Tag: Andhra Pradesh

  • ಸುತ್ತಿಗೆಯಿಂದ ಮಗನ ತಲೆ ಜಜ್ಜಿ ಕೊಲೆಗೈದ ಪಾಪಿ ತಂದೆ

    ಸುತ್ತಿಗೆಯಿಂದ ಮಗನ ತಲೆ ಜಜ್ಜಿ ಕೊಲೆಗೈದ ಪಾಪಿ ತಂದೆ

    – ಗೊತ್ತಾಗದಂತೆ ಹಿಂದಿನಿಂದ ತಲೆಗೆ ಹೊಡೆದು ಕೊಲೆ

    ಹೈದರಾಬಾದ್: ತಂದೆಯೇ ತನ್ನ 40 ವರ್ಷದ ಮಗನನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ವಿಶಾಖಪಟ್ಟಣಂನಲ್ಲಿ ಘಟನೆ ನಡೆದಿದ್ದು, ರೊಚ್ಚಿಗೆದ್ದ ತಂದೆ ಸುತ್ತಿಗೆಯನ್ನು ತೆಗೆದುಕೊಂಡು ತನ್ನ ಮಗನ ತಲೆಗೆ ಹಲವು ಬಾರಿ ಸಿಟ್ಟಿನಿಂದ ಬಾರಿಸುವ ಮೂಲಕ ಹತ್ಯೆ ಮಾಡಿದ್ದಾರೆ. ಆರೋಪಿಯನ್ನು ವೀರ ರಾಜು ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಂದೆ ಮಗನನ್ನೇ ಕೊಲೆ ಮಾಡಿದ್ದಾನೆ.

    ಮನೆಯ ಕಾರ್ ಪಾರ್ಕಿಂಗ್ ಏರಿಯಾದಲ್ಲಿ ಘಟನೆ ನಡೆದಿದ್ದು, ಸುತ್ತಿಗೆಯಲ್ಲಿ ಹೊಡೆಯುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗ ಸ್ಟೂಲ್ ಮೇಲೆ ಕುಳಿತಿರುವುದನ್ನು ಕಂಡ ತಂದೆ, ಮನಗೆ ಮರಳಿದ್ದು, ಬಳಿಕ ಸುತ್ತಿಗೆ ತೆಗೆದುಕೊಂಡು ಬಂದಿದ್ದಾನೆ. ಮಗನ ಹಿಂದೆ ತೆರಳಿ, ಅವನಿಗೆ ತಿಳಿಯದಂತೆ ಹಿಂದಿನಿಂದಲೇ ಸುತ್ತಿಗೆಯಿಂದ ರಭಸವಾಗಿ ತಲೆಗೆ ಹೊಡೆದಿದ್ದಾನೆ.

    ಹೊಡೆಯುತ್ತಿದ್ದಂತೆ ಮಗ ಪ್ರಜ್ಞಾಹೀನನಾಗಿ ಕೆಳಗೆ ಬಿದ್ದಿದ್ದು, ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಇದಾವುದನ್ನೂ ಲೆಕ್ಕಿಸದೆ ತಂದೆ ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಓಡಾಡಿದ್ದಾನೆ.

    ಆಸ್ತಿ ವಿಚಾರವಾಗಿ ತಂದೆ ಮಗನ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಇದು ವಿಕೋಪಕ್ಕೆತಿರುಗಿದೆ. ವೀರ ರಾಜು ಹಾಗೂ ಆತನ ಮಗ ಇಬ್ಬರೂ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಂದೆ ಕೆಲಸದಿಂದ ನಿವೃತ್ತರಾಗಿದ್ದು, ಮಗ ರಜೆಯಲ್ಲಿ ವಾರದ ಹಿಂದೆ ಮನೆಗೆ ಆಗಮಿಸಿದ್ದ.

    ಆಸ್ತಿ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ತಾರಕಕ್ಕೇರಿದ್ದು, ಆಗ ವೀರ ರಾಜು ತನ್ನ ಮಗ ಜಲರಾಜು ಮೇಲೆ ದಾಳಿನ ಮಾಡಿದ್ದಾನೆ. ಸುತ್ತಿಗೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ವಿಶಾಖಪಟ್ಟಣಂ ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ವೀರರಾಜು ತಾನಾಗಿಯೇ ಶರಣಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಊಟ, ನೀರು ಸೇವಿಸದೆ ನಿರಂತರವಾಗಿ ಪಬ್‍ಜಿ ಆಟ – 16ರ ಬಾಲಕ ಸಾವು

    ಊಟ, ನೀರು ಸೇವಿಸದೆ ನಿರಂತರವಾಗಿ ಪಬ್‍ಜಿ ಆಟ – 16ರ ಬಾಲಕ ಸಾವು

    ಹೈದರಾಬಾದ್: ಪಬ್‍ಜಿ ಆಟಕ್ಕೆ ದಾಸನಾದ 16 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಇತ್ತೀಚೆಗೆ ಯುವ ಪೀಳಿಗೆ ಮೊಬೈಲ್‍ಗೆ ಜಾಸ್ತಿ ಆಂಟಿಕೊಂಡು ಇರುತ್ತಾರೆ. ಅದರಲ್ಲಿ ಬರುವ ಆನ್‍ಲೈನ್ ಗೇಮ್‍ಗೆ ದಾಸರಾಗಿರುತ್ತಾರೆ. ಅಂತಯೇ ಪಬ್‍ಜಿ ಗೇಮ್‍ಗೆ ದಾಸನಾಗಿದ್ದ ಆಂಧ್ರಪ್ರದೇಶದ 16 ವರ್ಷದ ಬಾಲಕ ಊಟ ನೀರು ಸೇವಿಸದೇ ದಿನದ ಬಹುತೇಕ ಕಾಲ ಮೊಬೈಲ್ ಹಿಡಿದುಕೊಂಡೇ ಕಾಲಕಳೆದಿದ್ದಾನೆ. ಪರಿಣಾಮ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

    ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಮನೆಯಲ್ಲೇ ಇದ್ದ ಬಾಲಕ ಹೆಚ್ಚಿನ ಸಮಯವನ್ನು ಮೊಬೈಲ್‍ನಲ್ಲಿ ಆನ್‍ಲೈನ್ ಆಟಗಳನ್ನು ಆಡುತ್ತಾ ಕಾಲಕಳೆಯುತ್ತಿದ್ದ. ಜೊತೆಗೆ ಪಬ್‍ಜಿ ಆಟಕ್ಕೆ ದಾಸನಾಗಿದ್ದ. ಇದರಿಂದ ಯಾವಾಗಲೂ ಒಬ್ಬನೇ ಇರುತ್ತಿದ್ದ. ಜೊತೆಗೆ ಆತ ಊಟವನ್ನು ಮಾಡಿರಲಿಲ್ಲ. ನೀರನ್ನು ಕುಡಿಯದೇ ಪಬ್‍ಜಿ ಆಟವನ್ನು ಆಡಿದ್ದಾನೆ. ಪರಿಣಾಮ ಆತ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಆ ನಂತರ ಆತನನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ.

    ಕಳೆದ ಜನವರಿಯಲ್ಲೂ ಕೂಡ ಇದೇ ರೀತಿಯ ಘಟನೆ ಪುಣೆಯಲ್ಲಿ ನಡೆದಿತ್ತು. ಪಬ್‍ಜಿ ಆಡುತ್ತಿದ್ದ 25 ವರ್ಷದ ಹರ್ಷಲ್ ಮೆಮನೆಗೆ ಬ್ರೈನ್ ಸ್ಟ್ರೋಕ್ ಬಂದಿತ್ತು. ಆತನ ಬಲಗೈ ಮತ್ತು ಕಾಲು ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ಬಿಟ್ಟಿದ್ದವು. ನಂತರ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

  • ಚಿಕ್ಕಬಳ್ಳಾಪುರ ಜಿಲ್ಲೆಗೆ ಆಂಧ್ರಪ್ರದೇಶದಿಂದ ನೀರು ತರಲು ಪ್ರಯತ್ನ: ಸುಧಾಕರ್

    ಚಿಕ್ಕಬಳ್ಳಾಪುರ ಜಿಲ್ಲೆಗೆ ಆಂಧ್ರಪ್ರದೇಶದಿಂದ ನೀರು ತರಲು ಪ್ರಯತ್ನ: ಸುಧಾಕರ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಗಡಿಭಾಗದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಆಂಧ್ರಪ್ರದೇಶದಿಂದ ನೀರು ಪಡೆಯುವ ಕುರಿತು ಚರ್ಚೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದರು.

    ಜಿಲ್ಲೆಯ ಗೌರಿಬಿದನೂರಿನಲ್ಲಿ ನಗರಸಭೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 7.29 ಕೋಟಿ ರೂಪಾಯಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವ, ಚಿಕ್ಕಬಳ್ಳಾಪುರ ತಾಲೂಕಿನ ನೀರಿನ ಸಮಸ್ಯೆ ಪರಿಹರಿಸಲು ಎಚ್‍ಎನ್ ವ್ಯಾಲಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗುತ್ತಿದೆ. ಗೌರಿಬಿದನೂರಿಗೂ ಈ ನೀರು ಸಿಗಲಿದೆ. ಎತ್ತಿನಹೊಳೆ ಯೋಜನೆಯಿಂದಲೂ ಈ ಭಾಗಗಳಿಗೆ ನೀರು ನೀಡುವ ಪ್ರಯತ್ನ ನಡೆದಿದೆ ಎಂದರು.

    ಜೊತೆಗೆ ಅದಷ್ಟು ಬೇಗ ನೀರು ತರಲು ನೆರೆಯ ರಾಜ್ಯ ಆಂಧ್ರಪ್ರದೇಶದಿಂದ 5 ರಿಂದ 10 ಟಿಎಂಸಿ ನೀರು ಪಡೆಯುವ ಬಗ್ಗೆ ಚರ್ಚೆಯಾಗಿದೆ. ಜಲಸಂಪನ್ಮೂಲ ಸಚಿವರ ಜೊತೆ ಈ ಬಗ್ಗೆ ಚರ್ಚಿಸಲಾಗಿದೆ. ಆಂಧ್ರದಿಂದ ಇಲ್ಲಿನ ಗಡಿಭಾಗಗಳಿಗೆ ನೀರು ಪಡೆದು, ಬೇರೆ ಮೂಲಗಳಿಂದ ಅಷ್ಟೇ ನೀರನ್ನು ಆಂಧ್ರಕ್ಕೆ ನೀಡುವ ಕುರಿತು ಚರ್ಚೆಯಾಗಿದೆ. ಶೀಘ್ರದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಗುವುದು. ನೆರೆಯ ರಾಜ್ಯ ಆಂಧ್ರದ ಗಡಿಭಾಗಕ್ಕೆ ಅಲ್ಲಿನ ಸರ್ಕಾರ ನೀರು ಹರಿಸುತ್ತಿದ್ದು, ಅದೇ ಕಾಲುವೆ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಪಡೆಯುವ ಉದ್ದೇಶ ಹೊಂದಲಾಗಿದೆ.

    ಇದೇ ವೇಳೆ ಗೌರಿಬಿದನೂರಿನಲ್ಲಿ ಕೈಗಾರಿಕೆ ಅಭಿವೃದ್ಧಿಯಾಗುತ್ತಿದೆ. ಇದಕ್ಕೆ ಪೂರಕವಾದಂತೆ ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಜಾರಿ ಮಾಡಿದೆ. ಚಿಕ್ಕಬಳ್ಳಾಪುರವನ್ನು ಕೂಡ ಹಂತ 2 ವರ್ಗದಲ್ಲಿ ಸೇರ್ಪಡೆಗೊಳಿಸಿದರೆ ಕೈಗಾರಿಕೆ ಅಭಿವೃದ್ಧಿ ಸುಲಭವಾಗಲಿದೆ. ಜೊತೆಗೆ ಉದ್ಯಮಿಗಳಿಗೆ ಹಲವು ಬಗೆಯ ರಿಯಾಯಿತಿ ದೊರೆಯಲಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತಲಾ 5 ಸಾವಿರ ರೂ. ವೈದ್ಯಕೀಯ ಸಹಾಯಧನ ವಿತರಿಸಲಾಯಿತು. ಆಶ್ರಯ ಯೋಜನೆಯಡಿಯ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಯಿತು. ಇದೇ ಕಾರ್ಯಕ್ರಮದಲ್ಲಿ ಶಾಸಕ ಶಿವಶಂಕರರೆಡ್ಡಿ ಹಾಜರಿದರು.

  • ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ – ಮಸೂದೆಗೆ ಬಿತ್ತು ರಾಜ್ಯಪಾಲರ ಅಂಕಿತ

    ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ – ಮಸೂದೆಗೆ ಬಿತ್ತು ರಾಜ್ಯಪಾಲರ ಅಂಕಿತ

    ಅಮರಾವತಿ: ಆಂಧ್ರಪ್ರದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ಮೂರು ರಾಜಧಾನಿಗಳ ಪ್ರಸ್ತಾಪಕ್ಕೆ ಆಂಧ್ರ ಪ್ರದೇಶ ರಾಜ್ಯಪಾಲ ಬಿಸ್ವಾಭೂಸನ್ ಹರಿಚಂದನ್ ಸಹಿ ಹಾಕಿದ್ದಾರೆ.

    ಆಂಧ್ರ ಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲ ವಲಯಗಳ ಸರ್ವಾಂಗೀಣ ಅಭಿವೃದ್ಧಿ ವಿಧೇಯಕ 2020 ಮಸೂದೆ ಶಾಸನ ಸಭೆಯಲ್ಲಿ ಪಾಸ್‌ ಆಗಿತ್ತು. ಈಗ ರಾಜ್ಯಪಾಲರು ಸಹಿ ಹಾಕುವ ಮೂಲಕ ಅಧಿಕೃತವಾಗಿ ಜಾರಿಯಾಗಲಿದೆ.

    ಸಿಎಂ ಜಗನ್ ಸರ್ಕಾರ ಮೂರು ವಾರಗಳ ಹಿಂದೆ ವಿಧಾನಸಣೆಯಲ್ಲಿ ಮಸೂದೆಯನ್ನು ಮಂಡಿಸಿತ್ತು. ಹಣಕಾಸು ಸಚಿವ ಬುಗ್ಗನ್​​ ರಾಜೇಂದ್ರನಾಥ್​​ ರೆಡ್ಡಿ, ರಾಜ್ಯಾಡಳಿತ ವಿಕೇಂದ್ರಿಕರಣ ಮಸೂದೆ ಮಂಡಿಸಿ ಅನುಮೋದನೆ ಪಡೆದುಕೊಂಡಿದ್ದರು. ವೈಎಸ್ಆರ್ ಕಾಂಗ್ರೆಸ್ ಮತ್ತು ಟಿಡಿಪಿ ನಡುವಿನ ತೀವ್ರ ತಿಕ್ಕಾಟಕ್ಕೆ ಈ ಮಸೂದೆ ಕಾರಣವಾಗಿತ್ತು.

    ಟಿಡಿಪಿ ಮುಖ್ಯಸ್ಥ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಅಮರಾವತಿ ರಾಜಧಾನಿ ಮಾಡಲು ಮುಂದಾಗಿದ್ದರು. ಅಷ್ಟೇ ಅಲ್ಲದೇ ವಿಶ್ವದ ನಗರಗಳ ಪೈಕಿ ಅಮರಾವತಿಯೂ ಸೇರಲು ಜಗತ್ತಿನ ನಾನಾ ಕಂಪನಿಗಳಿಂದ ನಗರ ವಿನ್ಯಾಸದ ಕಲ್ಪನೆಯನ್ನು ಕೇಳಿದ್ದರು. ಈಗ ಈ ಎಲ್ಲ ಯೋಜನೆಗಳಿಗೆ ಜಗನ್‌ ಪೂರ್ಣ ವಿರಾಮ ಹಾಕಿದ್ದಾರೆ.

    ಈ ಕಾಯ್ದೆಯಿಂದ ಇನ್ನು ಮುಂದೆ ಆಂಧ್ರ ಪ್ರದೇಶದ ವಾಣಿಜ್ಯ ರಾಜಧಾನಿಯಾಗಿರುವ ವಿಶಾಖಪಟ್ಟಣ ಆಡಳಿತಾತ್ಮಕ ರಾಜಧಾನಿಯಾಗಲಿದೆ. ಅಮರಾವತಿ ಶಾಸನ ರಾಜಧಾನಿಯಾಗಿಯೇ ಮುಂದುವರಿಯಲಿದ್ದು, ನ್ಯಾಯ ರಾಜಧಾನಿಯಾಗಿ ಕರ್ನೂಲಿನಲ್ಲಿ ಹೈಕೋರ್ಟ್ ನಿರ್ಮಾಣವಾಗಲಿದೆ.

  • ಸೆಪ್ಟೆಂಬರ್ 5ಕ್ಕೆ ಶಾಲೆ ತೆರೆಯಲು ಆಂಧ್ರ ಸರ್ಕಾರ ಪ್ಲಾನ್

    ಸೆಪ್ಟೆಂಬರ್ 5ಕ್ಕೆ ಶಾಲೆ ತೆರೆಯಲು ಆಂಧ್ರ ಸರ್ಕಾರ ಪ್ಲಾನ್

    ಹೈದರಾಬಾದ್: ಆಂಧ್ರ ಪ್ರದೇಶ ಸರ್ಕಾರ ಸೆಪ್ಟೆಂಬರ್ 5ಕ್ಕೆ ಶಾಲೆಗಳ ಬಾಗಿಲು ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೊರೊನಾ ಅಂಕಿ ಸಂಖ್ಯೆಗಳ ಅನುಗುಣವಾಗಿ ಮುಂದಿನ ದಿನಗಳಲ್ಲಿ ಈ ಸಂಬಂಧ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆಂಧ್ರ ಸರ್ಕಾರ ತಿಳಿಸಿದೆ.

    ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಜೊತೆಗಿನ ಸಭೆ ಬಳಿಕ ಮಾಧ್ಯಮಗಳ ಜೊತ ಮಾತನಾಡಿದ ಶಿಕ್ಷಣ ಸಚಿವ ಆದಿಮುಲಪು ಸುರೇಶ್, ಸೆಪ್ಟೆಂಬರ್ 5ಕ್ಕೆ ಶಾಲೆ ಆರಂಭಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಆದ್ರೆ ಅಂತಿಮ ನಿರ್ಧಾರ ಅಂದಿನ ಸ್ಥಿತಿಗತಿಗಳ ಮೇಲೆಯೇ ನಿರ್ಧಾರವಾಗಲಿದೆ. ಶಾಲೆ ಆರಂಭವಾಗವರೆಗೂ ಮಕ್ಕಳ ಮನೆಗಳಿಗೆ ಅವರ ಪಡಿತರವನ್ನು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ರು.

    ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ (ಎಲ್‍ಕೆಜಿ ಮತ್ತು ಯುಕೆಜಿ) ತರಗತಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಆರಂಭಿಸಲಾಗುವುದು. ಸ್ಪರ್ಧಾತ್ಮಕ ಪರೀಕಗ್ಷೆಗಳ ತರಬೇತಿಯನ್ನು ಸಹ ಸರ್ಕಾರದಿಂದ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

  • ಆ.5ರವರೆಗೂ ತಿರುಪತಿ ಲಾಕ್‍ಡೌನ್- ತಿಮ್ಮಪ್ಪನ ದರ್ಶನಕ್ಕೆ ಅಡ್ಡಿ ಇಲ್ಲ ಎಂದ ಜಿಲ್ಲಾಡಳಿತ

    ಆ.5ರವರೆಗೂ ತಿರುಪತಿ ಲಾಕ್‍ಡೌನ್- ತಿಮ್ಮಪ್ಪನ ದರ್ಶನಕ್ಕೆ ಅಡ್ಡಿ ಇಲ್ಲ ಎಂದ ಜಿಲ್ಲಾಡಳಿತ

    ತಿರುಪತಿ: ಕೊರೊನಾ ಸೋಂಕಿತರ ಸಂಖ್ಯೆ ತೀವ್ರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯನ್ನು ಆಗಸ್ಟ್ 5ರವರೆಗೂ ಲಾಕ್‍ಡೌನ್ ಮಾಡುತ್ತಿರುವುದಾಗಿ ಸ್ಥಳೀಯ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

    ಲಾಕ್‍ಡೌನ್ ಜಾರಿಯಾದರೂ ತಿರುಮಲ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈಗಾಗಲೇ ಭಕ್ತರು ಬೇರೆ ಬೇರೆ ಸ್ಥಳಗಳಿಂದ ತಮ್ಮ ಸ್ವತಃ ವಾಹನದಲ್ಲಿ ಹೊರಟಿರುವ ಸಾಧ್ಯತೆ ಇದೆ. ಇಂತಹವರಿಗೆ ಸಮಸ್ಯೆಯಾಗದಂತೆ ಅವರಿಗೆ ತಿರುಪತಿಗೆ ಪ್ರವೇಶ ನೀಡದೆ ಬೈ-ಪಾಸ್ ರಸ್ತೆ ಮೂಲಕ ನೇರ ತಿರುಮಲಕ್ಕೆ ತೆರಳಲು ಅವಕಾಶ ನೀಡಲಾಗುವುದು ಎಂದು ಚಿತ್ತೂರು ಜಿಲ್ಲಾಧಿಕಾರಿ ನಾರಾಯಣ ಭರತ್ ಗುಪ್ತಾ ಹೇಳಿದ್ದಾರೆ.

    ಜೂನ್ 1 ಆನ್‍ಲಾಕ್ ಬಳಿಕ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಪರಿಣಾಮ ಜಿಲ್ಲಾಡಳಿತ ಸಭೆ ನಡೆಸಿ ಕಟ್ಟು ನಿಟ್ಟಿನ ಲಾಕ್‍ಡೌನ್ ಕ್ರಮಕ್ಕೆ ಮುಂದಾಗಿದೆ. ಉಳಿದಂತೆ ಲಾಕ್‍ಡೌನ್ ದಿನಗಳಲ್ಲಿ ಬೆಳಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ನೀಡಲಾಗಿದೆ. ಯಾವುದೇ ಕಮರ್ಷಿಯಲ್ ವ್ಯವಹಾರಕ್ಕೆ ಅನುಮತಿ ನೀಡುವುದಿಲ್ಲ. ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಮಾಹಿತಿ ಅನ್ವಯ ಜಿಲ್ಲೆಯಲ್ಲಿ 5,400 ಪ್ರಕರಣಗಳು ಇದುವರೆಗೂ ದೃಢ ಆಗಿದೆ. 1,700 ಪ್ರಕರಣಗಳು ತಿರುಪತಿ ನಗರವೊಂದರಲ್ಲೇ ಕಂಡು ಬಂದಿದೆ. ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಲಾಕ್‍ಡೌನ್ ಜಾರಿ ಮಾಡಲು ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

    ಕೊರೊನಾ ಆತಂಕದ ನಡುವೆಯೂ ತಿರುಮಲದಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದುವರೆಗೂ 140 ಮಂದಿ ಟಿಟಿಡಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಉಳಿದಂತೆ ಲಡ್ಡು ಮಾಡುವ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 14 ಮಂದಿ ಸಹಾಯಕ ಅರ್ಚಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 140 ಮಂದಿ ಸೋಂಕಿತರಲ್ಲಿ ಇದುವರೆಗೂ ಕೊರೊನಾಗೆ ಚಿಕಿತ್ಸೆ ಪಡೆದುಕೊಂಡು 70 ಮಂದಿ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿದಿನ ಸುಮಾರು 12 ಸಾವಿರ ಮಂದಿ ದೇವರ ದರ್ಶನ ಪಡೆಯುತ್ತಿದ್ದಾರೆ.

  • ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ಕೊರೊನಾಗೆ ಬಲಿ

    ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ಕೊರೊನಾಗೆ ಬಲಿ

    ಹೈದರಾಬಾದ್: ದೇಶದ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ಶ್ರೀನಿವಾಸ ದೀಕ್ಷಿತಲು ಅವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

    73 ವರ್ಷದ ದೀಕ್ಷಿತಲು ಅವರನ್ನು ಅನಾರೋಗ್ಯದ ಸಮಸ್ಯೆಯಿಂದ ಗುರುವಾರ ತಿರುಪತಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜು.19ರ ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ದೀಕ್ಷಿತಲು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಸಂದರ್ಭದಲ್ಲಿ ಕೊರೊನಾ ಟೆಸ್ಟ್ ಮಾಡಲಾಗಿದ್ದು, ವರದಿ ಪಾಸಿಟಿವ್ ಎಂದು ದೃಢಪಟ್ಟಿತ್ತು.

    ಕೊರೊನಾ ಆತಂಕದ ನಡುವೆಯೂ ತಿರುಮಲ ತಿರುಪತಿಯಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದುವರೆಗೂ 140 ಮಂದಿ ಟಿಟಿಡಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಉಳಿದಂತೆ ಲಡ್ಡು ಮಾಡುವ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 14 ಮಂದಿ ಸಹಾಯಕ ಅರ್ಚಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 140 ಮಂದಿ ಸೋಂಕಿತರಲ್ಲಿ ಇದುವರೆಗೂ ಕೊರೊನಾಗೆ ಚಿಕಿತ್ಸೆ ಪಡೆದುಕೊಂಡು 70 ಮಂದಿ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಟಿಟಿಡಿ ಭಕ್ತರಿಗೆ ದರ್ಶನ ವ್ಯವಸ್ಥೆಯನ್ನು ಮುಂದುವರಿಸಿದ್ದು, ಪ್ರತಿದಿನ ಸುಮಾರು 12 ಸಾವಿರ ಮಂದಿ ದೇವರ ದರ್ಶನ ಪಡೆಯುತ್ತಿದ್ದಾರೆ. ಉಳಿದಂತೆ ಸಾವಿಗೂ ಮುನ್ನ ಸಾಮಾಜಿಕ ಜಾಲತಾಣದ ಮೂಲಕ ಆಂಧ್ರ ಪ್ರದೇಶ ಸಿಎಂ ಜಗನ ಮೋಹನ್ ರೆಡ್ಡಿ ಅವರನ್ನು ಪ್ರಶ್ನಿಸಿದ್ದ ಅರ್ಚಕರು, ತಿರುಮಲದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಸಂಖ್ಯೆ ಹೆಚ್ಚಳ ಕುರಿತು ಪ್ರಶ್ನಿಸಿ ದೇವರ ದರ್ಶನ ಬಂದ್ ಮಾಡಬೇಕು ಎಂದು ಹೇಳಿದ್ದರು. ಅಲ್ಲದೇ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿದ್ದರು.

  • ಕೊರೊನಾ ಎಫೆಕ್ಟ್: ಶಾಲೆಗೆ ರಜೆ- ಮದ್ಯ ಮಾರಾಟಕ್ಕಿಳಿದ ವಿದ್ಯಾರ್ಥಿಗಳು!

    ಕೊರೊನಾ ಎಫೆಕ್ಟ್: ಶಾಲೆಗೆ ರಜೆ- ಮದ್ಯ ಮಾರಾಟಕ್ಕಿಳಿದ ವಿದ್ಯಾರ್ಥಿಗಳು!

    -ಕರ್ನಾಟಕ, ಆಂಧ್ರ ಗಡಿಭಾಗಗಳಲ್ಲಿ ಬಾರ್‌ಗಳಾದ ಗುಡಿಸಲು..!
    -ರೈತರ ತೋಟಗಳೇ ರೆಸ್ಟೋರೆಂಟ್‍ಗಳು..!

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಹಾಗೂ ಗೌರಿಬಿದನೂರು ಗಡಿಭಾಗದ ಹಳ್ಳಿಗಳಲ್ಲಿ ಕೊರೊನಾದ ನಡುವೆಯೂ ಅಕ್ರಮ ಮದ್ಯ ಮಾರಾಟ ಬಲು ಜೋರಾಗಿ ಸಾಗುತ್ತಿದೆ. ಅದರಲ್ಲೂ ಕೊರೊನಾದಿಂದ ಶಾಲೆಗಳಿಗೆ ರಜೆ ಸಿಕ್ಕಿರುವುದರಿಂದ ಅಪ್ರಾಪ್ತ ವಯಸ್ಕಿನ ವಿದ್ಯಾರ್ಥಿಗಳೇ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.

    ವಿಶ್ವವೇ ಕೊರೊನಾ ಸೋಂಕಿನ ಆತಂಕದಿಂದ ನಡುಗಿ-ನಲುಗಿ ಹೋಗುತ್ತಿದೆ. ಅದರಲ್ಲೂ ಬೆಂಗಳೂರು ಮಹಾನಗರವನ್ನು ಮತ್ತೆ ಲಾಕ್ ಡೌನ್ ಮಾಡೋ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಗ್ರಾಮೀಣ ಭಾಗಗಳಿಗೂ ಕೊರೊನಾ ಕಾಲಿಟ್ಟಿದ್ದು, ದಿನೇ ದಿನೇ ಹಳ್ಳಿಗಳಿಗೂ ಕೊರೊನಾ ವ್ಯಾಪಿಸುತ್ತಿದ್ದು ಜನ ಬೆಚ್ಚಿಬೀಳುವಂತೆ ಮಾಡುತ್ತಿದೆ. ಇದರ ನಡುವೆ ಮಕ್ಕಳಿಗೆ ಶಾಲೆ ತೆರೆದಿಲ್ಲ.

    ಕೋವಿಡ್‍ನಿಂದಾಗಿ ಯಾವುದೇ ಆರ್ಥಿಕ ವಹಿವಾಟುಗಳ ವ್ಯಾಪಾರವೂ ಅಷ್ಟಕ್ಕಷ್ಟೇ. ಆದರೆ ಜಿಲ್ಲೆಯಲ್ಲಿ ಮದ್ಯ ಮಾರಾಟ ಮಾತ್ರ ಜೋರಾಗಿ ಸಾಗಿದೆ. ಇಡೀ ದೇಶವೇ ಲಾಕ್‍ಡೌನ್ ಮಾಡಿ ಸಂದರ್ಭದಲ್ಲಿ ಮದ್ಯದಂಗಡಿಗಳು ಕೂಡ ಬಂದ್ ಆಗಿದ್ದವು. ಆದ್ರೆ ಈಗ ಎಲ್ಲಾ ಮದ್ಯದಂಗಡಿಗಳ ಬಾಗಿಲು ತೆರೆದಿದೆ. ಮದ್ಯಪ್ರಿಯರಿಗೆ ಯಾವುದೇ ಅಡ್ಡಿ ಇಲ್ಲ. ಈ ನಡುವೆ ಜಿಲ್ಲೆಯ ಬಾಗೇಪಲ್ಲಿ ಹಾಗೂ ಗೌರಿಬಿದನೂರು ಗಡಿಭಾಗದ ಹಳ್ಳಿಗಳಲ್ಲಿ ಕೊರೊನಾದ ನಡುವೆಯೂ ಆಕ್ರಮ ಮದ್ಯ ಮಾರಾಟ ಬಲು ಜೋರಾಗಿ ಸಾಗುತ್ತಿದೆ.

    ಕರ್ನಾಟಕ-ಆಂಧ್ರ ಗಡಿಭಾಗದ ಹಳ್ಳಿಗಳಲ್ಲಿ ಅಕ್ರಮ ಮದ್ಯದಂಗಡಿಗಳು ತಲೆ ಎತ್ತಿದ್ದು, ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಸಲಾಗುತ್ತಿದೆ. ರೈತರ ತೋಟ, ಹೊಲಗಳಲ್ಲೇ ತಾತ್ಕಾಲಿಕ ಗುಡಿಸಲುಗಳು, ಶೆಡ್‍ಗಳನ್ನು ನಿರ್ಮಾಣ ಮಾಡಿಕೊಂಡು ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ನೆರೆಯ ಆಂಧ್ರಪ್ರದೇಶದಲ್ಲಿದ್ದ ಮದ್ಯದಂಗಡಿಗಳನ್ನ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಅಲ್ಲದೇ ಮದ್ಯದ ದರವನ್ನು ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. ಪರಿಣಾಮ ಆಂಧ್ರದಿಂದ ಕರ್ನಾಟಕಕ್ಕೆ ಮದ್ಯಪ್ರಿಯರು ಲಗ್ಗೆ ಇಡುತ್ತಿದ್ದಾರೆ.

    ಇದನ್ನೇ ಅವಕಾಶ ಮಾಡಿಕೊಂಡು ಗಡಿಭಾಗದಲ್ಲಿನ ಗ್ರಾಮದ ಕೆಲವರು ತಮ್ಮ ಹೊಲ ಜಮೀನುಗಳಲ್ಲೇ ತಾತ್ಕಾಲಿಕ ಶೆಡ್, ಗುಡಿಸಲು, ನಿರ್ಮಾಣ ಮಾಡಿ ಮದ್ಯ ಮಾರಾಟಕ್ಕಿಳಿದಿದ್ದಾರೆ. ಅದರಲ್ಲೂ ಬೆಂಗಳೂರಿನಿಂದ ಕೆಲಸ ಇಲ್ಲದೆ ವಾಪಸ್ಸು ಬಂದ ಯುವಕರು ಬೈಕ್‍ನಲ್ಲಿ ಮದ್ಯ ಇಟ್ಟುಕೊಂಡು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದಾರೆ. ಶಾಲೆಗೆ ರಜೆ ಇರುವುದರಿಂದ ಅಪ್ರಾಪ್ತ ವಯಸ್ಕಿನ ಮಕ್ಕಳು ಮದ್ಯ ಮಾರಾಟ ಮಾಡುತ್ತಿದ್ದಾರೆ. ಮನೆಯಲ್ಲಿ ಆಡುಗೆ ಕಾಯಕ, ತೋಟದಲ್ಲಿ ಕೆಲಸ ಮಾಡೋ ಮಹಿಳೆಯರು ಕೂಡ ಮದ್ಯ ಮಾರಾಟಕ್ಕಿಳಿದ್ದಾರೆ.

    ಗೌರಿಬಿದನೂರಿನ ಹುಣೇಸನಹಳ್ಳಿಗೂ ಸಹ ಮದ್ಯಕ್ಕಾಗಿ ಆಂಧ್ರದವರು ಆಗಮಿಸುತ್ತಿದ್ದ ಕಾರಣ ಗ್ರಾಮದ ಹಲವರು ಇದನ್ನು ವಿರೋಧಿಸಿದ್ದರು. ಇದಾದ ಬಳಿಕ ಈಗ ಬಾಗೇಪಲ್ಲಿ ತಾಲೂಕಿನ ಆಂಧ್ರದ ಗಡಿಭಾಗದ ಮುಮ್ಮಡಿವಾರಪಲ್ಲಿ, ನೇಸೆವಾರಪಲ್ಲಿ, ಕೋತ್ತಕೋಟೆ, ಗೊರ್ತಪಲ್ಲಿ, ಡಿ ಕೊತ್ತಪಲ್ಲಿ ಸೇರಿದಂತೆ ಹಲವು ಗಡಿ ಗ್ರಾಮಗಳಲ್ಲಿ ಇದೇ ರೀತಿಯ ಅಕ್ರಮ ಮದ್ಯ ಮಾರಾಟ ಸಾಗುತ್ತಿದೆ.

    ಮತ್ತೊಂದೆಡೆ ಆಂಧ್ರದಲ್ಲೂ ಕೊರೊನಾ ಪ್ರಕರಣಗಳು ಜಾಸ್ತಿಯಾಗಿದ್ದು, ರಾಜಾರೋಷವಾಗಿ ಮದ್ಯಕ್ಕಾಗಿ ಹಲವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಪರಿಣಾಮ ಕೊರೊನಾ ಸೋಂಕು ಆತಂಕವೂ ಕೆಲ ಪ್ರಜ್ಞಾವಂತ ಗ್ರಾಮಸ್ಥರದ್ದಾಗಿದೆ. ಉಳಿದಂತೆ ಕರ್ನಾಟಕದ ಮದ್ಯ ಅಕ್ರಮಮವಾಗಿ ಆಂಧ್ರ ಸೇರುತ್ತಿದ್ದು, ಇತ್ತೀಚೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಆಂಧ್ರದ ಅಬಕಾರಿ ಇಲಾಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಮದ್ಯ ಸರಬರಾಜು ಆಗಿರೋದು ಕರ್ನಾಟಕದ ಗಡಿಭಾಗದ ಬಾಗೇಪಲ್ಲಿಯ ಬಾರ್ ಗಳಿಂದಲೇ ಆಗಿದ್ದು, ಎಲ್ಲ ಬಾರ್, ವೈನ್ ಶಾಪ್ ಗಳು ರಾಜಕಾರಣಿಗಳದ್ದೇ ಎಂಬ ಮಾಹಿತಿ ಲಭಿಸಿದೆ.

    ದೊಡ್ಡ ದೊಡ್ಡ ರಾಜಕಾರಣಿಗಳು, ಜನಪ್ರತಿನಿಧಿಗಳೇ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಆಂಧ್ರ ಸರ್ಕಾರ ನಿರ್ಣಯದಿಂದ ಮದ್ಯ ದರವನ್ನು ಮೂರು ಪಟ್ಟು ಜಾಸ್ತಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಉತ್ತಮ ಶಿಕ್ಷಣ ಪಡೆಯಬೇಕಿದ್ದ ವಿದ್ಯಾರ್ಥಿಗಳು ಸಹ ಮದ್ಯ ಮಾರಾಟಕ್ಕಿಳಿತಿರೋದು ದುರಂತ ಸಂಗತಿಯಾಗಿದ್ದು, ಜಿಲ್ಲೆಯ ಅಬಕಾರಿ ಇಲಾಖಾಧಿಕಾರಿಗಳು ಎಚ್ಚೆತ್ತುಕೊಳ್ಳ ಬೇಕಿದೆ.

  • ಮಾಸ್ಕ್ ಧರಿಸಿ ಎಂದಿದ್ದೇ ತಪ್ಪಾಯ್ತು- ರಾಡ್‍ನಿಂದ ಮಹಿಳೆ ಮೇಲೆ ಹಲ್ಲೆ ನಡೆಸಿದ ಅಧಿಕಾರಿ

    ಮಾಸ್ಕ್ ಧರಿಸಿ ಎಂದಿದ್ದೇ ತಪ್ಪಾಯ್ತು- ರಾಡ್‍ನಿಂದ ಮಹಿಳೆ ಮೇಲೆ ಹಲ್ಲೆ ನಡೆಸಿದ ಅಧಿಕಾರಿ

    ಹೈದರಾಬಾದ್: ಮಾಸ್ಕ್ ಧರಿಸಿ ಎಂದು ಹೇಳಿದ ಕಾರಣಕ್ಕೆ ಮಹಿಳಾ ಸಿಬ್ಬಂದಿ ಮೇಲೆ ಸರ್ಕಾರಿ ಅಧಿಕಾರಿ ರಾಡ್‍ನಿಂದ ಹಲ್ಲೆ ನಡೆಸಿದ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಪಟ್ಟಣದಲ್ಲಿ ನಡೆದಿದೆ.

    ಪ್ರವಾಸೋದ್ಯಮ ಇಲಾಖೆ ಹಿರಿಯ ಅಧಿಕಾರಿ, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಸದ್ಯ ಪೊಲೀಸರು ಅಧಿಕಾರಿ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ. ಆರೋಪಿಯನ್ನು ಸಿ ಭಾಸ್ಕರ್ ಎಂದು ಗುರುತಿಸಲಾಗಿದ್ದು, ಆಂಧ್ರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಹೋಟೆಲ್‍ನಲ್ಲಿ ಉಪ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಮಾನ ಹಾನಿ), 355, 324 (ಶಸ್ತ್ರಾಸ್ತ್ರ ಬಳಿಸಿ ಗಾಯಗೊಳಿಸುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.

    ಮಂಗಳವಾರ ಘಟನೆ ನಡೆದಿದ್ದು, ಕೋವಿಡ್-19 ನಿಯಮಗಳ ಪಾಲನೆ ಮಾಡಲು ಅಧಿಕಾರಿಗೆ ಮಾಸ್ಕ್ ಧರಿಸುವಂತೆ ಮಹಿಳೆ ಹೇಳಿದ್ದರು. ಇಷ್ಟಕ್ಕೇ ಆಕ್ರೋಶಗೊಂಡ ಅಧಿಕಾರಿ ನೇರ ಹೋಟೆಲ್ ಒಳಗೆ ತೆರಳಿ ಮಹಿಳೆಯ ಮೇಲೆ ನಡೆಸಿ ನಿಂಧಿಸಿದ್ದಾನೆ. ಅಲ್ಲದೇ ಸ್ಥಳದಲ್ಲೇ ಇದ್ದ ರಾಡ್‍ನಿಂದ ಮಾರಣಾಂತಿಕ ದಾಳಿಯನ್ನು ನಡೆಸಿದ್ದಾನೆ. ಘಟನೆಯ ಪೂರ್ಣ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕರು ಅಧಿಕಾರಿಯ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

    ಘಟನೆಯಲ್ಲಿ ಗಾಯಗೊಂಡಿರುವ 43 ವರ್ಷದ ಮಹಿಳೆ ಕೂರ ಪ್ರವಾಸೋದ್ಯಮ ಇಲಾಖೆಯ ಹೋಟೆಲ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿ ಭಾಸ್ಕರ್ ಮಾಸ್ಕ್ ಧರಿಸದೆ ಸಿಬ್ಬಂದಿಯೊಂದಿಗೆ ಮಾತನಾಡುತ್ತಿದ್ದ ವೇಳೆ ಮಹಿಳೆ ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದರು ಎಂಬ ಮಾಹಿತಿ ಲಭಿಸಿದೆ.

    ಘಟನೆ ಕುರಿತು ಆಂಧ್ರ ಪ್ರದೇಶ ಡಿಸಿಪಿ ಗೌತಮ್ ಸ್ವಾಂಗ್ ಅವರು ದಿಶಾ ಪೊಲೀಸ್ ಠಾಣಾ ಪೊಲೀಸರಿಗೆ ನಿರ್ದೇಶನ ನೀಡಿದ್ದು, ಪ್ರರಕಣ ತನಿಖೆ ನಡೆಸಿ ಒಂದು ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಸೂಚನೆ ನೀಡಿದ್ದಾರೆ. ಮಹಿಳೆಯ ಮೇಲಿನ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ನೆಲ್ಲೂರು ಘಟನೆಯನ್ನು ಖಂಡಿಸುತ್ತೇವೆ. ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಆರೋಪಿ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

  • ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಮಹಾಮಾರಿ ಕೊರೊನಾಗೆ ಇಂದು ಎಂಟು ಬಲಿ!

    ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಮಹಾಮಾರಿ ಕೊರೊನಾಗೆ ಇಂದು ಎಂಟು ಬಲಿ!

    ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ದಿನ ಮಹಾಮಾರಿ ಕೊರೊನಾ ಸೋಂಕಿಗೆ ಎಂಟು ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 22ಕ್ಕೇರಿಯಾಗಿದೆ.

    ನೆರೆಯ ಆಂಧ್ರಪ್ರದೇಶ ಮೂಲದ ಕರ್ನೂಲ್ ಜಿಲ್ಲೆಯ ಆದೋನಿಯ 52 ವರ್ಷದ ಮಹಿಳೆ, ಕೊಪ್ಪಳ ಜಿಲ್ಲೆಯ ರಂಗಾಪುರ ಕ್ಯಾಂಪಿನ 43 ವರ್ಷದ ಪುರುಷ, ಹೊಸಪೇಟೆ ತಾಲೂಕಿನ ಧರ್ಮಸಾಗರದ 56 ವರ್ಷ ವಯೋಮಾನದ ಪುರುಷ, ಹೊಸಪೇಟೆಯ ಆಜಾದ ನಗರದ 66 ವರ್ಷದ ಪುರುಷ ಸೇರಿದಂತೆ ಇಂದು ಎಂಟು ಮಂದಿ ಸಾವನ್ನಪ್ಪಿದ್ದಾರೆಂದು ಡಿಸಿ ನಕುಲ್ ತಿಳಿಸಿದ್ದಾರೆ.

    ತೀವ್ರ ಉಸಿರಾಟದ ತೊಂದರೆ, ಜ್ವರ ಮತ್ತು ಕೆಮ್ಮು- ನೆಗಡಿಯಿಂದ ಬಳಲುತ್ತಿದ್ದ ಎಂಟು ಮಂದಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಸೋಂಕಿರುವುದು ದೃಢ ಪಟ್ಟಿತ್ತು. ಎಸ್‍ಒಪಿ ಅನ್ವಯ ಮೃತ ಎಂಟು ಮಂದಿಯ ಅಂತ್ಯಕ್ರಿಯೆಯನ್ನು ನಡೆಸಲಾಗುದೆಂದು ವಿವರಿಸಿದರು.