Tag: anantnag

  • ಕೆಜಿಎಫ್‍ನಲ್ಲಿ ಪತ್ನಿ ಪಾತ್ರವನ್ನು ಹೇಳಿ ಧನ್ಯವಾದ ಹೇಳಿದ ಅನಂತ್ ನಾಗ್!

    ಕೆಜಿಎಫ್‍ನಲ್ಲಿ ಪತ್ನಿ ಪಾತ್ರವನ್ನು ಹೇಳಿ ಧನ್ಯವಾದ ಹೇಳಿದ ಅನಂತ್ ನಾಗ್!

    ಬೆಂಗಳೂರು: ಕೆಜಿಎಫ್ ಸಿನಿಮಾದ ಯಶಸ್ಸು ನನ್ನ ಪತ್ನಿ ಗಾಯತ್ರಿ ಅವರಿಗೂ ಸಲ್ಲುತ್ತದೆ. ಅವರಿಗೆ ನನ್ನ ವಿಶೇಷ ಧನ್ಯವಾದಗಳು ಎಂದು ಹಿರಿಯ ನಟ ಅನಂತ್ ನಾಗ್ ಹೇಳಿದ್ದಾರೆ.

    ನಗರದಲ್ಲಿ ನಡೆದ ಕೆಜಿಎಫ್ ಚಿತ್ರತಂಡದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಂತ್ ನಾಗ್ ಅವರು, ಕೆಜಿಎಫ್ ಸಿನಿಮಾದ ಡಬ್ಬಿಂಗ್ ಪೂರ್ಣಗೊಳಿಸಿ ನಾನು ವಿದೇಶಕ್ಕೆ ಹೋಗಿದ್ದೆ. ಇತ್ತ ಚಿತ್ರತಂಡ ನನ್ನ ಪಾತ್ರಕ್ಕೆ ಹಿಂದಿ ಡಬ್ಬಿಂಗ್ ನಡೆಸುತ್ತಿದ್ದರು. ನಾನು ವಿದೇಶದಿಂದ ಮರಳಿದ ಬಂದಾಗ ಯಶ್ ಹಾಗೂ ನಿರ್ದೇಶಕರು ನನ್ನ ಬಳಿಗೆ ಬಂದು, ನಿಮ್ಮ ಪಾತ್ರಕ್ಕೆ ಯಾರೋಬ್ಬರ ಧ್ವನಿ ಸರಿಯಾಗುತ್ತಿಲ್ಲ. ನೀವೇ ಹಿಂದಿ ಡಬ್ಬಿಂಗ್ ಮಾಡಬೇಕು ಅಂತ ಕೇಳಿಕೊಂಡರು. ಆದರೆ ನಾನು ಹಿಂದಿ ಮಾತನಾಡದೇ ಎಷ್ಟೋ ದಿನಗಳೇ ಕಳೆದು ಹೋಗಿತ್ತು. ಆಗ ನನಗೆ ಬೆಂಬಲ ನೀಡಿದ್ದು ನನ್ನ ಪತ್ನಿ ಗಾಯತ್ರಿ ಎಂದು ಅನಂತ್‍ನಾಗ್ ತಿಳಿಸಿದರು. ಇದನ್ನು ಓದಿ: ಈ ಸಕ್ಸಸ್ ನಮ್ಮೆಲ್ಲರ ಎದೆಯಲ್ಲಿದೆ, ಆ ಎದೆಯಲ್ಲಿ ನೀವು ಇದ್ದೀರಿ: ಯಶ್

    ಹಿಂದಿ ಡಬ್ಬಿಂಗ್ ವೇಳೆ ರಾಧಿಕಾ ಅವರಿಗೆ ಹೆಣ್ಣು ಮಗುವಾಗಿತ್ತು. ಬಾಣಂತಿ ವಿಶ್ರಾಂತಿಯ ಪಡೆಯಬೇಕಿತ್ತು. ಇತ್ತ ನನಗೆ ಕೊಂಕಣಿ ಭಾಷೆಯ ಶೈಲಿಯಲ್ಲಿಯೇ ಹಿಂದಿ ಮಾತನಾಡಿ ಬಿಡ್ತೀನಿ ಎನ್ನುವ ಭಯವಿತ್ತು. ಈ ವೇಳೆ ಉತ್ತರ ಪ್ರದೇಶ, ಪಂಜಾಬ್, ಮುಂಬೈನಲ್ಲಿ ಬೆಳೆದಿದ್ದ ಗಾಯತ್ರಿ ನನಗೆ ಹಿಂದಿ ಡೈಲಾಗ್‍ಗಳನ್ನು ಹೇಳಲು ಮುಂದಾದಳು. ಡಬ್ಬಿಂಗ್ ದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕುಳಿತು ಹಿಂದಿ ಉಚ್ಛಾರಣೆ ತಪ್ಪಾಗದಂತೆ ಎಚ್ಚರವಹಿಸಿದಳು. ಆಕೆಯ ಸಹಾಯದಿಂದ ಹಿಂದಿ ಡಬ್ಬಿಂಗ್ ಮುಗಿಯಿತು. ಇದರಿಂದಾಗಿ ನಾನು ಗಾಯತ್ರಿ ಅವರಿಗೂ ಕೂಡ ವಿಶೇಷ ಧನ್ಯವಾದ ಹೇಳುತ್ತೇನೆ. ಈ ಚಿತ್ರದ ಯಶಸ್ಸಿಗೆ ಅವರ ಪಾತ್ರವೂ ಪ್ರಮುಖವಾಗಿದೆ ಎಂದು ಅನಂತ್ ನಾಗ್ ಹೇಳಿದರು.

    ಯಶ್ ಬಗ್ಗೆ ಹೊಗಳಿಕೆ:
    ರಾಕಿಂಗ್ ಸ್ಟಾರ್ ಯಶ್ 10 ವರ್ಷಗಳ ಹಿಂದೆ ‘ಪ್ರೀತಿ ಇಲ್ಲದೆ ಮೇಲೆ’ ಸಿನಿಮಾದಲ್ಲಿ ನನ್ನ ಮಗನ ಪಾತ್ರದಲ್ಲಿ ನಟಿಸಿದ್ದ. ಆಗಿನ್ನು ಯಶ್ ಹಾಲುಗೆನ್ನೆಯ ಹುಡುಗ. ಅಲ್ಲಿಂದ ಆತನ ಜೊತೆಗೆ ಉತ್ತಮ ಒಡನಾಟ ಆರಂಭವಾಯಿತು. ಯಶ್ ಚಿತ್ರೀಕರಣದ ವೇಳೆ ಕುತೂಹಲ ಮೂಡಿಸುವ ಪ್ರಶ್ನೆಗಳನ್ನು ಕೇಳುತ್ತಿದ್ದ. ಗೂಗ್ಲಿ ಸಿನಿಮಾ ಸೇರಿದಂತೆ ಒಟ್ಟು ನಾಲ್ಕು ಸಿನಿಮಾಗಳಲ್ಲಿ ಯಶ್ ಜೊತೆಗೆ ನಟಿಸಿದ್ದೇನೆ ಎಂದು ತಿಳಿಸಿದರು.

    ಕೆಜಿಎಫ್ ಸಿನಿಮಾ ಭಾರತ ಹಾಗೂ ವಿದೇಶಿ ಭಾಷೆಗಳಲ್ಲಿ ತೆರೆ ಕಂಡು, ಯಶಸ್ವಿಯಾಗಿದೆ. ಯಶ್ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಿದ್ದಾನೆ. ನಿರ್ದೇಶಕ ವಿಜಯ್ ಹಾಗೂ ಚಿತ್ರತಂಡದ ಪ್ರತಿಯೊಬ್ಬರಿಗೂ ಸಿನಿಮಾದ ಯಶಸ್ಸು ಸಲ್ಲುತ್ತವೆ ಎಂದರು.

    ಡಬ್ಬಿಂಗ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅನಂತ್‍ನಾಗ್ ಅವರು, ಪರಭಾಷೆ ಚಿತ್ರಗಳನ್ನು ಡಬ್ಬಿಂಗ್ ಮಾಡಬಾರದು ಎನ್ನುವ ವಿಚಾರವಿತ್ತು. ಆದರೆ ಈಗ ಕೆಜಿಎಫ್ ಚಿತ್ರ ಬೇರೆ ಭಾಷೆಗಳಲ್ಲಿ ಹೋದ ಮೇಲೆ ಅದರ ದೃಷ್ಟಿಕೋನ ಬದಲಾಗಿದೆ. ಇಂತಹ ಅನೇಕ ಚಿತ್ರಗಳು ಸ್ಯಾಂಡಲ್‍ವುಡ್‍ನಿಂದ ತೆರೆ ಕಾಣಬೇಕು ಅಂತ ಜನ ಬಯಸುತ್ತಿದ್ದಾರೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

    – ಕಮರ್ಷಿಯಲ್ ಅಲೆಗೆದುರಾದ ಕಲಾತ್ಮಕ ಹಾದಿ!

    ಬೆಂಗಳೂರು: ಕಮರ್ಷಿಯಲ್ ಸ್ವರೂಪದ ಸಿನಿಮಾಗಳಲ್ಲಿ ಗೆದ್ದ ನಂತರವೂ ಕಲಾತ್ಮಕ ಸಿನಿಮಾಗಳತ್ತ ಹೊರಳಿಕೊಳ್ಳುವುದು ಕನ್ನಡದ ಮಟ್ಟಿಗೆ ಅಪರೂಪದ ಬೆಳವಣಿಗೆ. ಅಂಥಾ ಹೊಸಾ ಥರದ ಬೆಳವಣಿಗೆಯೊಂದಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಡಿಗಲ್ಲು ಹಾಕಿದ್ದಾರೆ. ಅದರ ಭಾಗವಾಗಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ ಎಂಬ ಚಿತ್ರವೀಗ ತೆರೆಗಾಣಲು ಅಣಿಗೊಂಡಿದೆ!

    ಇದೀಗ ಬೆಲ್ ಬಾಟಮ್ ಚಿತ್ರದಲ್ಲಿ ಹೀರೋ ಆಗಿಯೂ ನಟಿಸುತ್ತಿರುವ ರಿಷಬ್ ಶೆಟ್ಟಿ ಅದಾಗಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವನ್ನೂ ನಿರ್ದೇಶನ ಮಾಡಿ ಮುಗಿಸಿದ್ದಾರೆ. ಈ ಚಿತ್ರಕ್ಕೆ ಸಿಗುತ್ತಿರೋ ವ್ಯಾಪಕ ಪ್ರಚಾರ, ಅದರ ಬಗ್ಗೆ ಮೂಡಿಕೊಂಡಿರೋ ನಿರೀಕ್ಷೆಗಳನ್ನು ನೋಡಿದರೆ ಭಿನ್ನ ಬಗೆಯ ಪ್ರಯೋಗಗಳಿಗೆ ಕನ್ನಡ ಚಿತ್ರ ರಂಗದಲ್ಲೊಂದು ಸುವರ್ಣ ಯುಗ ಆರಂಭಗೊಂಡಿದೆ ಅಂತಲೂ ಅನ್ನಿಸುತ್ತದೆ.

    ಕಾಸರಗೋಡು ಗಡಿನಾಡು. ಸಂಪನ್ನವಾದ ಸಾಂಸ್ಕೃತಿಕ ಹಿನ್ನೆಲೆ, ಪ್ರಾಕೃತಿಕ ಶ್ರೀಮಂತಿಕೆ ಹೊಂದಿದ್ದರೂ ಅಲ್ಲಿನ ಜನರನ್ನು ಕಾಲಾಂತರಗಳಿಂದಲೂ ನಾನಾ ಸಂಕಷ್ಟಗಳು ಕಾಡುತ್ತಲೇ ಬಂದಿವೆ. ಇದನ್ನು ಸರ್ಕಾರಿ ಶಾಲೆಯೊಂದರ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗೆ ತಲುಪಿಸುವ ಸದುದ್ದೇಶದೊಂದಿಗೇ ರಿಷಬ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ.

    ಈಗಾಗಲೇ ದಡ್ಡ ದಡ್ಡ ಸೇರಿದಂತೆ ನಾನಾ ಹಾಡುಗಳ ಮೂಲಕವೂ ಈ ಚಿತ್ರ ಕಮರ್ಷಿಯಲ್ ಸಿನಿಮಾಗಳನ್ನೇ ಮೀರಿಸುವಂತೆ ಪ್ರಚಲಿತಕ್ಕೆ ಬರುತ್ತಿದೆ. ಅನಂತ್ ನಾಗ್ ಅವರು ಬಹು ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿರೋ ಈ ಚಿತ್ರ ವಾಸ್ತವದಲ್ಲಿ ಮಕ್ಕಳ ಚಿತ್ರವಾದರೂ ಕೂಡಾ ಅದನ್ನೊಂದು ಜಾನರಿಗೆ ಸೀಮಿತ ಮಾಡುವಂತಿಲ್ಲವಂತೆ. ಯಾಕೆಂದರೆ ಇಲ್ಲಿ ಮಕ್ಕಳ ಮೂಲಕ ಘನ ಗಂಭೀರವಾದ ವಿಚಾರಗಳನ್ನೂ ಕೂಡಾ ತಣ್ಣಗೆ ನಿರೂಪಿಸಲಾಗಿದೆಯಂತೆ.

    ಇದೆಲ್ಲ ಏನೇ ಇದ್ದರೂ ಕಲಾತ್ಮಕ ಜಾನರಿನದ್ದೆಂದೇ ಹೇಳಲಾಗುತ್ತಿರೋ ಈ ಚಿತ್ರ ಅಲೆಯೆಬ್ಬಿಸುತ್ತಿರುವ ರೀತಿ ನಿಜಕ್ಕೂ ಅಚ್ಚರಿದಾಯಕವಾಗಿದೆ.

  • ಕಾಶ್ಮೀರದಲ್ಲಿ 3 ಉಗ್ರರನ್ನ ಹೊಡೆದುರುಳಿಸಿದ ಭದ್ರತಾ ಪಡೆ- ಶ್ರೀನಗರದಲ್ಲಿ ಶಾಲಾ ಕಾಲೇಜುಗಳು ಬಂದ್

    ಕಾಶ್ಮೀರದಲ್ಲಿ 3 ಉಗ್ರರನ್ನ ಹೊಡೆದುರುಳಿಸಿದ ಭದ್ರತಾ ಪಡೆ- ಶ್ರೀನಗರದಲ್ಲಿ ಶಾಲಾ ಕಾಲೇಜುಗಳು ಬಂದ್

    ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆ ಸಿಬ್ಬಂದಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ಶಾಲಾ ಕಾಲೇಜುಗಳನ್ನ ಮುಚ್ಚಲಾಗಿದೆ.

    ಉಗ್ರರಲ್ಲಿ ಇಬ್ಬರನ್ನ ಗುರುತಿಸಲಾಗಿದ್ದು, ಶ್ರೀನಗರದ ಸೌರಾದ ಈಸಾ ಫಜಿಲಿ ಹಾಗೂ ದಕ್ಷಿಣ ಕಾಶ್ಮೀರದ ಕೊಕೆರ್ನಾಗ್‍ನ ಸೈಯದ್ ಓವೈಸ್ ಹತ್ಯೆಯಾಗಿದ್ದಾರೆ. ಮತ್ತೋರ್ವ ಉಗ್ರನ ಗುರುತು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪೊಲೀಸರ ಪ್ರಕಾರ ಉಗ್ರರಲ್ಲಿ ಒಬ್ಬ ಇತ್ತೀಚೆಗೆ ಸೌರಾದಲ್ಲಿ ಪೊಲೀಸ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಪೇದೆಯೊಬ್ಬರು ಹುತಾತ್ಮರಾಗಿದ್ದರು.

    ಅನಂತ್‍ನಾಗ್‍ನ ಹಕೂರಾ ಪ್ರದೇಶದಲ್ಲಿ ಉಗ್ರರ ಇರುವಿಕೆ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಉಗ್ರರು ತಪ್ಪಿಸಿಕೊಳ್ಳಲು ನಾವು ಅವಕಾಶ ನೀಡಲಿಲ್ಲ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ, ಅಡಗಿ ಕುಳಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆ ಅಧಿಕಾರಿಗಳು ಎನ್‍ಕೌಂಟರ್ ನಡೆಸಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಪೊಲೀಸರು ಎಕೆ47 ರೈಫಲ್‍ಗಳು, ಪಿಸ್ತೂಲ್‍ಗಳು ಹಾಗೂ ಗ್ರೆನೇಡ್‍ಗಳನ್ನ ವಶಪಡಿಸಿಕೊಂಡಿದ್ದಾರೆ.