Tag: anekal

  • ರೌಡಿಸಂನಲ್ಲಿ ಹೆಸರು ಮಾಡಲು ಯುವಕನನ್ನು ಬರ್ಬರವಾಗಿ ಕೊಲೆಗೈದ್ರು!

    ರೌಡಿಸಂನಲ್ಲಿ ಹೆಸರು ಮಾಡಲು ಯುವಕನನ್ನು ಬರ್ಬರವಾಗಿ ಕೊಲೆಗೈದ್ರು!

    ಅನೇಕಲ್: ರೌಡಿಸಂ ಹೆಸರು ಮಾಡಲು ಮುಂದಾಗಿದ್ದ ಆರೋಪಿಗಳು ಯುವನೊಬ್ಬನನ್ನು ಬರ್ಬರವಾಗಿ ಕೊಲೆಮಾಡಿ ಈಗ ಪೊಲೀಸರ ಅತಿಥಿಗಳಾಗಿರುವ ಘಟನೆ ಅನೇಕಲ್ ತಾಲೂಕಿನಲ್ಲಿ ನಡೆದಿದೆ.

    ಬಂಧಿತರನ್ನು ವಿನಿತ್(21) ಮುನೇಂದ್ರ(20) ವಜ್ರಮುನಿ (25) ಮನು (21) ಹಾಗೂ ಕಾರ್ತಿಕ್ (21) ಎಂದು ಗುರುತಿಸಲಾಗಿದೆ. ಆರೋಪಿಗಳು ಇದೇ ತಿಂಗಳ 14 ರಂದು ಎಂ ಮೇಡಹಳ್ಳಿ ಬಡಾವಣೆಯೊಂದರ ಬಳಿ ಯವಕ ದೇವರಾಜ್ (23) ಬರ್ಬರವಾಗಿ ಕೊಲೆ ಮಾಡಿದ್ದರು.

    ಪ್ರಕರಣವನ್ನು ಬೆನ್ನತ್ತಿದ್ದ ಅತ್ತಿಬೆಲೆ ಪೊಲೀಸ್ ಸಿಬ್ಬಂದಿ 6 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರೆಲ್ಲರೂ ಕೂಡ ಅನೇಕಲ್ ತಾಲೂಕಿನ ಬೆಸ್ತಮಾನಹಳ್ಳಿಯ ನಿವಾಸಿಗಳಾಗಿದ್ದಾರೆ. ಈ ಪ್ರಕರಣದ ಮತ್ತೊರ್ವ ಆರೋಪಿ ಹೊಸೂರಿನ ಪ್ರವೀಣ್ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

    ಈ ಕೊಲೆಯ ಸೂತ್ರಧಾರಿಗಳು ಸುನಿಲ್ ಹಾಗೂ ನವೀನ್ ಎನ್ನಲಾಗಿದ್ದು, ಇಬ್ಬರು ಈ ಹಿಂದೆ ಜಯಂತ್ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಉಳಿದಂತೆ ಆನೇಕಲ್ ಮನು ಹಾಗೂ ಸುನಿಲ್ ಗ್ಯಾಂಗ್ ರೌಡಿಸಂನಲ್ಲಿ ಹೆಸರುಗಳಿಸಲು ಯತ್ನಿಸುತ್ತಿದ್ದು, ಜೈಲಿನಲ್ಲಿದ್ದುಕೊಂಡೆ ಸುನಿಲ್ ಹಾಗೂ ಮನುವಿನ ಸ್ನೇಹಿತ ದೇವರಾಜ ನನ್ನು ಬಳಿಸಿಕೊಂಡು ಕೊಲೆ ಮಾಡಿಸಿದ್ದಾನೆ ಎನ್ನಲಾಗುತ್ತಿದೆ.

    ಕೊಲೆಯಾದ ಯುವಕನ ದೇವರಾಜು ಕೂಡ ಕೆಲ ದಿನಗಳ ಹಿಂದೆ ಗಲಾಟೆಯೊಂದರಲ್ಲಿ ಜೈಲು ಸೇರಿದ್ದ. ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಆತ ಕೂಡ ಫೀಲ್ಡ್‍ನಲ್ಲಿ ಹೆಸರು ಮಾಡಲು ಮುಂದಾಗಿದ್ದ. ಈ ಹಂತದಲ್ಲಿ ಸುನಿಲ್ ನೊಂದಿಗೆ ಕಿರಿಕ್ ಮಾಡಿಕೊಂಡಿದ್ದ, ಇದರಿಂದ ರೊಚ್ಚಿಗೆದ್ದ ಸುನಿಲ್ ಜೈಲಿನಿಂದಲೇ ತನ್ನ ಹುಡುಗರಿಗೆ ಪ್ಲಾನ್ ತಿಳಿಸಿ ಕೊಲೆ ಮಾಡಿಸಿದ್ದಾನೆ. ಕೊಲೆಯಾದ ದಿನ ದೇವರಾಜು ಮೊಬೈಲ್ ಬಂದಿದ್ದ ಕರೆ ಆಧರಿಸಿ ಆರೋಪಗಳನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.

  • ಗ್ಯಾಸ್ ಕಂಪನಿಯ ಪೈಪ್ ಒಡೆದು ಬ್ಲಾಸ್ಟ್- 4 ಮನೆ, 2 ಕಾರ್ ಜಖಂ

    ಗ್ಯಾಸ್ ಕಂಪನಿಯ ಪೈಪ್ ಒಡೆದು ಬ್ಲಾಸ್ಟ್- 4 ಮನೆ, 2 ಕಾರ್ ಜಖಂ

    -ಇಬ್ಬರು ಮಕ್ಕಳಿಗೆ ಗಾಯ

    ಬೆಂಗಳೂರು: ಹೊರವಲಯ ಆನೇಕಲ್ ತಾಲೂಕಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಮುನೇಶ್ವರ ಬಡಾವಣೆಯಲ್ಲಿ ಮನೆಗಳಿಗೆ ಗ್ಯಾಸ್ ಸರಬರಾಜು ಮಾಡುವ ಗೇಲ್ ಗ್ಯಾಸ್ ಕಂಪನಿಯ ಪೈಪ್ ಒಡೆದು ಬ್ಲಾಸ್ಟ್ ಆಗಿದೆ. ಅವಘಡದಲ್ಲಿ ಇಬ್ಬರು ಬಾಲಕರು, ನಾಲ್ಕು ಮನೆಗಳು ಸೇರಿದಂತೆ 2 ಕಾರು ಜಖಂಗೊಂಡಿವೆ.

    ಗಾಯಗೊಂಡ ಮಕ್ಕಳನ್ನು ಗಗನ್ (9) ರೋಷನ್(11) ಎಂದು ಗುರುತಿಸಲಾಗಿದೆ. ಪೈಪ್ ಲೈನ್ ಹಾದುಹೋಗುವ ಮಾರ್ಗದಲ್ಲಿ ವಿದ್ಯುತ್ ಸರಬರಾಜು ಮಾಡಲು ಗುಂಡಿ ತೋಡುತ್ತಿದ್ದ ಸಂದರ್ಭದಲ್ಲಿ ಗ್ಯಾಸ್ ಪೈಪ್ ಒಡೆದು ಅನಾಹುತ ಸಂಭವಿಸಿದೆ. ಗ್ಯಾಸ್ ಸೋರಿಕೆಯಾಗಿ 4 ಮನೆ ಕಾರುಗಳು ಜಖಂಗೊಂಡಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

    ಗೇಲ್ ಗ್ಯಾಸ್ ಕಂಪನಿಯ ಪೈಪ್ ಒಡೆದು ಹಾದು ಹೋಗಿರುವ ಭೂಮಿಯ ಒಳ ಭಾಗದ ಪಕ್ಕದಲ್ಲಿ ಹೊಸದಾದ ಕೇಬಲ್ ಲೈನ್ ಅಳವಡಿಸಲಾಗುತ್ತಿದೆ. ಈ ಕಾಮಗಾರಿ ವೇಳೆ ಗ್ಯಾಸ್ ಪೈಪ್ ಲಿಕೇಜ್ ಆಗಿ ಮನೆಗೆ ಅಳವಡಿಸಿದ್ದ ಸ್ಯಾನಿಟ್ರಿ ಮೂಲಕ ಗ್ಯಾಸ್ ತುಂಬಿಕೊಂಡು ಅನಾಹುತ ಸಂಭವಿಸಿದೆ ಎಂದು ಸುತ್ತಮುತ್ತಲಿನ ನಿವಾಸಿಗಳು ಕಾಮಗಾರಿ ಮಾಡುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೆಲದಿನಗಳ ಹಿಂದಷ್ಟೇ ಬೆಂಕಿ ಅನಾಹುತ ಸಂಭವಿಸಿದ್ದು, ಅದು ಮರೆಯುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಗೇಲ್ ಗ್ಯಾಸ್ ಕಂಪನಿ ಹಾಗೂ ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ನಾನಾ ಕಾಮಗಾರಿಗಳಿಗೆಂದು ರಸ್ತೆಯನ್ನು ಅಗೆಯುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಇರುವದರಿಂದ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ರಸ್ತೆ ಅಗೆಯಲು ಬರುವವರಿಗೆ ಬಿಬಿಎಂಪಿ ಕಣ್ಮುಚ್ಚಿ ಪರ್ಮಿಷನ್ ನೀಡುತ್ತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸ್ತಿಗಾಗಿ ಹಂದಿಗೂಡಿನಂತ ಮನೆಯಲ್ಲಿ ತಾಯಿಯನ್ನೇ ಕೂಡಿ ಹಾಕಿದ ಪುತ್ರ!

    ಆಸ್ತಿಗಾಗಿ ಹಂದಿಗೂಡಿನಂತ ಮನೆಯಲ್ಲಿ ತಾಯಿಯನ್ನೇ ಕೂಡಿ ಹಾಕಿದ ಪುತ್ರ!

    – ವರದಿ ಪ್ರಸಾರದ ಬೆನ್ನಲ್ಲೇ ಬಂಧ ಮುಕ್ತಗೊಳಿಸಿದ ಪೊಲೀಸರು

    ಆನೇಕಲ್: ಆಸ್ತಿಗಾಗಿ ಮಗನೇ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಆಹಾರ ನೀಡದೇ ನರಕಯಾತನೆ ಪಡುವಂತೆ ಮಾಡಿದ ಘಟನೆ ನಗರದ ಮಾರತಹಳ್ಳಿ ಸಮೀಪದ ಕಾಡಬಿಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ವೆಂಕಟಸ್ವಾಮಿ ಎಂಬಾತ ತಾಯಿ ಮುನಿಯಮ್ಮ ಅವರನ್ನು ಹಂದಿಗೂಡಿನಂತೆ ಇದ್ದ ಮನೆಯಲ್ಲಿ ಕೂಡಿ ಹಾಕಿದ್ದ. ಅಲ್ಲದೇ ಪತ್ನಿ ಸುಜಾತ ಜೊತೆ ಸೇರಿಕೊಂಡು ಸರಿಯಾಗಿ ಊಟವೂ ನೀಡದೆ ಹಿಂಸೆ ನೀಡಿದ್ದ. ಮನೆಯಲ್ಲಿ ಕೂಡಿ ಹಾಕಿದ್ದ ಪರಿಣಾಮ ಯಾರೋಬ್ಬರು ಇವರ ಸಹಾಯಕ್ಕೂ ಬಂದಿರಲಿಲ್ಲ. ಮನೆಯಲ್ಲಿ ಸರಿಯಾಗಿ ಗಾಳಿ ಬೆಳಕು ಬಾರದ ಕಾಣದ ಕಿಟಕಿಯ ಬಳಿಯೇ ನಿಂತು ದಾರಿಯಲ್ಲಿ ಓಡಾಡುವ ಜನರಲ್ಲಿ ಸಹಾಯ ಕೇಳಿ ಮುನಿಯಮ್ಮ ಅವರು ಜೀವನ ನಡೆಸುತ್ತಿದ್ದರು.

    ಈ ಬಗ್ಗೆ ಮಾಹಿತಿ ಪಡೆದ ಪಬ್ಲಿಕ್ ಟಿವಿ ಮುನಿಯಮ್ಮ ಅವರು ಸ್ಥಿತಿಯನ್ನು ವರದಿ ಮಾಡಿತ್ತು. ವರದಿ ಪ್ರಸಾರವಾಗುತ್ತಿದಂತೆ ಎಚ್ಚೆತ್ತ ಮಾರತ್ತಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮುನಿಯಮ್ಮರನ್ನು ಬಂಧನದಿಂದ ಮುಕ್ತ ಮಾಡಿದ್ದರು. ಅಲ್ಲದೇ ಮಗ ವೆಂಕಟಸ್ವಾಮಿಗೆ ಎಚ್ಚರಿಕೆ ನೀಡಿ ಸರಿಯಾಗಿ ನೋಡಿಕೊಳ್ಳುವಂತೆ ತಿಳಿಸಿದ್ದಾರೆ.

    ಅಂದಹಾಗೇ ಕಾಡಬಿಸನಹಳ್ಳಿ ಸುತ್ತಮುತ್ತಲೂ ಭೂಮಿಗೆ ಬಂಗಾರದ ಬೆಲೆ ಇದ್ದು, ಮುನಿಯಮ್ಮ ಹೆಸರಿನಲ್ಲಿದ್ದ ಮೂರು ಎಕರೆ ಜಮೀನನ್ನು ವೆಂಕಟಸ್ವಾಮಿ ತನ್ನ ಹೆಸರಿಗೆ ಮಾಡಿಸಿಕೊಂಡಿದ್ರು. ಬಳಿಕ ಪತ್ನಿ ಮಕ್ಕಳೊಂದಿಗೆ ಮೂರು ಅಂತಸ್ತಿನ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರಿನ ಗಾಜು ಒಡೆದು ಕ್ಷಣಾರ್ಧದಲ್ಲಿ 9 ಲಕ್ಷ ರೂ. ದೋಚಿದ ಕಳ್ಳರು

    ಕಾರಿನ ಗಾಜು ಒಡೆದು ಕ್ಷಣಾರ್ಧದಲ್ಲಿ 9 ಲಕ್ಷ ರೂ. ದೋಚಿದ ಕಳ್ಳರು

    ಆನೇಕಲ್: ಕಾರಿನ ಗಾಜು ಒಡೆದು 9 ಲಕ್ಷ ರೂ. ಹಣವನ್ನು ದೋಚಿರುವ ಘಟನೆ ಆನೇಕಲ್ ನಗರದ ಉಪ ನೋಂದಾಣಾಧಿಕಾರಿಗಳ ಕಚೇರಿ ಬಳಿ ನಡೆದಿದೆ.

    ನಗರದ ಜೆಪಿ ನಗರದ ನಿವಾಸಿ ದಿನಕರ್ ಎಂಬವರ ಕಾರಿನಲ್ಲಿ ಹಣ ಕಳ್ಳತನವಾಗಿದೆ. ಮನೆ ಮಾರಾಟ ಮಾಡಿ ಬಂದ ಹಣವನ್ನು ಕಾರಿನಲ್ಲಿ ಇಟ್ಟು ತೆರಳಿದ್ದ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಹಣ ಕಳೆದುಕೊಂಡ ದಿನಕರ್, ಬನಹಳ್ಳಿಯಲ್ಲಿದ್ದ ಮನೆಯನ್ನು ಮಾರಾಟ ಮಾಡಿದ್ದೇವು. ಇಂದು ಮನೆ ಖರೀದಿ ಮಾಡಿದ್ದ ವ್ಯಕ್ತಿ ಕೊನೆ ಪಾವತಿಯಾಗಿ 9 ಲಕ್ಷ ರೂ. ನೀಡಿದ್ದರು. ಹಣ ಪಡೆದು ಕಾರಿನಲ್ಲಿಟ್ಟು ಕಚೇರಿ ಒಳಗೆ ತೆರಳಿ 10 ನಿಮಿಷದಲ್ಲಿ ಬಂದು ಕಾರು ನೋಡಿದರೆ ಶಾಕ್ ಆಗಿತ್ತು ಎಂದಿದ್ದಾರೆ.

    ಕಾರಿನ ಗಾಜು ಒಡೆದ ದುಷ್ಕರ್ಮಿಗಳು ಹಣವನ್ನ ಕದ್ದು ಪರಾರಿಯಾಗಿದ್ದರು. ಕಾರು ನಿಲ್ಲಿಸಿದ್ದ ಸ್ಥಳದಲ್ಲೇ ಹೋಟೆಲ್ ಕೂಡ ಇತ್ತು. ಆದರೆ ಸ್ಥಳದಲ್ಲಿದ್ದ ಯಾರಿಗೂ ತಿಳಿಯದಂತೆ ಕಾರಿನ ಗಾಜು ಒಡೆದು ಹಣ ಕಳ್ಳತನ ಮಾಡಿದ್ದಾರೆ. ನನಗೆ ಈ ಸ್ಥಳದ ಪರಿಚಯ ಹೆಚ್ಚು ಇಲ್ಲ. ಸ್ಥಳೀಯವಾಗಿ ಒಂದು ಸಿಸಿಟಿವಿ ಮಾತ್ರ ಲಭ್ಯವಿದೆ. ಹಣ ಕಳ್ಳತನ ಆಗಿರುವ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ದಿನಕರ್ ತಿಳಿಸಿದ್ದಾರೆ. ದೂರು ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಗಳ ಮದುವೆಗೆ ಬರಲಿಲ್ಲವೆಂದು ಪತಿ, ಸವತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ

    ಮಗಳ ಮದುವೆಗೆ ಬರಲಿಲ್ಲವೆಂದು ಪತಿ, ಸವತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ

    ಬೆಂಗಳೂರು: ಮಗಳ ಮದುವೆಗೆ ಬಾರದೇ ತನ್ನ ಎರಡನೇ ಪತ್ನಿ ಜೊತೆ ಪತಿರಾಯ ಇದ್ದ ಎಂದು ಸಿಟ್ಟಿಗೆದ್ದ ಮೊದಲ ಪತ್ನಿ ಇಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಆನೇಕಲ್‍ನಲ್ಲಿ ನಡೆದಿದೆ.

    ಇಬ್ಬರ ಪತ್ನಿಯರ ಬೀದಿ ರಂಪಾಟದಿಂದ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಆನೇಕಲ್ ಬನಹಳ್ಳಿಯಲ್ಲಿ ವಾಸ ಮಾಡುತ್ತಿದ್ದ ಕೃಷ್ಣಪ್ಪ ಮೊದಲ ಹೆಂಡತಿ ಚಂದ್ರಕಲಾರೊಂದಿಗೆ ವಾಸ ಮಾಡುತ್ತಿದ್ದ. ಆದರೆ ಒಬ್ಬಳು ಪತ್ನಿ ಸಾಕಾಗಲ್ಲ ಅನ್ನೋ ಹಾಗೆ ಕೃಷ್ಣಪ್ಪ ವಸಂತಕುಮಾರಿಯನ್ನು ಕೂಡ ಮದುವೆ ಆಗಿದ್ದ. ಬಳಿಕ ಮೊದಲ ಪತ್ನಿ ಹಾಗೂ ಮಕ್ಕಳನ್ನು ಬಿಟ್ಟು ಎರಡನೇ ಪತ್ನಿ ಜೊತೆ ಮನೆ ಮಾಡಿಕೊಂಡು ವಾಸಿಸುತ್ತಿದ್ದನು.

    ಮೊದಲಿಂದಲೂ ಈ ವಿಚಾರಕ್ಕಾಗಿ ಇಬ್ಬರು ಪತ್ನಿಯರ ನಡುವೆ ಜಗಳ, ಗಲಾಟೆಗಳು ನಡೆಯುತ್ತಲೇ ಇತ್ತು. ಆದ್ರೆ ಪತಿ ಯಾವಾಗ ಮಗಳ ಮದುವೆಗೆ ಬಾರದೇ ಎರಡನೇ ಪತ್ನಿ ಜೊತೆ ಇದ್ದನೋ ಮೊದಲನೇ ಪತ್ನಿ ಮತ್ತು ಮಕ್ಕಳು ಸಿಟ್ಟಿಗೆದ್ದಿದ್ದಾರೆ. ಬಳಿಕ ವಸಂತಕುಮಾರಿ ಹಾಗೂ ಕೃಷ್ಣಪ್ಪನ ಮನೆಗೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕೃಷ್ಣಪ್ಪ ಹಾಗೂ ವಸಂತಕುಮಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಈ ಘಟನೆ ಕುರಿತು ಹಲ್ಲೆಗೊಳಗಾದ ಕೃಷ್ಣಪ್ಪ ಹಾಗೂ ವಸಂತಕುಮಾರಿ ಪೊಲೀಸರಿಗೆ ದೂರು ನೀಡಿದ್ದು, ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಬ್ಜರಾದ್ರೂ ಸ್ವಾಭಿಮಾನದ ಬದುಕು – ಮೀಟರ್‌ಗಿಂತ ಹೆಚ್ಚಿನ ಹಣ ಪಡೀತಿಲ್ಲ ಬೆಂಗ್ಳೂರಿನ ಅಕ್ಬರ್

    ಕುಬ್ಜರಾದ್ರೂ ಸ್ವಾಭಿಮಾನದ ಬದುಕು – ಮೀಟರ್‌ಗಿಂತ ಹೆಚ್ಚಿನ ಹಣ ಪಡೀತಿಲ್ಲ ಬೆಂಗ್ಳೂರಿನ ಅಕ್ಬರ್

    ಬೆಂಗಳೂರು: ಕೈಕಾಲು ನೆಟ್ಟಗಿದ್ರೂ ಕೆಲವು ಮಂದಿ ದುಡಿದು ತಿನ್ನೋಕೆ ಆಗದೆ ಮಾಡಬಾರದ ಕೆಲಸ ಮಾಡ್ತಾರೆ. ಆದ್ರೆ, ಕುಬ್ಜತೆಗೆ ಒಳಗಾಗಿರೋ ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಅಕ್ಬರ್ ಸ್ವಾಭಿಮಾನದ ಜೀವನ ನಡೆಸ್ತಿದ್ದಾರೆ.

    ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಆಟೋ ಓಡಿಸಿ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ ಅಕ್ಬರ್. ಇವರು ಮೂಲತಃ ತಮಿಳುನಾಡಿನವರು. 10 ವರ್ಷಗಳಿಂದ ಹೊಸರೋಡಿನಲ್ಲಿ ನೆಲೆಸಿದ್ದಾರೆ. 7 ವರ್ಷಗಳ ಹಿಂದೆ ಅಪ್ಪ ನಿಧನರಾದ ಮೇಲೆ ಅಕ್ಬರ್ ತಾನೇ ದುಡಿಯಬೇಕಾಯಿತು. ಹುಟ್ಟಿನಿಂದಲೂ ಕುಬ್ಜತೆಗೆ ಒಳಗಾಗಿರುವ 31 ವರ್ಷದ ಅಕ್ಬರ್ 3 ಅಡಿ ಎತ್ತರ ಇದ್ದಾರೆ. ಆದರೆ, ಜೀವನೋತ್ಸಾಹ ಮಾತ್ರ ನೂರ್ಮಡಿಯಾಗಿದೆ.

    ಸಾಲ ಮಾಡಿ ಸೆಕೆಂಡ್ ಹ್ಯಾಂಡ್ ಆಟೋ ಖರೀದಿಸಿ ಬಾಡಿಗೆಗೆ ಬಿಟ್ಟು ಅದರಿಂದ ಬರೋ ಹಣವನ್ನು ಜೀವನೋಪಾಯಕ್ಕೆ ಬಳಸೋಣ ಅಂತ ಯೋಜಿಸಿದ್ದರು. ಆದರೆ, ಆಸಾಮಿಯೋರ್ವ ಆಟೋ ಪಡೆದರೂ ಬಾಡಿಗೆ ಹಣ ಕೊಡದೆ ಎಸ್ಕೇಪ್ ಆದ. ಆಗ ಎಚ್ಚೆತ್ತ ಅಕ್ಬರ್ ನಾನೇ ಏಕೆ ಆಟೋ ಓಡಿಸಬಾರದು ಅಂತ ಬ್ರೇಕ್ ಆಲ್ಟ್ರೇಷನ್ ಮಾಡಿಸಿಕೊಂಡು ಆಟೋ ಓಡಿಸ್ತಿರೋದಾಗಿ ಅಕ್ಬರ್ ಹೇಳಿದ್ದಾರೆ.

    ಓಡಾಡಲೂ ಕಷ್ಟ ಆಗಿರೋದ್ರಿಂದ ಮನೆಯವರು, ಸ್ನೇಹಿತರ ಸಹಾಯದಿಂದ ಆಟೋ ಓಡಿಸ್ತಿದ್ದಾರೆ. ಕೆಲವು ಪ್ರಯಾಣಿಕರು ಅಕ್ಬರ್ ಆಟೋವನ್ನೇ ಹುಡುಕಿ ಬರ್ತಾರೆ. ಆದರೆ, ಕರುಣೆ ತೋರಿಸಿ ಹೆಚ್ಚಿಗೆ ಹಣ ಕೊಟ್ರೆ ಬಿಲ್‍ಗಿಂತ ಹೆಚ್ಚಿಗೆ ನಯಾಪೈಸೆಯನ್ನು ಸುತರಾಂ ಸ್ವೀಕರಿಸಲ್ಲ. ಅಕ್ಬರ್ ಸ್ವಾಭಿಮಾನ ನೋಡಿ ಇಲ್ಲಿನ ಆಟೋಚಾಲಕರೂ ಭೇಷ್ ಅಂತಿದ್ದಾರೆ.


    ಅಕ್ಬರ್ ಆಟೋಗೆ ಪ್ರಯಾಣಿಕರು ತಾವಾಗೇ ಬಂದರೂ ಪೊಲೀಸರು ಅಡ್ಡಿ ಪಡಿಸ್ತಿದ್ದಾರೆ. ನಿನಗೆ ನಿನ್ನ ಮೇಲೆಯೇ ನಂಬಿಕೆ ಇಲ್ಲ. ಪ್ರಯಾಣಿಕರನ್ನು ಹೇಗೆ ಕರ್ಕೊಂಡು ಹೋಗ್ತೀಯಾ ಅಂತ ದಬಾಯಿಸ್ತಿದ್ದಾರೆ. ಇದಕ್ಕೆ ತನ್ನ ಕೆಲಸದ ಮೂಲಕವೇ ಅಕ್ಬರ್ ಉತ್ತರ ಕೊಡ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿ ಕೊಲೆ ಮಾಡಿ ನಾಟಕವಾಡಿದ ಪತಿ ಅಂದರ್!

    ಪತ್ನಿ ಕೊಲೆ ಮಾಡಿ ನಾಟಕವಾಡಿದ ಪತಿ ಅಂದರ್!

    ಬೆಂಗಳೂರು: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಲೆ ಮಾಡಿ, ವಾರಗಟ್ಟಲೆ ಏನು ಅರಿಯದಂತೆ ನವರಂಗಿ ನಾಟಕವಾಡಿದ್ದ ಪತಿಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆನೇಕಲ್ ತಾಲೂಕಿನ ನಾಗನಾಯಕನಹಳ್ಳಿಯ ನಿವಾಸಿಯಾದ ಪಾಪಣ್ಣನನ್ನು ಪತ್ನಿ ಕೊಲೆಗೈದ ಆರೋಪದ ಅಡಿ ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ತನ್ನ ಪತ್ನಿಗೆ ಬೇರೋಬ್ಬರ ಜೊತೆ ಅನೈತಿಕ ಸಂಬಂಧವಿದೆ ಎಂದು ಪಾಪಣ್ಣನಿಗೆ ಹಲವು ದಿನಗಳಿಂದ ಅನುಮಾನವಿತ್ತು. ಆದರಿಂದ ನಿತ್ಯವು ಮನೆಯಲ್ಲಿ ಪತಿ ಪತ್ನಿ ನಡುವೆ ಜಗಳ ನಡೆಯುತ್ತಲೇ ಇತ್ತು. ಹೀಗೆ ಒಮ್ಮೆ ಜಗಳವಾಡುವಾಗ ಕೋಪಗೊಂಡು ಪಾಪಣ್ಣ ಪತ್ನಿಯನ್ನು ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಪ್ರಶಾಂತ್ ಲೇಔಟ್‍ನ ಪೊದೆಯೊಂದರಲ್ಲಿ ಹಾಕಿದ್ದಾನೆ. ಬಳಿಕ ಎಲ್ಲರ ಬಳಿ ವೆಂಕಟಮ್ಮ ಮಗಳ ಮನೆಗೆ ಹೋಗಿದ್ದಾಳೆ ಎಂದು ಪಾಪಣ್ಣ ಕಥೆ ಕಟ್ಟಿದ್ದ.

    ಡಿ.27ರಂದು ಬೆಳಿಗ್ಗೆ 8.30 ಕ್ಕೆ ಮರಸೂರು ಬಳಿಯ ಪ್ರಶಾಂತ್ ಲೇಔಟ್‍ನ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಪೊಲೀಸರು ಈ ಕುರಿತು ತನಿಖೆ ನಡೆಸಿದ ಬಳಿಕ ಆ ಶವ ವೆಂಕಟಮ್ಮ ಅವರದ್ದು ಎಂದು ಪತ್ತೆಯಾಗಿದೆ.

    ಬಳಿಕ ಪಾಪಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ವೆಂಟಮ್ಮನಿಗೆ ಅನೈತಿಕ ಸಂಬಂಧ ಇರುವ ಹಿನ್ನೆಲೆ ಪದೇ ಪದೇ ನಮ್ಮಿಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಗಲಾಟೆ ವಿಕೋಪಕ್ಕೆ ಹೋಗಿ ಕೊಲೆ ಮಾಡಿದೆ ಅಂತ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಆರೋಪಿ ವಿರುದ್ಧ ಸೂರ್ಯಸಿಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನರ ಗುಂಪಿನ ಮೇಲೆ ಚಿರತೆ ದಾಳಿ-ಇತ್ತ ನಗರದತ್ತ ಬಂದ ಗಜಪಡೆ

    ಜನರ ಗುಂಪಿನ ಮೇಲೆ ಚಿರತೆ ದಾಳಿ-ಇತ್ತ ನಗರದತ್ತ ಬಂದ ಗಜಪಡೆ

    ಆನೇಕಲ್: ಗುಂಪು ಗುಂಪಾಗಿ ಚಿರತೆ ಸೆರೆ ಹಿಡಿಯುವುದನ್ನು ನೋಡಲು ತೆರಳಿದ್ದ ಸಾರ್ವಜನಿಕರ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದ ವಾನಂಬಾಡಿಯಲ್ಲಿ ನಡೆದಿದೆ.

    ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಬೋನು ಸಿದ್ಧಪಡಿಸಿ ಮಾಂಸದ ತುಂಡಿನ ಸಮೇತ ಚಿರತೆ ಪ್ರತ್ಯಕ್ಷವಾದ ಸ್ಥಳಕ್ಕೆ ತಂದಿತ್ತು. ಈ ವೇಳೆ ಸುತ್ತಮುತ್ತಲಿನ ಗ್ರಾಮಾಸ್ಥರು ಸೇರಿದಂತೆ ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿದ್ದರು. ಆದರೆ ಜನರ ಗಲಾಟೆಗೆ ಭಯಗೊಂಡ ಚಿರತೆ ಗುಂಪಿನ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳು ಜನರು ಯತ್ನಿಸಿ ದಿಕ್ಕಾಪಲಾಗಿ ಓಡಿದ್ದಾರೆ.

    ಚಿರತೆ ಜನರ ಮೇಲೆ ದಾಳಿ ನಡೆಸುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಜನರನ್ನು ಬೆನ್ನಟ್ಟಿ ಚಿರತೆ ದಾಳಿ ನಡೆಸುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದಾಗಿದೆ. ಈ ವೇಳೆ ಸ್ಥಳದಲ್ಲೇ ಅರಣ್ಯ ಸಿಬ್ಬಂದಿ ಕೂಡ ಇದ್ದು, ಜನರ ಮೇಲೆ ದಾಳಿ ನಡೆಸಿದ ಚಿರತೆ ಕ್ಷಣ ಮಾತ್ರದಲ್ಲಿ ತಪ್ಪಿಸಿಕೊಂಡು ಕಾಡಿನತ್ತ ಓಡಿ ಹೋಗಿದೆ.

    ಒಂದೆಡೆ ಚಿರತೆ ದಾಳಿ ನಡೆದಿದ್ದರೆ, ಇತ್ತ ಕರ್ನಾಟಕ, ತಮಿಳುನಾಡಿನ ಗಡಿ ಭಾಗದಲ್ಲಿ ಮತ್ತೆ ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಹೊಸೂರು ಬಳಿಯ ಉದ್ದನಾಪಲ್ಲಿ, ತೊಪಗಾನಪಲ್ಲಿ ಗ್ರಾಮಗಳ ಬಳಿ ಕಾಡಾನೆಗಳು ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದೆ. ಕಳೆದೆರೆಡು ತಿಂಗಳಿನಿಂದ ಗಡಿ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚುತ್ತಿದ್ದು ಆನೆಗಳನ್ನು ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

    https://www.youtube.com/watch?v=EkvtvjmHVis

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂದುವರಿದ ಗಜ, ಮನುಜನ ಸಂಘರ್ಷ – ಕಾಡಾನೆ ಗುಂಪಿನತ್ತ ಕಲ್ಲು ತೂರಿದ ಗ್ರಾಮಸ್ಥರು

    ಮುಂದುವರಿದ ಗಜ, ಮನುಜನ ಸಂಘರ್ಷ – ಕಾಡಾನೆ ಗುಂಪಿನತ್ತ ಕಲ್ಲು ತೂರಿದ ಗ್ರಾಮಸ್ಥರು

    ಆನೇಕಲ್: ಕರ್ನಾಟಕ, ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಹೊಸೂರು, ಡೆಂಕನಿಕೋಟೆ, ಸೂಳಗಿರಿ ಅರಣ್ಯ ಪ್ರದೇಶದಲ್ಲಿ 3 ತಂಡಗಳಲ್ಲಿ ಸುಮಾರು 69ಕ್ಕೂ ಹೆಚ್ಚು ಆನೆಗಳು ಹಲವು ದಿನಗಳಿಂದ ಬೀಡು ಬಿಟ್ಟ ಪರಿಣಾಮ ಗ್ರಾಮಸ್ಥರು ಆತಂಕದಲ್ಲಿ ದಿನದೂಡುತ್ತಿದ್ದಾರೆ.

    ಪ್ರತಿ ವರ್ಷದಂತೆ ಅರಣ್ಯದಂಚಿನ ತೋಟದ ಹೊಲಗಳಿಗೆ ಆಹಾರವನ್ನು ಅರಸಿ ಬರುವ ಆನೆಗಳ ಹಿಂಡು ಈ ವರ್ಷವು ಕೂಡ ಆಗಮಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆನೆಗಳನ್ನು ನೋಡಲು ಬರುವ ಗ್ರಾಮದ ಜನರು ಆನೆಗಳ ಗುಂಪನ್ನು ಗಾಬರಿ ಪಡಿಸುತ್ತಾ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಇದರಿಂದ ಹೆದರಿ ಆನೆಗಳು ನಾಡಿನತ್ತ ಲಗ್ಗೆಯಿಟ್ಟು ಮತ್ತಷ್ಟು ಬೆಳೆ ನಾಶ ಮಾಡುತ್ತಿವೆ.

    ಆನೆಗಳನ್ನು ನೋಡಲು ಹಾಗೂ ಓಡಿಸಲು ಸಾಕಷ್ಟು ಜನ ಸೇರುತ್ತಿದ್ದು, ಜನರನ್ನು ಕಂಡ ಆನೆಗಳು ದಾಳಿ ಮಾಡಲು ಮುಂದಾಗುತ್ತಿವೆ. ಅರಣ್ಯ ಅಧಿಕಾರಿಗಳು ಆನೆಗಳನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ಜನರೇ ಆನೆಗಳ ಮೇಲೆ ದಾಳಿ ಮಾಡುತ್ತಿರುವುದನ್ನು ನಿಯಂತ್ರಿಸಲು ಕೂಡ ಅರಣ್ಯ ಸಿಬ್ಬಂದಿ ಪರದಾಟ ನಡೆಸುತ್ತಿದ್ದಾರೆ.

    ಈ ವರ್ಷ ಕಾಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, ಪ್ರತಿ ದಿನ ಆನೆಗಳು ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಮೊದಲೇ ಬರಗಾಲದಿಂದ ರೈತರ ಬೆಳೆಗಳು ಅಲ್ಪ ಪ್ರಮಾಣದಲ್ಲಿ ಫಸಲು ನೀಡಿದ್ದು, ಅಳಿದುಳಿದ ಬೆಳೆಯು ಕೂಡ ಕಣ್ಣ ಮುಂದೆಯೇ ನಾಶವಾಗುತ್ತಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಡಿಯಲ್ಲಿ ಹೆಚ್ಚಿದ ಕಾಡಾನೆ ದಾಳಿ – 40ಕ್ಕೂ ಹೆಚ್ಚಿರುವ ಆನೆ ಹಿಂಡು ಕಂಡು ಗ್ರಾಮಸ್ಥರಲ್ಲಿ ಆತಂಕ

    ಗಡಿಯಲ್ಲಿ ಹೆಚ್ಚಿದ ಕಾಡಾನೆ ದಾಳಿ – 40ಕ್ಕೂ ಹೆಚ್ಚಿರುವ ಆನೆ ಹಿಂಡು ಕಂಡು ಗ್ರಾಮಸ್ಥರಲ್ಲಿ ಆತಂಕ

    ಬೆಂಗಳೂರು: ಕರ್ನಾಟಕ – ತಮಿಳುನಾಡು ಗಡಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ಇಂದು ಸಹ 2 ಕಾಡಾನೆಗಳು ಗ್ರಾಮದ ತೋಟಕ್ಕೆ ನುಗ್ಗಿ ಬೆಳೆನಾಶ ಮಾಡಿರುವ ಘಟನೆ ಕರ್ನಾಟಕದ ಗಡಿ ಆನೇಕಲ್ ಗೆ ಹೊಂದಿಕೊಂಡಿರುವ ತಮಿಳುನಾಡು ಅರಣ್ಯದಂಚಿನಲ್ಲಿ ನಡೆದಿದೆ.

    ಅರಣ್ಯದಂಚಿನ ಗ್ರಾಮವಾದ ಪತ್ತಕೋಟ ಗ್ರಾಮದಲ್ಲಿ ಇಂದು ಮುಂಜಾನೆ 2 ಕಾಡಾನೆಗಳು ಗ್ರಾಮದಲ್ಲಿನ ತೋಟಗಳಿಗೆ ನುಗ್ಗಿ ಅಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶಮಾಡಿದೆ. ಅಲ್ಲದೇ ಸುಮಾರು 40ಕ್ಕೂ ಕಾಡಾನೆ ಹಿಂಡು ಕಳೆದ 2 ತಿಂಗಳಿಂದ ಆನೇಕಲ್‍ಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು, ಸುಳಗಿರಿ, ಡೆಂಕನಿಕೋಟೆ ಹಾಗೂ ಜವಳಗಿರಿ ಓಡಾಟ ನಡೆಸಿದೆ. ಆನೆ ಹಿಂಡು ಕಂಡ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

    ಆನೆಗಳ ಹಿಂಡು ಅರಣ್ಯದಂಚಿನ ಗ್ರಾಮಗಳಿಗೆ ನುಗ್ಗಿ ಪ್ರಾಣ ಹಾನಿ ಹಾಗೂ ಬೆಲೆ ನಾಶ ಮಾಡಿದೆ. ಕಳೆದೊಂದು ವಾರದಲ್ಲಿ ಆನೆಗಳ ದಾಳಿಗೆ ಇಬ್ಬರು ವ್ಯಕ್ತಿಗಳು ಮೃತಪಟ್ಟು, ಒಂದು ಹಸು ಕೂಡ ಬಲಿಯಾಗಿದೆ. ಆನೆಗಳನ್ನು ಕಾಡಿಗೆ ಓಡಿಸಲು ತಮಿಳುನಾಡು ಅರಣ್ಯ ಇಲಾಖೆ ಸರಿಯಾದ ನಿಟ್ಟಿನಲ್ಲಿ ಪ್ರಯತ್ನಿಸುತ್ತಿಲ್ಲ ಎಂಬುದು ಗಡಿ ಪ್ರದೇಶದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv