Tag: anekal

  • ಬೆಳೆ ಕಟಾವಿನ ವೇಳೆಗೆ ದಾಳಿ ಮಾಡುತ್ತೆ ಕಾಡಾನೆ ಹಿಂಡು – ಆತಂಕದಲ್ಲಿ ಗ್ರಾಮಸ್ಥರು

    ಬೆಳೆ ಕಟಾವಿನ ವೇಳೆಗೆ ದಾಳಿ ಮಾಡುತ್ತೆ ಕಾಡಾನೆ ಹಿಂಡು – ಆತಂಕದಲ್ಲಿ ಗ್ರಾಮಸ್ಥರು

    ಆನೇಕಲ್: ಕಾಡಾನೆಗಳ ಗುಂಪೊಂದು ತಮಿಳುನಾಡು ಗಡಿ ದಾಟಿ ಕರ್ನಾಟಕದ ಅರಣ್ಯ ಪ್ರದೇಶಕ್ಕೆ ಬಂದಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಕರ್ನಾಟಕದ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಗಳನ್ನು ಕಾಡಂಚಿನ ಗ್ರಾಮದತ್ತ ಬಾರದಂತೆ ತಡೆಯಲು ಸಿದ್ಧತೆ ಮಾಡಿಕೊಂಡಿದೆ.

    ಬುಧವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತಮಿಳುನಾಡಿಗೆ ಹೊಂದಿಕೊಂಡಿರುವ ಬೆಂಗಳೂರು ಹೊರವಲಯ ಆನೇಕಲ್ ಅರಣ್ಯ ಪ್ರದೇಶಕ್ಕೆ ತಮಿಳುನಾಡಿನ ಹೊಸೂರು ಸಮೀಪದ ಗೋಪಸಂದ್ರ ಗ್ರಾಮದ ಬಳಿಯ ಹೊಳೆಯನ್ನು ದಾಟಿ 30ಕ್ಕೂ ಹೆಚ್ಜಿನ ಆನೆಗಳ ಹಿಂಡು ಅಗಮಿಸಿವೆ. ಆನೇಕಲ್ ಪ್ರದೇಶದ ಸುತ್ತಮುತ್ತ ಬೆಳೆಗಳ ಕಟಾವಿನ ಸಮಯವಾಗಿದ್ದು, ಇದೀಗ ಆನೆಗಳ ಹಿಂಡು ಅಗಮಿಸಿರುವುದು ಕಾಡಂಚಿನ ಗ್ರಾಮಸ್ಥರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

    ಈಗಾಗಲೇ ಮಳೆ ಕೈಕೊಟ್ಟು ಬೆಳೆ ಹಾಳಾಗಿದ್ದು, ಉಳಿದ ಬೆಳೆ ಆನೆಗಳ ಪಾಲಾಗದಂತೆ ನೋಡಿಕೊಳ್ಳುವ ಸವಾಲಿದೆ. ಇನ್ನು ಪ್ರತಿ ವರ್ಷ ನವೆಂಬರ್ ನಿಂದ ಆನೆಗಳ ಹಾವಳಿ ಶುರುವಾಗುತ್ತಿದ್ದು, ಈ ಬಾರಿ ಅರಣ್ಯ ಇಲಾಖೆ ಕಾಡಂಚಿನ ಗ್ರಾಮಗಳಲ್ಲಿ ಹಾಗೂ ಬೆಳೆಗಳನ್ನು ನಾಶ ಮಾಡದಂತೆ ತಡೆಯಲು ಈಗಾಗಲೇ ಸಜ್ಜಾಗಿ ನಿಂತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

    https://www.youtube.com/watch?v=vwb0njphHBA

  • ವ್ಯಕ್ತಿಯನ್ನು ಕೊಲೆಗೈದು ಟಾಟಾ ಏಸ್ ನಲ್ಲಿ ಹಾಕಿ ಎಸ್ಕೇಪ್!

    ವ್ಯಕ್ತಿಯನ್ನು ಕೊಲೆಗೈದು ಟಾಟಾ ಏಸ್ ನಲ್ಲಿ ಹಾಕಿ ಎಸ್ಕೇಪ್!

    ಬೆಂಗಳೂರು: ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಟಾಟಾ ಏಸ್ ವಾಹನದಲ್ಲಿ ಹಾಕಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಡೆದಿದೆ.

    ಬಂಗಾರಪೇಟೆ ನಗರದ ಅಪ್ರೊಜ್(30) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಬಿಎಂಟಿಸಿ ಡಿಪೋ ಬಳಿ ಟಾಟಾ ಏಸ್ ವಾಹನದಲ್ಲಿ ಇವರ ಶವ ಪತ್ತೆಯಾಗಿದೆ.

    ಮೂತ್ರ ವಿಸರ್ಜನೆಗೆಂದು ಬಂದ ಸಾರ್ವಜನಿಕರು ಶವವನ್ನು ಕಂಡು ಕೂಡಲೇ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಅಪ್ರೋಜ್ ಗೆ ನಾಲ್ಕು ಜನ ಅಣ್ಣ-ತಮ್ಮಂದಿರಲ್ಲಿ ಇವರು ಎರಡನೆಯವರಾಗಿದ್ದಾರೆ. ಅಪ್ರೋಜ್ ಟಾಟಾ ಏಸ್ ವಾಹನ ಚಾಲಕನಾಗಿದ್ದು, ತರಕಾರಿಯನ್ನು ಕೋಲಾರ ಮಾರುಕಟ್ಟೆಗೆ ರವಾನೆ ಕೆಲಸ ಮಾಡುತ್ತಿದ್ದರು. ಸದ್ಯ ಅಪ್ರೋಜ್ ಅವರು ತನ್ನ ವಾಹನದಲ್ಲಿಯೇ ಕೊಲೆಯಾಗಿ ಪತ್ತೆಯಾಗಿದ್ದಾರೆ.

    ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆನೇಕಲ್‍ನಲ್ಲಿ ಅನಾಥ ಮಕ್ಕಳ ರಕ್ಷಣೆ

    ಆನೇಕಲ್‍ನಲ್ಲಿ ಅನಾಥ ಮಕ್ಕಳ ರಕ್ಷಣೆ

    ಬೆಂಗಳೂರು: ಪುಟ್ಟಪುಟ್ಟ ಮಕ್ಕಳು ತಂದೆ-ತಾಯಿ ನೆರಳಿನಲ್ಲಿ ಆಟವಾಡುತ್ತಾ ಕಾಲ ಕಳಿಬೇಕಿತ್ತು. ಕೈ ತುತ್ತು ಕೊಡೋ ಅಮ್ಮ ಒಂದು ತಿಂಗಳಿಂದ ನಾಪತ್ತೆ ಇನ್ನು ತಂದೆ ಇದ್ದು ಇಲ್ಲದಂತಾಗಿದ್ದ ಇಂತಹ ಮಕ್ಕಳಿಗೆ ಇನ್ಯಾರು ಗತಿ ಅನ್ನೋ ಸಮಯಕ್ಕೆ ಆ ಮಕ್ಕಳ ಬಾಳಿಗೆ ಗ್ರಾಮಸ್ಥರು ಪಬ್ಲಿಕ್ ಟಿವಿಯ ಬಳಿ ಸಹಾಯ ಕೊರಿದ್ದಾರೆ.

    ಕಳೆದ 10 ವರ್ಷಗಳ ಹಿಂದೆ ದೂರದ ನೇಪಾಳದಿಂದ ಬಿಜೆಶ್ ದಂಪತಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ತಿರುಮಗೊಂಡಹಳ್ಳಿ ಗ್ರಾಮಕ್ಕೆ ವಲಸೆ ಬಂದಿದ್ರು. ಇಲ್ಲಿ ಕೂಲಿ-ನಾಲಿ ಮಾಡುತ್ತಾ ಬದುಕು ಕಟ್ಟಿಕೊಂಡಿದ್ರು. ಈ ದಂಪತಿಗೆ ಮುದ್ದಾದ ನಾಲ್ಕು ಮಕ್ಕಳು ಹುಟ್ಟಿದ್ದು ಬಂದ ಹಣದಲ್ಲಿ ಸಂಸಾರ ನಡೆಸುತ್ತಿದ್ದರು.

    ಆದ್ರೆ ಇತ್ತೀಚೆಗೆ ಈ ಮಕ್ಕಳ ತಂದೆ ಕುಡುಕನಾಗಿದ್ದನು. ದಿನಾ ಕುಡಿದು ಹೆಂಡತಿಗೆ ಹೊಡೆಯುತ್ತಿದ್ದನು. ಇದರಿಂದ ಗಂಡನ ಹಿಂಸೆ ತಾಳಲಾರದೆ ಕಳೆದ ಒಂದು ತಿಂಗಳ ಹಿಂದೆ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ. ಇತ್ತ ತಾಯಿಯನ್ನು ಬಿಟ್ಟ ಮಕ್ಕಳನ್ನು ನೋಡಿಕೊಳ್ಳಬೇಕಾದ ತಂದೆ ಕುಡಿದು ಎಲ್ಲಂದರಲ್ಲಿ ಬಿದ್ದಿರುತ್ತಿದ್ದನು. ಈ ಸಮಯದಲ್ಲಿ ಗ್ರಾಮಸ್ಥರು ಮಕ್ಕಳಿಗೆ ಊಟ ತಿಂಡಿ ಜಾಗ ಕೊಟ್ಟು ನೋಡಿಕೊಂಡಿದ್ದರು. ಎಷ್ಟು ದಿನಾ ಅಂತ ಈ ಮಕ್ಕಳನ್ನ ನೋಡಿಕೊಳ್ಳೋದು ಅಂತಿದ್ದ ಗ್ರಾಮಸ್ಥರು ಕೊನೆಗೆ ಪಬ್ಲಿಕ್ ಟಿವಿಗೆ ಕರೆಮಾಡಿ ಸಹಾಯ ಕೇಳಿದ್ದರು. ಸ್ಥಳಕ್ಕೆ ಭೇಟಿ ಕೊಟ್ಟ ಪಬ್ಲಿಕ್ ಟಿವಿ ಸಿಬ್ಬಂದಿ ಮಕ್ಕಳನ್ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಳುಹಿಸಲು ತೀರ್ಮಾನಿಸಿ ಇಲಾಖೆಗೆ ಮಾಹಿತಿ ನೀಡಿದ್ರು.


    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರದಿಂದ ಬಂದಿದ್ದ ಅಧಿಕಾರಿಗಳು ನಾಲ್ಕು ಮಕ್ಕಳನ್ನು ತಮ್ಮ ವಶಕ್ಕೆ ಪಡೆದು ಮಕ್ಕಳನ್ನು ಬೆಂಗಳೂರಿನ ಡೈರಿ ಸರ್ಕಲ್ ನಲ್ಲಿರುವ ಬಾಲಮಂದಿರಕ್ಕೆ ಕರೆದೊಯ್ದರು. ಇನ್ನು ಗ್ರಾಮಸ್ಥರು ಮಕ್ಕಳ ಯೋಗಕ್ಷೇಮದ ಬಗ್ಗೆ ಅಧಿಕಾರಿಗಳನ್ನು ತೀವ್ರ ವಿಚಾರಿಸಿದ್ದು ಕೊನೆಗೆ ಎಲ್ಲ ರೀತಿಯ ವ್ಯವಸ್ಥೆ ಇದೆ ಎಂಬ ನಂಬಿಕೆ ಬಂದ ನಂತರ ಮಕ್ಕಳನ್ನು ಅಧಿಕಾರಿಗಳಿಗೆ ಒಪ್ಪಿಸಿದರು. ಇನ್ನು ಮಕ್ಕಳನ್ನು ವಶಕ್ಕೆ ಪಡೆದ ಅಧಿಕಾರಿ ಮಕ್ಕಳನ್ನು ಸದ್ಯ ಬಾಲಮಂದಿರದಲ್ಲಿ ಇಟ್ಟು ಅವರಿಗೆ 18 ವರ್ಷ ವಯಸ್ಸಾಗುವವರೆಗೂ ಉಚಿತ ಶಿಕ್ಷಣ ಹಾಗೂ ವಸತಿ ನೀಡಲಾಗುವುದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯೋತ್ಸವದ ಹೆಸರಿನಲ್ಲಿ ಅಧಿಕಾರಿಗಳಿಂದ ಹಣ ವಸೂಲಿಗೆ ಇಳಿದ್ರಾ ಶಾಸಕ ಬಿ.ಶಿವಣ್ಣ!

    ರಾಜ್ಯೋತ್ಸವದ ಹೆಸರಿನಲ್ಲಿ ಅಧಿಕಾರಿಗಳಿಂದ ಹಣ ವಸೂಲಿಗೆ ಇಳಿದ್ರಾ ಶಾಸಕ ಬಿ.ಶಿವಣ್ಣ!

    ಬೆಂಗಳೂರು: ಹಲವು ಇಲಾಖೆಯ ಅಧಿಕಾರಿಗಳಿಂದ ರಾಜ್ಯೋತ್ಸವ ಕಾರ್ಯಕ್ರಮ ಮಾಡುವುದಕ್ಕೆ ಶಾಸಕರೇ ಅಧಿಕಾರಿಗಳ ಬಳಿ ವಸೂಲಿಗೆ ಇಳಿದಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಬೆಂಗಳೂರು ಹೊರವಲಯ ಆನೇಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಬಿ.ಶಿವಣ್ಣರ ವಿರುದ್ಧ ಈ ರೀತಿಯ ಆರೋಪಗಳು ಕೇಳಿ ಬಂದಿವೆ.

    ಕನ್ನಡ ರಾಜ್ಯೋತ್ಸವ ಹೆಸರಿನಲ್ಲಿ ಹಲವು ಇಲಾಖೆಗಳಿಂದ ಲಕ್ಷಗಟ್ಟಲ್ಲೇ ಹಣವನ್ನು ವಸೂಲಿ ಮಾಡಿದ್ದು, ಅಧಿಕಾರಿಗಳು ಭ್ರಷ್ಟಾಚಾರ ಮಾಡುವುದಕ್ಕೆ ಶಾಸಕರೇ ಕುಮ್ಮಕ್ಕು ನೀಡಿದ್ದಂತಾಗಿದೆ. ಅಕ್ಟೋಬರ್ 17ರಂದು ರಾಜ್ಯೋತ್ಸವ ಕಾರ್ಯಕ್ರಮದ ಬಗ್ಗೆ ಆಯೋಜಿಸಿದ್ದ ಸಭೆಯಲ್ಲಿ ತಹಶೀಲ್ದಾರ್ ಮಹದೇವಯ್ಯ ಹಾಗು ತಾಲೂಕು ಪಂಚಾಯಿತಿ ಇ.ಓ. ರಮೇಶ್ ಹಣ ವಸೂಲಿ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇಲಾಖೆಯ ಅಧಿಕಾರಿಗಳಿಂದ ಲಕ್ಷಾಂತರ ರೂಪಾಯಿಗಳ ಹಣವನ್ನು ವಸೂಲಿ ಮಾಡಿದ್ದು ರೆವಿನ್ಯೂ, ಸಬ್ ರಿಜಿಸ್ಟರ್ ಹಾಗು ಹಲವು ಇಲಾಖೆಗಳಿಗೆ ಕುದ್ದು ಶಾಸಕರೇ ಸಭೆ ಮಾಡಿ ಹಣ ನೀಡುವಂತೆ ಸೂಚನೆ ಸಹ ನೀಡಿದ್ದಾರಂತೆ.

    ತಾಲೂಕು ಪಂಚಾಯತಿ ರಾಜ್ಯೋತ್ಸವ ಕಾರ್ಯಕ್ರಮ ಸಭೆಯಲ್ಲಿ ಶಾಸಕರ ಸೂಚನೆಯಂತೆ ತಹಶೀಲ್ದಾರ್ ಮಹದೇವಯ್ಯ ಅಧಿಕಾರಿಗಳ ಹಣಕ್ಕೆ ಬೇಡಿಕೆ ಇಟ್ಟಿದ್ದು, ಇನ್ನು ಪ್ರತಿ ಬಾರಿ ಸಹ ಆಚರಿಸುವ ರಾಷ್ಟ್ರೀಯ ಹಬ್ಬಗಳಿಗೆ ಲಕ್ಷಗಟ್ಟಲ್ಲೇ ಹಣ ವಸೂಲಿ ಮಾಡಿ ಸಂಗ್ರಹಿಸಿದ ಹಣದ ಖರ್ಚಿನ ಮಾಹಿತಿ ಸಹ ನೀಡಿಲ್ಲ. ಇಲಾಖೆಯ ಅಧಿಕಾರಿಗಳಿಗೆ ಶಾಸಕರೇ ಕುಮ್ಮಕ್ಕು ನೀಡಿ ಭ್ರಷ್ಟಾಚಾರದಲ್ಲಿ ತೊಡಗುವಂತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಒಂದು ನಗರಸಭೆಯಲ್ಲಿಯೇ ಮೂರು ಲಕ್ಷ ರೂ ಹಣ ಪಡೆದಿದ್ದು, ಹಲವು ಇಲಾಖೆಗಳಿಂದ ಸಾಕಷ್ಟು ಹಣ ವಸೂಲಿಗೆ ಶಾಸಕರೇ ಅಖಾಡಕ್ಕೆ ಇಳಿದಿದ್ದಾರಂತೆ. ಕನ್ನಡ ರಾಜ್ಯೋತ್ಸವ ಮಾಡಲು ಸರ್ಕಾರದ ಬಳಿ ಹಣ ಇಲ್ವಾ ? ಶಾಸಕರೇ ಹೀಗೆ ಅಧಿಕಾರಿಗಳ ಬಳಿ ಹಣ ವಸೂಲಿ ಮಾಡಿದ್ರೆ ಹೇಗೆ? ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳಲು ಅಧಿಕಾರಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರಾ ಎಂಬಿತ್ಯಾದಿ ಪ್ರಶ್ನೆಗಳ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತನ್ನಿಬ್ಬರ ಮಕ್ಕಳಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ತಾಯಿ

    ತನ್ನಿಬ್ಬರ ಮಕ್ಕಳಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ತಾಯಿ

    ಬೆಂಗಳೂರು: ತನ್ನಿಬ್ಬರ ಮುದ್ದು ಮಕ್ಕಳಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಸೊಸೆನೂರುಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಾಯಿ ಲಕ್ಷ್ಮಿ ಹಾಗೂ ಇಬ್ಬರು ಮಕ್ಕಳಾದ ಪವನ್(3), ಸಾತ್ವಿಕ್ (5) ಮೃತರು. ಪತಿ ಆನಂದ್ ಕಿರುಕುಳಕ್ಕೆ ಬೇಸತ್ತು ತಾಯಿ-ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಆರು ವರ್ಷಗಳ ಹಿಂದೆ ಲಕ್ಷ್ಮಿ ಮತ್ತು ಆನಂದ್ ಮದುವೆ ನಡೆದಿತ್ತು. ಪತಿ-ಪತ್ನಿ ನಡುವೆ ಪ್ರತಿನಿತ್ಯ ಗಲಾಟೆ ನಡೆಯುತ್ತಿತ್ತು. ಭಾನುವಾರ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸಂಜೆ 5 ಗಂಟೆಗೆ ಪತಿ ಆನಂದ್ ಮನೆಗೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಯಾಬ್ ಸಮೇತ ಸಾಫ್ಟ್ ವೇರ್ ಕಂಪನಿಯ ಚಾಲಕ ಕಿಡ್ನಾಪ್!

    ಕ್ಯಾಬ್ ಸಮೇತ ಸಾಫ್ಟ್ ವೇರ್ ಕಂಪನಿಯ ಚಾಲಕ ಕಿಡ್ನಾಪ್!

    – 50 ಸಾವಿರ ಹಣ ನೀಡುವಂತೆ ಬೇಡಿಕೆ

    ಆನೇಕಲ್: ಸಾಫ್ಟ್ ವೇರ್ ಕಂಪನಿಯೊಂದರ ಕ್ಯಾಬ್ ಚಾಲಕನನ್ನು ಕ್ಯಾಬ್ ಸಮೇತ ಕಿಡ್ನಾಪ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಹರಿಬಾಬು ಕಿಡ್ನಾಪ್ ಆದ ಕ್ಯಾಬ್ ಚಾಲಕ. ಬೊಮ್ಮನಹಳ್ಳಿಯ ಕಂಪನಿಯೊಂದರಲ್ಲಿ ಕ್ಯಾಬ್ ಚಾಲಕನಾಗಿದ್ದ ಇವರು ಹೊಂಗಸಂದ್ರದಲ್ಲಿ ನೆಲೆಸಿದ್ದ. ಇದೇ ತಿಂಗಳ 16 ರಂದು ರಾತ್ರಿ ಉದ್ಯೋಗಿಯೊಬ್ಬರನ್ನು ಹೊಸೂರು ಮುಖ್ಯರಸ್ತೆಯ ಹೆಬ್ಬಗೋಡಿಗೆ ಡ್ರಾಪ್ ಮಾಡಿ ವಾಪಸ್ಸಾಗುವಾಗ ಕಾಣೆಯಾಗಿದ್ದಾರೆ.

    ಕಾಣೆಯಾದ ಮರುದಿನವೇ ಈತನ ಅಣ್ಣ ಅಶೋಕ್ ಎಂಬವರಿಗೆ ಕಿಡ್ನಾಪರ್ಸ್ ಕರೆ ಮಾಡಿ 50 ಸಾವಿರ ನೀಡುವಂತೆ ಕೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಈ ಬಗ್ಗೆ ಅಶೋಕ್ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಹರಿಬಾಬು ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೇಮ ವೈಫಲ್ಯಕ್ಕೆ ಪ್ರಿಯತಮೆ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ!

    ಪ್ರೇಮ ವೈಫಲ್ಯಕ್ಕೆ ಪ್ರಿಯತಮೆ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ!

    ಬೆಂಗಳೂರು: ಪ್ರೇಮ ವೈಫಲ್ಯವಾದರೆ ಪಾಗಲ್ ಪ್ರೇಮಿಗಳು ಎಂತಹ ಕೃತ್ಯಕ್ಕೆ ಬೇಕಾದರೂ ಇಳಿಯುತ್ತಾರೆ. ಇಂತಹದ್ದೇ ಪ್ರಕರಣವೊಂದು ಬೆಂಗಳೂರು ಹೊರ ವಲಯದ ಆನೇಕಲ್‍ನಲ್ಲಿ ನಡೆದಿದ್ದು, ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರಿಯತಮೆ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ್ದಾನೆ.

    ಬೆಳ್ಳಂದೂರು ನಿವಾಸಿ ಗಿರೀಶ್ ಕೃತ್ಯ ಎಸಗಿದ ಪಾಗಲ್ ಪ್ರೇಮಿ. ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಕೆಯನ್ನು ಆನೇಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಆಗಿದ್ದೇನು?: ಯುವತಿಯ ಮನೆಯಲ್ಲಿ ಆಕೆಯನ್ನು ಬಿಟ್ಟು ಬೇರೆ ಯಾರೂ ಇಲ್ಲವೆಂದು ಗಿರೀಶ್ ಇಂದು ಬೆಳಗ್ಗೆ ಖಚಿತ ಪಡೆಸಿಕೊಂಡಿದ್ದಾನೆ. ಬಳಿಕ ಮನೆಗೆ ನುಗ್ಗಿದ ಗಿರೀಶ್ ಯುವತಿಯನ್ನು ಹಿಡಿದು, ಕತ್ತು ಕೊಯ್ದು ಹತ್ಯೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಜೋರಾಗಿ ಕಿರುಚಾಡಿದ್ದಾಳೆ. ಇದನ್ನು ನೆರೆಹೊರೆಯವರು ಕೇಳಿಸಿಕೊಂಡಿದ್ದು, ತಕ್ಷಣವೇ ಯುವತಿಯ ಮನೆ ಕಡೆಗೆ ಬಂದಿದ್ದಾರೆ. ಇದನ್ನು ನೋಡಿದ ಗಿರೀಶ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಯುವತಿಯನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಾಗಲ್ ಪ್ರೇಮಿ ಗಿರೀಶ್ ವಿರುದ್ಧ ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಾಂಜಾ ಮತ್ತಿನಲ್ಲಿ ಆಟೋಗಳನ್ನು ಜಖಂಗೊಳಿಸಿದ ಕಿಡಿಗೇಡಿಗಳು!

    ಗಾಂಜಾ ಮತ್ತಿನಲ್ಲಿ ಆಟೋಗಳನ್ನು ಜಖಂಗೊಳಿಸಿದ ಕಿಡಿಗೇಡಿಗಳು!

    ಬೆಂಗಳೂರು: ಗಾಂಜಾ ಮತ್ತಿನಲ್ಲಿ ಕಿಡಿಗೇಡಿಗಳ ಗುಂಪೊಂದು ಆಟೋಗಳನ್ನು ಜಖಂಗೊಳಿಸುವ ಘಟನೆ ಬೆಂಗಳೂರಿನ ರಾಮಮೂರ್ತಿನಗರ ವಾರ್ಡ್‍ನ ಕಲ್ಕೆರೆ ಚೆನ್ನಸಂದ್ರ ಗ್ರಾಮದಲ್ಲಿ ನಡೆದಿದೆ.

    ಈ ಪ್ರದೇಶ ಬಿಬಿಎಂಪಿ ವ್ಯಾಪ್ತಿಗೆ ಸೇರಿದರೂ ಗ್ರಾಮಾಂತರ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮವಾಗಿದ್ದು, ಅಲ್ಲಿ ಕಳೆದ ಆರು ತಿಂಗಳಿನಿಂದ ಬೆಂಗಳೂರಿನ ಪುಂಡ ಪೋಕರಿಗಳ ಗುಂಪೊಂದು ಗಾಂಜಾ ಸೇವಿಸಿಕೊಂಡು ತಿರುಗಾಡುತ್ತಿದೆ. ಕಳೆದ ರಾತ್ರಿ ಪುಂಡರ ಗಾಂಜಾ ಹೆಚ್ಚಾಗಿ ಏರಿಯಾದಲ್ಲಿನ 7 ಆಟೋಗಳ ಗಾಜುಗಳನ್ನು ಪುಡಿ ಪುಡಿ ಮಾಡಿದಲ್ಲದೆ, ಮೂರು ಮನೆಗಳ ಕಿಟಕಿ ಗಾಜುಗಳನ್ನು ಬ್ಯಾಟ್ ಹಾಗೂ ದೊಣ್ಣೆಗಳಿಂದ ಒಡೆದು ಸ್ಥಳೀಯರಿಗೆ ಬೆದರಿಕೆ ಹಾಕಿ ದರ್ಪ ತೋರಿಸಿದ್ದಾರೆ.

    ಬೆಂಗಳೂರಿನ ವಿವಿಧ ಪ್ರದೇಶಗಳಿಂದ ಬರುವ ಗಾಂಜಾ ವ್ಯಸನಿಗಳು ಕಳೆದ ಐದಾರು ತಿಂಗಳಿಂದ ಇಲ್ಲಿನ ಮುನೇಶ್ವರ ಸ್ವಾಮಿ ದೇವಾಲಯವನ್ನು ಗಾಂಜಾ ಸೇವನೆಯ ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸದ ಕಾರಣ ಈ ಪ್ರದೇಶದಲ್ಲಿ ಗಾಂಜಾ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಸಂಸಾರಸ್ಥರು ಬೀದಿಯಲ್ಲಿ ಒಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಕಳೆದ ರಾತ್ರಿ 10 ರಿಂದ 15 ಯುವಕರ ತಂಡ ಇಲ್ಲಿನ ಅಟೋಗಳನ್ನು ಜಖಂ ಗೊಳಿಸಿ ಮನೆಗಳ ಮೇಲೆ ದಾಳಿ ಮಾಡಿ ಮನೆ ಮಾಲೀಕರಿಗೆ ಧಮ್ಕಿ ಹಾಕಿದ್ದು, ಆದಷ್ಟು ಬೇಗ ಪೊಲೀಸರು ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಲ ಮರುಪಾವತಿ ಮಾಡದ್ದಕ್ಕೆ ದಂಧೆಕೋರನಿಂದ ಮಗು ಕಿಡ್ನಾಪ್!

    ಸಾಲ ಮರುಪಾವತಿ ಮಾಡದ್ದಕ್ಕೆ ದಂಧೆಕೋರನಿಂದ ಮಗು ಕಿಡ್ನಾಪ್!

    ಬೆಂಗಳೂರು: ಒಂದು ಕಡೆ ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಸ್ ನಡೆಸುತ್ತಿದ್ದರೆ ಬಡ್ಡಿ ದಂಧೆಕೋರರ ದರ್ಬಾರ್ ಮುಂದುವರಿದಿದೆ. ಸಾಲದ ಹಣಕ್ಕಾಗಿ ಕಂದಮ್ಮನನ್ನೇ ಅಪಹರಣ ಮಾಡಿದ ಅಮಾನವೀಯ ಕೃತ್ಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಕಂದಮ್ಮನ ಚಿಕಿತ್ಸೆಗೆಂದು ಪಡೆದ 30 ಸಾವಿರ ರೂ. ಸಾಲವನ್ನು ಹಿಂತಿರುಗಿಸಲಿ ಅಂತಾ ಲೇವಾದೇವಿಯೊಬ್ಬ ಮಗುವನ್ನೇ ಅಪಹರಣ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆನೇಕಲ್ ತಾಲೂಕಿನ ಕಿತ್ತಾಗನಹಳ್ಳಿಯಲ್ಲಿ ವಾಸವಾಗಿದ್ದ ಬಾಡಿಗೆ ಮನೆಗೂ ಬೀಗ ಜಡಿದು ದಂಪತಿಯನ್ನು ಬೀದಿ ಪಾಲು ಮಾಡಿದ್ದಾನೆ.

    ಭದ್ರಾವತಿಯ ಚಂದ್ರ ಮೂರ್ತಿ ಮಗುವನ್ನು ಕಿತ್ತುಕೊಂಡು ಹೋದ ಲೇವಾದೇವಿ. ವಿನಾಯಕ್ ದಂಪತಿ ಮಗು ಈಗ ಭದ್ರಾವತಿಯಲ್ಲಿದ್ದು, ಸಾಲ ಮರುಪಾವತಿ ಮಾಡಿ ಮಗುವನ್ನು ತಗೆದುಕೊಂಡು ಹೋಗಿ ಅಂತಾ ಚಂದ್ರ ಮೂರ್ತಿ ಪಟ್ಟು ಹಿಡಿದಿದ್ದಾನೆ ಎಂದು ದಂಪತಿ ಆರೋಪಿಸಿದ್ದಾರೆ.

    ಏನಿದು ಪ್ರಕರಣ?:
    ಹಾಸನ ಮೂಲದ ವಿನಾಯಕ್ ದಂಪತಿ ಐದು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಆನೇಕಲ್ ಸಮೀಪದ ಕಿತ್ತಾಗನಹಳ್ಳಿಗೆ ಬಂದಿದ್ದರು. ಅಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಂಡು ಗಾರೆ ಕೆಲಸ ಮಾಡುತ್ತ ಜೀವನ ನಡೆಸುತ್ತಿದ್ದರು. ಒಂದು ವರ್ಷದ ಹಿಂದೆ ಮಗುವಿನ ಜನನವಾಗಿದ್ದು, ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಮಗುವಿಗೆ ಚಿಕಿತ್ಸೆ ಕೊಡಿಸಲು ಭದ್ರಾವತಿಯ ಚಂದ್ರ ಮೂರ್ತಿ ಬಳಿ ವಿನಾಯಕ್ ದಂಪತಿ 30 ಸಾವಿರ ರೂ. ಸಾಲ ಪಡೆದಿದ್ದರು.

    ಆರ್ಥಿಕವಾಗಿ ಕುಗ್ಗಿದ್ದ ವಿನಾಯಕ್ ಸಾಲ ಮರುಪಾವತಿ ಮಾಡಲು ಆಗಿರಲಿಲ್ಲ. ಇದಿಂದಾಗಿ ಚಂದ್ರ ಮೂರ್ತಿ ವಿನಾಯಕ್ ದಂಪತಿಯನ್ನು ಭದ್ರಾವತಿಗೆ ಕರೆಸಿಕೊಂಡಿದ್ದರು. ಮಗುವನ್ನು ಅಪಹರಣ ಮಾಡಿ, ಮಗು ಬೇಕಾದರೆ ಸಾಲ ಮರು ಪಾವತಿ ಮಾಡಿ ಅಂತಾ ಬೆದರಿಕೆ ಹಾಕಿದ್ದಾರಂತೆ. ಒಂಬತ್ತು ತಿಂಗಳ ಹೆತ್ತು ಹೊತ್ತು ಸಾಕಿದ ಮಗುವನ್ನು ಕಳೆದುಕೊಂಡ ತಂದೆ-ತಾಯಿ ದಿಕ್ಕು ತೋಚದೆ ಪಬ್ಲಿಕ್ ಟಿವಿ ಬಳಿ ಬಂದು ಮಗುವನ್ನು ಕೊಡಿಸುವಂತೆ ಬೇಡಿಕೊಳ್ಳುತ್ತಿದ್ದಾರೆ.

    ಕಿತ್ತಾಗನ ಹಳ್ಳಿಯಲ್ಲಿ ಬಾಡಿಗೆಗೆ ಇದ್ದ ಮನೆಗೂ ಸಹ ಚಂದ್ರ ಮೂರ್ತಿ ಬೀಗ ಜಡಿದಿದ್ದು, ಇರುವುದಕ್ಕೂ ಮನೆಯಿಲ್ಲದಾಗಿದೆ. ಕೈಯಲ್ಲಿ ಬಿಡಿಗಾಸು ಇಲ್ಲದೇ ಐದು ದಿನಗಳಿಂದ ದೇವಸ್ಥಾನ, ಬಸ್‍ಸ್ಟ್ಯಾಂಡ್, ಆಸ್ಪತ್ರೆಗಳ ಬಳಿ ಮಲಗಿಯೇ ಕಾಲ ಕಳೆಯುತ್ತಿದ್ದಾರೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/eOPS66BnUYM

  • ಕಾರ್ಮಿಕರಿಗೆ ಚಾಕುವಿನಿಂದ ಇರಿದು ಮೊಬೈಲ್, ಹಣ ದೋಚಿದ ಡಿಯೋ ಬೈಕ್ ಗ್ಯಾಂಗ್!

    ಕಾರ್ಮಿಕರಿಗೆ ಚಾಕುವಿನಿಂದ ಇರಿದು ಮೊಬೈಲ್, ಹಣ ದೋಚಿದ ಡಿಯೋ ಬೈಕ್ ಗ್ಯಾಂಗ್!

    ಆನೇಕಲ್: ಇಂದು ಮುಂಜಾನೆ ನಾಲ್ವರಿಗೆ ಚಾಕುವಿನಿಂದ ಇರಿದು ಕಾರ್ಮಿಕರ ಬಳಿಯಿದ್ದ ಮೊಬೈಲ್ ಹಾಗೂ ಹಣವನ್ನು ದರೋಡೆ ಮಾಡಿರುವ ಪ್ರಕರಣ ಬೆಂಗಳೂರು ಹೊರವಲಯದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಬಿಲ್ ಪೋರ್ಜ್ ಕಂಪನಿಯ ಕಾರ್ಮಿಕರಾದ ಆಂಧ್ರ ಮೂಲದ ಮಹಾನಂದ, ಉತ್ತರ ಭಾರತ ಮೂಲದ ಪೂರ್ಣಚಂದ್ರ ಹಾಗೂ ಇಬ್ಬರು ಕಾರ್ಮಿಕರ ಮೇಲೆ ಡಿಯೋ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ಬಳಿಕ ಅವರ ಬಳಿಯಿದ್ದ ಮೊಬೈಲ್ ಹಾಗೂ ಹಣವನ್ನು ದರೋಡೆ ಮಾಡಿದ್ದಾರೆ. ಈ ಘಟನೆಯಲ್ಲಿ ಮಹಾನಂದ ಹಾಗೂ ಪೂರ್ಣ ಚಂದ್ರ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯ ತೀವ್ರ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದು ತೆರಳಿದ್ದಾರೆ.

    ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಈ ಡಿಯೋ ಬೈಕ್ ಗ್ಯಾಂಗ್ ಕಳೆದ ಮೂರು ದಿನಗಳಲ್ಲಿ ಇದೇ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 13 ಜನರಿಗೆ ಚಾಕುವಿನಿಂದ ಇರಿದು ದರೋಡೆ ಮಾಡಿವೆ. ಕೈಗಾರಿಕಾ ಪ್ರದೇಶದಲ್ಲಿನ ರಸ್ತೆಗಳಲ್ಲಿ ಸರಿಯಾದ ಬೀದಿ ದೀಪಗಳು ಹಾಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಲ್ಲದಿರುವುದೇ ಈ ಘಟನೆಗಳಿಗೆ ಪ್ರಮುಖ ಕಾರಣ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv