Tag: anekal

  • ಅರಣ್ಯ ಸಿಬ್ಬಂದಿಯ ಜೀಪ್ ಮೇಲೆ ದಾಳಿಗೆ ಯತ್ನಿಸಿದ ಕಾಡಾನೆ

    ಅರಣ್ಯ ಸಿಬ್ಬಂದಿಯ ಜೀಪ್ ಮೇಲೆ ದಾಳಿಗೆ ಯತ್ನಿಸಿದ ಕಾಡಾನೆ

    ಚಾಮರಾಜನಗರ: ಕಾಡಾನೆಯೊಂದು ಅರಣ್ಯ ಸಿಬ್ಬಂದಿಯ ಜೀಪ್ ಮೇಲೆ ದಾಳಿ ಮಾಡಲು ಯತ್ನಿಸಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಯಡಿಯಾಳ ಅರಣ್ಯ ವಲಯದಲ್ಲಿ ನಡೆದಿದೆ.

    ಕಾಡಾನೆಗಳು ಕಾಡಂಚಿನ ಗ್ರಾಮಗಳ ಕಡೆ ಬಾರದಂತೆ ರೈಲ್ವೇ ಹಳಿ ಕಂಬಿಗಳನ್ನು ಅಳವಡಿಸಲಾಗಿದೆ. ರೈಲ್ವೇ ಹಳಿ ಕಂಬಿಯನ್ನು ದಾಟಿ ಬರಲು ಪುಂಡಾನೆಯೊಂದು ಯತ್ನಿಸಿದೆ. ಆದರೆ ಒಂಟಿ ಸಲಗ ರೈಲ್ವೇ ಹಳಿ ಕಂಬಿ ದಾಟಿ ಹೊರಬರಲು ವಿಫಲವಾಗಿತ್ತು. ಬಳಿಕ ಇದೇ ಸಂಧರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ ಅರಣ್ಯ ಸಿಬ್ಬಂದಿಯ ಜೀಪ್ ಅನ್ನು ಕಂಡ ಆನೆ ಘೀಳಿಡುತ್ತಾ ದಾಳಿ ಮಾಡಲು ಮುಂದಾಗಿತ್ತು. ಕೂಡಲೇ ಅರಣ್ಯ ಸಿಬ್ಬಂದಿ ಸಿಡಿಮದ್ದು ಸಿಡಿಸಿ ಆನೆಯನ್ನು ಹಿಮ್ಮೆಟ್ಟಿಸಿದ್ದಾರೆ.

    ಆನೆಯನ್ನು ಹಿಮ್ಮೆಟ್ಟಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಂಡಿನ ಸದ್ದಿಗೆ ಭಯಗೊಂಡ ಆನೆ ಓಡಿ ಹೋಗಿತ್ತು.

  • ವೇಲ್‍ನಿಂದ ಸೊಂಟಕ್ಕೆ ಮಕ್ಕಳಿಬ್ಬರನ್ನ ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ

    ವೇಲ್‍ನಿಂದ ಸೊಂಟಕ್ಕೆ ಮಕ್ಕಳಿಬ್ಬರನ್ನ ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ

    – ಗುರುತಿಗಾಗಿ ಪೊಲೀಸರು ಹುಡುಕಾಟ

    ಬೆಂಗಳೂರು: ತಾಯಿಯೊಬ್ಬಳು ತನ್ನಿಬ್ಬರು ಮಕ್ಕಳನ್ನು ವೇಲ್‍ನಲ್ಲಿ ತನ್ನ ಸೊಂಟಕ್ಕೆ ಕಟ್ಟಿಕೊಂಡು ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನಲ್ಲಿ ನಡೆದಿದೆ.

    ಇಂದು ಬೆಳ್ಳಂಬೆಳಗ್ಗೆ ಆನೇಕಲ್ ಸಮೀಪದ ಹೆನ್ನಾಗರ ಗ್ರಾಮ ಪಂಚಾಯತಿಯ ಕೆರೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಮೃತ ದೇಹಗಳು ತೇಲುತ್ತಿದ್ದವು. ವಾಯು ವಿಹಾರಕ್ಕೆಂದು ಬಂದಿದ್ದ ಗ್ರಾಮಸ್ಥರು ಮೃತದೇಹವನ್ನು ನೋಡಿ ಕೂಡಲೇ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ತೆಪ್ಪದ ಮೂಲಕ ಹೊರತೆಗೆದ್ದಾರೆ.

    ಮೃತ ತಾಯಿ ಮತ್ತು ಇಬ್ಬರು ಮಕ್ಕಳು ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯ ಗ್ರಾಮಸ್ಥರು, ಮಹಿಳೆಯನ್ನು ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೋಡಿಲ್ಲ. ಹೀಗಾಗಿ ಅವರ ಗುರುತು ಪತ್ತೆಯಾಗುತ್ತಿಲ್ಲ ಎಂದಿದ್ದಾರೆ.

    ಜಿಗಿಣಿ ಪೊಲೀಸರು ಸಹ ಮೃತರ ಗುರುತು ಪತ್ತೆಗಾಗಿ ಸ್ಥಳೀಯರನ್ನು ವಿಚಾರಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಸದ್ಯಕ್ಕೆ ಮೃತಪಟ್ಟವರು ಯಾರು? ಅವರ ಹಿನ್ನೆಲೆ ಏನು? ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

  • ಹೊಸಕೋಟೆಯಲ್ಲಿ ಇನ್ನೂ ಮುಗಿದಿಲ್ಲ ಫೈಟ್- ಬಚ್ಚೇಗೌಡ ಫ್ಯಾಮಿಲಿಗೆ ಎಂಟಿಬಿ ಸವಾಲು

    ಹೊಸಕೋಟೆಯಲ್ಲಿ ಇನ್ನೂ ಮುಗಿದಿಲ್ಲ ಫೈಟ್- ಬಚ್ಚೇಗೌಡ ಫ್ಯಾಮಿಲಿಗೆ ಎಂಟಿಬಿ ಸವಾಲು

    ಆನೇಕಲ್: ಬಹಿರಂಗ ವೇದಿಕೆಯೊಂದರಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಸಂಸದ ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡಗೆ ಚಾಲೆಂಜ್ ಮಾಡಿದ್ದು, ಹೊಸಕೋಟೆಯಲ್ಲಿ ಇನ್ನೂ ಫೈಟ್ ಮುಗಿದಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಎಂಟಿಬಿ, ನಿಮ್ಮಿಬ್ಬರ ಅನುದಾನದಲ್ಲಿ ನಡೆಯುವ ಕಾಮಗಾರಿಯ ಪೂಜೆ ನೀವು ಮಾಡಿ. ಜನರಿಗೆ ಯಾರ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬುದು ತಿಳಿಯಲಿ. ನಾನು ತಂದ ಅನುದಾನದ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಿ ತಮ್ಮ ಅನುದಾನ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಎಂಟಿಬಿ ಟಾಂಗ್ ನೀಡಿದರು.

    ಶಾಸಕರ ನಿಧಿ ಕೇವಲ 50 ಲಕ್ಷ ಮಾತ್ರ ಇದೆ. ಈಗ ನಡೆಯುತ್ತಿರೋ ಕಾಮಗಾರಿಗಳು ಕೋಟಿ ಲೆಕ್ಕದ ಅನುದಾನ ನಾನು ತಂದದ್ದು. ಇನ್ನು ಕೇವಲ 25 ದಿನದಲ್ಲಿ 20 ಕೋಟಿ ಅನುದಾನ ಬರುತ್ತೆ. ಅದರಲ್ಲಿ ಹೊಸಕೋಟೆಯ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಮಾಡಲಾಗುತ್ತೆ. ನಾನು 3 ಬಾರಿ ಶಾಸಕನಾಗಿದ್ದವನು, 6 ತಿಂಗಳು ಮಂತ್ರಿ ಆಗಿದ್ದಾಗ ತಂದ ಅನುದಾನವಾಗಿದೆ ಎಂದರು.

    ಕಾವೇರಿ ನೀರು ಹೊಸಕೋಟೆಗೆ ಕೊಡಲು ಯಡಿಯೂರಪ್ಪ ಒಪ್ಪಿದ್ದಾರೆ. ಈ ಕೆಲಸಗಳು ನನ್ನ ಅನುದಾನದಲ್ಲಿ ಬಂದವು. ಅಪ್ಪ ಲೋಕಸಭಾ ಸದಸ್ಯ, ಮಗ ಶಾಸಕ ಇವರಿಬ್ಬರೂ ಹೊಸಕೋಟೆಗೆ ಕೊಟ್ಟ ಅನುದಾನ ಬಹಿರಂಗಪಡಿಸಲಿ ಎಂದು ಅಪ್ಪ- ಮಗನಿಗೆ ಎಂಟಿಬಿ ಸವಾಲೆಸೆದರು.

  • ಚೀಟಿ ವ್ಯವಹಾರ- 8 ಕೋಟಿ ಹಣದೊಂದಿಗೆ ಮಹಿಳೆ ಪರಾರಿ

    ಚೀಟಿ ವ್ಯವಹಾರ- 8 ಕೋಟಿ ಹಣದೊಂದಿಗೆ ಮಹಿಳೆ ಪರಾರಿ

    ಬೆಂಗಳೂರು: ಜನ ಕಷ್ಟ ಪಟ್ಟು ಸಂಪಾದನೆ ಮಾಡಿದ ಹಣವನ್ನು ಸ್ವಲ್ಪವಾದರೂ ಕೂಡಿಡಬೇಕೆಂದು ಚೀಟಿ ಹಾಕುತ್ತಾರೆ. ಕಷ್ಟವಾದರೂ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಹಣ ಕಟ್ಟುತ್ತಾರೆ. ಹೀಗೆ 100ಕ್ಕೂ ಹೆಚ್ಚು ಜನರ ಬಳಿ ಹಣ ಕಟ್ಟಿಸಿಕೊಂಡು ಮಹಿಳೆ ಪರಾರಿಯಾಗಿದ್ದಾಳೆ.

    ಬೆಂಗಳೂರು ಗ್ರಾಮಂತರ ಜಿಲ್ಲೆಯ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಪುರದಲ್ಲಿ ಘಟನೆ ನಡೆದಿದ್ದು, ಕಳೆದ ಐದಾರು ವರ್ಷಗಳಿಂದ ಬಸವನಪುರದಲ್ಲಿ ನೆಲೆಸಿದ್ದ ಮಂಜುಳಾ, ಚೀಟಿ ವ್ಯವಹಾರ ನಡೆಸುತ್ತಿದ್ದಳು. ಆಕೆಯನ್ನು ನಂಬಿ ಜನ ಲಕ್ಷಾಂತರ ಮೌಲ್ಯದ ಚೀಟಿಗಳನ್ನು ಹಾಕಿದ್ದರು.

    ಸುಮಾರು ನೂರಕ್ಕೂ ಹೆಚ್ಚು ಜನರ ಬಳಿ 8 ಕೋಟಿ ರೂ.ಗೂ ಅಧಿಕ ಹಣವನ್ನು ಕಟ್ಟಿಸಿಕೊಂಡಿದ್ದ ಮಂಜುಳಾ, ಗ್ರಾಮಸ್ಥರಿಗೆ ಪಂಗನಾಮ ಹಾಕಿ ಊರನ್ನೇ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾಳೆ. ಇತ್ತ ಕಷ್ಟ ಕಾಲಕ್ಕೆ ಇರಲೆಂದು ಚೀಟಿ ಹಾಕಿದ್ದ ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಮ್ಮ ಹಣ ವಾಪಸ್ ಕೊಡಿಸುವಂತೆ ಪೊಲೀಸರ ಬಳಿ ಕಣ್ಣೀರು ಹಾಕುತ್ತಿದ್ದಾರೆ.

    ಮೊದಲು ಚೀಟಿ ಹಣವನ್ನು ಕಾಲ ಕಾಲಕ್ಕೆ ನೀಡುತ್ತ ಬಂದ ಮಂಜುಳಾ, ಜನರ ಬಳಿ ವಿಶ್ವಾಸದಿಂದ ನಡೆದುಕೊಂಡಿದ್ದಳು. ಬಳಿಕ ಕೋಟಿ ಕೋಟಿ ರೂಪಾಯಿ ಮೌಲ್ಯದ ಚೀಟಿಗಳನ್ನು ನಡೆಸಲು ಶುರು ಮಾಡಿದ್ದು, ತಿಂಗಳಿಗೆ ಲಕ್ಷಾಂತರ ರೂ. ಹಣವನ್ನು ಜನರಿಂದ ವಸೂಲಿ ಮಾಡುತ್ತಿದ್ದಳು. ಆದರೆ ಕಳೆದ ಒಂದು ವಾರದ ಹಿಂದೆ ಏಕಾಏಕಿ ಮನೆ ಖಾಲಿ ಮಾಡಿರುವ ಮಂಜುಳಾ ಗ್ರಾಮಸ್ಥರ ಬಳಿ ಕಟ್ಟಿಸಿಕೊಂಡಿದ್ದ ಸುಮಾರು 8 ಕೋಟಿ ರೂ.ಗೂ ಅಧಿಕ ಮೌಲ್ಯದ ಚೀಟಿ ಹಣವನ್ನು ತೆಗೆದುಕೊಂಡು ರಾತ್ರೋರಾತ್ರಿ ಊರನ್ನೇ ಖಾಲಿ ಮಾಡಿ ಪರಾರಿಯಾಗಿದ್ದಾಳೆ.

    ಚೀಟಿ ಹಾಕಿದವರಲ್ಲಿ ಅತೀ ಹೆಚ್ಚು ಗಾರ್ಮೆಂಟ್ಸ್ ನೌಕರರು, ಆಟೋ ಡ್ರೈವರ್, ದಿನಗೂಲಿ ನೌಕರರೇ ಇದ್ದು, ಹಣ ಕಳೆದುಕೊಂಡ ಜನ ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

    ಮೊದಲು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಖತರ್ನಾಕ್ ಮಂಜುಳಾ ಬಳಿಕ ಚೀಟಿ ವ್ಯವಹಾರ ಆರಂಭಿಸಿದ್ದಳು. ಗಾರ್ಮೆಂಟ್ಸ್ ನಲ್ಲಿ ಪರಿಚಯವಿದ್ದ ಮಹಿಳೆಯರನ್ನು ಮೊದಲು ಟಾರ್ಗೆಟ್ ಮಾಡಿಕೊಂಡ ಈಕೆ, ಅವರ ಬಳಿ ಚೀಟಿ ಹಾಕಿಸಿಕೊಂಡಿದ್ದಳು. ಇದೇ ಚೀಟಿ ವ್ಯವಹಾರದ ಮೂಲಕವೇ ಲಕ್ಷಾಂತರ ರೂಪಾಯಿ ಹಣವನ್ನು ಸಂಪಾದನೆ ಮಾಡಿ, ಭವ್ಯವಾದ ಸ್ವಂತ ಮನೆಯನ್ನು ಸಹ ಖರೀದಿ ಮಾಡಿದ್ದಳು. ಬಣ್ಣದ ಮಾತಿನಿಂದ ಜನರಿಗೆ ಮಂಕು ಬೂದಿ ಎರಚಿದ್ದಳು. ಇದೀಗ ತನ್ನ ಸ್ವಂತ ಮನೆಯನ್ನೂ ಮಾರಿಕೊಂಡು ಪರಾರಿಯಾಗಿದ್ದು, ಹಣ ಕಳೆದುಕೊಂಡವರು ಹುಳಿಮಾವು ಪೊಲೀಸ್ ಠಾಣೆ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.

  • ಪ್ರೀತ್ಸಿ ಮದ್ವೆಯಾಗಿದ್ದ ನವ ವಿವಾಹಿತೆ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆ

    ಪ್ರೀತ್ಸಿ ಮದ್ವೆಯಾಗಿದ್ದ ನವ ವಿವಾಹಿತೆ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆ

    ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆಯಾದ ಘಟನೆ ಆನೇಕಲ್ ತಾಲೂಕಿನ ಹಿಲಲಿಗೆ ರೈಲ್ವೆ ಸ್ಟೇಷನ್ ಬಳಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಚಿತ್ರದುರ್ಗ ಮೂಲದ ಅರುಣಾಕ್ಷಿ ಶವವಾಗಿ ಪತ್ತೆಯಾದ ನವವಿವಾಹಿತೆ. ಅರುಣಾಕ್ಷಿ ಏಳು ತಿಂಗಳ ಹಿಂದೆಯಷ್ಟೇ ಆನೇಕಲ್‍ನ ರಾಚಮಾನಹಳ್ಳಿ ನಿವಾಸಿ ಶಿವಕುಮಾರ್ ಜೊತೆಗೆ ಮದುವೆ ಆಗಿತ್ತು. ಸೋಮವಾರ ರಾತ್ರಿಯೇ ಅರುಣಾಕ್ಷಿ ಕೊಲೆಯಾಗಿದ್ದಾಳೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ಅರುಣಾಕ್ಷಿ ಕೆಲವು ವರ್ಷಗಳ ಹಿಂದೆ ಓದಿಗಾಗಿ ಕುಟುಂಬದ ಜೊತೆಗೆ ಬಂದಿದ್ದಳು. ಆದರೆ ತನ್ನ ಕಾಲೇಜು ಬಳಿಯೇ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಎಂಬಾತನ ಪ್ರೇಮ ಪಾಶದಲ್ಲಿ ಬಿದ್ದಿದ್ದಳು. ಇಬ್ಬರೂ ಬೆಂಗಳೂರಿನ ಬೀದಿ ಬೀದಿ ಸುತ್ತಾಡಿದ್ದರು. ಸುಮಾರು 8 ತಿಂಗಳ ಹಿಂದೆ ಮನೆಯ ವಿರೋಧದ ನಡುವೆಯೂ ಅರುಣಾಕ್ಷಿ ಹಾಗೂ ಶಿವಕುಮಾರ್ ಮದುವೆಯಾಗಿದ್ದರು.

    ಕಳೆದು ಒಂದು ತಿಂಗಳ ಹಿಂದೆ ರಾಚಮಾನಹಳ್ಳಿಗೆ ಬಂದು ವಾಸವಾಗಿದ್ದ ಶಿವಕುಮಾರ್ ದಂಪತಿ ಸೋಮವಾರ ರಾತ್ರಿ ಸಣ್ಣ ವಿಚಾರಕ್ಕೆ ಫೋನ್‍ನಲ್ಲಿಯೇ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ಮುನಿಸಿಕೊಂಡ ಅರುಣಾಕ್ಷಿ ತಾನು ತವರು ಮನೆಗೆ ಹೋಗುತ್ತೇನೆ ಅಂತ ಪತಿಗೆ ಹೇಳಿ, ತನ್ನ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಆನೇಕಲ್ ತಾಲೂಕಿನ ಹಿಲಲಿಗೆ ರೈಲ್ವೆ ಸ್ಟೇಷನ್‍ಗೆ ಬಂದಿದ್ದಳು. ಆದರೆ ಇಂದು ಬೆಳಗ್ಗೆ ಆಕೆಯ ಮೃತ ದೇಹ ರೈಲ್ವೆ ಹಳಿಯ ಬಳಿ ಪತ್ತೆಯಾಗಿದೆ.

    ಶಿವಕುಮಾರ್ ಪತ್ನಿಗಾಗಿ ಭಾನುವಾರ ರಾತ್ರಿ ಹಾಗೂ ಸೋಮ ಬೆಂಗಳೂರಿನ ಹಲವು ಕಡೆ ಹುಡುಕಾಡಿದ್ದ. ಆದರೆ ಸಿಗದೆ ಮನೆಗೆ ವಾಪಸ್ ಬಂದಿದ್ದ. ರೈಲ್ವೆ ಹಳಿಯ ಮೇಲೆ ಅರುಣಾಕ್ಷಿ ಮೃತದೇಹ ಬೆಳಗ್ಗೆ ಪತ್ತೆಯಾಗಿದೆ. ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಯಾರೋ ಕೊಲೆ ಮಾಡಿ ಶವವನ್ನು ರೈಲ್ವೆ ಹಳಿ ಮೇಲೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

  • ಸಿದ್ದರಾಮಯ್ಯ, ಎಚ್‍ಡಿಕೆ ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ: ಎಂಟಿಬಿ

    ಸಿದ್ದರಾಮಯ್ಯ, ಎಚ್‍ಡಿಕೆ ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ: ಎಂಟಿಬಿ

    ಆನೇಕಲ್: ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ತಿಪ್ಪರಲಾಗ ಹಾಕಿದ್ರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಭವಿಷ್ಯ ನುಡಿದಿದ್ದಾರೆ.

    ಎಂಟಿಬಿ ನಾಗರಾಜು ಇಂದು ತಮ್ಮ ಪುತ್ರ ಬಿಬಿಎಂಪಿ ಸದಸ್ಯ ನಿತಿನ್ ಪುರುಷೋತಮ್ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ಶುಭಾಶಯ ತಿಳಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅಧಿಕಾರ ಸಿಗುತ್ತೆ ಎಂಬ ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಸಿದ್ದರಾಮಯ್ಯ ಅಧಿಕಾರಕ್ಕಾಗಿ ಏನ್ ಬೇಕಾದರೂ ಮಾಡುತ್ತಾರೆ. ಆದರೆ ಈ ಬಾರೀ ಸಿದ್ದರಾಮಯ್ಯ ತಿಪ್ಪರಲಾಗ ಹಾಕಿದರು ಅಧಿಕಾರ ಸಿಗಲ್ಲ. ಇನ್ನು ಮೂರುವರ್ಷ ಯಡಿಯೂರಪ್ಪ ಸರ್ಕಾರ ಸುಭದ್ರವಾಗಿರುತ್ತೆ ಎಂದರು. ಜೊತೆಗೆ ಆರ್. ಶಂಕರ್, ಎಚ್.ವಿಶ್ವನಾಥ್ ಹಾಗೂ ತಮ್ಮನ್ನ ಯಡಿಯೂರಪ್ಪ ಯಾವತ್ತೂ ಕೈ ಬಿಡುವುದಿಲ್ಲ. ನಮ್ಮನ್ನು ಇನ್ನು ಕೆಲವು ತಿಂಗಳಲ್ಲಿ ಸಚಿವರನಾಗಿ ಮಾಡುತ್ತಾರೆ. ಯಾರು ಏನೇ ಮಾಡಿದರೂ ಯಡಿಯೂರಪ್ಪ ಅಧಿಕಾರ ಪೂರ್ಣಗೊಳಿಸುತ್ತಾರೆ ಎಂದು ತಿಳಿಸಿದರು.

  • ಬೇರೆ ಕಂಪನಿ ಚಾರ್ಜರ್‌ನಲ್ಲಿ ಚಾರ್ಚ್ ಮಾಡುವಾಗ ಮೊಬೈಲ್ ಬ್ಲಾಸ್ಟ್

    ಬೇರೆ ಕಂಪನಿ ಚಾರ್ಜರ್‌ನಲ್ಲಿ ಚಾರ್ಚ್ ಮಾಡುವಾಗ ಮೊಬೈಲ್ ಬ್ಲಾಸ್ಟ್

    – ಮನೆಯಲ್ಲಿಯ ಟಿವಿ, ವಾಷಿಂಗ್ ಮಿಷನ್, ಫ್ರಿಜ್ ಬೆಂಕಿಗಾಹುತಿ

    ಆನೇಕಲ್: ಬೇರೆ ಕಂಪನಿಯ ಚಾರ್ಜರ್ ನಲ್ಲಿ ಮೊಬೈಲ್ ಚಾರ್ಜಿಂಗ್ ಹಾಕಿದ್ದ ವೇಳೆ ಸ್ಫೋಟಗೊಂಡ ಘಟನೆ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ಬೆಲೆಬಾಳುವ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

    ಪಟ್ಟಣದ ವಿನಾಯಕ ನಗರದ ನಿವಾಸಿ ಚಂದ್ರಶೇಖರ್ ಅವರ ಮನೆಯಲ್ಲಿ ಘಟನೆ ನಡೆದಿದ್ದು, ಸಂಜೆ ಚಂದ್ರಶೇಖರ್ ಅವರ ಮಗ ರೆಡ್ಮಿ ಎಂಐ ಮೊಬೈಲ್ ಅನ್ನು ಚಾರ್ಜಿಂಗ್ ಹಾಕಿ ಶೌಚಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಮೊಬೈಲ್ ಸ್ಫೋಟಗೊಂಡಿದೆ. ಪರಿಣಾಮ ಕ್ಷಣಾರ್ಧದಲ್ಲಿ ಮನೆಯ ತುಂಬೆಲ್ಲಾ ಬೆಂಕಿ ಆವರಿಸಿಕೊಂಡಿದೆ. ಕೂಡಲೇ ಎಚ್ಚೆತ್ತಾ ಮನೆಯವರು ಹೊರಗೆ ಓಡಿ ಬಂದಿದ್ದು ಬಾರಿ ಅನಾಹುತ ತಪ್ಪಿದೆ.

    ದೊಡ್ಡ ಮಟ್ಟದಲ್ಲಿ ಮನೆಯ ತುಂಬೆಲ್ಲಾ ಆವರಿಸಿಕೊಂಡ ಬೆಂಕಿಯು ಮನೆಯಲ್ಲಿದ್ದ ಬೆಲೆ ಬಾಳುವ ಟಿವಿ, ವಾಷಿಂಗ್ ಮಿಷನ್, ಫ್ರಿಜ್ ಸೇರಿದಂತೆ ಸಾಕಷ್ಟು ವಸ್ತುಗಳು ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು, ಆನೇಕಲ್ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ತುಂಡು ಭೂಮಿಯಲ್ಲಿ ಹತ್ತಾರು ವಿದೇಶಿ ಬೆಳೆ ಬೆಳೀತಿದ್ದಾರೆ ಆನೇಕಲ್‍ನ ಮುರುಗೇಶ್

    ತುಂಡು ಭೂಮಿಯಲ್ಲಿ ಹತ್ತಾರು ವಿದೇಶಿ ಬೆಳೆ ಬೆಳೀತಿದ್ದಾರೆ ಆನೇಕಲ್‍ನ ಮುರುಗೇಶ್

    – ವಿದೇಶಕ್ಕೆ ತರಕಾರಿ ರಫ್ತು, ಕೈ ತುಂಬಾ ಕಾಸು

    ಆನೇಕಲ್: ಇಂದು ರೈತರು ತಮ್ಮ ಮಕ್ಕಳನ್ನ ವ್ಯವಸಾಯಕ್ಕೆ ಇಳಿಸಲು ಹಿಂಜರೀತಾರೆ. ಸಾಲ ಮಾಡಿಯಾದರೂ ಮಕ್ಕಳನ್ನು ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಕಳಿಸುತ್ತಾರೆ. ಈ ಮಧ್ಯೆ ತುಂಡು ಭೂಮಿಯಲ್ಲಿ ವಿದೇಶಿ ಕೃಷಿ ಮಾಡಿ ರೈತರೊಬ್ಬರು ಕೈ ತುಂಬಾ ಕಾಸು ಮಾಡುವ ಮೂಲಕ ಇದೀಗ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಹೌದು. ಆನೇಕಲ್ ತಾಲೂಕಿನ ಮೇಡಹಳ್ಳಿಯ ಪ್ರಗತಿಪರ ರೈತ ಮುರುಗೇಶ್, ತನಗಿರುವ ಕೇವಲ 23 ಗುಂಟೆ ಕೃಷಿ ಭೂಮಿಯಲ್ಲಿ ಏಕಕಾಲದಲ್ಲಿ ಹತ್ತಾರು ವಿದೇಶಿ ಬೆಳೆ ಬೆಳೆದು, ಕೈ ತುಂಬಾ ಕಾಸು ಮಾಡುತ್ತಿದ್ದಾರೆ. ಮುರುಗೇಶ್ ಓದಿದ್ದು 10 ನೇ ತರಗತಿವರೆಗೆ ಮಾತ್ರ. ಅಪ್ಪ-ಅಮ್ಮ ಓದಿಸ್ತೀನಿ ಅಂದ್ರೂ ಕೇಳದ ಮುರುಗೇಶ್, ಐದು ವರ್ಷದ ಹಿಂದೆ ಕೃಷಿ ಕೆಲಸಕ್ಕೆ ಇಳಿದರು. ಆದರೆ ಎಲ್ಲರಂತೆ ರಾಗಿ, ಭತ್ತ ಬೆಳೆಯಲು ಹೋಗದೇ ಇಂಟರ್ ನೆಟ್, ಪ್ರಗತಿಪರ ರೈತರ ನೆರವಿಂದ ವಿದೇಶಿ ಬೆಳೆ ಬೆಳೆಯಲು ನಿಂತರು. ಬ್ರೊಕೊಲ್ಲಿ, ಗ್ರೀನ್ ನೋಟಿಸ್, ರೋಮನ್ ನೋಟಿಸ್, ಚೈನೀಸ್ ಕ್ಯಾಬೇಜ್, ಎಲ್ಲೋ ಕ್ಯಾರೆಟ್, ಬ್ಲಾಕ್ ಕ್ಯಾರೆಟ್ ಹೀಗೆ ಹಲವು ಬೆಳೆ ಬೆಳೆದು, ವಿದೇಶಗಳಿಗೂ ರಫ್ತು ಮಾಡ್ತಿದ್ದಾರೆ.

    ಮುರುಗೇಶ್ ಕೃಷಿ ನೋಡಲು ಯಾವಗಲೂ ಸಂಘ ಸಂಸ್ಥೆಗಳು, ವಿದೇಶಿ ವ್ಯಕ್ತಿಗಳು ಆಗಮಿಸುತ್ತಿರುತ್ತಾರೆ. ಮುರುಗೇಶ್ ಎಲ್ಲರಿಗೂ ತಮ್ಮ ಬಳಿ ಇರುವ ಮಾಹಿತಿ ಹಂಚಿಕೊಳ್ಳುತ್ತಾರೆ. ಈ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ಮುರುಗೇಶ್ ಸ್ನೇಹಿತ ಕಾಂತರಾಜು ಹೇಳುತ್ತಾರೆ.

    ಅನಾದಿಕಾಲದ ಕೃಷಿ ಮಾಡುತ್ತಾ ಸಾಲ ತೀರಿಸಲಾಗದೆ ಒದ್ದಾಡ್ತಿರೋ ಕೃಷಿಕರ ನಡುವೆ ಯುವ ರೈತ ಮುರುಗೇಶ್ ವಿಭಿನ್ನವಾಗಿ ಕಾಣುತ್ತಾರೆ.

  • 400 ವರ್ಷಗಳ ಹಿಂದಿನ ಕಲ್ಯಾಣಿಯ ಸ್ವಚ್ಛತೆಗೆ ಮುಂದಾದ ನ್ಯಾಯಾಧೀಶರು

    400 ವರ್ಷಗಳ ಹಿಂದಿನ ಕಲ್ಯಾಣಿಯ ಸ್ವಚ್ಛತೆಗೆ ಮುಂದಾದ ನ್ಯಾಯಾಧೀಶರು

    ಬೆಂಗಳೂರು: ನಗರಗಳ ಅಭಿವೃದ್ಧಿಯ ಹೆಸರಿನಲ್ಲಿ ಅದೆಷ್ಟೋ ಪುರಾತನ ಕಟ್ಟಡಗಳು, ಕೆರೆಗಳು, ಕಲ್ಯಾಣಿಗಳು ಮಣ್ಣಲ್ಲಿ ಮಣ್ಣಾಗಿ ಇತಿಹಾಸಗಳೇ ಮುಚ್ಚಿ ಹೋಗಿವೆ. ಅಳಿವಿನಂಚಿನ ಕಲ್ಯಾಣಿಯನ್ನು ಕಂಡ ನ್ಯಾಯಾಧೀಶರು ತಮ್ಮ ತಂಡವನ್ನು ಕಟ್ಟಿಕೊಂಡು ಸ್ವಚ್ಛತೆಗೆ ಮುಂದಾಗಿ ಮತ್ತೆ ಪುನರ್ಜಿವ ನೀಡಿದ್ದಾರೆ.

    ಬೆಂಗಳೂರು ಹೊರವಲಯದ ಆನೇಕಲ್‍ನ ಸಿಡಿಹೊಸಕೋಟೆ ರಸ್ತೆಯಲ್ಲಿರುವು ಪುಷ್ಕರಾಣಿ ಕಲ್ಯಾಣಿಯಲ್ಲಿ ಬೆಳೆದಿರುವ ಗಿಡಗಳನ್ನು ಕಿತ್ತು ಸ್ವಚ್ಛತೆಗೆ ಮುಂದಾಗಿದ್ದಾರೆ. ಈ ಪುಷ್ಕರಾಣಿ ಕಲ್ಯಾಣಿಗೆ ಸುಮಾರು 400 ವರ್ಷಗಳ ಇತಿಹಾಸವಿದ್ದು, ಆನೇಕಲ್ ತಾಲೂಕಿಗೆ ಪ್ರಸಿದ್ಧಿಯಾಗಿತ್ತು. ಪಾಳೇಗಾರರು ಆಳ್ವಿಕೆ ಮಾಡುವ ಕಾಲದಲ್ಲಿ ಆನೇಕಲ್ ನ ದೊಡ್ಡಕೆರೆ ಹಾಗೂ ಈ ಕಲ್ಯಾಣಿಯನ್ನು ನಿರ್ಮಿಸಿದ್ದರು. ಕಲ್ಯಾಣಿಯಲ್ಲಿ ಜನ ನೀರು ಕುಡಿಯುವುದು ಬಟ್ಟೆ ತೊಳೆಯುವುದು ಹಾಗೂ ಜನ ಈಜಲು ಬಳಸುತ್ತಿದ್ದರು.

    ಕಳೆದ 20 ವರ್ಷಗಳಿಂದ ಈ ಕಲ್ಯಾಣಿಯಲ್ಲಿ ಮಣ್ಣು ತುಂಬಿಕೊಂಡು ನೀರು ಸಹ ಇಂಗಿ ಹೋಗಿದ್ದು ಆಳಿವಿನಂಚಿಗೆ ತಲುಪಿತ್ತು. ಇದನ್ನು ಕಂಡ ಆನೇಕಲ್ ನ ನ್ಯಾಯಾಧೀಶರು ತಂಡ ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಮುಂದಾಗಿದೆ. ಇಂದು ಮಣ್ಣನ್ನು ತೆಗೆಯುತ್ತಿದ್ದು, ಇನ್ನೆರಡು ವಾರಗಳಲ್ಲಿ ಸಂಪೂರ್ಣವಾಗಿ ಸ್ವಚ್ಛಗೊಳ್ಳಲಿದೆ.

    ಆನೇಕಲ್ ನ ಜೆಎಂಎಪ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗೋಕುಲ್ ಮತ್ತು ಪ್ರಶಾಂತ್ ಆನೇಕಲ್ ನಿಂದ ಸಿಡಿಹೊಸಕೋಟೆಯ ರಸ್ತೆಯಲ್ಲಿ ವಾಯುವಿಹರಕೆಂದು ಹೋಗುವ ವೇಳೆ ಈ ಕಲ್ಯಾಣಿಯನ್ನು ಕಂಡಿದ್ದಾರೆ. ನಂತರ ಆನೇಕಲ್ ನ ವಕೀಲರ ಸಂಘ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಈ ಪುಷ್ಕರಾಣಿ ಕಲ್ಯಾಣಿಯ ಸ್ವಚ್ಛತೆಯನ್ನು ಪ್ರತಿ ಭಾನುವಾರ ಮಾಡಲು ಮುಂದಾಗಿದ್ದಾರೆ.

    ಕಲ್ಯಾಣಿ ಇನ್ನೊಂದು ವಾರಗಳಲ್ಲಿ ಕೊನೆಯ ಹಂತಕ್ಕೆ ಬರಲಿದೆ. ಈ ಸ್ವಚ್ಛತೆಯ ಕೆಲಸದಲ್ಲಿ ನ್ಯಾಯಾಲಯದಲ್ಲಿನ ಎಲ್ಲ ಸಿಬ್ಬಂದಿ ವಕೀಲರು ಭಾಗವಹಿಸಿದ್ದು, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಶಾಲಾ ಮಕ್ಕಳು ನ್ಯಾಯಾಧೀಶರೊಂದಿಗೆ ಯಾವುದೇ ಬೇಧವಿಲ್ಲದೆ ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಧೀಶರು ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

  • ಅಪ್ರಾಪ್ತರನ್ನು ಬಳಸಿಕೊಂಡು ದುಬಾರಿ ಸೈಕಲ್ ಕಳ್ಳತನ

    ಅಪ್ರಾಪ್ತರನ್ನು ಬಳಸಿಕೊಂಡು ದುಬಾರಿ ಸೈಕಲ್ ಕಳ್ಳತನ

    ಆನೇಕಲ್: ಕಳ್ಳತನ ಮಾಡೋರು ಆಗಾಗ ತಮ್ಮ ಕಸುಬಿನಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತಾರೆ ಅನಿಸುತ್ತಿದೆ. ಇಷ್ಟು ದಿನ ಮನೆ ಮುಂದೆ ನಿಲ್ಲಿಸಿದ್ದ ಬೈಕ್, ಕಾರು ಕಳ್ಳತನ ಮಾಡ್ತಿದ್ದ ಕಳ್ಳರು ಇದೀಗ ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡು ದುಬಾರಿ ಸೈಕಲ್ ಕಳ್ಳತನಕ್ಕೆ ಇಳಿದಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ಇತ್ತೀಚೆಗೆ ಮನೆಯ ಮುಂದೆ ನಿಲ್ಲಿಸಿರೋ ದುಬಾರಿ ಬೆಲೆಯ ಸೈಕಲ್ ಕಳ್ಳತನಕ್ಕೆ ಇಳಿದಿದ್ದಾರೆ. ಇಷ್ಟು ದಿನ ಬೈಕ್, ಕಾರು ಕಳ್ಳರಿಂದ ನೆಮ್ಮದಿ ಕಳೆದುಕೊಂಡಿದ್ದ ಜನ ಇದೀಗ ಮತ್ತೆ ತಲೆಕೆಡಿಸಿಕೊಳ್ಳುವಂತಾಗಿದೆ.

    ಆನೇಕಲ್ ತಾಲೂಕಿನ ದೊಮ್ಮಸಂದ್ರ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ದುಬಾರಿ ಬೆಲೆಯ ಸೈಕಲ್ ಕಳ್ಳತನ ಮಾಡಲಾಗಿದೆ. ಈ ಕೃತ್ಯಕ್ಕೆ ಮಕ್ಕಳನ್ನು ಬಳಸಿಕೊಂಡಿದ್ದು, ಮಕ್ಕಳ ಮೂಲಕ ಕಳ್ಳತನಕ್ಕೆ ಇಳಿದಿದ್ದಾರೆ.

    ಖತರ್ನಾಕ್ ಕಳ್ಳರು ಸೈಕಲ್ ಕದಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.