Tag: Andhra Pradesh

  • ಆಂಧ್ರ ಕರಾವಳಿಗೆ ಅಪ್ಪಳಿಸಿದ ಮೊಂಥಾ ಚಂಡಮಾರುತ

    ಆಂಧ್ರ ಕರಾವಳಿಗೆ ಅಪ್ಪಳಿಸಿದ ಮೊಂಥಾ ಚಂಡಮಾರುತ

    – 90-100 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಬಿರುಗಾಳಿ
    – ಮುಂದಿನ 2 ದಿನ ಆಂಧ್ರದಲ್ಲಿ ಭಾರೀ ಮಳೆ ಸಾಧ್ಯತೆ

    ಅಮರಾವತಿ: ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಮೊಂಥಾ ಚಂಡಮಾರುತ (Cyclone Montha) ರೂಪದಲ್ಲಿ ಆಂಧ್ರಪ್ರದೇಶಕ್ಕೆ (Andhra Pradesh) ಅಪ್ಪಳಿಸಿದೆ. ಕಾಕಿನಾಡ ಕರಾವಳಿಯಲ್ಲಿ ಅಬ್ಬರಿಸ್ತಿರುವ ಸೈಕ್ಲೋನ್ ವೇಗ 90-100 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ.

    ರಾತ್ರಿ ವೇಳೆಗೆ ಮೊಂಥಾ ಚಂಡಮಾರುತ ಆಂಧ್ರ ಕರಾವಳಿಯಲ್ಲಿ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಕಾಕಿನಾಡದ ಸುತ್ತಮುತ್ತಲಿನ ಭೂಕುಸಿತ ಉಂಟುಮಾಡುವ ಸಾಧ್ಯತೆಯೂ ಇದೆ. ನೆಲ್ಲೂರಿನಿಂದ ಶ್ರೀಕಾಕುಳಂವರೆಗಿನ ಆಂಧ್ರಪ್ರದೇಶದ ಕರಾವಳಿಯಲ್ಲಿ 2 ರಿಂದ 4.7 ಮೀ. ಎತ್ತರದ ಸಮುದ್ರ ಅಲೆಗಳು ಏಳಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಮೊಂಥಾ ಎಫೆಕ್ಟ್: 100ಕ್ಕೂ ಹೆಚ್ಚು ರೈಲುಗಳು, 35 ವಿಮಾನಗಳ ಹಾರಾಟ ರದ್ದು

    1,419 ಹಳ್ಳಿಗಳು ಮತ್ತು 44 ಪಟ್ಟಣಗಳಲ್ಲಿ ಮೊಂಥಾ ಪರಿಣಾಮ ಬೀರಲಿದೆ. ತಗ್ಗು ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಯುತ್ತಿದ್ದು 400ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಆಂಧ್ರ, ಒಡಿಶಾ ಕರಾವಳಿಯಲ್ಲಿ ಭಾರೀ ಮಳೆಯಾಗ್ತಿದ್ದು, ಕೆಲವೆಡೆ ಭೂಕುಸಿತವಾಗಿದೆ. ಮೊಂಥಾ ಚಂಡಮಾರುತ ಎಫೆಕ್ಟ್ ಹಿನ್ನೆಲೆ ಭಾರತೀಯ ರೈಲ್ವೆಯು 100ಕ್ಕೂ ಹೆಚ್ಚು ರೈಲುಗಳನ್ನು ಕ್ಯಾನ್ಸಲ್ ಮಾಡಿದೆ. ಆಂಧ್ರದಲ್ಲಿ 30ಕ್ಕೂ ಹೆಚ್ಚು ಫ್ಲೈಟ್‌ಗಳ ಹಾರಾಟ ಬಂದ್ ಆಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣದ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದ ಅಬ್ಬರವಿರುವ ಸಾಧ್ಯತೆಗಳಿವೆ.

  • ಮೊಂಥಾ ಎಫೆಕ್ಟ್: 100ಕ್ಕೂ ಹೆಚ್ಚು ರೈಲುಗಳು, 35 ವಿಮಾನಗಳ ಹಾರಾಟ ರದ್ದು

    ಮೊಂಥಾ ಎಫೆಕ್ಟ್: 100ಕ್ಕೂ ಹೆಚ್ಚು ರೈಲುಗಳು, 35 ವಿಮಾನಗಳ ಹಾರಾಟ ರದ್ದು

    ನವದೆಹಲಿ: ಮೊಂಥಾ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆ ಭಾರತೀಯ ರೈಲ್ವೇ 100ಕ್ಕೂ ಅಧಿಕ ರೈಲುಗಳನ್ನು ರದ್ದುಗೊಳಿಸಿದೆ. ಜೊತೆಗೆ 30ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿವೆ.

    ಚಂಡಮಾರುತದ ಮುನ್ನೆಚ್ಚರಿಕೆ ಕ್ರಮವಾಗಿ, ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಭಾರತೀಯ ರೈಲ್ವೇ 100ಕ್ಕೂ ಅಧಿಕ ರೈಲು ಸೇವೆಗಳನ್ನು ರದ್ದುಗೊಳಿಸಿದೆ. ಜೊತೆಗೆ ಹಲವಾರು ರೈಲುಗಳ ಮಾರ್ಗದಲ್ಲಿಯೂ ಬದಲಾವಣೆ ಮಾಡಿದ್ದು, ಕೆಲವು ರೈಲುಗಳ ಸಮಯವನ್ನು ಮರುನಿಗದಿಪಡಿಸಿದೆ.ಇದನ್ನೂ ಓದಿ: ಮೊಂಥಾ ಚಂಡಮಾರುತ ಎಫೆಕ್ಟ್: ಕರ್ನಾಟಕ, ಆಂಧ್ರ, ತೆಲಂಗಾಣದ ಗಡಿಜಿಲ್ಲೆಗಳಲ್ಲಿ ವರುರ್ಣಾಭಟ

    ಆಂಧ್ರಪ್ರದೇಶ ಕರಾವಳಿ ಪ್ರದೇಶಗಳಾದ ಕಾಕಿನಾಡ, ಭೀಮಾವರಂ, ವಿಜಯವಾಡ, ರಾಜಮಂಡ್ರಿ ಮತ್ತು ವಿಶಾಖಪಟ್ಟಣಂ ಕಡೆ ಭೂಕುಸಿತ ಉಂಟಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಭಾರತೀಯ ರೈಲ್ವೆ ಇಲಾಖೆಯು ರೈಲು ಸಂಚಾರವನ್ನು ರದ್ದುಗೊಳಿಸಿದೆ. ಜೊತೆಗೆ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ತೆರಳುವ ಮುನ್ನ ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್, ಐಆರ್‌ಸಿಟಿಸಿ ಮೂಲಕ ಅಪ್‌ಡೇಟ್‌ಗಳನ್ನು ತಿಳಿದುಕೊಳ್ಳಿ ಹಾಗೂ ರದ್ದಾದ ಎಲ್ಲಾ ರೈಲುಗಳ ಪೂರ್ಣ ಮರುಪಾವತಿ ನೀಡಲಾಗುವುದು ಎಂದು ತಿಳಿಸಿದೆ.

    ಇನ್ನೂ ಆಂಧ್ರದಲ್ಲಿ 30ಕ್ಕೂ ಹೆಚ್ಚು ಫ್ಲೈಟ್‌ಗಳ ಹಾರಾಟ ಬಂದ್ ಆಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಆಂಧ್ರಪ್ರದೇಶದ ಹಲವು ನಗರಗಳ ನಡುವಿನ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

    ಒಟ್ಟು 35 ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಶಂಷಾಬಾದ್‌ನಿಂದ 17 ನಿರ್ಗಮನಗಳು ಮತ್ತು ವಿಶಾಖಪಟ್ಟಣ, ವಿಜಯವಾಡ ಮತ್ತು ರಾಜಮಂಡ್ರಿಯಿಂದ 18 ಆಗಮನಗಳು ಬಂದ್ ಮಾಡಲಾಗಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದುಗೊಳಿಸಿವೆ.ಇದನ್ನೂ ಓದಿ: ಆಂಧ್ರ, ಒಡಿಶಾಕ್ಕೆ ಅಪ್ಪಳಿಸಲಿದೆ `ಮೊಂಥಾ’ ಸೈಕ್ಲೋನ್ – ಕರ್ನಾಟಕ ಸೇರಿ ತಮಿಳುನಾಡಿಗೆ ಮಳೆಯಾರ್ಭಟ

  • ಮೊಂಥಾ ಚಂಡಮಾರುತ ಎಫೆಕ್ಟ್: ಕರ್ನಾಟಕ, ಆಂಧ್ರ, ತೆಲಂಗಾಣದ ಗಡಿಜಿಲ್ಲೆಗಳಲ್ಲಿ ವರುರ್ಣಾಭಟ

    ಮೊಂಥಾ ಚಂಡಮಾರುತ ಎಫೆಕ್ಟ್: ಕರ್ನಾಟಕ, ಆಂಧ್ರ, ತೆಲಂಗಾಣದ ಗಡಿಜಿಲ್ಲೆಗಳಲ್ಲಿ ವರುರ್ಣಾಭಟ

    – ದೇಶದ ವಿವಿಧೆಡೆ ಅ.28, 29ರಂದು ಭಾರೀ ಮಳೆ
    – ಆಂಧ್ರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಮೊಂಥಾ ಚಂಡಮಾರುತದ (Montha Cyclone) ಪರಿಣಾಮ ಕರ್ನಾಟಕ, ಆಂಧ್ರ, ತೆಲಂಗಾಣದ ಗಡಿ ಜಿಲ್ಲೆಗಳಲ್ಲಿ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

    ಆಂಧ್ರಪ್ರದೇಶ ಹಾಗೂ ಒಡಿಶಾದ ಕರಾವಳಿಯತ್ತ ಚಂಡಮಾರುತ ಮುನ್ನುಗ್ಗುತ್ತಿರುವ ಹಿನ್ನೆಲೆ ದೇಶದ ವಿವಿಧೆಡೆ ಅ.28 ಹಾಗೂ ಅ.29ರಂದು ವ್ಯಾಪಕ ಮಳೆಯಾಗಲಿದೆ. ಕರ್ನಾಟಕದ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಇನ್ನೂ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಚಂಡಮಾರುತದಿಂದಾಗಿ ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ (ಅ.28) ಬೆಂಗಳೂರಿನಿಂದ ಹೊರಡಲಿರುವ ಕೆಲವು ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಇದನ್ನೂ ಓದಿ: ಆಂಧ್ರ, ಒಡಿಶಾಕ್ಕೆ ಅಪ್ಪಳಿಸಲಿದೆ `ಮೊಂಥಾ’ ಸೈಕ್ಲೋನ್ – ಕರ್ನಾಟಕ ಸೇರಿ ತಮಿಳುನಾಡಿಗೆ ಮಳೆಯಾರ್ಭಟ

    ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ (Bengaluru) ವಾತಾವರಣ ತಂಪಾಗಿದ್ದು, ಅಲ್ಲಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ನಗರದ SMVTಯಿಂದ ಹೊರಡುವ ಏಳು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಹೊರಡುವ ಸಮಯಕ್ಕಿಂತ 12 ಗಂಟೆ ತಡವಾಗಿ ಹೊರಡಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

    ಆಂಧ್ರ ಕರಾವಳಿ ತೀರ ಪ್ರದೇಶಕ್ಕೆ ಉತ್ತರ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಾ ಇಂದು ಸಂಜೆ ಅಥವಾ ರಾತ್ರಿಯ ವೇಳೆಗೆ ಆಂಧ್ರಪ್ರದೇಶದ ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣ ನಡುವೆ, ಕಾಕಿನಾಡದ ಸುತ್ತಮುತ್ತಲಿನ ಕರಾವಳಿಯನ್ನು ದಾಟಲಿದೆ. ಈ ಚಂಡಮಾರುತವು ಗಂಟೆಗೆ 90 ರಿಂದ 100 ಕಿ.ಮೀ ವೇಗದಲ್ಲಿ ಚಲಿಸುವ ಸಾಧ್ಯತೆಯಿದೆ. ಅಲ್ಲದೇ ಚಂಡಮಾರುತವು 2-4.6 ಮೀಟರ್ ಎತ್ತರದ ಅಲೆಗಳೊಂದಿಗೆ ಬಂದು ಅಪ್ಪಳಿಸಿದ್ದು, ಆಂಧ್ರದ 1,419 ಹಳ್ಳಿಗಳು ಮತ್ತು 44 ಪಟ್ಟಣಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಜೊತೆಗೆ ಆಂಧ್ರಪ್ರದೇಶ, ಒಡಿಶಾ, ಪುದುಚೇರಿ, ತಮಿಳುನಾಡು ಮತ್ತು ಛತ್ತೀಸ್‌ಗಢಗಳಲ್ಲಿ ರಾಷ್ಟ್ರೀಯ ವಿಪತ್ತು ಪಡೆಯ 22 ತಂಡಗಳನ್ನು ಸರ್ಕಾರ ನಿಯೋಜಿಸಿದೆ.

    ಈಗಾಗಲೇ ಆಂಧ್ರದ ಹಲವು ನಗರಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪರಿಸ್ಥಿತಿ ಅಸ್ತವ್ಯಸ್ಥವಾಗಿದೆ. ಆಂಧ್ರಪ್ರದೇಶದ ಅನಕಾಪಲ್ಲಿ, ಕಾಕಿನಾಡ, ಕೋನಾಸೀಮಾ, ಶ್ರೀಕಾಕುಳಂ, ನೆಲ್ಲೂರು, ವಿಶಾಖಪಟ್ಟಣಂ, ತಿರುಪತಿ, ಪಶ್ಚಿಮ ಗೋದಾವರಿಯಲ್ಲಿ ಮುಂದಿನ 10 ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ ಆಂಧ್ರಪ್ರದೇಶದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಜನರನ್ನು ನಿರಾಶ್ರಿತ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದೆ. ಇನ್ನೂ ಆಂಧ್ರಪ್ರದೇಶದ ಪೂರ್ವ ಕರಾವಳಿಯಲ್ಲಿ ಸಂಚರಿಸುವ 65 ರೈಲುಗಳ ಓಡಾಟ ಸ್ಥಗಿತಗೊಂಡಿದೆ.

    ಮೊಂಥಾ ಚಂಡಮಾರುತದ ಹಿನ್ನೆಲೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರು ತಡರಾತ್ರಿ ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ವೀಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆ ನಡೆಸಿದ್ದು, ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜನರಿಗೆ ಸ್ಪಂದಿಸಲು ಜಿಲ್ಲೆಗೊಬ್ಬರು ಅಧಿಕಾರಿಯನ್ನು ನೇಮಕ ಮಾಡಿ ಎಂದು ಸೂಚನೆ ನೀಡಿದ್ದಾರೆ.ಇದನ್ನೂ ಓದಿ: Cyclone Montha| ಎರಡು ದಿನ ಬೆಂಗಳೂರು ಸೇರಿದಂತೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

     

  • ಆಂಧ್ರ, ಒಡಿಶಾಕ್ಕೆ ಅಪ್ಪಳಿಸಲಿದೆ `ಮೊಂಥಾ’ ಸೈಕ್ಲೋನ್ – ಕರ್ನಾಟಕ ಸೇರಿ ತಮಿಳುನಾಡಿಗೆ ಮಳೆಯಾರ್ಭಟ

    ಆಂಧ್ರ, ಒಡಿಶಾಕ್ಕೆ ಅಪ್ಪಳಿಸಲಿದೆ `ಮೊಂಥಾ’ ಸೈಕ್ಲೋನ್ – ಕರ್ನಾಟಕ ಸೇರಿ ತಮಿಳುನಾಡಿಗೆ ಮಳೆಯಾರ್ಭಟ

    ನವದೆಹಲಿ: ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಆಂಧ್ರಪ್ರದೇಶ ಹಾಗೂ ಒಡಿಶಾಕ್ಕೆ ಮೊಂಥಾ ಚಂಡಮಾರುತ ಅಪ್ಪಳಿಸಲಿದೆ. ಪರಿಣಾಮ ಕರ್ನಾಟಕ, ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

    ಮಂಗಳವಾರ (ಅ.28) ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿ ತೀರ ಪ್ರದೇಶಕ್ಕೆ ಮೊಂಥಾ ಚಂಡಮಾರುತ 110 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದ್ದು, ಇಡೀ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ 26 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ನೀಡಲಾಗಿದೆ. ಧಾರಾಕಾರ ಮಳೆ, ಅತೀ ವೇಗದ ಗಾಳಿ ಮತ್ತು ಸಂಭವನೀಯ ಪ್ರವಾಹದ ಸಾಧ್ಯತೆ ಇದೆ ಎಂದು ಹವಾಮಾವ ಇಲಾಖೆ ತಿಳಿಸಿದೆ. ಇದನ್ನೂ ಓದಿ: Cyclone Montha| ಎರಡು ದಿನ ಬೆಂಗಳೂರು ಸೇರಿದಂತೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    ಕಾಕಿನಾಡ ಬಳಿಯ ಮಚಲಿಪಟ್ನಂ ಮತ್ತು ಕಳಿಂಗಪಟ್ನಂ ನಡುವೆ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾಕಿನಾಡ, ಕೋನ ಸೀಮಾ, ಎಲುರು, ಪಶ್ಚಿಮ ಗೋದಾವರಿ, ಕೃಷ್ಣ, ಗುಂಟೂರು, ಬಾಪಟ್ಲಾ, ಪ್ರಕಾಶಂ ಮತ್ತು ಎಸ್‌ಪಿಎಸ್‌ಆರ್ ನೆಲ್ಲೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮಳೆ ಮುನ್ಸೂಚನೆ ಹಿನ್ನೆಲೆ ಆಂಧ್ರಪ್ರದೇಶದ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ನಿರ್ದೇಶಿಸಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಸಮುದ್ರ ತೀರ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರ ಮಾಡಿದ್ದು, ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

    ಮುಂದಿನ ಮೂರ್ನಾಲ್ಕು ದಿನ ಕರ್ನಾಟಕದಲ್ಲೂ ಮಳೆಯಬ್ಬರ:
    ಮೊಂಥಾ ಚಂಡಮಾರುತದಿಂದ ಮುಂದಿನ ಮೂರ್ನಾಲ್ಕು ದಿನ ಕರ್ನಾಟಕದಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದ್ದು, ಬೆಂಗಳೂರು ಸೇರಿ ರಾಜ್ಯಾದ್ಯಂತ ಅಲ್ಲಲ್ಲಿ ನಿರಂತರ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

    ಒಡಿಶಾ, ತಮಿಳುನಾಡಿನಲ್ಲೂ ಹೈ ಅಲರ್ಟ್:
    ಮೊಂಥಾ ಚಂಡಮಾರುತ ಹಿನ್ನೆಲೆ ಒಡಿಶಾ, ತಮಿಳುನಾಡಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭೂಕುಸಿತ ಸಂಭವಿಸುವ ಸಾಧ್ಯತೆಯಿರುವ ಕಾರಣ ಒಡಿಶಾ ಸರ್ಕಾರವು ಎಲ್ಲಾ ಶಾಲೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಕಾಲೇಜುಗಳಿಗೆ ಅ.30ರವರೆಗೆ ರಜೆ ನೀಡಲಾಗುವುದು ಎಂದು ತಿಳಿಸಿದೆ. ಇನ್ನೂ ಸೋಮವಾರ (ಅ.27) ಹಾಗೂ ಮಂಗಳವಾರ (ಅ.28) ತಮಿಳುನಾಡು, ಪುದುಚೇರಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.ಇದನ್ನೂ ಓದಿ: ಪುನಾರಚನೆಗೆ ಅವಕಾಶ ನೀಡಿದ್ರೆ ಸಿಎಂ ಸ್ಥಾನ ಅಬಾಧಿತ, ಇಲ್ಲದೇ ಇದ್ರೆ ರಾಜಕೀಯ ಚಟುವಟಿಕೆ: ರಾಜಣ್ಣ

  • ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ತುಂಡುಗಳ ಕಳ್ಳಸಾಗಣೆ – 18 ಮೂಟೆಗಳಲ್ಲಿ 750 ಕೆಜಿ ಶ್ರೀಗಂಧ ವಶಕ್ಕೆ

    ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ತುಂಡುಗಳ ಕಳ್ಳಸಾಗಣೆ – 18 ಮೂಟೆಗಳಲ್ಲಿ 750 ಕೆಜಿ ಶ್ರೀಗಂಧ ವಶಕ್ಕೆ

    ಬೆಂಗಳೂರು: ಪುಷ್ಪ ಸಿನಿಮಾದಲ್ಲಿ ರಕ್ತಚಂದನ ಸ್ಮಗ್ಲಿಂಗ್ ಹೇಗೆಲ್ಲಾ ಮಾಡ್ತಾರೆ ಅಂತಾ ನೋಡಿರುತ್ತೀರಿ. ಇದನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಖತರ್ನಾಕ್ ಶ್ರೀಗಂಧ (Sandalwood) ಕಳ್ಳರು ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ಸಾಗಿಸಿ ಲಾಕ್ ಆಗಿದ್ದಾರೆ.

    ಈರುಳ್ಳಿ ಮೂಟೆಗಳನ್ನ ಸಾಗಿಸುತ್ತಿದ್ದ ವ್ಯಾನ್ ಪರಿಶೀಲನೆ ನಡೆಸಿದ ಪೊಲೀಸರೇ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಯಾಕಂದ್ರೆ ಖತರ್ನಾಕ್ ಕಳ್ಳರು ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ಸಾಗಿಸುತ್ತಿದ್ದರು. ಪುಷ್ಪಾ ಸಿನಿಮಾ ಸ್ಟೈಲ್‌ ರೀತಿಯಲ್ಲೇ ಶ್ರೀಗಂಧದ ಮರದ ತುಂಡುಗಳನ್ನ ಚೀಲದ ಅಡಿಯಲ್ಲಿ ಹಾಕಿ ಮೇಲೆ ಈರುಳ್ಳಿ ತುಂಬಿ ಸಾಗಿಸಲಾಗುತ್ತಿತ್ತು. ಆಂಧ್ರಪ್ರದೇಶದ (Andhra Pradesh) ಕರ್ನೂಲ್‌ನಿಂದ (Kurnool) ಬೆಂಗಳೂರಿಗೆ ಶ್ರೀಗಂಧವನ್ನ ತಂದು ಇನ್ನೇನು ಡೆಸ್ಟಿನೇಷನ್‌ಗೆ ರೀಚ್ ಆಗಬೇಕು ಅನ್ನುವಷ್ಟರಲ್ಲಿ ನಾಕಾಬಂದಿ ಹಾಕಿ ತಪಾಸಣೆ ಮಾಡುತ್ತಿದ್ದ ಸಿದ್ದಾಪುರ ಪೊಲೀಸರಿಗೆ ಶ್ರೀಗಂಧದ ಮರಗಳ ಸಮೇತ ನಾಲ್ವರು ಲಾಕ್ ಆಗಿದ್ದಾರೆ. ಇದನ್ನೂ ಓದಿ: ಪ್ರೀತಿಸುವಂತೆ ಫ್ಯಾಷನ್ ಡಿಸೈನರ್‌ಗೆ ಕಿರುಕುಳ – ಇವಿಪಿ ಫಿಲ್ಮ್ ಸಿಟಿ ಮಾಲೀಕನ ವಿರುದ್ಧ ಎಫ್‍ಐಆರ್

    ಸಿರಾಜ್ ಎಂಬಾತ ತನ್ನ ಗ್ಯಾಂಗ್‌ನೊಂದಿಗೆ ಆಂಧ್ರದ ಕರ್ನೂಲ್ ಕಾಡುಗಳಲ್ಲಿ ಶ್ರೀಗಂಧ ಕಡಿದು ಈರುಳ್ಳಿ ಮಾರಾಟಗಾರರ ವೇಷದಲ್ಲಿ ಬೆಂಗಳೂರಿಗೆ ತಂದು ಇಲ್ಲಿಂದ ಚೀನಾಗೆ ಸಪ್ಲೈ ಮಾಡುತ್ತಿದ್ದ. ಸಿದ್ಧಾಪುರ ಪೊಲೀಸರು ನಾಕಾಬಂದಿ ಹಾಕಿ ಪರಿಶೀಲನೆ ನಡೆಸಿದಾಗ ಈರುಳ್ಳಿ ಮೂಟೆಗಳಲ್ಲಿ 18 ಶ್ರೀಗಂಧದ ಮರದ ತುಂಡುಗಳ ಬ್ಯಾಗ್ ಜಪ್ತಿಯಾಗಿದೆ. ಆಂಧ್ರದ ಸಿರಾಜ್ ತನ್ನ ಗ್ಯಾಂಗ್ ಸದಸ್ಯರೊಂದಿಗೆ ಶ್ರೀಗಂಧ ಕಡಿದು, ಅಕ್ರಮವಾಗಿ ಖರಿದಿ ಮಾಡಿ ಬೆಂಗಳೂರಿನ ಡೀಲರ್‌ಗೆ ತಲುಪಿಸಿ ಬಳಿಕ ಚೀನಾಗೆ ತಲುಪಿಸುತ್ತಿದ್ದರು. ಈ ಸಂಬಂಧ ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್, ರಾಮ್ ಭೂಪಾಲ್ ಎಂಬ ನಾಲ್ವರು ಶ್ರೀಗಂಧ ಸ್ಮಗ್ಲರ್ಸ್ಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಉದ್ಯಮ ವಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ಸರ್ಕಾರದ ಗಮನಕ್ಕೆ ತರಲು ಮುಂದಾದ FKCCI

    ಶ್ರೀಗಂಧ ಅಕ್ರಮ ಸಾಗಾಟದ ಜಾಲದ ಹಿಂದೆ ಬಿದ್ದಿರುವ ಪೊಲೀಸರು ತಲೆಮರೆಸಿಕೊಂಡಿರುವ ಬೆಂಗಳೂರಿನ ಡೀಲರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೈದಿಗೆ 20,000ಕ್ಕೆ ಮೊಬೈಲ್ ಮಾರಲು ಯತ್ನ – ಪರಪ್ಪನ ಅಗ್ರಹಾರ ಜೈಲು ವೀಕ್ಷಕ ಬಂಧನ

  • ಆಂಧ್ರ ಬಸ್‌ ದುರಂತಕ್ಕೂ ಮುನ್ನ ಅಜಾಗರೂಕತೆಯಿಂದ ಬೈಕ್‌ ಚಾಲನೆ – ಎಣ್ಣೆ ಮತ್ತಲ್ಲಿದ್ನಾ ಸವಾರ?

    ಆಂಧ್ರ ಬಸ್‌ ದುರಂತಕ್ಕೂ ಮುನ್ನ ಅಜಾಗರೂಕತೆಯಿಂದ ಬೈಕ್‌ ಚಾಲನೆ – ಎಣ್ಣೆ ಮತ್ತಲ್ಲಿದ್ನಾ ಸವಾರ?

    – ಪೆಟ್ರೋಲ್‌ ಬಂಕ್‌ ಬಳಿ ಅಡ್ಡಾದಿಡ್ಡಿ ಬೈಕ್‌ ಚಲಾಯಿಸಿರುವ ದೃಶ್ಯ ಸೆರೆ

    ಅಮರಾವತಿ: ಆಂಧ್ರ ಖಾಸಗಿ ಬಸ್ ದುರಂತಕ್ಕೂ ಮುನ್ನ ಬೈಕ್ ಸವಾರ ಅಜಾಗರೂಕತೆಯಿಂದ ಬೈಕ್‌ ಚಾಲನೆ ಮಾಡಿದ್ದ ವಿಡಿಯೋ ವೈರಲ್ ಆಗಿದೆ.

    ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಶುಕ್ರವಾರ ಬೆಳಗಿನ ಜಾವ 20 ಜನರನ್ನು ಬಲಿತೆಗೆದುಕೊಂಡ ಭೀಕರ ಬಸ್ ದುರಂತ ತನಿಖೆ ಹೊಸ ತಿರುವು ಪಡೆದುಕೊಂಡಿದೆ. ಅಪಘಾತಕ್ಕೆ ಸ್ವಲ್ಪ ಮೊದಲು ಬೈಕ್‌ ಚಾಲಕ ಅಜಾಗರೂಕತೆಯಿಂದ ಬೈಕ್‌ ಚಾಲನೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೊ ವೈರಲ್ ಆಗಿದೆ. ಇದನ್ನೂ ಓದಿ: Kurnool Bus Fire | ದುರಂತಕ್ಕೀಡಾದ ಖಾಸಗಿ ಬಸ್ ಮೇಲಿದೆ 23 ಸಾವಿರಕ್ಕೂ ಹೆಚ್ಚು ದಂಡ

    ಪೆಟ್ರೋಲ್‌ ಬಂಕ್‌ವೊಂದರಲ್ಲಿ ರಾತ್ರಿ ವೇಳೆ ಬೈಕ್‌ ಸವಾರ ಪೆಟ್ರೋಲ್‌ ಹಾಕಿಸಿದ್ದಾನೆ. ಆತ ಕುಡಿದ ಮತ್ತಿನಲ್ಲಿದ್ದಂತೆ ವರ್ತಿಸಿದ್ದಾನೆ. ಸ್ಟ್ಯಾಂಡ್‌ ಹಾಕಿದ್ದ ಬೈಕನ್ನು ಹಾಗೆಯೇ ತಿರುಗಿಸಿ ಸ್ಟಾರ್ಟ್‌ ಮಾಡಿಕೊಂಡು ಅಡ್ಡಾದಿಡ್ಡಿ ಬೈಕ್‌ ಚಲಾಯಿಸಿರುವುದು ಕಂಡುಬಂದಿದೆ.

    ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಖಾಸಗಿ ಐಷಾರಾಮಿ ಬಸ್‌ಗೆ ಡಿಕ್ಕಿ ಹೊಡೆಯುವ ಸ್ವಲ್ಪ ಸಮಯದ ಮೊದಲು ಬೈಕ್‌ ಸವಾರ ಶಿವಶಂಕರ್‌ ಅಜಾಗರೂಕತೆಯಿಂದ ಬೈಕ್‌ ಚಲಾಯಿಸಿದ್ದಾನೆ. ಡಿಕ್ಕಿಯ ನಂತರ ವಿ ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿದ್ದು, ಶಿವಶಂಕರ್ ಅವರ ಬೈಕನ್ನು ಸುಮಾರು 200 ಮೀಟರ್‌ಗಳಷ್ಟು ಎಳೆದೊಯ್ದಿದೆ. ಬೈಕ್‌ನಿಂದ ಘರ್ಷಣೆ ಮತ್ತು ಇಂಧನ ಸೋರಿಕೆಯಿಂದಾಗಿ ಬಸ್‌ಗೆ ಭಾರಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ದೃಢಪಡಿಸಿವೆ. ಇದನ್ನೂ ಓದಿ: Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

    ತೆಲಂಗಾಣ ಸಚಿವ ಜೂಪಲ್ಲಿ ಕೃಷ್ಣ ರಾವ್ ಅವರು ಅಪಘಾತಕ್ಕೆ ಬಸ್ ಚಾಲಕ ಮತ್ತು ಟ್ರಾವೆಲ್ ಏಜೆನ್ಸಿಯನ್ನು ದೂಷಿಸಿದ್ದಾರೆ. ಇಬ್ಬರನ್ನೂ ಬಂಧಿಸಿ ನಿರ್ಲಕ್ಷ್ಯದ ಚಾಲನೆಯ ಆರೋಪ ಹೊರಿಸಲಾಗಿದೆ.

  • Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

    Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

    – ಮೃತರಿಗೆ ತಲಾ 5 ಲಕ್ಷ, ಗಾಯಾಳುಗಳಿಗೆ 2 ಲಕ್ಷ ಪರಿಹಾರ ಘೋಷಿಸಿದ ಆಂಧ್ರ ಸಾರಿಗೆ ಸಚಿವ

    ನವದೆಹಲಿ/ಹೈದರಾಬಾದ್: ಆಂಧ್ರದ ಕರ್ನೂಲಿನಲ್ಲಿ (Karnool) ನಡೆದ ಭೀಕರ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಧನ ಘೋಷಿಸಿದೆ.

    ಗುರುವಾರ (ಅ.23) ಮಧ್ಯರಾತ್ರಿ 3ರ ಸುಮಾರಿಗೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಬಸ್ ಬೆಂಕಿಗಾಹುತಿಯಾಗಿ 20 ಮಂದಿ ಸಾವನ್ನಪ್ಪಿದ್ದು, 24 ಜನರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಪಿಎಂ ಕಚೇರಿ (PMO) ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪಿಎಂ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ನೀಡುವುದಾಗಿ ತಿಳಿಸಿದೆ.ಇದನ್ನೂ ಓದಿ: Kurnool Bus Fire | ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ!

    ಈ ಕುರಿತು ಆಂಧ್ರಪ್ರದೇಶ ಸಾರಿಗೆ ಸಚಿವ ರಾಮ್ ಪ್ರಸಾದ್ ರೆಡ್ಡಿ (Ram Prasad Reddy) ಮಾತನಾಡಿ, ಇದು ಹಳೆಯ ಬಸ್ ಆಗಿದ್ದ ಕಾರಣ ಇದರಲ್ಲಿ ಸ್ವಯಂಚಾಲಿತ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ ಇರಲಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಬರ್ತಿದ್ದ ಖಾಸಗಿ ಎಸಿ ಬಸ್ ಆಂಧ್ರದ ಕರ್ನೂಲ್ ಬಳಿ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತವಾದ ಬಳಿಕವೂ ಡ್ರೈವರ್‌ ಬಸ್ ನಿಲ್ಲಿಸದೇ ಸವಾರನ ಸಮೇತ ಬೈಕ್ ಅನ್ನು ಸುಮಾರು 300 ಮೀಟರ್ ಎಳೆದೊಯ್ದಿದ್ದಾನೆ. ಈ ವೇಳೆ, ಬೈಕ್‌ನಲ್ಲಿದ್ದ ಪೆಟ್ರೋಲ್ ಚೆಲ್ಲಿ ಬಸ್ ಅಡಿ ಬೆಂಕಿ ಹೊತ್ತಿಕೊಂಡಿದೆ. ನಂತರ ಇಡೀ ಬಸ್‌ಗೆ ಬೆಂಕಿ ಹಬ್ಬಿದೆ. ಎಸಿ ಬಸ್ ಆಗಿದ್ದ ಕಾರಣ ಕ್ಷಣಾರ್ಧದಲ್ಲಿ ಇಡೀ ಬಸ್‌ಗೆ ಬೆಂಕಿ ಆವರಿಸಿದೆ.

    ಮುಂಜಾನೆ 3 ಗಂಟೆ ಸುಮಾರಿನಲ್ಲಿ ದುರಂತ ಸಂಭವಿಸಿದ್ದು, ಪ್ರಯಾಣಿಕರು ನಿದ್ದೆಯಲ್ಲಿದ್ದರು. ಹೀಗಾಗಿ, 20 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದರೂ ಕೂಡ ಸುಟ್ಟಗಾಯಗಳಿಂದಾಗಿ ಒದ್ದಾಡುತ್ತಿದ್ದಾರೆ. ದುರಂತಕ್ಕೆ ತೆಲಂಗಾಣ-ಆಂಧ್ರಪ್ರದೇಶ-ಕರ್ನಾಟಕದ ಮುಖ್ಯಮಂತ್ರಿಗಳು, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.ಇದನ್ನೂ ಓದಿ: ಡ್ರೈವರ್‌, ಕಂಡಕ್ಟರ್ ಬೆಂಕಿ ನಂದಿಸ್ತಿದ್ದರು, 5 ಸೆಕೆಂಡ್‌ಲ್ಲಿ ಜೀವ ಉಳಿಸಿಕೊಂಡ್ವಿ – ಪ್ರಾಣಾಪಾಯದಿಂದ ಪಾರಾದ ಆಕಾಶ್ ಮಾತು

  • ಡ್ರೈವರ್‌, ಕಂಡಕ್ಟರ್ ಬೆಂಕಿ ನಂದಿಸ್ತಿದ್ದರು, 5 ಸೆಕೆಂಡ್‌ಲ್ಲಿ ಜೀವ ಉಳಿಸಿಕೊಂಡ್ವಿ – ಪ್ರಾಣಾಪಾಯದಿಂದ ಪಾರಾದ ಆಕಾಶ್ ಮಾತು

    ಡ್ರೈವರ್‌, ಕಂಡಕ್ಟರ್ ಬೆಂಕಿ ನಂದಿಸ್ತಿದ್ದರು, 5 ಸೆಕೆಂಡ್‌ಲ್ಲಿ ಜೀವ ಉಳಿಸಿಕೊಂಡ್ವಿ – ಪ್ರಾಣಾಪಾಯದಿಂದ ಪಾರಾದ ಆಕಾಶ್ ಮಾತು

    ಬಳ್ಳಾರಿ: ಡ್ರೈವರ್‌, ಕಂಡಕ್ಟರ್ ಬೆಂಕಿ ನಂದಿಸುತ್ತಿದ್ದರು, ನಾವು 5 ಸೆಕೆಂಡ್‌ಲ್ಲಿ ಜೀವ ಉಳಿಸಿಕೊಂಡೆವು ಎಂದು ಕರ್ನೂಲ್ ಬಸ್ ಅಪಘಾತದಲ್ಲಿ (Karnool Bus Fire) ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕ ಆಕಾಶ್ ಭಯಾನಕ ದೃಶ್ಯವನ್ನು ಬಿಚ್ಚಿಟ್ಟಿದ್ದಾರೆ.

    `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಾನು ಗುರುವಾರ (ಅ.23) ರಾತ್ರಿ 10:30ಕ್ಕೆ ಹೈದರಾಬಾದ್‌ನಲ್ಲಿ ಬಸ್ ಹತ್ತಿ, ಬೆಂಗಳೂರಿಗೆ ಹೊರಟಿದ್ದೆವು. ಮಧ್ಯರಾತ್ರಿ 2:35ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ನಾವೆಲ್ಲ ಮಲಗಿಕೊಂಡಿದ್ದೆವು. ಆಗ ಬೈಕ್ ಡಿಕ್ಕಿ ಹೊಡೆದ ಶಬ್ದವೊಂದು ಕೇಳಿಸಿತು. ಆ ಶಬ್ದಕ್ಕೆ ಪಕ್ಕದಲ್ಲಿದ್ದ ಅಂಕಲ್ ಒಬ್ಬರು ನಮ್ಮನ್ನು ಎಬ್ಬಿಸಿದ್ದರು. ಎದ್ದು ನೋಡಿದಾಗ ಬಸ್ಸಿನ ಎಡಗಡೆ ಭಾಗ ಹಾಗೂ ರಸ್ತೆಯ ಮೇಲೆ ಬೆಂಕಿ ಹೊತ್ತಿಕೊಂಡಿತ್ತು. ಡೀಸೆಲ್ ಚೆಲ್ಲಿತ್ತಾ? ಪೆಟ್ರೋಲ್ ಚೆಲ್ಲಿತ್ತಾ? ಗೊತ್ತಿಲ್ಲ. ನಮಗೆ ಹೊರಬರೋಕೆ ಕೇವಲ 5 ಸೆಕೆಂಡ್ ಮಾತ್ರ ಇತ್ತು. ಆ ಸಮಯದಲ್ಲಿ ಡ್ರೈವರ್‌ ಹಾಗೂ ಕಂಡಕ್ಟರ್ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದರು. ಅವರೇನಾದರೂ ಎಬ್ಬಿಸಿದ್ರೆ ಹೆಚ್ಚಿನ ಜನ ಆಚೆ ಬರಬಹುದಿತ್ತು ಎಂದು ಹೇಳಿದರು.ಇದನ್ನೂ ಓದಿ: Kurnool Bus Fire | ಸೂರ್ಯೋದಯಕ್ಕೂ ಮುನ್ನ ಸಾವಿನ ಮನೆ ಕದ ತಟ್ಟಿದ ಸುಂದರ ಕುಟುಂಬ

    ನಮ್ಮನ್ನು ಎಬ್ಬಿಸಿದ ಅಂಕಲ್ ಡ್ರೈವರ್‌ ಸೀಟಿನ ಪಕ್ಕದ ಕಿಟಿಕಿಯಿಂದ ಆಚೆ ಹೋದರು. ನಾನು ಆ ಕಿಟಕಿಯನ್ನು ಕೈಯಿಂದ ಒಡೆದು, ಕಾಲಿಂದ ಒದ್ದು ಗಾಜು ಬಿಳಿಸಿ ಆಚೆ ಬಂದೆ. ನನ್ನ ಜೊತೆ ಮೂವರು ಆಚೆ ಬಂದರು. ಹೊರಗಡೆ ಬಂದ 5 ರಿಂದ 10 ಸೆಕೆಂಡ್‌ನಲ್ಲಿ ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಯಿತು. ಆ ಸಮಯದಲ್ಲಿ ನಾವು ಯಾರಿಗೂ ಸಹಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ. ಇದನ್ನೆಲ್ಲ ನೋಡಿದರೆ ನಮಗೆ ಪುನರ್ಜನ್ಮ ಸಿಕ್ಕಿದಂತಾಗಿದೆ ಎಂದರು.

    ಏನಿದು ಅವಘಡ?
    ಆಂಧ್ರದ ಕರ್ನೂಲ್ ಬಳಿಯ ಚಿನ್ನಟೇಕೂರು ಬಳಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಅವಘಡ ಸಂಭವಸಿದೆ. ದುರಂತದಲ್ಲಿ 23 ಮಂದಿ ಪ್ರಯಾಣಿಕರು ಪಾರಾದರೂ 19 ಮಂದಿ ಜೀವಂತವಾಗಿ ಸುಟ್ಟು ಹೋಗಿದ್ದಾರೆ. ಪ್ರಯಾಣಿಕರನ್ನು ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಪ್ರಯಾಣಿಕರು ಹೈದರಾಬಾದ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ

    ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಆಗಮಿಸಿದವು. ರಕ್ಷಣಾ ತಂಡಗಳು ಸ್ಥಳಕ್ಕೆ ಬರುವಷ್ಟರಲ್ಲಿ ಬಸ್ಸು ಬಹುತೇಕ ಸುಟ್ಟುಹೋಗಿತ್ತು. ಈಗ ಅಧಿಕಾರಿಗಳು ಮೃತ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವ ಕೆಲಸ ಆರಂಭಿಸಿದ್ದಾರೆ. ಸ್ಲೀಪರ್ ಕೋಚ್ ಬಸ್ಸು ಆಗಿದ್ದ ಕಾರಣ ಪ್ರಯಾಣಿಕರು ನಿದ್ದೆ ಮಾಡುತ್ತಿದ್ದರು. ಸಾಧಾರಣವಾಗಿ ವೋಲ್ವೋ ಬಸ್ಸಿನಲ್ಲಿ ಕಿಟಕಿಯ ಗಾಜುಗಳು ಸಂಪೂರ್ಣವಾಗಿ ಲಾಕ್ ಆಗಿರುತ್ತದೆ. ಹೀಗಿದ್ದರೂ ಬೆಂಕಿ ಕಾಣಿಸಿದ ಕೂಡಲೇ ಕೆಲ ಪ್ರಯಾಣಿಕರು ಗಾಜನ್ನು ಒಡೆದು ಕೆಳಗೆ ಹಾರಿ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: ಭೀಕರ ದುರಂತಕ್ಕೆ 20 ಬಲಿ – ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ? ಬೈಕ್‌ ಗುದ್ದಿದ್ದಾಗ ಏನಾಯ್ತು?

  • ದೀಪಾವಳಿ ಪ್ರಯುಕ್ತ ಬೆಂಗಳೂರಿಂದ ವಿಶಾಖಪಟ್ಟಣಂಗೆ ವಿಶೇಷ ರೈಲು

    ದೀಪಾವಳಿ ಪ್ರಯುಕ್ತ ಬೆಂಗಳೂರಿಂದ ವಿಶಾಖಪಟ್ಟಣಂಗೆ ವಿಶೇಷ ರೈಲು

    ಬೆಂಗಳೂರು: ದೀಪಾವಳಿ ಹಬ್ಬದ (Diwali Festival) ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಆಂಧ್ರ ಪ್ರದೇಶದ ವಿಶಾಖಪಟ್ಟಣಂಗೆ (Visakhapatnam) ಒಂದು-ಮಾರ್ಗದ ವಿಶೇಷ ರೈಲು ಸೇವೆ ಆರಂಭಿಸಲಿದೆ.

    ಅಕ್ಟೋಬರ್ 22ರ ಮಧ್ಯಾಹ್ನ 3:50ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ವಿಶೇಷ ರೈಲು (ಸಂಖ್ಯೆ 08544) ಹೊರಡಲಿದೆ. ಇದನ್ನೂ ಓದಿ: ಭಾರತದಲ್ಲಿ ಮಾತ್ರವಲ್ಲ, ಈ ದೇಶಗಳಲ್ಲಿಯೂ ದೀಪಾವಳಿ ಆಚರಣೆ ಬಲು ಜೋರು!

    ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಜೋಲಾರ್‌ಪೇಟೆ, ಕಾಟ್ಪಾಡಿ, ರೇಣಿಗುಂಟ, ಗೂಡೂರು, ನೆಲ್ಲೂರು, ಗುಡಿವಾಡ, ಕೈಕಲೂರು, ಆಕಿವಿಡು, ಭೀಮಾವರಂ, ತನುಕು, ನಿಡದವೋಲು, ರಾಜಮಂಡ್ರಿ, ಸಾಮಲಕೋಟ, ಎಲಮಂಚಿಲಿ ಮತ್ತು ದುವ್ವಾಡ ನಿಲ್ದಾಣಗಳಲ್ಲಿ ನಿಲುಗಡೆ ಮಾಡಿ ಅಕ್ಟೋಬರ್‌ 23ರಂದು ಮಧ್ಯಾಹ್ನ 1:30ಕ್ಕೆ ವಿಶಾಖಪಟ್ಟಣಂ ನಿಲ್ದಾಣ ತಲುಪಲಿದೆ. ಇದನ್ನೂ ಓದಿ: ಐಎನ್‌ಎಸ್‌ ವಿಕ್ರಾಂತ್‌ ಪಾಕ್‌ಗೆ ನಿದ್ರೆಯಿಲ್ಲದಂತೆ ಮಾಡಿತು, ಬ್ರಹ್ಮೋಸ್‌ ತನ್ನ ಸಾಮರ್ಥ್ಯ ತೋರಿತು – ನರೇಂದ್ರ ಮೋದಿ

  • ಗೂಗಲ್ ಎಐ ಹಬ್ ಆಂಧ್ರಪ್ರದೇಶ ಪಾಲು, ಗೂಗಲ್ ನಮ್ಮ ಜೊತೆ ಚರ್ಚೆಗೆ ಬಂದಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

    ಗೂಗಲ್ ಎಐ ಹಬ್ ಆಂಧ್ರಪ್ರದೇಶ ಪಾಲು, ಗೂಗಲ್ ನಮ್ಮ ಜೊತೆ ಚರ್ಚೆಗೆ ಬಂದಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಗೂಗಲ್ (Google) ನಮ್ಮ ಜೊತೆ ಚರ್ಚೆಗೆ ಬಂದಿದ್ರೆ ಟೀಕೆ ಮಾಡಬಹುದಿತ್ತು. ನಮ್ಮ ಜೊತೆಗೆ ಚರ್ಚೆಗೆ ಬಂದ ಯಾವ ಕಂಪನಿಯನ್ನು ನಾವು ಬಿಟ್ಟಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.

    ಗೂಗಲ್ ಎಐ ಹಬ್ (Google AI Hub) ಆಂಧ್ರಕ್ಕೆ ಹೋದ ವಿಚಾರದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಬಹಳ ಸರಳವಾಗಿ ಮುಚ್ಚಿ ಹಾಕ್ತಾರೆ. 22 ಸಾವಿರ ಕೋಟಿ ಇನ್ಸೆಂಟಿವ್ ಆಂಧ್ರಪ್ರದೇಶ ಸರ್ಕಾರಕ್ಕೆ ಕೇಂದ್ರ ಕೊಡುತ್ತಿದೆ. 25% ಲ್ಯಾಂಡ್ ರಿಯಾಯಿತಿ, ವಾಟರ್, ವಿದ್ಯುತ್ ಫ್ರೀ ಕೊಡುತ್ತಾರೆ. 100% ರಾಜ್ಯ ಜಿಎಸ್ಟಿ ಮರುಪಾವತಿ ಕೊಡುತ್ತಿದ್ದಾರೆ ಎಂಬುದನ್ನ ಬಿಜೆಪಿಯವರು ಹೇಳಲ್ಲ. ಇದೇ ನಮ್ಮ ರಾಜ್ಯ ಕೊಟ್ಟಿದ್ರೆ ಇವರು ಸರ್ಕಾರ ದಿವಾಳಿತನಕ್ಕೆ ಮುಂದಾಗುತ್ತಿದೆ ಎನ್ನುತ್ತಿದ್ದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ – ಪರಿಶೀಲಿಸಿ ಕ್ರಮಕ್ಕೆ ಸೂಚನೆ: ಪರಮೇಶ್ವರ್

    ನಾವು ಇಡೀ ಜಗತ್ತಿನ ಎಐ ಡೆವಲಪ್ಮೆಂಟ್‌ನಲ್ಲಿ 5ನೇ ಸ್ಥಾನದಲ್ಲಿದ್ದೇವೆ. ನಾಲ್ಕನೇ ದೊಡ್ಡ ಟೆಕ್ನಾಲಜಿ ಕ್ಲಸ್ಟರ್ ನಾವು. ನಾಲ್ಕೂವರೆ ಲಕ್ಷ ಕೋಟಿ ಐಟಿ ರಫ್ತು ಮಾಡುತ್ತೇವೆ. ಆಂಧ್ರಪ್ರದೇಶದ್ದು 2 ಲಕ್ಷ ಕೋಟಿ ಅಷ್ಟೇ. ಆಂಧ್ರಪ್ರದೇಶ ಮತ್ತು ಕರ್ನಾಟಕದ ನಡುವೆ ವ್ಯತ್ಯಾಸ ಬಹಳ ದೊಡ್ಡದಿದೆ. ನಮ್ಮ ಬಳಿ ಕ್ವಾಂಟಮ್ ರೋಡ್ ಮ್ಯಾಪ್ ಇದೆ. ಅವರ ಬಳಿ ಇದೆಯಾ? ಬಂಡವಾಳ ಹಾಕುವವರು ಎಲ್ಲಿ ಬೇಕಾದರೂ ಹಾಕುತ್ತಾರೆ. ಗೂಗಲ್ ಅನಂತ ಎಂಬ ಬಹುದೊಡ್ಡ ಕ್ಯಾಂಪಸ್ ನಮ್ಮ ಬೆಂಗಳೂರಿನಲ್ಲಿದೆ. ಚರ್ಚೆಗೆ ಬರಲು ನಾವು ರೆಡಿ ಇದ್ದೇವೆ, ಆದರೆ ಇವರು ಚರ್ಚೆಗೆ ಬರಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಹಿಂದಿ ಸಿನಿಮಾ, ಹಾಡುಗಳನ್ನು ನಿಷೇಧಿಸುವ ಮಸೂದೆಗೆ ವಿರೋಧ- ಯೂಟರ್ನ್‌ ಹೊಡೆದ ತಮಿಳುನಾಡು ಸರ್ಕಾರ