Tag: Anil Vij

  • 8 ನಿಮಿಷವಾಗಿದೆ, ಕೂಡಲೇ ಭಾಷಣ ನಿಲ್ಲಿಸಿ: ಸಭೆಯಲ್ಲೇ ಹರ್ಯಾಣ ಗೃಹ ಸಚಿವರಿಗೆ ಶಾ ಕ್ಲಾಸ್‌

    8 ನಿಮಿಷವಾಗಿದೆ, ಕೂಡಲೇ ಭಾಷಣ ನಿಲ್ಲಿಸಿ: ಸಭೆಯಲ್ಲೇ ಹರ್ಯಾಣ ಗೃಹ ಸಚಿವರಿಗೆ ಶಾ ಕ್ಲಾಸ್‌

    ಸೂರಜ್‌ಕುಂಡ್‌: ನೀವು ಈಗಾಗಲೇ ಮಾತನಾಡಲು ದೀರ್ಘ ಸಮಯ ತೆಗೆದುಕೊಂಡಿದ್ದೀರಿ. ಕೂಡಲೇ ನಿಮ್ಮ ಸ್ವಾಗತ ಭಾಷಣ ನಿಲ್ಲಿಸಿ ಎಂದು ಗೃಹ ಸಚಿವ ಅಮಿತ್‌ ಶಾ(Amit Shah) ಹರ್ಯಾಣದ ಗೃಹ ಸಚಿವ ಅನಿಲ್‌ ವಿಜ್‌(Anil Vij) ಅವರಿಗೆ ಗಣ್ಯರ ಮುಂದುಗಡೆಯೇ ಕ್ಲಾಸ್‌ ತೆಗೆದುಕೊಂಡ ವೀಡಿಯೋ ಈಗ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಹರ್ಯಾಣದ ಸೂರಜ್‌ಕುಂಡ್‌ನಲ್ಲಿ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳ ಗೃಹ ಸಚಿವರ ಜೊತೆ ಎರಡು ದಿನ ಚಿಂತನ ಶಿಬಿರವನ್ನು(Chintan Shivir) ಆಯೋಜಿಸಿದೆ. ಈ ಕಾರ್ಯಕ್ರಮ ಗುರುವಾರ ಆರಂಭಗೊಂಡಿದ್ದು ಇಂದು ಕೊನೆಯಾಗಲಿದೆ.

    ಈ ಕಾರ್ಯಕ್ರಮದ ಆರಂಭದಲ್ಲಿ ಅನಿಲ್‌ ವಿಜ್‌ ಸ್ವಾಗತ ಭಾಷಣ ಮಾಡುತ್ತಿದ್ದರು. 8 ನಿಮಿಷವಾದರೂ ಭಾಷಣ ನಿಲ್ಲಿಸದ್ದಕ್ಕೆ ಸಿಟ್ಟಾದ ಅಮಿತ್‌ ಶಾ, ಸಮಯ ಬಹಳ ಮುಖ್ಯ. ದಯವಿಟ್ಟು ಭಾಷಣ ನಿಲ್ಲಿಸಿ ಎಂದು ಮೈಕ್‌ನಲ್ಲಿ ಹೇಳಿ ಭಾಷಣವನ್ನು ನಿಲ್ಲಿಸಿದ ಪ್ರಸಂಗ ನಡೆದಿದೆ. ಇದನ್ನೂ ಓದಿ: ಏರ್‌ಬಸ್‌ ಜೊತೆಗೂಡಿ ವಾಯುಸೇನೆಗೆ ವಿಮಾನ ತಯಾರಿಸಲಿದೆ ಟಾಟಾ ಸಮೂಹ

    ಆಗಿದ್ದು ಏನು?
    ಅನಿಲ್‌ ವಿಜ್‌ ಅವರಿಗೆ ಮಾತನಾಡಲು 5 ನಿಮಿಷ ಸಮಯ ನೀಡಲಾಗಿತ್ತು. ತಮ್ಮ ಭಾಷಣದಲ್ಲಿ ಹರ್ಯಾಣದ ಇತಿಹಾಸ, ಹಸಿರು ಕ್ರಾಂತಿಗೆ ರಾಜ್ಯ ನೀಡಿದ ಕೊಡುಗೆ, ಒಲಿಂಪಿಕ್ಸ್‌ನಲ್ಲಿ ರಾಜ್ಯದ ಸಾಧನೆ ಮತ್ತು ರಾಜ್ಯ ಸರ್ಕಾರ ನಿರ್ಮಿಸಿದ ಕ್ರೀಡಾ ಮೂಲಸೌಕರ್ಯ, ಪ್ರತಿ ವಾರ ನಡೆಸುವ ಕುಂದುಕೊರತೆಯ ಬಗ್ಗೆ ಮಾತನಾಡುತ್ತಿದ್ದರು.

    5 ನಿಮಿಷವಾದರೂ ಭಾಷಣ ನಿಲ್ಲಿಸದ್ದಕ್ಕೆ ಅಮಿತ್‌ ಶಾ ಚೀಟಿ ಕಳುಹಿಸಿ ಭಾಷಣ ನಿಲ್ಲಿಸುವಂತೆ ಸೂಚಿಸಿದರು. ಚೀಟಿ ಬಂದಿದ್ದರೂ ಅನಿಲ್‌ ವಿಜ್‌ ಭಾಷಣ ಮುಂದುವರಿಸಿದ್ದರು.

    ಭಾಷಣ ನಿಲ್ಲಿಸದೇ ಇದ್ದಾಗ ನೇರವಾಗಿ ಮೈಕ್‌ನಲ್ಲೇ, ಅನಿಲ್-ಜೀ ನಿಮಗೆ ಐದು ನಿಮಿಷಗಳನ್ನು ನಿಗದಿಪಡಿಸಲಾಗಿದೆ. ನೀವು ಈಗಾಗಲೇ ಎಂಟೂವರೆ ನಿಮಿಷ ಮಾತನಾಡಿದ್ದೀರಿ. ದಯವಿಟ್ಟು ನಿಮ್ಮ ಭಾಷಣವನ್ನು ಕೊನೆಗೊಳಿಸಿ. ಇಷ್ಟು ದೀರ್ಘವಾದ ಭಾಷಣಗಳನ್ನು ನೀಡುವ ಸ್ಥಳ ಇದಲ್ಲ. ಸಂಕ್ಷಿಪ್ತವಾಗಿ ಹೇಳಿ ಎಂದು ಅಮಿತ್‌ ಶಾ ಕಠೋರವಾಗಿ ಹೇಳಿದರು

    ಇದಕ್ಕೆ ವಿಜ್ ಇನ್ನೂ ಕೆಲ  ಸೆಕೆಂಡಿನಲ್ಲಿ ಮುಗಿಸುತ್ತೇನೆ. ಒಂದು ಅಂಶ ಬಾಕಿಯಿದೆ ಎಂದರು. ಈ ಮನವಿ ಶಾ ಅನುಮತಿ ನೀಡಿದಾಗ ಸಾಧನೆಗಳ ದೀರ್ಘ ಪಟ್ಟಿಯನ್ನು ಮತ್ತೆ ಮುಂದುವರಿಸಿದರು.

    ಇದಕ್ಕೆ ಸಿಟ್ಟಾದ ಅಮಿತ್‌ ಶಾ, ಅನಿಲ್ ಜೀ, ದಯವಿಟ್ಟು ನನ್ನನ್ನು ಕ್ಷಮಿಸಿ. ಮುಗಿಸಿ ಎಂದು ಹೇಳಿದರು. ನಂತರ ವಿಜ್‌ ಧನ್ಯವಾದ ಹೇಳಲು ಮುಂದಾದಾಗ, ಅಮಿತ್‌ ಶಾ ಸಾಕು. ಕಾರ್ಯಕ್ರಮ ಮುಂದುವರಿಯುತ್ತದೆ ಎಂದು ಹೇಳಿ ಅರ್ಧದಲ್ಲೇ ವಿಜ್‌ ಭಾಷಣವನ್ನು ಕೊನೆಗೊಳಿಸಿದರು.

    ಹರ್ಯಾಣ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಅವರ ಭಾಷಣಕ್ಕೆ 5 ನಿಮಿಷ ನಿಗದಿಪಡಿಸಲಾಗಿತ್ತು. ಆದರೆ ಅನಿಲ್‌ ವಿಜ್‌ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ಖಟ್ಟರ್‌ ಕೇವಲ 3 ನಿಮಿಷದಲ್ಲೇ ತಮ್ಮ ಭಾಷಣವನ್ನು ಕೊನೆಗೊಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಹಿಜಬ್‌ ಹೆಸರಿನಲ್ಲಿ ಕಾಂಗ್ರೆಸ್ ದೇಶದಲ್ಲಿ ವಿಭಜನೆಯ ಬೀಜ ಬಿತ್ತಿದೆ: ಅನಿಲ್ ವಿಜ್

    ಹಿಜಬ್‌ ಹೆಸರಿನಲ್ಲಿ ಕಾಂಗ್ರೆಸ್ ದೇಶದಲ್ಲಿ ವಿಭಜನೆಯ ಬೀಜ ಬಿತ್ತಿದೆ: ಅನಿಲ್ ವಿಜ್

    ಚಂಢೀಗಡ: ಕಾಂಗ್ರೆಸ್ ದೇಶದಲ್ಲಿ ವಿಭಜನೆಯ ಬೀಜ ಬಿತ್ತಿದೆ. ಹಿಂದೂ-ಮುಸ್ಲಿಂ ಹೆಸರಿನಲ್ಲಿ ದೇಶವನ್ನು ವಿಭಜಿಸಿದೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ದೇಶ ವಿಭಜನೆಗೆ ಕಾರಣವಾದ ಕಾಂಗ್ರೆಸ್ ಹೊಡೆದು ಆಳುವ ನೀತಿಯನ್ನು ಬಿತ್ತಿದ್ದು, ಇಂದು ಈ ವಿಭಜನೆ ಭಯೋತ್ಪಾದನೆಯ ರೂಪದಲ್ಲಿ ಮತ್ತು ಕೆಲವೊಮ್ಮೆ ಹಿಜಬ್ ರೂಪದಲ್ಲಿ ದೇಶದಲ್ಲಿ ಎದುರಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಣ್‍ಜಿತ್ ಸಿಂಗ್ ಚನ್ನಿ

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಿತ್ತಿದ ವಿಭಜನೆ ಬೀಜದಿಂದಾಗಿ ದೇಶದಲ್ಲಿ ಇಂದಿಗೂ ಶಾಂತಿಯಿಂದ ಬದುಕಲು ಆಗುತ್ತಿಲ್ಲ. ಕೆಲವೊಮ್ಮೆ ಭಯೋತ್ಪಾದಕರ ರೂಪದಲ್ಲಿ, ಕೆಲವೊಮ್ಮೆ ಹಿಜಬ್‍ಗಳ ರೂಪದಲ್ಲಿ, ಹಿಂದೂ-ಮುಸ್ಲಿಂ ಹೆಸರಿನಲ್ಲಿ ದೇಶವನ್ನು ವಿಭಜನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದ ಉಡುಪಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಫೆಬ್ರವರಿ 4 ರಂದು ಹಿಜಬ್ ಪ್ರತಿಭಟನೆ ಪ್ರಾರಂಭವಾಯಿತು. ಕೆಲವು ವಿದ್ಯಾರ್ಥಿಗಳು ಹಿಜಬ್ (ಮುಸ್ಲಿಂ ಮಹಿಳೆಯರು ಧರಿಸುವ ಸ್ಕಾರ್ಫ್) ಧರಿಸಿ ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿದರು. ತಿಂಗಳ ಆರಂಭದಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಹಿಜಬ್ ಧರಿಸಿ ಕಾಲೇಜಿಗೆ ಬಂದಿದ್ದರಿಂದ ಪ್ರವೇಶ ನಿರಾಕರಿಸಲಾಯಿತು. ಇದರಿಂದ ಕರ್ನಾಟಕದ ಕೆಲವು ಭಾಗಗಳಲ್ಲಿ ಗದ್ದಲ ಆರಂಭವಾಯಿತು. ಇದೀಗ ಈ ವಿವಾದ ರಾಜಸ್ಥಾನಕ್ಕೂ ಹರಡಿದೆ.

    ಕರ್ನಾಟಕದಲ್ಲಿ ಹಿಜಬ್ ಸಾಲಿಗೆ ಸಂಬಂಧಿಸಿದ ತುರ್ತು ಅರ್ಜಿಗಳನ್ನು ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇದನ್ನೂ ಓದಿ: ಸಂವಿಧಾನದ ಆಶಯದಲ್ಲಿ ದೇಶ ಮುನ್ನಡೆಸಲಾಗ್ತಿದೆ, ಷರಿಯಾ ಕಾನೂನಿನಿಂದಲ್ಲ: ಹಿಜಬ್‌ ಕುರಿತು ಯೋಗಿ ಪ್ರತಿಕ್ರಿಯೆ

  • ಇಟಲಿಯ ತಾಯಿ, ಭಾರತದ ತಂದೆ – ರಾಹುಲ್ ಗಾಂಧಿ ವಿರುದ್ಧ ಅನಿಲ್ ವಿಜ್ ಕಿಡಿ

    ಇಟಲಿಯ ತಾಯಿ, ಭಾರತದ ತಂದೆ – ರಾಹುಲ್ ಗಾಂಧಿ ವಿರುದ್ಧ ಅನಿಲ್ ವಿಜ್ ಕಿಡಿ

    ನವದೆಹಲಿ: ಪೋಷಕರ ಕಾರಣದಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಲೋಚನೆ ನಡುವೆ ಸಂಘರ್ಷಣೆ ಇದೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

    ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿ ಅವರು ಇಟಾಲಿಯನ್ ತಾಯಿ ಮತ್ತು ಭಾರತೀಯ ತಂದೆಯ ನಡುವೆ ಬೆಳೆದ ಕಾರಣ, ಅವರು ಒಂದು ಭಾರತವನ್ನು ನೋಡುವ ಬದಲು ಎರಡು ಭಾರತಗಳನ್ನು ನೋಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಎರಡು ರೀತಿಯ ಸಂಸ್ಕೃತಿಗಳ ನಡುವೆ ಬೆಳೆದ ಕಾರಣ ಒಂದೇ ಭಾರತದಲ್ಲಿ ಎರಡು ಭಾರತವನ್ನು ನೋಡುವುದು ಸಹಜ. ತಾಯಿ ಸೋನಿಯಾ ಗಾಂಧಿ ಇಟಾಲಿಯನ್ ಹಾಗೂ ತಂದೆ ರಾಜೀವ್ ಗಾಂಧಿ ಭಾರತದವರಾಗಿದ್ದು, ಇಟಲಿ ಹಾಗೂ ಭಾರತದ ಸಂಸ್ಕೃತಿ ನಡುವೆ ಬೆಳೆದರು. ಹಾಗಾಗಿ ಅವರ ಚಿಂತನೆಯಲ್ಲಿ ಯಾವಾಗಲೂ ಸಂಘರ್ಷಗಳು ಇದ್ದೆ ಇರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಭಾರತವನ್ನು ಸಾಮ್ರಾಜ್ಯವಾಗಿ ಆಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

    ಬುಧವಾರ ರಾಹುಲ್ ಗಾಂಧಿ ಅವರು ಶ್ರೀಮಂತರಿಗೆ ಮತ್ತು ಬಡವರಿಗೆ ಎಂದು ಎರಡು ರೀತಿಯ ಭಾರತವನ್ನು ರಚಿಸಲಾಗಿದೆ ಮತ್ತು ಅವುಗಳ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಗೃಹ ಸಚಿವರು ಚಪ್ಪಲಿ ಧರಿಸಬಹುದು, ಅವರ ಭೇಟಿಗೆ ಹೋದವ್ರು ಧರಿಸುವಂತಿಲ್ಲ: ರಾಗಾ ಆರೋಪಕ್ಕೆ BJP ವಿರೋಧ

    ಸರ್ಕಾರದ ನೀತಿಗಳ ಕುರಿತು ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡುವಾಗ ಭಾರತದ ಸಂಪತ್ತಿನ ಶೇಕಡಾ 40 ರಷ್ಟು ಆಯ್ದ ಕೆಲವರಿಗೆ ಹೋಗಿದೆ. ಆದರೆ ಶೇಕಡಾ 84 ರಷ್ಟು ಜನಸಂಖ್ಯೆಯು ಬಡತನದ ಅಂಚಿನಲ್ಲಿದ್ದಾರೆ. ಈ ಸರ್ಕಾರ ರಚಿಸಿದ ಉಭಯ ಭಾರತಗಳನ್ನು ಒಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ ಕರೆ ನೀಡಿದರು.

  • ಪಾಕ್ ಗೆಲುವನ್ನು ಸಂಭ್ರಮಿಸಿದವರ  DNA ಭಾರತದಲ್ಲ: ಅನಿಲ್ ವಿಜ್

    ಪಾಕ್ ಗೆಲುವನ್ನು ಸಂಭ್ರಮಿಸಿದವರ DNA ಭಾರತದಲ್ಲ: ಅನಿಲ್ ವಿಜ್

    ಚಂಡೀಗಢ: ಪಾಕಿಸ್ತಾನ ಗೆಲುವಿಗೆ ದೇಶದಲ್ಲಿ ಪಟಾಕಿ ಸಿಡಿಸಿದವರ ಡಿಎನ್‍ಎ ಭಾರತದಲ್ಲ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

    ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಿದೆ. ದೇಶದಲ್ಲಿ ಪಟಾಕಿ ಸಿಡಿಸಿದವರ ಡಿಎನ್‍ಎ ಭಾರತದ್ದಾಗಿರಲು ಸಾಧ್ಯವಿಲ್ಲ. ನಮ್ಮ ಸ್ವಂತ ಮನಯಲ್ಲೂ ದೇಶದ್ರೋಹಿಗಳು ಅಡಗಿರುವುದರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ.

    ಪಾಕಿಸ್ತಾನ ಗೆದ್ದಿದ್ದಕ್ಕಾಗಿ ಕಾಶ್ಮೀರದಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ. ದುಬೈನ್‍ನಲ್ಲಿ ಭಾನುವಾರ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ, ಭಾರತದ ವಿರುದ್ಧ 10 ವಿಕೆಟ್‍ಗಳಿಂದ ಗೆಲುವು ಸಾಧಿಸಿತ್ತು.

    ಇಲ್ಲಿಯವರೆಗೆ ನಡೆದ 5 ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿದ್ದ ಪಾಕಿಸ್ತಾನ ಮೊದಲ ಬಾರಿಗೆ ಭರ್ಜರಿ ಜಯ ಸಾಧಿಸಿದೆ. ಇಂದು ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ 10 ವಿಕೆಟ್ ಗಳಿಂದ ಅಮೋಘ ಜಯ ಸಾಧಿಸಿದೆ.

  • ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದ ಆರೋಗ್ಯ ಸಚಿವರಿಗೆ ಕೊರೊನಾ ಪಾಸಿಟಿವ್

    ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದ ಆರೋಗ್ಯ ಸಚಿವರಿಗೆ ಕೊರೊನಾ ಪಾಸಿಟಿವ್

    ಚಂಡೀಗಢ: ಪ್ರಯೋಗಾತ್ಮಕ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್‍ಗೆ ಕೊರೊನಾ ಪಾಸಿಟಿವ್ ಬಂದಿದೆ.

    ಕಳೆದ ನವೆಂಬರ್ 20ರಂದು ಅನಿಲ್ ವಿಜ್ ಅವರು ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ಪರೀಕ್ಷೆಯಲ್ಲಿ ಸ್ವಯಃ ಸೇವಕರಾಗಿ ತೊಡಗಿಸಿಕೊಂಡಿದ್ದರು. ಅನಿಲ್ ವಿಜ್ ಅವರಿಗೆ ಹರಿಯಾಣದ ಅಂಬಾಲದಲ್ಲಿ ನಡೆದ 3ನೇ ಹಂತದ ಪ್ರಯೋಗಾರ್ಥ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗದಲ್ಲಿ ಹಾಕಲಾಗಿತ್ತು. ಆದರೆ ಇಂದು ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅನಿಲ್ ವಿಜ್, ನನಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ನಾನು ಅಂಬಾಲದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಕೋವ್ಯಾಕ್ಸಿನ್ ಲಸಿಕೆಯನ್ನು ಮೂರನೇ ಹಂತದಲ್ಲಿ ಸುಮಾರು 26 ಸಾವಿರ ಜನಕ್ಕೆ ನೀಡಲಾಗುವುದು ಎನ್ನಲಾಗಿದೆ.

    ಈ ಕೋವ್ಯಾಕ್ಸಿನ್ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ತಯಾರು ಮಾಡುತ್ತಿದೆ. ಈ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆ, 28 ದಿನಗಳಲ್ಲಿ ಎರಡು ಹಂತದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗ ಮಾಡಲಾಗುತ್ತದೆ. ಲಸಿಕೆಯ ಪರಿಣಾಮ 14 ದಿನಗಳ ನಂತರ ಎರಡನೇ ಡೋಸ್ ನೀಡಿದಾಗ ಗೊತ್ತಾಗಲಿದೆ ಎಂದು ತಿಳಿಸಿದೆ. ಜೊತೆಗೆ ಲಸಿಕೆ ಅಭಿವೃದ್ಧಿಯ ವೇಳೆ ಸುರಕ್ಷತೆ ನಮ್ಮ ಪ್ರಾಥಮಿಕ ಮಾನದಂಡವಾಗಿದೆ ಎಂದು ಹೇಳಿದೆ.

    ಕಳೆದ ವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ಈ ಸಂಸ್ಥೆಗೆ ಭೇಟಿ ನೀಡಿದ್ದು, ಕೋವ್ಯಾಕ್ಸಿನ್ ಲಸಿಕೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಶುಕ್ರವಾರ ನಡೆದ ಸಭೆಯಲ್ಲಿ ಮುಂದಿನ ಎರಡು ವಾರದಲ್ಲಿ ಭಾರತದಲ್ಲಿ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ 96 ಲಕ್ಷ ಜನರಿಗೆ ಕೊರೊನಾ ಕಾಣಿಸಿಕೊಂಡಿದ್ದು, ಅಮೆರಿಕಾ ನಂತರ ಅತೀ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಂಡ ದೇಶವಾಗಿದೆ.