Tag: anitha kumaraswamy

  • ನಿಖಿಲ್ ಮದ್ವೆಗಾಗಿ ಜನರಿಗೆ ಯಾವುದೇ ಗಿಫ್ಟ್ ನೀಡ್ತಿಲ್ಲ, ಅದೆಲ್ಲವೂ ಸುಳ್ಳು: ಅನಿತಾ ಕುಮಾರಸ್ವಾಮಿ

    ನಿಖಿಲ್ ಮದ್ವೆಗಾಗಿ ಜನರಿಗೆ ಯಾವುದೇ ಗಿಫ್ಟ್ ನೀಡ್ತಿಲ್ಲ, ಅದೆಲ್ಲವೂ ಸುಳ್ಳು: ಅನಿತಾ ಕುಮಾರಸ್ವಾಮಿ

    ರಾಮನಗರ: ಪುತ್ರ ನಿಖಿಲ್ ಮತ್ತು ರೇವತಿ ಮದುವೆಗೆ ನಾವು ರಾಮನಗರ, ಚನ್ನಪಟ್ಟಣ ಕ್ಷೇತ್ರದ ಕುಟುಂಬಗಳಿಗೆ ಯಾವುದೇ ಉಡುಗೊರೆಯನ್ನು ನೀಡುತ್ತಿಲ್ಲ. ಇದೆಲ್ಲಾ ಸುಳ್ಳು ಸುದ್ದಿ, ಬೆಂಗಳೂರಿನ ಬದಲು ರಾಮನಗರ ಜಿಲ್ಲೆಯಲ್ಲೇ ಸರಳವಾಗಿ ಮದುವೆ ಮಾಡುತ್ತಿದ್ದೇವೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

    ರಾಮನಗರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅನಿತಾ ಕುಮಾರಸ್ವಾಮಿ ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ಅವರು, ನಿಖಿಲ್ ಮದುವೆಗೆ ಕ್ಷೇತ್ರದ ಮತದಾರರಿಗೆ ರೇಷ್ಮೆ ಸೀರೆ, ಪಂಚೆ ನೀಡುತ್ತಿದ್ದೇವೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಇದೆಲ್ಲಾ ಸತ್ಯಕ್ಕೆ ದೂರವಾಗಿದೆ. ಈ ರೀತಿ ಯಾರು ಹಬ್ಬಿಸುತ್ತಿದ್ದಾರೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ನಿಖಿಲ್ ನಿಶ್ಚಿತಾರ್ಥಕ್ಕೆ ತಂದಿದ್ದ ಹಾರದ ಕಥೆ ಹೇಳಿದ ಎಚ್.ವಿಶ್ವನಾಥ್

    ಆಹ್ವಾನ ಪತ್ರಿಕೆಯನ್ನು ಸರಳವಾಗಿ ಪ್ರಿಂಟ್ ಮಾಡಿಸಿದ್ದೇವೆ. ಅದಕ್ಕೇನೂ ಸಾವಿರಾರು ರೂಪಾಯಿ ಖರ್ಚು ಮಾಡಿಲ್ಲ. ಇಲ್ಲಿಯೇ ಮದುವೆ ಮಾಡಬೇಕು ಎಂಬ ಇಚ್ಛೆ ನನಗೂ, ಕುಮಾರಸ್ವಾಮಿಗೂ ಇತ್ತು. ಈ ಹಿನ್ನೆಲೆಯಲ್ಲಿ ಅಧಿಕ ಜನರು ಸೇರುತ್ತಾರೆ ಎಂದು ಅದಕ್ಕಾಗಿ ವಿಶಾಲವಾದ ಸ್ಥಳಬೇಕು ಎಂಬ ದೃಷ್ಟಿಯಿಂದ ಇಲ್ಲಿ ಮದುವೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಇದೇ ವೇಳೆ ರಾಜ್ಯ ಬಜೆಟ್ ಅನ್ನು ಟೀಕಿಸಿದ ಅವರು, ರೈತರ ಸಾಲಮನ್ನಾ ಯೋಜನೆ ಕೈ ಬಿಟ್ಟಿದ್ದಕ್ಕೆ ಬೇಸರವಾಗಿದೆ. ಸಿಎಂ ಯಡಿಯೂರಪ್ಪ ತಮ್ಮದು ರೈತ ಪರ ಸರ್ಕಾರದ ಬಜೆಟ್ ಎಂದು ಬಜೆಟ್ ಮಂಡಿಸುವಾಗ ಹಸಿರು ಶಾಲು ಹಾಕಿಕೊಂಡು ಬಜೆಟ್ ಮಂಡಿಸಿದರು. ಆದರೆ ಮಾಜಿ ಸಿಎಂ ಕುಮಾರಸ್ವಾಮಿಯವರ ರೈತರ ಸಾಲಮನ್ನಾ ಯೋಜನೆಯನ್ನು ಕೈ ಬಿಟ್ಟಿದ್ದಾರೆ. ಅದು ಸರಿಯಲ್ಲ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಂತೆ ಬಜೆಟ್ ಮಂಡಿಸಿದ್ದಾರೆ. ಅಲ್ಲದೇ ಎಚ್‍ಡಿಕೆ ಯೋಜನೆಗಳಿಗೂ ಬ್ರೇಕ್ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  • ನಮ್ ಪತಿ ಮೇಲೆ ಬಿಎಸ್‍ವೈ ದ್ವೇಷ ಸಾಧಿಸಿದ್ರು ಬಿಡಿ – ಸಿಎಂ ಮೇಲೆ ಅನಿತಾ ಕುಮಾರಸ್ವಾಮಿ ಗರಂ

    ನಮ್ ಪತಿ ಮೇಲೆ ಬಿಎಸ್‍ವೈ ದ್ವೇಷ ಸಾಧಿಸಿದ್ರು ಬಿಡಿ – ಸಿಎಂ ಮೇಲೆ ಅನಿತಾ ಕುಮಾರಸ್ವಾಮಿ ಗರಂ

    ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನಮ್ಮ ಪತಿ ಕುಮಾರಸ್ವಾಮಿ ಮೇಲೆ ದ್ವೇಷ ಸಾಧಿಸಿದ್ರು ಎಂದು ಬಜೆಟ್ ಬಗ್ಗೆ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿದರು.

    ಮಾಧ್ಯಮಗಳ ಜೊತೆ ಜೊತೆ ಮಾತನಾಡಿತ ಅನಿತಾ ಕುಮಾರಸ್ವಾಮಿ, ಇದೊಂದು ನಿರಾಸೆಯ ಬಜೆಟ್ ಆಗಿದೆ. ಯಾವುದೇ ವರ್ಗದವರಿಗೂ ಅನುಕೂಲ ಆಗುವ ಲಕ್ಷಣಗಳ ಕಾಣುತ್ತಿಲ್ಲ. ಯಡಿಯೂರಪ್ಪ ಹಸಿರು ಶಾಲು ಹಾಕೊಂಡು ಬಂದಾಗ ರೈತನಿಗೆ ಬಜೆಟ್‍ನಲ್ಲಿ ಏನೋ ಇರುಬೇಕು ಅಂದುಕೊಂಡಿದ್ವಿ. ಆದರೆ ಮಹಿಳೆಯರಿಗೆ, ರೈತರಿಗೆ, ಕೊನೆಗೆ ಯುವಕರಿಗೂ ಇಲ್ಲ. ಒಟ್ಟಿನಲ್ಲಿ ಯಾವುದೇ ಒಂದು ವರ್ಗದವರಿಗೂ ಅನುಕೂಲ ಇಲ್ಲ ಎಂದರು.

    ಮೈತ್ರಿ ಸರ್ಕಾರದಲ್ಲಿ ಘೋಷಿಸಿದ್ದ ಬಡವರ ಬಂಧು, ಸಾಲಮನ್ನಾದ ವಿಚಾರ ಬಜೆಟ್‍ನಲ್ಲಿ ಪ್ರಸ್ತಾಪವೇ ಮಾಡಿಲ್ಲ. ಇದನ್ನು ಬಿಜೆಪಿ ಕೈಬಿಡುತ್ತಿದೆ. ಸಿಎಂ ಯಡಿಯೂರಪ್ಪ ಕುಮಾರಸ್ವಾಮಿ ಮೇಲೆ ವೈಯಕ್ತಿಕ ದ್ವೇಷಕ್ಕೆ ಹಿಂಗೆಲ್ಲ ಮಾಡಿದರು. ಆದರೆ ರೈತರಿಗೋಸ್ಕರ ಸಾಲಮನ್ನಾ ಯೋಜನೆಯನ್ನು ಜಾರಿಗೆ ಮಾಡಲಾಗಿತ್ತು. ಹೀಗಾಗಿ ಅದನ್ನಾದರೂ ಮುಂದುವರಿಸಿಕೊಂಡು ಹೋಗಬೇಕಿತ್ತು ಎಂಬುದು ನಮ್ಮ ಅಭಿಪ್ರಾಯ ಎಂದು ಅನಿತಾ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

    ಈ ಬಾರಿಯ ಬಜೆಟ್‍ನಲ್ಲಿ ನನೆಗೆ ಯಾವುದೇ ಗುಡ್ ಅನಿಸುವ ಯಾವ ಅಂಶವೂ ಇಲ್ಲ. ಇದೊಂದು ನೀರಸ ಬಜೆಟ್ ಎಂದು ಸಿಎಂ ಯಡಿಯೂರಪ್ಪ ಅವರು ಮಂಡಿಸಿದ್ದ ಬಜೆಟ್‍ ಬಗ್ಗೆ ಅನಿತಾ ಕುಮಾರಸ್ವಾಮಿ ಕಿಡಿಕಾರಿದರು.

  • ನಿಖಿಲ್-ರೇವತಿ ಮದುವೆ ಸ್ಥಳ ವೀಕ್ಷಿಸಿದ ಹೆಚ್‍ಡಿಕೆ ದಂಪತಿ

    ನಿಖಿಲ್-ರೇವತಿ ಮದುವೆ ಸ್ಥಳ ವೀಕ್ಷಿಸಿದ ಹೆಚ್‍ಡಿಕೆ ದಂಪತಿ

    ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪುತ್ರ ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ವಿವಾಹಕ್ಕೆ ರಾಮನಗರದ ಜನಪದ ಲೋಕದ ಬಳಿ ಭರ್ಜರಿ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ. ಜನಪದ ಲೋಕದ ಪಕ್ಕದಲ್ಲಿನ ಸೆಂಟ್ರಲ್ ಮುಸ್ಲಿಂ ಅಸೋಶಿಯೇಷನ್ ಹಾಗೂ ಉದ್ಯಮಿಯೊಬ್ಬರಿಗೆ ಸೇರಿದ ಜಾಗದಲ್ಲಿ ಅದ್ಧೂರಿ ಸೆಟ್‍ನಲ್ಲಿ ಏಪ್ರಿಲ್ 17ರಂದು ವಿವಾಹ ಕಾರ್ಯ ನೆರವೇರಿಸಲು ನಿಶ್ಚಯಿಸಲಾಗಿದೆ. ಹೀಗಾಗಿ ತಮ್ಮ ಮಗನ ಮದುವೆ ನಡೆಯುವ ಸ್ಥಳಕ್ಕೆ ಇಂದು ಹೆಚ್‍ಡಿಕೆ ದಂಪತಿ ಭೇಟಿ ನೀಡಿ ಪೂರ್ವ ಸಿದ್ಧತಾ ಕಾರ್ಯವನ್ನು ವೀಕ್ಷಣೆ ಮಾಡಿದರು.

    ರಾಮನಗರ ತಾಲೂಕಿನ ಕೈಲಾಂಚ ಗ್ರಾಮದಲ್ಲಿ ನಡೆದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದ ಗೋಪುರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಪಾಲ್ಗೊಂಡಿದ್ರು. ಕಾರ್ಯಕ್ರಮದ ಬಳಿಕ ತಮ್ಮ ಮಗನ ಮದುವೆ ಕಾರ್ಯ ನಡೆಯುವ ಸ್ಥಳಕ್ಕೆ ಹೆಚ್‍ಡಿಕೆ ದಂಪತಿ ಭೇಟಿ ನೀಡಿದ್ರು.

    ಕಾರ್ಯಕ್ರಮದ ಬಳಿಕ ಹೆಚ್‍ಡಿ ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ ದಂಪತಿ ನೇರವಾಗಿ ಜನಪದ ಲೋಕದ ಬಳಿ ಸಿಎಂಎ, ಉದ್ಯಮಿಯ ಹಾಗೂ ಲೇಔಟ್‍ಗೆ ಸೇರಿದ 80 ಎಕರೆಗೂ ಹೆಚ್ಚು ಜಾಗದಲ್ಲಿ ಮದುವೆಗೆ ಸಿದ್ಧತೆ ಕಾರ್ಯಗಳು ನಡೆಯುತ್ತಿರುವ ಜಾಗಕ್ಕೆ ಭೇಟಿ ನೀಡಿದರು. ಕುರುಚಲು ಕಾಡಿನಂತಿದ್ದ ಲೇಔಟ್, ಕೃಷಿ ಮಾಡದೇ ಬಂಜರು ಭೂಮಿಯಂತಾಗಿದ್ದ ಸೆಂಟ್ರಲ್ ಮುಸ್ಲಿಂ ಅಸೋಷಿಯೇಷನ್‍ಗೆ ಸೇರಿದ ಜಾಗ ಹಾಗೂ ಸರ್ಕಾರಿ ಜಾಗವನ್ನೆಲ್ಲ ಜೆಸಿಬಿ ಯಂತ್ರಗಳ ಸಹಾಯದಿಂದ ಸಮತಟ್ಟು ಮಾಡುತ್ತಿರುವ ಕಾರ್ಯವನ್ನು ವೀಕ್ಷಣೆ ನಡೆಸಿದ್ರು.

    ಇದೇ ವೇಳೆ ಹೆಚ್‍ಡಿಕೆ ದಂಪತಿ ನಿಖಿಲ್-ರೇವತಿ ಮದುವೆಗೆ ಕಲ್ಯಾಣ ಮಂಟಪ ಎಲ್ಲಿ ನಿರ್ಮಾಣ ಮಾಡೋದು, ಯಾವ ಸ್ಥಳದಲ್ಲಿ ಅದ್ಧೂರಿ ಸೆಟ್‍ನ ಕಲ್ಯಾಣ ಮಂಟಪ ನಿರ್ಮಿಸಬಹುದು. ತಮ್ಮ ಶಾಸ್ತ್ರಗಳು ಹೇಳಿರುವ ವಾಸ್ತು ಪ್ರಕಾರದ ಜಾಗ ಯಾವ ಕಡೆಗಿದೆ ಎಂಬುದರ ಬಗ್ಗೆ ತಮ್ಮಲ್ಲೇ ಚರ್ಚೆ ನಡೆಸಿದರು. ನಿಖಿಲ್ ಮದುವೆ ಫಿಕ್ಸ್ ಆದಾಗಿನಿಂದ ಹೆಚ್‍ಡಿಕೆ ಮೂರನೇ ಬಾರಿಗೆ ಮದುವೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

  • ಕಾಲಿಗೆ ಬಿದ್ರೂ ಸಮಸ್ಯೆ ಕೇಳದ ಶಾಸಕಿ- ಕಾರಿಗೆ ಅಡ್ಡ ಕುಳಿತಿದ್ದಕ್ಕೆ ಮುಖಂಡನಿಂದ ಹಲ್ಲೆ

    ಕಾಲಿಗೆ ಬಿದ್ರೂ ಸಮಸ್ಯೆ ಕೇಳದ ಶಾಸಕಿ- ಕಾರಿಗೆ ಅಡ್ಡ ಕುಳಿತಿದ್ದಕ್ಕೆ ಮುಖಂಡನಿಂದ ಹಲ್ಲೆ

    ರಾಮನಗರ: ಸಮಸ್ಯೆ ಹೇಳಿಕೊಳ್ಳಲು ಬಂದ ವ್ಯಕ್ತಿ ಕಾಲಿಗೆ ಬಿದ್ದರೂ ಆಲಿಸದ ಶಾಸಕಿ ಅನಿತಾ ಕುಮಾರಸ್ವಾಮಿ ಕಾರಿಗೆ ಅಡ್ಡ ಕುಳಿತು ಆಕ್ರೋಶ ಹೊರ ಹಾಕಿದ್ದಕ್ಕೆ, ಜೆಡಿಎಸ್ ಮುಖಂಡ ಹಲ್ಲೆ ನಡೆಸಿದ ಘಟನೆ ರಾಮನಗರದ ನಗರಸಭೆ ಆವರಣದಲ್ಲಿ ನಡೆದಿದೆ.

    ರಾಮನಗರದ ವಿನಾಯಕ ನಗರದ ನಿವಾಸಿ ರಾಜು ಹಲ್ಲೆಗೊಳಗಾದ ವ್ಯಕ್ತಿ. ರಾಮನಗರದ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ ಹಲ್ಲೆ ನಡೆಸಿದ ವ್ಯಕ್ತಿ.

    ಅಂದಹಾಗೇ ರಾಮನಗರದ ನಗರಸಭೆಯಲ್ಲಿ ಇಂದು ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಶಾಸಕಿ ಸಭೆ ನಡೆಸಿದ್ದರು. ಆದರೆ ಸಭೆಗೆ ಸಾರ್ವಜನಿಕರು ಹಾಗೂ ಮಾಧ್ಯಮದವರನ್ನು ನಿರ್ಬಂಧಿಸಿದ್ದರು.

    ಸಭೆ ಬಳಿಕ ಹೊರಬಂದ ಶಾಸಕಿ ಅನಿತಾ ಕುಮಾರಸ್ವಾಮಿಗೆ ಸಾರ್ವಜನಿಕರು ತಮ್ಮ ಸಮಸ್ಯೆಗಳ ಅಹವಾಲು ನೀಡಲು ಮುಂದಾದರು. ಈ ವೇಳೆ ರಾಜು ಸಹ ತಮ್ಮ ಬಡಾವಣೆಯಲ್ಲಿನ ಗ್ಯಾಸ್ ಗೋಡನ್ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲು ಮನವಿ ಮಾಡಿದರು.

    ಮನವಿ ಪತ್ರ ನೋಡಿ ಸುಮ್ಮನಾದ ಶಾಸಕಿ ಅನಿತಾ ಕುಮಾರಸ್ವಾಮಿ ಮುಂದೆ ಸಾಗಲು ಪ್ರಯತ್ನಿಸಿದರು. ಈ ವೇಳೆ ಶಾಸಕಿ ಮುಂದೆಯೇ ಕುಳಿತ ರಾಜು, ಕಾಲಿಗೆ ಬಿದ್ದರೂ ಶಾಸಕಿಯ ಮನಸ್ಸು ಮಾತ್ರ ಕರಗಲಿಲ್ಲ. ನೋಡಿಯೂ ನೋಡದೇ ಮುಂದೆ ನಡೆದರು. ಇದರಿಂದ ಕೆರಳಿದ ರಾಜು ಹಾಗೂ ಮತ್ತೋರ್ವ ವ್ಯಕ್ತಿ ಶಾಸಕಿ ಕಾರಿನ ಎದುರು ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

    ಜೆಡಿಎಸ್ ತಾಲೂಕು ಅಧ್ಯಕ್ಷನಿಂದ ಹಲ್ಲೆ:
    ಶಾಸಕಿ ಕಾರಿನ ಎದುರು ಕುಳಿತು ಆಕ್ರೋಶ ಹೊರ ಹಾಕಿದ ರಾಜು ಹಾಗೂ ಮತ್ತೋರ್ವ ವ್ಯಕ್ತಿಯ ಮನವೊಲಿಕೆಗೆ ಪೊಲೀಸರು ಮುಂದಾಗಿದ್ರು. ಈ ವೇಳೆ ಮಧ್ಯೆ ಪ್ರವೇಶಿಸಿದ ಜೆಡಿಎಸ್ ರಾಮನಗರ ತಾಲೂಕು ಅಧ್ಯಕ್ಷ ರಾಜಶೇಖರ್ ಹಾಗೂ ಜೆಡಿಎಸ್ ಪದಾಧಿಕಾರಿಗಳು ರಾಜುವಿನ ವಿರುದ್ಧ ಕೆರಳಿದ್ರು. ಶಾಸಕಿ ಕಾರಿನ ಅಡ್ಡ ಕುಳಿತಿದ್ದ ರಾಜು ಹಾಗೂ ಮತ್ತೋರ್ವ ವ್ಯಕ್ತಿಯನ್ನ ಎಳೆದಾಡಿದರು. ಅಲ್ಲದೇ ರಾಜುವಿನ ಕೊರಳ ಪಟ್ಟಿ ಹಿಡಿದ ರಾಜಶೇಖರ್ ಹಲ್ಲೆ ಕೂಡ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು.

    ಇಷ್ಟೆಲ್ಲ ಘಟನೆ ನಡೆದರು ಸಹ ಶಾಸಕಿ ಅನಿತಾ ಕುಮಾರಸ್ವಾಮಿ ಮಾತ್ರ ಕಾರಿನಿಂದ ಕೆಳಗೆ ಇಳಿಯಲೇ ಇಲ್ಲ. ಪೊಲೀಸರು ಗಲಾಟೆಯನ್ನು ತಿಳಿಗೊಳಿಸಿ ಜೆಡಿಎಸ್ ಪದಾಧಿಕಾರಿಗಳು ಹಾಗೂ ಸಾರ್ವಜನಿಕರನ್ನು ದೂರ ಕಳುಹಿಸಿ, ಶಾಸಕಿ ಅನಿತಾ ಕುಮಾರಸ್ವಾಮಿಯನ್ನು ಬೆಂಗಾವಲು ವಾಹನದ ಮೂಲಕ ಹೊರ ಕಳುಹಿಸಿದರು.

    ಸಮಸ್ಯೆ ಹೇಳಿಕೊಂಡು ಬಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ. ಮತ ಹಾಕಿ ಗೆದ್ದ ಜನಪ್ರತಿನಿಧಿಗಳು ಸಮಸ್ಯೆ ಕೇಳದಿದ್ದರೆ ಏನ್ ಮಾಡೋದು ಎನ್ನುವುದು ಹಲ್ಲೆಗೊಳದಾದ ರಾಜುವಿನ ಅಳಲಾಗಿದ್ರೆ, ಶಾಸಕಿ ಹಾಗೂ ಜೆಡಿಎಸ್ ಮುಖಂಡರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

  • ನಮ್ಮ ಪಕ್ಷದವರು ವಾಪಸ್ ಬರುವ ವಿಶ್ವಾಸವಿದೆ – ಅನಿತಾ ಕುಮಾರಸ್ವಾಮಿ

    ನಮ್ಮ ಪಕ್ಷದವರು ವಾಪಸ್ ಬರುವ ವಿಶ್ವಾಸವಿದೆ – ಅನಿತಾ ಕುಮಾರಸ್ವಾಮಿ

    ಬೆಂಗಳೂರು: ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಿಂದ ಸಿಎಂ ಅವರು ಬೇಸರವೇನು ಮಾಡಿಕೊಂಡಿಲ್ಲ. ಅವರು ಆರಾಮವಾಗಿದ್ದಾರೆ. ನಮ್ಮ ಪಕ್ಷದವರು ವಾಪಸ್ ಬರುವ ನಿರೀಕ್ಷೆ ಇದೆ ಎಂದು ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಹೇಳಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗಿದೆ. ಸೋಮವಾರಕ್ಕೆ ಸದನವನ್ನು ಮುಂದೂಡಲಾಗಿದೆ. ಶಾಸಕರ ರಾಜೀನಾಮೆಯಿಂದ ಸಿಎಂ ಅವರು ಬೇಸರ ಏನು ಮಾಡಿಕೊಂಡಿಲ್ಲ. ಅವರು ಆರಾಮಾಗಿದ್ದಾರೆ. ರಾಜಕಾರಣದಲ್ಲಿ ಇದೆಲ್ಲ ಸಾಮಾನ್ಯವಾಗಿದ್ದು, ನಾವು 30 ವರ್ಷದಿಂದ ರಾಜಕೀಯದಲ್ಲಿ ಇದೆಲ್ಲವನ್ನು ನೋಡಿಕೊಂಡು ಬಂದಿದ್ದೇವೆ. ಶಾಸಕರು ಪಕ್ಷಕ್ಕೆ ನಿಷ್ಠೆಯಿಂದ ಇರಬೇಕಿತ್ತು. ಇದರಿಂದ ನಿಜ ಬೇಸರ ಆಗುತ್ತೆ. ಆದರೆ ಸಿಎಂ ಏನು ಬೇಸರ ಮಾಡಿಕೊಂಡು ಕುಳಿತಿಲ್ಲ. ಆದರೆ ನಮ್ಮ ಪಕ್ಷದವರು ವಾಪಸ್ ಬರುವ ವಿಶ್ವಾಸವಿದೆ ಎಂದು ತಿಳಿಸಿದರು.

    ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಸ್ಪೀಕರ್ ಅವರು ಇನ್ನೂ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಅವರು ಶಾಸಕರನ್ನು ವೈಯಕ್ತಿಕವಾಗಿ ಭೇಟಿಯಾಗಿ ಅವರ ಜೊತೆ ಮಾತನಾಡಬೇಕು. ಅವರ ಮಾತಿನಿಂದ ನನಗೆ ಮನವರಿಕೆ ಆಗಬೇಕು. ಆಗ ಮಾತ್ರ ರಾಜೀನಾಮೆ ಸ್ವೀಕರಿಸುತ್ತೇನೆ ಎಂದು ಸ್ಪೀಕರ್ ಹೇಳಿದ್ದಾರೆ. ಹಾಗಾಗಿ ರಾಜೀನಾಮೆ ಕೊಟ್ಟಿರುವುದೇ ಪ್ರಜಾಪ್ರಭುತ್ವಕ್ಕೆ ಒಂದು ಮಾರಕವಾಗಿದೆ. ಮನಸ್ಸು ಬದಲಾಯಿಸಿಕೊಂಡು ಬರುವ ಅವಕಾಶವಿದೆ. ಸದ್ಯಕ್ಕೆ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.

    ರಾಜಕಾರಣಿಗಳ ಇಂದಿನ ನಡೆಯಿಂದ ರಾಜ್ಯದ ಜನತೆಗೆ ಅವರ ಮೇಲೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಗೆದ್ದ ಮೇಲೆ ಜನರ ಸೇವೆ ಮಾಡಬೇಕು. ಕ್ಷೇತ್ರದ ಜನರಿಗೆ ಸಿಗುವ ರೀತಿ ಇರಬೇಕು ಎಂಬ ಭಾವನೆ ಶಾಸಕರಲ್ಲಿಯೂ ಇರಬೇಕು. ಆದರೆ ಗೆದ್ದ ಮೇಲೆ ಅಧಿಕಾರ ಮತ್ತು ಹಣಕ್ಕಾಗಿ ಪಕ್ಷಕ್ಕೂ, ಹೈಕಮಾಂಡ್‍ಗೂ ನಿಷ್ಠೆ ತೋರಿಸದೆ ಈ ರೀತಿ ಪಾರ್ಟಿ ಬಿಟ್ಟು ಪಾರ್ಟಿ ಬಿಟ್ಟು ಜಿಗಿಯುವುದು ತಪ್ಪು. ಶಾಸಕರು ಏನೇ ಕಾರಣ ಕೊಟ್ಟರು ಪರಿಹಾರ ಮಾಡದಂತಹ ಸಮಸ್ಯೆ ಏನು ಇರಲಿಲ್ಲ. ಪಕ್ಷ, ರಾಜಕೀಯ ಎಂದರೆ ಸಣ್ಣ-ಪುಟ್ಟ ಸಮಸ್ಯೆ ಇರುತ್ತವೆ. ಅದನ್ನು ಕೂತು ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಈ ರೀತಿ ಮಾಡಬಾರದು ಎಂದು ಅನಿತಾ  ಅವರು ಹೇಳಿದರು.

  • ಮೀಡಿಯಾದವರು ಹಾಳಾಗಿದ್ದೀರಿ, ಎಲ್ಲದರಲ್ಲೂ ತಪ್ಪು ಹುಡುಕುವುದನ್ನ ಬಿಡಿ: ಮಾಧ್ಯಮಗಳ ವಿರುದ್ಧ ಸಿಎಂ ಪತ್ನಿ ಗರಂ

    ಮೀಡಿಯಾದವರು ಹಾಳಾಗಿದ್ದೀರಿ, ಎಲ್ಲದರಲ್ಲೂ ತಪ್ಪು ಹುಡುಕುವುದನ್ನ ಬಿಡಿ: ಮಾಧ್ಯಮಗಳ ವಿರುದ್ಧ ಸಿಎಂ ಪತ್ನಿ ಗರಂ

    – ಮಾಧ್ಯಮದವರು ಚುನಾವಣೆಗೆ ನಿಲ್ಲಲಿ
    – ಗೆದ್ದು ಕೆಲಸ ಮಾಡಿಸಿ ತೋರಿಸಿ
    – ನಿಮ್ಮ ಬಳಿ ಮಾತನಾಡುವ ಅವಶ್ಯಕತೆ ಏನಿದೆ

    ರಾಮನಗರ: ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ಮೇಲೆ ಮುನಿಸಿಕೊಂಡಿದ್ದು ಈಗ ಅವರ ಪತ್ನಿ ಕೂಡ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ. ಎಲ್ಲದರಲ್ಲೂ ತಪ್ಪು ಹುಡುಕುವುದನ್ನ ಬಿಡಿ ಎಂದು ಮಾಧ್ಯಮಗಳ ವಿರುದ್ಧ ಶಾಸಕಿ ಅನಿತಾ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

    ಕ್ಷೇತ್ರಕ್ಕೆ ಆಗಮಿಸಿದ ವೇಳೆ, ಮಾಧ್ಯಮದವರ ಬಳಿ ಮಾತನಾಡಲು ಏನಿದೆ, ನಮ್ಮ ಕೆಲಸ ಮಾಡಲು ಬಂದಿದ್ದೇವೆ. ಇತ್ತೀಚೆಗೆ ನೀವು ಎಲೆಕ್ಟ್ರಾನಿಕ್ ಮೀಡಿಯಾದವರು ಹಾಳಾಗಿದ್ದೀರಿ. ಇದೇ ವಿಚಾರಕ್ಕೆ ಸಿಎಂ ಕುಮಾರಸ್ವಾಮಿಯವರಿಗೆ ನಿಮ್ಮ ಬಗ್ಗೆ ಬಹಳ ಬೇಸರವಿದೆ. ಇಲ್ಲದೇ ಇರುವ ತಲೆಹರಟೆ ಪ್ರಶ್ನೆ ಕೇಳುತ್ತೀರಿ. ಮಾಧ್ಯಮದವರ ಬಳಿ ಮಾತನಾಡುವ ಅವಶ್ಯಕತೆ ಏನಿದೆ ನಮಗೆ ಎಂದು ಕಿಡಿಕಾರಿದ್ದಾರೆ.

    ಇವತ್ತಿನ ವಿಶೇಷ ಏನಿಲ್ಲ ರೆಗ್ಯೂಲರ್ ಆಗಿ ಬರುತ್ತೇನೆ. ಇದರಲ್ಲಿ ಹೊಸದೇನು ಇಲ್ಲ. ಚುನಾವಣೆ ನೀತಿ ಸಂಹಿತೆ ಇದ್ದ ಕಾರಣಕ್ಕೆ ಕೆಲ ದಿನಗಳು ಬರಲು ಸಾಧ್ಯವಾಗಿರಲಿಲ್ಲ ಅಷ್ಟೇ ಎಂದರು.

    ಈ ವೇಳೆ ಕೆಲ ಗ್ರಾಮಗಳಿಗೆ ನೀರಿನ ಸಮಸ್ಯೆ ಇದೆ ಎಂದು ವರದಿಗಾರರು ಪ್ರಶ್ನೆ ಕೇಳಿದ್ದಕ್ಕೆ, ಹೊರಗಡೆ ಕುಳಿತು ನಿಮಗೆ ಟೀಕೆ ಮಾಡುವುದು ಸುಲಭ. ಗ್ರೌಂಡ್‍ಗೆ ಇಳಿದು ನಾವು ಕೆಲಸ ಮಾಡುತ್ತೇವೆ. ಅದರ ಕಷ್ಟ ನಮಗೆ ಗೊತ್ತಿರುತ್ತದೆ. ನಿಮಗೂ ಈ ಬಗ್ಗೆ ಅನುಭವ ಆಗಬೇಕು. ಮಾಧ್ಯಮದ ಯಾರನ್ನಾದರು ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲಿಸಿ, ಗೆದ್ದು, ಕೆಲಸ ಮಾಡಿ ತೋರಿಸಿ. ಆಗ ನಿಮಗೆ ನಮ್ಮ ಕಷ್ಟ ಏನು ಎನ್ನುವುದು ತಿಳಿಯುತ್ತೆ ಎಂದು ಸವಾಲ್ ಹಾಕಿದರು.

    ರಾಮನಗರ ನನ್ನ ಕ್ಷೇತ್ರ ಆಗುವ ಮೊದಲು ಕುಮಾರಸ್ವಾಮಿ ಅವರ ಕ್ಷೇತ್ರವಾಗಿತ್ತು. ನಾವು ಕ್ಷೇತ್ರದ ಜನತೆಗೆ ಕೊಟ್ಟ ಭರವಸೆಗಳಲ್ಲಿ ಕೆಲವನ್ನು ಮಾಡಲು ಆಗಿರದೇ ಇರಬಹುದು, ಆದರೆ ಬಹುತೇಕ ಭರವಸೆಗಳನ್ನು ಪೂರ್ತಿಗೊಳಿಸಿದ್ದೇವೆ. ಕೆಲವು ಬಾರಿ ಭರವಸೆಗಳನ್ನು ಈಡೇರಿಸುವುದು ಕಷ್ಟವಾಗುತ್ತದೆ. ಅದಕ್ಕೆ ಟೈಮ್ ಬೇಕಾಗುತ್ತೆ. ಮುಂದಿನ ದಿನಗಳಲ್ಲಿ ನೋಡಿ ಕೆಲಸ ಮಾಡುತ್ತೇವೆ. ಎಲ್ಲದರಲ್ಲೂ ತಪ್ಪು ಹುಡುಕುವ ಕೆಲಸ ಮಾಡಬೇಡಿ ಎಂದು ಹೇಳಿದರು.

    ಸಿಎಂ ಗ್ರಾಮ ವಾಸ್ತವ್ಯದ ಬಗ್ಗೆ ಪ್ರತಿಕ್ರಿಯಿಸಿ, ಮಹಿಳೆಯರಾಗಿ ನಾವು ಗ್ರಾಮ ವಾಸ್ತವ್ಯ ಮಾಡಲು ಕಷ್ಟವಾಗುತ್ತದೆ. ಈ ವಿಚಾರದ ಬಗ್ಗೆ ಯೋಚನೆ ಮಾಡುತ್ತೇನೆ. ಸಿಎಂ ಅವರ ಕಾಲಾವಕಾಶ ಪಡೆದು ಗ್ರಾಮವಾಸ್ತವ್ಯ ನಿಗದಿ ಮಾಡುತ್ತೇವೆ. ರಾಮನಗರ ಕ್ಷೇತ್ರದಲ್ಲೂ ಅವರು ಗ್ರಾಮವಾಸ್ತವ್ಯ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.

  • ಎಕ್ಸಿಟ್ ಪೋಲ್‍ಗಳನ್ನು ಲೆಕ್ಕಕ್ಕೆ ಇಟ್ಕೊಂಡಿಲ್ಲ, ಗೆಲ್ಲುವ ವಿಶ್ವಾಸವಿದೆ- ನಿಖಿಲ್

    ಎಕ್ಸಿಟ್ ಪೋಲ್‍ಗಳನ್ನು ಲೆಕ್ಕಕ್ಕೆ ಇಟ್ಕೊಂಡಿಲ್ಲ, ಗೆಲ್ಲುವ ವಿಶ್ವಾಸವಿದೆ- ನಿಖಿಲ್

    ಚಿಕ್ಕಮಗಳೂರು: ಮಗನ ರಾಜಕೀಯ ಭವಿಷ್ಯಕ್ಕಾಗಿ ರಾಜ್ಯಾದ್ಯಂತ ಟೆಂಪಲ್ ರನ್ ಮಾಡಿ, ಶೃಂಗೇರಿಯಲ್ಲಿ ಪೂಜೆ, ಹೋಮ, ಹವನ ನಡೆಸಿದ್ದ ಸಿ.ಎಂ ಕುಟುಂಬ, ಫಲಿತಾಂಶಕ್ಕೂ ಮುನ್ನ ಮತ್ತೊಂದು ಸುತ್ತು ಟೆಂಪಲ್ ರನ್ ಮುಂದುವರಿಸಿದೆ. ಇಂದು ಬೆಳಗ್ಗೆ ಶೃಂಗೇರಿಯಲ್ಲಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್, ಸಂಜೆ ಹಾಸನದ ಕುಲದೇವರ ಸೇರಿದಂತೆ ವಿವಿಧ ದೇವಸ್ಥಾನಕ್ಕೆ ತೆರಳಿ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ತಾಯಿ- ಮಗ, ಎಕ್ಸಿಟ್ ಪೋಲ್‍ಗಳನ್ನ ಲೆಕ್ಕಕ್ಕೆ ಇಟ್ಕೊಂಡಿಲ್ಲ. ಶಾರದಾಂಬೆ ಹಾಗೂ ಜನರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ರು.

    ದೇಶಾದ್ಯಂತ 543 ಕ್ಷೇತ್ರದಲ್ಲಿ ಚುನಾವಣೆ ನಡೆದರೂ ಇಂಡಿಯಾ ಕಣ್ಣು ಮಂಡ್ಯದ ಮೇಲಿರೋದ್ರಲ್ಲಿ ಅನುಮಾನವೇ ಇಲ್ಲ. ಅತ್ತ ಸುಮಲತಾ ಇತ್ತ ನಿಖಿಲ್ ಕುಮಾರಸ್ವಾಮಿಯ ಎದೆಯಲ್ಲೂ ಢವ-ಢವ ಶುರುವಾಗಿದೆ. ಆದರೆ, ಅಪ್ಪನಿಗೆ ಅಧಿಕಾರ ಕೊಟ್ಟ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಗನ ಗೆಲುವಿಗಾಗೂ ವಿಶೇಷ ಪೂಜೆ ಹೋಮ-ಹವನ ನಡೆಸಿದ್ದ ಸಿಎಂ ಕುಟುಂಬ, ಫಲಿತಾಂಶಕ್ಕೂ ಮುನ್ನ ಮಗನ ಗೆಲುವಿಗಾಗಿ ಮತ್ತೆ ಶಾರದಾಂಬೆಯ ಮೊರೆ ಹೋಗಿದ್ದಾರೆ.

    ಇದೇ ವೇಳೆ ಮಾತನಾಡಿದ ನಿಖಿಲ್, ಒಂದೊಂದು ಸರ್ವೆಗಳಲ್ಲಿ ಒಂದೊಂದು ರೀತಿ ಫಲಿತಾಂಶ ಬಂದಿದೆ. ನಾನು ಯಾವುದನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಶಾರದಾಂಬೆ ಹಾಗೂ ಜನರ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿಎಂ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಶಾರದಾಂಬೆಯ ಆಶೀರ್ವಾದಕ್ಕಾಗಿ ನಾವು ಆಗಾಗ ಶೃಂಗೇರಿಗೆ ಬರುತ್ತೇವೆ. ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿ ಸರ್ಕಾರಕ್ಕೆ ಡೆಡ್‍ಲೈನ್ ಕೊಡ್ತಾನೆ ಇದೆ. ಆದರೆ ಏನೂ ಪ್ರಯೋಜನವಾಗ್ತಿಲ್ಲ. ಸರ್ಕಾರ ಪತನಗೊಳಿಸುವ ಅವರ ಆಸೆ ಈಡೇರೋದಿಲ್ಲ. ರಾಜ್ಯದಲ್ಲಿ ಜೆಡಿಎಸ್‍ಗೆ ಆರು ಸ್ಥಾನ ಬರುವ ನಿರೀಕ್ಷೆ ಇದೆ. ನಿಖಿಲ್ ಮೇಲೆ ಚಾಮುಂಡೇಶ್ವರಿ, ಶಾರದಾಂಬೆ ಹಾಗೂ ಜನರ ಆಶೀರ್ವಾದವಿದೆ ಎಂದು ಹೇಳುವ ಮೂಲಕ ನಿಖಿಲ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

    ಒಟ್ಟಿನಲ್ಲಿ 2018 ಜನವರಿ ತಿಂಗಳಿಂದ ಸಿಎಂ ರಾಜ್ಯ ಸುತ್ತಿದ್ದಕ್ಕಿಂತ ಅಧಿಕಾರ ಉಳಿಸಿಕೊಳ್ಳೋದಕ್ಕೆ ಮಠ-ಮಂದಿರ ಸುತ್ತಿದ್ದೇ ಹೆಚ್ಚು. ಸಿಎಂ ನಡೆ ಬಗ್ಗೆ ರಾಜ್ಯದ ಜನ ಕೂಡ ಆಕ್ರೋಶ ವ್ಯಕ್ತಪಡಿಸಿದರು. ಮಗನ ರಾಜಕೀಯ ಭವಿಷ್ಯಕ್ಕೂ ಅಷ್ಟೇ ಪ್ರಮಾಣದಲ್ಲಿ ದೇವಸ್ಥಾನ, ವಿಶೇಷ ಪೂಜೆ, ಹೋಮ-ಹವನ ನಡೆಸಿದ್ದ ಸಿಎಂ ಕುಟುಂಬ, ಈಗ ಫಲಿತಾಂಶಕ್ಕೂ ಮುನ್ನ ಮತ್ತೊಂದು ರೌಂಡ್ ಶುರುಮಾಡಿದ್ದಾರೆ.

  • ಮಗನ ಬಳಿಕ ಅಮ್ಮನ ಸರದಿ- `ಅನಿತಕ್ಕಾ ಎಲ್ಲಿದ್ದೀರಾ?’ ಅಭಿಯಾನ ಶುರು

    ಮಗನ ಬಳಿಕ ಅಮ್ಮನ ಸರದಿ- `ಅನಿತಕ್ಕಾ ಎಲ್ಲಿದ್ದೀರಾ?’ ಅಭಿಯಾನ ಶುರು

    ರಾಮನಗರ: ಮಂಡ್ಯದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪ ಟ್ರೋಲ್ ಬಳಿಕ ಇದೀಗ ಅನಿತಕ್ಕಾ ಎಲ್ಲಿದ್ದೀರಾ ಎಂಬ ಟ್ರೋಲ್ ರಾಮನಗರದಲ್ಲಿ ಸದ್ದು ಮಾಡುತ್ತಿದೆ.

    ನಿಖಿಲ್ ಎಲ್ಲಿದ್ದೀಯಪ್ಪ ಟ್ರೋಲ್‍ನಿಂದ ಮಂಡ್ಯಗೆ ನಿಖಿಲ್ ಆಗಮಿಸಿದ್ರು. ಅದೇ ರೀತಿ ಶಾಸಕಿ ಅನಿತಾ ಕುಮಾರಸ್ವಾಮಿಯವರಿಗೆ ಅನಿತಕ್ಕಾ ಎಲ್ಲಿದ್ದೀರಿ ಎಂದು ಟ್ರೋಲ್ ಮಾಡಿದರೆ ಕ್ಷೇತ್ರಕ್ಕೆ ಭೇಟಿ ನೀಡಬಹುದು, ಸಾರ್ವಜನಿಕರ ಸಮಸ್ಯೆ ಆಲಿಸಬಹುದು ಎಂದು ಈ ಟ್ರೋಲ್ ಶುರು ಮಾಡಿದ್ದಾರೆ ಎನ್ನಲಾಗಿದೆ.

    ರಾಮನಗರದ ವಿನೋದ್ ಹಾಗೂ ರುದ್ರದೇವ್ ಎಂಬವರು ಮಾಡಿರುವ ಟ್ರೋಲ್ ವೀಡಿಯೋದಲ್ಲಿ, ಈ ಹಿಂದೆ ರಾಮನಗರ ಕ್ಷೇತ್ರದಲ್ಲಿ ಅದರಲ್ಲೂ ನಗರ ಪ್ರದೇಶದಲ್ಲಿ 3 ದಿನಕ್ಕೊಮ್ಮೆಯಾದ್ರೂ ಮೋರಿ ನೀರನ್ನು ಹರಿಸುತ್ತಿದ್ದರು. ಆದರೆ ಇದೀಗ ಅದನ್ನೂ ಕೇಳುವಂತಿಲ್ಲ. 10 ರಿಂದ 15 ದಿನಗಳಿಗೊಮ್ಮೆಯಾದ್ರೂ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಶಾಸಕಿಯಾದ ಅನಿತಾಕುಮಾರಸ್ವಾಮಿಯವರು ಎಲ್ಲಿದ್ದಾರೋ ಗೊತ್ತಿಲ್ಲ. ಹೀಗಾಗಿ ಎಲ್ಲಿದ್ದೀರಿ ಅನಿತಕ್ಕಾ ಎಂದು ಕ್ಷೇತ್ರದ ಜನ ಟ್ರೋಲ್ ಮಾಡಲು ಆರಂಭಿಸಿದ್ದಾರೆ.

    `ಜಾಗ್ವಾರ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ `ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕೇಳಿದ್ದರು. ಆ ಬಳಿಕ ಈ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ ಹರಿದಾಡುತ್ತಿತ್ತು.

     

  • ಗೌಡರ ಕುಟುಂಬದ ಮನವಿಗೆ ಸಿದ್ದರಾಮಯ್ಯ ಡೋಂಟ್ ಕೇರ್!

    ಗೌಡರ ಕುಟುಂಬದ ಮನವಿಗೆ ಸಿದ್ದರಾಮಯ್ಯ ಡೋಂಟ್ ಕೇರ್!

    ಬೆಂಗಳೂರು: ಕಳೆದ ಚುನಾವಣೆಯ ಸೋಲಿನ ಕಹಿ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರೆತಿಲ್ಲವೆಂದು ಕಾಣುತ್ತಿದ್ದು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬದ ಮನವಿಗೆ ಸಿದ್ದರಾಮಯ್ಯ ಕ್ಯಾರೇ ಎಂದಿಲ್ಲ.

    ಹೌದು. ಮಗನ ಗೆಲುವಿಗಾಗಿ ತಮ್ಮ ಕಾಲದ ದಶಕದ ದ್ವೇಷವನ್ನು ಬದಿಗಿಟ್ಟು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು. ಮಂಡ್ಯ ಕಾಂಗ್ರೆಸ್ ನಾಯಕರ ಮನವೊಲಿಕೆ ಮಾಡಿ ಅನ್ನೋ ಬೇಡಿಕೆ ಜೊತೆಗೆ ಮಾರ್ಚ್ 25 ರಂದು ಮಂಡ್ಯದಲ್ಲಿನ ನಿಖಿಲ್ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೂ ಬರುವಂತೆ ಸಿದ್ದರಾಮಯ್ಯರ ಬಳಿ ಮನವಿ ಮಾಡಿಕೊಂಡಿದ್ದರು. ಈ ವೇಳೆ ಸಿದ್ದರಾಮಯ್ಯ ಮಂಡ್ಯಕ್ಕೆ ತೆರಳುವ ಭರವಸೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಆದ್ರೆ ಸಿದ್ದರಾಮಯ್ಯ ಅವರು ಇಂದು ಮಂಡ್ಯಕ್ಕೆ ತೆರಳುತ್ತಿಲ್ಲ. ಈ ಮೂಲಕ ಯಾರೆ ಮನೆ ಬಾಗಿಲಿಗೆ ಬಂದ್ರೂ, ಎಷ್ಟೇ ಮೈತ್ರಿ ಅಂದ್ರೂ ಸಿದ್ದರಾಮಯ್ಯ ಮನಸ್ಸಿಗೆ ಎರಡೆರಡು ಬಾರಿ ಆದ ಆ ಗಾಯ ಎಂದಿಗೂ ವಾಸಿ ಆಗಲ್ಲ ಅನ್ನಿಸುತ್ತದೆ. ಅದರ ಪರಿಣಾಮವೇ ದೇವೇಗೌಡರ ಕುಟುಂಬದ ಪ್ರೀತಿ, ಸ್ನೇಹ ಯಾವುದಕ್ಕೂ ಸಿದ್ದರಾಮಯ್ಯ ಕ್ಯಾರೇ ಅನ್ನುತ್ತಿಲ್ಲ ಎನ್ನಲಾಗಿದೆ.

    2006 ರಲ್ಲಿ ದೇವೇಗೌಡರ ಜೊತೆಗಿನ ಮುನಿಸಿನಿಂದ ಪಕ್ಷ ತೊರೆದು ಅಹಿಂದ ಕಟ್ಟಿದ ಸಿದ್ದರಾಮಯ್ಯರ ರಾಜಕೀಯ ಜೀವನವೇ ಬಹುತೇಕ ಅಂತ್ಯವಾಗುವ ಅಪಾಯವಿತ್ತು. ಅಹಿಂದ ಅಸ್ತ್ರವನ್ನೇ ಬಳಸಿ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ಅಹಿಂದ ಸಿಎಂ ಆಗಿ 5 ವರ್ಷ ಸಿಎಂ ಆಗಿದ್ದು ಇತಿಹಾಸವಾಗಿದೆ.

    ದೇವೇಗೌಡರ ಕುಟುಂಬದ ಜೊತೆಗಿನ ಸಿಟ್ಟನ್ನ ಮನಸಲ್ಲಿಟ್ಟುಕೊಂಡೆ ಬಂದಿದ್ದ ಸಿದ್ದರಾಮಯ್ಯರ ಗಾಯದ ಮೇಲಿನ ಬರೆ ಎಂಬಂತೆ ಗೌಡರ ಕುಟುಂಬ ಹಠಕ್ಕೆ ಬಿದ್ದು ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರಿಗೆ ಸೋಲಿನ ಬಿಸಿ ಮುಟ್ಟಿಸಿತ್ತು. ಬಳಿಕ ಅನಿವಾರ್ಯವಾಗಿ ಮೈತ್ರಿ ಒಪ್ಪಿಕೊಂಡಿರುವ ಸಿದ್ದರಾಮಯ್ಯರಿಗೆ ಗೌಡರ ಕುಟುಂಬದ ಮೇಲಿನ ಕೋಪವಂತು ಕಡಿಮೆಯಾಗಿಲ್ಲ ಎನ್ನುವುದು ಹಲವು ಸಂದರ್ಭದಲ್ಲಿ ಸಾಬೀತಾಗಿತ್ತು.

    ಮಂಡ್ಯದ ಅಖಾಡದಲ್ಲಿ ನಿಖಿಲ್ ಗೆಲುವಿಗೆ ಸಿದ್ದರಾಮಯ್ಯ ನೆರವು ಬೇಕೆ ಬೇಕು ಎಂಬ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಆದರೆ ಇದು ಯಾವುದಕ್ಕೆ ತಲೆ ಕೆಡಿಸಿಕೊಳ್ಳದ ಸಿದ್ದರಾಮಯ್ಯ ಇಂದು ಮಂಡ್ಯಕ್ಕೆ ಹೋಗದೇ ತಮ್ಮ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

  • ಉರುಳಿದ ಕಾಲಚಕ್ರ, ರಾತ್ರೋರಾತ್ರಿ ಸಿದ್ದರಾಮಯ್ಯ ಮನೆಗೆ ದೇವೇಗೌಡರ ಸೊಸೆ!

    ಉರುಳಿದ ಕಾಲಚಕ್ರ, ರಾತ್ರೋರಾತ್ರಿ ಸಿದ್ದರಾಮಯ್ಯ ಮನೆಗೆ ದೇವೇಗೌಡರ ಸೊಸೆ!

    ಬೆಂಗಳೂರು: ಶಾಸಕಿ ಅನಿತಾ ಕುಮಾರಸ್ವಾಮಿ ಅವರು ರಾತ್ರೋರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಭೇಟಿ ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾನು ಯಾರ ಜೊತೆಗೂ ಭಿಕ್ಷೆ ಬೇಡಲ್ಲ ಎಂದಿದ್ದರು. ಆದರೆ ಈಗ ಅನಿವಾರ್ಯವಾಗಿ ಸಿಎಂ ಸಿದ್ದರಾಮಯ್ಯ ಜೊತೆ ಸಂಧಾನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

    ಮಂಡ್ಯ ಅಖಾಡದಲ್ಲಿ ಹಿಂದುಳಿದ ದಲಿತ ಹಾಗೂ ಅಲ್ಪ ಸಂಖ್ಯಾತ ಮತಗಳನ್ನ ಸೆಳೆಯಬೇಕಾದರೆ ಸಿದ್ದರಾಮಯ್ಯ ನೆರವು ಅನಿವಾರ್ಯ ಎಂದು ದೇವೇಗೌಡರ ಕುಟುಂಬಕ್ಕೆ ಅರ್ಥವಾಗಿದೆ. ಆದ್ದರಿಂದ ಶಾಸಕಿ ಅನಿತಾ ಕುಮಾರಸ್ವಾಮಿ ಸ್ವತ: ಅಖಾಡಕ್ಕೆ ಇಳಿದು ಮಗನ ಗೆಲುವಿಗೆ ಸಹಕರಿಸುವಂತೆ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದಾರೆ. ಜೊತೆಗೆ ಸೋಮವಾರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೂ ಮಂಡ್ಯಕ್ಕೆ ಬರುವಂತೆ ಅನಿತಾ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಕಾಂಗ್ರೆಸ್ ಮುಖಂಡರ ಒಳ ಏಟಿನ ಭಯದ ಬಗ್ಗೆಯು ಆತಂಕ ವ್ಯಕ್ತಪಡಿಸಿ ಅದನ್ನು ಸರಿ ಪಡಿಸುವಂತೆ ಮನವಿ ಮಾಡಿದ್ದಾರೆ. ಅನಿತಾ ಕುಮಾರಸ್ವಾಮಿ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಮೈತ್ರಿ ಸೂತ್ರ ಪಾಲನೆಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಹಾಸನ ಜಿಲ್ಲೆಯಲ್ಲಿ ದಶಕಗಳ ಕಾಲ ಕಾಂಗ್ರೆಸ್ ನಾಯಕರ ಮುಖವೆತ್ತಿ ನೋಡದ ರೇವಣ್ಣ ಸಿದ್ದರಾಮಯ್ಯ ಸಮ್ಮುಖದಲ್ಲಿ ರಾಜಿ ಸಂಧಾನದ ಮಾತನಾಡಿದ್ದು, ಮುಂದೆಯು ಜಿಲ್ಲೆಯಲ್ಲಿ ಕಾಂಗ್ರೆಸ್ ಜೊತೆ ಜೊತೆಗೆ ಹೋಗುವ ಮಾತನಾಡಿದ್ದಾರೆ.

    ಒಂದು ಕಾಲದಲ್ಲಿ ದೇವೇಗೌಡರನ್ನು ಎದುರು ಹಾಕಿಕೊಂಡ ಸಿದ್ದರಾಮಯ್ಯರ ರಾಜಕೀಯ ಭವಿಷ್ಯವೇ ಮುಗಿದು ಹೋಯ್ತು ಎನ್ನಲಾಗುತ್ತಿತ್ತು. ದೇವೇಗೌಡರಿಗೆ ಸೆಡ್ಡು ಹೊಡೆದು ಪಕ್ಷ ಬಿಟ್ಟ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿ 5 ವರ್ಷ ಕಾಲ ಮುಖ್ಯಮಂತ್ರಿಯು ಆಗಿದ್ದರು. ಮೈತ್ರಿಯ ಹೊರತಾಗಿಯು ಗೌಡರ ಕುಟುಂಬದೊಂದಿಗೆ ಒಂದು ಹಂತದ ಅಂತರ ಕಾಪಾಡಿಕೊಂಡಿದ್ದ ಸಿದ್ದರಾಮಯ್ಯಗೆ ಈಗ ಹೊಸ ಧರ್ಮ ಸಂಕಟ ಶುರುವಾಗಿದೆ.

    ಈಗ ಕಾಲ ಚಕ್ರ ತಿರುಗಿದೆ ಗೌಡರ ಕುಟುಂಬ ಸಿದ್ದರಾಮಯ್ಯ ಮನೆ ಬಾಗಿಲಿಗೆ ಬಂದು ನೆರವು ಕೇಳಿದೆ. ನೆರವು ನೀಡಬೇಕಾದ ಅನಿವಾರ್ಯತೆಗೆ ಸಿದ್ದರಾಮಯ್ಯ ಸಿಲುಕಿದ್ದಾರೆ.