Tag: Anegundi Utsav 2020

  • ಆನೆಗುಂದಿ ಉತ್ಸವದಲ್ಲಿ ಗಮನ ಸೆಳೆದ ಗಾಳಿಪಟ ಹಾರಾಟ, ಬೈಕ್ ಸ್ಟಂಟ್

    ಆನೆಗುಂದಿ ಉತ್ಸವದಲ್ಲಿ ಗಮನ ಸೆಳೆದ ಗಾಳಿಪಟ ಹಾರಾಟ, ಬೈಕ್ ಸ್ಟಂಟ್

    – ಮೈ ನೆವಿರೇಳಿಸಿದ ಸವಾರರು

    ಕೊಪ್ಪಳ: ಆನೆಗೊಂದಿ ಉತ್ಸವಕ್ಕೂ ಮುನ್ನ ನಡೆಯುತ್ತಿರುವ ಗಾಳಿಪಟ ಹಾರಾಟ ಹಾಗೂ ಬೈಕ್ ಸ್ಟಂಟ್‍ಗಳು ನೆರೆದವರ ಮೈ ನೆವಿರೇಳುವಂತೆ ಮಾಡಿದವು.

    ಆನೆಗೊಂದಿ ಉತ್ಸವವನ್ನು ಜನಾಕರ್ಷಣೆಯನ್ನಾಗಿಸುವ ಉದ್ದೇಶಕ್ಕೆ ಜಿಲ್ಲಾಡಳಿತ ಹಮ್ಮಿಕೊಂಡಿರುವ ನಾನಾ ಸ್ಪರ್ಧೆ, ಪ್ರದರ್ಶನಗಳ ಪೈಕಿ ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಗಾಳಿಪಟ ಹಾರಿಸುವ ಕ್ರೀಡೆ ಜನರ ಗಮನ ಸೆಳೆಯಿತು.

    ಶುಭ್ರ ಬಾನಂಗಳದಲ್ಲಿ ಹತ್ತಾರು ನಮೂನೆ, ನಾನಾ ವಿನ್ಯಾಸದ ಗಾಳಿಪಟಗಳು ಹಾರಾಡಿ ಚಿತ್ತಾರ ಮೂಡಿಸಿದವು. ಅಂತರಾಷ್ಟ್ರೀಯ ಗಾಳಿಪಟ ಪ್ರದರ್ಶಕರಾದ ಬೆಂಗಳೂರಿನ ಕೆ.ವಿ.ರಾವ್, ಮೈಸೂರಿನ ಸುಭಾಶ್ ಹಾಗೂ ದೊಡ್ಡಬಳ್ಳಾಪುರದ ಮುನಿಷ್ ಸುಮಾರು 30ಕ್ಕೂ ಹೆಚ್ಚು ಮಾದರಿಯ ಗಾಳಿಪಟ ಹಾರಿಸಿ ಜನರ ಗಮನ ಸೆಳೆದರು.

    ಇದರಲ್ಲಿ ಮುಖ್ಯವಾಗಿ ರೋರಿಂಗ್, ಟೇಲ್, ಸಿರೀಸ್, ಸ್ಟಂಟ್, ಡೆಲ್ಟಾ, ಸಿಡಿ, ಅಕ್ಟೋಪಸ್, ಡಾಲ್ಫಿನ್, ಎಲ್‍ಇಡಿ, ಪ್ಲೇನ್, ಈಗಲ್, ಸ್ಪೈಡರ್, ಟೈಗರ್ ಮಾದರಿಯ ಗಾಳಿಪಟಗಳು ಜನರ, ಮುಖ್ಯವಾಗಿ ಶಾಲಾ ಮಕ್ಕಳ ಗಮನ ಸೆಳೆದವು. ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ, ಜಿಲ್ಲಾ ಪಂಚಾಯತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಗಾಳಿ ಪಟ ಹಾರಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

    ಭಟ್ಕಳ ಮೂಲದ ಸಾಹಸಿ ಬೈಕ್ ರೈಡರ್ ಗಳಾದ ಅಖಿಲ್, ಸೈಯದ್ ಗೌಸ್ ಹಾಗೂ ಸಚಿನ್ ನೀಡಿದ ಬೈಕ್ ಸ್ಟಂಟ್ ಗಳು ನೆರೆದವರಲ್ಲಿ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತು. ಈ ಯುವಕರು ಸುಮಾರು ಅರ್ಧ ಗಂಟೆಗಳ ಕಾಲ ಬೈಕ್ಸ್ ಸ್ಟಂಟ್ ಮಾಡಿದರು. ಫ್ರಿಸ್ಟೈಲ್ ರೈಡಿಂಗಿನಲ್ಲಿ ವೀಲ್ಹಿಂಗ್, ಸ್ಟಾಪಿ, ಫ್ಲ್ಯಾಗ್ ಮಾರ್ಚಿಂಗ್, ಡ್ರಪ್ಟಿಂಗ್, ಚೈನ್ ಶೋ, ಬರ್ನೊ, ಹ್ಯಾಂಡಲ್ ಕ್ರಿಷ್, ಸ್ಟಾಂಡಿಂಗ್, ಸ್ಲಿಪಿಂಗ್, 350 ಡಿಗ್ರಿ ಸ್ಟಂಟ್, ಫೈಯರ್ ರಿಂಗ್ ಹೀಗೆ ನಾನಾ ನಮೂನೆಯ ಸ್ಟಂಟ್ ಮಾಡುವ ಮೂಲಕ ಜನರ ಗಮನ ಸೆಳೆದರು.

  • ಆನೆಗೊಂದಿ ಉತ್ಸವ: ನಿಸರ್ಗ ದೃಶ್ಯಗಳನ್ನೊಳಗೊಂಡ ಟೀಸರ್ ಬಿಡುಗಡೆ

    ಆನೆಗೊಂದಿ ಉತ್ಸವ: ನಿಸರ್ಗ ದೃಶ್ಯಗಳನ್ನೊಳಗೊಂಡ ಟೀಸರ್ ಬಿಡುಗಡೆ

    ಕೊಪ್ಪಳ: ಗಂಗಾವತಿ ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ತಾಣವಾದ ಆನೆಗೊಂದಿಯಲ್ಲಿ ಕೊಪ್ಪಳ ಜಿಲ್ಲಾಡಳಿತದಿಂದ ಜನವರಿ 9 ಹಾಗೂ 10ರಂದು ನಡೆಸಲು ಉದ್ದೇಶಿಸಿರುವ ಆನೆಗೊಂದಿ ಉತ್ಸವ-20ರ ಟೀಸರ್ ಅನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.

    ವಿಜಯನಗರ ಸಾಮ್ರಾಜ್ಯದ ಮೊದಲ ರಾಜ್ಯಧಾನಿ ಎಂದು ಗುರುತಿಸಿಕೊಂಡಿರುವ, ಶಿಲಾಯುಗದ ಇತಿಹಾಸ ಹೊಂದಿದ ಹಾಗೂ ಪೌರಾಣಿಕೆ ಹಿನ್ನೆಲೆಯ ಆನೆಗೊಂದಿ ಹಾಗೂ ಸುತ್ತಲಿನ ಐತಿಹಾಸಕ ಸ್ಮಾರಕಗಳನ್ನು ಟೀಸರ್ ನಲ್ಲಿ ಸೇರಿಸಲಾಗಿದೆ. ಜೊತೆಗೆ ಸಣಾಪುರದ ಕಲ್ಲಿನನ ಸೇತುವೆ, ಬೋಟಿಂಗ್, ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟ, ತುಂಗಭದ್ರಾ ನದಿ ಸೇರಿದಂತೆ ಇನ್ನಿತರ ದೃಶ್ಯ ಹೀಗೆ ಚಿತ್ರಿಸಲಾಗಿದೆ.

    ಉತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳ ಮಾಹಿತಿಯನ್ನೂ ಇದರಲ್ಲಿ ನೀಡಲಾಗಿದೆ. ನಾಡಿನ ಅನೇಕ ಕಲಾವಿದರು, ಕಲಾತಂಡಗಳು ಉತ್ಸವಕ್ಕೆ ಮೆರಗು ತರಲಿವೆ. ಅಷ್ಟೇ ಅಲ್ಲದೆ ಉತ್ಸವದಲ್ಲಿ ಸಾಂಪ್ರದಾಯಿಕ ಸ್ಪರ್ಧೆಗಳಾದ ಹಗ್ಗ ಜಗ್ಗಾಟ, ಕಬಡ್ಡಿ, ಮಲ್ಲಗಂಬ, ಕುಸ್ತಿ, ಕಲ್ಲುಗುಂಡು ಎತ್ತುವುದು, ಸಂಗ್ರಾಣಿ ಕಲ್ಲು ಎತ್ತುವುದು ಸೇರಿದಂತೆ ಅನೇಕ ಕ್ರೀಡೆಗಳು ನಡೆಯಲಿವೆ.