Tag: anekal

  • ಕನ್ನಡ ಶಾಲೆಗೆ ಹೊಸ ರೂಪಕೊಟ್ಟ ಯುವ ಬ್ರಿಗೇಡ್ ತಂಡ

    ಕನ್ನಡ ಶಾಲೆಗೆ ಹೊಸ ರೂಪಕೊಟ್ಟ ಯುವ ಬ್ರಿಗೇಡ್ ತಂಡ

    – ಯುವಕರ ನಡೆಗೆ ಪ್ರಶಂಸೆ

    ಬೆಂಗಳೂರು: ರಾಜ್ಯದ ಗಡಿಭಾಗವಾದ ಆನೇಕಲ್ ತಾಲೂಕಿನ ಸೊಲೂರು ಗ್ರಾಮದ ಕನ್ನಡ ಶಾಲೆಗೆ ಹೊಸ ರೂಪ ಕೊಟ್ಟು ನವೀಕರಿಸುವ ಮೂಲಕ ಶಕ್ತಿ ಸೇವಾ ಟ್ರಸ್ಟ್ ಹಾಗೂ ವಿವೇಕಾನಂದ ಯುವ ಬ್ರಿಗೇಡ್ ತಂಡದ ಯುವಕರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಶಾಲೆಯ ನೂತನ ಕಟ್ಟಡವನ್ನ ಉದ್ಘಾಟನೆ ಮಾಡಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೊಲೂರಿನ ವಿನೋಬ ಭಾವೆ ಸರ್ಕಾರಿ ಶಾಲೆ ಭೇಟಿ ಕೊಟ್ಟು ನೂತನ ಕೊಠಡಿಗಳ ಉದ್ಘಾಟನೆ ನೆರವೇರಿಸಿದರು. ಸುಮಾರು 35 ಲಕ್ಷ ವೆಚ್ಚ ಮಾಡಿ ಶಾಲೆಯ ಮೊದಲ ಮಹಡಿಯಲ್ಲಿ ಮೂರು ಅತ್ಯಾಧುನಿಕ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಅತ್ಯಾಧುನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಹೀಗಾಗಿ ಖುದ್ದು ಸಚಿವರೇ ಶಾಲೆಯನ್ನು ವೀಕ್ಷಣೆ ಮಾಡಿ ಯುವ ಬ್ರಿಗೇಡ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಗಡಿಭಾಗದ ಕನ್ನಡ ಶಾಲೆಗಳು ನಿಜಕ್ಕೂ ಶೋಚನೀಯ ಸ್ಥಿತಿಯಲ್ಲಿದ್ದು ಅವುಗಳನ್ನು ಅಭಿವೃದ್ಧಿ ಮಾಡುವ ಮೂಲಕ ಕನ್ನಡ ಶಾಲೆಗಳನ್ನು ಉನ್ನತೀಕರಿಸುವ ಕೆಲಸ ಇಂದು ಸೊಲೂರಿನಲ್ಲಿ ನಡೆದಿದೆ. ಚಕ್ರವರ್ತಿ ಸೂಲಿಬೆಲೆಯವರ ಯುವ ಬ್ರಿಗೇಡ್ ಸದಸ್ಯರು ರಾಜ್ಯದ ಹಲವು ಕಡೆಗಳಲ್ಲಿ ಕೈಗಾರಿಕೆಗಳ ಜೊತೆಗೂಡಿ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಸಮಾಜದ ಮೇಲಿನ ಕಳಕಳಿ ಇದೇ ರೀತಿ ಮುಂದುವರಿಯಲಿ ಎಂದರು.

    ಭಗವಾನ್ ಅವರ ವಿವಾದಾತ್ಮಕ ಪುಸ್ತಕದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಕುಮಾರ್, ಚರ್ಚೆ ಬೇಡ ಭಗವಾನ್ ಪುಸ್ತಕ ಖರೀದಿ ಮಾಡಿಲ್ಲ. ಈ ಬಗ್ಗೆ ಫೇಸ್‍ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದೇನೆ ಎಂದು ತಿಳಿಸಿದರು.

    ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸೋಲೂರಿನ ಸರ್ಕಾರಿ ಶಾಲಾ ಕಟ್ಟ ತೀರಾ ಕೆಟ್ಟ ಸ್ಥಿತಿಯಲ್ಲಿತ್ತು. ನಮ್ಮ ಸದಸ್ಯರೊಬ್ಬರು ಇದನ್ನು ನಮ್ಮ ಗಮನಕ್ಕೆ ತಂದರು. ನಾವು ಕಂಪನಿಯ ಅಡಿಯಲ್ಲಿ 22 ಲಕ್ಷ ಹಾಗೂ ನಮ್ಮ ಯುವ ಬ್ರಿಗೇಡ್ ಸದಸ್ಯರು ಸಾಮಾಜಿಕ ಜಾಲತಾಣದ ಮೂಲಕ ಹಣವನ್ನು ದಾನಿಗಳಿಂದ ಸಂಗ್ರಹಿಸಿ ಒಟ್ಟು 35 ಲಕ್ಷ ವೆಚ್ಚ ಮಾಡಿ ಸರ್ಕಾರಿ ಶಾಲೆಗೆ ಮೂರು ಹೊಸ ಕಟ್ಟಡ ನಿರ್ಮಿಸಿ ಹೊಸ ರೂಪವನ್ನು ನೀಡಿದ್ದೇವೆ. ಶಿಕ್ಷಣ ಸಚಿವರು ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿರುವುದು ನಿಜಕ್ಕೂ ಇನ್ನು ಹೆಚ್ಚು ಸಂತಸ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಲಸಿಕೆ ಪಡೆದು ಅಪನಂಬಿಕೆ ಹೋಗಲಾಡಿಸಿದ ಡಾ. ದೇವಿಶೆಟ್ಟಿ

    ಲಸಿಕೆ ಪಡೆದು ಅಪನಂಬಿಕೆ ಹೋಗಲಾಡಿಸಿದ ಡಾ. ದೇವಿಶೆಟ್ಟಿ

    ಆನೇಕಲ್: ಈಗಾಗಲೇ ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ ಪ್ರಾರಂಭವಾಗಿದೆ. ಇದೇ ತಿಂಗಳು 16ರಿಂದ ಲಸಿಕೆ ಹಾಕುವ ಕೆಲಸದಲ್ಲಿ ಎಲ್ಲಾ ವೈದ್ಯಕೀಯ ಸಿಬ್ಬಂದಿ ನಿರತರಾಗಿ ಇದುವರೆಗೆ ಲಕ್ಷಾಂತರ ಜನರಿಗೆ ಲಸಿಕೆ ಹಾಕಿದ್ದಾರೆ.

    ಅದೇ ರೀತಿ ಮೂರನೆ ದಿನವಾದ ಇಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನಾರಾಯಣ ಹೃದಯಾಲಯದಲ್ಲಿ ಮೊದಲ ಲಸಿಕೆಯನ್ನು ಹಾಕಲಾಯಿತು. ನಾರಾಯಣ ಹೃದಯಾಲಯದ ಮುಖ್ಯಸ್ಥ ದೇವಿಶೆಟ್ಟಿ ತಾವೇ ಸ್ವತಃ ಹಾಕಿಸಿಕೊಳ್ಳುವ ಮೂಲಕ ಜನಸಾಮಾನ್ಯರಿಗೆ ಲಸಿಕೆಯ ಮೇಲೆ ಇರುವ ಅಪನಂಬಿಕೆಯನ್ನು ಹೋಗಲಾಡಿಸಲು ಮುಂದಾಗಿದ್ದಾರೆ. ಇಂದು ಮುಂಜಾನೆ ಸುಮಾರು 9:00 ಸರಿಯಾಗಿ ನೋಡಲ್ ಆಫೀಸರ್ ಹಾಗೂ ತಾಲೂಕು ವೈದ್ಯಾಧಿಕಾರಿ ಅವರ ಸಮಕ್ಷದಲ್ಲಿ ಕೋವಿಡ್ ಲಸಿಕೆಯನ್ನು ಮೊದಲನೆಯದಾಗಿ ದೇವಿ ಶೆಟ್ಟಿಯವರು ತೆಗೆದುಕೊಂಡಿದ್ದಾರೆ.

    ಈ ಮೂಲಕ ಜನಸಾಮಾನ್ಯರಿಗೆ ಕೊವಿಡ್ ಲಸಿಕೆಯ ಮೇಲೆ ಭರವಸೆ ಮೂಡುವಂತೆ ಮಾಡಿದ್ದಾರೆ. ಜೊತೆಗೆ ಇಂದಿನಿಂದ ನಾರಾಯಣ ಹೃದಯಾಲಯದಲ್ಲಿ ಕೋವಿಡ್ ಲಸಿಕೆ ಹಾಕುತ್ತಿದ್ದು ದೇವಿ ಶೆಟ್ಟಿಯವರಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟನೆ ಮಾಡಲಾಯಿತು. ಜೊತೆಗೆ ಇಂದು ಒಟ್ಟು ಮುನ್ನೂರು ಮಂದಿಗೆ ಲಸಿಕೆ ಹಾಕಲಿದ್ದು ಇಂದಿನಿಂದ ಪ್ರತಿದಿನ ಕೊವಿಡ್ ಲಸಿಕೆ ಲಭ್ಯವಿರುತ್ತದೆ. ಹಾಗಾಗಿ ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

    ಇದೇ ಸಮಯದಲ್ಲಿ ಮಾತನಾಡಿದ ದೇವಿಶೆಟ್ಟಿ, ಪ್ರತಿಯೊಬ್ಬ ಭಾರತೀಯ ಲಸಿಕೆ ನಂತರ ವಿಕ್ಟರಿ ಸೈನ್ ತೋರಿಸಬೇಕು. ಭಾರತಕ್ಕೆ ಇದೊಂದು ಸುವರ್ಣಾವಕಾಶ. ಬೇರೆ ದೇಶದಲ್ಲಿ ಕೋವಿಡ್ ಇನ್ನೂ ಅಂತ್ಯ ಕಂಡಿಲ್ಲ ಆದರೆ ನಮ್ಮ ದೇಶದಲ್ಲಿ ಈಗಾಗಲೇ ಲಸಿಕೆಯ ಲಭ್ಯವಿದೆ. ಅತಿ ಹೆಚ್ಚು ವೈದ್ಯಕೀಯ ಸಿಬ್ಬಂದಿ ಇರುವ ದೇಶ ನಮ್ಮದು ಹಾಗಾಗಿ ಈ ಒಂದು ಸದುಪಯೋಗವನ್ನು ಎಲ್ಲರೂ ಬಳಸಿಕೊಳ್ಳಬಹುದು. ಅತೀ ಬೇಗ ಕೊರೊನಾದಿಂದ ಮುಕ್ತಿ ಹೊಂದಬಹುದು ಎಂಬ ಭರವಸೆ ನನಗಿದೆ ಎಂದು ತಿಳಿಸಿದ್ದಾರೆ. ವೈದ್ಯಾಧಿಕಾರಿ ಮಾತನಾಡಿ ಜೊತೆಗೆ ಸ್ಥಳೀಯ ವೈದ್ಯಾಧಿಕಾರಿ ಮಾತನಾಡಿ ಇಂದು ಮೂರನೆ ದಿನ 16ನೇ ತಾರೀಕು ಒಟ್ಟು 238 ಮಂದಿ ಲಸಿಕೆ ಪಡೆದಿದ್ದಾರೆ.

    ಅದೇ ರೀತಿ ಇಂದು 28 ಸೆಶನ್ಸ್ ಗಳಲ್ಲಿ 2,456 ಮಂದಿ ಇಂದು ಲಸಿಕೆ ಪಡೆಯುತ್ತಾರೆ. ಇಂದು ದೇವಿಶೆಟ್ಟಿ ಸಹ ಪಡೆದಿದ್ದು ಇದರಿಂದ ಜನರಲ್ಲಿ ಇನ್ನಷ್ಟು ನಂಬಿಕೆ ಬರುತ್ತದೆ. ಹಾಗೂ ಈ ಕೆಲಸ ಯಶಸ್ವಿಯಾಗುತ್ತದೆ ಎಂದು ತಿಳಿಸಿದ್ದಾರೆ.

  • ಏಕಾಏಕಿ ಬೈಕ್‌ ಸವಾರನ ಮೇಲೆ ಕಾಡಾನೆ ದಾಳಿ – ಪ್ರಾಣಾಪಾಯದಿಂದ ಪಾರು

    ಏಕಾಏಕಿ ಬೈಕ್‌ ಸವಾರನ ಮೇಲೆ ಕಾಡಾನೆ ದಾಳಿ – ಪ್ರಾಣಾಪಾಯದಿಂದ ಪಾರು

    ಆನೇಕಲ್‌: ಕಾಡಾನೆಯೊಂದು ಏಕಾಏಕಿ ಬೈಕ್ ಸವಾರನ ಮೇಲೆ ದಾಳಿ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ರಾಗಿಹಳ್ಳಿ ಬಳಿ ನಡೆದಿದೆ.

    ಕೋಟಿಗೆರೆ ನಿವಾಸಿಯಾದ ಗಣೇಶ್(28) ಗಾಯಗೊಂಡಿರುವ ವ್ಯಕ್ತಿ. ಶನಿವಾರ ರಾತ್ರಿ 8 ಗಂಟೆಯ ವೇಳೆ ರಾಗಿಹಳ್ಳಿಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಆನೆ ದಾಳಿ ಮಾಡಿದೆ. ವಿಚಾರ ತಿಳಿದ ಸ್ಥಳೀಯ ನಿವಾಸಿಗಳು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಸಹಾಯ ಮಾಡಿದ್ದಾರೆ.

    ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾಗಿಹಳ್ಳಿ ಬಹುತೇಕ ಕಾಡು ಪ್ರದೇಶವಾಗಿದ್ದು ಆಗಾಗ ಈ ಗ್ರಾಮಗಳಲ್ಲಿ ಆನೆಗಳ‌ ಬುರವುದು ಸರ್ವೇ ಸಾಮಾನ್ಯವಾಗಿದೆ. ಸ್ಥಳೀಯರು ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಈ ಭಾಗದಲ್ಲಿ ಸಾಮಾನ್ಯವಾಗಿ ಆನೆಗಳು ಆಗಾಗ ದಾಳಿ ಯಾಗುತ್ತಿದ್ದು ಯಾವುದೇ ಕ್ರಮಕೈಗೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಡಂಚಿನ ಗ್ರಾಮಗಳ ನಿವಾಸಿಗಳ ಮೇಲೆ ಪ್ರತಿನಿತ್ಯ ಕಾಡು ಪ್ರಾಣಿಗಳು ದಾಳಿ ಮಾಡುತ್ತಿವೆ ಇಷ್ಟಾದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

  • ಹೆಲಿಕಾಪ್ಟರ್ ಮೂಲಕ ವರ ಗ್ರ್ಯಾಂಡ್ ಎಂಟ್ರಿ – ವಿಶೇಷ ಮದ್ವೆಗೆ ಸಾಕ್ಷಿಯಾದ ಬೆಂಗ್ಳೂರು

    ಹೆಲಿಕಾಪ್ಟರ್ ಮೂಲಕ ವರ ಗ್ರ್ಯಾಂಡ್ ಎಂಟ್ರಿ – ವಿಶೇಷ ಮದ್ವೆಗೆ ಸಾಕ್ಷಿಯಾದ ಬೆಂಗ್ಳೂರು

    ಆನೇಕಲ್: ಮದುವೆ ಮಂಟಪಕ್ಕೆ ವಧು-ವರ ಅಲಂಕಾರಗೊಂಡಿದ್ದ ಕಾರು ಅಥವಾ ಇನ್ನಿತರ ವಾಹನಗಳಲ್ಲಿ ಬರುವುದು ಸಾಮಾನ್ಯ. ಆದರೆ ಸಿಲಿಕಾನ್ ಸಿಟಿಯಲ್ಲಿ ಇಂದು ನಡೆಯುತ್ತಿರುವ ಮದುವೆಗೆ ವರನೊಬ್ಬ ಗ್ರ್ಯಾಂಡ್ ಎಂಟ್ರಿ ಕೊಟ್ಟು ಅಚ್ಚರಿಗೆ ಕಾರಣವಾಗಿದ್ದಾನೆ. ಈ ಮೂಲಕ ವಿಶೇಷವಾದ ಮದುವೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಾಕ್ಷಿಯಾಗಿದೆ.

    ಹೌದು. ಬೆಂಗಳೂರಿನಲ್ಲೊಂದು ವಿಶೇಷವಾದ ಮದುವೆ ಸಮಾರಂಭ ನಡೆದಿದೆ. ತುಮಕೂರಿನ ವರ ನಿರೂಪ್, ಬೆಂಗಳೂರಿನ ವಧು ಐಶ್ವರ್ಯಾ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ ವಿಶೇಷ ಅಂದ್ರೆ ತುಮಕೂರಿನ ವರ ನಿರೂಪ್ ಹೆಲಿಕಾಪ್ಟರ್ ಮೂಲಕ ಚೌಟ್ರಿಗೆ ಬಂದಿದ್ದಾರೆ. ಮದುವೆ ಮಂಟಪಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುವ ಮೂಲಕ ನೆರೆದಿದ್ದವರ ಹುಬ್ಬೇರಿಸುವಂತೆ ಮಾಡಿದ್ದಾರೆ.

    ವೃತ್ತಿಯಲ್ಲಿ ರೈಸ್ ಮಿಲ್ ಜೊತೆ ಉದ್ಯಮಿಯಾಗಿರುವ ನಿರೂಪ್ ಬಲರಾಮ್ ಶೆಟ್ಟಿ ಮತ್ತು ರಮಾದೇವಿ ದಂಪತಿ ಪುತ್ರ. ಇನ್ನು ಮೂಲತಃ ಬೆಂಗಳೂರು ನಿವಾಸಿಯಾಗಿರುವ ವಧು ಐಶ್ವರ್ಯಾ ಮಾದವಿ ಮತ್ತು ಕಿಶೋರ್ ದಂಪತಿ ಪುತ್ರಿಯಾಗಿದ್ದಾರೆ. ಈ ಕಾರ್ಯಕ್ರಮ ಬೆಂಗಳೂರಿನ ತಲಘಟ್ಟಪುರದಲ್ಲಿರುವ ಬಿಆರ್ ಎಸ್ ಗ್ರಾಂಡ್ಯುರ್ ನಲ್ಲಿ ನಡೆಯುತ್ತಿದೆ. ಒಟ್ಟಿನಲ್ಲಿ ತುಮಕೂರಿನಿಂದ ಹೆಲಿಕಾಪ್ಟರ್ ನಲ್ಲಿ ಕಲ್ಯಾಣಮಂಟಪಕ್ಕೆ ವರನ ಎಂಟ್ರಿ ಕೊಟ್ಟಿರುವುದು ಅಚ್ಚರಿ ಹಾಗೂ ವಿಶೇಷವಾಗಿದೆ.

  • ಹೊರಗಡೆ ಗಣೇಶನ ಚಿತ್ರ, ಒಳಗಡೆ 16 ಲಕ್ಷದ ಕೆನಡಾ ಡ್ರಗ್ಸ್ – ಬೆಂಗಳೂರಲ್ಲಿ ಆರೋಪಿ ಅರೆಸ್ಟ್

    ಹೊರಗಡೆ ಗಣೇಶನ ಚಿತ್ರ, ಒಳಗಡೆ 16 ಲಕ್ಷದ ಕೆನಡಾ ಡ್ರಗ್ಸ್ – ಬೆಂಗಳೂರಲ್ಲಿ ಆರೋಪಿ ಅರೆಸ್ಟ್

    ಆನೇಕಲ್: ಕೆನಡಾದಿಂದ ಲೈಸರ್ಜಿಕ್ ಡೈಥಲಾಮೈಡ್ (ಎಲ್‍ಎಸ್‍ಡಿ) ಡ್ರಗ್ಸ್ ತರಿಸಿದ್ದ ಖಾಸಗಿ ಆಸ್ಪತ್ರೆ ಸಿಬ್ಬಂದಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿ ಹೆಬ್ಬಗೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿಯನ್ನು ಅರುಣ್ ಆಂತೋಣಿ(22) ಎಂದು ಗುರುತಿಸಲಾಗಿದೆ. ಈತ ಮೂಲತಃ ಕೇರಳದ ಪೆರಂಬಾಡಿ ಚೇರಾ ಹೌಸ್‍ನ ಕೊಟ್ಟಾಯಂ ನಿವಾಸಿಯಾಗಿದ್ದಾನೆ. ಆನೇಕಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿನ ಸ್ಪರ್ಶ ಆಸ್ಪತ್ರೆಯ ಎಕ್ಸ್-ರೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು.

    ಕೆನಡಾದಲ್ಲಿ ಸಿಗುವ ಎಲ್‍ಎಸ್‍ಡಿ ಡ್ರಗ್ಸ್ ಅನ್ನು ಕೇರಳದಿಂದಲೇ ಬೇರೊಬ್ಬರಿಂದ ಬುಕ್ ಮಾಡಿಸಿ ಸ್ಪರ್ಶ ಆಸ್ಪತ್ರೆಯ ತನ್ನ ವಿಭಾಗದ ವಿಳಾಸಕ್ಕೆ 310 ಹಾಳೆಗಳನ್ನು ತರಿಸಿದ್ದನು.

    ಈ ಕುರಿತಂತೆ ಬೆಂಗಳೂರು ನಗರ ಮಾದಕ ದ್ರವ್ಯ ನಿಗ್ರಹ ದಳದ ಸಿಸಿಬಿ ಇನ್‍ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯರಿಗೆ ಖಚಿತ ಮಾಹಿತಿ ದೊರಕಿದ್ದು, ಹೆಬ್ಬಗೋಡಿ ಸಿಐ ಗೌತಮ್ ಮತ್ತು ಸಿಬ್ಬಂದಿಯ ನೆರವಿನಿಂದ ಆಸ್ಪತ್ರೆಯಲ್ಲಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದಾರೆ.


    ಡ್ರಗ್ಸ್ ಹಾಳೆಯ ಮೇಲೆ ಹಳೆಯ ಛಾಪಾ ಕಾಗದದ ಮಾದರಿಯಲ್ಲಿ ಗಣೇಶನ ಚಿತ್ರ, ಮತ್ತಿತರೆ ಧಾರ್ಮಿಕ ಚಿತ್ರಗಳನ್ನು ಇರಿಸಲಾಗಿತ್ತು. ಯಾರಿಗೂ ಅನುಮಾನ ಬಾರದಂತೆ ಕಾಗದ ಒಳಗಡೆ ಡ್ರಗ್ಸ್ ಇರಿಸಲಾಗಿತ್ತು.

    ಒಟ್ಟು ಪಾರ್ಸೆಲ್ ಬಂದಿರುವ ಎಸ್‍ಎಲ್‍ಡಿ ಡ್ರಗ್ಸ್ ಮೌಲ್ಯ 16 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. 10×6ರ ಆಕಾರದಲ್ಲಿರುವ ಕಾಗದದಲ್ಲಿ ಮೊಬೈಲ್ ಸಿಮ್ ಸೈಜ್ ಹಾಳೆಯ ಚೂರನ್ನು ರಾಗಿ ಕಾಳಿನಷ್ಟು ಚಪ್ಪರಿಸಿದರೆ ಸಾಕು ಅರ್ಧ ಗಂಟೆಯಲ್ಲಿ ಮತ್ತೇರುತ್ತದೆ. ಈ ಡ್ರಗ್ಸ್ ಹತ್ತು ಗಂಟೆಗಳವರೆಗೂ ನಶೆಯಲ್ಲಿ ಇರಿಸುತ್ತದೆ ಎಂದು ತಿಳಿದು ಬಂದಿದೆ.

  • ಮುಂಜಾನೆ ಕ್ಯಾಂಟರ್ ಪಲ್ಟಿ- ಹಾಲಿನ ಪ್ಯಾಕೆಟ್‍ಗಳು ಮಣ್ಣುಪಾಲು

    ಮುಂಜಾನೆ ಕ್ಯಾಂಟರ್ ಪಲ್ಟಿ- ಹಾಲಿನ ಪ್ಯಾಕೆಟ್‍ಗಳು ಮಣ್ಣುಪಾಲು

    ಆನೇಕಲ್: ಹಾಲಿನ ಪ್ಯಾಕೆಟ್ ಗಳನ್ನು ತುಂಬಿದ್ದ ಕ್ಯಾಂಟರ್ ಪಲ್ಟಿಯಾದ ಪರಿಣಾಮ ಪ್ಯಾಕೆಟ್ ಗಳು ಮಣ್ಣುಪಾಲಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನ ತಾಲೂಕಿನ ಹೀಲಲಿಗೆ ಬಳಿ ನಡೆದಿದೆ.

    ಇಂದು ಬೆಳಗ್ಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಕ್ಯಾಂಟರ್ ನೆಲಕ್ಕುರುಳಿದೆ. ಘಟನೆಯಲ್ಲಿ ಯಾವುದೆ ಪ್ರಾಣಾಪಾಯವಿಲ್ಲ. ಆದರೆ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೊಲದಲ್ಲಿ ಮಕಾಡೆ ಮಲಗಿಸಿ ತಲೆ ಜಜ್ಜಿ ರೌಡಿ ಶೀಟರ್ ಬರ್ಬರ ಹತ್ಯೆ

    ಹೊಲದಲ್ಲಿ ಮಕಾಡೆ ಮಲಗಿಸಿ ತಲೆ ಜಜ್ಜಿ ರೌಡಿ ಶೀಟರ್ ಬರ್ಬರ ಹತ್ಯೆ

    – ಮೆದಳು ಸಮೇತ ರಾಗಿ ಹೊಲವೆಲ್ಲ ರಕ್ತಸಿಕ್ತ

    ಬೆಂಗಳೂರು: ರಾಗಿ ಹೊಲದಲ್ಲಿ ಮಕಾಡೆ ಮಲಗಿಸಿ ತಲೆ ಜಜ್ಜಿ ರೌಡಿ ಶೀಟರ್ ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಅರೆಹಳ್ಳಿಯಲ್ಲಿ ನಡೆದಿದೆ.

    ಮೃತ ಯುವಕನನ್ನು ಅತ್ತಿಬೆಲೆ ಪೊಲೀಸ್ ಠಾಣೆಯ ರೌಡಿ ಶೀಟರ್ ಬಳ್ಳೂರು ಗ್ರಾಮದ ಶ್ರೀಕಾಂತ್ (30) ಎಂದು ಗುರುತಿಸಲಾಗಿದೆ. ಯಾರೋ ಈತನ ಮೇಲಿನ ಹಳೆ ದ್ವೇಷಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಾರ್ಟಿ ಮಾಡುವ ನೆಪದಲ್ಲಿ ಕರೆದುಕೊಂಡು ಹೋಗಿ ದೊಡ್ಡ ಕಲ್ಲಿನಿಂದ ತಲೆಯನ್ನು ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ನಿನ್ನೆ ಮನೆಯಲ್ಲಿದ್ದ ಶ್ರೀಕಾಂತ್‍ನನ್ನು ಮೂರರಿಂದ ನಾಲ್ಕು ಜನರು ಬಂದು ಕರೆದುಕೊಂಡು ಹೋಗಿದ್ದಾರೆ. ನಂತರ ಅತ್ತಿಬೆಲೆ ಬಳಿಯ ಅರೇಹಳ್ಳಿ ಎಂಬ ಗ್ರಾಮದ ರಾಗಿ ಹೊಲದಲ್ಲಿ ಪಾರ್ಟಿ ಮಾಡಿದ್ದಾರೆ. ಎಲ್ಲರೂ ಕಂಠಪೂರ್ತಿ ಕುಡಿದಿದ್ದಾರೆ. ಈ ವೇಳೆ ಯಾವುದೋ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ. ನಂತರ ಎಲ್ಲರೂ ಸೇರಿಕೊಂಡು ಶ್ರೀಕಾಂತ್ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಆತನನ್ನು ಮಕಾಡೆ ಮಲಗಿಸಿ ದೊಡ್ಡ ಕಲ್ಲಿನಿಂದ ತಲೆಯನ್ನು ಸಂಪೂರ್ಣವಾಗಿ ಜಜ್ಜಿ ಕೊಲೆ ಮಾಡಿದ್ದಾರೆ.

    ಇಂದು ಬೆಳಿಗ್ಗೆ ಹೊಲಗಳಿಗೆ ಕೆಲಸಕ್ಕೆ ಎಂದು ಬಂದ ರೈತರು ಶವವನ್ನು ನೋಡಿದಾಗ ನಡೆದ ಘಟನೆ ಗೊತ್ತಾಗಿದ್ದು, ತಕ್ಷಣ ಅತ್ತಿಬೆಲೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸಹ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೊಡ್ಡ ಕಲ್ಲಿನಿಂದ ತಲೆಗೆ ಹೊಡೆದಿರೋದ್ರಿಂದ ತಲೆ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೊದಲು ಆತನನ್ನು ಗುರುತಿಸುವುದು ಕಷ್ಟವಾಗಿತ್ತು.

  • ಮನೆಯಲ್ಲಿ ಕಳವುಗೈದು ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗಳ ಕಾಲಿಗೆ ಫೈರಿಂಗ್

    ಮನೆಯಲ್ಲಿ ಕಳವುಗೈದು ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗಳ ಕಾಲಿಗೆ ಫೈರಿಂಗ್

    ಆನೇಕಲ್: ಇಂದು ಬೆಳಂಬೆಳಗ್ಗೆ ಇಬ್ಬರು ಪೊಲೀಸರು ಕೊಲೆ ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ.

    ಸೈಕೋ ಅಲಿಯಾಸ್ ವೇಲು ಮತ್ತು ಬಾಲ ಅಲಿಯಾಸ್ ಬಾಲಕೃಷ್ಣ ಕೊಲೆ ಆರೋಪಿಗಳು. ಇವರು ಒಂದು ವಾರಗಳ ಹಿಂದೆ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಬಳಿಯ ಒಂಟಿ ಮನೆಯಲ್ಲಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದರು.

    ಮನೆಯಲ್ಲಿದ್ದ ಶ್ವೇತಾ ಎಂಬವರ ಮಾಂಗಲ್ಯ ಸರ ಕಳ್ಳತನ ಮಾಡಿ ನಂತರ ಕೊಲೆ ಮಾಡಿದ್ದರು. ಇದೀಗ ಇಬ್ಬರ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.

    ಆನೇಕಲ್ ತಾಲೂಕಿನ ಮುತ್ಯಾಲಮಡುವಿನ ಬಳಿ ರಾತ್ರಿ ಆರೋಪಿಗಳು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಹೆಬ್ಬಗೋಡಿ ಇನ್ಸ್‍ಪೆಕ್ಟರ್ ಗೌತಮ್ ಮತ್ತು ಬನ್ನೇರುಘಟ್ಟ ಎಸ್‍ಐ ಗೋವಿಂದ್ ಬಂಧಿಸಲು ಹೋದ ಸಂದರ್ಭದಲ್ಲಿ ಪೊಲಿಸರ ಮೇಲೆಯೇ ಆರೋಪಿಗಳು ಹಲ್ಲೆಗೆ ಮುಂದಾಗಿದ್ದರು. ಚೂಪಾದ ಕತ್ತಿಯಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ನೀಡಿದ್ದಾರೆ.

    ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವೇಲೂ ಅಲಿಯಾಸ್ ಸೈಕೋ ವೇಲೂ ಮತ್ತು ಬಾಲಾಜಿ, ಬೆಂಗಳೂರು ಸುತ್ತಮುತ್ತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

  • ಲಂಚ ಪಡೆದು ಕರ್ನಾಟಕಕ್ಕೆ ಜನರನ್ನು ಬಿಡ್ತಿರುವ ತಮಿಳುನಾಡು ಪೊಲೀಸರು

    ಲಂಚ ಪಡೆದು ಕರ್ನಾಟಕಕ್ಕೆ ಜನರನ್ನು ಬಿಡ್ತಿರುವ ತಮಿಳುನಾಡು ಪೊಲೀಸರು

    -ದುಡ್ಡು ಕೊಟ್ರೆ ರಾಜ್ಯಕ್ಕೆ ಪಾಸ್ ಇಲ್ಲದಿದ್ರು ಸಿಗುತ್ತೆ ಎಂಟ್ರಿ

    ಬೆಂಗಳೂರು: ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, ಅಲ್ಲಿನ ಜನಕ್ಕೆ ಪಾಸ್ ಇದ್ದರೆ ಮಾತ್ರ ಕರ್ನಾಟಕಕ್ಕೆ ಪ್ರವೇಶ ಸಿಗುತ್ತದೆ. ಆದರೆ ಅಲ್ಲಿನ ಪೊಲೀಸರಿಗೆ ಸ್ವಲ್ಪ ಹಣ ಕೊಟ್ಟರೆ ಯಾವುದೇ ಪಾಸ್ ಇಲ್ಲದಿದ್ದರೂ ರಾಜ್ಯಕ್ಕೆ ಎಂಟ್ರಿ ಕೊಡಿಸುತ್ತಾರೆ. ಕರ್ನಾಟಕ ಸರ್ಕಾರದ ನಿರ್ಲಕ್ಷ ತಮಿಳುನಾಡು ಪೊಲೀಸರಿಗೆ ವರದಾನವಾಗಿದೆ.

    ಬೆಂಗಳೂರು ಹೊರವಲಯ ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ತಳಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಗೆ ಹಣ ನೀಡಿದ್ರೆ ಕರ್ನಾಟಕ ಪ್ರವೇಶಿಸಬಹುದು. ತಮಿಳುನಾಡಿನಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ಅಲ್ಲಿನ ಜನ ರಾಜ್ಯ ಪ್ರವೇಶಿಸಲು ಈ ಪಾಸ್ ಹಾಗೂ ಕ್ವಾರಂಟೈನ್ ಕಡ್ಡಾಯ ಮಾಡಿದೆ. ಆದರೆ ಆನೇಕಲ್ ತಾಲೂಕಿನ ಸುತ್ತ ತಮಿಳುನಾಡಿನಿಂದ ಬರುವ ಅನೇಕ ರಸ್ತೆಗಳಿದ್ದು, ಜಿಲ್ಲಾಡಳಿತ ಅತ್ತಿಬೆಲೆಯಲ್ಲಿ ಮಾತ್ರ ಚೆಕ್ ಪೋಸ್ಟ್ ನಿರ್ಮಿಸಿ ತಪಾಸಣೆ ನಡೆಸಲಾಗುತ್ತಿದೆ.

    ಸರ್ಜಾಪುರ, ಸೋಲುರೂ, ಬಳ್ಳೂರು ಇನ್ನು ಕೆಲವು ಕಡೆಗಳಲ್ಲಿ ಕನಿಷ್ಠ ಬ್ಯಾರಿಕೇಡ್ ಕೂಡ ಹಾಕಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ತಮಿಳುನಾಡಿನ ಜನ ಕಳ್ಳ ದಾರಿಯಲ್ಲಿ ರಾಜ್ಯ ಪ್ರವೇಶಿಸುತ್ತಿದ್ದಾರೆ. ಆದ್ರೆ ತಮಿಳುನಾಡು ಸರ್ಕಾರ ಕರ್ನಾಟಕ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲೂ ಚೆಕ್ ಪೋಸ್ಟ್ ನಿರ್ಮಿಸಿ ಪೊಲೀಸರನ್ನು ನಿಯೋಜಿಸಿದೆ. ಚೆಕ್‍ಪೋಸ್ಟ್ ಗಳಲ್ಲಿ ನಿಯೋಜಿತ ತಮಿಳುನಾಡು ಪೊಲೀಸರು ಈಗ ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ.

    ಹಣ ವಸೂಲಿಗೆಂದೇ ಓರ್ವನನ್ನು ಚೆಕ್ ಪೋಸ್ಟ್ ನಲ್ಲಿ ಇಟ್ಟುಕೊಂಡಿದ್ದು ಆತನಿಂದ ಸಾವಿರ ಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ತಮಿಳುನಾಡು ಪೊಲೀಸರ ಲಂಚಾವತಾರ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪೊಲೀಸ್ – ಅವರ ಹತ್ತಿರ ಇದೆ ಹೋಗಿ
    ವಾಹನ ಸವಾರ – ಸರ್ ಅವರ ಹತ್ತಿರ ಇಲ್ಲ ಅಂತೆ

    ಪೊಲೀಸ್ – ಕೊಡಿ.
    ವಾಹನ ಸವಾರ – ಅದಕ್ಕೆ ಫಸ್ಟ್ ಕೇಳ್ಬಿಟ್ಟೆ

    ಪೊಲೀಸ್ – ಎಷ್ಟ್ ಕೊಡ್ತೀರಾ?
    ವಾಹನ ಸವಾರ – ಸರ್ 100… 100 ಅಂತಾ ಹೇಳಿದ್ದಾರೆ.

    ಪೊಲೀಸ್ – ಇಲ್ಲಿ 2 ಚೆಕ್‍ಪೋಸ್ಟ್ ಇದೆ.
    ವಾಹನ ಸವಾರ – ಅದೇ ಅವರಿಗೆ 100, ನಿಮಗೆ 100

    ಪೊಲೀಸ್ – ನನಗೆ 200 ಕೊಡಪ್ಪ
    ವಾಹನ ಸವಾರ – ಸರ್ ನೋಡಿ ಸರ್ ಆನೇಕಲ್‍ನವರೇ ಸರ್.

    ಪೊಲೀಸ್ – ನೋಡು ಸರ್‍ಗೆ ಕೊಟ್ಟುಬಿಡ್ತಿನಿ. ಹೋಗು ಅಲ್ಲಿ 100 ರೂ. ಕೊಟ್ಟು ಹೋಗು.
    ವಾಹನ ಸವಾರ – ಸರ್ 250 ರೂ. ತೆಗೆದುಕೊಂಡಿದ್ದೀರಿ.

    ಪೊಲೀಸ್ – ಇಲ್ಲ 300 ರೂ. ಇದೆ.. ಅಲ್ಲಿ ಹೇಳಿ ಕೊಟ್ಟು ಹೋಗು
    ವಾಹನ ಸವಾರ – ಅಲ್ಲಿ ಕೊಡಬೇಕಾ?

    ಪೊಲೀಸ್ – ಎಷ್ಟೋತ್ತು ಆಗುತ್ತೆ?
    ವಾಹನ ಸವಾರ – ಸರ್ ಒಂದೂವರೆ ಗಂಟೆ ಆಗಬಹುದು ಸರ್.

    ಪೊಲೀಸ್ – ತಮಿಳುನಾಡಲ್ಲ 31 ರವರೆಗೆ ಲಾಕ್‍ಡೌನ್ ಇದೆ ಅದಕ್ಕೆ.. ಏನು ಪ್ರಾಬ್ಲಂ ಇಲ್ಲ. ಎಷ್ಟೋತ್ತಿಗೆ ಬರ್ತಿಯಾ..?
    ವಾಹನ ಸವಾರ – ಒಂದು 8 ಗಂಟೆಯೊಳಗೆ ಬರ್ತಿನಿ

  • ವೇಷತೊಟ್ಟು ಹಣ ಕಲೆಕ್ಟ್ ಮಾಡ್ತಿದ್ದ ವ್ಯಕ್ತಿಯ ಕೊಲೆಗೈದ ಮಂಗಳಮುಖಿಯರು

    ವೇಷತೊಟ್ಟು ಹಣ ಕಲೆಕ್ಟ್ ಮಾಡ್ತಿದ್ದ ವ್ಯಕ್ತಿಯ ಕೊಲೆಗೈದ ಮಂಗಳಮುಖಿಯರು

    – ಹತ್ಯೆಗೈದ ಮೂವರ ಬಂಧನ

    ಆನೇಕಲ್: ಮಂಗಳಮುಖಿಯರಂತೆ ವೇಷತೊಟ್ಟು ಹಣ ಕಲೆಕ್ಟ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆಗೈದು, ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಮಂಗಳಮುಖಿಯರನ್ನು ಬಂಧನ ಮಾಡುವಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಆರೋಪಿಗಳನ್ನು ದೇವಿ, ಭಾವನ ಹಾಗೂ ನಿತ್ಯ ಎಂದು ಗುರುತಿಸಲಾಗಿದೆ. ಕೊಲೆಯಾದ ವ್ಯಕ್ತಿ ರಾಮನಗರ ಮೂಲದ ರಾಜೇಂದ್ರ ಆಗಿದ್ದು, ಈತ ಬೆಳಗ್ಗಿನ ಜಾವದಲ್ಲಿ ಗಾರ್ಮೆಂಟ್ಸ್ ಉದ್ಯೋಗಿಯಾಗಿ ಕೆಲಸ ಮಾಡಿಕೊಂಡು ಸಂಜೆ ವೇಳೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಮಂಗಳಮುಖಿ ವೇಷ ತೊಟ್ಟು ಓಡಾಡುವ ವಾಹನಗಳಲ್ಲಿ ಹಣ ಕಲೆಕ್ಷನ್ ಮಾಡುತ್ತಿದ್ದ.

    ಈ ಸಂದರ್ಭದಲ್ಲಿ ರಾಜೇಂದ್ರನನ್ನು ಗಮನಿಸಿದ ಮಂಗಳಮುಖಿಯರು, ಆತನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದು ಬಳಿಕ ಶುಕ್ರವಾರ ರಾತ್ರಿಯೇ ಆರೋಪಿಗಳು ರಾಜೇಂದ್ರನ ಮೃತ ದೇಹವನ್ನು ರಾಮನಗರ ಆಸ್ಪತ್ರೆಗೆ ಕೊಂಡೊಯ್ದು ಅನಾಥ ಶವ ಎಂದು ಬಿಂಬಿಸಿದ್ದರು. ಆಗ ಆಸ್ಪತ್ರೆ ಸಿಬ್ಬಂದಿಗೆ ಅನುಮಾನ ಬಂದು ರಾಮನಗರ ಪೊಲೀಸರಿಗೆ ಮಾಹಿತಿ ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

    ಕೂಡಲೇ ಕಾರ್ಯ ಪ್ರವೃತ್ತರಾದ ರಾಮನಗರ ಪೊಲೀಸರು ಕೊಲೆ ನಡೆದಿರುವ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೋಲಿಸರಿಗೆ ಸಂಪೂರ್ಣ ಮಾಹಿತಿ ನೀಡಿ ಇದೀಗ ಮೂವರು ಆರೋಪಿಗಳನ್ನು ಬಂಧನ ಮಾಡಿ ಜೈಲಿಗಟ್ಟಿದ್ದಾರೆ.