Tag: Anecal

  • ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿದ 5 ವರ್ಷದ ಪೋರಿ

    ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿದ 5 ವರ್ಷದ ಪೋರಿ

    ಆನೇಕಲ್: ಗ್ರಾಮೀಣ ಭಾಗದ ಬಡ ಕುಟುಂಬದಲ್ಲಿ ಜನಿಸಿದ ಐದು ವರ್ಷದ ಪುಟ್ಟ ಪೋರಿ ಪ್ರತಿಕ್ಷಾ ಹುಲಾ ಹೂಪ್ ರಿಂಗ್ ನಲ್ಲಿ ಇಂಟರ್ ನ್ಯಾಶನಲ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾಳೆ.

    ಹೌದು, ಆನೇಕಲ್ ತಾಲೂಕಿನ ಹಳೇಹಳ್ಳಿ ಗ್ರಾಮದ ನಿವಾಸಿ ಶ್ರೀನಿವಾಸ್ ಹಾಗೂ ದೀಪಾ ದಂಪತಿ ಮಗಳಾದ 5 ವರ್ಷದ ಪುಟ್ಟ ಕಂದ ಪ್ರತಿಕ್ಷಾ ಈ ಸಾಧನೆ ಮಾಡಿದ ಬಾಲಕಿಯಾಗಿದ್ದಾಳೆ. ಹುಲಾ ಹೂಪ್ ರಿಂಗ್ ನಿಂದ ಬರೋಬ್ಬರಿ 44 ನಿಮಿಷ 4 ಸೆಕೆಂಡ್ ಗಳ ವರೆಗೂ ನಿಲ್ಲಿಸದೇ ಸೊಂಟದ ಮೂಲಕ ತಿರುಗಿಸಿ ಇಂಟರ್ ನ್ಯಾಶನಲ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿದ್ದಾಳೆ. ಇದನ್ನೂ ಓದಿ: ನೋಟರಿ ಕಾಯ್ದೆ ತಿದ್ದುಪಡಿ ವಿರೋಧ – ಸಚಿವ ಪ್ರಹ್ಲಾದ್ ಜೋಶಿಗೆ ಮನವಿ

    ಇಷ್ಟೇ ಅಲ್ಲದೇ ಮಲ್ಟಿ ಟ್ಯಾಲೆಂಟ್ ಹೊಂದಿರುವ ಪ್ರತಿಕ್ಷಾ ಆ್ಯಕ್ಟಿಂಗ್, ಡ್ಯಾನ್ಸ್, ಡ್ರಾಯಿಂಗ್, ಮಾಡೆಲಿಂಗ್, ಕ್ಲೇ ಮಾಡೆಲಿಂಗ್ ಮಾಡುವ ಕೌಶಲ್ಯವನ್ನ ಹೊಂದಿದ್ದಾಳೆ. ಈಗಾಗಲೇ ಈಕೆಗೆ ಇಂಡಿಯನ್ ಚಿಲ್ಡ್ರನ್ಸ್ ಟ್ಯಾಲೆಂಟ್ ಅವಾರ್ಡ್, ಇಂಡಿಯಾ ಸ್ಟಾರ್ ಐಕಾನ್ ಕಿಡ್ಸ್ ಅಚಿವೆರ್ಸ್ ಅವಾರ್ಡ್, ಕರ್ನಾಟಕ ಅಚಿವೆರ್ಸ್ ಬುಕ್ ಆಫ್ ರೆಕಾರ್ಡ್, ಸುವರ್ಣ ಸಾಧನ ಶ್ರೀ ಪ್ರಶಸ್ತಿ ಸೇರಿದಂತೆ ಸಾಲು ಸಾಲು ಪ್ರಶಸ್ತಿಗಳು ಈಕೆಯ ಸಾಧನೆಗೆ ಹುಡುಕಿ ಬರುತ್ತಿವೆ.

  • ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಮತ್ತೊಂದು ಅಪಘಾತ – ಇಬ್ಬರು ಸಾವು

    ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಮತ್ತೊಂದು ಅಪಘಾತ – ಇಬ್ಬರು ಸಾವು

    ಆನೇಕಲ್: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಅಪಘಾತದ ನಡೆದು ಮಾಸುವ ಮುನ್ನವೇ ಮತ್ತೊಂದು ಅಪಘಾತ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ.

    ಎಲೆಕ್ಟ್ರಾನಿಕ್ ಸಿಟಿ ಫೇಸ್ 1 ಹಾಗೂ ಫೇಸ್ 2 ಬೆಸೆಯುವ ಲಿಂಕ್ ಫ್ಲೈಓವರ್ ಮೇಲೆ ಬಿಎಂಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಾದ ಪ್ರಭಾಕರ್(25) ಹಾಗೂ ಈತನ ಸ್ನೇಹಿತೆ ಸಹನಾ(24) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿಗೆ ಮನವಿ ನೀಡುವ ವೇಳೆ ನೂಕು ನುಗ್ಗಲು ಗಲಾಟೆ

    ಲಿಂಕ್ ಫ್ಲೈಓವರ್ ಮೇಲೆ ಬಿಎಂಟಿಸಿ ಬಸ್ ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ಅಪಘಾತ ನಡೆದಿದ್ದು, ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಈ ವೇಳೆ ಬಿಎಂಟಿಸಿ ಬಸ್ ಇಬ್ಬರ ಮೇಲು ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ.

    ಟೆಕ್ಕಿಯಾಗಿದ್ದ ಪ್ರಭಾಕರ್ ಹಾಗೂ ಸಹನಾ ಮೂಲತಃ ದಾವಣಗೆರೆಯವರಾಗಿದ್ದು, ಊಟಕ್ಕೆ ತೆರಳಿದಾಗ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಸಾಲದ ಕಂತನ್ನು ಪಾವತಿ ಮಾಡದ್ದಕ್ಕೆ ಅಣ್ಣನನ್ನೆ ಕೊಂದ ಪಾಪಿ ತಮ್ಮ

    ಸ್ಥಳಕ್ಕೆ ಎಲೆಕ್ಟ್ರಾನಿಕ್  ಸಿಟಿ ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಹೆಂಡ್ತಿ ಸುಂದರವಾಗಿದ್ದು ತಪ್ಪಾಯ್ತು- ಪತಿಯ ಕಿರುಕುಳಕ್ಕೆ ಹೋಯ್ತು ಜೀವ

    ಹೆಂಡ್ತಿ ಸುಂದರವಾಗಿದ್ದು ತಪ್ಪಾಯ್ತು- ಪತಿಯ ಕಿರುಕುಳಕ್ಕೆ ಹೋಯ್ತು ಜೀವ

    ಬೆಂಗಳೂರು: ಅನುಮಾನಾಸ್ಪದವಾಗಿ ಗೃಹಿಣಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ಬಳಿಯ ಮಾದಪ್ಪನಹಳ್ಳಿಯಲ್ಲಿ ನಡೆದಿದೆ.

    ಜಯಶ್ರೀ ಸಾವನ್ನಪ್ಪಿದ ಗೃಹಿಣಿ. ಮಾದಪ್ಪನಹಳ್ಳಿಯ ಸುಬ್ರಮಣಿ ಎರಡು ವರ್ಷಗಳ ಹಿಂದೆ ಹೊಸಕೋಟೆಯ ಜಯಶ್ರೀಯನ್ನು ಮದುವೆ ಆಗಿದ್ದನು. ಮದುವೆ ಮುಂಚೆ ಪತ್ನಿಯ ರೂಪಕ್ಕೆ ಮನಸೋತಿದ್ದ ಸುಬ್ರಮಣಿ ಹೆಂಡತಿಯನ್ನು ಅನುಮಾನಿಸ ತೊಡಗಿದ್ದನು. ಪತ್ನಿ ಸುಂದರವಾಗಿದ್ದರಿಂದಲೇ ಅನುಮಾನಿಸುತ್ತಿದ್ದ ಎನ್ನಲಾಗಿದೆ. ಇಷ್ಟು ಮಾತ್ರವಲ್ಲದೇ ನಾನು ಸಿನಿಮಾ ಮಾಡಬೇಕು. ಹಾಗಾಗಿ ತವರು ಮನೆಯಿಂದ ಹಣ ತರುವಂತೆ ವರದಕ್ಷಿಣೆ ಕಿರುಕುಳ ಸಹ ನೀಡುತ್ತಿದ್ದನು.

    ದೇವಸ್ಥಾನಕ್ಕೆ ತೆರಳಿದ್ರೆ ತಾನು ಸ್ಪೆಷಲ್ ಪ್ರವೇಶ ಪಡೆದು, ಪತ್ನಿಯನ್ನು ಸಾಮಾನ್ಯ ಸಾಲಿನಲ್ಲಿ ನಿಲ್ಲಿಸಿ ಮಾನಸಿಕವಾಗಿಯೂ ಕಿರುಕುಳ ನೀಡುತ್ತಿದ್ದನು. ಹೆಜ್ಜೆ ಹೆಜ್ಜೆಗೂ ಪತ್ನಿಯನ್ನು ಅನುಮಾನಿಸುತ್ತಿದ್ದ ವಿಷಯವನ್ನು ತಿಳಿದು ಕುಟುಂಬಸ್ಥರು ಪಂಚಾಯ್ತಿ ನಡೆಸಿ ತಿಳಿ ಹೇಳಿದ್ದರು. ಆದರೂ ಸುಬ್ರಮಣಿ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಶನಿವಾರ ಪೋಷಕರಿಗೆ ಕರೆ ಮಾಡಿದ್ದ ಜಯಶ್ರೀ ತನ್ನನ್ನು ಕರೆದುಕೊಂಡು ಹೋಗುವಂತೆ ಕಣ್ಣೀರಿಟ್ಟಿದ್ದರು.

    ಪೋಷಕರು ಬರೋವಷ್ಟರಲ್ಲಿಯೇ ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸುಬ್ರಮಣಿ ಹೇಳುತ್ತಿದ್ದಾನೆ. ಇತ್ತ ಜಯಶ್ರೀ ಪೋಷಕರು, ನೀನೇ ಹೊಡೆದು ನಮ್ಮ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದೀಯಾ ಎಂದು ಆರೋಪಿಸುತ್ತಿದ್ದಾರೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 8 ತಿಂಗಳ ಹಿಂದೆ ಮದ್ವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ಸಾವು

    8 ತಿಂಗಳ ಹಿಂದೆ ಮದ್ವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ಸಾವು

    ಬೆಂಗಳೂರು: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನಪ್ಪಿದ್ದು, ಮೃತಳ ಪೋಷಕರು ವರದಕ್ಷಿಣೆಗಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

    ಜೀವಿತಾ(21) ಅನುಮಾನಾಸ್ಪದವಾಗಿ ಮೃತಪಟ್ಟ ಗೃಹಿಣಿ. ಆನೇಕಲ್ ಪಟ್ಟಣದ ಬಹದೂರ್ ಪುರ ನಿವಾಸಿ ಮೋಹನ್ ಎಂಬವನಿಗೆ 8 ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಗುರುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಜೀವಿತಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

    ಜೀವಿತಾ ಮದುವೆಯ ಸಂದರ್ಭದಲ್ಲಿ ಮೋಹನ್‍ಗೆ 120 ಗ್ರಾಂ ಚಿನ್ನ ಹಾಗೂ 75 ಸಾವಿರ ನಗದನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆಯ ನಂತರ ಮೋಹನ್, ಅತ್ತೆ ಗೌರಮ್ಮ, ಮಾವ ನಾಗರಾಜು ಹಾಗೂ ನಾದಿನಿ ಶ್ವೇತಾ ಸೇರಿ ಹೆಚ್ಚಿನ ವರದಕ್ಷಿಣೆ ತರುವಂತೆ ಜೀವಿತಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಜೀವಿತಾಗೆ ಆರೋಗ್ಯ ಸಮಸ್ಯೆ ಇದ್ದುದ್ದರಿಂದ ಪೋಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತವರಿಗೆ ಕರೆತಂದಿದ್ದರು. ಆದರೆ ಬುಧವಾರ ಮೋಹನ್ ಜೀವಿತಾಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದ. ಜೀವಿತಾ ಒಲ್ಲದ ಮನಸ್ಸಿನಿಂದಲೇ ಗಂಡನ ಮನೆಗೆ ಹೋಗಿದ್ದರು.

    ಗುರುವಾರ ಬೆಳಗ್ಗೆ ಮೋಹನ್ ಜೀವಿತಾ ಮನೆಯವರಿಗೆ ಫೋನ್ ಮಾಡಿ, ನಿಮ್ಮ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಸ್ಪತ್ರೆಗೆ ಸೇರಿಸಿದ್ದೀವೆ ಎಂದು ತಿಳಿಸಿದ್ದಾನೆ. ಆದ್ರೆ ಕುಟುಂಬದವರು ಆಸ್ಪತ್ರೆಗೆ ಹೋಗಿ ನೋಡಿದಾಗ ಜೀವಿತಾ ಮೃತಪಟ್ಟಿದ್ದರು.

    ನಮ್ಮ ಮಗಳು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾಳೆ. ಮೋಹನ್ ಹಾಗೂ ಅವರ ಕುಟುಂಬದವರು ಸೇರಿ ಮಗಳನ್ನು ಕೊಂದಿದ್ದಾರೆ ಎಂದು ಆರೋಪಿಸಿ ಜೀವಿತಾ ಕುಟುಂಬದವರು ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಪಡೆದ ಪೊಲೀಸರು ಮೋಹನ್ ಹಾಗೂ ಕುಟುಂಬದವರನ್ನು ವಶಕ್ಕೆ ಪಡೆದು ವಿಚಾರಣೆ ನೆಡೆಸುತ್ತಿದ್ದಾರೆ.