Tag: Andolanjeevi

  • ಆಂದೋಲನ ಜೀವಿಗಳು, ಎಫ್‌ಡಿಐಯಿಂದ ದೇಶವನ್ನು ರಕ್ಷಿಸಿಕೊಳ್ಳಬೇಕು – ಪ್ರಧಾನಿ ಮೋದಿ

    ಆಂದೋಲನ ಜೀವಿಗಳು, ಎಫ್‌ಡಿಐಯಿಂದ ದೇಶವನ್ನು ರಕ್ಷಿಸಿಕೊಳ್ಳಬೇಕು – ಪ್ರಧಾನಿ ಮೋದಿ

    ನವದೆಹಲಿ: ರೈತರ ಪ್ರತಿಭಟನೆಯ ಹೆಸರಿನಲ್ಲಿ ತಮ್ಮ ಸ್ವಾರ್ಥ ಲಾಭ ಮಾಡಿಕೊಳ್ಳುತ್ತಿರುವ ವ್ಯಕ್ತಿಗಳ ವಿರುದ್ಧ ಪ್ರಧಾನಿ ಮೋದಿ ತಮ್ಮದೇ ಶೈಲಿಯಲ್ಲಿ ಚಾಟಿ ಬೀಸಿ ʼಆಂದೋಲನ ಜೀವಿಗಳುʼ ಎಂದು ಕರೆದು ವ್ಯಂಗ್ಯವಾಡಿದ್ದಾರೆ.

    ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ಭಾಗವಹಿಸಿ, ಶ್ರಮ ಜೀವಿ, ಬುದ್ಧಿ ಜೀವಿ ಈ ಪದಗಳೆಲ್ಲ ನಮಗೆ ತಿಳಿದಿದೆ. ಆದರೆ ಈಗ ದೇಶದಲ್ಲಿ ಹೊಸ ಸಮುದಾಯ ಹುಟ್ಟಿಕೊಂಡಿದೆ. ಇವರು ಆಂದೋಲನ್‌ ಜೀವಿಗಳು. ಪ್ರತಿಭಟನೆ ನಡೆದಲ್ಲೆಲ್ಲಾ ಇವರನ್ನು ಗುರುತಿಸಬಹುದು. ವಕೀಲರು, ವಿದ್ಯಾರ್ಥಿಗಳು ಅಥವಾ ಕಾರ್ಮಿಕರ ಆಂದೋಲನ ಯಾವುದೇ ಇರಲಿ. ಆಂದೋಲನ‌ ಇಲ್ಲದೇ ಇವರಿಗೆ ಬದುಕಲು ಸಾಧ್ಯವಿಲ್ಲ. ನಾವು ಆಂದೋಲನ ಜೀವಿಗಳನ್ನು ಗುರುತಿಸಬೇಕು ಮತ್ತು ಅವರಿಂದ ರಾಷ್ಟ್ರವನ್ನು ರಕ್ಷಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

    ರೈತರ ಹೋರಾಟಕ್ಕೆ ವಿದೇಶದ ಕೆಲ ವ್ಯಕ್ತಿಗಳು, ಸಂಘಟನೆಗಳು ಬೆಂಬಲ ನೀಡುತ್ತಿರುವುದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ, ರಾಷ್ಟ್ರವು ಪ್ರಗತಿಯನ್ನು ಸಾಧಿಸುತ್ತಿದೆ ಮತ್ತು ಎಫ್‌ಡಿಐ(ಫಾರಿನ್‌ ಡೈರೆಕ್ಟ್‌ ಇನ್ವೆಸ್ಟ್‌ಮೆಂಟ್‌- ವಿದೇಶಿ ನೇರ ಬಂಡವಾಳ) ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಈಗ ಹೊಸ ಎಫ್‌ಡಿಐ ಮುಂಚೂಣಿಗೆ ಬಂದಿದೆ. ಇದು ಫಾರಿನ್‌ ಡಿಸ್ಟ್ರಕ್ಟಿವ್‌ ಐಡಿಯಾಲಜಿ(ವಿದೇಶಿ ವಿನಾಶಕಾರಿ ಸಿದ್ಧಾಂತ). ಇದರಿಂದ ನಾವು ನಮ್ಮ ದೇಶವನ್ನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹೆಚ್.ಡಿ ದೇವೇಗೌಡ್ರಿಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

    ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿನ ಆಂದೋಲನ ಜೀವಿ ಮತ್ತು ಹೊಸ ಎಫ್‌ಡಿಐ ಪದಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ ಟಾಪಿಕ್‌ ಆಗಿದೆ.

    ತಮ್ಮ ಭಾಷಣದಲ್ಲಿ ಎಂಎಸ್‌ಪಿ(ಕನಿಷ್ಟ ಬೆಂಬಲ ಬೆಲೆ) ಬಗ್ಗೆ ಮಾತನಾಡಿ, ಎಂಎಸ್‌ಪಿ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ. ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆ ಆಗಲು ನಮ್ಮ ಸರ್ಕಾರ ಬಿಡುವುದಿಲ್ಲ. ರೈತರ ರಕ್ಷಣೆ ನಮ್ಮ ಸರ್ಕಾರ ಬದ್ಧವಿದೆ ಎಂದು ಸ್ಪಷ್ಟಪಡಿಸಿದರು.