Tag: Ananthkumar hegde

  • ಅನಂತಕುಮಾರ್ ಹೆಗಡೆ ಟ್ವಿಟ್ಟರ್ ಖಾತೆ ಲಾಕ್-ಹೆಗಡೆ ಕಿಡಿ

    ಅನಂತಕುಮಾರ್ ಹೆಗಡೆ ಟ್ವಿಟ್ಟರ್ ಖಾತೆ ಲಾಕ್-ಹೆಗಡೆ ಕಿಡಿ

    ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಅವರ ಟ್ವಿಟ್ಟರ್ ಖಾತೆಯನ್ನು ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಲಾಕ್ ಮಾಡಲಾಗಿದೆ.

    ಈ ಬಗ್ಗೆ ಅನಂತಕುಮಾರ್ ಹೆಗಡೆ ಅವರಿಗೆ ನೋಟಿಸ್ ಕಳುಹಿಸಿರುವ ಟ್ವಿಟ್ಟರ್, ‘ನಿಮ್ಮ ಖಾತೆ ನಮ್ಮ ಕೆಲವು ನಿಯಮಗಳನ್ನು ಉಲ್ಲಂಘಿಸಿದೆ’ ಎಂದು ಗಮನಕ್ಕೆ ತಂದಿದೆ. ಅಷ್ಟಕ್ಕೂ ಖಾತೆಯನ್ನು ಅನ್ ಲಾಕ್ ಮಾಡಲು ನಿಯಮಗಳನ್ನು ಉಲ್ಲಂಘಿಸಿದ ಟ್ವೀಟ್ ಅನ್ನು ಡಿಲಿಟ್ ಮಾಡುವಂತೆ ಸೂಚಿಸಿದೆ. ವೆರಿಫೈಡ್ ವಿಐಪಿ ಖಾತೆ ಹೊಂದಿದ್ದ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಟ್ವಿಟರ್ ನಲ್ಲಿ 74,300 ಫಾಲೊವರ್ಸ್ ಗಳಿದ್ದರು. 2016ರಿಂದ ಅವರು ಟ್ವಿಟರ್ ನಲ್ಲಿ ಸಕ್ರಿಯರಾಗಿದ್ದರು.

    ಏಪ್ರಿಲ್ 8ರಿಂದ ತಬ್ಲಿಘಿ ಜಮಾತ್ ನ ವಿರುದ್ಧ ಅನಂತಕುಮಾರ್ ಹೆಗಡೆ ಅವರು ಬರಹಗಳ ಸರಣಿಯನ್ನು ಶುರು ಮಾಡಿದ್ದರು. ಸುಮಾರು ನಾಲ್ಕು ಸುದೀರ್ಘ ಬರಹಗಳನ್ನು ಅವರು ಕೊರೋನಾ ವೈರಸ್ ಎಂಬ ಜಿಹಾದ್ ಅನ್ನು ತಬ್ಲಿಘಿಗಳು ಹರಡುತ್ತಿದ್ದಾರೆ ಎಂಬಿತ್ಯಾದಿ ಅರ್ಥದಲ್ಲಿ ಪ್ರಕಟಿಸಿದ್ದರು. ಇದೇ ಟ್ವೀಟ್‍ನ್ನು ಉಲ್ಲೇಖಿಸಿ ಟ್ವಿಟ್ಟರ್ ಖಾತೆಯನ್ನು ರದ್ದು ಮಾಡಲಾಗಿದೆ.

    ತಮ ಖಾತೆಯನ್ನು ಬ್ಲಾಕ್ ಮಾಡುತ್ತಿದ್ದಂತೆ ಸಂಸದ ಅನಂತಕುಮಾರ್ ಹೆಗಡೆ ಟ್ವಿಟ್ಟರ್ ವಿರುದ್ಧ ಕಿಡಿಕಾರಿದ್ದಾರೆ. ಟ್ವಿಟ್ಟರ್ ಭಾರತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಭಾರತದ ವಿರುದ್ಧ ಷಡ್ಯಂತರ ಹಾಗೂ ಭಾರತವನ್ನು ಒಡೆಯುವ ಟ್ವೀಟ್ ಗಳನ್ನು ಪ್ರಚಾರ ಮಾಡುವ ಉದ್ಯಮವನ್ನು ಟ್ವಿಟ್ಟರ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಗುರುಪಟವಂತ ಸಿಂಘ್ ಪನ್ನೂನ್ ಎಂಬ ಟ್ವಿಟ್ಟರ್ ಖಾತೆಯಿಂದ ಪಂಜಾಬ್ ರಾಜ್ಯವನ್ನು ಭಾರತದಿಂದ ಸ್ವಾತಂತ್ರಗೊಳಿಸಿ, ಖಲಿಸ್ಥಾನ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿಸುವುದರ ಬಗ್ಗೆ ಟ್ವೀಟ್ ಮಾಡಿದ್ದು, ಅದನ್ನು ಟ್ವಿಟ್ಟರಿಗೆ ಹಣಪಾವತಿಸಿ ಜಾಹಿರಾತು ನೀಡಿದ್ದಾರೆ. ಇದು ಭಾರತದ ವಿರುದ್ಧ ನಡೆಸುತ್ತಿರುವ ಜಾಹೀರಾತಾಗಿದ್ದು, ಇದನ್ನು ಟ್ವಿಟ್ಟರ್ ಅನುಮೋದಿಸಿ ಜಾಹೀರಾತನ್ನು ಪ್ರಚಾರ ಪಡೆಸಿದೆ. ಇಂತಹ ರಾಷ್ಟ್ರವಿರೋಧ ಚಟುವಟಿಕೆಯನ್ನು ಬಯಲು ಮಾಡಿ, ಪ್ರಧಾನಿ ಹಾಗೂ ಗೃಹ ಸಚಿವರ ಗಮನಕ್ಕೆ ನಾನು ತಂದಿದ್ದರ ಪರಿಣಾಮವಾಗಿ, ಏಪ್ರಿಲ್ 22ರಂದು ತಬ್ಲಿಘಿ ಜಮಾತ್ ನ ವಿರುದ್ಧ ನಾನು ಮಾಡಿರುವ ಟ್ವೀಟಿನ ನೆಪವಿಟ್ಟುಕೊಂಡು ನನ್ನ ಟ್ವಿಟ್ಟರ್ ಖಾತೆಯನ್ನು ರದ್ದು ಮಾಡಿದ್ದಾರೆ. ಬದಲಾಗಿ ನಾನು ಮಾಡಿರುವ ಟ್ವೀಟ್ ನ್ನು ತಗೆದುಹಾಕಿದಲ್ಲಿ ನನ್ನ ಖಾತೆಯಬನ್ನು ಪುನಃ ಸಕ್ರಿಯಗೊಳಿಸುವುದಾಗಿ ಹೇಳಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

    ದೇಶದ ವಿರುದ್ಧ ನಡೆಯುವ ಯಾವುದೇ ನಡೆಯನ್ನು ಅದು ಯಾರೇ ಇರಲಿ, ನನ್ನ ವಿರೋಧವನ್ನು ನಾನು ವ್ಯಕ್ತಪಡಿಸುತ್ತಾ ಬಂದಿದ್ದೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲಾ. ಈ ನಿಟ್ಟಿನಲ್ಲಿ ನಾನು ಮಾಡಿರುವ ಟ್ವೀಟನ್ನು ಅಳಿಸುವ ಪ್ರಶ್ನೆಯೇ ಇಲ್ಲ. ಅದರಲ್ಲಿ ಟ್ವಿಟ್ಟರ್ ನಡೆಸುತ್ತಿರುವ ಭಾರತ ವಿರೋಧಿ ಪ್ರಚಾರಗಳನ್ನು ನಾನು ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ. ದೇಶ ವಿರೋಧಿ ಸಾಮಾಜಿಕ ಜಾಲತಾಣದ ಅಕೌಂಟಿಗಿಂತ ನನ್ನ ದೇಶ, ನನ್ನ ಸಿದ್ಧಾಂತ ನನ್ನ ಜೀವನದ ಆದ್ಯತೆ’ ಎಂದು ಅವರು ತಮ್ಮ ಅಧಿಕೃತ ಖಾತೆ ಫೇಸ್ ಬುಕ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

  • ಮುಂದೆ ಯಾರು ಇಂತಹ ಹೇಳಿಕೆ ಕೊಡಬಾರದು ಅಂತಹ ಕ್ರಮ ಆಗಬೇಕು: ದೇಶಪಾಂಡೆ

    ಮುಂದೆ ಯಾರು ಇಂತಹ ಹೇಳಿಕೆ ಕೊಡಬಾರದು ಅಂತಹ ಕ್ರಮ ಆಗಬೇಕು: ದೇಶಪಾಂಡೆ

    ಬೆಂಗಳೂರು: ಗಾಂಧೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟ ಅನಂತ್ ಕುಮಾರ್ ಹೆಗ್ಡೆ ಬೇಷರತ್ ದೇಶದ ಜನರ ಕ್ಷಮೆ ಕೇಳಬೇಕು. ಹೆಗ್ಡೆ ವಿರುದ್ಧ ಲೋಕಸಭಾ ಸ್ಪೀಕರ್ ಕ್ರಮ ತಗೆದುಕೊಳ್ಳಬೇಕು. ಕ್ರಮ ಹೇಗಿರಬೇಕು ಎಂದರೆ ಮುಂದೆ ಯಾರು ಇಂತಹ ಮಾತಬಾಡಬಾರದು ಅಂತಹ ಕ್ರಮ ತಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ.

    ಸಂಸದ ಅನಂತ್ ಕುಮಾರ್ ಹೆಗ್ಡೆ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಗೆ ಅವಮಾನ ಮಾಡಿದ್ದಾರೆ. ಇದು ಬರೀ ಗಾಂಧೀಜಿ ಅವರಿಗೆ ಮಾಡಿದ ಅವಮಾನ ಅಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲರಿಗೂ ಮಾಡಿದ ಅವಮಾನ. ಸಂವಿಧಾನಕ್ಕೂ ಅಪಚಾರ ಮಾಡಿದ್ದಾರೆ. ಹೆಗ್ಡೆ ಇಡೀ ದೇಶದ ಜನ, ಸ್ವಾತಂತ್ರ್ಯ ಹೋರಾಟಗಾರರಿಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

    ಇಂತಹ ಬೇಜವಬ್ದಾರಿ ಹೇಳಿಕೆಗಳನ್ನು ಯಾವ ಭಾರತೀಯನು ಸಹಿಸಲು ಸಾಧ್ಯವಿಲ್ಲ. ಬಿಜೆಪಿ ನಾಯಕರು ಹೆಗ್ಡೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೆಗಡೆ ಹೇಳಿಕೆಯನ್ನ ನಾನು ಖಂಡಿಸುತ್ತೇನೆ. ಸ್ವಾತಂತ್ರ್ಯ ತಂದುಕೊಟ್ಟವರನ್ನ ಅವಮಾನಿಸಿದ್ದಾರೆ. ಅವರು ಉತ್ತರ ಕನ್ನಡದಿಂದ ಸಂಸದರಾಗಿದ್ದಾರೆ. ಅಂಕೋಲಾ, ಶಿರಸಿ, ಸಿದ್ದಾಪುರ ಜನ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು ಎಂದರು.

    ಮೊದಲು ರಾಷ್ಟ್ರದ ಜನರ ಕ್ಷಮೆಯಾಚಿಸಬೇಕು. ಬಿಜೆಪಿ ರಾಷ್ಟ್ರೀಯ ನಾಯಕರು ಕ್ರಮ ತೆಗೆದುಕೊಳ್ಳಬೇಕು. ಆರು ಬಾರಿ ಸಂಸದರಾಗಿ ಆರಿಸಿ ಬಂದಿದ್ದಾರೆ. ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ನಾನೊಬ್ಬ ಶಾಸಕ ನಾನು ತಪ್ಪು ಮಾಡಿದರೆ ನನ್ನ ಮೇಲೂ ನಮ್ಮ ಸ್ಪೀಕರ್ ಕ್ರಮ ತೆಗೆದುಕೊಳ್ಳಬಹುದು. ಹಾಗೆಯೇ ಹೆಗ್ಡೆ ವಿರುದ್ಧ ಗಂಭೀರ ಆರೋಪವಿದೆ ಸ್ಪೀಕರ್ ಕ್ರಮ ತಗೆದುಕೊಳ್ಳಬೇಕು ಎಂದು ದೇಶಪಾಂಡೆ ಆಗ್ರಹಿಸಿದರು.

  • ಸಾಗರಮಾಲಾ ಯೋಜನೆಗೆ ಮೀನುಗಾರರ ವಿರೋಧ – ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಸಗಣಿ, ಚಪ್ಪಲಿ

    ಸಾಗರಮಾಲಾ ಯೋಜನೆಗೆ ಮೀನುಗಾರರ ವಿರೋಧ – ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಸಗಣಿ, ಚಪ್ಪಲಿ

    – ಕಾರವಾರ ಮೀನು ಮಾರ್ಕೆಟ್ ಪೂರ್ಣ ಬಂದ್

    ಕಾರವಾರ: ಬಂದರು ವಿಸ್ತರಣೆ ವಿರೋಧಿಸಿ ಕಾರವಾರದಲ್ಲಿ ಇಂದು ಕೂಡ ಪ್ರತಿಭಟನೆಯನ್ನು ಮುಂದುವರಿಸಿದರು.

    ಕಾರವಾರದ ಮೀನು ಮಾರುಕಟ್ಟೆಯನ್ನು ಬಂದ್ ಮಾಡಿದ ಮೀನುಗಾರರು ಮೀನು ಮಾರುಕಟ್ಟೆ ಬಳಿ ಸೇರಿ ಪ್ರತಿಭಟನೆ ಮಾಡಿದರು. ಈ ವೇಳೆ ಉದ್ರಿಕ್ತ ಮೀನುಗಾರ ಮಹಿಳೆಯರಿಂದ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ್ ಮತ್ತು ಸಂಸದ ಅನಂತ್‍ಕುಮಾರ್ ಹೆಗ್ಡೆ ಭಾವಚಿತ್ರಕ್ಕೆ ಸಗಣಿಮೆತ್ತಿ, ಚಪ್ಪಲಿ ಹಾರ ಹಾಕಿ, ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬೃಹತ್ ವಾಣಿಜ್ಯ ಬಂದರಾಗಿ ರೂಪಗೊಳ್ಳಲಿದೆ ಕಾರವಾರ ಬಂದರು

    ಕಳೆದ ಎರಡು ದಿನದಿಂದ ಕಾರವಾರ ವಾಣಿಜ್ಯ ಬಂದರು ಎರಡನೇ ಹಂತದ ಕಾಮಗಾರಿ ಯೋಜನೆಯನ್ನು ನಿಲ್ಲಿಸುವಂತೆ ಪ್ರತಿಭಟನೆ ನಡೆಸಲಾಗುತ್ತಿದ್ದು, ಸೋಮವಾರ 200ಕ್ಕೂ ಹೆಚ್ಚು ಮೀನುಗಾರರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಬಂದರು ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು ಇದನ್ನು ನಿಲ್ಲಿಸಲು ನಿರಂತರ ಪ್ರತಿಭಟನೆ ಕೈಗೊಂಡಿರುವ ಮೀನುಗಾರರು ಇದೇ ತಿಂಗಳ 16ರಂದು ಕಾರವಾರ ಬಂದ್‍ಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಕಾರವಾರದಲ್ಲಿ ದಿಢೀರ್ ಬಂದ್- ನೂರಕ್ಕೂ ಹೆಚ್ಚು ಮೀನುಗಾರರ ಬಂಧನ

    ಎರಡನೇ ಹಂತದ ಬಂದರು ವಿಸ್ತರಣೆಯಿಂದಾಗಿ ಕಾರವಾರದ ಕಡಲತೀರ ನಶಿಸಿ ಹೋಗುತ್ತದೆ. ಮೀನುಗಾರರು ತಮ್ಮ ಬಂದರನ್ನು ಕಳೆದುಕೊಳ್ಳುವ ಜೊತೆ ಸಾವಿರಾರು ಜನ ನಿರುದ್ಯೋಗಿಗಳಾಗ ಬೇಕಾಗುತ್ತದೆ. ಬಂದರು ವಿಸ್ತರಣೆಯಿಂದ ಕಡಲ ಕೊರೆತ ಹೆಚ್ಚಾಗುವ ಜೊತೆ ಮೀನುಗಳ ಜೀವನ ಚಕ್ರ ಸಹ ಬದಲಾಗಿ ತೊಂದರೆ ಅನುಭವಿಸಬೇಕಿದ್ದು ಪರಿಸರಕ್ಕೆ ಹಾನಿಯಾಗಲಿದೆ. ಈ ಕಾರಣದಿಂದ ತಕ್ಷಣ ವಿಸ್ತರಣೆ ಕಾಮಗಾರಿ ಕೈಬಿಡಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಮೀನುಗಾರರು ನೀಡಿದ್ದಾರೆ.

    ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು ಕಾಮಗಾರಿ ನಡೆಸಲಾಗುತ್ತಿದೆ.

    ಏನಿದು ಸಾಗರ ಮಾಲ ? ಯೋಜನೆ ರೂಪರೇಷೆ ಏನು?
    ಸಾಗರ ಮಾಲಾ ಯೋಜನೆಯು ಬಂದರು ವಿಸ್ತರಣೆಯಾಗಿದ್ದು, ವಾಣಿಜ್ಯ ಬಂದರನ್ನು ರಾಷ್ಟ್ರ ಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸುವ ಯೋಜನೆಯಾಗಿದೆ. ಸದ್ಯ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆಗಾಗಿ ಕೇಂದ್ರ ಸರ್ಕಾರ ಸಾಗರ ಮಾಲಾ ಯೋಜನೆಯಡಿ ಹಣ ಬಿಡುಗಡೆ ಮಾಡಿದೆ. ಸಾಗರ ಮಾಲಾ ಮೂಲಕ ರಾಜ್ಯದ ಅತಿದೊಡ್ಡ ಸರ್ವಋತು ವಾಣಿಜ್ಯ ಬಂದರನ್ನಾಗಿ ರೂಪಿಸುವ ಯೋಜನೆ ಇದಾಗಿದೆ.

    ಬಂದರಿನ ಬೈತಖೋಲ್ ಭಾಗದಿಂದ ಇರುವ 250 ಮೀಟರ್ ಜಟ್ಟಿಯನ್ನು ಇನ್ನೂ 145 ಮೀಟರ್ ವಿಸ್ತರಿಸುವ ಯೋಜನೆಗೆ ಸಾಗರ ಮಾಲಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ವಾಣಿಜ್ಯ ಬಂದರಿನಲ್ಲಿ ಹಡಗು ನಿಲ್ಲುವ 512 ಮೀಟರ್ ಉದ್ದದ ಜಟ್ಟಿ ಇದೆ. ಹಂತ ಹಂತವಾಗಿ ಬಂದರನ್ನು ವಿಸ್ತರಿಸುವ ಯೋಜನೆ ಇದಾಗಿದ್ದು, 250 ಕೋಟಿ ರೂ.ನಿಂದ 511 ಕೋಟಿ ರೂ. ತನಕ ಯೋಜನೆಯ ಒಟ್ಟು ವೆಚ್ಚ ಏರಲಿದೆ ಎನ್ನಲಾಗುತ್ತಿದೆ.

  • ಜನವರಿ ನಂತ್ರ ಬಿಜೆಪಿ ಸರ್ಕಾರ ಇರಲ್ಲ- ಯು.ಟಿ ಖಾದರ್

    ಜನವರಿ ನಂತ್ರ ಬಿಜೆಪಿ ಸರ್ಕಾರ ಇರಲ್ಲ- ಯು.ಟಿ ಖಾದರ್

    ಕಾರವಾರ: ಜನವರಿ ನಂತರ ಬಿಜೆಪಿ ಸರ್ಕಾರ ಇರುವುದಿಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಭವಿಷ್ಯ ನುಡಿದಿದ್ದಾರೆ.

    ಶಿರಸಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನವನ್ನು ತೋರಿಸಿಕೊಂಡು ಮತ ಪಡೆಯುವ ಅತ್ಯಂತ ದುಸ್ಥಿತಿಗೆ ಬಿಜೆಪಿ ಹಾಗೂ ಇಲ್ಲಿನ ಸಂಸದರು ಬಂದಿದ್ದಾರೆ. ಪಾಕಿಸ್ತಾನದ ಪ್ರಧಾನಿಯವರ ಮೊಮ್ಮಗಳ ಹುಟ್ಟುಹಬ್ಬಕ್ಕೆ ಹೋಗಿ ಬಿರಿಯಾನಿ ತಿಂದು ಬಂದವರು ಕಾಂಗ್ರೆಸ್ ಪ್ರಧಾನಿಯಲ್ಲ, ಬಿಜೆಪಿ ಪ್ರಧಾನಮಂತ್ರಿ ಎಂದು ವಾಗ್ದಾಳಿ ನಡೆಸಿದರು.

    ರಾತ್ರಿ ಹಗಲು ಎನ್ನದೆ ಪಾಕಿಸ್ತಾನದ ಆಲೋಚನೆಯೇ ಹೊರತು ರಾಜ್ಯದ ಆಲೋಚನೆ ಬಿಜೆಪಿಗೆ ಇಲ್ಲ. ಚುನಾವಣೆ ಬಂದಾಗ ಪಾಕಿಸ್ತಾನವನ್ನು ಕಿಸೆಯಲ್ಲಿ ಇಟ್ಟುಕೊಂಡು ಅದರ ಬಗ್ಗೆ ಮಾತನಾಡುವ ಇವರಿಗೆ ಪಾಕಿಸ್ತಾನವೇ ಅತಿ ಹೆಚ್ಚು ಪ್ರೀತಿ. ಇಲ್ಲಿನ ಸಂಸದ ಅನಂತ್ ಕುಮಾರ್ ಹೆಗ್ಡೆ ಜನರಲ್ಲಿ ವೈಮನಸ್ಸು ತರಿಸಿ, ಸಮಾಜದಲ್ಲಿ ಬೆಂಕಿ ಹಚ್ಚಿ, ಭಯದ ವಾತಾವರಣ ನಿರ್ಮಾಣ ಮಾಡಿ ರಾಜಕೀಯ ಲಾಭ ಪಡೆದುದಲ್ಲದೇ ಕ್ಷೇತ್ರದ ಜನರ ನೋವಿಗೆ ಸ್ಪಂದಿಸುವ ಮನೋಭಾವವಿಲ್ಲ ಎಂದು ಕಿಡಿಕಾರಿದರು.

    ಮಾತೇ ಬಂಡವಾಳವಾಗಿದೆ. ಅಂಬೇಡ್ಕರ್‍ಗೆ ಬೈಯುವ ಇವರಿಗೆ ಪಾರ್ಲಿಮೆಂಟಿನಲ್ಲಿ ಮಾತನಾಡುವ ಧಮ್ ಇಲ್ಲ. ಬೆಂಕಿ ಹಚ್ಚುವ ಕೆಲಸ ಬಂದ್ ಮಾಡಿ ಜನರ ಬಗ್ಗೆ ಮಾತನಾಡಲಿ. ಬಿಜೆಪಿಗರಿಗೆ ಬಾಯಲ್ಲಿ ಸ್ವದೇಶಿ, ಮನದಲ್ಲಿ ವಿದೇಶಿ. ಖಾಸಗೀಕರಣ ಮಾಡಲು ಹೊರಟಿದ್ದಾರೆ. ಬಿಜೆಪಿ ಭಾರತದ ಬಂಡವಾಳವನ್ನೇ ಅಡವಿಡಲು ಹೊರಟಿದೆ ಎಂದು ಗರಂ ಆದರು.

  • ಉತ್ತರ ಕನ್ನಡದಲ್ಲಿ ಬಾಗಿಲು ಮುಚ್ಚಿತು ಕೌಶಲ್ಯಾಭಿವೃದ್ಧಿ ಕೇಂದ್ರ

    ಉತ್ತರ ಕನ್ನಡದಲ್ಲಿ ಬಾಗಿಲು ಮುಚ್ಚಿತು ಕೌಶಲ್ಯಾಭಿವೃದ್ಧಿ ಕೇಂದ್ರ

    ಕಾರವಾರ: ಪ್ರಧಾನಿ ಮೋದಿಯವರ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಕೌಶಲ್ಯ ಭಾರತವೂ ಒಂದು. ಅದಕ್ಕಾಗಿಯೇ ಪ್ರತ್ಯೇಕ ಸಚಿವಾಲಯವನ್ನು ರಚಿಸಿ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್‍ಕುಮಾರ್ ಹೆಗಡೆಯವರನ್ನು ರಾಜ್ಯ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಅವರ ಅವಧಿಯಲ್ಲಿ ಸ್ಥಾಪಿಸಲಾಗಿದ್ದ ಉತ್ತರ ಕನ್ನಡದ ಕೌಶಲ್ಯಾಭಿವೃದ್ಧಿ ಕೇಂದ್ರವೊಂದು ಸದ್ಯ ಬಾಗಿಲು ಮುಚ್ಚಿದೆ.

    ಹೌದು, ಅನಂತ್‍ಕುಮಾರ್ ಹೆಗಡೆ ಸಚಿವರಾಗುತ್ತಿದ್ದಂತೆ ಉತ್ತರ ಕನ್ನಡದ ಶಿರಸಿಯ ಯಡಳ್ಳಿಯಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಯಾಗಿತ್ತು. ಆದರೆ ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದ ಕ್ಷೇತ್ರದಲ್ಲಿಯೇ ಅವರು ಸಚಿವ ಸ್ಥಾನದಿಂದ ಇಳಿದ ನಂತರ ಕೇಂದ್ರ ಬಾಗಿಲುಮುಚ್ಚಿದೆ. ಇಲ್ಲಿ ಯುವಕರಿಗೆ ತರಬೇತಿ ನೀಡುವುದನ್ನು ನಿಲ್ಲಿಸಿ ವರ್ಷವಾಗಿದೆ.

    ಸದ್ಯದ ಮಟ್ಟಿಗೆ ಈ ಕಚೇರಿಯಲ್ಲಿ ನೆಪಕ್ಕೆ ಐದು ಜನ ಸಿಬ್ಬಂದಿ ಇದ್ದಾರೆ. ಪ್ರಾರಂಭವಾದ ಒಂದು ವರ್ಷದಲ್ಲಿ 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು. ಇದರಲ್ಲಿ ಕೇವಲ 70 ಜನರಿಗೆ ಮಾತ್ರ ರಾಜ್ಯದ ಬೇರೆ ಬೇರೆ ಜಾಗಗಳಲ್ಲಿ ಕೆಲಸ ಸಿಕ್ಕಿವೆ. ಉಳಿದವರು ಇಲ್ಲಿ ತರಬೇತಿ ಪಡೆದಿದ್ದಷ್ಟೇ ಬಂತೆ ವಿನಃ ಕೆಲಸ ದೊರತಿಲ್ಲ.

    ಈಗಾಗಲೇ ಈ ಕೇಂದ್ರ ತನ್ನ ಕೆಲಸವನ್ನೇ ನಿಲ್ಲಿಸಿದ್ದು, ಧೂಳು ಹಿಡಿದ ಚೇರುಗಳು, ಕೆಟ್ಟು ನಿಂತ ಕಂಪ್ಯೂಟರ್ ಗಳು, ವಿದ್ಯಾರ್ಥಿಗಳಿಲ್ಲದೆ ಕೇಂದ್ರ ಬಿಕೋ ಎನ್ನುತ್ತಿದ್ದು ಅವ್ಯವಸ್ಥೆಯ ಕೇಂದ್ರವಾಗಿ ಮಾರ್ಪಟ್ಟು ಹೇಳುವವರು ಕೇಳುವವರು ಇಲ್ಲದಂತಾಗಿದೆ. ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದವರ ಕ್ಷೇತ್ರದಲ್ಲಿಯೇ ಈ ಸ್ಥಿತಿ ನಿರ್ಮಾಣವಾದರೇ ಉಳಿದ ಕೇಂದ್ರಗಳ ಸ್ಥಿತಿ ಹೇಗೆ ಇರಬಹುದು ಎನ್ನುವ ಪ್ರಶ್ನೆ ಹುಟ್ಟುಕೊಂಡಿದೆ.

    ಈ ಬಗ್ಗೆ ತಕ್ಷಣ ಕೇಂದ್ರ ಸರ್ಕಾರ ಹಾಗೂ ಇಲ್ಲಿನ ಸಂಸದರು ಗಮನ ಹರಿಸಿ ಕೌಶಲ್ಯಾಭಿವೃದ್ಧಿ ಕೇಂದ್ರದ ಅವ್ಯವಸ್ತೆಯನ್ನು ಸರಿಪಡಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.

  • ಮುಗಿಸದೇ ಬಿಡಲ್ಲ- ಅನಂತ್‍ಕುಮಾರ್ ಹೆಗ್ಡೆಗೆ ಬೆದರಿಕೆ!

    ಮುಗಿಸದೇ ಬಿಡಲ್ಲ- ಅನಂತ್‍ಕುಮಾರ್ ಹೆಗ್ಡೆಗೆ ಬೆದರಿಕೆ!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆಗೆ ಅಪರಿಚಿತ ವ್ಯಕ್ತಿಯೋರ್ವ ಜೀವ ಬೆದರಿಕೆ ಕರೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ದೂರು ನೀಡಿದ್ದಾರೆ.

    ಶುಕ್ರವಾರ ಬೆಳಗ್ಗಿನ ಜಾವ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಮನೆಯ ದೂರವಾಣಿ ಸಂಖ್ಯೆಗೆ 02233.. ಎಂಬ ಇಂಟರ್ ನೆಟ್ ನಂಬರ್ ನಿಂದ ಕರೆ ಬಂದಿದ್ದು ಕರೆಯನ್ನು ಅನಂತ್ ಕುಮಾರ್ ಹೆಗ್ಡೆ ಪತ್ನಿ ಶ್ರೀ ರೂಪ ಸ್ವೀಕರಿಸಿದ್ದರು.

    ಈ ವೇಳೆ ಉರ್ದು ಮಿಶ್ರಿತ ಹಿಂದಿಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿ, `ಎಲ್ಲಿ ನಿನ್ನ ಗಂಡ ಅವನನ್ನು ಬಿಡುವುದಿಲ್ಲ ಮುಗಿಸುತ್ತೇವೆ. ಇಂದು ಮನೆಯಲ್ಲಿ ಇರಬೇಕಿತ್ತು ಎಲ್ಲಿ ಅಡಗಿ ಕುಳಿತಿದ್ದಾರೆ. ಮೊಬೈಲ್ ಫೋನ್ ಗೆ ಕರೆ ಮಾಡಿದ್ರೆ ಸ್ವೀಕರಿಸುತ್ತಿಲ್ಲ. ಒಂದುಸಲ ತಪ್ಪಿಸಿಕೊಂಡ ಮಾತ್ರಕ್ಕೆ ನಮ್ಮ ಕೈಯಿಂದ ಪ್ರತಿಬಾರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರನ್ನು ಮುಗಿಸದೇ ಬಿಡುವುದಿಲ್ಲ. ಪೊಲೀಸ್ ಭದ್ರತೆಯಲ್ಲಿ ಎಷ್ಟು ದಿನ ತಿರುಗುತ್ತಾರೆಂದು ನಾವೂ ನೋಡುತ್ತೇವೆ. ಯಾವ ಪೊಲೀಸ್ ನಾಯಿಗೆ ಹೇಳುತ್ತೀರೋ ಹೇಳಿಕೊಳ್ಳಿ. ನಿಮ್ಮನ್ನು ಹಾಗೂ ಭದ್ರತಾ ಸಿಬ್ಬಂದಿಯನ್ನು ಬಿಡುವುದಿಲ್ಲ. ಎಲ್ಲರನ್ನೂ ಮುಗಿಸುತ್ತೇವೆ’ ಎಂದು ಅಶ್ಲೀಲ ಶಬ್ಧಗಳಿಂದ ಮಾತನಾಡಿದ್ದಾನೆ.

    ಈ ವೇಳೆ ಅನಂತ್‍ಕುಮಾರ್ ಹೆಗ್ಡೆಯವರು ಬೇರೊಂದು ಕರೆಯಲ್ಲಿದ್ದು ಬೆದರಿಕೆ ಕರೆ ಎಂದು ತಿಳಿದ ತಕ್ಷಣ ಆತನ ಧ್ವನಿಯನ್ನು ಪೊಲೀಸ್ ಸಿಬ್ಬಂದಿಗೆ ಕೇಳಿಸಿದ್ದಾಗಿ ಆಪ್ತ ಕಾರ್ಯದರ್ಶಿ ಸುರೇಶ್ ಕೊಟ್ಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಫೆಬ್ರವರಿ 10ರಂದು ಇದೇ ಮಾದರಿಯಲ್ಲಿ ಕರೆ ಬಂದಿದ್ದು ಇದು ಎರಡನೇ ಕರೆಯಾಗಿದೆ.

  • ಸಿಎಂ ಎಚ್‍ಡಿಕೆಯ ಬೆದರಿಕೆಗೆ ಕಲಾವಿದರು ಹೆದರಲ್ಲ: ತಾರಾ

    ಸಿಎಂ ಎಚ್‍ಡಿಕೆಯ ಬೆದರಿಕೆಗೆ ಕಲಾವಿದರು ಹೆದರಲ್ಲ: ತಾರಾ

    ಕಾರವಾರ: ವೈಯಕ್ತಿಕ ಟೀಕೆ, ಬೆದರಿಕೆಗೆ ನಮ್ಮ ಕಲಾವಿದರು ಹೆದರುವುದಿಲ್ಲ ನಟಿ ತಾರಾ ಹೇಳಿದ್ದಾರೆ.

    ಇಂದು ಕಾರವಾರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಪರ ಪ್ರಚಾರಕ್ಕೆ ಆಗಮಿಸಿದ ಅವರು ದರ್ಶನ್ ಹಾಗೂ ಯಾಶ್ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಬೆದರಿಕೆಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

    ನಟ ಯಶ್ ಹಾಗೂ ದರ್ಶನ್ ಅವರನ್ನು ನೋಡಿಕೊಳ್ಳುತ್ತೇನೆ ಎಂದು ಸಿಎಂ ಹೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಪಂಚದಲ್ಲಿ ಯಾರೂ ದೊಡ್ಡವರಿಲ್ಲ. ಇಲ್ಲಿ ಎಲ್ಲರೂ ನಿಮಿತ್ತ ಮಾತ್ರ ನಾವು ಎಲ್ಲರನ್ನೂ ನೋಡಿಕೊಳ್ಳುತ್ತೇವೆ. ನಾವು, ನಮ್ಮದು, ನಂದು ಎನ್ನುವುದು ಇರಲು ಸಾಧ್ಯವಿಲ್ಲ. ಇಲ್ಲಿ ಎಲ್ಲರನ್ನೂ ನೋಡಿಕೊಳ್ಳುವವನು ಮೇಲೊಬ್ಬನಿದ್ದಾನೆ. ಯಾರಿಗೆ ಯಾರೂ ಬೆದರಿಕೆ ಹಾಕಿದರೂ ಮೇಲಿದ್ದವನು ಹಾಕಬೇಕು ಅಷ್ಟೇ. ವೈಯಕ್ತಿಕ ಟೀಕೆ, ಬೆದರಿಕೆಗೆ ನಮ್ಮ ಕಲಾವಿದರು ಹೆದರುವುದಿಲ್ಲ ಎಂದರು.

    ದರ್ಶನ್, ಯಶ್ ಕೆಲಸವನ್ನು ಇಷ್ಟಪಟ್ಟು ಮಾಡಿದ್ದಾರೆ. ಅವರಿಗೆ ಯಾವುದೇ ಪಕ್ಷ ಕರೆದು ಪ್ರಚಾರ ಮಾಡಲು ಹೇಳಿಲ್ಲ. ಅವರು ಅಂಬರೀಶಣ್ಣನ ಮೇಲಿರುವ ಅಭಿಮಾನ, ಪ್ರೀತಿ ಗೌರವದಿಂದ ಅವರು ಸುಮಲತಾ ಅಮ್ಮನವರಿಗೆ ಕೆಲಸ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಅವರು, ಎಲ್ಲರಿಗಿಂತ ದೊಡ್ಡ ಸ್ಥಾನದಲ್ಲಿ ಇದ್ದಾರೆ. ಇಂತಹ ಮಾತುಗಳು ಅವರಿಗೆ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಇದು ಚುನಾವಣೆ ಕುರುಕ್ಷೇತ್ರ ಗೆಲ್ಲಬೇಕು ಎಂಬ ಆಕಾಂಕ್ಷೆ ಎಲ್ಲರಿಗೂ ಇರಬೇಕು. ವೈಯಕ್ತಿಕ ಟೀಕೆಗೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತಾರಾ ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು:
    ಬಿಜೆಪಿ ಸ್ಟಾರ್ ಪ್ರಚಾರಕಿ ತಾರಾ ಅವರು ಕಾರವಾರದ ಅರಬ್ಬಿ ಸಮುದ್ರದ ದ್ವೀಪ ಪ್ರದೇಶಗಳಿಗೆ ಬೋಟಿನಲ್ಲಿ ತೆರಳಿ ಪ್ರಚಾರ ಕೈಗೊಂಡರು. ಕಾರವಾರದ ರಸ್ತೆಗಳ ಅಂಗಡಿಗಳಿಗೆ ತೆರಳಿ ಬಿಜೆಪಿ ಪರ ಮತಯಾಚಿಸಿದರು. ಈ ವೇಳೆ ಹಣ್ಣಿನ ಅಂಗಡಿಯಲ್ಲೂ ಕೂಡ ಮತಯಾಚಿಸಿದರು. ಮತ ನೀಡಿ ಎಂದು ಕೇಳಿದಾಗ ಹಣ್ಣಿನ ಅಂಗಡಿಯ ಮಾಲೀಕರೊಬ್ಬರು ತಾರಾ ಅವರಿಗೆ ಕಲ್ಲಂಗಡಿ ಹಣ್ಣನ್ನು ನೀಡಿದರು. ಕಾರವಾರದ ರಸ್ತೆಯುದ್ದಕ್ಕೂ ಪ್ರಚಾರ ನಡೆಸಿದ ನಟಿ ತಾರಾ ಬಳಿ ನಿಂತು ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು.

  • ಚುನಾವಣೆ ಬಳಿಕ ಇವ್ರೆಲ್ಲಾ ಎಲ್ಲಿರ್ತಾರೆ ನೋಡ್ಬೇಕು – ಹೆಗ್ಡೆಗೆ ಎಚ್‍ಡಿಕೆ ಟಾಂಗ್

    ಚುನಾವಣೆ ಬಳಿಕ ಇವ್ರೆಲ್ಲಾ ಎಲ್ಲಿರ್ತಾರೆ ನೋಡ್ಬೇಕು – ಹೆಗ್ಡೆಗೆ ಎಚ್‍ಡಿಕೆ ಟಾಂಗ್

    ಕಾರವಾರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಬಹುಮತದಿಂದ ಗೆಲುವು ಸಾಧಿಸುತ್ತಾನೆ. ಈಗ ಎಲ್ಲಿದ್ದೀಯಪ್ಪಾ ಆನಂದ್ ಎಂದು ಟ್ರೋಲ್ ಮಾಡುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಇವರೆಲ್ಲಾ ಎಲ್ಲಿರ್ತಾರೆ ನೋಡಬೇಕು ಎಂದು ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ರು.

    ಕುಮುಟಾದಲ್ಲಿ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ಗುರುವಾರ ಪ್ರಚಾರ ನಡೆಸಿದ ಸಿಎಂ ಕುಮಾರಸ್ವಾಮಿ, ಅನಂತ್‍ಕುಮಾರ್ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಹಿಂದೂ ಧರ್ಮವನ್ನ ಉಳಿಸುವವನು ನಾನೇ ಎಂದು ಹೇಳುವ ವ್ಯಕ್ತಿ ಅನಂತ್ ಕುಮಾರ್, ದೇವಸ್ಥಾನಕ್ಕೆ ಹೋದಾಗ ನಿಂಬೆಹಣ್ಣು ಕೊಡ್ತಾರೆಂದ್ರು. ಏ.18ರ ನಂತರ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೇಳುತ್ತಿದ್ದಾರೆ. ಚುನಾವಣೆಯಲ್ಲಿ ನಿಖಿಲ್ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸುತ್ತಾನೆ. ಈಗ ಎಲ್ಲಿದ್ದೀಯಪ್ಪಾ ಆನಂದ್ ಎಂದು ಟ್ರೋಲ್ ಮಾಡುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಇವರೆಲ್ಲಾ ಎಲ್ಲಿರ್ತಾರೆ ನೋಡಬೇಕು. ಮೇ.23ರ ನಂತರ ಎಲ್ಲಿದ್ದೀಯಪ್ಪಾ ಅನಂತ್‍ಕುಮಾರ್ ಎಂದು ಕೇಳಬೇಕಾಗುತ್ತದೆ ಎಂದು ಅನಂತ್‍ಕುಮಾರ್ ಹೇಳಿಕೆಗೆ ಟಾಂಗ್ ನೀಡಿದರು.

    ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಾರೆ ಎಂದು ಇದೇ ವೇಳೆ ಎಚ್‍ಡಿಕೆ ವಿಶ್ವಾಸ ವ್ಯಕ್ತಪಡಿಸಿದರು. ಮಾಧ್ಯಮಗಳಲ್ಲಿ ಕೇವಲ ಸುಮಲತಾ, ಮಂಡ್ಯವನ್ನ ಮಾತ್ರ ತೋರಿಸುತ್ತಿದ್ದಾರೆ. ಹೀಗಾಗಿ ಕಳೆದೆರಡು ತಿಂಗಳಿನಿಂದ ನರೇಂದ್ರ ಮೋದಿ ಕಳೆದು ಹೋಗಿದ್ದಾರೆ. ಬಿಜೆಪಿಯವರು ಮೋದಿ ಫೋಟೋ ಇಟ್ಟುಕೊಂಡು ಮತ ಕೇಳಲು ಹೋಗಬೇಕು ಎಂದು ಗರಂ ಆದ್ರು.

     

  • 18ರವರೆಗೆ ಮಂಡ್ಯದಲ್ಲಿ ನಿಖಿಲ್ ಎಲ್ಲಿದೀಯಪ್ಪ, ಬಳಿಕ ಆನಂದ್ ಎಲ್ಲಿದೀಯಪ್ಪ ಎಂದು ಹುಡುಕ್ತಾರೆ: ಅನಂತ್ ಕುಮಾರ್ ಹೆಗಡೆ

    18ರವರೆಗೆ ಮಂಡ್ಯದಲ್ಲಿ ನಿಖಿಲ್ ಎಲ್ಲಿದೀಯಪ್ಪ, ಬಳಿಕ ಆನಂದ್ ಎಲ್ಲಿದೀಯಪ್ಪ ಎಂದು ಹುಡುಕ್ತಾರೆ: ಅನಂತ್ ಕುಮಾರ್ ಹೆಗಡೆ

    ಕಾರವಾರ: 18ನೇ ತಾರೀಕಿನವರೆಗೆ ನಿಖಿಲ್ ಎಲ್ಲಿದೀಯಪ್ಪ ಎಂದು ಮಂಡ್ಯದಲ್ಲಿ ನಿಖಿಲ್‍ಗಾಗಿ ಹುಡುಕುತ್ತಾರೆ. ನಂತರ ಇಲ್ಲಿಗೆ ಬಂದು ಆನಂದ್ ಎಲ್ಲಿದೀಯಪ್ಪ ಎಂದು ಹುಡುಕುತ್ತಾರೆ. 18ನೇ ತಾರೀಕಿನ ನಂತರ ಕುಂಬಳಕಾಯಿ, ನಿಂಬೆಹಣ್ಣುಗಳು ಬರುತ್ತವೆ ಎಂದು ಕುಮಾರಸ್ವಾಮಿ, ರೇವಣ್ಣರವರನ್ನು ಕೇಂದ್ರ ಸಚಿವ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.

    ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆನಂದ್ ಆಸ್ನೋಟಿಕರ್ ನಾನು ಕುಲದೇವರು ಎಂದು ಒಂದು ಸಾರಿ ಹೇಳುತ್ತಾರೆ. ದೇಶಪಾಂಡೆ ಕುಲದೇವರು ಎಂದು ಹೇಳುತ್ತಾರೆ. ಅವರಿಗೆ ಎಷ್ಟು ಕುಲದೇವರಿದ್ದಾರೆ ಎಂದು ಗೊತ್ತಿಲ್ಲ ಎಂದರು.

    ಪ್ರತಿ ವರ್ಷ ಕುಲದೇವರು ಬದಲಾಗುತ್ತೆ. ಇಂತವರು ಇಂದು ಬಂದು ವೋಟನ್ನು ಕೇಳುತ್ತಾರೆ. ಗೋಸುಂಬೆ ಹೇಗೆ ಬದಲಾಯಿಸುತ್ತದೆ ಹಾಗೆ ಬದಲಾಯಿಸುತ್ತಾರೆ. ಇಂದು ಒಂದು ಪಾರ್ಟಿ, ನಾಳೆ ಒಂದು ಪಾರ್ಟಿ. ಮುಂದಿನ ವರ್ಷ ಸೋತರೂ ಈ ಪಕ್ಷದಲ್ಲಿ ಇರುವುದಿಲ್ಲ ಎಂದು ಆನಂದ್ ಆಸ್ನೋಟಿಕರ್‍ಗೆ ಟಾಂಗ್ ನೀಡಿದರು.

    ಬಿಜೆಪಿ ಮುಖಂಡರ ಮನೆಗಳಿಗೆ ಐಟಿ ದಾಳಿಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು ಎಲ್ಲೆಲ್ಲಿ ದಾಳಿ ಮಾಡಬೇಕೋ ಅಲ್ಲಲ್ಲಿ ದಾಳಿ ಮಾಡಲು ಅಧಿಕಾರವಿದೆ. ಇದಕ್ಕೆ ನಮ್ಮ ಸ್ವಾಗತ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಹುಡುಕಲಿ. ತಪ್ಪಿದ್ದರೇ ಯಾವುದನ್ನೂ ನಾವು ಸಮರ್ಥನೆ ಮಾಡಿಕೊಳ್ಳುವುದಿಲ್ಲ ಎಂದರು.

  • ಸಚಿವ ಅನಂತ್‍ಕುಮಾರ್ ಹೆಗ್ಡೆ ಆಪ್ತರ ಮನೆ ಮೇಲೆ ಐಟಿ ರೇಡ್

    ಸಚಿವ ಅನಂತ್‍ಕುಮಾರ್ ಹೆಗ್ಡೆ ಆಪ್ತರ ಮನೆ ಮೇಲೆ ಐಟಿ ರೇಡ್

    ಕಾರವಾರ: ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಹಾಗೂ ಬಿಜೆಪಿ ಕೆನರಾ ಕ್ಷೇತ್ರದ ಅಭ್ಯರ್ಥಿ ಅನಂತ್‍ಕುಮಾರ್ ಹೆಗ್ಡೆ ಅವರ ಆಪ್ತರ ಮನೆಯ ಮೇಲೆ ಐಟಿ ಅಧಿಕಾರಿಗಳು ಹಾಗೂ ಚುನಾವಣಾ ವೀಕ್ಷಣಾ ದಳ ದಾಳಿ ನಡೆಸಿ ಅಪಾರ ಪ್ರಮಾಣದ ಹಣವನ್ನು ವಶಕ್ಕೆ ಪಡೆದಿದ್ದಾರೆ.

    ಶಿರಸಿ ನಗರದ ಚಿಪಗಿ ಬಡಾವಣೆಯಲ್ಲಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ ಹೆಗಡೆ ಮನೆಯ ಮೇಲೆ ಐಟಿ ಅಧಿಕಾರಿಗಳು ಹಾಗೂ ಚುನಾವಣಾ ವೀಕ್ಷಣಾ ದಳ ದಾಳಿ ನಡೆಸಿದೆ. ಈ ವೇಳೆ 4 ಕಾರು ಮತ್ತು ಅಪಾರ ಪ್ರಮಾಣದ ಹಣವನ್ನು ವಶಕ್ಕೆ ಪಡೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಗೋವಾ ಹಾಗೂ ಹುಬ್ಬಳ್ಳಿಯಿಂದ ಆಗಮಿಸಿದ್ದ ಐದಕ್ಕೂ ಹೆಚ್ಚು ಮಂದಿ ಐಟಿ ಅಧಿಕಾರಿಗಳ ತಂಡ ಈ ದಾಳಿ ನಡೆಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಬಳಕೆ ಮಾಡುತಿದ್ದ ಮಹೀಂದ್ರ, ಇನ್ನೋವಾ, ಸ್ವಿಫ್ಟ್ ಹಾಗೂ ಸಫಾರಿ ಕಾರುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಮನೆಯಲ್ಲಿ ಶೋಧಕಾರ್ಯ ಮುಂದುವರಿಸಿದ್ದಾರೆ.

    ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಎಸಳೆ ಅವರ ವಿವೇಕಾನಂದ ನಗರದ ಕೆಎಚ್‍ಬಿ ಕಾಲೋನಿಯಲ್ಲಿರುವ ಮನೆಯ ಮೇಲೆ ಕೂಡ ಐಟಿ ದಾಳಿ ನಡೆದಿದೆ.

    ಶಿರಸಿಯಲ್ಲಿ ಕಳೆದ ಎರಡು ದಿನದ ಹಿಂದೆ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಬೆಂಬಲಿಗರ ಮನೆ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ನಂತರ ಇದೇ ಮೊದಲ ಬಾರಿಗೆ ಬಿಜೆಪಿ ಮುಖಂಡರ ಮನೆ ಮೇಲೆ ದಾಳಿ ನಡೆಸಿದ್ದು, ದಾಖಲೆ ಇಲ್ಲದ ಅಪಾರ ಪ್ರಮಾಣದ ಹಣ ದೊರೆತಿದೆ.