Tag: Andhra Pradesh

  • ಕಮಲದ ಕೈಹಿಡಿದ ಪವನ್ ಕಲ್ಯಾಣ್- ಆಂಧ್ರ ಮೈತ್ರಿಯ ಸೂತ್ರಧಾರ ಪ್ರಭಾವಿ ಕನ್ನಡಿಗ!

    ಕಮಲದ ಕೈಹಿಡಿದ ಪವನ್ ಕಲ್ಯಾಣ್- ಆಂಧ್ರ ಮೈತ್ರಿಯ ಸೂತ್ರಧಾರ ಪ್ರಭಾವಿ ಕನ್ನಡಿಗ!

    ನವದೆಹಲಿ: ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಆಂಧ್ರಪ್ರದೇಶದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ಬಿಜೆಪಿಯನ್ನು ಅರಳಿಸಲು ಮುಂದಾಗಿರುವ ನಾಯಕರು ಜನಸೇನಾದೊಂದಿಗೆ ಮೈತ್ರಿಗೆ ಮುಂದಾಗಿದ್ದು, ಈ ಮೈತ್ರಿಯಲ್ಲಿ ಕನ್ನಡಿಗ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಬಿ.ಎಲ್.ಸಂತೋಷ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

    ಪವನ್ ಕಲ್ಯಾಣ್, ಕಮಲ ಮೈತ್ರಿಯ ಪ್ರಮುಖ ಸೂತ್ರಧಾರ ಬಿ.ಎಲ್.ಸಂತೋಷ್ ಎನ್ನಲಾಗಿದ್ದು, ಇಂದು ಪವನ್ ಹಾಗೂ ಸಂತೋಷ್ ಅವರು ಮೈತ್ರಿಯ ಅಂತಿಮ ಮಾತುಕತೆ ನಡೆಸಿ ಅಧಿಕೃತವಾಗಿ ಘೋಷಣೆ ಮಾಡಿದರು. ಬಿಜೆಪಿಗೆ ನೆಲೆ ಇಲ್ಲದ ಆಂಧ್ರದಲ್ಲಿ ಸಂತೋಷ್ ಮಾಸ್ಟರ್ ಪ್ಲ್ಯಾನ್ ವರ್ಕ್ ಆಗುತ್ತಾ ಎಂಬ ಕುತೂಹಲ ಮೂಡಿಸಿದ್ದು, ಆಂಧ್ರದ ಮುಂದಿನ ಸಿಎಂ ಪವನ್ ಕಲ್ಯಾಣ್ ಆಗುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

    ಮೈತ್ರಿ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಪವನ್ ಕಲ್ಯಾಣ್ ಅವರು, ಆಂಧ್ರ ಪ್ರದೇಶದ ಭವಿಷ್ಯಕ್ಕಾಗಿ ಎರಡು ಪಕ್ಷಗಳು ಯಾವುದೇ ಷರತ್ತುಗಳಿಲ್ಲದೆ ಮೈತ್ರಿ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದೊಂದಿಗೆ ಜನಸೇನಾ ಪಕ್ಷ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಆಂಧ್ರಪ್ರದೇಶ ಸ್ಥಳೀಯ ಹಾಗೂ 2024ರ ವಿಧಾನಸಭೆ ಚುನಾವಣೆಯಲ್ಲಿ ಎರಡು ಪಕ್ಷಗಳು ಮೈತ್ರಿಯೊಂದಿಗೆ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.

    ನಟ ಪವನ್ ಕಲ್ಯಾಣ್ ಅವರು 2014ರಲ್ಲಿ ಜನಸೇನಾ ಪಕ್ಷವನ್ನು ಸ್ಥಾಪಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಜನಸೇನಾ ಸ್ಪರ್ಧೆ ನಡೆಸಿರಲಿಲ್ಲ. ಆದರೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಟಿಡಿಪಿ ಮೈತ್ರಿಗೆ ಬೆಂಬಲ ನೀಡಿದ್ದರು. ಪಕ್ಷ ಸ್ಥಾಪನೆಗೂ ಮುನ್ನ ಸಹೋದರ, ನಟ ಚಿರಂಜೀವಿ ಅವರ ಪ್ರಜಾರಾಜ್ಯಂ ಪಕ್ಷದ ಪರ ರಾಜಕೀಯದಲ್ಲಿ ಭಾಗವಹಿಸಿದ್ದರು. ಆದರೆ ಆ ಪಕ್ಷ ಕಾಂಗ್ರೆಸ್‍ನೊಂದಿಗೆ ವಿಲೀನರಾದ ಬಳಿಕ ಜನಸೇನಾ ಪಕ್ಷವನ್ನು ಸ್ಥಾಪಿಸಿದ್ದರು.

    2019ರ ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ ಮತ್ತು ಬಿಜೆಪಿಗೆ ಬೆಂಬಲ ನೀಡಿದ ಜನಸೇನಾ ಪಕ್ಷ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಆದರೆ ಈ ಚುನಾವಣೆಯಲ್ಲಿ ಜನಸೇನಾ ಮೈತ್ರಿಗೆ 1 ಸ್ಥಾನವೂ ಲಭಿಸಿರಲಿಲ್ಲ. ಆದರೆ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿಗೆ ಬೆಂಬಲ ನೀಡದೆ ಸ್ಪರ್ಧೆ ನಡೆಸಿದ್ದ ಜನಸೇನಾ ಪಕ್ಷ ಕೇವಲ 1 ಸ್ಥಾನವನ್ನು ಮಾತ್ರ ಪಡೆದಿತ್ತು. ವಿಶೇಷ ಎಂದರೇ ಸ್ವತಃ ಪವನ್ ಕಲ್ಯಾಣ್ ತಾವು ಸ್ಪರ್ಧಿಸಿದ 2 ಕ್ಷೇತ್ರಗಳಲ್ಲಿ ಸೋತು ಹೋಗಿದ್ದರು.

    ಸದ್ಯ ಆಂಧ್ರ ಪ್ರದೇಶ ರಾಜಕಾರಣದಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿರುವ ಪವನ್ ಕಲ್ಯಾಣ್ ಅವರು, ಬಿಜೆಪಿಯೊಂದಿಗೆ ಮತ್ತೊಮ್ಮೆ ಮೈತ್ರಿ ಮಾಡಿಕೊಂಡಿದ್ದಾರೆ. ಇದುವರೆಗೂ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಆಸ್ಥಿತ್ವದಲ್ಲಿ ಇಲ್ಲದ ಬಿಜೆಪಿ ದಕ್ಷಿಣದ ರಾಜ್ಯಗಳಲ್ಲಿ ಪಕ್ಷವನ್ನು ಬಲಗೊಳಿಸಲು ಮುಂದಾಗಿದೆ.

  • ಹೈದರಾಬಾದ್ ವಿರುದ್ಧ ಘರ್ಜಿಸಿದ ಕರ್ನಾಟಕ ಬಾಯ್ಸ್- 7 ವಿಕೆಟ್‍ಗಳ ಗೆಲುವು

    ಹೈದರಾಬಾದ್ ವಿರುದ್ಧ ಘರ್ಜಿಸಿದ ಕರ್ನಾಟಕ ಬಾಯ್ಸ್- 7 ವಿಕೆಟ್‍ಗಳ ಗೆಲುವು

    ಬೆಳಗಾವಿ: ಶಿವಕುಮಾರ್ ಯು.ಬಿ. ಆಕರ್ಷಕ ಶತಕ ಹಾಗೂ ಎನ್.ಜಯೇಶ್ ಅರ್ಧ ಶತಕದ ನೆರವಿನಿಂದ ಕರ್ನಾಟಕ ತಂಡವು ಆಂಧ್ರ ಪ್ರದೇಶದ ವಿರುದ್ಧ 7 ವಿಕೆಟ್‍ಗಳ ಗೆಲುವು ಸಾಧಿಸಿದೆ.

    ಇಲ್ಲಿನ ಕೆಎಸ್‍ಸಿಎ ಮೈದಾನದಲ್ಲಿ ಆಂಧ್ರ ಪ್ರದೇಶದ ವಿರುದ್ಧದ ನಡೆದ 23 ವರ್ಷದೊಳಗಿನ ಸಿ.ಕೆ.ನಾಯ್ಡು ಟ್ರೋಫಿಯ ‘ಎ’ ಗುಂಪಿನ ನಾಲ್ಕು ದಿನದ ಆಟದಲ್ಲಿ ಕರ್ನಾಟಕ ಭರ್ಜರಿ ಗೆಲುವು ಕಂಡಿದೆ.

    187 ರನ್‍ಗಳ ಮುನ್ನಡೆಯೊಂದಿಗೆ ಬುಧವಾರ ಬೆಳಗ್ಗೆ ನಾಲ್ಕನೇ ದಿನದಾಟ ಆರಂಭಿಸಿದ ಆಂಧ್ರ ಪ್ರದೇಶದ ತಂಡವು ಅಂತಿಮವಾಗಿ 228 ರನ್‍ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಆಂಧ್ರ ಪ್ರದೇಶ ನೀಡಿದ್ದ 242 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡವು ಆರಂಭಿಕ ಬ್ಯಾಟ್ಸ್‌ಮನ್‌ ಶಿವಕುಮಾರ್.ಯು.ಬಿ 111 ರನ್ ಹಾಗೂ ಎನ್.ಜಯೇಶ್ ಅಜೇಯ 57 ರನ್‍ಗಳ ಕಾಣಿಕೆ ನೀಡಿದರು. ಈ ಮೂಲಕ ಕರ್ನಾಟಕವು 60.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 247 ರನ್‍ಗಳಿಸಿ ಜಯ ಗಳಿಸಿ 6 ಅಂಕ ಸಂಪಾದಿಸಿದೆ.

    ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿವಕುಮಾರ್.ಯು.ಬಿ ಹಾಗೂ ಅಂಕಿತ್ ಉಡಪಾ ಮೊದಲ ವಿಕೆಟ್‍ಗೆ 81 ರನ್‍ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಎರಡನೇ ವಿಕೆಟ್‍ಗೆ ಶಿವಕುಮಾರ್ ಜೊತೆಯಾದ ಎನ್.ಜಯೇಶ್ ರಕ್ಷಾಣ್ಮಾತಕ ಆಟಕ್ಕೆ ಮೊರೆಹೋಗಿ ಒಂಟಿ ರನ್‍ಗಳನ್ನು ಕದಿಯುತ್ತಾ ಶಿವಕುಮಾರ್ ಅವರಿಗೆ ಸಾಥ್ ನೀಡಿದರು.

    ಶಿವಕುಮಾರ್ 49 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ನಂತರ 134 ಎಸೆತಗಳಲ್ಲಿ ಶತಕ ದಾಖಲಿಸಿದರು. ಬಳಿಕ ಬಿರುಸಿನ ಬ್ಯಾಟಿಂಗ್ ಆರಂಭಿಸಿದ ಅವರು 146 ಎಸೆತಗಳಲ್ಲಿ 111 ರನ್ (15 ಬೌಂಡರಿ) ಗಳಿಸಿ ಕೆ.ಮಹೀಪ್ ಕುಮಾರ್ ಅವರಿಗೆ ವಿಕೆಟ್ ಒಪ್ಪಿಸಿ, ಪೆವಿಲಿಯನ್ ಸೇರಿದರು. ಶಿವಕುಮಾರ್ ಹಾಗೂ ಎನ್.ಜಯೇಶ್ ಜೋಡಿಯು ಎರಡನೇ ವಿಕೆಟ್‍ಗೆ 30 ಓವರ್‍ಗಳಲ್ಲಿ 102 ರನ್‍ಗಳ ಜೊತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ಆಂಧ್ರ ಪ್ರದೇಶದ ಬಾಲರ್‍ಗಳು ಪರದಾಡಿದರು.

    ಗೆಲುವಿಗೆ 46 ರನ್‍ಗಳ ಅಗತ್ಯವಿದ್ದಾಗ ಮೈದಾಕ್ಕಿಳಿದ ಕರ್ನಾಟಕ ತಂಡದ ಉಪನಾಯಕ ಸುಜಯ ಸಾತೇರಿ ಬಿರುಸಿನ ಬ್ಯಾಂಟಿಂಗ್ ನಡೆಸಿದರು. 23 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 39 ರನ್ ಗಳಿಸಿದ ಎನ್. ಜಯೇಶ್ ಜೊತೆಗೆ 4ನೇ ವಿಕೆಟ್‍ಗೆ 51 ರನ್‍ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಆಂಧ್ರ ಪ್ರದೇಶದ ಬೌಲರ್ ಎ.ಪ್ರಣಯ್‍ಕುಮಾರ್ ಎರಡು ವಿಕೆಟ್ ಪಡೆದುಕೊಂಡರು.

    ಸ್ಕೋರ್ ವಿವರ:
    ಆಂಧ್ರ ಪ್ರದೇಶ 281 ರನ್ (ಮೊದಲ ಇನ್ನಿಂಗ್ಸ್), 228 (ಎರಡನೇ ಇನ್ನಿಂಗ್ಸ್)
    ಕರ್ನಾಟಕ 268 ರನ್ (ಮೊದಲ ಇನ್ನಿಂಗ್ಸ್), 247 (ಎರಡನೇ ಇನ್ನಿಂಗ್ಸ್)
    ಶಿವಕುಮಾರ್ ಯು.ಬಿ 111 ರನ್
    ಎನ್.ಜಯೇಶ್ ಅಜೇಯ 57 ರನ್
    ಸುಜಯ ಸಾತೇರಿ ಅಜೇಯ 39 ರನ್
    (ಎ.ಪ್ರಣಯ ಕುಮಾರ್ 30  ಓವರ್‌ಗೆ 2 ವಿಕೆಟ್ ಹಾಗೂ ಕೆ.ಮಹೀಪ್ ಕುಮಾರ್ 16 ಓವರ್‌ಗೆ 1 ವಿಕೆಟ್)

  • ಆಂಧ್ರದಲ್ಲಿಯೂ ಸಲಾಂ ರಾಖಿ ಭಾಯ್- ಸೆಲ್ಫಿಗಾಗಿ ಮುಗಿಬಿದ್ದ ಸಾವಿರಾರು ಫ್ಯಾನ್ಸ್

    ಆಂಧ್ರದಲ್ಲಿಯೂ ಸಲಾಂ ರಾಖಿ ಭಾಯ್- ಸೆಲ್ಫಿಗಾಗಿ ಮುಗಿಬಿದ್ದ ಸಾವಿರಾರು ಫ್ಯಾನ್ಸ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್’ ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅಲ್ಲದೇ ವಿಶ್ವದ ಮೂಲೆ-ಮೂಲೆಯಲ್ಲಿ ಅವರಿಗಾಗಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇದೀಗ ಯಶ್ ಅವರನ್ನು ನೋಡಲು ಸರತಿ ಸಾಲಿನಲ್ಲಿ ನಿಂತಿರುವುದನ್ನು ಆಂಧ್ರದಲ್ಲಿ ಕಾಣಬಹುದಾಗಿದೆ.

    ಆಂಧ್ರದ ರಾಯಲ ಸೀಮೆಯ ಕಡಪದಲ್ಲಿ ‘ಕೆಜಿಎಫ್ ಚಾಪ್ಟರ್-2’ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದಲ್ಲಿ ಯಶ್ ಭಾಗಿಯಾಗಿದ್ದು, ಶೂಟಿಂಗ್ ಸ್ಪಾಟ್‍ಗೆ ಸ್ಥಳೀಯರು ಭೇಟಿ ಕೊಟ್ಟಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಮಂದಿ ರಾಕಿಭಾಯ್ ಜೊತೆ ಸೆಲ್ಫಿಗೆ ಬೇಡಿಕೆ ಇಟ್ಟಿದ್ದಾರೆ. ಅಭಿಮಾನಿ ದೇವರುಗಳ ಒತ್ತಾಯಕ್ಕೆ ಮಣಿದ ಯಶ್, ಶೂಟಿಂಗ್‍ಗೆ ಕೊಂಚ ಬ್ರೇಕ್ ಹಾಕಿ ಪೊಲೀಸರ ನೆರವಿನೊಂದಿಗೆ ಪ್ರತಿಯೊಬ್ಬರಿಗೂ ಸೆಲ್ಫಿ ಕೊಟ್ಟಿದ್ದಾರೆ.

    ‘ಕೆಜಿಎಫ್ ಚಾಪ್ಟರ್-2’ ಗಾಗಿ ಎದುರು ನೋಡುತ್ತಿರುವ ಅಭಿಮಾನಿಗಳು ರಾಕಿಂಗ್ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಸೆಲಬ್ರೆಟ್ ಮಾಡುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜನವರಿ 8 ರಂದು ಯಶ್ ಅವರ ಹುಟ್ಟುಹಬ್ಬವಿದೆ. ಈಗಾಗಲೇ ಅಭಿಮಾನಿಯೊಬ್ಬ 5000 ಕೆ.ಜಿ ತೂಗುವ ಕೇಕ್ ಅನ್ನು ರೆಡಿ ಮಾಡಿಸುತ್ತಿದ್ದಾರೆ. ಸದ್ಯಕ್ಕೆ ಯಶ್ ‘ಕೆಜಿಎಫ್ 2’ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಈ ಸಿನಿಮಾವನ್ನು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

  • ರಾಯಚೂರಿನಿಂದ ಹೊಸ ವರ್ಷಾಚರಣೆಗೆ ತೆರಳಿದ್ದವರು ಆಂಧ್ರದಲ್ಲಿ ನದಿಪಾಲು

    ರಾಯಚೂರಿನಿಂದ ಹೊಸ ವರ್ಷಾಚರಣೆಗೆ ತೆರಳಿದ್ದವರು ಆಂಧ್ರದಲ್ಲಿ ನದಿಪಾಲು

    – ಮೂವರು ಬಾಲಕಿಯರು ಸೇರಿ ನಾಲ್ವರು ಸಾವು

    ರಾಯಚೂರು: ಹೊಸ ವರ್ಷಾಚರಣೆಯನ್ನು ಸಂಭ್ರಮಿಸಲು ನದಿದಂಡೆಗೆ ತೆರಳಿದ್ದ ರಾಯಚೂರಿನ ಮೂವರು ಬಾಲಕಿಯರು ಸೇರಿದಂತೆ ಒಟ್ಟು ನಾಲ್ವರು ಆಂಧ್ರ ಪ್ರದೇಶದಲ್ಲಿ ನದಿ ಪಾಲಾಗಿದ್ದಾರೆ.

    ಮದಿಹಾ (12), ಫರಿಯಾ (10) ಮತ್ತು ಲೋದಾ (10) ಮೃತ ದುರ್ದೈವಿಗಳು. ನದಿಗೆ ಬಿದ್ದ ಅಕ್ಕನ ಮಕ್ಕಳನ್ನ ಕಾಪಾಡಲು ಹೋದ ನೂರ್ ಅಹ್ಮದ್ (35) ಸಹ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಸಿದ್ದವಟಂನಲ್ಲಿ ಈ ಘಟನೆ ನಡೆದಿದೆ.

    ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಆಂಧ್ರದ ಸಿದ್ದವಟಂನಲ್ಲಿನ ಅಜ್ಜಿಯ ಮನೆಗೆ ತೆರಳಿದ್ದರು. ಅಲ್ಲಿ ಮಾವ ನೂರ್ ಅಹ್ಮದ್ ಜೊತೆ ಪೆನ್ನಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನದಿಯಲ್ಲಿ ಮಕ್ಕಳು ಮುಳುಗಿದ್ದಾರೆ. ಮಕ್ಕಳನ್ನ ಕಾಪಾಡಲು ಹೋದ ನೂರ್ ಅಹ್ಮದ್ ಸಹ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ.

    ಮೃತ ಮಕ್ಕಳು ರಾಯಚೂರು ನಗರದ ಮೆಥೋಡಿಸ್ಟ್ ಚರ್ಚ್ ಪ್ರದೇಶದ ಇನಾಂದಾರ್ ಕಾಲೋನಿ ನಿವಾಸಿ ಗೌಸ್‍ಪೀರ್ ಎಂಬವರ ಮಕ್ಕಳು ಎಂದು ತಿಳಿದು ಬಂದಿದೆ. ಗೌಸ್‍ಪೀರ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ರೈತನಾಗಿ ಹೊಸ ವ್ಯಾಪಾರ ಆರಂಭಿಸಿದ ರಮೇಶ್ ಕುಮಾರ್

    ರೈತನಾಗಿ ಹೊಸ ವ್ಯಾಪಾರ ಆರಂಭಿಸಿದ ರಮೇಶ್ ಕುಮಾರ್

    – ಆಂಧ್ರ ಪ್ರದೇಶದ ಕುರಿ ಸಂತೆಗೆ ಮಾಜಿ ಸ್ಪೀಕರ್ ಭೇಟಿ

    ಕೋಲಾರ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಹಾಗೂ 17 ಶಾಸಕರನ್ನು ಅನರ್ಹಗೊಳಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ರೈತನಾಗಿ ಹೊಸ ವ್ಯಾಪಾರ ಶುರು ಮಾಡಿದ್ದಾರೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಕೆ.ಆರ್.ರಮೇಶ್ ಕುಮಾರ್ ಅವರು ಕೊಂಚ ರಾಜಕೀಯದಿಂದ ರಿಲ್ಯಾಕ್ಸ್ ಆಗಿದ್ದಾರೆ. ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಅವರು ಕುರಿ ಸಾಕಾಣಿಕೆ ಸೇರಿದಂತೆ ವ್ಯವಸಾಯದ ಕಡೆ ಗಮನ ಕೊಡಲು ಮುಂದಾಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನ ಅಂಗಾಲ ಕುರಿ ಸಂತೆಯಲ್ಲಿ ವ್ಯಾಪಾರ ಮಾಡುವ ಮೂಲಕ ರೈತರಾಗಿದ್ದಾರೆ.

    ರಮೇಶ್ ಕುಮಾರ್ ಅವರು ಸಂತೆಯಲ್ಲಿನ ಓಡಾಟ, ವ್ಯಾಪರದ ದೃಶ್ಯವನ್ನು ಬೆರೆ ಬೆಂಬಲಿಗರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೈತರ ಗೆಟಪ್‍ನಲ್ಲಿ ರಮೇಶ್ ಕುಮಾರ್ ಅವರು ತಲೆಗೆ ಟವೆಲ್ ಸುತ್ತಿಕೊಂಡು ಸಾಮಾನ್ಯರಂತೆ ಸಂತೆಯಲ್ಲಿ ಕುರಿ ಖರೀದಿಸುವಲ್ಲಿ ಬ್ಯುಸಿಯಾಗಿರುವ ವಿಡಿಯೋ ಹಾಗೂ ಫೋಟೊಗಳು ವೈರಲ್ ಆಗುತ್ತಿವೆ.

    ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹಿಂದಿನಿಂದಲೂ ಕುರಿ, ಕೋಳಿ ಸಾಕಾಣಿಕೆ ಸೇರಿದಂತೆ ವ್ಯವಸಾಯದಲ್ಲಿ ಹೆಚ್ವು ಆಸಕ್ತಿ ತೋರುತ್ತಾ ಬಂದಿದ್ದಾರೆ. ಹೀಗಾಗಿ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನ ಅಂಗಾಲ ಶನಿವಾರ ಸಂತೆಯಲ್ಲಿ ಕುರಿ ವ್ಯಾಪಾರದಲ್ಲಿ ಬಿಸಿಯಾಗಿದ್ದರು.

  • ಕೊಲೆಗೈದು ಪರಾರಿಯಾಗಿದ್ದ ಆರೋಪಿ 14 ವರ್ಷಗಳ ಬಳಿಕ ಅರೆಸ್ಟ್

    ಕೊಲೆಗೈದು ಪರಾರಿಯಾಗಿದ್ದ ಆರೋಪಿ 14 ವರ್ಷಗಳ ಬಳಿಕ ಅರೆಸ್ಟ್

    ಬಳ್ಳಾರಿ: ಕೊಲೆಗೈದು ತಪ್ಪಿಸಿಕೊಂಡಿದ್ದ ಆರೋಪಿಯನ್ನು 14 ವರ್ಷಗಳ ಬಳಿಕ ಬಳ್ಳಾರಿಯ ಮೋಕಾ ಪೊಲೀಸರು ಬಂಧಿಸಿದ್ದಾರೆ.

    ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಾರಪ್ಪ ಎರಕುಲ್ (62) ಬಂಧಿತ ಆರೋಪಿ. ಮಾರಪ್ಪ ಸೇರಿದಂತೆ ಒಟ್ಟು ನಾಲ್ವರು ಸೇರಿ ಕರ್ನೂಲ್ ಜಿಲ್ಲೆಯ ಕಡ್ಮೂರ್ ಗ್ರಾಮದ ದತ್ತಗೌಡ ಎಂಬವರನ್ನು 3005ರಲ್ಲಿ ಕೊಲೆ ಮಾಡಿದ್ದರು. ಕಳೆದ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಾರಪ್ಪನನ್ನು ಪೊಲೀಸರು ಈಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಏನಿದು ಪ್ರಕರಣ?:
    ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದತ್ತಗೌಡ ಎಂಬವರನ್ನು ಬಳ್ಳಾರಿ ಸಮೀಪದ ಮೋಕಾ ಗ್ರಾಮಕ್ಕೆ ಕರೆದುಕೊಂಡು ಬಂದು ಕೊಲೆ ಮಾಡಿದ್ದರು. ಅಷ್ಟೇ ಅಲ್ಲದೆ ದತ್ತಗೌಡ ಅವರ ಮೃತದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದ ಪೊಲೀಸರು 2011ರಲ್ಲಿ ಪಿಂಜಾರ ದಸ್ತಗಿರಿ ಮತ್ತು ಹರಿಜನ್ ಜಾನ್‍ನನ್ನು ಪೊಲೀಸರು ಬಂಧಿಸಿದ್ದರು. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾರಪ್ಪ ಎರಕುಲ್ ಮತ್ತು ನಾಗರಾಜ್ ಎರಕುಲ್ ತಲೆ ಮರೆಸಿಕೊಂಡಿದ್ದರು. ಕಳೆದ ಒಂದು ವಾರದ ಹಿಂದೆ ಕರ್ನೂಲ್‍ನಲ್ಲಿ ಮಾರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

    ಇನ್ನೊಬ್ಬ ಆರೋಪಿ ನಾಗರಾಜ್ 2011ರಲ್ಲಿ ಕೊಲೆಯಾಗಿದ್ದಾನೆ. 14 ವರ್ಷಗಳಿಂದ ಪೊಲೀಸರಿಗೆ ಚಾಲೆಂಜ್ ಆಗಿದ್ದ ಪ್ರಕರಣದ ಎಲ್ಲಾ ಆರೋಪಿಗಳಿಗೆ ಶಿಕ್ಷ ಕೊಡಿಸುವಲ್ಲಿ ಮೋಕಾ ಪಿಎಸ್‍ಐ ಶ್ರೀನಿವಾಸ್ ಮತ್ತು ಸಿಪಿಐ ಭರತ್ ಅವರ ನೇತೃತ್ವದ ತಂಡವು ಯಶಸ್ವಿಯಾಗಿದೆ.

  • 21 ದಿನಗಳಲ್ಲಿ ತೀರ್ಪು, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ

    21 ದಿನಗಳಲ್ಲಿ ತೀರ್ಪು, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ

    – ಆಂಧ್ರ ವಿಧಾನಸಭೆಯಲ್ಲಿ ಮಸೂದೆ ಪಾಸ್
    – ಜಗನ್‍ಗೆ ರಾಖಿ ಕಟ್ಟಿದ ಮಹಿಳಾ ಶಾಸಕಿಯರು

    ಅಮರಾವತಿ: ಅತ್ಯಾಚಾರ ಎಸಗಿದ ಕಾಮುಕರಿಗೆ ಕೇವಲ 21 ದಿನಗಳಲ್ಲಿ ತೀರ್ಪು ನೀಡುವ ಹಾಗೂ ಗಲ್ಲು ಶಿಕ್ಷೆ ವಿಧಿಸುವ ಮಹತ್ವದ ಆಂಧ್ರಪ್ರದೇಶ ದಿಶಾ ಮಸೂದೆ ವಿಧಾನಸಭೆಯಲ್ಲಿ ಪಾಸ್ ಆಗಿದೆ.

    ಈ ಮಸೂದೆಗೆ ರಾಜ್ಯಪಾಲರು ಅಂಕತ ಬಿದ್ದ ಬಳಿಕ ಕಾನೂನಾಗಿ ರೂಪುಗೊಳ್ಳಲಿದ್ದು, ಅತ್ಯಾಚಾರ ಎಸಗಿರುವುದು ಸಾಬೀತಾದಲ್ಲಿ ಮರಣದಂಡನೆ ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆ ಒಳಗೊಂಡಿದೆ. ಇಂತಹ ಪ್ರಕರಣ ಸಂಭವಿಸಿದಾಗ ಕೇವಲ 21 ದಿನಗಳಲ್ಲಿ ತೀರ್ಪು ಪ್ರಕಟಿಸಿ, ಕಠಿಣ ಶಿಕ್ಷೆ ವಿಧಿಸುವ ಅವಕಾಶವನ್ನು ಕಲ್ಪಿಸಿದೆ.

    ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಅವರ ಸಚಿವ ಸಂಪುಟ ಈ ಮಸೂದೆಗೆ ಬುಧವಾರ ಒಪ್ಪಿಗೆ ನೀಡಿತ್ತು. ಮಹಿಳೆಯರ ಮೇಲೆ ಅತ್ಯಾಚಾರದಂತಹ ಘೋರ ಅಪರಾಧಗಳನ್ನು ಎಸಗುವವರಿಗೆ ಗಲ್ಲು ಅಥವಾ ಕಠಿಣ ಶಿಕ್ಷೆ ವಿಧಿಸುವುದು ಇದರ ಉದ್ದೇಶವಾಗಿದೆ.

    ತೆಲಂಗಾಣದ ಸೈಬರಾಬಾದ್‍ನಲ್ಲಿ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ನಂತರ ಜೀವಂತವಾಗಿ ಸುಡಲಾಗಿತ್ತು. ಪ್ರಕರಣದ ನಂತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಸ್ಥಳ ಪರಿಶೀಲನೆಗಾಗಿ ಆರೋಪಿಗಳನ್ನು ಸ್ಥಳಕ್ಕೆ ಕೊಂಡೊಯ್ದಾಗ ಪೊಲೀಸರ ಮೇಲೆಯೇ ದಾಳಿ ನಡೆಸಿ, ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಆಗ ಪೊಲೀಸರು ಎನ್‍ಕೌಂಟರ್ ಮೂಲಕ ಆರೋಪಿಗಳನ್ನು ಹತ್ಯೆ ಮಾಡಿದ್ದರು. ಈ ಪ್ರಕರಣದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದ್ದು, ಕಾಮುಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಹೊಸ ಕಾನೂನು ರಚನೆಗೆ ಮುಂದಾಗಿದೆ.

    ಇತ್ತೀಚೆಗೆ ಈ ಕುರಿತು ಸದನದಲ್ಲಿ ಮಾತನಾಡಿದ್ದ ಸಿಎಂ ಜಗನ್‍ಮೋಹನ ರೆಡ್ಡಿ, ಅತ್ಯಾಚಾರ ಹಾಗೂ ಆಸಿಡ್ ದಾಳಿಯಂತಹ ಪ್ರಕರಣಗಳು ನಡೆದಾಗ ನಿರ್ಣಾಯಕ ಸಾಕ್ಷ್ಯಾಧಾರಗಳಿದ್ದಲ್ಲಿ ಅಂತಹ ಪ್ರಕರಣಗಳನ್ನು 14 ದಿನಗಳಲ್ಲಿ ವಿಚಾರಣೆ ನಡೆಸಿ, 21 ದಿನಗಳಲ್ಲಿ ಶಿಕ್ಷೆ ನೀಡಬೇಕು ಎಂದು ಹೇಳಿದ್ದರು.

    ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, 2019ರ ಮಹಿಳಾ ಮತ್ತು ಮಕ್ಕಳ ಕಾಯ್ದೆಯಡಿ ಪ್ರತಿ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯಗಳನ್ನು ತೆರೆಯಲು ಮುಂದಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಗೆ ಅವಮಾನವಾಗುವಂತಹ ಪೋಸ್ಟ್ ಗಳನ್ನು ಹಾಕಿದಲ್ಲಿ ಸೆಕ್ಷನ್ 354(ಇ) ಅಡಿ ಪ್ರಕರಣ ದಾಖಲಾಗುತ್ತದೆ. ಇಂತಹವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

    ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳಿಗೆ 10 ರಿಂದ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ ಪ್ರಕರಣ ತೀವ್ರವಾಗಿದ್ದಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಪೊಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಿಗೂ ಜೈಲು ಶಿಕ್ಷೆಯನ್ನು ವಿಸ್ತರಿಸುವ ಕುರಿತು ಆಂಧ್ರ ಪ್ರದೇಶ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ಮಸೂದೆ ಪಾಸ್ ಆಗುತ್ತಿದ್ದಂತೆ ವೈಎಸ್‍ಆರ್ ಕಾಂಗ್ರೆಸ್ಸಿನ ಶಾಸಕಿಯರು ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ಅವರಿಗೆ ರಾಖಿ ಕಟ್ಟಿ ಸಂಭ್ರಮಕಿಸಿದರು.

  • ಸಿನಿಮಾದಲ್ಲಿ ಎನ್‍ಕೌಂಟರ್ ಮಾಡಿದ್ರೆ ಚಪ್ಪಾಳೆ, ರಿಯಲ್ ಆಗಿ ಮಾಡಿದ್ರೆ ವಿರೋಧ: ಜಗನ್ ಮೋಹನ್ ರೆಡ್ಡಿ

    ಸಿನಿಮಾದಲ್ಲಿ ಎನ್‍ಕೌಂಟರ್ ಮಾಡಿದ್ರೆ ಚಪ್ಪಾಳೆ, ರಿಯಲ್ ಆಗಿ ಮಾಡಿದ್ರೆ ವಿರೋಧ: ಜಗನ್ ಮೋಹನ್ ರೆಡ್ಡಿ

    ಅಮರಾವತಿ: ದಿಶಾ ಪ್ರಕರಣದ ನಾಲ್ವರು ಅತ್ಯಾಚಾರಿಗಳನ್ನು ಸೈಬರಾಬಾದ್ ಪೊಲೀಸರು ಎನ್‍ಕೌಂಟರ್ ಮಾಡಿದನ್ನು ಪ್ರಶ್ನಿಸಿದ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ನಡೆಯನ್ನು ಆಂಧ್ರಪ್ರದೇಶ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಖಂಡಿಸಿದ್ದು, ಸಿನಿಮಾದಲ್ಲಿ ಎನ್‍ಕೌಂಟರ್ ಮಾಡಿದರೆ ಚಪ್ಪಾಳೆ ಹೊಡಿಯುತ್ತೇವೆ. ಆದರೆ ನಿಜವಾಗಿಯೂ ಎನ್‍ಕೌಂಟರ್ ಮಾಡಿದರೆ ವಿರೋಧಿಸುತ್ತೇವೆ ಎಂದು ಕಿಡಿಕಾರಿದ್ದಾರೆ.

    ಅಲ್ಲದೆ ಆರೋಪಿಗಳ ಹುಟ್ಟಡಗಿಸಿದ ತೆಲಂಗಾಣ ಪೊಲೀಸರ ಕಾರ್ಯವನ್ನು ಆಂಧ್ರ ಸಿಎಂ ಶ್ಲಾಘಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡಿದ ಜಗನ್ ಮೋಹನ್ ರೆಡ್ಡಿ, ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿ ಈ ಘಟನೆ ನನ್ನನ್ನು ಆಳವಾಗಿ ಸಂಕಟಕ್ಕೆ ದೂಡಿತ್ತು. ಒಬ್ಬ ತಂದೆಯಾಗಿ ಇಂತಹ ಘಟನೆಗಳಿಗೆ ನಾನು ಹೇಗೆ ಪ್ರತಿಕ್ರಿಯಿಸಲಿ? ಕ್ರೂರಿಗಳಿಗೆ ಯಾವ ಶಿಕ್ಷೆ ಕೊಟ್ಟರೆ ಪೋಷಕರಿಗೆ ಪರಿಹಾರ ನೀಡಿದಂತಾಗುತ್ತದೆ ಎಂದು ನಾವು ಚಿಂತಿಸಬೇಕಾಗಿದೆ ಎಂದು ಹೇಳಿದರು.

    ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರಿಗೆ ಹಾಗೂ ತೆಲಂಗಾಣ ಪೊಲೀಸರಿಗೆ ಹ್ಯಾಟ್ಸ್ ಆಫ್. ಕೆಸಿಎರ್ ಅವರು ನಿಜಕ್ಕೂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಆಂಧ್ರ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

    ದಿಶಾ ಪ್ರಕರಣದ ಆರೋಪಿಗಳ ಎನ್‍ಕೌಂಟರ್ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ನಡೆಯನ್ನು ಜಗನ್ ಅವರು ವಿರೋಧಿಸಿದರು. ಸಿನಿಮಾಗಳಲ್ಲಿ ನಾಯಕ ಎನ್‍ಕೌಂಟರ್ ಮಾಡಿದರೆ ನಾವೆಲ್ಲಾ ಚಪ್ಪಾಳೆ ಹೊಡೆಯುತ್ತೇವೆ. ಆದರೆ ಅದೇ ಕೆಲಸವನ್ನು ಒಬ್ಬ ವ್ಯಕ್ತಿ ರಿಯಲ್ ಆಗಿ ಮಾಡಿದರೆ, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಹೆಸರಿನಲ್ಲಿ ಕೆಲವರು ದೆಹಲಿಯಿಂದ ಬಂದು ಇದು ತಪ್ಪು ಎನ್ನುತ್ತಾರೆ. ಏಕೆ ಮಾಡಿದೆ ಎಂದು ಪ್ರಶ್ನೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆ ಹಾಗೂ ಶಿಕ್ಷೆ ಸಂಬಂಧ ಬಲವಾದ ಕಾನೂನು ಜಾರಿಗೆ ತರಲು ನಿರ್ಧರಿಸಿದ್ದೇವೆ. ಇದೇ ಅಧಿವೇಶನದಲ್ಲಿ ಆ ಮಸೂದೆಯನ್ನು ನಮ್ಮ ಸರ್ಕಾರ ಮಂಡಿಸಲಿದೆ ಎಂದು ಘೋಷಿಸಿದರು. ಜೊತೆಗೆ ಅದರಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗುವ ಕಾಮುಕರಿಗೆ 21 ದಿನಗಳಲ್ಲಿ ಮರಣದಂಡನೆ ವಿಧಿಸುವ ಬಗ್ಗೆ ಕೂಡ ಪ್ರಸ್ತಾಪವಿದೆ ಎಂದು ತಿಳಿಸಿದರು.

  • ಮೈದಾನದಲ್ಲಿ ಹಾವು – ರಣಜಿ ಕ್ರಿಕೆಟ್ ಪಂದ್ಯ ವಿಳಂಬ

    ಮೈದಾನದಲ್ಲಿ ಹಾವು – ರಣಜಿ ಕ್ರಿಕೆಟ್ ಪಂದ್ಯ ವಿಳಂಬ

    ಹೈದರಾಬಾದ್: ಅಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಮೊದಲ ದಿನದ ಅಂಧ್ರ ಪ್ರದೇಶದ ಮತ್ತು ವಿದರ್ಭ ನಡುವಿನ ಪಂದ್ಯದಲ್ಲಿ ಮೈದಾನಕ್ಕೆ ಹಾವು ಬಂದ ಕಾರಣ ಆಟಕ್ಕೆ ವಿಳಂಬವಾಗಿದೆ.

    ಇಂದು ಅಂಧ್ರಪ್ರದೇಶ ಮತ್ತು ವಿದರ್ಭ ತಂಡದ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಮೊದಲ ದಿನದ ಪಂದ್ಯದ ವೇಳೆ ಹಾವೊಂದು ಕ್ರಿಕೆಟ್ ಮೈದಾನಕ್ಕೆ ಬಂದಿದೆ. ಹಾವು ಕ್ರಿಕೆಟ್ ಮೈದಾನದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದ್ದು, ಈ ವಿಡಿಯೋದಲ್ಲಿ ಹಾವು ಹರಿಯುತ್ತಿರುವುದನ್ನು ಆಟಗಾರರು ದಿಗ್ಭ್ರಮೆಯಿಂದ ನೋಡುತ್ತಿರುವುದನ್ನು ನಾವು ಕಾಣಬಹುದು.

    ರಣಜಿ ಟ್ರೋಫಿ ವೇಳೆ ಮೈದಾನಕ್ಕೆ ಹಾವು ನುಗ್ಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2015 ರಲ್ಲಿ ಸಾಲ್ಟ್ ಲೇಕ್‍ನ ಜೆಯೂ ಕ್ಯಾಂಪಸ್‍ನಲ್ಲಿ ನಡೆಯುತ್ತಿದ್ದ ಬಂಗಾಳ ಮತ್ತು ವಿದರ್ಭ ನಡುವಿನ ಪಂದ್ಯದಲ್ಲೂ ಹಾವೊಂದು ಮೈದಾನಕ್ಕೆ ಬಂದು ಪಂದ್ಯಕ್ಕೆ ಅಡ್ಡಿ ಮಾಡಿತ್ತು. ಈಗ ಮತ್ತೆ ಇದೇ ರೀತಿ ಹಾವೊಂದು ಬಂದಿದ್ದು ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಸಿಸಿಐ ಹಾವು ಪಂದ್ಯವನ್ನು ನಿಲ್ಲಿಸಿದೆ. ಪಂದ್ಯ ಆರಂಭವಾಗುವುದನ್ನು ವಿಳಂಬ ಮಾಡಲು ಮೈದಾನಕ್ಕೆ ಅತಿಥಿಯೊಬ್ಬರು ಬಂದಿದ್ದರು ಎಂದು ಬರೆದುಕೊಂಡಿದೆ.

    2015ರ ನಂತರ ಮತ್ತೆ ಇದೇ ವಿದರ್ಭ ತಂಡ ಆಡುವ ಪಂದ್ಯದಲ್ಲಿ ಹಾವು ಕಾಣಿಸಿಕೊಂಡಿದ್ದು, ಹಾವನ್ನು ಅಲ್ಲಿನ ಸಿಬ್ಬಂದಿ ಹಿಡಿದು ತೆಗೆದುಕೊಂಡು ಹೋಗಿದ್ದಾರೆ. ನಂತರ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ವಿದರ್ಭ ನಾಯಕ ಫೈಜ್ ಫೈಜಾಲ್ ಆಂಧ್ರ ಪ್ರದೇಶದ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತ ಅಂಧ್ರಪ್ರದೇಶ ತಂಡವನ್ನು ಹನುಮಾ ವಿಹಾರಿ ಮುನ್ನಡೆಸುತ್ತಿದ್ದಾರೆ.

    ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಅಂಧ್ರ ಆರಂಭಿಕ ಕುಸಿತ ಕಂಡಿದ್ದು, ಊಟದ ಸಮಯಕ್ಕೆ ಆರಂಭಿಕ ಮೂರು ವಿಕೆಟ್‍ಗಳನ್ನು ಕಳೆದುಕೊಂಡು 87 ರನ್ ಸಿಡಿಸಿ ಸಂಕಷ್ಟಕ್ಕೆ ಸಿಲುಕಿದೆ. ಆದರೆ ನಾಯಕ ಹನುಮ ವಿವಾರಿ ತಾಳ್ಮೆಯ ಆಟವಾಡುತ್ತಿದ್ದು, 89 ಎಸೆತದಲ್ಲಿ 6 ಬೌಂಡರಿಯೊಂದಿಗೆ 43 ರನ್ ಸಿಡಿಸಿ ಆಡುತ್ತಿದ್ದಾರೆ.

  • ನದಿಗೆ ಹಾರಿದ ಮಹಿಳೆ- ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ ಎಎಸ್‍ಐ

    ನದಿಗೆ ಹಾರಿದ ಮಹಿಳೆ- ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ ಎಎಸ್‍ಐ

    ಹೈದರಾಬಾದ್: ಸೈಬರಾಬಾದ್ ಎನ್‍ಕೌಂಟರ್ ಮೂಲಕ ಹೈದರಾಬಾದ್ ಪೊಲೀಸರು ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದರು. ಅದೇ ರೀತಿ ಇದೀಗ ಎಎಸ್‍ಐ ಮಹಿಳೆಯ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಕೆ.ಮಾಣಿಕ್ಯಲ ರಾವ್ ಅವರು ನದಿಗೆ ಹಾರಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಯುವತಿ ಹಾರಿದ ಸೇತುವೆಯಿಂದಲೇ ಜಿಗಿದು ರಕ್ಷಣಾ ಕಾರ್ಯ ನಡೆಸಿದ್ದಾರೆ. ಮಹಿಳೆಯು ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಮೇಲಿಂದ ಜಿಗಿದಿದ್ದಳು. ಆಗ 58 ವರ್ಷದ ಎಎಸ್‍ಐ ನದಿಗೆ ಹಾರಿ ಮಹಿಳೆಯನ್ನು ಕಾಪಾಡಿದ್ದಾರೆ.

    ಕೆ.ಮಾಣಿಕ್ಯಲ ರಾವ್ ಅವರು ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಅವನಿಗಡ್ಡ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ನೋ ಆಕ್ಸಿಡೆಂಟ್ ಡೇ’ ನಿಮಿತ್ತ ಮಾಣಿಕ್ಯಲ ಅವರು ಸೇತುವೆ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಆಗ ಮಹಿಳೆ ಸೇತುವೆ ಮೇಲೆ ನಿಂತಿದ್ದಳು. ಸ್ಥಳೀಯರು ಮಹಿಳೆ ಸೇತುವೆ ಮೇಲೆ ನಿಂತಿರುವುದನ್ನು ಕಂಡು ನದಿಗೆ ಜಿಗಿಯುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಆಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಣಿಕ್ಯಲ ಹಾಗೂ ಇವರ ಸಹೋದ್ಯೋಗಿ ಗೋಪಿರಾಜು ಸಹ ಅನುಮಾನ ಪಟ್ಟಿದ್ದರು. ಹೀಗಾಗಿ ಸೇತುವೆ ಬಳಿಯೇ ನಿಂತಿದ್ದರು. ಆದರೆ ಪೊಲೀಸರು ಸ್ಥಳಕ್ಕಾಗಮಿಸುವ ಹೊತ್ತಿಗೆ ಮಹಿಳೆ ಆಗಲೇ ಸೇತುವೆ ಮೇಲಿಂದ ಜಿಗಿದೇ ಬಿಟ್ಟಿದ್ದಳು.

    ಇದನ್ನು ಮಾಣಿಕ್ಯಲ ಅವರು ಗಮನಿಸಿ, ತಕ್ಷಣ ನದಿಗೆ ಹಾರಿದ್ದಾರೆ. ಸುಮಾರು 500 ಮೀಟರ್ ಈಜಿ ನಂತರ ಮಹಿಳೆಯನ್ನು ರಕ್ಷಿಸಿದ್ದಾರೆ. ಆಗ ಗೋಪಿರಾಜು ಅವರು ಮೀನುಗಾರರ ಬಳಿ ತೆರಳಿದ್ದು, ಮೀನುಗಾರರು ಘಟನಾ ಸ್ಥಳಕ್ಕೆ ದೋಣಿಯನ್ನು ತಂದಿದ್ದಾರೆ.

    ಕೊನೆಗೂ ಮಾಣಿಕ್ಯಲ ಅವರು ಮಹಿಳೆಯನ್ನು ರಕ್ಷಿಸಿದ್ದು, ನಂತರ ಅವರನ್ನು ಅವನಿಗಡ್ಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯ ಸ್ಥಿತಿ ಸಹಜವಾಗಿದೆ. ಘಟನೆ ಕುರಿತು ಮಾಹಿತಿ ತಿಳಿದ ಎಸ್‍ಪಿ ರವೀಂದ್ರನಾಥ ಬಾಬು ಮಾಣಿಕ್ಯಲ ಅವರ ಸಾಹಸವನ್ನು ಹಾಡಿಹೊಗಳಿದ್ದಾರೆ. ಅಲ್ಲದೆ ಮಹಿಳೆ ಯಾಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಳು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.