Tag: Andhra Pradesh

  • ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ, ಮನವಿ ಮಾಡ್ಕೊಂಡ ಮುಸ್ಲಿಂ ಮಹಿಳೆ

    ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ, ಮನವಿ ಮಾಡ್ಕೊಂಡ ಮುಸ್ಲಿಂ ಮಹಿಳೆ

    ಹೈದರಾಬಾದ್: ಮುಸ್ಲಿಂ ಮಹಿಳೆಯೊಬ್ಬರು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ತಾಹೇರಾ ಟ್ರಸ್ಟ್‍ನ ಸಂಘಟಕರಾಗಿರುವ ಜಹರಾ ಬೇಗಂ, ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದ ಇತರರಿಗೂ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಮಾಡಬೇಕಾಗಿ ಮನವಿ ಮಾಡಿದ್ದಾರೆ.

    ಮುಸ್ಲಿಮರು ಸೇರಿದಂತೆ ಇತರ ಎಲ್ಲಾ ಧರ್ಮದವರು, ವಿನಾಯಕ ಚತುರ್ಥಿ, ದಸರಾ, ರಾಮ ನವಮಿ ಹಬ್ಬದ ಪೂಜೆಗಳಿಗೆ ಹೇಗೆ ಹಿಂದೂ ಸಹೋದರ-ಸಹೋದರಿಯರಿಗೆ ಧನ ಸಹಾಯ ಮಾಡುತ್ತಿವೋ ಅದೇ ಮಾದರಿ ಶ್ರೀ ರಾಮ ದೇವಾಲಯ ನಿರ್ಮಾಣಕ್ಕೆ ಕೂಡ ದೇಣಿಗೆ ನೀಡೋಣ ಎಂದು ಕರೆ ನೀಡಿದ್ದಾರೆ. ಇದು ಭಾರತದ ಸಂಸ್ಕøತಿ, ಸಂಪ್ರದಾಯ ಮತ್ತು ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ತೋರಿಸುತ್ತಿದೆ.

    ನಿಧಿ ಸಂಗ್ರಹಣಾ ಕಾರ್ಯಕ್ರಮದ ಸಂದರ್ಭದಲ್ಲಿ ಜಹರಾ ಬೇಗಂ, ನಿಧಿ ಸಂಗ್ರಹದ ಮೂಲಕ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಸಹಾಯ ಮಾಡಬೇಕೆಂದು ಮುಸ್ಲಿಂ ಸಮುದಾಯದವರಿಗೆ ಮನವಿ ಮಾಡಿದರು. ಅಲ್ಲದೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಬಹುದು. ಅದು ಹತ್ತು ರೂಪಾಯಿಯಂತಹ ಸಣ್ಣ ಮೊತ್ತ ಆಗಿದ್ದರೂ ಸಹ ನೀಡಬಹುದು ಎಂದು ತಿಳಿಸಿದರು.

    ಕಳೆದ ಹತ್ತು ವರ್ಷಗಳಿಂದ ಹಳ್ಳಿಗಳಲ್ಲಿ ಕೆಲಸ ಮಾಡುವ ವೇಳೆ ಹಲವಾರು ಹಿಂದೂಗಳು ಮಸೀದಿ ನಿರ್ಮಾಣಕ್ಕೆ, ಈದ್ಗಾ ಮತ್ತು ಮುಸ್ಲಿಂ ಸಮುದಾಯದ ಸ್ಮಶಾನ ನಿರ್ಮಾಕ್ಕಾಗಿ ತಮ್ಮ ಭೂಮಿಗಳನ್ನು ದಾನ ಮಾಡಿರುವುದನ್ನು ನೋಡಿದ್ದೇನೆ. ಮುಸ್ಲಿಮೇತರರು ಕೂಡ ತಮ್ಮ ಇಚ್ಛೆ ಪ್ರಕಾರ ಹೆಚ್ಚಿನ ಪ್ರಮಾಣದ ಕೃಷಿ ಭೂಮಿಯನ್ನು ಮುಸ್ಲಿಮರಿಗೆ ದಾನ ಮಾಡಿದ್ದಾರೆ. ಜೊತೆಗೆ ಮಸೀದಿ, ಈದ್ಗಾ, ಸ್ಮಶಾನ ನಿರ್ಮಾಣಕ್ಕೆ ಧನ ಸಹಾಯವನ್ನು ಕೂಡ ಮಾಡಿದ್ದಾರೆ ಎಂದು ಹೇಳಿದರು.

  • ಓವರ್ ಡೋಸ್ ನಿದ್ರೆ ಮಾತ್ರೆ ಸೇವಿಸಿ 7 ವರ್ಷದ ಮಗನೊಂದಿಗೆ ಪ್ರಾಣಬಿಟ್ಟ ವೈದ್ಯೆ

    ಓವರ್ ಡೋಸ್ ನಿದ್ರೆ ಮಾತ್ರೆ ಸೇವಿಸಿ 7 ವರ್ಷದ ಮಗನೊಂದಿಗೆ ಪ್ರಾಣಬಿಟ್ಟ ವೈದ್ಯೆ

    ಹೈದರಾಬಾದ್: ಓವರ್ ಡೋಸ್ ನಿದ್ರೆ ಮಾತ್ರೆಯನ್ನು ಸೇವಿಸಿದ ಪರಿಣಾಮ ಚರ್ಮರೋಗ ತಜ್ಞೆ ಡೊಂಥಮ್‍ಸೆಟ್ಟಿ ಲಾವಣ್ಯ (33) ಮತ್ತು ಆಕೆಯ ಮಗ ನಿಶಾಂತ್(7) ಕೋಮಾ ಸ್ಥಿತಿಗೆ ಜಾರಿ ನಂತರ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ.

    ಲಾವಣ್ಯ ತೆಲಂಗಾಣದ ವೈದ್ಯರೊಬ್ಬರನ್ನು ಮದುವೆಯಾಗಿದ್ದರು. ಇತ್ತೀಚೆಗೆ ದಂಪತಿ ನಡುವೆ ವಿವಾದ ನಡೆದಿತ್ತು. ಹಾಗಾಗಿ ಮಗನನ್ನು ಕರೆದುಕೊಂಡು ರಾಜಮಂಡ್ರಿಯಲ್ಲಿರುವ ಆಕೆ ತಂದೆ ಡಾ. ಬುದ್ಧರೊಂದಿಗೆ ವಾಸವಾಗಿದ್ದಳು.

    ಘಟನೆ ಸಂಬಂಧಸಿದಂತೆ ತನಿಖೆಯಲ್ಲಿ ಇತ್ತೀಚೆಗಷ್ಟೇ ಆಕೆಗೆ ಪತಿ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾನೆ. ಪತಿ-ಪತ್ನಿ ಜಗಳ ವಿಕೋಪಕ್ಕೆ ತಿರುಗಿ ಕೋರ್ಟ್ ಮಟ್ಟಿಲೇರಿದೆ. ಹಾಗಾಗಿ ಈ ವಿಚಾರದಿಂದಾಗಿ ನೊಂದು ತನ್ನ ಮಗನೊಂದಿಗೆ ಆಕೆ ಪ್ರಾಣ ಬಿಟ್ಟಿರಬಹದು ಎಂದು ಪೋಲಿಸ್ ಮೂಲಗಳು ತಿಳಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • ಗರ್ಭಿಣಿಯನ್ನ 7 ಕಿ.ಮೀ ಜೋಳಿಗೆಯಲ್ಲಿ ಹೊತ್ತು ಸಾಗಿದ ಸ್ವಯಂ ಸೇವಕರು

    ಗರ್ಭಿಣಿಯನ್ನ 7 ಕಿ.ಮೀ ಜೋಳಿಗೆಯಲ್ಲಿ ಹೊತ್ತು ಸಾಗಿದ ಸ್ವಯಂ ಸೇವಕರು

    ಹೈದರಾಬಾದ್: ಹೆರಿಗೆ ನೋವಿನಿಂದ ಬಳಲುತ್ತಿರುವ ಗರ್ಭಿಣಿಯನ್ನು 7 ಕಿಲೋ ಮೀಟರ್ ವೆರೆಗೆ ಸ್ವಯಂ ಸೇವಕರು ಹೊತ್ತುಕೊಂಡು ಹೋಗಿ, ಅಂಬುಲೆನ್ಸ್ ಗೆ ತಲುಪಿಸಿರುವ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಬೊಂಡಪಲ್ಲಿ ಪ್ರದೇಶದಲ್ಲಿ ನಡೆದಿದೆ.

    ಬುಡಕಟ್ಟು ಸಮುದಾಯದ ತುಂಬು ಗರ್ಭಿಣಿಯೊಬ್ಬರಿಗೆ ನಿನ್ನೆ ಸಂಜೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಮಹಿಳೆಯ ಪತಿ ಕಾಮೇಶ್ 108 ಗೆ ಕರೆಮಾಡಿದ್ದಾರೆ. ಆದರೆ ಇವರು ಇರುವಲ್ಲಿಗೆ ಅಂಬುಲೆನ್ಸ್ ಬರಲು ಸರಿಯಾದ ಮಾರ್ಗ ಇರಲಿಲ್ಲ. ನಂತರ ಪಂಚಾಯತ್ ಕಾರ್ಯದರ್ಶಿ ಗಾಂಧವಪುರ ಕೃಷ್ಣ ಎಂಬವರು ತಕ್ಷಣವೇ ದ್ವಿಚಕ್ರವಾಹನವನ್ನು ಗ್ರಾಮಕ್ಕೆ ಕಳುಹಿಸಿದ್ದಾರೆ. ಆದರೆ ಮಹಿಳೆಗೆ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ.

    ಗೊಲ್ಲಪಲೆಂ ಗ್ರಾಮದಲ್ಲಿರುವ ಸ್ವಯಂ ಸೇವಕರಾದ ಶ್ರೀಹರ್ಷ ಮತ್ತು ಬಾಲಾಜಿ ಜೋಳಿಗೆಯಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಲು ಸಹಾಯ ಮಾಡಿದ್ದಾರೆ. ಈ ಇಬ್ಬರು ಸ್ವಯಂ ಸೇವಕರು ಮಹಿಳೆಯನ್ನು ಹೊತ್ತುಕೊಂಡು ಅಂಬುಲೆನ್ಸ್ ಇರುವಲ್ಲಿಗೆ ಸಾಗಿಸಿದ್ದಾರೆ. ಅಲ್ಲಿಂದ 108 ವಾಹನದಲ್ಲಿ ಕರೆದುಕೊಂಡು ಹೋಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • ಗೆಳತಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆಗೈದು ಆತ್ಮಹತ್ಯೆಗೆ ಯತ್ನ

    ಗೆಳತಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆಗೈದು ಆತ್ಮಹತ್ಯೆಗೆ ಯತ್ನ

    – ಜೀವನ್ಮರಣ ಹೋರಾಟದಲ್ಲಿ ಯುವತಿ

    ಹೈದರಾಬಾದ್: ಯುವಕನೋರ್ವ ಗೆಳತಿಯ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಇಂದು ನಡೆದಿದೆ.

    ಶ್ರೀಕಾಂತ್ ಗೆಳತಿ ಪ್ರಿಯಾಂಕ ಮೇಲೆ ಚಾಕುವಿನಿಂದ ದಾಳಿ ನಡೆಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಿಯಾಂಕ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ನಡುರಸ್ತೆಯಲ್ಲಿ ದಾಳಿ ನಡೆದಿದ್ದು, ಸ್ಥಳೀಯರು ಇಬ್ಬರನ್ನೂ ಕೆಜಿಹೆಚ್ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವತಿಯ ಕತ್ತಿನ ಭಾಗದಲ್ಲಿ ದೊಡ್ಡ ಪ್ರಮಾಣದ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾಳೆ ಎಂದು ಕೆಜಿಹೆಚ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

    ಶ್ರೀಕಾಂತ್ ಮತ್ತು ಪ್ರಿಯಾಂಕ ಪರಸ್ಪರ ಪ್ರೀತಿಸುತ್ತಿದ್ದರು ಎಂದು ವರದಿಯಾಗಿದ್ದು, ಶ್ರೀಕಾಂತ್ ನ ಈ ನಿರ್ಧಾರಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

     

  • ಬಿಟೆಕ್ ವಿದ್ಯಾರ್ಥಿನಿ ಕೊಲೆ ಪ್ರಕರಣ- ಪೊಲೀಸರ ಎದುರು ಆರೋಪಿಯ ಅಚ್ಚರಿಯ ಹೇಳಿಕೆ

    ಬಿಟೆಕ್ ವಿದ್ಯಾರ್ಥಿನಿ ಕೊಲೆ ಪ್ರಕರಣ- ಪೊಲೀಸರ ಎದುರು ಆರೋಪಿಯ ಅಚ್ಚರಿಯ ಹೇಳಿಕೆ

    – ಇಬ್ಬರಿಗೂ ವರ್ಷದ ಹಿಂದೆಯೇ ಮದುವೆಯಾಗಿತ್ತು
    – ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಫೋಟೋ

    ಹೈದರಾಬಾದ್: ಆಂಧ್ರ ಪ್ರದೇಶದ ವಿಜಯರವಾಡ ನಗರದ ಬಿಟೆಕ್ ವಿದ್ಯಾರ್ಥಿನಿ ದಿವ್ಯ ತೇಜಸ್ವಿನಿ ಕೊಲೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಲಭಿಸಿದ್ದು, ಪ್ರಕರಣದ ಆರೋಪಿ ನಾಗೇಂದ್ರ ಪೊಲೀಸರ ಎದುರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

    ದಿವ್ಯ ತೇಜಸ್ವಿನಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ನಾಗೇಂದ್ರ ಬಾಬು, ಗುಂಟೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಕೃತ್ಯದ ಕುರಿತು ಪೊಲೀಸರ ಬಳಿ ಹೇಳಿಕೆ ನೀಡಿರುವ ಆರೋಪಿ, ದಿವ್ಯ ತೇಜಸ್ವಿನಿ ಹಾಗೂ ನನಗೆ ಒಂದು ವರ್ಷದ ಹಿಂದೆಯೇ ಮದುವೆಯಾಗಿತ್ತು. ಆಕೆ ಬಲವಂತ ಮಾಡಿದ ಹಿನ್ನೆಲೆಯಲ್ಲೇ ಮದುವೆಯಾಗಿದ್ದೆವು. ಆದರೆ ಆಕೆಯ ಕುಟುಂಬಸ್ಥರು ಕಳೆದ 7 ತಿಂಗಳಿಂದ ನ್ನಿಂದ ಆಕೆಯನ್ನು ದೂರ ಮಾಡಿದ್ದರು. ಮಾತನಾಡಲು ಕೂಡ ಅವಕಾಶ ನೀಡುತ್ತಿರಲಿಲ್ಲ.

    ಮೂರು ವರ್ಷಗಳಿಂದ ನನಗೆ ದಿವ್ಯ ಪರಿಚಯ. ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಕುಟುಂಬಸ್ಥರು ನಮ್ಮ ಮದುವೆಗೆ ಒಪ್ಪಿಗೆ ಸೂಚಿಸಿದ ಕಾರಣ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ, ಇಬ್ಬರೂ ಚಾಕುವಿನಿಂದ ಕತ್ತು ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೇವು ಎಂದು ಮಾಹಿತಿ ನೀಡುವುದಾಗಿ ವರದಿಯಾಗಿದೆ.

    ಇತ್ತ ಮೃತ ವಿದ್ಯಾರ್ಥಿನಿ ಹಾಗೂ ಆರೋಪಿ ನಾಗೇಂದ್ರ ಇಬ್ಬರು ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರೂ ಪ್ರೀತಿ ಮದುವೆಯಾಗಿದ್ದರು ಎಂಬ ಚರ್ಚೆ ನಡೆಯುತ್ತಿದೆ. ಅಲ್ಲದೇ ಇಬ್ಬರ ವಾಟ್ಸಾಪ್ ಚಾಟ್ ಫೋಟೋಗಳು ಸಾಕಷ್ಟು ವೈರಲ್ ಆಗಿದೆ. ಆದರೆ ತಮ್ಮ ಮಗಳಿಗೆ ಮದುವೆಯಾಗಿಲ್ಲ, ಫೋಟೋಗಳು ಎಲ್ಲವೂ ಸುಳ್ಳು ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಗಳನ್ನು ನಿರಾಕರಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿಗುತ್ತಿರುವ ಮಾಹಿತಿಯ ಅನ್ವಯ ಎಲ್ಲಾ ಪ್ರಕಾರಗಳಲ್ಲೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಸಂಪೂರ್ಣ ತನಿಖೆ ಬಳಿಕಷ್ಟೇ ಪ್ರಕರಣದ ಸತ್ಯಾಂಶ ಬೆಳಕಿಗೆ ಬರಬೇಕಿದೆ.

  • ದಲಿತ ಯುವಕನಿಗೆ ಥಳಿಸಿದ್ದ ಆಂಧ್ರದ ನಟ ಉಡುಪಿಯಲ್ಲಿ ಅರೆಸ್ಟ್

    ದಲಿತ ಯುವಕನಿಗೆ ಥಳಿಸಿದ್ದ ಆಂಧ್ರದ ನಟ ಉಡುಪಿಯಲ್ಲಿ ಅರೆಸ್ಟ್

    ಉಡುಪಿ: ಆಂಧ್ರಪ್ರದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ದಲಿತ ಯುವಕನ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ತೆಲುಗು ಚಿತ್ರ ನಿರ್ಮಾಪಕ, ತೆಲುಗು ಬಿಗ್‍ಬಾಸ್ ಸ್ಪರ್ಧಿ ಆರೋಪಿ ನೂತನ್ ನಾಯ್ಡುನನ್ನು ಉಡುಪಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

    ಆಂಧ್ರಪ್ರದೇಶ, ವಿಶಾಖಪಟ್ಟಣ ಪೊಲೀಸರಿಂದ ಶನಿವಾರ ಬೆಳಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಪೊಲೀಸರು ಆರೋಪಿಯನ್ನು ರೈಲ್ಲೇ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮಂಗಳೂರಿನಿಂದ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.

    ಉಡುಪಿ ಮತ್ತು ಮಣಿಪಾಲ ಠಾಣೆ ಪಿಎಸ್‍ಐ ನೇತೃತ್ವದ ತಂಡ ಆರೋಪಿಯನ್ನು ಸುತ್ತುವರಿದಾಗ ತನ್ನ ಬಳಿಯಿದ್ದ ಒಂದು ಮೊಬೈಲ್ ಅನ್ನು ಎಸೆಯಲು ಮುಂದಾಗಿದ್ದಾನೆ. ಆರೋಪಿ ನೂತನ್ ಬಳಿಯಿಂದ ನಾಲ್ಕು ಮೊಬೈಲ್ ಫೋನ್‍ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಂದು ಗಂಟೆ ಬಳಿಕ ಆರೋಪಿ ನೂತನ್‍ನ್ನು ವಿಶಾಖಪಟ್ಟಣ ಪೊಲೀಸರು ವಶಕ್ಕೆ ಪಡೆದುಕೊಂಡರು. ವಿಶಾಖಪಟ್ಟಣ ಪೊಲೀಸರು ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಶಾಖಪಟ್ಟಣಕ್ಕೆ ಕರೆದೊಯ್ದಿದ್ದಾರೆ.

  • ಗಾಂಜಾ ಗಮ್ಮತ್ತಿಗೆ ಬ್ರೇಕ್ ಹಾಕಲು ಕರ್ನಾಟಕ ಆಂಧ್ರ ಗಡಿಯಲ್ಲಿ ಹದ್ದಿನ ಕಣ್ಣು

    ಗಾಂಜಾ ಗಮ್ಮತ್ತಿಗೆ ಬ್ರೇಕ್ ಹಾಕಲು ಕರ್ನಾಟಕ ಆಂಧ್ರ ಗಡಿಯಲ್ಲಿ ಹದ್ದಿನ ಕಣ್ಣು

    – ಚಿಕ್ಕಬಳ್ಳಾಪುರ ಪೊಲೀಸರಿಂದ ಗಡಿಯಲ್ಲಿ ಅಲರ್ಟ್

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಗಾಂಜಾ ಮತ್ತಿನ ಗಮ್ಮತ್ತು ಜೋರಾಗಿ ಸದ್ದು ಮಾಡುತ್ತಿರುವುದರಿಂದ ಜಿಲ್ಲೆಯ ಆಂಧ್ರ ಪ್ರದೇಶದ ಗಡಿಭಾಗಗಳಲ್ಲಿ ಪೊಲೀಸ್ ಕಣ್ಗಾವಲು ಹಾಕಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳನ್ನು ತಪಾಸಣೆ ನಡೆಸುವ ಕಾರ್ಯ ನಡೆಸುತ್ತಿದ್ದೇವೆ ಎಂದು ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್‍ಕುಮಾರ್ ಹೇಳಿದ್ದಾರೆ.

    ಇತ್ತೀಚೆಗೆ ಚಿಂತಾಮಣಿ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮನೆ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದೆ. ಘಟನೆಯಿಂದ ಎಚ್ಚೆತ್ತಿರುವ ಜಿಲ್ಲೆಯ ಪೊಲೀಸರು ಅಕ್ರಮ ಗಾಂಜಾ ಸಾಗಾಣಿಕೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ಸೂಕ್ಷ್ಮ ನಿಗಾ ವಹಿಸಿದ್ದು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಸಂಪರ್ಕಿತ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಗಳನ್ನ ಅಳವಡಿಸಿ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೇ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶದ ಅನಂತಪುರ, ಚಿತ್ತೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದು, ಗಾಂಜಾ ಸೇರಿದಂತೆ ಅಕ್ರಮ ಚಟುವಟಿಕೆಗಳ ಮೇಲೆ ಜಿಲ್ಲಾ ಪೊಲೀಸ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ ಎಂದರು. ಇದನ್ನೂ ಓದಿ: ನಂದಿಗಿರಿಧಾಮ ಲಾಕ್‍ಡೌನ್ ಮುಕ್ತಾಯ – ಸೆ.7ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ

    ಸದ್ಯ ಗಾಂಜಾ, ಶ್ರೀಗಂಧ, ರಕ್ತ ಚಂದನ ಸೇರಿದಂತೆ ಮತ್ತಿತರ ಅಕ್ರಮ ಚಟುವಟಿಕೆಗಳ ಆರೋಪಿಗಳ ಚಲನವಲನಗಳನ್ನು ಗಮನಿಸುತ್ತಿದ್ದು, ಈಗಾಗಲೇ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಗಾಂಜಾ ಪ್ರಕರಣಗಳನ್ನ ಪತ್ತೆ ಹಚ್ಚುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಕರ್ತವ್ಯ ಲೋಪ ಕಂಡು ಬಂದರೆ ಸಂಬಂಧಿಸಿದವರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

  • ಪ್ರೀತಿಸಿ ಮದ್ವೆ, ಬೇರೊಬ್ಬನ ಜೊತೆ ಪತ್ನಿ ಚಾಟಿಂಗ್- ಉಸಿರುಗಟ್ಟಿಸಿ ಕೊಂದ ಪತಿ

    ಪ್ರೀತಿಸಿ ಮದ್ವೆ, ಬೇರೊಬ್ಬನ ಜೊತೆ ಪತ್ನಿ ಚಾಟಿಂಗ್- ಉಸಿರುಗಟ್ಟಿಸಿ ಕೊಂದ ಪತಿ

    – ಹೊಟ್ಟೆ ನೋವಿನಿಂದ ಸಾವನ್ನಪ್ಪಿದ್ದಾಳೆಂದು ನಂಬಿಸಲು ಯತ್ನಿಸಿದ

    ಹೈದರಾಬಾದ್: ಪ್ರೀತಿಸಿ ಮದ್ವೆ, ಬೇರೊಬ್ಬನ ಜೊತೆ ಪತ್ನಿ ಚಾಟಿಂಗ್- ಉಸಿರುಗಟ್ಟಿಸಿ ಕೊಂದ ಪತಿ ಪ್ರೀತಿಸಿ ಮದುವೆಯಾದ ಪತ್ನಿಯ ಮೇಲೆ ಅನುಮಾನಗೊಂಡ ಪತಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

    ಪದ್ಮ (24) ಕೊಲೆಯಾದ ಪತ್ನಿ. ಆರೋಪಿ ಪತಿ ನವೀನ್ ಕುಮಾರ್ (27)ನನ್ನು ಪೊಲೀಸರು ಬಂಧಿಸಿದ್ದಾರೆ. 2015 ರಲ್ಲಿ ಇಬ್ಬರು ಪ್ರೀತಿ ಮಾಡಿ ಮದುವೆಯಾಗಿದ್ದರು. ಆರೋಪಿ ನವೀನ್ ವಿಶಾಖಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ಫಾರ್ಮಸಿ ಟ್ರೈನಿಯಾಗಿ ಕೆಲಸ ಮಾಡುತ್ತಿದ್ದ.

    ಮೃತ ಪದ್ಮ ಯಾವಾಗಲು ಬೇರೆಯವರೊಂದಿಗೆ ಮೊಬೈಲ್‍ನಲ್ಲಿ ಚಾಟ್ ಮಾಡುತ್ತಿದ್ದಳು. ಈ ಕಾರಣಕ್ಕೆ ದಂಪತಿಯ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಆದರೆ ಭಾನುವಾರ ರಾತ್ರಿ 9.30 ಸಮಯದಲ್ಲಿ ಮತ್ತೆ ದಂಪತಿ ನಡುವೆ ಜಗಳ ನಡೆದಿದ್ದು, ಈ ವೇಳೆ ಕೋಪಗೊಂಡ ನವೀನ್ ಪತ್ನಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಪಕ್ಕದ ಮನೆಯವರ ಬಳಿ ತೆರಳಿ ತನ್ನ ಪತ್ನಿ ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದ.

    ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಪತಿ ನವೀನ್‍ನನ್ನು ಅನುಮಾನದಿಂದ ವಶಕ್ಕೆ ಪಡೆದ ಪೊಲೀಸರು ಪಶ್ನಿಸಿದ ವೇಳೆ ಆರೋಪಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ ವಿಚ್ಛೇದನ ನೀಡಲು 4 ಲಕ್ಷ ರೂ. ಬೇಡಿಕೆ ಇಟ್ಟು ಜಗಳ ಮಾಡುತ್ತಿದ್ದ ಕಾರಣ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಮೃತ ಮಹಿಳೆಯ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

  • ಸಿಬಿಐ ದಾಳಿ- 3 ಕೆ.ಜಿ ಚಿನ್ನಾಭರಣ, 2 ಕೆ.ಜಿ.ಬೆಳ್ಳಿ, 1 ಕೋಟಿಗೂ ಅಧಿಕ ನಗದು ವಶ

    ಸಿಬಿಐ ದಾಳಿ- 3 ಕೆ.ಜಿ ಚಿನ್ನಾಭರಣ, 2 ಕೆ.ಜಿ.ಬೆಳ್ಳಿ, 1 ಕೋಟಿಗೂ ಅಧಿಕ ನಗದು ವಶ

    – ಬ್ಯಾನ್‍ಗೊಂಡ ಸಾವಿರ ಮುಖಬಲೆಯ ನೋಟುಗಳು ಪತ್ತೆ

    ಹೈದರಾಬಾದ್: ಆಂಧ್ರ ಪ್ರದೇಶದ ಕೈಮಗ್ಗ ಹಾಗೂ ನೇಕಾರರ ಸಹಕಾರಿ ಸಂಘದ ಮಾಜಿ ಅಧ್ಯಕ್ಷನ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನಾಭರಣ, ಹಳೆ ಸಾವಿರ ರೂ. ಮುಖಬೆಲೆಯ ನೋಟು ಸೇರಿ ನಗದು ವಶಪಡಿಸಿಕೊಂಡಿದ್ದಾರೆ.

    ಆಂಧ್ರ ಪ್ರದೇಶದ ರಾಜ್ಯ ಕೈಮಗ್ಗ ಹಾಗೂ ನೇಕಾರರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಗುಜ್ಜಲ ಶ್ರೀನಿವಾಸ ಅವರ ಮನೆ ಕಡಪ ಜಿಲ್ಲೆಯ ಖಾಜಿಪೇಟೆಯ ಮನೆಯ ಮೇಲೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

    ದಾಳಿ ವೇಳೆ ಗುಜ್ಜಲ ಶ್ರೀನಿವಾಸ ಅವರ ಮನೆಯಲ್ಲಿ 3 ಕೆ.ಜಿ.ಚಿನ್ನಾಭರಣ, 2 ಕೆ.ಜಿ.ಬೆಳ್ಳಿ, 1 ಕೋಟಿ ರೂ.ಗೂ ಅಧಿಕ ನಗದು ಹಾಗೂ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಆಶ್ಚರ್ಯವೆಂದರೆ ಅವರ ಮನೆಯಲ್ಲಿ ಸಿಕ್ಕ ಹಣದಲ್ಲಿ ಹಳೆ ನೋಟುಗಳು ಸಹ ಪತ್ತೆಯಾಗಿವೆ. ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

    ಸುಮಾರು 4 ಸಾವಿರ ಕೋಟಿ ರೂ.ಭ್ರಷ್ಟಾಚಾರ ನಡೆದಿದೆ ಎಂದು ಕೈಮಗ್ಗ ಪ್ರಾಥಮಿಕ ಸಹಕಾರ ಸಂಘಗಳ ಅಧ್ಯಕ್ಷರ ಒಕ್ಕೂಟವು ಶ್ರೀನಿವಾಸಯ್ಯ ವಿರುದ್ಧ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ಅವರಿಗೆ ದೂರು ನೀಡಿತ್ತು. ಅಲ್ಲದೆ ಭ್ರಷ್ಟಾಚಾರ ಎಲ್ಲಿ ನಡೆದಿದೆ ಎಂಬ ವಿವರಗಳನ್ನು ಸಹ ದೂರಿನಲ್ಲಿ ತಿಳಿಸಲಾಗಿತ್ತು. ವಿಜಿಲೆನ್ಸ್ ಆ್ಯಂಡ್ ಎನ್‍ಫೋರ್ಸ್‍ಮೆಂಟ್ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ನಂತರ ಸಿಬಿಐ ಅಧಿಕಾರಿಗಳು ಶ್ರೀನಿವಾಸ್ ಅವರ ಮನೆಯ ಶೋಧ ನಡೆಸಿದ್ದರು.

  • ಹೊರಗಿನಿಂದ ಕಾರ್ ಲಾಕ್- ಮಹಿಳೆ ಸೇರಿ ಮೂವರ ಸಜೀವ ದಹನ

    ಹೊರಗಿನಿಂದ ಕಾರ್ ಲಾಕ್- ಮಹಿಳೆ ಸೇರಿ ಮೂವರ ಸಜೀವ ದಹನ

    -ಕಾರ್ ಗೆ ಬೆಂಕಿ ಹಾಕಿ ಆರೋಪಿ ಪರಾರಿ
    -ಮದ್ಯದ ಬಾಟಲ್‍ನಲ್ಲಿ ಪೆಟ್ರೋಲ್ ತಂದಿದ್ದ

    ಹೈದರಾಬಾದ್: ಕಾರಿನಲ್ಲಿ ಮೂವರನ್ನು ಲಾಕ್ ಮಾಡಿ ಬೆಂಕಿ ಹಚ್ಚಿ ಮೂವರನ್ನು ಮೂವರನ್ನು ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಕಾರ್ ಧಗ ಧಗಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ವಿಜಯವಾಡದ ಪಟಮಾಟ್ ರಸ್ತೆಯ ಬದಿಯಲ್ಲಿ ಘಟನೆ ನಡೆದಿದ್ದು, ಮೂವರನ್ನು ಕಾರ್ ನಲ್ಲಿ ಲಾಕ್ ಮಾಡಿದ ವೇಣುಗೋಪಾಲ್ ರೆಡ್ಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಕಾರ್ ನಿಂದ ಹೊರ ಬರಲಾರದೇ ಮೂವರು ಸಜೀವ ದಹನವಾಗಿದ್ದಾರೆ. ಗಂಗಾಧರ ರೆಡ್ಡಿ, ನಾಗವಲ್ಲಿ ಮತ್ತು ಕೃಷ್ಣಾ ರೆಡ್ಡಿ ಮೃತ ದುರ್ದೈವಿಗಳು.

    ವೇಣುಗೋಪಾಲ್ ಮತ್ತು ಗಂಗಾಧರ್ ಇಬ್ಬರು ಜೊತೆಯಾಗಿ ವ್ಯವಹಾರ ಮಾಡಿಕೊಂಡಿದ್ದರು. ಇಬ್ಬರು ಪಾಲುದಾರಿಕೆಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಮತ್ತು ಮಾರಾಟ ಮಾಡುತ್ತಿದ್ದರು. ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರಿಂದ ಇಬ್ಬರು ಬೇರೆ ಬೇರೆಯಾಗಿದ್ದರು.

    ವೇಣುಗೋಪಾಲ್ ಹಲವು ಬಾರಿ ಗಂಗಾಧರ್ ನನ್ನ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಗಂಗಾಧರ್ ಆತನಿಂದ ಅಂತರ ಕಾಯ್ದುಕೊಂಡು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸೋಮವಾರ ಗಂಗಾಧರ್, ಪತ್ನಿ ನಾಗವಲ್ಲಿ ಮತ್ತು ಗೆಳೆಯ ಕೃಷ್ಣಾ ರೆಡ್ಡಿ ಜೊತೆ ಸೇರಿ ವೇಣುಗೋಪಾಲ್ ನನ್ನು ಭೇಟಿಯಾಗಲು ತೆರಳಿದ್ದಾರೆ. ಸಂಜೆ ಸುಮಾರು 4.45ಕ್ಕೆ ನಾಲ್ವರು ಕಾರಿನಲ್ಲಿ ಕುಳಿತು ಮಾತನಾಡಲು ಆರಂಭಿಸಿದ್ದಾರೆ. ಕೆಲ ಸಮಯದ ಬಳಿಕ ಸಿಗರೇಟ್ ಸೇದಬೇಕೆಂದು ವೇಣುಗೋಪಾಲ್ ಕಾರ್ ನಿಂದ ಹೊರಗೆ ಬಂದಿದ್ದನೆ. ಆಚೆ ಬರುತ್ತಿದ್ದಂತೆ ಕಾರ್ ಲಾಕ್ ಮಾಡಿ ಮೊದಲೇ ಮದ್ಯದ ಬಾಟಲ್ ನಲ್ಲಿ ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    ಇಬ್ಬರ ಮಧ್ಯೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿರುವ ಸಾಧ್ಯತೆಗಳಿವೆ. ಸಂಪರ್ಕಕ್ಕೆ ಸಿಗದ ಗಂಗಾಧರ್ ಸಿಕ್ಕಾಗ ವೇಣುಗೋಪಾಲ್ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ವಿಜಯವಾಡ ಡೆಪ್ಯೂಟಿ ಪೊಲೀಸ್ ಕಮೀಷನರ್ ಹರ್ಷವರ್ಧನ್ ಹೇಳಿದ್ದಾರೆ.