Tag: anekal

  • 3 ಟನ್ ಹೂವಿನ ಅಲಂಕಾರ: ಕರುಣಾನಿಧಿಗೆ ಅಭಿಮಾನಿಗಳಿಂದ ಶ್ರದ್ಧಾಂಜಲಿ

    3 ಟನ್ ಹೂವಿನ ಅಲಂಕಾರ: ಕರುಣಾನಿಧಿಗೆ ಅಭಿಮಾನಿಗಳಿಂದ ಶ್ರದ್ಧಾಂಜಲಿ

    ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ವಿಧಿವಶರಾದ ಹಿನ್ನೆಲೆ ತಮಿಳುನಾಡು ಸಂಪೂರ್ಣ ಬಂದ್ ಆಗಿದ್ದು ಅಭಿಮಾನಿಗಳು ನೆಚ್ಚಿನ ನಾಯಕನಿಗೆ ಮೂರು ಟನ್ ಹೂವನ್ನು ಅರ್ಪಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

    ಆನೇಕಲ್ ಗಡಿಭಾಗವಾದ ಹೊಸೂರಿನಲ್ಲಿ ಇರುವಂತಹ ಹೂವಿನ ಮಾರುಕಟ್ಟೆಯ ವ್ಯಾಪಾರಿಗಳು ಮೂರು ಟನ್ ವಿಧವಿಧವಾದ ಹೂವನ್ನು ಕರುಣಾನಿಧಿ ಅವರ ಭಾವಚಿತ್ರಕ್ಕೆ ಅರ್ಪಿಸುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿರುವುದಾಗಿ ವ್ಯಾಪಾರಿ ಚಂದ್ರಶೇಖರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹೂವಿನ ಮಾರುಕಟ್ಟೆಯನ್ನು ಈವರೆಗೂ ಎಂದೂ ಬಂದ್ ಮಾಡಿಲ್ಲ. ಆದ್ರೆ ಇಂದು ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ಸುಮಾರು 3ರಿಂದ 4 ಟನ್ ಹೂವುಗಳಿಂದ ಕರುಣಾನಿಧಿ ಅವರ ಫೋಟೋಗೆ ಅಲಂಕಾರ ಮಾಡಿ ಶ್ರದ್ಧಾಂಜಲಿ ಕೋರುತ್ತಾ ಇದ್ದೇವೆ. ಯಾಕಂದ್ರೆ 80 ವರ್ಷ ಜನಕ್ಕೋಸ್ಕರ ಹೋರಾಡಿದ ವ್ಯಕ್ತಿ ಅವರಾಗಿದ್ದಾರೆ. ಹಾಗೆಯೇ 50 ವರ್ಷ ಬರೀ ರಾಜಕೀಯದಲ್ಲೇ ಕಾಲ ಕಳೆದ ವ್ಯಕ್ತಿಯೂ ಆಗಿದ್ದಾರೆ. 25 ವರ್ಷ ಮುಖ್ಯಮಂತ್ರಿಯಾಗಿದ್ದು, ಜನಗಳಿಗೆ ಬೇಕಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರ ಈ ಕಾರ್ಯದಿಂದ ಇಂದು ಎಲ್ಲೆಲ್ಲಿ ತಮಿಳಿಗರು ಇದ್ದಾರೆಯೋ ಅವರೆಲ್ಲರೂ ಕರುಣಾನಿಧಿಗೆ ಸಂತಾಪ ಸೂಚಿಸುತ್ತಿದ್ದಾರೆ ಅಂದ್ರು.

    ಕರ್ನಾಟಕ ತಮಿಳುನಾಡು ಗಡಿಭಾಗವಾದ ಅತ್ತಿಬೆಲೆಯಲ್ಲಿ ನೆನ್ನೆಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೊಸೂರಿನಾದ್ಯಂತ ಸರ್ಕಾರಿ ಹಾಗು ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಕರ್ನಾಟಕದ ಯಾವುದೇ ವಾಹನಗಳನ್ನು ತಮಿಳುನಾಡಿಗೆ ಹೋಗದಂತೆ ನಿರ್ಬಂಧ ಹೇರಿದ್ದು ಗಡಿಭಾಗದಿಂದಲ್ಲೇ ಎಲ್ಲಾ ಕರ್ನಾಟಕ ವಾಹನಗಳನ್ನು ತಡೆಯೊಡ್ಡಿ ಹಿಂದಿರುಗಿಸಿ ಕಳುಹಿಸುತ್ತಿದ್ದಾರೆ. ಇನ್ನು ಕರುಣಾನಿಧಿ ಅವರ ಸಾವಿನ ವಿಷಯ ತಿಳಿಯುತ್ತಿದ್ದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿ ಅಗಲಿದ ನೆಚ್ಚಿನ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

    ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಅವರು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ವಿಧಿವಶರಾದ್ರು.

    ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ನ ಅಧ್ಯಕ್ಷರಾಗಿದ್ದರು. 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮತ್ತೆ 2006 ಮೇ 13 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.

  • ಮನೆ ಕಟ್ಟಲು ಬೋರ್ ವೆಲ್ ಕಟ್ ಮಾಡಿ ಮುಚ್ಚಿದ!

    ಮನೆ ಕಟ್ಟಲು ಬೋರ್ ವೆಲ್ ಕಟ್ ಮಾಡಿ ಮುಚ್ಚಿದ!

    ಬೆಂಗಳೂರು: ಆನೇಕಲ್‍ನಲ್ಲಿ ವ್ಯಕ್ತಿಯೊಬ್ಬ ಬೋರ್ ವೆಲ್ ಕಟ್ ಮಾಡಿ ಮುಚ್ಚಿದ್ದಾನೆ. ಇಲ್ಲಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನಕಳಸಾಪುರ ಗ್ರಾಮದ ಗೋಮಾಳ ಜಾಗದಲ್ಲಿ ಹಲವು ಬಡವರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.

    1999ರಲ್ಲಿ ಇಲ್ಲಿನ ನೀರಿನ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಇದೇ ಸರ್ಕಾರಿ ಜಾಗದಲ್ಲಿ ಬೋರ್ ವೆಲ್ ಕೊರೆಸಿ ಅದಕ್ಕೆ ಹ್ಯಾಂಡ್ ಪಂಪ್ ಹಾಕಿಸಲಾಗಿತ್ತು. ಆದ್ರೆ ಇದೇ ಜಾಗದಲ್ಲಿ ಆನಂದ್ ಎಂಬಾತ ಮನೆ ಕಟ್ಟುತ್ತಿದ್ದು ಬೋರ್ ವೆಲ್ ಕಟ್ ಮಾಡಿ ಮುಚ್ಚಿ ಹಾಕಿದ್ದಾನೆ. ಇವನಿಗೆ ಪಂಚಾಯ್ತಿಯ ಕೆಲವರ ಬೆಂಬಲವಿದ್ದು, ನ್ಯಾಯ ಕೇಳೋಕೆ ಹೋದ್ರೆ ಜನರನ್ನು ಬೆದರಿಸ್ತಿದ್ದಾನಂತೆ.

    20 ವರ್ಷಗಳಿಂದ ಈ ಜಾಗದಲ್ಲಿ ವಾಸವಿರುವ ಜನ 94 ಸಿ ಅಡಿ ಅರ್ಜಿ ಹಾಕಿಕೊಂಡಿದ್ದಾರೆ. ಆದ್ರೆ ಈತ ಯಾವುದೇ ದಾಖಲೆಯಿಲ್ಲದೆ ಮನೆ ಕಟ್ಟುತ್ತಿದ್ದು, ಜನರ ಕುಡಿಯುವ ನೀರಿಗೂ ಕಂಟಕವಾಗಿದ್ದಾನೆ. ದೂರು ನೀಡಿದ ಬಳಿಕ ಸ್ಥಳಕ್ಕೆ ಬಂದ ಪಿಡಿಓ ಗಂಗಾಧರ್ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ರು.

  • ಬಣ್ಣ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ- ತಪ್ಪಿತು ಭಾರೀ ದುರಂತ

    ಬಣ್ಣ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ- ತಪ್ಪಿತು ಭಾರೀ ದುರಂತ

    ಬೆಂಗಳೂರು: ಬಣ್ಣ ತಯಾರಿಕಾ ಕಾರ್ಖಾನೆಯೊಂದಕ್ಕೆ ತಡರಾತ್ರಿ ಬೆಂಕಿ ಬಿದ್ದ ಪರಿಣಾಮ, ಕಾರ್ಖಾನೆಯಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ನಗರದ ಹೊರವಲಯ ಆನೇಕಲ್‍ನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಜಿಗಣಿ ವಡ್ಡರಾಮಚನಹಳ್ಳಿ ರಸ್ತೆಯಲ್ಲಿರುವ ಕಲರ್ ಟೆಕ್  ಪ್ರೋಡಕ್ಷನ್ ಎಂಬ ಬಣ್ಣ ತಯಾರಿಕಾ ಕಾರ್ಖಾನೆಯ ಎರಡನೇ ಮಹಡಿಯಲ್ಲಿ ತಡರಾತ್ರಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ ಎರಡನೇ ಮಹಡಿಯಲಿದ್ದ ಲಕ್ಷಾಂತರ ಮೌಲ್ಯದ ಪೀಠೋಪಕರಣಗಳು, ಹಾಗೂ ಬಣ್ಣದ ಕಚ್ಚಾ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ.

    ಸ್ಥಳಕ್ಕೆ ಆಗಮಿಸಿದ ಎಲೆಕ್ಟ್ರಾನಿಕ್ ಸಿಟಿಯ 2 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದೆಂದು ಶಂಕೆ ವ್ಯಕ್ತವಾಗಿದ್ದು, ಕಾರ್ಖಾನೆಯಲ್ಲಿ ರಾತ್ರಿ ವೇಳೆ ಕೆಲಸ ಇರದೇ ಇದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಐತಿಹಾಸಿಕ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆಯಿತು ಪುಷ್ಪ ಯಾಗ!

    ಐತಿಹಾಸಿಕ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆಯಿತು ಪುಷ್ಪ ಯಾಗ!

    ಬೆಂಗಳೂರು: ಆಷಾಢ ಮಾಸ ಹಿನ್ನೆಲೆಯಲ್ಲಿ ಆನೇಕಲ್‍ನ ಐತಿಹಾಸಿಕ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪುಷ್ಪ ಯಾಗವನ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಯಿತು.

    ಸುಮಾರು 10 ಕ್ಕೂ ಹೆಚ್ಚು ವಿವಿಧ ರೀತಿಯ 150 ಕೆಜಿ ಪುಷ್ಪಗಳನ್ನ ಬಳಸಿ ಈ ಪುಷ್ಪಯಾಗವನ್ನ ನಡೆಸಲಾಯಿತು. ಮಂತ್ರ ಪುಷ್ಪಗಳಿಂದ ಪುರೋಹಿತರು ಶ್ರೀ ತಿಮ್ಮರಾಯಸ್ವಾಮಿ ಉತ್ಸವ ಮೂರ್ತಿಗೆ ಹೂಗಳನ್ನ ಸಮರ್ಪಣೆ ಮಾಡಿದರು.

     

    ಆನೇಕಲ್‍ನ ಹಲವು ಭಕ್ತರು ಯಾಗ ಮಾಡಲು ಪುಷ್ಪಗಳನ್ನ ದೇವಾಲಯಕ್ಕೆ ನೀಡಿದ್ದರು. ಅಲ್ಲದೇ ಸುಮಾರು 2 ಗಂಟೆಗಳ ಕಾಲ ವೇದ ಮಂತ್ರ ಘೋಷಣೆಯೊಂದಿಗೆ ಅಪರೂಪದ ಪುಷ್ಪ ಯಾಗವನ್ನ ನಡೆಸಲಾಯಿತು. ತಿಮ್ಮರಾಯಸ್ವಾಮಿ ದೇವಾಲಯದ ಈ ಅಪರೂಪದ ವಿದ್ಯಮಾನವನ್ನ ಸಾವಿರಾರು ಜನ ಕಣ್ಣು ತುಂಬಿಕೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

  • ಮದ್ಯದ ಬಾಟಲ್‍ನಿಂದ ಹಸುವಿನ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಮದ್ಯದ ಬಾಟಲ್‍ನಿಂದ ಹಸುವಿನ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಬೆಂಗಳೂರು: ಕೆಲ ದುಷ್ಕರ್ಮಿಗಳು ಕೆಆರ್ ಪುರ ಠಾಣೆ ವ್ಯಾಪ್ತಿಯ ಭಟ್ಟರಹಳ್ಳಿ ಮನೆಯೊಂದರ ಮುಂದಿದ್ದ ಹಸುವನ್ನು ಎಳೆದೊಯ್ದು, ನಿರ್ಮಾಣ ಹಂತದ ಮನೆಯಲ್ಲಿ ಕೂಡಿ ಹಾಕಿ, ಮದ್ಯದ ಬಾಟಲಿಯಿಂದ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆ ಮಾಡಿದ್ದಾರೆ.

    ಭಟ್ಟರಹಳ್ಳಿ ನಿವಾಸಿ ನಾರಾಯಣಪ್ಪ ಮೃತ ಹಸುವಿನ ಮಾಲೀಕ. ಎಂದಿನಂತೆ ಶನಿವಾರ ರಾತ್ರಿಯೂ ಹಸುವನ್ನು ಮನೆಯ ಹೊರಗೆ ಕಟ್ಟಲಾಗಿತ್ತು. ಆದರೆ ಇಂದು ಕೆಲ ದುಷ್ಕರ್ಮಿಗಳು ಹಸುವನ್ನು ಎಳೆದೊಯ್ದು ಹಲ್ಲೆ ಮಾಡಿ, ಕೊಲೆಗೈದು ಪರಾರಿಯಾಗಿದ್ದಾರೆ.

    ಕೊಲೆ ಗೈದ ಮನೆಯು ನಿರ್ಜನ ಪ್ರದೇಶದಲ್ಲಿದ್ದು, ಇಲ್ಲಿಗೆ ಪ್ರತಿದಿನ ರಾತ್ರಿ ಸಮಯದಲ್ಲಿ ಅನೇಕ ಪುಂಡ ಪೋಕರಿಗಳು ಬೀಡಿ, ಸಿಗರೇಟ್, ಮದ್ಯ, ಗಾಂಜಾ ವ್ಯಸನಕ್ಕೆ ಬರುತ್ತಾರೆ. ಮದ್ಯದ ಅಮಲಿನಲ್ಲಿದ್ದವರೇ ಹಸುವನ್ನು ಎಳೆದುಕೊಂಡು ಬಂದು, ಕಾಲುಗಳನ್ನು ಕಟ್ಟಿಹಾಕಿದ್ದಾರೆ. ಜೊತೆಗೆ ಮದ್ಯದ ಬಾಟಲಿಯಿಂದ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

    ಹಸುವನ್ನೇ ನಂಬಿಕೊಂಡು ನಾರಾಯಣಪ್ಪ ಅವರ ಕುಟುಂಬ ಜೀವನ ಸಾಗಿಸುತ್ತಿತ್ತು. ಹಾಲು ಕೊಡುತ್ತಿದ್ದ ಹಸುವನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರಿಂದ ದಿಕ್ಕು ತೋಚದಂತಾಗಿದ್ದು, ಬಡಕುಟುಂಬಕ್ಕೆ ಮುಂದಿನ ಜೀವನ ನಿರ್ವಹಣೆಗೆ ಕಷ್ಟದಾಯಕವಾಗಿದೆ.

  • ಐಷಾರಾಮಿ ಜೀವನಕ್ಕಾಗಿ 7 ಬುಲೆಟ್ ಬೈಕ್, ಕಾರು ಕದ್ದು ಪೊಲೀಸರ ಬಲೆಗೆ ಬಿದ್ದರು

    ಐಷಾರಾಮಿ ಜೀವನಕ್ಕಾಗಿ 7 ಬುಲೆಟ್ ಬೈಕ್, ಕಾರು ಕದ್ದು ಪೊಲೀಸರ ಬಲೆಗೆ ಬಿದ್ದರು

    ಬೆಂಗಳೂರು: ಐಷಾರಾಮಿ ಜೀವನ ನಡೆಸಲು ಬುಲೆಟ್ ಬೈಕ್ ಹಾಗೂ ಕಾರುಗಳನ್ನು ಕದಿಯುತ್ತಿದ್ದ 5 ಜನ ಕಳ್ಳರನ್ನು ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.

    ನಂದನ್ ಕುಮಾರ್, ಸತೀಶ್ ಕುಮಾರ್, ಅಭಿಷೇಕ್, ಅನಿಲ್ ಹಾಗೂ ಪ್ರಕಾಶ್ ಬಂಧಿತ ಆರೋಪಿಗಳು. ಇವರ ವಿರುದ್ಧ ಚಿಕ್ಕಮಗಳೂರಿನ ಆಲ್ದೂರು, ಬೆಂಗಳೂರಿನ ರಾಜರಾಜೇಶ್ವರಿ ನಗರ, ಕಾಡುಗೋಡಿ, ಅವಲಹಳ್ಳಿ, ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.

    ಬಂಧಿತರಿಂದ 7 ದುಬಾರಿ ಬೆಲೆಯ ಬುಲೆಟ್ ಬೈಕ್‍ಗಳು, ಒಂದು ಕಾರು ಸೇರಿದಂತೆ 60 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ಒಟ್ಟು ಮೌಲ್ಯ 20 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಎಸ್.ಪಿ. ಶಶಿಕುಮಾರ್ ಬಂಧಿತರಿಂದ ವಶಪಡಿಸಿಕೊಂಡಿದ್ದ ವಸ್ತುಗಳನ್ನು ಮಾಲೀಕರಿಗೆ ಹಿಂದಿರುಗಿಸಿದರು. ಚಿನ್ನಾಭರಣ ಕಳೆದುಕೊಂಡಿದ್ದ ಲಲಿತಾ ಎಂಬವರು, ಕಳುವಾಗಿದ್ದ ಆಭರಣಗಳು ಸಿಗುತ್ತವೆ ಎನ್ನುವ ನಂಬಿಕೆ ನನಗೆ ಇರಲಿಲ್ಲ. ಕಳ್ಳರನ್ನು ಹಿಡಿದು ಆಭರಣವನ್ನು ಮತ್ತೆ ದೊರಕಿಸಿಕೊಟ್ಟ ಪೊಲೀಸರಿಗೆ ಧನ್ಯವಾದ ಎಂದರು.

  • ಸಹೋದರಿಯರ ಮನಸೆಳೆವ ಜಲ ಯೋಗ!

    ಸಹೋದರಿಯರ ಮನಸೆಳೆವ ಜಲ ಯೋಗ!

    ಬೆಂಗಳೂರು: ಇಂದು ನಾಲ್ಕನೇ ವಿಶ್ವ ಯೋಗದಿನದ ನಿಮಿತ್ತ ಸಹೋದರಿಯರಿಬ್ಬರು ನೀರಿನಲ್ಲಿ ಯೋಗ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ.

    ಆನೇಕಲ್ ಪಟ್ಟಣದ ನಿತ್ಯಾಶ್ರೀ ಹಾಗೂ ತನುಶ್ರೀ ಎಂಬ ಇಬ್ಬರು ಸಹೋದರಿಯರು ನೀರಿನ ಮೇಲೆ ತೇಲುತ್ತ ಕೈಯಲ್ಲಿ ದೀಪ ಹಿಡಿದು ವಿವಿಧ ಯೋಗದ ಆಸನಗಳನ್ನು ಪ್ರದರ್ಶನ ಮಾಡಿದ್ದಾರೆ. ಇವರಿಬ್ಬರೂ ನೀರಲ್ಲಿ ದೀಪ ನಂದದಂತೆ ಯೋಗಾಸನ ಮಾಡುವುದರಲ್ಲಿ ಪರಿಣಿತರಾಗಿದ್ದಾರೆ.

    ನಿತ್ಯಾಶ್ರೀ ಹಾಗೂ ತನುಶ್ರೀಯವರಿಗೆ ತಂದೆ ಸುಬ್ರಹ್ಮಣ್ಯ ಅವರೇ ಗುರುಗಳು. ಸುಬ್ರಹ್ಮಣ್ಯ ಅವರು ಕೂಡಾ ಯಾವುದೇ ಗುರುಗಳಿಂದ ಜಲ ಯೋಗವನ್ನು ಕಲಿತಿಲ್ಲವಂತೆ. ಋಷಿಮುನಿಗಳ ಜಲ ಯೋಗದ ಕುರಿತು ಓದಿ, ತಿಳಿದು ತಾವೇ ಸ್ವಯಂ ಕಲಿತಿದ್ದಾರೆ. ಹಾಗೇ ತಮ್ಮ ಮಕ್ಕಳಿಗೂ ಜಲ ಯೋಗವನ್ನು ಕಲಿಸಿದ್ದಾರೆ.

    ಎಲೆ ಮರೆಕಾಯಿಯಂತಿದ್ದ ನಿತ್ಯಾಶ್ರೀ ಹಾಗೂ ತನುಶ್ರೀ ಸಹೋದರಿಯರ ಪ್ರತಿಭೆ ವಿಶ್ವ ಯೋಗ ದಿನದಿಂದಾಗಿ ಬೆಳಕಿಗೆ ಬಂದಿದ್ದು, ಸದ್ಯ ಈ ಸಹೋದರಿಯರು ಅನೇಕರ ಮನೆ ಮಾತಾಗಿದ್ದಾರೆ.

  • ಹೊಟ್ಟೆನೋವಿಗೆ ಇಂಜೆಕ್ಷನ್ ನೀಡಿದ ವೈದ್ಯ, 10 ನಿಮಿಷದಲ್ಲೇ ರೋಗಿ ಸಾವು!

    ಹೊಟ್ಟೆನೋವಿಗೆ ಇಂಜೆಕ್ಷನ್ ನೀಡಿದ ವೈದ್ಯ, 10 ನಿಮಿಷದಲ್ಲೇ ರೋಗಿ ಸಾವು!

    ಆನೆಕಲ್: ಹೊಟ್ಟೆ ನೋವು ಎಂದು ಬಳಲುತ್ತಿದ್ದ ಮಹಿಳೆಗೆ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಇಂಜೆಕ್ಷನ್ ನೀಡಿದಕ್ಕೆ ಮಹಿಳೆ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಮುತ್ತಗಟ್ಟಿ ಗ್ರಾಮದ ನಿವಾಸಿ ಮಂಗಳಮ್ಮ ಹೊಟ್ಟೆನೊವಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಪಟ್ಟಣದ ಆನೇಕಲ್ ಹೆಲ್ತ್‍ಕೇರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿತ್ತು. ವೈದ್ಯ ಡಾ. ಉಮೇಶ್ ಮಂಗಳಮ್ಮಗೆ ಇಂಜೆಕ್ಷನ್ ನೀಡಿದ್ದರು. ಇಂಜೆಕ್ಷನ್ ನೀಡಿದ 10 ನಿಮಿಷದಲ್ಲಿಯೇ ಮಂಗಳಮ್ಮ ಮೃತಪಟ್ಟಿದ್ದಾರೆ ಅಂತಾ ಅವರ ಸಂಬಂಧಿಗಳು ದೂರಿದ್ದಾರೆ.

    ಮಹಿಳೆ ಮೃತ ಪಟ್ಟ ತಕ್ಷಣ ಕುಟುಂಬಸ್ಥರು ಗಲಾಟೆ ಪ್ರಾರಂಭಿಸಿದ್ದಾರೆ. ಸ್ವತಃ ವೈದ್ಯ ಉಮೇಶ್ ತನ್ನ ಖಾಸಗಿ ಆಸ್ಪತ್ರೆಯಿಂದ ಮಂಗಳಮ್ಮನನ್ನು ತುರ್ತು ಚಿಕಿತ್ಸೆನೀಡಬೇಕೆಂದು ಕಾರಣ ಹೇಳಿ ಮಂಗಳಮ್ಮ ಮೃತ ದೇಹವನ್ನು ಆನೇಕಲ್ ನ ಸರ್ಕಾರಿ ಆಸ್ಪತ್ರೆಗೆ 108 ಅಂಬುಲೆನ್ಸ್ ಮೂಲಕ ಕಳುಹಿಸಿದ್ದಾನೆ.

    ಅತ್ತ ಮಂಗಳಮ್ಮ ಸಂಬಂಧಿಗಳು ಹೋಗುತ್ತಿದ್ದಂತೆ ಇತ್ತ ಡಾ. ಉಮೇಶ್ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದಾನೆ. ಇನ್ನು ಮೃತರ ಸಂಬಂಧಿಕರು ಆನೇಕಲ್ ಪೊಲೀಸ್   ಠಾಣೆಯಲ್ಲಿ ವೈದ್ಯ ಉಮೇಶ್ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಮಂಗಳಮ್ಮ ಸಾವಿನ ನಿಖರ ಕಾರಣ ತಿಳಿದುಬರಲಿದೆ.

  • ಬೆಂಗಳೂರಿಗೂ ಕಾಲಿಟ್ಟ ಚಡ್ಡಿ ಗ್ಯಾಂಗ್ – ಅರೆಬೆತ್ತಲಾಗಿ ಬಂದು ಕಳ್ಳತನ ಮಾಡ್ತಾರೆ – ವಿಡಿಯೋ ನೋಡಿ

    ಬೆಂಗಳೂರಿಗೂ ಕಾಲಿಟ್ಟ ಚಡ್ಡಿ ಗ್ಯಾಂಗ್ – ಅರೆಬೆತ್ತಲಾಗಿ ಬಂದು ಕಳ್ಳತನ ಮಾಡ್ತಾರೆ – ವಿಡಿಯೋ ನೋಡಿ

    ಬೆಂಗಳೂರು: ದಂಡುಪಾಳ್ಯ ಗ್ಯಾಂಗ್ ಬಳಿಕ ನಗರಕ್ಕೆ ಮತ್ತೊಂದು ಕಳ್ಳರ ಗ್ಯಾಂಗ್ ಕಾಲಿಟ್ಟಿದೆ. ಅರೆಬೆತ್ತಲಾಗಿ ಲಾಂಗು, ಮಚ್ಚು ಹಿಡಿದು, ಮೈಗೆ ಎಣ್ಣೆ ಹಚ್ಚಿಕೊಂಡು ಗ್ಯಾಂಗ್‍ವೊಂದು ಕಳ್ಳತನಕ್ಕೆ ಯತ್ನಿಸಿರುವ ಪ್ರಕರಣಗಳು ನಗರದ ಹೊರವಲಯದ ಬನ್ನೇರುಘಟ್ಟ ಸುತ್ತಮುತ್ತಲಿನ ಪ್ರದೇಶದ ಮನೆಗಳಲ್ಲಿ ನಡೆದಿದೆ.

    ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಮುಸುಕುದಾರಿ ಗ್ಯಾಂಗ್ ಅರೆಬೆತ್ತಲಾಗಿ ಆಗಮಿಸಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಬನ್ನೇರುಘಟ್ಟ, ಜಿಗಣಿ ಕೈಗಾರಿಕ ಪ್ರದೇಶದಲ್ಲಿ ಗ್ಯಾಂಗ್ ಕಾಣಿಸಿಕೊಂಡಿದ್ದು ಹೊರವಲಯದ ಮನೆಗಳ ಬಳಿ ಕಳ್ಳತನಕ್ಕೆ ಬಂದು ವಿಫಲ ಯತ್ನ ನಡೆಸಿ ವಾಪಸ್ಸಾಗಿದೆ. ಬನ್ನೇರುಘಟ್ಟ, ಸಕಲವಾರ, ಮಂಟಪಾ ಗ್ರಾಮಗಳ ಕೆಲ ಮನೆಗಳಿಗೆ ಕಳ್ಳತನಕ್ಕೆಂದು ಬಂದ ಗ್ಯಾಂಗ್‍ನ ಚಲನವಲನಗಳು ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಘಟನೆ ಜೂನ್ 7ರಂದು ನಡೆದಿದ್ದು, ಗ್ಯಾಂಗ್ ಬನ್ನೇರುಘಟ್ಟದ ಹಲವೆಡೆಗಳಲ್ಲಿ ಸಂಚರಿಸಿದ್ದ ಕಳ್ಳತನಕ್ಕೆ ಯತ್ನಿಸಿದೆ. ಸದ್ಯ ಸಿಸಿಟಿವಿ ದೃಶ್ಯ ಆಧಾರಿಸಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಗ್ಯಾಂಗ್ ಪತ್ತೆಗೆ ಈಗಾಗಲೇ ಪೊಲೀಸರು ಬಲೆ ಬೀಸಿದ್ದು ತಮಿಳುನಾಡು ಕಡೆಯಿಂದ ಈ ಗ್ಯಾಂಗ್ ಬಂದಿರಬಹುದು ಎಂಬ ಶಂಕೆ ಪೊಲೀಸ್ ವಲಯದಲ್ಲಿ ವ್ಯಕ್ತವಾಗಿದೆ.

    ಇನ್ನು ಆನೇಕಲ್, ಅತ್ತಿಬೆಲೆ ಗಡಿಭಾಗ ಸೇರಿದಂತೆ ಈ ಗ್ಯಾಂಗ್ ಬಗ್ಗೆ ಪೊಲೀಸರು ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಿದ್ದು ಅವರ ಚಲನವಲನ ಕಂಡು ಬಂದಲ್ಲಿ ಸೆರೆಹಿಡಿಯುವಂತೆ ಮಾಹಿತಿ ನೀಡಿದ್ದಾರೆ.

    https://www.youtube.com/watch?v=zA1Y_tlISQQ

  • ಬ್ಯಾಂಕ್ ಕಳ್ಳತನಕ್ಕೆ ಬಂದು ಸಿಸಿಟಿವಿ ಕದ್ದರು!

    ಬ್ಯಾಂಕ್ ಕಳ್ಳತನಕ್ಕೆ ಬಂದು ಸಿಸಿಟಿವಿ ಕದ್ದರು!

    ಬೆಂಗಳೂರು: ಬ್ಯಾಂಕ್ ಕಳ್ಳತನಕ್ಕೆ ಬಂದಿದ್ದವರಿಗೆ ಏನು ಸಿಗಲಿಲ್ಲವೆಂದು ಸಿಸಿಟಿವಿ ಕ್ಯಾಮೆರಾವನ್ನು ಕದ್ದೊಯ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ.

    ಬ್ಯಾಂಕ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಕಳ್ಳರು ನೆರಳೂರು ಗ್ರಾಮದ ಕೆನರಾ ಬ್ಯಾಂಕ್ ಕಳ್ಳತನಕ್ಕೆ ಯತ್ನಿಸಿದ್ದಾರೆ. ಬ್ಯಾಂಕ್ ಲಾಕರ್ ರೂಮ್ ಒಡೆದು ಹುಡುಕಾಡಿದ್ದಾರೆ. ಅಲ್ಲಿಯೂ ಅವರಿಗೆ ಏನು ದೊರೆಯದೇ ಇದ್ದಾಗ ಸಿಸಿಟಿವಿ ಕ್ಯಾಮೆರಾವನ್ನು ತಗೆದುಕೊಂಡು ಹೋಗಿದ್ದಾರೆ.

    ಸಾರ್ವಜನಿಕರು ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇಲೆ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.