Tag: andrapradesh

  • ಬಿಜೆಪಿ ಅಧಿಕಾರಕ್ಕೆ ಬಂದ್ರೆ 70 ರೂ.ಗೆ ಮದ್ಯ: ಆಂಧ್ರ ಬಿಜೆಪಿ ರಾಜ್ಯಾಧ್ಯಕ್ಷ

    ಬಿಜೆಪಿ ಅಧಿಕಾರಕ್ಕೆ ಬಂದ್ರೆ 70 ರೂ.ಗೆ ಮದ್ಯ: ಆಂಧ್ರ ಬಿಜೆಪಿ ರಾಜ್ಯಾಧ್ಯಕ್ಷ

    ಹೈದರಾಬಾದ್: 2024ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಒಂದು ಕೋಟಿ ಮತಗಳನ್ನು ನೀಡಿದರೆ ಉತ್ತಮ ಗುಣಮಟ್ಟದ ಮದ್ಯವನ್ನು ಕೇವಲ 70 ರೂಪಾಯಿಗೆ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸೋಮು ವೀರರಾಜು ಹೇಳಿದ್ದಾರೆ. ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಮಂಗಳವಾರ ವಿಜಯವಾಡದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹೀಗೆ ಭಿನ್ನವಾದ ಆಫರ್‌ವೊಂದನ್ನು ಜನರ ಮುಂದೆ ಇಡಲಾಗಿದೆ. ಆದರೆ ಇದು ವ್ಯಾಪಕ ಟೀಕೆಗೆ ಒಳಪಟ್ಟಿದೆ. ರಾಜ್ಯ ಸರ್ಕಾರ ಈಗ ನೀಡುತ್ತಿರುವ ಮದ್ಯ ಬಹಳ ಕಳಪೆ ಮಟ್ಟದ್ದಾಗಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನಾವು ಉತ್ತಮ ಗುಣಮಟ್ಟದ ಮದ್ಯವನ್ನು ಬಹಳ ಕಡಿಮೆ ಬೆಲೆಗೆ ಕೊಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

    ಈಗ ಪ್ರತಿಯೊಬ್ಬ ವ್ಯಕ್ತಿಯೂ ತಿಂಗಳಿಗೆ 12 ಸಾವಿರ ರೂಪಾಯಿಗಳನ್ನು ಮದ್ಯಕ್ಕಾಗಿಯೇ ಖರ್ಚು ಮಾಡುತ್ತಾರೆ. ಇದು ಕೂಡಾ ಸರ್ಕಾರವೇ ನಾನಾ ಯೋಜನೆಗಳ ಹೆಸರಿನಲ್ಲಿ ನೀಡುತ್ತಿದೆ. ಆಂಧ್ರ ಪ್ರದೇಶದಲ್ಲಿ ಒಂದು ಕೋಟಿ ಜನ ಮದ್ಯಪಾನ ಮಾಡುತ್ತಾರೆ ಎನ್ನುವ ಅಂಕಿ ಅಂಶಗಳಿದ್ದು, ಈ ಒಂದು ಕೋಟಿ ಜನರೂ ಬಿಜೆಪಿಗೆ ವೋಟು ಹಾಕಿದರೆ ಉತ್ತಮ ಗುಣಮಟ್ಟದ ಮದ್ಯವನ್ನು ಕೇವಲ 70 ರೂಪಾಯಿ ಬೆಲೆಗೆ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಇದರಿಂದ ಆದಾಯ ಹೆಚ್ಚಾದರೆ ಒಂದು ಕ್ವಾಟರ್‌ಗೆ 50 ರೂಪಾಯಿಗೆ ಕೊಡಲೂ ನಾವು ಸಿದ್ಧ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ಎರಡೇ ದಿನ ಬಾಕಿ – ಹಲವು ವಲಯಗಳಿಂದ ಇನ್ನು ಸಿಕ್ಕಿಲ್ಲ ಪರಿಪೂರ್ಣ ಬೆಂಬಲ

    ರಾಜ್ಯ ಸರ್ಕಾರ ಕಳಪೆ ಗುಣಮಟ್ಟದ ಮದ್ಯವನ್ನು ಹೆಚ್ಚಿನ ದರಗಳಿಗೆ ಮಾರಾಟ ಮಾಡುತ್ತಿದೆ. ಸ್ಪೆಷಲ್ ಸ್ಟೇಟಸ್, ಗವರ್ನರ್ಸ್ ಮೆಡಲ್‌ನಂತಹ ಲೇಬಲ್‌ಗಳ ಅಡಿಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಬ್ರಾಂಡೆಡ್ ಮದ್ಯ ಮಾರಾಟ ಮಾಡುತ್ತಿಲ್ಲ. ಆಡಳಿತ ಪಕ್ಷ ಸಂಪೂರ್ಣ ಮದ್ಯ ನಿಷೇಧ ಎಂದು ಹೇಳಿದರೂ ಬ್ರಾಂಡಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಭಾರತದ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ಹೃದಯ ಸ್ತಂಭನದಿಂದ ನಿಧನ

    ಬ್ರಾಂಡ್‌ಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಕಾರಣ ರಾಜ್ಯದಲ್ಲಿ ಪ್ರಿಮಿಯಂ ಮದ್ಯ ಮಾರಾಟವಾಗುತ್ತಿದೆ. ರಾಜ್ಯ ಸರ್ಕಾರವು ಮದ್ಯದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸಿದೆಯಾದರೂ ವಿಶೇಷ ಮಾರ್ಜಿನ್ ಸೇರಿಸಿರುವುದರಿಂದ ಬೆಲೆಗಳು ಬದಲಾಗಿಲ್ಲ. ಹೀಗಾಗಿ ಬೆಲೆ ಇಳಿಕೆಯ ಲಾಭಗಳು ಗ್ರಾಹಕರಿಗೆ ಲಭ್ಯವಾಗುತ್ತಿಲ್ಲ. ಬಡ ವರ್ಗದ ಜನರು ಮದ್ಯ ಸೇವನೆಯನ್ನು ಕಡಿಮೆ ಮಾಡುವ ಉದ್ದೇಶಕ್ಕಾಗಿ ಸರ್ಕಾರ ಮದ್ಯದ ಬೆಲೆ ಹೆಚ್ಚಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಹಡಿಯಿಂದ ಬಿದ್ದ ಎಂಬಿಬಿಎಸ್ ವಿದ್ಯಾರ್ಥಿ!

  • ಆಂಧ್ರದಲ್ಲಿ ಒಂದು ವರ್ಷ ಗುಟ್ಕಾ, ಪಾನ್ ಮಸಾಲ ನಿಷೇಧ

    ಆಂಧ್ರದಲ್ಲಿ ಒಂದು ವರ್ಷ ಗುಟ್ಕಾ, ಪಾನ್ ಮಸಾಲ ನಿಷೇಧ

    ವಿಜಯವಾಡ: ತಂಬಾಕು, ನಿಕೊಟಿನ್ ಹಾಗೂ ಇತರೆ ತಂಬಾಕಿನ ಉತ್ಪನ್ನಗಳ ತಯಾರಿಕೆಯಾದ ಗುಟ್ಕಾ ಹಾಗೂ ಪಾನ್ ಮಸಾಲಗಳ ಮಾರಾಟವನ್ನು ಆಂಧ್ರಪ್ರದೇಶ ಸರ್ಕಾರ ನಿಷೇಧಿಸಿದೆ.

    ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ ಅಡಿಯಲ್ಲಿ ಈ ಕಾನೂನನ್ನು ಜಾರಿಗೆ ತರಲಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಪ್ರಿವೆಂಟಿವ್ ಮೆಡಿಸಿನ್, ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು ಮತ್ತು ಆರೋಗ್ಯ, ಆಹಾರ ಸುರಕ್ಷತಾ ನಿರ್ದೇಶನಾಲಯದ ಆಯುಕ್ತರು ಈ ಆದೇಶವನ್ನು ಹೊರಡಿಸಿದ್ದಾರೆ.

    ಇಂದಿನಿಂದ ಒಂದು ವರ್ಷದವರೆಗೆ ಈ ನಿಯಮವೂ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ತಿಳಿಸಿದೆ. ರಾಜ್ಯ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಪದಾರ್ಥಗಳನ್ನು ಹೊಂದಿರುವ ಗುಟ್ಕಾ, ಪಾನ್ ಮಸಾಲ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟದಿಂದ ಅಪಾರ ಹಾನಿಯಾಗುತ್ತದೆ. ಅದನ್ನು ತಿನ್ನುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಲೆಗಳು ಬರುವ ಸಾಧ್ಯತೆಯಿದ್ದು, ಇದರಿಂದಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಯುಎಸ್, ಭಾರತದ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ CEO

    ತಂಬಾಕು ಉತ್ಪನ್ನಗಳನ್ನು ಜಗಿಯುವ ತಂಬಾಕು, ಖೈನಿ, ಖರ್ರಾ, ಪರಿಮಳಯುಕ್ತ ತಂಬಾಕು ಹೀಗೆ ವಿವಿಧ ಬಗೆಯಲ್ಲಿ ಪ್ಯಾಕ್ ಮಾಡಲಾಗುವ ತಂಬಾಕು ಮಾರಾಟವನ್ನು ಇಡೀ ಆಂಧ್ರಪ್ರದೇಶದಲ್ಲಿ ಒಂದು ವರ್ಷಗಳ ಕಾಲ ನಿಷೇಧಿಸಲಾಗಿದೆ.

  • ಆಂಧ್ರದ ಕಡಪಾದಲ್ಲಿ ಪ್ರವಾಹ – ಮೂವರು ಸಾವು, 30 ಮಂದಿ ನಾಪತ್ತೆ

    ಆಂಧ್ರದ ಕಡಪಾದಲ್ಲಿ ಪ್ರವಾಹ – ಮೂವರು ಸಾವು, 30 ಮಂದಿ ನಾಪತ್ತೆ

    ಹೈದರಾಬಾದ್: ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಇಂದು ಹಠಾತ್ ಪ್ರವಾಹ ಸಂಭವಿಸಿದ್ದು, ಮೂವರು ಸಾವನ್ನಪ್ಪಿ, 30 ಮಂದಿ ನಾಪತ್ತೆಯಾಗಿದ್ದಾರೆ.

    ಅಣೆಕಟ್ಟು ಒಡೆದು ಚೆಯ್ಯೆರು ನದಿ ಉಕ್ಕಿ ಹರಿಯುವ ಮೂಲಕ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ. ನಂದಲೂರಿನ ಸ್ವಾಮಿ ಆನಂದ ದೇವಸ್ಥಾನವೂ ಮುಳುಗಡೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ.

    ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ರಾಯಲಸೀಮಾದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಹೋರಾಟದಿಂದ ಮೃತಪಟ್ಟ ರೈತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಿ: ಸಿದ್ದರಾಮಯ್ಯ

    ತಿರುಮಲದಲ್ಲಿ ಕೂಡ ಭಾರೀ ಪ್ರವಾಹ ಉಂಟಾಗಿದ್ದು, ನೂರಾರು ಯಾತ್ರಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ತಿರುಮಲ ಬೆಟ್ಟದ ಮುಖ್ಯ ದೇವಾಲಯಕ್ಕೆ ಹೊಂದಿಕೊಂಡಿರುವ ನಾಲ್ಕು ಬೀದಿಗಳು ಜಲಾವೃತಗೊಂಡಿದ್ದು, ಪ್ರವಾಹದ ನೀರು ನೆಲದಿಂದ ಎತ್ತರಕ್ಕೆ ತುಂಬಿದ್ದು, ಜನರು ಓಡಾಡಲು ಸಹ ಪರದಾಡುತ್ತಿರುವುದನ್ನು ಕಾಣಬಹುದಾಗಿದೆ. ತಿರುಮಲ ಬೆಟ್ಟದಲ್ಲಿ ಹಲವಾರು ಮರಗಳು ನೆಲಕ್ಕುರುಳಿದ್ದು, ಪಾಪವಿನಾಶನಂ ಮತ್ತು ಶ್ರೀವಾರಿ ಪಾದಾಲು ಮುಂತಾದ ಸ್ಥಳಗಳಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ.

    ಇದೀಗ ಎನ್‍ಡಿಆರ್‌ಎಫ್ ಮತ್ತು ಎಸ್‍ಡಿಆರ್‌ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕ್ರಮ ಕೈಗೊಂಡಿವೆ. ಇನ್ನೂ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದ್ದು, ರಕ್ಷಣಾ ಮತ್ತು ಪರಿಹಾರ ಕ್ರಮಗಳನ್ನು ಹೆಚ್ಚಿಸುವಂತೆ ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಮಗುವಿನ ಮುದ್ದಾದ ಫೋಟೋ ಶೇರ್ ಮಾಡಿದ ನಟಿ

  • ಸೇವಾಸಿಂಧು ಇ-ಪಾಸ್ ಹೊಂದಿರುವವರಿಗೆ KSRTCಯಿಂದ ಅಂತರ-ರಾಜ್ಯ ಸಾರಿಗೆ ಸೌಲಭ್ಯ

    ಸೇವಾಸಿಂಧು ಇ-ಪಾಸ್ ಹೊಂದಿರುವವರಿಗೆ KSRTCಯಿಂದ ಅಂತರ-ರಾಜ್ಯ ಸಾರಿಗೆ ಸೌಲಭ್ಯ

    – ನಾಳೆಯಿಂದ ಸೌಲಭ್ಯ ಜಾರಿ

    ಬೆಂಗಳೂರು: ಸೇವಾಸಿಂಧು ಇ-ಪಾಸ್ ಹೊಂದಿರುವವರಿಗೆ ಅಂತರ-ರಾಜ್ಯ ಸಾರಿಗೆ ಸೌಲಭ್ಯವನ್ನು ಒದಗಿಸಲು ಕೆಎಸ್ಆರ್‌ಟಿಸಿ ಮುಂದಾಗಿದೆ.

    ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್‌ಟಿಸಿ ಸಹಾಯವಾಣಿ ಆರಂಭಿಸಿದೆ. ಇ-ಪಾಸ್ ಹೊಂದಿರುವವರಿಗೆ ಅಂತರ-ರಾಜ್ಯ ಸಾರಿಗೆ ಸೌಲಭ್ಯವನ್ನು ಒದಗಿಸಲು ಸಹಾಯವಾಣಿಯನ್ನು ದಿನಾಂಕ 11-05-2020 ರಿಂದ ಜಾರಿಗೆ ತರಲಿದೆ.

    ಸಹಾಯವಾಣಿ ಸಂಖ್ಯೆ:
    * ತಮಿಳುನಾಡು ರಾಜ್ಯ/ಪಾಂಡಿಚೇರಿ ಪ್ರಯಾಣಿಕರಿಗೆ ಸಹಾಯವಾಣಿ ಸಂಖ್ಯೆ: 7760990100, 7760990560, 7760990034, 7760990035, 7760991295.

    * ಆಂಧ್ರಪ್ರದೇಶ/ತೆಲಂಗಾಣ ರಾಜ್ಯ ಪ್ರಯಾಣಿಕರಿಗೆ ಸಹಾಯವಾಣಿ ಸಂಖ್ಯೆ: 7760990561, 7760990532, 7760990955, 7760990530, 7760990967.

    * ಕೇರಳ ರಾಜ್ಯ ಪ್ರಯಾಣಿಕರಿಗೆ ಸಹಾಯವಾಣಿ ಸಂಖ್ಯೆ: 7760990287, 7760990988, 7760990531, 6366423895, 6366423896.

    ಹೊರ ರಾಜ್ಯಗಳಿಂದ ಬಂದವರು ಕ್ವಾರಂಟೈನ್:
    ಹೊರರಾಜ್ಯಗಳಿಂದ ಬೆಂಗಳೂರಿಗೆ ಸಾಕಷ್ಟು ಮಂದಿ ಬರುತ್ತಿರುವ ಹಿನ್ನೆಲೆ ಅವರಿಂದ ನಗರದಲ್ಲಿ ಕೊರೊನಾ ಸೋಂಕು ಹರಡಬಾರದು ಎಂದು ಎಚ್ಚರಿಕೆ ವಹಿಸಲಾಗಿದ್ದು, ಹೊರ ರಾಜ್ಯದಿಂದ ಸಿಲಿಕಾನ್ ಸಿಟಿಗೆ ಬರುವವರಿಗೆ ಕಡ್ಡಾಯವಾಗಿ ಕೈಗೆ ಸ್ಟಾಂಪಿಂಗ್ ಮಾಡಲಾಗುತ್ತದೆ. ಅವರು 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಇರಲೇಬೇಕು ಎಂದು ಜಿಲ್ಲಾಡಳಿತ ತಿಳಿಸಿತ್ತು.

    ಹೊರ ರಾಜ್ಯದವರಿಂದ ನಗರದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಅತ್ತಿಬೆಲೆ ಚೆಕ್‍ಪೋಸ್ಟ್ ನಲ್ಲಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಬೇರೆ ರಾಜ್ಯದಿಂದ ಬಂದವರ ಕೈಗೆ ಸ್ಟಾಂಪಿಂಗ್ ಹಾಕಿ, ಥರ್ಮಲ್ ಸ್ಕ್ಯಾನಿಂಗ್ ಮಾಡಿ, 14 ದಿನ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಸೂಚಿಸಲಾಗುತ್ತದೆ. ಬೈಕು, ಕಾರು ಯಾವುದೇ ಖಾಸಗಿ ವಾಹನದಲ್ಲೂ ಬಂದರೂ ಸೀಲ್ ಫಿಕ್ಸ್, ಕ್ವಾರಂಟೈನ್ ಕಡ್ಡಾಯ ಎಂದು ಬೆಂಗಳೂರು ಜಿಲ್ಲಾಡಳಿತ ಮಾಹಿತಿ ನೀಡಿತ್ತು.

    ಷರತ್ತು ಪಾಲಿಸಿ:
    ಲಾಕ್‍ಡೌನ್ ಘೋಷಣೆಗೂ ಮುನ್ನ ನೆರೆ ರಾಜ್ಯಕ್ಕೆ ಹೋಗಿರುವ ಕನ್ನಡಿಗರು ಪಾಸ್ ಪಡೆಯುವ ಮೂಲಕ ಮರಳಿ ಕರ್ನಾಟಕಕ್ಕೆ ಬರಬಹುದಾಗಿದೆ. ರಾಜ್ಯಕ್ಕೆ ಬರುವ ಕನ್ನಡಿಗರು ಸೇವಾ ಸಿಂಧು ವೆಬ್‍ಸೈಟ್‍ಗೆ ತೆರಳಿ ವಿವರಗಳನ್ನು ನೀಡಬೇಕಾಗುತ್ತದೆ. ಈ ಎಲ್ಲ ವಿವರಗಳು ಸರಿಯಾಗಿದ್ದರೆ ಇ ಪಾಸ್ ಡೌನ್‍ಲೋಡ್ ಮಾಡಬಹುದು.

    ಇ ಪಾಸ್ ಸಿಕ್ಕಿದ ದಿನದಿಂದ ಒಂದು ವಾರದ ವರೆಗೆ ಮಾತ್ರ ಈ ಪಾಸ್ ಉರ್ಜಿತದಲ್ಲಿರುತ್ತದೆ. ಸ್ವಂತ ವಾಹನ, ಬಾಡಿಗೆ ವಾಹನ ಅಥವಾ ಬಸ್ ಇವುಗಳ ಮೂಲಕ ಬರಬಹುದು. ವಾಹನದಲ್ಲಿ ಬರಬೇಕಾದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕುಳಿತುಕೊಳ್ಳಬೇಕು. ಒಂದು ಕಾರಿನಲ್ಲಿ ಗರಿಷ್ಟ 3 ಮಂದಿ, ಎಸ್‍ಯುವಿ ವಾಹನದಲ್ಲಿ 5, ವ್ಯಾನ್ ನಲ್ಲಿ 10 ಮಂದಿ, ಬಸ್ ನಲ್ಲಿ ಗರಿಷ್ಟ 25 ಮಂದಿ ಪ್ರಯಾಣಿಸಬಹುದು. ಯಾವ ಚೆಕ್ ಪೋಸ್ಟ್ ಮೂಲಕ ಅನುಮತಿ ನೀಡಲಾಗಿದೆಯೋ ಆ ಚೆಕ್ ಪೋಸ್ಟ್ ಮೂಲಕ ಮಾತ್ರ ಪ್ರವೇಶ ನೀಡಲಾಗುತ್ತದೆ.

    ವೆಬ್‍ಸೈಟಿಗ್ ಭೇಟಿ ನೀಡಲು ಕ್ಲಿಕ್ ಮಾಡಿ:  www.sevasindhu.karnataka.gov.in/

  • ನೀರು ಹಿಡಿಯುವ ವಿಚಾರವಾಗಿ ಶುರುವಾದ ಜಗಳಕ್ಕೆ ಮಹಿಳೆ ಬಲಿ

    ನೀರು ಹಿಡಿಯುವ ವಿಚಾರವಾಗಿ ಶುರುವಾದ ಜಗಳಕ್ಕೆ ಮಹಿಳೆ ಬಲಿ

    ಹೈದರಾಬಾದ್: ಸಾರ್ವಜನಿಕ ನಲ್ಲಿಯಲ್ಲಿ ನೀರಿಗಾಗಿ ನಡೆದ ಜಗಳದಲ್ಲಿ ಮಹಿಳೆಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ನಡೆದಿದೆ.

    ಸೋಮಪೇಟ ಪಟ್ಟಣದ ಪಲ್ಲಿವೇದಿ ಪ್ರದೇಶದ ನಿವಾಸಿ ಪಟಿಪುಡಿ ಪದ್ಮ(38) ಮೃತ ದುರ್ದೈವಿ. ನೀರು ಹಿಡಿಯುವ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳಕ್ಕೆ ಪದ್ಮ ಜೀವ ಕಳೆದುಕೊಂಡಿದ್ದಾರೆ. ಪಲ್ಲಿವೇದಿ ಪ್ರದೇಶದ ಶಾಲೆಯೊಂದರ ಬಳಿ ಇದ್ದ ಸಾರ್ವಜನಿಕ ನಲ್ಲಿಯ ನೀರಿಗಾಗಿ ಸುತ್ತಮುತ್ತಲ ಜನ ಬರುತ್ತಾರೆ.

    ನೀರು ತರಲು ಪದ್ಮ ನಲ್ಲಿಯ ಬಳಿ ತೆರೆಳಿದ್ದರು. ಅಲ್ಲಿ ನೀರಿಗಾಗಿ ಎಲ್ಲರು ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಸ್ಥಳಿಯ ನಿವಾಸಿಯಾಗಿದ್ದ ತೆಪ್ಪಲ ಸುಂದರಮ್ಮನ ಹಾಗೂ ಪದ್ಮ ನಡುವೆ ಜಗಳ ನಡೆದಿದೆ. ಮೊದಲು ಮಾತಿನಿಂದ ಶುರುವಾಗಿದ್ದ ಜಗಳ ಕೊನೆಗೆ ಒಂದು ಜೀವ ತೆಗೆಯುವ ಮಟ್ಟಿಗೆ ಬಂದಿದೆ.

    ಜಗಳವಾಡುತ್ತಾ ಇಬ್ಬರು ಮಹಿಳೆಯರು ನೀರು ಹಿಡಿಯಲು ತಂದಿದ್ದ ಕೊಡಪಾನ, ಪಾತ್ರೆಗಳಿಂದ ಹೊಡೆದಾಡಿಕೊಳ್ಳಲು ಆರಂಭಿಸಿದ್ದಾರೆ. ಪರಿಣಾಮ ಪದ್ಮ ಅವರ ತಲೆ ಹಾಗೂ ಎದೆಗೆ ತೀವ್ರವಾಗಿ ಹೊಡೆತ ಬಿದ್ದಿದ್ದು, ರಸ್ತೆಯಲ್ಲೇ ತಕ್ಷಣ ಕುಸಿದು ಬಿದ್ದಿದ್ದು, ಸ್ಥಳದಲ್ಲಿದ್ದವರು ಏನಾಯ್ತು ಎಂದು ನೋಡುವಷ್ಟರಲ್ಲಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ.

    ಈ ಘಟನೆ ನಡೆದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದೇ ಬಿಟ್ಟ

    ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದೇ ಬಿಟ್ಟ

    ಅಮರಾವತಿ: ಕೆಳವರ್ಗದ ಹುಡುಗನನ್ನು ಪ್ರೀತಿಸುತ್ತಿದ್ದ ಮಗಳನ್ನು ಹೆತ್ತ ತಂದೆಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

    20 ವರ್ಷದ ಇಂದ್ರಜಾ ಕೊಲೆಯಾದ ದುರ್ದೈವಿ. ಪ್ರಕಾಶಂ ಜಿಲ್ಲೆಯ ಕೋಮರೋಲು ಮಂಡಲ ವ್ಯಾಪ್ತಿಯಲ್ಲಿ ಬರುವ ನಾಗಿರೆಡ್ಡಿಪಾಳ್ಯದಲ್ಲಿ ವಾಸವಾಗಿದ್ದ ಇಂದ್ರಜಾ ಅದೇ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸುತ್ತಿದ್ದಳು. ಕಳೆದ ಭಾನುವಾರ ಇದೇ ವಿಚಾರಕ್ಕೆ ತಂದೆ ಪಾಪಯ್ಯನೊಂದಿಗೆ ಮಗಳು ಜಗಳವಾಡಿಕೊಂಡಿದ್ದಳು.

    ಇದರಿಂದ ಸಿಟ್ಟಿಗೆದ್ದ ಪಾಪಯ್ಯ ತಡರಾತ್ರಿ 1ರ ವೇಳೆ ಮಗಳಿಗೆ ನೇಣು ಹಾಕಿ ಕೊಂದಿದ್ದಾನೆ. ಬಳಿಕ ಇಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗ್ರಾಮಸ್ಥರಿಗೆ ನಂಬಿಸಿ, ಅವಸರವಾಗಿ ಅಂತ್ಯ ಸಂಸ್ಕಾರ ನಡೆಸಿದ್ದ. ಈತನ ನಡವಳಿಕೆಯಿಂದ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಾಪಯ್ಯನನ್ನು ವಶಕ್ಕೆ ಪಡೆದುಕೊಂಡಿದ್ದರು. ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಮಗಳ ಹತ್ಯೆ ಮಾಡಿರುವ ವಿಚಾರವನ್ನು ಪಾಪಯ್ಯ ಬಾಯಿ ಬಿಟ್ಟಿದ್ದಾನೆ. ವೃತ್ತಿಯಲ್ಲಿ ಪೊಲೀಸ್ ಪೇದೆಯಾಗಿದ್ದ ಪಾಪಯ್ಯ, ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಮಗಳು ಕೆಳ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಮಗಳಿಗೆ ತನ್ನ ಸಮುದಾಯದ ಯುವಕನೊಂದಿಗೆ ಮದುವೆಯಾಗುವಂತೆಯೂ ಸಹ ಪಾಪಯ್ಯ ಕೇಳಿಕೊಂಡಿದ್ದ. ಆದರೆ ತನ್ನ ಮಾತಿಗೆ ಒಪ್ಪದಕ್ಕೆ ಮರ್ಯಾದೆ ಉಳಿಸಲು ಇಂದ್ರಜಾಳನ್ನು ಕೊಲೆಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಮಾನ ನಿಲ್ದಾಣದಲ್ಲಿ ಜಗನ್ ಕೊಲೆಗೆ ಯತ್ನ!

    ವಿಮಾನ ನಿಲ್ದಾಣದಲ್ಲಿ ಜಗನ್ ಕೊಲೆಗೆ ಯತ್ನ!

    ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಪುತ್ರ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಫೋರ್ಕ್‍ನಿಂದ ಹಲ್ಲೆ ನಡೆಸಿದ ಘಟನೆ ವಿಶಾಖಪಟ್ಟಣ ಏರ್‌ಪೋರ್ಟ್‌ನಲ್ಲಿ ನಡೆದಿದೆ.

    ವಿಶಾಖಪಟ್ಟಣ ಏರ್‌ಪೋರ್ಟ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಜಗನ್ ಬಳಿ ಬಂದ ವ್ಯಕ್ತಿಯೊಬ್ಬ ಏಕಾಏಕಿ ತನ್ನ ಕೈಯಲ್ಲಿದ್ದ ಫೋರ್ಕ್‍ನಿಂದ ಹಲ್ಲೆ ನಡೆಸಿದ್ದಾನೆ. ಕೂಡಲೇ ಎಚ್ಚೆತ್ತಾ ಭದ್ರತಾ ಸಿಬ್ಬಂದಿಗಳು ಅವರನ್ನು ರಕ್ಷಿಸಿ, ಅನಾಮಿಕ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ದಾಳಿಯಿಂದ ಜಗನ್‍ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಫೋರ್ಕ್‍ನಿಂದ ಚುಚ್ಚಿದ ರಭಸಕ್ಕೆ ಜಗನ್ ಭುಜಕ್ಕೆ ಗಾಯವಾಗಿದ್ದು, ಸ್ವಲ್ಪ ಪ್ರಮಾಣದ ರಕ್ತಸ್ರಾವವಾಗಿದೆ. ಕೂಡಲೇ ಏರ್‌ಪೋರ್ಟ್‌ನಲ್ಲಿದ್ದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಲಾಗಿದೆ. ಭದ್ರತಾ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡಿದ್ದರಿಂದ ಆಗಬಹುದಾಗಿದ್ದ ಭಾರೀ ದುರಂತ ತಪ್ಪಿದೆ.

    ಕೂಡಲೇ ಎಚ್ಚೆತ್ತಾ ಏರ್‌ಪೋರ್ಟ್‌ ಭದ್ರತಾ ಸಿಬ್ಬಂದಿ ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ಸಂಬಂಧ ಏರ್‍ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದ್ವೆಯಾದ ಮೂರೇ ದಿನಕ್ಕೆ ಆತ್ಮಹತ್ಯೆಗೆ ಶರಣಾದ ವರ!

    ಮದ್ವೆಯಾದ ಮೂರೇ ದಿನಕ್ಕೆ ಆತ್ಮಹತ್ಯೆಗೆ ಶರಣಾದ ವರ!

    ಅಮರಾವತಿ: ಮಡದಿ ನೋಡಲು ಸಾಧಾರಾಣವಾಗಿ ಕಾಣಿಸುತ್ತಿದ್ದಾಳೆ ಎಂದು ಮನನೊಂದು ವರನೊಬ್ಬ ಮದುವೆಯಾಗಿ ಮೂರನೇ ದಿನಕ್ಕೆ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರ ಪ್ರದೇಶದ ವಿಜಿಯಾನಗರಂ ನಗರದಲ್ಲಿ ನಡೆದಿದೆ.

    ಶೇಖ್ ಮಥೀನ್ ಆತ್ಮಹತ್ಯೆಗೆ ಶರಣಾದ ವರ. ಮಥೀನ್ ಚಿಪುರಪಳ್ಳಿ ಮಂಡಳದ ಪೆಡನಾಡಿಪಳ್ಳಿಯ ಕಂದಾಯ ಅಧಿಕಾರಿಯಾಗಿದ್ದನು. ಇದೇ ಸೆಪ್ಟೆಂಬರ್ 2 ರಂದು ವಿಶಾಖಪಟ್ಟಣದ ಸಾಲೂರು, ರೈಲ್ವೇ ಕಾಲೋನಿಯ ಮೊಹಮೂದ್ ಮುಬೀನ್ ಎಂಬವರ ಜೊತೆ ವಿವಾಹವಾಗಿತ್ತು. ವಧು ನೋಡಲು ಸುಂದರವಾಗಿ ಕಾಣುತ್ತಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಶರಣನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಮದುವೆಯ ಬಳಿಕ ಮಥೀನ್ ಮಡದಿಯು ನೋಡಲು ಸುಂದರವಾಗಿಲ್ಲ, ಆಕೆಯ ಮುಖದ ಮೇಲೆ ಕಪ್ಪು ಮೊಡವೆಗಳಿಗೆ, ಹೀಗಾಗಿ ನನಗೆ ಇಷ್ಟವಿಲ್ಲವೆಂದು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದನು. ತಾಯಿಯು ಮುಬೀನಾಳಿಗೆ ಚಿಕಿತ್ಸೆ ನೀಡಿದರೆ ಸರಿಹೋಗುತ್ತದೆ ಚಿಂತಿಸಬೇಡ ಎಂದು ಸಮಾಧಾನ ಪಡಿಸಿದ್ದರು. ಆದರೆ ತಾಯಿಯ ಮಾತಿಗೆ ಮಥೀನ್ ಸಮಾಧಾನ ಹೊಂದಿರಲಿಲ್ಲ ತಿಳಿದು ಬಂದಿದೆ.

    ಕಳೆದ ಮಂಗಳವಾರ ಎರಡೂ ಮನೆಯವರು ಆರತಕ್ಷತೆಗೆ ಸಿದ್ಧತೆ ಮಾಡಿಕೊಂಡಿದ್ದರು. ಈ ವೇಳೆ ಮಥೀನ್ ಬಾಬಾಮೆಟ್ಟದಲ್ಲಿರುವ ತನ್ನ ಸ್ನೇಹಿತನ ಮನೆಗೆ ಹೋಗಿ ಬರುತ್ತೇನೆಂದು ಹೊರಟು, ಸ್ನೇಹಿತನ ಮನೆಯಲ್ಲೇ ನೇಣಿಗೆ ಶರಣನಾಗಿದ್ದಾನೆ. ಸ್ನೇಹಿತ ಮನೆಗೆ ಹೋಗುತ್ತಿರುವ ವಿಚಾರ ತಿಳಿದ ಸ್ನೇಹಿತರು ಹಾಗೂ ಆಕೆಯ ತಾಯಿ ಆತನಿಗೆ ಕರೆ ಮಾಡಲು ಯತ್ನಿಸುತ್ತಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

    ಕೂಡಲೇ ಸ್ನೇಹಿತನ ಮನೆಗೆ ಬಂದು ನೋಡಿದಾಗ, ಆತ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಮಥೀನ್‍ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ, ಆಸ್ಪತ್ರೆಗೆ ಕರೆತರುವ ಮುನ್ನವೇ ಮೃತಪಟ್ಟಿದ್ದಾನೆಂದು ವೈದ್ಯರು ದೃಢಪಡಿಸಿದ್ದಾರೆ.

    ಪುತ್ರನ ಸಾವಿನಿಂದ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು, ನನ್ನ ಮಗನ ಸಾವಿಗೆ ಮುಬೀನ ಕುಟುಂಬದವರೇ ಕಾರಣವೆಂದು ಆಕ್ರೋಶ ಹೊರಹಾಕಿದ್ದಾರೆ. ಮದುವೆಗೂ ಮುನ್ನ ಮುಬೀನ್ ಪೋಷಕರು ಬೇರೆ ಯುವತಿಯನ್ನು ತೋರಿಸಿದ್ದರು. ಮದುವೆಯ ವೇಳೆ ಮತ್ತೊಬ್ಬ ಯುವತಿಯೊಂದಿಗೆ ವಿವಾಹ ಮಾಡಿಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮುಬೀನ್ ಕುಟುಂಬದವರ ವಿರುದ್ಧ ಮಥೀನ್ ತಾಯಿ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಐಫೋನ್ ಅರ್ಪಿಸಿದ ಭಕ್ತ

    ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಐಫೋನ್ ಅರ್ಪಿಸಿದ ಭಕ್ತ

    ವಿಜಯವಾಡ: ಭಕ್ತರೊಬ್ಬರು ದೇವರ ಹುಂಡಿಗೆ ಐಫೋನ್ 6ಎಸ್ ಫೋನ್ ಹಾಕಿರೋ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ವಿಜಯವಾಡದಲ್ಲಿ ನಡೆದಿದೆ.

    ವಿಜಯವಾಡದ ಮೊಪಿಡೆವಿ ದೇವಾಲಯದ ಸಿಬ್ಬಂದಿಗಳು ಹುಂಡಿಯಲ್ಲಿನ ಕಾಣಿಕೆಯನ್ನು ನೋಡುತ್ತಿರುವಾಗ ಒಬ್ಬ ಭಕ್ತನು ತನ್ನ ಐಫೋನ್ ಹುಂಡಿಗೆ ಹಾಕಿರುವುದು ಶನಿವಾರ ಬೆಳಕಿಗೆ ಬಂದಿದೆ.

    ಆ ಭಕ್ತ ಇತ್ತೀಚೆಗೆ ಸ್ಮಾರ್ಟ್ ಫೋನ್ ವ್ಯವಹಾರವನ್ನು ಪ್ರಾರಂಭಿಸಿರಬಹುದು ಮತ್ತು ದೇವರನ್ನು ತೃಪ್ತಿಪಡಿಸಲು ಹುಂಡಿಯಲ್ಲಿ ಐಫೋನ್ ಹಾಕಿರಬಹುದೆಂದು ಸುಬ್ರಮಣ್ಯ ಸ್ವಾಮಿ ದೇವಾಲಯದ ಸಿಬ್ಬಂದಿಗಳು ಊಹಿಸಿದ್ದಾರೆ.

    ಇದೇ ಮೊದಲ ಬಾರಿಗೆ ಭಕ್ತರೊಬ್ಬರು ಹುಂಡಿಗೆ ಸ್ಮಾರ್ಟ್ ಫೋನ್ ಹಾಕಿದ್ದು, ಈ ಬಗ್ಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಶರದಾ ಕುಮಾರ್ ಅವರಿಗೆ ಸಿಬ್ಬಂದಿಗಳು ವಿಷಯ ತಿಳಿಸಿದ್ದಾರೆ.

    ದೇವಾಲಯದ ಸಮಿತಿಯು ಈ ಉಡುಗೊರೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿದೆ. ಎಂಡೋಮೆಂಟ್ ಇಲಾಖೆಯಿಂದ ಸೂಚಿಸಿದ ಪ್ರಕಾರ, ಯಾವುದೇ ವಿದ್ಯುತ್ ಸಾಧನ ಅಥವಾ ಸ್ಮಾರ್ಟ್ ಫೋನ್ ಗಳನ್ನು ಹುಂಡಿಗೆ ಹಾಕಿದರೆ ಅವುಗಳನ್ನು ಮಣ್ಣಿನಲ್ಲಿ ಹೂತುಹಾಕಲಾಗುತ್ತದೆ ಎಂದು ದೇವಸ್ಥಾನದ ಸೂಪರಿಂಟೆಂಡೆಂಟ್ ಎ.ಮಧುಸೂಧನ್ ಹೇಳಿದ್ದಾರೆ.

    ಈ ದೇವಸ್ಥಾನ ವಿಜಯವಾಡದಿಂದ 65 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಭಕ್ತಾದಿಗಳು ಬರಲು ಕಾಲುದಾರಿಯು ಸಹ ಇದೆ. ಈ ದೇವಾಲಯದಲ್ಲಿ ಸರ್ಪ ದೋಷ ನಿವಾರಣೆ, ಕೇತು ದೋಷ ಪೂಜೆ ಮತ್ತು ಅನಪತ್ಯ ದೋಷಕ್ಕೆ ಸಂಬಂಧಿಸಿದ ಪೂಜೆಗಳನ್ನು ಇಲ್ಲಿ ಮಾಡುತ್ತಾರೆ. ಹೀಗಾಗಿ ಈ ದೇವಾಲಯಕ್ಕೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಭಕ್ತರು ದೃಷ್ಟಿ ಮತ್ತು ಚರ್ಮಕ್ಕೆ ಸಂಬಂಧಿಸಿದ ದೋಷಗಳನ್ನು ಗುಣಪಡಿಸುವಂತೆ ಇಲ್ಲಿ ಪ್ರಾರ್ಥನೆ ಮಾಡುತ್ತಾರೆ.

  • ಮೊಬೈಲ್ ಬಳಕೆ ಬಗ್ಗೆ ದೊಡ್ಡಮ್ಮ ದೂರು ಹೇಳಿಬಿಡ್ತಾರೆಂದು 9ನೇ ಕ್ಲಾಸ್ ಬಾಲಕಿ ಆತ್ಮಹತ್ಯೆ

    ಮೊಬೈಲ್ ಬಳಕೆ ಬಗ್ಗೆ ದೊಡ್ಡಮ್ಮ ದೂರು ಹೇಳಿಬಿಡ್ತಾರೆಂದು 9ನೇ ಕ್ಲಾಸ್ ಬಾಲಕಿ ಆತ್ಮಹತ್ಯೆ

    ವಿಜಯವಾಡ: ಮೊಬೈಲ್ ಜಾಸ್ತಿ ಬಳಸ್ತಿದ್ದೀಯ, ನಿನ್ನ ತಾಯಿಗೆ ಹೇಳ್ತೀನಿ ಎಂದು ಎಚ್ಚರಿಸಿದ್ದಕ್ಕೆ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಲಿಖಿತಾ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಈಕೆ ಇಲ್ಲಿನ ಹೆಡ್ ಕಿಂಗ್ಸ್‍ಟನ್ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಲಿಖಿತಾ ಪೋಷಕರು ಕೆಲಸದ ನಿಮಿತ್ತ ಚೆನ್ನೈಗೆ ಹೋಗಿದ್ದರು. ಹೀಗಾಗಿ ಲಿಖಿತಾ ಮನೆಯಲ್ಲಿ ಒಬ್ಬಳೇ ಇದ್ದಳು. ಹತ್ತಿರದಲ್ಲೇ ವಾಸವಿದ್ದ ಲಿಖಿತಾ ತಾಯಿಯ ಅಕ್ಕ ಆಕೆಯನ್ನ ನೋಡಿಕೊಳ್ತಿದ್ರು.

    ಕಳೆದ 3 ದಿನಗಳಿಂದ ಲಿಖಿತಾ ಶಾಲೆಗೆ ಹೋಗಿರಲಿಲ್ಲ. ಆಕೆ ಮೊಬೈಲ್‍ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದುದನ್ನು ಗಮನಿಸಿದ್ದ ದೊಡ್ಡಮ್ಮ, ಜಾಸ್ತಿ ಮೊಬೈಲ್ ಬಳಸುತ್ತೀಯ ಎಂದು ನಿನ್ನ ಅಮ್ಮನಿಗೆ ಹೇಳ್ತೀನಿ ಎಂದು ಎಚ್ಚರಿಸಿದ್ದರು.

    ಶನಿವಾರ ರಾತ್ರಿ ಸುಮಾರು 10 ಗಂಟೆ ವೇಳೆಯಲ್ಲಿ ಲಿಖಿತಾಗೆ ದೊಡ್ಡಮ್ಮ ಕರೆ ಮಾಡಿದ್ದರು. ಆದ್ರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಭಾನುವಾರ ಬೆಳಗ್ಗೆ ಲಿಖಿತಾ ತಾಯಿ ಬಂದು ಬಾಗಿಲು ಬಡಿದರೂ ಬಾಗಿಲು ತೆರೆದಿರಲಿಲ್ಲ. ನಂತರ ಬಾಗಿಲು ಒಡೆದು ನೋಡಿದಾಗ ಲಿಖಿತಾ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿತ್ತು.

    ಪ್ರಾಥಮಿಕ ತನಿಖೆಯ ಪ್ರಕಾರ, 3 ದಿನಗಳಿಂದ ಶಾಲೆಗೆ ಹೋಗುತ್ತಿರಲಿಲ್ಲ ಹಾಗೂ ಹೆಚ್ಚಾಗಿ ಮೊಬೈಲ್ ಬಳಕೆ ಮಾಡ್ತಿದ್ದ ಬಗ್ಗೆ ದೂರು ಹೇಳಿಬಿಡ್ತಾರೆಂದು ಹುಡುಗಿ ಹೆದರಿದ್ದಳು. ಆಕೆ ಯಾರೊಂದಿಗೆ ಮಾತನಾಡುತ್ತಿದ್ದಳು ಎಂಬುದನ್ನ ತಿಳಿಯಲು ಕಾಲ್ ಲಿಸ್ಟ್ ಸಂಗ್ರಹಿಸುತ್ತಿದ್ದೇವೆ. ಬಾಲಕಿ ‘ಐ ಮಿಸ್ ಯೂ’ ಎಂದು ಬರೆದಿದ್ದ ಕಾಗದವೊಂದನ್ನ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಬಾಲಕಿ ವಿದ್ಯಾಭ್ಯಾಸದ ವಿಷಯವಾಗಿ ಯಾವುದೇ ಒತ್ತಡದಲ್ಲಿ ಇರಲಿಲ್ಲ. ಹಾಗೇ ಬೇರೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ.

    ಮರಣೋತ್ತರ ಪರೀಕ್ಷೆ ಮುಗಿದಿದ್ದು, ಇನ್ನೆರಡು ದಿನಗಳಲ್ಲಿ ವರದಿ ಬರಲಿದೆ. ಮರಣೊತ್ತರ ಪರೀಕ್ಷೆಯ ವರದಿ ಹಾಗೂ ಕಾಲ್ ಡೀಟೇಲ್ಸ್ ಪಡೆದ ನಂತರ ಮುಂದಿನ ತನಿಖೆ ನಡೆಯಲಿದೆ ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.