Tag: anekal

  • ರಾಜ್ಯದಲ್ಲಿ ಮತ್ತೊಬ್ಬ ಬಿಜೆಪಿ ಮುಖಂಡನ ಭೀಕರ ಹತ್ಯೆ

    ರಾಜ್ಯದಲ್ಲಿ ಮತ್ತೊಬ್ಬ ಬಿಜೆಪಿ ಮುಖಂಡನ ಭೀಕರ ಹತ್ಯೆ

    – ಆರೋಪಿ ಮನೆಗೆ ಬೆಂಕಿ ಹಚ್ಚಿ ಆಕ್ರೋಶ

    ಬೆಂಗಳೂರು: ಕಳೆದ ಮಾರ್ಚ್ 14 ರಂದು ಬೊಮ್ಮಸಂದ್ರದಲ್ಲಿ ನಡೆದ ಬಿಜೆಪಿ ಮುಖಂಡ ವಾಸು ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೋರ್ವ ಬಿಜೆಪಿ ಮುಖಂಡನ ಬರ್ಬರ ಹತ್ಯೆ ನಡೆದಿದ್ದು ಆನೇಕಲ್ ತಾಲೂಕಿನ ಜನತೆಯನ್ನು ಬೆಚ್ಚಿಬೀಳಿಸಿದೆ.

    ಬಿಜೆಪಿ ಎಸ್‍ಸಿ-ಎಸ್‍ಟಿ ಮೋರ್ಚಾ ಉಪಾಧ್ಯಕ್ಷ ಹರೀಶ್(36) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆನೇಕಲ್ ತಾಲೂಕಿನ ಹೀಲಳಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಲೆಗೆ ರಾಜಕೀಯ ವೈಷಮ್ಯವೇ ಕಾರಣ ಅಂತ ಹೇಳಲಾಗ್ತಿದೆ.

    ಕಳೆದ ರಾತ್ರಿ ಹರೀಶ್ 11:30 ರ ಸಮಾರಿನಲ್ಲಿ ತನ್ನ ಸ್ನೇಹಿತರಿಗೆ ತಮ್ಮನ ಮದುವೆ ಲಗ್ನ ಪತ್ರಿಕೆಗಳನ್ನು ನೀಡಿ ತನ್ನ ಬಿಳಿ ಬಣ್ಣದ ಕರಿಷ್ಮಾ ಬೈಕ್‍ನಲ್ಲಿ ಮನೆಗೆ ವಾಪಸ್ಸಾಗುವಾಗ ಚಂದಾಪುರ ಸಮೀಪದ ಹೀಲಳಿಗೆ ಗೇಟ್‍ನಲ್ಲಿ ದುಷ್ಕರ್ಮಿಗಳು ಹರೀಶ್ ಮೇಲೆ ಖಾರದ ಪುಡಿ ಎರಚಿದ್ದಾರೆ. ತಕ್ಷಣ ಬೈಕ್‍ನಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಲ್ಲುಗಳಿಂದ ಹಲ್ಲೆ ನಡೆದಿದ್ದು, ದಾರಿ ಕಾಣದೆ ಹರೀಶ್ ಮುಳ್ಳಿನ ತಂತಿಯ ಮೇಲೆ ಬಿದ್ದಿದ್ದಾರೆ. ಈ ವೇಳೆ ಡ್ರಾಗರ್ ನಿಂದ ಮನಸೋಯಿಚ್ಛೆ ಇರಿದು, ಪಕ್ಕದಲ್ಲೆ ಇದ್ದ ಕಾಂಕ್ರೀಟ್ ಬ್ಲಾಕ್‍ಗಳನ್ನು ತಲೆ ಮೇಲೆ ಎತ್ತಿಹಾಕಿ ಹರೀಶ್‍ರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.

    ಕಳೆದ ಮಾರ್ಚ್ 14 ರಂದು ಬೊಮ್ಮಸಂದ್ರ ಪುರಸಭೆ ಸದಸ್ಯ ಶ್ರೀನಿವಾಸ್ ಪ್ರಸಾದ್(ವಾಸು) ಹತ್ಯೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಬುಧವಾರ ತಡರಾತ್ರಿ ಹರೀಶ್ ಕೊಲೆಯಾಗಿದೆ. ಕಳೆದ ಒಂದುವರೆ ವರ್ಷದಲ್ಲಿ ಆನೇಕಲ್ ತಾಲೂಕಿನ ಮೂವರು ಬಿಜೆಪಿ ಮುಖಂಡರು ಕೊಲೆಯಾಗಿದ್ದಾರೆ. ಕೊಲೆಯಾದ ಹರೀಶ್ ಚಂದಾಪುರ ಪುರಸಭೆ ಅಧ್ಯಕ್ಷ ವೇಣುಗೋಪಾಲ್ ಬಾಮೈದ ಅಂತ ಗೊತ್ತಾಗಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಅದೇ ಗ್ರಾಮದ ರಾಜು ಎಂಬುವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು ರಾಜು ಮನೆಗೆ ಬೆಂಕಿ ಹಚ್ಚಿದ್ದಾರೆ.

    ಘಟನೆ ಬಳಿಕ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ಅಮಿತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು ಪೊಲೀಸ್ ಬಿಗಿಭದ್ರತೆ ವಹಿಸಲಾಗಿದೆ. ಘಟನೆ ಸಂಬಂಧ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಯಾದ ಬಿಜೆಪಿ ಮುಖಂಡ ಹರೀಶ್ ಮೃತದೇಹವನ್ನು ಸ್ಪರ್ಶ್ ಆಸ್ಪತ್ರೆಗೆ ರವಾನಿಸಲಾಗಿದೆ.

  • ವರ್ತೂರು ಕೋಡಿಯಲ್ಲಿ ನೊರೆಯ ಆರ್ಭಟ- ನೊರೆಯಲ್ಲಿ ಫೋಟೊ ಕ್ಲಿಕಿಸಿಕೊಳ್ಳಲು ಮುಂದಾದ ಜನ

    ವರ್ತೂರು ಕೋಡಿಯಲ್ಲಿ ನೊರೆಯ ಆರ್ಭಟ- ನೊರೆಯಲ್ಲಿ ಫೋಟೊ ಕ್ಲಿಕಿಸಿಕೊಳ್ಳಲು ಮುಂದಾದ ಜನ

    ಬೆಂಗಳೂರು: ಕಳೆದ ರಾತ್ರಿ ಸುರಿದ ಮಳೆಗೆ ವರ್ತೂರು ಕೋಡಿ ಕೆರೆಯಲ್ಲಿ ನೊರೆಯ ಆರ್ಭಟ ಹೆಚ್ಚಾಗಿದೆ. ಇನ್ನೂ ನೊರೆಯ ಒಂದೆಡೆ ಶೇಖರಣೆಯಾಗಿ ಹಿಮಾಲಯದಂತೆ ಕಾಣಿಸುತ್ತಿದ್ದು, ಸೆಲ್ಫೀ ಪ್ರಿಯರು ನೊರೆಯ ಮುಂಭಾಗದಲ್ಲಿ ಫೋಟೋ ಕ್ಲಿಕಿಸಿಕೊಳ್ಳುತ್ತಿದ್ದಾರೆ.

    ನೊರೆಯ ಸಮಸ್ಯೆಯನ್ನು ತಡೆಗಟ್ಟುವ ಸಲುವಾಗಿ ಬಿಡಿಎ ವತಿಯಿಂದ 20 ಅಡಿ ಎತ್ತರದ ಕಬ್ಬಿಣದ ಮೆಷ್ ಅಳವಡಿಸಲಾಗಿತ್ತು. ಆದರೆ ಬಿಡಿಎ ಅರ್ಧ ಭಾಗಕ್ಕೆ ಮಾತ್ರ ಮೆಷ್ ಅಳವಡಿಸಿ ಉಳಿದ ಅರ್ಧಭಾಗ ಕಾಲಿ ಬಿಟ್ಟಿರುವುದರಿಂದಾಗಿ ನೊರೆ ಹೆಚ್ಚು ಸಂಗ್ರಹಣೆಯಾಗಿದೆ. ಮೆಷ್ ಒಳಗಡೆ ಭಾರೀ ಪ್ರಮಾಣದಲ್ಲಿ ನೊರೆ ಸಂಗ್ರಹಣೆಯಾಗಿದ್ದು, ನೊರೆ ರಸ್ತೆಗೆ ಬಂದು ವಾಹನ ಸವಾರರು ಪರದಾಡುವಂತಾಗಿದೆ.

    ಇಲ್ಲಿಯ ವರ್ಜೀನಿಯ ಮಾಲ್ ಗೇಟ್ ನಲ್ಲಿ ಬಳಿಯೇ ನೊರೆ ಶೇಖರಣೆಯಾಗಿದ್ದು, ಮಾಲ್ ಗೆ ಬರುವ ಗ್ರಾಹಕರಿಗೂ ತೊಂದರೆ ಉಂಟಾಗಿದೆ. ಮಾಲ್ ಸಿಬ್ಬಂದಿ ನೊರೆಯನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

    https://www.youtube.com/watch?v=_FxnpjRlTKg

  • ಬೆಂಗಳೂರಲ್ಲೊಂದು ಭಯಾನಕ ರೇಪ್ ಆ್ಯಂಡ್ ಮರ್ಡರ್!

    ಬೆಂಗಳೂರಲ್ಲೊಂದು ಭಯಾನಕ ರೇಪ್ ಆ್ಯಂಡ್ ಮರ್ಡರ್!

    ಬೆಂಗಳೂರು: ನೇಪಾಳ ಮೂಲದ ಗೃಹಿಣಿ ಮೇಲೆ ನೇಪಾಳಿ ಯುವಕನೇ ಅತ್ಯಾಚಾರವೆಸಗಿ ಕೊಲೆಮಾಡಿರುವ ಘಟನೆ ನಗರದ ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    20 ವರ್ಷದ ಪವಿತ್ರ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಹಿಳೆ. ನೇಪಾಳ ಮೂಲದ 26 ವರ್ಷದ ತಿಲಕ್ ಕೃತ್ಯವೆಸಗಿದ ಅರೋಪಿ. ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೊಂಪುರ ಗೇಟ್‍ನ ಟ್ರಿನಿಟಿ ಅಪಾರ್ಟೆಮೆಂಟ್ ಬಳಿ ನಡೆದಿದೆ.

    ಮೇ 4ರಿಂದ ಪವಿತ್ರಾ ಕಾಣೆಯಾಗಿದ್ದರು. ಪವಿತ್ರಾ ಅವರು ಕಾಣೆಯಾದ ಪತಿ ಕರುಣ್ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದರು. ಪವಿತ್ರಾ ಪತಿ ಕರುಣ್ ಹಾಗು ತಿಲಕ್ ನೇಪಾಳದಲ್ಲಿ ಪಕ್ಕದ ಊರಿನವರಾಗಿದ್ದು, ಒಂದೇ ಕಡೆ ಇಬ್ಬರೂ ಕೆಲಸ ಮಾಡಿಕೊಂಡಿದ್ದರು. ಆದರೆ ಮೇ 4ರಂದು ಪವಿತ್ರಾ ಅವರು ಕಾಣೆಯಾದ ದಿನಗಳಿಂದ ತಿಲಕ್ ಸಹ ನಾಪತ್ತೆಯಾಗಿದ್ದ.

    ಪ್ರಕರಣ ದಾಖಲಿಸಿಕೊಂಡ ಸರ್ಜಾಪುರ ಪೊಲೀಸರು ತನಿಖೆಯಲ್ಲಿ ಸಂಶಯಾಸ್ಪದವಾಗಿ ನಾಪತ್ತೆಯಾಗಿದ್ದ ತಿಲಕ್‍ನನ್ನು ಸೋಮವಾರ ಕೋರಮಂಗಲದಲ್ಲಿ ಬಂಧಿಸಿದ್ದರು. ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪವಿತ್ರಾ ಒಂಟಿಯಾಗಿದ್ದ ವೇಳೆ ತಿಲಕ್ ಮನೆಗೆ ನುಗ್ಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ನಂತರ ಪವಿತ್ರಾರ ಮನೆಯ ಕೂಗಳತೆಯ ದೂರದಲ್ಲಿ ಶವವನ್ನು ಹೂತಿಟ್ಟು ಪರಾರಿಯಾಗಿದ್ದ.

    https://www.youtube.com/watch?v=OMLG8gPfpyg

     

  • ನವಜಾತ ಹೆಣ್ಣು ಮಗುವನ್ನು ಪೊದೆಯಲ್ಲಿ ಬಿಸಾಡಿದ ನಿಷ್ಕರುಣಿ ತಾಯಿ

    ನವಜಾತ ಹೆಣ್ಣು ಮಗುವನ್ನು ಪೊದೆಯಲ್ಲಿ ಬಿಸಾಡಿದ ನಿಷ್ಕರುಣಿ ತಾಯಿ

    ಬೆಂಗಳೂರು: ನಗರದ ಹೊರವಲಯದ ಆನೇಕಲ್‍ನ ಅತ್ತಿಬೆಲೆ ಅಂಬೇಡ್ಕರ್ ಕಾಲೋನಿಯಲ್ಲಿ ನವಜಾತ ಹೆಣ್ಣು ಮಗುವೊಂದನ್ನು ಪಾಪಿ ತಾಯಿ ಪೊದೆಯಲ್ಲಿ ಬಿಸಾಡಿ ಹೋಗಿದ್ದಾಳೆ.

    ರೇಣುಕಾ-ಮಗು ರಕ್ಷಣೆ ಮಾಡಿದ ಮಹಿಳೆ

    ಪೊದೆಯೊಂದರಲ್ಲಿ ಮಗು ಅಳುವ ಸದ್ದು ಕೇಳಿ ಬಂದಿದ್ದು ಅದೇ ಮಾರ್ಗವಾಗಿ ಕೆಲಸಕ್ಕೆ ತೆರಳುತ್ತಿದ್ದ ರೇಣುಕಾ ಎಂಬವರು ಹುಡುಕಿದಾಗ ಹೆಣ್ಣು ಮಗು ಪತ್ತೆಯಾಗಿದೆ. ಕೂಡಲೇ ಮಗುವನ್ನು ರಕ್ಷಿಸಿ ಮನೆಗೆ ತಂದು ಆರೈಕೆ ಮಡಿದ ರೇಣುಕಾ ನಂತರ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಗುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಅತ್ತಿಬೆಲೆ ಪೊಲೀಸರು ಇದೀಗ ಮಗುವನ್ನು ಬೆಂಗಳೂರಿನ ಕಿದ್ವಾಯ್ ಆಸ್ಪತ್ರೆ ಆವರಣದಲ್ಲಿರುವ ಶಿಶು ವಿಹಾರ ಕೇಂದ್ರಕ್ಕೆ ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸುತ್ತ ಮುತ್ತಲ ಆಸ್ಪತ್ರೆಗಳಲ್ಲಿ ಕಳೆದ ಎರಡು ದಿನಗಳಲ್ಲಿ ಹೆರಿಗೆ ಆಗಿರುವ ಮಾಹಿತಿ ಪಡೆದುಕೊಂಡು ಮಗುವಿನ ಪೋಷಕರನ್ನು ಹುಡುಕುತ್ತಿದ್ದಾರೆ.

     

  • ವಿಡಿಯೋ: ಬಂಡೆಯೊಂದರ ಹಳ್ಳದಲ್ಲಿ ಬಿದ್ದ ಆನೆಮರಿಯ ರಕ್ಷಣೆ

    ವಿಡಿಯೋ: ಬಂಡೆಯೊಂದರ ಹಳ್ಳದಲ್ಲಿ ಬಿದ್ದ ಆನೆಮರಿಯ ರಕ್ಷಣೆ

    ಬೆಂಗಳೂರು: ರಾತ್ರಿ ಕಾಡಿನಿಂದ ಬಂದ ಆನೆಗಳ ಗುಂಪಿನಿಂದ ಬೇರ್ಪಟ್ಟು ಬಂಡೆಯ ಕಂದಕದಲ್ಲಿ ಬಿದ್ದಿದ್ದ ಮೂರು ವರ್ಷದ ಆನೆಮರಿಯನ್ನು ರಕ್ಷಿಸಲಾಗಿದೆ.

    ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಪ್ರದೇಶದ ತಳಿ ಗ್ರಾಮದ ಹುಲಿಬಂಡೆ ಎಂಬ ಅರಣ್ಯದಲ್ಲಿ ಆನೆಮರಿ ಕಂದಕಕ್ಕೆ ಬಿದ್ದಿತ್ತು. ತಳಿ ಗ್ರಾಮದ ಸುತ್ತಮುತ್ತ ಸಾವಿರಾರು ಎಕರೆ ಅರಣ್ಯ ಪ್ರದೇಶವಿದೆ. ಈ ಅರಣ್ಯ ಭಾಗದಲ್ಲಿ ಹೆಚ್ಚಾಗಿ ಆನೆಗಳು ವಾಸವಾಗಿವೆ.

    ಇದನ್ನೂ ಓದಿ: ವೀಡಿಯೋ: ಕಬ್ಬಿಣದ ಕಂಬಿಯ ಕೆಳಗೆ ಸಿಲುಕಿದ್ದ ಆನೆಯ ರಕ್ಷಣೆ

    ನೀರಿಗಾಗಿ ಹುಡಕಾಡುತ್ತಾ ಬಂಡೆಯ ಬಳಿಯ ಕೆರೆಗೆ ಆನೆಗಳು ಬಂದಿದ್ದು, ಈ ವೇಳೆ ಗುಂಪಿನಲ್ಲಿದ್ದ ಪುಟ್ಟ ಆನೆಮರಿ ಬಂಡೆಯ ಕಂದಕದಲ್ಲಿ ಬಿದ್ದಿರಬಹುದು ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಸದ್ಯ ಆನೆಮರಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮೇಲಕ್ಕೆತ್ತಿದ್ದಾರೆ. ಆನೆಮರಿಯನ್ನು ಸುರಕ್ಷಿತವಾಗಿ ಮತ್ತೆ ಆನೆಗಳ ಗುಂಪಿಗೆ ಸೇರಿಸಲಾಗಿದೆ.

    https://www.youtube.com/watch?v=beE9fKUxjWU

     

  • ಆನೇಕಲ್ ವೈದ್ಯರ ಬೇಜವಾಬ್ದಾರಿ – ದ್ವಿಚಕ್ರ ವಾಹನದಲ್ಲಿ ಕಂದನ ಶವ ಹೊತ್ತು ಹೊರಟ ತಂದೆ

    ಆನೇಕಲ್ ವೈದ್ಯರ ಬೇಜವಾಬ್ದಾರಿ – ದ್ವಿಚಕ್ರ ವಾಹನದಲ್ಲಿ ಕಂದನ ಶವ ಹೊತ್ತು ಹೊರಟ ತಂದೆ

    ಬೆಂಗಳೂರು: ವೈದ್ಯರ ಬೇಜವಾಬ್ದಾರಿ ನಡೆಯಿಂದ ಆನೇಕಲ್‍ನಲ್ಲಿ ತಂದೆಯೊಬ್ಬರು ದ್ವಿಚಕ್ರ ವಾಹನದಲ್ಲಿ ಕಂದನ ಶವವನ್ನು ಹೊತ್ತುಕೊಂಡು ಹೋದ ಅಮಾನವೀಯ ಘಟನೆ ನಡೆದಿದೆ.

    ಅಸ್ಸಾಂನಿಂದ ಕೂಲಿ ಕೆಲಸಕ್ಕಾಗಿ ಬಂದಿದ್ದ ದಂಪತಿಯ 3 ವರ್ಷದ ಮಗ ರಹೀಂ ಇಂದು ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದ. ಈ ವೇಳೆ ಬೈಕಿನಲ್ಲಿ ಬಂದ ಸವಾರನೊಬ್ಬ ರಹೀಂಗೆ ಗುದ್ದಿ ಪರಾರಿಯಾಗಿದ್ದಾನೆ.

    ಗಾಯಗೊಂಡಿದ್ದ ಮಗನನ್ನು ಚಿಕಿತ್ಸೆ ನೀಡಲು ತಂದೆ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ಮಗು ಸಾವನ್ನಪ್ಪಿದೆ ಎಂದು ತಿಳಿಸಿದ ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ನೀಡಲು ನಿರಾಕರಿಸಿ ಅಮಾನವೀಯತೆ ಪ್ರದರ್ಶಿಸಿದ್ದಾರೆ.

    ಅಪಘಾತ ನಡೆದು ವ್ಯಕ್ತಿ ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸುವುದು ವೈದ್ಯರ ಕರ್ತವ್ಯ. ಆದರೆ ಮರಣೋತ್ತರ ಪರೀಕ್ಷೆ ನಡೆಸದೇ ಮೃತದೇಹವನ್ನು ಪೋಷಕರಿಗೆ ನೀಡಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

    ಅಂಬುಲೆನ್ಸ್ ನೀಡದ ಹಿನ್ನೆಲೆಯಲ್ಲಿ ಆಳುತ್ತಿದ್ದ ತಂದೆಯನ್ನು ಸಮಾಧಾನ ಪಡಿಸಿದ ಸ್ಥಳೀಯರು ತಮ್ಮ ದ್ವಿಚಕ್ರವಾಹನದಲ್ಲಿ ಕುಳ್ಳಿರಿಸಿ ಮನೆಗೆ ಅವರನ್ನು ತಲುಪಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=GnVn5L5_50w

  • ಬಾಹುಬಲಿ-2 ಟಿಕೆಟ್ ಸಿಗದ್ದಕ್ಕೆ ಥಿಯೇಟರ್ ಮುಂದಿದ್ದ 10 ಬೈಕ್‍ಗಳಿಗೆ ಬೆಂಕಿ!

    ಬಾಹುಬಲಿ-2 ಟಿಕೆಟ್ ಸಿಗದ್ದಕ್ಕೆ ಥಿಯೇಟರ್ ಮುಂದಿದ್ದ 10 ಬೈಕ್‍ಗಳಿಗೆ ಬೆಂಕಿ!

    ಆನೆಕಲ್: ಬಾಹುಬಲಿ-2 ಸಿನಿಮಾ ನೋಡಲು ಟಿಕೆಟ್ ಸಿಗಲಿಲ್ಲವೆಂದು ಕೋಪೋದ್ರಕ್ತನಾದ ವ್ಯಕ್ತಿಯೊಬ್ಬ ಥಿಯೇಟರ್ ಎದುರು ನಿಲ್ಲಿಸಿದ್ದ ಬೆಂಕಿ ಹಚ್ಚಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಹೊಸಕೋಟೆ ಸಮೀಪದ ಅವಲಹಳ್ಳಿಯ ಸಂತೋಷ್ ಈ ಕೃತ್ಯ ಎಸಗಿದ ಆರೋಪಿ.

    ಸಂತೋಷ್ ಇಂದು ಬೆಳಗ್ಗಿನಿಂದಲೇ ಟಿಕೆಟ್ ಗಾಗಿ ಬೆಂಗಳೂರು ಹೊರವಲಯದ ಹೊಸಕೋಟೆ ಪಟ್ಟಣದಲ್ಲಿರೋ ಅಲಂಕಾರ ಥಿಯೇಟರ್ ಎದುರು ಕುಳಿತಿದ್ದ. ಆದ್ರೆ ಮೊದಲ ಪ್ರದರ್ಶನದ ಟಿಕೆಟ್ ಖಾಲಿಯಾಗಿತ್ತು. ಇದರಿಂದ ರೊಚ್ಚಿಗೆದ್ದ ಸಂತೋಷ್ ಥಿಯೇಟರ್ ನ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾನೆ. ತಕ್ಷಣವೇ ಸ್ಥಳದಲ್ಲೇ ಇದ್ದ ಮಂದಿ ಬೆಂಕಿಯನ್ನು ನಂದಿಸಿ ಸಂತೊಷನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಘಟನೆಯಲ್ಲಿ ಸುಮಾರು 10 ಬೈಕ್ ಗಳಿಗೆ ಸಣ್ಣ ಮಟ್ಟದ ಹನಿಯಾಗಿದ್ದು ತಕ್ಷಣವೇ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿದಂತಾಗಿದೆ.

  • ಆನೇಕಲ್ ಪ್ರೇಮಿಗಳ ವೈರಲ್ ವಿಡಿಯೋ: ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದ ಆರೋಪಿ ಅರೆಸ್ಟ್

    ಆನೇಕಲ್ ಪ್ರೇಮಿಗಳ ವೈರಲ್ ವಿಡಿಯೋ: ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದ ಆರೋಪಿ ಅರೆಸ್ಟ್

    ಬೆಂಗಳೂರು: ಅಪ್ರಾಪ್ತೆಯನ್ನು ಕಿಪಡ್ ಮಾಡಿ, ತಮ್ಮ ಪ್ರೇಮಕ್ಕೆ ಪೊಲೀಸರು ಅಡ್ಡಿಪಡಿಸಿದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ವಿಡಿಯೋ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊಸಕೋಟೆ ಪೊಲೀಸರು ಯಶ್ವಸಿಯಾಗಿದ್ದಾರೆ.

    ವೇಣು ಬಂಧಿತ ಆರೋಪಿ. ಮೂರು ದಿನಗಳ ಹಿಂದೆ ಅಪ್ರಾಪ್ತ ಯುವತಿಯನ್ನು ವೇಣು ಎಂಬಾತ ಅಪಹರಣ ಮಾಡಿದ್ದಾನೆ ಎಂದು ಬಾಲಕಿಯ ಪೋಷಕರು ನಗರದ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ವೇಣುಗೆ ಕರೆಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

    ಇದನ್ನೂ ಓದಿ: ಮನೆ ಬಿಟ್ಟು ಓಡಿ ಹೋಗಿ, ನಮ್ಮನ್ನ ಹುಡ್ಕಬೇಡಿ ಎಂದು ಪೊಲೀಸರಿಗೆ ವಾಟ್ಸಪ್ ವಿಡಿಯೋ ಕಳಿಸಿದ್ರು-ವಿಡಿಯೋ ತಲುಪವ ಮುನ್ನ ಲವ್ ಸ್ಟೋರಿಗೊಂದು ಟ್ವಿಸ್ಟ್

    ಪೊಲೀಸರ ವಿಚಾರಣೆಗೆ ಹೆದರಿದ ವೇಣು ಅಪ್ರಾಪ್ತ ಯುವತಿಗೆ ಪುಸಲಾಯಿಸಿ ತಮ್ಮ ಪ್ರೀತಿಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಮತ್ತು ನಮ್ಮನ್ನು ದೂರ ಮಾಡಲು ಯತ್ನಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    ಸೋಮವಾರ ತಡರಾತ್ರಿ ಹೊಸಕೋಟೆ ಪೊಲೀಸರು ವೇಣುನನ್ನು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಪೋಷಕರ ವಶಕ್ಕೆ ನೀಡಿದ್ದಾರೆ. ಇನ್ನು ವೇಣು ವಿರುದ್ಧ ಪೂಕ್ಸೋ ಕಾಯ್ದೆ ಅಡಿ, ಅಪಹರಣ ಹಾಗು ಆತ್ಮಹತ್ಯೆ ಪ್ರಚೋದನೆ ಕೇಸು ದಾಖಲಿಸಿದ್ದಾರೆ.

    https://www.youtube.com/watch?v=mHzsyglE0is

     

  • ಕೊನೆಗೂ ಬಯಲಾಯ್ತು ಬಂಡೀಪುರದ ಪ್ರಿನ್ಸ್ ಸಾವಿನ ರಹಸ್ಯ!

    ಕೊನೆಗೂ ಬಯಲಾಯ್ತು ಬಂಡೀಪುರದ ಪ್ರಿನ್ಸ್ ಸಾವಿನ ರಹಸ್ಯ!

    ಆನೇಕಲ್: ಬಂಡಿಪುರ ಅಭಯಾರಣ್ಯದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಪ್ರವಾಸಿಗರ ಅಚ್ಚುಮೆಚ್ಚಿನ ಹುಲಿ ಪ್ರಿನ್ಸ್ ಸಾವಿಗೆ ಕಾರಣ ಗೊತ್ತಾಗಿದೆ.

    ಒಂದು ವಾರದ ಹಿಂದೆ ಬಂಡಿಪುರದಲ್ಲಿ ಹುಲಿ ಪ್ರಿನ್ಸ್ ಸಾವನ್ನಪ್ಪಿತ್ತು. ಆದ್ರೆ ಅರಣ್ಯ ಇಲಾಖೆ ಹುಲಿ ಸಾವಿಗೆ ಕೊಟ್ಟ ಕಾರಣವನ್ನ ಕೇಳಿದಾಗ ಸಾಕಷ್ಟು ಅನುಮಾನ ಮೂಡಿತ್ತು. ಅಲ್ಲದೆ ಒಂದು ದಿಕ್ಕಿನಿಂದ ಮಾತ್ರ ತೆಗೆದ ಮೃತ ಪ್ರಿನ್ಸ್ ಹುಲಿಯ ಚಿತ್ರವೊಂದನ್ನ ಅರಣ್ಯ ಇಲಾಖೆ ಬಿಡುಗಡೆ ಮಾಡಿತ್ತು. ಇದು ಕೂಡ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಹೀಗಾಗಿ ಈ ಅನುಮಾನಗಳಿಗೆ ಉತ್ತರ ಹುಡುಕಿ ಪಬ್ಲಿಕ್ ಟಿವಿ ಫೀಲ್ಡ್ ಗೆ ಇಳಿದಿತ್ತು.

    ಸಿಡಿಮದ್ದಿನಿಂದ ಸಾವನ್ನಪ್ಪಿದ `ಪ್ರಿನ್ಸ್’: ವಿಷಾಹಾರದಿಂದ ಹುಲಿ ಸಾವನ್ನಪ್ಪಿದ್ದು ಅಂತಾ ಅರಣ್ಯ ಇಲಾಖೆ ಹೇಳುತ್ತಿದೆ. ಆದ್ರೆ ಪ್ರಿನ್ಸ್ ಹುಲಿ ಸಾವನ್ನಪ್ಪಿರೋದು ಸಿಡಿಮದ್ದಿನಿಂದ ಅನ್ನೋದು ತಿಳಿದುಬಂದಿದೆ. ಕಾಡಿನ ಸುತ್ತಮುತ್ತಲಿನ ಜನ ಸಾಮಾನ್ಯವಾಗಿ ಹಂದಿ ಹಿಡಿಯಲು ಕೋಳಿಯ ಕೊರಳಿಗೆ ಸಿಡಿಮದ್ದು ಕಟ್ಟಿರುತ್ತಾರೆ. ಈ ಕೋಳಿಯನ್ನ ತಿನ್ನಲು ಹೋದಾಗ ಪ್ರಿನ್ಸ್ ಬಾಯಲ್ಲಿ ಸಿಡಿಮದ್ದು ಸ್ಫೋಟವಾಗಿ ಸ್ಥಳದಲ್ಲೇ ಮೃತಪಟ್ಟಿದೆ.

    `ಪ್ರಿನ್ಸ್` ದವಡೆ, ನಾಲಿಗೆ, ಹಲ್ಲುಗಳು ನಾಪತ್ತೆ: ಕಳೆದ ವಾರ ಮೊಯಾರ್ ಕಣಿವೆಗೆ ಹೊಂದಿಕೊಂಡಿರೋ ಕುಂದ ಕೆರೆ ವಲಯದಲ್ಲಿನ ಲೊಕ್ಕೆರೆ ಬೀಟ್ ಬಳಿ ಪ್ರಿನ್ಸ್ ಹುಲಿಯ ಕಳೇಬರ ಪತ್ತೆಯಾಗಿತ್ತು. ಪ್ರಾಯದ ದಿನಗಳಲ್ಲಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ತನ್ನ ಹಕ್ಕನ್ನು ಸಾಧಿಸಲು ನಾಲ್ಕು ಗಂಡು ಹುಲಿಗಳನ್ನು ಸಾಯಿಸಿರುವ ಪ್ರಿನ್ಸ್ ಹುಲಿಗೆ ಇತ್ತೀಚೆಗೆ ವಯಸ್ಸಾದ ಕಾರಣ ಬೇಟೆಯಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಸತ್ತ ಜಿಂಕೆ ಸತ್ತ ಆನೆಗಳನ್ನು ತಿಂದು ಬದುಕುತ್ತಿತ್ತು. ಈ ಹುಲಿ ಬಂಡೀಪುರ ಅರಣ್ಯ ವ್ಯಾಪ್ತಿಯ ಮುದ್ದುಮಲೈ, ಹೆಡಿಯಾಲ, ಓಂಕಾರ ಅರಣ್ಯವಲಯದ 35 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸುತ್ತಿತ್ತು. ಆದ್ರೆ ಮೃತ ಪ್ರಿನ್ಸ್ ದೇಹದಲ್ಲಿ ದವಡೆ, ನಾಲಗೆ, ಹಲ್ಲುಗಳು ಕಾಣೆಯಾಗಿತ್ತು.

    20 ಕೋಟಿಗೂ ಅಧಿಕ ಆದಾಯ ತಂದುಕೊಟ್ಟಿದ್ದ `ಪ್ರಿನ್ಸ್’: ಕಳೆದೊಂದು ದಶಕದಲ್ಲಿ ಪ್ರಿನ್ಸ್ ಹುಲಿಯನ್ನ ನೋಡಲು ಲಕ್ಷಾಂತರ ಪ್ರವಾಸಿಗಳು ಆಗಮಿಸಿದ್ದರು, ಹೀಗೆ ಆಗಮಿಸಿದ ಪ್ರವಾಸಿಗರಿಂದ ಅರಣ್ಯ ಇಲಾಖೆಗೆ 20 ಕೋಟಿಗಿಂತಲೂ ಅಧಿಕ ಆದಾಯ ಬಂದಿದೆ.

  • ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ 3 ಹೊಸ ಅತಿಥಿಗಳ ಆಗಮನ

    ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ 3 ಹೊಸ ಅತಿಥಿಗಳ ಆಗಮನ

    ಆನೇಕಲ್: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹುಲಿ ಸಫಾರಿಯಲ್ಲಿ ಹೆಣ್ಣು ಹುಲಿಯೊಂದು 3 ಮರಿಗಳಿಗೆ ಜನ್ಮ ನೀಡುವ ಮೂಲಕ ಪ್ರಾಣಿ ಪ್ರಿಯರಲ್ಲಿ ಸಂತಸವನ್ನುಂಟುಮಾಡಿದೆ.

    ಹುಲಿ ಸಫಾರಿಯ ಹೆಣ್ಣು ಹುಲಿ ವಿಸ್ಮಯ ಹಾಗೂ ಗಂಡು ಹುಲಿ ಅಮರ್ ಈ 3 ಮರಿಗಳ ತಂದೆ ತಾಯಿ. ಸದ್ಯ ತಾಯಿ ಹಾಗೂ ಮರಿಗಳು ಆರೋಗ್ಯವಾಗಿದ್ದು ಹುಲಿ ಸಫಾರಿಯಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಣಿ ಪ್ರಿಯರ ಸ್ವರ್ಗ ಎಂದೆ ಕರೆಸಿಕೊಳ್ಳುವ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹುಲಿ ಸಫಾರಿಯಲ್ಲಿ ಈಗ ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ.

    15 ದಿನಗಳ ಹಿಂದೆಯಷ್ಟೇ ಈ ಮುದ್ದಾದ ಮರಿಗಳು ಜನ್ಮ ತಾಳಿವೆ. 2 ಹೆಣ್ಣು ಹಾಗೂ 1 ಗಂಡು ಮರಿಗಳಾಗಿದ್ದು, ತಾಯಿ ವಿಸ್ಮಯ ಜೊತೆ ಮೂರು ಮರಿಗಳ ತುಂಟಾಟ ನೋಡಲು ನಿಜಕ್ಕೂ ಕಣ್ಣಿಗೆ ಹಬ್ಬವನ್ನ ಉಂಟು ಮಾಡಿದೆ.

    ಈವರೆಗೂ ಹುಲಿ ಸಫಾರಿಯಲ್ಲಿ 23 ಹುಲಿಗಳಿದ್ದು ಇದೀಗ 3 ಹುಲಿ ಮರಿಗಳ ಜನನದಿಂದ ಹುಲಿಗಳ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ. ಇದು ಪಾರ್ಕ್‍ನ ಸಿಬ್ಬಂದಿಗಳಿಗೂ ಸಂತಸವನ್ನುಂಟುಮಾಡಿದೆ. ಇನ್ನು ಈ 3 ಹುಲಿ ಮರಿಗಳು ತಾಯಿಯ ಆರೈಕೆಯಲ್ಲಿ ಬೆಳೆಯುತ್ತಿವೆ. ಹುಲಿಮರಿಗಳಗಳ ತಾಯಿ ವಿಸ್ಮಯಗೆ ಪ್ರಾಣಿ ಪಾಲಕರು ವಿಶೇಷ ಆರೈಕೆ ನೀಡುತ್ತಿದ್ದು, ಪ್ರತ್ಯೇಕ ಪಂಜರದಲ್ಲಿ ಇರಿಸಲಾಗಿದೆ. ವೈದ್ಯರು ಸಹ ತಾಯಿ ಹಾಗೂ ಮರಿಗಳ ಬಗ್ಗೆ ಮುತುವರ್ಜಿ ವಹಿಸಿದ್ದಾರೆ.

    ಒಟ್ಟಿನಲ್ಲಿ ಮೂರು ಹುಲಿ ಮರಿಗಳ ಜನನದಿಂದ ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ ಹಬ್ಬದ ವಾತಾವರಣ ನಿಮಾಣವಾಗಿದೆ. ಈ ಹುಲಿ ಮರಿಗಳ ತುಂಟಾಟವನ್ನು ನೀವು ನೋಡಬೇಕಾದ್ರೆ ಇನ್ನೂ 6 ತಿಂಗಳ ಕಾಲ ಕಾಯಲೇಬೇಕು.