Tag: Andhra Pradesh

  • ಕೊರೊನಾಗೆ ಬಲಿಯಾದ ವ್ಯಕ್ತಿಯ ಮೃತದೇಹವನ್ನು ಜೆಸಿಬಿಯಲ್ಲಿ ಸಾಗಣೆ

    ಕೊರೊನಾಗೆ ಬಲಿಯಾದ ವ್ಯಕ್ತಿಯ ಮೃತದೇಹವನ್ನು ಜೆಸಿಬಿಯಲ್ಲಿ ಸಾಗಣೆ

    – ಅಮಾನವೀಯವಾಗಿ ನಡೆದುಕೊಂಡ ಪುರಸಭೆ ಅಧಿಕಾರಿಗಳು

    ಹೈದರಾಬಾದ್: ಕೊರೊನಾಗೆ ಬಲಿಯಾದ ಸೋಂಕಿತನ ಮೃತದೇಹವನ್ನು ಜೆಸಿಬಿ ಯಂತ್ರದ ಮೂಲಕ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಪಾಲಾಸ ಪುರಸಭೆ ವ್ಯಾಪ್ತಿಯಲ್ಲಿ ನಡೆದಿದೆ.

    ಕೊರೊನಾದ ಸಮಯದಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಿದ್ದ ಮಾಜಿ ಪುರಸಭೆಯ ಉದ್ಯೋಗಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇವರು ತಮ್ಮ ಪಾಲಾಸ ಪಟ್ಟಣದಲ್ಲಿನ ಮನೆಯಲ್ಲಿ ಮೃತಪಟ್ಟಿದ್ದರು. ಇವರ ಮೃತದೇಹವನ್ನು ಜೆಸಿಬಿ ವಾಹನದಲ್ಲಿ ಎತ್ತಿಕೊಂಡು ಹೋಗಿ ಗುಂಡಿ ಒಳಗೆ ಹಾಕಿ ಮುಚ್ಚಿ ಅಂತ್ಯಕ್ರಿಯೆ ಮಾಡಲಾಗಿದೆ.

    ಮನೆಯಲ್ಲೇ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು. ಆಗ ನೆರೆಹೊರೆಯವರು ಮೃತದೇಹ ಇಲ್ಲೇ ಇದ್ದರೆ ನಮಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ. ಆಗ ಮೃತನ ಮೊಮ್ಮಗಳು ಮತ್ತು ಸರ್ಕಾರಿ ಸ್ವಯಂ ಸೇವಕರು ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆಗ ಸ್ಥಳಕ್ಕೆ ಬಂದ ಅಧಿಕಾರಿಗಳು ಪಿಪಿಇ ಕಿಟ್ ಧರಿಸಿದ್ದರು, ಮೃತದೇಹವನ್ನು ಮಟ್ಟದೇ ಜೆಸಿಬಿ ಯಂತ್ರದಲ್ಲಿ ಮೃತದೇಹವನ್ನು ಸಾಗಿಸಿ ನಂತರ ಅಂತ್ಯಕ್ರಿಯೆ ಮಾಡಿದ್ದಾರೆ.

    ಈ ವಿಚಾರವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಖಂಡಿಸಿದ್ದು, ಈ ಘಟನೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಜೊತೆಗೆ ಇದು ಅಮಾನವೀಯ ಘಟನೆ. ಈ ರೀತಿಯ ಪ್ರಕರಣಗಳನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಸರ್ಕಾರವೇ ಪ್ರೋಟೋಕಾಲ್ ಅನ್ನು ಹೊರಡಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

    ಈ ಘಟನೆ ಕುರಿತು ಆಂಧ್ರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಾಲಾಸ ಪುರಸಭೆ ಆಯುಕ್ತ ನಾಗೇಂದ್ರ ಕುಮಾರ್ ಮತ್ತು ನೈರ್ಮಲ್ಯ ನಿರೀಕ್ಷಕ ಎನ್ ರಾಜೀವ್ ಅವರನ್ನು ಅಮಾನತುಗೊಳಿ ಶ್ರೀಕಾಕುಲಂ ಜಿಲ್ಲಾಧಿಕಾರಿ ಜೆ.ನಿವಾಸ್ ಆದೇಶಿಸಿದ್ದಾರೆ.

  • ರಾಯಚೂರಿನ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿ ವಸೂಲಿ ದಂಧೆ- ಹಣ ಕೊಟ್ರೆ ಎಲ್ಲರಿಗೂ ಎಂಟ್ರಿ

    ರಾಯಚೂರಿನ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿ ವಸೂಲಿ ದಂಧೆ- ಹಣ ಕೊಟ್ರೆ ಎಲ್ಲರಿಗೂ ಎಂಟ್ರಿ

    ರಾಯಚೂರು: ಜಿಲ್ಲೆಯಲ್ಲಿ 50, 100 ರೂಪಾಯಿ ಆಸೆಗೆ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿನ ಸಿಬ್ಬಂದಿ ಕೊರೊನಾ ವೈರಸ್ ಹರಡಿಸುತ್ತಿದ್ದಾರಾ ಎನ್ನುವ ಆತಂಕ ಮೂಡಿದೆ.

    ಆಂಧ್ರ ಪ್ರದೇಶದಿಂದ ಬರುವವರು ಚೆಕ್‌ಪೋಸ್ಟ್‌ನಲ್ಲಿನ ಪೊಲೀಸರಿಗೆ 100 ರೂ. ಕೊಟ್ಟರೆ ಸಾಕು ಹೋಂ ಕ್ವಾರಂಟೈನ್ ಭೀತಿಯೇ ಇಲ್ಲ. ಕೊರೊನಾ ಹರಡುವಿಕೆ ತಡೆಗಾಗಿ ಮಾಡಿರುವ ಚೆಕ್‍ಪೋಸ್ಟ್ ಸಿಬ್ಬಂದಿಯೇ ರಾಯಚೂರಿನಲ್ಲಿ ಕೊರೊನಾ ಹರಡುವುದಕ್ಕೆ ಕಾರಣರಾಗುತ್ತಿದ್ದಾರೆ. ಜಿಲ್ಲೆಯ ಗಿಲ್ಲೆಸುಗೂರು ಚೆಕ್‍ಪೋಸ್ಟ್‍ನಲ್ಲಿ ಪೋಲೀಸರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ ಕೃತ್ಯ ಈಗ ಬಟಾಬಯಲಾಗಿದೆ.

    ಆಂಧ್ರದ ಗಡಿಭಾಗದಲ್ಲಿನ ಗಿಲ್ಲೆಸುಗೂರು ಚೆಕ್‌ಪೋಸ್ಟ್‌ನಲ್ಲಿ ಹಣ ಕೊಟ್ಟರೆ ಸಾಕು ಆರಾಮಾಗಿ ಆಂಧ್ರಪ್ರದೇಶಕ್ಕೂ ಹೋಗಬಹುದು, ಆಂಧ್ರದಿಂದ ರಾಜ್ಯಕ್ಕೂ ಬರಬಹುದು ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಚೆಕ್‌ಪೋಸ್ಟ್‌ನಲ್ಲಿ ಯಾವುದೇ ವಾಹನಗಳ ತಪಾಸಣೆಯಾಗಲಿ, ಆರೋಗ್ಯ ತಪಾಸಣೆಯಾಗಲಿ ನಡೆಯುತ್ತಲೇ ಇಲ್ಲ. ಈಗ ಮಂತ್ರಾಲಯಕ್ಕೆ ಬಸ್ ಓಡಾಟ ಆರಂಭವಾಗಿದ್ದರೂ ಹೋಂ ಕ್ವಾರಂಟೈನ್ ಜಾರಿಯಲ್ಲಿದೆ. ಸೇವಾಸಿಂಧುವಿನಲ್ಲಿ ಅರ್ಜಿ ಹಾಕಿದವರಿಗೆ ಮಾತ್ರ ಸಾರಿಗೆ ಬಸ್‍ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಚೆಕ್‌ಪೋಸ್ಟ್‌ನಲ್ಲಿ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿರುವ ಪೊಲೀಸ್ ಸಿಬ್ಬಂದಿ ಹಣ ತೆಗೆದುಕೊಂಡು ಜನರನ್ನ ಒಳ ಬಿಡುತ್ತಿದ್ದಾರೆ. ಅಂತರರಾಜ್ಯ ಗಡಿಯಲ್ಲಿ ಬೈಕ್, ಕಾರ್, ಟಂಟಂಗಳು ಯಾವುದೇ ಆತಂಕವಿಲ್ಲದೆ ಓಡಾಡುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 414ಕ್ಕೆ ಏರಿದ್ದು, ದಿನೇ ದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ಜಿಲ್ಲಾಡಳಿತ ಖಾಸಗಿ ವೈದ್ಯರ ಮೊರೆ ಹೋಗಿದ್ದು ನಗರದ ನವೋದಯ ವೈದ್ಯಕೀಯ ಬೋಧಕ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳನ್ನ ವೈದ್ಯಕೀಯ ಸೇವೆಗೆ ಬಳಸಿಕೊಳ್ಳಲು ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಚೆಕ್ ಪೋಸ್ಟ್ ಗಳಲ್ಲಿನ ಸಿಬ್ಬಂದಿ ಹಣ ವಸೂಲಿ ಮಾಡಿ ಆಂಧ್ರಪ್ರದೇಶದಿಂದ ಬರುವವರನ್ನ ರಾಜ್ಯಕ್ಕೆ ಬಿಡುತ್ತಿರುವುದು ಜಿಲ್ಲೆಯಲ್ಲಿ ಆತಂಕವನ್ನ ಹೆಚ್ಚಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

  • ರಾಯಚೂರಿನಿಂದ ಆಂಧ್ರಪ್ರದೇಶಕ್ಕೆ ಇಂದಿನಿಂದ ಬಸ್ ಓಡಾಟ ಆರಂಭ

    ರಾಯಚೂರಿನಿಂದ ಆಂಧ್ರಪ್ರದೇಶಕ್ಕೆ ಇಂದಿನಿಂದ ಬಸ್ ಓಡಾಟ ಆರಂಭ

    – ಸೇವಾ ಸಿಂಧುವಿನಲ್ಲಿ ಅರ್ಜಿ ಹಾಕಿದವರಿಗೆ ಮಾತ್ರ ಅವಕಾಶ
    – ಆಂಧ್ರಪ್ರದೇಶದಿಂದ ಬಂದವರಿಗೆ ಕಡ್ಡಾಯ ಹೋಮ್ ಕ್ವಾರಂಟೈನ್

    ರಾಯಚೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಲಾಕ್‍ಡೌನ್‍ನಲ್ಲಿ ಸಡಿಲಿಕೆಗಳು ಆಗುತ್ತಲೇ ಇವೆ. ಈಗ ರಾಯಚೂರಿನಿಂದ ಆಂಧ್ರಪ್ರದೇಶಕ್ಕೆ ಬಸ್ ಸಂಚಾರ ಆರಂಭವಾಗಿದೆ. ಪ್ರಾರಂಭಿಕವಾಗಿ ಮಂತ್ರಾಲಯಕ್ಕೆ ಎರಡು ಬಸ್ ಹಾಗೂ ಆಂಧ್ರಪ್ರದೇಶ ಮಾರ್ಗವಾಗಿ ಬೆಂಗಳೂರಿಗೆ ಒಂದು ಬಸ್ ಬಿಡಲಾಗಿದೆ. ಆದ್ರೆ ಸೇವಾ ಸಿಂಧುವಿನಲ್ಲಿ ಅರ್ಜಿ ಹಾಕಿ ಅನುಮತಿ ಪಡೆದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಆಂಧ್ರಪ್ರದೇಶಕ್ಕೆ ಇಂದು ತೆರಳುವವರು ಯಾರೂ ಇಲ್ಲ. ಸದ್ಯ ರಾಜ್ಯದ ಗಡಿವರೆಗೆ ಮಾತ್ರ ಬಸ್ ಓಡಾಡಲಿದೆ.

    ಮಂತ್ರಾಲಯ ಸೇರಿದಂತೆ ಆಂಧ್ರಪ್ರದೇಶದಿಂದ ಬರುವವರಿಗೆ ಹೋಮ್ ಕ್ವಾರಂಟೈನ್ ಮಾಡುವುದರಿಂದಲೂ ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ. ಇನ್ನೂ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ದರ್ಶನಕ್ಕೆ ಭಕ್ತರಿಗೆ ಇನ್ನೂ ಅವಕಾಶ ನೀಡದ ಹಿನ್ನೆಲೆ ಮಂತ್ರಾಲಯಕ್ಕೆ ಹೋಗುವವರ ಸಂಖ್ಯೆ ಕಡಿಮೆಯಿದೆ. ಆಂಧ್ರಪ್ರದೇಶಕ್ಕೆ ಪ್ರಯಾಣ ಬೆಳೆಸಲಿರುವ ಬಸ್‍ಗಳು ಸಿದ್ಧಗೊಂಡಿವೆ.

    ಹೊರರಾಜ್ಯಕ್ಕೆ ಬಸ್ ಸಂಚಾರದ ಮೊದಲನೆ ದಿನವಾಗಿರುವುದರಿಂದ ಸಾರಿಗೆ ಇಲಾಖೆ ಸಿಬ್ಬಂದಿಗಳಲ್ಲೂ ಸ್ವಲ್ಪ ಗೊಂದಲಗಳಿವೆ. ರಾಯಚೂರಿನಿಂದ ಬೆಂಗಳೂರಿಗೆ ತೆರಳುವ ಬಸ್ ನಲ್ಲಿ ಹೆಚ್ಚು ಜನ ಮಂತ್ರಾಲಯದಿಂದ ಹತ್ತುತ್ತಾರೆ. ಅವರಿಗೆ ರಿಸರ್ವೆಶನ್ ಇನ್ನೂ ಆರಂಭವಾಗಿಲ್ಲ. ಮಂತ್ರಾಲಯದಿಂದ ಬಾಗಲಕೋಟೆಗೆ ಹೊರಡುವ ಬಸ್ ರಾಯಚೂರಿನಿಂದ ಆರಂಭಿಸಲಾಗಿದೆ. ಪ್ರಯಾಣಿಕರ ಹೆಸರು, ಮೊಬೈಲ್ ಸಂಖ್ಯೆ, ವಿಳಾಸವನ್ನು ಕಡ್ಡಾಯವಾಗಿ ಪಡೆಯಲಾಗುತ್ತಿದೆ. ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.

  • 200 ವರ್ಷದ ಹಳೆಯದಾದ ಶಿವನ ದೇವಾಲಯ ಪತ್ತೆ

    200 ವರ್ಷದ ಹಳೆಯದಾದ ಶಿವನ ದೇವಾಲಯ ಪತ್ತೆ

    ಹೈದರಾಬಾದ್: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಸುಮಾರು 200 ವರ್ಷ ಹಳೆಯ ಶಿವ ದೇವಾಲಯ ಪತ್ತೆಯಾಗಿದೆ.

    ಪೆನ್ನಾ ನದಿ ಪಾತ್ರದಲ್ಲಿ ದೇವಾಲಯ ಪತ್ತೆಯಾಗಿದೆ. ಮರಳು ಗಣಿಗಾರಿಕೆ ವೇಳೆ ಶಿವ ದೇವಾಲಯ ಕಂಡು ಜನರು ಅಚ್ಚರಿಗೆಗೊಳಗಾಗಿದ್ದಾರೆ. ಸುಮಾರು 200 ವರ್ಷ ಹಳೆಯ ದೇಗುಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ದೇಗುಲದ ಗೋಪುರ ಕಾಣಿಸಿಕೊಂಡಿದ್ದು, ಕಲ್ಲುಗಳಿಂದ ಮಾಡಲ್ಪಟ್ಟಿದೆ. ಗೋಪುರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಮರಳಿನಲ್ಲಿ ಹುದುಗಿರುವ ದೇವಾಲಯ ತೆಗೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ.

    https://www.youtube.com/watch?v=6MwnD0izR0g

  • ಆಂಧ್ರ- ಕರ್ನಾಟಕ ಮಧ್ಯೆ ಬಸ್ ಸಂಚಾರ- ಕೊರೊನಾ ಸ್ಫೋಟ ಸಾಧ್ಯತೆ

    ಆಂಧ್ರ- ಕರ್ನಾಟಕ ಮಧ್ಯೆ ಬಸ್ ಸಂಚಾರ- ಕೊರೊನಾ ಸ್ಫೋಟ ಸಾಧ್ಯತೆ

    – ಮಹಾರಾಷ್ಟ್ರ ಬಳಿಕ ಆಂಧ್ರದಿಂದ ಕೊರೊನಾ ಆಗಮನ

    ಅಮರಾವತಿ: ಮಹಾರಾಷ್ಟ್ರ ಕಂಟಕದ ಬಳಿಕ ಇದೀಗ ರಾಜ್ಯಕ್ಕೆ ಆಂಧ್ರದ ಕಂಟಕ ಪ್ರಾರಂಭವಾಗುವ ಭಯ ಎದುರಾಗಿದ್ದು, ಆಂಧ್ರ ಪ್ರದೇಶ ಅಂತರ್ ರಾಜ್ಯ ಬಸ್ ಸಂಚಾರವನ್ನು ಪ್ರಾರಂಬಿಸಲು ನಿರ್ಧರಿಸಿದೆ. ಹಂತ ಹಂತವಾಗಿ ರಾಜ್ಯಕ್ಕೆ 500 ಬಸ್‍ಗಳನ್ನು ಬಿಡಲು ಕ್ರಮ ಕೈಗೊಂಡಿದೆ.

    ಆಂಧ್ರ ಪ್ರದೇಶದಿಂದ ರಾಜ್ಯಕ್ಕೆ ಬಸ್ ಬಿಡಲು ಆಂಧ್ರ ಸರ್ಕಾರ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 168 ಬಸ್‍ಗಳು ರಾಜ್ಯಕ್ಕೆ ಸಂಚರಿಸಲಿವೆ. ಜೂನ್ 17 ರಿಂದ ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಮಧ್ಯೆ 168 ಬಸ್‍ಗಳು ಸಂಚರಿಸಲಿವೆ ಎಂದು ಆಂಧ್ರ ಸರ್ಕಾರ ತಿಳಿಸಿದೆ. ಒಟ್ಟು ನಾಲ್ಕು ಹಂತಗಳಲ್ಲಿ 500 ಬಸ್‍ಗಳು ಕರ್ನಾಟಕ ಆಂಧ್ರದ ಮಧ್ಯೆ ಸಂಚರಿಸಲಿವೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. apsrtconline.in ಮೂಲಕ ಸೀಟ್ ನೋಂದಾಯಿಸಿಕೊಂಡು ಪ್ರಯಾಣಿಸಲು ತಿಳಿಸಿದೆ.

    ಮಂತ್ರಾಲಯ, ಬೆಂಗಳೂರು ಸೇರಿದಂತೆ ಈ ಹಿಂದಿನಂತೆ ರಾಜ್ಯದ ಪ್ರಮುಖ ನಗರಗಳಿಗೆ ಆಂಧ್ರ ಬಸ್‍ಗಳು ಸಂಚರಿಸಲಿವೆ. ಈ ಮೂಲಕ ಬಸ್‍ಗಳು ಆಂಧ್ರದಿಂದ ಕರ್ನಾಟಕಕ್ಕೆ ಕೊರೊನಾ ಸೋಂಕಿತರನ್ನು ಹೊತ್ತು ತರುವ ಎಲ್ಲ ಸಾಧ್ಯತೆಗಳಿವೆ. ಈಗಾಗಲೇ ರಾಜ್ಯದಲ್ಲಿ ಪತ್ತೆಯಾಗಿರುವ ಬಹುತೇಕ ಕೊರೊನಾ ಪ್ರಕರಣಗಳು ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ್ದಾಗಿದ್ದು, ಇದೀಗ ಬಸ್ ಸಂಚಾರದಿಂದ ಮತ್ತೆ ಕೊರೊನಾಘಾತವಾಗುವ ಸಾಧ್ಯತೆ ಇದೆ.

  • ಜೂ.11ರಿಂದ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವ ದರ್ಶನ ಆರಂಭ

    ಜೂ.11ರಿಂದ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವ ದರ್ಶನ ಆರಂಭ

    – ಗಂಟೆಗೆ 500 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ

    ಹೈದರಾಬಾದ್: ಲಾಕ್‍ಡೌನ್ ಕಾರಣದಿಂದ ಬಂದ್ ಆಗಿದ್ದ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಜೂನ್ 11 ರಿಂದ ಭಕ್ತರಿಗೆ ದರ್ಶನ ಆರಂಭವಾಗಲಿದ್ದು, ಕೇಂದ್ರ ಸರ್ಕಾರ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಮಾರ್ಗದರ್ಶನ ಬಿಡುಗಡೆ ಮಾಡಿದ ಒಂದು ದಿನದ ಬಳಿಕ ಟಿಟಿಡಿ ಈ ಕುರಿತು ಸ್ಪಷ್ಟನೆ ನೀಡಿದೆ.

    ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಜೂನ್ 11ರಿಂದ ಸರ್ವ ದರ್ಶನ ಆರಂಭವಾಗಲಿದೆ. ತಿಮ್ಮಪ್ಪನ ದರ್ಶನ ಪಡೆಯಲು ಗಂಟೆಗೆ 500 ಭಕ್ತರಿಗೆ ಅವಕಾಶ ಸಿಗಲಿದೆ. ಬೆಳಗ್ಗೆ 6.30ರಿಂದ ಸಂಜೆ 7.30ರವರೆಗೆ ಮಾತ್ರ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಸಿಗಲಿದೆ. ದಿನಕ್ಕೆ 6 ಸಾವಿರ ಮಂದಿಗೆ ಮಾತ್ರ ದೇವರ ದರ್ಶನ ಭಾಗ್ಯ ಸಿಗಲಿದೆ.

    ಜೂನ್ 8ರಿಂದ ತಿರುಮಲದಲ್ಲಿ ಪ್ರಾರಂಭಿಕ ದರ್ಶನ ಕಾರ್ಯವನ್ನು ಆರಂಭಿಸಲಿದ್ದು, ಮೊದಲು ಸ್ಥಳೀಯರಿಗೆ ಹಾಗೂ ಟಿಟಿಡಿ ಸಿಬ್ಬಂದಿಗಳಿಗೆ ಮಾತ್ರ ದೇವರ ದರ್ಶನಕ್ಕೆ ಅನುಮತಿ ನೀಡಲಾಗಿದೆ. ಆ ಬಳಿಕವೇ ಟಿಟಿಡಿ ಸಮಿತಿ ಸರ್ವ ದರ್ಶನ ಸೇವೆಯನ್ನು ಆರಂಭಿಸಲಿದೆ. ಆನ್‍ಲೈನ್‍ನಲ್ಲಿ ದರ್ಶನದ ಟಿಕೆಟ್ ಸೇವೆಗಳು ಬುಕ್ ಮಾಡಿಕೊಳ್ಳಲು ಈಗಾಗಲೇ ಅವಕಾಶ ನೀಡಲಾಗಿದೆ.

    ಕೇಂದ್ರ ಸರ್ಕಾರ ನೀಡಿರುವ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಪ್ರಯೋಗಿಕ ದರ್ಶನದ ಸೇವೆ ವೇಳೆ ಈ ಕುರಿತು ಸಿಬ್ಬಂದಿಗೂ ತರಬೇತಿ ನೀಡಲಾಗುವುದು. ಸಾಮಾಜಿಕ ಅಂತರ ಪಾಲನೆ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಬಳಕೆ ಮಾಡಲಾಗುತ್ತದೆ. ಕೇಂದ್ರ ಸೂಚನೆ ಅನ್ವಯ 10 ವರ್ಷಕ್ಕಿಂತ ಕೆಳಗಿನ ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ವಿವರಿಸಿದ್ದಾರೆ.

  • ಜೂನ್ 8ರಿಂದ ತಿರುಪತಿ ತಿಮ್ಮಪ್ಪನ ದರ್ಶನ!

    ಜೂನ್ 8ರಿಂದ ತಿರುಪತಿ ತಿಮ್ಮಪ್ಪನ ದರ್ಶನ!

    – ಸಾಮಾಜಿಕ ಅಂತರ ಪಾಲನೆ ಹಿನ್ನೆಲೆ ಸಿಬ್ಬಂದಿ, ಸ್ಥಳೀಯರಿಗೆ ಮಾತ್ರ ಅವಕಾಶ

    ಹೈದರಾಬಾದ್: ಕೊರೊನಾ ಹಿನ್ನೆಲೆಯಲ್ಲಿ ಕಳೆದ 70 ದಿನಗಳಿಂದ ಬಂದ್ ಆಗಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನವನ್ನು ಓಪನ್ ಮಾಡಲು ಆಂಧ್ರ ಪ್ರದೇಶ ಸರ್ಕಾರ ಅನುಮತಿ ನೀಡಿದೆ.

    ಜೂನ್ 8ರಿಂದ ದೇವಾಲಯದಲ್ಲಿ ದರ್ಶನ ಆರಂಭವಾಗಲಿದ್ದು, ಆದರೆ ಟಿಟಿಡಿ ಸಿಬ್ಬಂದಿ ಮತ್ತು ಸ್ಥಳೀಯರಿಗೆ ಮಾತ್ರ ಪ್ರಯೋಗಾತ್ಮಕವಾಗಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಸಿಗಲಿದೆ. ಸಾಮಾನ್ಯ ಭಕ್ತರಿಗೆ ಯಾವಾಗ ಅವಕಾಶ ನೀಡಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ತಿಮ್ಮಪ್ಪನ ದರ್ಶನ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು, ಗಂಟೆಗೆ 300 ಭಕ್ತರಿಗೆ ಮಾತ್ರ ದರ್ಶನ ಕಲ್ಪಿಸಲು ಟಿಟಿಡಿ ಸಿದ್ಧತೆ ನಡೆಸಿದೆ.

    ಟಿಟಿಡಿ ಮಂಡಳಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸರ್ಕಾರ ಪ್ರಯೋಗಾತ್ಮಕವಾಗಿ ದರ್ಶನ ವ್ಯವಸ್ಥೆಯನ್ನು ನಡೆಸಲು ಅನುಮತಿ ನೀಡಿದೆ. ಲಾಕ್‍ಡೌನ್ ನಿಯಮಗಳಿಂದ ವಿನಾಯಿಸತಿ ಸಿಕ್ಕ ಮೊದಲ ಭಾಗದ ಹಿನ್ನೆಲೆಯಲ್ಲಿ ದೇಶದ ವಿವಿಧ ದೇವಾಲಯಗಳು ಭಕ್ತರಿಗೆ ದರ್ಶನ ನೀಡಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಆದರೆ ಆಂಧ್ರ ಪ್ರದೇಶ ಸರ್ಕಾರ ಲಾಕ್‍ಡೌನ್ ಸಡಿಲಿಕೆಯ ಫೇಸ್-1 ಕುರಿತು ಇದುವರೆಗೂ ಯಾವುದೇ ನಿಯಮಾವಳಿಗಳನ್ನು ಬಿಡುಗಡೆಗೊಳಿಸಿಲ್ಲ.

    ಕೇಂದ್ರ ಸರ್ಕಾರ ಹಾಗೂ ಸಚಿವಾಲಯ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ಶ್ರೀವಾರಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಮಗೆ ಭಕ್ತರಿಂದ ಸಾಕಷ್ಟು ಇ-ಮೇಲ್, ಸಂದೇಶಗಳು ಬರುತ್ತಿದ್ದು, ದೇವರ ದರ್ಶನ ಆರಂಭದ ಕುರಿತು ಮಾಹಿತಿ ಕೇಳುತ್ತಿದ್ದಾರೆ. ಆದರೆ ಸರ್ಕಾರದ ನೀಡುವ ಲಾಕ್‍ಡೌನ್ ನಿರ್ದೇಶನಗಳ ಮೇಲೆ ಎಲ್ಲವೂ ಆಧಾರವಾಗಿರುತ್ತದೆ. ಮಾರ್ಚ್ 19 ರಿಂದ ದೇವಾಲಯದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲದಿರುವುದರಿಂದ ಪ್ರತಿ ತಿಂಗಳು 200 ಕೋಟಿ ರೂ. ನಷ್ಟ ಎದುರಾಗಿದೆ ಎಂದು ತಿಳಿಸಿದ್ದಾರೆ. ಇತ್ತ ಆದಾಯಕ್ಕೆ ಹೊಡೆತ ಬಿದ್ದ ಪರಿಣಾಮ ಟಿಟಿಡಿ ಸಿಬ್ಬಂದಿಯ ವೇತನ ನೀಡಲು ಸಮಸ್ಯೆ ಎದುರಿಸಿದೆ. ಪ್ರತಿದಿನ ಭಕ್ತರು ದೇವರ ಹುಂಡಿಗೆ ಸಲ್ಲಿಸುತ್ತಿದ್ದ ಕಾಣಿಕೆಗಳು ದೇವಾಲಯದ ಪ್ರಮುಖ ಆದಾಯದ ಮೂಲವಾಗಿತ್ತು. ಹುಂಡಿಯಲ್ಲಿ ಪ್ರತಿದಿನ 50 ಲಕ್ಷ ರೂ. ಆದಾಯ ಲಭಿಸುತ್ತಿತ್ತು.

  • ಮಲೆನಾಡಿಗೆ ತಬ್ಲಿಘಿ, ಮುಂಬೈ ನಂತರ ಕೇರಳ, ಆಂಧ್ರದವರ ಕಂಟಕ

    ಮಲೆನಾಡಿಗೆ ತಬ್ಲಿಘಿ, ಮುಂಬೈ ನಂತರ ಕೇರಳ, ಆಂಧ್ರದವರ ಕಂಟಕ

    – ಮಲೆನಾಡು ಜಿಲ್ಲೆಯಲ್ಲಿ ಹೆಚ್ಚಿದ ಕೊರೊನಾ ಸೋಂಕಿತರ ಸಂಖ್ಯೆ
    – ಒಂದೇ ದಿನ 10 ಪಾಸಿಟಿವ್ ಪ್ರಕರಣಗಳು ಪತ್ತೆ
    – ಮಹಾರಾಷ್ಟ್ರ ಸೇರಿದಂತೆ ಇತರೇ ರಾಜ್ಯದ ಜನರಿಗಿಲ್ಲ ಪ್ರವೇಶ

    ಶಿವಮೊಗ್ಗ: ಕಳೆದ ಒಂದೂವರೆ ತಿಂಗಳಿನಿಂದ ಗ್ರೀನ್ ಜೋನ್ ನಲ್ಲಿದ್ದ ಶಿವಮೊಗ್ಗಕ್ಕೆ ಇದೀಗ ಸಿಡಿಲಾಘಾತವಾಗಿದ್ದು, ಒಂದೇ ದಿನ 10 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 14ರಿಂದ ಒಂದೇ ಬಾರಿಗೆ ಏರಿಕೆ ಕಂಡಿದ್ದು, 24ಕ್ಕೆ ಏರಿದೆ. ಹೀಗಾಗಿ ಹೊರ ರಾಜ್ಯಗಳಿಂದ ಶಿವಮೊಗ್ಗಕ್ಕೆ ಬರುವವರಿಗೆ ನೋ ಎಂಟ್ರಿ ಎನ್ನಲಾಗಿದ್ದು, ಇನ್ನು 167 ಮಂದಿಯ ಫಲಿತಾಂಶ ಬರುವುದು ಬಾಕಿ ಇದೆ.

    ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಇತರೆ ಜಿಲ್ಲೆಗಳ ಕೊರೊನಾ ಸೋಂಕಿತರ ಸಂಖ್ಯೆ ಕಂಡು ಆತಂಕದಲ್ಲಿದ್ದ ಮಲೆನಾಡಿನ ಜನತೆಗೆ ಇದೀಗ ಸಿಡಿಲಾಘಾತವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಒಂದೇ ಬಾರಿಗೆ ಸೋಂಕು ಪೀಡಿತರ ಸಂಖ್ಯೆ 24ಕ್ಕೆ ಏರಿಕೆಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಅದರಲ್ಲೂ ಸೋಮವಾರ ಸಂಜೆಯವರೆಗೂ ಕೇವಲ 14 ಸೋಂಕಿತರ ಸಂಖ್ಯೆ ಇದ್ದು, ರಾತ್ರಿ ಬಳಿಕ 10 ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 24ಕ್ಕೆ ಏರಿದೆ. ಈ ಮೊದಲು ತಬ್ಲಿಘಿಗಳು ನಂತರ ಮುಂಬೈನಿಂದ ಬಂದವರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇದೀಗ ಹೊಸದಾಗಿ ಕೇರಳ ಹಾಗೂ ಆಂಧ್ರಪ್ರದೇಶದಿಂದ ಬಂದವರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.

    ಸ್ಥಳೀಯರಲ್ಲೂ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಾಳೆಕೊಪ್ಪ, ತೀರ್ಥಹಳ್ಳಿಯ ಹಳ್ಳಿಬೈಲು ಹಾಗೂ ಶಿಕಾರಿಪುರದ ತರಲಘಟ್ಟ ಗ್ರಾಮಗಳನ್ನು ಕಂಟೈನ್ ಮೆಂಟ್ ಜೋನ್‍ಗಳಾಗಿ ಪರಿವರ್ತಿಸಲಾಗಿದೆ. ಜಿಲ್ಲೆಯ ತೀರ್ಥಹಳ್ಳಿಗೆ ಮುಂಬೈ ಮೂಲದಿಂದ ಬಂದಿದ್ದ ಐವರಿಗೆ ಸೋಂಕು ತಗುಲಿರುವುದು ಧೃಢವಾಗಿದ್ದು, ಕೇರಳದಿಂದ ಶಿವಮೊಗ್ಗಕ್ಕೆ ಬಂದಿದ್ದ ಸೂಳೆಬೈಲು ಬಡಾವಣೆಯ ಇಬ್ಬರು ನಿವಾಸಿಗಳು ಹಾಗೂ ಆಂಧ್ರ ಮೂಲದ ಓರ್ವ ವ್ಯಕ್ತಿಗೆ ಸೋಂಕು ಧೃಢವಾಗಿದೆ.

    ಇನ್ನೂ ಆಘಾತಕಾರಿ ವಿಚಾರವೆಂದರೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಇಬ್ಬರಿಗೆ ಸೋಂಕು ತಗುಲಿದೆ. ಕುಂಸಿಯ ಬಾಳೆಕೊಪ್ಪ ಗ್ರಾಮದ 63 ವರ್ಷದ ಹಾಲು ವ್ಯಾಪಾರಿ ಮತ್ತು ಶಿಕಾರಿಪುರದ ತರ್ಲಘಟ್ಟ ಗ್ರಾಮದ ಯುವತಿಯೊಬ್ಬಳಿಗೆ ಹೇಗೆ ಸೋಂಕು ತಗುಲಿದೆ ಎಂಬುದೇ ತಿಳಿಯದಾಗಿದೆ. ಈ ಸಂಬಂಧ ಅಧಿಕಾರಿಗಳು ತನಿಖೆ ಸಹ ಕೈಗೊಂಡಿದ್ದಾರೆ. ಇವರಿಬ್ಬರಿಗೆ ಸೋಂಕು ಹೇಗೆ ತಗುಲಿದೆ ಎಂಬುದೇ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

    ಒಟ್ಟಾರೆ ಶಿವಮೊಗ್ಗದಲ್ಲಿ ಪ್ರಸ್ತುತ 916 ಜನ ಸಾಂಸ್ಥಿಕ ಕ್ವಾರೆಂಟೈನ್ ಮತ್ತು 64 ಮಂದಿ ಹೋಮ್ ಕ್ವಾರೆಂಟೈನ್‍ನಲ್ಲಿದ್ದು, ಕ್ವಾರೆಂಟೈನ್ ವ್ಯವಸ್ಥೆಗಾಗಿ 50 ವಸತಿ ಶಾಲೆಗಳು, ಹೊಟೇಲ್‍ಗಳು ಮತ್ತು ಗ್ರಾಮೀಣ ಭಾಗದಲ್ಲಿ 7 ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪಾಸಿಟಿವ್ ಬಂದ ಪ್ರಕರಣಗಳಿಗೆ ಸಂಬಂಧಿಸಿದಂತೆ 67 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ 150 ಮಂದಿ ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಕ್ವಾರೆಂಟೈನ್ ಮಾಡಲಾಗಿದೆ.

  • ಪರಿಶೀಲಿಸಲು ಬೈಕ್ ತಡೆದಿದ್ದಕ್ಕೆ ಆಂಧ್ರ ಯುವಕರಿಂದ ರಾಜ್ಯ ಪೊಲೀಸರ ಮೇಲೆ ಹಲ್ಲೆ

    ಪರಿಶೀಲಿಸಲು ಬೈಕ್ ತಡೆದಿದ್ದಕ್ಕೆ ಆಂಧ್ರ ಯುವಕರಿಂದ ರಾಜ್ಯ ಪೊಲೀಸರ ಮೇಲೆ ಹಲ್ಲೆ

    ಚಿತ್ರದುರ್ಗ: ಕೋವಿಡ್-19 ಸೋಂಕಿನಿಂದ ಜನರನ್ನು ಸಂರಕ್ಷಿಸಲು ಅರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಆಶಾ ಕಾರ್ಯಕರ್ತೆರು ಹಗಲು ಇರುಳು ಎನ್ನದೇ ಶ್ರಮಿಸುತಿದ್ದಾರೆ.

    ಆಂಧ್ರದಿಂದ ಬಂದಿದ್ದ ಬೈಕ್ ಸವಾರರನ್ನು ತಡೆದು ಪರಿಶೀಲನೆ ನಡೆಸಿದ ಪರಿಣಾಮ ಕರ್ತವ್ಯನಿರತ ಕೊರೊನಾ ವಾರಿಯರ್ಸ್ ಎನಿಸಿರುವ ಪೊಲೀಸ್ ಪೇದೆ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಶುಕ್ರವಾರ ಸಂಜೆ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ ಚೆಕ್ ಪೋಸ್ಟ್ ಬಳಿ ಪರಶುರಾಂಪುರ ಠಾಣೆಯ ಕರ್ತವ್ಯ ನಿರತ ಪೊಲೀಸ್ ಪೇದೆ ಶಿವಣ್ಣ ಅವರು ಆಂಧ್ರಪ್ರದೇಶ ರಾಜ್ಯದ ಶೆಟ್ಟೂರು ಗ್ರಾಮದಿಂದ ಬೈಕ್‍ನಲ್ಲಿ ಬಂದಿದ್ದ ಮೂವರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಮಂಜು ಎಂಬ ಕಿಡಿಗೇಡಿಯು ಕುಡಿದ ಅಮಲಿನಲ್ಲಿ ಪೇದೆ ಶಿವಣ್ಣ ಅವರ ಹಲ್ಲೆ ನಡೆಸಿದ್ದಾನೆ.

    ಅಲ್ಲದೇ ಅಸಭ್ಯ ವರ್ತನೆ ತೋರಿಸುತ್ತಾ, ಅವಾಚ್ಯ ಶಬ್ದಗಳನ್ನು ನಿಂದಿಸಿದ್ದಾರೆ. ಬೈಕಿನಲ್ಲಿ ಬರುತ್ತಿದ್ದವರನ್ನು ಕಂಡು ಸ್ಥಳೀಯರು ಸಹ ಬುದ್ಧಿ ಹೇಳಿದ್ದಕ್ಕೆ ಸಾರ್ವಜನಿಕರ ಮೇಲೆಯೂ ಈ ಕಿಡಿಗೇಡಿಗಳು ಹಲ್ಲೆಗೆ ಮುಂದಾಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಾಗೆಯೇ ಪೊಲೀಸ್ ಪೇದೆ ಮೇಲೆ ಕಿಡಿಗೇಡಿಗಳ ಹಲ್ಲೆಯ ದೃಶ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.

  • ಅನುಮತಿ ಇಲ್ಲದೇ ಮದ್ವೆ- ಬಳ್ಳಾರಿಯಲ್ಲಿ ವಧು-ವರ ಸೇರಿ 8 ಮಂದಿಗೆ ಕ್ವಾರಂಟೈನ್

    ಅನುಮತಿ ಇಲ್ಲದೇ ಮದ್ವೆ- ಬಳ್ಳಾರಿಯಲ್ಲಿ ವಧು-ವರ ಸೇರಿ 8 ಮಂದಿಗೆ ಕ್ವಾರಂಟೈನ್

    ಬಳ್ಳಾರಿ: ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ನೆರೆಯ ಆಂಧ್ರ ಪ್ರದೇಶ ಗಡಿ ಭಾಗದ ವಧು-ವರ ಸೇರಿದಂತೆ ಎಂಟು ಮಂದಿಯನ್ನ ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ.

    ಜಿಲ್ಲಾಡಳಿತದ ಅನುಮತಿ ಪಡೆಯದೆ ನೆರೆಯ ಆಂಧ್ರ ಪ್ರದೇಶದ ಗಡಿ ಗ್ರಾಮದಿಂದ ವಧು-ವರ ಸೇರಿದಂತೆ ಎಂಟು ಮಂದಿ ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಹಾಜರಾಗಿದ್ದರು. ಖಚಿತ ಮಾಹಿತಿ ಪಡೆದ ಜಿಲ್ಲಾಡಳಿತ ತಂಡವೊಂದನ್ನು ಗ್ರಾಮಕ್ಕೆ ಕಳುಹಿಸಿ, ಕೂಡಲೇ ಆ ಎಂಟು ಮಂದಿಯನ್ನ ಗುರುತಿಸಿ 14 ದಿನಗಳ ಕಾಲ ಕ್ವಾರಂಟೈನ್ ಮಾಡಿದೆ.  ಎಂಟು ಮಂದಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬರಬೇಕಿದೆ.

    ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ನಡೆಯಬೇಕಿದ್ದ 7 ಬಾಲ್ಯ ವಿವಾಹಗಳನ್ನು ಪತ್ತೆಹಚ್ಚಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಮದುವೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಬಳ್ಳಾರಿ ತಾಲೂಕಿನ ಕುಂಟನಾಳು ಗ್ರಾಮದಲ್ಲಿ ಮೇ 10-13ರಂದು ಪ್ರತ್ಯೇಕವಾಗಿ 7 ಬಾಲ್ಯವಿವಾಹಗಳನ್ನ ಗುರು-ಹಿರಿಯರು ನಿಶ್ಚಯಿಸಿದ್ದರು. ಈ ಕುರಿತು ಮಾಹಿತಿ ಪಡೆದಿದ್ದ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ತೆರಳಿ, ಬಾಲ್ಯ ವಿವಾಹಗಳನ್ನ ತಡೆದಿದ್ದರು.