Tag: animal

  • ದರ್ಶನ್ ಒಂದು ಮನವಿಗೆ ಹರಿದು ಬಂತು ಬರಪೂರ ದೇಣಿಗೆ

    ದರ್ಶನ್ ಒಂದು ಮನವಿಗೆ ಹರಿದು ಬಂತು ಬರಪೂರ ದೇಣಿಗೆ

    ಮೈಸೂರು: ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕರಿಸಿ ಮೃಗಾಲಯಗಳನ್ನು ಆರ್ಥಿಕ ಸಂಕಷ್ಟದಿಂದ ಮುಕ್ತಗೊಳಿಸಿ ಎಂಬ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಮೃಗಾಲಯಕ್ಕೆ 3 ಕೋಟಿ ದೇಣಿಗೆ ಬಂದಿದೆ.

    ವೀಡಿಯೋ ಮೂಲಕ ಪ್ರಾಣಿ ದತ್ತು ತೆಗೆದುಕೊಳ್ಳುವಂತೆ ದರ್ಶನ್ ಕರೆ ನೀಡಿದ್ದರು. ರಾಜ್ಯದ 9 ಮೃಗಾಲಯಗಳಿಗೆ ಪ್ರಾಣಿ ಪ್ರಿಯರಿಂದ ನೆರವು ಸಿಕ್ಕಿದೆ. Zoos ಆ್ಯಪ್ ಕರ್ನಾಟಕ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ನಡೆದಿದ್ದು, ಸುಮಾರು 6 ಸಾವಿರಕ್ಕೂ ಅಧಿಕ ಜನರು ಪ್ರಾಣಿ ದತ್ತು ಸ್ವೀಕಾರ ಮಾಡಿದ್ದಾರೆ. ಕೇವಲ 20 ದಿನಗಳಲ್ಲಿ ಎರಡು ಕೋಟಿ ದೇಣಿಗೆ ಸಂಗ್ರಹವಾಗಿದೆ.

    ಪ್ರಾಣಿ ದತ್ತು ಪಡೆದವರಿಗೆ ದರ್ಶನ್ ಭೇಟಿ ಮಾಡುವ ಅವಕಾಶವಿದ್ದು, ಪ್ರತಿ ಮೃಗಾಲಯದಲ್ಲಿ ಆಯ್ದ 50 ಜನರಿಗೆ ದರ್ಶನ್‍ರಿಂದ ಪ್ರಶಂಸನಾ ಪತ್ರ ಸಿಗಲಿದೆ. ದರ್ಶನ್ ಮನವಿಗೆ ಓಗೊಟ್ಟು ಚಿತ್ರ ನಟರಿಂದಲೂ ದತ್ತು ಸ್ವೀಕಾರ ಆಗಿದೆ.

    ನವಿಲು ಹಾಗೂ ನಾಗರಹಾವನ್ನೇ ಹೆಚ್ಚು ದತ್ತು ಪಡೆದಿದ್ದು, ಇಂದಿನಿಂದ ಬೆಳಗಾವಿ, ಗದಗ ಹಾಗೂ ಹಂಪಿ ಮೃಗಾಲಯ ಓಪನ್ ಆಗಲಿದೆ. ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ. ಸ್ಥಳದಲ್ಲೇ ಕೋವಿಡ್ ಪರೀಕ್ಷೆ ನಡೆಸಿ ಮೃಗಾಲಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:  2 ಕೋಟಿ ಲಸಿಕೆ ನೀಡಿ ಇತಿಹಾಸ ನಿರ್ಮಿಸಿದ ಕರ್ನಾಟಕ: ಸುಧಾಕರ್

  • ಮೃಗಾಲಯದ ಪ್ರಾಣಿ ಪಕ್ಷಿಗಳಿಗೂ ತಟ್ಟಿದ ಕೊರೊನಾ ಲಾಕ್‍ಡೌನ್ ಬಿಸಿ

    ಮೃಗಾಲಯದ ಪ್ರಾಣಿ ಪಕ್ಷಿಗಳಿಗೂ ತಟ್ಟಿದ ಕೊರೊನಾ ಲಾಕ್‍ಡೌನ್ ಬಿಸಿ

    ಗದಗ: ಮಹಾಮಾರಿ ಕೊರೊನಾ ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಕೊರೊನಾ ಬಿಸಿ ಈಗ ಉತ್ತರ ಕರ್ನಾಟಕದ ಏಕೈಕ ಮೃಗಾಲಯ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದೆ.

    ಆದಾಯವಿಲ್ಲದೇ ಪ್ರಾಣಿಗಳನ್ನು ಹೇಗೆ ಸಾಕುವುದು ಎಂಬ ಪರಿಸ್ಥಿತಿಯಲ್ಲಿ ಝೂ ಇದೆ. ಮಹಾಮಾರಿ ಕೊರೊನಾದಿಂದ ಮುದ್ರಣಾ ಕಾಶಿಯ ಮಕ್ಕಳ ಉದ್ಯಾನವನ ಹಾಗೂ ಮೃಗಾಲಯ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ ಕೊರೊನಾದ ಆರ್ಥಿಕ ಕರಿ ಛಾಯೆಯಿಂದ ಹೊರಬರಲು ಝೂ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಲಾಗುತ್ತಿದೆ.

    ಉತ್ತರ ಕರ್ನಾಟಕದ ಏಕೈಕ ಮೃಗಾಲಯವೆಂದೇ ಹೆಸರಾಗಿರುವ ಗದಗದ ಬಿಂಕದಕಟ್ಟಿ ಝೂ ಸಾಕಷ್ಟು ಆಕರ್ಷಣಿಯವಾಗಿದ್ದು, ಲಾಕ್‍ಡೌನ್ ಮೊದಲು ಈ ಮೃಗಾಲಯಕ್ಕೆ ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿ, ಪಕ್ಷಿ ಪ್ರಿಯರು, ಪ್ರವಾಸಿಗರು ಬರುತ್ತಿದ್ದರು. ಆದರೆ, ಈ ಕಿಲ್ಲರ್ ಕೊರೊನಾ ಅಟ್ಟಹಾಸದಿಂದ ಮೃಗಾಲಯಕ್ಕೆ ಬೀಗ ಬಿದ್ದಿದೆ. ಹೀಗಾಗಿ ಬಿಂಕದಕಟ್ಟಿ ಮೃಗಾಲಯಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇಲ್ಲಿನ ಪ್ರಾಣಿಗಳನ್ನು ಸಾಕುವುದು ಅರಣ್ಯ ಇಲಾಖೆಗೆ ಕಷ್ಟ ಸಾಧ್ಯವಾಗಿದೆ. ಇತ್ತೀಚೆಗೆ ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಝೂ ಗಳಲ್ಲಿನ ಪ್ರಾಣಿಗಳನ್ನ ದತ್ತು ಪಡೆಯುವುದಕ್ಕೆ ಕರೆ ನೀಡಿದ್ದರು. ಇದರಿಂದ ಅಭಿಮಾನಿಗಳು ಮುಂದೆ ಬಂದು ಅನೇಕ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ನಟ ದರ್ಶನ್ ಕರೆಯಿಂದ ನಮ್ಮ ಬಿಂಕದಕಟ್ಟಿ ಮೃಗಾಲಯಕ್ಕೆ 4 ಲಕ್ಷಕ್ಕೂ ಅಧಿಕ ಹಣ ಹರಿದು ಬರುತ್ತಿದೆ. ಇನ್ನು ಅಭಿಮಾನಿಗಳು ಮುಂದೆ ಬಂದು ದತ್ತು ಪಡೆಯಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    ಈ ಮೃಗಾಲಯದಲ್ಲಿ 37 ಜಾತಿಯ 396 ಪ್ರಾಣಿ ಪಕ್ಷಿಗಳಿವೆ. ಗಿಳಿ, ಹದ್ದು, ಕಾಡು ಕೋಳಿ, ಎಮ್ಮೊ ಕೋಳಿ, ಕೋಗಿಲೆ, ನವಿಲು ನಂತಹ ಅನೇಕ ಜಾತಿಯ ಪಕ್ಷಿಗಳಿವೆ. ನರಿ, ಕರಡಿ, ಹುಲಿ, ಚಿರತೆ, ಸಿಂಹಗಳಂತಹ ಕ್ರೂರ ಪ್ರಾಣಿಗಳು ಈ ಮೃಗಾಲಯದಲ್ಲಿ ಕಾಣಬಹುದು. ಇದರ ನಿರ್ವಹಣೆಗೆ ವಾರ್ಷಿಕ 1 ಕೋಟಿ 90 ಲಕ್ಷ ರೂಪಾಯಿ ವ್ಯವವಾಗುತ್ತದೆ. ಡೋನೇಷನ್ ರೂಪದಲ್ಲಿ 45 ಸಾವಿರ ರೂಪಾಯಿ ಬಂದಿದೆ. ಲಾಕ್‍ಡೌನ್‍ಗೂ ಮುನ್ನ ಪ್ರವೇಶ ಫೀಜ್ ನಿಂದಾಗಿ 2 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಉಳಿದ ಸುಮಾರು 1 ಕೋಟಿ 80 ಲಕ್ಷ ರೂಪಾಯಿಯಷ್ಟು ಸರ್ಕಾರಕ್ಕೆ ಹೊರೆಯಾಗುತ್ತದೆ. ಹೀಗಾಗಿ ಝೂಗಳಲ್ಲಿ ಪ್ರಾಣಿ ಪಕ್ಷಿಗಳ ದತ್ತು ಪಡೆಯಲು ಅವಕಾಶ ಮಾಡಲಾಗಿದೆ. ವಾರ್ಷಿಕ 1 ಸಾವಿರ ರೂಪಾಯಿಯಿಂದ 1 ಲಕ್ಷದ ವರೆಗೆ ಹಣ ಪಾವತಿಸಿ ವಿವಿಧ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯಲು ಅವಕಾಶವಿದೆ. ಈ ವರ್ಷ ವಿವಿಧ ದಾನಿಗಳಿಂದ ಕೇವಲ 4 ಲಕ್ಷ ಮಾತ್ರ ಸಂಗ್ರಹವಾಗಿತ್ತು. ನಟ ದರ್ಶನ್ ಕರೆ ನೀಡಿದ ನಂತರ ಅವರ ಅಭಿಮಾನಿಗಳು ಮತ್ತೆ 4 ಲಕ್ಷ ರೂಪಾಯಿ ಮೊತ್ತ ನೀಡಿ ಜನರು ಪ್ರಾಣಿಗಳ ದತ್ತು ಪಡೆದಿದ್ದಾರೆ. ಜನ ಮುಂದೆ ಬಂದು ಮೂಕ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ನಾನು ದರ್ಶನ್ ಎನ್ನುವ ಮೂಲಕ ನೀವು ಬನ್ನಿ ಪ್ರಾಣಿ ಪಕ್ಷಿ ರಕ್ಷಿಸಿ ಎಂದು ಪ್ರಾಣಿ ಪ್ರಿಯರು ಹೇಳುತ್ತಿದ್ದಾರೆ.

    ಮಾತನಾಡುವ ಮನುಜನನ್ನು ದತ್ತು ತೆಗೆದುಕೊಂಡು ಮಾನವೀಯತೆ ಮೆರೆಯುವುದನ್ನು ನೋಡಿದ್ದೇವೆ. ಆದರೆ ಮಾತು ಬಾರದ ಈ ಮೂಕ ಪ್ರಾಣಿಗಳಿಗೆ ಮನ ಮಿಡಿಯುವ ಹೃದಯವಂತರು ಬೇಕಾಗಿದೆ. ಪ್ರಮುಖವಾಗಿ ಮಾಂಸಾಹಾರಿ ಪ್ರಾಣಿಗಳನ್ನು ದಾನಿಗಳು ದತ್ತು ಪಡೆಯುವಂತೆ ಮೃಗಾಲಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸರ್ಕಾರ ಕೂಡಾ ಇಂಥಹ ಕಾರ್ಯಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಅನುದಾನ ಬಿಡುಗಡೆ ಮಾಡಬೇಕಾಗಿದೆ. ಇದನ್ನೂ ಓದಿ: ಉತ್ತರ ಕನ್ನಡದ ಜೋಯಿಡಾದಲ್ಲಿ ಭೂಕುಸಿತ- ಹೆದ್ದಾರಿ ಬಂದ್

  • ಮೈಸೂರು ಮೃಗಾಲಯದಲ್ಲಿ ಪ್ರಾಣಿ ದತ್ತು ಪಡೆದ ದರ್ಶನ್ ಅಭಿಮಾನಿ ದಂಪತಿ

    ಮೈಸೂರು ಮೃಗಾಲಯದಲ್ಲಿ ಪ್ರಾಣಿ ದತ್ತು ಪಡೆದ ದರ್ಶನ್ ಅಭಿಮಾನಿ ದಂಪತಿ

    ಚಿಕ್ಕಮಗಳೂರು: ಡಿ ಬಾಸ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದ ಹಿನ್ನೆಲೆ ನಗರದ ದರ್ಶನ್ ಅಭಿಮಾನಿ ದಂಪತಿ ಮೈಸೂರು ಮೃಗಾಲಯದಲ್ಲಿ ಎರಡು ಎಮೋ ಪಕ್ಷಿ ಹಾಗೂ ಒಂದು ಬಿಳಿ ನವಿಲನ್ನ ದತ್ತು ಪಡೆದಿದ್ದಾರೆ.

    ನಗರದ ದಂಟರಮಕ್ಕಿ ಬಡಾವಣೆಯಲ್ಲಿ ನಿವಾಸಿಯಾಗಿರುವ ಸಂದೀಪ್ ದಂಪತಿ ವಾರ್ಷಿಕ ಹತ್ತು ಸಾವಿರದಂತೆ ಎರಡು ಎಮೋ ಪಕ್ಷಿ ಹಾಗೂ ವಾರ್ಷಿಕ ನಾಲ್ಕೂವರೆ ಸಾವಿರಕ್ಕೆ ಒಂದು ಬಿಳಿ ನವಿಲನ್ನ ದತ್ತು ಪಡೆದು ಮೂಕ ಪ್ರಾಣಿಗಳ ನೆರವಿಗೆ ಕೈಜೋಡಿಸಿದ್ದಾರೆ. ದರ್ಶನ್ ಕೇವಲ ಡಿ ಬಾಸ್ ಅಷ್ಟೆ ಅಲ್ಲ. ನಿಸ್ವಾರ್ಥಿ ಕೂಡ. ಪ್ರಾಣಿಗಳನ್ನ ಅವರಷ್ಟು ಪ್ರೀತಿಸುವವರು ಯಾರೂ ಇಲ್ಲ. ಅವರಷ್ಟು ಪರಿಸರ ಪ್ರೇಮವೂ ಯಾರಿಗೂ ಇಲ್ಲ. ಸೆಲಿಬ್ರಿಟಿಯಾಗಿ ಪ್ರಾಣಿ-ಪರಿಸರದ ಬಗ್ಗೆ ಅವರ ಆಸಕ್ತಿ ನಿಜಕ್ಕೂ ಅತ್ಯದ್ಭುತ. ನಾವು ಅವರ ಮಾತಿನಿಂದಲೇ ಪ್ರೇರೇಪಣೆಗೊಂಡು ಇಂತಹ ಪುಣ್ಯದ ಕೆಲಸ ಮುಂದಾಗಿದ್ದೇವೆ ಎಂದು ಸಂದೀಪ್ ಹೇಳಿದ್ದಾರೆ.

    ಸಂದೀಪ್ ಕೂಡ ಪ್ರಾಣಿ ಪ್ರಿಯ. ತಮ್ಮ ತೋಟದಲ್ಲಿ ಕುದುರೆಯನ್ನ ಸಾಕಿದ್ದರು. ತೀವ್ರ ಅನಾರೋಗ್ಯದಿಂದ ಅದು ಸಾವನ್ನಪ್ಪಿದ ಮೇಲೆ ಸಾಕುವುದನ್ನ ಬಿಟ್ಟಿದ್ದಾರೆ. ವರ್ಷಕ್ಕೆ ಮೂರ್ನಾಲ್ಕು ಬಾರಿ ಕುಟುಂಬದ ಜೊತೆ ಮೈಸೂರು ಮೃಗಾಲಯಕ್ಕೆ ಹೋಗಿ ಬರುತ್ತಾರೆ. ದರ್ಶನ್ ಮಾತಿಗೆ ರಾಜ್ಯಾದ್ಯಂತ ಸಾವಿರಾರು ಅಭಿಮಾನಿಗಳು ಪ್ರಾಣಿಪಕ್ಷಿಗಳನ್ನ ದತ್ತು ಪಡೆದಿದ್ದಾರೆ. ಅವರ ಅಭಿಮಾನಿಯಾಗಿ ಪ್ರಾಣಿ ಪಕ್ಷಿಗಳಿಗೆ ನಮ್ಮದೊಂದು ಕಿರುಕಾಣಿಕೆ ಎಂದು ನಾವು ದತ್ತು ಪಡೆದಿದ್ದೇವೆ ಎಂದರು.

    ಮೈಸೂರು ಮೃಗಾಲಯದಲ್ಲಿ ನಾವೇ ನೋಡಿ ಬಂದಿರುವ ಪ್ರಾಣಿಗಳು ಈಗ ಸಂಕಷ್ಟದಲ್ಲಿದೆ. ಕೊರೊನಾದಿಂದ ಮೃಗಾಲಯಕ್ಕೆ ಬರುವವರ ಸಂಖ್ಯೆ ಕೂಡ ಕಡಿಮೆ ಇದೆ. ಪ್ರಾಣಿ-ಪಕ್ಷಿಗಳ ನಿರ್ವಹಣೆ ಕೂಡ ಕಷ್ಟವಾಗಿದೆ. ಹಾಗಾಗಿ, ನಾವು ಕೆಲ ಪಕ್ಷಿಗಳನ್ನ ದತ್ತು ಪಡೆದಿದ್ದೇವೆ. ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ದತ್ತು ಪಡೆಯಲು ತೀರ್ಮಾನಿಸಿದ್ದಾರೆ. ಇದನ್ನು ಓದಿ: ಗುಡೇಕೋಟೆ ದೇವಸ್ಥಾನದಲ್ಲಿ ಕರಡಿಗಳ ಹಿಂಡು ಪ್ರತ್ಯಕ್ಷ

    ಈ ವರ್ಷ ಮೂರು ಪಕ್ಷಿಗಳ ದತ್ತು ಪಡೆದಿರುವ ಸಂದೀಪ್ ಕುಟುಂಬ. ಮುಂದಿನ ವರ್ಷ ಹುಲಿ, ಆನೆಯನ್ನ ದತ್ತು ಪಡೆಯಲು ನಿರ್ಧರಿಸಿದ್ದಾರೆ. ಒಂದು ಹುಲಿಗೆ ವರ್ಷಕ್ಕೆ ಒಂದು ಲಕ್ಷ. ಒಂದು ಆನೆಗೆ ಒಂದು ವರ್ಷಕ್ಕೆ ಒಂದು ಲಕ್ಷದ ಎಪ್ಪತ್ತೈದು ಸಾವಿರ. ಮುಂದಿನ ವರ್ಷ ಹುಲಿ-ಆನೆಯನ್ನ ದತ್ತು ಪಡೆಯಲು ನಿರ್ಧರಿಸಿದ್ದಾರೆ. ಹೀಗೆ ದತ್ತು ಪಡೆಯುವುದರಿಂದ ಟ್ಯಾಕ್ಸ್ ಕೂಡ ಕಡಿಮೆಯಾಗಲಿದ್ದು, ವರ್ಷಕ್ಕೆ ಐದು ಜನಕ್ಕೆ ಎರಡು ಬಾರಿ ಫ್ರೀ ಪಾಸ್ ಕೂಡ ಸಿಗಲಿದೆ. ಜೊತೆಗೆ, ಸರ್ಟಿಫಿಕೇಟ್ ನೀಡುತ್ತಾರೆ. ಅದಕ್ಕೆಲ್ಲಾಕ್ಕಿಂತ ಮಿಗಿಲಾಗಿ ಸಂಕಷ್ಟದ ಸಮಯದಲ್ಲಿ ಹೀಗೆ ಪ್ರಾಣಿಗಳನ್ನ ದತ್ತು ಪಡೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಸಂದೀಪ್ ಕುಟುಂಬಸ್ಥರು ತಿಳಿಸಿದ್ದಾರೆ.

    ಸಂದೀಪ್ ಅವರ ಸ್ನೇಹಿತರು ಕೂಡ ಮುಂದಿನ ವರ್ಷ ಹುಲಿ-ಆನೆಯನ್ನ ದತ್ತು ಪಡೆಯುವಾಗ ನಾವು ಅವರ ನೆರವಿಗೆ ನಿಲ್ಲುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.’ ಇದನ್ನು ಓದಿ: ಸದಾ ನೆನಪಿನಲ್ಲಿಯೇ ಇರ್ತಿಯಾ ಗೆಳೆಯ: ಚಿರು ನೆನೆದ ದಚ್ಚು

  • ದಾಸನ ಮನವಿಗೆ ಸ್ಪಂದನೆ- ಪ್ರಾಣಿಗಳನ್ನು ದತ್ತು ಪಡೆದ ಅಭಿಮಾನಿಗಳು

    ದಾಸನ ಮನವಿಗೆ ಸ್ಪಂದನೆ- ಪ್ರಾಣಿಗಳನ್ನು ದತ್ತು ಪಡೆದ ಅಭಿಮಾನಿಗಳು

    ಬೆಂಗಳೂರು: ಕೊರೊನಾ ಸಂಕಷ್ಟ ಸಮಯದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಮೃಗಾಲಯದಿಂದ ಪ್ರಾಣಿಗಳನ್ನು ದತ್ತು ಸ್ವೀಕರಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು. ಅವರ ಮಾತಿನಂತೆ ಅಭಿಮಾನಿಗಳು ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ ಎಂದು ದಾಸ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ನಿರ್ಮಾಪಕಿ ಶೈಲಜಾ ನಾಗ್ ಮತ್ತು ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಒಂದು ಸಿಂಹವನ್ನು ದತ್ತು ಪಡೆದುಕೊಂಡಿದ್ದಾರೆ. ಹಾಗೂ ದರ್ಶನ್ ಮಾತಿಗೆ ಹಾಗೂ ಪ್ರಾಣಿಗಳ ಮೇಲಿರುವ ಪ್ರೀತಿಗೆ ಹಲವು ಅಭಿಮಾನಿಗಳು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ ಈ ಕುರಿತಾಗಿ ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡು ಧನ್ಯವಾದವನ್ನು ಹೇಳಿದ್ದಾರೆ. ಇದನ್ನೂ ಓದಿ: ಚಿರುವಿನ ಕೊನೆಯ ದಿನ ನಡೆದಿದ್ದು ಏನು? – ಬಹಿರಂಗ ಪಡಿಸಿದ ಮೇಘನಾ

    ಲಾಕ್‍ಡೌನ್ ಇದರಿಂದಾಗಿ ಜನರು ಮಾತ್ರವಲ್ಲ, ಪ್ರಾಣಿಗಳು ಕೂಡ ಸಂಕಷ್ಟವನ್ನು ಎದುರಿಸುತ್ತಿವೆ. ರಾಜ್ಯದಲ್ಲಿರುವ 9 ಪ್ರಾಣಿ ಸಂಗ್ರಹಾಲಯಗಳು ಕೂಡ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಇದರಿಂದ ಆಹಾರಕ್ಕೂ ಸಮಸ್ಯೆಯಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ನಟ ದರ್ಶನ್ ನೆರವಿಗೆ ಧಾವಿಸಿದ್ದಾರೆ.

    ಪರಿಸರ ದಿನಾಚರಣೆಯಂದು ವೀಡಿಯೋ ಮೂಲಕ ಅಭಿಮಾನಿ ಮತ್ತು ಆಪ್ತರ ಬಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಹಕರಿಸಿ ಎಂದು ಮನವಿ ಮಾಡಿದ್ದರು. ಪ್ರಾಣಿ ಸಂಗ್ರಹಾಲಯದಲ್ಲಿರುವ ಇಷ್ಟವಾದ ಪ್ರಾಣಿಗಳನ್ನು ದತ್ತು ಪಡೆಯಬಹುದೆಂದು ಹೇಳಿದ್ದರು. ದರ್ಶನ್ ಅವರ ಮನವಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾತ್ರವಲ್ಲದೆ ಅನೇಕರಿಗೆ ಅದು ತಲುಪಿದೆ. ಇದನ್ನು ಗಮನಿಸಿದ ಅವರ ಅಭಿಮಾನಿಗಳು ಪ್ರಾಣಿಗಳನ್ನು ದತ್ತು ಸ್ವೀಕರಿಸುತ್ತಿದ್ದಾರೆ.

    ದರ್ಶನ್ ಹೇಳಿದ್ದೇ ತಡ ಅಭಿಮಾನಿಗಳು, ನಾ ಮುಂದು ತಾ ಮುಂದು ಎಂದು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯುತ್ತಿದ್ದಾರೆ. ಈ ರೀತಿ ದತ್ತು ಪಡೆದುಕೊಂಡವರಿಗೆ ಮೃಗಾಲಯದ ವತಿಯಿಂದ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಆ ಪ್ರಮಾಣ ಪತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ದರ್ಶನ್, ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

  • 2 ತಲೆ ಇರುವ ಕರುವಿಗೆ ಜನ್ಮ ನೀಡಿದ ಎಮ್ಮೆ

    2 ತಲೆ ಇರುವ ಕರುವಿಗೆ ಜನ್ಮ ನೀಡಿದ ಎಮ್ಮೆ

    ಲಕ್ನೋ: ಎಮ್ಮೆಯೊಂದು 2 ತಲೆ ಇರುವ ಕರುವಿಗೆ ಜನ್ಮ ನೀಡಿದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

    ವಾರಣಾಸಿಯ ಕ್ಯಾಂಟ್ ಪ್ರದೇಶದ ಸಿಕ್ರೋಲ್‍ನ ಮೆನೆಯೊಂದರಲ್ಲಿ ಸಾಕಿದ್ದ ಎಮ್ಮೆ ಇಂದು ಬೆಳಗ್ಗೆ ಹೆರಿಗೆ ನೋವಿನಿಂದ ಒದ್ದಾಡುತ್ತಿತ್ತು. ಕರುವನ್ನು ಹೊರಗೆ ತೆಗೆಯಲು ನೆರೆಹೊರೆಯವರು ಕಷ್ಟ ಪಟ್ಟಿದ್ದಾರೆ ಆದರೆ ಕರು ಮಾತ್ರ ಹೊರಗೆ ಬಂದಿಲ್ಲ.

    ಕರುವನ್ನು ಹೊರಗೆ ತೆಗೆಯಲು ಹರಸಾಹಸಪಟ್ಟಿದ್ದಾರೆ. ಈ ವೇಳೆ 2 ತಲೆ ಕಾಣಿಸಿಕೊಂಡಿದೆ. ಆಗ 2 ಕರುಗಳು ಇರಬಹುದು ಎಂದು ಆಶ್ಚರ್ಯದಿಂದ ನೋಡ ತೊಡಗಿದ್ದಾರೆ. ಕರು ಹೊರಗೆ ಬಂದಿದೆ. ಆಗ ಒಂದು ದೇಹ 2 ತಲೆ ಇರುವ ಕರುವನ್ನು ಕಂಡು ಜನರು ಆಶ್ಚರ್ಯ ಜೊತೆಗೆ ಭಯಗೊಂಡಿದ್ದಾರೆ.

    ಈ ಸುದ್ದಿತಿಳಿಯುತ್ತಿದ್ದಂತೆ ಹಳ್ಳಿಯ ಸುತ್ತಮುತ್ತಲಿನ ಊರಿನವರು ಕರುವನ್ನು ನೋಡಲು ಬಂದಿದ್ದಾರೆ. ಎಮ್ಮೆ ಕರುವನ್ನು ನೋಡಿ ಸ್ಥಳಿಯರು ಆಶ್ಚರ್ಯ ಪಟ್ಟಿದ್ದಾರೆ. ಎಮ್ಮೆ ಮತ್ತು ಕರು ಆರೋಗ್ಯವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  • ಬೆಟ್ಟಕ್ಕೆ ಬೆಂಕಿ – ಹೆದರಿ ಗ್ರಾಮಕ್ಕೆ ಬಂದ ಚಿರತೆ

    ಬೆಟ್ಟಕ್ಕೆ ಬೆಂಕಿ – ಹೆದರಿ ಗ್ರಾಮಕ್ಕೆ ಬಂದ ಚಿರತೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಹಲವು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಅರಣ್ಯದಲ್ಲಿದ್ದ ಚಿರತೆ, ಬೆಂಕಿಗೆ ಹೆದರಿ ಗ್ರಾಮವನ್ನು ಸೇರಿದ ಘಟನೆ ನಡೆದಿದೆ.

    ಶುಕ್ರವಾರ ರಾತ್ರಿ 9.30ರ ಸಮಯದಲ್ಲಿ ಬೆಟ್ಟಕ್ಕೆ ಬೆಂಕಿ ಇಟ್ಟಿರುವುದು ತಿಳಿದು ಬಂದಿದೆ. ಬೆಂಕಿಯ ಕೆನ್ನಾಲಿಗೆ ತೀವ್ರವಾಗಿದ್ದ ಕಾರಣ ಹಾಗೂ ಬೆಟ್ಟದಲ್ಲಿನ ಹುಲ್ಲು ಒಣಗಿರುವ ಕಾರಣ ತ್ವರಿತಗತಿಯಲ್ಲಿ ಬೆಂಕಿ ಇಡೀ ಬೆಟ್ಟ ವ್ಯಾಪಿಸಿದೆ ಎನ್ನಲಾಗುತ್ತಿದೆ. ಕಿಡಿಗೇಡಿಗಳ ಕೃತ್ಯದಿಂದ ಮರ ಗಿಡಗಳು ಬೆಂಕಿಗಾಹುತಿಯಾಗಿವೆ. ಬೆಟ್ಟಕ್ಕೆ ಬೆಂಕಿ ಬಿದ್ದಿರುವ ಹಿನ್ನೆಲೆ ಚಿರತೆ ಬೆಂಕಿಗೆ ಹೆದರಿ ಮಾಕಳಿ ಗ್ರಾಮದ ಬಳಿ ಬೀಡು ಬಿಟ್ಟಿದೆ.

    ಶುಕ್ರವಾರ ರಾತ್ರಿ 9.45ರ ಸಮಯದಲ್ಲಿ ಗ್ರಾಮಕ್ಕೆ ನುಗ್ಗಿ ಮೂರು ಕೋಳಿಗಳನ್ನು ಹೊತ್ತೊಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಾತ್ರಿಯಿಡಿ ಪಟಾಕಿ ಹೊಡೆದು, ತಮಟೆ ಸದ್ದು ಮಾಡುತ್ತಾ ಚಿರತೆ ಗ್ರಾಮಕ್ಕೆ ಬರದಂತೆ ಗ್ರಾಮಸ್ಥರು ಕಾವಲು ಕಾದಿದ್ದಾರೆ. ಇಂದು ಚಿರತೆ ಬಂಧನಕ್ಕೆ ಕ್ರಮಕೈಗೊಳ್ಳಲು ಮಾಕಳಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲು ಮುಂದಾಗಿದ್ದಾರೆ.

  • ಸೆಣಸಾಟದಲ್ಲಿ ಚಿರತೆ, ನಾಯಿ ಸಾವು

    ಸೆಣಸಾಟದಲ್ಲಿ ಚಿರತೆ, ನಾಯಿ ಸಾವು

    ಮಂಡ್ಯ: ಸೆಣಸಾಟದಲ್ಲಿ ಚಿರತೆ ಮತ್ತು ನಾಯಿಗಳೆರಡು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಕಳೆದ ರಾತ್ರಿ ಅಣ್ಣೆಚಾಕನಹಳ್ಳಿಯ ಹೊರವಲಯದಲ್ಲಿನ ಜಮೀನೊಂದರಲ್ಲಿ ಮಲಗಿದ್ದ ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಈ ವೇಳೆ ಚಿರತೆ ಮತ್ತು ನಾಯಿಯ ನಡುವೆ ಸೆಣಸಾಟ ನಡೆದಿದೆ. ಇದರಿಂದ ಚಿರತೆ ಮತ್ತು ನಾಯಿಗೆ ಗಂಭೀರವಾದ ಗಾಯಗಳಾಗಿವೆ.

    ಚಿರತೆ ಮತ್ತು ನಾಯಿ ಎರಡು ಪ್ರಾಣಿಗಳ ಸೆಣಸಾಟದಲ್ಲಿ ಸ್ಥಳದಲ್ಲಿ ಸಾವನ್ನಪ್ಪಿವೆ. ಬೆಳಗ್ಗೆ ಗ್ರಾಮಸ್ಥರು ಈ ದೃಶ್ಯ ನೋಡಿ ಅರಣ್ಯ ಇಲಾಖೆಯ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಿದ್ದಾರೆ.

  • ಹೊನ್ನಾಳಿಯಲ್ಲಿ ದೇವರ ಕೋಣಕ್ಕೆ ಮೂರು ಗ್ರಾಮಸ್ಥರ ಜಗಳ: ಕೊನೆಗೆ ಠಾಣೆಯಲ್ಲಿ ಇತ್ಯರ್ಥ

    ಹೊನ್ನಾಳಿಯಲ್ಲಿ ದೇವರ ಕೋಣಕ್ಕೆ ಮೂರು ಗ್ರಾಮಸ್ಥರ ಜಗಳ: ಕೊನೆಗೆ ಠಾಣೆಯಲ್ಲಿ ಇತ್ಯರ್ಥ

    – ದೇವರ ಮೊರೆ ಹೋದ ಗ್ರಾಮಸ್ಥರು
    – ಪೊಲೀಸರ ಸಂಧಾನ ಯಶಸ್ವಿ

    ದಾವಣಗೆರೆ: ದೇವರಿಗೆ ಬಿಟ್ಟಿದ್ದ ಒಂದು ಕೋಣಕ್ಕೆ ಮೂರು ಗ್ರಾಮದ ಜನರು ಜಟಾಪಟಿ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಒಂದೇ ಕೋಣವನ್ನು ನಮ್ಮದು ಎಂದು ಮೂರು ಗ್ರಾಮಗಳ ಜನರು ಪಟ್ಟುಹಿಡಿದಿದ್ದಾರೆ. ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಗ್ರಾಮದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕೋಣಕ್ಕಾಗಿ ವಾದವಿವಾದಗಳು ನಡೆದು ಕೊನೆಗೆ ಪೊಲೀಸ್ ಠಾಣೆಯಲ್ಲಿ ವಿಚಾರ ಇತ್ಯರ್ಥವಾಗಿದೆ.

    ಏನಿದು ಗಲಾಟೆ?
    ಸಾಸ್ವೆಹಳ್ಳಿ ಗ್ರಾಮಕ್ಕೆ ನಾಲ್ಕು ವರ್ಷಗಳ ಹಿಂದೆ ಮರಿಕೋಣವು ಎಲ್ಲಿಂದಲೋ ಬಂದಿತ್ತು. ಅದೇ ಗ್ರಾಮದಲ್ಲಿ ಓಡಾಡಿಕೊಂಡಿತ್ತು. ಈಗ ಅಲ್ಲಿನ ಗ್ರಾಮದ ಜನರು ಆ ಕೋಣವನ್ನು ಸಾಸ್ವೇಹಳ್ಳಿ ಗ್ರಾಮದ ಗ್ರಾಮಸ್ಥರು ಆಂಜನೇಯ ದೇವಸ್ಥಾನಕ್ಕೆ ದೇವರ ಕೋಣ ಎಂದು ಬಿಟ್ಟದ್ದರು.

    ಈ ನಡುವೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಜಂಬರಗಟ್ಟೆ ಗ್ರಾಮದಿಂದ 70 ಜನ ಬಂದು, ಹದಿನೈದು ದಿನಗಳಿಂದ ತಮ್ಮ ಗ್ರಾಮದ ಕೋಣವನ್ನು ಹುಡುಕುತ್ತಿದ್ದೆವು. ಗ್ರಾಮ ದೇವತೆ ದುರ್ಗಾದೇವಿಯು ಉತ್ತರ ಭಾಗದಲ್ಲಿ ನಮ್ಮ ದೇವರ ಕೋಣ ಸಿಗುತ್ತದೆ ಎಂದು ಅಪ್ಪಣೆ ಕೊಟ್ಟಿದ್ದರಿಂದ ನಾವು ಹುಡುಕುತ್ತ ಬಂದೆವು. ಈ ಗ್ರಾಮದಲ್ಲಿ ನಮ್ಮ ಕೋಣ ಸಿಕ್ಕಿದೆ. ಸಾಸ್ವೆಹಳ್ಳಿಯಲ್ಲಿರುವ ಕೋಣ ನಮ್ಮದು ಎಂದು ಕೋಣವನ್ನು ಹಿಡಿದು ಪಟ್ಟು ಹಿಡಿದಿದ್ದಾರೆ.

    ಇತ್ತ ನ್ಯಾಮತಿ ತಾಲ್ಲೂಕಿನ ಮಡಿಕೆ ಚೀಲೂರಿನ ಗ್ರಾಮಸ್ಥರು ಕೂಡ ಈ ಕೋಣ ನಮ್ಮ ಗ್ರಾಮದ ದೇವರ ಕೋಣ ಎಂದು ತಕರಾರು ತೆಗೆದಿದ್ದಾರೆ. ಇದರಿಂದ ಸಾಸ್ವೆಹಳ್ಳಿ ಗ್ರಾಮದಲ್ಲಿ ಮೂರು ಗ್ರಾಮದ ಗ್ರಾಮಸ್ಥರು ಕೋಣಕ್ಕಾಗಿ ವಾದ ವಿವಾದಗಳನ್ನು ನಡೆಸುತ್ತಿದ್ದರು.

    ದೇವರ ಮೊರೆ ಹೋದ ಗ್ರಾಮಸ್ಥರು: ಸಾಸ್ವೆಹಳ್ಳಿ ಕೋಟೆ ಆಂಜನೇಯ ದೇವಸ್ಥಾನ ಸಮಿತಿಯವರು ಗ್ರಾಮದಲ್ಲಿ ಹನುಮಂತ ದೇವರ ಅಪ್ಪಣೆ ಕೇಳಿ ಯಾರಿಗೆ ವರ ನೀಡುತ್ತದೆಯೋ ಅವರು ಕೋಣ ತೆಗೆದುಕೊಂಡು ಹೋಗಬಹುದು ಎಂದರು. ಮಧ್ಯರಾತ್ರಿಯವರೆಗೂ ಯಾರಿಗೂ ದೇವರು ಅಪ್ಪಣೆ ನೀಡಲಿಲ್ಲ. ನಂತರ ನ್ಯಾಮತಿ ತಾಲೂಕಿನ ಮಡಿಕೆ ಚೀಲೂರು ಗ್ರಾಮಕ್ಕೆ ಕರೆದೊಯ್ದಿದ್ದು, ಆ ಗ್ರಾಮದ ದೇವರ ಅಪ್ಪಣೆ ಪಡೆದು ಒಯ್ಯಲು ತೀರ್ಮಾನ ಮಾಡಿದ್ದಾರೆ. ಆದರೆ ಮಡಿಕೆ ಚೀಲೂರಿನವರಿಗೆ ದೇವರು ಅಪ್ಪಣೆ ನೀಡದ ಕಾರಣ ಅವರು ಜಂಬರಗಟ್ಟೆ ಗ್ರಾಮದವರಿಗೆ ಒಯ್ಯುವಂತೆ ಸೂಚಿಸಿದರು. ಜಂಬರಗಟ್ಟೆ ಗ್ರಾಮದ ದೇವತೆ ಅಪ್ಪಣೆ ನೀಡಿದ ಕಾರಣ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.

    ಠಾಣೆಯಲ್ಲಿ ಇತ್ಯರ್ಥ: ದೇವರ ಕೋಣದ ವಿವಾದ ಇತ್ಯರ್ಥ ಆಯ್ತು ಎನ್ನುವಷ್ಟರಲ್ಲಿ ಮರಿಗೊಂಡನಹಳ್ಳಿಯ ಗ್ರಾಮಸ್ಥರು ಪೊಲೀಸರೊಂದಿಗೆ ಬಂದು, ಇದು ನಮ್ಮೂರಿನ ಕೋಣ ಎಂದು ತಕರಾರು ತೆಗೆದಿದ್ದಾರೆ. ಕಳೆದ ಕೆಲ ದಿನಗಳಿಂದ ನಮ್ಮ ಗ್ರಾಮದ ದೇವರ ಕೋಣ ಕಾಣೆಯಾಗಿದೆ. ಇದೇ ನಮ್ಮ ಗ್ರಾಮದ ಕೋಣ ಎಂದು ಪಟ್ಟು ಹಿಡಿದಿದ್ದಾರೆ.

    ವಾದ ವಿವಾದದ ನಡುವೆ ಪ್ರವೇಶಿದ ಹೊನ್ನಾಳಿ ಠಾಣೆ ಪೊಲೀಸರು ಬಂಜರಗಟ್ಟೆ ಹಾಗೂ ಮರಿಗೊಂಡನಹಳ್ಳಿ ಗ್ರಾಮದವರಿಂದ ಸಾಕ್ಷಿ, ಪುರಾವೆ ಕೇಳಿ ಚರ್ಚಿಸಿದರು. ಸಮಸ್ಯೆ ಬಿಗಡಾಯಿಸಿದ್ದರಿಂದ ಕೋಣವನ್ನು ಪೊಲೀಸ್ ಠಾಣೆಗೆ ವಾಹನ ಸಮೇತ ಒಯ್ಯಲಾಯಿತು. ನಂತರ ಹೊನ್ನಾಳಿ ಠಾಣೆಯ ಬಂದು, ಎರಡೂ ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ಚರ್ಚಿಸಿ, ಕೋಣಕ್ಕಾಗಿ ಗ್ರಾಮಗಳ ನಡುವೆ ವೈಷಮ್ಯ ಮೂಡಿಸುವುದು ಬೇಡ ಎಂದು ಸಂಧಾನ ಸೂತ್ರ ಅನುಸರಿಸಿ ಎಂದು ಮನವಿ ಮಾಡಿಕೊಂಡು, ಮರಿಗೊಂಡನಹಳ್ಳಿ ಗ್ರಾಮದವರ ಮನವೊಲಿಸಿ ಜಂಬರಗಟ್ಟೆ ಗ್ರಾಮದವರಿಗೆ ಕೋಣವನ್ನು ಒಯ್ಯಲು ಅನುಮತಿ ನೀಡಿದರು.

  • ಪುಂಡಾನೆ ಸೆರೆ – ಕ್ರೇನ್ ಮೂಲಕ ಲಾರಿಗೆ ಹತ್ತಿದ ಗಜರಾಜ

    ಪುಂಡಾನೆ ಸೆರೆ – ಕ್ರೇನ್ ಮೂಲಕ ಲಾರಿಗೆ ಹತ್ತಿದ ಗಜರಾಜ

    ಹಾಸನ: ಸಕಲೇಶಪುರ ಸುತ್ತಮುತ್ತ ಹಾವಳಿ ಮಾಡುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮತ್ತೂರು ಮೀಸಲು ಅರಣ್ಯದಲ್ಲಿ ಪುಂಡಾನೆ ಸೆರೆಸಿಕ್ಕಿದೆ.

    ಕಳೆದ ಒಂದು ವಾರದಿಂದ ಸಕಲೇಶಪುರ ಭಾಗದಲ್ಲಿ ಮೂರು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವುದು ಮತ್ತು ಒಂದು ಪುಂಡಾನೆ ಸೆರೆಹಿಡಿಯುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಈಗಾಗಲೇ ಎರಡು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದ್ದು, ಒಂದು ಪುಂಡಾನೆ ಸೆರೆಹಿಡಿಯಲಾಗಿದೆ. ಸೆರೆಹಿಡಿದ ಪುಂಡಾನೆಯನ್ನು ಜಿಲ್ಲೆಯಿಂದ ಹೊರಭಾಗದ ಪೂರಕ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು.

    ಪುಂಡಾನೆಯ ಚಲನವಲನ ಗಮನಿಸಲು ರೇಡಿಯೋ ಕಾಲರ್ ಅಳವಡಿಸಲಾಗುತ್ತದೆ. ಪುಂಡಾನೆಯನ್ನು ಲಾರಿಗೆ ಹತ್ತಿಸುವಾಗ ಅದಕ್ಕೆ ಯಾವುದೇ ಗಾಯ ಆಗದಂತೆ ಈ ಬಾರಿ ಕ್ರೇನ್ ಬಳಸಿ ಆನೆಯನ್ನು ಲಾರಿಯಲ್ಲಿ ಕರೆತರಲಾಗಿದೆ. ಆನೆ ಸೆರೆಹಿಡಿದ ನಂತರ ಅದನ್ನು ಕಾಡಿನಿಂದ ಕರೆತರುವಾಗ ಪ್ರತಿರೋಧ ತೋರಿದ್ದು, ಅಂತಿಮವಾಗಿ ಆನೆಯನ್ನು ಲಾರಿಗೆ ತುಂಬಲು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

  • ಝೂಗಳಿಗೆ, ಸಫಾರಿಗಳಿಗೆ ಹೋಗೋದನ್ನು ದಯವಿಟ್ಟು ನಿಲ್ಲಿಸಿ – ರಮ್ಯಾ

    ಝೂಗಳಿಗೆ, ಸಫಾರಿಗಳಿಗೆ ಹೋಗೋದನ್ನು ದಯವಿಟ್ಟು ನಿಲ್ಲಿಸಿ – ರಮ್ಯಾ

    – ಪ್ರಾಣಿಗಳಿಗೆ ನಮ್ಮನ್ನು ನೋಡುವ ಆಸೆ ಇಲ್ಲ
    – ಪ್ರಾಣಿಗಳ ಬದುಕನ್ನು ಚಿಂತಾಜನಕ ಮಾಡಿದ್ದೇವೆ
    – ನಿಮ್ಮ ಸ್ವಾತಂತ್ರ್ಯವು ಬೇರೆ ಜೀವಿಗಳನ್ನು ಹಾಳು ಮಾಡುತ್ತೆ

    ಬೆಂಗಳೂರು: ದಯವಿಟ್ಟು ಝೂಗಳಿಗೆ, ಸಫಾರಿಗಳಿಗೆ ಹೋಗೋದನ್ನು ನಿಲ್ಲಿಸಿ ಪ್ರಾಣಿಗಳಿಗೆ ನಮ್ಮನ್ನು ನೋಡುವ ಆಸೆ ಇಲ್ಲ ಎಂದು ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಕುರಿತಾದ ಕಾಳಜಿಯುತ ಪೋಸ್ಟ್ ಹಾಕಿದ್ದಾರೆ.

    ಈಗಾಗಲೇ ಪ್ರಾಣಿಗಳ ಬದುಕನ್ನು ಚಿಂತಾಜನಕವಾಗಿ ಮಾಡಿದ್ದೇವೆ. ಪ್ರಾಣಿಗಳು ನಮ್ಮನ್ನು ನೋಡಲು ಇಷ್ಟಪಡೋದಿಲ್ಲ. ನೀವು ಎಷ್ಟು ಹೋಗುತ್ತೀರೋ ಅಷ್ಟು ಕಾಡಿನಲ್ಲಿ ರೆಸಾಟ್ರ್ಸ್‍ಗಳು ಆಗುತ್ತವೆ. ದುರಾಸೆ, ಸ್ವಾರ್ಥದಿಂದ ಕೂಡಿರಬೇಡಿ. ಪ್ರಾಣಿಗಳಿಗೂ ಪ್ರೀತಿ, ಗೌರವ ಪಡೆಯುವ, ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುವ ಅರ್ಹತೆಯಿದೆ. ನೀವು ಪ್ರಾಣಿಗಳನ್ನು ಇಷ್ಟಪಟ್ಟರೆ ಅವುಗಳನ್ನು ಪಾಡಿಗೆ ಬಿಡಿ. ಮೃಗಾಲಯ ಹೋಗಬೇಕು ಅಂತೇನಿಲ್ಲ. ಅವುಗಳ ಫೋಟೋ ತೆಗೆಯಬೇಕು ಅಂತೇನಿಲ್ಲ, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಬೇಕು ಅಂತೇನಿಲ್ಲ. ನೀವು ನಿಮಗಾಗಿ ಇದನ್ನೆಲ್ಲ ಮಾಡುತ್ತೀರಿ ಎಂದು ರಮ್ಯಾ ಇನ್‍ಸ್ಟಾದಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ್ದಾರೆ.

    ಯಾಕೆ ನಾವು ಇಷ್ಟೊಂದು ಕ್ರೂರಿಗಳಾಗುತ್ತಿದ್ದೇವೆ? ಯಾಕೆ ನಾವು ಕರುಣೆಯಿಂದ ಇರೋದಿಲ್ಲ? ಎಲ್ಲ ಜೀವಿಗಳು ಭೂಮಿಯನ್ನು ಆಧರಿಸಿವೆ? ಎಲ್ಲರೂ ಶಾಂತಿಯುತವಾಗಿ ಬದುಕಬೇಕು ಎಂದು ನಾವು ಯಾವಾಗ ಕಲಿಯುತ್ತೇವೆ? ಮಾನವರು ಜಗತ್ತಿನಲ್ಲಿ ಬದುಕಲು ಕೆಟ್ಟ ಜೀವಿಗಳು. ನನ್ನ ಹೃದಯ ಅಳುತ್ತಿದೆ. ಎಲ್ಲವೂ ಸರಿ ಇದೆ ಅಂತ ನಾವು ಸುಮ್ಮನಿರಲಾಗೋದಿಲ್ಲ. ನಾವು ಮಾತನಾಡದಿದ್ದರೆ, ಕ್ರಮ ಕೈಗೊಳ್ಳದಿದ್ದರೆ ಜಗತ್ತು ಹಾಳಾಗುವುದು. ದಯವಿಟ್ಟು ಝೂಗಳಿಗೆ, ಸಫಾರಿಗಳಿಗೆ ಹೋಗೋದನ್ನು ನಿಲ್ಲಿಸಿ. ಈಗಾಗಲೇ ನಾವು ಅವರ ಜಾಗ, ಆಹಾರ, ನೀರನ್ನು ಪಡೆದಿದ್ದೇವೆ” ಎಂದು ನಟಿ ರಮ್ಯಾ ತಮ್ಮ ಅಭಿಪ್ರಾಯವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಏಕಾಗ್ರತೆ ಪಡೆಯಬೇಕು ಅಂತ ಬಯಸಿದರೆ ನಿಮ್ಮನ್ನು ನೀವೆ ಆತ್ಮಾವಲೋಕನ ಮಾಡಿಕೊಳ್ಳಿ. ಪರ್ವತ, ಕಾಡಿನಲ್ಲಿ, ಸಮುದ್ರದಲ್ಲಿ ಏಕಾಗ್ರತೆ ಸಿಗೋದಿಲ್ಲ. ಏಕಾಗ್ರತೆ ನಿಮ್ಮಲ್ಲಿಯೇ ಇದೆ. ಜಗತ್ತನ್ನು ಹಾಳು ಮಾಡುವುದರ ಬದಲು ನಿಮ್ಮನ್ನು ನೀವೇ ಏನು ಅಂತ ಕಂಡುಕೊಳ್ಳಿ, ರಂಜಿಸಿಕೊಳ್ಳಿ. ನಿಮ್ಮ ಸ್ವಾತಂತ್ರ್ಯವು ಬೇರೆ ಜೀವಿಗಳನ್ನು ಹಾಳು ಮಾಡೋದರಿಂದ ಬರೋದಿಲ್ಲ” ಎಂದು ನಟಿ ರಮ್ಯಾ ಖಾರವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ತಮಿಳುನಾಡಿನಲ್ಲಿ ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ಆನೆಯೊಂದರ ಮೇಲೆ ಬೆಂಕಿಹಚ್ಚಿದ ಟೈರ್ ಎಸೆದಿದ್ದರು. ನೋವು ತಾಳಲಾರದೆ ಆನೆ ಪ್ರಾಣ ಬಿಟ್ಟಿತ್ತು. ಈ ಹೃದಯವಿದ್ರಾವಕ ವೀಡಿಯೋವನ್ನು ಹಂಚಿಕೊಂಡು ರಮ್ಯಾ ಅವರು ಪ್ರಾಣಿಗಳ ಕುರಿತಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾ ಹಾಗೂ ರಾಜಕಾರಣದಿಂದ ದೂರವಿರುವ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಆಗಾಗ ಕೆಲವು ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.