Tag: andhrapradesh

  • ಆಂಧ್ರಪ್ರದೇಶದಲ್ಲಿ ಬಾವಿಗೆ ಬಿದ್ದ ಕಾರು – ಕರ್ನಾಟಕದ ಮೂವರು ದುರ್ಮರಣ

    ಆಂಧ್ರಪ್ರದೇಶದಲ್ಲಿ ಬಾವಿಗೆ ಬಿದ್ದ ಕಾರು – ಕರ್ನಾಟಕದ ಮೂವರು ದುರ್ಮರಣ

    ಅಮರಾವತಿ: ಆಂಧ್ರಪ್ರದೇಶದ(Andra Pradesh) ಅನ್ನಮಯ್ಯ ಜಿಲ್ಲೆಯ ಬಾಲಂವರಿಪಲ್ಲಿ(Balamvaripalli) ಗ್ರಾಮದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದು ಕರ್ನಾಟಕದ(Karnataka) ಮೂವರು ಮೃತಪಟ್ಟಿದ್ದಾರೆ

    ಮೃತರನ್ನು ಕರ್ನಾಟಕದ ಚಿಂತಾಮಣಿ(Chintamani) ಬಳಿಯ ತಂಡುಪಲ್ಲಿ ಮೂಲದವರಾದ ಲೋಕೇಶ್, ಚಲಪತಿ ಮತ್ತು ಶಿವಣ್ಣ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: 2006ರಲ್ಲಿ RSS ಕಚೇರಿ ಮೇಲಿನ ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ

    ತಂಡುಪಲ್ಲಿಯ(Tandupalli) ಐವರು ಮದುವೆ ಸಮಾರಂಭಗಳಿಗೆ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರು. ಹಾಗೆಯೇ ಶನಿವಾರ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಮದುವೆಯಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಬಾಲಂವರಿಪಲ್ಲಿಯಲ್ಲಿ ಕಾರು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ. ಇದನ್ನೂ ಓದಿ: ಮುಂಬೈನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ತಾಪ್ಸಿ ಪನ್ನು- ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

    ಕಾರಿನಲ್ಲಿದ್ದ ಐದು ಪ್ರಯಾಣಿಕರಲ್ಲಿ ಕರ್ನಾಟಕದ ಮೂವರು ಮೃತಪಟ್ಟಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುನಿಲ್ ಹಾಗೂ ತಿಪ್ಪಾ ರೆಡ್ಡಿ ಕಾರಿನ ಹಿಂಭಾಗದ ಕಿಟಕಿಗಳನ್ನು ಒಡೆದು ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುಜೀಬ್ ಬಯೋಪಿಕ್‌ನಲ್ಲಿ ಶೇಖ್ ಹಸೀನಾ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾ ನಟಿ ಅರೆಸ್ಟ್

    ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಕ್ರೇನ್ ಮೂಲಕ ಕಾರನ್ನು ಬಾವಿಯಿಂದ ಹೊರತೆಗೆದರು. ಘಟನೆಯ ಕುರಿತು ಪಿಲೇರು ಪೊಲೀಸ್ ಠಾಣೆಯಲ್ಲಿ(Pileru Police Station) ಪ್ರಕರಣ ದಾಖಲಾಗಿದೆ.

  • ಬಳ್ಳಾರಿ | ಹಕ್ಕಿ ಜ್ವರ ಪತ್ತೆ – ಆಂಧ್ರ ಕೋಳಿ ಸಾಗಾಟ ವಾಹನಗಳ ಮೇಲೆ ಜಿಲ್ಲಾಡಳಿತ ಹದ್ದಿನ ಕಣ್ಣು

    ಬಳ್ಳಾರಿ | ಹಕ್ಕಿ ಜ್ವರ ಪತ್ತೆ – ಆಂಧ್ರ ಕೋಳಿ ಸಾಗಾಟ ವಾಹನಗಳ ಮೇಲೆ ಜಿಲ್ಲಾಡಳಿತ ಹದ್ದಿನ ಕಣ್ಣು

    – 5 ಚೆಕ್‌ಪೋಸ್ಟ್ ನಿರ್ಮಾಣ ಮಾಡಿದ ಜಿಲ್ಲಾಡಳಿತ

    ಬಳ್ಳಾರಿ: ಜಿಲ್ಲೆಯಲ್ಲಿ ಹಕ್ಕಿ ಜ್ವರ (Bird Flu) ಪತ್ತೆ ಹಿನ್ನೆಲೆ ಜಿಲ್ಲಾಡಳಿತವು ಆಂಧ್ರದಿಂದ ಬರುವ ಕೋಳಿ ಸಾಗಾಟ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

    ಹಕ್ಕಿ ಜ್ವರ ಪತ್ತೆ ಹಿನ್ನೆಲೆ ಅಲರ್ಟ್ ಆಗಿರುವ ಜಿಲ್ಲಾಡಳಿತವು, ಜಿಲ್ಲೆಯಾದ್ಯಂತ 5 ಚೆಕ್‌ಪೋಸ್ಟ್‌ಗಳ ನಿರ್ಮಾಣ ಮಾಡಿದೆ.

    ಪ್ರಮುಖವಾಗಿ ಆಂಧ್ರಪ್ರದೇಶದ ಅನಂತಪುರ ಹಾಗೂ ಗುಂತಕಲ್ ಭಾಗದಿಂದ ಬರುವ ಕೋಳಿ ಸಾಗಾಟ ವಾಹನಗಳ ಮೇಲೆ ಜಿಲ್ಲಾಡಳಿತ ಕಣ್ಣಿಟ್ಟಿದೆ. ಆಂಧ್ರ ಗಡಿಗೆ ಹೊಂದಿಕೊಂಡಿರುವ ಪಿಡಿಹಳ್ಳಿ ಗ್ರಾಮದಲ್ಲೂ ಚೆಕ್ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಕಾಮಗಾರಿ ಫಲಕದ ವಿಚಾರಕ್ಕೆ ಜಗಳ – ಗುಂಪು ಘರ್ಷಣೆಯಲ್ಲಿ ಓರ್ವ ಸಾವು, 9 ಜನರಿಗೆ ಗಾಯ

    ಪಿಡಿಹಳ್ಳಿ ಚೆಕ್‌ಪೋಸ್ಟ್‌ನಿಂದ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಿದ್ದು, ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ, ಕೋಳಿಗಳ ಆರೋಗ್ಯ ಪರಿಶೀಲನೆ ಮಾಡಿಯೇ ವಾಹನಗಳನ್ನ ಜಿಲ್ಲೆಯ ಒಳಗೆ ಬಿಡುತ್ತಿದ್ದಾರೆ. ಪ್ರತಿ ಚೆಕ್‌ಪೋಸ್ಟ್‌ಗಳಿಗೂ ಪಶುವೈದ್ಯರ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಶೈಕ್ಷಣಿಕ, ಸಂಶೋಧನಾ ಭವನ ಕಟ್ಟಡಗಳ ಶಂಕುಸ್ಥಾಪನೆ – ಗುದ್ದಲಿ ಪೂಜೆ ಮಾಡಿದ ಡಿಕೆಶಿ, ಮುನಿರತ್ನ

    ಸದ್ಯ ಹಕ್ಕಿ ಜ್ವರದ ಆತಂಕ ಹಿನ್ನೆಲೆ ವ್ಯಾಪಾರಸ್ಥರು, ಆಂಧ್ರದಿಂದ ಕೋಳಿ ಮಾಂಸ ಆಮದಿಗೆ ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಂಗನಾ ರಣಾವತ್ ಭೇಟಿ

  • ಭಾರೀ ಮಳೆಗೆ ಆಂಧ್ರಪ್ರದೇಶ ತತ್ತರ – ರೈಲು ಸಂಚಾರ ಅಸ್ತವ್ಯಸ್ತ; 30ಕ್ಕೂ ಅಧಿಕ ಮಂದಿ ಸಾವು!

    ಭಾರೀ ಮಳೆಗೆ ಆಂಧ್ರಪ್ರದೇಶ ತತ್ತರ – ರೈಲು ಸಂಚಾರ ಅಸ್ತವ್ಯಸ್ತ; 30ಕ್ಕೂ ಅಧಿಕ ಮಂದಿ ಸಾವು!

    – ತೆಲಂಗಾಣದ ಜಿಲ್ಲೆಗಳಲ್ಲಿ 19 ಸೆಂಟಿಮೀಟರ್ ಮಳೆ

    ಅಮರಾವತಿ/ಹೈದರಾಬಾದ್: ಕುಂಭದ್ರೋಣ ಮಳೆ ಮತ್ತು ಪ್ರವಾಹಕ್ಕೆ ಆಂಧ್ರಪ್ರದೇಶ (Andhrapradesh) ಹಾಗೂ ತೆಲಂಗಾಣ (Telangana) ರಾಜ್ಯಗಳು ತತ್ತರಿಸಿವೆ. ನದಿಗಳು ಉಕ್ಕೇರಿವೆ. ಜಲಾಶಯಗಳಲೆಲ್ಲಾ ಭರ್ತಿ ಆಗಿದ್ದು, ಅಪಾರ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ.

    ವಿಜಯವಾಡದಲ್ಲಿ ಪ್ರವಾಹದ ತೀವ್ರತೆ ಕಡಿಮೆ ಆಗಿದ್ದರೂ ತಗ್ಗುಪ್ರದೇಶಗಳಲ್ಲಿ ಪರಿಸ್ಥಿತಿ ದಯನೀಯವಾಗಿದೆ. 130ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಲದಿಗ್ಬಂಧನ ಏರ್ಪಟ್ಟಿದ್ದು, ಬೋಟ್‌ಗಳ ಮೂಲಕ ಸಂತ್ರಸ್ತರ ರಕ್ಷಣಾ ಕಾರ್ಯ ನಡೆದಿದೆ. 2.26 ಲಕ್ಷಕ್ಕೂ ಹೆಚ್ಚು ಜನ ಸಂತ್ರಸ್ತರಾಗಿದ್ದಾರೆ. ಈವರೆಗೂ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೈಕ್‌ನಲ್ಲಿ ಬಂದು ಪುಣೆ ಮಾಜಿ ಕಾರ್ಪೋರೇಟರ್ ಕೊಂದ್ರು – 10 ಆರೋಪಿಗಳ ಮೇಲೆ ಎಫ್‌ಐಆರ್

    ಮೆಹಬೂಬಾಬಾದ್ ಬಳಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ವಾಹನದಿಂದ ಒಂದೇ ಕುಟುಂಬದ 9 ಮಂದಿಯನ್ನು ರಕ್ಷಿಸಲಾಗಿದೆ. ರಾಯಪಾಡಿ ಎಂಬಲ್ಲಿ 300ಕ್ಕೂ ಹೆಚ್ಚು ಹಸುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

    ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಕೈಕೊಟ್ಟಿದೆ. ಹೆದ್ದಾರಿಗಳು ಕೂಡ ಸಂಪೂರ್ಣವಾಗಿ ಪ್ರವಾಹದಿಂದ ಮುಕ್ತವಾಗಲಿಲ್ಲ. ಇನ್ನು, ರೈಲ್ವೇ ಸೇವೆಗಳಲ್ಲಿ ಭಾರೀ ವ್ಯತ್ಯಯ ಆಗಿದೆ. ದಕ್ಷಿಣ ಮಧ್ಯೆ ರೈಲ್ವೇ ವಿಭಾಗದಲ್ಲಿ 432 ರೈಲುಗಳು (Train) ರದ್ದಾಗಿವೆ. 140 ರೈಲುಗಳ ಮಾರ್ಗ ಬದಲಿಸಲಾಗಿದೆ. ಸಿಎಂ ಚಂದ್ರಬಾಬು ನಾಯ್ಡು ಬೆಳಗ್ಗೆ ನಾಲ್ಕು ಗಂಟೆ ತನಕ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಂಚರಿಸಿದರು. ಇದನ್ನೂ ಓದಿ: ಅಮೆರಿಕದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಯಲ್ಲಿ ಶ್ರಾವಣ ಅಮಾವಾಸ್ಯೆ ಆಚರಣೆ

    ಕಲ್ಯಾಣ ಕರ್ನಾಟಕ (Karnataka) ಜಿಲ್ಲೆಗಳಲ್ಲಿ ಮಳೆಯಾರ್ಭಟ ಜೋರಾಗಿದೆ. ಸತತ ಮಳೆಯಿಂದ ಚಿತ್ತಾಪುರದ ಆಲ್ಲೂರು ಬಿ ಗ್ರಾಮದ ಮನೆಯೊಂದರ ಮೇಲೆ ಬೃಹತ್ ಬಂಡೆ ಉರುಳಿ ಬಿದ್ದಿದೆ. ಮನೆ ಭಾಗಶಃ ಧ್ವಂಸಗೊಂಡಿದ್ದು, ಓರ್ವ ಬಾಲಕ ಗಾಯಗೊಂಡಿದ್ದಾನೆ. ಕಾಗಿಣಾ ನದಿ ಅಪಾಯದ ಮಟ್ಟ ಹೆಚ್ಚಾಗಿದೆ. ಚಿತ್ತಾಪುರದ ದಂಡೋತಿ ಸೇತುವೆ, ಸಂಗಾವಿ ಸೇತುವೆ ಮುಳುಗಡೆಯಾಗಿವೆ.

    ಚಿಂಚೋಳಿಯ ಗಾರಂಪಳ್ಳಿ ಬಳಿಯ ಹಳ್ಳದಲ್ಲಿ ಕುರಿಗಾಯಿಗಳು ಕುರಿ ಹಿಂಡನ್ನು ದಾಟಿಸಿದ್ದಾರೆ. ಯಾದಗಿರಿಯ ಮೋಟ್ನಳ್ಳಿ ಗ್ರಾಮ ಜಲಾವೃತವಾಗಿದೆ. ಚಿಂತನಪಲ್ಲಿ ಜಲಪಾತ ಉಕ್ಕಿ ಹರಿದಿದ್ದು, ಗುರುಮಠಕಲ್‌ನ ನಂದೇಪಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ತುಂಗಭದ್ರಾ ಡ್ಯಾಂ ಒಳಹರಿವು ಹೆಚ್ಚಾಗಿದೆ. ಟಿಬಿ ಡ್ಯಾಂನಲ್ಲಿ 98 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ರಾತ್ರಿ ತರಬೇತಿ ಕಾರ್ಯಾಚರಣೆ ವೇಳೆ ವಾಯುಪಡೆಯ MiG-29 ಫೈಟರ್ ಜೆಟ್ ಪತನ – ಪೈಲಟ್‌ ಸೇಫ್‌

  • ಕೋಟಿ ಕುಳವೆಂದು ಯುವಕನ ಅಪಹರಿಸಿ ತೆಲಂಗಾಣಕ್ಕೆ ಕರೆದೊಯ್ದು ಹಲ್ಲೆಗೈದ ಗ್ಯಾಂಗ್!

    ಕೋಟಿ ಕುಳವೆಂದು ಯುವಕನ ಅಪಹರಿಸಿ ತೆಲಂಗಾಣಕ್ಕೆ ಕರೆದೊಯ್ದು ಹಲ್ಲೆಗೈದ ಗ್ಯಾಂಗ್!

    ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಯುವಕನೊಬ್ಬನನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಲಾಗಿದೆ (Kidnap). ಜೂನ್ 16ರಂದು ಎಂಜಿ ರಸ್ತೆಯಲ್ಲಿ ಆಂಧ್ರ ಮೂಲದ ಗ್ಯಾಂಗ್‍ನಿಂದ ಸ್ಟಾಕ್ ಮಾರ್ಕೆಟ್ ಇನ್ವೆಸ್ಟ್ ವ್ಯವಹಾರ ಮಾಡ್ತಿದ್ದ ರಾಜು ಎಂಬಾತನನ್ನು ಕಿಡ್ನಾಪ್ ಮಾಡಲಾಗಿದೆ.

    ದೊಡ್ಡ ಕುಳ ಎಂದು ಕಿಡ್ನಾಪ್ ಮಾಡಿದ್ದ ಗ್ಯಾಂಗ್, ತೆಲಂಗಾಣ ಫಾರ್ಮ್‍ಹೌಸ್ ವೊಂದರಲ್ಲಿ ಕೂಡಿಟ್ಟು ಹಲ್ಲೆ ನಡೆಸಿದೆ. ಅಲ್ಲದೇ 5 ಕೋಟಿ ಹಣಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ರು. ಕಿಡ್ನಾಪ್ ಬಗ್ಗೆ ಹಲಸೂರು ಠಾಣೆಗೆ ರಾಜು ಸ್ನೇಹಿತ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಹಲಸೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಕಿಡ್ನಾಪ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಮಧ್ಯೆ ಕಿಡ್ನಾಪ್ ಆಗಿರೋ ರಾಜು ವಿರುದ್ಧ ತೆಲಂಗಾಣದಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ರಾಜುವನ್ನ ಸಿಸಿಎಸ್ ಪೊಲೀಸರು ಮುಂಬೈಯಿಂದ ಬಂಧಿಸಿ ಕರೆ ತಂದಿದ್ದರು. ಬಳಿಕ ವಂಚನೆ ಕೇಸ್‍ನಲ್ಲಿ ಜಾಮೀನು ಪಡೆದು ಬೆಂಗಳೂರಿನಲ್ಲಿ ಬಂದು ವಾಸವಾಗಿದ್ದ. ಕಿಡ್ನಾಪ್ ಆಗಿರೋ ರಾಜು ಮೂಲತಃ ತೆಲಂಗಾಣದವನಾಗಿದ್ದು, ಮಾಜಿ ಮುಖ್ಯಮಂತ್ರಿ ಜಗನ್ (Jagan Mohan Reddy) ಕುಟುಂಬದ ಹೆಸರು ಬಳಿಸಿಕೊಂಡು, ಕೆಲಸ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಿದ್ದಾನೆ ಅನ್ನೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಮಾತೃವಿಯೋಗ

  • ರಾಜಧಾನಿಗೆ ಅಮರಾವತಿಯನ್ನೇ ಚಂದ್ರಬಾಬು ನಾಯ್ಡು ಆಯ್ದುಕೊಂಡಿದ್ದು ಏಕೆ..?

    ರಾಜಧಾನಿಗೆ ಅಮರಾವತಿಯನ್ನೇ ಚಂದ್ರಬಾಬು ನಾಯ್ಡು ಆಯ್ದುಕೊಂಡಿದ್ದು ಏಕೆ..?

    – ಭವಿಷ್ಯದ ಅಮರಾವತಿ ಹೇಗಿರಲಿದೆ?, ಈಗ ಹೇಗಿದೆ..?

    ಬ್ಬರು ರಾಜಕೀಯ ದೈತ್ಯರು ರೆಡ್ಡಿ ಮತ್ತು ನಾಯ್ಡು ನಡುವಿನ ಯುದ್ಧದಲ್ಲಿ ಸಿಲುಕಿದ ನಗರವು ಅಂತಿಮವಾಗಿ ಬೂದಿಯಿಂದ ಮೇಲೇರಬಹುದು. ನಾಯ್ಡು ಅವರು ಈಗ ಕೇಂದ್ರದಲ್ಲಿ ಪ್ರಮುಖ ಮಿತ್ರರಾಗಿದ್ದಾರೆ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಈ ಮೂಲಕ ಅಮರಾವತಿಯ ಭವಿಷ್ಯದ ಕೀಲಿಯನ್ನು ಅವರು ಹೊಂದಿದ್ದಾರೆ.

    ಹೌದು. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು (N Chandrababu Naidu)  ಅವರು ತಮ್ಮ ಅಮರಾವತಿಯ ದೃಷ್ಟಿಯನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿದ್ದಾರೆ. ಈ ಮೂಲಕ ನಗರದ ನಿವಾಸಿಗಳು ಮತ್ತು ಹೂಡಿಕೆದಾರರಲ್ಲಿ ಭರವಸೆಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಇದಕ್ಕೆ ಕಾರಣ ಕೆಲ ದಿನಗಳ ಹಿಂದೆಯಷ್ಟೇ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಎಂದು ಘೋಷಿಸಿದ್ದಾರೆ.

    ಈ ಹಿಂದೆ ಜಗನ್ ಮೋಹನ್ ರೆಡ್ಡಿ (Jagan Mohan Reddy) ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಹಂಚಿಕೆ ಮಾಡುವುದಾಗಿ ಹೇಳಿದ್ದರು. ಈಗ ಆಂಧ್ರಪ್ರದೇಶದಲ್ಲಿ ಎನ್ ಡಿ ಎ ಒಕ್ಕೂಟದ ಸರ್ಕಾರ ಅಧಿಕಾರ ಬಂದಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರದ ಮೂರು ರಾಜಧಾನಿಗಳ ನಿರ್ಧಾರವನ್ನು ರದ್ದುಗೊಳಿಸಿ ಅಮರಾವತಿಯೊಂದೇ ರಾಜಧಾನಿಯಾಗಲಿದೆ ಎಂದು ನಾಯ್ಡು ತಿಳಿಸಿದ್ದಾರೆ. ಇನ್ಮುಂದೆ ಮೂರು ರಾಜಧಾನಿ ಎಂಬುದು ಇರಲ್ಲ. ಅಮರಾವತಿ ರಾಜಧಾನಿಯಾಗಲಿದೆ. ವಿಶಾಖಪಟ್ಟಣವನ್ನು ಆರ್ಥಿಕ ಮತ್ತು ಆಧುನಿಕ ರಾಜಧಾನಿಯನ್ನಾಗಿ ಮಾಡೋಣ ಎಂದು ಹೇಳಿದ್ದಾರೆ. ಅಮರಾವತಿಯನ್ನು ಶಾಸಕಾಂಗ ರಾಜಧಾನಿ, ವಿಶಾಖಪಟ್ಟಣಂ ಕಾರ್ಯಕಾರಿ ರಾಜಧಾನಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿ ಎಂದು ಹಿಂದಿನ ವೈಎಸ್​​ಆರ್​​ಸಿಪಿ (YSRCP) ಸರ್ಕಾರ ಪರಿಕಲ್ಪನೆ ಹೊಂದಿತ್ತು.

    ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆಂಧ್ರಪ್ರದೇಶದ 175 ವಿಧಾನಸಭಾ ಸ್ಥಾನಗಳ ಪೈಕಿ ಎನ್‌ಡಿಎ 164 ಸ್ಥಾನಗಳನ್ನು ಗೆದ್ದಿದೆ. ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ 11 ಸ್ಥಾನಗಳಿಗೆ ಕುಸಿದಿದೆ. ಹೀಗಾಗಿ ಟಿಡಿಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಂತರ ಅಮರಾವತಿಯನ್ನು ಹೊಸ ರಾಜಧಾನಿ ಮಾಡುವ ಪ್ರಯತ್ನಗಳು ತೀವ್ರಗೊಂಡಿವೆ.

    ನಾಯ್ಡು ಅವರು ತಮ್ಮ ಹಿಂದಿನ ಸರ್ಕಾರದಲ್ಲಿ ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡಲು ಪ್ರಸ್ತಾಪಿಸಿದ್ದರು. ಇದರ ಕೆಲಸವೂ ನಡೆಯುತ್ತಿತ್ತು. ಆದರೆ 2019 ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಸೋತ ಬಳಿಕ ಈ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. 2019ರಲ್ಲಿ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾದಾಗ ಮೂರು ರಾಜಧಾನಿಗಳನ್ನು ರಚಿಸಲು ಮುಂದಾಗಿದ್ದರು. ರೆಡ್ಡಿ ಆಂಧ್ರದ ವಿಶಾಖಪಟ್ಟಣಂ, ಅಮರಾವತಿ ಮತ್ತು ಕರ್ನೂಲ್ ಈ ಮೂರು ರಾಜಧಾನಿಗಳನ್ನು ಮಾಡಲು ಪ್ರಸ್ತಾಪಿಸಿದ್ದರು.

    ಎಲ್ಲಿದೆ ಅಮರಾವತಿ?: ಆಂಧ್ರ ಪ್ರದೇಶದ (Andhrapradesh) ಗುಂಟೂರು ಜಿಲ್ಲೆಯ ಕೃಷ್ಣಾ ನದಿಯ ದಡದಲ್ಲಿ ಅಮಾರವತಿ ನಗರವಿದೆ. ಆದರೆ ರಾಜಧಾನಿ ಪ್ರದೇಶ ವ್ಯಾಪ್ತಿಯು ಗುಂಟೂರು ಮತ್ತು ವಿಜಯವಾಡ ಜಿಲ್ಲೆಯ 29 ಹಳ್ಳಿಗಳನ್ನು ಒಳಗೊಂಡಿದೆ.

    ಶಿವನ ದೇವಾಲಯವಾಗಿರುವ ಅಮರೇಶ್ವರ ದೇವಾಲಯದ ನಂತರ ಅಮರಾವತಿ ಎಂದು ಹೆಸರಿಸಲಾಗಿದೆ. ಇದನ್ನು ಎರಡನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.ಇದು ಒಂದು ಕಾಲದಲ್ಲಿ ಶಾತವಾಹನ ಮತ್ತು ಪಲ್ಲವ ರಾಜರ ರಾಜಧಾನಿಯಾಗಿತ್ತು. ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕನ ಆಳ್ವಿಕೆಯಲ್ಲಿ ಇಲ್ಲಿ ಸ್ತೂಪ ಮತ್ತು ಮಠವನ್ನು ನಿರ್ಮಿಸಲಾಯಿತು.

    ಅಮರಾವತಿ ಮಾತ್ರ ಏಕೆ?: 2014ರಲ್ಲಿ ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ (Telangana) ಹೊಸ ರಾಜ್ಯವಾಯಿತು. 10 ವರ್ಷಗಳ ಕಾಲ ತೆಲಂಗಾಣ ಮತ್ತು ಆಂಧ್ರದ ರಾಜಧಾನಿ ಹೈದರಾಬಾದ್ ಆಗಿತ್ತು. 2024 ಜೂನ್ 2 ರಂದು 10 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಹೈದರಾಬಾದ್ ಈಗ ತೆಲಂಗಾಣದ ರಾಜಧಾನಿಯಾಗಿದೆ.

    ಹತ್ತು ವರ್ಷಗಳ ಹಿಂದೆ ವಿಭಜನೆಯಾದಾಗ, ಹೈದರಾಬಾದ್ ಶಾಶ್ವತವಾಗಿ ತೆಲಂಗಾಣ ರಾಜಧಾನಿಯಾಗಿ ಉಳಿಯುತ್ತದೆ ಮತ್ತು ಆಂಧ್ರಕ್ಕೆ ಹೊಸ ರಾಜಧಾನಿಯನ್ನು ಮಾಡಬೇಕೆಂದು ನಿರ್ಧರಿಸಲಾಯಿತು. ಅಂತೆಯೇ 2014ರಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚಂದ್ರಬಾಬು ನಾಯ್ಡು ಅವರು ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡಿದರು. 2015 ರ ಅಕ್ಟೋಬರ್ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮರಾವತಿಯಲ್ಲಿ ಹೊಸ ರಾಜಧಾನಿಗೆ ಅಡಿಪಾಯ ಹಾಕಿದರು. ಇಷ್ಟೇ ಅಲ್ಲ ನಾಯ್ಡು ಸರ್ಕಾರ ಹೊಸ ರಾಜಧಾನಿ ನಿರ್ಮಿಸಲು ರೈತರಿಂದ 33 ಸಾವಿರ ಎಕರೆ ಭೂಮಿಯನ್ನು ಕೂಡ ಸ್ವಾಧೀನಪಡಿಸಿಕೊಂಡಿತ್ತು.

    ಮಾಸ್ಟರ್ ಪ್ಲಾನ್ ಪ್ರಕಾರ, ಅಮರಾವತಿಯನ್ನು ಆಂಧ್ರದ ಹೊಸ ರಾಜಧಾನಿಯಾಗಿ ಆಯ್ಕೆ ಮಾಡಲಾಗಿದೆ. ಏಕೆಂದರೆ ಇದು ರಾಜ್ಯದ ಎರಡು ಪ್ರಮುಖ ನಗರ ಕೇಂದ್ರಗಳಾದ ವಿಜಯವಾಡ ಮತ್ತು ಗುಂಟೂರಿನ ನಡುವೆ ಇದೆ. ಆಂಧ್ರ ಸರ್ಕಾರವು ಅಮರಾವತಿ ಸುತ್ತಲಿನ ಎಂಟೂವರೆ ಸಾವಿರ ಚದರ ಕಿಲೋಮೀಟರ್ ಪ್ರದೇಶವನ್ನು ರಾಜಧಾನಿ ಪ್ರದೇಶವನ್ನಾಗಿ ಮಾಡಲಿದೆ. ವಿಜಯವಾಡ ಮತ್ತು ಗುಂಟೂರು ಕೂಡ ಈ ವ್ಯಾಪ್ತಿಗೆ ಬರಲಿವೆ.

    ರಾಜಧಾನಿ ಅಮರಾವತಿ ಹೇಗಿರಲಿದೆ?: ಆಂಧ್ರಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (CRDA) ಮಾಸ್ಟರ್ ಪ್ಲಾನ್ ಪ್ರಕಾರ, ರಾಜಧಾನಿಯನ್ನು 217 ಚದರ ಕಿಲೋಮೀಟರ್ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುವುದು. ಅಮರಾವತಿಯನ್ನು ವಿಶ್ವದರ್ಜೆಯ ನಗರವನ್ನಾಗಿ ರೂಪಿಸಿ ಪ್ರತಿಯೊಬ್ಬ ವ್ಯಕ್ತಿಯ ಅಗತ್ಯಗಳನ್ನು ಪೂರೈಸಲಾಗುವುದು. ಕೋರ್ ಕ್ಯಾಪಿಟಲ್ ಪ್ರದೇಶವು ಸರ್ಕಾರಿ ಕಚೇರಿಗಳು, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಹೊಂದಿರುತ್ತದೆ.

    ರಾಜಧಾನಿಯ ಎಲ್ಲಾ ವಸತಿ ಪ್ರದೇಶಗಳು, ವಾಣಿಜ್ಯ ಪ್ರದೇಶಗಳು, ಶಿಕ್ಷಣ ಸಂಸ್ಥೆಗಳು ಮತ್ತು ವ್ಯಾಪಾರ ಕೇಂದ್ರಗಳು ರಸ್ತೆಗಳು ಮತ್ತು ಸಾರ್ವಜನಿಕ ಸಾರಿಗೆಯಿಂದ ಸಂಪರ್ಕಗೊಳ್ಳುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗುವುದು. 2050ರ ವೇಳೆಗೆ ಅಮರಾವತಿಯ ಜನಸಂಖ್ಯೆ 35 ಲಕ್ಷಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡುವುದರಿಂದ 15 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.

    ರಾಜಧಾನಿ ನಿರ್ಮಾಣಕ್ಕೆ ಎಷ್ಟು ವೆಚ್ಚವಾಗುತ್ತದೆ?: 2015ರಲ್ಲಿ ನಾಯ್ಡು ಅವರು ಕೃಷ್ಣಾ ನದಿಯ ದಡದಲ್ಲಿರುವ ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡುವುದಾಗಿ ಘೋಷಿಸಿದ್ದರು. 2016 ರಲ್ಲಿ ನಾಯ್ಡು ಅವರು ಅಮರಾವತಿಯಲ್ಲಿ 9 ಥೀಮ್ ಸಿಟಿಗಳು ಮತ್ತು 27 ಟೌನ್‌ಶಿಪ್‌ಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದರು. 2019 ರ ಸ್ಥಿತಿ ವರದಿಯ ಪ್ರಕಾರ ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡಲು ಮುಂದಿನ 20 ವರ್ಷಗಳಲ್ಲಿ 1.09 ಲಕ್ಷ ಕೋಟಿ ರೂ. ಬೇಕಾಗಬಹುದು.

    ಹೊಸ ಅಂದಾಜು ಪ್ರಕಾರ, 40ರಿಂದ 50 ಸಾವಿರ ಕೋಟಿ ರೂ.ಬೇಕಾಗುತ್ತದೆ. ನಗರದ ನಾನಾ ಮೂಲ ಸೌಕರ್ಯ ಹಾಗೂ ಹಲವು ಸರಕಾರಿ ಕಟ್ಟಡಗಳ ನಿರ್ಮಾಣ ಅಗತ್ಯವಿದೆ. ಆರಂಭದಲ್ಲಿ ನಗರ ನಿರ್ಮಾಣಕ್ಕೆ 21 ಸಾವಿರ ಕೋಟಿ ರೂ. ಬೇಕಾಗಬಹುದು ಆಂಧ್ರ ಪ್ರದೇಶದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಪಿಸಿಆರ್‌ಡಿಎ) ಅಂದಾಜಿಸಿತ್ತು.

    ಈಗ ಹೇಗಿದೆ ಅಮರಾವತಿ..?: ಭವಿಷ್ಯದ ನಗರ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಅಮರಾವತಿಯ ಭವಿಷ್ಯ ಕಳೆದ 5 ವರ್ಷದಿಂದ ಕತ್ತಲೆಯಲ್ಲಿತ್ತು. ಅರ್ಧಂಬರ್ಧ ನಿರ್ಮಾಣಗೊಂಡ ಬಿಲ್ಡಿಂಗ್‌ಗಳು, ಖಾಲಿ ಸೈಟ್‌ಗಳು, ಖಾಲಿ ಜಮೀನುಗಳು.. ಇದು ಅಮರಾವತಿಯ ಸದ್ಯದ ಪರಿಸ್ಥಿತಿ. ಬೃಹತ್‌ ನಗರ ನಿರ್ಮಾಣಕ್ಕೆ ಮೂಲಸೌಕರ್ಯವನ್ನು ಪೂರೈಸುವುದು ಪ್ರಮುಖವಾಗುತ್ತದೆ. ಆದರೆ ಇಲ್ಲಿ ಅದೇ ಕೊರತೆಯಾಗಿದೆ. ಈಗಲೂ ಸರ್ಕಾರಿ ಕಚೇರಿಗಳು ತಾತ್ಕಾಲಿಕ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

    ಈ ಹಿಂದೆ ಭರವಸೆ ನೀಡಿದ ಹೈ-ಸ್ಪೀಡ್‌ ರೈಲು ಸಂಪರ್ಕ, ನವೀನ ನಗರದ ವೈಶಿಷ್ಟ್ಯಗಳು ಹೀಗೆ ಯಾವುದರ ಕುರುಹಗಳು ಕೂಡ ಇಲ್ಲ. ಈ ನಡುವೆ ಕೆಲವು ಶಿಕ್ಷಣ ಸಂಸ್ಥೆಗಳು, ಕಂಪನಿಗಳು ಕಾರ್ಯಾರಂಭ ಮಾಡಿವೆ. ಒಟ್ಟಿನಲ್ಲಿ ಅಮರಾವತಿಯಲ್ಲಿ ಅರ್ಧಕ್ಕೆ ನಿಂತ ಕಟ್ಟಡಗಳು, ಖಾಲಿ ರಸ್ತೆಗಳನ್ನು ನೋಡದರೆ ನಚ್ಚುನೂರಾದ ಕನಸುಗಳು ಭರವಸೆಯ ಸಂಕೇತಗಳಂತೆ ಕಾಣುತ್ತವೆ.

    ಬೆಲೆಗಳು ಗಗನಕ್ಕೆ: ಆಂಧ್ರ ಪ್ರದೇಶದ ಏಕೈಕ ರಾಜಧಾನಿ ಅಮರಾವತಿ ಎಂದು ಚಂದ್ರಬಾಬು ನಾಯ್ಡು ಅವರು ಘೋಷಣೆ ಮಾಡುತ್ತಿದ್ದಂತೆಯೇ ರಿಯಲ್‌ ಎಸ್ಟೇಟ್‌ ದಂಧೆ ಮತ್ತೆ ಗರಿಗೆದರಿದೆ. ಏಕಾಏಕಿ ಸೈಟುಗಳ ಬೆಲೆಯಲ್ಲಿ 20% ರಿಂದ 30 % ರಷ್ಟು ಹೆಚ್ಚಳವಾಗಿದೆ. ಸ್ಥಳೀಯ ಉದ್ಯಮಿಗಳು, ವ್ಯಾಪಾರಸ್ಥರು ನಗರದ ಆರ್ಥಿಕ ಮತ್ತು ನಿರ್ಮಾಣ ಚಟುವಟಿಕೆಗಳ ಮತ್ತೆ ಹೆಚ್ಚುವ ನಿರೀಕ್ಷೆಯನ್ನು ಹೊಂದಿದ್ದಾರೆ.

    ಅಮರಾವತಿಯಲ್ಲಿ 9 ನಗರಗಳಿರುತ್ತವೆ:
    1. ಸರ್ಕಾರಿ ನಗರ: ಇದು ಉತ್ತರ-ದಕ್ಷಿಣದಲ್ಲಿ ನೆಲೆಸಿರುತ್ತದೆ. ಇಲ್ಲಿ ಸರ್ಕಾರಿ ಕಚೇರಿಗಳ ಜತೆಗೆ ವಸತಿ ಪ್ರದೇಶಗಳನ್ನೂ ಅಭಿವೃದ್ಧಿಪಡಿಸಲಾಗುವುದು. ಈ ಇಡೀ ನಗರವು 1,093 ಹೆಕ್ಟೇರ್‌ಗಳಲ್ಲಿ ಹರಡುತ್ತದೆ.
    2. ಜಸ್ಟಿಸ್ ಸಿಟಿ: ಸರ್ಕಾರಿ ನಗರದ ಪಕ್ಕದಲ್ಲಿ ಜಸ್ಟಿಸ್ ಸಿಟಿ ಸ್ಥಾಪಿಸಲಾಗುವುದು. ಇಲ್ಲಿ ನ್ಯಾಯಾಂಗಕ್ಕೆ ಸಂಬಂಧಿಸಿದ ಸಂಸ್ಥೆಗಳು ಇರುತ್ತವೆ. 1,339 ಹೆಕ್ಟೇರ್‌ನಲ್ಲಿ ನ್ಯಾಯ ನಗರ ನಿರ್ಮಾಣವಾಗಲಿದೆ.
    3. ಹಣಕಾಸು ನಗರ: ಆಂಧ್ರದ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ನಗರವನ್ನು ನಿರ್ಮಿಸಲಾಗುವುದು. ಇಲ್ಲಿ ವಾಣಿಜ್ಯ ಮತ್ತು ವಸತಿ ಪ್ರದೇಶಗಳೆರಡೂ ಇರಲಿವೆ. 2,091 ಹೆಕ್ಟೇರ್‌ ಪ್ರದೇಶದಲ್ಲಿ ಫೈನಾನ್ಸ್ ಸಿಟಿ ನಿರ್ಮಾಣವಾಗಲಿದೆ.
    4. ನಾಲೆಡ್ಜ್ ಸಿಟಿ: ಇದು ಜಸ್ಟೀಸ್ ಮತ್ತು ಫೈನಾನ್ಸ್ ಸಿಟಿಯ ದಕ್ಷಿಣಕ್ಕೆ ಸ್ಥಾಪನೆಯಾಗುತ್ತದೆ. ಇಲ್ಲಿ ವಿಶ್ವವಿದ್ಯಾನಿಲಯ ಕ್ಯಾಂಪಸ್, ಕಾಲೇಜು ಮತ್ತು ಜ್ಞಾನ ಪಾರ್ಕ್ ನಿರ್ಮಿಸಲಾಗುವುದು. 3,459 ಹೆಕ್ಟೇರ್‌ನಲ್ಲಿ ನಾಲೆಡ್ಜ್ ಸಿಟಿ ನಿರ್ಮಾಣವಾಗಲಿದೆ.
    5. ಎಲೆಕ್ಟ್ರಾನಿಕ್ ಸಿಟಿ: ದಕ್ಷಿಣ ಭಾರತದಲ್ಲಿ ಬರುವ ಐಟಿ ಮತ್ತು ಎಲೆಕ್ಟ್ರಾನಿಕ್ ಉದ್ಯಮಗಳಿಗೆ ಎಲೆಕ್ಟ್ರಾನಿಕ್ ಸಿಟಿ ನಿರ್ಮಿಸಲಾಗುವುದು. 2,663 ಹೆಕ್ಟೇರ್‌ನಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣವಾಗಲಿದೆ.
    6. ಹೆಲ್ತ್ ಸಿಟಿ: ರಾಜಧಾನಿಯ ಜನತೆಗೆ ಉತ್ತಮ ಆರೋಗ್ಯ ಸೌಲಭ್ಯ ಸಿಗುವಂತಾಗಲು ಪ್ರತ್ಯೇಕ ಆರೋಗ್ಯ ನಗರಿ ಸ್ಥಾಪಿಸಲಾಗುವುದು. ಈ ಇಡೀ ನಗರವು 2,647 ಹೆಕ್ಟೇರ್‌ಗಳಲ್ಲಿ ಇರುತ್ತದೆ.
    7. ಸ್ಪೋರ್ಟ್ಸ್ ಸಿಟಿ: ರಿವರ್‌ಫ್ರಂಟ್‌ನ ವಾಯುವ್ಯದಲ್ಲಿ ಕ್ರೀಡಾ ನಗರವನ್ನು ನಿರ್ಮಿಸಲಾಗುವುದು. ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ದೊಡ್ಡ ಕ್ರೀಡಾಂಗಣಗಳು ಮತ್ತು ಈವೆಂಟ್ ಸ್ಥಳಗಳು ಇಲ್ಲಿ ಸಿದ್ಧವಾಗುತ್ತವೆ. 1,679 ಹೆಕ್ಟೇರ್‌ನಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಾಣವಾಗಲಿದೆ.
    8. ಸಾಂಸ್ಕೃತಿಕ ನಗರ: ಅನಂತವರಂ ಬಳಿ ಮಾಧ್ಯಮ ಮತ್ತು ಸಾಂಸ್ಕೃತಿಕ ನಗರವನ್ನು ಅಭಿವೃದ್ಧಿಪಡಿಸಲಾಗುವುದು. ಅನಂತವರಂನಲ್ಲಿ ಐತಿಹಾಸಿಕ ಅನಂತವರಂ ವೆಂಕಟೇಶ್ವರ ಸ್ವಾಮಿ ದೇವಾಲಯವಿದೆ. ಈ ನಗರವನ್ನು 2,067 ಹೆಕ್ಟೇರ್‌ನಲ್ಲಿ ನಿರ್ಮಿಸಲಾಗುವುದು.
    9. ಪ್ರವಾಸೋದ್ಯಮ ನಗರ: ಕೃಷ್ಣಾ ನದಿಯ ದಡದಲ್ಲಿರುವ ಉಂಡವಳ್ಳಿ ಗುಹೆಗಳ ಬಳಿ ಪ್ರವಾಸೋದ್ಯಮ ನಗರವನ್ನು ನಿರ್ಮಿಸಲಾಗುವುದು. ಈ ಇಡೀ ನಗರವು 4,716 ಹೆಕ್ಟೇರ್‌ಗಳಲ್ಲಿ ಇರುತ್ತದೆ.

  • ಆಂಧ್ರದಲ್ಲಿ NDAಗೆ ಭದ್ರಬುನಾದಿ ಹಾಕಿದ ಪವನ್‌ ಕಲ್ಯಾಣ್‌ – ಇವರು ‘ತೂಫಾನ್‌’ ಎಂದ ಮೋದಿ

    ಆಂಧ್ರದಲ್ಲಿ NDAಗೆ ಭದ್ರಬುನಾದಿ ಹಾಕಿದ ಪವನ್‌ ಕಲ್ಯಾಣ್‌ – ಇವರು ‘ತೂಫಾನ್‌’ ಎಂದ ಮೋದಿ

    ‘ಪವನ್‌ ಕಲ್ಯಾಣ್‌ ಕೇವಲ ಪವನ್‌ ಅಷ್ಟೇ ಅಲ್ಲ.. ತೂಫಾನ್’‌.. ಇದು ಸ್ಟಾರ್‌ ನಟನೊಬ್ಬನ ಬಗ್ಗೆ ಪ್ರಧಾನಿ ಮೋದಿ ಆಡಿದ ಮಾತುಗಳು. ಪವನ್‌ ಕಲ್ಯಾಣ್‌ ತೆಲುಗು ಚಿತ್ರರಂಗದ ಖ್ಯಾತ ನಟ. ಈಗ ರಾಜಕೀಯದಲ್ಲೂ ಹೆಚ್ಚು ಸದ್ದು ಮಾಡ್ತಿದ್ದಾರೆ. ಎನ್‌ಡಿಎ ಸಭೆಯಲ್ಲಿ ಮೋದಿ ‘ತೂಫಾನ್’‌ ಎಂದು ಬಣ್ಣಿಸಿದಾಗಿನಿಂದ ಇಡೀ ಭಾರತ ಈ ಸ್ಟಾರ್‌ ನಟನ ಕಡೆ ತಿರುಗಿ ನೋಡುತ್ತಿದೆ.

    2024ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದ ರಾಜ್ಯ ಆಂಧ್ರಪ್ರದೇಶ. ಆಂಧ್ರದಲ್ಲಿ ಸಾರ್ವಭೌಮನಂತೆ ಮೆರೆಯುತ್ತಿದ್ದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿಯನ್ನು (Jagan Mohan Reddy) ಮಟ್ಟಹಾಕಬೇಕು ಎಂದು ಅನೇಕ ಪಕ್ಷಗಳು ಒಂದಾಗಿ ಅಖಾಡಕ್ಕಿಳಿದಿದ್ದವು. ಕೊನೆಗೆ ಯಶಸ್ವಿ ಕೂಡ ಆದವು. ರಾಜ್ಯದಲ್ಲಿ ಜಗನ್‌ ನೇತೃತ್ವದ ವೈಎಸ್‌ಆರ್‌ಸಿಪಿ ಹೀನಾಯವಾಗಿ ಸೋತಿತು. ಇದರಲ್ಲಿ ಸ್ಟಾರ್‌ ನಟ ಪವನ್‌ ಕಲ್ಯಾಣ್‌ ಪಾತ್ರ ಪ್ರಮುಖವಾದದ್ದು. ಸಿನಿಮಾದಂತೆಯೇ ರಾಜಕೀಯ ರಂಗದಲ್ಲೂ ‘ಪವರ್‌ ಸ್ಟಾರ್‌’ ಧೂಳೆಬ್ಬಿಸಿಯೇ ಬಿಟ್ಟರು.

    cm jagan mohan reddy

    ಜನಸೇನಾ ಪಕ್ಷದ (ಜೆಎಸ್‌ಪಿ) ಪವನ್‌ ಕಲ್ಯಾಣ್‌ (Pawan kalyan) ಇಲ್ಲದಿದ್ದರೆ ಆಂಧ್ರಪ್ರದೇಶದ ಗೆಲುವು ಎನ್‌ಡಿಎ ಬಣಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆಂಧ್ರದಲ್ಲಿ ಎನ್‌ಡಿಎ ಅದ್ಭುತ ಪ್ರದರ್ಶನ ತೋರಿದೆ. ಈ ಬಾರಿ ಚುನಾವಣೆಯಲ್ಲಿ ಆಡಳಿತಾರೂಢ ವೈಎಸ್‌ಆರ್‌ಸಿಪಿ ಸೋಲಿಗೆ ಕಾರಣವಾಯಿದೆ. ಈ ಅಭೂತಪೂರ್ವ ಗೆಲುವಿನಲ್ಲಿ ಸ್ಟಾರ್‌ ನಟನ ಶ್ರಮ ಎದ್ದು ಕಾಣುತ್ತಿದೆ. ಸಿನಿಮಾದಲ್ಲಷ್ಟೇ ಅಲ್ಲ ರಾಜಕೀಯದಲ್ಲೂ ನಾನೊಬ್ಬ ಸ್ಟಾರ್‌ ಎಂಬುದನ್ನು ಪವನ್‌ ಸಾಬೀತುಪಡಿಸಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರಚಾರ ನಡೆಸಿದರು. ಅವರು ಹೋದಲ್ಲೆಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಪವನ್‌ ಕಲ್ಯಾಣ್‌ಗೆ ಖ್ಯಾತ ನಟ ಹಾಗೂ ಸಹೋದರನೂ ಆದ ಚಿರಂಜೀವಿ, ಅಲ್ಲು ಅರ್ಜುನ್‌ ಸೇರಿದಂತೆ ದೊಡ್ಡ ತಾರಾಗಣವೇ ಬೆಂಬಲಕ್ಕೆ ನಿಂತಿತು. ಈ ಎಲ್ಲಾ ಪರಿಶ್ರಮದ ಫಲ ಆಂಧ್ರ ಚುನಾವಣಾ ಫಲಿತಾಂಶದಲ್ಲಿ ಗೋಚರಿಸಿತು.

    ಆಂಧ್ರ ಚುನಾವಣೆಯಲ್ಲಿ ಮಿಂಚಿದ ಕಲ್ಯಾಣ್‌: ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 175 ಸ್ಥಾನಗಳ ಪೈಕಿ 135 ಸ್ಥಾನಗಳಲ್ಲಿ ಗೆದ್ದು ಟಿಡಿಪಿ ಬಹುಮತ ಗಳಿಸಿದೆ. ಪವನ್‌ ಕಲ್ಯಾಣ್‌ ನೇತೃತ್ವದ ಜೆಎಸ್‌ಪಿ ಈ ಬಾರಿ ತಾನು ಸ್ಪರ್ಧಿಸಿದ ಎಲ್ಲಾ 21 ವಿಧಾನಸಭಾ ಕ್ಷೇತ್ರಗಳಲ್ಲೂ ಗೆದ್ದಿದೆ. ಮಿತ್ರ ಪಕ್ಷ ಬಿಜೆಪಿ ಎಂಟು ಸ್ಥಾನಗಳಲ್ಲಿ ಗೆದ್ದು ಬೀಗಿದೆ. 2019 ರಲ್ಲಿ 151 ಸ್ಥಾನಗಳನ್ನು ಗೆದ್ದು ಮೆರೆದಾಡಿದ್ದ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಈ ಸಲ ಕೇವಲ 11 ಕ್ಷೇತ್ರಗಳಲ್ಲಿ ಮಾತ್ರ ಗೆದ್ದು ಪಾತಾಳಕ್ಕೆ ಕುಸಿಯಿತು. 25 ಲೋಕಸಭಾ ಸ್ಥಾನಗಳಲ್ಲಿ ನಾಯ್ಡು ಅವರ ಟಿಡಿಪಿ 16 ಸ್ಥಾನಗಳನ್ನು ಗೆದ್ದುಕೊಂಡರೆ, ವೈಎಸ್‌ಆರ್‌ಸಿಪಿ ಕೇವಲ ನಾಲ್ಕಕ್ಕೆ ಕುಸಿಯಿತು. ಬಿಜೆಪಿ ಮೂರು ಮತ್ತು ಜನಸೇನಾ ಪಕ್ಷವು ಉಳಿದ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ.

    ನಟನೆಯಿಂದ ರಾಜಕೀಯಕ್ಕೆ ರಂಗಪ್ರವೇಶ: ತೆಲುಗು ಚಿತ್ರರಂಗದಲ್ಲಿ ‘ಪವರ್ ಸ್ಟಾರ್’ ಎಂದೇ ಖ್ಯಾತಿ ಗಳಿಸಿದವರು ಪವನ್‌ ಕಲ್ಯಾಣ್.‌ ಜನಪ್ರಿಯ ನಟರ ಕುಟುಂಬಕ್ಕೆ ಸೇರಿದ ವ್ಯಕ್ತಿ. ಸೂಪರ್‌ಸ್ಟಾರ್ ಚಿರಂಜೀವಿ ಅವರ ಕಿರಿಯ ಸಹೋದರ ಕಲ್ಯಾಣ್, 2008 ರಲ್ಲಿ ತಮ್ಮ ಸಹೋದರನ ಪಕ್ಷದೊಂದಿಗೆ ರಾಜಕೀಯಕ್ಕೆ ರಂಗಪ್ರವೇಶ ಮಾಡಿದರು. ಕಲ್ಯಾಣ್ 2014 ರಲ್ಲಿ ತಮ್ಮದೇ ಪಕ್ಷವನ್ನು (JSP) ಕಟ್ಟಿದರು. 2019 ರ ಚುನಾವಣೆಯಲ್ಲಿ JSP ಏಕಾಂಗಿಯಾಗಿ ಸ್ಪರ್ಧೆ ಮಾಡಿ ಹೀನಾಯ ಸೋಲನುಭವಿಸಿತ್ತು. ರಜೋಲ್‌ ಏಕೈಕ ಅಸೆಂಬ್ಲಿ ಸ್ಥಾನವನ್ನು ಗೆದ್ದಿತ್ತು. ಕಲ್ಯಾಣ್ ಅವರ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಖಾತೆ ತೆರೆಯಲೇ ಇಲ್ಲ. ವೈಎಸ್‌ಆರ್‌ಸಿಪಿ 22 ಸ್ಥಾನಗಳನ್ನು ಗೆದ್ದು ಬೀಗಿತು. ಆದರೆ ಟಿಡಿಪಿ ಕೇವಲ 3 ರಲ್ಲಿ ಮಾತ್ರ ಗೆಲುವು ಸಾಧಿಸಿತು. ಆ ಸಂದರ್ಭದಲ್ಲಿ ಬಿಎಸ್‌ಪಿ ಮತ್ತು ಎಡ ಪಕ್ಷಗಳ ಜೊತೆ ಜೆಎಸ್‌ಪಿ ಮೈತ್ರಿ ಮಾಡಿಕೊಂಡಿತ್ತು. ಹೀನಾಯವಾಗಿ ಸೋತರೂ ಪವನ್‌ ಎದೆಗುಂದಲಿಲ್ಲ. ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡರು.

    ಎನ್‌ಡಿಎ ಗೆಲುವಲ್ಲಿ ‘ಪವರ್‌ ಸ್ಟಾರ್’‌ ಪಾತ್ರ: 2024 ರಲ್ಲಿ ಪವನ್ ಕಲ್ಯಾಣ್ ಲಕ್‌ ಬದಲಾಯಿತು. ಕಳೆದ ಚುನಾವಣೆಯ ಸೋಲಿನ್ನು ಗೆಲುವು ಪರಿವರ್ತಿಸುವಲ್ಲಿ ಪವರ್‌ ಸ್ಟಾರ್‌ ಯಶಸ್ವಿಯಾದರು. ಟಿಡಿಪಿ ಮತ್ತು ಬಿಜೆಪಿ ನಡುವಿನ ಮೈತ್ರಿಯ ಶ್ರೇಯಸ್ಸು ಕಲ್ಯಾಣ್ ಅವರಿಗೆ ಸಲ್ಲಬೇಕು. ಇದನ್ನೂ ಓದಿ: ಟೀ ಮಾರಾಟ.. ಅಧ್ಯಾತ್ಮದ ನೆಲೆಯಿಂದ ಪ್ರಧಾನಿ ಗಾದಿವರೆಗೆ ಮೋದಿ ನಡೆದು ಬಂದ ದಾರಿ

    ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ತೆಲುಗು ದೇಶಂ ಪಾರ್ಟಿ (TDP) ಮುಖ್ಯಸ್ಥ ಚಂದ್ರಬಾಬು ನಾಯ್ಡು ಜೈಲಿನಲ್ಲಿದ್ದ ದಿನಗಳವು. ನಾಯ್ಡು ಜೈಲಿಗೆ ಸೇರಲು ವೈಎಸ್‌ಆರ್‌ಸಿಪಿ ನೇತೃತ್ವದ ಸರ್ಕಾರ ಕಾರಣವಾಗಿತ್ತು. ಸುಪ್ರೀಂ ಕೋರ್ಟ್‌ನಿಂದ ಜಾಮೀನು ಸಿಗುವ ವರೆಗೂ 50 ದಿನಗಳ ಕಾಲ ನಾಯ್ಡು ಜೈಲಿನಲ್ಲಿದ್ದರು. ಆಗಿನ ಸಂದರ್ಭದಲ್ಲಿ ಟಿಡಿಪಿ ಮತ್ತು ಬಿಜೆಪಿ ಜೊತೆಗೆ ಮೈತ್ರಿ ಯಶಸ್ವಿಗೊಳಿಸುವಲ್ಲಿ ಪವನ್‌ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು.

    ಟಿಡಿಪಿ ರಾಜಕೀಯ ಭವಿಷ್ಯ ಮುಗಿದೇ ಹೋಯಿತು ಎಂಬಂತಿದ್ದ ಸನ್ನಿವೇಶದಲ್ಲಿ, ಟಿಡಿಪಿ ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸಲು ಮೈತ್ರಿ ನಡೆ ಸಹಾಯ ಮಾಡಿತು. ಎನ್‌ಡಿಎ ಮಿತ್ರ ಪಕ್ಷವಾಗಿದ್ದ ಕಲ್ಯಾಣ್, 2024ರ ಚುನಾವಣೆಗೆ ಟಿಡಿಪಿಯೊಂದಿಗೆ ಕೈಜೋಡಿಸುವಂತೆ ಬಿಜೆಪಿಗೆ ಮನವರಿಕೆ ಮಾಡಿದರು. ಎನ್‌ಡಿಎ ಮೈತ್ರಿಕೂಟದ ಜೊತೆಗಿನ ಒಪ್ಪಂದದಂತೆ ಕಲ್ಯಾಣ್‌ ಪಕ್ಷವು ರಾಜ್ಯದಲ್ಲಿ ಸ್ಪರ್ಧಿಸಿದ್ದ ಎಲ್ಲಾ ಲೋಕಸಭೆ ಮತ್ತು ಅಸೆಂಬ್ಲಿ ಸ್ಥಾನಗಳನ್ನು ಗೆದ್ದುಕೊಂಡಿತು. ವೈಎಸ್‌ಆರ್‌ಸಿಪಿಯ ವಂಗ ಗೀತಾ ಅವರನ್ನು ಪವನ್‌ ಕಲ್ಯಾಣ್‌ ಪಿಠಾಪುರಂ ವಿಧಾನಸಭಾ ಕ್ಷೇತ್ರದಿಂದ 70,279 ಮತಗಳ ಅಂತರದಿಂದ ಮಣಿಸಿದರು.

    ಕಾಪುಗಳು ಮತ್ತು ಕಮ್ಮಸ್‌ ಎರಡೂ ಸಮುದಾಯಗಳ ಮತದಾರರನ್ನು ಒಟ್ಟುಗೂಡಿಸುವಲ್ಲಿ ಕಲ್ಯಾಣ್‌ ಪ್ರಮುಖ ಪಾತ್ರ ವಹಿಸಿದರು. ಇದರಿಂದ ಆಂಧ್ರದಲ್ಲಿ ಎನ್‌ಡಿಎಗೆ ಪ್ರಯೋಜನವಾಯಿತು. 1980ರ ದಶಕದಿಂದಲೂ ಎರಡು ಸಮುದಾಯಗಳು ಪರಸ್ಪರ ಜಗಳವಾಡುತ್ತಿವೆ. ಆಂಧ್ರಪ್ರದೇಶದ ಜನಸಂಖ್ಯೆಯಲ್ಲಿ ಕಾಪುಗಳು 18% ಇದ್ದರೆ, ರಾಜಕೀಯವಾಗಿ ಬಲಿಷ್ಠವಾಗಿರುವ ಕಮ್ಮಗಳು ಕೇವಲ ಆರು ಪ್ರತಿಶತದಷ್ಟಿದ್ದಾರೆ. ಎರಡು ಸಮುದಾಯಗಳ ನಡುವಿನ ಪೈಪೋಟಿಯ ನಂತರ, ಕಾಪುಗಳು ಸಾಂಪ್ರದಾಯಿಕವಾಗಿ ಟಿಡಿಪಿಯಿಂದ ದೂರ ಉಳಿದಿದ್ದರು. ಪರಿಣಾಮವಾಗಿ 2014 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿನ ನಂತರ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಭಾಗಶಃ ಈ ಸಮುದಾಯದ ಮತಗಳನ್ನು ಗಳಿಸಿತ್ತು. ಆದರೆ ಈ ಬಾರಿ ಕಾಪು ಸಮುದಾಯ ಪವನ್‌ ಕಲ್ಯಾಣ್‌ಗೆ ಬೆಂಬಲವಾಗಿ ನಿಂತಿತು. ಇದು ಟಿಡಿಪಿ-ಬಿಜೆಪಿ ಮೈತ್ರಿಗೆ ಸಹಾಯ ಮಾಡಿತು.

    ಚುನಾವಣೆ ಸಂದರ್ಭದಲ್ಲಿ ಪವನ್‌ ಕಲ್ಯಾಣ್‌ ಅವರನ್ನು ಕಾಲ್‌ ಶೀಟ್‌ ರಾಜಕಾರಣಿ ಎಂದು ವೈಎಸ್‌ಆರ್‌ಸಿಪಿ ಲೇವಡಿ ಮಾಡಿತ್ತು. ಈಗ ಅದೇ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವಲ್ಲಿ ‘ಪವರ್‌ ಸ್ಟಾರ್‌’ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ಕೇಂದ್ರದಲ್ಲಿ ಮೋದಿ ನಾಯಕತ್ವದಲ್ಲಿ ಎನ್‌ಡಿಎ ಅಧಿಕಾರದ ಗದ್ದುಗೆ ಏರಿದೆ. ಬಿಜೆಪಿ ಸತತ ಮೂರನೇ ಅವಧಿಗೆ ಸರ್ಕಾರ ರಚಿಸಲು ಟಿಡಿಪಿ ನಿರ್ಣಾಯಕವಾಗಿದೆ. ಚಂದ್ರಬಾಬು ನಾಯ್ಡು ಈಗ ಕೇಂದ್ರದಲ್ಲಿ ಕಿಂಗ್‌ಮೇಕರ್‌ ಆಗಿ ಹೊರಹೊಮ್ಮಿದ್ದಾರೆ. ಇದಕ್ಕೆಲ್ಲ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿದ ಶ್ರೇಯ ಪವನ್‌ ಕಲ್ಯಾಣ್‌ಗೆ ಸಲ್ಲಬೇಕು.

  • ಆಂಧ್ರದಲ್ಲಿ YSRP ನಾಯಕ ವಲ್ಲಭನೇನಿ ವಂಶಿ ಮನೆ ಮೇಲೆ ಕಲ್ಲು ತೂರಾಟ

    ಆಂಧ್ರದಲ್ಲಿ YSRP ನಾಯಕ ವಲ್ಲಭನೇನಿ ವಂಶಿ ಮನೆ ಮೇಲೆ ಕಲ್ಲು ತೂರಾಟ

    ಅಮರಾವತಿ: ವೈಎಸ್‌ಆರ್‌ಸಿಪಿ ನಾಯಕ ವಲ್ಲಭನೇನಿ ವಂಶಿ (Vallabhaneni Vamsi) ಅವರ ಮನೆ ಮೇಲೆ ತೆಲುಗು ದೇಶಂ ಪಾರ್ಟಿ (TDP) ಕಾರ್ಯಕರ್ತರು ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

    ವಿಜಯವಾಡದಲ್ಲಿ ವಂಶಿ ವಾಸವಿರುವ ಅಪಾರ್ಟ್‌ಮೆಂಟ್‌ನ ಸುತ್ತಲೂ ಟಿಡಿಪಿ ಬೆಂಬಲಿಗರು ಸುತ್ತುವರಿದು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಕೂಡ ಪುಡಿಗೈದಿದ್ದಾರೆ.

    ನಾಲ್ಕು ಕಾರುಗಳಲ್ಲಿ ಆಗಮಿಸಿದ ಟಿಡಿಪಿ ಕಾರ್ಯಕರ್ತರು ಮೊದಲು ವಂಶಿ ನಿವಾಸದ ಮುಂದೆ ಘೋಷಣೆಗಳನ್ನು ಕೂಗಿದರು. ಅಲ್ಲದೇ ವಂಶಿ ಮನೆಯಲ್ಲಿ ಇದ್ದಾರೆ ಎಂಬ ಮಾಹಿತಿ ಮೇರೆಗೆ ಗೇಟು ಒಡೆಯಲು ಯತ್ನಿಸಿದ್ದಾರೆ. ಯುವಕರು ದೊಣ್ಣೆ ಮತ್ತು ಕಲ್ಲುಗಳೊಂದಿಗೆ ಆಗಮಿಸಿದ್ದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಮಧ್ಯಪ್ರವೇಶ ಮಾಡಿ ಟಿಡಿಪಿ ಕಾರ್ಯಕರ್ತರನ್ನು ಚದುರಿಸಿದ್ದಾರೆ. ಇದನ್ನೂ ಓದಿ: 7 ವರ್ಷಗಳಿಂದ ಬಾಲಕನ ಗಂಟಲಲ್ಲಿ ಸಿಲುಕಿದ್ದ ನಾಣ್ಯ ಹೊರ ತೆಗೆದ ವೈದ್ಯರು

    ಇತ್ತೀಚೆಗಷ್ಟೇ ಮಾಜಿ ಸಚಿವ ಕೊಡಲಿ ನಾಣಿ ನಿವಾಸದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲ ಅಪರಿಚಿತರು ನಾನಿ ಮನೆ ಮೇಲೆ ಕಲ್ಲು, ಮೊಟ್ಟೆ ಎಸೆದಿದ್ದರು. ಅಲ್ಲದೇ ಮನೆಗೆ ನುಗ್ಗುವ ಯತ್ನ ಕೂಡ ನಡೆದಿತ್ತು. ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಪರಿಚಿತರನ್ನು ಕಳುಹಿಸಲು ಯತ್ನಿಸಿದ್ದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆದಿತ್ತು.

    ಒಟ್ಟಿನಲ್ಲಿ ಆಂಧ್ರದಲ್ಲಿ ಚುನಾವಣಾ ಕಾವು ಮುಂದುವರೆದಿದೆ. ಫಲಿತಾಂಶ ಪ್ರಕಟವಾದ ನಂತರ ರಾಜ್ಯದ ಹಲವೆಡೆ ರಾಜಕೀಯ ದಾಳಿ ಮುಂದುವರಿದಿದೆ. ಚುನಾವಣೆಯ ಸಂದರ್ಭದಲ್ಲಿನ ರಾಜಕೀಯ ಸವಾಲುಗಳು, ಪ್ರತಿ ಸವಾಲುಗಳು ಈಗ ಟೆನ್ಶನ್ ಉಂಟು ಮಾಡುತ್ತಿವೆ. ಅಂದು ಟಿಡಿಪಿ ಮೇಲೆ ಕೊಡಲಿ ನಾನಿ, ವಲ್ಲಭನೇನಿ ವಂಶಿ ಸಿಡಿದೆದ್ದಿದ್ದು, ಇದೀಗ ಪಕ್ಷದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗಷ್ಟೇ ವಂಶಿ ಮನೆಯಲ್ಲಿ ಟಿಡಿಪಿ ಕಾರ್ಯಕರ್ತರು ಗಲಾಟೆ ಕೂಡ ಮಾಡಿದ್ದರು.

  • ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ ಚಲಾಯಿಸಿ: ಮೋದಿ ಕರೆ

    ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ ಚಲಾಯಿಸಿ: ಮೋದಿ ಕರೆ

    ನವದೆಹಲಿ: ಲೋಕಸಭಾ ಚುನಾವಣೆಯ (Loksabha Elections 2024) 4 ನೇ ಹಂತದ ಮತದಾನ ಇಂದು ಪ್ರಾರಂಭವಾಗುತ್ತಿದ್ದಂತೆ ಪ್ರಜಾಪ್ರಭುತ್ವವನ್ನು ಬಲಪಡಿಸಲು ಜನರು ತಮ್ಮ ಕರ್ತವ್ಯವನ್ನು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ. ಈ ಕ್ಷೇತ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.

    ಈ ಸಂಬಂಧ ತನ್ನ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ, ಲೋಕಸಭಾ ಚುನಾವಣೆಯ ಇಂದಿನ 4 ನೇ ಹಂತದಲ್ಲಿ, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 96 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ಈ ಮೂಲಕ ಯುವ ಮತದಾರರು ಮತ್ತು ಮಹಿಳಾ ಮತದಾರರು ಶಕ್ತಿ ನೀಡಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ಬನ್ನಿ ಎಲ್ಲರೂ ನಮ್ಮ ಕರ್ತವ್ಯವನ್ನು ಮಾಡೋಣ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸೋಣ ಎಂದು ಹೇಳಿದ್ದಾರೆ.

    ಇದೇ ವೇಳೆ ವಿಧಾನಸಭಾ ಚುನಾವಣೆಯಲ್ಲಿಯೂ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಆಂಧ್ರಪ್ರದೇಶದ (Andhrapradesh) ಜನರಿಗೆ ಕರೆ ನೀಡಿದ ಪ್ರಧಾನಿ, ವಿಶೇಷವಾಗಿ ಮೊದಲ ಬಾರಿಗೆ ಮತದಾರರಲ್ಲಿ ಮನವಿ ಮಾಡಿದರು. ನಮ್ಮ ಪ್ರಜಾಸತ್ತಾತ್ಮಕ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲಿ ಎಂದರು. ಇದನ್ನೂ ಓದಿ: ಸೋಮವಾರ 4ನೇ ಹಂತದ ಚುನಾವಣೆ – ಯಾವ ರಾಜ್ಯ, ಎಷ್ಟು ಕ್ಷೇತ್ರಗಳಲ್ಲಿ ಮತದಾನ? ಕಣದಲ್ಲಿರೋ ಪ್ರಮುಖರು ಯಾರು?

    ಒಡಿಶಾದಲ್ಲಿ (Odisha) ಅಸೆಂಬ್ಲಿ ಚುನಾವಣೆಗಳು ಪ್ರಾರಂಭವಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಒಡಿಶಾದ ಜನರಿಗೂ ನರೇಂದ್ರ ಮೋದಿ ಕರೆ ನೀಡಿದರು. ಒಡಿಶಾದಲ್ಲಿ ಇಂದು ವಿಧಾನಸಭೆ ಚುನಾವಣೆ ಆರಂಭವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ನಾನು ಈ ರಾಜ್ಯದ ಜನತೆಗೆ ಕರೆ ನೀಡುತ್ತೇನೆ. ನಿಮ್ಮ ಮತವೇ ನಿಮ್ಮ ಧ್ವನಿ ಎಂದು ಪ್ರಧಾನಿ ಹೇಳಿದರು.

  • ಲಾರಿಗೆ ಡಿಕ್ಕಿಯಾಗಿ ಪಲ್ಟಿಯಾದ ವಾಹನದಲ್ಲಿತ್ತು 7 ಕೋಟಿ ರೂ.!

    ಲಾರಿಗೆ ಡಿಕ್ಕಿಯಾಗಿ ಪಲ್ಟಿಯಾದ ವಾಹನದಲ್ಲಿತ್ತು 7 ಕೋಟಿ ರೂ.!

    ಅಮರಾವತಿ: ಆಂಧ್ರಪ್ರದೇಶದಲ್ಲಿ ಪಲ್ಟಿಯಾದ ವಾಹನವೊಂದರಿಂದ ಬರೋಬ್ಬರಿ 7 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಎರಡನೇ ಬಾರಿ ದೊಡ್ಡ ಮೊತ್ತದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ವಾಹನ ವಿಜಯವಾಡದಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಪೂರ್ವ ಗೋದಾವರಿ ಪೊಲೀಸರು ವಾಹನದಿಂದ 7 ಬಾಕ್ಸ್‌ಗಳಲ್ಲಿ ತುಂಬಿದ್ದ 7 ಕೋಟಿ ರೂ. ಹಣವನ್ನು (Rs 7 crore cash seized In Andhrapradesh) ವಶಪಡಿಸಿಕೊಂಡಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ.?: ನಲ್ಲಜರ್ಲ ಮಂಡಲದ ಅನಂತಪಲ್ಲಿ ಎಂಬಲ್ಲಿ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ವಾಹನ ಪಲ್ಟಿಯಾಗುತ್ತಿದತೆಯೇ ಅದರಲ್ಲಿದ್ದ ಸುಮಾರು7 ರಟ್ಟಿನ ಡಬ್ಬಗಳನ್ನು ಒಂದು ಗೋಣಿಚೀಲದಿಂದ ಇನ್ನೊಂದು ಚೀಲಕ್ಕೆ ಹಾಕುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡ ಮೊತ್ತ ಸುಮಾರು 7 ಕೋಟಿ ಎಂದು ವರದಿಯಾಗಿದೆ. ಇದನ್ನೂ ಓದಿ: ಟೈಯರ್ ಬ್ಲಾಸ್ಟ್ ಆಗಿ ಕ್ರೂಸರ್ ಪಲ್ಟಿ – ಮೂವರು ಮಹಿಳೆಯರ ದುರ್ಮರಣ

    ಪಲ್ಟಿಯಾದ ವಾಹನದ ಚಾಲಕನಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಗೋಪಾಲಪುರಂ ಆಸ್ಪತ್ರೆಗೆ ರವಾನಿಸಲಾಗಿದೆ. ಈ ನಡುವೆ ಪೊಲೀಸರು ತನಿಖೆ ಆರಂಭಿಸಿದ್ದು, ನಗದು ಮೂಲವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

    ಗುರುವಾರ ರಾಜ್ಯದ ಎನ್‌ಟಿಆರ್ ಜಿಲ್ಲೆಯ ಚೆಕ್‌ಪೋಸ್ಟ್‌ನಲ್ಲಿ ಟ್ರಕ್‌ನಿಂದ ಲೆಕ್ಕಕ್ಕೆ ಸಿಗದ 8 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಂಡ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ಆಂದ್ರಪ್ರದೇಶದಲ್ಲಿ ಮೇ 13ರಂದು ಚುನಾವಣೆ ನಡೆಯಲಿದೆ.

  • ಮದುವೆ ಮಂಟಪಕ್ಕೆ ನುಗ್ಗಿ ವಧುವನ್ನು ಎಳೆದೊಯ್ಯಲು ಯತ್ನಿಸಿದ ಆಕೆಯ ಕುಟುಂಬ!

    ಮದುವೆ ಮಂಟಪಕ್ಕೆ ನುಗ್ಗಿ ವಧುವನ್ನು ಎಳೆದೊಯ್ಯಲು ಯತ್ನಿಸಿದ ಆಕೆಯ ಕುಟುಂಬ!

    ಅಮರಾವತಿ: ಆಂಧ್ರಪ್ರದೇಶದ (Andhrapradesh) ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಧುವಿನ ಕುಟುಂಬದವರೇ ಆಕೆಯನ್ನು ಸ್ಥಳದಿಂದ ಬಲವಂತವಾಗಿ ಕರೆದೊಯ್ಯಲು ಪ್ರಯತ್ನಿಸಿದ ಘಟನೆ ನಡೆದಿದೆ.

    ಈ ಘಟನೆ ಕಡಿಯಂ ಪ್ರದೇಶದಲ್ಲಿ ನಡೆದಿದ್ದು, ಸ್ನೇಹಾ ಮತ್ತು ಬತ್ತಿನ ವೆಂಕಟಾನಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಮಂಟಪಕ್ಕೆ ಏಕಾಏಕಿ ನುಗ್ಗಿದ ವಧುವಿನ ಕುಟುಂಬ ಆಕೆಯನ್ನು ಅಪಹರಣ ಮಾಡಲು ಯತ್ನಿಸಿದೆ. ಅಲ್ಲದೇ ಅಪಹರಣ ತಡೆಯಲು ಬಂದವರ ಮೇಲೆ ಮೆಣಸಿನ ಪುಡಿಯನ್ನು ಎರಚಿದ್ದಾರೆ.

    ವಧು ಸ್ನೇಹಾಳ ತಾಯಿ, ಸಹೋದರ ಮತ್ತು ಸೋದರಸಂಬಂಧಿಗಳು ಆಕೆಯನ್ನು ಸ್ಥಳದಿಂದ ಬಲವಂತವಾಗಿ ಎಳೆದೊಯ್ಯಲು ಯತ್ನಿದ್ದಾರೆ. ಆದರೆ ಸ್ನೇಹಾ ಹರಸಾಹಪಟ್ಟು ಅವರ ಕೈಯಿಂದ ತಪ್ಪಿಸಿಕೊಂಡಿದ್ದಾಳೆ. ಇದರ ವೀಡಿಯೋ ಮಂಟಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಅಪಹರಣ ಯತ್ನವನ್ನು ವರ, ಆತನ ಕುಟುಂಬದವರು ಹಾಗೂ ಸ್ನೇಹಿತರು ವಿಫಲಗೊಳಿಸಿದ್ದಾರೆ. ಗಲಾಟೆಯಲ್ಲಿ ವರನ ಸ್ನೇಹಿತರೊಬ್ಬರು ತೀವ್ರ ಗಾಯಗೊಂಡಿದ್ದಾರೆ. ಸ್ನೇಹಾ ಅವರ ಕುಟುಂಬವು ಈಗ ಹಲ್ಲೆ, ಅಪಹರಣ ಯತ್ನ ಮತ್ತು ಚಿನ್ನ ಕಳ್ಳತನ ಸೇರಿದಂತೆ ಹಲವಾರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದೆ. ಈ ಮದುವೆಗೆ ಅವರ ವಿರೋಧದ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಇಂದು ಮಧ್ಯರಾತ್ರಿ ವಿಶ್ವವಿಖ್ಯಾತ ಐತಿಹಾಸಿಕ ಕರಗೋತ್ಸವಕ್ಕೆ ವಿದ್ಯುಕ್ತ ಚಾಲನೆ

    ಘಟನೆ ಕುರಿತು ಮಾತನಾಡಿದ ಕಡಿಯಂ ಸರ್ಕಲ್ ಇನ್ಸ್‌ಪೆಕ್ಟರ್ ಬಿ ತುಳಸಿಧರ್, ವೀರಬಾಬು ಕುಟುಂಬದವರು ಸ್ನೇಹಾ ಕುಟುಂಬದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ.