ಕಾರವಾರ: ಮನೆಯೊಂದಕ್ಕೆ ಚಿರತೆ ನುಗ್ಗಿ ಕಿತಾಪತಿ ಮಾಡಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿರತೆಗಳಿಗೇನೂ ಕಮ್ಮಿ ಇಲ್ಲ. ಆಹಾರದ ಕೊರತೆಯಿಂದ ಚಿರತೆಗಳು ನಾಡಿಗೆ ನುಗ್ಗುವುದು ಸಾಮಾನ್ಯವಾಗಿದೆ. ಹೀಗಾಗಿ ರಾತ್ರಿ ವೇಳೆ ಚಿರತೆಗಳು ಊರಿನತ್ತ ಮುಖ ಮಾಡುತ್ತಿವೆ. ಆಹಾರ ಅರಸಿ ಕಾಡಿನಿಂದ ಅಂಕೋಲ ತಾಲೂಕಿನ ಕೊಂಡಳ್ಳಿ ಗ್ರಾಮದ ರಮಾನಂದ ಎಂಬವರ ಮನೆಗೆ ಇಂದು ಬೆಳಗಿನ ಜಾವ ನುಗ್ಗಿದ್ದ ಚಿರಿತೆ ಮನೆಯ ಬಳಿ ಇದ್ದ ನಾಯಿ ಹಿಡಿಯುವ ಪ್ರಯತ್ನ ಮಾಡಿದೆ.
ಆದರೆ ನಾಯಿ ಚಿರತೆ ಬಾಯಿಯಿಂದ ತಪ್ಪಿಸಿಕೊಂಡು ಓಡಿಹೋಗಿದೆ. ಇನ್ನೇನು ಆಹಾರ ಮಿಸ್ ಆಯ್ತು ಅನ್ನುವಷ್ಟರಲ್ಲಿ, ಮನೆಯಲ್ಲಿ ಕೋಳಿಗಳಿದ್ದ ಗೂಡು ಕಾಣಿಸಿದ್ದು ಗೂಡಿನ ಒಳಕ್ಕೆ ಬಾಯಿ ಹಾಕಿ ಕೋಳಿ ಹಿಡಿದು ಚಿರತೆ ಕಾಡಿಗೆ ಮರಳಿದೆ.
ಇತ್ತ ಮನೆಯವರು ಬೆಳಗ್ಗೆ ಗೂಡಿನಲ್ಲಿ ಕೋಳಿ ಇಲ್ಲದ್ದನ್ನು ಗಮನಿಸಿ ಯಾರೋ ಕಳ್ಳರು ಕದ್ದು ಹೋಗಿರಬೇಕು ಎಂದು ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಗಮನಿಸಿದ್ದಾರೆ. ಆಗ ಕೋಳಿ ಕಳ್ಳತನ ಮಾಡಿದ್ದು ಯಾರು ಎಂದು ನೋಡಿ ಹೌಹಾರಿದ್ದಾರೆ. ಸಿ.ಸಿ ಟಿವಿಯಲ್ಲಿ ಸೆರೆಯಾದ ಈ ವೀಡಿಯೋ ಊರಿನ ಜನರಲ್ಲಿ ಭಯ ಮೂಡಿಸಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಂಬೈ: ಮೂರು ತಿಂಗಳ ನಾಯಿಮರಿಯ ರುಂಡವನ್ನು ಕತ್ತರಿಸಿ ಅಮಾನುಷವಾಗಿ ಹತ್ಯೆ ಮಾಡಿ ಹೋದ ಅಪರಿಚಿತರ ವಿರುದ್ಧ ಪ್ರಾಣಿ ದಯಾ ಸಂಘ ನೀಡಿದ ದೂರಿನ ಮೇರೆಗೆ ಮುಂಬೈ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಮುಂಬೈನ ಆನಂದ್‍ನಗರದ ದಹಿಸರ್ ಎಂಬ ಪ್ರದೇಶದಲ್ಲಿರುವ ಜಾರಿಮರಿ ಉದ್ಯಾನವನದಲ್ಲಿ ಘಟನೆ ನಡೆದಿದೆ. ನಾಯಿ ಮರಿಯ ಶಿರಚ್ಛೇದ ಮಾಡಿರುವುದನ್ನು ಗಮನಿಸಿರುವ ಸ್ಥಳೀಯ ವ್ಯಕ್ತಿ ತಿಳಿಸಿದ ಮಾಹಿತಿಯನ್ನಾಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ನಾಯಿ ಮರಿಯ ದೇಹವನ್ನು ವಶಪಡಿಸಿಕೊಂಡಿದ್ದಾರೆ.
ಮುಂಬೈ ಅನಿಮಲ್ ಅಸೋಸಿಯೇಶನ್ (ಎಂಎಎ) ಬೆಂಬಲದೊಂದಿಗೆ ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಮುಂಬೈನ ದಹಿಸರ್ ಪೊಲೀಸರಿಗೆ ದೂರು ನೀಡಿದ್ದರು. ಇದರ ಕುರಿತು ಮಾತಾನಾಡಿದ ಎಂಎಎನ ಸದಸ್ಯ ಸೌರಭ್ ಸ್ಥಳೀಯರಾದ ಪ್ರಿಯಾ ಸಮಾಜ ಕಲ್ಯಾಣ ಹಾಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಗಾರ್ಡನ್ ಆನಂದ್ ನಗರ ದಹಿಸಾರ್ ಬಳಿ ಸತ್ತ ನಾಯಿ ಮರಿಯ ತಲೆಯ ಭಾಗವನ್ನು ಗಮನಿಸಿ ಮಾಹಿತಿ ನೀಡಿದ್ದಾರೆ. ಈ ಕೃತ್ಯಕ್ಕೆ ಚಾಕು ಬಳಸಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ನಾಯಿ ಮರಿಯ ರುಂಡವನ್ನು ಅಮಾನುಷವಾಗಿ ಕತ್ತರಿಸಿರುವುದನ್ನು ಕಂಡು ನೋವಾಗಿದೆ. ನಾವು ಸ್ಥಳೀಯ ಪ್ರಾಣಿಗಳನ್ನು ತುಂಬಾ ಪ್ರೀತಿಯಿಂದ ಆಹಾರವನ್ನು ನೀಡಿ ಬೆಳೆಸಿದ್ದೇವೆ ಇದೀಗ ಈ ಘಟನೆಯಿಂದ ನಮಗೆ ಬೇಸರ ತರಿಸಿದೆ ಎಂದು ಪ್ರಾಣಿ ದಯಾ ಸಂಘದ ಪ್ರಿಯಾ ಅಭಿಪ್ರಾಯಪಟ್ಟರು.
ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಪ್ರಾಣಿ ಕೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ.
ನಟಿ ಹಾಗೂ ಪ್ರಾಣಿಪ್ರಿಯೆ ಸಂಯುಕ್ತಾ ಹೊರನಾಡು ಲಾಕ್‍ಡೌನ್ ಅವಧಿಯಲ್ಲಿ ಕಳೆದ ಸಮಯ ಹಾಗೂ ಸುನಾಮಿ ಹಾಡಿನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
• ಹೇಗಿದ್ದೀರಾ? ಲಾಕ್‍ಡೌನ್ ಅವಧಿಯಲ್ಲಿ ತುಂಬಾ ಬ್ಯುಸಿಯಾಗಿದ್ರಿ ನೀವು?
ನಾನು ಚೆನ್ನಾಗಿದ್ದೀನಿ. ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚಾಗಿ ಸಾಮಾಜಿಕ ಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಜೊತೆಗೆ ಸರ್ಕಾರದ ಕಾರ್ಯಕ್ರಮಗಳಲ್ಲಿ ಕೈ ಜೋಡಿಸಿದ್ದರಿಂದ ಆ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ. ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆ.
• ಸುನಾಮಿ ವಿಡಿಯೋ ಸಾಂಗ್ ತುಂಬಾ ವೈರಲ್ ಆಗಿದೆ. ಎಲ್ಲರೂ ಇಷ್ಟಪಡುತ್ತಿದ್ದಾರೆ?
ಹೌದು, ಈ ಹಾಡಿಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಕ್ತಿದೆ. ಇದನ್ನು ಮಾಡಿರೋ ಉದ್ದೇಶ ಬೀದಿನಾಯಿಗಳ ಬಗ್ಗೆ ಜಾಗೃತಿ ಮೂಡಿಸಲು. ಬೀದಿನಾಯಿಗಳನ್ನ ಅಡಾಪ್ಟ್ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ. ಇದರ ಕ್ರೆಡಿಟ್ ರಘು ದೀಕ್ಷಿತ್ ಅವರಿಗೆ ಸೇರಬೇಕು. ಅವರೇ ಈ ಹಾಡನ್ನು ಬರೆದು, ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಡ್ಯುಯೇಟ್ ಕಾನ್ಸೆಪ್ಟ್ ನಲ್ಲಿ ಪ್ರಾಣಿಗಳ ಮೇಲಿನ ಪ್ರೀತಿಯನ್ನು ತೋರಿಸೋ ಒಂದು ಹೊಸ ಪ್ರಯತ್ನ. ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಇದನ್ನು ಮೆಚ್ಚಿಕೊಂಡಿದ್ದಾರೆ. ಇದರಲ್ಲಿ ನಾನು ಮೊದಲ ಬಾರಿ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದೀನಿ ಅದೊಂದು ಖುಷಿ ಇದೆ ನನಗೆ.
• ಲಾಕ್‍ಡೌನ್ ಸಮಯದಲ್ಲಿ ಬಿಡುವಿನ ವೇಳೆ ಹೊಸ ಹವ್ಯಾಸ ಏನಾದ್ರು ಬೆಳೆಸಿಕೊಂಡ್ರಾ?
ಹೌದು, ನಂಗೆ ನಿಜಕ್ಕೂ ಖುಷಿ ಆಗುತ್ತೆ ಇದನ್ನ ಹೇಳೋದಕ್ಕೆ. ನನಗೆ ಸಂಗೀತ ಕಲಿಬೇಕು ಅಂತ ಆಸಕ್ತಿ ಇತ್ತು. ರಂಗಭೂಮಿ ಕಲಾವಿದರಿಗೆ ಹಾಡೋಕು ಬರಬೇಕು ತುಂಬಾ ಮುಖ್ಯ ಅದು. ನಾನು ರಂಗಭೂಮಿಯಲ್ಲಿ ನಾಟಕಕ್ಕೋಸ್ಕರ ಕಲಿತಿದ್ದೆ ಆದ್ರೆ ಅಷ್ಟಾಗಿ ಸಂಗೀತದ ಬಗ್ಗೆ ಗೊತ್ತಿರಲಿಲ್ಲ. ಚಿಕ್ಕಂದಿನಲ್ಲೂ ಅಭ್ಯಾಸ ಮಾಡಿರಲಿಲ್ಲ. ಲಾಕ್‍ಡೌನ್ ಅವಧಿಯಲ್ಲಿ ಆ ಆಸೆಯನ್ನು ಈಡೇರಿಸಿಕೊಂಡೆ. ಪೂರ್ಣ ಪ್ರಮಾಣದಲ್ಲಿ ಕಲಿತಿಲ್ಲವಾದ್ರು ಸಂಗೀತದ ಬಗ್ಗೆ ಒಂದಿಷ್ಟು ಅರಿತುಕೊಂಡಿದ್ದೇನೆ, ಪ್ರತಿನಿತ್ಯ ಪ್ರಾಕ್ಟೀಸ್ ಕೂಡ ಮಾಡ್ತಿದ್ದೀನಿ. ಅದನ್ನು ಹೊರತು ಪಡಿಸಿ ಒಂದು ಡಾಕ್ಯುಮೆಂಟರಿ ಮಾಡ್ದೆ. ಬಿಡುವು ಸಿಕ್ಕಾಗ ಪೇಟಿಂಗ್ ಮಾಡ್ತಿದ್ದೆ.
• ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‍ನಲ್ಲಿ ಎಲ್ಲಿ ನೋಡಿದ್ರು ನಿಮಗಿಂತ ಪ್ರಾಣಿಗಳ ಫೋಟೋನೇ ಇರುತ್ತೆ?
ನಿಜ, ನಾನು ಪ್ರಾಣಿ ಪ್ರಿಯೆ. ಹಲವು ಸಂಸ್ಥೆಗಳ ಅಂಬಾಸಿಡರ್ ಕೂಡ ಹೌದು, ಹಲವಾರು ರೆಸ್ಕ್ಯೂ ಸಂಸ್ಥೆಗಳ ಜೊತೆ ಕೈ ಜೋಡಿಸಿದ್ದೇನೆ. ಸೋಶಿಯಲ್ ಮೀಡಿಯಾವನ್ನು ನಮಗೋಸ್ಕರ ಬಳಸಿಕೊಳ್ಳೋದ್ರ ಜೊತೆಗೆ ಜಾಗೃತಿ ಮೂಡಿಸಲು ಬಳಸೋದು ಒಳ್ಳೆಯದು ಅನ್ನೋದು ನನ್ನ ಅನಿಸಿಕೆ. ಅದಕ್ಕಾಗಿ ನಾನು ಹೆಚ್ಚಾಗಿ ಪ್ರಾಣಿಗಳ ಪೋಟೋ ಪೋಸ್ಟ್ ಮಾಡುತ್ತೇನೆ. ಅದನ್ನು ನೋಡಿದವ್ರಲ್ಲಿ ಒಬ್ಬರಾದ್ರು ಪ್ರಾಣಿಗಳನ್ನು ಅಡಾಪ್ಟ್ ಮಾಡಿಕೊಳ್ಳಲೋ ಅಥವಾ ಅವುಗಳ ಸಹಾಯಕ್ಕೆ ಕೈ ಚಾಚಿದ್ರೆ ಸಹಾಯವಾಗುತ್ತೆ ಅನ್ನೋದು ನನ್ನ ಉದ್ದೇಶ.
• ನಿಮ್ಮ ಪ್ರಾಣಿ ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತಿದೆ ಆದರೂ ಒಂದು ಕುತೂಹಲ ಇದೆ, ಪ್ರಾಣಿಗಳನ್ನು ಕಂಡರೆ ಯಾಕಿಷ್ಟು ಪ್ರೀತಿ?
ಚಿಕ್ಕವಯಸ್ಸಿನಿಂದಲೂ ಪ್ರಾಣಿಗಳು ಅಂದ್ರೆ ಪಂಚಪ್ರಾಣ. ನಾನು ಚಿಕ್ಕವಳಿದ್ದಾಗ ನಮ್ಮ ಮನೆ ಮುಂದೆ ಮೋರಿಲಿ ಒಂದು ನಾಯಿ ಇತ್ತು. ಅದರ ಜೊತೆ ನಾನು ಕಾಲ ಕಳೆಯುತ್ತಿದ್ದೆ, ಅದಕ್ಕೆ ತಿನ್ನೋಕೆ ಕೊಡ್ತಾ ಇದ್ದೆ. ಅಲ್ಲಿಂದ ಶುರುವಾದ ಪ್ರೀತಿ ಇವತ್ತು ಬೀದಿನಾಯಿಗಳ ಬಗ್ಗೆ ಕಾಳಜಿ ಹಾಗೂ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸೋವರೆಗೆ ಬಂದಿದೆ. ಪ್ರಾಣಿಗಳಿಗೆ ನೀವು ಪ್ರೀತಿ ತೋರಿಸಿದ್ರೆ ಅವು ನಿಮಗೆ ಪ್ರೀತಿ ತೋರಿಸುತ್ತೆ. ಅವುಗಳು ತೋರಿಸೋ ಪ್ರೀತಿಯಲ್ಲಿ ಸ್ವಾರ್ಥ ಇರೋದಿಲ್ಲ ನಿಷ್ಕಲ್ಮಶ ಪ್ರೀತಿ ಅವುಗಳದ್ದು. ನಾನು ಯಾವ ಪ್ರಾಣಿನಾದ್ರು ಮುಟ್ಟೋಕೆ ರೆಡಿಯಿದ್ದೀನಿ. ಆ ಪ್ರಾಣಿ ಕಂಡ್ರೆ ಭಯ ಈ ಪ್ರಾಣಿ ಕಂಡ್ರೆ ಭಯ ಆ ರೀತಿ ಏನು ಇಲ್ಲ. ನನ್ನ ಪ್ರಕಾರ ಎಲ್ಲ ಪ್ರಾಣಿಗಳು ಒಂದೇ. ನೀವು ಎಷ್ಟು ಪ್ರೀತಿ, ರಕ್ಷಣೆ ಕೊಡ್ತೀರೋ ಅವು ನಮ್ಮನ್ನು ಅಷ್ಟೇ ಪ್ರೀತಿ ಮಾಡುತ್ತವೆ.ನಾನು ಅವುಗಳಲ್ಲಿ ದೇವರನ್ನು ಕಾಣುತ್ತೇನೆ. ನಿಜವಾಗ್ಲೂ ಹೇಳಬೇಕು ಅಂದ್ರೆ ನನಗೆ ಭಯ ಆಗೋದೇ ಮನುಷ್ಯರನ್ನ ಕಂಡ್ರೆ.
• ಲಾಕ್‍ಡೌನ್ ಅವಧಿಯಲ್ಲಿ ನಿಮ್ಮ ಕೆಲಸ ಶ್ಲಾಘನೀಯ. ಸಾವಿರಾರು ಬೀದಿನಾಯಿಗಳಿಗೆ ಆಹಾರ ನೀಡ್ತಿದ್ರಿ, ಜಾಗೃತಿ ಮೂಡಿಸಿದ್ರಿ. ನಿಮ್ಮ ಕೆಲಸ ಮೆಚ್ಚುಗೆ ಪಡೆದುಕೊಂಡಿತ್ತು.
ಹೌದು, ಲಾಕ್‍ಡೌನ್ ನಿಂದ ಸಾವಿರಾರು ಜನರ ಬದುಕು ಬೀದಿಗೆ ಬಂತು. ಮನುಷ್ಯರಿಗೇ ಊಟ ಸಿಗ್ತಾ ಇರ್ಲಿಲ್ಲ ಇನ್ನು ಬೀದಿ ನಾಯಿಗಳ ಪಾಡೇನು ಅಲ್ವಾ!? ಅವುಗಳ ಕಷ್ಟ ನೋಡೋಕಾಗದೇ ಬೀದಿ ನಾಯಿಗಳಿಗೆ ಊಟ ನೀಡಲು ಶುರು ಮಾಡಿದೆ. ಇದೆಲ್ಲದರ ಜೊತೆಗೆ ನಾಯಿಗಳಿಂದ ಕೊರೊನಾ ಹರಡುತ್ತೆ ಎಂದು ಸುಳ್ಳು ಸುದ್ಧಿ ಹರಡಿ ಬೆಂಗಳೂರಲ್ಲಿ ಎಷ್ಟೋ ಜನ ತಮ್ಮ ನಾಯಿಗಳನ್ನ ಬೀದಿ ಪಾಲು ಮಾಡಿದ್ರು. ಇದು ನನಗೆ ತುಂಬಾ ನೋವು ಕೊಡ್ತು. ಇದಕ್ಕೆಲ್ಲ ಏನಾದ್ರು ಮಾಡಲೇಬೇಕು ಎಂದು ‘ಕೇರ್’ ಎಂಬ ಸಂಸ್ಥೆ ಜೊತೆ ಸೇರಿ ಜಾಗೃತಿ ಮೂಡಿಸಲು ಆರಂಭಿಸಿದೆ. ಸಾವಿರಾರು ನಾಯಿಗಳು ಇದ್ವು ನನ್ನೊಬ್ಬಳಿಂದ ಇವುಗಳಿಗೆ ಆಹಾರ ಪೂರೈಕೆ ಮಾಡೋಕೆ ಸಾದ್ಯವಿಲ್ಲ ಎಂದು ಗೊತ್ತಾದಾಗ ನಾನು ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದೆ ಜೊತೆಗೆ ಫಂಡ್ ರೈಸ್‍ಗೆ ಮುಂದಾದೆ. ನನ್ನ ಈ ಕೆಲಸಕ್ಕೆ ಉತ್ತಮ ಪ್ರತಿಕ್ರಿಯೇ ಸಿಕ್ತು. ಸುಮಾರು 150 ಜನರು ವಾಟ್ಸಾಪ್ ಗ್ರೂಪ್‍ನಲ್ಲಿ ಕೈ ಜೋಡಿಸಿದ್ರು. ಹಲವಾರು ಜನರು ಫಂಡ್ ನೀಡಲು ಮುಂದಾದ್ರು. ಇವರೆಲ್ಲರ ಸಹಕಾರದಿಂದ ಪ್ರತಿನಿತ್ಯ 4000 ಬೀದಿನಾಯಿಗಳಿಗೆ ಲಾಕ್‍ಡೌನ್ ಅವಧಿಯಲ್ಲಿ ಆಹಾರ ನೀಡಲು ಸಾಧ್ಯವಾಯ್ತು. ಅದನ್ನು ಅಲ್ಲಿಗೆ ಕೈ ಬಿಡಲಿಲ್ಲ, ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ.
• ನಿಮ್ಮ ಸೋಶೀಯಲ್ ಸರ್ವಿಸ್ ಹಾಗೂ ಪ್ರಾಣಿಗಳ ಮೇಲಿನ ಕಳಕಳಿಗೆ ತುಂಬಾ ಮೆಚ್ಚುಗೆ ಸಿಕ್ತಿದೆ ಎಷ್ಟೋ ಜನಕ್ಕೆ ನೀವು ಪ್ರೇರಣೆ ಕೂಡ ಆಗಿದ್ದೀರ?
ನನ್ನಿಂದ ನಾಲ್ಕು ಜನ ಬದಲಾಗ್ತಾರೆ ಅಂದ್ರೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ಎಲ್ಲರೂ ಮೆಚ್ಚುಗೆ, ಪ್ರೀತಿ ವ್ಯಕ್ತಪಡಿಸೋದ್ರಿಂದ ಇನ್ನೊಂದಿಷ್ಟು ಕೆಲಸ ಮಾಡಲು ಸಹಾಯ ಆಗುತ್ತೆ. ಇನ್ನು ಕೆಲವರು ಕೆಲವು ಕಾರ್ಯಕ್ರಮಗಳಿಗೆ ನನ್ನ ಜೊತೆ ಕೈ ಜೋಡಿಸುತ್ತಾರೆ. ನನ್ನ ಕೆಲಸ ನನಗೆ ತುಂಬಾ ತೃಪ್ತಿ ನೀಡಿದೆ. ನನ್ನ ಕೆಲಸ ನನಗೆ ಪ್ರೇರಣೆ ಮತ್ತು ಸ್ಪೂರ್ತಿ ನೀಡಿದೆ.
• ಹಲವಾರು ಸಂಘ, ಸಂಸ್ಥೆಗಳ ರಾಯಭಾರಿ ಕೂಡ ಆಗಿ ಕಾರ್ಯ ನಿರ್ವಹಿಸುತ್ತಿದ್ದೀರ ಎಷ್ಟು ಖುಷಿ ಅನಿಸುತ್ತೆ?
ನಾನು ಸಾಮಾಜಿಕ ಸೇವೆಯನ್ನ ನನ್ನ ಖುಷಿಗೆ ಮಾಡುತ್ತಿದ್ದೇನೆ. ನನ್ನ ಕೆಲಸವನ್ನು ಗುರುತಿಸಿ ದೊಡ್ಡ ಜವಾಬ್ದಾರಿಯನ್ನು ನನಗೆ ಹಲವು ಸಂಸ್ಥೆಗಳು ನೀಡಿರೋದು ಸಂತಸ ತಂದಿದೆ. ಪೀಪಲ್ ಫಾರ್ ಅನಿಮಲ್ ಫೌಡೇಷನ್ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಈ ಸಂಸ್ಥೆ ನಗರದಲ್ಲಿ ತೊಂದರೆಗೆ ಒಳಗಾಗೋ ಸಾವಿರಾರು ಪ್ರಾಣಿಗಳ ರಕ್ಷಣೆ ಮಾಡುತ್ತಾ ಬಂದಿದೆ. ಈ ಸಂಸ್ಥೆಯ ಬೆಂಗಳೂರು ರಾಯಭಾರಿಯಾಗಿ ನನನ್ನು ನೇಮಿಸಿದ್ದಾರೆ. ಇದಲ್ಲದೆ ಯುನೆಸೆಫ್‍ನವರ ಮೈನರ್ ಪ್ರಾಜೆಕ್ಟ್, ಚೈಲ್ಡ್ ವಯೋಲೆನ್ಸ್ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸೋ ಅವಕಾಶ ನನಗೆ ಸಿಕ್ಕಿದೆ. ಕೇರ್ ಎಂಬ ಸಂಸ್ಥೆ ಸಾವಿರಾರು ಬೀದಿನಾಯಿಗಳ ರಕ್ಷಣೆ ಮಾಡುತ್ತಿದೆ ಜೊತೆಗೆ ಅವುಗಳಿಗೆ ಆಹಾರ ಒದಗಿಸುತ್ತಿದೆ ಆ ಸಂಸ್ಥೆಯ ರಾಯಭಾರಿಯಾಗಿದ್ದೇನೆ. ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅರಿವು ಮೂಡಿಸಲು ವೇದಿಕೆ ಸಿಗುತ್ತಿರೋದು ತುಂಬಾ ಹೆಮ್ಮೆ ಇದೆ.
• ಏಳು ವರ್ಷದ ಸಿನಿಮಾ ಜರ್ನಿ ಎಷ್ಟು ಖುಷಿ ಕೊಟ್ಟಿದೆ?
ನಾನು ಚಿತ್ರರಂಗಕ್ಕೆ ಬಂದು ಏಳು ವರ್ಷ ಆಯ್ತು, ನಂಗೆ ಸಕ್ಸಸ್, ಸೋಲು ಇದ್ಯಾವುದರ ಯೋಚನೆ ಇಲ್ಲ. ಯಾವ ಪಾತ್ರ ಖುಷಿ ಕೊಡುತ್ತೋ, ಯಾವ ಸಬ್ಜೆಕ್ಟ್ ಖುಷಿ ಕೊಡುತ್ತೋ ಆ ಪಾತ್ರಗಳನ್ನ ಒಪ್ಪಿಕೊಳ್ತೀನಿ. ಚಿತ್ರರಂಗದಲ್ಲಿ ಎಲ್ಲರೂ ನನ್ನ ಪ್ರೀತಿಯಿಂದ ಕಾಣುತ್ತಾರೆ. ಬೇರೆ ಚಿತ್ರರಂಗದಲ್ಲೂ ಒಳ್ಳೆಯ ಸಿನಿಮಾಗಳು ಸಿಕ್ತಿವೆ. ಏಳು ವರ್ಷದ ಜರ್ನಿ ಖುಷಿ ಕೊಟ್ಟಿದೆ. ನಾನು ತುಂಬಾ ಖುಷಿಯಾಗಿದ್ದೇನೆ. ನನಗೆ ಯಾವುದೇ ರಿಗ್ರೇಟ್ ಇಲ್ಲ.
• ಹೊಸ ಸಿನಿಮಾಗಳಿಗೆ ಸಹಿ ಮಾಡಿದ್ರಾ?
ಹೊಸ ಪ್ರಾಜೆಕ್ಟ್ ಗಳು ಬರ್ತಿವೆ. ಸದ್ಯಕ್ಕೆ ಕನ್ನಡದಲ್ಲಿ ಹೊಂದಿಸಿ ಬರೆಯಿರಿ, ಅರಿಷಡ್ವರ್ಗ, ಮೈಸೂರು ಮಸಾಲ ಚಿತ್ರಗಳಿವೆ. ತೆಲುಗಿನಲ್ಲಿ ಲಾಕ್ಡ್, ಗಾಡ್ ಸೀಕ್ವೆಲ್ 2 ವೆಬ್ ಸಿರೀಸ್ ಶೂಟಿಂಗ್ ಬಾಕಿ ಇದೆ. ತಮಿಳಿನಲ್ಲಿ ರೆಡ್ ರ್ಯಾಂಮ್ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಹೊಸ ಪ್ರಾಜೆಕ್ಟ್ ಬರ್ತಾ ಇವೆ ಇಲ್ಲಿವರೆಗೆ ಯಾವುದೂ ಒಪ್ಪಿಕೊಂಡಿಲ್ಲ.
• ಟ್ರಾವೆಲ್ಲಿಂಗ್ ನಿಮಗೆ ತುಂಬಾ ಇಷ್ಟ ಅನ್ಸುತ್ತೆ?
ಹೌದು, ನಂಗೆ ಟ್ರಾವೆಲ್ ಮಾಡೋದು ಅಂದ್ರೆ ತುಂಬಾ ಇಷ್ಟ. ಫ್ರೆಂಡ್ಸ್ ಫ್ಯಾಮಿಲಿ ಜೊತೆ ಟ್ರಾವೆಲ್ ಮಾಡೋದು, ಹೊಸ ಊರು ನೋಡೋದು ತುಂಬಾ ಖುಷಿ ಕೊಡುತ್ತೆ ನನಗೆ. ಟ್ರಾವೆಲ್‍ನಿಂದ ಮನಸ್ಸಿಗೂ ನೆಮ್ಮದಿ ಸಿಗುತ್ತೆ ಹೊಸದನ್ನು ಕಲಿಯೋಕೆ, ತಿಳಿದುಕೊಳ್ಳೋಕೆ ಸಾಧ್ಯವಾಗುತ್ತೆ. ಲಾಕ್‍ಡೌನ್ ಟೈಂನಲ್ಲಿ ಟ್ರಾವೆಲ್ ಮಾಡೋಕೆ ಆಗಲಿಲ್ಲ ಅದೊಂದು ಬೇಸರ ಇದೆ.
• ನಿಮ್ಮ ಫೇವರೇಟ್ ಫುಡ್ ಯಾವುದು?
ನಾನು ಪ್ಯೂರ್ ವೆಜಿಟೇರಿಯನ್, ವೆಜ್‍ನಲ್ಲಿ ಎಲ್ಲ ಬಗೆಯೂ ಇಷ್ಟವಾಗುತ್ತೆ. ಫೇವರೇಟ್ ಅಂದ್ರೆದಹಿ ಪೂರಿ, ಆಂಬೊಡೆ, ಸಾಬುದಾನ ಕಿಚಡಿ, ಮೊಸರು ಅಂದ್ರೆ ತುಂಬಾ ಇಷ್ಟ. ನಾನು ಕಾಫಿ ಪ್ರಿಯೆ, ಏನ್ ಬೇಕಾದ್ರು ಬಿಟ್ಟು ಇರ್ತೀನಿ ಆದ್ರೆ ಕಾಫಿ ಕುಡಿಯದೇ ಇರೋಕೆ ಆಗೋದೇ ಇಲ್ಲ. ಕಾಫಿ ಬೇಕೇ ಬೇಕು.
ಶಿವಮೊಗ್ಗ: ಅರಣ್ಯ ಇಲಾಖೆಯ ಎಡವಟ್ಟಿನಿಂದ ವನ್ಯ ಜೀವಿಗಳ ಪ್ರಾಣಕ್ಕೆ ಸಂಚಕಾರ ಉಂಟಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಆಗುಂಬೆ ಸಮೀಪದ ಕಾರೀ ಕುಂಬ್ರಿ ಅರಣ್ಯದಲ್ಲಿ ಅರಣ್ಯ ಇಲಾಖೆ ಹೊಸದಾಗಿ ನೆಡುತೋಪು ನಿರ್ಮಿಸಿದ್ದು, ಇಲ್ಲಿ ಹಲವು ಜಾತಿಯ ವಿವಿಧ ಗಿಡಗಳನ್ನು ನೆಡಲಾಗಿದೆ. ಈ ಗಿಡಗಳನ್ನು ವನ್ಯಜೀವಿಗಳು ತಿನ್ನುತ್ತವೆ. ಇದರಿಂದ ಗಿಡಗಳು ಹಾಳಾಗಿ ಹೋಗುತ್ತವೆ ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಗಿಡಗಳ ಬುಡದಲ್ಲಿ ವಿಷಪೂರಿತ ಔಷಧಿಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ ಪ್ರತಿಯೊಂದು ಗಿಡಕ್ಕೂ ಕಟ್ಟಿದ್ದಾರೆ.
ಈ ಮೂಲಕ ವನ್ಯ ಜೀವಿಗಳ ಸಂರಕ್ಷಿಸಬೇಕಾದ ಅರಣ್ಯ ಇಲಾಖೆಯೇ ವನ್ಯಜೀವಿಗಳ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ಅಲ್ಲದೇ ಅರಣ್ಯ ಪ್ರದೇಶದಲ್ಲಿ ಮೇವು ಅರಸಿ ಹೋಗುವ ಜಾನುವಾರುಗಳಿಗೂ ಕುತ್ತು ಉಂಟಾಗಿದೆ. ಈ ವಿಷಪೂರಿತ ಔಷಧಿ ಸೇವನೆಯಿಂದ ಆಗುಂಬೆ ಸುತ್ತಮುತ್ತಲಿನ ಗ್ರಾಮದಲ್ಲಿ ಇಂದು ನಾಲ್ಕು ಹಸುಗಳು ಸಹ ಪ್ರಾಣ ಕಳೆದುಕೊಂಡಿವೆ.
ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಾನುವಾರುಗಳ ಸಾವಿಗೆ ಕಾರಣವಾಗಿರುವ ಅರಣ್ಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮಂಗಳೂರು: ಹೊರ ರಾಜ್ಯದಿಂದ ಬಂದವರಿಗೆ, ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕ ಇರುವವರಿಗೆ ಕ್ವಾರಂಟೈನ್ ಸಾಮಾನ್ಯ. ಆದರೆ ಮಂಗಳೂರಿನ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
ಪಿಲಿಕುಳ ಮೃಗಾಲಯದಲ್ಲಿ ಇರುವ ಪ್ರಾಣಿಗಳಿಗೆ ಕ್ವಾರಂಟೈನ್ ಇಲ್ಲ. ಬದಲಾಗಿ ದೇಶದ ಬೇರೆ ಬೇರೆ ರಾಜ್ಯಗಳಿಂದ ಕರೆ ತರುವ ಪ್ರಾಣಿಗಳಿಗೆ ಕ್ವಾರಂಟೈನ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಬೇರೆ ಮೃಗಾಲಯದಿಂದ ಕರೆ ತರುವ ಪ್ರಾಣಿ, ಪಕ್ಷಿ, ಹಾವುಗಳನ್ನು ನೇರವಾಗಿ ಪಿಲಿಕುಳದಲ್ಲಿ ಮೊದಲೇ ಇರುವ ಪ್ರಾಣಿ, ಪಕ್ಷಿ, ಹಾವುಗಳ ಜೊತೆಗೆ ಬಿಡದೆ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ತಜ್ಞರು ಆರೋಗ್ಯ ತಪಾಸಣೆ ನಡೆಸಿ, ಯಾವುದೇ ರೋಗದ ಲಕ್ಷಣ ಕಂಡು ಬಾರದಿದ್ದರೆ ಇತರ ಪ್ರಾಣಿಗಳ ಜೊತೆಗೆ ಬಿಡಲಾಗುತ್ತದೆ.
ಪ್ರಾಣಿಗಳ ಆರೋಗ್ಯ ದೃಷ್ಟಿಯಿಂದ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ ಹೊಸ ಕಟ್ಟಡ ನಿರ್ಮಾಣ ಆಗುತ್ತಿದೆ. ಇದು ಪೂರ್ಣವಾದ ಬಳಿಕ ಇತರ ಮೃಗಾಲಯದಿಂದ ತಂದ ಪ್ರಾಣಿಗಳನ್ನು ಕ್ವಾರಂಟೈನ್ ಮಾಡಲಾಗುತ್ತದೆ.
ಕಾರವಾರ: ದೇಶದೆಲ್ಲೆಡೆ ಲಾಕ್‍ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿಯೇ ಇದ್ದಾರೆ. ಆದರೆ ಪರಿಸರ ಹಾನಿಯಿಂದ ಎಲ್ಲೋ ಅಡಗಿ ಕುಳಿತಿದ್ದ ಪ್ರಾಣಿ, ಪಕ್ಷಿಗಳು ಮತ್ತು ಜಲಚರಗಳು ಈಗ ಹಾಯಾಗಿ ಎಲ್ಲೆಡೆ ಓಡಾಡುತ್ತಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಆನೆ, ಹಾವು, ಪಕ್ಷಿಗಳು, ಜಲಚರಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ ದೃಶ್ಯ ಕಂಡು ಬಂದಿದೆ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದಲ್ಲಿ ಮಂಜುನಾಥ್ ತ್ರ್ಯಂಬಕ ಹೆಗಡೆಯವರ ತೋಟದಲ್ಲಿ 11 ಅಡಿ ಉದ್ದದ ಕಾಳಿಂಗಸರ್ಪ ಕಾಣಿಸಿಕೊಂಡಿದೆ. ತಕ್ಷಣ ಶಿರಸಿಯ ಉರಗತಜ್ಞ ಮನು ಬಂದು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಹಿಡಿದು ಸಮೀಪದ ಕಾಡಿಗೆ ಬಿಟ್ಟಿದ್ದಾರೆ.
ಹಳಿಯಾಳ ಮತ್ತು ಯಲ್ಲಾಪುರ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಆನೆಗಳು ಸುತ್ತಾಡುವ ಮೂಲಕ ಜನರ ಕ್ಯಾಮರಾದಲ್ಲಿ ಸೆರೆಯಾಗಿದ್ದಾವೆ. ಇತ್ತ ಅಂಕೋಲದಲ್ಲಿ ನಗರಕ್ಕೆ ಬಾರದ ಕಾಡಿನಲ್ಲೇ ಹೆಚ್ಚು ಇರುವ ಹಾರ್ನ್ ಬಿಲ್ ಪಕ್ಷಿಗಳು ಸದ್ದಿಲ್ಲದ ನಗರ ಪ್ರವೇಶ ಮಾಡಿ ಮನೆಗಳ ಮೇಲೆ ವಿಹರಿಸುತ್ತಿವೆ.
ಅರಬ್ಬಿ ಸಮುದ್ರದಲ್ಲೂ ಕೂಡ ಮೀನುಗಾರಿಕೆ ಬಂದ್ ಆಗಿದ್ದರಿಂದ ಬೃಹದಾಕಾರದ ತಿಮಿಂಗಿಲಗಳು ಸ್ಪಚ್ಛಂದವಾಗಿ ವಿಹರಿಸುತ್ತಿವೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಕ್ಯಾಮರಾಕ್ಕೆ ತಿಮಿಂಗಿಲಗಳು ಸ್ಪಚ್ಛಂದವಾಗಿ ವಿಹರಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಬೆಂಗಳೂರು: ನಟ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಅಚ್ಚು ಮೆಚ್ಚು. ಇದೀಗ ಮತ್ತೆ ನಟ ದರ್ಶನ್ ತಮ್ಮ ಪ್ರಾಣಿಗಳ ಬಗ್ಗೆ ಕಾಳಜಿ ವಹಿಸುವುದನ್ನು ಮುಂದುವರಿಸಿದ್ದಾರೆ.
ನಟ ದರ್ಶನ್ ಅವರು ಈಗಾಗಲೇ ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳನ್ನ ದತ್ತು ಪಡೆದಿದ್ದಾರೆ. ಇಂದು ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು 2.95 ಲಕ್ಷ ರೂ. ಚೆಕ್ ನೀಡಿ 4 ಪ್ರಾಣಿಗಳ ದತ್ತು ನವೀಕರಣ ಮಾಡಿಕೊಂಡಿದ್ದಾರೆ.
ಒಂದು ಗಂಡು ಹುಲಿ, ಎರಡು ಅನಾಕೊಂಡ ಹಾಗೂ ಆನೆಯನ್ನ ದರ್ಶನ್ ಮತ್ತೆ ದತ್ತು ಪಡೆದಿದ್ದಾರೆ. ಈ ಮೂಲಕ ದರ್ಶನ್ ತಮ್ಮ ಪ್ರಾಣಿಗಳ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ತೋರಿಸಿದ್ದಾರೆ.
ಈಗಾಗಲೇ ದರ್ಶನ್ ಅವರು ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್‍ನಲ್ಲೂ ಕುದುರೆ, ಹಸು ಸೇರಿದಂತೆ ಅನೇಕ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ತಮ್ಮ ಸ್ನೇಹಿತ ನಟ ಸೃಜನ್ ಲೋಕೇಶ್ ಸೇರಿಕೊಂಡು ಒಂದು ಜಿಫಾರೆ ಮರಿಯನ್ನೂ ದರ್ಶನ್ ದತ್ತು ಪಡೆದುಕೊಂಡಿದ್ದಾರೆ.
ಉಡುಪಿ: ಆಕೆ ಸಕ್ರೆಬೈಲಿನ ಚೆಲುವೆ. ಕೃಷ್ಣನ ಸೇವೆಗೆ ಕಾಡು ಬಿಟ್ಟು ನಾಡಿಗೆ ಬಂದಾಕೆ. ಇಷ್ಟು ವರ್ಷ ಹಾಗೋ ಹೀಗೋ ಸ್ವಚ್ಛಂದವಾಗಿ ಆಕೆ ರಥಬೀದಿಯಲ್ಲಿ ಓಡಾಡಿಕೊಂಡಿದ್ಲು. ಆದ್ರೆ ಇಷ್ಟು ವರ್ಷ ಇಲ್ಲದ ಬರ ಕರಾವಳಿಗೆ ಅಪ್ಪಳಿಸಿದೆ. ನೀರಿಲ್ಲದೆ, ಸ್ನಾನವಿಲ್ಲದೆ ಬಸವಳಿದು ಬೆಂಡಾದ ಆಕೆಯ ಸಹಾಯಕ್ಕೆ ನಮ್ಮ ಪಬ್ಲಿಕ್ ಹೀರೋ ಟೊಂಕಕಟ್ಟಿ ನಿಂತಿದ್ದಾರೆ.
“ಅಬ್ಬಬ್ಬಾ ಸೆಕೆ.., ಉಫ್.. ನೆತ್ತಿ ಸುಡುವ ಬಿಸಿಲು ತಡ್ಕೊಳ್ಳೊಕಾಗಲ್ಲ. ನೀರು ಕೊಡಿ.. ಜೂಸ್ ಕೊಡಿ ಪ್ಲೀಸ್” ಕರಾವಳಿಯಲ್ಲಿ ಸುಡುವ ಸೂರ್ಯನ ಕೆಳಗೆ ಓಡಾಡೋ ಮಂದಿ ಆಡೋ ಮಾತುಗಳಿವು. ಉಡುಪಿಯ ಈ ಬಾರಿಯ ಬೇಸಿಗೆ ಇದ್ದ ಬದ್ದ ನದಿಗಳನ್ನೆಲ್ಲಾ ಒಣಗಿಸಿದೆ. ಜನಕ್ಕೆ ಕುಡಿಯಲು ನೀರಿಲ್ಲ. ಇನ್ನು ಪ್ರಾಣಿಗಳಿಗೆ ಸ್ನಾನಕ್ಕೆ ನೀರಿರುತ್ತಾ? ಉಡುಪಿ ಕೃಷ್ಣಮಠದ ಆನೆ ಸುಭದ್ರೆಗೂ ಹೀಗೇ ಆಗಿದೆ. ಬಿರು ಬೇಸಿಗೆಯ ಬೇಗೆ ತಾಳಲಾರದೆ ಸುಭದ್ರೆ ಒದ್ದಾಡುತ್ತಿದ್ದಾಳೆ. ತಣ್ಣೀರಿನ ಸ್ನಾನ ಇಲ್ಲದೆ ಕಿರಿಕಿರಿಗೊಳಗಾಗಿದ್ದಳು.
ಇಂತಹ ಪರಿಸ್ಥಿತಿಯಲ್ಲಿ ಅಲ್ಲಿಗೆ ನಮ್ಮ ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು ಎಂಟ್ರಿಕೊಟ್ಟಿದ್ದಾರೆ. 5000 ಲೀಟರ್ ನೀರಿನ ಟ್ಯಾಂಕ್ ಟೆಂಪೋಗೇರಿಸಿ ಹೊರಟಿದ್ದಾರೆ. ಸ್ವತಃ ತಾವೇ ಆನೆ ಲಾಯದಲ್ಲಿ ಸುಭಧ್ರೆಗೆ ಸ್ನಾನ ಮಾಡಿಸಿದ್ದಾರೆ. ತಣ್ಣೀರಿನ ಸ್ನಾನಕ್ಕೆ ಮೈಯ್ಯೊಡ್ಡಿ ಮಲಗಿದ ಆನೆ ಕೆಲ ಹೊತ್ತು ಮೇಲೇಳಲೇ ಇಲ್ಲ. ಮಗುವಿನಂತೆ ವರ್ತಿಸಿದ ಸುಭದ್ರೆ ಮನಸ್ಸಿಗೆ ಖುಷಿಯಾಗುವ ತನಕ ನೀರಿಗೆ ಮೈ ಕೊಟ್ಟು ಖುಷಿ ಪಟ್ಟಿದ್ದಾಳೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿತ್ಯಾನಂದ ಒಳಕಾಡು, ಮನುಷ್ಯನತ್ರ ದುಡ್ಡಿರುತ್ತದೆ. ನೀರು ಸಿಕ್ಕಿಲ್ಲಾಂದ್ರೆ ಜ್ಯೂಸ್ ಕುಡಿದಾದ್ರೂ ದಾಹ ತೀರಿಸಿಕೊಳ್ಳುತ್ತಾನೆ. ಮಾತು ಬಾರದ ಪ್ರಾಣಿಗಳು ಏನು ಮಾಡಬೇಕು? ಲಕ್ಷಾಂತರ ದನಕರುಗಳು ಕುಡಿಯೋದಕ್ಕೆ ನೀರಿಲ್ಲದೆ ಇದ್ರೆ ಏನು ಮಾಡಬೇಕು? ಆನೆಗೆ ವಾರಕ್ಕೆರಡು ಬಾರಿಯಾದರೂ ತಣ್ಣೀರಿನ ಸ್ನಾನ ಆಗ್ಬೇಕು. ದಾಹ ತೀರಬೇಕಾದರೆ 300 ಲೀಟರ್ ನೀರು ಕುಡಿಯಲು ಬೇಕು. ಮನುಷ್ಯನ ಅತಿಯಾಸೆಗೆ ಕಾಡು ನಾಶ ಮಾಡಿ ನೀರು ನಿಲ್ಲುವ ಮೂಲವನ್ನೆಲ್ಲ ಮುಚ್ಚಿದ್ದರಿಂದ ಸಮಸ್ಯೆ ಈ ರೀತಿ ಮಾಡಲಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು.
ತಣ್ಣೀರ ಸ್ನಾನ ಮಾಡಿದ ಮೇಲೆ ಆನೆಗೆ ಖುಷಿಯಾಗಿದೆ- ಅತ್ತಿಂದಿತ್ತ ನಲಿದಾಡಿದೆ. ರಾತ್ರಿ ನಿದ್ರೆ ಮಾಡಿದೆ. ಕಳೆದ ಒಂದು ತಿಂಗಳಿಂದ ಉಡುಪಿ ಕೃಷ್ಣಮಠದಲ್ಲಿ ನೀರಿನ ಅಭಾವ ಇರೋದ್ರಿಂದ ಸುಭದ್ರೆಯ ಸ್ನಾನಕ್ಕೆ- ಕುಡಿಯೋದಕ್ಕೆ ನೀರಿಗೆ ಕಷ್ಟವಾಗಿತ್ತು. ಇದನ್ನರಿತ ಸಮಾಜ ಸೇವಕ- ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು, ತಾರನಾಥ ಮೇಸ್ತ ಖುಷಿ ಖುಷಿಯಾಗಿ ಸ್ನಾನ ಮಾಡಿಸಿದ್ದಾರೆ. ಸ್ಥಳೀಯರು ಕೈಜೋಡಿಸಿದ್ದಾರೆ. ನಿತ್ಯಾನಂದ ಒಳಕಾಡು ಕಾರ್ಯ ಕೃಷ್ಣಮಠದ ಪರ್ಯಾಯ ಪಲಿಮಾರು ಮಠದವರಿಗೆ ಸಂತಸವಾಗಿದೆ. ಉಡುಪಿ ಜಿಲ್ಲಾ ನಾಗರೀಕ ಸಮಿತಿ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಗೆ ಧನ್ಯವಾದ ಹೇಳಿದ್ದಾರೆ.
ಕರಾವಳಿಯಲ್ಲಿ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬೇಸಿಗೆಯ ಮಳೆಯೇ ಆಗದಿರುವುದರಿಂದ ನೀರಿಗೆ ಬರ ಬಂದಿದೆ. ಮಳೆಗಾಗಿ ದೇವರ ಮೊರೆ ಹೋದರೂ ದೇವರು ಕೃಪೆ ತೋರುತ್ತಿಲ್ಲ. ಮನುಷ್ಯನಿಂದಾದ ಕಾಡು ನಾಶ- ಕೃಷಿಯ ವಿನಾಶ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಎಂಬೂದು ಎಲ್ಲರಿಗೂ ಗೊತ್ತು. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೈತೆ ಮಾರಿಹಬ್ಬ ಅನ್ನೋದನ್ನು ಯಾರೂ ಕಡೆಗಣಿಸಬಾರದು.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗೋಬ್ರಾಲ್ ಎಂಬ ಗ್ರಾಮದದಲ್ಲಿ ಕಾಡುಪ್ರಾಣಿಗಳಿಗೆ ಬಲೆಗಳನ್ನು ಹಾಕಿ ಬೇಟೆಯಾಡುತ್ತಿದ್ದ ಹೋಮ್ ಸ್ಟೇ ಮಾಲೀಕ ಸೇರಿದಂತೆ ಮೂವರನ್ನು ಸಾಕ್ಷಿ ಸಮೇತ ಬಂಧಿಸಿದ್ದಾರೆ.
ಬಂಧಿತನನ್ನು ಹಳಿಯಾಳ ತಾಲೂಕಿನ ಗೋಬ್ರಾಲ್ ಗ್ರಾಮದ ಸ್ಟ್ಯಾನಲಿ ಫ್ಯಾಡ್ರಿಕ್ಸ್ (57), ಸುಭಾಷ್ ಧರ್ಮ ಪೂಜಾರಿ (35) ಮತ್ತು ಬಾಬುಬಾಲು ಗುರಕೆ (40) ಎಂದು ಗುರುತಿಸಲಾಗಿದೆ. ಹಳಿಯಾಳ, ದಾಂಡೇಲಿ ಕಾಡಿನ ಭಾಗದಲ್ಲಿ ಪ್ರಾಣಿಗಳ ಬೇಟೆಗಾಗಿ ಬಲೆಗಳನ್ನು ಹಾಕಿದ್ದು, ಈ ಬಲೆಗೆ ಗುರುವಾರದಂದು ಚಿರುತೆ ಸಿಲುಕಿ ಪ್ರಾಣಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಹಳಿಯಾಳ ತಾಲೂಕಿನ ಗೋಬ್ರಾಲ್ ವಲಯ ಅರಣ್ಯಾಧಿಕಾರಿಗಳು ಮಾಹಿತಿ ಪಡೆದು ಸ್ಥಳಕ್ಕಾಗಮಿಸಿ ಚಿರತೆ ಮೃತದೇಹವನ್ನು ವಶಕ್ಕೆ ಪಡೆದಿದ್ದರು.
ಬಳಿಕ ತನಿಖೆ ನಡೆಸಿದಾಗ ಹಳಿಯಾಳ ತಾಲೂಕಿನ ಗೋಬ್ರಾಲ್ ಎಂಬ ಗ್ರಾಮದ ಹೋಮ್ ಸ್ಟೇ ಮಾಲೀಕ ಪ್ರಾಣಿಗಳನ್ನು ಮಾಂಸ ಹಾಗೂ ಚರ್ಮಕ್ಕಾಗಿ ಬೇಟೆಯಾಡುತ್ತಿರುವುದು ಪತ್ತೆಯಾಗಿತ್ತು. ದಾಳಿ ನಡೆಸಿದ ವೇಳೆ 2 ಕೆ.ಜಿ ಕಾಡು ಹಂದಿ ಮಾಂಸ ಫ್ರಿಜ್ ನಲ್ಲಿ ಸಿಕ್ಕಿದೆ. ನಂತರ ಮನೆಯನ್ನು ಶೋಧ ನಡೆಸಿದಾಗ ಒಂದು ಪ್ಯಾಕ್ ಗನ್ ಪೌಡರ್, 1-ಬಟನ್ ನೈಫ್, ಎರಡು ಗನ್ ಗಳು, ನಾಲ್ಕು ಮೊಬೈಲ್, ಕತ್ತಿ, ಬೇಟೆಗೆ ಬಳಸುತ್ತಿದ್ದ ನೈಲನ್ ದಾರ ಹಾಗೂ ಬುಲೆಟ್‍ಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಳಿಯಾಳ ವಲಯ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೈಸೂರು: ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬಸ್ಥರು ಇಂದು ಪ್ರಾಣಿಗಳ ದತ್ತು ಸ್ವೀಕಾರ ಮಾಡಿದ್ರು. ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಪಡೆದಿದ್ದು, ನಟ ದೇವರಾಜ್ ಕುಟುಂಬ ಚಿರತೆ, ದರ್ಶನ್ ಮತ್ತು ಸೃಜನ್ ಲೋಕೇಶ್ ರಿಂದ ಜಿರಾಫೆ ಮರಿಯನ್ನು ದತ್ತು ಪಡೆಯಲಾಯಿತು.
ಈ ವೇಳೆ ಜಿರಾಫೆ ಮರಿಗೆ `ತೂಗುಲೋಕ್’ ಎಂದು ಸೃಜನ್ ಲೋಕೇಶ್ ನಾಮಕರಣ ಮಾಡಿದ್ರು. ಈ ಹಿಂದೆ ಇಬ್ಬರು ಸೇರಿ ದತ್ತು ಪಡೆದ ಹುಲಿಗಳು ನಮ್ಮಂತೆಯೆ ಜೊತೆಯಾಗಿ ನಡೆಯುತ್ತಿವೆ. ಮೃಗಾಲಯದಲ್ಲಿ ಹುಲಿಗಳ ವಿಹಾರ ಕಂಡು ಸೃಜನ್ ಸಂತಸ ವ್ಯಕ್ತಪಡಿಸಿದ್ರು. ಹಾಸ್ಯ ನಟ ಕೀರ್ತಿ ಮೊಸಳೆಯನ್ನು ದತ್ತು ಸ್ವೀಕರಿಸಿದ್ರು.
ಇತ್ತೀಚೆಗಷ್ಟೇ ದರ್ಶನ್ ಅವರು ಹುಲಿಯೊಂದನ್ನು ದತ್ತು ಪಡೆದಿದ್ದು, ಅದಕ್ಕೆ `ವಿನೀಶ್’ ಅಂತ ಹೆಸರಿಟ್ಟಿದ್ದಾರೆ. ನಾನು ಒಂದು ಹುಲಿನ ದತ್ತು ಪಡೆದುಕೊಂಡಿದ್ದು, ಅದರ ಹೆಸರು `ಅರ್ಜುನ’ ಎಂಬುದಾಗಿ ಇಟ್ಟಿದ್ದೇನೆ. ಒಟ್ಟಿನಲ್ಲಿ ಇಂದು ಎಲ್ಲರೂ ಸೇರಿ ಒಂದಷ್ಟು ಪ್ರಾಣಿಗಳನ್ನು ದತ್ತು ಪಡೆದುಕೊಂಡಿರುವುದು ಸಂತಸದ ವಿಚಾರ ಅಂತ ಸೃಜನ್ ಲೋಕೇಶ್ ತಿಳಿಸಿದ್ರು. ಇದನ್ನೂ ಓದಿ: ಕುಚುಕು ಗೆಳೆಯನನ್ನ ಹಿಂಬಾಲಿಸಿದ ಸೃಜನ್‍ಗೆ ದರ್ಶನ್ ಅಭಿನಂದನೆ
ದರ್ಶನ್ ಕರೆ:
ಇಂದು ನಾವು 5 ಸಾವಿರ ಅಥವಾ 10 ಸಾವಿರ ರೂ. ಗಳನ್ನು ಎಲ್ಲೋ ಕಳೆದು ಬಿಡ್ತೀವಿ. ಹೀಗಾಗಿ 1 ಸಾವಿರದಿಂದ ಹಿಡಿದು 1 ಲಕ್ಷದ 75 ಸಾವಿರದವರೆಗೆ ಪ್ರಾಣಿಗಳನ್ನು ಇಲ್ಲಿ ದತ್ತು ಪಡೆದುಕೊಳ್ಳಬಹುದು. ಅಷ್ಟು ಬೇಡ 10 ಅಥವಾ 20 ಸಾವಿರ ಖರ್ಚು ಮಾಡಿ ಜನರು ಪ್ರಾಣಿಗಳನ್ನು ದತ್ತು ಪಡೆದ್ರೆ ಅವುಗಳ ಸಂತತಿನೂ ಉಳಿಯುತ್ತದೆ. ಹಾಗೆಯೇ ಪ್ರಾಣಿಗಳನ್ನು ಸಾಕುವ ಖುಷಿಯೂ ನಮ್ಮದಾಗುತ್ತದೆ ಅಂತ ಸಲಹೆ ನೀಡಿದ್ರು.
ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಸಾಧ್ಯವಿಲ್ಲ. ಹೀಗಾಗಿ ಇಲ್ಲೇ ಒಂದು ಪ್ರಾಣಿಯನ್ನು ಸಾಕಬಹುದು. ಹೀಗಾಗಿ ಎಲ್ಲಾ ಜನರು ಇಂತಹ ಒಂದು ಪ್ರಯೋಗಕ್ಕೆ ಕೈ ಜೋಡಿಸಿ ಅಂತ ದರ್ಶನ್ ಇದೇ ವೇಳೆ ಮನವಿ ಮಾಡಿಕೊಂಡರು.
ಅರಣ್ಯ ಇಲಾಖೆ ರಾಯಾಭಾರಿಯಾದ ನಂತರ ಉತ್ತಮ ಗಾಳಿ ಸಿಕ್ಕಿದೆ. ಗಿಡ ಮರ ನೆಟ್ಟು ಸೆಲ್ಫಿ ತೆಗೆದುಕೊಳ್ಳುವುದು ದೊಡ್ಡದಲ್ಲ. ಕ್ರಮವಾಗಿ ಅರಣ್ಯ ಬೆಳೆಸಬೇಕು. ನಾವೂ ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಪ್ರಾಣಿಗಳು ನಾಡಿಗೆ ಬರುತ್ತಿದೆ. ಯುವಕರು ದುಡ್ಡನ್ನು ವಿಕೆಂಡ್ ನೆಪದಲ್ಲಿ ಖರ್ಚು ಮಾಡುತ್ತಾರೆ. ಅದೇ ಹಣವನ್ನು ಉಳಿಸಿ ಪ್ರಾಣಿಗಳನ್ನ ದತ್ತು ಪಡೆಯಲಿ. ಕಾಡು ಪ್ರಾಣಿಗಳನ್ನ ಮನೆಯಲ್ಲಿ ಸಾಕಲು ಸಾಧ್ಯವಿಲ್ಲ. ಈ ಕಾರಣದಿಂದ ಮೃಗಾಲಯಕ್ಕೆ ಬಂದು ದತ್ತು ಪಡೆಯಿರಿ ಅಂತ ಹೇಳುವ ಮೂಲಕ ಪ್ರಾಣಿಗಳ ದತ್ತು ಸ್ವೀಕಾರ ಮಾಡಲು ಯುವಕರಿಗೆ ನಟ ದರ್ಶನ್ ಇದೇ ವೇಳೆ ಕರೆ ನೀಡಿದ್ರು.
ದರ್ಶನ್ ಪ್ರೋತ್ಸಾಹ ಅಂದ್ರು ನಟ ದೇವರಾಜ್ ಪತ್ನಿ:
ಇದೇ ವೇಳೆ ನಟ ಪ್ರಜ್ವಲ್ ತಾಯಿ ಮಾತನಾಡಿ, ತುಂಬಾ ಇಷ್ಟವಾಯಿತು. ನನ್ನ ಮಗ ದರ್ಶನ್ ಸರ್ ಅವರು ನನಗೆ ಮಾರ್ಗದರ್ಶನ ಮಾಡಿದ್ರು. ಹೀಗಾಗಿ ನಾನು ಚಿರತೆಯನ್ನು ದತ್ತು ಪಡೆದುಕೊಂಡಿದ್ದೇನೆ. ನನಗೆ ಪ್ರಾಣಿಗಳೆಂದರೆ ನನಗೆ ಮೊದಲಿನಿಂದಲೂ ತುಂಬಾ ಇಷ್ಟ. ಇದೀಗ ಅದಕ್ಕೆ ಪ್ರೋತ್ಸಾಹ ಕೊಟ್ಟಿದ್ದು ನನ್ನ ಮಗ. ಹೀಗಾಗಿ ತುಂಬಾ ಸಂತೋಷವಾಗ್ತಿದೆ. ಇತ್ತೀಚೆಗಷ್ಟೆ ನಾನು ಪ್ರಾಣಿಗಳನ್ನು ನೋಡಿಕೊಂಡು ಬಂದಿದ್ದೇನೆ ಅಂತ ಹೇಳಿದ್ರು.