Tag: Andhra Pradesh

  • ಕ್ವಾರಂಟೈನ್‍ನಲ್ಲಿ ಇರುವವರಿಗೆ ಸಿಎಂ ಜಗನ್ ಮೋಹನ್ ‘ಕೈ ತುತ್ತು’

    ಕ್ವಾರಂಟೈನ್‍ನಲ್ಲಿ ಇರುವವರಿಗೆ ಸಿಎಂ ಜಗನ್ ಮೋಹನ್ ‘ಕೈ ತುತ್ತು’

    ಅಮರಾವತಿ: ಕ್ವಾರಂಟೈನ್‍ನಲ್ಲಿ ಇರುವ ಕೊರೊನಾ ಶಂಕಿತರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ‘ಕೈ ತುತ್ತು’ (ಗೋರು ಮುದ್ದ) ಮೆನು ನೀಡುತ್ತಿದ್ದಾರೆ.

    ವಿಜಯವಾಡದ ಕ್ವಾರಂಟೈನ್ ಕೇಂದ್ರದಲ್ಲಿ ಇರುವ ಕೊರೊನಾ ಸೋಂಕು ಶಂಕಿರಿಗೆ ಬಾಳೆಹಣ್ಣು, ಮೋಸಂಬಿ, ಒಣ ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಖರ್ಜೂರ ಮತ್ತು ಮೊಟ್ಟೆಗಳನ್ನು ನೀಡಲಾಗುತ್ತಿದೆ. ಇದೇ ರೀತಿ ಕೈ ತುತ್ತು ಮೆನುವನ್ನು ರಾಜ್ಯದಾದ್ಯಂತದ ಎಲ್ಲಾ ಕ್ವಾರಂಟೈನ್ ಕೇಂದ್ರಗಳಲ್ಲಿ ಅನುಸರಿಸಬೇಕು ಎಂದು ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಗುರುವಾರ ಬೆಳಗ್ಗೆ ವೇಳೆಗೆ ಒಂದೇ ದಿನದಲ್ಲಿ ಆಂಧ್ರಪ್ರದೇಶದಲ್ಲಿ 43 ಜನರಿಗೆ ಕೊರೊನಾ ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 348ಕ್ಕೆ ಏರಿಕೆ ಕಂಡಿದೆ. ಇಲ್ಲಿವರೆಗೂ 6 ಮಂದಿ ಚೇತರಿಸಿಕೊಂಡಿದ್ದು, ನಾಲ್ವರು ಮೃತಪಟ್ಟಿದ್ದಾರೆ.

  • ಇನ್ಸ್‌ಪೆಕ್ಟರ್‌ ಕಾಲಿಗೆ ಬಿದ್ದು ನಮಸ್ಕರಿಸಿದ ಶಾಸಕ

    ಇನ್ಸ್‌ಪೆಕ್ಟರ್‌ ಕಾಲಿಗೆ ಬಿದ್ದು ನಮಸ್ಕರಿಸಿದ ಶಾಸಕ

    – ಶಾಸಕರ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ

    ವಿಶಾಖಪಟ್ಟಣಂ: ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಪೊಲೀಸರು ಜನದಡ್ಡನೆ, ವಾಹನಗಳ ಸಂಚಾರ ತಡೆಯುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ ಸೇವೆಗೆ ಆಂಧ್ರಪ್ರದೇಶದ ಶಾಸಕರೊಬ್ಬರು ಫುಲ್ ಫಿದಾ ಆಗಿ ಇನ್ಸ್‌ಪೆಕ್ಟರ್ ಒಬ್ಬರ ಕಾಲಿಗೆ ಮುಟ್ಟಿ ನಮಸ್ಕರಿಸಿದ್ದಾರೆ.

    ಆಂಧ್ರ ಪ್ರದೇಶದ ಅರಕು ಕ್ಷೇತ್ರದ ಶಾಸಕ ಚೆಟ್ಟಿ ಫಲ್ಗುನಾ ವಿಶಾಖಪಟ್ಟಣಂನ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಶಾಸಕರ ನಡೆಯ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶಾದ್ಯಂತ ಕಾಲ್‍ಡೌನ್ ಘೋಷಿಸಿದ್ದರೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊರೊನಾ ಸೋಂಕಿತರ ಸಂಖ್ಯೆ ಇಂದು 1,700 ಗಡಿ ದಾಟಿದೆ.

  • ಆಂಧ್ರ ಗಡಿಯಲ್ಲಿ ಪರದಾಡುತ್ತಿದ್ದಾರೆ ಸಾವಿರಕ್ಕೂ ಹೆಚ್ಚು ಮೀನುಗಾರರು

    ಆಂಧ್ರ ಗಡಿಯಲ್ಲಿ ಪರದಾಡುತ್ತಿದ್ದಾರೆ ಸಾವಿರಕ್ಕೂ ಹೆಚ್ಚು ಮೀನುಗಾರರು

    ಕೋಲಾರ: ಮಂಗಳೂರು ಬಂದರಿನಿಂದ ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದ ಮೀನುಗಾರರನ್ನು ಕೋಲಾರದ ಗಡಿ ಭಾಗವಾದ ನಂಗಲಿ ಚೆಕ್ ಪೋಸ್ಟ್ ಬಳಿ ಆಂಧ್ರಪ್ರದೇಶ ಪೊಲೀಸರು ತಡೆ ಹಿಡಿದಿದ್ದಾರೆ.

    ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗಡಿಯಲ್ಲಿ ಆಂಧ್ರ ಪೊಲೀಸರು ಮೀನುಗಾರರಿಗೆ ತಡೆ ಮಾಡಿದ್ದು, ಆಂಧ್ರ ಮೂಲದ ನೂರಾರು ಮಂದಿ ಮೀನುಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಮಂಗಳೂರಿನಲ್ಲಿ ಮೀನುಗಾರಿಕೆ ಮಾಡಿಕೊಂಡು ಇವರು ಜೀವನ ನಡೆಸುತ್ತಿದ್ದರು. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲೆಡೆ ಲಾಕ್‍ಡೌನ್ ಮಾಡಿರುವ ಪರಿಣಾಮ ಮಂಗಳೂರು ಮೀನುಗಾರಿಕಾ ಇಲಾಖೆ ಅನುಮತಿ ಪಡೆದು, ಮಿನಿ ಬಸ್‍ಗಳ ಮೂಲಕ ಸಾವಿರಕ್ಕೂ ಹೆಚ್ಚಿನ ಮೀನುಗಾರರು ಆಂಧ್ರದತ್ತ ಮುಖಮಾಡಿದ್ದರು.

    ಆದರೆ ನಂಗಲಿ ಬಳಿ ಆಂಧ್ರ ಪೊಲೀಸರು ಮೀನುಗಾರರನ್ನು ತಡೆದು ಪ್ರವೇಶ ನಿರಾಕರಿಸಿದ್ದಾರೆ. ಈ ಮೀನುಗಾರರು ಆಂಧ್ರದ ನೆಲ್ಲೂರು, ವಿಶಾಕಪಟ್ಟಣಂ, ಪ್ರಕಾಶಂ, ಶ್ರೀಕಾಕುಲಂ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಸ್ಥಳಕ್ಕೆ ಚಿತ್ತೂರು ಜಿಲ್ಲೆಯ ಎಸ್‍ಪಿ ಹಾಗೂ ಡಿಸಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಗಡಿಯಲ್ಲಿ ಸಾವಿರಕ್ಕೂ ಹೆಚ್ಚಿನ ಮೀನುಗಾರರು ಪರದಾಡುತ್ತಿದ್ದಾರೆ.

  • ಮೂರನೇ ಹಂತಕ್ಕೆ ತಲುಪಿತಾ ಭಾರತ?- ಉಡಾಫೆ ಜನರೇ ಎಚ್ಚರ, ಎಚ್ಚರ

    ಮೂರನೇ ಹಂತಕ್ಕೆ ತಲುಪಿತಾ ಭಾರತ?- ಉಡಾಫೆ ಜನರೇ ಎಚ್ಚರ, ಎಚ್ಚರ

    – ಮಣಿಪಾಲದ ಕೆಎಂಸಿ ಆಸ್ಪತ್ರೆಯ ಒಪಿಡಿ ಬಂದ್

    ಬೆಂಗಳೂರು: ಹೆಮ್ಮಾರಿ, ಡೆಡ್ಲಿ ವೈರಸ್ ಕೊರೊನಾ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ಬುಧವಾರ 51 ಇದ್ದ ಕೊರೊನಾ ಪ್ರಕರಣ ಗುರುವಾರ ದಿಢೀರ್ 55ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ನಾಲ್ಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

    ವಿವಿಧ ರಾಜ್ಯಗಳಲ್ಲಿ ನಿತ್ಯವೂ ಸೋಂಕಿತರ ಸಂಖ್ಯೆ ಏರುವುದನ್ನು ಗಮನಿಸಿದರೆ ದೇಶದಲ್ಲಿ ಕೊರೊನಾ 3ನೇ ಹಂತಕ್ಕೆ ಕಾಲಿಟ್ಟಿದೇಯಾ ಎಂಬ ಅನುಮಾನ ಮೂಡಲು ಶುರುವಾಗಿದೆ. ಕರ್ನಾಟಕ, ತೆಲಂಗಾಣ ಮತ್ತು ದೆಹಲಿಯಲ್ಲಿ ಗುರುವಾರ ತಲಾ 4 ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಕೊರೊನಾ ಥರ್ಡ್ ಸ್ಟೇಜ್‍ಗೆ ಲಗ್ಗೆ ಇಟ್ಟಿದೇಯಾ? ಸಮುದಾಯಕ್ಕೆ ಕೊರೊನಾ ಹಬ್ಬುತಿದೇಯಾ ಎಂಬ ಅನುಮಾನಕ್ಕೆ ಕಾರಣ ಆಗಿದೆ.

    ಮಣಿಪಾಲ:
    ಮಣಿಪಾಲದ ಕೆಎಂಸಿ ಆಸ್ಪತ್ರೆ ಇಂದಿನಿಂದ ಏಪ್ರಿಲ್ 15 ರವರೆಗೆ ತನ್ನ ಎಲ್ಲಾ ಒಪಿಡಿ ಸೇವೆಯನ್ನು ಸ್ಥಗಿತಗೊಳಿಸಿದೆ. ತುರ್ತು ಚಿಕಿತ್ಸೆ ಮತ್ತು ಎಮರ್ಜೆನ್ಸಿ ಸೇವೆ ಮಾತ್ರ ಮಣಿಪಾಲ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಸಿಗಲಿದೆ ಎಂದು ವೈದ್ಯಕೀಯ ಅಧೀಕ್ಷಕರು ಪ್ರಕಟಣೆ ಹೊರಡಿಸಿದ್ದಾರೆ.

    ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಗೆ ಕೆಎಂಸಿಯಲ್ಲಿ ಚಿಕಿತ್ಸೆ ಸಿಗುತ್ತಿರುವುದರಿಂದ ಒಪಿಡಿ ರೋಗಿಗಳಿಗೆ ಯಾವುದೇ ಸಮಸ್ಯೆಗಳು ಆಗಬಾರದು ಎನ್ನುವ ಉದ್ದೇಶದಿಂದ ಕೆಎಂಸಿಯ ವೈದ್ಯಕೀಯ ಅಧೀಕ್ಷಕರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

    ಕೊಡಗು ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹರಡದಂತೆ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗಿದೆ. ಮಡಿಕೇರಿಯಲ್ಲಿ ತರಕಾರಿ ಹಾಗೂ ಅಗತ್ಯ ವಸ್ತುಗಳ ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ ಮತ್ತು ಅಂಗಡಿ ಮುಂಗಟ್ಟುಗಳ ಮುಂದೆ ಖುದ್ದು ಪೊಲೀಸರೇ ಲ್ಯಾಂಡ್ ಮಾಕ ಮಾಡಿದ್ದಾರೆ. ಜನರು ಅಂತರಕಾಯ್ದುಕೊಂಡು ವಹಿವಾಟು ನಡೆಸುವಂತೆ ಸೂಚಿಸಿದ್ದಾರೆ.

    ಮೈಸೂರಿನಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕಿರಾಣಿ ಅಂಗಡಿ ಮಾಲೀಕರು ತಮ್ಮ ಅಂಗಡಿಯನ್ನು ಗಾಜಿನಲ್ಲಿ ಕವರ್ ಮಾಡಿದ್ದಾರೆ. ಮೈಸೂರಿನ ಇಟ್ಟಿಗೆಗೂಡಿನ ರಿಷಭ್ ಬಂಢಾರ್ ದಿನಸಿ ಅಂಗಡಿಯನ್ನು ಮಾಲೀಕರು ಗಾಜಿನಲ್ಲಿ ಮುಚ್ಚಿ ಅಂಗಡಿ ಪಕ್ಕ ಚಿಕ್ಕದೊಂದು ಜಾಗದ ತೆರೆದು ಅಲ್ಲಿಂದ ದಿನಸಿ ಪದಾರ್ಥ ವಿತರಣೆ ಮಾಡುತ್ತಿದ್ದಾರೆ. ಅಂಗಡಿಯ ಹೊರಗೆ ಸರತಿ ಸಾಲಿನಲ್ಲಿ ಮೂರು ಅಡಿ ಅಂತರದಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ಪದಾರ್ಥ ನೀಡಲಾಗುತ್ತಿದೆ.

  • ಹಾಲಶ್ರೀ ಸ್ವಾಮೀಜಿಗಳು ಪ್ರಯಾಣಿಸುತ್ತಿದ್ದ ಕಾರು ಅಪಘಾತ

    ಹಾಲಶ್ರೀ ಸ್ವಾಮೀಜಿಗಳು ಪ್ರಯಾಣಿಸುತ್ತಿದ್ದ ಕಾರು ಅಪಘಾತ

    ಬಳ್ಳಾರಿ: ಆಂಧ್ರ ಪ್ರದೇಶದ ಗುತ್ತಿ-ಅನಂತಪುರಂ ರಾಷ್ಟ್ರೀಯ ಹೆದ್ದಾರಿ ಬಳಿ ಹಾಲು ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ.

    ಜಿಲ್ಲೆಯ ಹುವಿನಹಡಗಲಿ ತಾಲೂಕಿನ ಹಿರೇ ಹಡಗಲಿಯಲ್ಲಿ ಹಾಲು ಮಠವಿದ್ದು, ಕೆಲಸದ ನಿಮಿತ್ತವಾಗಿ ಕಳೆದ ಎರಡು ದಿನಗಳ ಹಿಂದೆ ಹೈದರಾಬಾದ್‍ಗೆ ಸ್ವಾಮೀಜಿ ಅವರು ತೆರಳಿದ್ದರು. ಇಂದು ಬೆಳಗಿನ ಜಾವ ಕೆಲಸ ಮುಗಿಸಿಕೊಂಡು ಬಳ್ಳಾರಿಗೆ ಮರಳಿ ಬರುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸ್ವಾಮೀಜಿಯವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸ್ವಾಮೀಜಿ ಅವರ ಕಾರು ಚಾಲಕ ಗಂಭೀರ ಗಾಯಗೊಂಡಿದ್ದು, ಸ್ವಾಮೀಜಿ ಹಾಗೂ ಚಾಲಕ ಹೈದರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಅಪಘಾತಕ್ಕೆ ಲಾರಿ ಚಾಲಕನ ಅಜಾಗರುಕತೆಯೇ ಕಾರಣ ಎಂದು ತಿಳಿದು ಬಂದಿದ್ದು, ಅನಂತಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಂಧ್ರ, ತೆಲಂಗಾಣ ರೈತರಿಂದ ರಾಜ್ಯದ ಕೃಷಿ ಕೂಲಿ ಕಾರ್ಮಿಕರ ಹೈಜಾಕ್

    ಆಂಧ್ರ, ತೆಲಂಗಾಣ ರೈತರಿಂದ ರಾಜ್ಯದ ಕೃಷಿ ಕೂಲಿ ಕಾರ್ಮಿಕರ ಹೈಜಾಕ್

    – ರಾಯಚೂರು ರೈತರಿಗೆ ಕೂಲಿಕಾರರಿಲ್ಲದೆ ಎದುರಾಗಿದೆ ಸಂಕಷ್ಟ

    ರಾಯಚೂರು: ಪ್ರತಿ ವರ್ಷ ಅತೀವೃಷ್ಠಿ ಅನಾವೃಷ್ಠಿಗಳಿಗೆ ತುತ್ತಾಗಿ ಒದ್ದಾಡುತ್ತಿದ್ದ ಬಿಸಿಲನಾಡು ರಾಯಚೂರಿನ ರೈತರು ಈ ಬಾರಿ ಹೊಸ ಸಮಸ್ಯೆಗೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಮಳೆ ಉತ್ತಮವಾಗಿರುವ ಪರಿಣಾಮ ಹತ್ತಿ ಇಳುವರಿ ಭರ್ಜರಿಯಾಗಿದೆ. ಮೆಣಸಿನಕಾಯಿ, ಜೋಳ ಕೂಡ ಉತ್ತಮವಾಗಿದೆ. ಆದರೆ ಬೆಳೆ ಕಟಾವಿಗೆ ಬಂದು ನಿಂತಿದ್ದು ಬೆಳೆಯನ್ನ ಬಿಡಿಸಿಕೊಳ್ಳಲು ರೈತರಿಗೆ ಕಷ್ಟವಾಗುತ್ತಿದೆ. ಕಾರಣ ಕೃಷಿ ಕೂಲಿಕಾರರ ಸಮಸ್ಯೆ. ಸ್ಥಳೀಯವಾಗಿ ಕೂಲಿಕಾರರು ಸಿಗದೆ ರೈತರು ಕಂಗಾಲಾಗಿದ್ದಾರೆ. ಇನ್ನೂ ಸ್ವಲ್ಪ ದಿನ ಕಳೆದರೆ ಜಮೀನಿನಲ್ಲೇ ಬೆಳೆಗಳು ಹಾಳಾಗುವ ಭೀತಿ ಎದುರಾಗಿದೆ.

    ಇಲ್ಲಿ ಹತ್ತಿ ಬಿಡಿಸಲು ಕೂಲಿಯಾಳು ಸಿಗದೆ ರೈತರು ಪರದಾಡುತ್ತಿದ್ದರೆ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ರೈತರು ಇಲ್ಲಿನ ಕೂಲಿಕಾರರನ್ನು ದುಬಾರಿ ಕೂಲಿ ಹಣ ಕೊಟ್ಟು ತಮ್ಮತ್ತ ಸೆಳೆಯುತ್ತಿದ್ದಾರೆ. ಕಡಿ ಪ್ರದೇಶದಲ್ಲಿ ದಿನಕ್ಕೆ 150 ರೂ. ಕೂಲಿ ನೀಡುತ್ತಿದ್ದರೆ ಆಂಧ್ರ, ತೆಲಂಗಾಣದಲ್ಲಿ 250 ರೂ. ನೀಡಲಾಗುತ್ತಿದೆ. ಅದರ ಜೊತೆಗೆ ಕರೆದೊಯ್ಯಲು ಪ್ರತಿ ವ್ಯಕ್ತಿಗೆ 50 ರೂ. ಆಟೋ ವೆಚ್ಚ ನೀಡಲಾಗುತ್ತಿದೆ. ಈಗ ಆಂಧ್ರ, ತೆಲಂಗಾಣದಲ್ಲಿ ಬೇಸಿಗೆ ಬೆಳೆಗೆ ನಾಟಿ ಕಾರ್ಯ ಶುರುವಾಗಿದ್ದು ಕೂಲಿಕಾರರಿಗೆ ಎಲ್ಲಿಲ್ಲದ ಬೇಡಿಕೆ ಇದೆ.

    ಜಿಲ್ಲೆಯಲ್ಲಿ 74,654 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಕೇಳಿದಷ್ಟು ಹಣ ಕೊಡುತ್ತೇವೆಂದರೂ ಹತ್ತಿ ಬಿಡಿಸಲು ಕೂಲಿಕಾರರು ಸಿಗುತ್ತಿಲ್ಲ. ಮೊದಲೆಲ್ಲ ಹತ್ತಿ ಬಿಡಿಸಲು ದಿನಕ್ಕೆ ಇಂತಿಷ್ಟು ಎಂದು ಕೂಲಿ ನೀಡಲಾಗುತ್ತಿತ್ತು. ಆದರೆ ಈಗ ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಹತ್ತಿ ಬೇಕಾದರೂ ಬಿಡಿಸಲಿ. ಕೆಜಿಗೆ 8 ರೂ. ನೀಡುತ್ತಿದ್ದೇವೆ ಎನ್ನುತ್ತಾರೆ ರೈತರು. ಹೀಗಾಗಿ ಒಬ್ಬ ಮಹಿಳೆ 50-60 ಕೆಜಿ ಹತ್ತಿ ಬಿಡಿಸುತ್ತಾಳೆ. ಇದು ರೈತರಿಗೆ ಹೊರೆಯಾದರೂ ಬೇರೆ ದಾರಿ ಕಾಣದಾಗಿದೆ. 30-40 ಕಿಮೀ ದೂರದವರೆಗೂ ಹೋಗಿ ಕರೆ ತರುವ ಸ್ಥಿತಿ ಇದೆ. ಬೆಳಗ್ಗೆ ಕರೆದುಕೊಂಡು ಹೋಗಿ ಸಂಜೆ ಕರೆ ತರಬೇಕೀದೆ. ಇದಕ್ಕೆಲ್ಲಾ ಸರ್ಕಾರವೇ ಹೊಣೆ ಅಂತ ರೈತ ಮುಖಂಡ ಲಕ್ಷ್ಮಣ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಮಾರುಕಟ್ಟೆ ನಾನಾ ಭಾಗಗಳಿಂದ ಹತ್ತಿ ಲಗ್ಗೆ ಇಡುತ್ತಿದೆ. ಇದರಿಂದ 4,400ರಿಂದ 5,250 ರೂ.ವರೆಗೆ ದರ ಇದೆ. ಹತ್ತಿ ಖರೀದಿ ಕೇಂದ್ರಗಳಲ್ಲಿ 5,550 ರೂ.ಗೆ ಒಬ್ಬ ರೈತರಿಂದ 40 ಕ್ವಿಂಟಲ್ ಖರೀದಿಸಲಾಗುತ್ತಿದೆ. ಸರ್ಕಾರ ತನ್ನ ಖರೀದಿ ಮಿತಿ ಮುಗಿದ ಬಳಿಕ ಯಾವಾಗ ಬೇಕಾದರೂ ಕೇಂದ್ರ ಸ್ಥಗಿತ ಮಾಡಬಹುದು ಎಂಬ ಆತಂಕ ರೈತರನ್ನ ಕಾಡುತ್ತಿದೆ.

  • ಆಂಧ್ರದಲ್ಲಿ ಪರಿಷತ್ ರದ್ದತಿಗೆ ನಿರ್ಧಾರ – ಕರ್ನಾಟಕದಲ್ಲಿ ರದ್ದಾಗಬೇಕೇ..?

    ಆಂಧ್ರದಲ್ಲಿ ಪರಿಷತ್ ರದ್ದತಿಗೆ ನಿರ್ಧಾರ – ಕರ್ನಾಟಕದಲ್ಲಿ ರದ್ದಾಗಬೇಕೇ..?

    ಬದ್ರುದ್ದೀನ್ ಕೆ ಮಾಣಿ
    ಚಿಂತಕರ ಚಾವಡಿ, ಹಿರಿಯರ ಮನೆ ಎಂದೇ ಕರೆಯಲ್ಪಡುವ `ಮೇಲ್ಮನೆ’ ಅಂದ್ರೆ `ವಿಧಾನಪರಿಷತ್’ನ ಅಗತ್ಯ ಕರ್ನಾಟಕದಲ್ಲಿ ಇದೆಯೇ ಎಂಬ ಚರ್ಚೆಗೆ ನಾಂದಿ ಹಾಡಿದೆ ಆಂಧ್ರಪ್ರದೇಶ ಸರ್ಕಾರದ ನಿರ್ಧಾರ. ಅಲ್ಲಿನ ವಿಧಾನಪರಿಷತ್ ರದ್ದುಗೊಳಿಸಬೇಕೆಂಬ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಕೈಗೊಂಡ ನಿರ್ಣಯ ಹಲವು ರೀತಿಯ ಚರ್ಚೆಗಳಿಗೆ ಅವಕಾಶ ಕಲ್ಪಿಸಿದೆ. ಜನರಿಂದ ನೇರವಾಗಿ ಚುನಾಯಿತರಾಗುವ ವಿಧಾನಸಭೆಗೆ ಪರ್ಯಾಯವಾಗಿ, ಪರೋಕ್ಷವಾಗಿ ಅಧಿಕಾರದ ಸದನ ವಿಧಾನಪರಿಷತ್ ಅನ್ನೋದು ಗೊತ್ತಿರುವ ವಿಷಯ. ವಿಧಾನಸಭೆ ಕೈಗೊಳ್ಳುವ ನಿರ್ಣಯಗಳು, ಅನುಮೋದಿಸುವ ವಿಧೇಯಕಗಳನ್ನು ಮತ್ತೊಮ್ಮೆ ಪರಾಮರ್ಶಿಸುವ ಸಲುವಾಗಿ ರಚನೆಗೊಂಡಿರುವ ಸದನವಿದು. ವಿವಿಧ ಕ್ಷೇತ್ರಗಳ ಸಾಧಕರು, ಪರಿಣತರು, ತಜ್ಞರನ್ನು ಒಳಗೊಂಡ ಚಿಂತಕರ ಚಾವಡಿ, ಹಿರಿಯರ ಮನೆಯೆಂದೇ ಕರೆಯಲ್ಪಡುವ ಮೇಲ್ಮನೆ, ಇತ್ತೀಚೆಗೆ ರಾಜಕಾರಣಿಗಳ ಪುನರ್ವಸತಿ ಕೇಂದ್ರವಾಗಿ ಮೌಲ್ಯ ಕಳೆದುಕೊಳ್ಳುತ್ತಿದೆ ಎಂಬ ಭಾವನೆ ಮೂಡಿದೆ. `ಬಿಳಿ ಆನೆ’ಯಾಗಿರುವ ಈ ಸದನದ ಔಚಿತ್ಯದ ಬಗ್ಗೆ ಹಲವು ಬಾರಿ ಚರ್ಚೆ ನಡೆದಿದ್ದೂ ಇದೆ. ಬಹುತೇಕ ಸಂದರ್ಭ ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಆಡಳಿತ ಪಕ್ಷಕ್ಕೆ ಮೇಲ್ಮನೆಯಲ್ಲಿ ಬಹುಮತವಿಲ್ಲದೇ ಇರಿಸು-ಮುರಿಸು ಉಂಟಾದಾಗ ಮಾತ್ರ ಪರಿಷತ್ ಅಗತ್ಯತೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೆ ಆ ಕೂಗಿಗೆ ಸೂಕ್ತ ಬೆಂಬಲ ಸಿಗದೆ ಈ ವಿಷಯ ಅಲ್ಲೇ ನಿಂತು ಹೋಗುತ್ತಿತ್ತು. ನೆರೆಯ ಆಂಧ್ರಪ್ರದೇಶ ಸರ್ಕಾರದ `ರದ್ದು’ ನಿರ್ಧಾರ ಮತ್ತೊಮ್ಮೆ ಈ ಚರ್ಚೆಗೆ ಅವಕಾಶ ಕಲ್ಪಿಸಿದೆ.

    ಆಂಧ್ರದಲ್ಲಿ `ವಿಧಾನಪರಿಷತ್’ ರದ್ದಾಗುವುದು ಇದೇ ಮೊದಲಲ್ಲ. 1958ರಿಂದ 1985ರವರೆಗೆ ಅಲ್ಲಿ ಅಸ್ತಿತ್ವದಲ್ಲಿದ್ದ ಪರಿಷತ್, ಅಂದಿನ ರಾಜಕೀಯ ಮೇಲಾಟಗಳಿಗಾಗಿ ರದ್ದಾಗಿತ್ತು. ಆದರೆ ಮತ್ತೆ ವಿಧಾನಪರಿಷತ್ ಅಸ್ತಿತ್ವಕ್ಕೆ ತರುವ ಪ್ರಯತ್ನ ಕೇವಲ 5 ವರ್ಷಗಳಲ್ಲಿ ಆರಂಭವಾಯಿತಾದರೂ, ಅದು ಕೈಗೂಡಲು ಮತ್ತೆ 17 ವರ್ಷಗಳು ಬೇಕಾಯಿತು. ಆಂಧ್ರ ಶಾಸನ ಸಭೆಯಲ್ಲಿ 1990ರಲ್ಲೇ ಮತ್ತೆ ಪರಿಷತ್ ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಯಿತಾದರೂ, ಅದು ಕೈಗೂಡಲು 2007ರವರೆಗೂ ಕಾಯಬೇಕಾಯಿತು. ಯಾಕೆಂದರೆ 1990ರಲ್ಲಿ ಆಂಧ್ರ ವಿಧಾನಸಭೆ ನಿರ್ಣಯಕ್ಕೆ ರಾಜ್ಯಸಭೆ ಒಪ್ಪಿಗೆ ನೀಡಿತಾದರೂ, ಲೋಕಸಭೆಯಲ್ಲಿ ಒಪ್ಪಿಗೆ ಸಿಗಲಿಲ್ಲ. 1991ರಿಂದ ನಡೆದ ಕೆಲವು ರಾಜಕೀಯ ವಿದ್ಯಮಾನಗಳಿಂದಾಗಿ ಆಂಧ್ರದ ಕೋರಿಗೆ ಮನ್ನಣೆ ಸಿಗಲೇ ಇಲ್ಲ. 2004ರಲ್ಲಿ ಮತ್ತೆ ನಿರ್ಣಯ ಕೈಗೊಂಡ ಆಂಧ್ರ ಸರ್ಕಾರ, 2006ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ 2 ಸದನಗಳಲ್ಲಿ ಒಪ್ಪಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಹಾಗಾಗಿ 2007ರಲ್ಲಿ ಮತ್ತೆ ಅಸ್ತಿತ್ವಕ್ಕೆ ಬಂದ ಆಂಧ್ರ ವಿಧಾನಪರಿಷತ್ ಈವರೆಗೂ ಕಾರ್ಯನಿರ್ವಹಿಸುತ್ತಿದೆ.

     

    ಇತ್ತೀಚೆಗೆ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯನ್ನೇರಿದ ವೈಎಸ್‍ಆರ್ ಪಕ್ಷದ ಜಗನ್ಮೋಹನ ರೆಡ್ಡಿ ನೇತೃತ್ವದ ಸರ್ಕಾರಕ್ಕೆ ಅಲ್ಲಿನ ವಿಧಾನಪರಿಷತ್‍ನಲ್ಲಿ ಬಹುಮತವಿಲ್ಲ. ಕೆಲ ದಿನಗಳ ಹಿಂದೆ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯಗಳು ಮತ್ತು ವಿಧೇಯಕಗಳನ್ನು ತೆಲುಗುದೇಶಂ ಪಕ್ಷದ ಬಹುಮತವಿರುವ ಪರಿಷತ್ ತಿರಸ್ಕರಿಸಿತ್ತು. ಇದರಿಂದ ಕೆರಳಿದ ಸಿಎಂ ಜಗನ್ಮೋಹನ ರೆಡ್ಡಿ ವಿಧಾನಪರಿಷತ್ ಅನ್ನೇ ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆ ಅವರು ನೀಡುವ ಕಾರಣ ಆರ್ಥಿಕ ಹೊರೆ. ಆದರೆ ಈ ನಿರ್ಣಯಕ್ಕೆ ಲೋಕಸಭೆ ಮತ್ತು ರಾಜ್ಯಸಭೆಯ ಉಭಯ ಸದನಗಳ ಅನುಮೋದನೆ ಬೇಕು. ಅದಾದ ಬಳಿಕವಷ್ಟೇ ವಿಧಾನಪರಿಷತ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ.

    ಆದರೆ, ಕರ್ನಾಟಕದ ವಿಧಾನಪರಿಷತ್‍ಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿ ಅದು ಮೈಸೂರು ಮಹಾರಾಜರ ದೂರದೃಷ್ಟಿಯ ಫಲವಾಗಿ ರಚಿಸಲ್ಪಟ್ಟ ಮೇಲ್ಮನೆ. ರಾಜಾಡಳಿತ ಇರುವಾಗಲೇ ಜನರೊಂದಿಗೆ ನೇರವಾಗಿ ಹೊಂದಿಕೊಂಡಿರುವ ಅನುಭವಿಗಳ ಸದನವನ್ನು ರಚಿಸಿ, ರಾಜರಿಗೆ ಸಲಹೆ ನೀಡುವ ಪದ್ಧತಿ ತರಲಾಯಿತು. 1907ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ವ್ಯವಸ್ಥೆಯನ್ನು ಜಾರಿಗೆ ತಂದರು. 10ಕ್ಕಿಂತ ಕಡಿಮೆಯಿಲ್ಲದೇ 15ಕ್ಕಿಂತ ಹೆಚ್ಚಿರದ ಸದಸ್ಯರನ್ನು ಒಳಗೊಂಡ ಮೇಲ್ಮನೆಯನ್ನು ಅಸ್ತಿತ್ವಕ್ಕೆ ತಂದರು. ಅದರಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ತಜ್ಞರು, ಪರಿಣತರು, ಸಮಾಜ ಸುಧಾರಕರು ಇರುತ್ತಿದ್ದರು. ಕಾಲಕ್ರಮೇಣ ಸ್ವಾತಂತ್ರ್ಯ ಸಿಗುವ ವೇಳೆಗೆ ನಾಮನಿರ್ದೇಶಿತ, ಚುನಾಯಿತ ಅಧಿಕಾರೇತರ ಮೇಲ್ಮನೆ ಸದಸ್ಯರ ಸಂಖ್ಯೆ 50 ತಲುಪಿತ್ತು. ಮೈಸೂರು ವಿಧಾನಪರಿಷತ್ ಅಂತಲೇ ಅಸ್ತಿತ್ವದಲ್ಲಿದ್ದ ಈ `ಚಿಂತಕರ ಚಾವಡಿ’ಯ ಸದಸ್ಯರ ಸಂಖ್ಯೆ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ಪ್ರತ್ಯೇಕ ರಾಜ್ಯಗಳು ಅಸ್ತಿತ್ವಕ್ಕೆ ಬಂದಾಗ 63ರ ಸದನವಾಗಿತ್ತು. 1987ರಲ್ಲಿ ಕರ್ನಾಟಕ ವಿಧಾನಪರಿಷತ್‍ನ ಸಂಖ್ಯೆ 75ಕ್ಕೇರಿತು.

    ವಿಧಾನಸಭೆಯ ಸದಸ್ಯರ ಒಟ್ಟು ಸಂಖ್ಯೆ ಮೂರನೇ ಒಂದರಷ್ಟಕ್ಕಿಂತ `ಪರಿಷತ್’ ಸದಸ್ಯರ ಸಂಖ್ಯೆ ಮೀರಬಾರದೆಂಬ ನಿಯಮದಂತೆ ಗರಿಷ್ಟ 75 ಸದಸ್ಯರನ್ನು ಒಳಗೊಂಡಿದೆ ನಮ್ಮ ಮೇಲ್ಮನೆ. ಇಲ್ಲಿ 25 ಸದಸ್ಯರನ್ನು ವಿಧಾನಸಭೆ ಸದಸ್ಯರು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಇನ್ನು 25 ಸದಸ್ಯರು ಸ್ಥಳೀಯ ಸಂಸ್ಥೆಗಳ ಮೂಲಕ (ಗ್ರಾ.ಪಂ, ತಾ.ಪಂ, ಜಿ.ಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಪಾಲಿಕೆ ಸದಸ್ಯರು) ಚುನಾಯಿಸಲಾಗುತ್ತೆ. 7 ಸದಸ್ಯರು ಪದವೀಧರ ಕ್ಷೇತ್ರದಿಂದ, 7 ಸದಸ್ಯರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. 11 ಸದಸ್ಯರನ್ನು ಅಧಿಕಾರದಲ್ಲಿರುವ ಸರ್ಕಾರಗಳು ನಾಮನಿರ್ದೇಶನ ಮಾಡುತ್ತವೆ. ನಾಮನಿರ್ದೇಶನಗೊಳ್ಳುವವರು ವಿವಿಧ ಕ್ಷೇತ್ರಗಳ ಗಣ್ಯರು, ಸಾಧಕರು, ತಜ್ಞರು, ಸಾಹಿತಿಗಳು, ಕಲಾವಿದರು ಇರಬೇಕೆಂಬುದು ನಿಯಮ. ಆದರೆ ಇತ್ತೀಚೆಗೆ ಇವರ್ಯಾರು ಮೇಲ್ಮನೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಅನ್ನೋದು ವಾಸ್ತವ.

    ರಾಜಕೀಯ ಪಕ್ಷಗಳು ತಮ್ಮ ಪಕ್ಷದ ನಾಯಕರಿಗೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದಾಗ, ಅನಿವಾರ್ಯ ಸಂದರ್ಭದಲ್ಲಿ ಅಧಿಕಾರ ನೀಡಬೇಕಾದರೆ, ಬಂಡಾಯ ಶಮನ, ಹೀಗೆ ಹತ್ತು ಹಲವು ಸಂದರ್ಭದಲ್ಲಿ ವಿಧಾನಪರಿಷತ್‍ಗೆ ಚುನಾಯಿಸುವುದು, ನಾಮನಿರ್ದೇಶನ ಮಾಡುವ ಪರಿಪಾಠ ಬಂದಿದೆ. ಸದನದ ಬಹುತೇಕ ಸದಸ್ಯರು ವಿವಿಧ ರಾಜಕೀಯ ಪಕ್ಷಗಳಿಂದ ಅಡ್ಜಸ್ಟ್ ಮೆಂಟ್ ಮೂಲಕ ಬಂದವರೇ ಆಗಿದ್ದಾರೆ. ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಚುನಾಯಿಸುವ ಸಂದರ್ಭದಲ್ಲಿ `ಬಲಿಷ್ಠ’ರಾದವರೇ ಹೆಚ್ಚು ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಬಂಡಾಯವಾಗಿ, ಪಕ್ಷೇತರರಾಗಿ ಸ್ಪರ್ಧಿಸಿ ವಿಧಾನಸಭೆ ಸದಸ್ಯರಿಂದ ಅಡ್ಡ ಮತದಾನ ಮಾಡಿಸಿಕೊಂಡು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಲವರು ಸದನ ಪ್ರವೇಶಿಸಿದ್ದೂ ಉಂಟು. ಇತ್ತಿಚೇಗೆ ಮೇಲ್ಮನೆ ಪ್ರವೇಶಿಸಲು ಕೋಟಿಗಟ್ಟಲೆ ದುಡ್ಡು ಚೆಲ್ಲುವ ಪರಿಪಾಠ ಆರಂಭವಾಗಿದೆ. ಹಲವು ನಾಯಕರು `ಸ್ಟೇಟಸ್’ಗೋಸ್ಕರ ಸದನದ ಸದಸ್ಯರಾಗಲು ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುವ ಚುನಾವಣೆ ಸಂದರ್ಭದಲ್ಲಿ ಎಲ್ಲರೂ ನಾಚುವಂತೆ ಹಣ-ಹೆಂಡದ ಪ್ರಭಾವ ನಡೆಯುವುದು ಸಾಮಾನ್ಯವಾಗಿದೆ.

    ಪದವೀಧರರು ಮತ್ತು ಶಿಕ್ಷಕರು ಚುನಾಯಿಸುವ ಕ್ಷೇತ್ರಗಳ ಚುನಾವಣೆಯಂತೂ, ನಾವೆಲ್ಲಾ ತಲೆ ತಗ್ಗಿಸುವಂತೆ ನಡೆಯುತ್ತಿರುವುದು ನಾಚಿಕೆಗೇಡು. ನಾಮನಿರ್ದೇಶನಕ್ಕೆ ವಿವಿಧ ಕ್ಷೇತ್ರಗಳ ಸಾಧನೆ, ಪರಿಣತಿ ಲೆಕ್ಕಕ್ಕೇ ಬರುತ್ತಿಲ್ಲ. ಶಿಕ್ಷಣ ತಜ್ಞರು, ಸಾಹಿತಿಗಳು, ಕಲಾವಿದರು, ಸಮಾಜಸೇವಕರ ಹೆಸರಿನಲ್ಲಿ ಮತ್ತೆ ಅದೇ ರಾಜಕಾರಣಿಗಳು ಮೇಲ್ಮನೆ ಪ್ರವೇಶಿಸುತ್ತಾರೆ. ಹೀಗಾಗಿ, ಚಿಂತಕರ ಚಾವಡಿ, ಹಿರಿಯರ ಮನೆ ಎಂಬ ಹೆಗ್ಗಳಿಕೆಯ ಮೇಲ್ಮನೆ ಅರ್ಥ ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಮೇಲ್ಮನೆಯೂ ಗಂಭೀರತೆ ಕಳೆದುಕೊಳ್ಳುತ್ತಿದೆ ಎನ್ನುವಂತೆ ಭಾಸವಾಗುತ್ತಿದೆ. ಅಲ್ಲಿ ಉತ್ತಮ ಗುಣಮಟ್ಟದ ಚರ್ಚೆಗಳೂ ಆಗುತ್ತಿಲ್ಲ ಎನ್ನುವ ಅಭಿಪ್ರಾಯ ಕೂಡ ಇದೆ. ಮಿತಿಮೀರಿದ ವರ್ತನೆ, ಪರಸ್ಪರ ಬೈದಾಟ, ಕಚ್ಚಾಟ, ಕಿತ್ತಾಟ, ಸರ್ವೆಸಾಮಾನ್ಯವಾಗಿ ಹೋಗಿ ಸದನದ ಘನತೆಗೆ ಧಕ್ಕೆ ಉಂಟಾಗುತ್ತಿದೆ ಎಂಬ ಭಾವನೆ ಮೂಡತೊಡಗಿದೆ.

    ವಿಧಾನಸಭೆ ಸದಸ್ಯರ ಮಾದರಿಯಲ್ಲಿ ಎಲ್ಲಾ 75 ಸದಸ್ಯರಿಗೂ ವಾರ್ಷಿಕ ತಲಾ 2 ಕೋಟಿ ರೂಪಾಯಿ ವಿವೇಚನಾನುದಾನವನ್ನು ಸರ್ಕಾರ ನೀಡುತ್ತಿದೆ. ಅದಕ್ಕೆ ಒಟ್ಟು ವಾರ್ಷಿಕ 150 ಕೋಟಿ ರೂಪಾಯಿ ಮೀಸಲಿಡಬೇಕು. ಅದು ಜನರ ಕಲ್ಯಾಣಕ್ಕೆ ವ್ಯಯವಾಗುತ್ತದೆ ಎಂದೇ ಹೇಳೋಣ. ಆದರೆ ಸದನದ ಸದಸ್ಯರ ಖರ್ಚು, ವೆಚ್ಚ, ಸಂಬಳ, ಸಾರಿಗೆ, ಅದು-ಇದೂ ಭತ್ಯೆ ಅಂತಾ ಹೇಳಿ, ವರ್ಷಕ್ಕೆ ಕೋಟಿಗಟ್ಟಲೆ ಖರ್ಚಾಗುತ್ತಿದೆ. ಸದನ ನಡೆಸಲು ಕೂಡ ಕೋಟ್ಯಂತರ ರೂಪಾಯಿ ವ್ಯಯ ಮಾಡಲಾಗುತ್ತಿದೆ. ಗುಣಮಟ್ಟದ ಚರ್ಚೆಗಳಾಗದೇ, ರಾಜ್ಯದ ಕಲ್ಯಾಣಕ್ಕಾಗಿ ಉಪಯುಕ್ತ ಕೊಡುಗೆ ನೀಡಲಾಗದ ಸದನದ ಅಗತ್ಯತೆ ಏನು ಅನ್ನೋ ಪ್ರಶ್ನೆ ಉದ್ಭವವಾಗುವುದು ಸಹಜ. ಯಾರನ್ನೋ ಮೆಚ್ಚಿಸಲು, ರಾಜಕೀಯ ಪಕ್ಷಗಳ ಮತ್ತು ರಾಜಕಾರಣಿಗಳ ಮೇಲಾಟಕ್ಕೆ ಜನರ ತೆರಿಗೆಯಿಂದ ನೂರಾರು ಕೋಟಿ ವ್ಯಯಿಸಿ ನಡೆಸುವ ಇಂತಹ ವ್ಯವಸ್ಥೆ ಬೇಕೆ..? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಹಾಗಂತ ನಮ್ಮ ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಇಂತಹ ಸದನದ ಅನಿವಾರ್ಯತೆ ಏನೂ ಇಲ್ಲ. ದೇಶದ 6 ರಾಜ್ಯಗಳಲ್ಲಿ ಮಾತ್ರ ಈ ವ್ಯವಸ್ಥೆ ಅಸ್ತಿತ್ವದಲ್ಲಿರೋದು. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಮತ್ತು ಕರ್ನಾಟಕದಲ್ಲಿ ಮಾತ್ರ ವಿಧಾನಪರಿಷತ್ ಇದೆ. ಜಮ್ಮು-ಕಾಶ್ಮೀರದಲ್ಲೂ ಈ ಸದನ ಇತ್ತೀಚೆಗೆ ಅಸ್ತಿತ್ವ ಕಳೆದುಕೊಂಡಿದೆ. ಮೌಲ್ಯ ಕಳೆದುಕೊಳ್ಳುತ್ತಿರುವ `ವಿಧಾನಪರಿಷತ್’ ಬೇಕೇ..? ಅಥವಾ ಹಿರಿಯರ ಮನೆ ಎಂದು ಕರೆಸಿಕೊಳ್ಳುವ `ಮೇಲ್ಮನೆ’ ತನ್ನ ಗೌರವವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬದಲಾಯಿಸಿಕೊಂಡು ಅಸ್ತಿತ್ವದಲ್ಲಿರಬೇಕೇ ಎಂಬುದು ನಮ್ಮ ಮುಂದಿನ ಆಯ್ಕೆ. ನಿಜ, ಅನೇಕ ಗಣ್ಯಾತಿಗಣ್ಯರು, ಸಮಾಜಸುಧಾರಕರು, ತಜ್ಞರು, ಸಾಧಕರು ಪ್ರತಿನಿಧಿಸಿ ನಮ್ಮ ವ್ಯವಸ್ಥೆ ಸುಧಾರಣೆಗೆ ಅಪಾರ ಕೊಡುಗೆ ನೀಡಲು ಕಾರಣೀಭೂತವಾಗಿರುವ `ಚಿಂತಕರ ಚಾವಡಿ’ ಮುಂದುವರಿಯಬೇಕಾದರೆ, ಅದರ ಗೌರವ ಉಳಿಯಬೇಕಾದರೆ ಬದಲಾವಣೆ ಅಗತ್ಯ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು ಅನ್ನೋದೇ ಪ್ರಶ್ನೆ..?

  • 13ರ ಬಾಲಕಿಯನ್ನು 10 ದಿನಗಳಿಂದ 6 ಬಾರಿ ರೇಪ್‍ಗೈದ ಮೆಕ್ಯಾನಿಕ್

    13ರ ಬಾಲಕಿಯನ್ನು 10 ದಿನಗಳಿಂದ 6 ಬಾರಿ ರೇಪ್‍ಗೈದ ಮೆಕ್ಯಾನಿಕ್

    – ಬಾಲಕಿಯನ್ನು ಮನೆಗೆ ಕರೆತಂದು ವಿಕೃತಿ ಮೆರೆದ
    – ಅತ್ಯಾಚಾರದ ಬಗ್ಗೆ ಬಾಯಿ ಬಿಡದಂತೆ ಬೆದರಿಕೆ

    ಹೈದರಾಬಾದ್: ಕಾಮುಕನೋರ್ವ 13 ವರ್ಷದ ಬಾಲಕಿಯನ್ನು ಕಳೆದ 10 ದಿನಗಳಿಂದ 6 ಬಾರಿ ಅತ್ಯಾಚಾರ ಮಾಡಿ ವಿಕೃತಿ ಮೆರೆದ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ಎಂ.ಎಸ್ ಮಕ್ತಾ(35) ಎಂದು ಗುರುತಿಸಲಾಗಿದೆ. ಪಂಜಗುಟ್ಟದ ನಿವಾಸಿಯಾದ ಮೆಕ್ತಾ ಮೆಕ್ಯಾನಿಕ್ ಆಗಿದ್ದು, ತನ್ನ ಪಕ್ಕದ ಮನೆಯ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಆರೋಪಿಗೆ ಈಗಾಗಲೇ ಮದುವೆ ಆಗಿದ್ದು, ಪತ್ನಿ ಮನೆಯಲ್ಲಿ ಇಲ್ಲದ ವೇಳೆ ಬಾಲಕಿಯನ್ನು ಮನೆಗೆ ಕರೆಸಿಕೊಳ್ಳುತ್ತಿದ್ದನು. ಬಳಿಕ ಆಕೆಯ ಮೇಲೆ ಅತ್ಯಾಚಾರವೆಸೆಗಿ ವಿಕೃತಿ ಮೆರೆಯುತ್ತಿದ್ದನು. ಹೀಗೆ ಕಳೆದ 10 ದಿನಗಳಿಂದ ಆರೋಪಿ 6 ಬಾರಿ ಬಾಲಕಿಯನ್ನು ಅತ್ಯಾಚಾರಗೈದಿದ್ದಾನೆ.

    ಅಲ್ಲದೇ ಈ ಬಗ್ಗೆ ತಂದೆ-ತಾಯಿಗೆ ಹೇಳಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬಾಲಕಿಯನ್ನು ಹೆದರಿಸಿದ್ದನು. ಕಾಮುಕನ ವಿಕೃತಿಗೆ ಬೆದರಿದ ಬಾಲಕಿ ಯಾರ ಬಳಿಯೂ ತನ್ನ ಮೇಲೆ ನಡೆಯುತ್ತಿದ್ದ ಅತ್ಯಾಚಾರದ ಬಗ್ಗೆ ಬಾಯಿಬಿಟ್ಟಿರಲಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡ ಕಾಮುಕ 10 ದಿನಗಳಲ್ಲಿ 6 ಬಾರಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮಂಗಳವಾರ ಕೂಡ ಆರೋಪಿ ಬಾಲಕಿಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದನು. ಆದರೆ ಸಂಜೆ ಕೆಲಸ ಮುಗಿಸಿಕೊಂಡು ತಂದೆ, ತಾಯಿ ಮನೆಗೆ ಬಂದಾಗ ಮಗಳು ಮಂಕಾಗಿ ಕೂತಿರುವುದನ್ನು ಗಮನಿಸಿ, ಏನಾಯಿತು ಎಂದು ವಿಚಾರಿಸಿದ್ದಾರೆ.

    ಈ ವೇಳೆ ಬಾಲಕಿ ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ಈ ಬಗ್ಗೆ ತಿಳಿದ ತಕ್ಷಣ ಪೋಷಕರು ಆರೋಪಿ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಗಳವಾರ ರಾತ್ರಿಯೇ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

  • ಕನ್ನಡ ಶಾಲೆಗಳ ಹಿತಕ್ಕಾಗಿ ಕಡ್ಡಾಯ ಭಾಷೆ ಕಲಿಕೆ ಆದೇಶ ಕೈ ಬಿಡಿ: ಆಂಧ್ರ ಸಿಎಂಗೆ ಸುರೇಶ್ ಕುಮಾರ್ ಪತ್ರ

    ಕನ್ನಡ ಶಾಲೆಗಳ ಹಿತಕ್ಕಾಗಿ ಕಡ್ಡಾಯ ಭಾಷೆ ಕಲಿಕೆ ಆದೇಶ ಕೈ ಬಿಡಿ: ಆಂಧ್ರ ಸಿಎಂಗೆ ಸುರೇಶ್ ಕುಮಾರ್ ಪತ್ರ

    ಬೆಂಗಳೂರು : ಆಂಧ್ರ ಪ್ರದೇಶದಲ್ಲಿ ಇಂಗ್ಲಿಷ್, ತೆಲುಗು, ಉರ್ದು ಮಾತ್ರ ಕಡ್ಡಾಯವಾಗಿ ಕಲಿಯಬೇಕು ಅನ್ನೋ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ನಿರ್ಧಾರಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಂಧ್ರ ಸಿಎಂಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ತಮ್ಮ ನಿರ್ಧಾರ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಗಡಿಯಲ್ಲಿನ ಕನ್ನಡ ಶಾಲೆಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈ ಬಿಡಬೇಕು ಅಂತ ಪತ್ರದಲ್ಲಿ ಒತ್ತಾಯಿಸಿದ್ದಾರೆ.

    ಇತ್ತೀಚೆಗಷ್ಟೆ ಆಂಧ್ರ ಸಿಎಂ ಜಗನ್ ಎಲ್ಲಾ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಕಲಿಸಲಾಗುತ್ತೆ. ಅಲ್ಲದೆ ತೆಲುಗು ಮತ್ತು ಉರ್ದುವನ್ನ ಆಂಧ್ರದಲ್ಲಿ ಕಡ್ಡಾಯವಾಗಿ ಕಲಿಯಬೇಕು ಎಂದು ಆದೇಶ ಹೊರಡಿಸಿದ್ದರು. ಜಗನ್ ಈ ನಿರ್ಧಾರದಿಂದ ಗಡಿಯಲ್ಲಿರೋ ಕನ್ನಡ ಶಾಲೆಗಳ ಮೇಲೆ ಪರಿಣಾಮ ಬೀರುತ್ತೆ. ಕನ್ನಡ ಕಲಿಕೆಯೇ ಕೈಬಿಡೋ ಸಾಧ್ಯತೆಯೂ ಹೆಚ್ಚಾಗಿದೆ. ಹೀಗಾಗಿ ಸಿಎಂ ಜಗನ್ ಗೆ ಪತ್ರ ಬರೆದಿರೋ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.

    ಸುರೇಶ್ ಕುಮಾರ್ ಪತ್ರದ ಸಾರಾಂಶ ಹೀಗಿದೆ:
    ಕರ್ನಾಟಕ ಮತ್ತು ಆಂಧ್ರಪದೇಶ ರಾಜ್ಯಗಳ ಸಂಬಂಧ ಐತಿಹಾಸಿಕವಾದುದು. ಕೃಷ್ಣದೇವರಾಯನ ಕಾಲಕ್ಕಿಂತಲೂ ಮೊದಲಿನಿಂದಲೂ ಈ ಎರಡೂ ರಾಜ್ಯಗಳು ಯಾವಾಗಲೂ ಸಹೋದರ ಸಂಬಂಧದಲ್ಲೇ ನಡೆದುಕೊಂಡು ಬರುತ್ತಿವೆ. ಭಾಷೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ನಮ್ಮೆರಡು ರಾಜ್ಯಗಳು ಪರಸ್ಪರ ಸೌಹಾರ್ದದಿಂದಲೇ ಇವೆ. ಇದು ಎರಡೂ ರಾಜ್ಯಗಳಿಗೂ ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಆಂಧ್ರ ಪ್ರದೇಶ ಸರ್ಕಾರ ಸೀಮಾಂಧ್ರದಲ್ಲಿನ ಎಲ್ಲ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನಾಗಿ ಪರಿವರ್ತಿಸುವ ಹಾಗೆಯೇ ಪ್ರತಿ ವಿದ್ಯಾರ್ಥಿಯನ್ನು ತೆಲುಗು ಇಲ್ಲವೇ ಉರ್ದು ಭಾಷೆ ಕಲಿಯಬೇಕೆಂಬ ನಿರ್ಧಾರ ಕೈಗೊಂಡಿರುವುದು ನಮ್ಮೆರಡು ರಾಜ್ಯಗಳ ನಡುವಿನ ಸೌಹಾರ್ದಕ್ಕೆ ಧಕ್ಕೆಯಾದಂತಾಗಿದೆ.

    ಇದು ಆಂಧ್ರಪ್ರದೇಶದ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರ ಮನೋಸ್ಥೈರ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸಾಂಸ್ಕೃತಿಕ ಸಂಘರ್ಷ ಇತರೆ ಯಾವುದೇ ಸಾಮಾಜಿಕ ಸಂಘರ್ಷಗಳಿಗಿಂತಲೂ ತೀವ್ರ ನೋವಿನ ಸಂಗತಿಯಾಗಿದೆ. ನಮ್ಮ ರಾಜ್ಯದ ಉದಾರ ಮತ್ತು ಸಮಗ್ರ ಆಡಳಿತ ಕಾರ್ಯ ವಿಧಾನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹತ್ತಾರು ತೆಲುಗು ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಆಂಧ್ರಪ್ರದೇಶ ಕೈಗೊಂಡ ನಿರ್ಧಾರ ಕನ್ನಡ ಭಾಷಾ ಶಿಕ್ಷಕರ ಜೀವನವನ್ನು ಅಪಾಯಕ್ಕೆ ಸಿಕ್ಕಿಸುವುದು ಮಾತ್ರವೇ ಅಲ್ಲ, ಕರ್ನಾಟಕ ಹೊರಗೆ ವಾಸಿಸುತ್ತಾರೆಂಬ ಒಂದೇ ಕಾರಣಕ್ಕಾಗಿ ಕನ್ನಡಿಗರ ಮಕ್ಕಳು ತಮ್ಮ ಮಾತೃಭಾಷೆಯಿಂದ ವಂಚಿತವಾಗಬೇಕಾಗುತ್ತದೆ. ಹಾಗಾಗಿ ಕನ್ನಡವನ್ನು ಭಾಷೆಯಾಗಿ ಇಲ್ಲವೇ ಮಾಧ್ಯಮವಾಗಿ ಕಲಿಸುವ ಅಲ್ಪಸಂಖ್ಯಾತ ಭಾಷಾ ಶಾಲೆಗಳನ್ನು ಮುಂದುವರಿಸುವ ಮೂಲಕ ತಮ್ಮ ರಾಜ್ಯದಲ್ಲಿ ವಾಸಿಸುವ ಕನ್ನಡಿಗರ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಚಿವ ಸುರೇಶ್ ಕುಮಾರ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

  • ಸಿಎಂ ಜಗನ್ ಮೋಹನ್‍ರೆಡ್ಡಿ ಮತ್ತೊಂದು ವಿವಾದಾತ್ಮಕ ನಿರ್ಧಾರ

    ಸಿಎಂ ಜಗನ್ ಮೋಹನ್‍ರೆಡ್ಡಿ ಮತ್ತೊಂದು ವಿವಾದಾತ್ಮಕ ನಿರ್ಧಾರ

    ಅಮರಾವತಿ: ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್‍ರೆಡ್ಡಿ ಮತ್ತೊಂದು ವಿವಾದಾತ್ಮಕ ನಿರ್ಧಾರ ತೆಗೆದುಕೊಂಡಿದ್ದಾರೆ.

    ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ವಿಧಾನ ಪರಿಷತ್ ಅನ್ನು ರದ್ದುಪಡಿಸುವ ನಿರ್ಣಯಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದ್ದಾರೆ. ದಿನಪೂರ್ತಿ ಚರ್ಚೆ ಬಳಿಕ 130-0 ಮತದ ಅಂತರದಲ್ಲಿ ನಿರ್ಣಯಕ್ಕೆ ಅನುಮೋದನೆ ಸಿಕ್ಕಿದೆ.

    ಆಂಧ್ರಕ್ಕೆ ಮೂರು ರಾಜಧಾನಿ ಮತ್ತು ಆಂಧ್ರ ಪ್ರದೇಶ ಕ್ಯಾಪಿಟಲ್ ರೀಜಿನ್ ಡೆವಲಪ್‍ಮೆಂಟ್ ಅಥಾರಿಟಿ ರದ್ದಿಗೆ ಪರಿಷತ್‍ನಲ್ಲಿ ಭಾರೀ ಹಿನ್ನಡೆಯಾಗಿತ್ತು. ಇದರಿಂದ ರೊಚ್ಚಿಗೆದ್ದಿರೋ ಜಗನ್‍ಮೋಹನ್ ರೆಡ್ಡಿ ಈಗ ಪರಿಷತ್ತನ್ನೇ ತೆಗೆದು ಹಾಕ್ತಿದ್ದಾರೆ. ವಿಧಾನಸಭೆಯಲ್ಲಿ ವೈಎಸ್‍ಆರ್ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಇರೋ ಕಾರಣ ಸುಲಭವಾಗಿ ಅನುಮೋದನೆ ಸಿಕ್ಕಿದೆ. ಈಗ ಸಂಸತ್‍ಗೆ ಕಳಿಸಬೇಕಿದೆ.

    ಮಸೂದೆಗಳಿಗೆ ಅಡ್ಡಿಪಡಿಸ್ತಾ ಹೋದರೆ ಪ್ರತಿವರ್ಷ 60 ಕೋಟಿಯಂತೆ 5 ವರ್ಷಕ್ಕೆ 300 ಕೋಟಿ ವ್ಯರ್ಥವಾಗುತ್ತೆ ಎಂಬುವುದು ಜಗನ್ ಪ್ರತಿಪಾದನೆಯಾಗಿದೆ. ಜಗನ್ ನಡೆಗೆ ಟಿಡಿಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸದ್ಯ ದೇಶದಲ್ಲಿ ಆಂಧ್ರ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಬಿಹಾರ 6 ರಾಜ್ಯಗಳಲ್ಲಿ ಮಾತ್ರ ವಿಧಾನಪರಿಷತ್ ಇದೆ.