕರ ಹತ್ಯೆ – ಸಹಪಾಠಿಯಿಂದಲೇ ಕೃತ್ಯ

  • ಅಂಜಲಿ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ತಲೆದಂಡ – ಪೊಲೀಸ್ ಇನ್ಸ್‌ಪೆಕ್ಟರ್‌, ಮುಖ್ಯ ಪೇದೆ ಅಮಾನತು!

    ಅಂಜಲಿ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ತಲೆದಂಡ – ಪೊಲೀಸ್ ಇನ್ಸ್‌ಪೆಕ್ಟರ್‌, ಮುಖ್ಯ ಪೇದೆ ಅಮಾನತು!

    – ಆರೋಪಿಯಿಂದ ಜೀವ ಬೆದರಿಕೆ ಬಗ್ಗೆ ಮೊದಲೇ ದೂರು ನೀಡಿದ್ದ ಕುಟುಂಬ

    ಹುಬ್ಬಳ್ಳಿ: ಇಲ್ಲಿನ ವೀರಾಪುರ ಓಣಿಯ ಅಂಜಲಿ ಯುವತಿಯ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ತಲೆದಂಡವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಪೊಲೀಸ್ ಇನ್ಸ್‌ಪೆಕ್ಟರ್‌ ಚಂದ್ರಶೇಖರ ಚಿಕ್ಕೋಡಿ ಹಾಗೂ ಠಾಣೆಯ ಮುಖ್ಯಪೇದೆ ರೇಖಾ ಅವರನ್ನ ಅಮಾನತುಗೊಳಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್‌ ಅವರು ಆದೇಶ ಹೊರಡಿಸಿದ್ದಾರೆ.

    ಮೃತ ಯುವತಿ ಅಂಜಲಿ ಹತ್ಯೆಗೂ ಮುನ್ನ ಆರೋಪಿ ವಿಶ್ವನಿಂದ ಜೀವ ಬೆದರಿಕೆ ಇರುವುದಾಗಿ ಅಂಜಲಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಆದ್ರೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರಿಂದ ಹತ್ಯೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ ಅಂಜಲಿ ಕುಟುಂಬಸ್ಥರು ಠಾಣೆಗೆ ಬಂದು ಹೋಗಿರುವುದಕ್ಕೆ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳೂ ಇವೆ. ಹಾಗಾಗಿ ಇಬ್ಬರು ಅಧಿಕಾರಿಗಳನ್ನ ಸಮಾನತು ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದುಬೈನಲ್ಲಿ ಪ್ರವಾಸಿಗ ಕಳೆದುಕೊಂಡಿದ್ದ ವಾಚ್‌ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಭಾರತೀಯ ಹುಡುಗನಿಗೆ ಪ್ರಶಂಸೆ

    ಏನಿದು ಹತ್ಯೆ ಕೇಸ್?
    ನೇಹಾ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ ನಡೆದಿದೆ. ವೀರಾಪುರ ಓಣಿಯ 21 ವರ್ಷ ಅಂಜಲಿ ಎಂಬ ಯುವತಿ ಅಂಜಲಿ ಎಂಬಾಕೆಯನ್ನು ವಿಶ್ವ ಅಲಿಯಾಸ್ ಗಿರೀಶ್ ಎಂಬ ಯುವಕ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಬೆಳಗಿನ ಜಾವ ಅಂಜಲಿ ಬಾಗಿಲು ತೆಗೆಯುತ್ತಿದ್ದಂತೆಯೇ 4 ಬಾರಿ ಚಾಕು ಇರಿದು ಎಸ್ಕೇಪ್ ಆಗಿದ್ದಾನೆ. ರಕ್ತದ ಮಡುವಿನಲ್ಲಿ ಅಂಜಲಿ ನೋಡಿ ಪೋಷಕರು ಕಣ್ಣೀರು ಹಾಕಿದ್ದರು. ಬಳಿಕ ಮೃತ ಅಂಜಲಿ ಕುಟುಂಬಕ್ಕೆ 25 ಲಕ್ಷ ಪರಿಹಾರ, ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಟೆಂಗಿನಕಾಯಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ನೇಹಾ ತಂದೆ ನಿರಂಜನ ಹಿರೇಮಠ 1 ಲಕ್ಷ ರೂ. ಧನ ಸಹಾಯ ಮಾಡಿ, ಸಾಂತ್ವನ ಹೇಳಿದ್ದಾರೆ.

    ಪ್ರಕರಣ ವರದಿ ಕೇಳಿದ ಮಹಿಳಾ ಆಯೋಗ:
    ಪ್ರಕರಣದ ಕುರಿತು ಕಮಿಷನರ್ ರೇಣುಕಾ ಮಾತಾಡಿ, ಅಂಜಲಿ ಪ್ರೀತಿ ನಿರಾಕರಿಸಿದ್ದಕ್ಕೆ ವಿಶ್ವ ಕೊಲೆ ಮಾಡಿರುವ ಶಂಕೆ ಇದೆ. 2 ವಿಶೇಷ ತಂಡ ರಚನೆ ಮಾಡಲಾಗಿದೆ. ಶಾಲಾ, ಕಾಲೇಜು, ಕಾರ್ಯಸ್ಥಳಗಳಲ್ಲಿ, ಮಹಿಳೆಯರು ಹೆಚ್ಚಾಗಿ ಸೇರುವ ಸ್ಥಳದಲ್ಲಿ ಪೊಲೀಸರು ಜಾಗೃತಿ ಮೂಡಿಸ್ತೇವೆ ಅಂದಿದ್ದಾರೆ. ಈ ಮಧ್ಯೆ, ಕೊಲೆಗಾರನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಪತ್ರ ಬರೆದು ಒತ್ತಾಯಿಸಿದೆ, ಜೊತೆಗೆ ಪ್ರಕಣದ ಕುರಿತು ವರದಿ ನೀಡುವಂತೆ ಪತ್ರದ ಮೂಲಕ ಕೇಳಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌: ಜಾರ್ಖಂಡ್‌ನ ಕಾಂಗ್ರೆಸ್‌ ಸಚಿವ ಅಲಂಗೀರ್ ಆಲಂ ಬಂಧನ!