Tag: anekal

  • ಅಪಾರ್ಟ್ಮೆಂಟ್ ನೆಲಮಹಡಿಯಲ್ಲಿ ಹೊತ್ತಿ ಉರಿದ ಕಾರು- ತಾಯಿ, 4 ವರ್ಷದ ಮಗು ಸಜೀವ ದಹನ

    ಅಪಾರ್ಟ್ಮೆಂಟ್ ನೆಲಮಹಡಿಯಲ್ಲಿ ಹೊತ್ತಿ ಉರಿದ ಕಾರು- ತಾಯಿ, 4 ವರ್ಷದ ಮಗು ಸಜೀವ ದಹನ

    ಬೆಂಗಳೂರು: ಬೆಂಕಿ ತಗುಲಿ ತಾಯಿ ಹಾಗೂ 4 ವರ್ಷದ ಮಗು ಕಾರಿನಲ್ಲೇ ಸಜೀವವಾಗಿ ದಹನವಾಗಿರುವ ಘಟನೆ ನಗರದ ವೈಟ್ ಫೀಲ್ಡ್ ಸಮೀಪದ ನಲ್ಲೂರಹಳ್ಳಿಯ ಬೋರ್ವೆಲ್ ರಸ್ತೆಯ ಸುಮಧುರ ಆನಂದಮ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.

    ಅಪಾರ್ಟ್ಮೆಂಟ್ ವಾಸಿಯಾದ ನೇಹಾವರ್ಮ(30) ಹಾಗೂ ಮಗ ಪರಮ್(4) ಮೃತ ಪಟ್ಟ ದುರ್ದೈವಿಗಳಾಗಿದ್ದಾರೆ. ಎಂದಿನಂತೆ ಸಂಜೆ ತಮ್ಮ ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದು ಅಪಾರ್ಟ್ಮೆಂಟ್ ನೆಲಮಹಡಿಯಲ್ಲಿ ಕಾರ್ ನಿಲ್ಲಿಸುವ ಸಮಯದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಕಾರ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

    ಘಟನೆ ನಡೆದ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇನ್ನು ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರು ಅಪಾರ್ಟ್ಮೆಂಟ್ ನೆಲಮಹಡಿಯಲ್ಲಿ ಅಳವಡಿಸಿರುವ ವೈರಿಂಗ್ ಸರಿಯಾದ ನಿರ್ವಹಣೆ ಇಲ್ಲದೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ನೆಲಮಡಿಯಲ್ಲಿನ ವಿದ್ಯುತ್ ಟ್ರಾನ್ಸ್ ಫಾರ್ಮಾರ್ ಸ್ಫೋಟಗೊಂಡು ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ನೆಲಮಹಡಿಯಲ್ಲಿನ ವೈರಿಂಗ್ ಸಂಪೂರ್ಣ ಸುಟ್ಟುಹೋಗಿದೆ.

    ವೈಟ್ ಫೀಲ್ಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬಿಡಲ್ಲ: ಜನಾರ್ದನ ರೆಡ್ಡಿ

    ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬಿಡಲ್ಲ: ಜನಾರ್ದನ ರೆಡ್ಡಿ

    ಬೆಂಗಳೂರು: ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬಿಡಲ್ಲ. ಅಲ್ಲಿಯ ಪ್ರತಿಯೊಬ್ಬ ನಾಗರಿಕನು ಒಬ್ಬೊಬ್ಬ ಜನಾರ್ದನ ರೆಡ್ಡಿಯಾಗಿ ಶ್ರೀರಾಮುಲು ಕೈ ಬಲ ಪಡಿಸಿ ಬಳ್ಳಾರಿಯ 8 ಕ್ಷೇತ್ರದಲ್ಲಿ ಜಯಭೇರಿ ಬಾರಿಸುತ್ತೇವೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ವರ್ತೂರು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಸಂಕ್ರಾಂತಿ ಉತ್ಸವದಲ್ಲಿ ಆಕ್ರೋಶ ಭರಿತರಾಗಿ ಜನಾರ್ದನ ರೆಡ್ಡಿ ರಾಜ್ಯ ಸರ್ಕಾರವನ್ನು ತರಾಟೆ ತೆಗೆದುಕೊಂಡರು. ಸಿಎಂ ಸಿದ್ದರಾಮಯ್ಯ ಬಳ್ಳಾರಿ ಶಾಸಕರಾದ ಆನಂದ್ ಸಿಂಗ್ ಹಾಗೂ ನಾಗೇಂದ್ರರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ಹುನ್ನಾರ ನಡೆಸುತ್ತಿದ್ದು, ಮುಖ್ಯಮಂತ್ರಿಯವರ ಕನಸು ಕನಸಾಗಿ ಉಳಿಯುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಮಾತು ಮಾತಿಗು ಸಿಎಂ ಸಿದ್ದರಾಮಯ್ಯ ಅಮಿತ್ ಶಾ ಜೈಲು, ಯಡಿಯೂರಪ್ಪ ಜೈಲು, ಜನಾರ್ದನ ರೆಡ್ಡಿ ಜೈಲು ಎಂದು ವ್ಯಂಗ್ಯವಾಡುತ್ತಾರೆ. ಮುಂದೆ ಇದಕ್ಕೆ ಬಿಜೆಪಿ ಕಾರ್ಯಕರ್ತರು ತಕ್ಕಪಾಠ ಕಲಿಸುತ್ತಾರೆ ಎಂದಿದ್ದಾರೆ.

  • ಚಳಿ ಕಾಯಿಸಲು ಹೋಗಿ ಬೆಂಕಿಗಾಹುತಿಯಾದ ಯುವಕ!

    ಚಳಿ ಕಾಯಿಸಲು ಹೋಗಿ ಬೆಂಕಿಗಾಹುತಿಯಾದ ಯುವಕ!

    ಬೆಂಗಳೂರು: ಚಳಿ ಕಾಯಿಸಲು ಹೋದ ಯುವಕನೋರ್ವ ಬೆಂಕಿಗಾಹುತಿಯಾದ ಘಟನೆಯೊಂದು ನಡೆದಿದೆ.

    ಆನೇಕಲ್ ತಾಲೂಕಿನ ಅತ್ತಿಬೆಲೆಯ ಟಿವಿಎಸ್ ರಸ್ತೆ ಬಳಿ ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಮೃತ ಯುವಕನನ್ನು 5 ವರ್ಷಗಳಿಂದ ಅತ್ತಿಬೆಲೆಯಲ್ಲಿ ಅಲೆದಾಡುತ್ತಿದ್ದ ಸುಮಾರು 29 ವರ್ಷ ವಯಸ್ಸಿನ ಬುದ್ಧಿಮಾಂದ್ಯ ಎನ್ನಲಾಗಿದೆ.

    ಇಂದು ಬೆಳಿಗ್ಗೆ ಚಳಿ ಹೆಚ್ಚಿದ್ದ ಕಾರಣ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸಕ್ಕೆ ಬೆಂಕಿ ಹಚ್ಚುತ್ತಿದ್ದಾಗ ಯುವಕನ ಬಟ್ಟೆಗೆ ಹತ್ತಿಕೊಂಡಿದೆ. ಪರಿಣಾಮ ಒಂದರ ಮೇಲೆ ಒಂದರಂತೆ ಐದಾರು ಬಟ್ಟೆ ಧರಿಸಿದ್ದ ಯುವಕನ ಬಟ್ಟೆಗೆ ಬೆಂಕಿ ಹತ್ತಿಕೊಂಡಿದೆ. ಹೀಗಾಗಿ ಬೆಂಕಿ ಆರಿಸಲಾಗದೇ ಯುವಕ ಅಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

    ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 50 ಆಡಿ ಆಳದ ಗುಂಡಿಗೆ ಬಿದ್ದ ಆನೆ ಮರಿಯ ಕಣ್ಣಿಗೆ ಬಟ್ಟೆ ಕಟ್ಟಿ ಮೇಲೇತ್ತಿದ ಅರಣ್ಯ ಸಿಬ್ಬಂದಿ

    50 ಆಡಿ ಆಳದ ಗುಂಡಿಗೆ ಬಿದ್ದ ಆನೆ ಮರಿಯ ಕಣ್ಣಿಗೆ ಬಟ್ಟೆ ಕಟ್ಟಿ ಮೇಲೇತ್ತಿದ ಅರಣ್ಯ ಸಿಬ್ಬಂದಿ

    ಬೆಂಗಳೂರು: 50 ಅಡಿ ಗುಂಡಿಗೆ ಬಿದ್ದು ಮೇಲೆ ಬಾರಲಾಗದ ಸ್ಥಿತಿಯಲ್ಲಿರುವ ಮರಿ ಆನೆಯನ್ನು ಅರಣ್ಯ ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.

    ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಪಾವಡಪಟ್ಟಿ ಹಳ್ಳಿಯಲ್ಲಿ ಆನೆ ಮರಿ ಗುಂಡಿಗೆ ಬಿದ್ದಿತ್ತು. ಪ್ರತಿ ವರ್ಷ ಸುಗ್ಗಿ ಕಾಲದಲ್ಲಿ ಕಾಡಾನೆಗಳು ಆಹಾರ ಅರಸಿ ನಾಡಿಗೆ ಬರುವುದು ಸರ್ವೆ ಸಾಮಾನ್ಯ. ಹೀಗೆ ನಾಡಿಗೆ ಬಂದ ಆನೆಗಳು ರೈತರ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿರುತ್ತವೆ. ಅದೇ ರೀತಿ ಈ ವರ್ಷವೂ 60ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದವು. ಕಾಡಾನೆಗಳನ್ನು ಅರಣ್ಯ ಸಿಬ್ಬಂದಿ ಇಂದು ಮುಂಜಾನೆ ಕಾಡಿಗೆ ಅಟ್ಟುವಾಗ ಮರಿ ಆನೆ ಗುಂಡಿಗೆ ಬಿದ್ದಿತ್ತು. ಇದನ್ನೂ ಓದಿ: ಮೃತಪಟ್ಟಿರುವ ತನ್ನ ಕಂದಮ್ಮನಿಗಾಗಿ ತಾಯಿ ಆನೆಯ ಹುಡುಕಾಟ-ಬಂಡೀಪುರದಲ್ಲೊಂದು ಮನಕಲಕುವ ಘಟನೆ

    ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಗುಂಡಿಯಲ್ಲಿ ಬಿದ್ದಿದ್ದ ಅನೆ ಮರಿಯನ್ನು ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ಗುಂಡಿಯಿಂದ ಮೇಲೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುಂಡಿಯಿಂದ ಮೇಲೆತ್ತುವಾಗ ಅನೆ ಮರಿ ಗಾಬರಿ ಆಗಬಾರದೆಂದು ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ರಕ್ಷಿಸಿದ ಮರಿಯಾನೆಯನ್ನು ಸಾನಮಾವು ಅರಣ್ಯ ಪ್ರದೇಶದಲ್ಲಿದ್ದ ತಾಯಿ ಮಡಿಲಿಗೆ ಸೇರಿಸುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    https://www.youtube.com/watch?v=pMKGHV1Bdao

     

  • ರುಂಡ-ಮುಂಡ ಬೇರ್ಪಟ್ಟ ರೀತಿಯಲ್ಲಿ ಕಿಡ್ನಾಪ್ ಆಗಿದ್ದ ರೌಡಿಶೀಟರ್ ಶವ ಪತ್ತೆ!

    ರುಂಡ-ಮುಂಡ ಬೇರ್ಪಟ್ಟ ರೀತಿಯಲ್ಲಿ ಕಿಡ್ನಾಪ್ ಆಗಿದ್ದ ರೌಡಿಶೀಟರ್ ಶವ ಪತ್ತೆ!

    ಬೆಂಗಳೂರು: ರೌಡಿಶೀಟರ್ ಒಬ್ಬನನ್ನು ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಹೊಸೂರಿನಲ್ಲಿ ನಡೆದಿದೆ.

    ಹೊಸೂರಿನ ಬಾಗಲೂರು ರಸ್ತೆಯ ನಿವಾಸಿ ಚೇತು(36) ಭೀಕರವಾಗಿ ಕೊಲೆಯಾದ ರೌಡಿಶೀಟರ್. ಚೇತುವನ್ನು 2 ದಿನಗಳ ಹಿಂದೆ ಮನೆ ಬಳಿಯಿಂದ ಅಪಹರಿಸಲಾಗಿತ್ತು. ಈ ಸಂಬಂಧ ಹೊಸೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು. ಆದರೆ ಇಂದು ಹೊಸೂರಿನ ಮತ್ತಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೇತುವಿನ ಶವ ರುಂಡ ಮುಂಡ ಬೇರ್ಪಟ್ಟ ರೀತಿಯಲ್ಲಿ ಪತ್ತೆಯಾಗಿದೆ.

    ಚೇತು ಈ ಹಿಂದೆ ಹೊಸೂರಿನ ರಿಯಲ್ ಎಸ್ಟೇಟ್ ಉದ್ಯಮಿ ವಸಂತಮ್ ಹಾಗೂ ಸ್ಟಿಲ್ ವ್ಯಾಪಾರಿ ಮುಸ್ತಾಕ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಈತನ ಮೇಲೆ ಹೊಸೂರು ಮತ್ತಿಕೆರೆ ಹಾಗೂ ಆನೇಕಲ್ ತಾಲೂಕಿನ ಪೊಲೀಸ್ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿದ್ದವು.

    ಇದೀಗ ಮತ್ತಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ- ಅರ್ಧ ಕೆಜಿಗೂ ಹೆಚ್ಚಿನ ಚಿನ್ನಾಭರಣ ವಶ

    ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ- ಅರ್ಧ ಕೆಜಿಗೂ ಹೆಚ್ಚಿನ ಚಿನ್ನಾಭರಣ ವಶ

    ಬೆಂಗಳೂರು: ಮನೆಗಳ್ಳತನ ಹಾಗೂ ಸುಲಿಗೆ ಮಾಡುತ್ತಿದ್ದ ಐವರು ಕಳ್ಳರನ್ನು ಬಂಧಿಸಿ, ಅರ್ಧ ಕೆಜಿ ಗೂ ಹೆಚ್ಚಿನ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ನಗರದ ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದ್ದ ಸುಮಾರು ಮೂವತ್ತು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಸಿ.ವಿ. ವಿಶ್ವಾಸ್, ಗೌರೀಶ್, ಕುಮಾರ್, ಮರಿಯಪ್ಪ, ಗುಜರಿ, ಸತೀಶ ಹಾಗೂ ಮುರುಗ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳಿಂದ ಸುಮಾರು 502 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ನಗರದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಸುಲಿಗೆ, ಒಂಬತ್ತು ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

    ಚಿನ್ನಾಭರಣ ಕಳೆದುಕೊಂಡ ಸಾರ್ವಜನಿಕರಿಗೆ ಇಂದು ಪೊಲೀಸರು ಅಭರಣಗಳನ್ನು ಹಿಂತಿರುಗಿಸಿದರು. ಈ ವೇಳೆ ಗ್ರಾಮಾಂತರ ಎಸ್ಪಿ ಅಮಿತ್ ಸಿಂಗ್ ಹೆಬ್ಬಗೋಡಿ ಸಿಪಿಐ ಜಗದೀಶ್ ಹಾಗೂ ಠಾಣಾ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

  • 10 ವರ್ಷಗಳಿಂದ ಜೀತದಾಳುಗಳಾಗಿ ದುಡಿಯುತ್ತಿದ್ದ ಕುಟುಂಬವನ್ನ ರಕ್ಷಣೆ ಮಾಡಿದ ಪೊಲೀಸರು

    10 ವರ್ಷಗಳಿಂದ ಜೀತದಾಳುಗಳಾಗಿ ದುಡಿಯುತ್ತಿದ್ದ ಕುಟುಂಬವನ್ನ ರಕ್ಷಣೆ ಮಾಡಿದ ಪೊಲೀಸರು

    ಬೆಂಗಳೂರು: ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದೇಶದಲ್ಲಿ ಇನ್ನೂ ಜೀತಪದ್ಧತಿ ಅಂತ್ಯವಾಗಿಲ್ಲ ಎಂಬುದಕ್ಕೆ ಬೆಂಗಳೂರು ಹೊರವಲಯ ಅನೇಕಲ್ ಮಾತಲಿಂಗಾಪುರ ಸಮೀಪದ ಕಲ್ಲು ಕ್ವಾರಿಯಲ್ಲಿ ಜೀವಂತ ಸಾಕ್ಷಿ ಲಭಿಸಿದೆ.

    ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕುಗ್ರಾಮದಿಂದ ಬಂದ ರಾಜಪ್ಪ ಮತ್ತು ಮುನಿಲಕ್ಷ್ಮಮ್ಮ ಕುಟುಂಬ ಕಳೆದ 10 ವರ್ಷಗಳಿಂದ ಕಲ್ಲಿನ ಕ್ವಾರಿಯಲ್ಲಿ ಜೀತದಾಳುಗಳಾಗಿ ದುಡಿಮೆ ಮಾಡಿದ್ದಾರೆ.

     

    ಬೆಂಗಳೂರು ಹೊರವಲಯದಲ್ಲಿರುವ ಕಲ್ಲಿನ ಕ್ವಾರಿ ದಿಲೀಪ್ ಎಂಬವರಿಗೆ ಸೇರಿದ್ದು, ಹತ್ತು ವರ್ಷಗಳ ಹಿಂದೆ ರಾಜಪ್ಪ ಅವರ ಕುಟುಂಬ ಕಲ್ಲು ಕ್ವಾರಿಯಲ್ಲಿ ಕೆಲಸಕ್ಕೆ ಸೇರಿದ್ದರು. ಆದರೆ ಕ್ವಾರಿಯ ಮಾಲೀಕ ದಿಲೀಪ್ ದುಡಿಯಲು ಬಂದ ಇವರನ್ನು ಅಕ್ರಮವಾಗಿ ಬಂಧನದಲ್ಲಿರಿಸಿ ಜೀತಕ್ಕೆ ಇಟ್ಟುಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೂ ಇವರಿಗೆ ಒಂದು ರೂಪಾಯಿ ಸಂಬಳ, ರಜೆ ನೀಡದೆ ಹೊರಗಡೆಯೂ ಬಿಡದೆ ಬೆಳಗ್ಗಿನಿಂದ ಸಂಜೆವರೆಗೂ ದುಡಿಸಿಕೊಂಡಿದ್ದಾರೆ. ಅಲ್ಲದೇ ದುಡಿಮೆಗೆ ತಕ್ಕ ಸಂಬಳವನ್ನು ನೀಡಿಲ್ಲ ಎನ್ನಲಾಗಿದೆ.

    ಈ ಕುರಿತು ಮಾಹಿತಿ ಪಡೆದ ನಗರದ ಎನ್.ಜಿ.ಓ ಸಂಸ್ಥೆಯೊಂದರ ನೆರವಿನಿಂದ ಜಿಗಣಿ ಪೊಲೀಸರು ಹಾಗೂ ಅನೇಕಲ್ ತಹಶೀಲ್ದಾರ್ ದಿನೇಶ್ ಕಾರ್ಯಾಚರಣೆ ನಡೆಸಿ ಜೀತ ನಡೆಸುತ್ತಿದ್ದ ರಾಜಪ್ಪ, ಮುನಿಲಕ್ಷ್ಮಮ್ಮ, ಕಿರಣ್, ಚಿನ್ನರಾಜು, ಮಾದೇಶ, ಗುರುಸ್ವಾಮಿ ಸೇರಿದಂತೆ ನಾಲ್ವರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಘಟನೆ ಕುರಿತು ಆರೋಪಿ ದಿಲೀಪ್ ನನ್ನು ವಶಕ್ಕೆ ಪಡೆದಿರುವ ಜಿಗಣಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಮಿಕರು, ಇಷ್ಟು ದಿನಗಳಿಂದ ದುಡಿದ ಶ್ರಮಕ್ಕೆ ಒಂದು ರೂಪಾಯಿಯನ್ನೂ ಪಡೆದಿಲ್ಲ. ನಮ್ಮನ್ನು ನೋಡಲು ಯಾರಾದರೂ ಹತ್ತಿರದ ಸಂಬಂಧಿಕರು ಬಂದರೆ ಅವರನ್ನು ನೋಡಲು ಬಿಡದೆ ಕುಡಿಹಾಕಲಾಗಿತ್ತು. ಕೇವಲ ವಾರಕ್ಕೆ ಅಂಗಡಿಯೊಂದರಿಂದ ಆಹಾರ ಪದಾರ್ಥಗಳನ್ನು ಮಾತ್ರ ನೀಡಲಾಗುತ್ತಿತ್ತು. ಈ ಕುರಿತು ಪ್ರಶ್ನಿಸಿದರೆ ದಿಲೀಪ್ ತಾಯಿ ಸೇರಿ ಹಿಗ್ಗಾಮುಗ್ಗ ಥಳಿಸುತ್ತಿದ್ದರು ಎಂದು ತಿಳಿಸಿದ್ದಾರೆ.

  • ದಾವಣಗೆರೆಯಲ್ಲಿ ಹಸು ಮೇಲೆ ಆನೆ ದಾಳಿ – ಆನೇಕಲ್ ಗಡಿಯಲ್ಲಿ ಬೀಡುಬಿಟ್ಟ 30ಕ್ಕೂ ಹೆಚ್ಚು ಆನೆಗಳು

    ದಾವಣಗೆರೆಯಲ್ಲಿ ಹಸು ಮೇಲೆ ಆನೆ ದಾಳಿ – ಆನೇಕಲ್ ಗಡಿಯಲ್ಲಿ ಬೀಡುಬಿಟ್ಟ 30ಕ್ಕೂ ಹೆಚ್ಚು ಆನೆಗಳು

    ದಾವಣಗೆರೆ/ಬೆಂಗಳೂರು: ಜಿಲ್ಲೆಯಲ್ಲಿ ಮತ್ತೆ ಕಾಡಾನೆಗಳ ದಾಳಿ ಮುಂದುವರೆದಿದೆ. ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ ಬೆಳಗಿನ ಜಾವದಿಂದ ಕಾಡಾನೆಗಳು ದಾಂಧಲೆ ನಡೆಸಿದ್ದು, ಹೊನ್ನಾಳಿ ಸಮೀಪ ಹಸುಗಳನ್ನ ತಿವಿದು ಗಾಯಗೊಳಿಸಿವೆ.

    ದೇವರಹೊನ್ನಾಳಿಯಲ್ಲಿ ಗ್ರಾಮದಲ್ಲಿ ಕಾಡಾನೆಗಳು ಎರಡು ಹಸುಗಳಿಗೆ ತೀವ್ರವಾಗಿ ಇರಿದಿವೆ. ಇದರಿಂದ ಹಸುವಿನ ಕರುಳು ಹೊರಬಂದಿದ್ದು, ಒದ್ದಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

    ಕಾಡಾನೆ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೇವರಹೊನ್ನಾಳಿ ಗ್ರಾಮದ ಭರಮಪ್ಪ, ಬೆನಕನಹಳ್ಳಿ ಗ್ರಾಮದ ಮಳಲಿ ರಾಜಪ್ಪ ಎಂಬವರಿಗೆ ಗಂಭೀರ ಗಾಯಗಳಾಗಿವೆ.

    ಗಾಯಾಳುಗಳನ್ನ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಹೊನ್ನಾಳಿ ತಾಲೂಕಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ಸುಗ್ಗಿ ಕಾಲ ಬಂತೆಂದರೆ ಸಾಕು ಅರಣ್ಯದಂಚಿನ ಪ್ರದೇಶಗಳಲ್ಲಿ ಕಾಡಾನೆಗಳ ಗುಂಪು ಪ್ರತ್ಯಕ್ಷವಾಗುತ್ತವೆ. ಇಂದು ಮುಂಜಾನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ತಳಿ, ಡೆಂಕಣಿಕೋಟೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ 30 ಆನೆಗಳು ಗುಂಪು ಕರ್ನಾಟಕ ಗಡಿ ಪ್ರದೇಶವಾದ ಆನೇಕಲ್ ತಾಲೂಕಿನ ಮುತ್ಯಾಲಮಡುವು ಅರಣ್ಯ ಪ್ರದೇಶದತ್ತ ಮುಖ ಮಾಡಿವೆ. ಈ ಕಾಡಾನೆಗಳು ಇಷ್ಟು ದಿನ ಡೆಂಕಣಿಕೋಟೆ ಗ್ರಾಮದ ಸುತ್ತ ಮುತ್ತ ಹಾವಳಿ ನೀಡಿ, ಬೆಳೆಹಾನಿ ಮಾಡಿ ರೈತರಲ್ಲಿ ಅತಂಕ ಮೂಡಿಸಿದ್ದವು.

    ಆನೆಗಳ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ತಮಿಳುನಾಡು ಅರಣ್ಯ ಸಿಬ್ಬಂದಿ ಆನೆಗಳನ್ನು ಕರ್ನಾಟಕದತ್ತ ಒಡಿಸಿದ್ದು ಸದ್ಯ ಮುತ್ಯಾಲಮಡುವು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಗುಂಪು ಬೀಡು ಬಿಟ್ಟಿವೆ. ಇದರಲ್ಲಿ ಮರಿ ಆನೆಗಳು ಇರಿವುದು ವಿಶೇಷವಾಗಿದೆ.

  • ಸನ್ನಡತೆ ಆಧಾರದಲ್ಲಿ ರಾಜ್ಯಾದ್ಯಂತ 108 ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ

    ಸನ್ನಡತೆ ಆಧಾರದಲ್ಲಿ ರಾಜ್ಯಾದ್ಯಂತ 108 ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ

    ಬೆಂಗಳೂರು: ತಮಗೆ ಅರಿತೊ ಅರಿಯದೆ ಮಾಡಿದ ತಪ್ಪಿನಿಂದಾಗಿ ಜೈಲು ಸೇರಿದ್ದ ಜೈಲು ಹಕ್ಕಿಗಳಿಗೆ ಬುಧವಾರ ಬಿಡುಗಡೆ ಭಾಗ್ಯ ಲಭಿಸಿದೆ. ರಾಜ್ಯಾದ್ಯಂತ 12 ವರ್ಷಗಳ ಮೇಲ್ಪಟ್ಟು ಸೆರೆವಾಸ ಅನುಭವಿಸಿದ್ದ 108 ಸಜಾ ಬಂಧಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ 50 ಬಂಧಿಗಳು ಬಿಡುಗಡೆಗೊಂಡಿದ್ದಾರೆ. ಇದರಲ್ಲಿ 80 ವರ್ಷ ಮೇಲ್ಪಟ್ಟ 5 ಜನ ಬಂಧಿಗಳು ಇರುವುದು ವಿಶೇಷವಾಗಿದೆ.

    ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕಳೆದ 12 ವರ್ಷಕ್ಕೂ ಹೆಚ್ಚು ಮೇಲ್ಪಟ್ಟು ಬಂಧಿಯಾಗಿದ್ದ ಹಲವು ಖೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಗೊಳಿಸಲಾಗಿದೆ. ಈ ಕುರಿತು ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಬಂಧಿಗಳಿಗೆ ಬಿಡುಗಡೆ ಪತ್ರ ವಿತರಿಸಿದರು.

    ಪರಪ್ಪನ ಅಗ್ರಹಾರ ಜೈಲಿನಿಂದ 45 ಪುರುಷ ಹಾಗೂ 5 ಮಹಿಳಾ ಸಜಾ ಬಂಧಿಗಳಿಗೆ ಬಿಡುಗಡೆ ಭಾಗ್ಯ ಕಲ್ಪಿಸಲಾಗಿದೆ. ಜೀವನ ಪರ್ಯಂತ ಜೈಲಿನಲ್ಲಿ ಕಾಲ ಕಳೆಯುವುದು ಎಂದುಕೊಂಡಿದ್ದ ಬಂಧಿಗಳಿಗೆ ರಾಜ್ಯ ಸರ್ಕಾರದ ಈ ನಿರ್ಧಾರ ಮತ್ತೆ ಅವರ ಬಾಳಿಗೆ ಪುನರ್ಜನ್ಮ ನೀಡಿದಂತಾಗಿದೆ.

    ಈ ಬಗ್ಗೆ ಬಿಡುಗಡೆಗೊಂಡ ಬಂಧಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ಬಿಡುಗಡೆಯಾದ ಬಂಧಿಯೊಬ್ಬರು ಮಾತನಾಡಿ ನಾವು ಒಂದು ಕ್ಷಣ ಮೈ ಮರೆತು ಕೋಪದ ಕೈಗೆ ಬುದ್ಧಿ ಕೊಟ್ಟಿದ್ದರಿಂದ ಇಷ್ಟು ವರ್ಷ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಪರಿವರ್ತನೆ ಹೊಂದಿದ್ದೇವೆ. ನಮ್ಮ ದಶಾವತಾರದ ಜೀವನದಲ್ಲಿ 9 ಅವತಾರಗಳನ್ನು ಜೈಲಿನಲ್ಲೇ ಕಳೆದಿದ್ದು ಇನ್ನೊಂದು ಅವತಾರವನ್ನು ಇನ್ನು ಒಳ್ಳೆ ರೀತಿಯಲ್ಲಿ ಕಳೆಯುವುದಾಗಿ ತಿಳಿಸಿದ್ದಾರೆ.

  • ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ-ಸವಾರ ಸ್ಥಳದಲ್ಲಿಯೇ ಸಾವು

    ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ-ಸವಾರ ಸ್ಥಳದಲ್ಲಿಯೇ ಸಾವು

    ಬೆಂಗಳೂರು: ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆನೇಕಲ್ ಮತ್ತು ಅತ್ತಿಬೆಲೆ ರಸ್ತೆಯ ಕರ್ಪೂರ ಗೇಟ್ ಬಳಿ ನಡೆದಿದೆ.

    ಕಾಡುಜಕ್ಕನಹಳ್ಳಿ ನಿವಾಸಿ ತಿಮ್ಮರಾಜು(40) ಮೃತ ದುರ್ದೈವಿ. ಮೃತ ತಿಮ್ಮರಾಜು ಕಾಡುಜಕ್ಕನಹಳ್ಳಿಯ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದರು. ಆನೇಕಲ್ ನಿಂದ ಅತ್ತಿಬೆಲೆಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ.

    ತಿಮ್ಮರಾಜು ಅವರು ಅತ್ತಿಬೆಲೆಯಲ್ಲಿರುವ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಬೈಕಿನಲ್ಲಿ ರಾತ್ರಿ ತೆರಳಿದ್ದರು. ಈ ವೇಳೆ ಕರ್ಪೂರ ಗೇಟ್ ಬಳಿ ಲಾರಿಯೊಂದು ಕೆಟ್ಟು ನಿಂತಿದ್ದನ್ನು ಕತ್ತಲೆಯಲ್ಲಿ ಗಮನಿಸದ ತಿಮ್ಮರಾಜು, ವೇಗವಾಗಿ ಬಂದು ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಅಪಘಾತ ನಡೆದ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ರವಾನಿಸಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.