Tag: anekal

  • 11 ತಿಂಗ್ಳ ಹಿಂದೆಯಷ್ಟೇ ವಿವಾಹವಾಗಿದ್ದ ಗೃಹಿಣಿ ಸಾವು

    11 ತಿಂಗ್ಳ ಹಿಂದೆಯಷ್ಟೇ ವಿವಾಹವಾಗಿದ್ದ ಗೃಹಿಣಿ ಸಾವು

    ಆನೇಕಲ್: ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪದ ನೆರಳೂರು ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರ ಶವ ಪತ್ತೆಯಾಗಿದೆ.

    ಮೃತ ಗೃಹಿಣಿಯನ್ನು ಹೊಸದುರ್ಗ ಮೂಲದ ಲೋಕೇಶ್ವರಿ(29) ಎಂದು ಗುರುತಿಸಲಾಗಿದೆ. ಕಳೆದ 11 ತಿಂಗಳ ಹಿಂದಷ್ಟೇ ಲೋಕೇಶ್ವರಿಯನ್ನು ನವೀನ್ ಕುಮಾರ್ ಎಂಬವನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿ ನೆರಳೂರಿನಲ್ಲಿ ವಾಸಿಸುತ್ತಿದ್ದು, ಶುಕ್ರವಾರ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾಗಿದೆ.

    ಮೃತ ಲೋಕೇಶ್ವರಿ ನಿನ್ನೆ ಸಂಜೆ ತನ್ನ ತಾಯಿಯ ಜೊತೆ ಮಾತನಾಡಿದ್ದರು. ಬಳಿಕ ರಾತ್ರಿ 11 ಗಂಟೆಯ ಸುಮಾರಿಗೆ ಪೊಲೀಸರು ಮೃತ ಮಹಿಳೆಯ ಪೋಷಕರಿಗೆ ಮಗಳು ನೇಣು ಹಾಕಿಕೊಂಡು ಮೃತ ಪಟ್ಟಿದ್ದಾರೆಂದು ಮಾಹಿತಿ ನೀಡಿದ್ದಾರೆ.

    ಮೃತ ಮಹಿಳೆಯ ಪೋಷಕರು ಮಗಳನ್ನು ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅತ್ತಿಬೆಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲು ಮಾಡಿಕೊಂಡು ಪತಿ ನವೀನ್ ಕುಮಾರ್ ನನ್ನು ವಶಕ್ಕೆ ಪಡೆದ ಪೋಲಿಸರು ವಿಚಾರಣೆ ನಡೆಸಿದ್ದಾರೆ.

  • ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗ್ಬೇಡಿ- ರೌಡಿಗಳಿಗೆ ಖಡಕ್ ವಾರ್ನಿಂಗ್

    ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗ್ಬೇಡಿ- ರೌಡಿಗಳಿಗೆ ಖಡಕ್ ವಾರ್ನಿಂಗ್

    ಆನೇಕಲ್: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿಗಳನ್ನು ಕರೆಸಿ ಬೆಂಗಳೂರು ಹೊರವಲಯ ಆನೇಕಲ್ ಪೊಲೀಸ್ ಠಾಣಾ ವಿಭಾಗದಲ್ಲಿ ಪೊಲೀಸರು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

    ಕೊಲೆ, ಕಳ್ಳತನ, ದರೋಡೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಗಳಲ್ಲಿ ಸುಮಾರು 50ಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನು ಪೊಲೀಸ್ ಠಾಣೆಗೆ ಕರೆಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಮುಂದಿನ ದಿನಗಳಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕಬೇಕೆಂದು ಎಚ್ಚರಿಕೆಯನ್ನು ನೀಡಿದ್ದಾರೆ. ಅದರಲ್ಲೂ ಆನೇಕಲ್ ಸುತ್ತಮುತ್ತ ಗಾಂಜಾ ಮಾರಾಟ ಹಾಗೂ ಮನೆಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಾಗ ಕಾನೂನು ಕ್ರಮಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದೆ. ಒಳ್ಳೆಯ ನಡವಳಿಕೆಯಿಂದ ನಡೆದುಕೊಂಡರೆ, ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡಲಾಗುತ್ತದೆ ಎಂಬ ವಿಷಯವನ್ನು ಆನೇಕಲ್ ಪೊಲೀಸ್ ಇನ್ಸ್ ಪೆಕ್ಟರ್ ಕೃಷ್ಣ ಲಮಾಣಿ, ಸಬ್ ಇನ್ಸ್ ಪೆಕ್ಟರ್ ಮುರಳೀಧರ್ ರೌಡಿ ಶೀಟರ್ ಗಳಿಗೆ ಮನವರಿಕೆ ಮಾಡಿಕೊಟ್ಟರು.

  • ಮೋದಿ ಜೊತೆ ಪರೀಕ್ಷಾ ಪೇ ಚರ್ಚೆಗೆ ಆನೇಕಲ್ ವಿದ್ಯಾರ್ಥಿನಿ ಆಯ್ಕೆ

    ಮೋದಿ ಜೊತೆ ಪರೀಕ್ಷಾ ಪೇ ಚರ್ಚೆಗೆ ಆನೇಕಲ್ ವಿದ್ಯಾರ್ಥಿನಿ ಆಯ್ಕೆ

    ಬೆಂಗಳೂರು: ಆನೇಕಲ್ ತಾಲೂಕಿನ ಹೆಬ್ಬಗೋಡಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಭಾವನಾ ಜನವರಿ 20ರಂದು ದೆಹಲಿಯಲ್ಲಿ ನಡೆಯಲಿರುವ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾಗವಹಿಸಲು ಆಯ್ಕೆಯಾಗಿದ್ದಾಳೆ.

    ಬೆಂಗಳೂರು ನಗರ ಜಿಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಈ ಪೈಕಿ ಆನೇಕಲ್ ತಾಲೂಕಿನ ಹೆಬ್ಬಗೋಡಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಭಾವನಾ ಕೂಡ ಒಬ್ಬಳು. ಆನ್‍ಲೈನ್‍ನಲ್ಲಿ ನೀಡಲಾದ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಮೋದಿ ಜೊತೆ ಪರೀಕ್ಷಾ ಪೇ ಚರ್ಚೆಗೆ ಚಿಕ್ಕಬಳ್ಳಾಪುರದ ವಿದ್ಯಾರ್ಥಿ ಆಯ್ಕೆ

    ಭಾವನಾ ತಂದೆ ರಮೇಶ್ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ತಾಯಿ ಭಾರತಿ ಶಾಲೆಯೊಂದರಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಕುಟುಂಬದ ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಪಡೆದಿರುವುದು ಹೆತ್ತವರಿಗೆ ಹಾಗೂ ಗ್ರಾಮಕ್ಕೆ ಹೆಮ್ಮೆ ತಂದಿದೆ. ಇದನ್ನೂ ಓದಿ: ‘ಪರೀಕ್ಷಾ ಪೇ ಚರ್ಚಾ’- ತುಮಕೂರಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

    ವಿದ್ಯಾರ್ಥಿನಿ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಆಕೆ ಓದುತ್ತಿರುವ ಶಾಲೆಯ ಶಿಕ್ಷಕರಲ್ಲಿ ಸಂತಸ ತಂದಿದೆ. ವಿದ್ಯಾರ್ಥಿನಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್ ರಾಮಮೂರ್ತಿ ಮತ್ತು ಮುಖ್ಯೋಪಾಧ್ಯಾಯ ಸಿ. ನಾರಾಯಣಸ್ವಾಮಿ ಅಭಿನಂದಿಸಿದ್ದಾರೆ.

  • ವ್ಯಕ್ತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿಗಳು ಅರೆಸ್ಟ್

    ವ್ಯಕ್ತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿಗಳು ಅರೆಸ್ಟ್

    ಆನೇಕಲ್: ಹಣಕಾಸಿನ ವಿಚಾರಕ್ಕೆ ವ್ಯಕ್ತಿಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿ ಪೈಶಾಚಿಕ ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ.

    ಕಳೆದ ಮೂರನೇ ತಾರೀಖಿನಂದು ಬೆಂಗಳೂರು ಹೊರವಲಯ ಹೆನ್ನಾಗರ ಬಳಿಯ ರೇಣುಕಾ ಯಲ್ಲಮ್ಮ ದೇವಾಲಯದ ಮುಂಭಾಗ ಹೊಸಹಳ್ಳಿ ನಿವಾಸಿ ಜ್ಯೋತಪ್ಪ (51) ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಮಾರಕಸ್ತ್ರಗಳಿಂದ ಹಲ್ಲೆ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಬಳಿಕ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

    ಬಳಿಕ ಕೊಲೆ ಪ್ರಕರಣ ದಾಖಲು ಮಾಡಿಕೊಂಡ ಸೂರ್ಯನಗರ ಪೊಲೀಸರು, ದಾಳಿಗೆ ಒಳಗಾಗಿದ್ದ ವ್ಯಕ್ತಿ ಸಾವಿಗೂ ಮುನ್ನ ಅನುಮಾನ ವ್ಯಕ್ತಪಡಿಸಿದ್ದ ರಜಿಯಾಬೇಗಂ ಎಂಬ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಜ್ಯೋತಪ್ಪ ಹಣದ ವ್ಯವಹಾರ ನಡೆಸುತ್ತಿದ್ದು, ರಜಿಯಾಬೇಗಂಗೆ ಸಾಲವಾಗಿ 20,000 ಹಣವನ್ನು ನೀಡಿದ್ದ ಬಳಿಕ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದ. ಆದರೆ ರಜಿಯಾಬೇಗಂಗೆ ಹಣವನ್ನು ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ. ಆಗ ದೈಹಿಕ ಸಂಪರ್ಕ ಬೆಳೆಸುವಂತೆ ಜ್ಯೋತಪ್ಪ ಹಿಂಸಿಸುತ್ತಿದ್ದ. ಆದ್ದರಿಂದ ಈ ಬಗ್ಗೆ ಪರಿಚಯಸ್ತರಾದ ಲಿಂಗರಾಜು ಬಳಿ ಆಕೆ ಹೇಳಿಕೊಂಡಿದ್ದಳು. ಆಗ ಲಿಂಗರಾಜು ಹಾಗೂ ಆತನ ಸ್ನೇಹಿತರಾದ ಸತೀಶ್ ಮತ್ತು ಶಶಿಕುಮಾರ್ ಸೇರಿ ಕೃತ್ಯವನ್ನು ಎಸೆಗಿದ್ದಾರೆಂದು ಪೊಲೀಸ್ ತನಿಖೆ ವೇಳೆ ಮಹಿಳೆ ಬಾಯ್ಬಿಟ್ಟಿದ್ದಾಳೆ.

    ಬಳಿಕ ಆರೋಪಿಗಳಾದ ರಜಿಯಾಬೇಗಂ, ಲಿಂಗರಾಜು, ಸತೀಶ್ ಮತ್ತು ಶಶಿಕುಮಾರ್ ಅನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದು, ಆರೋಪಿಗಳನ್ನು ಸ್ಥಳ ಮಹಾಜರ್ ಮಾಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ಆಸಿಡ್ ಎರಚಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು- ವ್ಯಕ್ತಿ ಗಂಭೀರ

    ಆಸಿಡ್ ಎರಚಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು- ವ್ಯಕ್ತಿ ಗಂಭೀರ

    ಆನೇಕಲ್(ಬೆಂಗಳೂರು): ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿ ಮೇಲೆ ಆಸಿಡ್ ಎರಚಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ನಲ್ಲಿ ನಡೆದಿದೆ.

    ಆಸಿಡ್ ದಾಳಿಗೆ ಒಳಗಾದವನನ್ನು ಜ್ಯೋತಪ್ಪ (51) ಎಂದು ಗುರುತಿಸಲಾಗಿದೆ. ಬೆಂಗಳೂರು ಹೊರವಲಯ ಹೆನ್ನಾಗರ ಬಳಿಯ ಹೊಸಹಳ್ಳಿ ಗ್ರಾಮದ ನಿವಾಸಿಯಾದ ಜ್ಯೋತಪ್ಪ ಸ್ಥಿತಿ ಸದ್ಯ ಚಿಂತಾನಜನಕವಾಗಿದೆ.

    ಜ್ಯೋತಪ್ಪ ತಮ್ಮ ಸ್ಕೂಟಿಯಲ್ಲಿ ಸಂಜೆ 6 ಗಂಟೆಯ ಸುಮಾರಿಗೆ ಜಿಗಣಿಯಿಂದ ಹೊಸಹಳ್ಳಿ ಗ್ರಾಮದ ಕಡೆಗೆ ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು ಹೆನ್ನಾಗರ ಬಳಿ ಬರುತ್ತಿದ್ದಂತೆಯೇ ಜ್ಯೋತಪ್ಪ ತಲೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ನಂತರ ಆಸಿಡ್ ಹಾಗೂ ಪೆಟ್ರೋಲ್ ಸುರಿದು ಬೆಂಕಿಯನ್ನು ಹಚ್ಚಿ ಪರಾರಿಯಾಗಿದ್ದಾರೆ.

    ಬೆಂಕಿ ಹೊತ್ತಿಕೊಂಡ ಬಳಿಕ ನರಳಾಡುತ್ತ ನೆರವಿಗಾಗಿ ಕಿರುಚಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಜ್ಯೋತಪ್ಪನನ್ನು ರಕ್ಷಿಸಿ ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಿಂದ ದೇಹದ ಶೇ.60 ಭಾಗ ಸಂಪೂರ್ಣ ಸುಟ್ಟು ಹೋಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.

    ಸದ್ಯ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಸೂರ್ಯಸಿಟಿ ಪೊಲೀಸರು ಪರಿಶೀಲನೆ ನಡೆಸಿದ್ದು ಮಾಹಿತಿ ಕಲೆಹಾಕಿ ವಿಚಾರಣೆ ನಡೆಸುತ್ತಿದ್ದಾರೆ.

  • ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪಿಡಿಒ, ಕಂಪ್ಯೂಟರ್ ಆಪರೇಟರ್

    ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪಿಡಿಒ, ಕಂಪ್ಯೂಟರ್ ಆಪರೇಟರ್

    ಬೆಂಗಳೂರು: ಇ-ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಪಂಚಾಯತಿ ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಚೊಕ್ಕಹಳ್ಳಿ ಪಂಚಾಯತಿಯಲ್ಲಿ ನಡೆದಿದೆ.

    ಪಂಚಾಯಿತಿಯಲ್ಲಿ ಹಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿದ್ದ ಪಿಡಿಒ ನರ್ಮದಾ ಹಾಗೂ ಕಂಪ್ಯೂಟರ್ ಆಪರೇಟರ್ ಮುನಿರಾಜು ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ. ಇ-ಖಾತೆಯನ್ನು ಮಾಡಿಕೊಡಲು 6 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಇಂದು ಮುಂಗಡವಾಗಿ 4 ಸಾವಿರ ರೂ.ಗಳನ್ನು ಪಡೆಯುತ್ತಿದ್ದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಎಸಿಬಿ ಡಿವೈಎಸ್‍ಪಿ ಗೋಪಾಲ್ ಜಗ್ಗಿನ್ ನೇತೃತ್ವದ ತಂಡ ದಾಳಿ ನಡೆಸಿ ಹಣದ ಸಮೇತ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

    ಪಂಚಾಯಿತಿಯಲ್ಲಿ ಸಾಮಾನ್ಯ ಜನರು ಯಾವುದೇ ಕೆಲಸ ಮಾಡಿಕೊಡಿ ಎಂದು ಕೇಳಿದರೂ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಈ ಬಗ್ಗೆ ಹಲವು ದಿನಗಳಿಂದ ಎಸಿಬಿ ಕಚೇರಿಗೆ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಲಂಚ ಪಡೆಯುತ್ತಿದ್ದ ಅಧಿಕಾರಿಗಳು ಸದ್ಯ ಎಸಿಬಿ ಬಲೆಗೆ ಬಿದ್ದಿದ್ದಾರೆ.

  • ಚಿಕನ್ ಅಂಗಡಿಗಳ ತ್ಯಾಜ್ಯ ತಿನ್ನಲು ಬಂದ ನಾಯಿಗೆ ಸ್ಕೂಟಿ ಡಿಕ್ಕಿ- ಸವಾರ ಸಾವು

    ಚಿಕನ್ ಅಂಗಡಿಗಳ ತ್ಯಾಜ್ಯ ತಿನ್ನಲು ಬಂದ ನಾಯಿಗೆ ಸ್ಕೂಟಿ ಡಿಕ್ಕಿ- ಸವಾರ ಸಾವು

    ಬೆಂಗಳೂರು: ರಸ್ತೆ ಬದಿಗೆ ಹಾಕಿದ್ದ ಚಿಕನ್ ಅಂಗಡಿಗಳ ತ್ಯಾಜ್ಯ ತಿನ್ನಲು ಬಂದಿದ್ದ ನಾಯಿಗೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಗುಡ್ನಹಳ್ಳಿ ಕೆರೆಯ ಬಳಿ ನಡೆದಿದೆ.

    ಹೊಸೂರು ರಸ್ತೆಯ ಕುಮಾರನಹಳ್ಳಿ ನಿವಾಸಿ ಮುನಿಯಲ್ಲಪ್ಪ ಮೃತ ಸವಾರ. ಮುನಿಯಲ್ಲಪ್ಪ ಶನಿವಾರ ರಾತ್ರಿ ಆನೇಕಲ್ ಪಟ್ಟಣದಿಂದ ಕುಮಾರನಹಳ್ಳಿ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಈ ವೇಳೆ ಗುಡ್ನಹಳ್ಳಿ ಕೆರೆಯ ಮೇಲೆ ನಾಯಿಗಳು ಅಡ್ಡಲಾಗಿ ಬಂದ ಪರಿಣಾಮ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದಾರೆ. ತಲೆ ಹಾಗೂ ಎದೆಯ ಭಾಗಕ್ಕೆ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವದಿಂದ ಮುನಿಯಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಆನೇಕಲ್ ಪೋಲಿಸರು ಪರಿಶೀಲನೆ ನಡೆಸಿದರು. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

    ಗುಡ್ನಹಳ್ಳಿ ಕೆರೆ ಏರಿ ಮೇಲೆ ಪಟ್ಟಣದ ಚಿಕನ್ ಅಂಗಡಿಗಳ ತ್ಯಾಜ್ಯವನ್ನು ತಂದು ಹಾಕಲಾಗುತ್ತಿದೆ. ಇದರಿಂದಾಗಿ ವಾಸನೆ ಹಿಡಿದು ಬರುವ ನಾಯಿಗಳು ರಸ್ತೆಯಲ್ಲಿ ಓಡಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಚಿಕನ್ ಅಂಗಡಿಗಳ ತ್ಯಾಜ್ಯವನ್ನು ಎಸೆದು ಹೋಗುತ್ತಿರುವುದರಿಂದ ಸಾಕಷ್ಟು ಅಪಘಾತ ಪ್ರಕರಣಗಳು ನಡೆಯುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

  • ಸರಿಯಾಗಿ ಕೆಲಸ ನಿರ್ವಹಿಸಿದ ಅಧಿಕಾರಿಗಳಿಗೆ ಉಪಲೋಕಾಯುಕ್ತರಿಂದ ಕ್ಲಾಸ್

    ಸರಿಯಾಗಿ ಕೆಲಸ ನಿರ್ವಹಿಸಿದ ಅಧಿಕಾರಿಗಳಿಗೆ ಉಪಲೋಕಾಯುಕ್ತರಿಂದ ಕ್ಲಾಸ್

    ಬೆಂಗಳೂರು: ಉಪಲೋಕಾಯುಕ್ತ ಎನ್. ಆನಂದ್ ನೇತೃತ್ವದ ತಂಡವು ಇಂದು ಬೆಳಿಗ್ಗೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಕಚೇರಿಯ ಸಮಯವಾಗಿದ್ದರೂ ಬಾರದ ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತರು ಗರಂ ಆಗಿ, ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಆನೇಕಲ್ ತಾಲೂಕು ಕಚೇರಿಯಲ್ಲಿ ಖಾತೆ ಪಹಣಿಗಳನ್ನು ಸರಿಯಾದ ಸಮಯಕ್ಕೆ ಮಾಡಿಕೊಡುತ್ತಿಲ್ಲ. ಕಡತಗಳ ವಿಲೇವಾರಿ ಮಾಡದೆ ಸಾರ್ವಜನಿಕರಿಗೆ ವಿಳಂಬ ಮಾಡಲಾಗುತ್ತಿದೆ ಎಂಬ ದೂರು ಬಂದಿದ್ದವು. ಈ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದರು.

    ಸಾರ್ವಜನಿಕರಿಗೆ ಪಹಣಿ ಹಾಗೂ ಖಾತೆ ಮಾಡಿಕೊಡಲು ಯಾಕೆ ವಿಳಂಬ ನೀತಿ ಅನುಸರಿಸುತ್ತಿದ್ದೀರಿ? ಈ ಬಗ್ಗೆ ತನಿಖೆ ನಡೆಸಬೇಕು ಎಂದು ಎನ್. ಆನಂದ್ ಸೂಚನೆ ನೀಡಿದರು. ಉಪಲೋಕಾಯುಕ್ತರ ಭೇಟಿ ಸಮಯದಲ್ಲಿ ಆನೇಕಲ್ ತಾಲೂಕು ಕಚೇರಿಯಲ್ಲಿರುವ ಅಧಿಕಾರಿಗಳು ಬರದಿರುವುದನ್ನು ಕಂಡು ಅಧಿಕಾರಿಗಳಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

    ಇದೇ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಆನೇಕಲ್ ತಾಲೂಕು ಕಚೇರಿಯಲ್ಲಿ ರೈತರ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ ಕೇಸ್ ವರ್ಕರ್, ಸರ್ವೆಯರ್ ಗಳು ಹಾಗೂ ಇತರೆ ಅಧಿಕಾರಿಗಳು ಹಣ ಪಡೆದು ಕೆಲಸ ಮಾಡಿಕೊಡುತ್ತಾರೆ ಎಂದು ದೂರಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪಲೋಕಾಯುಕ್ತರು, ದೂರು ಪಡೆದು ಇದರ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

  • ಮನೆ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

    ಮನೆ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

    ಬೆಂಗಳೂರು: ಮನೆಯ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಶಾಮರಾಮ್ ಲೇಔಟಿನ ರಾಜಣ್ಣ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಪತ್ನಿ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಮನೆಯಲ್ಲಿ ರಾಜಣ್ಣ ಹಾಗೂ ಪತ್ನಿ ಇಬ್ಬರೇ ವಾಸವಿದ್ದು, ಪತ್ನಿ ಜೊತೆ ಆಸ್ಪತ್ರೆಯಲ್ಲಿ ರಾಜಣ್ಣ ಉಳಿದುಕೊಂಡಿದ್ದ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಿ ಹೋಗಿದ್ದರು. ಇದನ್ನು ಗಮನಿಸಿದ್ದ ಕಳ್ಳರು ರಾತ್ರಿ ರಾಜಣ್ಣ ಮನೆಗೆ ಕನ್ನ ಹಾಕಿದ್ದಾರೆ. ಗುರುವಾರ ಆಸ್ಪತ್ರೆಯಿಂದ ಪತ್ನಿಯನ್ನು ಡಿಸ್ಚಾರ್ಜ್ ಮಾಡಿಸಲು ರಾಜಣ್ಣ ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಹಣ ತರಲು ಮನೆಗೆ ಬಂದಾಗ 4.50 ಲಕ್ಷ ರೂ. ನಗದು ಹಾಗೂ 200 ಗ್ರಾಂ ಚಿನ್ನ, 3 ಕೆ.ಜಿ. ಬೆಳ್ಳಿಯನ್ನು ಕಳ್ಳತನ ಮಾಡಿರುವುದು ಪತ್ತೆಯಾಗಿದೆ.

    ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಆನೇಕಲ್ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೇಕಲ್ ಪಟ್ಟಣದಲ್ಲಿ ಕಳೆದ ಎರಡು ಮೂರು ತಿಂಗಳಿಂದ ನಿರಂತರವಾಗಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಪೋಲಿಸರು ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಕಳ್ಳರ ಹಾವಳಿ ತಡೆಗಟ್ಟಲು ಸಾಧ್ಯವಾಗಿಲ್ಲ. ಕಳೆದ ಹದಿನೈದು ದಿನಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಜನರಲ್ಲಿ ಅರಿವು ಮೂಡಿಸಿ, ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಇದರಿಂದಾಗಿ ಕಳ್ಳತನ ಪ್ರಕರಣಗಳು ನಿಯಂತ್ರಣಕ್ಕೆ ಬಂದವು ಎನ್ನುವಷ್ಟರಲ್ಲಿ ಇದೀಗ ರಾಜಣ್ಣ ಅವರ ಮನೆಯಲ್ಲಿ ಕಳ್ಳತನವಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

  • ಬಡತನ, ಅಂಗವೈಕಲ್ಯ ಮೆಟ್ಟಿನಿಂತು ಕೆಎಎಸ್ ಪರೀಕ್ಷೆಯಲ್ಲಿ ಪಾಸ್

    ಬಡತನ, ಅಂಗವೈಕಲ್ಯ ಮೆಟ್ಟಿನಿಂತು ಕೆಎಎಸ್ ಪರೀಕ್ಷೆಯಲ್ಲಿ ಪಾಸ್

    ಬೆಂಗಳೂರು: ಒಂದು ಬಡ ರೈತ ಕುಟುಂಬದಲ್ಲಿ ಹುಟ್ಟಿದ ಮಹಿಳೆಯೊಬ್ಬರು ಅಂಗವೈಕಲ್ಯವಿದ್ದರೂ, ಬಡತನವಿದ್ದರೂ ಪುಟ್ಟ ಗ್ರಾಮದಲ್ಲಿ ಹುಟ್ಟಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ.

    ಹುಟ್ಟುತ್ತಲೇ ಅಂಗವೈಕಲ್ಯದಿಂದ ಹುಟ್ಟುವವರು ಇದು ದೊಡ್ಡ ಶಾಪ ಅಂದುಕೊಳ್ಳುತ್ತಾರೆ. ಅದರೆ ಅದೇ ಅಂಗವೈಕಲ್ಯ ನಮ್ಮ ಶಕ್ತಿ ಎಂದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಗ್ರಾಮೀಣ ಭಾಗದ ಒಂದು ಪುಟ್ಟ ಗ್ರಾಮ ನಾಗನಾಯಕನಹಳ್ಳಿಯಲ್ಲಿ ಜನಸಿದ ಗೌರಮ್ಮ ಸಾಧನೆ ಮಾಡಿದ್ದಾರೆ. ಪದವಿ ಮುಗಿಸಿ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಓದುವ ಛಲವನ್ನು ಬಿಡದೆ ಸಾಧನೆ ಮಾಡಿದ್ದಾರೆ. ರೈತ ಕುಟುಂಬದಲ್ಲಿ ಬೆಳೆದಿದ್ದ ಗೌರಮ್ಮ ಅವರು ಈಗ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಇಡೀ ಕುಟುಂಬಕ್ಕೂ ಹಾಗೂ ತಾಲೂಕಿಗೆ ಹೆಮ್ಮೆ ತರುವಂತಹ ಸಾಧನೆ ಮಾಡಿ ತೋರಿಸಿದ್ದಾರೆ. ಇದನ್ನೂ ಓದಿ: ಕೆಎಎಸ್ ಪರೀಕ್ಷೆಯಲ್ಲಿ ಪಾಸ್ – ಕೂಲಿ ಮಾಡಿ ಓದಿಸಿದ್ದ ತಾಯಿಗೆ ಮಗನ ಗಿಫ್ಟ್

    ಹುಟ್ಟುತ್ತಲೇ ಅಂಗವೈಕಲ್ಯದಿಂದ ಹುಟ್ಟಿದ್ದ ಗೌರಮ್ಮ ಕುಟುಂಬದ ಸಹಕಾರದಿಂದ ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಬಿಟಿಎಲ್ ಕಾಲೇಜಿನಲ್ಲಿ ಪದವಿ ಮುಗಿಸಿದ ಬಳಿಕ ತಾವು ಓದಿದ್ದ ಆನೇಕಲ್ ತಾಲೂಕಿನ ಇಗ್ಗಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ ಐಎಎಸ್ ಹಾಗೂ ಕೆಎಎಸ್ ಪರೀಕ್ಷೆ ಬರೆದು ಸಾಧನೆ ಮಾಡಬೇಕೆಂದು ಗೌರಮ್ಮ ಅವರು ಛಲ ಹೊಂದಿದ್ದರು. ಅವರ ತಂದೆಗೂ ಸಹ ಮಗಳನ್ನು ಚೆನ್ನಾಗಿ ಓದಿಸಬೇಕೆಂದು ಕನಸು ಇತ್ತು. ಆದ್ದರಿಂದ ವ್ಯವಸಾಯ ಮಾಡುತ್ತಲೇ ಮಗಳಿಗೆ ವಿಧ್ಯಾಭ್ಯಾಸ ಮಾಡಿಸಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯ 12 ಮಂದಿ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆ

    ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಲೇ ಕೆಎಎಸ್ ಪರೀಕ್ಷೆಗೆ ತಯಾರಿ ಮಾಡಿಕೊಂಡು, ಪರೀಕ್ಷೆ ಎದುರಿಸಿದ ಗೌರಮ್ಮ ಅವರು ಮೊದಲನೇ ಹಂತದಲ್ಲಿಯೇ ತಹಶೀಲ್ದಾರ್ ಗ್ರೇಡ್ ಪರೀಕ್ಷೆ ಬರೆದು 1,500 ಅಂಕಗಳಿಗೆ 884 ಅಂಕ ಪಡೆಯುವ ಮೂಲಕ ಉತ್ತೀರ್ಣರಾಗಿದ್ದಾರೆ. ತಮ್ಮ ಸಾಧನೆಯಿಂದ ಕುಟುಂಬಕ್ಕೆ ಹಾಗೂ ತಾಲೂಕಿಗೆ ಹೆಮ್ಮೆ ತಂದು ಕೊಟ್ಟಿದ್ದಾರೆ.

    ಗೌರಮ್ಮ ತಮ್ಮ ಗುರಿ ಹಾಗೂ ತಂದೆಯ ಆಸೆಯಂತೆ ಓದುವಾಗ ಸಾಕಷ್ಟು ಅಡೆತಡೆಗಳು ಎದುರಾದರು ಯಾವುದಕ್ಕೂ ಜಗ್ಗಲಿಲ್ಲ. ತಮ್ಮ ಕಠಿಣ ಪರಿಶ್ರಮ ಹಾಗೂ ಕುಟುಂಬದ ಸಹಕಾರದಿಂದ ಸಾಧನೆ ಮಾಡಿದ್ದಾರೆ. ಗೌರಮ್ಮ ಪೋಷಕರಿಗೆ ಏಳು ಜನ ಮಕ್ಕಳಿದ್ದು, ಗೌರಮ್ಮ ಕೊನೆಯ ಮಗಳು. ಕಷ್ಟದ ಸಂದರ್ಭದಲ್ಲಿಯೂ ಎಲ್ಲಾ ಮಕ್ಕಳನ್ನು ಹೆತ್ತವರು ಒಂಬತ್ತನೇ ಹಾಗೂ ಹತ್ತನೇ ತರಗತಿ ಓದಿಸಿದ್ದು, ಕೊನೆಯ ಮಗಳಾದ ಗೌರಮ್ಮ ಚೆನ್ನಾಗಿ ಓದಬೇಕು, ಉನ್ನತ ಸ್ಥಾನಕ್ಕೆ ಹೋಗಬೇಕೆನ್ನುವುದು ಅವರ ತಂದೆಯ ಕನಸಾಗಿತ್ತು. ಕಳೆದ ಮೂರು ವರ್ಷಗಳ ಹಿಂದೆ ತಂದೆ ಪಿಲ್ಲಣ್ಣ ಮೃತ ಪಟ್ಟರು ಸಹ ತಮ್ಮ ಛಲವನ್ನು ಬಿಡದೆ ಕುಟುಂಬದ ಸಹಕಾರದಿಂದ ಓದಿ, ಇಂದು ಗೌರಮ್ಮ ತಂದೆಯ ಕನಸನ್ನು ನನಸು ಮಾಡಿದ್ದಾರೆ. ಈ ಸಾಧನೆಯಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆಂದು ಗೌರಮ್ಮ ತಾಯಿ ಕೃಷ್ಣಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಣ್ಣಂದಿರ ಆಸೆ ಈಡೇರಿಸಿದ ಸಹೋದರ

    ಅಂಗವೈಕಲ್ಯ ಹಾಗೂ ಬಡತನದ ನಡುವೆಯೂ ಒಂದು ಪುಟ್ಟ ಹಳ್ಳಿಯ ಹೆಣ್ಣುಮಗಳು ಎಲ್ಲರೂ ಮೆಚ್ಚುವಂತಹ ಸಾಧನೆ ಮಾಡಿದ್ದು ಕುಟುಂಬದವರಿಗೆ ಹಾಗೂ ತಾಲೂಕಿನ ಜನರಿಗೆ ಹೆಮ್ಮೆ ತಂದಿದೆ. ಅಂಗವೈಕಲ್ಯ ಹಾಗೂ ಬಡತನ ದೊಡ್ಡ ಶಾಪ ಅಂದುಕೊಳ್ಳುವಂತವರಿಗೆ ಗೌರಮ್ಮರ ಈ ಸಾಧನೆಯಿಂದ ನಿರಂತರ ಪರಿಶ್ರಮ ಹಾಗೂ ಶ್ರದ್ಧೆ ಇದ್ದರೆ ಯಾವುದನ್ನು ಬೇಕಾದರು ಸಾಧಿಸಿಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ.