Tag: Andhra Pradesh

  • ಪ್ರವಾಸಿ ಬಸ್-ಕ್ರೂಸರ್ ಮುಖಾಮುಖಿ ಡಿಕ್ಕಿ: 13 ಸಾವು

    ಪ್ರವಾಸಿ ಬಸ್-ಕ್ರೂಸರ್ ಮುಖಾಮುಖಿ ಡಿಕ್ಕಿ: 13 ಸಾವು

    ಹೈದರಾಬಾದ್: ಖಾಸಗಿ ಪ್ರವಾಸಿ ಬಸ್ ಹಾಗೂ ಕ್ರೂಸರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 13 ಜನ ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ಇಂದು ಸಂಜೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

    ಕರ್ನೂಲ್ ಜಿಲ್ಲೆಯ ವೆಲ್‍ದುರ್ತಿಯಲ್ಲಿ ಎಸ್‌ಆರ್‌ಎಸ್‌ ಟ್ರಾವೆಲ್ಸ್ ಬಸ್ ಹಾಗೂ ಕ್ರೂಸರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಚಾಲಕ ಸೇರಿದಂತೆ ಕ್ರೂಸರ್ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಕೆಲ ಪ್ರಯಾಣಿಕರು ವಾಹನಗಳನ್ನು ನಿಲ್ಲಿಸಿ ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮರೆದಿದ್ದಾರೆ. ಘಟನೆಯಿಂದಾಗಿ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ, ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

    ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎಂದು ಕರ್ನೂಲ್ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • ಭೀಕರ ಅಪಘಾತ: ಸ್ಥಳದಲ್ಲೇ ನವ ದಂಪತಿ ಸಾವು

    ಭೀಕರ ಅಪಘಾತ: ಸ್ಥಳದಲ್ಲೇ ನವ ದಂಪತಿ ಸಾವು

    ಕೋಲಾರ: ಭೀಕರ ರಸ್ತೆ ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ವಿಕೋಟ ಕಸ್ತೂರಿ ನಗರದ ಬಳಿ ನಡೆದಿದೆ.

    ವಿಕೋಟದ ಯಲ್ಲಾರಂ ಗ್ರಾಮದ ಅಶೋಕ್ (24) ಹಾಗೂ ಅಶ್ವಿನಿ (19) ಮೃತ ನವ ದಂಪತಿ. ಚಿತ್ತೂರುನಿಂದ ಪಲಮನೇರು ಕಡೆಗೆ ಹೊರಟಿದ್ದಾಗ ಘಟನೆ ಸಂಭವಿಸಿದೆ.

    ಅಶೋಕ್ ಹಾಗೂ ಅಶ್ವಿನಿ ಚಿತ್ತೂರಿನ ಸಂಬಂಧಿಕರ ಮನೆ ಬಂದಿದ್ದರು. ಚಿತ್ತೂರುನಿಂದ ಪಲಮನೇರ್ ಕಡೆಗೆ ಬೈಕಿನಲ್ಲಿ ಇಂದು ಸಂಜೆ ಹೊರಟಿದ್ದರು. ಈ ವೇಳೆ ಎದುರಿಗೆ ಬಂದ ಆಯಿಲ್ ಟ್ಯಾಂಕರ್ ಬೈಕ್‍ಗೆ ಡಿಕ್ಕಿ ಹೊಡೆದಿದ್ದು, ದಂಪತಿ ಹಾರಿ ಕೆಳಗೆ ಬಿದ್ದಿದ್ದಾರೆ. ಅಶೋಕ್ ತಲೆ ಬಲವಾದ ಪಟ್ಟು ಬಿದ್ದು, ಅತಿಯಾದ ರಕ್ತಸ್ರಾವದಿಂದ ರಸ್ತೆ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ಅಶ್ವಿನಿ ಎದೆಗೆ, ಮುಖ ಹಾಗೂ ತಲೆಗೆ ಪೆಟ್ಟು ಬಿದ್ದಿದ್ದು, ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ವಿಕೋಟ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಆಯಿಲ್ ಟ್ಯಾಂಕರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ‘ಫನಿ’ ಚಂಡಮಾರುತ ಏಫೆಕ್ಟ್ – ದಕ್ಷಿಣ ಕರ್ನಾಟಕಕ್ಕಿಲ್ಲ ಆತಂಕ, ಉತ್ತರದಲ್ಲಿ ವಹಿಸಿ ಎಚ್ಚರ

    ‘ಫನಿ’ ಚಂಡಮಾರುತ ಏಫೆಕ್ಟ್ – ದಕ್ಷಿಣ ಕರ್ನಾಟಕಕ್ಕಿಲ್ಲ ಆತಂಕ, ಉತ್ತರದಲ್ಲಿ ವಹಿಸಿ ಎಚ್ಚರ

    ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಈಗ ಫನಿ ಚಂಡಮಾರುತ ಪ್ರಭಾವ ಹೆಚ್ಚಾಗಿದ್ದು, ಪುದುಚೇರಿ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ತೀರ ಪ್ರದೇಶಗಳಲ್ಲಿ ಭಾರೀ ಮಳೆಯ ಆತಂಕ ಸೃಷ್ಟಿಸಿದೆ. ಹಿಂದೂ ಮಹಾಸಾಗರ-ಬಂಗಾಳಕೊಲ್ಲಿಯ ಸಮನಾಂತರ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಫನಿ ಚಂಡಮಾರುತ ಈಗ ಶ್ರೀಲಂಕಾದ ಟ್ರಿಂಕೋಮಲಿಯಿಂದ 550 ಕಿ.ಮೀ. ದೂರಕ್ಕೂ ಚೆನ್ನೈನ ಆಗ್ನೇಯ ದಿಕ್ಕಿನಿಂದ 820 ಕಿ.ಮೀ. ದೂರದಲ್ಲಿ ಬರುತ್ತಿದೆ.

    ಫನಿ ಚಂಡಮಾರುತ ಆರಂಭವಾದಾಗ ಅಂದರೆ ಏಪ್ರಿಲ್ 25ರ ಆಸುಪಾಸಿನಲ್ಲಿ ಶ್ರೀಲಂಕಾದ ಅರ್ಧ ಉತ್ತರಭಾಗವನ್ನು ಆಕ್ರಮಿಸಿ, ಅಲ್ಲಿಂದ ಪುದುಚೇರಿ, ತಮಿಳುನಾಡಿನ ದಕ್ಷಿಣಭಾಗ ಸೇರಿ ಚೆನ್ನೈ ಆಂಧ್ರ ಪ್ರದೇಶದ ಮಚಿಲಿಪಟ್ಟಣದ ಮಧ್ಯೆ ಭರ್ಜರಿಯಾಗಿ ಅಪ್ಪಳಿಸುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಇದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಭಾಗ, ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆಯಾಗುತ್ತೆ ಎಂದು ಅಂದಾಜಿಸಲಾಗಿತ್ತು. ಆದರೆ ಏಪ್ರಿಲ್ 27ರ ಮಧ್ಯಭಾಗದಿಂದ ಚಂಡಮಾರುತ ದಿಕ್ಕು ಬದಲಿಸುತ್ತಿದ್ದು, ತಿರುವು ಪಡೆದು ದಕ್ಷಿಣದ ಚೆನ್ನೈನಿಂದ ಉತ್ತರದ ಕಡೆ ಅಂದರೆ ಆಂಧ್ರ ಪ್ರದೇಶದ ಮಚಲಿಪಟ್ಟಣ, ಉತ್ತರ ಕರಾವಳಿ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕಡೆ ಮುನ್ನುಗ್ತಿದೆ.

    ಸದ್ಯದ ಮಾಹಿತಿ ಅನ್ವಯ ಆಂಧ್ರ-ಒಡಿಶಾದ ಮಧ್ಯ ಕರಾವಳಿ ಭಾಗದಲ್ಲಿ ಚಂಡಮಾರುತದ ಪ್ರಭಾವ ಬೀರುವ ಅವಕಾಶ ಹೆಚ್ಚಾಗಿದ್ದು, ಚಂಡಮಾರುತ ವೇಗ ಮತ್ತಷ್ಟು ಹೆಚ್ಚಾದರೆ ಖಂಡಿತಾ ಒಡಿಶಾದಲ್ಲಿ ಹೆಚ್ಚಿನ ಅವಘದ ಸಂಭವಿಸಲಿದೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿದಂತೆ ಎಚ್ಚರಿಕೆ ನೀಡಲಾಗಿದೆ. ಎನ್‍ಡಿಆರ್‍ಎಫ್, ಕೋಸ್ಟ್‍ಗಾರ್ಡ್‍ಗೆ ಹೈ ಅಲರ್ಟ್‍ನಲ್ಲಿರುವಂತೆ ಸೂಚಿಸಲಾಗಿದೆ. ಒಡಿಶಾದ 28 ಜಿಲ್ಲೆಗಳ ಡಿಸಿಗಳಿಗೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಆಂಧ್ರ-ಒಡಿಶಾದ ಕರಾವಳಿ ಜನರನ್ನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗುತ್ತಿದ್ದು, ಕೇಂದ್ರ ಗೃಹ ಸಚಿವಾಲಯ ಹೆಚ್ಚಿನ ನಿಗಾ ವಹಿಸಿದೆ.

    ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೆ ಕಡಿಮೆ ಪ್ರಮಾಣದಲ್ಲಿ ಆಗಲಿದ್ದು, ಇದಕ್ಕೆ ಪ್ರಮುಖ ಕಾರಣ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಫನಿ ಚಂಡಮಾರುತ ತನ್ನ ದಿಕ್ಕು ಬದಲಿಸಿದೆ. ಚೆನ್ನೈ ಮೇಲೆ ಮೋಡಗಳು ಆವರಿಸಿದರೆ ಬೆಂಗಳೂರು, ಮೈಸೂರು ಭಾಗದಲ್ಲಿ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಕೇರಳದಲ್ಲೂ ಮಳೆ ಆಗುವ ಸಾಧ್ಯತೆ ಕಡಿಮೆ ಇದೆ. ಆದರೆ ಆಂಧ್ರದ ಉತ್ತರ ಭಾಗಕ್ಕೆ ಚಂಡಮಾರುತದ ಪ್ರಭಾವ ಶಿಫ್ಟ್ ಆಗುತ್ತಿರುವುವರಿಂದ ಉತ್ತರ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.

  • ಕೊಪ್ಪಳ ಮೈತ್ರಿ ಅಭ್ಯರ್ಥಿ ಪರ ಸಿಎಂ ಚಂದ್ರಬಾಬು ನಾಯ್ಡು ಪ್ರಚಾರ – ಅಭ್ಯರ್ಥಿಯೇ ಸಮಾವೇಶಕ್ಕೆ ಗೈರು

    ಕೊಪ್ಪಳ ಮೈತ್ರಿ ಅಭ್ಯರ್ಥಿ ಪರ ಸಿಎಂ ಚಂದ್ರಬಾಬು ನಾಯ್ಡು ಪ್ರಚಾರ – ಅಭ್ಯರ್ಥಿಯೇ ಸಮಾವೇಶಕ್ಕೆ ಗೈರು

    ಕೊಪ್ಪಳ: ಲೋಕಸಭಾ ಚುನಾವಣೆಯ ಎರಡನೇ ಹಂತದ ಕ್ಷೇತ್ರಗಳಿಗೆ ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಇಂದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

    ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ಚಂದ್ರಬಾಬು ನಾಯ್ಡು ಮತಯಾಚನೆ ಮಾಡಿದರು. ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಆಂಧ್ರ ಮೂಲದವರ ಮತಗಳಿವೆ. ಈ ಹಿನ್ನಲೆಯಲ್ಲಿ ಆಂಧ್ರ ಮೂಲದವರ ಮತಗಳನ್ನು ಸೆಳೆಯುವ ಉದ್ದೇಶದಿಂದ ಚಂದ್ರಬಾಬು ನಾಯ್ಡು ಅವರನ್ನು ಪ್ರಚಾರಕ್ಕೆ ಕರೆತರಲಾಗಿತ್ತು. ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಅಧಿಕ ಆಂಧ್ರಪ್ರದೇಶದ ಮೂಲದವರು ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರು ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಪರ ಪ್ರಚಾರ ಮಾಡುತ್ತಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಗೈರಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಹಂಚಿಕೊಂಡರೆ ಚುನಾವಣಾ ವೆಚ್ಚದಲ್ಲಿ ಈ ಮೊತ್ತವನ್ನು ಸೇರಿಸುತ್ತಾರೆ ಎಂಬ ಕಾರಣದಿಂದ ಅವರು ಗೈರಾಗಿದ್ದರು ಎನ್ನಲಾಗಿದೆ.

    ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು, ಕನ್ನಡ ಭಾಷೆಯೊಂದಿಗೆ ಮಾತು ಆರಂಭಿಸಿದರು. ಆ ಬಳಿಕ ತಮ್ಮ ಭಾಷಣದ ಉದ್ದಕ್ಕೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು. ಜೊತೆಗೆ ಮೋದಿಯನ್ನು ಸೋಲಿಸಿ ಗುಜರಾತಿಗೆ ಓಡಿಸಿ ಎಂದು ಕರೆ ನೀಡಿದರು. ಆಂಧ್ರ ಹಾಗೂ ಕರ್ನಾಟಕ ರಾಜ್ಯಗಳನ್ನು ಬಿಜೆಪಿಯಿಂದ ರಕ್ಷಿಸಬೇಕಾಗಿದೆ. ಅದಕ್ಕೆ ಇಂದು ನಾನು ಆಗಮಿಸಿದ್ದೇನೆ. ಮೋದಿ ದೇಶದ ಜನರಿಗೆ ಮಾಡಿರುವ ಮೋಸವನ್ನು ತಿಳಿಸಲು ಬಂದಿದ್ದೇನೆ. ಆಂಧ್ರಪ್ರದೇಶದಲ್ಲಿ ಅಮರಾವತಿಯನ್ನು ಅಭಿವೃದ್ಧಿ ಮಾಡಿದಂತೆ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಮಾಡಬೇಕಿದೆ. ಮಹಾತ್ಮಗಾಂಧಿ ಹುಟ್ಟಿದ ಊರಿನಲ್ಲಿ ಜನಿಸಿದ ಮೋದಿ ಸುಳ್ಳು ಹೇಳುತ್ತಿದ್ದಾರೆ. ಆದರೆ ಮಹಾತ್ಮ ಗಾಂಧಿ ಎಂದು ಸುಳ್ಳು ಹೇಳಿಲ್ಲ ಎಂದರು.

    ತುಂಗಭದ್ರಾ ನದಿ ನೀರಿನ ಸಮಸ್ಯೆ ಕುರಿತು ಕರ್ನಾಟಕ ಸರ್ಕಾರದ ಜೊತೆಗಿದ್ದು ಮಾತನಾಡುತ್ತೇವೆ. ಈ ಬಾರಿ ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಅಲ್ಲದೇ ಕರ್ನಾಟಕದಲ್ಲಿಯೂ ಬಿಜೆಪಿಯನ್ನು ಹೇಳಲು ಹೆಸರಿಲ್ಲದಂತೆ ಓಡಿಸಬೇಕು ಎಂದರು.

  • ಪ್ರಧಾನಿ ಮೋದಿ ಸೂಚನೆಯಂತೆ ಚುನಾವಣಾ ಆಯೋಗ ಕಾರ್ಯನಿರ್ವಹಣೆ: ಚಂದ್ರಬಾಬು ನಾಯ್ಡು

    ಪ್ರಧಾನಿ ಮೋದಿ ಸೂಚನೆಯಂತೆ ಚುನಾವಣಾ ಆಯೋಗ ಕಾರ್ಯನಿರ್ವಹಣೆ: ಚಂದ್ರಬಾಬು ನಾಯ್ಡು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಚುನಾವಣಾ ಆಯೋಗವು ಕಾರ್ಯನಿರ್ವಹಿಸುತ್ತಿದೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗಂಭೀರವಾಗಿ ಆರೋಪಿಸಿದ್ದಾರೆ.

    ದೆಹಲಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ಆಂಧ್ರ ಪ್ರದೇಶದಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣಾ ಮತದಾನದಲ್ಲಿ ಶೇ.30ರಿಂದ 40ರಷ್ಟು ಮತ ಯಂತ್ರಗಳು (ಇವಿಎಂ) ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಈ ಸಂಬಂಧ ಚುನಾವಣಾ ಆಯೋಗ ಸೂಕ್ತ ಪ್ರತಿಕ್ರಿಯೆ ನೀಡದಿದ್ದರೆ ಧರಣಿ ನಡೆಸುತ್ತೇವೆ ಎಂದು ಹೇಳಿದರು.

    ಇವಿಎಂ ಕಾರ್ಯನಿರ್ವಹಣೆಯಲ್ಲಿ ಲೋಪದೋಷ ಕಂಡುಬಂದಿದೆ. ಹೀಗಾಗಿ ಸುಮಾರು 150 ಮತ ಗಟ್ಟೆಗಳಲ್ಲಿ ಮರು ಮತದಾನ ನಡೆಸಬೇಕು ಎಂದು ಆಗ್ರಹಿಸಿದರು.

    ಚುನಾವಣಾ ಆಯೋಗ ವಿರುದ್ಧ ಗಂಭೀರ ಆರೋಪ ಮಾಡಿದ ಚಂದ್ರಬಾಬು ನಾಯ್ಡು ಅವರು, ಚುನಾವಣಾ ಆಯೋಗವು ನಮ್ಮೊಂದಿಗೆ ಸಹಕರಿಸುತ್ತಿಲ್ಲ. ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ತಿಳಿಸಿದಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.

    ಮತದಾರರಿಗೆ ಭಾರೀ ಪ್ರಮಾಣದಲ್ಲಿ ಮೋಸ ಮಾಡಲಾಗುತ್ತಿದೆ. ಗೊಂದಲ ಸೃಷ್ಟಿಸಲಾಗಿದೆ. ಅಧಿಕಾರಗಳ ಮೂಲದ ಪ್ರಕಾರ 4,583 ಇವಿಎಂ ಸಮಸ್ಯೆಯಾಗಿದ್ದು, ಇದು ದೇಶದ ದುರಂತ ಎಂದು ದೂರಿದರು.

  • ಆಂಧ್ರ ರಕ್ತ ರಾಜಕೀಯಕ್ಕೆ ಇಬ್ಬರು ಬಲಿ

    ಆಂಧ್ರ ರಕ್ತ ರಾಜಕೀಯಕ್ಕೆ ಇಬ್ಬರು ಬಲಿ

    ರಾಬಾದ್: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಒಂದು ತಿಂಗಳ ದೀರ್ಘಕಾಲದ ಮತದಾನ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದ್ದು, ಇದರ ಭಾಗವಾಗಿ ಆಂಧ್ರಪ್ರದೇಶದಲ್ಲಿ ಉಂಟಾದ ಗಲಾಟೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

    ಇಂದು ಆಂಧ್ರ ಪ್ರದೇಶದ ಲೋಕಸಭೆಯ 25 ಮತ್ತು ವಿಧಾನಸಭೆಯ 175 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಿತು. ಈ ವೇಳೆ ಅನಂತಪುರದ ತಾಡಿಪತ್ರಿಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಉಂಟಾದ ಗಲಾಟೆಯಲ್ಲಿ ಇಬ್ಬರನ್ನು ಕೊಲೆ ಮಾಡಲಾಗಿದೆ. ಟಿಡಿಪಿಯ ಭಾಸ್ಕರ್ ರೆಡ್ಡಿ, ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಪುಲ್ಲಾರೆಡ್ಡಿ ದಾರುಣ ಹತ್ಯೆಯಾಗಿದ್ದಾರೆ. ಇತ್ತ ವೀರಾಪುರಂನ ಮತಗಟ್ಟೆಯಲ್ಲಿ ಗ್ಯಾಂಗ್ ಒಂದು ನುಗ್ಗಿ ಅಕ್ರಮ ಮತದಾನ ನಡೆಸಲು ಯತ್ನಿಸಿದ್ದು, ಮಚ್ಚು-ಲಾಂಗು ಹಿಡಿದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ನಡುವೆ ಗಲಾಟೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

    ಸತ್ತೇನಪಲ್ಲಿಯಲ್ಲಿ ಸ್ಪೀಕರ್ ಕೊಡೆಲಾ ಶಿವಪ್ರಸಾದ್ ಬಟ್ಟೆ ಹರಿದ ವೈಎಸ್‍ಆರ್ ಕಾರ್ಯಕರ್ತರು, ಕಲ್ಲು ಹೊಡೆದು ಹಲ್ಲೆ ಮಾಡಿದ್ದಾರೆ. ಕಡಪದಲ್ಲಿ ವೈಎಸ್‍ಆರ್ ಕಾರ್ಯಕರ್ತನಿಗೆ ರಕ್ತ ಬರುವಂತೆ ಟಿಡಿಪಿ ಕಾರ್ಯಕರ್ತರು ಹೊಡೆದಿದ್ದಾರೆ. ಗುತ್ತಿಯಲ್ಲಿ ಇವಿಎಂ ಒಡೆದುಹಾಕಿದ ಜನಸೇನಾ ಅಭ್ಯರ್ಥಿ ಮಧುಸೂಧನ್ ಗುಪ್ತಾರನ್ನು ಪೊಲೀಸರು ಬಂಧಿಸಿದ್ದಾರೆ.

    ಇತ್ತ ಇವಿಎಂ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಸಿಎಂ ಚಂದ್ರಬಾಬು ನಾಯ್ಡು ಅವರು, ರಾಜ್ಯದ 157 ಕಡೆ ಮರುಮತದಾನಕ್ಕೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಆದರೆ ಚಂದ್ರಬಾಬು ಅವರು ಸೋಲುವ ಹತಾಶೆಯಲ್ಲಿ ಈ ಆರೋಪ ಮಾಡಿದ್ದಾರೆ. ಮತದಾನ ಶುರುವಾದ 3 ಗಂಟೆಯಲ್ಲಿ ಮರುಮತದಾನಕ್ಕೆ ಬೇಡಿಕೆ ಇಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದು ರಾಜಕೀಯ ನಾಯಕರು ಹೇಳಿದ್ದಾರೆ. ಆದರೆ ಚುನಾವಣಾ ಆಯೋಗ ಮಾತ್ರ ಇವಿಎಂನಲ್ಲಿ ಯಾವುದೇ ದೋಷ ಇಲ್ಲ. ಎಲ್ಲೂ ಮರುಚುನಾವಣೆ ನಡೆಸುವುದಿಲ್ಲ ಅಂತ ಸ್ಪಷ್ಟನೆ ನೀಡಿದೆ.

    ಕುಪ್ಪಂನಿಂದ 9ನೇ ಬಾರಿಗೆ ಮರು ಆಯ್ಕೆ ಬಯಸಿರುವ ಟಿಡಿಪಿ ಅಧ್ಯಕ್ಷ, ಸಿಎಂ ಚಂದ್ರಬಾಬು ನಾಯ್ಡು ಉಂಡವಲ್ಲಿಯಲ್ಲಿ, ವಿಪಕ್ಷ ನಾಯಕ ಜಗನ್ ರೆಡ್ಡಿ ಪುಲಿವೆಂದುಲ, ವಿಜಯವಾಡದಲ್ಲಿ ಜನಸೇನಾ ಅಧ್ಯಕ್ಷ ನಟ ಪವನ್ ಕಲ್ಯಾಣ್ ಹಕ್ಕು ಚಲಾಯಿಸಿದರು. ತೆಲಂಗಾಣ ಲೋಕಸಭಾ ಎಲೆಕ್ಷ್‍ನಲ್ಲಿ ಟಾಲಿವುಡ್ ಸ್ಟಾರ್‍ ಗಳು ಹಕ್ಕು ಚಲಾಯಿಸಿದರು.

  • ಆಂಧ್ರಕ್ಕೆ ಬಂದಿರೋ ಕೃಷ್ಣಾ ನದಿಯ 10 ಟಿಎಂಸಿ ನೀರು ಕ್ಷೇತ್ರಕ್ಕೆ ತರುವೆ: ವೀರಪ್ಪಮೊಯ್ಲಿ

    ಆಂಧ್ರಕ್ಕೆ ಬಂದಿರೋ ಕೃಷ್ಣಾ ನದಿಯ 10 ಟಿಎಂಸಿ ನೀರು ಕ್ಷೇತ್ರಕ್ಕೆ ತರುವೆ: ವೀರಪ್ಪಮೊಯ್ಲಿ

    ಚಿಕ್ಕಬಳ್ಳಾಪುರ: ನೀರಿನ ಬವಣೆಯಿಂದ ಬಳಲಿ ಬೆಂಡಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನೆರೆಯ ರಾಜ್ಯ ಆಂಧ್ರಪ್ರದೇಶಕ್ಕೆ ಈಗಾಗಲೇ ಹರಿದು ಬಂದಿರುವ ಕೃಷ್ಣಾ ನದಿಯ 10 ಟಿಎಂಸಿ ನೀರು ತರುವುದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಆಶ್ವಾಸನೆ ನೀಡಿದ್ದಾರೆ.

    ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಬಾಗೇಪಲ್ಲಿಯಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಕೃಷ್ಣಾ ನದಿಯ ನೀರು ಆಂಧ್ರದ ಅನಂತಪುರ ಜಿಲ್ಲೆಯವರೆಗೆ ಬಂದಿದೆ. ಅದನ್ನು ರಾಜ್ಯಗಳ ನಡುವೆ ಒಪ್ಪಂದ ಮಾಡಿಸಿ ಈ ಭಾಗಕ್ಕೆ 10 ಟಿಎಂಸಿ ನೀರು ತರುವ ಕಾರ್ಯ ಮಾಡುವುದಾಗಿ ತಿಳಿಸಿದರು.

    ಅಭಿವೃದ್ಧಿ ಕಾರ್ಯಕ್ಕೆ ಕಲ್ಲು ಹಾಕಿ ತಡೆ ಒಡ್ಡುವ ಬಿಜೆಪಿಯವರು ರಾಕ್ಷಸರು, ಸುಳ್ಳು ಭರವಸೆಗಳನ್ನು ನೀಡುವುದಕ್ಕೆ ಅವರಿಗೆ ನೊಬೆಲ್ ಪ್ರಶಸ್ತಿ ರಚಿಸಿ ಕೊಡಬೇಕು ಎಂದು ಟೀಕಿಸಿದರು. ನನಗೆ ಎಂದೂ ಜಾತಿ ಮುಖ್ಯವಾಗಿಲ್ಲ. ನಾನು ಸಿಎಂ ಆಗಿದ್ದಾಗ ಹಲವಾರು ಜಾತಿಗಳಿಗೆ ಮೀಸಲಾತಿ ನೀಡಿದ್ದು, ವಾಲ್ಮೀಕಿ ಜನಾಂಗವನ್ನು ಎಸ್‍ಟಿ ಗೆ ಸೇರಿಸಿದ್ದು ನಾನು. ಕುರುಬರಿಗೂ ಕೂಡ ಮೀಸಲಾತಿ ನೀಡಲಾಗಿದೆ ಎಂದ ತಿಳಿಸಿದರು.

    ನರೇಂದ್ರ ಮೋದಿ ಐದು ವರ್ಷಗಳಲ್ಲಿ ರೈತರಿಗೆ ಏನು ಮಾಡದೆ ಚುನಾವಣೆ ಹೊಸ್ತಿಲಲ್ಲಿ ರೈತರಿಗೆ ಮೂರು ಕಂತುಗಳಲ್ಲಿ ವರ್ಷಕ್ಕೆ 6 ಸಾವಿರ ಹಾಕುವುದಾಗಿ ಸುಳ್ಳು ಭರವಸೆ ನೀಡಿದರು. ಆದರೆ ಈವರೆಗೆ ಯಾವ ರೈತನ ಖಾತೆಗೂ ಮೊದಲ ಕಂತಿನ ಹಣ ತಲುಪಿಲ್ಲ. ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಘೋಷಿಸಿರುವ ತಿಂಗಳಿಗೆ 6 ಸಾವಿರದಂತೆ ವರ್ಷಕ್ಕೆ 72 ಸಾವಿರವನ್ನು ನೀಡಲು ಘೋಷಣೆ ಮಾಡಿದ್ದು, ಇಪ್ಪತ್ತೈದು ಕೋಟಿ ಬಡವರಿಗೆ ಈ ಯೋಜನೆ ತಲುಪಲಿದೆ ಎಂದು ವಿವರಿಸಿದರು.

    ಪ್ರಚಾರ ದಲ್ಲಿ ಗೌರಿಬಿದನೂರು ಶಾಸಕ ಹಾಗೂ ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ ಕಾಂಗ್ರೆಸ್ ಪಕ್ಷ ಎಂದಿಗೂ ಬಡವರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಮಕ್ಕಳಿಗೆ ಶೂ ಭಾಗ್ಯ ಮುಂತಾದ ಹಲವಾರು ಭಾಗ್ಯಗಳನ್ನು ನೀಡಿ ಅಭಿವೃದ್ಧಿ ಮಾಡಿದೆ. ಈ ಕಾರ್ಯಗಳನ್ನು ಬಿಜೆಪಿ ಮಾಡಲು ಸಾಧ್ಯವಿಲ್ಲ ಎಂದರು.

  • ಸಿಮೆಂಟ್ ಬ್ಯಾಗ್‍ನಲ್ಲಿ ಸಿಕ್ತು 1.90 ಕೋಟಿ ರೂ.

    ಸಿಮೆಂಟ್ ಬ್ಯಾಗ್‍ನಲ್ಲಿ ಸಿಕ್ತು 1.90 ಕೋಟಿ ರೂ.

    – ಅಕ್ರಮ ಹಣ ಸಾಗಣೆ, ಚಾಲಕ ಅರೆಸ್ಟ್

    ಹೈದರಾಬಾದ್: ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ಕಾವು ರಂಗೇರುತ್ತಿದ್ದಂತೆ ಆಂಧ್ರಪ್ರದೇಶದಲ್ಲಿ ಕುರುಡು ಕಾಂಚಾಣ ಜೋರಾಗಿಯೇ ಕುಣಿಯುತ್ತಿದೆ ಎನ್ನುವ ಅನುಮಾನಗಳು ಹುಟ್ಟು ಹಾಕಿದೆ. ಇದಕ್ಕೆ ಪೂರಕವೆಂಬಂತೆ ದಾಖಲೆ ಇಲ್ಲದೆ ಲಾರಿಯೊಂದರಲ್ಲಿ ಸಾಗಿಸುತ್ತಿದ್ದ 1.90 ಕೋಟಿ ರೂ. ಪತ್ತೆಯಾಗಿದೆ.

    ಕೃಷ್ಣಾ ಜಿಲ್ಲೆಯ ಚೆಕ್‍ಪೋಸ್ಟ್ ನಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ ಸಿಮೆಂಟ್ ಬ್ಯಾಗ್ ಸಾಗಿಸುತ್ತಿದ್ದ ಲಾರಿಯೊಂದರಲ್ಲಿ ಹಣ ಇರುವ ಶಂಕೆ ವ್ಯಕ್ತವಾಗಿತ್ತು. ತಕ್ಷಣವೇ ಪರಿಶೀಲನೆ ನಡೆಸಿದಾಗ ಸಿಮೆಂಟ್ ಬ್ಯಾಗ್‍ನಲ್ಲಿ 500 ಹಾಗೂ 2,000 ರೂ. ಮುಖ ಬೆಲೆಯ ನೋಟುಗಳು ಪತ್ತೆಯಾಗಿದ್ದು, ಅದರ ಒಟ್ಟು ಮೊತ್ತ 1.90 ಕೋಟಿ ರೂ. ಎಂದು ವರದಿಯಾಗಿದೆ.

    ಲಾರಿಯಲ್ಲಿ ಸಾಗಿಸುತ್ತಿದ್ದ ಹಣಕ್ಕೆ ಸೂಕ್ತ ದಾಖಲೆ ಸಿಕ್ಕಿಲ್ಲ. ಹೀಗಾಗಿ ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ತಿಳಿಸಿದ್ದಾರೆ.

    ಆಂಧ್ರಪ್ರದೇಶದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಒಂದೇ ಅವಧಿಯಲ್ಲಿ ನಡೆಯುತ್ತಿದೆ. ಅಕ್ರಮವಾಗಿ ಹಣ, ಮದ್ಯ, ಉಡುಗೊರೆ ಸಾಗಿಸದಂತೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಕ್ರಮಕೈಗೊಳ್ಳುತ್ತಿದ್ದಾರೆ. ಪ್ರಮುಖ ಚೆಕ್ ಪೋಸ್ಟ್ ಗಳಲ್ಲಿ ವಾಹನ ಪರಿಶೀಲನೆ ಮಾಡಲಾಗುತ್ತಿದೆ.

  • ಚುನಾವಣಾ ಪ್ರಚಾರದಲ್ಲಿ ಗಲಾಟೆ: ಅಭ್ಯರ್ಥಿ ಕಾಲು ಸೀಳಿದ ಅಂಗರಕ್ಷಕನ ಗುಂಡು

    ಚುನಾವಣಾ ಪ್ರಚಾರದಲ್ಲಿ ಗಲಾಟೆ: ಅಭ್ಯರ್ಥಿ ಕಾಲು ಸೀಳಿದ ಅಂಗರಕ್ಷಕನ ಗುಂಡು

    ಕರ್ನೂಲ್: ಚುನಾವಣಾ ಪ್ರಚಾರದ ವೇಳೆ ಗಲಾಟೆ ಸಂಭವಿಸಿದ್ದಕ್ಕೆ ಅಂಗರಕ್ಷಕ ನೆಲಕ್ಕೆ ಹಾರಿಸಿದ ಗುಂಡು ಅಭ್ಯರ್ಥಿ ಹಾಗೂ ವ್ಯಕ್ತಿಯೊಬ್ಬರಿಗೆ ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕಗ್ಗಲ್ ಗ್ರಾಮದಲ್ಲಿ ನಡೆದಿದೆ.

    ತೆಲುಗುದೇಶಂ ಪಕ್ಷದ (ಟಿಡಿಪಿ) ತಿಕ್ಕಾರೆಡ್ಡಿ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಅಭ್ಯರ್ಥಿ. ಮಂತ್ರಾಲಯ ವಿಧಾನಸಭಾ ಕ್ಷೇತ್ರದಿಂದ ತಿಕ್ಕಾರೆಡ್ಡಿ ಅವರು ಇಂದು ಕಗ್ಗಲ್ ಗ್ರಾಮದಲ್ಲಿ ಪ್ರಚಾರ ನಡೆಸಿದ್ದರು. ಈ ವೇಳೆ ಘಟನೆ ಸಂಭವಿಸಿದೆ.

    ಆಗಿದ್ದೇನು?:
    ಮಂತ್ರಾಲಯ ವಿಧಾನಸಭಾ ಕ್ಷೇತ್ರದ ಮತದಾನ ಏಪ್ರಿಲ್ 11ಕ್ಕೆ ನಡೆಯಲಿದೆ. ಹೀಗಾಗಿ ಟಿಡಿಪಿ ಕಾರ್ಯಕರ್ತರು ಹಾಗೂ ಅಭ್ಯರ್ಥಿ ತಿಕ್ಕಾರೆಡ್ಡಿ ಪ್ರಚಾರ ಮಾಡುತ್ತಿದ್ದರು. ಈ ವೇಳೆ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಟಿಡಿಪಿ ಬಾವುಟಗಳನ್ನು ಕಿತ್ತು ಹಾಕಿದ್ದಾರೆ. ಇದರಿಂದಾಗಿ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಜಗಳವಾಗಿದೆ.

    ಟಿಡಿಎಸ್ ಅಭ್ಯರ್ಥಿ ತಿಕ್ಕಾರೆಡ್ಡಿ ಜಗಳವನ್ನ ಬಿಡಿಸಲು ಹೋದಾಗ ಪರಸ್ಥಿತಿ ಕೈಮೀರಿತ್ತು. ತಕ್ಷಣವೇ ತಿಕ್ಕಾರೆಡ್ಡಿ ಅಂಗರಕ್ಷಕ ಎರಡು ಸುತ್ತು ಗಾಳಿಯಲ್ಲಿ ಹಾಗೂ ಮೂರು ಸುತ್ತು ನೆಲಕ್ಕೆ ಗುಂಡು ಹಾರಿಸಿದ್ದಾರೆ. ನೆಲಕ್ಕೆ ಹಾರಿಸಿದ ಗುಂಡುಗಳು ತಿಕ್ಕಾರೆಡ್ಡಿ ಹಾಗೂ ಎಎಸ್‍ಐ ವೇಣುಗೋಪಾಲ್ ಅವರಿಗೆ ತಗುಲಿ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಘಟನೆಯಿಂದಾಗಿ ಕಗ್ಗಲ್ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸ್ ಬಿಗಿಬಂದೋಬಸ್ತ್ ಒದಗಿಸಲಾಗಿದೆ. ಈ ಸಂಬಂಧ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ಪಿಯೊಂದಿಗೆ ಮೈತ್ರಿಗಿಳಿದ ಪವನ್ ಕಲ್ಯಾಣ್ – ಮಾಯಾವತಿ ಪ್ರಧಾನಿ ಆಗ್ಬೇಕು ಎಂದ್ರು

    ಬಿಎಸ್‍ಪಿಯೊಂದಿಗೆ ಮೈತ್ರಿಗಿಳಿದ ಪವನ್ ಕಲ್ಯಾಣ್ – ಮಾಯಾವತಿ ಪ್ರಧಾನಿ ಆಗ್ಬೇಕು ಎಂದ್ರು

    ಹೈದರಾಬಾದ್: ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಜನಸೇನಾ ಪಕ್ಷ ಬಿಎಸ್‍ಪಿ ಮೈತ್ರಿಯೊಂದಿಗೆ ಸ್ಪರ್ಧೆ ಮಾಡಲಿದೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪವನ್ ಕಲ್ಯಾಣ್ ಹೇಳಿದ್ದಾರೆ.

    ಚುನಾವಣಾ ಪೂರ್ವ ಮೈತ್ರಿ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ನಾವು ಮಾಯಾವತಿ ಅವರ ಬಿಎಸ್‍ಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ಅವರು ದೇಶದ ಪ್ರಧಾನಿ ಆಗುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ಇತ್ತ ಮಾಯಾವತಿ ಅವರು ಕೂಡ ಶೀಘ್ರದಲ್ಲೇ ಸೀಟು ಹಂಚಿಕೆ ನಿರ್ಣಯ ತಿಳಿಸಲಾಗುವುದು. ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ಮುಖ್ಯಮಂತ್ರಿ ಆಗಬೇಕಿದೆ ಎಂದು ಹೇಳಿದ್ದಾರೆ.

    2014 ರಲ್ಲಿ ಪಕ್ಷ ಹೆಸರು ಅಧಿಕೃತ ಘೋಷಣೆ ಮಾಡಿದ ಬಳಿಕ ಮೊದಲ ಬಾರಿಗೆ ಜನಸೇನಾ ಪಕ್ಷ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದೆ. ಆಂಧ್ರಪ್ರದೇಶದ 32 ವಿಧಾನಸಭಾ ಹಾಗೂ 6 ಲೋಕಸಭಾ ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ ಮೂಲಕ ಆಂಧ್ರಪ್ರದೇಶ ಚುನಾವಣೆಯಲ್ಲಿ ಮೊದಲ ಅಭ್ಯರ್ಥಿಗಳನ್ನು ಘೋಷಿಸಿದ ಮೊದಲ ಪಕ್ಷ ಎನಿಸಿಕೊಂಡಿದ್ದರು.

    ಮೈತ್ರಿ ಭಾಗವಾಗಿ ಪವನ್ ಕಲ್ಯಾಣ್ ಹಾಗೂ ಮಾಯಾವತಿ ಅವರು ಜೊತೆಯಾಗಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆಯೂ ಜೆಡಿಎಸ್ ಪಕ್ಷದೊಂದಿಗೆ ಬಿಎಸ್‍ಪಿ ಮೈತ್ರಿ ಮಾಡಿಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv