Tag: anekal

  • ಅಧಿಕಾರಕ್ಕಾಗಿ ಪೈಪೋಟಿ ಆನೇಕಲ್ ಬಿಜೆಪಿಯಲ್ಲಿ ಭಿನ್ನಮತ

    ಅಧಿಕಾರಕ್ಕಾಗಿ ಪೈಪೋಟಿ ಆನೇಕಲ್ ಬಿಜೆಪಿಯಲ್ಲಿ ಭಿನ್ನಮತ

    ಆನೇಕಲ್: ಅನರ್ಹ ಶಾಸಕರು ಅರ್ಹರಾಗಿ ಮಂತ್ರಿಯಾಗಲು ರೆಡಿಯಾಗಿದ್ದಾರೆ. ಆದರೆ ರಾಜ್ಯ ಬಿಜೆಪಿ ನಾಯಕರು ಮಂತ್ರಿ ಮಂಡಲ ವಿಸ್ತರಿಸುವ ಮೊದಲು ಪಕ್ಷದ ಕೆಲ ಕಾರ್ಯಕರ್ತರನ್ನು ನಿಗಮ ಮಂಡಳಿಗೆ ನೇಮಕ ಮಾಡಲು ಮುಂದಾಗಿದ್ದು, ಈ ವೇಳೆ ಅಧಿಕಾರ ಸಿಗದ ಕೆಲ ನಾಯಕರು ಪಕ್ಷದ ವಿರುದ್ಧ ಮುನಿಸಿಕೊಂಡು ಭಿನ್ನಮತ ಶುರು ಮಾಡಿದ್ದಾರೆ.

    ಮಂತ್ರಿ ಮಂಡಲ ವಿಸ್ತರಣೆಯ ಮುಂಚೆಯೇ ಭಿನ್ನಮತ ಕಾಣಿಸಿಕೊಂಡಿದ್ದು, ಮಂತ್ರಿ ಮಂಡಲ ಪುನರಚನೆಯಾದರೆ ಬಿಜೆಪಿಯಲ್ಲಿ ಅದೆಷ್ಟು ಭಿನ್ನಮತ ಸೃಷ್ಟಿಯಾಗುತ್ತೋ ಎನ್ನುವಂತಾಗಿದೆ. ಇವತ್ತು ಆನೇಕಲ್ ಬಿಜೆಪಿ ತಾಲೂಕು ಘಟಕ ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಆಯ್ಕೆ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದು, ರಾಜ್ಯ ಸರ್ಕಾರ ಎಡಿಎ ಅಧ್ಯಕ್ಷರನ್ನಾಗಿ ಜಯಣ್ಣರನ್ನು ಆಯ್ಕೆ ಮಾಡಿದೆ. ಈ ಆಯ್ಕೆ ಅದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಅವರ ಆಯ್ಕೆಯನ್ನು ತಿರಸ್ಕರಿಸದಿದ್ದರೆ ತಾಲೂಕಿನ ಬಿಜೆಪಿಯ ಎಲ್ಲ ಚುನಾಯಿತ ಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆಯನ್ನು ನೀಡಿದ್ದು, ಈ ಮೂಲಕ ತಾಲೂಕು ಬಿಜೆಪಿಯಲ್ಲಿ ಭಿನ್ನಮತ ಬಾವುಟ ಹಾರಾಡಿದೆ.

    ಇದೆ ತಿಂಗಳ 20 ರಂದು ಆನೇಕಲ್ ಯೋಜನಾ ಪ್ರಾಧಿಕಾರಕ್ಕೆ ಆನೇಕಲ್ ತಾಲೂಕಿನ ಬಿಜೆಪಿಯ ಹಿರಿಯ ನಾಯಕ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಆಗಿದ್ದ ಜಯಣ್ಣ ಎಂಬುವವರನ್ನು ಮತ್ತೊಂದು ಅವಧಿಗೆ ಎಡಿಎ ಅಧ್ಯಕ್ಷರನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ಜಯಣ್ಣ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸುವ ವೇಳೆ ಬಿಜೆಪಿಯ ಕಾರ್ಯಕರ್ತರು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಇದ್ಯಾವುದಕ್ಕೂ ಜಗ್ಗದ ಜಯಣ್ಣ ಪದಗ್ರಹಣ ನಡೆಸಿದ್ರು.

    ಇಂದು ಪತ್ರಿಕಾಗೋಷ್ಠಿ ನಡೆಸಿದ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ.ಶಿವಪ್ಪ ಎಡಿಎ ಅಧ್ಯಕ್ಷರ ಆಯ್ಕೆಯನ್ನು ವಿರೋಧಿಸಿದ್ದು, ಜಯಣ್ಣ ತಾಲೂಕಿನ ಯಾವುದೇ ನಾಯಕರ ಅಥವಾ ಕೋರ್ ಕಮಿಟಿಯ ಗಮನಕ್ಕೆ ತರದೆ ತಮ್ಮ ಪ್ರಭಾವ ಬಳಸಿ ಏಕಾಏಕಿ ಅಧ್ಯಕ್ಷಗಾದಿಗೆ ಬಂದಿದ್ದು ಸರಿಯಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಇವರನ್ನು ಯೋಜನಾ ಪ್ರಾಧಿಕಾರದ ಅಧ್ಯಕ್ಷರನಾಗಿ ಮಾಡಿದ್ದು, ಅಂದು ಎಲ್ಲ ನಾಯಕರು ಇವರ ಆಯ್ಕೆಯನ್ನು ಸ್ವಾಗತಿಸಿದ್ದರು.

    ಆದರೆ ಇದೀಗ ಅಧಿಕಾರದ ಆಸೆಯಿಂದ ತಾಲೂಕು ನಾಯಕರ ಹಾಗೂ ಕಾರ್ಯಕರ್ತರ ಗಮನಕ್ಕೆ ತರದೆ ಅಧ್ಯಕ್ಷರಾಗಿದ್ದು ಮುಂದೆ ಪಕ್ಷ ಸಂಘಟನೆಗೆ ತೊಡಕಾಗುತ್ತೆದೆ. ಈ ಹಿನ್ನೆಲೆ ರಾಜ್ಯಘಟಕಕ್ಕೆ ಮನವಿ ಮಾಡಿದ್ದು ಕೂಡಲೇ ಜಯಣ್ಣ ಆಯ್ಕೆಯನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ತಾಲೂಕಿನ ಬಿಜೆಪಿಯ ಜನಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಬಂಡಾಯದ ಬಾವುಟ ಹಾರಿಸಿದ್ದಾರೆ.

    ಜಯಣ್ಣ ಎರಡನೇ ಭಾರಿ ಎಡಿಎ ಅಧ್ಯಕ್ಷರಾಗಿ ಆಯ್ಕೆಯಾಗಿರೋದು ಆನೇಕಲ್ ತಾಲೂಕಿನ ಬಿಜೆಪಿಯ ಯಾವ ಮುಖಂಡರಿಗೂ ಕಾರ್ಯಕರ್ತರಿಗೂ ಇಷ್ಟವಿಲ್ಲ. ಕಷ್ಟಪಟ್ಟು ಪಕ್ಷವನ್ನು ಸಂಘಟಿಸಿದವರಿಗೆ ಅಧಿಕಾರ ನೀಡದೆ ಒಬ್ಬರಿಗೆ ಎರಡೆರಡು ಭಾರಿ ಅಧಿಕಾರ ನೀಡೋದು ತಪ್ಪು ಎನ್ನುತ್ತಿದ್ದಾರೆ. ಇತ್ತ ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಪದವಿ ಸ್ವೀಕರಿಸಿದ ಜಯಣ್ಣ ಮಾತ್ರ ತಾವು ಪಕ್ಷಕ್ಕೆ ದುಡಿದ ಕೆಲಸವನ್ನು ನೋಡಿ ಗುರುತಿಸಿ ಅಧಿಕಾರ ನೀಡದೇ ತಾವು ಯಾವುದೇ ಒತ್ತಡ ತಂದು ಅಧ್ಯಕ್ಷ ಪಟ್ಟಕ್ಕೆ ಬಂದಿಲ್ಲ ಎನ್ನುತ್ತಿದ್ದಾರೆ.

    ಬಿಜೆಪಿ ಸರ್ಕಾರ ರಾಜ್ಯದಲ್ಲಿ ಗಟ್ಟಿಗೊಳ್ಳುತ್ತಿದ್ದಂತೆ ಕಾರ್ಯಕರ್ತರಲ್ಲಿ ಅಧಿಕಾರದ ಆಸೆ ಹೆಚ್ಚಾಗಿದ್ದು, ಅಧಿಕಾರ ಸಿಗದ ಕಾರ್ಯಕರ್ತರು ಬಂಡಾಯ ಎದ್ದಿದ್ದು ಮುಂದೆ ಸಂಪುಟ ಪುನಾರಚನೆ ವೇಳೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೇಳುವ ಮುನ್ಸೂಚನೆಯ ಎನ್ನುವಂತಿದೆ.

  • ಕರ್ನಾಟಕ ತಮಿಳುನಾಡು ಗಡಿಯಲ್ಲಿ ಆನೆಗಳ ಹಾವಳಿ – ಗ್ರಾಮಸ್ಥರಲ್ಲಿ ಆತಂಕ

    ಕರ್ನಾಟಕ ತಮಿಳುನಾಡು ಗಡಿಯಲ್ಲಿ ಆನೆಗಳ ಹಾವಳಿ – ಗ್ರಾಮಸ್ಥರಲ್ಲಿ ಆತಂಕ

    ಆನೇಕಲ್: ಕರ್ನಾಟಕ ತಮಿಳುನಾಡು ಗಡಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಡಂಚಿನ ರೈತರು ಪ್ರತಿವರ್ಷ ತಾವು ಬೆಳೆದ ಬೆಳೆಗಳನ್ನು ಆನೆಗಳಿಂದ ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾನೆ.

    ಕರ್ನಾಟಕದಲ್ಲಿ ರೈಲ್ವೆ ಕಂಬಿಗಳನ್ನು ಬಳಸಿ ಆನೆಗಳು ಗ್ರಾಮಗಳತ್ತ ಬರದಂತೆ ತಡೆದಿದ್ದು ಅದೇ ಮಾದರಿಯನ್ನು ತಮಿಳುನಾಡಿನಲ್ಲಿ ಅಳವಡಿಸುವಂತೆ ಅಲ್ಲಿನ ರೈತರು ಅಲ್ಲಿನ ಸರ್ಕಾರವನ್ನು ಅಗ್ರಹಿದ್ದಾರೆ. ಹಿಂಡು ಹಿಂಡಾಗಿ ಬಾಳೆ ತೋಟಕ್ಕೆ ಲಗ್ಗೆ ಇಡುತ್ತಿರೋ ಆನೆಗಳನ್ನು ಓಡಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿಗೆ ಹೊಂದಿಕೊಂಡಿರೋ ತಮಿಳುನಾಡಿನ ಶಾಮಲಪಲ್ಲ ಗ್ರಾಮದಲ್ಲಿ, ಇಂದು ಬೆಳಿಗ್ಗೆ ಸುಮಾರು 40ಕ್ಕೂ ಹೆಚ್ಚು ಆನೆಗಳಿರುವ ಕಾಡನೆ ಗುಂಪು ಆಹಾರ ಅರಸಿ ಕಾಡಿನಿಂದ ಈ ಗ್ರಾಮಕ್ಕೆ ಲಗ್ಗೆ ಇಟ್ಟಿವೆ. ಗ್ರಾಮಸ್ಥರು ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಕ್ಷಣಮಾತ್ರದಲ್ಲಿ ತುಳಿದು ತಿಂದು ಹಾಳು ಮಾಡಿವೆ. ಆನೆಗಳಿಂದ ಈ ಭಾಗದಲ್ಲಿ ಬಾಳೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಕಾಡಾನೆಗಳ ಕಾಲಿಗೆ ಸಿಕ್ಕ ಬಾಳೆ ಗಿಡಗಳು ಮುರಿದು ಹೋಗಿದ್ದು ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿದೆ.

    ಕರ್ನಾಟಕದ ಬನ್ನೇರುಘಟ್ಟ ಭಾಗದಲ್ಲಿ ಆನೆಗಳ ಹಾವಳಿ ತಡೆಯಲು ಇಲ್ಲಿನ ಅರಣ್ಯ ಇಲಾಖೆ ಹಳೆಯ ರೈಲ್ವೆ ಕಂಬಿಗಳನ್ನು ಬಳಸಿ ಬೇಲಿ ನಿರ್ಮಿಸಿದ್ದು, ಇದರಿಂದ ಅಲ್ಲಿನ ಆನೆಗಳು ಇತ್ತ ನುಗ್ಗಿದ್ದು ಇದನ್ನು ತಡೆಯಲು ಕರ್ನಾಟಕದಂತೆ ಇಲ್ಲಿಯು ತಡೆ ಬೇಲಿ ನಿರ್ಮಿಸುವಂತೆ ಅಲ್ಲಿನ ಅರಣ್ಯ ಇಲಾಖೆಯನ್ನು ರೈತರು ಒತ್ತಾಯ ಮಾಡಿದ್ದಾರೆ.

  • ಇತಿಹಾಸ ಪ್ರಸಿದ್ಧ ಮದ್ದೂರಮ್ಮ ದೇವಿ ಜಾತ್ರೆಗೆ ರೈಲ್ವೆ ಹೈಟೆನ್ಷನ್ ವೈರ್ ಅಡ್ಡಿ

    ಇತಿಹಾಸ ಪ್ರಸಿದ್ಧ ಮದ್ದೂರಮ್ಮ ದೇವಿ ಜಾತ್ರೆಗೆ ರೈಲ್ವೆ ಹೈಟೆನ್ಷನ್ ವೈರ್ ಅಡ್ಡಿ

    ಅನೇಕಲ್: ಇತಿಹಾಸ ಪ್ರಸಿದ್ಧ ಇರುವ ಹಾಗೂ ಐತಿಹಾಸಿಕ ಪುರಾಣ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ರೈಲ್ವೆ ಹೈಟೆನ್ಷನ್ ವೈರ್ ಅಡ್ಡಿಯಾಗಿದೆ.

    ಬೆಂಗಳೂರಿನಿಂದ ಸೇಲಂ ರೈಲ್ವೆ ಮಾರ್ಗದ ದಾರಿಯಲ್ಲಿ ಹೈಟೆನ್ಷನ್ ವೈರ್ ಹಾದುಹೋಗಿರುವ ಪರಿಣಾಮ ಈ ಬಾರಿ ಜಾತ್ರೆ ನಡೆಯುತ್ತಾ ಇಲ್ವೋ ಅನ್ನೋದು ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ ಜಾತ್ರಾ ಮಹೋತ್ಸವ ಸುಗಮವಾಗಿ ನಡೆಯಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಊರಿನ ಗ್ರಾಮಸ್ಥರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

    ಬೆಂಗಳೂರು ಕೂಗಳತೆ ದೂರದಲ್ಲಿರುವ ಹುಸ್ಕೂರು ಮದ್ದೂರಮ್ಮ ಜಾತ್ರೆ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಜಾತ್ರೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಬೆಂಗಳೂರಿನಿಂದ ಸೇಲಂ ಮಾರ್ಗಕ್ಕೆ ಹೈಟೆನ್ಷನ್ ವೈರ್ ರೈಲ್ವೆ ಹಳಿ ಮೇಲೆ ಹಾದು ಹೋದ ಪರಿಣಾಮ ಜಾತ್ರೆ ನಡೆಸಲು ವಿಘ್ನ ಎದುರಾಗಿದೆ. ಹೀಗಾಗಿ ಜಾತ್ರೆ ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಊರಿನ ಗ್ರಾಮಸ್ಥರು ಹಾಗೂ ಹಲವು ಮುಖಂಡರು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸುರೇಶ್ ಅಂಗಡಿಗೆ ಮನವಿ ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಸ್ಥಳೀಯ ಶಾಸಕ ಬಿ. ಶಿವಣ್ಣ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇನೆಂದು ತಿಳಿಸಿದರು. ಜಾತ್ರೆ ಪ್ರಮುಖ ಆಕರ್ಷಣೆ ಕುರ್ಜು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆಯುವ ಹುಸ್ಕೂರ್ ಮದ್ದುರಮ್ಮ ಜಾತ್ರೆಗೆ 14 ಗ್ರಾಮಗಳಿಂದ ನೂರು ಅಡಿಗೂ ಎತ್ತರದ ಕುರ್ಜುಗಳು ಬರುತ್ತವೆ. ಈ ಕುರ್ಜುಗಳನ್ನ ಎತ್ತುಗಳು ತುಳಿದುಕೊಂಡು ಬರುವುದು ವಿಶೇಷ. ಈ ಬಾರಿ ಹೈಟೆನ್ಶನ್ ವೈರ್ ಅಳವಡಿಕೆ ಪರಿಣಾಮ ಕೊಡತಿ, ಸೂಲುಕುಂಟೆ, ಚೊಕ್ಕಸಂದ್ರ ಹಾರೋಹಳ್ಳಿ, ಕಗ್ಗಲಿಪುರ ನಾರಾಯಣಘಟ್ಟ, ಸಿಂಗೇನ ಅಗ್ರಹಾರ, ಗ್ರಾಮಗಳ ಕುರ್ಜು ಗಳು ಹುಸ್ಕೂರು ಜಾತ್ರೆಗೆ ಬರಬೇಕಾದರೆ ರೈಲ್ವೆ ಹಳಿಯನ್ನು ದಾಟಿ ಬರಬೇಕು. ಹಾಗಾಗಿ ಈ ಮಾರ್ಗದಲ್ಲಿ ರೈಲ್ವೆಯ ಹೈಟೆನ್ಷನ್ ವೈರ್ ಹಾದುಹೋದ ಪರಿಣಾಮ ಕುರ್ಜುಗಳು ರೈಲ್ವೇ ಹಳಿ ದಾಟಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ರಾಜ್ಯ ಸಚಿವರಿಗೆ ಮನವಿ ಮಾಡಿದ್ದಾರೆ.

  • ಫಾಸ್ಟ್ ಟ್ಯಾಗ್ ಇದ್ದರೂ ತಪ್ಪದ ‘ಕ್ಯೂ’- ಪರ, ವಿರೋಧ ಚರ್ಚೆ

    ಫಾಸ್ಟ್ ಟ್ಯಾಗ್ ಇದ್ದರೂ ತಪ್ಪದ ‘ಕ್ಯೂ’- ಪರ, ವಿರೋಧ ಚರ್ಚೆ

    ಬೆಂಗಳೂರು: ಟೋಲ್‍ಗಳಲ್ಲಿ ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ್ದು, ವಾಹನ ಸವಾರರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದ ಕಾರಣ ಮೂರು ಬಾರಿ ಕಾಲಾವಕಾಶ ವಿಸ್ತರಣೆ ಮಾಡಿದೆ. ಇದರ ನಡುವೆ ಫಾಸ್ಟ್ ಟ್ಯಾಗ್ ಕಡ್ಡಾಯದ ಪರ, ವಿರೋಧ ಚರ್ಚೆಗಳು ನಡೆಯುತ್ತಿದೆ.

    ದೇಶದ್ಯಾಂತ ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಕಾಯುವಿಕೆ ಕೊನೆಗೊಳಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಪರಿಚಯಿಸಿದ್ದು, ವಾಹನ ಸವಾರರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಬಹುತೇಕ ವಾಹನ ಮಾಲೀಕರು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿಲ್ಲ. ಈ ಹಿನ್ನೆಲೆ ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಅಳವಡಿಕೆಗೆ ನೀಡಿದ್ದ ಗಡುವನ್ನು ಮತ್ತೆ 30 ದಿನಗಳ ಕಾಲ ವಿಸ್ತರಿಸಿದೆ. ಈ ಹಿನ್ನೆಲೆ ವಾಹನ ಸವಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ.

    ಬೆಂಗಳೂರು ತಮಿಳುನಾಡು ರಾಷ್ಟ್ರೀಯ ಹೆದ್ದಾರಿ 7ರ ಅತ್ತಿಬೆಲೆ ಟೋಲ್ ಬಳಿ ಫಾಸ್ಟ್ ಟ್ಯಾಗ್ ಅಳವಡಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಹನ ಸವಾರರು ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಖುಷಿಯಾಗಿದ್ದಾರೆ. ಆದರೆ ಫಾಸ್ಟ್ ಟ್ಯಾಗ್ ವಿತರಣೆ ವ್ಯವಸ್ಥೆ ಸರಿ ಇಲ್ಲದ ಕಾರಣ ಫಾಸ್ಟ್ ಟ್ಯಾಗ್ ವಿತರಣೆ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಕೆಲ ವಾಹನ ಸವಾರರಿಗೆ ಫಾಸ್ಟ್ ಟ್ಯಾಗ್‍ನ ಅರಿವು ಮೂಡಿಸಬೇಕು ಎಂಬುದು ವಾಹನ ಸವಾರರು ಅಭಿಪ್ರಾಯವಾಗಿದೆ.

    ಫಾಸ್ಟ್ ಟ್ಯಾಗ್ ಅಳವಡಿಕೆ ಹಾಗೂ ಸ್ಕ್ಯಾನಿಂಗ್ ನಲ್ಲಿ ಹಲವು ಲೋಪಗಳಿದ್ದು, ಇದರಿಂದಾಗಿ ಫಾಸ್ಟ್ ಟ್ಯಾಗ್ ಅಳವಡಿಸಿದ್ದರು ಟೋಲ್ ಗಳಲ್ಲಿ ಕಾಯುವಿಕೆ ಮುಂದುವರಿದಿದೆ. ಇದಕ್ಕೆ ಫಾಸ್ಟ್ ಟ್ಯಾಗ್ ವಿತರಿಸುತ್ತಿರುವ ಏಜೆನ್ಸಿಗಳು ಗುಣಮಟ್ಟದ ಟ್ಯಾಗ್ ವಿತರಣೆ ಮಾಡದ ಕಾರಣ ಹಾಗೂ ವಾಹನಗಳಲ್ಲಿ ಸರಿಯಾದ ಸ್ಥಳದಲ್ಲಿ ಟ್ಯಾಗ್ ಅಳವಡಿಸಿದ ಕಾರಣ ಟೋಲ್ ಗೇಟ್ ಗಳಲ್ಲಿ ಸ್ಕ್ಯಾನಿಂಗ್ ನಿಧಾನ ಗತಿಯಲ್ಲಿ ಆಗುತ್ತಿದ್ದು, ಇದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಎಲ್ಲವೂ ಸರಿಯಾಗಲಿದೆ ಎಂಬುದು ಅತ್ತಿಬೆಲೆ ಟೋಲ್ ಮ್ಯಾನೇಜರ್ ತಿಮ್ಮಯ್ಯನವರ ಅಭಿಪ್ರಾಯ.

    ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ತಿಮ್ಮಯ್ಯ ಅವರು, ಕರ್ನಾಟಕದಲ್ಲಿ ಅತ್ತಿಬೆಲೆ ಟೋಲ್ ಫಾಸ್ಟ್ ಟ್ಯಾಗ್ ವಿತರಣೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು. ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಗಂಟೆಗಟ್ಟಲೆ ಟೋಲ್ ಗಳಲ್ಲಿ ಕಾಯುವುದು ತಪ್ಪಿತೆಂದೂ ಫಾಸ್ಟ್ ಟ್ಯಾಗ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಸ್ಥಳೀಯ ವಾಹನ ಸವಾರರು ಕೆಲವೇ ಮೀಟರ್ ರಸ್ತೆ ಉಪಯೋಗಕ್ಕೆ ದುಡ್ಡು ತರಬೇಕೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

  • ಪತ್ನಿ, 3 ಕಂದಮ್ಮಗಳಿಗೆ ವಿಷವಿಕ್ಕಿ ನರಳಾಡುತ್ತಿರುವ ವಿಡಿಯೋ ಮಾಡಿ ಆತ್ಮಹತ್ಯೆ ಮಾಡ್ಕೊಂಡ

    ಪತ್ನಿ, 3 ಕಂದಮ್ಮಗಳಿಗೆ ವಿಷವಿಕ್ಕಿ ನರಳಾಡುತ್ತಿರುವ ವಿಡಿಯೋ ಮಾಡಿ ಆತ್ಮಹತ್ಯೆ ಮಾಡ್ಕೊಂಡ

    ಬೆಂಗಳೂರು: ಒಂದಕ್ಕಿ ನಂಬರ್ ಲಾಟರಿಯಿಂದ ಮೈತುಂಬಾ ಸಾಲ ಮಾಡಿಕೊಂಡು ಸಾಲ ತೀರಿಸಲಾಗದೆ ತನ್ನ ಪತ್ನಿ ಹಾಗೂ 3 ಜನ ಮಕ್ಕಳಿಗೆ ವಿಷ ಉಣಿಸಿ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಬಳಿ ನಡೆದಿದೆ.

    ವಿಲ್ಲುಪುರಂನ ನಿವಾಸಿ ಅರುಲ್, ಪತ್ನಿ ಹಾಗೂ ಮಕ್ಕಳಿಗೆ ವಿಷವುಣಿಸಿದ್ದು, ಮಕ್ಕಳಿಗೆ ವಿಷ ನೀಡಿ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಕೇರಳ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಸಿಂಗಲ್ ನಂಬರ್ ಲಾಟರಿಯನ್ನು ಅಕ್ರಮವಾಗಿ ತಮಿಳುನಾಡಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಮಾಹಾಮಾರಿ ಸಿಂಗಲ್ ನಂಬರ್ ಲಾಟರಿ ಆಡುವ ಹುಚ್ಚನ್ನು ಅರುಲ್ ಬೆಳೆಸಿಕೊಂಡಿದ್ದ. ಅಲ್ಲದೇ ಲಾಟರಿ ಆಡಲು ಮೈತುಂಬಾ ಸಾಲ ಮಾಡಿ ಸಿಂಗಲ್ ನಂಬರ್ ಲಾಟರಿ ಆಡುತ್ತಿದ್ದ. ಈ ಹಂತದಲ್ಲಿ ಸಾಲ ಹೆಚ್ಚಾಗಿ ಸಾಲ ಮರುಪಾವತಿಸಲು ಇದ್ದ ಒಂದು ಮನೆಯನ್ನು ಮಾರಿದರೂ ಸಾಲ ತೀರಿಸಲಾಗದಷ್ಟು ಬೆಳೆದಿತ್ತು. ಇದರಿಂದ ಸಾಲ ಮರುಪಾವತಿ ಮಾಡಲಾಗದೆ ಜಿಗುಪ್ಸೆಗೊಂಡ ಅರುಲ್ ತನ್ನ ಪತ್ನಿಯ ಜೊತೆ ಸೇರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ.

    ಪತ್ನಿ ಜೊತೆ ಸೇರಿ ಮೊದಲು ತನ್ನ ಮೂರು 3 ಹೆಣ್ಣುಮಕ್ಕಳಿಗೆ ಸೈನೈಡ್ ಕೊಟ್ಟು, ಅದನ್ನು ವಿಡಿಯೋ ಮಾಡಿ ತನ್ನ ಸ್ನೇಹಿತರಿಗೆ ಕಳುಹಿಸಿ ನಂತರ ಅವರು ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದಲ್ಲಿ ಚಾಲ್ತಿಯಲ್ಲಿರುವ ಒಂದಂಕಿ ಲಾಟರಿ ತಮಿಳುನಾಡಿಗೂ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಬಹುಬೇಗ ಹಣ ಸಂಪಾದನೆ ಮಾಡುವ ಆಸೆಗೆ ಬೀಳುವ ಅದೆಷ್ಟೋ ಮಂದಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಅಕ್ರಮ ದಂಧೆಗೆ ಕಡಿವಾಣ ಹಾಕದೇ ಇದ್ದರೆ ಮತ್ತಷ್ಟು ಕುಟುಂಬಗಳು ಬಲಿಯಾಗುವ ಸಾಧ್ಯತೆಯಿದೆ.

  • ತಾಯಿ ಸಮಾಧಿಯಾದ ಮೇಲೆ ಮಗು ಹೇಳಿತು ಸತ್ಯ – ಪೊಲೀಸರಿಂದ ಕೊಲೆ ಆರೋಪಿ ಅರೆಸ್ಟ್

    ತಾಯಿ ಸಮಾಧಿಯಾದ ಮೇಲೆ ಮಗು ಹೇಳಿತು ಸತ್ಯ – ಪೊಲೀಸರಿಂದ ಕೊಲೆ ಆರೋಪಿ ಅರೆಸ್ಟ್

    ಬೆಂಗಳೂರು: ಸಹಜ ಸಾವು ಎಂದು ತಿಳಿದು ಮಹಿಳೆಯ ಅಂತ್ಯಸಂಸ್ಕಾರ ಮಾಡಲಾಗಿದ್ದ ಪ್ರಕರಣಕ್ಕೆ ಆಕೆಯ ಮಗು ಹೇಳಿದ ಭಯಾನಕ ಸತ್ಯದಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವೆಂಕಟೇಶ್ (28) ಎಂಬಾತ 30 ವರ್ಷದ ಗೃಹಿಣಿ ಸುಮಲತಾಳನ್ನು ಆಕೆಯ ಮಗುವಿನ ಮುಂದೆಯೇ ಕೊಲೆ ಮಾಡಿದ್ದಾನೆ. ನಂತರ ಯಾರಿಗೂ ಹೇಳಬೇಡ ಎಂದು ಮಗುವಿಗೆ ಹೇಳಿ ಪರಾರಿಯಾಗಿದ್ದ. ಆದರೆ ಅಪ್ಪನ ಜೊತೆ ಮಗು ಹೇಳಿದ ಒಂದು ಸತ್ಯದಿಂದ ಆರೋಪಿ ವೆಂಕಟೇಶ್ ಪೊಲೀಸರ ಅತಿಥಿಯಾಗಿದ್ದಾನೆ.

    ಸುಮಲತಾ ಆರು ವರ್ಷದ ಹಿಂದೆ ಆನೇಕಲ್ ತಾಲೂಕಿನ ಚಿನ್ನಯ್ಯನ ಪಾಳ್ಯದ ದೇವರಾಜು ಎಂಬುವನೊಂದಿಗೆ ಮದುವೆಯಾಗಿ ಸಂಸಾರ ಮಾಡುತ್ತಿದ್ದಳು. ಈಕೆಗೆ 5 ವರ್ಷ, 3 ವರ್ಷದ ಎರಡು ಗಂಡು ಮಕ್ಕಳಿದ್ದು ಅಕ್ಟೋಬರ್ 16 ರಂದು ಬೆಳಿಗ್ಗೆ ಪತಿ ದೇವರಾಜುಗೆ ಕರೆ ಮಾಡಿ ಎದೆ ನೋವು ಅಂದಿದ್ದಾಳೆ. ಜೊತೆಗೆ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿದ್ದಾಳೆ. ಮತ್ತೆ ರಾತ್ರಿ ಗಂಡನೊಂದಿಗೆ ಫೋನ್‍ನಲ್ಲಿ ಮಾತನಾಡಿ ಮಲಗಿದ್ದು ಬೆಳಗ್ಗೆ ಅಕ್ಕಪಕ್ಕದ ಮನೆಯವರು ಮಕ್ಕಳು ಅಳುತ್ತಿರುವುದನ್ನು ಕಂಡು ಒಂದು ನೋಡಿದಾಗ ಸುಮಲತಾ ಮೃತಪಟ್ಟಿದ್ದಳು.

    ಇತ್ತ ಪತಿ ದೇವರಾಜುಗೆ ಗ್ರಾಮಸ್ಥರು ವಿಷಯ ತಿಳಿಸಿದ್ದು, ದೇವರಾಜು ನಿನ್ನೆ ಎದೆನೋವು ಅಂದಿದ್ದಳು ಎಂದಿದ್ದಾನೆ. ಗ್ರಾಮಸ್ಥರು ಹೃದಯಾಘಾತದಿಂದ ಸಾವನಪ್ಪಿದ್ದಾಳೆ ಎಂದು ತಿಳಿದು ಗ್ರಾಮಸ್ಥರೆಲ್ಲ ಸೇರಿ ಅಂತ್ಯಸಂಸ್ಕಾರ ನಡೆಸಿದ್ದಾರೆ. ಅಂತ್ಯಸಂಸ್ಕಾರ ನಡೆದ ರಾತ್ರಿ ಮಗುವನ್ನು ಸೀರೆ ಜೋಲಿಗೆ ಮಲಗಿಸಲು ಮುಂದಾದಾಗ ಜೋಲಿ ನೋಡಿ ಮಗು ಮಾಮ ಅಮ್ಮನಿಗೆ ಹೊಡೆದಿದ್ದಾರೆ ಎಂದು ಹೇಳಿದೆ. ತಕ್ಷಣ ಪತಿ ದೇವರಾಜು ಮತ್ತವರ ತಂದೆ ತಾಯಿ ಪಕ್ಕದ ಮನೆಯಲ್ಲಿ ವಾಸವಿದ್ದ ವೆಂಕಟೇಶ್ (28) ಎಂಬುವವನ ಮೇಲೆ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದು ಕೊಲೆ ಪ್ರಕರಣ ದಾಖಲಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೆಂಕಟೇಶನನ್ನು ಬಂಧಿಸಿ ಹೂತಿದ್ದ ಶವ ಹೊರತೆಗೆದು ಮಹಜರ್ ನಡೆಸಿ ಶವ ಪರೀಕ್ಷೆ ನಡೆಸಿದ್ದಾರೆ. ಸುಮಲತಾ ದೇವರಾಜು ಮದುವೆ ಆದ ನಂತರ ಚಿಣ್ಣಯ್ಯನಪಾಳ್ಯದಲ್ಲಿ ವಾಸವಿದ್ದರು. ದೇವರಾಜು ವೃತ್ತಿಯಲ್ಲಿ ಚಾಲಕನಾಗಿದ್ದು, ಕೆಲಸದ ಮೇಲೆ ಹೊರ ಹೋದ್ರೆ ತಿರುಗಿ ಬರುತಿದ್ದದ್ದು ಮೂರ್ನಾಲ್ಕು ದಿನ ಅಥವಾ ವಾರಗಳೇ ಕಳೆಯುತಿತ್ತು. ಈ ವೇಳೆ ದೇವರಾಜನ ದೂರದ ಸಂಬಂಧಿ ಆನೇಕಲ್ ತಾಲೂಕಿನ ಚಿಕ್ಕಹಾಗಡೆ ಗ್ರಾಮದ ವೆಂಕಟೇಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ದೇವರಾಜು ಮನೆಯ ಪಕ್ಕದಲ್ಲೇ ವಾಸಕ್ಕೆ ಬಂದಿದ್ದ.

    ಇತ್ತ ವಾರಗಟ್ಟಲೆ ಮನೆಯಿಂದ ಹೊರಗಿರುತ್ತಿದ್ದ ದೇವರಾಜು ವೆಂಕಟೇಶನನ್ನು ನಂಬಿ ಮನೆ ಕಡೆ ಸ್ವಲ್ಪ ನೋಡುಕೊಳ್ಳುವಂತೆ ತಿಳಿಸಿದ್ದ. ಮೊದಲಿಗೆ ಸಭ್ಯನಂತೆ ಇದ್ದ ವೆಂಕಟೇಶ ಸುಮಲತಾಳನ್ನು ಬಲೆಗೆ ಹಾಕಿಕೊಂಡಿದ್ದ. ಇತ್ತ ಗಂಡ ಹೊರಗೆ ಹೆಚ್ಚು ಇರುತ್ತಿದ್ದರಿಂದ ವೆಂಕಟೇಶನ ಸಹವಾಸ ಸುಮಲತಾಳಿಗೆ ಹಿತವಾಗಿತ್ತು. ಇನ್ನು ಕಾಲ ಕಳೆದಂತೆ ಇವರ ಸಂಬಂಧ ಜಗಜ್ಜಾಹೀರಾಗಿ ರಾಜಿ ಪಂಚಾಯಿತಿ ನಡೆದು ವೆಂಕಟೇಶನನ್ನು ಊರು ಬಿಡಿಸಲಾಗಿತ್ತು. ನಂತರ ಸುಮಲತಾ ಕೂಡ ಹಿರಿಯರ ಮಾತಿಗೆ ಬೆಲೆಕೊಟ್ಟು ಗಂಡನೊಂದಿಗೆ ಅನ್ಯೋನ್ಯವಾಗಿದ್ದಳು.

    ವೆಂಕಟೇಶ್ ಮಾತ್ರ ದೇವರಾಜು ಕೆಲಸಕ್ಕೆ ಹೋಗುವುದನ್ನು ನೋಡಿಕೊಂಡು ಮನೆಗೆ ಬಂದು ಸುಮಲತಾಳಿಗೆ ಗಂಡನನ್ನು ಬಿಟ್ಟು ಬರುವಂತೆ ಹಿಂಸಿಸತೊಡಗಿದ. ಹೀಗೆ ಆಕ್ಟೋಬರ್ 16 ರಂದು ರಾತ್ರಿ ಸುಮಲತಾಳ ಮನೆಗೆ ಕಬಾಬ್ ತೆಗೆದುಕೊಂಡು ಬಂದು ತನ್ನೊಂದಿಗೆ ಬರುವಂತೆ ಪೀಡಿಸಿದ್ದ. ಸುಮಲತಾ ಒಪ್ಪದಕ್ಕೆ ಮಗು ಮಲಗಿಸುವ ಸೀರೆಯ ಜೋಳಿಯಿಂದ ಕುತ್ತಿಗೆ ಬಿಗಿದು ಸಾಯಿಸಿ ಮಗುವಿಗೆ ಯಾರಿಗೂ ಹೇಳದಂತೆ ತಿಳಿಸಿ ಹೋಗಿ ತಲೆ ಮರೆಸಿಕೊಂಡಿದ್ದ.

    ಕೊಲೆಗಾರ ಎಷ್ಟೇ ಬುದ್ಧಿವಂತನಾಗಿದರೂ ಸಣ್ಣದೊಂದು ಸುಳಿವು ಬಿಟ್ಟಿರುತ್ತಾನೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದ್ದು, ಐದು ವರ್ಷದ ಮಗು ತನ್ನ ತಾಯಿಯ ರಹಸ್ಯ ಬಯಲು ಮಾಡಿ ಕೊಲೆ ಆರೋಪಿಯ ಬಂಧನಕ್ಕೆ ಕಾರಣವಾಗಿದೆ. ಸಹಜ ಸಾವೆಂದು ಸುಮನಿದ್ದವರಿಗೆ ಮಗುವಿನ ಮೂಲಕ ಸತ್ಯ ತಿಳಿದು ಗ್ರಾಮಸ್ಥರಿಗೆ ಶಾಕ್ ಆಗಿದೆ.

  • ಕಾಣೆಯಾಗಿದ್ದ ಪ್ರೇಮಿಗಳು ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆ

    ಕಾಣೆಯಾಗಿದ್ದ ಪ್ರೇಮಿಗಳು ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆ

    ಬೆಂಗಳೂರು: ಕಾಣೆಯಾಗಿದ್ದ ಪ್ರೇಮಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಕೇರಳ ಮೂಲದ ಶ್ರೀಲಕ್ಷ್ಮಿ ಹಾಗೂ ಜನಾರ್ದನ್ ಮೃತ ಪ್ರೇಮಿಗಳು. ಇಬ್ಬರ ಮೃತ ದೇಹಗಳು ಆನೇಕಲ್‍ನ ಚಿಂತಲ ಮಡಿವಾಳ ಗ್ರಾಮದ ಕೆರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

    ಎಲೆಕ್ಟ್ರಾನಿಕ್ ಸಿಟಿಯ ಕಂಪನಿಯೊಂದರಲ್ಲಿ ಶ್ರೀಲಕ್ಷ್ಮಿ ಮತ್ತು ಜನಾರ್ದನ್ ಕೆಲಸ ಮಾಡುತ್ತಿದ್ದರು. ಇಬ್ಬರ ಮಧ್ಯೆ ಸ್ನೇಹ ಬೆಳೆದು, ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಇಬ್ಬರು ಕಾಣೆಯಾಗಿದ್ದರು.

    ಈ ಸಂಬಂಧ ಶ್ರೀಲಕ್ಷ್ಮಿ ಹಾಗೂ ಜನಾರ್ದನ್ ಪೋಷಕರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ನಡೆಸಿದ್ದರು. ಆದರೆ ಇಂದು ಚಿಂತಲ ಮಡಿವಾಳ ಗ್ರಾಮದ ಕೆಲವರು ಕೆರೆ ಬಳಿಗೆ ಹೋದಾಗ ಶವ ಕೊಳೆತ ವಾಸನೆ ಬಂದಿದೆ. ಬಳಿಕ ಸ್ಥಳಕ್ಕೆ ಹೋಗಿ ನೋಡಿದಾಗ ಮೃತದೇಹ ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪ್ರೇಮಿಗಳ ಮೃತದೇಹವು ತುಂಡು ತುಂಡಾಗಿ ಬಿದ್ದಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಗೋಡಿ ಪೊಲೀಸರು ತನಿಖೆ ಆರಂಭಿಸಿದ್ದು, ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ.

  • ಮನೆಯ ಗೇಟ್ ಒಳಗಡೆ ನಿಲ್ಲಿಸಿದ್ದ ಬೈಕ್‍ಗಳೇ ಕಳ್ಳತನ

    ಮನೆಯ ಗೇಟ್ ಒಳಗಡೆ ನಿಲ್ಲಿಸಿದ್ದ ಬೈಕ್‍ಗಳೇ ಕಳ್ಳತನ

    – ಮಿತಿ ಮೀರುತ್ತಿದೆ ಕಳ್ಳರ ಹಾವಳಿ
    – ವಾರದಲ್ಲಿ 15ಕ್ಕೂ ಹೆಚ್ಚು ಬೈಕ್ ಕಳ್ಳತನ

    ಬೆಂಗಳೂರು: ಮನೆ ಮುಂದೆ, ರಸ್ತೆ ಬದಿ ಬೈಕ್ ನಿಲ್ಲಿಸಿರೋದು ಇರಲಿ, ಇನ್ನು ಮನೆಯ ಗೇಟ್ ಒಳಗೆ ಬೈಕ್ ನಿಲ್ಲಿಸಿ ಗೇಟಿಗೆ ಭದ್ರವಾಗಿ ಬೀಗ ಹಾಕಿ ನಿಶ್ಚಿಂತೆಯಾಗಿ ಮಲಗುತ್ತಿದ್ದವರಿಗೂ ಚಿಂತೆ ಶುರುವಾಗಿದೆ.

    ಹೌದು ಮನೆಯ ಗೇಟ್ ಒಳಗಡೆ ಬೈಕ್ ಇಟ್ಟು ಬೀಗ ಹಾಕಿ ಮಲಗಿದರೂ ಸಹ ಕ್ಷಣಾರ್ಧದಲ್ಲಿ ಬೈಕುಗಳನ್ನು ಕಳ್ಳತನ ಮಾಡುವ ಚಾಲಾಕಿ ಕಳ್ಳರು ಹೆಚ್ಚಾಗುತ್ತಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಮುನಿವೆಂಕಟಪ್ಪ ಬಡಾವಣೆಯಲ್ಲಿ ನಿನ್ನೆ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ನಾಲ್ವರು ಖದೀಮರು ಶ್ರೀನಿವಾಸ್ ಎಂಬುವವರ ಮನೆಯ ಪಾರ್ಕಿಂಗಿನಲ್ಲಿ ನಿಲ್ಲಿಸಲಾಗಿದ್ದ 2 ಬುಲೆಟ್ ಬೈಕುಗಳನ್ನು ಕದ್ದು ಪರಾರಿಯಾಗಿದ್ದಾರೆ.

    ಮನೆಯ ಗೇಟ್ ಒಳಭಾಗದಲ್ಲಿ ಬೈಕ್ ನಿಲ್ಲಿಸಿ ಗೇಟಿಗೆ ಬೀಗ ಹಾಕಿ ನೆಮ್ಮದಿಯಿಂದ ಮಲಗಿದ್ದ ಬೈಕ್ ಮಾಲೀಕರು ಬೆಳಗ್ಗೆ ಎದ್ದು ನೋಡುತ್ತಿದ್ದಂತೆ ಬೈಕುಗಳು ಇಲ್ಲದಿರುವುದನ್ನು ಕಂಡು ಶಾಕ್ ಆಗಿದ್ದಾರೆ. ತಕ್ಷಣ ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಚೆಕ್ ಮಾಡಿದ್ದು, ಕಳ್ಳರ ಕೈಚಳಕ ಬೆಳಕಿಗೆ ಬಂದಿದೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಇತ್ತೀಚೆಗೆ ಆನೇಕಲ್ ಪಟ್ಟಣದಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪಟ್ಟಣದ ಒಂದಲ್ಲ ಒಂದು ಕಡೆ ದಿನ ನಿತ್ಯ ಬೈಕ್ ಕಳ್ಳತನ ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ಒಂದು ವಾರದಲ್ಲಿ ಸುಮಾರು 15ಕ್ಕೂ ಹೆಚ್ಚು ಬೈಕ್ ಗಳು ಕಳ್ಳತನವಾಗಿರುವುದು ಪೊಲೀಸರ ಕಾರ್ಯವೈಖರಿ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಇಷ್ಟೆಲ್ಲ ಬೈಕ್ ಗಳು ಕಳವಾಗಿದ್ದರೂ ಪೊಲೀಸರು ಅಲರ್ಟ್ ಆಗಿಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.

  • ಅಪ್ಪನಿಗೆ ತೊಂದ್ರೆ ಆಗಬಾರದೆಂದು ಬೇರೆ ಮನೆ ಮಾಡಿದ್ದೇನೆ- ಶರತ್ ಬಚ್ಚೇಗೌಡ

    ಅಪ್ಪನಿಗೆ ತೊಂದ್ರೆ ಆಗಬಾರದೆಂದು ಬೇರೆ ಮನೆ ಮಾಡಿದ್ದೇನೆ- ಶರತ್ ಬಚ್ಚೇಗೌಡ

    ಬೆಂಗಳೂರು: ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಸಂಸದ ಬಚ್ಚೇಗೌಡ ಮಗ ಶರತ್ ಬಚ್ಚೇಗೌಡ ಕಣಕ್ಕಿಳಿಯೋದು ಪಕ್ಕಾ ಆಗಿದ್ದು, ಇತ್ತ ಶರತ್ ತಮ್ಮ ಕಾರ್ಯಕರ್ತರಿಗಾಗಿ ಸಂದೇಶ ರವಾನಿಸಿದ್ದಾರೆ.

    ಹೊಸಕೋಟೆ ತಾಲೂಕಿನ ಮುದ್ದನಹಳ್ಳಿಯಲ್ಲಿ ತಮ್ಮ ಭಾಷಣದ ವೇಳೆ, ತಾಲೂಕಿನಲ್ಲಿ ನಾನು ನಂಬಿರುವ ಜನರ ವಿಶ್ವಾಸಕ್ಕೆ ಕಳಂಕ ಬರದಂತೆ ಕೆಲಸ ಮಾಡುತ್ತೇನೆ. ಶತ್ರುಗಳಿಗೂ ಒಳಿತನ್ನು ಬಯಸುವ ಸ್ವಭಾವ ನನ್ನದು. ನನ್ನ ನಿರ್ಧಾರದಿಂದ ಬಚ್ಚೇಗೌಡರಿಗೆ ತೊಂದರೆ ಆಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ನನ್ನ ತಾಲೂಕಿನ ಜನರ ಸೇವೆಗಾಗಿ ನಾನು ತೆಗೆದುಕೊಂಡಿರುವ ನಿರ್ಧಾರದಿಂದ ಬಚ್ಚೇಗೌಡರಿಗೆ ತೊಂದರೆ ಆಗಬಾರದೆಂದು ಲಾಲ್ ಬಾಗ್ ಮನೆ ಬಿಟ್ಟು ನಮ್ಮ ಹುಟ್ಟೂರಾದ ಬೆಂಡಿಗಾನಹಳ್ಳಿಯಲ್ಲಿ ಮನೆ ಮಾಡಿದ್ದೇನೆ ಎಂದರು.

    ನನ್ನ ತಂದೆ ಬಚ್ಚೇಗೌಡರು ನನ್ನ ಪ್ರಚಾರಕ್ಕೆ ಬಾರಲಾಗದ ಸಂದರ್ಭದಲ್ಲಿ ಪ್ರತಿ ಗ್ರಾಮಗಳಲ್ಲಿರುವ ನಮ್ಮ ಮುಖಂಡರೇ ತಂದೆ-ತಾಯಿ ಸ್ಥಾನದಲ್ಲಿ ನಿಂತು ನನಗೆ ಆಶೀರ್ವಾದ ಮಾಡಿ ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಇದೇ ವೇಳೆ ಮನವಿ ಮಾಡಿಕೊಂಡರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಇತಿಹಾಸದಲ್ಲೇ ಉಪ ಚುನಾವಣೆ ನಡೆದಿಲ್ಲ, ಈ ಬಾರಿ ನಡೆಯುತ್ತಿದೆ. ಶರತ್ ಮೃದು ಸ್ವಭಾವ ಸಾಫ್ಟ್ ಆಗಿರುತ್ತಾನೆ. ಒತ್ತಡ, ಭಯಕ್ಕೆ ಮಣಿದು ಚುನಾವಣೆಯಿಂದ ಹಿಂದೆ ಸರಿಯುತ್ತಾನೆ ಅಂತಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯಲ್ಲ. ತಾಲೂಕಿನ ಸ್ವಾಭಿಮಾನಕ್ಕಾಗಿ, ಜನಕ್ಕೆ ಕೊಟ್ಟ ಮಾತಿಗಾಗಿ ಚುನಾವಣೆಯಿಂದ ಹಿಂದೆ ಸರಿಯಲ್ಲ ಎಂದರು.

    ಬಚ್ಚೇಗೌಡರು ನಾನು ತಂದೆ-ಮಗನಾದರೂ ನಾವು ಒಟ್ಟಾಗಿ ಇರುತ್ತಿಲ್ಲ. ನಾನು ಚುನಾವಣೆಗೆ ನಿಂತರೆ ತಂದೆ ಬಚ್ಚೇಗೌಡರಿಗೆ ತೊಂದರೆ ಮಾಡುತ್ತಾರೆ ಅಂತ ಪ್ರಚಾರ ಮಾಡಿದ್ದಾರೆ. ತಂದೆಗೆ ತೊಂದರೆಯಾಗಬಾರದು ಅಂತ ನಾನು ನಮ್ಮ ತಂದೆಯವರ ಮನೆ ಬಿಟ್ಟು ಬಂದಿದ್ದೀನಿ ಎಂದರು.

  • ಆನ್‍ಲೈನ್‍ಲ್ಲಿ ಸಿಗ್ತಿದೆ ಗಾಂಜಾ- ಕಾಲೇಜುಗಳೇ ಅಡ್ಡ, ವಿದ್ಯಾರ್ಥಿಗಳಿಗೆ ಕೆಡ್ಡ

    ಆನ್‍ಲೈನ್‍ಲ್ಲಿ ಸಿಗ್ತಿದೆ ಗಾಂಜಾ- ಕಾಲೇಜುಗಳೇ ಅಡ್ಡ, ವಿದ್ಯಾರ್ಥಿಗಳಿಗೆ ಕೆಡ್ಡ

    -ಸಿಂಗಂ ರವಿಚೆನ್ನಣ್ಣನವರ್ ಏರಿಯಾದಲ್ಲೇ ಗಾಂಜಾ ದಂಧೆ

    ಬೆಂಗಳೂರು: ಇತ್ತೀಚೆಗೆ ಜಿಲ್ಲೆಯಾದ್ಯಂತ ಗಾಂಜಾ ಮಾರಾಟ ದಂಧೆ ಮೇಲೆ ಪೊಲೀಸರು ಹೆಚ್ಚು ನಿಗಾ ವಹಿಸಿದ್ದರೂ ಗಾಂಜಾ ಮಾರಾಟ ಗ್ಯಾಂಗ್ ಮಾತ್ರ ಯಾವುದೇ ತಲೆ ಕೆಡಿಸಿಕೊಂಡಿಲ್ಲ. ಏನಾದರೂ ಮಾಡಿಕೊಳ್ಳಿ ಕ್ಯಾರೆ ಮಾಡಲ್ಲ ಎನ್ನುತ್ತ ಸಾಮಾಜಿಕ ಜಾಲತಾಣವನ್ನು ಬಳಸಿ ಗಾಂಜಾ ದಂಧೆಯನ್ನು ಎಗ್ಗಿಲ್ಲದಂತೆ ನಡೆಸುತ್ತಿದ್ದಾರೆ.

    ಸಾಮಾನ್ಯವಾಗಿ ನಾವೆಲ್ಲಾ ಆನ್‍ಲೈನ್‍ನಲ್ಲಿ ಊಟ, ಇಲ್ಲ ಬಟ್ಟೆ, ಎಲೆಕ್ಟ್ರಾನಿಕ್ ಐಟಮ್ಸ್ ಹೀಗೆ ವಸ್ತುಗಳನ್ನ ಆರ್ಡರ್ ಮಾಡಿ ತರಿಸಿಕೊಳ್ಳುತ್ತೇವೆ. ಆದರೆ ಆನ್‍ಲೈನ್‍ನಲ್ಲಿ ಗಾಂಜಾ ಸಿಗುತ್ತೆ ಎಂದರೆ ನಿಜಕ್ಕೂ ಶಾಕ್ ಆಗುತ್ತೆ. ಈ ದಂಧೆ ನಡೆಯುತ್ತಿರೋದು ಬೇರೆಲ್ಲೂ ಅಲ್ಲ, ನಮ್ಮ ಸಿಲಿಕಾನ್ ಸಿಟಿಯಲ್ಲಿ. ಹೌದು ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದಂತೆ ಆನ್‍ಲೈನ್ ಗಾಂಜಾ ಗಂಧೆ ನಡೆಯುತ್ತಿದೆ. ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ ನಾವು ಸುಮ್ನೆ ಇದ್ದರೆ ಹೇಗೆ ಅಂತ ಗಾಂಜಾ ಮಾರಾಟ ಗ್ಯಾಂಗ್ ರಂಗೋಲಿ ಕೆಳಗೆ ನುಗ್ಗಿ ಮಾಸ್ಟರ್ ಪ್ಲಾನ್ ಮಾಡಿದೆ. ಗಾಂಜಾ ದಂಧೆಕೋರರು ಆನ್‍ಲೈನ್‍ಗೂ ಲಗ್ಗೆ ಇಟ್ಟು ಪ್ರತಿಷ್ಠಿತ ಕಾಲೇಜು ಯುವಕ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಗಾಂಜಾ ಮಾರಟ ಮಾಡುತ್ತಿದ್ದಾರೆ. ಈಗಿನ ಯುವಕ, ಯುವತಿಯರಿಗೆ ಅಗತ್ಯತೆಗೆ ಅನುಗುಣವಾಗಿ ಆನ್‍ಲೈನ್‍ನಲ್ಲಿ ಗಾಂಜಾ ಮಾರಾಟ ಮಾಡುವುದನ್ನ ಶುರುವಿಟ್ಟುಕೊಂಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಜಾಲಾ ಹರಡಿಬಿಟ್ಟಿದೆ. ಇತ್ತೀಚೆಗೆ ಆನೇಕಲ್ ತಾಲೂಕಿನಲ್ಲಿ ವಿಬಿಎಚ್‍ಎಸ್ ಅಪಾಟ್‌ರ್ಮೆಂಟ್‌, ಅಲಯನ್ಸ್ ಕಾಲೇಜು ಸೇರಿದಂತೆ ಹಲವೆಡೆ ಗಾಂಜಾ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ, ಅಂತರಾಜ್ಯ ದಂಧೆಕೋರ ಡೇವಿಡ್‍ನನ್ನು ಬಂಧಿಸಿದ್ದರು. ಆತನ ಬಳಿ ಇದ್ದ ಬರೋಬ್ಬರಿ 800 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದರು. ಆದರೂ ಭಯಬೀಳದ ದಂಧೆಕೋರರು ಹೊರ ರಾಜ್ಯಗಳಿಂದ ಬಂದು ವಿಬಿಎಚ್‍ಎಸ್ ಅಪಾಟ್‌ರ್ಮೆಂಟ್‌ ನ ಪ್ಲಾಟ್‍ಗಳನ್ನು ಬಾಡಿಗೆಗೆ ಪಡೆದು, ಆನ್‍ಲೈನ್ ಮೂಲಕ ಗಾಂಜಾ ವ್ಯಾಪಾರ ಶುರುವಿಟ್ಟುಕೊಂಡಿದ್ದಾರೆ. ಗಾಂಜಾ ಬುಕ್ ಮಾಡಿದ ಯುವಕ ಯುವತಿಯರ ಪೇಪರ್ ಮೇಲೆ ಹೆಸರು ಬರೆದು ಯಾರ ಭಯವು ಇಲ್ಲದೆ, ಎಗ್ಗಿಲ್ಲದೆ ಗಾಂಜಾ ಸಪ್ಲೈ ಮಾಡ್ತಿದ್ದಾರೆ.

    ಇಷ್ಟೇ ಅಲ್ಲ ಅವರ ಅಡ್ಡಾಕ್ಕೆ ಸ್ಥಳೀಯರು ಯಾರಾದರೂ ಕಾಲಿಟ್ಟರೆ ಗೇಟ್ ಬಳಿ ಬೌನ್ಸರ್ ಗಳನ್ನು ಇಟ್ಟು, ಯಾರು ಒಳ ಹೋಗದಂತೆ ತಡೆಯುತ್ತಿದ್ದಾರೆ. ಗಾಂಜಾ ಪಡೆದು ಸೇವನೆ ಮಾಡುವ ಪ್ರತಿಷ್ಠಿತ ಕಾಲೇಜಿನ ಯುವಕ ಯುವತಿಯರು ನಡುರಸ್ತೆಯಲ್ಲಿ ನಿಂತು ತೂರಾಡುತ್ತಿರುವ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    https://www.youtube.com/watch?v=gVymkMfbH8A