Tag: Angara

  • ಹಿಂದುತ್ವ ನನ್ನ ಮೊದಲ ಆಯ್ಕೆ ಆಮೇಲೆ ಸಚಿವ, ಶಾಸಕ ಸ್ಥಾನ: ಸುನೀಲ್ ಕುಮಾರ್

    ಹಿಂದುತ್ವ ನನ್ನ ಮೊದಲ ಆಯ್ಕೆ ಆಮೇಲೆ ಸಚಿವ, ಶಾಸಕ ಸ್ಥಾನ: ಸುನೀಲ್ ಕುಮಾರ್

    ಉಡುಪಿ: ಹಿಂದುತ್ವ ಮತ್ತು ಅಭಿವೃದ್ಧಿ ವಿಚಾರದಲ್ಲಿ ರಾಜಿಯೇ ಇಲ್ಲ. ಹಿಂದುತ್ವವೇ ನನ್ನ ಮೊದಲ ಆಯ್ಕೆ. ಸಚಿವ, ಶಾಸಕ ಸ್ಥಾನ ಆ ನಂತರದ ಆಯ್ಕೆ ಎಂದು ಉಡುಪಿ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

    ಹೆಜಮಾಡಿ ಮೂಲಕ ಸುನೀಲ್ ಕುಮಾರ್ ಉಡುಪಿ ಜಿಲ್ಲೆಗೆ ಆಗಮಿಸಿದರು. ಬೆಳ್ಮಣ್ ನಲ್ಲಿ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಿಜೆಪಿ ನಾಯಕರು, ಕಾರ್ಯಕರ್ತರು ಬರಮಾಡಿಕೊಂಡರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀಲ್ ಕುಮಾರ್ ಅವರು, ಸಚಿವನಾಗಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸುತ್ತಿದ್ದೇನೆ. ಉಡುಪಿಗೆ ಬರುತ್ತಿರುವುದು ಸಂತೋಷ, ಭಾವನಾತ್ಮಕ ಕ್ಷಣ. ಕಾರ್ಕಳ ಕ್ಷೇತ್ರದ ಜನ ಮೂರುಬಾರಿ ಆಯ್ಕೆ ಮಾಡಿದ್ದರಿಂದ ಸಚಿವನಾದೆ. ಆದರೆ ಯಾವುದೇ ಹಂತದಲ್ಲೂ ಹಿಂದುತ್ವ ವಿಚಾರದಲ್ಲಿ ರಾಜಿ ಮಾಡುವುದಿಲ್ಲ. ಮೊದಲ ಆಯ್ಕೆ ಹಿಂದುತ್ವ ಮತ್ತು ಅಭಿವೃದ್ಧಿ ಎಂದರು.

    ಪಕ್ಷ ದೊಡ್ಡ ಪ್ರಮಾಣದ ಹೊಣೆಗಾರಿಕೆಯನ್ನು ಹೆಗಲಿಗೇರಿಸಿದೆ. ಸಿಎಂ ಮತ್ತು ಪಕ್ಷದ ಹಿರಿಯರ ನಿರೀಕ್ಷೆಯಿಟ್ಟು ಸ್ಥಾನ ಕೊಟ್ಟಿದ್ದಾರೆ. ಜವಾಬ್ದಾರಿ ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನಗೆ ಇಷ್ಟದ ಖಾತೆ ಎಂದು ಯಾವುದು ಇಲ್ಲ ಮುಖ್ಯಮಂತ್ರಿಗಳು ಕೊಟ್ಟ ಖಾತೆಯನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದರು. ಇದನ್ನೂ ಓದಿ: ಅಭಿನಂದಿಸಲು ಹಾರ ತುರಾಯಿ ತರಬೇಡಿ, ಪುಸ್ತಕ ತನ್ನಿ: ಸುನೀಲ್ ಕುಮಾರ್

    ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ
    ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಪಕ್ಷ ಗೌರವ ಕೊಟ್ಟಿದೆ. ಶ್ರೀನಿವಾಸ್ ಶೆಟ್ಟಿಅವರಿಗೆ ಇನ್ನಷ್ಟು ಗೌರವ ಸಿಗಬೇಕು ಎಂಬ ನಿರೀಕ್ಷೆ ಸಹಜ. ಸಚಿವನಾಗಿ ನಾನು ಮಾಡುವ ಕೆಲಸಕ್ಕೆ ಶ್ರೀನಿವಾಸ್ ಶೆಟ್ಟಿ ಬೆಂಬಲ ಬೇಕು. ಸಚಿವ ಶ್ರೀನಿವಾಸ ಪೂಜಾರಿ, ಅಂಗಾರ ಅವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ. ಬಿಜೆಪಿ ಹಾಲಾಡಿಯವರನ್ನು ಖಂಡಿತ ಗುರುತಿಸುತ್ತದೆ. ಪಕ್ಷ ಹಾಲಾಡಿಯನ್ನು ಕರೆದು ಮಾತನಾಡಿಸುತ್ತದೆ ಎಂದು ಸುನೀಲ್ ಕುಮಾರ್ ಹೇಳಿದರು.

    ವಿಜಯೇಂದ್ರ ಅವರಿಗೆ ಸೂಕ್ತ ಸ್ಥಾನಮಾನ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಅದನ್ನು ತೀರ್ಮಾನಿಸುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ವಿಚಾರಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡದ ಅವರು, ನಳಿನ್ ಕುಮಾರ್ ಕಟೀಲ್ ಅವರೇ ನಮ್ಮ ಅಧ್ಯಕ್ಷರು ಎಂದರು.

    ಕಾಪು ಶಾಸಕ ಲಾಲಾಜಿ ಮೆಂಡನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ಶಾಸಕ ಭರತ್ ಶೆಟ್ಟಿ ಸಚಿವರ ಜೊತೆಗಿದ್ದರು.

  • ತುಂಬಿ ಹರಿಯುವ ನದಿಯಲ್ಲಿ ಗಾಯಾಳು ಮಹಿಳೆಯನ್ನು ಸ್ಟ್ರೆಚ್ಚರ್ ನಲ್ಲಿ ಹೊತ್ತೊಯ್ದರು

    ತುಂಬಿ ಹರಿಯುವ ನದಿಯಲ್ಲಿ ಗಾಯಾಳು ಮಹಿಳೆಯನ್ನು ಸ್ಟ್ರೆಚ್ಚರ್ ನಲ್ಲಿ ಹೊತ್ತೊಯ್ದರು

    -ಸಚಿವ ಅಂಗಾರ ಕ್ಷೇತ್ರದ ದುರವಸ್ಥೆ

    ಮಂಗಳೂರು: ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ಕ್ಷೇತ್ರದಲ್ಲಿ ತುಂಬಿ ಹರಿಯುವ ನದಿಯಲ್ಲಿ ಗಾಯಾಳು ಮಹಿಳೆಯನ್ನು ಸ್ಟ್ರೆಚರ್ ನಲ್ಲಿ ಎತ್ತಿಕೊಂಡು ಹೋದ ಘಟನೆ ಇಂದು ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿನ ಮರಸಂಕ ಎಂಬಲ್ಲಿನ ನಿವಾಸಿ ದೇವಕಿಯವರು ಮನೆಯಲ್ಲಿ ಕಾಲು ಜಾರಿ ಬಿದ್ದು, ಕಾಲು ಮುರಿತಕ್ಕೊಳಗಾಗಿದ್ದರು. ಆದರೆ ಚಿಕಿತ್ಸೆಗಾಗಿ ನಗರಕ್ಕೆ ಹೋಗಬೇಕಾದರೆ ಮರಸಂಕದಲ್ಲಿರುವ ಕಿರುನದಿಯನ್ನು ದಾಟಿ ಹೋಗಬೇಕು. ಈ ನದಿಗೆ ಸೇತುವೆಯೇ ಇಲ್ಲ. ಆದ್ದರಿಂದ ತುಂಬಿ ಹರಿಯುವ ಹೊಳೆಯನ್ನೇ ದಾಟಿ ಹೋಗಬೇಕು. ಹೀಗಾಗಿ ತುಂಬಿ ಹರಿಯುವ ಹೊಳೆಯಲ್ಲಿ ದೇವಕಿಯವರನ್ನು ಸ್ಥಳೀಯರು ಸ್ಟ್ರೆಚರ್ ನಲ್ಲಿ ಹೊತ್ತುಕೊಂಡು ಹೋದರು. ಬಳಿಕ ಹೊಳೆ ದಾಟಿ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಇದು ಅಂಗಾರ ಅವರ ಕ್ಷೇತ್ರದ ದುರವಸ್ಥೆಯಾಗಿದೆ.  ಇದನ್ನೂ ಓದಿ: ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಜಾಲ್ಸೂರಿನ ಮರಸಂಕದಲ್ಲಿ 9 ಮನೆಗಳಿದ್ದು ಸುಮಾರು 50 ಜನ ವಾಸಿಸುತ್ತಿದ್ದಾರೆ. ಸುಮಾರು ಅರ್ಧ ಕಿಲೋಮೀಟರ್ ಹೊಳೆ ದಾಟಿ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇಲ್ಲಿದೆ. ಪಯಸ್ವಿನಿ ನದಿಗೆ ಸೇರುವ ಈ ಹೊಳೆಯಲ್ಲಿ ಬಾರಿ ಮಳೆ ಬರುತ್ತಿರುವಾಗ ನೀರು ಅಪಾಯದ ಮಟ್ಟ ತಲುಪುತ್ತದೆ. ಕಳೆದ ವರ್ಷ ಗರ್ಭಿಣಿಯನ್ನು ಹೊತ್ತುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈ ಊರಿನ ಜನ 15 ವರ್ಷದಿಂದ ಸೇತುವೆಗಾಗಿ ಮನವಿ ಮಾಡಿದ್ರೂ ಇಂದಿಗೂ ಸೇತುವೆ ಕನಸಿನ ಭರವಸೆ ಹಾಗೇ ಉಳಿದಿದೆ.

  • ಸುಳ್ಯದ ಅಟ್ಲೂರಿನಲ್ಲಿ 200 ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಿದ ಅಂಗಾರ

    ಸುಳ್ಯದ ಅಟ್ಲೂರಿನಲ್ಲಿ 200 ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಿದ ಅಂಗಾರ

    ಮಂಗಳೂರು: ಕೊರೊನಾ ಸಂಕಷ್ಟದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಮುಳ್ಯ ಅಟ್ಲೂರ್ ಮತ್ತು ಪ್ರಣವ್ ಫೌಂಡೇಶನ್ ಇವರ ಸಹಭಾಗಿತ್ವದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮುಳ್ಯ 6ನೇ ವಾರ್ಡ್‍ನ ಬಿಪಿಎಲ್ ಕಾರ್ಡ್‍ದಾರರಿಗೆ ಮೀನುಗಾರಿಕೆ ಬಂದರು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಫುಡ್ ಕಿಟ್ ವಿತರಣೆ ಮಾಡಿದರು.

    ಮುಳ್ಯ ಭಜನಾ ಮಂದಿರ ಆವರಣದಲ್ಲಿ ಫುಡ್ ಕಿಟ್ ವಿತರಣೆಗೆ ಅಂಗಾರ ಅವರು ಚಾಲನೆ ನೀಡಿದರು. ಸಚಿವರಿಗೆ ಗ್ರಾಮಸ್ಥರಿಂದ ಸನ್ಮಾನ ನಡೆದ ನಂತರ ಸಾಂಕೇತಿಕವಾಗಿ 10 ಜನರಿಗೆ ಕಿಟ್ ನೀಡಲಾಯಿತು. ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಅಜ್ಜಾವರ ಗ್ರಾ.ಪಂ ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಸದಸ್ಯೆ ರತ್ನಾವತಿ, ದೇವಪ್ಪಗೌಡ ಮುಳ್ಯ, ರುದ್ರಪ್ಪ ಗೌಡ, ಮನ್ಮಥ ಗೌಡ ಮುಳ್ಯ, ತಾರನಾಥ ಅತ್ಯಡ್ಕ, ಸುಳ್ಯ ಸಿ ಎ ಬ್ಯಾಂಕ್ ನಿರ್ದೇಶಕ ವಾಸುದೇವ ನಾಯಕ್, ಗುರುದತ್ ನಾಯಕ್, ಕಿಟ್ಟಣ್ಣ ರೈ ಮೇನಾಲ, ಪ್ರಭೋದ್ ಶೆಟ್ಟಿ ಮೇನಾಲ, ಸುನೀಲ್ ರೈ ಮೇನಾಲ, ಊರವರು ಭಾಗವಸಿದ್ದರು. ಇದನ್ನೂ ಓದಿ: ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಸುಳ್ಯ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ ಸ್ವಾಗತಿಸಿ, ನಾಗರಾಜ್ ಮುಳ್ಯ ವಂದಿಸಿದರು. ವಾರ್ಡ್ ವ್ಯಾಪ್ತಿಯ 200 ಕುಟುಂಬಗಳಿಗೆ ತಲಾ ಸಾವಿರದ ನೂರು ರೂ. ಮೌಲ್ಯದ ಆಹಾರದ ಕಿಟ್‍ನ್ನು ವಿತರಿಸಲಾಯಿತು.

     

  • ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಚಿಕ್ಕಮಗಳೂರು: ಜಿಲ್ಲಾಡಳಿತ ನನ್ನನ್ನು ನಿರ್ಲಕ್ಷ್ಯ ಮಾಡಿದೆ. ಜಿಲ್ಲಾಧಿಕಾರಿ ಉದ್ದೇಶ ಪೂರ್ವಕವಾಗಿ ಮಾಡಿದ್ದರೆ ಪ್ರಿವಿಲೇಜ್ ಮೂವ್ ಮಾಡಿ ಏನೆಂದು ತೋರಿಸುತ್ತಿದ್ದೆ. ಆದರೆ, ಇಲ್ಲಿ ಜಿಲ್ಲಾಧಿಕಾರಿಯನ್ನು ರಾಜಕಾರಣದ ಕೈಗೊಂಬೆ ಮಾಡಿಕೊಂಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಭೋಜೇಗೌಡರು, ಇಂದು ಜಿಲ್ಲಾಡಳಿತ ನನ್ನನ್ನು ನಿರ್ಲಕ್ಷ್ಯ ಮಾಡಿದೆ. ಯಾವುದೇ ಸಭೆ-ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಕೂತು ಪ್ರತಿಭಟನೆ ನಡೆಸಿದರು.

    ಜಿಲ್ಲಾ ಮಂತ್ರಿಗಳಿಗೆ ಪ್ರೋಟೋಕಾಲ್ ಏನೆಂದು ಗೊತ್ತಿಲ್ಲವೇ? ಎಂಟು ಬಾರಿ ಶಾಸಕರಾಗಿದ್ದಾರೆ, ನಾನು ಹೇಳಿಕೊಡಬೇಕಾ? ಒಂದು-ಎರಡು ಬಾರಿಯಲ್ಲ ಹಲವು ಬಾರಿ ಹೇಳಿದ್ದೇನೆ. ಅವರು ನಮಗೆ ಬುದ್ಧಿ ಹೇಳಬೇಕು. ಸರ್ಕಾರ ಅವರಿಗೆ ಜನರ ದುಡ್ಡಲ್ಲಿ ಎಲ್ಲಾ ಅಧಿಕಾರಿಗಳನ್ನು ನೀಡಿದೆ. ಕೈಗೊಬ್ಬ-ಕಾಲಿಗೊಬ್ಬ ಪಿಎಗಳು ಇದ್ದಾರೆ. ಪಿಎಗಳ ಮೂಲಕ ಶಾಸಕರಿಗೆ ನಿಮ್ಮ ಪ್ರವಾಸದ ಕಾರ್ಯಕ್ರಮವನ್ನು ತಿಳಿಸಲು ಆಗುವುದಿಲ್ಲವೇ? ನಿಮ್ಮ ತಿಂಗಳ ಪ್ರವಾಸದ ಕಾಪಿ ಹಾಕುವುದಿಲ್ಲವೇ, ಕಾರ್ಯಕ್ರಮದ ಕಾಪಿಯನ್ನು ಶಾಸಕರಿಗೆ ಏಕೆ ಕಳಿಸುವುದಿಲ್ಲ ಎಂದು ಸಚಿವ ಅಂಗಾರ ವಿರುದ್ಧ ಕಿಡಿಕಾರಿದ್ದಾರೆ.

    ಆರಂಭದಲ್ಲೇ ಜಿಲ್ಲಾ ಮಂತ್ರಿಗಳಿಗೂ ಹೇಳಿದ್ದೇನೆ. ಪ್ರಾಣೇಶ್ ಇದ್ದರೂ ನಿನ್ನದು ಬರಬೇಕು ಕಣಯ್ಯ ಎಂದಿದ್ದೇನೆ. ಅವರು ಉಪಸಭಾಪತಿ ಗೌರವವಿದೆ, ಸಮಾಧಾನದಲ್ಲಿ ಹೇಳಿದ್ದೇನೆ. ಅಧಿಕಾರಿಗಳ ಸಭೆಗಳಲ್ಲಿ ಭೋಜೇಗೌಡ ಇರುವುದಿಲ್ಲ ಸಭೆಯಲ್ಲಿ ಶಾಸಕರು, ಸಂಸದರು ಕೂತಾಗ ನಮಗೆ ಬೇರೆಯವರು ಕೇಳುತ್ತಾರೆ. ನಾನೊಬ್ಬ ಜನಪ್ರತಿನಿಧಿಯಾಗಿ ಸಭೆಗೆ ಹೋಗಿಲ್ಲ ಅಂದರೆ ಜನ ಏನೆಂದು ತಿಳಿದುಕೊಳ್ಳುತ್ತಾರೆ. ನೀವು ಶಿಷ್ಟಾಚಾರವನ್ನು ಪಾಲನೆ ಮಾಡಿದ್ದೀರಾ? ನಾನು ಶಾಸಕ ಅಲ್ವಾ. 6 ಜಿಲ್ಲೆ 39 ತಾಲೂಕಿನಲ್ಲಿ ನನಗೆ ಪ್ರೋಟೋಕಾಲ್ ಇದೆ ಎಂದು ಹೇಳಿದರು. ಇದನ್ನೂ ಓದಿ: ಉತ್ತಮ ಆಡಳಿತ ಕೊಡುವ ಮನೋಭಾವ ಇದ್ರೆ ಖಾತೆ ಕ್ಯಾತೆ ಬರಲ್ಲ- ಅಸಮಾಧಾನಿತರನ್ನು ಚಿವುಟಿದ ಅಂಗಾರ

    ಇದು ನನ್ನ ನೋಡೆಲ್ ಕ್ಷೇತ್ರ. ನಿಮ್ಮ ಗುಂಪುಗಾರಿಕೆ ಇದ್ದರೆ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಜಿಲ್ಲಾ ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ನನಗೆ ಅದು ಗೊತ್ತಿದೆ. ಆ ಶಾಸಕರು, ಈ ಶಾಸಕರನ್ನು ಕರೆಯಬಾರದು ಎಂದು ನಿಮ್ಮ ಗುಂಪುಗಾರಿಕೆಯಿಂದ ನಿಮ್ಮ ಪಕ್ಷದ ಕಚೇರಿಯಲ್ಲಿ ಅಥವಾ ಮನೆಯಲ್ಲಿ ಇಟ್ಟುಕೊಳ್ಳಿ ಎಂದು ಹೇಳಿ ಅಂಗಾರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

  • ಮೀನುಗಾರರಿಗೆ ಕೊರೊನಾ ಪರಿಹಾರ ಘೋಷಣೆ ರೂಪುರೇಷೆ ಸಿದ್ದವಾಗಿಲ್ಲ – ಸಚಿವ ಅಂಗಾರ

    ಮೀನುಗಾರರಿಗೆ ಕೊರೊನಾ ಪರಿಹಾರ ಘೋಷಣೆ ರೂಪುರೇಷೆ ಸಿದ್ದವಾಗಿಲ್ಲ – ಸಚಿವ ಅಂಗಾರ

    ಕಾರವಾರ: ರಾಜ್ಯದಲ್ಲಿ ಮೀನುಗಾರರಿಗೆ ಕೊರೊನಾ ಪರಿಹಾರ ಘೋಷಣೆ ವಿಚಾರದಲ್ಲಿ ಇನ್ನೂ ಸರಿಯಾದ ರೂಪುರೇಷೆ ಸಿದ್ದವಾಗಿಲ್ಲ ಎಂದು ಮೀನುಗಾರಿಕೆ ಸಚಿವ ಎಸ್ ಅಂಗಾರ ಹೇಳಿದ್ದಾರೆ. ಇದನ್ನು ಓದಿ: ತುಮಕೂರು, ಎರಡು ಪ್ರತ್ಯೇಕ ಅಪಘಾತ – ನಾಲ್ವರ ಸಾವು

    ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಮತ್ತು ಬೈತಖೋಲ್ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಮೀನುಗಾರರಿಗೆ ಸೂಕ್ತ ಪರಿಹಾರ ಘೋಷಿಸಿರಲಿಲ್ಲ. ಈ ಬಾರಿ ಮುಖ್ಯಮಂತ್ರಿಗಳು ಗಮನ ನೀಡಿದ್ದಾರೆ. ಮೀನುಗಾರರ ಉಳಿತಾಯ ಪರಿಹಾರ ಯೋಜನೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಬರುವ ಶುಕ್ರವಾರ ಮೀನುಗಾರಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಫೈನಲ್ ಮಾಡುತ್ತೇವೆ. ಡಿಸೇಲ್, ಸೀಮೆಎಣ್ಣೆ ಸಬ್ಸಿಡಿ ಬಾಕಿ ಇರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಹೆಚ್ಚುವರಿ ಹಣ ಬಿಡುಗಡೆಗೆ ಒತ್ತಾಯಿಸಿದ್ದೇವೆ ಎಂದರು.

    ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವೆಲ್ಲರೂ ಒಂದು ವಿಚಾರದಲ್ಲಿ ಬೆಳೆದು ಬಂದವರು. ನಮಗೆ ನಾಯಕತ್ವದ ಪ್ರಶ್ನೆ ಬರೋದಿಲ್ಲ. ನಾವು ಯಾವ ನಾಯಕತ್ವದಲ್ಲಿ ಇರಲು ಸಿದ್ದರಿದ್ದೇವೆ. ಹಾಗಂತ ಯಡಿಯೂರಪ್ಪ ಅವರನ್ನ ಬದಲಾಯಿಸಲು ಬಯಸುವುದಿಲ್ಲ ಎಂದು ಅಂಗಾರ ಹೇಳಿದರು. ಇದನ್ನು ಓದಿ: ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ: ಕೇಂದ್ರ ಸಚಿವ ಜೋಶಿ

  • ಪತ್ರಕರ್ತರ ಗ್ರಾಮ ವಾಸ್ತವ್ಯ ನನ್ನ ಕಣ್ಣು ತೆರೆಸಿದೆ, ಎಲ್ಲಾ ಜಿಲ್ಲೆಗಳಲ್ಲಿ ನಡೆಯಲಿ- ಈಶ್ವರಪ್ಪ

    ಪತ್ರಕರ್ತರ ಗ್ರಾಮ ವಾಸ್ತವ್ಯ ನನ್ನ ಕಣ್ಣು ತೆರೆಸಿದೆ, ಎಲ್ಲಾ ಜಿಲ್ಲೆಗಳಲ್ಲಿ ನಡೆಯಲಿ- ಈಶ್ವರಪ್ಪ

    ಮಂಗಳೂರು:ಕುಟುಂಬದ ರೀತಿಯಲ್ಲಿ ಗ್ರಾಮಸ್ಥರನ್ನು ಸೇರಿಸಿ ಅಭಿವೃದ್ಧಿಗೆ ಪೂರಕವಾದ ಈ ಗ್ರಾಮ ವಾಸ್ತವ್ಯ ರಾಜ್ಯಕ್ಕೆ ಮಾದರಿಯಾಗಿದೆ. ಈ ಗ್ರಾಮ ವಾಸ್ತವ್ಯ ಎಲ್ಲಾ ಜಿಲ್ಲೆಗಳಲ್ಲಿ ನಡೆಯುವಂತಾಗಲಿ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕಡಬ ತಾಲೂಕಿನ ಕೊಂಬಾರಿನಲ್ಲಿ ಭಾನುವಾರ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಈ ಕಾರ್ಯಕ್ರಮ ನನ್ನ ಕಣ್ಣು ತೆರೆಸಿದೆ. ಇದರಿಂದ ಗ್ರಾಮಗಳ ಸಮಸ್ಯೆಗಳು ಬಗೆ ಹರಿಯಲಿದೆ. ಇಲಾಖೆಗಳು ಚುರುಕು ಪಡೆಯುತ್ತವೆ ಎಂದು ಅವರು ಹೇಳಿದರು. ಸಚಿವ ಅಂಗಾರರನ್ನು ಮುಕ್ತ ಕಂಠದಿಂದ ಹೊಗಳಿದ ಈಶ್ವರಪ್ಪ ಅಂಗಾರ ಅವರೊಬ್ಬ ನಿಷ್ಠಾವಂತ ಕಾರ್ಯಕರ್ತ ಮಾತ್ರವಲ್ಲದೆ ರಾಜ್ಯದ ಮಾದರಿ ರಾಜಕಾರಣಿ ಎಂದರು.

    ಪತ್ರಕರ್ತರ ಗ್ರಾಮ ವಾಸ್ತವ್ಯ ನಡೆದ ಹಿಂದುಳಿದ ಪ್ರದೇಶವಾದ ಕೊಂಬಾರು ಗ್ರಾಮದ ಜನರ ಬಹು ಬೇಡಿಕೆಯಾದ ನಾಲ್ಕು ರಸ್ತೆಗಳನ್ನು ಅಭಿವೃದ್ಧಿ ಮಾಡಲು ಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

    ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಗ್ರಾಮ ವಾಸ್ತವ್ಯ ವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮಡಪ್ಪಾಡಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ದ ಕೈಪಿಡಿಯನ್ನು ಸಚಿವ ಈಶ್ವರಪ್ಪ ಬಿಡುಗಡೆಗೊಳಿಸಿದರು.

    ಬಂದರು, ಮೀನುಗಾರಿಕಾ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ, ಸುಳ್ಯ ವಿಧಾನಸಭೆ ಕ್ಷೇತ್ರ ಬಹಳಷ್ಟು ಗ್ರಾಮೀಣ ಭಾಗವನ್ನು ಹೊಂದಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಪ್ರಮುಖ ಬೇಡಿಕೆಯಾಗಿದೆ. ಅನುದಾನದ ಲಭ್ಯತೆ ನೋಡಿಕೊಂಡು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.

    ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಸ್ಥಳೀಯ ಅನುದಾನಗಳು ಸಾಕಾಗುವುದಿಲ್ಲ. ಅದಕ್ಕಾಗಿ ಗ್ರಾಮೀಣ ರಸ್ತೆಗಳನ್ನು ಲೋಕೋಪಯೋಗಿ ರಸ್ತೆಗಳನ್ನಾಗಿ ಮೇಲ್ದರ್ಜೆಗೆ ಏರಿಸಿ ಹೆಚ್ಚು ಅನುದಾನ ತರಿಸಿ ಸರ್ವಋತು ರಸ್ತೆಗಳನ್ನಾಗಿ ಮಾಡಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು. ಪತ್ರಕರ್ತರ ಗ್ರಾಮ ವಾಸ್ತವ್ಯ ಪರಿಕಲ್ಪನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗೃತಿ ಮೂಡಿಸುವ ಕಾಯ್ರಕ್ರಮ ಆಗಲಿದೆ. ಇಂತಹಾ ಕಾರ್ಯಕ್ರಮ ಹೆಚ್ಚು ಹೆಚ್ಚಾಗಿ ನಡೆಯಲಿ ಎಂದು ಶುಭ ಹಾರೈಸಿದರು.

    ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಡಬ ತಾ.ಪಂ. ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಉಪಾಧ್ಯಕ್ಷೆ ಜಯಂತಿ ಆರ್ ಗೌಡ, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ಕಡಬ ತಹಶಿಲ್ದಾರ್ ಅನಂತ ಶಂಕರ್, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್. ರವಿಕುಮಾರ್, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು.

    ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪತ್ರಕರ್ತ ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.

  • ನಾನು ತತ್ವ ನಿಷ್ಠೆಯನ್ನ ಬಿಡೋದಕ್ಕೆ ಆಗಲ್ಲ: ಶಾಸಕ ಅಂಗಾರ ಅಸಮಾಧಾನ

    ನಾನು ತತ್ವ ನಿಷ್ಠೆಯನ್ನ ಬಿಡೋದಕ್ಕೆ ಆಗಲ್ಲ: ಶಾಸಕ ಅಂಗಾರ ಅಸಮಾಧಾನ

    ಬೆಂಗಳೂರು: ಪಕ್ಷದ ಶಿಸ್ತಿನ ಸಿಪಾಯಿ ಎಂದೇ ಬಿಂಬಿಸಿಕೊಂಡಿದ್ದ ಸುಳ್ಯ ಶಾಸಕ ಎಸ್ ಅಂಗಾರ ಅವರು ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

    ವಿಡಿಯೋದಲ್ಲಿ ಮಾತನಾಡಿದ ಅವರು, ನಾನು ನಮ್ಮ ಕ್ಷೇತ್ರದಿಂದ ಸಚಿವನಾಗಬೇಕು ಎಂಬುವುದು ನಮ್ಮ ಜಿಲ್ಲೆ ಮತ್ತು ಕ್ಷೇತ್ರದ ಜನರ ಅಪೇಕ್ಷೆಯಾಗಿದೆ. ಆದರೆ ಕಳೆದ ಅನೇಕ ವರ್ಷಗಳಿಂದ ಸಂಘಟನೆಯಲ್ಲಿ ತತ್ವ ಮತ್ತು ಸಿದ್ಧಾಂತವನ್ನು ನಂಬಿ ನಾನು ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಇಂದು ತತ್ವ ನಿಷ್ಠೆಗಳಿಗೆ ಮಹತ್ವ ಇಲ್ಲವೆಂದರೆ ನಾವು ಏನು ಮಾಡುವುದಕ್ಕೆ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ನಾವು ತತ್ವ ನಿಷ್ಠೆಯನ್ನು ಬಿಡುವುದಕ್ಕೆ ಆಗಲ್ಲ. ಸಂಘಟನೆಯ ಪ್ರಮುಖ ಭಾಗ ಮತ್ತು ಸಂಘಟನೆ ಯಶಸ್ವಿಯಾಗಿ ನಡೆಯಬೇಕಾದರೆ ತತ್ವ ನಿಷ್ಠೆಯೇ ಅತ್ಯಂತ ಪ್ರಮುಖವಾಗಿದೆ. ಆದ ಕಾರಣ ಇಂದು ನಮಗೆ ಸಚಿವ ಸ್ಥಾನ ಸಿಗದೇ ಇರಬಹುದು. ಆದರೆ ಸಂಘಟನೆಯಲ್ಲಿ ಯಾವುದೇ ರೀತಿಯ ಮನಸ್ತಾಪ ಇಲ್ಲ. ಕೆಲವು ಘಟನೆಗಳು ಈ ರೀತಿ ಆಗುತ್ತವೆ. ಅದಕ್ಕೆ ನಾವು ಏನು ಮಾಡುವುದಕ್ಕೆ ಆಗಲ್ಲ. ಇಂದು ನಮ್ಮ ಕ್ಷೇತ್ರದ ಜನರು ನಮ್ಮ ಮೇಲಿನ ಅಭಿಮಾನ ಗೌರವದಿಂದ ಬಂದಿದ್ದರು. ಹೀಗಾಗಿ ಅವರಿಗೆಲ್ಲ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

    ದಕ್ಷಿಣ ಕನ್ನಡದ ಲೋಕಸಭಾ ಕ್ಷೇತ್ರದಲ್ಲಿ ಬರುವ ಒಟ್ಟು 8 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದುಕೊಂಡಿದೆ. ಹರೀಶ್ ಪೂಂಜಾ(ಬೆಳ್ತಂಗಡಿ), ಉಮನಾಥ ಕೋಟ್ಯಾನ್(ಮೂಡಬಿದಿರೆ), ಡಾ. ಭರತ್ ಶೆಟ್ಟಿ( ಮಂಗಳೂರು ಉತ್ತರ), ವೇದವ್ಯಾಸ ಕಾಮತ್(ಮಂಗಳೂರು ದಕ್ಷಿಣ), ರಾಜೇಶ್ ನಾಯ್ಕ್(ಬಂಟ್ವಾಳ), ಸಂಜೀವ ಮಠದೂರ್(ಪುತ್ತೂರು) ಜಯಗಳಿಸಿದ್ದರು.

    ರಾಜ್ಯದ ಹಿರಿಯ ಬಿಜೆಪಿ ಶಾಸಕರಾಗಿರುವ ಜೊತೆಗೆ ಜಿಲ್ಲೆಗೊಂದು ಉಸ್ತುವಾರಿ ಸಚಿವರಾಗಬೇಕಾದ ಹಿನ್ನೆಲೆಯಲ್ಲಿ ಈ ಬಾರಿ ಎಸ್‍ಸಿ ಮೀಸಲು ಕ್ಷೇತ್ರದಿಂದ ಜಯಗಳಿಸಿದ್ದ ಅಂಗಾರ ಅವರಿಗೆ ಮಂತ್ರಿ ಸ್ಥಾನ ಸಿಗುವುದು ಖಚಿತ ಎನ್ನುವ ಮಾತು ಕೇಳಿ ಬಂದಿತ್ತು. ಅಷ್ಟೇ ಅಲ್ಲದೇ ಬಿಜೆಪಿ ವಲಯದಲ್ಲೂ ಮಂತ್ರಿ ಸ್ಥಾನದ ಬಗ್ಗೆ ವಿಶ್ವಾಸದ ಮಾತು ಕೇಳಿ ಬಂದಿತ್ತು.

    ಅಂಗಾರ ಅವರು 1994 ರಿಂದ ಆರಂಭಗೊಂಡು 2018ರವರೆಗೆ ನಡೆದ ಚುನಾವಣೆಯಲ್ಲಿ ಸತತ ಆರು ಬಾರಿ ಗೆದ್ದಿದ್ದಾರೆ. ದೋಸ್ತಿ ಸರ್ಕಾರದಲ್ಲಿ ಮಂಗಳೂರು(ಹಿಂದೆ ಉಳ್ಳಾಲ ಆಗಿತ್ತು) ಕ್ಷೇತ್ರದಿಂದ ಗೆದ್ದಿದ್ದ ಯುಟಿ ಖಾದರ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿತ್ತು. ಅದಕ್ಕೂ ಮೊದಲು ಸಿದ್ದರಾಮಯ್ಯ ಸರ್ಕಾರದಲ್ಲಿ ರಾಮನಾಥ ರೈ, ಖಾದರ್ ಸಚಿವರಾಗಿದ್ದರೆ ಪುತ್ತೂರಿನಿಂದ ಗೆದ್ದಿದ್ದ ಶಕುಂತಲಾ ಶೆಟ್ಟಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.