Tag: Anirudh jatkar

  • ರಾಜಕೀಯ ಏನಾದ್ರೂ ಇರಲಿ, ಜಯನಗರಕ್ಕೆ ಅನುದಾನ ಕೊಡಿ – ಡಿಕೆಶಿಗೆ ಸೆಲೆಬ್ರಿಟಿಗಳ ಮನವಿ

    ರಾಜಕೀಯ ಏನಾದ್ರೂ ಇರಲಿ, ಜಯನಗರಕ್ಕೆ ಅನುದಾನ ಕೊಡಿ – ಡಿಕೆಶಿಗೆ ಸೆಲೆಬ್ರಿಟಿಗಳ ಮನವಿ

    ಬೆಂಗಳೂರು: ಜಯನಗರಕ್ಕೆ ಅನುದಾನ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಅಲ್ಲಿ ವಾಸವಿರುವ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಅನುದಾನ ನೀಡುವಂತೆ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಅವರಿಗೆ ಮನವಿ ಮಾಡಿದ್ದಾರೆ.

    ಸಹೋದರ ಡಿಕೆ ಶಿವಕುಮಾರ್ ಅವರೇ ದಯಮಾಡಿ ಅನುದಾನ ಕೊಡಿ. ರಾಮಮೂರ್ತಿ ಅವರು ಹೊಸದಾಗಿ ಶಾಸಕರಾಗಿದ್ದಾರೆ. ಕೆಲಸ ಮಾಡೋ ಉತ್ಸಾಹ ಇದೆ ಅನುದಾನ ಕೊಡಿ ಅಂತ ನಟಿ ತಾರಾ (Tara Anuradha) ಮನವಿ ಮಾಡಿದ್ದಾರೆ. ನಟ ಅನಿರುದ್ಧ ಕೂಡ ಜಯನಗರ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಇದೆ, ಅನುದಾನ ಕೊಡಿ ಅಭಿವೃದ್ಧಿ ಕಾರ್ಯಗಳ ಆಗಲಿ ಎಂದು ಕೋರಿದ್ದಾರೆ.

    ಇನ್ನೂ ನಟ ಅನಿರುದ್ಧ (Anirudh Jatkar) ಮಾತನಾಡಿ, ರಾಜಕೀಯ ಏನೇ ಇರಲಿ ಅನುದಾನ ಕೊಟ್ರೆ ಅಭಿವೃದ್ಧಿ ಕಾರ್ಯಗಳು ಆಗ್ತವೆ. ಮಳೆಯಿಂದಾಗಿ ರಸ್ತೆ ಗುಂಡಿಗಳು ಜಾಸ್ತಿ ಆಗ್ತಿವೆ. ಶಾಸಕ ರಾಮಮೂರ್ತಿ ಅವರನ್ನ ಕೇಳಿದ್ರೆ ಸರ್ಕಾರದಿಂದ ಅನುದಾನ ಬಂದಿಲ್ಲ ಅಂತಾರೆ ಎಂದು ಬೇಸರ ಹೊರಹಾಕಿದ್ದಾರೆ.

    ಜಯನಗರದಲ್ಲಿ ಸಮಸ್ಯೆ ಇದೆ. ಅಭಿವೃದ್ಧಿ ವಿಚಾರದಲ್ಲಿ ಸಮಸ್ಯೆ ಇದೆ. ರಸ್ತೆಗಳು ಸರಿ ಇಲ್ಲ, ಗುಂಡಿ ಬಿದ್ದಿವೆ. ಹಂಪ್‌ಗಳು ಇಲ್ಲ, ವೈಜ್ಞಾನಿಕವಾಗಿ ಸಮಸ್ಯೆ ಇದೆ. ಶಾಸಕರನ್ನ ಕೇಳಿದ್ರೆ ಸರ್ಕಾರದಿಂದ ಅನುದಾನ ಬಂದಿಲ್ಲ ಅಂತಾರೆ. ಏನಾದ್ರು ಮನಸ್ತಾಪ ಇದ್ರೆ, ಬಗೆಹರಿಸಿಕೊಳ್ಳಿ ಅಭಿವೃದ್ಧಿ ವಿಚಾರದಲ್ಲಿ ಎಲ್ಲರಿಗೂ ಸಮನಾದ ಹಕ್ಕು ಇದೆ. ಆಗಾಗಿ ಅನುದಾನ ಕೊಡಿ ಎಂದು ಮನವಿ ಮಾಡಿದಾರೆ.

    ಡಿಕೆಶಿ ಸಮರ್ಥನೆ ಏನು?
    ಇತ್ತೀಚೆಗೆ ಜಯನಗರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡದ ವಿಚಾರವನ್ನ ಡಿಸಿಎಂ ಡಿಕೆಶಿವಕುಮಾರ್ ಮತ್ತೆ ಸಮರ್ಥನೆ ಮಾಡಿಕೊಂಡಿದ್ದರು. ಬಿಜೆಪಿ ಅವರು ವಿರೋಧ ಮಾಡಲಿ. ಮಾಡಲಿ ಅಂತಾನೇ ಸುಮ್ಮನೆ ಇರೋದು. ನಾನು ಎಲ್ಲರಿಗೂ ಅನುದಾನ ಕೊಟ್ಡಿದ್ದೇನೆ. ಡಿಸಿಎಂ ನಿಧಿಯ ಹಣ ಕೊಟ್ಟಿರೋದು. ಸಮಸ್ಯೆ ಇದೆ ಅಂತ 10 ಕೋಟಿ ಎಮರ್ಜೆನ್ಸಿ ಅಂತ ರಿಲೀಸ್ ಮಾಡಿದ್ದೇನೆ. ಜಯನಗರ ಬಹಳ ಚಿಕ್ಕ ಕ್ಷೇತ್ರ. ಅಲ್ಲಿ ದೊಡ್ಡ ಸಮಸ್ಯೆ ಇಲ್ಲ. ಆದರೂ ನನಗೆ ಅನುದಾನ ಕೊಡಬೇಕು ಅಂತ ಅರಿವಿದೆ.‌ ಆದರೆ ಅವರು ಬಹಳ ದೊಡ್ಡ ಆರೋಪಗಳನ್ನ ಮಾಡಿದ್ರು. ಸ್ವಲ್ಪ ಆರೋಪಗಳನ್ನ ನೋಡಬೇಕು. ಜಾಸ್ತಿ ಬೇಕೋ, ಕಡಿಮೆ ಬೇಕೋ ಅಂತ ನೋಡಬೋಕಲ್ಲವಾ? ಅಂತ ಹೇಳಿದ್ದರು.

    ಈಗಾಗಲೇ ಜಯನಗರಕ್ಕೆ 40 ಕೋಟಿ ಕೊಟ್ಟಿದ್ದೇವೆ. ಎಲ್ಲಾ ಕ್ಷೇತ್ರಕ್ಕೆ 600 ಕೋಟಿ ರೂ. ಪ್ರಾಜೆಕ್ಟ್ ಕೊಡ್ತಿದ್ದೇವೆ. ಆ ಕ್ಷೇತ್ರ ಒಂದಕ್ಕೆ 40 ಕೋಟಿ ಸೇರಿದೆ. ಆದರೆ ರಾಮಲಿಂಗಾರೆಡ್ಡಿ ಕ್ಷೇತ್ರಕ್ಕೆ ಇಲ್ಲವೇ ಇಲ್ಲ. ಕಣ್ಣಲ್ಲಿ ಬಂದು ನೋಡಬೇಕು ಅಂತ ಶಾಸಕರು ಕೇಳಿದ್ದಾರೆ. ಕ್ಷೇತ್ರಕ್ಕೆ ಹೋಗಿ ನೋಡ್ತೀನಿ. ಟೀಕೆ ಮಾಡೋರು ಮಾಡಲಿ. ಟೀಕೆ ಮಾಡೋರನ್ನ ಬೇಡ ಅನ್ನೋಕೆ ಆಗೊಲ್ಲ. ಮೊಟ್ಟೆಯಾದ್ರು ಹೊಡೆಯಲಿ, ಕಲ್ಲಾದ್ರು ಹೊಡೆಯಲಿ, ಕಪ್ಪು ಬಾವುಟವಾದ್ರು ತೋರಿಸಲಿ ಅಂತ ತಮ್ಮ ನಡೆ ಸಮರ್ಥನೆ ಮಾಡಿಕೊಂಡಿದ್ದರು.

  • ಪ್ರಧಾನಿ ಮೋದಿಗೆ ಪತ್ರ ಬರೆದ ಅನಿರುದ್ಧ್

    ಪ್ರಧಾನಿ ಮೋದಿಗೆ ಪತ್ರ ಬರೆದ ಅನಿರುದ್ಧ್

    ಬೆಂಗಳೂರು: ನಟ ಅನಿರುದ್ಧ್ ಈವೆರೆಗೆ ಎಲೆ ಮರೆಯ ಕಾಯಿಯಂತೆ ಇದ್ದರು. ಬೆಳ್ಳಿ ತೆರೆ ಮೇಲೆ ಮಿಂಚಲು ಅವರಿಗೆ ಅಷ್ಟೇನು ಅವಕಾಶಗಳು ಒಲಿದಿರಲಿಲ್ಲ. ಆದರೆ ಕಿರುತೆರೆಯ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕರ್ನಾಟಕದ ಮನೆ ಮಾತಾಗಿದ್ದಾರೆ. ಇದೀಗ ಅವರಿಗಾಗಿಯೇ ಫ್ಯಾನ್ ಕ್ಲಬ್ ಕೂಡ ಕ್ರಿಯೇಟ್ ಆಗಿದೆ. ಇದೆಲ್ಲದರ ಮಧ್ಯೆ ಅನಿರುದ್ಧ್ ಅವರು ಆಗಾಗ ಬರೆಯುವುದನ್ನೂ ರೂಢಿಸಿಕೊಂಡಿದ್ದಾರೆ, ಹಾಗೇ ಸಾಮಾಜಿಕ ಕಾರ್ಯಗಳಲ್ಲೂ ಭಾಗವಹಿಸುತ್ತಾರೆ. ಅದರ ಭಾಗವಾಗಿ ಇದೀಗ ಅವರು ಪ್ರಧಾನಿ ಮೋದಿಗೆ ಇ-ಮೇಲ್ ಮಾಡುವ ಮೂಲಕ ಒಂದು ಮನವಿ ಮಾಡಿದ್ದಾರೆ.

    ಹೌದು, 94 ವರ್ಷದ ನಿವೃತ್ತ ಯೋಧನಿಗೆ ಮನೆ ಇಲ್ಲ ಎನ್ನುವುದನ್ನು ಮನಗಂಡ ಅನಿರುದ್ಧ್, ಈ ಕುರಿತು ಲೇಖನ ಬರೆದಿದ್ದರು. ಮಾತ್ರವಲ್ಲದೆ ಈ ಕುರಿತು ಗಮನ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೆ ಇ-ಮೇಲ್ ಮಾಡಿದ್ದಾರೆ. ಈ ಮೂಲಕ ನಿವೃತ್ತ ಯೋಧನ ಕಷ್ಟಕ್ಕೆ ಮಿಡಿದಿದ್ದಾರೆ.

    https://www.instagram.com/p/B9YceghHFjX/

    ನಟ ಅನಿರುದ್ಧ್ ಅವರು ಮೇಲ್ ಮಾಡಿರುವ ಪ್ರತಿಯನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ಪ್ರಧಾನ ಮಂತ್ರಿ ಅವರಿಗೆ ಮೇಲ್ ಮಾಡಿದ್ದೇನೆ. ಕಾರ್ಯನಿರ್ವಹಣೆ ಆಗುತ್ತೆ ಎನ್ನುವ ಆಶಯ’ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಗ್ರೇಟ್ ದಾದಾ ತುಂಬಾ ಹೆಮ್ಮೆಯೆನಿಸುತ್ತೆ. ಭಾರತ ಹಾಗೂ ಸೈನ್ಯದ ಮೇಲಿರುವ ನಿಮ್ಮ ಅಭಿಮಾನಕ್ಕೆ ನಮ್ಮ ಕೋಟಿ ಕೋಟಿ ನಮನಗಳು’ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.

    ಮತ್ತೊಬ್ಬ ಅಭಿಮಾನಿ ಕಮೆಂಟ್ ಮಾಡಿ, ಸರ್ ರಿಪ್ಲೈ ಮಾಡ್ತಾರೆ…ಗ್ರೇಟ್ ವರ್ಕ್ ದಾದಾ, ನಿಮ್ಮ ಒಳ್ಳೆಯ ಕಾರ್ಯಗಳನ್ನು ಹೀಗೆ ಮುಂದುವರಿಸಿ. ನಾನು ನಿಮ್ಮ ದೊಡ್ಡ ಅಭಿಮಾನಿ, ಹಾಗೇ ಜೊತೆ ಜೊತೆಯಲಿ ಧಾರಾವಾಹಿಯನ್ನು ಸಹ ತಪ್ಪದೆ ನೋಡುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಹಲವರು ಹಲವು ರೀತಿಯ ಕಮೆಂಟ್ ಮಾಡುವ ಮೂಲಕ ತಮ್ಮ ಅನಿಸಿಕೆ ತಿಳಿಸಿದ್ದಾರೆ.

    ಅಂದಹಾಗೆ ಅನಿರುದ್ಧ್ ಅವರು ಯಾರಿಗಾಗಿ ಮೇಲ್ ಮಾಡಿದ್ದಾರೆ ಎಂಬುದನ್ನು ಕೇಳಿದರೆ ಖಂಡಿತ ನೀವು ಒಂದು ಕ್ಷಣ ಆಶ್ಚರ್ಯಕ್ಕೊಳಗಾಗುತ್ತೀರಿ. ಹೌದು ಅವರು ಬರೆದಿರುವುದು ಬೇರೆ ಯಾರಿಗಾಗಿಯೂ ಅಲ್ಲ ನೇತಾಜಿ ಸುಭಾಶ್ ಚಂದ್ರ ಭೋಸ್ 1943ರಲ್ಲಿ ಸ್ಥಾಪಿಸಿದ್ದ ಆಝಾದ್ ಹಿಂದ್ ಫೌಜ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದ 94 ವರ್ಷದ ನಿವೃತ್ತ ಸೈನಿಕ ಸಿ.ಎಂ.ಪಾಂಡಿಯಾರಾಜ್ ಅವರ ಬಗ್ಗೆ.

    ಸ್ವಾತಂತ್ರ್ಯಕ್ಕಾಗಿ ಸುಭಾಶ್ ಚಂದ್ರ ಭೋಸ್ ಅವರು ಕಟ್ಟಿದ ಸೇನೆಯಲ್ಲಿ ಭಾಗವಹಿಸಿ, ಹೋರಾಡಿದ ನಿವೃತ್ತ ಸೈನಿಕ ಪಾಂಡಿಯಾ ಅವರದ್ದು ಮನ ಕಲುಕುವ ಕಥೆ. ಅವರಿಗೆ 94 ವರ್ಷಗಳಾದರೂ ವಾಸಿಸಲು ಒಂದು ಮನೆ ಇಲ್ಲ. ಈಗಲೂ ಅವರು ತಮಿಳುನಾಡಿನ ರಾಮನಾಥಪುರಂನಲ್ಲಿ ಪುಟ್ಟ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ಈ ಕುರಿತು ತಿಳಿದ ಅನಿರುದ್ಧ್ ಅವರು ಅವರಿಗೆ ಸೂರು ಕಲ್ಪಿಸುವಂತೆ ಪ್ರಧಾನಿ ಮೋದಿಗೆ ಇ-ಮೇಲ್ ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಲಿದೆಯೇ ಕಾದು ನೋಡಬೇಕಿದೆ.