Tag: Anantapur

  • ಆನಂದಪುರದಲ್ಲಿ ಅಪರೂಪದ ಮಿಥುನ ಶಿಲ್ಪಗಳು ಪತ್ತೆ- ಶಿವಮೊಗ್ಗಕ್ಕೆ ಶಿಲ್ಪಗಳು ಶಿಫ್ಟ್

    ಆನಂದಪುರದಲ್ಲಿ ಅಪರೂಪದ ಮಿಥುನ ಶಿಲ್ಪಗಳು ಪತ್ತೆ- ಶಿವಮೊಗ್ಗಕ್ಕೆ ಶಿಲ್ಪಗಳು ಶಿಫ್ಟ್

    ಶಿವಮೊಗ್ಗ: ಸಾಗರ ತಾಲೂಕಿನ ಆನಂದಪುರದ ಕೆರೆ ಏರಿ ಮೇಲೆ ಮಿಥುನ ಶಿಲ್ಪಗಳು ಪತ್ತೆಯಾಗಿವೆ. ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ಈ ಶಿಲ್ಪಗಳನ್ನು ಶಿವಮೊಗ್ಗದ ಶಿವಪ್ಪನಾಯಕನ ಕೋಟೆ ಆವರಣಕ್ಕೆ ತಂದಿರಿಸಿದ್ದಾರೆ.

    ಆನಂದಪುರಂನ ಗಾಣಿಗನ ಕೆರೆ ಮೇಲ್ಬಾಗದಲ್ಲಿ ಜೆಸಿಬಿಗಳಿಂದ ಚರಂಡಿ ಕಾಮಗಾರಿ ಮಾಡುತ್ತಿದ್ದ ವೇಳೆ ಈ ಶಿಲ್ಪಗಳು ದೊರೆತಿವೆ. ಇವುಗಳು ಕ್ರಿ.ಶ. 16ನೇ ಶತಮಾನದ ಕೆಳದಿ ಕಾಲದ್ದಾಗಿದ್ದು, 2 ಮೀಟರ್ ಉದ್ದ 80 ಸೆ.ಮೀ. ಅಗಲ ಇವೆ.

    ಫಲವಂತಿಕೆಯ ಸಂಕೇತವಾಗಿ ಇವುಗಳನ್ನು ಕೆಳದಿ ನಾಯಕರ ಕಾಲದಲ್ಲಿ ನಿರ್ಮಾಣ ಮಾಡಲಾಗುತಿತ್ತು. ಬಿತ್ತನೆ ಪೈರು ಮುಂತಾದ ಸಂದರ್ಭಗಳಲ್ಲಿ ಇಂತಹ ಶಿಲ್ಪಗಳನ್ನು ಪೂಜಿಸುವ ಪದ್ಧತಿ ಚಾಲ್ತಿಯಲ್ಲಿತ್ತು. ಸಾಮಾನ್ಯವಾಗಿ ಕೆರೆಯ ಮೇಲ್ಭಾಗದಲ್ಲಿ ಇವುಗಳನ್ನು ಸ್ಥಾಪಿಸಲಾಗುತ್ತಿತ್ತು ಎಂದು ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಶೇಜೇಶ್ವರ್ ತಿಳಿಸಿದ್ದಾರೆ.

    ಈ ರೀತಿಯ ಶಿಲ್ಪಗಳು ಇದುವರೆಗೆ ರಾಜ್ಯದ ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮಾತ್ರ ಕಂಡು ಬಂದಿವೆ. ಈಗ ಪತ್ತೆಯಾಗಿರುವ ಶಿಲ್ಪಗಳನ್ನು ಜನರಿಂದ ಪೂಜೆ ಮಾಡಿರಬಹುದೆಂದು ಹೇಳಲಾಗಿದೆ. ಜೊತೆಗೆ ಕೆರೆ ಒತ್ತುವರಿ ವೇಳೆ ಶಿಲ್ಪಗಳು ಭೂಮಿಯಲ್ಲಿ ಮುಚ್ಚಿ ಹೋಗಿರಬಹುದು ಎಂದು ಶೇಜೇಶ್ವರ್ ಮಾಹಿತಿ ನೀಡಿದ್ದಾರೆ.