Tag: anekal

  • ನೀರಿನಲ್ಲಿ ತೇಲುತ್ತಾ 20ಕ್ಕೂ ಹೆಚ್ಚು ಆಸನಗಳನ್ನು ಮಾಡ್ತಾರೆ ಆನೇಕಲ್ ಸಹೋದರಿಯರು

    ನೀರಿನಲ್ಲಿ ತೇಲುತ್ತಾ 20ಕ್ಕೂ ಹೆಚ್ಚು ಆಸನಗಳನ್ನು ಮಾಡ್ತಾರೆ ಆನೇಕಲ್ ಸಹೋದರಿಯರು

    ಬೆಂಗಳೂರು: ಇಂದು ಐದನೇ ವಿಶ್ವ ಯೋಗ ದಿನ. ಆರೋಗ್ಯಕರ ಜೀವನಕ್ಕಾಗಿ ಯೋಗ ಮಾಡೋದು ಒಳ್ಳೆಯದು ಇಂತಹ ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಸಾಧು- ಸಂತರು ಕೊಡುಗೆ ಕೊಟ್ಟಿದ್ದು ಋಷಿಮುನಿಗಳು ನೀರಿನಲ್ಲಿ ತೇಲುತ್ತಾ ಯೋಗ ಪ್ರದರ್ಶಿಸುತ್ತಿದ್ದರು. ಇದೀಗ ಅದೇ ರೀತಿ ನೀರಿನಲ್ಲಿ ಓರ್ವ ಸಾಮಾನ್ಯ ರೈತನ ಹೆಣ್ಣು ಮಕ್ಕಳು ವಿಶ್ವ ಆರೋಗ್ಯ ದಿನದ ಹಿನ್ನೆಲೆಯಲ್ಲಿ ಯೋಗ ಪ್ರದರ್ಶನ ನೀಡಿದ್ದಾರೆ.

    ಹೌದು. ನಿತ್ಯಾಶ್ರೀ ಹಾಗೂ ತನುಶ್ರೀ ಎಂಬ ಸಹೋದರಿಯರು ನೀರಿನ ಮೇಲೆ ತೇಲುತ್ತಾ ಕೈಯಲ್ಲಿ ನಾನಾ ರೀತಿಯ ಯೋಗಾಸನಗಳನ್ನು ಪ್ರದರ್ಶನ ಮಾಡಿದ್ದಾರೆ. ಬೆಂಗಳೂರಿನ ಕೂಗಳತೆ ದೂರಲ್ಲಿರೋ ಆನೇಕಲ್ ಪಟ್ಟಣದ ಈ ಸಹೋದರಿಯರಿಬ್ಬರು 2 ವರ್ಷ ವಯಸ್ಸಿನಿಂದಲೇ ತಂದೆ ಸುಬ್ಬಣ್ಣರಿಂದ ಯೋಗ ಕಲಿಯುತ್ತಿದ್ದಾರೆ. ಎಲ್ಲರೂ ನೆಲದ ಮೇಲೆ ವಿವಿಧ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿದರೆ ಈ ಸಹೋದರಿಯರು, ನೀರಿನಲ್ಲಿ ತೇಲುತ್ತಾ ಸುಮಾರು ಇಪ್ಪತ್ತಕ್ಕೂ ಹೆಚ್ಚು ಆಸನಗಳನ್ನು ಮಾಡೋದು ಇವರ ವೈಶಿಷ್ಟ್ಯ.

    ನೀರಿನಲ್ಲಿ ಮಾಡೋ ಈ ಯೋಗಕ್ಕೆ ಕೃಷಿಕ ತಂದೆ ಸುಬ್ರಹ್ಮಣ್ಯರೇ ಗುರು. ಅದೂ ಅಲ್ಲದೇ ತಾನು ಕೂಡ ಯಾವುದೇ ಗುರುಗಳ ಬಳಿ ಯೋಗ ಕಲಿತಿಲ್ಲ. ಋಷಿಮುನಿಗಳು ನೀರಿನ ಮೇಲೆ ತೇಲುತ್ತಲೇ ಯೋಗದ ಭಂಗಿಗಳನ್ನು ಪ್ರದರ್ಶಿಸುತ್ತಿದ್ದರು ಎನ್ನುವುದನ್ನು ತಿಳಿದು ಪುಸ್ತಕಗಳನ್ನು ಓದಿ, ಅಭ್ಯಾಸ ಮಾಡಿ ತಮ್ಮ ಮಕ್ಕಳಿಗೂ ಹೇಳಿಕೊಟ್ಟಿರುವುದಾಗಿ ಯೋಗಪಟು ಸುಬ್ರಹ್ಮಣ್ಯ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಯೋಗ ವಿಶ್ವದಲ್ಲೇ ಪ್ರಸಿದ್ಧಿಯಾಗಿದ್ದು ಇದೀಗ 5ನೇ ವರ್ಷವನ್ನು ಆಚರಿಸುತ್ತಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ವೈದ್ಯರಿಲ್ಲದೆ ಹೆರಿಗೆ ಮಾಡಿಸಿದ ನರ್ಸ್- ನವಜಾತ ಶಿಶು ಸಾವು

    ವೈದ್ಯರಿಲ್ಲದೆ ಹೆರಿಗೆ ಮಾಡಿಸಿದ ನರ್ಸ್- ನವಜಾತ ಶಿಶು ಸಾವು

    ಬೆಂಗಳೂರು: ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆಯೇ ನರ್ಸ್ ತಾನೇ ಹೆರಿಗೆ ಮಾಡಿಸಿದ ಹಿನ್ನೆಲೆಯಲ್ಲಿ ನವಜಾತ ಶಿಶು ಸಾವನ್ನಪ್ಪಿದ ಘಟನೆ ಆನೇಕಲ್ ತಾಲೂಕಿನ ಹಾರಗದ್ದೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

    ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಸಾವನ್ನಪ್ಪಿದೆ ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ. ದಾವಣಗೆರೆಯಿಂದ ಬಂದು ವಡ್ಡರಪಾಳ್ಯದಲ್ಲಿ ನೆಲೆಸಿದ್ದ ದಂಪತಿ ಶಶಿಧರ್ ಮತ್ತು ರಂಜಿತಾ ಅವರ ಮಗು ಜೀವಕಳೆದುಕೊಂಡಿದೆ.

    ಭಾನುವಾರ ಹೆರಿಗೆ ನೋವು ಕಾಣಿಸಿಕೊಂಡು ರಂಜಿತಾರನ್ನು ಪತಿ ಶಶಿಧರ್ ಹಾರಗದ್ದೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದರು. ಆದರೆ ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇರದ ಕಾರಣ ನರ್ಸ್ ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಮಗುವಿನ ಉಸಿರಾಟಕ್ಕೆ ತೊಂದರೆ ಆಗಿದೆ. ಕೂಡಲೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ನರ್ಸ್ ದಂಪತಿಗೆ ತಿಳಿಸಿದ್ದಾರೆ.

    ಆದರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗು ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹೆರಿಗೆ ಮಾಡಿಸಿದ ಸರ್ಕಾರಿ ಆಸ್ಪತ್ರೆ ನರ್ಸ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಗುವಿನ ಕುಟುಂಬಸ್ಥರು ವೈದ್ಯರು ಹಾಗೂ ನರ್ಸ್ ನಿರ್ಲಕ್ಷ್ಯ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರಾಜ್ಯದ ಗಡಿಭಾಗವನ್ನು ತಲುಪಿತು 108 ಅಡಿ ಎತ್ತರದ ವಿಷ್ಣುವಿನ ಪ್ರತಿಮೆ

    ರಾಜ್ಯದ ಗಡಿಭಾಗವನ್ನು ತಲುಪಿತು 108 ಅಡಿ ಎತ್ತರದ ವಿಷ್ಣುವಿನ ಪ್ರತಿಮೆ

    ಆನೇಕಲ್: ಈಜಿಪುರ ಗ್ರಾಮದಲ್ಲಿ ಸ್ಥಾಪನೆಯಾಗಲಿರುವ 108 ಅಡಿ ಎತ್ತರದ ವಿಶ್ವರೂಪಿ ವಿಷ್ಣುವಿನ ಪ್ರತಿಮೆ ರಾಜ್ಯದ ಗಡಿ ಭಾಗವನ್ನು ತಲುಪಿದೆ.

    ಬೆಂಗಳೂರಿನ ಈಜಿಪುರ ಗ್ರಾಮದಲ್ಲಿ ಶ್ರೀ ಕೋದಂಡರಾಮಸ್ವಾಮಿ ಟ್ರಸ್ಟ್ 108 ಅಡಿ ಎತ್ತರದ ವಿಶ್ವರೂಪಿ ವಿಷ್ಣುವಿನ ವಿಗ್ರಹ ಪ್ರತಿಷ್ಠಾಪನೆ ಮಾಡಲು ಸಿದ್ಧತೆ ನಡೆಸುತ್ತಿದೆ. ಇಂದು ಆ ವಿಗ್ರಹ ತಮಿಳುನಾಡು ಗಡಿ ಆನೇಕಲ್ ತಾಲೂಕಿನ ಅತ್ತಿಬೆಲೆಗೆ ಬಂದು ತಲುಪಿದೆ. ಬಹಳ ಕಷ್ಟದ ದಾರಿಯಲ್ಲೂ ತಿರುವಣ್ಣಾಮಲೈ ಸಮೀಪದ ವಂದವಾಸಿಯಿಂದ ವಿಗ್ರಹ ರಾಜ್ಯಕ್ಕೆ ಬಂದಿದ್ದು ಜನರು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ.

    ಈ ಬೃಹತ್ ವಿಗ್ರಹ ಸ್ಥಾಪಿಸಲು 2009 ರಲ್ಲಿ ತೀರ್ಮಾನಿಸಲಾಗಿದ್ದು ಅಂದಿನಿಂದ ವಿಗ್ರಹದ ಕಲ್ಲಿಗಾಗಿ ಹುಡುಕಾಟ ನಡೆಸಲಾಗಿತ್ತು. ಕನಕಪುರದ ಸಾತನೂರಿನ ಕ್ವಾರಿಯಲ್ಲಿ ಹುಡುಕಿದರೂ ವಿಗ್ರಹಕ್ಕೆ ಬಂಡೆ ಸಿಕ್ಕಿರಲಿಲ್ಲ. ಕೊನೆಗೆ ತಮಿಳುನಾಡಿನ ತಿರುವಣ್ಣಾಮಲೈ ಸಮೀಪದ ವಂದವಾಸಿಯಲ್ಲಿ ವಿಗ್ರಹಕ್ಕೆ ಕಲ್ಲು ದೊರೆತಿದ್ದು 2009 ರಿಂದ ಕಲ್ಲನ್ನು ಹೊರತೆಗೆಯುವ ಕೆಲಸ ನಡೆದಿತ್ತು. ನಂತರ 108 ಆಡಿಯ ಏಕಶಿಲಾ ವಿಶ್ವರೂಪಿ ವಿಷ್ಣುವಿನ ವಿಗ್ರಹ ತಯಾರಾಗಿ ರಾಜ್ಯಕ್ಕೆ ಸಾಗಿಸುವ ನಡುವೆ ಕೆಲವರು ರಸ್ತೆಯಲ್ಲಿ ಬೃಹತ್ ಶಿಲೆ ಸಾಗಿಸದಂತೆ ಕೋರ್ಟ್ ಮೊರೆ ಹೋಗಿದ್ದರು. ಆದರೆ ತಮಿಳುನಾಡು ಸರ್ಕಾರದ ಸಹಾಯದಿಂದ ಆ ಎಲ್ಲ ಅಡೆತಡೆಗಳನ್ನು ದಾಟಿ ಇಂದು ರಾಜ್ಯದ ಗಡಿಗೆ ವಿಗ್ರಹ ಬಂದಿದೆ.

    ಈ ಬಗ್ಗೆ ಮಾತನಾಡಿರುವ ಶ್ರೀಕೋದಂಡರಾಮಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ಸದಾನಂದ, ವಿಗ್ರಹ ತರುವ ದಾರಿಯುದ್ದಕ್ಕೂ ಅನೇಕ ಅಡೆತಡೆಗಳು ಇದ್ದು ಅವೆಲ್ಲವನ್ನೂ ದಾಟಿ ಇಂದು ರಾಜ್ಯಕ್ಕೆ ವಿಗ್ರಹ ಬಂದಿರುವುದು ನಮಗೆ ಸಂತೋಷವಾಗಿದೆ. ಇನ್ನೂ ದಾರಿಯುದ್ದಕ್ಕೂ ಅನೇಕ ಸೇತುವೆಗಳಿದ್ದು ಅವುಗಳಿಗೆ ಪರ್ಯಾಯವಾಗಿ ರಸ್ತೆ ನಿರ್ಮಾಣ ಮಾಡಿ ಕಳೆದ 6 ತಿಂಗಳ ಸತತ ಪ್ರಯತ್ನದಿಂದ ವಿಗ್ರಹ ಇಂದು ರಾಜ್ಯದ ಗಡಿ ಮುಟ್ಟಿದೆ. ಇನ್ನು ವಿಗ್ರಹದ ಕೆತ್ತನೆ ಕೆಲಸ ಬಾಕಿಯಿದ್ದು ಕೇವಲ ಒಂದು ಮುಖ ಮಾತ್ರ ಇದೀಗ ಕೆತ್ತಲಾಗಿದೆ. ವಿಶ್ವರೂಪಿ ವಿಷ್ಣುವಿನ ದಶಾವತಾರ ಈ ಶಿಲೆಯಲ್ಲಿ ಮೂಡಲಿದ್ದು ಈಜಿಪುರ ಕೆಲವೇ ದಿನಗಳಲ್ಲಿ ಪ್ರವಾಸಿ ತಾಣವಾಗಲಿದೆ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಅನೇಕ ಅಡೆತಡೆಗಳ ನಡುವೆ ವಿಷ್ಣು ಶಿಲೆ ರಾಜ್ಯಕ್ಕೆ ಆಗಮಿಸಿದ್ದು ಅತ್ತಿಬೆಲೆಯಲ್ಲಿ ನೂರಾರು ಜನ ಭಕ್ತರು ಸೇರಿ ಪೂಜೆ ಸಲ್ಲಿಸಿ ಈಜಿಪುರಕ್ಕೆ ಕಳುಹಿಸಿಕೊಟ್ಟಿದ್ದಾರೆ. ವಿಶ್ವರೂಪಿ ವಿಷ್ಣುವಿನ ವಿಗ್ರಹವನ್ನು ರಾಜ್ಯಕ್ಕೆ ತರಲು ಸಹಕರಿಸಿದ ತಮಿಳುನಾಡು ಸರ್ಕಾರ ಅಲ್ಲಿನ ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಶ್ರೀಕೋದಂಡರಾಮಸ್ವಾಮಿ ಟ್ರಸ್ಟಿನ ಪದಾಧಿಕಾರಿಗಳು ಕೃತಜ್ಞತೆ ತಿಳಿಸಿದ್ದಾರೆ.

  • ಸ್ಥಳೀಯ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತಿದ್ದ ವಾರ್ಡನ್ ಹೆಚ್ಚು ಮದ್ಯ ಸೇವಿಸಿ ಸಾವು!

    ಸ್ಥಳೀಯ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತಿದ್ದ ವಾರ್ಡನ್ ಹೆಚ್ಚು ಮದ್ಯ ಸೇವಿಸಿ ಸಾವು!

    ಬೆಂಗಳೂರು: ಕೆಲವು ಸ್ಥಳೀಯ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತಿದ್ದ ಹಾಸ್ಟೆಲ್ ವಾರ್ಡನ್‍ರೊಬ್ಬರು ಹೆಚ್ಚು ಮದ್ಯಪಾನ ಮಾಡಿ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯ ಹೊರವಲಯ ಆನೇಕಲ್‍ನಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ಹಾಸ್ಟೆಲ್ ವಾರ್ಡನ್ ಆಗಿದ್ದ ದೇವೇಂದ್ರಪ್ಪ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್‍ನಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಹಿತಿ ತಿಳಿದಿದ್ದ ಕೆಲವು ಸ್ಥಳೀಯ ಪರ್ತಕರ್ತರು ದೇವೇಂದ್ರಪ್ಪಗೆ ಧಮ್ಕಿ ಹಾಕುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ.

    ನಕಲಿ ದಾಖಲೆಗಳನ್ನು ಸೃಷ್ಟಿಸಿ ಭ್ರಷ್ಟಾಚಾರ ನಡೆಸಿದ್ದಾರೆಂದು ಹಣಕ್ಕಾಗಿ ಮನೆಯ ಬಳಿ ಹೋಗಿ ದೇವೇಂದ್ರಪ್ಪಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಹಣ ನೀಡದಿದ್ದರೆ ಲೋಕಾಯುಕ್ತಗೆ ಪತ್ರ ಬರೆದು ಕೆಲಸದಿಂದ ವಜಾ ಮಾಡಿಸುತ್ತೇವೆಂದು ಧಮ್ಕಿ ಹಾಕುತ್ತಿದ್ದರು.

    ಹದಿನೈದು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ಆಗಿ ಆನೇಕಲ್ ತಾಲೂಕಿನಲ್ಲಿ ದೇವೇಂದ್ರಪ್ಪ ಕೆಲಸ ನಿರ್ವಹಿಸುತ್ತಿದ್ದರು. ಈ ಕಿರುಕುಳದ ಬಗ್ಗೆ ದೇವೇಂದ್ರಪ್ಪ ಸ್ನೇಹಿತರು ಹಾಗು ಪತ್ನಿಯ ಬಳಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಪ್ರತಿದಿನ ಪತ್ರಕರ್ತರು ನೀಡುತ್ತಿದ್ದ ಕಿರುಕುಳಕ್ಕೆ ನೊಂದಿದ್ದ ವಾರ್ಡನ್ ಹೆಚ್ಚು ಮದ್ಯ ಸೇವಿಸಿ ಕೊನೆ ಉಸಿರೆಳೆದಿದ್ದಾರೆ.

    ಸ್ಥಳೀಯ ಪತ್ರಕರ್ತರ ಕಿರುಕುಳದಿಂದ ನೊಂದು ಸಾವನ್ನಪ್ಪಿದ್ದಾರೆಂದು ಹಾಸ್ಟೆಲ್‍ನ ಹಳೆಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರಿಂದ ಆರೋಪ ಕೇಳಿಬರುತ್ತಿದೆ. ಹಾಗೆಯೇ ದೇವೇಂದ್ರಪ್ಪ ಅವರ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ ಕುಟುಂಬದವರು, ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಮೇಲಾಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

  • ಇಸ್ರೇಲ್‍ನಿಂದ ತಂದಿದ್ದ ಜೀಬ್ರಾ ಬನ್ನೇರುಘಟ್ಟದಲ್ಲಿ ಸಾವು

    ಇಸ್ರೇಲ್‍ನಿಂದ ತಂದಿದ್ದ ಜೀಬ್ರಾ ಬನ್ನೇರುಘಟ್ಟದಲ್ಲಿ ಸಾವು

    ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಗಂಡು ಜೀಬ್ರಾ ಏಕಾಏಕಿ ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಇಸ್ರೇಲ್ ನಿಂದ ಪ್ರಾಣಿಯ ವಿನಿಮಯ ಒಪ್ಪಂದದ ಅಡಿಯಲ್ಲಿ 4 ವರ್ಷಗಳ ಹಿಂದೆ ಎರಡು ಹೆಣ್ಣು, ಎರಡು ಗಂಡು ಜೀಬ್ರಾಗಳನ್ನು ತರಲಾಗಿತ್ತು. ಈ ತಂಡದಲ್ಲಿ ಇದ್ದ ಗಂಡು ಜೀಬ್ರಾ ಸಾವನ್ನಪ್ಪಿರುವುದಕ್ಕೆ ಪ್ರಾಣಿ ಪ್ರೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಇಸ್ರೇಲ್ ನಿಂದ ತಂದಿದ್ದ ಜೀಬ್ರಾಗಳಲ್ಲಿ ಕಳೆದ ವರ್ಷವಷ್ಟೇ ಗರ್ಭಿಣಿಯಾಗಿದ್ದ ಜೀಬ್ರಾವೊಂದು ಗಿಡ ನೆಡಲು ತೆಗೆಯಲಾಗಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿತ್ತು. ಆದಾದ ಒಂದು ವರ್ಷದ ಮತ್ತೊಂದು ಜೀಬ್ರಾ ಸಾವನ್ನಪ್ಪಿದೆ. ಉದ್ಯಾನವನದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಅಂದು ಜೀಬ್ರಾ ಮೃತಪಟ್ಟಿತ್ತು. ಈ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ಜೀಬ್ರಾ ಸಾವನ್ನಪ್ಪಿದೆ.

    ಜೀಬ್ರಾ ಸಾವಿನ ಮಾಹಿತಿಗಾಗಿ ಮರಣೋತ್ತರ ಪರೀಕ್ಷೆ ಯನ್ನು ಉದ್ಯಾನವನದ ವೈದ್ಯರ ತಂಡ ಕೈಗೊಂಡಿದ್ದು, ಇದೀಗ ಉದ್ಯಾನವನದಲ್ಲಿ ವಿದೇಶದಿಂದ ತರಲಾಗಿರುವ ನಾಲ್ಕು ಜೀಬ್ರಾಗಳಲ್ಲಿ ಕೇವಲ 2 ಜೀಬ್ರಾಗಳು ಮಾತ್ರ ಉಳಿದಿವೆ.

    ಜೀಬ್ರಾ ಬಂದ ಆರಂಭದಲ್ಲಿ ಇವುಗಳನ್ನು ಪ್ರತ್ಯೇಕವಾಗಿ ಇರಿಸಿ ನೋಡಲಾಗಿತ್ತು. ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಬಳಿಕವೇ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.

  • ಆಪರೇಷನ್ ‘ಹಸ್ತ’: ಜೆಡಿಎಸ್, ಬಿಜೆಪಿ ನಾಯಕರನ್ನು ಸೆಳೆದ ಡಿ.ಕೆ.ಸುರೇಶ್

    ಆಪರೇಷನ್ ‘ಹಸ್ತ’: ಜೆಡಿಎಸ್, ಬಿಜೆಪಿ ನಾಯಕರನ್ನು ಸೆಳೆದ ಡಿ.ಕೆ.ಸುರೇಶ್

    ಬೆಂಗಳೂರು: ಆನೇಕಲ್ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅವರು ಆಪರೇಷನ್ ಹಸ್ತ ಶುರು ಮಾಡಿದ್ದಾರೆ.

    ಜೆಡಿಎಸ್ ನಾಯಕ, ಆನೇಕಲ್ ಪುರಸಭಾ ಸದಸ್ಯ ಪದ್ಮನಾಭ್ ಹಾಗೂ ಬಿಜೆಪಿ ಆನೇಕಲ್ ಘಟಕದ ಉಪಾಧ್ಯಕ್ಷ ಶಿವರಾಂ ಅವರನ್ನು ಕಾಂಗ್ರೆಸ್ಸಿಗೆ ಸೇರ್ಪಡೆಗೊಳಿಸುವಲ್ಲಿ ಸಂಸದರು ಯಶಸ್ವಿಯಾಗಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದರು, ಬಾಯಿಚಪಲಕ್ಕೆ ಮಾತನಾಡುವುದೆಲ್ಲ ನಿಜವಾಗುವುದಿಲ್ಲ. 20 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪನರು ಹೇಳುತ್ತಾರೆ. ಆದರೆ ನಮ್ಮ ಬಳಿ ಬಿಜೆಪಿಯ 40 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿ ತಿರುಗೇಟು ನೀಡಿದರು.

    ಲೋಕಸಭಾ ಚುನಾವಣೆ ಫಲಿತಾಂಶ ಮೇ 23ರಂದು ಹೊರಬೀಳಲಿದೆ. ಫಲಿತಾಂಶದ ನಂತರ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಆಗಲಿದೆಯೇ ಹೊರತು ಮೈತ್ರಿ ಸರ್ಕಾರದಲ್ಲಿ ಆಗುವುದಿಲ್ಲ ಎಂದು ಹೇಳಿದರು.

  • ರೋಗಿಯನ್ನು ಹೊತ್ತೊಯ್ಯುತ್ತಿದ್ದ ಅಂಬುಲೆನ್ಸ್ ಬೆಂಕಿಗಾಹುತಿ!

    ರೋಗಿಯನ್ನು ಹೊತ್ತೊಯ್ಯುತ್ತಿದ್ದ ಅಂಬುಲೆನ್ಸ್ ಬೆಂಕಿಗಾಹುತಿ!

    ಬೆಂಗಳೂರು: ರೋಗಿಯನ್ನು ಹೊತ್ತೊಯ್ಯುತ್ತಿದ್ದ 108 ಅಂಬುಲೆನ್ಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅಂಬುಲೆನ್ಸ್ ಸುಟ್ಟು ಹೋದ ಘಟನೆ ಇಂದು ನಡೆದಿದೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿಗೆ ಹೊಂದಿಕೊಂಡಿರೋ ತಮಿಳುನಾಡಿನಲ್ಲಿ ಈ ನಡೆದಿದೆ. ಘಟನೆಯಿಂದ ಅಂಬುಲೆನ್ಸ್ ನಲ್ಲಿದ್ದ ರೋಗಿ ಸಂಬಂಧಿ ಹಾಗೂ ಸಿಬ್ಬಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಹೋಗನೇಕಲ್ ರಸ್ತೆಯ ಅಡುವೈ ಕುರುಚಿ ಗ್ರಾಮದಲ್ಲಿ ಬೆಳಗ್ಗೆ ರೋಗಿಯನ್ನು ಹೊತ್ತೊಯ್ಯುತ್ತಿದ್ದ 108 ಅಂಬುಲೆನ್ಸ್ ನಲ್ಲಿ ರಸ್ತೆ ಮಧ್ಯೆಯೇ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಅಂಬುಲೆನ್ಸ್ ನಲ್ಲಿದ್ದ ರೋಗಿ ಹಾಗೂ ಆತನ ಸಂಬಂಧಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಆತನನ್ನು ಬೇರೊಂದು ವಾಹನದಲ್ಲಿ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

    ಅಂಬುಲೆನ್ಸ್ ಚಾಲಕ ಹಾಗೂ ವೈದ್ಯಕೀಯ ಸಿಬ್ಬಂದಿ ಅವಘಡದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಿದ್ದು ಅಷ್ಟರೊಳಗೆ ಅಂಬುಲೆನ್ಸ್ ಸಂಪೂರ್ಣ ಸುಟ್ಟು ಹೋಗಿತ್ತು.

  • ಧರ್ಮ ಒಡೆಯಲು ಹೋಗಿಲ್ಲವೆಂದು ಹೇಳಲು ಧೈರ್ಯ ಇದೆಯಾ: ಪ್ರತಾಪ್ ಸಿಂಹ ಪ್ರಶ್ನೆ

    ಧರ್ಮ ಒಡೆಯಲು ಹೋಗಿಲ್ಲವೆಂದು ಹೇಳಲು ಧೈರ್ಯ ಇದೆಯಾ: ಪ್ರತಾಪ್ ಸಿಂಹ ಪ್ರಶ್ನೆ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಸ್ವಹಿತಾಸಕ್ತಿಗಾಗಿ ವೀರಶೈವ ಲಿಂಗಾಯತ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ಅವರೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮನವಿ ಸಲ್ಲಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದನ್ನು ಅವರು ಇಲ್ಲ ಎಂದು ಹೇಳಲು ಧೈರ್ಯ ಇದೆಯಾ ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

    ಧರ್ಮ ಒಡೆಯುವ ಕೆಲಸ ಮಾಡಲು ಹೋಗಿದ್ದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಆದರೆ ಅವರು ಇಂದು ನಾವು ಏನು ಮಾಡಿಲ್ಲ. ಈ ಪತ್ರ ನಕಲಿ ಎನ್ನುತ್ತಿದ್ದಾರೆ ವಿನಃ ಪತ್ರ ನಕಲಿ ಹೆಡರ್ ಬಗ್ಗೆ ತನಿಖೆ ನಡೆಸದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂಬ ಕಾರಣಕ್ಕೆ ಪತ್ರಕರ್ತರನ್ನು ಬಂಧನ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

    ಧರ್ಮವನ್ನು ಒಡೆಯೊವುದು ತಪ್ಪಲ್ಲ, ಆದರೆ ಯಾವುದೋ ಲೆಟರ್ ಹೆಡ್ ತಪ್ಪೆಂದು ಪತ್ರಕರ್ತರನ್ನ ಜೈಲಿಗೆ ಕಳಿಸುವುದು ಎಷ್ಟು ಸರಿ? ಲೆಟರ್ ಹೆಡ್ ಬಗ್ಗೆ ತನಿಖೆ ನಡೆಸಬೇಕೆ ವಿನಾ: ರಾಜಕಾರಣ ನಡೆಸೋದು ಸರಿಯಲ್ಲ ಎಂದರು. ಇದೇ ವೇಳೆ ಜಿ.ಟಿ ದೇವೇಗೌಡರ ಹೇಳಿಕೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನಾಯಕರು ಕೂಡ ಮೈತ್ರಿ ಧರ್ಮ ಪಾಲನೆ ಮಾಡಿಲ್ಲ. ಮೈತ್ರಿ ಧರ್ಮ ಎಂದು ಹೇಳಿ ಜೆಡಿಎಸ್ ಪಕ್ಷಕ್ಕೆ ತುಮಕೂರು, ಹಾಸನ, ಮಂಡ್ಯ ಕ್ಷೇತ್ರದಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದರು.

    ಸದ್ಯ ಪತ್ರಕರ್ತ ಹೇಮಂತ್ ಅವರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಲು ಇಲ್ಲಿಗೆ ಆಗಮಿಸಿದ್ದು, ಕಾನೂನು ಹೋರಾಟ ಮಾಡಲಾಗುತ್ತದೆ ಎಂದರು.

    ಸ್ಪಷ್ಟನೆ: ಸಚಿವ ಡಿ.ಕೆ ಶಿವಕುಮಾರ್ ಕಾಲಿಗೆ ನಮಸ್ಕಾರಿಸಿದ ಬಗ್ಗೆ ಸ್ಪಷ್ಟನೆ ನೀಡಿ, ಹಿರಿಯರು ಯಾರೇ ಸಿಕ್ಕರೂ ಆರ್ಶೀವಾದ ಪಡೆದುಕೊಳ್ಳುತ್ತೇನೆ. ಇದು ನಮ್ಮ ಸಂಪ್ರದಾಯ. ಕಾಂಗ್ರೆಸ್ ಪಕ್ಷದ ನಾಯಕರಾದ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಸೇರಿದಂತೆ ಹಲವು ನಾಯಕರ ಬಳಿ ಆಶೀರ್ವಾದ ಪಡೆದಿದ್ದೇನೆ. ಆದರೆ ಇದಕ್ಕೆ ರಾಜಕೀಯ ಬಣ್ಣದ ಲೇಪನ ಮಾಡಲಾಗಿದೆ ಎಂದರು.

  • ರಾತ್ರಿ ಸುರಿದ ಮಳೆಗೆ ಮನೆಗೆ ಎಂಟ್ರಿ ಕೊಟ್ಟ ವಿಶೇಷ ಅತಿಥಿ!

    ರಾತ್ರಿ ಸುರಿದ ಮಳೆಗೆ ಮನೆಗೆ ಎಂಟ್ರಿ ಕೊಟ್ಟ ವಿಶೇಷ ಅತಿಥಿ!

    ಬೆಂಗಳೂರು: ಶನಿವಾರ ರಾತ್ರಿ ಸುರಿದ ಮಳೆಗೆ ಆಶ್ರಯ ಅರಸಿ ವಿಶೇಷ ಅತಿಥಿಯೊಂದು ಮನೆಯೊಳಗೆ ಸೇರಿಕೊಂಡ ಘಟನೆ ಆನೇಕಲ್ ತಾಲೂಕಿನ ಗುಡ್ನಹಳ್ಳಿಯಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ಗುಡ್ನಹಳ್ಳಿಯಲ್ಲಿ ಶನಿವಾರ ರಾತ್ರಿ ಮಳೆರಾಯನ ಆರ್ಭಟ ಜೋರಾಗಿಯೇ ಇತ್ತು. ಈ ವೇಳೆ ಗುಡ್ನಹಳ್ಳಿ ನಿವಾಸಿ ಮುನಿಯಪ್ಪ ಅವರ ಮನೆಯಲ್ಲಿ ಹಾವೊಂದು ಪ್ರತ್ಯಕ್ಷವಾಗಿದೆ. ರಾತ್ರಿ ಸುಮಾರು 7ರಿಂದ 9 ಗಂಟೆಯವೆರೆಗೂ ಮಳೆ ಸುರಿದಿದ್ದು, ಮಳೆಯಿಂದ ಆಶ್ರಯ ಪಡೆಯಲು ಹಾವು ಮನೆಗೆ ನುಗ್ಗಿದೆ.

    ಮನೆಗೆ ನುಗ್ಗಿದ್ದ ಹಾವನ್ನು ಕಂಡ ಮನೆ ಮಾಲೀಕರು ಭಯಗೊಂಡಿದ್ದು, ತಕ್ಷಣ ಉರಗ ತಜ್ಞ ಮಾಯಸಂದ್ರ ಸೂರಿ ಅವರಿಗೆ ಮಾಹಿತಿ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಉರಗ ತಜ್ಞರು ಹಾವನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬಂದಿದ್ದಾರೆ.

  • ಲಿಂಗೈಕ್ಯ ಶ್ರೀಗಳ, ಹುತಾತ್ಮ ಯೋಧರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಹನುಮಂತ – ಫೋಟೋಗೆ ಮುಗಿಬಿದ್ದ ವಿದ್ಯಾರ್ಥಿಗಳು

    ಲಿಂಗೈಕ್ಯ ಶ್ರೀಗಳ, ಹುತಾತ್ಮ ಯೋಧರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಹನುಮಂತ – ಫೋಟೋಗೆ ಮುಗಿಬಿದ್ದ ವಿದ್ಯಾರ್ಥಿಗಳು

    ಬೆಂಗಳೂರು: ತನ್ನ ಕಂಠ ಸಿರಿಯಿಂದ ಇಡೀ ಕರ್ನಾಟಕದ ಮನೆ ಮಾತಾಗಿರುವ ಸರಿಗಮಪ ಖ್ಯಾತಿಯ ಹನುಮಂತಣ್ಣ ಭಾನುವಾರ ಖಾಸಗಿ ಶಾಲೆಯೊಂದು ಆಯೋಜನೆ ಮಾಡಿದ್ದ ಲಿಂಗೈಕ್ಯ ಶಿವಕುಮಾರ ಸ್ವಾಮಿಗಳ ಹಾಗೂ ಹುತಾತ್ಮ ವೀರ ಯೋಧರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಖಾಸಗಿ ಶಾಲೆಯ ವತಿಯಿಂದ ಶಿವಕುಮಾರ ಸ್ವಾಮಿಗಳ ಹಾಗೂ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸರಿಗಮಪ ಖ್ಯಾತಿಯ ಹನುಮಂತ ಆಗಮಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದು ಕೊಟ್ಟಿತ್ತು.

    ಶಾಲಾ ಮಕ್ಕಳ ಹಾಗೂ ಶಿಕ್ಷಕರ ಜೊತೆ ಯೋಧರ ಮತ್ತು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಾಡುಗಳನ್ನು ಹಾಡುವ ಮೂಲಕ ಹನುಮಂತಣ್ಣ ನೆರೆದಿದ್ದ ಶಾಲಾ ಮಕ್ಕಳು ಹಾಗೂ ಪೋಷಕರಿಗೆ ಮನರಂಜನೆ ನೀಡಿದರು. ನಂತರ ಹನುಮಂತಣ್ಣನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಪೋಷಕರು ಮೂಗಿ ಬಿದ್ದಿದ್ದು, ಆಗ ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಕೊನೆಗೆ ಹನುಮಂತಣ್ಣ ಜನಗಳ ನುಕುನುಗ್ಗಲು ಮಧ್ಯೆ ಕಾರನ್ನು ಹತ್ತಿ ಹೊರಟು ಹೋದರು.