Tag: anekal

  • ಕೆಲಸಕ್ಕಾಗಿ ಅಲೆದು, ಅಲೆದು ಸಾಕಾಗಿ ನೇಣಿಗೆ ಯುವತಿ ಶರಣು

    ಕೆಲಸಕ್ಕಾಗಿ ಅಲೆದು, ಅಲೆದು ಸಾಕಾಗಿ ನೇಣಿಗೆ ಯುವತಿ ಶರಣು

    ಬೆಂಗಳೂರು: ಕೆಲಸ ಸಿಗದೆ ಇರುವುದರಿಂದ ಜೀವನ ನಡೆಸಲು ಸಾಧ್ಯವಾಗದೆ ಯುವತಿಯೊಬ್ಬಳು ನೇಣಿಗೆ ಶರಣಾದ ಮನಕಲುಕುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ಅತ್ತಿಬೆಲೆಯ ನಾಗಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ಮಂಜುಳಾ ಮೃತ ಯುವತಿ. ಮಂಜುಳಾ ತಾಯಿ, ತಂಗಿ ಹಾಗೂ ಬುದ್ಧಿಮಾಂದ್ಯ ತಮ್ಮನ ಜೊತೆಗೆ ವಾಸಿಸುತ್ತಿದ್ದರು. ಮಂಜುಳಾ ಬುದ್ಧಿಮಾಂದ್ಯ ತಮ್ಮನ ಎದುರಲ್ಲಿಯೇ ಇಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

    ಮಂಜುಳಾ ಮನೆಯ ಹಿರಿಯ ಮಗಳಾಗಿದ್ದರಿಂದ ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ಖಾಸಗಿ ಗಾರ್ಮೆಂಟ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾ, ತಮಗೆ ಬರುತ್ತಿದ್ದ ವೇತನದಲ್ಲಿ ಕುಟುಂಬವನ್ನು ನಿರ್ವಹಿಸುತ್ತಿದ್ದರು. ಆದರೆ ಕಳೆದ ವಾರ ಕಂಪನಿಯವರು ಮಂಜುಳಾ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದಾಗಿ ಮಂಜುಳಾ ಸಂಕಷ್ಟಕ್ಕೆ ಸಿಲುಕಿದ್ದರು.

    ಕೆಲಸ ಅರಸಿ ಮಂಜುಳಾ ಕಳೆದ ಕೆಲವು ದಿನಗಳಿಂದ ಅನೇಕ ಕಂಪನಿಗಳಿಗೆ ಹೋಗಿದ್ದರು. ಆದರೆ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಕೆಲಸವಿಲ್ಲದೆ ಜೀವನ ನಡೆಸಲು ಸಾಧ್ಯವಾಗದ ಅಸಹಾಯಕ ಸ್ಥಿತಿಗೆ ಮಂಜುಳಾ ಸಿಲುಕಿದ್ದರು. ಇದರಿಂದ ಮನನೊಂದು ಮಂಜುಳಾ, ತಾಯಿ ಮನೆಗೆ ಬೇಕಾದ ದಿನಸಿ ತರಲು ಅಂಗಡಿಗೆ ಹೋಗಿದ್ದಾಗ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ನೇಣು ಬಿಗಿದ ಸ್ಥಿತಿಯಲ್ಲಿದ್ದ ಮಗಳ ಮೃತದೇಹ ನೋಡಿದ ಮಂಜುಳಾ ಅವರ ತಾಯಿ ಗಾಬರಿಕೊಂಡಿದ್ದರು. ಅವರು ಅಳುತ್ತಿದ್ದ ಧ್ವನಿ ಕೇಳಿ ಮನೆಗೆ ಬಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅತ್ತಿಬೆಲೆ ಪೊಲೀಸರು ಮಂಜುಳಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಅತ್ತಿಬೆಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗಳೂರಿನ ಚಂದಾಪುರದಲ್ಲಿ ಹೈವೇ ಜಲಾವೃತ – ಅರ್ಧ ಮುಳುಗಿದ ವಾಹನಗಳು

    ಬೆಂಗಳೂರಿನ ಚಂದಾಪುರದಲ್ಲಿ ಹೈವೇ ಜಲಾವೃತ – ಅರ್ಧ ಮುಳುಗಿದ ವಾಹನಗಳು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿಯಿಡಿ ಭಾರೀ ಮಳೆಯಾಗಿದ್ದು, ಬೆಂಗಳೂರು ತಮಿಳುನಾಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 7 ಸಂಪೂರ್ಣ ಜಲಾವೃತವಾಗಿದೆ.

    ರಾತ್ರಿಯಿಡೀ ಎಡಬಿಡದೆ ಸುರಿದ ಭಾರಿ ಮಳೆಗೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಹೆದ್ದಾರಿ ಜಲಾವೃತವಾಗಿದ್ದು, ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.

    ಹೆದ್ದಾರಿಯಲ್ಲಿರುವ ರೈಲ್ವೇ ಸೇತುವೆ ಬಳಿ ಅಪಾರ ಪ್ರಮಾಣದ ನೀರು ಸಂಗ್ರಹವಾದ ಹಿನ್ನೆಲೆ ಅರ್ಧ ವಾಹನಗಳು ನೀರಿನಲ್ಲಿ ಮುಳುಗುತ್ತಿವೆ. ಈಗಾಗಲೇ ಮೂರು ವಾಹನಗಳು ನೀರಿನಲ್ಲಿ ಸಿಲುಕಿದ ಕಾರಣ ವಾಹನ ಚಲಾಯಿಸಲು ಚಾಲಕರು ಭಯಪಟ್ಟು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.

  • ಓಡಿಹೋಗಿ ತಂಗಿಯನ್ನು ಮದುವೆಯಾದವನ ಬೆರಳನ್ನೇ ಕತ್ತರಿಸಿದ ಅಣ್ಣ

    ಓಡಿಹೋಗಿ ತಂಗಿಯನ್ನು ಮದುವೆಯಾದವನ ಬೆರಳನ್ನೇ ಕತ್ತರಿಸಿದ ಅಣ್ಣ

    ಬೆಂಗಳೂರು: ತಂಗಿಯನ್ನು ಪ್ರೇಮ ವಿವಾಹವಾಗಿದ್ದ ಬಾವನ ಮೇಲೆ ಅಣ್ಣ ಕೊಲೆಗೆ ಯತ್ನಿಸಿ, ಕಿರು ಬೆರಳು ಕತ್ತರಿಸಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ನಡೆದಿದೆ.

    ಪೀಣ್ಯ ಇಂಡಸ್ಟ್ರಿಯಲ್ ಏರಿಯಾದ ನಿವಾಸಿ ಹನುಮಂತನ ಮೇಲೆ ಹಲ್ಲೆ ಮಾಡಲಾಗಿದೆ. ಹನುಮಂತನ ಅತ್ತೆ ಮಗ ಸಂತೋಷ ಹಲ್ಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಆಗಸ್ಟ್ 12ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತೋಷ್ ಮನೆಯಲ್ಲೇ ವಾಸವಾಗಿದ್ದ ಹನುಮಂತ ಆರೋಪಿಯ ತಂಗಿಯನ್ನು ಪ್ರೀತಿಸಿದ್ದನು. ಇದಕ್ಕೆ ಸಂತೋಷ್ ತಂಗಿ ಕೂಡ ಒಪ್ಪಿದ್ದಳು. ಆದರೆ ಮನೆಯಲ್ಲಿ ತಮ್ಮ ಪ್ರೀತಿ ಒಪ್ಪದ ಕಾರಣಕ್ಕೆ ಇಬ್ಬರೂ ಕಳೆದ ಒಂದು ವರ್ಷದ ಹಿಂದೆ ಓಡಿಹೋಗಿದ್ದರು. ಆ ನಂತರ ಮದುವೆಯನ್ನು ಕೂಡ ಮಾಡಿಕೊಂಡಿದ್ದರು. ಇತ್ತ ಮನೆಯ ಮರ್ಯಾದೆ ಕಳೆದಿದ್ದಾರೆ ಎಂದು ಸಂತೋಷ್‍ಗೆ ಇಬ್ಬರ ಮೇಲೂ ಕೋಪವಿತ್ತು. ಆದರೆ ಓಡಿಹೋಗಿದ್ದವರು ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ.

    ಮದುವೆ ಬಳಿಕ ಆಗಸ್ಟ್ 12ರಂದು ಹನುಮಂತ ಸಂತೋಷನ ಕಣ್ಣಿಗೆ ಬಿದ್ದಿದ್ದನು. ಮೊದಲೇ ಕೋಪದಲ್ಲಿದ್ದ ಸಂತೋಷ್ ಸ್ನೇಹಿತನ ಜೊತೆ ಸೇರಿ ಹನುಮಂತನನ್ನು ಕೊಲೆ ಮಾಡಲು ಯತ್ನಿಸಿದ್ದನು. ಹನುಮಂತನನ್ನು ಚಾಕುವಿನಿಂದ ಸಂತೋಷ್ ಎದೆಗೆ ಇರಿಯಲು ಹೋದಾಗ, ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಬರದಲ್ಲಿ ಹನುಮಂತನ ಎಡಗೈ ಕಿರುಬೆರಳು ಕಟ್ ಆಗಿತ್ತು. ಆಗ ಇಬ್ಬರು ಆರೋಪಿಗಳು ಪರಾರಿಯಾಗಿದ್ದರು.

    ಈ ಬಗ್ಗೆ ಹನುಮಂತ ಪೊಲೀಸರಿಗೆ ದೂರು ನೀಡಿದ್ದು, ಪರಪ್ಪನ ಅಗ್ರಹಾರ ಪೊಲೀಸರು ಆರೋಪಿಗಳಾದ ಸಂತೋಷ್ ಮತ್ತು ಪ್ರೇಮ್‍ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಓಮ್ನಿ ಮೇಲೆ ಉರುಳಿದ ಕಂಟೈನರ್- ಮಹಿಳೆಯರಿಬ್ಬರ ದುರ್ಮರಣ

    ಓಮ್ನಿ ಮೇಲೆ ಉರುಳಿದ ಕಂಟೈನರ್- ಮಹಿಳೆಯರಿಬ್ಬರ ದುರ್ಮರಣ

    ಬೆಂಗಳೂರು: ಓಮ್ನಿ ಮೇಲೆ ಕಂಟೈನರ್ ಲಾರಿ ಉರುಳಿದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಸೂರು ಸಮೀಪದ ಕಾಮನದೊಡ್ಡಿ ಬಳಿ ನಡೆದಿದೆ.

    ಬೆಂಗಳೂರಿನ ಅರಕೆರೆ ನಿವಾಸಿಗಳಾದ ಅಂಬಿಕಾ (38) ಹೇಮಾ (40) ಮೃತ ದುರ್ದೈವಿಗಳು. ಈ ಅವಘಡದಲ್ಲಿ ಇಬ್ಬರು ಮಕ್ಕಳು, ಓರ್ವ ಪುರುಷ ಹಾಗೂ ಇಬ್ಬರು ಮಹಿಳೆಯರಿಗೆ ಗಂಭೀರವಾಗಿ ಗಾಯವಾಗಿದ್ದು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಅರಕೆರೆಯ ನಾಗಭೂಷಣ್ ಎಂಬವರು ಕುಟುಂಬ ಸಮೇತ ತಿರುವಣ್ಣಮಲೈಗೆ ತೆರಳಿ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಓಮ್ನಿ ಮೇಲೆ ಕಂಟೈನರ್ ಲಾರಿ ಬಿದ್ದಿದೆ. ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ನಾಗಭೂಷಣ್ ಬಿಎಂಟಿಸಿ ಸಂಸ್ಥೆಯಲ್ಲಿ ಸೂಪರ್ ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಈ ಸಂಬಂಧ ಸ್ಥಳಕ್ಕೆ ಸುಳಗಿರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ

  • ಪತಿಯ ಮೇಲಿನ ಕೋಪಕ್ಕೆ ಮಕ್ಕಳನ್ನು ಸಂಪ್‍ಗೆ ತಳ್ಳಿ ಕೊಲೆಗೈದ ತಾಯಿ

    ಪತಿಯ ಮೇಲಿನ ಕೋಪಕ್ಕೆ ಮಕ್ಕಳನ್ನು ಸಂಪ್‍ಗೆ ತಳ್ಳಿ ಕೊಲೆಗೈದ ತಾಯಿ

    ಬೆಂಗಳೂರು: ತಾಯಿಯೇ ತನ್ನ ಇಬ್ಬರು ಮಕ್ಕಳನ್ನು ಸಂಪ್‍ಗೆ ತಳ್ಳಿ ಕೊಲೆ ಮಾಡಿದ ಮನಕಲುಕುವ ಘಟನೆ ಆನೇಕಲ್ ತಾಲೂಕಿನ ದೊಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.

    ಚಂದನ್(7) ಹಾಗೂ ಯುವರಾಣಿ(5) ತಾಯಿಯ ಕೃತ್ಯಕ್ಕೆ ಬಲಿಯಾದ ಮಕ್ಕಳು. ಮುನಿರತ್ನಮ್ಮ ಎಸಗಿದ ತಾಯಿ. ಮುನಿರಾಜು ಹಾಗೂ ಮುನಿರತ್ನಮ್ಮ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ನಿತ್ಯವೂ ಸಣ್ಣ ಪುಟ್ಟ ವಿಚಾರಕ್ಕೆ ಇಬ್ಬರು ಜಗಳವಾಡುತ್ತಿದ್ದರು.

    ಕೌಟುಂಬಿಕ ಕಲಹದ ಹಿನ್ನೆಲೆ ಮುನಿರತ್ನಮ್ಮ ಗುರುವಾರ ಯಾರು ಮನೆಯಲ್ಲಿ ಇಲ್ಲದಿದ್ದಾಗ ಮಕ್ಕಳನ್ನು ಮನೆಯ ಮುಂದಿನ ಸಂಪ್‍ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾನು ಕೂಡ ಸಂಪ್‍ನಲ್ಲಿ ಇಳಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಸಂಪ್‍ನಲ್ಲಿ ನೀರು ಕಡಿಮೆ ಇದ್ದಿದ್ದರಿಂದ ಮೇಲೆ ಬಂದು ಮನೆಯಲ್ಲಿ ನೇಣು ಹಾಕಿಕೊಳ್ಳಲು ಮುಂದಾಗಿದ್ದಳು. ಇದನ್ನು ನೋಡಿದ ಸ್ಥಳೀಯರು ಮುನಿರತ್ನಮ್ಮಳನ್ನು ರಕ್ಷಣೆ ಮಾಡಿದ್ದಾರೆ.

    ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸರ್ಜಾಪುರ ಪೋಲಿಸರು, ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. ಕೌಟುಂಬಿಕ ಕಲಹದಿಂದ ಮನನೊಂದು, ಮಕ್ಕಳನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಗಿ ಮುನಿರತ್ನಮ್ಮ ಪೊಲೀಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಳೆ.

  • ಬ್ಯಾಗ್ ಕದ್ದವನಿಗೆ ಹಿಗ್ಗಾಮುಗ್ಗಾ ಥಳಿಸಿದ ಲೇಡಿ ಕಂಡಕ್ಟರ್

    ಬ್ಯಾಗ್ ಕದ್ದವನಿಗೆ ಹಿಗ್ಗಾಮುಗ್ಗಾ ಥಳಿಸಿದ ಲೇಡಿ ಕಂಡಕ್ಟರ್

    ಬೆಂಗಳೂರು: ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನು ಕೆ.ಎಸ್.ಆರ್.ಟಿ.ಸಿ ಬಸ್ಸಿನ ನಿರ್ವಾಹಕಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಇಂದು ಸಂಜೆ ಆನೇಕಲ್ ಬಸ್ ನಿಲ್ದಾಣದಿಂದ ಬೆಂಗಳೂರು ಕಡೆಗೆ ತೆರಳಲು ಸಿದ್ಧವಾಗಿದ್ದ ಕೆ.ಎಸ್.ಆರ್.ಟಿ.ಸಿ ಎಕ್ಸ್ ಪ್ರೆಸ್ ಬಸ್‍ನ ನಿರ್ವಾಹಕಿ ಬಸ್ ನಿಲ್ದಾಣದ ಕಚೇರಿಗೆ ಎಂಟ್ರಿ ಮಾಡಿಸಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಬಸ್‍ನಲ್ಲಿ ಇಟ್ಟಿದ್ದ ಬ್ಯಾಗನ್ನು ಗಮನಿಸಿದ ಖದೀಮನೊಬ್ಬ ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದಾನೆ.

    ಇದನ್ನು ಗಮಿನಿಸಿದ ಲೇಡಿ ಕಂಡಕ್ಟರ್ ಅವನನ್ನು ಹಿಂಬಾಲಿಸಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಕಪಾಳಮೋಕ್ಷ ಮಾಡಿದ್ದಾರೆ. ಬ್ಯಾಗ್‍ನಲ್ಲಿ ಮೊಬೈಲ್ ಫೋನ್ ಸೇರಿದಂತೆ ಬೆಲೆ ಬಾಳುವ ವಸ್ತುಗಳಿದ್ದು, ಕಳ್ಳ ಸಂಜೆ ಶಾಲಾ ಕಾಲೇಜು ಹಾಗೂ ಕೆಲಸ ಬಿಟ್ಟ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಹೆಚ್ಚು ಜನರಿರುವುದನ್ನು ಗಮನಿಸಿ ಬ್ಯಾಗ್ ಕದ್ದು ಎಸ್ಕೇಪ್ ಆಗಲು ಮುಂದಾಗಿದ್ದಾನೆ.

    ಈ ಘಟನೆ ಆನೇಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಹೊತ್ತಿ ಉರಿಯಿತು 10 ಮಂದಿ ಪ್ರಯಾಣಿಕರಿದ್ದ ಕಾರು

    ಹೊತ್ತಿ ಉರಿಯಿತು 10 ಮಂದಿ ಪ್ರಯಾಣಿಕರಿದ್ದ ಕಾರು

    ಬೆಂಗಳೂರು: 10 ಮಂದಿ ಪ್ರಯಾಣಿಕರು ಚಲಿಸುತ್ತಿದ್ದ ಕಾರೊಂದು ಏಕಾಏಕಿ ಬೆಂಕಿ ಹೊತ್ತಿಕೊಂಡು, ಸುಟ್ಟು ಭಸ್ಮವಾದ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಮೇಲ್ಸೇತುವೆ ಮೇಲೆ ನಡೆದಿದೆ.

    ಬೆಂಗಳೂರಿನ ಜೆಪಿ ನಗರ ನಿವಾಸಿ ಸೈಯದ್ ಅವರಿಗೆ ಸೇರಿದ ಸ್ಕಾರ್ಪಿಯೋ ಕಾರು ಆಕಸ್ಮಿಕ ಬೆಂಕಿ ಅನಾಹುತಕ್ಕೆ ತುತ್ತಾಗಿದೆ. ಸೈಯದ್ ಅವರ ಕುಟುಂಬದ ಒಟ್ಟು 10 ಮಂದಿ ಕಾರಿನಲ್ಲಿ ತಮಿಳುನಾಡಿನ ಹೊಸೂರಿನತ್ತ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ್ದು, ಕ್ಷಣಾರ್ಧದಲ್ಲಿ 10 ಜನರು ಕಾರಿನಿಂದ ಇಳಿದು ಅಪಾಯದಿಂದ ಪಾರಾಗಿದ್ದಾರೆ.

    ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವುದರೊಳಗೆ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎನ್ನುವ ಬಗ್ಗೆ ಮಾಹಿತಿ ದೊರಕಿಲ್ಲ. ಆದರೆ ಶಾರ್ಟ್  ಸರ್ಕ್ಯೂಟ್ ನಿಂದ ವಾಹನಕ್ಕೆ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ.

    ಸದ್ಯ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಟೈರ್ ಸ್ಫೋಟಗೊಂಡು ಪಲ್ಟಿಯಾಗಿ ಕೆರೆಯಲ್ಲಿ ಬಿದ್ದ ಕಾರು- ಮಹಿಳೆ ಸಾವು

    ಟೈರ್ ಸ್ಫೋಟಗೊಂಡು ಪಲ್ಟಿಯಾಗಿ ಕೆರೆಯಲ್ಲಿ ಬಿದ್ದ ಕಾರು- ಮಹಿಳೆ ಸಾವು

    ಬೆಂಗಳೂರು: ಟೈರ್ ಸ್ಫೋಟಗೊಂಡು ಕಾರೊಂದು ಪಲ್ಟಿಯಾಗಿ ಕೆರೆಗೆ ಬಿದ್ದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಬಳಿ ನಡೆದಿದೆ.

    ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಮೃತ ಮಹಿಳೆಯನ್ನು ಮಮತಾ (35) ಎಂದು ಗುರುತಿಸಲಾಗಿದೆ. ಪತಿ ಆನಂದ್ ಗಂಭೀರ ಗಾಯಗೊಂಡಿದ್ದಾರೆ. ಹುಲಿಮಂಗಲದಿಂದ ಜಿಗಣಿ ಕಡೆಗೆ ದಂಪತಿ ಬರುತ್ತಿದ್ದರು. ಈ ವೇಳೆ ಕಾರಿನ ಮುಂಭಾಗದ ಟೈರ್ ಸ್ಫೋಟಗೊಂಡ ಪರಿಣಾಮ ಅಪಘಾತ ಸಂಭವಿಸಿದೆ.

    ಟೈರ್ ಸ್ಫೋಟಗೊಂಡು ಕಾರು ನಿಯಂತ್ರಣ ತಪ್ಪಿ ಜಿಗಣೆ ಕೆರೆಯಲ್ಲಿ ಪಲ್ಟಿಯಾಗಿ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾತನಾಡ್ತಿರುವಾಗ್ಲೇ ಮೊಬೈಲ್ ಸ್ಫೋಟ- ಯುವಕ ಗಂಭೀರ

    ಮಾತನಾಡ್ತಿರುವಾಗ್ಲೇ ಮೊಬೈಲ್ ಸ್ಫೋಟ- ಯುವಕ ಗಂಭೀರ

    ಬೆಂಗಳೂರು: ಮಾತನಾಡುತ್ತಿರುವಾಗಲೇ ಮೊಬೈಲ್ ಸ್ಫೋಟಗೊಂಡು ಯುವಕನ ಕಿವಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನಲ್ಲಿ ನಡೆದಿದೆ.

    ಆನೇಕಲ್ ಗಡಿಗೆ ಹೊಂದಿಕೊಂಡಿರುವ ಕುರುಬರಪಲ್ಲಿ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಆರ್ಮುಗ ಗಾಯಗೊಂಡ ಯುವಕ. ಈತ ಸಂಬಂಧಿಕರ ಮನೆಗೆ ತೆರಳುವಾಗ ವಿಳಾಸ ತಿಳಿಯಲು ಕರೆ ಮಾಡಿದ್ದಾನೆ. ಕರೆ ಮಾಡಿ ಮಾತನಾಡುತ್ತಿರುವಾಗಲೇ ಇದ್ದಕ್ಕಿದ್ದಂತೆ ಮೊಬೈಲ್ ಸ್ಫೋಟಗೊಂಡಿದೆ.

    ಸ್ಫೋಟದ ತೀವ್ರತೆಗೆ ಆರ್ಮುಗನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಫೋಟಗೊಂಡ ಮೊಬೈಲ್ ವಿವೋ ಕಂಪನಿಯದ್ದು ಎಂದು ತಿಳಿದು ಬಂದಿದೆ.

  • ಅಪಘಾತದಲ್ಲಿ ಅಣ್ಣ, ತಂಗಿ ಸಾವು – ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಗ್ರಾಮಸ್ಥರು

    ಅಪಘಾತದಲ್ಲಿ ಅಣ್ಣ, ತಂಗಿ ಸಾವು – ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಗ್ರಾಮಸ್ಥರು

    ಆನೇಕಲ್: ಇಂದು ಮುಂಜಾನೆ ಕೆಲಸಕ್ಕೆಂದು ಬೈಕಿನಲ್ಲಿ ಹೊರಟಿದ್ದ ವೇಳೆ ಅಪಘಾತ ಸಂಭವಿಸಿ ಅಣ್ಣ, ತಂಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರದ ನೆರಿಗಾ ಗ್ರಾಮದಲ್ಲಿ ನಡೆದಿದೆ.

    ರತ್ನಮ್ಮ ಮತ್ತು ಗಿರೀಶ್ ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿಗಳು. ಅತಿ ವೇಗವಾಗಿ ಬಂದ ನೀರಿನ ಟ್ಯಾಂಕರ್ ಬೈಕಿಗೆ ಡಿಕ್ಕಿ ಹೊಡೆದಿದ್ದು, ಅಪಘಾತವಾದ ರಭಸಕ್ಕೆ ಬೈಕಿನಲ್ಲಿ ತೆರಳುತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.

    ತಮಿಳುನಾಡಿನಿಂದ ಬಂದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ನೆರಿಗಾ ಗ್ರಾಮದಲ್ಲಿ ಇಬ್ಬರು ವಾಸವಿದ್ದರು. ಇಂದು ಮುಂಜಾನೆ 5.30ರ ಸಮಯದಲ್ಲಿ ಕೆಲಸಕ್ಕೆ ತೆರಳಲು ಇಬ್ಬರು ನೆರಿಗಾ ಗ್ರಾಮದಿಂದ ಗುಂಜೂರು ಕಡೆ ತೆರಳಿದ್ದರು. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಮೃತರಿಗೆ ಸಂಬಂಧಿಕರು ಇಲ್ಲದ ಕಾರಣ ಅಂತ್ಯ ಸಂಸ್ಕಾರ ನಡೆಸಲು ಕೂಡ ಯಾರು ಇರಲಿಲ್ಲ. ಸದ್ಯ ಊರಿನ ಗ್ರಾಮಸ್ಥರೇ ಎಲ್ಲರಿಂದ ಹಣ ಸಂಗ್ರಹಿಸಿ ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ವರ್ತೂರು ಮುಖ್ಯರಸ್ತೆಯ ಗುಂಜೂರು ನಿಂದ ಸರ್ಜಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಪದೇ ಪದೇ ರಸ್ತೆ ಅಪಘಾತಗಳು ಆಗುತ್ತಿದೆ. ಹೀಗಾಗಿ ಮಾರ್ಗವಾಗಿ ಚಲಿಸುವ ಸಾರ್ವಜನಿಕರು ಆತಂಕ ಸೃಷ್ಟಿ ಮಾಡಿದೆ. ಅದರಲ್ಲೂ ಪೊಲೀಸರ ಕಣ್ಣು ತಪ್ಪಿಸಿ ಬರುವ ಭಾರೀ ಗಾತ್ರದ ಲಾರಿಗಳಿಂದ ಅಪಘಾತಗಳು ಆಗುತ್ತಿದ್ದು, ಗ್ರಾಮಸ್ಥರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಡಿವೈಎಸ್ಪಿ ನಂಜುಂಡಗೌಡ ಭೇಟಿ ಮಾಡಿ ಸ್ಥಳ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಸರ್ಜಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]